Tag: kolkatta

  • ಅಜ್ಜಿಯನ್ನು ನೂಡಲ್ಸ್ ಮಾಡೋಕೆ ಅಡುಗೆ ಮನೆಗೆ ಕಳಿಸಿ ಆತ್ಮಹತ್ಯೆ ಮಾಡ್ಕೊಂಡಳು!

    ಅಜ್ಜಿಯನ್ನು ನೂಡಲ್ಸ್ ಮಾಡೋಕೆ ಅಡುಗೆ ಮನೆಗೆ ಕಳಿಸಿ ಆತ್ಮಹತ್ಯೆ ಮಾಡ್ಕೊಂಡಳು!

    ಕೋಲ್ಕತ್ತಾ: ಸಾಲ ಮರುಪಾವತಿ ಮಾಡಲು ಸಾಧ್ಯವಾಗದೆ ಯುವತಿಯೊಬ್ಬಳು ಸಾವಿಗೆ ಶರಣಾದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ.

    ಆತ್ಮಹತ್ಯೆಗೆ ಶರಣಾದಾಕೆಯನ್ನು ಪಾಯೆಲ್ ಸಹಾ(24) ಎಂದು ಗುರುತಿಸಲಾಗಿದೆ. ಈಕೆ ತನ್ನ ಅಜ್ಜಿಯಲ್ಲಿ ನನಗೆ ನೂಡಲ್ಸ್ ತಿನ್ನಬೇಕು ಮಾಡಿಕೊಡು ಎಂದು ಹೇಳಿ ಅಡುಗೆ ಮನೆಗೆ ಕಳಿಸಿ ಹೇಳಿ ರಾತ್ರಿ 10.30ರ ಸುಮಾರಿಗೆ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    ಮೃತ ಸಹಾ ಕೋಲ್ಕತ್ತಾದ ಹರಿದೇವ್‍ಪುರ ನಿವಾಸಿ. ಈಕೆಯ ತಂದೆ ರಿಕ್ಷಾ ಓಡಿಸುತ್ತಿದ್ದು, ಈ ಮೂಲಕ ಬದುಕಿನ ಬಂಡಿ ಸಾಗುತ್ತಿತ್ತು. ಸೋಮವಾರ ಮಧ್ಯಾಹ್ನದ ಬಳಿಕ ಮಹಿಳೆಯ ಪೋಷಕರು ಪಶ್ಚಿಮ ಬಂಗಾಳದಲ್ಲಿರುವ ತರಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲೆಂದು ತೆರಳಿದ್ದರು. ಇದೇ ಸಂದರ್ಭದಲ್ಲಿ ಸಹಾ ತನ್ನ ಅಜ್ಜಿಯನ್ನು ಅಡುಗೆ ಮನೆಗೆ ಕಳಿಸಿದ್ದಾಳೆ. ಇತ್ತ ಸಹೋದರಿಯನ್ನು ಮಾರುಕಟ್ಟೆಗೆ ಕಳುಹಿಸಿದ್ದಾಳೆ. ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಸಹಾ ಹೋಟೆಲ್ ಮ್ಯಾನೇಜ್ಮೆಂಟ್ ಓದಲು ಬ್ಯಾಂಕಿನಿಂದ ಸಾಲ ಪಡೆದಿದ್ದಳು. ಈ ಸಾಲವನ್ನು ತಾನೇ ತೀರಿಸಬೇಕು ಅಂತ ನಿರ್ಧರಿಸಿದ್ದಳು. ಆದರೆ ಮಹಾಮಾರಿ ಕೊರೊನಾದಿಂದಾಗಿ ಆಕೆ 2019ರಿಂದಲೂ ಕೆಲಸ ಸಿಕ್ಕಿರಲಿಲ್ಲ. ಇದರಿಂದ ತನ್ನ ಕನಸು ನನಸಾಗಲಿಲ್ಲ ಎಂದು ಆಕೆ ಬೇಸರಗೊಂಡಿದ್ದಳು.

    ಇತ್ತ ಸಾಲ ವಾಪಸ್ ಮಾಡುವ ಸಲುವಾಗಿ ಸಹಾ ಕ್ಲಬ್ ಒಂದರಲ್ಲಿ ಕೆಲಸ ಮಾಡಲು ಆರಂಭಿಸಿದಳು. ಆದರೆ ಆಕೆಯ ಗಳಿಕೆ ಸಾಲ ತೀರಿಸಲು ಸಾಲುತ್ತಿರಲಿಲ್ಲ. ಅಲ್ಲದೆ ಮನೆಯಲ್ಲಿ ಕೂಡ ಕೆಲವೊಂದು ಸಮಸ್ಯೆಗಳು ಆರಂಭವಾದವು. ಇದೇ ಕಾರಣದಿಂದ ಮಹಿಳೆ ಸಾವಿನ ನಿರ್ಧಾರ ಮಾಡಿರುವುದಾಗಿ ಮೇಲ್ನೋಟಕ್ಕೆ ತಿಳಿದುಬಂದಿದೆ.

    ಈ ಬಗ್ಗೆ ತನಿಖೆ ನಡೆಸುವ ಅಗತ್ಯವಿಲ್ಲ. ಮಹಿಳೆ ಕೆಲಸದ ಒತ್ತಡಕ್ಕೆ ಒಳಗಾಗಿದ್ದಾಳೆ ಅಥವಾ ವೈಯಕ್ತಿಕ ಸಮಸ್ಯೆಗಳನ್ನು ಹೊಂದಿದ್ದರಿಂದ ಈ ತೀರ್ಮಾನ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇತ್ತ ಮಹಿಳೆ ಡೆತ್ ನೋಟ್ ಕೂಡ ಬರೆದಿಟ್ಟಿದ್ದು, ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ.

  • ಕೊಲೆ ಮಾಡಲು ಇಷ್ಟವಿಲ್ಲ, ಆದ್ರೆ ನಂಗೆ ಬೇರೆ ಆಯ್ಕೆ ಇಲ್ಲ – ಹೋಟೆಲಿನಲ್ಲಿ ಮಹಿಳೆಯ ಬರ್ಬರ ಹತ್ಯೆ

    ಕೊಲೆ ಮಾಡಲು ಇಷ್ಟವಿಲ್ಲ, ಆದ್ರೆ ನಂಗೆ ಬೇರೆ ಆಯ್ಕೆ ಇಲ್ಲ – ಹೋಟೆಲಿನಲ್ಲಿ ಮಹಿಳೆಯ ಬರ್ಬರ ಹತ್ಯೆ

    ಕೋಲ್ಕತ್ತಾ: ಖಾಸಗಿ ಹೋಟೆಲೊಂದರಲ್ಲಿ 20 ವರ್ಷದ ಮಹಿಳೆಯೊಬ್ಬಳು ಕೊಲೆಯಾಗಿರುವ ಘಟನೆ ಕೋಲ್ಕತ್ತಾದ ಪೂರ್ವ ಹೊರವಲಯದಲ್ಲಿ ನಡೆದಿದೆ.

    ಕೊಲೆಯಾಗಿರುವ ಮಹಿಳೆ ಕೊಠಡಿಯಲ್ಲಿ ಪೊಲೀಸರಿಗೆ ಬೆಂಗಾಲಿ ಭಾಷೆಯಲ್ಲಿ ಬರೆದ ಪತ್ರವೊಂದು ದೊರೆತಿದೆ. ನಿನ್ನನ್ನು ಕೊಲೆ ಮಾಡಲು ನನಗೆ ಇಷ್ಟವಿರಲಿಲ್ಲ, ಆದ್ರೆ ನನಗೆ ಬೇರೆ ಆಯ್ಕೆ ಇಲ್ಲ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಅಲ್ಲದೆ ಹೊಡೆದು ಹೋದ ಮದ್ಯದ ಬಾಟ್ಲಿ ಕೂಡ ರೂಮ್‍ನಲ್ಲಿ ಪತ್ತೆಯಾಗಿದೆ.

    ಮಹಿಳೆ ತಂಗಿದ್ದ ಕೊಠಡಿಗೆ ಹೋಟೆಲ್ ಸಿಬ್ಬಂದಿಯೊಬ್ಬರು ಬಂದಿದ್ದು, ಮಹಿಳೆ ಹೆಣವಾಗಿ ಬಿದ್ದಿರುವುದನ್ನು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ಘಟನೆ ಕುರಿತಂತೆ ಮಾಹಿತಿ ನೀಡಿದ್ದಾರೆ.

    ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದಾಗ ವ್ಯಕ್ತಿಯೊಬ್ಬರ ಜೊತೆ ಮಹಿಳೆ ಹೋಟೆಲ್‍ಗೆ 1 ಗಂಟೆ ಸುಮಾರಿಗೆ ಬಂದಿದ್ದು, ಮಧ್ಯಾಹ್ನ 2 ಗಂಟೆ ಹೊತ್ತಿಗೆ ಊಟವನ್ನು ಆರ್ಡರ್ ಮಾಡಿದ್ದಾರೆ. ಹಾಗೂ 4 ಗಂಟೆಯ ಹೊತ್ತಿಗೆ ವ್ಯಕ್ತಿ ಹೋಟೆಲ್‍ನಿಂದ ಹೊರಟಿದ್ದಾನೆ. ಮಹಿಳೆ ಇದ್ದ ರೂಮ್‍ನಿಂದ ವ್ಯಕ್ತಿ ಹೊರಬಂದದ್ದನ್ನು ಮಹಿಳೆಯ ಪತಿ ನೋಡಿದ್ದಾರೆ.

    ಕೊಲೆಯಾದ ಮಹಿಳೆ ಹಾಗೂ ಆಕೆಯ ಪತಿ ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯ ನಿವಾಸಿಗಳು ಎಂಬ ಮಾಹಿತಿ ದೊರೆತಿದ್ದು ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ಮೃತ ಮಾಲೀಕನ ಎಟಿಎಂ ಕಾರ್ಡ್ ಬಳಸಿ 34 ಲಕ್ಷ ರೂ. ಡ್ರಾ ಮಾಡಿದ ಮನೆ ಕೆಲಸದಾಕೆ!

    ಮೃತ ಮಾಲೀಕನ ಎಟಿಎಂ ಕಾರ್ಡ್ ಬಳಸಿ 34 ಲಕ್ಷ ರೂ. ಡ್ರಾ ಮಾಡಿದ ಮನೆ ಕೆಲಸದಾಕೆ!

    ಕೋಲ್ಕತ್ತಾ: ಮಹಿಳೆಯೊಬ್ಬಳು ತನಗೆ ಉದ್ಯೋಗ ನೀಡಿದ ಮಾಲೀಕ ಮೃತಪಟ್ಟ ಬಳಿಕ ಆತನ ಎಟಿಎಂನಿಂದಲೇ ಬರೋಬ್ಬರಿ 35 ಲಕ್ಷಕ್ಕೂ ಅಧಿಕ ಹಣ ಡ್ರಾ ಮಾಡಿದ ಘಟನೆಯೊಂದು ನಡೆದಿದೆ.

    ಆರೋಪಿ ಮಹಿಳೆಯನ್ನು ರಿತಾ ರಾಯ್ ಎಂದು ಗುರುತಿಸಲಾಗಿದ್ದು, ಈಕೆ ಕಳೆದ 7 ವರ್ಷಗಳಿಂದ ಸತ್ಯನಾರಾಯಣ್ ಅಗರ್ವಾಲ್ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು. ಇದೀಗ ಹಣ ಕದ್ದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಸತ್ಯನಾರಾಯಣ್ ಅವರು ಕೊರೊನಾ ಲಾಕ್‍ಡೌನ್ ಸಮಯದಲ್ಲಿ ಮೃತಪಟ್ಟಿದ್ದಾರೆ. ಆ ಬಳಿಕ ನಕಶಿಪರ ನಿವಾಸಿಯಾಗಿರುವ ರಾಯ್, ತನ್ನ ಸಂಬಂಧಿಕರ ಸಹಾಯ ಪಡೆದು ತನ್ನ ಮಾಲೀಕನ ಎಟಿಎಂನಿಂದಲೇ 34,90,000 ಹಣ ಪೀಕಿದ್ದಾಳೆ.

    ಸತ್ಯನಾರಾಯಣ್ ಅವರು ಲಾಕ್‍ಡೌನ್ ಆದ ಮೊದಲ ವಾರದಲ್ಲಿ ತೀರಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಅವರು, ಪ್ರಿನ್ಸ್ ಅನ್ವರ್ ಷಾ ರಸ್ತೆಯ ಸಿಟಿ ಹೈನಲ್ಲಿರುವ ಮನೆಯಲ್ಲಿಯೇ ಇದ್ದರು. ಸತ್ಯನಾರಾಯಣ್ ಮೃತಪಟ್ಟ ಸಂದರ್ಭದಲ್ಲಿ ರಾಯ್, ಅವರ ಬಳಿಯಿದ್ದ ಎಟಿಎಂ ಕಾರ್ಡ್ ಕದ್ದಿದ್ದಾಳೆ. ಅಲ್ಲದೆ ಆ ಬಳಿಕದಿಂದಲೇ ಹಣ ಡ್ರಾ ಮಾಡಲು ಆರಂಭಿಸಿದ್ದಾಳೆ. ಆದರೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಯಾರೂ ಬ್ಯಾಂಕಿಗೆ ಹೋಗುತ್ತಿರಲಿಲ್ಲ. ಹೀಗಾಗಿ ಸತ್ಯನಾರಾಯಣ್ ಕುಟುಂಬಕ್ಕೆ ಹಣ ಡ್ರಾ ಮಾಡಿರುವ ವಿಚಾರವೂ ಗೊತ್ತಾಗಿರಲಿಲ್ಲ.

    ಇತ್ತ ಬ್ಯಾಂಕಿನಿಂದ ಸತ್ಯನಾರಾಯಣ್ ಅವರ ಮೊಬೈಲ್ ಗೆ ಮೆಸೇಜ್ ಗಳು ಬರುತ್ತಲೇ ಇತ್ತು. ಆದರೆ ಸತ್ಯನಾರಾಯಣ್ ತೀರಿಕೊಂಡ ಬಳಿಕ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. ಹೀಗಾಗಿ ಅವರ ಅಕೌಂಟಿನಿಂದ ಹಣ ಹೋಗುತ್ತಿರುವ ವಿಚಾರ ಕುಟುಂಬದ ಗಮನಕ್ಕೆ ಬಂದಿರಲಿಲ್ಲ. ಸತ್ಯನಾರಾಯಣ್ ಅವರ ಮಗ ಇನ್ನೊಂದು ಫ್ಲ್ಯಾಟ್‍ನಲ್ಲಿ ವಾಸವಾಗಿದ್ದನು. ಮೃತರು ಬಳಸಿದ ಮೊಬೈಲ್ ಸಂಖ್ಯೆ ಸ್ವಿಚ್ಛ್ ಆಫ್ ಆಗಿದ್ದರಿಂದ ಬ್ಯಾಂಕ್ ಅವರ ಕುಟುಂಬದ ಸದಸ್ಯರಿಗೆ ಮೆಸೇಜ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸಲು ಆರಂಭಿಸಿತ್ತು.

    ಜೂನ್ 1ರಂದು ಸತ್ಯನಾರಾಯಣ್ ಪುತ್ರ ಅನುರಾಗ್ ಬ್ಯಾಂಕಿಗೆ ತೆರಳಿ ಖಾತೆಯ ವಿವರಗಳನ್ನು ತೆಗೆದುಗೊಂಡಾಗ ಮಹಿಳೆ ಹಣ ಡ್ರಾ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮಗ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಎಟಿಎಂ ಸಿಸಿಟಿವಿಗಳನ್ನು ಪರೀಶಿಲಿಸಿದಾಗ ಇಬ್ಬರು ವ್ಯಕ್ತಿಗಳೊಂದಿಗೆ ಮಹಿಳೆ ಹಣ ಡ್ರಾ ಮಾಡುತ್ತಿರುವುದು ಬಯಲಾಗಿದೆ. ಸದ್ಯ ಘಟನೆ ಸಂಬಂಧಪಟ್ಟಂತೆ ಆರೋಪಿಗಳನ್ನು ಆಗಸ್ಟ್ 13ರಂದು ಬಂಧಿಸಲಾಗಿದ್ದು, ಆರೋಪಗಳಿಂದ 27 ಲಕ್ಷ ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

  • ತನ್ನ 93ನೇ ಹುಟ್ಟುಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಅಜ್ಜಿ ವಿಡಿಯೋ ವೈರಲ್

    ತನ್ನ 93ನೇ ಹುಟ್ಟುಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಅಜ್ಜಿ ವಿಡಿಯೋ ವೈರಲ್

    – ಯುವಕರನ್ನೇ ನಾಚಿಸುವಂತೆ ಅಜ್ಜಿ ಡ್ಯಾನ್ಸ್
    – ಅಜ್ಜಿ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ

    ಕೋಲ್ಕತ್ತಾ: ತನ್ನ ಹುಟ್ಟುಹಬ್ಬದಲ್ಲಿ ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಯುವಕರನ್ನು ನಾಚಿಸಿದ ಅಜ್ಜಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಆಗಸ್ಟ್ 10ರಂದು ಮೊಮ್ಮಗ ಗೌರವ್ ಸಹಾ ಅವರು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಜ್ಜಿಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

    ವಿಡಿಯೋದಲ್ಲೇನಿದೆ?
    ಅಜ್ಜಿ ತನ್ನ 93ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ವೇಳೆ 2018ರಲ್ಲಿ ಬಿಡುಗಡೆಯಾದ ಬಾಲಿವುಡ್ ನಟ ರಣವೀರ್ ಸಿಂಗ್ ಹಾಗೂ ಸಾರಾ ಅಲಿಖಾನ್ ನಟನೆಯ ಸಿಂಬಾ ಚಿತ್ರದ ಪ್ರಸಿದ್ಧ ‘ಆಂಖ್ ಮಾರೆ’ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಅಜ್ಜಿಗೆ ಮನೆಯವರು ಕೂಡ ಸಾಥ್ ನೀಡಿ ಅವರನ್ನು ಹುರಿದುಂಬಿಸುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಗೌರವ್ ಸಹಾ ಮನೆಯವರು ಅಜ್ಜಿಯ ಹುಟ್ಟುಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿದ್ದಾರೆ. ಕಲರ್ ಕಲರ್ ಬಲೂನ್ ಗಳು, ಬರ್ತ್ ಡೇ ಟೊಪ್ಪಿ ಹಾಗೂ ಚಾಕ್ಲೆಟ್ ಕೇಕ್ ನೊಂದಿಗೆ ಬರ್ತ್ ಡೇ ಆಚರಿಸಿದ್ದಾರೆ. ಅಜ್ಜಿ ಗೋಲ್ಡನ್ ಕಲರ್ ದಪ್ಪವಾದ ಬಾರ್ಡರ್ ಇರುವ ಬಿಳಿ ಸೀರೆ ಉಟ್ಟಿದ್ದಾರೆ. ಎರಡು ಚಿನ್ನದ ಸರಗಳನ್ನು ಹಾಕಿ ತನ್ನ ಕುಟುಂಬದ ಸದಸ್ಯರೊಂದಿಗೆ ಫೋಟೋಗೆ ಪೋಸ್ ನೀಡಿದ್ದಾರೆ.

    ಎಲ್ಲಾ ಫೋಟೊಗಳನ್ನು ಗೌರವ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಥಮ್ಮಾಸ್ ಸ್ವೀಟ್ 93 ಹುಟ್ಟುಹಬ್ಬ’ ಎಂದು ಬರೆದುಕೊಂಡಿದ್ದಾನೆ. ವಿಡಿಯೋದೊಂದಿಗೆ ಈ ಫೋಟೋಗಳು ವೈರಲ್ ಆಗಿದ್ದು, ಅಜ್ಜಿಯ ಡ್ಯಾನ್ಸ್ ಗೆ ನೆಟ್ಟಿಗರು ಸಾಕಷ್ಟು ಕಮೆಂಟ್‍ಗಳನ್ನು ಮಾಡಿದ್ದಾರೆ.

     

  • ಸಹೋದರನಿಗೆ ಕೊರೊನಾ ಪಾಸಿಟಿವ್- ಸೌರವ್ ಗಂಗೂಲಿ ಹೋಂ ಕ್ವಾರಂಟೈನ್

    ಸಹೋದರನಿಗೆ ಕೊರೊನಾ ಪಾಸಿಟಿವ್- ಸೌರವ್ ಗಂಗೂಲಿ ಹೋಂ ಕ್ವಾರಂಟೈನ್

    ಕೋಲ್ಕತ್ತಾ: ಕೊರೊನಾ ವೈರಸ್ ಭಯದಿಂದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದಾರೆ.

    ಹೌದು. ಗಂಗೂಲಿ ಹಿರಿಯ ಸಹೋದರ, ಬಂಗಾಳ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಸ್ನೇಹಶಿಶ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಬೆನ್ನಲ್ಲೇ ನಿಯಮದಂತೆ ಗಂಗೂಲಿ ಕೂಡ ಹೋಂ ಕ್ವಾರಂಟೈನ್ ಆಗಿದ್ದಾರೆ.

    ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸ್ನೇಹಶಿಶ್ ಅವರು ಬೆಲ್ಲೆ ವ್ಯೂವ್ ಕ್ಲಿನಿಕ್ ನಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಮಧ್ಯೆ ಕೊರೊನಾ ಟೆಸ್ಟ್ ಮಾಡಿದ್ದು, ಇಂದು ವರದಿ ಪಾಸಿಟಿವ್ ಎಂದು ಬಂದಿದೆ. ಸಣ್ಣ ಪ್ರಮಾಣದಲ್ಲಿ ಕೊರೊನಾ ಬಂದಿರುವುದರಿಂದ ಸದ್ಯ ಅವರು ಬರಲ್ಲೆ ವ್ಯೂವ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಸೋಸಿಯೇಶನ್ ಮೂಲಗಳು ತಿಳಿಸಿವೆ.

    ಈ ಸಂಬಂಧ ಗಂಗೂಲಿ ಕುಟುಂಬ ಕೂಡ ಮಾಹಿತಿ ನೀಡಿದ್ದು, ಅಣ್ಣ-ತಮ್ಮ ಒಂದೇ ಮನೆಯಲ್ಲಿ ವಾಸವಾಗಿದ್ದರು. ಪ್ರೋಟೋಕಾಲ್ ಪ್ರಕಾರ, ಕೆಲ ದಿನಗಳ ಕಾಲ ಗಂಗೂಲಿ ಹೋಂ ಕ್ವಾರಂಟೈನ್‍ಗೆ ಒಳಗಾಗಲು ತೀರ್ಮಾನಿಸಿದ್ದಾರೆ ಎಂದು ತಿಳಿಸಿದೆ.

  • ನೇಣುಬಿಗಿದ ಸ್ಥಿತಿಯಲ್ಲಿ ಬಿಜೆಪಿ ಶಾಸಕನ ಮೃತದೇಹ ಪತ್ತೆ

    ನೇಣುಬಿಗಿದ ಸ್ಥಿತಿಯಲ್ಲಿ ಬಿಜೆಪಿ ಶಾಸಕನ ಮೃತದೇಹ ಪತ್ತೆ

    – ಕೊಲೆ ಎಂದು ಗಂಭೀರ ಆರೋಪ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ಇಂದು ಮುಂಜಾನೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

    ಮೃತ ಶಾಸಕರನ್ನು ದೇವೆಂದ್ರನಾಥ್ ರೇ ಎಂದು ಗುರುತಿಸಲಾಗಿದೆ. ತಮ್ಮ ಮನೆಯಿಂದ 1 ಕಿ.ಮೀ ದೂರದಲ್ಲಿರುವ ಮಾರ್ಕೆಟ್ ನಲ್ಲಿ ಶಾಸಕರ ಮೃತದೇಹ ಪತ್ತೆಯಾಗಿದೆ. ಅದರೆ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಬಿಜೆಪಿ ಗಂಭೀರವಾಗಿ ಆರೋಪಿಸುತ್ತಿದೆ.

    ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಶಾಸಕರ ಮನೆಗೆ ಕೆಲವು ಮಂದಿ ಬಂದಿದ್ರು. ಅಲ್ಲದೆ ಅವರನ್ನು ಬಲವಂತವಾಗಿ ಮನೆಯಿಂದ ಹೊರಬರುವಂತೆ ಹೇಳಿದ್ದಾರೆ ಎಂದು ಕುಟುಂಬದ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಶೀಘ್ರವೇ ತನಿಖೆ ನಡೆಸಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

    ಇಂದು ಬೆಳಗ್ಗೆ ಸ್ಥಳೀಯರು ನೇಣುಬಿಗಿದ ಸ್ಥಿತಿಯಲ್ಲಿದ್ದ ಶಾಸಕರನ್ನು ಕಂಡು ಗಾಬರಿಗೊಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
    ಇತ್ತ ಬಿಜೆಪಿಯೂ ನಮ್ಮ ಶಾಸಕರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದೆ. ಅಲ್ಲದೆ ಈ ಸಂಬಂಧ ಬಿಜೆಪಿ ಮುಖಂಡರೊಬ್ಬರು ಟ್ವೀಟ್ ಮಾಡಿ, ಬಂಗಾಳದಲ್ಲಿ ಬಿಜೆಪಿ ನಾಯಕರ ಹತ್ಯೆಗೆ ಅಂತ್ಯ ಕಾಣುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

    ದೇವೇಂದ್ರನಾಥ್ ರೇ ಅವರು 2016ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಆ ಬಳಿಕ ಅಂದರೆ ಕಳೆದ ವರ್ಷ ಲೋಕಸಭಾ ಚುನಾವಣೆಯ ನಂತರ ಅವರು ಬಿಜೆಪಿ ಸೇರಿದ್ದರು.

  • ಮಾಸ್ಕ್ ಧರಿಸಿಲ್ಲವೆಂದು ವಿಕಲಚೇತನ ಮಗನನ್ನೇ ಕೊಲೆಗೈದ ತಂದೆ

    ಮಾಸ್ಕ್ ಧರಿಸಿಲ್ಲವೆಂದು ವಿಕಲಚೇತನ ಮಗನನ್ನೇ ಕೊಲೆಗೈದ ತಂದೆ

    ಕೋಲ್ಕತ್ತಾ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮನೆಯಿಂದ ಹೊರಹೋಗುವಾಗ ಎಲ್ಲರೂ ಮಾಸ್ಕ್ ಬಳಕೆ ಮಾಡುತ್ತಿದ್ದಾರೆ. ಅಂತೆಯೇ ತಂದೆಯೊಬ್ಬ ತನ್ನ ಮಗ ಮಾಸ್ಕ್ ಧರಿಸಿಲ್ಲವೆಂದು ಸಿಟ್ಟುಗೊಂಡು ಆತನನ್ನು ಕೊಲೆ ಮಾಡಿದ ಘಟನೆ ಉತ್ತರ ಕೋಲ್ಕತ್ತಾದಲ್ಲಿ ನಡೆದಿದೆ.

    ಸಿರ್ಷೆಂದು ಮಲ್ಲಿಕ್(45) ಎಂಬ ವಿಕಲಚೇತನ ಮಗನನ್ನು ಬನ್ಶಿಧರ್ ಮಲ್ಲಿಕ್(78) ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

    ಈ ಸಂಬಂಧ ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿ, ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಆರೋಪಿ ಶ್ಯಾಂಪುಕರ್ ಪೊಲೀಸ್ ಠಾಣೆಗೆ ಬಂದಿದ್ದು, 5.30ರ ವೇಳೆಗೆ ನಾನು ನನ್ನ ಮಗನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಮಗ ವಿಕಲಚೇತನನಾಗಿದ್ದಾನೆ. ಆತನನ್ನು ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಕೂಡಲೇ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬನ್ಶಿಧರ್ ಸದ್ಯ ನಿವೃತ್ತಿ ಹೊಂದಿದ್ದಾನೆ. ಈತನ ಮಗ ಕೆಲಸಕ್ಕೆ ತೆರಳುತ್ತಿರಲಿಲ್ಲ. ತಂದೆ-ಮಗನ ಜೊತೆ ಹೊಂದಾಣಿಕೆಯಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ ಕೆಲ ದಿನಗಳಿಂದ ಮಾಸ್ಕ್ ಹಾಕಿಕೊಳ್ಳದೆ ಹೊರಗಡೆ ಹೋಗುತ್ತಿರುವುದಕ್ಕೆ ತಂದೆ-ಮಗನ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಆದರೂ ಮಗ ತಂದೆಯ ಮಾತನ್ನು ಲೆಕ್ಕಿಸದೇ ಮಾಸ್ಕ್ ಧರಿಸದೆಯೇ ಮನೆಯಿಂದ ಹೊರ ಹೋಗುತ್ತಿದ್ದನು. ಇದರಿಂದ ಸಿಟ್ಟುಕೊಂಡ ತಂದೆ, ಶನಿವಾರ ಸಂಜೆ ಮಗನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

    ಮಾರ್ಚ್ 12ರಿಂದ ಬಂಗಾಳ ಸರ್ಕಾರ ಎಲ್ಲಾ ನಾಗರಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿತ್ತು. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಹೋಗಬಾರದೆಂದು ಕಡ್ಡಾಯ ಮಾಡಿ ಆದೇಶಿಸಿದೆ.

  • ತನ್ನ ಪರ ತೀರ್ಪು ಕೊಡದ ನ್ಯಾಯಾಧೀಶರಿಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ ವಕೀಲ

    ತನ್ನ ಪರ ತೀರ್ಪು ಕೊಡದ ನ್ಯಾಯಾಧೀಶರಿಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ ವಕೀಲ

    ಕೊಲ್ಕತ್ತಾ: ವಿಶ್ವವ್ಯಾಪಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‍ಗೆ ಜನರು ತತ್ತರಿಸಿ ಹೋಗಿದ್ದು, ಭಯಭೀತರಾಗಿದ್ದಾರೆ. ಈ ಮಧ್ಯೆ ತನ್ನ ಕಕ್ಷಿದಾರರ ಪರ ತೀರ್ಪು ಕೊಡಲಿಲ್ಲ ಎಂದು ಸಿಟ್ಟಿಗೆದ್ದ ವಕೀಲರೊಬ್ಬರು ನ್ಯಾಯಾಧೀಶರಿಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ್ದಾರೆ.

    ಕೊಲ್ಕತ್ತಾದಲ್ಲಿ ಈ ಘಟನೆ ನಡೆದಿದೆ. ದೇಶದೆಲ್ಲೆಡೆ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೊಲ್ಕತ್ತಾ ಹೈಕೋರ್ಟ್ ಮಾರ್ಚ್ 15ರಿಂದ ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುತ್ತೆ, ಬೇರೆ ಪ್ರಕರಣಗಳನ್ನು ಕಾಯ್ದಿಸಲಾಗುತ್ತೆ ಎಂದು ತಿಳಿಸಿತ್ತು. ಅಲ್ಲದೇ ಮಾರ್ಚ್ 25ರಿಂದ ತುರ್ತು ಪ್ರಕರಣಗಳಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸೋದಾಗಿ ನ್ಯಾಯಾಲಯ ಘೋಷಿಸಿತ್ತು.

    ಆದರೆ ವಕೀಲ ಬಿಜೋಯ್ ಅಧಿಕಾರಿ ತಮ್ಮ ಕಕ್ಷಿದಾರರ ಪ್ರಕರಣವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ, ತೀರ್ಪು ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಬಸ್ ಲೋನ್ ಕಟ್ಟದ ಪರಿಣಾಮ ಬ್ಯಾಂಕ್ ಅವರು ಕಕ್ಷಿದಾರರ ಬಸ್ ಜಪ್ತಿ ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ಎಂದು ಬಿಜೋಯ್ ನ್ಯಾಯಾಧೀಶರಾದ ದೀಪಂಕರ್ ದತ್ತ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮಾಡುತ್ತಿದ್ದರು.

    ಈ ವೇಳೆ ನ್ಯಾಯಾಧೀಶರು ತಮ್ಮ ಕಕ್ಷಿದಾರನ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸದೆ, ತಮ್ಮ ಪರವಾಗಿ ತೀರ್ಪು ನೀಡದ್ದಕ್ಕೆ ಬಿಜೋಯ್ ಕೋಪಗೊಂಡರು. ಅಲ್ಲದೇ ನ್ಯಾಯಮೂರ್ತಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿಮಗೇ ಕೊರೊನಾ ಬರಲಿ ಎಂದು ಶಾಪ ಹಾಕಿದ್ದಾರೆ.

    ವಿಡಿಯೋ ಕಾನ್ಫರೆನ್ಸ್ ನಲ್ಲಿ ತಮಗೆ ಅಗೌರವ ತೋರಿಸಿ, ಅವಹೇಳನಕಾರಿಯಾಗಿ ಹೇಳಿಕೆ ನೀಡಿ ಬಿಜೋಯ್ ಅವರು ನ್ಯಾಯಾಲಯದ ತೀರ್ಪನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ವಕೀಲ ವೃತ್ತಿಯ ಘನತೆಯನ್ನು ಕಾಪಾಡದೆ, ಈ ರೀತಿ ನಡೆದುಕೊಂಡಿದ್ದಕ್ಕೆ ಅವರು ಸ್ಪಷ್ಟನೆ ನೀಡಬೇಕೆಂದು ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

  • ಹೆಚ್ಚು ಲೈಕ್ಸಿಗೆ ಹುಚ್ಚು ಸಾಹಸ – ಸ್ನೇಹಿತರೆದುರೇ ಜೀವಬಿಟ್ಟ ಟಿಕ್‍ಟಾಕ್ ಸ್ಟಾರ್

    ಹೆಚ್ಚು ಲೈಕ್ಸಿಗೆ ಹುಚ್ಚು ಸಾಹಸ – ಸ್ನೇಹಿತರೆದುರೇ ಜೀವಬಿಟ್ಟ ಟಿಕ್‍ಟಾಕ್ ಸ್ಟಾರ್

    ಕೋಲ್ಕತ್ತಾ: ಇತ್ತೀಚೆಗೆ ಟಿಕ್‍ಟಾಕ್ ಅನ್ನು ಹೆಚ್ಚಾಗಿ ಎಲ್ಲರೂ ಬಳಸುತ್ತಾರೆ. ಚಿಕ್ಕ ಮಕ್ಕಳಿಂದ ಹಿಡಿದು ಯುವಕ, ಯುವತಿಯರು, ವೃದ್ಧರು ಕೂಡ ಟಿಕ್‍ಟಾಕ್‍ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗೆ ಟಿಕ್‍ಟಾಕ್ ವಿಡಿಯೋ ಮೂಲಕ ಹೆಚ್ಚು ಲೈಕ್ಸ್ ಪಡೆಯಲು ಹುಚ್ಚು ಸಾಹಸ ಮಾಡಲು ಹೋಗಿ ಸ್ನೇಹಿತರೆದುರೇ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ.

    ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಪೀಗಂಜ್ ಪ್ರದೇಶದ ಕರೀಮ್ ಶೇಖ್(17) ಮೃತ ಯುವಕ. ಮಂಗಳವಾರ ಈತ ತನ್ನ ಸ್ನೇಹಿರೊಂದಿಗೆ ಸೇರಿ ಟಿಕ್‍ಟಾಕ್ ವಿಡಿಯೋ ಮಾಡುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ಟಿಕ್‍ಟಾಕ್‍ನಲ್ಲಿ ಸದಾ ಮುಳುಗಿರುತ್ತಿದ್ದ ಶೇಖ್ ಯಾವಾಗಲೂ ವಿಡಿಯೋ ಮಾಡುವುದರಲ್ಲೇ ಬ್ಯುಸಿಯಾಗಿರುತ್ತಿದ್ದನು. ಎಂದಿನಂತೆ ಮಂಗಳವಾರ ಕೂಡ ಸ್ನೇಹಿತರೊಂದಿಗೆ ಸೇರಿ ವಿಡಿಯೋ ಮಾಡಲು ಮುಂದಾಗಿದ್ದನು. ಆದರೆ ಟಿಕ್‍ಟಾಕ್‍ನಲ್ಲಿ ಹೆಚ್ಚು ಲೈಕ್ಸ್ ಪಡೆಯಲು ಶೇಖ್ ಹುಚ್ಚು ಸಾಹಸಕ್ಕೆ ಕೈಹಾಕಿದನು. ಇದಕ್ಕೆ ಆತನ ಮೂವರು ಅಪ್ರಾಪ್ತ ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದರು.

    ಗ್ರಾಮದಲ್ಲಿದ್ದ ಒಂದು ವಿದ್ಯುತ್ ಕಂಬಕ್ಕೆ ನನ್ನನ್ನು ಹಗ್ಗದಿಂದ ಕಟ್ಟಿ ಹಾಕಿ, ಮುಖಕ್ಕೆ ಪ್ಲಾಸ್ಟಿಕ್ ಕವರ್ ಕಟ್ಟಿ. ಅದನ್ನು ನಾನು ಬಿಚ್ಚುತ್ತೇನೆ. ಈ ದೃಶ್ಯವನ್ನು ವಿಡಿಯೋ ಮಾಡಿ ಎಂದು ಶೇಖ್ ಸ್ನೇಹಿತರಿಗೆ ತಿಳಿಸಿದ್ದನು. ಆದ್ದರಿಂದ ಸ್ನೇಹಿತರು ಶೇಖ್ ಹೇಳಿದಂತೆ ಆತನನ್ನು ಕಟ್ಟಿ ಹಾಕಿ ವಿಡಿಯೋ ಮಾಡುತ್ತಿದ್ದರು. ಈ ವೇಳೆ ಮುಖಕ್ಕೆ ಪ್ಲಾಸ್ಟಿಕ್ ಕಟ್ಟಿದ್ದ ಪರಿಣಾಮ ಶೇಖ್‍ಗೆ ಉಸಿರಾಡಲು ಆಗದೆ ನರಳಾಡುತ್ತಿದ್ದನು. ಆದರೆ ಆತನ ಸ್ನೇಹಿತರು ವಿಡಿಯೋ ಚೆನ್ನಾಗಿ ಆಗಲೆಂದು ಶೇಖ್ ನಟನೆ ಮಾಡುತ್ತಿದ್ದಾನೆ ಅಂದುಕೊಂಡರು. ಹೀಗೆ ವಿಡಿಯೋ ಮಾಡುತ್ತಿದ್ದ ವೇಳೆಯೇ ಶೇಖ್ ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಎಷ್ಟೇ ಹೊತ್ತು ವಿಡಿಯೋ ಮಾಡಿದರೂ ಶೇಖ್ ಯಾಕೆ ಹಗ್ಗ ಕಟ್ಟಿದ್ದನ್ನ ಬಿಡಿಸಿಕೊಳ್ಳುತ್ತಿಲ್ಲ ಎಂದು ಸ್ನೇಹಿತರು ಹತ್ತಿರ ಹೋಗಿ ನೋಡಿದಾಗ ಆತ ಮೃತಪಟ್ಟಿರುವುದು ತಿಳಿದಿದೆ. ಇದರಿಂದ ಗಾಬರಿಗೊಂಡ ಮೂವರು ಸ್ನೇಹಿತರು ಮೃತದೇಹವನ್ನ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳೀಯರು ಶೇಖ್‍ನನ್ನು ಗಮನಿಸಿ ತಕ್ಷಣ ಆತನನ್ನು ಆಸ್ಪತ್ರೆಗೆ ರವಾನಿಸಿದರು. ಆದರೆ ಶೇಖ್ ಸಾವನ್ನಪ್ಪಿದ್ದಾನೆ ಎಂದು ವೈದರು ತಿಳಿಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

  • ಹೈವೇ ಅಂಡರ್‌ಪಾಸ್‌ನಲ್ಲಿ ತಗ್ಲಾಕೊಂಡ ವಿಮಾನ

    ಹೈವೇ ಅಂಡರ್‌ಪಾಸ್‌ನಲ್ಲಿ ತಗ್ಲಾಕೊಂಡ ವಿಮಾನ

    ಕೋಲ್ಕತ್ತಾ: ವಿಮಾನ ಆಕಾಶದಂಗಳದಲ್ಲಿ ಹಾರಾಡಿದನ್ನ ನೋಡಿರುತ್ತೀರ. ಆದರೆ ರಾಷ್ಟ್ರೀಯ ಹೆದ್ದಾರಿ-2ರ ಅಂಡರ್‌ಪಾಸ್‌ನಲ್ಲಿ ವಿಮಾನವೊಂದು ಸಿಲುಕಿಕೊಂಡು ಟ್ರಾಫಿಕ್ ಜ್ಯಾಮ್ ಉಂಟುಮಾಡಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಇದೇನಪ್ಪ ಆಕಾಶದಲ್ಲಿ ಹಾರಾಡಬೇಕಿದ್ದ ವಿಮಾನ ರಸ್ತೆ ಮೇಲೆ ಯಾಕೆ ಬಂತು? ಏನಾದರೂ ಅಪಘಾತಕ್ಕೀಡಾಯ್ತ? ಹೀಗೆ ಈ ಸುದ್ದಿ ಕೇಳಿದ ಹಲವರಿಗೆ ಪ್ರಶ್ನೆ ಹುಟ್ಟೋದು ಸಾಮಾನ್ಯ. ಅಸಲಿಗೆ ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿದ್ದು ಹಾರಾಟ ನಡೆಸುವ ವಿಮಾನವಲ್ಲ. ಇಂಡಿಯಾ ಪೋಸ್ಟ್ ನ ಹಾಳಾಗಿದ್ದ ಹಳೆಯ ವಿಮಾನದ ಮುಂಭಾಗ. ಈ ವಿಮಾನದ ಮುಂಭಾಗವನ್ನು ಟ್ರಕ್‍ವೊಂದರಲ್ಲಿ ಸಾಗಿಸಲಾಗುತ್ತಿತ್ತು. ಪಶ್ಚಿಮ ಬರ್ದಮಾನ್ ಜಿಲ್ಲೆಯ ದುರ್ಗಾಪುರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-2ರ ಅಂಡರ್‌ಪಾಸ್‌ನಲ್ಲಿ ಟ್ರಕ್ ಹೋದಾಗ, ಅದರ ಮಧ್ಯೆಯೇ ವಿಮಾನ ಸಿಲುಕಿಕೊಂಡಿತ್ತು.

    ಮಂಗಳವಾರ ಈ ಘಟನೆ ಬೆಳಕಿಗೆ ಬಂದಿದೆ. ಆದರೆ ಸೋಮವಾರ ರಾತ್ರಿಯಿಂದಲೂ ಈ ವಿಮಾನ ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿದೆ. ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಇಂಡಿಯಾ ಪೋಸ್ಟ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.

    ದುರ್ಗಾಪುರ ರಸ್ತೆ ಯಾವಾಗಲೂ ವಾಹನ ಸಂಚಾರದಿಂದ ಬ್ಯುಸಿಯಾಗಿರುತ್ತದೆ. ಆದರೆ ವಿಮಾನ ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿರುವ ಪರಿಣಾಮ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿ ವಾಹನ ಸವಾರರು ಪರದಾಡಿದರು.

    ರಸ್ತೆ ಮೇಲೆ ವಿಮಾನವನ್ನು ಕಂಡ ಸ್ಥಳೀಯರು ಅದನ್ನು ನೋಡಲು ಮುಗಿಬಿದ್ದಿದ್ದು, ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು. ಹೀಗಾಗಿ ಟ್ರಾಫಿಕ್ ಜಾಮ್ ಜೊತೆಗೆ ಜನರ ಗಲಾಟೆ ಕೂಡ ಹೆಚ್ಚಾಗಿತ್ತು.