Tag: Kolluru

  • ಶ್ರೀಲಂಕಾ ಪ್ರಧಾನಿ ದಿಢೀರ್ ಕೊಲ್ಲೂರಿಗೆ ಭೇಟಿ ನೀಡಿದ್ದು ಯಾಕೆ?

    ಶ್ರೀಲಂಕಾ ಪ್ರಧಾನಿ ದಿಢೀರ್ ಕೊಲ್ಲೂರಿಗೆ ಭೇಟಿ ನೀಡಿದ್ದು ಯಾಕೆ?

    ಉಡುಪಿ: ಇಲ್ಲಿನ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಶ್ರೀಲಂಕಾ ಪ್ರಧಾನಿ ಕುಟುಂಬ ಸಮೇತರಾಗಿ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಈ ಮೂಲಕ ತನ್ನ ಪತ್ನಿಯ ಬಹು ವರ್ಷದ ಹರಕೆ ತೀರಿಸಿದ್ದಾರೆ.

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರಿಗೆ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮ ಸಿಂಘೆ ಪತ್ನಿ ಡಾ. ಮೈತ್ರಿ ಜೊತೆ ಆಗಮಿಸಿದರು. ಎರಡು ತಿಂಗಳಿಂದ ಕೊಲ್ಲೂರಿಗೆ ಬರಲು ಪ್ರಯತ್ನಿಸುತ್ತಿದ್ದ ಲಂಕಾ ಪ್ರಧಾನಿಗೆ ಇಂದು ಮೂಕಾಂಬಿಕೆಯ ಸನ್ನಿಧಿಗೆ ಬರಲು ಕಾಲ ಕೂಡಿ ಬಂದಿದೆ.

    ಶ್ರೀಲಂಕಾದಿಂದ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಅಲ್ಲಿಂದ ಮಂಗಳೂರು ಮೂಲಕ ಅರೆಶೀರೂರಿಗೆ ಹೆಲಿಕಾಪ್ಟರ್ ನಲ್ಲಿ ಬಂದಿಳಿದರು. ಬಳಿಕ ರಸ್ತೆ ಮಾರ್ಗವಾಗಿ ಆಗಮಿಸಿದ ಪ್ರಧಾನಿ ವಿಕ್ರಮಸಿಂಘೆಯವರನ್ನು ಕೊಲ್ಲೂರು ಆಡಳಿತ ಮಂಡಳಿ ಅದ್ಧೂರಿಯಾಗಿ ಸ್ವಾಗತಿಸಿತು. ದೇವಸ್ಥಾನದ ಮುಂಭಾಗದಲ್ಲಿ ಕಾಲು ತೊಳೆದು ದೇವಸ್ಥಾನ ಮುಖ್ಯದ್ವಾರದ ಮೂಲಕ ಬಲಗಾಲಿಟ್ಟು ಪ್ರವೇಶಿಸಿದರು.

    ಇದನ್ನೂ ಓದಿ: ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿ ರದ್ದಾಗಿದ್ದು ಯಾಕೆ?

    ಮಂತ್ರ ಪಠಣೆ ಮೂಲಕ ದೇವಾಲಯದ ಪ್ರಮುಖ ಅರ್ಚಕರು ಪ್ರಧಾನಿ ಮತ್ತು ಪತ್ನಿಯನ್ನು ಒಳಗೆ ಕರೆಸಿಕೊಂಡರು. ಗರುಡಗಂಭಕ್ಕೆ ನಮಸ್ಕರಿಸಿ – ಮೂಕಾಂಬಿಕೆಯ ದರ್ಶನ ಮಾಡಿದ ಪ್ರಧಾನಿ, ಚಂಡಿಕಾ ಹೋಮ ಸೇರಿದಂತೆ ದೇವಸ್ಥಾನದ ಪ್ರಾಂಗಣದಲ್ಲಿರುವ ಎಲ್ಲಾ ಗುಡಿಗಳಿಗೆ ಭೇಟಿಕೊಟ್ಟು ಅರ್ಚನೆ ಸಲ್ಲಿಕೆ ಮಾಡಿದರು.

    ಪ್ರಧಾನಿ ಪತ್ನಿ ಡಾ. ಮೈತ್ರಿ ಕೇರಳ ಮೂಲದವರು. ಕೊಲ್ಲೂರಿನಲ್ಲಿ ಡಾ. ಮೈತ್ರಿಯ ಹಿಂದಿನ ಹರಕೆ ತೀರಿಸಲು ಬಾಕಿಯಿತ್ತು. ಹೀಗಾಗಿ ಆಗಸ್ಟ್ 26 ಮತ್ತು 27ರಂದು ಕೊಲ್ಲೂರಿಗೆ ಬರಲು ಯತ್ನಿಸಿದ್ದರು. ಆದ್ರೆ ಸಿಕ್ಕಾಪಟ್ಟೆ ಮಳೆ ಮತ್ತು ಮೋಡ ಕವಿದ ಕಾರಣ ಕೊಲ್ಲೂರು ಭೇಟಿ ರದ್ಧಾಗಿತ್ತು. ಇದೀಗ ಕೊಲ್ಲೂರು ಬಂದು ದೇವಿ ದರ್ಶನ ಮಾಡಿ ಹರಕೆ ತೀರಿಸುವ ಬಯಕೆ ಪೂರ್ಣಗೊಂಡಿದೆ.

  • ಬಾಹುಬಲಿ ಸಕ್ಸಸ್: ಕೊಲ್ಲೂರು ದೇವಾಲಯಕ್ಕೆ ಅನುಷ್ಕಾ ಶೆಟ್ಟಿ ಭೇಟಿ

    ಬಾಹುಬಲಿ ಸಕ್ಸಸ್: ಕೊಲ್ಲೂರು ದೇವಾಲಯಕ್ಕೆ ಅನುಷ್ಕಾ ಶೆಟ್ಟಿ ಭೇಟಿ

    ಉಡುಪಿ:ಖ್ಯಾತ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

    ದೇವಾಲಯದ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡದೇ ದಿಢೀರ್ ಆಗಿ ಶುಕ್ರವಾರ ಸಂಜೆ ವೇಳೆ ಅನುಷ್ಕಾ ಶೆಟ್ಟಿ ತಮ್ಮ ಸಂಬಂಧಿಕರ ಜೊತೆ ಆಗಮಿಸಿ ದೇವಿಯ ದರ್ಶನ ಪಡೆದಿದ್ದಾರೆ.

    ಅನುಷ್ಕಾ ಶೆಟ್ಟಿ ಜೊತೆ ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಕುಟುಂಬವೂ ಇತ್ತು. ರೈ ಅಪ್ತ ಸಂಬಂಧಿಕರ ಜೊತೆ ಅನುಷ್ಕಾ ಸಾರ್ವಜನಿಕರ ಜೊತೆ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದಿದ್ದು ವಿಶೇಷವಾಗಿತ್ತು.

    ಬಾಹುಬಲಿ- 2 ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ಅನುಷ್ಕಾ ಶೆಟ್ಟಿ ಕೊಲ್ಲೂರಿಗೆ ಭೇಟಿ ಕೊಟ್ಟಿರಬಹುದು ಎಂದು ಹೇಳಲಾಗುತ್ತಿದೆ. ಬಾಹುಬಲಿ- 1 ರಿಲೀಸ್ ಸಂದರ್ಭದಲ್ಲಿ ಕೂಡಾ ಅನುಷ್ಕಾ ಶೆಟ್ಟಿ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದರು.

    ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಇಒ ಕೃಷ್ಣಮೂರ್ತಿ, ಕೊಲ್ಲೂರಿನ ಅರ್ಚಕರು ಉಪಸ್ಥಿತರಿದ್ದು ನಟಿಗೆ ಗೌರವ ಸಲ್ಲಿಸಿದರು.

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ಇದನ್ನೂ ಓದಿ: 19 ದಿನದಲ್ಲಿ ಬಾಹುಬಲಿಯ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ತಲುಪಿದೆ ಗೊತ್ತಾ?

    https://www.youtube.com/watch?v=98Lv8rjXlFI