Tag: kolkata

  • ಕಾಡಾನೆಗಳ ಹಿಂಡಿನಿಂದ 4 ವರ್ಷದ ಹುಡುಗಿಯನ್ನು ರಕ್ಷಿಸಿದ ಒಂಟಿ ಸಲಗ

    ಕಾಡಾನೆಗಳ ಹಿಂಡಿನಿಂದ 4 ವರ್ಷದ ಹುಡುಗಿಯನ್ನು ರಕ್ಷಿಸಿದ ಒಂಟಿ ಸಲಗ

    ಕೋಲ್ಕತ್ತಾ: ಒಂಟಿ ಸಲಗವೊಂದು ಕಾಡಾನೆಗಳ ಹಿಂಡಿನಿಂದ 4 ವರ್ಷದ ಹುಡುಗಿಯನ್ನು ರಕ್ಷಿಸಿದ ಅಪರೂಪದ ಘಟನೆಯೊಂದು ಗುರುವಾರ ಪಶ್ಚಿಮ ಬಂಗಾಳದ ಜಲ್ಪೈಗುರಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಉದ್ಯಮಿ ನೀತು ಗೋಶ್, ಅವರ ಪತ್ನಿ ತಿತ್ಲಿ ಹಾಗೂ ಮಗಳು ಅಹಾನ ಮೂವರು ಸ್ಕೂಟರ್ ನಲ್ಲಿ ಕಾಡಿನೊಳಗೆ ಇರುವ ದೇವಸ್ಥಾನಕ್ಕೆ ಹೋಗಿದ್ದರು. ಪೂಜೆ ಸಲ್ಲಿಸಿದ ಬಳಿಕ ಅವರು ರಾಷ್ಟ್ರೀಯ ಹೆದ್ದಾರಿ 31ರ ಹತ್ತಿರ ಗುರುಮಾರಾ ಕಾಡಿನ ರಸ್ತೆಯಲ್ಲಿ ಹಿಂತಿರುಗುತ್ತಿದ್ದಾಗ ಆನೆ ಹಿಂಡು ಪ್ರತ್ಯಕ್ಷವಾಗಿದೆ.

    ಈ ವೇಳೆ ಗೋಶ್ ಮತ್ತೊಂದು ರಸ್ತೆಯಲ್ಲಿ ತೆರೆಳುವಾಗ ಮತ್ತೊಂದು ಕಾಡಾನೆಯ ಹಿಂಡು ಅವರ ಮೇಲೆ ಏಕಾಏಕಿ ದಾಳಿ ಮಾಡಿದೆ. ಈ ವೇಳೆ ಮೂವರು ಸ್ಕೂಟರ್ ನಿಂದ ಕೆಳಗೆ ಬಿದ್ದಿದ್ದಾರೆ. ಆಗ ಆನೆಯೊಂದು ಹೆಣ್ಣು ಮಗುವನ್ನು ತನ್ನ ಕಾಲಿನ ಕೆಳಗೆ ನಿಲ್ಲಿಸಿಕೊಂಡು ಆಕೆಯನ್ನು ರಕ್ಷಿಸಿದೆ. ಬಳಿಕ ಆನೆಗಳ ಹಿಂಡು ಕಾಡಿನೊಳಗೆ ಹೋಗಿದೆ.

    ಕಾಡಾನೆ ಆ ಕುಟುಂಬ ಮೇಲೆ ದಾಳಿ ಮಾಡುತ್ತಿರುವುದನ್ನು ಅಲ್ಲಿದ್ದ ಟ್ರಕ್ ಚಾಲಕನೊಬ್ಬ ಗಮನಿಸಿದ್ದಾನೆ. ಅಲ್ಲದೇ ಆನೆಗಳು ಅಲ್ಲಿಂದ ಹೋಗುತ್ತಿದ್ದಂತೆ ಆ ದಂಪತಿಯನ್ನು ರಕ್ಷಿಸಿದ್ದಾನೆ. ಬಳಿಕ 4 ವರ್ಷದ ಹುಡುಗಿ ಅಹಾನ ತನ್ನ ತಾಯಿ ಬಳಿ ಸುರಕ್ಷಿತವಾಗಿ ಹಿಂದಿರುಗಿದ್ದಾಳೆ.

    ಟ್ರಕ್ ಚಾಲಕ ಈ ಕುಟುಂಬವನ್ನು ಲತಗುರಿಗೆ ಕರೆದುಕೊಂಡು ಹೋಗಿದ್ದಾನೆ. ಈ ಘಟನೆಯಲ್ಲಿ ಗೋಶ್ ಹಾಗೂ ಆತನ ಪತ್ನಿ ತಿತ್ಲಿ ಗಾಯಗೊಂಡಿದ್ದು, ಅವರನ್ನು ಜಲ್ಪೈಗುರಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಕೆಲವು ತಿಂಗಳ ಹಿಂದೆ ಈ ಸ್ಥಳದಲ್ಲಿ ಆನೆಗಳು ಓರ್ವ ವ್ಯಕ್ತಿಯ ಪ್ರಾಣ ಪಡೆದು, ಹಲವರನ್ನು ಗಾಯಗೊಳಿಸಿತ್ತು ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಸ್, ಟ್ರಕ್ ಮುಖಾಮುಖಿ ಡಿಕ್ಕಿ- 55 ಮಂದಿ ಪ್ರಯಾಣಿಕರು ಗಂಭೀರ ಗಾಯ

    ಬಸ್, ಟ್ರಕ್ ಮುಖಾಮುಖಿ ಡಿಕ್ಕಿ- 55 ಮಂದಿ ಪ್ರಯಾಣಿಕರು ಗಂಭೀರ ಗಾಯ

    ಕೋಲ್ಕತ್ತಾ: ಬಸ್ ಹಾಗೂ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ 55 ಪ್ರಯಾಣಿಕರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಪಶ್ಚಿಮ ಬಂಗಾಳದ ಪಶ್ಚಿಮ ಮೆಡಿನಿಪುರದಲ್ಲಿ ನಡೆದಿದೆ.

    ಮಿಡ್ನಾಪುರ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. 55 ಪ್ರಯಾಣಿಕರಲ್ಲಿ 15 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಈ ಅಪಘಾತದಲ್ಲಿ ಬಸ್ ಹಾಗೂ ಟ್ರಕ್ ಚಾಲಕರು ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.

    ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಮಿಡ್ನಾಪುರ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಚಿಕ್ಕಪುಟ್ಟ ಗಾಯಗೊಂಡ ಪ್ರಯಾಣಿಕರನ್ನು ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

    ಸ್ಥಳೀಯರ ಪ್ರಕಾರ ಬಸ್ ಮಿಡ್ನಾಪೂರ್ ಮಾರ್ಗದ ಮೂಲಕ ಕಸಬಾ ಕಡೆಯಿಂದ ಸರೇಂಗಾಗೆ ತೆರಳುತ್ತಿತ್ತು. ಈ ವೇಳೆ ಎದುರಿಗೆ ಬರುತ್ತಿದ್ದ ಟ್ರಕ್ ನಿಯಂತ್ರಣ ಕಳೆದುಕೊಂಡು ನೇರವಾಗಿ ಬಸ್‍ಗೆ ಡಿಕ್ಕಿ ಹೊಡೆದಿದೆ.

    ಅಪಘಾತದಿಂದ ರಸ್ತೆ ಉದ್ದಕ್ಕೂ ಟ್ರಾಫಿಕ್ ಜಾಮ್ ಆಗಿತ್ತು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಟ್ರಾಫಿಕ್ ಜಾಮ್ ಕ್ಲೀಯರ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ – ತಂದೆಯಿಂದ ಕನ್ಯಾದಾನ ನಿರಾಕರಣೆ

    ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ – ತಂದೆಯಿಂದ ಕನ್ಯಾದಾನ ನಿರಾಕರಣೆ

    ಕೋಲ್ಕತ್ತಾ: ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ರೀತಿಯ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈಗ ಕೊಲ್ಕತ್ತಾದಲ್ಲಿ ನಡೆದ ಒಂದು ವಿಶೇಷ ಮದುವೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕಳೆದ ಸೋಮವಾರ ತಂದೆಯೊಬ್ಬರು ತಮ್ಮ ಮಗಳ ಮದುವೆಯನ್ನು ಮಾಡುತ್ತಿರುತ್ತಾರೆ. ಆಗ ಕೆಲವು ಸಂಪ್ರದಾಯದ ಪ್ರಕಾರ ವಧುವಿನ ತಂದೆ ಭಾಷಣ ಮಾಡಬೇಕಾಗುತ್ತದೆ. ಈ ವೇಳೆ ವಧುವಿನ ತಂದೆ ತನ್ನ ಮಗಳನ್ನು ಕನ್ಯಾದಾನ ಮಾಡುವುದಿಲ್ಲ. ಯಾಕೆಂದರೆ ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ಅಸ್ಮಿತಾ ಫೋಷ್ ಎಂಬವರು ಟ್ವೀಟ್ ಮಾಡಿ ಒಂದು ಮದುವೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಜೊತೆಗೆ ನಾನು ಒಂದು ಮದುವೆಗೆ ಹೋಗಿದ್ದೆ. ಅಲ್ಲಿ ಪುರುಷ ಪುರೋಹಿತರ ಬದಲು ಮಹಿಳಾ ಪುರೋಹಿತರು ವಿವಾಹದ ವಿಧಿವಿಧಾನಗಳನ್ನು ನಡೆಸಿಕೊಡುತ್ತಿದ್ದರು. ಈ ವೇಳೆ ಮಹಿಳಾ ಪುರೋಹಿತರು ವಧು, ವಧುವಿನ ತಂದೆ-ತಾಯಿಯ ಹೆಸರನ್ನು ಹೇಳಿ ಪರಿಚಯ ಮಾಡಿಕೊಡಲಾಗುತ್ತಿತ್ತು. ಬಳಿಕ ವಧುವಿನ ತಂದೆ ಒಂದು ಭಾಷಣವನ್ನು ಮಾಡಿದ್ದು, ‘ನಾನು ಕನ್ಯಾದಾನ ಮಾಡುವುದಿಲ್ಲ, ಯಾಕೆಂದರೆ ನನ್ನ ಮಗಳು ಆಸ್ತಿಯಲ್ಲ ದಾನ ಮಾಡಲು’ ಎಂದು ಹೇಳಿದ್ದಾರೆ ಅಂತ ಬರೆದು ಅಸ್ಮಿತಾ ಅವರು ಬರೆದು ಪೋಸ್ಟ್ ಮಾಡಿದ್ದಾರೆ.

    ಅಸ್ಮಿತಾ ಟ್ವೀಟ್ ಮಾಡಿದ ತಕ್ಷಣ ಸುಮಾರು 3.8 ಸಾವಿರ ಮಂದಿ ಲೈಕ್ಸ್ ಮಾಡಿದ್ದು, 890ಕ್ಕೂ ನೆಟ್ಟಿಗರು ರೀಟ್ವೀಟ್ ಮಾಡಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

    ಏನಿದು ಕನ್ಯಾದಾನ?
    ಹಿಂದೂ ವಿವಾಹ ಸಂಸ್ಕಾರಗಳಲ್ಲಿ ಅತಿಮುಖ್ಯವಾದ ಸಂಸ್ಕಾರವೇ ಕನ್ಯಾದಾನ. ಕೇವಲ ಒಂದು ಹೊಣೆಗಾರಿಕೆಯನ್ನು ಕಳೆದುಕೊಳ್ಳುವ ಉದ್ದೇಶದಿಂದ ಕನ್ಯಾದಾನ ಮಾಡುವುದಿಲ್ಲ. ಕನ್ಯೆಯ ಪೋಷಕ ಅವಳನ್ನು ದಾನ ಮಾಡುವಾಗ ಅರ್ಥಗರ್ಭಿತವಾದ ಮಂತ್ರೋಚ್ಚಾರಣೆಯ ಮೂಲಕ ಧರ್ಮ, ಅರ್ಥ, ಕಾಮಗಳ ಪೊರೈಕೆಗಾಗಿ ಈ ದಾನವನ್ನು ಮಾಡುತ್ತಿರುವುದಾಗಿ ತಿಳಿಸುತ್ತಾನೆ. ಈ ವೇಳೆ ಧರ್ಮ, ಅರ್ಥ, ಕಾಮಗಳ ಸಾಧನೆಯಲ್ಲಿ ತನ್ನ ಸಹಧರ್ಮಿಣಿಯಾಗಿರಲು ನಾನು ಸ್ವೀಕರಿಸುತ್ತಿದ್ದೇನೆಂದು ವರನಿಂದ ಮೂರು ಬಾರಿ ವಚನ ತೆಗೆದುಕೊಳ್ಳುತ್ತಾನೆ.

    https://twitter.com/asmitaghosh18/status/1092427262115209222

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಬಿಐ Vs ಮಮತಾ: ಅಧಿಕಾರಿಗಳನ್ನೇ ವಶಕ್ಕೆ ಪಡೆದ ಪೊಲೀಸರು – ದೀದಿ ಅಹೋರಾತ್ರಿ ಧರಣಿ

    ಸಿಬಿಐ Vs ಮಮತಾ: ಅಧಿಕಾರಿಗಳನ್ನೇ ವಶಕ್ಕೆ ಪಡೆದ ಪೊಲೀಸರು – ದೀದಿ ಅಹೋರಾತ್ರಿ ಧರಣಿ

    – ಇಂದು ಸುಪ್ರೀಂಗೆ ಸಿಬಿಐ
    – ಕೋಲ್ಕತ್ತಾದಲ್ಲಿ ಭಾರೀ ಹೈಡ್ರಾಮ
    – ಮಮತಾಗೆ ನಾಯಕರ ಬೆಂಬಲ
    – ರಾಷ್ಟ್ರಪತಿ ಆಡಳಿತ ಜಾರಿಗೆ ಬಿಜೆಪಿ ಒತ್ತಾಯ

    ಕೋಲ್ಕತ್ತಾ/ನವದೆಹಲಿ: ಇತಿಹಾಸವೇ ಕಂಡರಿಯದ ಕಾನೂನು ಹಾಗೂ ಬೀದಿ ಸಂಘರ್ಷಕ್ಕೆ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ. ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಪ್ರಶ್ನಿಸಲು ತೆರಳಿದ್ದ ಸಿಬಿಐ ಅಧಿಕಾರಿಗಳನ್ನೇ ಭಾನುವಾರ ರಾತ್ರಿ ವಶಕ್ಕೆ ಪಡೆದ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.

    ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಐತಿಹಾಸಿಕ ಮೆಟ್ರೋ ಸಿನಿಮಾ ಬಳಿ ಅಹೋರಾತ್ರಿ ಧರಣಿ ನಡಸಿದ್ದಾರೆ. ಕೋಲ್ಕತ್ತಾದಲ್ಲಿರುವ ಸಿಬಿಐ ಕಚೇರಿ ಬ್ಲಾಕ್ ಮಾಡಿ ಅಹೋರಾತ್ರಿ ಧರಣಿ ಕುಳಿತಿದ್ದು, ಮೋದಿ ತೊಲಗಿಸಿ, ದೇಶ ಉಳಿಸಿ ಆಂದೋಲನಕ್ಕೆ ಕರೆ ನೀಡಿದ್ದಾರೆ.

    ರಾಜ್ಯಾದ್ಯಂತ ಟಿಎಂಸಿ ಕಾರ್ಯಕರ್ತರು ಬೀದಿಗಿಳಿದಿದ್ದು, ರೈಲ್ ರೋಕೋ ಚಳವಳಿ ನಡೆಸಿದ್ದಾರೆ. ಅಧಿಕಾರಿಗಳನ್ನು ವಶಕ್ಕೆ ಪಡೆದ ಬೆನ್ನಲ್ಲೆ ಸಿಬಿಐ ತನ್ನ ಸಿಬ್ಬಂದಿ ಭದ್ರತೆಗೆ ಸಿಆರ್‍ಪಿಎಫ್ ನಿಯೋಜಿಸಿದೆ. ರಾಜ್ಯಪಾಲರಾದ ಕೇಸರಿನಾಥ್ ತ್ರಿಪಾಠಿ ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದೆ.

    ಪಶ್ಚಿಮ ಬಂಗಾಳ ಸರ್ಕಾರದ ಅಧಿಕಾರಿಗಳು ಬಹುಕೋಟಿ ಹಗರಣದ ವಿರುದ್ಧ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿರುವ ಸಿಬಿಐನ ಹಂಗಾಮಿ ನಿರ್ದೇಶಕ ಎಂ.ನಾಗೇಶ್ವರ ರಾವ್ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿ ನಾಯಕರು ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಸಂಜೆ ಏನಾಯ್ತು?
    ಭಾನುವಾರ ಸಂಜೆ 6.30ರ ವೇಳೆಗೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ನಿವಾಸಕ್ಕೆ 40ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳ ತಂಡ ಆಗಮಿಸಿದೆ. ಈ ತಂಡ ಮನೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಸುದ್ದಿ ತಿಳಿಯುತ್ತಲೇ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿದರು. ಈ ವೇಳೆ ಸಿಬಿಐ ಅಧಿಕಾರಿಗಳು ಮತ್ತು ಕೋಲ್ಕತ್ತಾ ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟವೂ ನಡೆಯಿತು. ಅಂತಿಮವಾಗಿ 40 ಮಂದಿ ಅಧಿಕಾರಿಗಳ ಪೈಕಿ 15 ಮಂದಿಯನ್ನು ಜೀಪ್‍ನಲ್ಲಿ ಕುಳ್ಳಿರಿಸಿಕೊಂಡು ಹೋದರು.

    ಸಿಬಿಐ ಅಧಿಕಾರಿಗಳು ಬಂದ ವಿಚಾರ ತಿಳಿಯುತ್ತಲೇ ಕೋಪಗೊಂಡ ಮಮತಾ ಬ್ಯಾನರ್ಜಿ ರಾಜೀವ್ ಕುಮಾರ್ ನಿವಾಸಕ್ಕೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿದರು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ದಂಗೆಗೆ ಕಾರಣವಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮಮತಾ ಬ್ಯಾನರ್ಜಿ ಪ್ರತಿಭಟನೆಯ ವೇಳೆ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಧರಣಿ ಸ್ಥಳದಲ್ಲಿಯೇ ಕುಳಿತಿದ್ದರು.

    ಸಿಬಿಐ ಹೋಗಿದ್ದು ಯಾಕೆ?
    ಬಂಗಾಳ ಶಾರದಾ ಮತ್ತು ರೋಸ್ ವ್ಯಾಲಿ ಹಗರಣದ ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆಯಾಗಿದ್ದು, ಈ ತಂಡದ ನೇತೃತ್ವವನ್ನು ರಾಜೀವ್ ಕುಮಾರ್ ವಹಿಸಿದ್ದರು. ತನಿಖೆ ವಿಳಂಬವಾಗಿದ್ದ ಕಾರಣ ಸಿಬಿಐ ರಾಜೀವ್ ಕುಮಾರ್ ಮೇಲೆಯೇ ಶಂಕೆ ವ್ಯಕ್ತಪಡಿಸಿತ್ತು. ವಿಚಾರಣೆಗೆ ಹಾಜರಾಗುವಂತೆ ಸಿಬಿಐ ರಾಜೀವ್ ಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಬಿಐ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಭಾನುವಾರ ಅವರ ನಿವಾಸಕ್ಕೆ ತೆರಳಿತ್ತು.

    ಸಿಬಿಐ ಹೇಳೋದು ಏನು?
    ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಚಿಟ್‍ಫಂಡ್ ಹಗರಣದ ತನಿಖೆ ನಡೆದಿದೆ. ಈ ತನಿಖೆಗೆ ಯಾರ ಅನುಮತಿಯೂ ಬೇಕಿಲ್ಲ. ಸ್ಥಳೀಯ ಪೊಲೀಸರು ತನಿಖೆಗೆ ಸಹಕಾರ ನೀಡಬೇಕು. ಆದರೆ ನಮ್ಮ ಮನವಿಯನ್ನು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಆರ್‍ಪಿಎಫ್ ಪಡೆಗಳನ್ನು ಭದ್ರತೆಗೆ ಕರೆಸಿಕೊಂಡಿದ್ದೇವೆ ಎಂದು ಸಿಬಿಐ ನಿರ್ದೇಶಕ ನಾಗೇಶ್ವರ ರಾವ್ ತಿಳಿಸಿದ್ದಾರೆ.

    ನಾಯಕರಿಂದ ಬೆಂಬಲ:
    ಮಮತಾ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಎಸ್‍ಪಿ ಅಧ್ಯಕ್ಷ ಅಖೀಲೇಶ್ ಯಾದವ್ ಸೇರಿದಂತೆ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕುದುರೆ ಬದಲು ರೋಡ್‌ ರೋಲರ್‌ನಲ್ಲಿ  ಮದ್ವೆಗೆ ಎಂಟ್ರಿ ಕೊಟ್ಟ ವರ: ವಿಡಿಯೋ ವೈರಲ್

    ಕುದುರೆ ಬದಲು ರೋಡ್‌ ರೋಲರ್‌ನಲ್ಲಿ ಮದ್ವೆಗೆ ಎಂಟ್ರಿ ಕೊಟ್ಟ ವರ: ವಿಡಿಯೋ ವೈರಲ್

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯಲ್ಲಿ ವರನೊಬ್ಬ ತನ್ನ ಮದುವೆಗೆ ಕುದುರೆ ಬದಲು ರೋಡ್‌ ರೋಲರ್‌ನಲ್ಲಿ ಎಂಟ್ರಿ ಕೊಟ್ಟು ಸುದ್ದಿಯಾಗಿದ್ದಾನೆ.

    ವರ ಅರ್ಕಾ ಪತ್ರಾ ಅಕ್ಕಸಾಲಿಗನ ಮಗನಾಗಿದ್ದು, ತನ್ನ ಮದುವೆಯಲ್ಲಿ ರೋಡ್‌ ರೋಲರ್‌ನಲ್ಲಿ ಎಂಟ್ರಿ ನೀಡಿದ್ದಾನೆ. ಅರ್ಕಾ ಜಿಲ್ಲೆಯ ಕೃಷ್ಣನಗರದ ಉಖಿಲ್ಪಾರದಲ್ಲಿದ್ದ ಮದುವೆ ಮನೆಗೆ ಅಲಂಕರಿಸಿದ ರೋಡ್ ರೋಲರ್ ನಿಂದ ಹೊರಗೆ ಬರುವಾಗ ಆತನ ಸ್ವಾಗತಕ್ಕೆಂದು ನಿಂತಿದ್ದ ಅತಿಥಿಗಳು ವರನನ್ನು ನೋಡಿ ಆಶ್ಚರ್ಯಗೊಂಡಿದ್ದಾರೆ.

    ನಾನು ನನ್ನ ಮದುವೆಯನ್ನು ನೆನಪಿಗಾಗಿ ಹಾಗೂ ವಿಭಿನ್ನವಾಗಿ ಮಾಡಬೇಕು ಎಂದು ನಿರ್ಧರಿಸಿದೆ. ನಾನು ವಿಂಟೇಜ್ ಕಾರಿನಲ್ಲೇ ಮದುವೆಗೆ ಎಂಟ್ರಿ ಕೊಡಬಹುದಿತ್ತು. ಆದರೆ ಇದು ಹೊಸದಾಗಿ ಇರುವುದಿಲ್ಲ. ಈ ಹಿಂದೆ ಯಾರೋ ಜೆಸಿಬಿಯಲ್ಲಿ ಮದುವೆಗೆ ಎಂಟ್ರಿ ನೀಡಿದ್ದರು ಎಂದು ಕೇಳಿದೆ. ಆದರೆ ರೋಡ್‌ ರೋಲರ್‌ನಲ್ಲಿ ಇದುವರೆಗೂ ಯಾರೊಬ್ಬ ವರ ಮದುವೆಗೆ ಆಗಮಿಸಿಲ್ಲ ಎಂದು ತಿಳಿಯಿತು. ಹಾಗಾಗಿ ನಾನು ರೋಡ್‌ ರೋಲರ್‌ನಲ್ಲಿ ಎಂಟ್ರಿ ಕೊಡಲು ನಿರ್ಧರಿಸಿದೆ ಎಂದು ಅರ್ಕಾ ತಿಳಿಸಿದ್ದಾನೆ. ಇದನ್ನು ಓದಿ: ಮದುವೆಯಲ್ಲೂ ಕೆಲಸದ ಪ್ರೀತಿ ಮೆರೆದ ವರ- ಜೆಸಿಬಿಯಲ್ಲೇ ದಿಬ್ಬಣ!

    ಅರ್ಕಾ ತನ್ನ ಮದುವೆಗೆ ಕುದುರೆ ಬದಲು ರೋಡ್‌ ರೋಲರ್‌ನಲ್ಲಿ ಆಗಮಿಸುತ್ತಿರುವುದು ಆತನ ಪತ್ನಿ ಆರುಂಧತಿ ತರಫ್‍ದಾರ್ ಗೆ ಯಾವುದೇ ಅಭ್ಯಂತರ ಇರಲಿಲ್ಲ. ಮದುವೆ ಮೊದಲೇ ಇಬ್ಬರು ಈ ವಿಚಾರದ ಬಗ್ಗೆ ಮಾತನಾಡಿಕೊಂಡಿದ್ದರು.

    ಅರ್ಕಾ ಮದುವೆಯಲ್ಲಿ ಯಾವುದೇ ಡಿಜೆ ಇರಲಿಲ್ಲ. ಡಿಜೆ ಬದಲು ವ್ಯಕ್ತಿಯೊಬ್ಬ ಮದುವೆ ಮನೆಯಲ್ಲಿ ಕೊಳಲು ನುಡಿಸುತ್ತಿದ್ದ. ಕೊಳಲು ನುಡಿಸಿದರೆ ಮದುವೆ ಬಂದಿರುವ ಅತಿಥಿಗಳಿಗೆ ಇಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಡಿಜಿ ಆಯೋಜಿಸಿರಲಿಲ್ಲ ಎಂದು ಅರ್ಕಾ ಹೇಳಿದ್ದಾನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಮಮತಾ ಬ್ಯಾನರ್ಜಿ ‘ಯುನೈಟ್ ಇಂಡಿಯಾ’ ರ‍್ಯಾಲಿ- ಕೇಂದ್ರದ ವಿರುದ್ಧ ಸಿಎಂ ಎಚ್‍ಡಿಕೆ ವಾಗ್ದಾಳಿ

    ಮಮತಾ ಬ್ಯಾನರ್ಜಿ ‘ಯುನೈಟ್ ಇಂಡಿಯಾ’ ರ‍್ಯಾಲಿ- ಕೇಂದ್ರದ ವಿರುದ್ಧ ಸಿಎಂ ಎಚ್‍ಡಿಕೆ ವಾಗ್ದಾಳಿ

    ಕೋಲ್ಕತ್ತಾ: ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

    ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ, ಸಿಎಂ ಮಮತಾ ಬ್ಯಾನರ್ಜಿ ಅವರು ಏರ್ಪಡಿಸಿರುವ ‘ಯುನೈಟ್ ಇಂಡಿಯಾ’ ಬೃಹತ್ ರ‍್ಯಾಲಿಯಲ್ಲಿ ಇಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಭಾಗವಹಿಸಿ ಮಾತನಾಡಿದರು. ಜನರ ವಿಶ್ವಾಸವನ್ನು ಗಳಿಸಲು ಹಾಗೂ ರಾಜ್ಯದ ಹಿತ ಕಾಯಲು ಪ್ರದೇಶಿಕ ಪಕ್ಷಗಳು ಸಮರ್ಥವಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಎಚ್‍ಡಿಕೆ, ಕಳೆದ ಕೆಲ ಸಮಯದಿಂದ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಲ್ಲಿ ಬಿಜೆಪಿ ಪಕ್ಷ ಬಹುಮತ ಪಡೆಯಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರನ್ನು ಖರೀದಿ ಮಾಡಲು ಪ್ರಯತ್ನಿಸುತ್ತಿದೆ. ಅಲ್ಲದೇ ಕರ್ನಾಟಕ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಲು ಪ್ರಯತ್ನಿಸುತ್ತಿದ್ದರೆ, ಕೇಂದ್ರ ಸರ್ಕಾರ ರೈತರಿಗೆ ನೋಟಿಸ್ ಜಾರಿ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ರಾಷ್ಟ್ರದಲ್ಲಿ ಅಸಂವಿಧಾನಿಕ ಆಡಳಿತ ವ್ಯವಸ್ಥೆಯನ್ನು ಇಂದು ನಾವು ನೋಡುತ್ತಿದ್ದೇವೆ ಎಂದು ಕೇಂದ್ರದ ಸರ್ಕಾರದ ವಿರುದ್ಧ ಕಿಡಿಕಾರಿದರು.

    ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್, ಎನ್ ಚಂದ್ರಬಾಬು ನಾಯ್ಡು, ಮಾಜಿ ಸಿಎಂ ಗಳಾದ ಫಾರೂಖ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್, ಎಂಡಿಕೆ ಪಕ್ಷದ ಎಂಕೆ ಸ್ಟಾಲಿನ್, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ, ಬಿಎಸ್‍ಪಿ ನಾಯಕ ಸತೀಶ್ ಮಿಶ್ರಾ, ಶರದ್ ಪವರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

    ಮಮತಾ ಬ್ಯಾನರ್ಜಿ ಮಾತನಾಡಿ, ಎಲ್ಲಾ ಪಕ್ಷಗಳು ಒಂದಾಗಿ ಬಿಜೆಪಿ ವಿರುದ್ಧ ಒಗ್ಗಟ್ಟು ಪ್ರದರ್ಶಿಸಬೇಕು. ಕೇಂದ್ರದಲ್ಲಿ ಬಿಜೆಪಿ ಆಡಳಿತನ್ನು ಕಿತ್ತೊಗೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲಾ ನಾಯಕರು ಕೇಂದ್ರದ ಬಿಜೆಪಿ ಸರ್ಕಾರದ ಆಡಳಿತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಾಗ್ದಾಳಿ ನಡೆಸಿದರು. ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭಾಗವಹಿಸಿರಲಿಲ್ಲ. ಆದರೆ ರಾಹುಲ್ ನಿನ್ನೆಯೇ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದರು.

    ಮುಂದಿನ ಏಪ್ರಿಲ್ ಮೇ ತಿಂಗಳಿನಲ್ಲಿ ನಡೆಯಬಹುದಾದ ಲೋಕಸಭಾ ಚುನಾವಣೆಗೆ ಎನ್‍ಡಿಎ ವಿರುದ್ಧ ಒಕ್ಕೂಟವನ್ನು ನಿರ್ಮಿಸಲು ಮಮತಾ ಬ್ಯಾನರ್ಜಿ ಅವರು ಸಮಾವೇಶವನ್ನು ಏರ್ಪಡಿಸಿದ್ದಾರೆ. ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿ ಬಿಜೆಪಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೋಲ್ಕತ್ತಾ ಹೈಕೋರ್ಟ್ ನಿಂದ ಬಿಜೆಪಿ ರಥಯಾತ್ರೆಗೆ ಗ್ರೀನ್ ಸಿಗ್ನಲ್

    ಕೋಲ್ಕತ್ತಾ ಹೈಕೋರ್ಟ್ ನಿಂದ ಬಿಜೆಪಿ ರಥಯಾತ್ರೆಗೆ ಗ್ರೀನ್ ಸಿಗ್ನಲ್

    -ಆಡಳಿತಾರೂಢ ದೀದಿ ಸರ್ಕಾರಕ್ಕೆ ಮುಖಭಂಗ

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರಥಯಾತ್ರೆಗೆ ಕೋಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ್ದು, ಅಲ್ಲದೇ ಕಾನುನೂ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

    ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ರಥಯಾತ್ರೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರ ಅನುಮತಿಯನ್ನು ನಿರಾಕರಿಸಿದ ಬೆನ್ನಲ್ಲೇ ಹೈಕೋರ್ಟ್ ಏಕ ಸದಸ್ಯ ಪೀಠ ಸಹ ಯಾತ್ರೆಗೆ ತಡೆಹಿಡಿದಿತ್ತು. ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಬಿಜೆಪಿ ಸೋಮವಾರ ಆದೇಶವನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿತ್ತು.

    ಇಂದು ಬಿಜೆಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಬಿಜೆಪಿಗೆ ಕೆಲ ಷರತ್ತುಗಳನ್ನು ವಿಧಿಸಿ, ಯಾತ್ರೆಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

    ಈ ಹಿಂದೆ ಕೂಚ್ ಬಿಹಾರ್ ನಿಂದ ಆರಂಭವಾಗಬೇಕಿದ್ದ ಬಿಜೆಪಿಯ `ರಥ ಯಾತ್ರೆ’ಗೆ ಕೋಲ್ಕತಾ ಹೈಕೋರ್ಟ್ ನ ಏಕ ಸದಸ್ಯ ಪೀಠ ಅನುಮತಿ ನಿರಾಕರಿಸಿತ್ತು. ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಬಿಜೆಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ವಿಭಾಗೀಯ ಪೀಠ, ರಥ ಯಾತ್ರೆಗೆ ಅನುಮತಿ ನೀಡುವ ಕುರಿತು ಬಿಜೆಪಿಯ ಮೂವರು ಸದಸ್ಯರ ತಂಡದೊಂದಿಗೆ ಚರ್ಚಿಸಿ, ಡಿಸೆಂಬರ್ 14 ರೊಳಗೆ ಅಂತಿಮ ನಿರ್ಧಾರಕ್ಕೆ ಬನ್ನಿ ಎಂದು ಪಶ್ಚಿಮ ಬಂಗಾಳ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರಿಗೆ ಮತ್ತು ಗೃಹ ಕಾರ್ಯದರ್ಶಿಗೆ ಸೂಚಿಸಿತ್ತು. ಆದರೆ ರಥ ಯಾತ್ರೆಯಿಂದ ಕೋಮುಗಲಭೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ರಥ ಯಾತ್ರೆಗೆ ಅನುಮತಿ ನೀಡಲು ನಿರಾಕರಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೆಕ್ಸ್ ಗೆ ಒತ್ತಾಯಿಸಿದ ಪತಿಯ ಮೇಲೆ ವೈವಾಹಿಕ ಅತ್ಯಾಚಾರ ಕೇಸ್ ಬುಕ್

    ಸೆಕ್ಸ್ ಗೆ ಒತ್ತಾಯಿಸಿದ ಪತಿಯ ಮೇಲೆ ವೈವಾಹಿಕ ಅತ್ಯಾಚಾರ ಕೇಸ್ ಬುಕ್

    ಕೊಲ್ಕತ್ತಾ: ಪತ್ನಿಯನ್ನು ಸೆಕ್ಸ್ ಗೆ ಬಲವಂತಪಡಿಸಿದ್ದಕ್ಕಾಗಿ ಇತ್ತೀಚೆಗಷ್ಟೆ ಮದುವೆಯಾಗಿದ್ದ ವ್ಯಕ್ತಿಯ ಮೇಲೆ ವೈವಾಹಿಕ ಅತ್ಯಾಚಾರದ ಪ್ರಕರಣವನ್ನು ಬುಕ್ ಮಾಡಲಾಗಿದೆ.

    ಸಿಂತೀ ನಿವಾಸಿ ಮಹಿಳೆ, ಪತಿಯ ವಿರುದ್ಧ ಹಾಗೂ ಅತ್ತೆ, ಮಾವನ ವಿರುದ್ಧ ವರದಕ್ಷಿಣೆಗೆ ಬೇಡಿಕೆ ಮತ್ತು ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಿದ್ದಾರೆ. ನಾನು ಗರ್ಭಿಣಿಯಾದ ಬಳಿಕ ದೈಹಿಕವಾಗಿ ಹಲ್ಲೆ ಮಾಡುವುದನ್ನು ಮುಂದುವರಿಸಿದ್ದರು ಎಂದು ಆರೋಪಿಸಿ ಪ್ರಕರಣ ದಾಖಲಿಸುವಂತೆ ಮಹಿಳೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

    ಮಹಿಳೆ ದೂರು ನೀಡಿದ ಬಳಿಕ ಪೊಲೀಸರು ಈ ಕುರಿತು ಪರಿಶೀಲನೆ ನಡೆಸಿದ್ದು, ವ್ಯಕ್ತಿ ಮದುವೆ ವೇಳೆ ಹುಡುಗಿಯ ಕುಟುಂಬದವರ ಬಳಿ ತಾನು ಖಾಸಗಿ ಬ್ಯಾಂಕಿನಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಆದರೆ ಮದುವೆ ಬಳಿಕ ಬ್ಯಾನ್ಸ್ಟೇರಿಯಾದಲ್ಲಿದ್ದ ತನ್ನ ಅತ್ತೆ ಮನೆಗೆ ಹೋದಾಗ ಆತ ಒಂದು ಸಣ್ಣ ಖಾಸಗಿ ಸಂಸ್ಥೆಯಲ್ಲಿ ಜೂನಿಯರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದು ಮಹಿಳೆಗೆ ತಿಳಿದಿದೆ. ಇದರಿಂದ ಪತಿ ತನಗೆ ಸುಳ್ಳು ಹೇಳಿ ಮೋಸ ಮಾಡಿದ್ದಾನೆ ಎಂದು ಮಹಿಳೆ ಅರಿತುಕೊಂಡಿದ್ದಾರೆ ಅಂತ ಪೊಲೀಸರು ಹೇಳಿದ್ದಾರೆ.

    ಕೆಲವು ದಿನಗಳ ನಂತರ ಪತಿ ಆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದನು. ಬಳಿಕ ನಾನು ಆತನಿಂದ ದೂರವಿರಲು ನಿರ್ಧರಿಸಿದ್ದೆ. ಆದರೆ ಈ ವೇಳೆ ಸೆಕ್ಸ್ ಗೆ ಬಲವಂತ ಪಡಿಸಿದ್ದನು. ಅಷ್ಟೇ ಅಲ್ಲದೇ ಅತ್ತೆ-ಮಾವ ಕೂಡ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

    ಮಹಿಳೆ ಕಿರುಕುಳಕ್ಕೆ ಬೇಸತ್ತು ಕೊನೆಗೆ ಯಾವುದೇ ದಾರಿ ಕಾಣದೆ ಕಾನೂನಿನ ಮೊರೆ ಬಂದಿದ್ದಾರೆ. “ನಾವು ಎಲ್ಲ ಅಂಶಗಳನ್ನು ಪರಿಶೀಲನೆ ನಡೆಸಿದ್ದೇವೆ. ಸದ್ಯಕ್ಕೆ ಈ ಪ್ರಕರಣದಲ್ಲಿ ಕಾನೂನು ನೆರವು ಪಡೆಯುತ್ತೇವೆ. ಈಗಲೇ ನಾವು ಯಾವ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಸದ್ಯಕ್ಕೆ ಮಹಿಳೆಯ ಹೇಳಿಕೆಯನ್ನು ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ವೈವಾಹಿಕ ಅತ್ಯಾಚಾರವನ್ನು ಐಪಿಸಿ ಸೆಕ್ಷನ್ ವಿಭಾಗಗಳಲ್ಲಿ ಸೇರಿಸುವಂತೆ ಮಹಿಳೆ ಮನವಿ ಮಾಡಿದ್ದಾರೆ. ಆದರೆ ಸದ್ಯಕ್ಕೆ ಪತಿಯ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಆದರೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ ಬಳಿಕ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಒಬ್ಬರ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಹೊಂದಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ. ಆದರೆ ಮಹಿಳೆ ಮದುವೆಯಾದ ಕಾರಣ, ಈ ಪ್ರಕರಣವನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆದರೂ ಪತಿ, ಪತ್ನಿಯ ಒಪ್ಪಿಗೆ ಇಲ್ಲದೇ ದೈಹಿಕ ಸಂಪರ್ಕ ಹೊಂದುವುದು ತಪ್ಪಾಗುತ್ತದೆ. ಅದಕ್ಕೆ ಒಪ್ಪಿಗೆ ಇರಬೇಕು ಎಂದು ಮಹಿಳಾ ಹಕ್ಕುಗಳ ಸಂಸ್ಥೆಯ ಸ್ವಯಂ ಸಂಸ್ಥಾಪಕಿ ಅನುರಾಧಾ ಕಪೂರ್ ಹೇಳಿದ್ದಾರೆ.

    ಬಹುತೇಕ ವೈವಾಹಿಕ ಅತ್ಯಾಚಾರ ಪ್ರಕರಣಗಳು ಸಾಮಾನ್ಯವಾಗಿ ಕೌಟುಂಬಿಕ ಹಿಂಸಾಚಾರ ಕಾಯ್ದೆ ಅಥವಾ ವರದಕ್ಷಿಣೆ ಕಾಯ್ದೆಯ ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾಗುತ್ತದೆ ಎಂದು ಅನುರಾಧಾ ಕಪೂರ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಳ್ಳಂಬೆಳಗ್ಗೆ ಬಸ್ಸಿಗಾಗಿ ನಿಂತಿದ್ದವನ ಬಲಿ ಪಡೆದ ಫ್ಯಾಶನ್ ಡಿಸೈನರ್

    ಬೆಳ್ಳಂಬೆಳಗ್ಗೆ ಬಸ್ಸಿಗಾಗಿ ನಿಂತಿದ್ದವನ ಬಲಿ ಪಡೆದ ಫ್ಯಾಶನ್ ಡಿಸೈನರ್

    ಕೊಲ್ಕತ್ತಾ: ವೇಗವಾಗಿ ಕಾರು ಚಲಾಯಿಸುವ ಮೂಲಕ ಫ್ಯಾಶನ್ ಡಿಸೈನರ್ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ವ್ಯಕ್ತಿ ಮೃತಪಟ್ಟಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಕಾರು ಡಿಕ್ಕಿ ಹೊಡೆದ ಫ್ಯಾಶನ್ ಡಿಸೈನರ್ ಅದಿತಿ ಅಗರ್ವಾಲ್ ಎಂದು ಗುರುತಿಸಲಾಗಿದೆ. ಸದ್ಯಕ್ಕೆ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ. ಈ ಘಟನೆ ಕೋಲ್ಕತಾದ ಪೂರ್ವ ಮೆಟ್ರೋಪಾಲಿಟನ್ ಬೈಪಾಸ್ ಬಳಿ ನಡೆದಿದೆ.

    ಭಾನುವಾರ ಬೆಳಗ್ಗೆ ಸುಮಾರು 6.30ರಲ್ಲಿ ಅದಿತಿ ಅಗರ್ವಾಲ್, ಮೆಟ್ರೋಪಾಲಿಟನ್ ಬೈಪಾಸ್ ಬಳಿ ಟ್ರಾಫಿಕ್ ಸಿಗ್ನಲ್ ನಿಂದ ಮುಂದೆ ವೇಗವಾಗಿ ಕಾರನ್ನು ಚಲಾಯಿಸಿದ್ದಾಳೆ. ಆಗ ವ್ಯಕ್ತಿಯೊಬ್ಬ ಬಸ್ ಸ್ಟ್ಯಾಂಡಿನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಆ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದಾಳೆ. ಅಷ್ಟೇ ಅಲ್ಲದೇ ಅದೇ ವೇಗದಲ್ಲಿ ಹೋಗಿ ಸಮೀಪದ ಪಂಚತಾರಾ ಹೋಟೆಲೊಂದಕ್ಕೆ ಹೋಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆಕೆಯನ್ನು ಅಡ್ಡಗಟ್ಟಿ ಬಂಧಿಸಿದ್ದಾರೆ. ಬಳಿಕ ಆಕೆಯ ರಕ್ತವನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದು, ವರದಿಯಲ್ಲಿ ಆಕೆ ಅತಿಯಾಗಿ ಮದ್ಯ ಸೇವನೆ ಮಾಡಿರುವುದು ವರದಿಯಾಗಿದೆ.

    ಆರೋಪಿಯನ್ನು ವಿಚಾರಣೆ ಮಾಡುವ ವೇಳೆ ಕುಡಿದ ಮತ್ತಿನಲ್ಲಿ ತೊದಲುತ್ತಿದ್ದಳು. ಆದರೂ ಆಕೆ ಕಾರು ಚಲಾಯಿಸಿದ್ದಾಳೆ ಎಂಬುದೇ ನಮಗೆ ಆಶ್ಚರ್ಯದ ಸಂಗತಿ. ಈ ಘಟನೆಗೆ ಮೊದಲು ಪಾರ್ಕ್ ಸ್ಟ್ರೀಟ್ ಪ್ರದೇಶದ ಪಬ್ ನಿಂದ ಹೊರ ಬಂದಿದ್ದಾಳೆ. ಬಳಿಕ ಆಕೆ ತನ್ನ ಸ್ನೇಹಿತರನ್ನು ಮನಗೆ ಡ್ರಾಪ್ ಮಾಡಿ, ನಂತರ ತನ್ನ ಮನೆಗೆ ಹೋಗುವಾಗ ಈ ಅಪಘಾತ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಸದ್ಯಕ್ಕೆ ಆಕೆಯನ್ನು ಪೊಲೀಸರು ಬಂಧಿಸಿದ್ದು, ಈಕೆಯ ಹುಚ್ಚಾಟಕ್ಕೆ ಬಲಿಯಾದ ವ್ಯಕ್ತಿ ನಗರದ ಲೆದರ್ ಕಾಂಪ್ಲೆಕ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಇತರೆ ಬೇರೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಮೃತ ಕುಟುಂಬಸ್ಥರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಹಿಳೆಯನ್ನ ಬ್ಯೂಟಿ ಪಾರ್ಲರ್ ಗೆ ಕರೆಸಿಕೊಂಡು ಗ್ಯಾಂಗ್ ರೇಪ್

    ಮಹಿಳೆಯನ್ನ ಬ್ಯೂಟಿ ಪಾರ್ಲರ್ ಗೆ ಕರೆಸಿಕೊಂಡು ಗ್ಯಾಂಗ್ ರೇಪ್

    ಕೋಲ್ಕತ್ತಾ: ಬ್ಯೂಟಿ ಪಾರ್ಲರ್ ನಲ್ಲಿ ಮಹಿಳೆಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳನ್ನು ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ.

    ಕೋಲ್ಕತ್ತಾದ ಟಿಲ್ಜಲಾ ಪ್ರದೇಶದಲ್ಲಿರು ಬ್ಯೂಟಿ ಪಾರ್ಲರ್ ಒಂದರಲ್ಲಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ. ಈ ಕುರಿತು ಸಂತ್ರಸ್ತ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ನಿನ್ನೆ ಮಾಹಿತಿ ಮಾಹಿತಿ ನೀಡಿದ್ದಾರೆ.

    ಏನಿದು ಪ್ರಕರಣ?:
    ಸಂತ್ರಸ್ತ ಮಹಿಳೆಗೆ ಕರೆ ಮಾಡಿದ ವ್ಯಕ್ತಿಯೊಬ್ಬ ಬ್ಯೂಟಿ ಪಾರ್ಲರ್ ಗೆ ಬರುವಂತೆ ತಿಳಿಸಿದ್ದಾನೆ. ಆತನ ಕರೆಯಿಂದಾಗಿ ಮಹಿಳೆಗೆ ಅಲ್ಲಿಗೆ ಬಂದಿದ್ದು, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ದೃಶ್ಯವನ್ನು ಮತ್ತಿಬ್ಬರು ವಿಡಿಯೋ ಮಾಡಿದ್ದಾರೆ. ನಂತರ ಅವರು ಕೂಡ ಅತ್ಯಾಚಾರ ಮಾಡಿದ್ದಾರೆ. ಒಂದು ವೇಳೆ ಈ ಕುರಿತು ಎಲ್ಲಿಯಾದರೂ ಹೇಳಿಕೊಂಡರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಅದಾದ ಬಳಿಕವೂ ನಿರಂತರ ಅತ್ಯಾಚಾರ ಎಸಗಿದ್ದಾರೆ.

    ಈ ಕುರಿತು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಶುಕ್ರವಾರ ಮೂರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿತ್ತು. ಸಾಮೂಹಿಕ ಅತ್ಯಾಚಾರವಾಗಿದೆ ಎನ್ನುವ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಸೂಕ್ತ ಸಾಕ್ಷ್ಯಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv