Tag: kolkata

  • ಕೋಲ್ಕತ್ತಾದಲ್ಲಿ ನಟಸಾರ್ವಭೌಮ!

    ಕೋಲ್ಕತ್ತಾದಲ್ಲಿ ನಟಸಾರ್ವಭೌಮ!

    ಬೆಂಗಳೂರು: ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಪುನೀತ್ ರಾಜ್ ಕುಮಾರ್ ಕೂಡಾ ಬಿಡುವಿರದಂತೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದೀಗ ನಟಸಾರ್ವಭೌಮ ಚಿತ್ರ ತಂಡ ಕೋಲ್ಕತ್ತಾದಲ್ಲಿ ಬೀಡು ಬಿಟ್ಟಿದೆ.

    ನಿರ್ದೇಶಕ ಪವನ್ ಒಡೆಯರ್ ಕೋಲ್ಕತ್ತಾದಲ್ಲಿ ಬಿಗಿಯಾದ ಶೂಟಿಂಗ್ ಶೆಡ್ಯೂಲ್ ಹಾಕಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಮತ್ತು ನಾಯಕಿ ಅನುಪಮಾ ಪರಮೇಶ್ವರನ್ ಕಾಂಬಿನೇಷನ್ನಿನ ಚಿತ್ರೀಕರಣವೂ ಯಶಸ್ವಿಯಾಗಿಯೇ ನಡೆಯುತ್ತಿದೆ. ಚಿತ್ರೀಕರಣದ ನಡುವೆ ಸಿಕ್ಕ ಸ್ವಲ್ಪ ಕಾಲಾವಕಾಶದಲ್ಲಿಯೇ ಅನುಪಮಾ ಪವರ್ ಸ್ಟಾರ್ ಜೊತೆ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸಂಭ್ರಮಿಸಿದ್ದಾರೆ.

    ಅನುಪಮಾ ದಕ್ಷಿಣ ಭಾರತೀಯ ಚಿತ್ರ ರಂಗದಲ್ಲಿ ಪ್ರಸಿದ್ಧಿ ಪಡೆದಿರುವ ನಟಿ. ನಟಸಾರ್ವಭೌಮ ಚಿತ್ರದ ಮೂಲಕ ಅವರು ಮೊದಲ ಸಲ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಅವಾರ್ಡ್ ಪ್ರೋಗ್ರಾಮ್ ಒಂದರಲ್ಲಿ ಪುನೀರ್ ರಾಜ್ ಕುಮಾರ್ ಅವರನ್ನು ನೋಡಿದ್ದ ಅನುಪಮಾ ಅವರೊಂದಿಗೆ ನಟಿಸಬೇಕು ಅಂದುಕೊಂಡಿದ್ದರಂತೆ. ಇದೀಗ ಅನುಪಮಾ ಪವರ್ ಸ್ಟಾರ್ ಜೊತೆಗೇ ನಟಿಸೋ ಅವಕಾಶ ಕೂಡಿ ಬಂದಿರೋ ಸಂತಸದಲ್ಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನಿನ್ನ ಕಾಲು ಮುರಿತೀನಿ ನೋಡು: ಕೇಂದ್ರ ಸಚಿವನ ಧಮ್ಕಿ ವಿಡಿಯೋ ವೈರಲ್!

    ನಿನ್ನ ಕಾಲು ಮುರಿತೀನಿ ನೋಡು: ಕೇಂದ್ರ ಸಚಿವನ ಧಮ್ಕಿ ವಿಡಿಯೋ ವೈರಲ್!

    ಕೋಲ್ಕತ್ತ: ಪಶ್ಚಿಮ ಬಂಗಾಳದ ಅಸನ್ಸೋಲ್ ಪ್ರದೇಶದಲ್ಲಿ ನಡೆದ ಅಂಗವಿಕಲರ ಸಮಾವೇಶದಲ್ಲಿ ಕೇಂದ್ರ ಸಚಿವ ಬಬುಲ್ ಸುಪ್ರಿಯೊ ವ್ಯಕ್ತಿಯೊಬ್ಬರಿಗೆ ನಿನ್ನ ಕಾಲನ್ನು ಮುರಿಯುತ್ತೇನೆ ಎಂದು ಧಮ್ಕಿ ಹಾಕಿರುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಅಸನ್ಸೋಲ್ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿ ಗಾಲಿಕುರ್ಚಿ ಮತ್ತು ಪರಿಕರಗಳನ್ನು ವಿತರಿಸುವ ‘ಸಾಮಾಜಿಕ ಅಧಿಕಾರಿತಾ ಶಿವಾರ್’ ಸಮಾರಂಭಕ್ಕೆ ಕೇಂದ್ರದ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ರಾಜ್ಯ ಸಚಿವ ಬಬುಲ್ ಸುಪ್ರಿಯೋರನ್ನು ಆಹ್ವಾನಿಸಲಾಗಿತ್ತು. ಸಭೆಯಲ್ಲಿ ಸಚಿವರು ಭಾಷಣ ಮಾಡುತ್ತಿರುವಾಗ ಓರ್ವ ವ್ಯಕ್ತಿ ಅಡ್ಡಾ-ದಿಡ್ಡಿಯಾಗಿ ಓಡಾಡುತ್ತಿದ್ದನು. ಇದನ್ನು ಪ್ರಶ್ನಿಸಿದ ಅವರು ಏಕೆ ಓಡಾಡುತ್ತಿದ್ದೀಯಾ? ಸುಮ್ಮನೇ ಕುಳಿತುಕೋ ಎಂದು ಹೇಳಿದರು.

    ಸಚಿವರ ಮಾತಿಗೂ ಬೆಲೆಕೊಡದ ಆತ ಪುನಃ ಅದೇ ರೀತಿ ಮಾಡುತ್ತಿದ್ದ. ಇದರಿಂದ ಸಿಟ್ಟಿಗೆದ್ದ ಸಚಿವರು ನಿನಗೇನಾಗಿದೆ? ಏನಾದರೂ ಸಮಸ್ಯೆ ಇದೆಯಾ? ನೀನು ಸುಮ್ಮನೆ ಕುಳಿತುಕೊಳ್ಳದಿದ್ದರೆ, ನಿನ್ನ ಕಾಲನ್ನು ಮುರಿಯುತ್ತೇನೆ ನೋಡು ಎಂದು ಹೇಳಿದ್ದಲ್ಲದೇ, ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಆ ವ್ಯಕ್ತಿ ಪುನಃ ಸಭೆಯಲ್ಲಿ ಓಡಾಡಿದರೆ ಅವನ ಕಾಲನ್ನು ಮುರಿದು ಊರುಗೋಲು ಕೊಡಿ ಎಂದು ಸೂಚಿಸಿದ್ದಾರೆ.

    ಬಹಿರಂಗ ಸಭೆಯಲ್ಲಿ ವ್ಯಕ್ತಿಯೊಬ್ಬರಿಗೆ ಕಾಲು ಮುರಿಯುತ್ತೇನೆ ನೋಡು ಎಂದ ಸಚಿವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿ ಕೇಂದ್ರ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಯಾವಾಗಲೂ ಸದಾ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಲ್ಲಿರುವ ಸಚಿವರು ಮತ್ತೊಮ್ಮೆ ತಮ್ಮ ನಾಲಿಗೆ ಹರಿಬಿಟ್ಟು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಮೊದಲು ಬಹಿರಂಗ ಸಭೆಯಲ್ಲಿ ವ್ಯಕ್ತಿಯೊಬ್ಬರ ಚರ್ಮ ಸುಲಿಯುತ್ತೇನೆ ನೋಡಿ ಎನ್ನುವ ಮೂಲಕ ವಿವಾದಕ್ಕೆ ಗುರಿಯಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊತ್ತಿ ಉರಿದ ಕೋಲ್ಕತ್ತಾ ಮಾರುಕಟ್ಟೆ: ಕಾರ್ಯಾಚರಣೆ ಹೇಗೆ ನಡೆಯಿತು? ವಿಡಿಯೋ ನೋಡಿ

    ಹೊತ್ತಿ ಉರಿದ ಕೋಲ್ಕತ್ತಾ ಮಾರುಕಟ್ಟೆ: ಕಾರ್ಯಾಚರಣೆ ಹೇಗೆ ನಡೆಯಿತು? ವಿಡಿಯೋ ನೋಡಿ

    ಕೋಲ್ಕತ್ತಾ: ಬಾಗ್ರಿ ಮಾರುಕಟ್ಟೆ ಪ್ರದೇಶದ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 30 ಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

    ತಡರಾತ್ರಿ 2.45 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಈ ಅವಘಡದಿಂದಾಗಿ ಇಡೀ ಪ್ರದೇಶವೇ ಕಪ್ಪು ಹೊಗೆಯಿಂದ ಆವರಿಸಿಕೊಂಡಿತ್ತು. ಸಿಬ್ಬಂದಿ ವರ್ಗ ಎಂಟು ಗಂಟೆಗಳಿಂದಲೂ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದರೂ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿರಲಿಲ್ಲ.

    ಅವಘಡ ಸಂಭವಿಸಿದ ಸ್ಥಳ ಕಿರಿದಾಗಿದ್ದರಿಂದ ಪ್ರವೇಶಿಸಲು ಕಷ್ಟವಾಗಿತ್ತು. ಕಟ್ಟಡದೊಳಗೆ ಪ್ರವೇಶಿಸಲು ಹೈಡ್ರಾಲಿಕ್ ಏಣಿ ಬಳಸಿ ಗ್ಯಾಸ್ ಕಟ್ಟರ್ ಮೂಲಕ ಗ್ರಿಲ್‍ಗಳನ್ನು ಕತ್ತರಿಸಿ ಕೊಠಡಿಯ ಒಳಗೆ ಹೋಗಿ ಕೊನೆಗೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಮುಗಿಸಿದ್ದಾರೆ ಎಂದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

    ಇದು ಐದು ಅಂತಸ್ತಿನ ಮಹಡಿಯಾಗಿದ್ದು, ಕೆಳ ಮಹಡಿಯಲ್ಲಿ ಮೊದಲು ಬೆಂಕಿ ಹತ್ತಿಕೊಂಡಿತ್ತು. ಕಟ್ಟಡದಲ್ಲಿ ಲೇಖನಗಳ ಪ್ರತಿಗಳು, ಔಷಧಿ, ಆಭರಣ, ಸೌಂದರ್ಯ ದ್ರವ್ಯ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅಗ್ನಿ ದುರಂತದಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೋಟೆಲ್‍ನಲ್ಲಿ ನಟಿಯ ಮೃತದೇಹ ಪತ್ತೆ

    ಹೋಟೆಲ್‍ನಲ್ಲಿ ನಟಿಯ ಮೃತದೇಹ ಪತ್ತೆ

    ಕೋಲ್ಕತ್ತಾ: ನಟಿಯೊಬ್ಬರ ಮೃತದೇಹ ಪಶ್ಚಿಮ ಬಂಗಾಳದ ಸಿಲಿಗುರಿ ಹೋಟೆಲ್‍ನಲ್ಲಿ ಪತ್ತೆಯಾಗಿದೆ.

    ಪಾಯೆಲ್ ಚಕ್ರವರ್ತಿ, ಮಂಗಳವಾರ ಸಂಜೆ ಸಿಲಿಗುರಿ ಚರ್ಚ್ ರೋಡಿನ ಹೋಟೆಲ್‍ವೊಂದರಲ್ಲಿ ರೂಮ್ ಬುಕ್ ಮಾಡಿದ್ದರು. ನಂತರ ಅಲ್ಲಿಂದ ಬುಧವಾರ ಬೆಳಗ್ಗೆ ಗ್ಯಾಂಗ್ಟೋಕ್ ಹೋಗಲು ನಿರ್ಧರಿಸಿದ್ದರು. ಆದರೆ ಅವರು ಹೋಟೆಲ್‍ಗೆ ಬಂದಾಗಿನಿಂದ ರೂಮಿನ ಬಾಗಿಲು ಹಾಕಿಕೊಂಡಿದ್ದರು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ.

    ಹೋಟೆಲ್ ಸಿಬ್ಬಂದಿಯವರು ಪಾಯೆಲ್ ಇದ್ದ ರೂಮಿನ ಬಾಗಿಲನ್ನು ಸಾಕಷ್ಟು ಬಾರಿ ತಟ್ಟಿದ್ದಾರೆ. ಆದರೆ ಪಾಯೆಲ್ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾಗ ಆಕೆಯ ಮೃತದೇಹ ಪತ್ತೆಯಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

    ಇತ್ತೀಚೆಗೆ ಪಾಯೆಲ್ ತನ್ನ ಪತಿಯಿಂದ ವಿಚ್ಛೇದನ ಪಡೆದು ಮಗನ ಜೊತೆ ವಾಸವಿದ್ದರು. ಸದ್ಯ ಪಾಯೆಲ್ ಮೃತಪಟ್ಟಿರುವ ವಿಷಯವನ್ನು ಕೋಲ್ಕತ್ತಾದಲ್ಲಿರುವ ಅವರ ಕುಟುಂಬಕ್ಕೆ ತಿಳಿಸಲಾಗಿದೆ. ಪಾಯೆಲ್ ಬಂಗಾಳಿಯ ‘ಕೇಲೋ’, ‘ಕಾಕ್‍ಪಿಟ್’ ಹಾಗೂ ಹಲವಾರು ಧಾರವಾಹಿಯಲ್ಲಿ ನಟಿಸಿದ್ದಾರೆ.

    ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸದ್ಯ ಪ್ರಾಥಮಿಕ ತನಿಖೆ ಪ್ರಕಾರ ಪಾಯೆಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಶಂಕೆ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಲ್ಕತ್ತಾದಲ್ಲಿ ಸೇತುವೆ ಕುಸಿತ – 8 ಮಂದಿಗೆ ಗಾಯ

    ಕೋಲ್ಕತ್ತಾದಲ್ಲಿ ಸೇತುವೆ ಕುಸಿತ – 8 ಮಂದಿಗೆ ಗಾಯ

    ಕೋಲ್ಕತ್ತಾ: ದಕ್ಷಿಣ ಕೋಲ್ಕತ್ತಾದ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆ ಕುಸಿದು ಬಿದ್ದ ಪರಿಣಾಮ, ಓರ್ವ ಸಾವನ್ನಪ್ಪಿ, ಹಲವು ಜನ ಅವಶೇಷಗಳ ಅಡಿಯಲ್ಲಿ ಸಿಲುಕೊಂಡಿದ್ದಾರೆ.

    ರಾಜಧಾನಿಯ ಹಳೆಯ ನಗರ ಹಾಗೂ ಜನಜಂಗುಳಿ ಹೆಚ್ಚಿರುವ ಡೈಮಂಡ್ ಹರ್ಬರ್ ರಸ್ತೆಯಲ್ಲಿರುವ ಮಜರತ್ ಸೇತುವೆಯು ಸಂಜೆ 4.45ರ ಸುಮಾರಿಗೆ ಏಕಾಏಕಿ ಕುಸಿದು ಬಿದ್ದಿದ್ದು, ಪರಿಣಾಮವಾಗಿ ಅದರ ಮೇಲೆ ಸಂಚರಿಸುತ್ತಿದ್ದ ಹಲವು ವಾಹನಗಳು ಸೇರಿದಂತೆ 10 ಕ್ಕೂ ಹೆಚ್ಚು ಬೈಕುಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ. ಅಲ್ಲದೇ ಸ್ಥಳದಲ್ಲೇ ಓರ್ವ ಸಾವನ್ನಪ್ಪಿ 8ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

    ಅವಶೇಷಗಳ ಅಡಿಯಲ್ಲಿ ಹಲವು ಮಂದಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು, ಸಿಲುಕಿಕೊಂಡಿರುವ ಜನರನ್ನು ರಕ್ಷಿಸುತ್ತಿದ್ದು, ಗಾಯಗೊಂಡಿದ್ದ 8 ಮಂದಿಯನ್ನು ಎಸ್‍ಎಸ್‍ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೇತುವೆ ಬಿದ್ದ ಪರಿಣಾಮ ವಾಹನಗಳು ಸಂಪೂರ್ಣ ನಜ್ಜು-ಗುಜ್ಜಾಗಿವೆ ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸೇತುವೆ ಕುಸಿದು ಬಿದ್ದು, ಹಲವರು ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿರುವುದು ಮಾಹಿತಿ ಸಿಕ್ಕಿದೆ. ಈಗಾಗಲೇ ರಕ್ಷಣಾ ತಂಡ ಹಾಗೂ ಅಗ್ನಿಶಾಮಕದಳ ಸಿಬ್ಬಂದಿಯು ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಾನು ತುರ್ತು ಭೇಟಿಗಾಗಿ ಡಾರ್ಜಿಲಿಂಗ್ ಗೆ ಭೇಟಿ ನೀಡಿದ್ದು, ಯಾವುದೇ ವಿಮಾನಗಳು ಇಲ್ಲದ ಕಾರಣ ಘಟನಾ ಸ್ಥಳಕ್ಕೆ ತೆರಳಲು ಸಾಧ್ಯವಾಗಿಲ್ಲ. ಶೀಘ್ರವೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ. ಅಲ್ಲದೇ ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶ ನೀಡಿದ್ದೇನೆ ಎಂದು ಹೇಳಿದ್ದಾರೆ.

    ಬಿಜೆಪಿಯ ಮುಖಂಡ ಮುಕುಲ್ ರಾಯ್ ಪ್ರತಿಕ್ರಿಯಿಸಿ, ಸೇತುವೆ ಕುಸಿತಕ್ಕೆ ಸಿಎಂ ಮಮತಾ ಬ್ಯಾನರ್ಜಿಯವರೇ ನೇರ ಹೊಣೆ. ಕೇವಲ ಅವರು ನಗರವನ್ನು ಸುಂದರವಾಗಿಸುವುದಾಗಿ ಆಶ್ವಾಸನೆ ನೀಡುತ್ತಿದ್ದಾರೆಯೇ ಹೊರತು, ಯಾವುದೇ ಹಳೆಯ ಕಾಮಗಾರಿಗಳನ್ನು ಸರಿಪಡಿಸುವಲ್ಲಿ ಗಮನಹರಿಸಿಲ್ಲ. ಇದರ ಹೊಣೆಯನ್ನು ರಾಜ್ಯ ಸರ್ಕಾರ ಹೊತ್ತುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಟ್ರೈನಲ್ಲಿ Love at First Sight- ಯುವತಿಯನ್ನು ಹುಡುಕಲು ಹಾಕಿದ 4 ಸಾವಿರ ಪೋಸ್ಟರ್

    ಟ್ರೈನಲ್ಲಿ Love at First Sight- ಯುವತಿಯನ್ನು ಹುಡುಕಲು ಹಾಕಿದ 4 ಸಾವಿರ ಪೋಸ್ಟರ್

    ಕೋಲ್ಕತ್ತಾ: ಟ್ರೈನಿನಲ್ಲಿ ಯುವತಿಯನ್ನು ನೋಡಿ ಲವ್ ಅಟ್ ಫಸ್ಟ್ ಸೈಟ್ ಆದ ಯುವಕನೊಬ್ಬ ಆಕೆಯನ್ನು ಹುಡುಕಲು ಒಂದು ಸಿನಿಮಾ ಮಾಡಿ 4,000 ಪೋಸ್ಟರ್ ಅಂಟಿಸಿದ ಪ್ರಕರಣವೊಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಬೆಳಕಿಗೆ ಬಂದಿದೆ.

    ಬಿಸ್ವಜಿತ್ ಪೊದಾರ್(29) ಕೋಲ್ಕತ್ತಾದಲ್ಲಿ ಸರ್ಕಾರಿ ಕೆಲಸ ಮಾಡುತ್ತಿದ್ದಾರೆ. ಬುಸ್ವಜಿತ್ ಜುಲೈ ತಿಂಗಳಿನಲ್ಲಿ ಕೆಲಸದಿಂದ ಮನೆಗೆ ಹಿಂತಿರುಗುವ ವೇಳೆ ರೈಲಿನಲ್ಲಿ ತನ್ನ ಮುಂದೆ ಯುವತಿ ಪೋಷಕರ ಜೊತೆ ಕುಳಿತ್ತಿದ್ದಳು. ಆ ಯುವತಿಯನ್ನು ನೋಡಿದ ಮೊದಲ ನೋಟದಲ್ಲೇ ಬಿಸ್ವಜಿತ್‍ಗೆ ಆಕೆಯ ಮೇಲೆ ಪ್ರೀತಿಯಾಗಿದೆ.

    ಬಿಸ್ವಜಿತ್‍ಗೆ ಆ ಯುವತಿ ಮೇಲೆ ಮೊದಲ ನೋಟದಲ್ಲೇ ಪ್ರೀತಿಯಾಗಿದ್ದು, ಈಗ ಆ ಯುವತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯುವತಿಯನ್ನು ಹುಡುಕಲು ಬಿಸ್ವಜಿತ್ 4,000 ಪೋಸ್ಟರ್ ಗಳನ್ನು ಅಂಟಿಸಿದ್ದಾರೆ. ಆ ಪೋಸ್ಟರ್ ನಲ್ಲಿ ಬಿಸ್ವಜಿತ್ ತನ್ನ ಮೊಬೈಲ್ ನಂಬರ್ ಹಾಗೂ ತನ್ನ ಸಿನಿಮಾದ ಯೂಟ್ಯೂಬ್ ಲಿಂಕ್ ಕೂಡ ಹಾಕಿದ್ದಾನೆ.

    ಯುವತಿ ಈ ಪೋಸ್ಟರ್ ನೋಡಿ ನಾನು ಆಕೆಯನ್ನು ಹುಡುಕುತ್ತಿದ್ದೇನೆ ಎಂಬುದು ಗೊತ್ತಾಗಲಿ ಎಂಬ ಉದ್ದೇಶದಿಂದ ನಾನು ಈ ರೀತಿ ಮಾಡುತ್ತಿದ್ದೇನೆ. ನಾನು ಆಕೆಯನ್ನು ಹುಡುಕುತ್ತಿದ್ದೇನೆ ಹಾಗೂ ಆಕೆಗೆ ಇಷ್ಟವಿದ್ದರೆ ಆಕೆ ನನ್ನನ್ನು ಸಂರ್ಪಕಿಸಲಿ ಎಂದು ಬಿಸ್ವಜಿತ್ ಪ್ರತಿಕ್ರಿಯಿಸಿದ್ದಾರೆ.

    ಆ ಯುವತಿಯನ್ನು ಹುಡುಕಲು ಬಿಸ್ವಜಿತ್ ಒಂದು ಕಿರುಚಿತ್ರವನ್ನು ಕೂಡ ಮಾಡಿದ್ದಾರೆ. ಆ ಚಿತ್ರಕ್ಕೆ ‘ಕೋನ್‍ಗರ್ ಕೋನೆ’ ಎಂದು ಹೆಸರಿಟ್ಟಿದ್ದಾರೆ. ಬೆಂಗಾಲಿಯಲ್ಲಿ ಕೋನ್‍ಗರ್ ಕೋನೆ ಎಂದರೆ ‘ಕೋನ್‍ಗರ್ ನ ವಧು’ ಎಂದರ್ಥ. ಈ ಕಿರುಚಿತ್ರ 6 ನಿಮಿಷ 23 ಸೆಕೆಂಡ್‍ಗಳಿದ್ದು, ಬಿಸ್ವಜಿತ್ ಈ ಚಿತ್ರದಲ್ಲಿ ಯುವತಿಗೆ ವಿಶೇಷ ಸಂದೇಶವನ್ನು ನೀಡಿದ್ದಾರೆ.

    ಬಿಸ್ವಜಿತ್ ಆ ಯುವತಿಯನ್ನು ಪ್ರೀತಿಸುತ್ತಿರುವುದು ಹಾಗೂ ಭೇಟಿಯಾಗಲೂ ಕಾತುರದಿಂದ ಕಾಯುತ್ತಿರುವುದನ್ನು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ. ಈ ಚಿತ್ರದಲ್ಲಿ ಆ ಯುವತಿಯ ಪಾತ್ರವನ್ನು ಬಿಸ್ವಜಿತ್‍ರ ಸ್ನೇಹಿತೆ ಅಭಿನಯಿಸಿದ್ದಾರೆ. ಈ ಚಿತ್ರದ ಕೊನೆಯಲ್ಲಿ “ನೀವು ಈ ಕಿರುಚಿತ್ರ ನೋಡಿದರೆ ನನಗೆ ಸಂರ್ಪಕಿಸಿ” ಎಂದು ಬಿಸ್ವಜಿತ್ ತಿಳಿಸಿದ್ದಾರೆ. ಯುವತಿ ತನ್ನನ್ನು ಗುರುತಿಸಲಿ ಎಂದು ಬಿಸ್ವಜಿತ್ ಆಕೆಯನ್ನು ಭೇಟಿ ಮಾಡಿದ ದಿನ ಧರಿಸಿದ ಟಿ-ಶರ್ಟ್ ಅನ್ನು ಇದೂವರೆಗೂ ತೆಗೆಯಲಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

    ಈ ಹಿಂದೆ ಪುಣೆಯಲ್ಲಿ ನಿಲೇಶ್ ಖೇಡೇಕರ್ ಎಂಬಾತ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಬರೋಬ್ಬರಿ 300 ಸಾರಿ ಬ್ಯಾನರ್ ಗಳನ್ನು ರಸ್ತೆಯಲ್ಲಿ ಹಾಕಿದ್ದನು. ನಿಲೇಶ್ ಓರ್ವ ಉದ್ಯಮಿ ಆಗಿದ್ದು, ಮಹಾರಾಷ್ಟ್ರದ ಪಿಂಪ್ರಿ ಚಿಂಚ್ವಾಡ್ ನಲ್ಲಿ ಪ್ರದೇಶದಲ್ಲಿ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಒಲಿಸಿಕೊಳ್ಳಲು ಸಾರಿ ಬ್ಯಾನರ್ ಹಾಕುವುದರ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಗುವಿನ ಗಂಟಲಲ್ಲಿ ಸಿಕ್ಕಿಕೊಂಡ ನಾಣ್ಯ: ಚಿಕಿತ್ಸೆ ನೀಡದೇ ಅಲೆದಾಡಿಸಿದ 4 ಆಸ್ಪತ್ರೆಗಳು!

    ಮಗುವಿನ ಗಂಟಲಲ್ಲಿ ಸಿಕ್ಕಿಕೊಂಡ ನಾಣ್ಯ: ಚಿಕಿತ್ಸೆ ನೀಡದೇ ಅಲೆದಾಡಿಸಿದ 4 ಆಸ್ಪತ್ರೆಗಳು!

    ಕೋಲ್ಕತ್ತಾ:ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ನಾಣ್ಯ ನುಂಗಿದ್ದ 4 ವರ್ಷದ ಮಗುವೊಂದು ಪರದಾಡಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಗಂಗಾಪುರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಶನಿವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮನೆಯೊಳಗೆ ಆಟವಾಡುತ್ತಿದ್ದಾಗ 4 ವರ್ಷದ ಆಗ್ರ್ಯ ಬಿಸ್ವಾಸ್ ಏಕಾಏಕಿ 1 ರೂಪಾಯಿ ನಾಣ್ಯವನ್ನು ನುಂಗಿದ್ದಾನೆ. ನಾಣ್ಯ ಗಂಟಲಲ್ಲಿ ಸಿಕ್ಕಿಕೊಂಡು ಅಗ್ರ್ಯ ಜೋರಾಗಿ ಅಳುತ್ತಿದ್ದ. ಕೂಡಲೇ ಅವನನ್ನು ಪರೀಕ್ಷಿಸಿದಾಗ ನಾಣ್ಯ ನುಂಗಿರುವುದು ತಿಳಿಯಿತು ಎಂದು ಮಗುವಿನ ಅಜ್ಜ ದಿನೇಶ್ ಬಿಸ್ವಾಸ್ ತಿಳಿಸಿದ್ದಾರೆ.

    ಮಗುವನ್ನು 2 ಗಂಟೆಹೊತ್ತಿಗೆ ಹತ್ತಿರದ ಕಲ್ಯಾಣಿ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಜೆಎನ್‍ಎಂ ಆಸ್ಪತ್ರೆಯ ವೈದ್ಯರುಗಳಿಗೆ ತೋರಿಸಲಾಯಿತು. ಆದರೆ ಮಗುವನ್ನು ಪರೀಕ್ಷಿಸಿದ ಅವರು ನಮ್ಮ ಬಳಿ ಸರಿಯಾದ ಉಪಕರಣಗಳಿಲ್ಲ, ಮಗುವನ್ನು ಎನ್‍ಆರ್‍ಎಸ್ ಆಸ್ಪತ್ರೆ ಅಥವಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತೋರಿಸಿ ಎಂದು ಸಲಹೆ ನೀಡಿದರು. ನಾವು ಎನ್‍ಆರ್‍ಎಸ್ ಆಸ್ಪತ್ರೆ ತಲುಪಿದಾಗ ರಾತ್ರಿ 10 ಗಂಟೆಯಾಗಿತ್ತು, ಆದರೆ ಅಲ್ಲಿಯೂ ಸಹ ನಮಗೆ ಯಾವುದೇ ಪ್ರಯೋಜನವಾಗಲಿಲ್ಲ. ಅಲ್ಲಿಂದ ನೇರವಾಗಿ ನಾವು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋದರೂ ವೈದ್ಯರು ಮಗುವನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು ಎಂದು ಹೇಳಿದರು.

    ಕೊನೆಗೆ ತಡರಾತ್ರಿ 2 ರ ಸುಮಾರಿಗೆ ಎಸ್‍ಎಸ್‍ಕೆಎಂ ಆಸ್ಪತ್ರೆಗೆ ಹೋದೆವು, ಕೂಡಲೇ ಅಲ್ಲಿನ ವೈದ್ಯರುಗಳು ಮಗುವನ್ನು ದಾಖಲಿಸಿಕೊಂಡು ಎಂಡೋಸ್ಕೋಪಿ ಮುಖಾಂತರ ನಾಣ್ಯವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆಗ್ರ್ಯ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ನಾನು ಹಾಗೂ ನಮ್ಮ ಕುಟುಂಬವು ಎಸ್‍ಎಸ್‍ಕೆಎಂ ಆಸ್ಪತ್ರೆಯ ವೈದ್ಯರಾದ ಡಾ. ಅರುಣಭ ಸೇನಗುಪ್ತರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇವೆ. ನಮ್ಮ ಮೊಮ್ಮಗ ತಾಯಿ ಇಲ್ಲದ ತಬ್ಬಲಿ, ನಾನು, ನನ್ನ ಹೆಂಡತಿ ಹಾಗೂ ತಂದೆಯ ಆಶ್ರಯದಲ್ಲಿ ಅವನು ಬೆಳೆಯುತ್ತಿದ್ದಾನೆ ಎಂದು ತಿಳಿಸಿದರು.

    ನಾಣ್ಯನುಂಗಿದ್ದ ಮಗುವನ್ನು ಸತತ ನಾಲ್ಕು ಆಸ್ಪತ್ರೆಗಳನ್ನು ತಿರುಗಿ, ಕೊನೆಗೂ ಮಗುವನ್ನು ಉಳಿಸಿಕೊಳ್ಳುವಲ್ಲಿ ಪೋಷಕರು ಯಶಸ್ವಿಯಾಗಿದ್ದಾರೆ. ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ಆಸ್ಪತ್ರೆಗಳು, ಕೇವಲ ಉಪಕರಣಗಳ ಕೊರತೆಯಿಂದ ಸಾಗಾಕಿರುವುದು ಶೋಚನೀಯ ಸಂಗತಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಇನ್ನಿಲ್ಲ

    ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿ ಇನ್ನಿಲ್ಲ

    ಕೋಲ್ಕತ್ತ: ಹೃದಯಾಘಾತದಿಂದಾಗಿ ಕೋಲ್ಕತಾದ ಆಸ್ಪತ್ರೆಯಲ್ಲಿ ಮಾಜಿ ಲೋಕಸಭಾ ಸ್ಪೀಕರ್ ಸೋಮನಾಥ್ ಚಟರ್ಜಿರವರು ಇಂದು ವಿಧಿವಶರಾಗಿದ್ದಾರೆ.

    ಚಟರ್ಜಿ(89) ಅವರು ಮೂತ್ರಪಿಂಡ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನು ಮಂಗಳವಾರ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, 12 ಸದಸ್ಯರ ವೈದ್ಯರ ತಂಡ ಅನುಭವಿ ರಾಜಕಾರಣಿಯನ್ನು ನೋಡಿಕೊಳ್ಳುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ ತಿಂಗಳು ಚಟರ್ಜಿರವರು ರಕ್ತಸ್ರಾವದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು.

    ರಾಗಾ ಸಂತಾಪ:
    10 ಅವಧಿ ಸಂಸದರಾಗಿದ್ದು, ಮಾಜಿ ಸೋಮನಾಥ ಚಟರ್ಜಿರವರು ನಮ್ಮನ್ನು ಅಗಲಿರುವುದು ದುಖಃದ ಕ್ಷಣವಾಗಿದೆ. ಸೋಮನಾಥ್ ಚಟರ್ಜಿ ಸಂಸತ್ತಿನ ಎಲ್ಲ ಸದಸ್ಯರ ಗೌರವ ಮತ್ತು ಮೆಚ್ಚುಗೆಗೆ ಪಾತ್ರವಾದಂತ ಅಜಾತಶತೃ ನಾಯಕ. ಚಟರ್ಜಿ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ವಿಟ್ಟರ್  ನಲ್ಲಿ ಬರೆದುಕೊಂಡಿದ್ದಾರೆ.

    ಚಟರ್ಜಿರವರು 10 ಬಾರಿ ಲೋಕಸಭಾ ಸದಸ್ಯರಾಗಿದ್ದರು ಮತ್ತು ಸಿಪಿಐ(ಎಂ) ನ ಕೇಂದ್ರ ಸಮಿತಿ ಸದಸ್ಯರಾಗಿದ್ದರು. 1968 ರಲ್ಲಿ ರಾಜಕೀಯ ಜಗತ್ತಿಗೆ ಪಾದಾರ್ಪಣೆ ಮಾಡಿದ್ದರು. ಸದನದಲ್ಲಿ 2004 ರಿಂದ 2009 ರವರೆಗೆ ಲೋಕಸಭಾ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ಯುಪಿಎ-ಐ ಸರ್ಕಾರಕ್ಕೆ ತನ್ನ ಪಕ್ಷದ ಬೆಂಬಲ ಹಿಂತೆಗೆದುಕೊಂಡ ಬಳಿಕ ಸ್ಪೀಕರ್ ಆಗಿ ರಾಜೀನಾಮೆ ನೀಡಲು ನಿರಾಕರಿಸಿದ್ದಕ್ಕೆ 2008ರಲ್ಲಿ ಚಟರ್ಜಿರವರನ್ನು ಸಿಪಿಐ(ಎಂ) ನಿಂದ ಹೊರಹಾಕಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://twitter.com/CMofKarnataka/status/1028874221483520001

  • ನಮಗೆ ದೇಶ ಮೊದಲು, ನಂತ್ರ ವೋಟ್ ಬ್ಯಾಂಕ್: ಮಮತಾ ವಿರುದ್ಧ ಶಾ ಗುಡುಗು

    ನಮಗೆ ದೇಶ ಮೊದಲು, ನಂತ್ರ ವೋಟ್ ಬ್ಯಾಂಕ್: ಮಮತಾ ವಿರುದ್ಧ ಶಾ ಗುಡುಗು

    ಕೋಲ್ಕತಾ: ನಮಗೆ ದೇಶ ಮೊದಲು. ನಂತರ ವೋಟ್ ಬ್ಯಾಂಕ್ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

    ಶನಿವಾರ ಕೋಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿಯ ಬೃಹತ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ತೃಣಮೂಲ ಕಾಂಗ್ರೆಸ್ ಅನ್ನು ಪಶ್ಚಿಮ ಬಂಗಾಳದಲ್ಲಿ ಬೇರು ಸಮೇತ ಕಿತ್ತುಹಾಕುವುದಾಗಿ ಗುಡುಗಿದ್ದಾರೆ.

    ಕೇವಲ ವೋಟ್ ಬ್ಯಾಂಕ್ ಗಾಗಿ ನೀವು ರಾಷ್ಟ್ರೀಯ ಪೌರತ್ವ ನೊಂದಣಿ(ಎನ್ಆರ್​ಸಿ)ಗೆ ವಿರೋಧ ವ್ಯಕ್ತಪಡಿಸುತ್ತಿದ್ದೀರಿ, ಆದರೆ ನಮಗೆ ದೇಶ ಮೊದಲು. ನಂತರ ವೋಟ್ ಬ್ಯಾಂಕ್. ಹೀಗಾಗಿ ಎನ್ಆರ್​ಸಿ ಮೂಲಕ ಎಲ್ಲಾ ಅಕ್ರಮ ವಲಸಿಗರನ್ನು ದೇಶದಿಂದ ಹೊರ ಹಾಕಲಾಗುವುದು. ನೀವು ಎಎನ್ಆರ್​ಸಿಗೆ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ, ನಾವು ಅದನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ಹೊರಹಾಕಿದರು.

    ಶೀಘ್ರದಲ್ಲೇ ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯಾಗಲಿದೆ. ಅಧಿಕಾರದಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಅಧಿಕಾರದಿಂದ ಬೇರು ಸಮೇತ ಕಿತ್ತುಹಾಕಲು ನಾವು ಇಲ್ಲಿ ಬಂದಿದ್ದೇವೆ ಎಂದು ವಾಗ್ದಾಳಿ ನಡೆಸಿದರು.

    ಪಶ್ಚಿಮ ಬಂಗಾಳದಲ್ಲಿ ಈ ಮೊದಲು ಪ್ರತಿನಿತ್ಯ ರಬೀಂದ್ರ ಸಂಗೀತ ಕೇಳಿಸುತ್ತಿತ್ತು, ಆದರೆ ಇಂದು ಎಲ್ಲಿ ಕೇಳಿದರು ಕೇವಲ ಬಾಂಬ್ ಸ್ಫೋಟದ ಶಬ್ದವೇ ಕೇಳಿಸುತ್ತಿದೆ. ನೀವು ಬಾಂಗ್ಲಾ ನುಸುಳುಕೋರರನ್ನು ರಕ್ಷಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ ಅವರು, ಈ ಕುರಿತು ಕಾಂಗ್ರೆಸ್ ರಾಹುಲ್ ಗಾಂಧಿ ಕೂಡ ತಮ್ಮ ನಿಲುವನ್ನು ಸ್ಪಷ್ಟಪಡಿಸುತ್ತಿಲ್ಲ. ಕೇವಲ ಕಾಂಗ್ರೆಸ್ಸಿನ ವೋಟ್ ಬ್ಯಾಂಕ್ ರಾಜಕಾರಣವೇ ಇವೆಲ್ಲದಕ್ಕೂ ಕಾರಣ ಎಂದು ತೀವ್ರವಾಗಿ ಆರೋಪಿಸಿದರು.

    ನೀವುಗಳು ಬಿಜೆಪಿಯನ್ನು ಬಾಂಗ್ಲಾ ವಿರೋಧಿಯಂದು ಅಪಪ್ರಚಾರ ಮಾಡುತ್ತಿದ್ದೀರಿ. ಆದರೆ ಪಶ್ಚಿಮ ಬಂಗಾಳದ ಬಿಜೆಪಿಯ ಸಂಸ್ಥಾಪಕ ಶ್ಯಾಮಪ್ರಸಾದ್ ಮುಖರ್ಜಿಯವರು ಸಹ ಖುದ್ದು ಬೆಂಗಾಲಿಯಾಗಿರುವಾಗ ಬಿಜೆಪಿ ಹೇಗೆ ಬಾಂಗ್ಲಾ ವಿರೋಧಿಯಾಗುತ್ತದೆ ಎಂದು ಪ್ರಶ್ನಿಸಿದರು. ಅಲ್ಲದೇ ನಾವು ಬಾಂಗ್ಲಾ ವಿರೋಧಿಗಳಲ್ಲ, ಕೇವಲ ಮಮತಾ ವಿರೋಧಿಗಳು ಎಂದು ತಿಳಿಸಿದರು.

    ನಮ್ಮ ರ‍್ಯಾಲಿಯನ್ನು ಜನರು ನೋಡದಂತೆ ಮಾಡಲು ನೀವು ಎಲ್ಲಾ ಬೆಂಗಾಲಿ ಚಾನೆಲ್‍ಗಳ ಸಿಗ್ನಲ್‍ಗಳನ್ನು ಕಡಿಮೆ ಇರುವಂತೆ ಮಾಡಿದ್ದೀರಿ. ನಮ್ಮ ದನಿಯನ್ನು ಅಡಗಿಸಲು ನೀವು ಯತ್ನಿಸುತ್ತಿದ್ದೀರಿ. ಆದರೆ ನಾವು ರಾಜ್ಯದ ಪ್ರತಿ ಜಿಲ್ಲೆಗೂ ತೆರಳಿ ಟಿಎಂಸಿಯನ್ನು ಕಿತ್ತು ಹಾಕುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಪಶ್ಚಿಮ ಬಂಗಾಳದಲ್ಲಿ ಅಭಿವೃದ್ಧಿಯಾಗಬೇಕಾದರೇ, ಕೇವಲ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯವೆಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 20 ವರ್ಷದ ಪತಿಯ ಕಿವಿಯನ್ನೇ ಕತ್ತರಿಸಿದ್ಳು 40ರ ಪತ್ನಿ!

    20 ವರ್ಷದ ಪತಿಯ ಕಿವಿಯನ್ನೇ ಕತ್ತರಿಸಿದ್ಳು 40ರ ಪತ್ನಿ!

    ಕೋಲ್ಕತ್ತಾ: 40 ವರ್ಷದ ಮಹಿಳೆಯೊಬ್ಬಳು ತನ್ನ 20 ವರ್ಷದ ಪತಿಯ ಕಿವಿಯನ್ನೇ ಕತ್ತರಿಸಿದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ನರ್ಕೆಲ್‍ದಂಗ್‍ನಲ್ಲಿ ನಡೆದಿದೆ.

    ತನ್ವೀರ್ ಕಿವಿ ಕಳೆದುಕೊಂಡ ಪತಿ. ತನ್ವೀರ್ ನರ್ಕೆಲ್‍ದಂಗ್ ನಿವಾಸಿಯಾಗಿದ್ದು, ಎರಡು ವರ್ಷಗಳ ಹಿಂದೆ ಮುಮ್ತಾಜ್‍ಳನ್ನು ಮದುವೆಯಾಗಿದ್ದನು.

    ಏನಿದು ಘಟನೆ?:
    ಮುಮ್ತಾಜ್ ತನ್ನ ಪತಿ ತನ್ವೀರ್ ಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದಳು. ಮುಮ್ತಾಜ್ ಕಿರುಕುಳ ತಾಳಲಾರದೇ ತನ್ವೀರ್ ಮನೆ ಬಿಟ್ಟು ಓಡಿ ಹೋಗಲು ಯತ್ನಿಸಿದ್ದಾನೆ. ಆಗ ಮುಮ್ತಾಜ್ ತನ್ನ ಪತಿಯನ್ನು ವಾಪಸ್ ಕರೆದುಕೊಂಡು ಬಂದಿದ್ದಾಳೆ. ಅಲ್ಲದೇ ಮುಮ್ತಾಜ್ ತನ್ನ ಸಹೋದರಿ ಜೊತೆ ಸೇರಿ ತನ್ವೀರ್ ಕಿವಿಯನ್ನೇ ಕತ್ತರಿಸಿದ್ದಾಳೆ. ಬಳಿಕ ಆತ ಮೃತಪಟ್ಟಿದ್ದಾನೆಂದು ತಿಳಿದು ಮುಮ್ತಾಜ್ ಹಾಗೂ ಆಕೆಯ ಸಹೋದರಿ ಪರಾರಿಯಾಗಿದ್ದಾರೆ. ಈ ಘಟನೆಯ ವಿಷಯ ತಿಳಿದ ನಂತರ ತನ್ವೀರ್ ಕುಟುಂಬದವರು ಆತನನ್ನು ಎನ್‍ಆರ್‍ಎಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ಹಿಂದೆ ತನ್ವೀರ್ ತನ್ನ ಪತ್ನಿಯ ಕಿರುಕುಳ ತಾಳಲಾರದೇ ಮುಲಿಕ್ ಪುರ್ ಗೆ ಓಡಿ ಹೋಗಿದ್ದನು. ಆಗ ಮುಮ್ತಾಜ್ ಹಾಗೂ ಆಕೆಯ ಸಹೋದರಿ ಆತನನ್ನು ವಾಪಸ್ ಕರೆದುಕೊಂಡು ಬಂದರು. ಮನೆಗೆ ಕರೆದುಕೊಂಡು ಬಂದ ತಕ್ಷಣ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

    ಆಕೆ ನನ್ನ ಕಿವಿಯನ್ನು ಕತ್ತರಿಸಿದ್ದಾಳೆ. ಅಲ್ಲದೇ ನಾನು ಅದಕ್ಕೆ ವಿರೋಧಿಸಿದ್ದರೆ ಅವರು ನನ್ನ ಕೊಲೆ ಮಾಡುತ್ತಿದ್ದರು. ಮುಮ್ತಾಜ್ ನನ್ನನ್ನು ಆಕೆಯ ಮನೆಯಲ್ಲೇ ಬಂಧಿಸಿದ್ದಳು. ಅಷ್ಟೇ ಅಲ್ಲದೇ ನನ್ನ ಕುಟುಂಬದವರನ್ನು ಭೇಟಿ ಮಾಡಲು ಅವಕಾಶ ನೀಡುತ್ತಿರಲಿಲ್ಲ ಎಂದು ತನ್ವೀರ್ ಹೇಳಿದ್ದಾನೆ.

    ಮುಮ್ತಾಜ್ ತನ್ನ ಮಗನಿಗೆ ಕಿರುಕುಳ ನೀಡುತ್ತಿರುವುದನ್ನು ನೋಡಿದ ತನ್ವೀರ್ ತಾಯಿ ತನ್ನ ಮನೆಯನ್ನು ಮಾರಿದ್ದರು. ಬಳಿಕ ಆ ಹಣವನ್ನು ಮುಮ್ತಾಜ್‍ಗೆ ನೀಡಿ ತನ್ನ ಮಗನನ್ನು ಬಿಟ್ಟು ಬಿಡಲು ಹೇಳಿದ್ದರು. ಆದರೆ ಮುಮ್ತಾಜ್ ಹಣವನ್ನು ಪಡೆದು ತನ್ವೀರ್ ಗೆ ಇನ್ನಷ್ಟು ಕಿರುಕುಳ ನೀಡುತ್ತಿದ್ದಳು ಎಂಬುದಾಗಿ ವರದಿಯಾಗಿದೆ.

    ಸದ್ಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.