Tag: kolkata

  • ಡೆಪ್ಯೂಟಿ ಕಮಿಶನರ್ ಆಗಿ ನೇಮಕ – ತಂದೆಗೆ ಮಗಳಿಂದ ಖಡಕ್ ಆದೇಶ

    ಡೆಪ್ಯೂಟಿ ಕಮಿಶನರ್ ಆಗಿ ನೇಮಕ – ತಂದೆಗೆ ಮಗಳಿಂದ ಖಡಕ್ ಆದೇಶ

    ಕೋಲ್ಕತ್ತಾ: ಮಂಗಳವಾರ ಐಎಸ್‍ಸಿ ಪಠ್ಯದ 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದ ವಿದ್ಯಾರ್ಥಿನಿ ಒಂದು ದಿನದ ಮಟ್ಟಕ್ಕೆ ಡೆಪ್ಯೂಟಿ ಕಮಿಶನರ್ ಆಗಿ ತನ್ನ ತಂದೆಗೆ ಆರ್ಡರ್ ಮಾಡಿದ್ದಾಳೆ.

    ರಿಚ್ಚ ಸಿಂಗ್ ಜಿ.ಡಿ ಬಿರ್ಲಾ ಸೆಂಟರ್‍ನಲ್ಲಿ ಓದುತ್ತಿದ್ದು, 12ನೇ ತರಗತಿ ಪರೀಕ್ಷೆಯಲ್ಲಿ ಶೇ. 99.25 ಅಂಕಗಳನ್ನು ಪಡೆದಿದ್ದಾಳೆ. ರಿಚ್ಚ ಶೇ. 99.25 ಅಂಕಗಳನ್ನು ಪಡೆಯುವ ಮೂಲಕ ದೇಶಕ್ಕೆ ನಾಲ್ಕನೇ ಸ್ಥಾನ ಪಡೆದಿದ್ದಾಳೆ. ರಿಚ್ಚ ಸಾಧನೆಯನ್ನು ಗೌರವಿಸಲು ಕೋಲ್ಕತ್ತಾ ಪೊಲೀಸರು ಆಕೆಯನ್ನು ಒಂದು ದಿನದ ಮಟ್ಟಿಗೆ ಡೆಪ್ಯೂಟಿ ಕಮಿಶನರ್ ಹುದ್ದೆಯನ್ನು ನೀಡಿ ಪುರಸ್ಕರಿಸಿದ್ದರು.

    ರಿಚ್ಚ ಸಿಂಗ್ ಸಾಧನೆಯನ್ನು ಪ್ರೋತ್ಸಾಹಿಸಲು ಕೋಲ್ಕತ್ತಾ ಪೊಲೀಸರು ಆಕೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಡೆಪ್ಯೂಟಿ ಕಮಿಷನರ್ ಆಗಿ ನೇಮಿಸಿದ್ದರು. ಇದೇ ವಿಭಾಗದಲ್ಲಿ ರಿಚ್ಚ, ತಂದೆ ರಾಜೇಶ್ ಸಿಂಗ್ ಅವರು ಹೆಚ್ಚುವರಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

    ರಿಚ್ಚ ಡೆಪ್ಯೂಟಿ ಕಮಿಶನರ್ ಆಗಿ ಕುರ್ಚಿಯಲ್ಲಿ ಕುಳಿತ್ತಿದ್ದ ವೇಳೆ ಅಲ್ಲಿದ್ದ ಪೊಲೀಸರು ನಿನ್ನ ತಂದೆಗೆ ಏನು ಆದೇಶ ನೀಡಬೇಕು ಎಂದುಕೊಂಡಿದ್ದೀಯಾ ಎಂದು ಕೇಳಿದ್ದಾರೆ. ಅದಕ್ಕೆ ರಿಚ್ಚ ನನ್ನ ತಂದೆ ಬೇಗನೆ ಮನೆಗೆ ಮರಳಬೇಕು ಎಂದು ಆದೇಶಿಸುತ್ತೇನೆ ಎಂದು ಹೇಳಿದ್ದಾಳೆ.

    ಪೊಲೀಸ್ ಅಧಿಕಾರಿಗಳು 12ನೇ ತರಗತಿ ನಂತರ ಏನು ಓದಲು ಇಷ್ಟಪಡುತ್ತೀಯಾ ಎಂದು ಕೇಳಿದ್ದಾರೆ. ಆಗ ಅವಳು ಮುಂದೆ ಇತಿಹಾಸ ಅಥವಾ ಸಮಾಜಶಾಸ್ತ್ರ ಓದಬೇಕೆಂದು ಬಯಸುತ್ತೇನೆ. ಅಲ್ಲದೆ ಯುಪಿಎಸ್‍ಸಿ ಪರೀಕ್ಷೆ ಕೂಡ ಬರೆಯುವ ಕನಸು ಇದೆ ಎಂದು ಉತ್ತರಿಸಿದ್ದಾಳೆ.

    ಮಗಳು ಡೆಪ್ಯೂಟಿ ಕಮಿಶನರ್ ಸ್ಥಾನದಲ್ಲಿ ಕುಳಿತ್ತಿದ್ದನ್ನು ನೋಡಿದ ತಂದೆ ರಾಜೇಶ್ ಭಾವುಕರಾಗಿ,”ನನ್ನ ಖುಷಿಯನ್ನು ಹೇಗೆ ಹೇಳಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ. ಈ ದಿನ ನನ್ನ ಮಗಳು ನನಗೆ ಬಾಸ್ ಆಗಿದ್ದಾಳೆ. ಬೇಗ ಮನೆಗೆ ಬರಬೇಕು ಎಂದು ಆದೇಶಿಸಿದ್ದಾಳೆ. ನಾನು ಆಕೆಯ ಆದೇಶವನ್ನು ಪಾಲಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.

  • ಔಟಾದ ಕೋಪದಲ್ಲಿ ಬೇಲ್ಸ್ ಹಾರಿಸಿ ದಂಡ ತೆತ್ತ ರೋಹಿತ್

    ಔಟಾದ ಕೋಪದಲ್ಲಿ ಬೇಲ್ಸ್ ಹಾರಿಸಿ ದಂಡ ತೆತ್ತ ರೋಹಿತ್

    ಮುಂಬೈ: ಕ್ರೀಡಾಂಗಣದಲ್ಲಿ ಸಾಮಾನ್ಯವಾಗಿ ಕೂಲ್ ಆಗಿ ಕಾಣುವ ರೋಹಿತ್ ಶರ್ಮಾ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಔಟಾಗುತ್ತಿದಂತೆ ತಮ್ಮ ಕೋಪವನ್ನು ಪ್ರದರ್ಶಿಸಿ ದಂಡ ತೆತ್ತಿದ್ದಾರೆ.

    ಪಂದ್ಯದ 4ನೇ ಓವರಿನಲ್ಲಿ ಘಟನೆ ನಡೆದಿದ್ದು, 12 ರನ್ ಗಳಿಸಿದ್ದ ರೋಹಿತ್ ಶರ್ಮಾರನ್ನು ಕೆಕೆಆರ್ ಬೌಲರ್ ಹ್ಯಾರಿ ಗರ್ನಿ ಎಲ್‍ಬಿ ಬಲೆಗೆ ಕೆಡವಿದ್ದರು. ಆದರೆ ಈ ವೇಳೆ ಅಂಪೈರ್ ತೀರ್ಮಾನದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ರೋಹಿತ್ ಡಿಆರ್ ಎಸ್ ಮನವಿ ಸಲ್ಲಿಸಿದ್ದರು. ಅಂಪೈರ್ ಪರವೇ ಡಿಆರ್ ಎಸ್ ತೀರ್ಪು ಬಂದ ಹಿನ್ನೆಲೆಯಲ್ಲಿ ರೋಹಿತ್ ಪೆವಿಲಿಯನ್ ನತ್ತ ನಡೆದರು. ಇದಕ್ಕೂ ಮುನ್ನ ಬೌಲರ್ ಬದಿ ಇದ್ದ ವಿಕೆಟ್‍ಗಳಿಗೆ ತಮ್ಮ ಬ್ಯಾಟ್ ತಾಗಿಸಿ ಬೇಲ್ಸ್ ಹಾರಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು.

    ರೋಹಿತ್ ಶರ್ಮಾರ ಈ ನಡೆಯನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫ್ರಿ ಪಂದ್ಯದ ಸಂಭಾವನೆಯ ಶೇ.15 ರಷ್ಟರ ಮೊತ್ತವನ್ನು ದಂಡವಾಗಿ ವಿಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಈ ವಿಡಿಯೋ ವೈರಲ್ ಆಗಿದ್ದು, ರೋಹಿತ್ ನಡೆಯ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಭರ್ಜರಿ ಪ್ರದರ್ಶನ 91 ರನ್(34 ಎಸೆತ, 6 ಬೌಂಡರಿ, 9 ಸಿಕ್ಸರ್) ಸಿಡಿಸಿ ಮಿಂಚಿದ್ದರು. ಆದರೆ ಪಂದ್ಯದಲ್ಲಿ ಮುಂಬೈ 34 ರನ್ ಗಳ ಅಂತರದಲ್ಲಿ ಸೋಲುಂಡಿತು. ಕೆಕೆಆರ್ ಪರ ರಸೆಲ್ 80 ರನ್(40 ಎಸೆತ, 6 ಬೌಂಡರಿ, 8 ಸಿಕ್ಸರ್) ಸಿಡಿಸಿದ ಪರಿಣಾಮ ತಂಡ 200 ರನ್ ಗಳ ಗಡಿ ದಾಟಿತು.

  • ಪಶ್ಚಿಮ ಬಂಗಾಳದಲ್ಲಿ ಮತ್ತಷ್ಟು ಹಿಂಸಾಚಾರ – ಕೇಂದ್ರ ಸಚಿವರ ಕಾರಿನ ಗಾಜು ಪುಡಿಪುಡಿ

    ಪಶ್ಚಿಮ ಬಂಗಾಳದಲ್ಲಿ ಮತ್ತಷ್ಟು ಹಿಂಸಾಚಾರ – ಕೇಂದ್ರ ಸಚಿವರ ಕಾರಿನ ಗಾಜು ಪುಡಿಪುಡಿ

    ಕೋಲ್ಕತ್ತಾ: ಲೋಕಸಭೆಯ ನಾಲ್ಕನೇ ಹಂತದ ಚುನಾವಣೆಯ ಸಮಯದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮತ್ತಷ್ಟು ಜೋರಾಗಿದ್ದು, ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ನಡೆಸಿದ್ದಾರೆ.

    ಪಶ್ಚಿಮ ಬಂಗಾಳದ ಅಸನ್ಸೋಲ್ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆಯಾಗಿದೆ. ಈ ಘರ್ಷಣೆ ಹಿಂಸಾಚಾರಕ್ಕೆ ತಿರುಗಿ ಬಿದಿರಿನ ದೊಣ್ಣೆಯಿಂದ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಆ ಕ್ಷೇತ್ರದ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಅವರ ಕಾರಿನ ಹಿಂಬದಿಯ ಗಾಜನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಒಡೆದು ಹಾಕಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಬಾಬುಲ್ ಸುಪ್ರಿಯೊ, ಕೇಂದ್ರದ ಭದ್ರತಾ ಪಡೆಯೊಂದಿಗೆ ಇದ್ದೇನೆ. ಮತ ಚಲಾಯಿಸಲು ಜನರನ್ನು ಮತಗಟ್ಟೆಯೊಳಗೆ ಬಿಡುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ನಾವು ಹೋರಾಟ ನಡೆಸುತ್ತಿದ್ದೇವೆ. ಅಸನ್ಸೋಲ್ ಕ್ಷೇತ್ರದ ಬೂತ್ ನಂಬರ್ 169, 113, 218, 20, 21, 22, 35 ಮತ್ತು 36ಗಳಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

    ಈ ಬೂತ್‍ನಲ್ಲಿ ಕಳೆದ ರಾತ್ರಿ ಕೇಂದ್ರ ಸೇನಾ ಪಡೆಯನ್ನು ಈ ಬೂತ್‍ನ ಭದ್ರತೆಗೆ ನಿಯೋಜಿಸಲಾಗಿತ್ತು. ಅದರೆ ಬೆಳಗ್ಗೆ ರಾಜ್ಯ ಪೊಲೀಸರು ಭದ್ರತೆಗೆ ಬಂದಿದ್ದನ್ನು ಪ್ರಶ್ನಿಸಿ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದ್ದಾರೆ. ಇದರಿಂದ ಎರಡು ಪಕ್ಷದ ಕಾರ್ಯಕರ್ತರ ನಡುವೆ ದೊಡ್ಡ ಘರ್ಷಣೆ ಉಂಟಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ಗುಂಪುಗಳನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ.

    ಘಟನೆ ಬಳಿಕ ಬಿಜೆಪಿ ಕಾರ್ಯಕರ್ತರು ಭದ್ರತಾ ಕಾರ್ಯಕ್ಕೆ ಕೇಂದ್ರ ಸೇನಾ ಪಡೆಗಳೇ ಬರಬೇಕು ಎಂದು ಒತ್ತಾಯಿಸಿ ಬೂತ್ ನಂಬರ್ 125 ಮತ್ತು 129 ರಲ್ಲಿ ಮತದಾನವನ್ನು ನಿಲ್ಲಿಸಿದರು. ಅದರೆ ಕೆಂದ್ರ ಸೇನಾಪಡೆಗಳು ಭದ್ರತೆಗೆ ಬಾರದೆ ಇದ್ದರೂ ಮತದಾನ ನಡೆಯಬೇಕು ಎಂದು ತೃಣಮೂಲ ಕಾಂಗ್ರೆಸ್‍ನ ಕಾರ್ಯಕರ್ತರು ಮತದಾನವನ್ನು ಮುಂದುವರಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಈ ಬೂತ್‍ಗಳಲ್ಲಿ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಮತದಾನ ನಡೆಯುತ್ತಿದೆ.

    https://www.youtube.com/watch?v=Tc8q7ImMXGk

  • ‘ದಿ ಗ್ರೇಟ್’ ಖಲಿ ಬಿಜೆಪಿ ಪರ ಪ್ರಚಾರ – ಟಿಎಂಸಿಯಿಂದ ಆಯೋಗಕ್ಕೆ ದೂರು

    ‘ದಿ ಗ್ರೇಟ್’ ಖಲಿ ಬಿಜೆಪಿ ಪರ ಪ್ರಚಾರ – ಟಿಎಂಸಿಯಿಂದ ಆಯೋಗಕ್ಕೆ ದೂರು

    ಕೋಲ್ಕತ್ತಾ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಡಬ್ಲ್ಯೂಡಬ್ಲ್ಯೂಇ ರೆಸ್ಲಿಂಗ್ ಚಾಂಪಿಯನ್ ‘ದಿ ಗ್ರೇಟ್’ ಖಲಿ ಪ್ರಚಾರ ಮಾಡಿರುವ ವಿಚಾರವಾಗಿ ತೃಣಮೂಲಕ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

    ಖಲಿ ಸದ್ಯ ಅಮೆರಿಕ ಪೌರತ್ವವನ್ನು ಪಡೆದಿದ್ದು, ಒಬ್ಬ ವಿದೇಶಿ ಪ್ರಜೆ ಚುನಾವಣೆಯಲ್ಲಿ ಪ್ರಚಾರ ನಡೆಸಿ ಪ್ರಭಾವ ಬೀರುವುದು ನಿಯಮ ಬಾಹಿರವಾಗಿದೆ ಎಂದು ಟಿಎಂಸಿ ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ತಿಳಿಸಿದೆ.

    ಪಶ್ಚಿಮ ಬಂಗಾಳದ ಜಾದವಪುರ ಬಿಜೆಪಿ ಅಭ್ಯರ್ಥಿ ಅನುಪಮ್ ಹಜ್ರಾ ನಾಮಪತ್ರ ಸಲ್ಲಿಸುವ ವೇಳೆ ಅಂದರೆ ಏಪ್ರಿಲ್ 26 ರಂದು ಖಲಿ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಹಜ್ರಾ, ನಾವಿಬ್ಬರು ಸಹೋದರರಂತೆ ಎಂದು ಹೇಳಿದ್ದರು. ಅಂದಹಾಗೇ ಖಲೀ ಡಬ್ಲ್ಯೂಡಬ್ಲ್ಯೂಇ ರೆಸ್ಲಿಂಗ್ ನ ಹೆವಿವೇಯ್ಟ್ ವಿಭಾಗದಲ್ಲಿ ಚಾಂಪಿಯನ್ ಆದ ಮೊದಲ ಭಾರತೀಯರಾಗಿದ್ದಾರೆ. 2014ರ ಬಳಿಕ ಅವರು ಅಮೆರಿಕದಲ್ಲಿ ನೆಲೆಸಿ ಭಾರತ ವೀಸಾವನ್ನು ರದ್ದು ಪಡಿಸಿ ಅಲ್ಲಿನ ಕಾರ್ಡ್ ಪಡೆದಿದ್ದರು.

    ಕಳೆದ ಕೆಲ ದಿನಗಳ ಹಿಂದೆ ಬಾಂಗ್ಲಾದೇಶದ ಸೂಪರ್ ಸ್ಟಾರ್ ಫಿದೋರ್ಸ್ ಅಹ್ಮದ್ ಕೂಡ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪರ ಪ್ರಚಾರ ನಡೆಸಿದ್ದರು. ಈ ವೇಳೆ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ ನಟನ ಬಂಧನಕ್ಕೆ ಆಗ್ರಹಿಸಿತ್ತು. ಆ ಬಳಿಕ ನಟನ ವೀಸಾ ರದ್ದು ಪಡಿಸಿ ವಾಪಸ್ ಕಳುಹಿಸಲಾಗಿತ್ತು. ಅಲ್ಲದೇ ಕೇಂದ್ರ ಗೃಹ ಇಲಾಖೆ ನಟನ ವೀಸಾವನ್ನು ಬ್ಲಾಕ್ ಪಟ್ಟಿಗೆ ಸೇರಿಸಿತ್ತು. ಈ ವೇಳೆ ಬಾಂಗ್ಲಾ ವಲಸಿಗರನ್ನು ಓಲೈಕೆ ಮಾಡಲು ಟಿಎಂಸಿ ಈ ಮಾರ್ಗವನ್ನು ಬಳಸಿದೆ ಎಂದು ಬಿಜೆಪಿ ದೂರಿತ್ತು. ಅಲ್ಲದೇ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‍ರನ್ನು ಕೂಡ ಟಿಎಂಸಿ ಪ್ರಚಾರಕ್ಕೆ ಕರೆಸಿಕೊಳ್ಳಲಿ ಎಂದು ಬಿಜೆಪಿ ಆಕ್ರೋಶ ಹೊರಹಾಕಿತ್ತು.

  • ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದ ‘ದಿ ಗ್ರೇಟ್’ ಖಲಿ

    ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಇಳಿದ ‘ದಿ ಗ್ರೇಟ್’ ಖಲಿ

    ಕೋಲ್ಕತ್ತಾ: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರ ಅಬ್ಬರ ಜೋರಾಗುತ್ತಿದೆ. ಸದ್ಯ ಪ್ರಚಾರ ಕಣಕ್ಕೆ ಡಬ್ಲ್ಯೂಡಬ್ಲ್ಯೂಇ ರೆಸ್ಲಿಂಗ್ ಚಾಂಪಿಯನ್ ದಿ ಗ್ರೇಟ್ ಖಲಿ ಪ್ರವೇಶ ಮಾಡಿದ್ದಾರೆ.

    ಪಶ್ಚಿಮ ಬಂಗಾಳದ ಜಾದವಪುರ ಬಿಜೆಪಿ ಅಭ್ಯರ್ಥಿ ಅನುಪಮ್ ಹಜ್ರಾ ನಾಮಪತ್ರ ಸಲ್ಲಿಸುವ ಮುನ್ನ ನಡೆದ ಬೃಹತ್ ಮೆರವಣಿಗೆಯಲ್ಲಿ ಖಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಹಜ್ರಾ, ನಾವಿಬ್ಬರು ಸಹೋದರರಂತೆ ಎಂದು ಹೇಳಿದ್ದರು. ಅಂದಹಾಗೇ ಖಲೀ ಡಬ್ಲ್ಯೂಡಬ್ಲ್ಯೂಇ ರೆಸ್ಲಿಂಗ್ ನ ಹೆವಿವೇಯ್ಟ್ ವಿಭಾಗದಲ್ಲಿ ಚಾಂಪಿಯನ್ ಆದ ಮೊದಲ ಭಾರತೀಯರಾಗಿದ್ದಾರೆ.

    ಖಲಿ ಅವರ ಮೊದಲ ಹೆಸರು ದಿಲೀಪ್ ಸಿಂಗ್ ರಾಣಾ ಆಗಿದ್ದು, 7 ಅಡಿ, 1 ಇಂಚು ಎತ್ತರವಿದ್ದು, ಸುಮಾರು 6 ಕಿಮೀ ದೂರ ನಡೆದ ಮೆರವಣಿಗೆಯಲ್ಲಿ ಖಲಿ ಭಾಗವಹಿಸಿದ್ದರು. ವಿಶ್ವ ವಿಖ್ಯಾತಿ ಪಡೆದಿರುವ ಖಲಿ ಅವರನ್ನು ನೋಡಲು ಅಪಾರ ಜನಸ್ತೋಮ ಮೆರವಣಿಗೆಯಲ್ಲಿ ಭಾಗವಹಿಸಿತ್ತು.

    ಮೆರವಣಿಗೆಯಲ್ಲಿ ಮಾತನಾಡಿದ ಖಲಿ, ಸ್ನೇಹಿತ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವ ಮಾಹಿತಿ ತಿಳಿದು ಭಾರತಕ್ಕೆ ಆಗಮಿಸಿದ್ದು, ಅನುಮಪಮ್ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಹಜ್ರಾ ಯಾವ ಸಂದರ್ಭದಲ್ಲಿ ಕರೆದರೂ ನಾನು ಆಗಮಿಸುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಅವರನ್ನು ಹಾಡಿ ಹೊಗಳಿದ ಖಲಿ, ಮೋದಿ ದೇಶ ಕಂಡ ಉತ್ತಮ ಪ್ರಧಾನಿ. ದೇಶದ ಪಗ್ರತಿಗಾಗಿ ಅವರ ಪ್ರಗತಿ ಯೋಜನೆಗಳು ಪೂರಕವಾಗಿದ್ದು, ಮೋದಿಯನ್ನು ನೋಡಿ ನಾನು ಹೆಮ್ಮೆ ಪಡುತ್ತೇನೆ ಎಂದರು.

    2014 ರಲ್ಲಿ ಅನುಪಮ್ ರಲ್ಲಿ ಬೊಲ್ಪುರ ಕ್ಷೇತ್ರದಿಂದ ಟಿಎಂಸಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ಲೋಕಸಭಾ ಚುನಾವಣೆ 4 ತಿಂಗಳು ಬಾಕಿ ಇದ್ದ ಸಂದರ್ಭದಲ್ಲಿ ಟಿಎಂಸಿ ಅಧ್ಯಕ್ಷೆ ಅನುಪಮ್‍ರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಪರಿಣಾಮ ಬಿಜೆಪಿಗೆ ಸೇರ್ಪಡೆಯಾಗಿ ಅನುಪಮ್ ಜಾದವಪುರ ಕ್ಷೇತ್ರದಿಂದ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ. ಸದ್ಯ ಅನುಪಮ್ ವಿರುದ್ಧವಾಗಿ ಪ್ರಮುಖ ಬೆಂಗಾಲಿ ನಟಿ ಮಿಮಿ ಚಕ್ರವರ್ತಿ ಟಿಎಂಸಿಯಿಂದ ಸ್ಪರ್ಧಿಸುತ್ತಿದ್ದಾರೆ.

  • 15 ವರ್ಷದ ಹಿಂದಿನ ಬಿಹಾರ ಸ್ಥಿತಿಗೆ ಪಶ್ಚಿಮ ಬಂಗಾಳ ತಲುಪಿದೆ: ಚುನಾವಣಾ ಅಧಿಕಾರಿ

    15 ವರ್ಷದ ಹಿಂದಿನ ಬಿಹಾರ ಸ್ಥಿತಿಗೆ ಪಶ್ಚಿಮ ಬಂಗಾಳ ತಲುಪಿದೆ: ಚುನಾವಣಾ ಅಧಿಕಾರಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಾನೂನು ಸುವ್ಯವಸ್ಥೆಯ ಸದ್ಯದ ಪರಿಸ್ಥಿತಿ ಕಳೆದ 15 ವರ್ಷದ ಹಿಂದಿನ ಬಿಹಾರ ರಾಜ್ಯದ ಸ್ಥಿತಿಗೆ ತಲುಪಿದೆ ಎಂದು ಬಂಗಾಳ ವಿಶೇಷ ಚುನಾವಣಾ ಅಧಿಕಾರಿಯಾಗಿರುವ ಅಜಯ್ ನಾಯಕ್ ಹೇಳಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಆಯೋಗ ಮಲ್ಡಾ ಎಸ್‍ಪಿ ಅರ್ನಬ್ ಘೋಷ್ ಹಾಗೂ 6 ಜನ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ ಬಳಿಕ ಈ ಹೇಳಿಕೆಯನ್ನು ನಾಯಕ್ ಅವರು ನೀಡಿದ್ದಾರೆ. ಅಲ್ಲದೇ ಜನರು ರಾಜ್ಯದ ಪೊಲೀಸ್ ಇಲಾಖೆ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

    ನಾಯಕ್ ಅವರು 1984ರ ಐಎಎಸ್ ಬ್ಯಾಚ್ ಅಧಿಕಾರಿಯಾಗಿದ್ದು, ಬಿಹಾರ ಮಾಜಿ ಚುನಾವಣಾ ಅಧಿಕಾರಿಯಾಗಿದ್ದಾರೆ. ಸದ್ಯ ವಿಶೇಷ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಏಪ್ರಿಲ್ 23 ರಂದು ನಡೆಯುವ ಮೂರನೇ ಹಂತದ ಮತದಾನಕ್ಕೆ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದ್ದು, ಶೇ.92 ಬೂತ್ ಗಳಿಗೆ ಕೇಂದ್ರ ರಕ್ಷಣಾ ದಳದ ಯೋಧರು ರಕ್ಷಣೆ ನೀಡಲಿದ್ದಾರೆ ಎಂದು ವಿವರಿಸಿದರು. ಅಲ್ಲದೇ ಎಲ್ಲಾ ಕ್ಷೇತ್ರಗಳಿಗೂ ಸೂಕ್ತ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದರು.

    ಇತ್ತ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರಾದ ಸುಬ್ರತಾ ಬಕ್ಷಿ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ನಿವೃತ್ತ ಚುನಾವಣಾ ಅಧಿಕಾರಿಯನ್ನ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿ ಜವಾಬ್ದಾರಿ ನೀಡಿರುವ ಬಗ್ಗೆ ಪ್ರಸ್ತಾಪಿಸಿ ಅಚ್ಚರಿ ವ್ಯಕ್ತಪಡಿಸಿದ್ದರು.

  • ಧವನ್ ಪುತ್ರನಿಗೆ ‘ಬೇಬಿ ಸಿಟ್ಟರ್’ ಆದ ರಿಷಬ್ ಪಂತ್!

    ಧವನ್ ಪುತ್ರನಿಗೆ ‘ಬೇಬಿ ಸಿಟ್ಟರ್’ ಆದ ರಿಷಬ್ ಪಂತ್!

    ಕೋಲ್ಕತ್ತಾ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಗೆ ಬೇಬಿ ಸಿಟ್ಟರ್ ಆಗಿ ಉತ್ತಮ ಹೆಸರಿದೆ. ಕಳೆದ ಆಸೀಸ್ ಸರಣಿಯ ವೇಳೆ ಆಸ್ಟ್ರೇಲಿಯಾ ತಂಡ ನಾಯಕ ಟೀಮ್ ಪೈನ್ ಅವರನ್ನು ರಿಷಬ್ ಪಂತ್ ಕಾಲೆಳೆದು ಬೇಬಿ ಸಿಟ್ಟರ್ ಆಗುವಂತೆ ಸಲಹೆ ನೀಡಿದ್ದ ಬಳಿಕ ಈ ಮಾತು ಪಂತ್ ಹೆಸರಿನೊಂದಿಗೆ ಸೇರಿಕೊಂಡಿತ್ತು.

    ಸದ್ಯ ರಿಷಬ್ ಮಗುವಿನೊಂದಿಗೆ ಆಟವಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ರಿಷಬ್ ಕಾಲೆಳೆದಿದ್ದಾರೆ. ಡೆಲ್ಲಿ, ಕೋಲ್ಕತ್ತಾ ಪಂದ್ಯದ ವೇಳೆ ಧವನ್‍ರ ಮಗನೊಂದಿಗೆ ರಿಷಬ್ ಪಂತ್ ಆಡಿದ ಆಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಧವನ್ ಪುತ್ರ ಜೊರಾವರ್ ರೊಂದಿಗೆ ಸಮಯ ಕಳೆದಿದ್ದರು. ಟವೆಲ್ ಹಿಡಿದುಕೊಂಡು ಪಂತ್ ಧವನ್ ಪತ್ರನ್ನು ಮೇಲಕ್ಕೆತ್ತಿ ತಿರುಗಿಸಿ ಮುದ್ದು ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

     

    View this post on Instagram

     

    Proof that @RishabPant’s babysitting skills have reached another level ???? #KKRvDC #ThisIsNewDelhi #DelhiCapitals

    A post shared by Delhi Capitals (@delhicapitals) on

    ಪಂತ್ ಜೊರಾವರ್ ನನ್ನು ಎತ್ತಿ ಸುತ್ತಾಡಿಸಿದ್ದ ಬಗ್ಗೆ ಕೆಲ ಟ್ವಿಟ್ಟರ್ ಮಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅಕಸ್ಮಾತ್ ಹೆಚ್ಚು ಕಮ್ಮಿ ಆಗಿದ್ದರೆ ಏನಾಗುತ್ತಿತ್ತು ಎಂದು ಬರೆದುಕೊಂಡಿದ್ದಾರೆ. ಮಕ್ಕಳೊಂದಿಗೆ ಅಪಾಯಕಾರಿ ಆಟ ಆಡುವುದು ಅಷ್ಟು ಉತ್ತಮವಲ್ಲ ಎಂಬ ಸಲಹೆಗಳನ್ನ ಕೂಡ ಪಂತ್‍ಗೆ ನೀಡಿದ್ದಾರೆ. ಮತ್ತು ಕೆಲವರು ಪಂತ್ ಒಬ್ಬ ಉತ್ತಮ ಬೇಬಿ ಸಿಟ್ಟರ್ ಎಂದು ಈ ಮೂಲಕ ಪ್ರೂವ್ ಮಾಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

  • ‘ಕರ್ಮ’ವನ್ನು ಅನುಭವಿಸಿದ ಅಶ್ವಿನ್ – ನೆಟ್ಟಿಗರಿಂದ ಟ್ರೋಲ್

    ‘ಕರ್ಮ’ವನ್ನು ಅನುಭವಿಸಿದ ಅಶ್ವಿನ್ – ನೆಟ್ಟಿಗರಿಂದ ಟ್ರೋಲ್

    ಕೋಲ್ಕತ್ತಾ: ಕೆಕೆಆರ್ ಪಂದ್ಯದಲ್ಲಿ ತಂಡದ ನಾಯಕನಾಗಿ ತಪ್ಪು ಫೀಲ್ಡ್ ಸೆಟ್ ಮಾಡಿದ್ದ ಕಿಂಗ್ಸ್ ಇಲೆವೆನ್ ಪಂಬಾಜ್ ತಂಡದ ನಾಯಕ ಆರ್ ಅಶ್ವಿನ್ ಅವರನ್ನ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.

    ಹಿಂದಿನ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ ‘ಮಂಕಡ್’ ರನೌಟ್ ಮಾಡಿ ಭಾರೀ ಚರ್ಚೆಗೆ ಕಾರಣರಾಗಿದ್ದ ಆರ್ ಅಶ್ವಿನ್, ಕ್ರಿಕೆಟ್ ನಿಯಮಗಳ ಅಡಿಯಲ್ಲೇ ರನೌಟ್ ಮಾಡಿದ್ದಾಗಿ ಸಮರ್ಥನೆ ನೀಡಿದ್ದರು. ಆದರೆ ಮರು ಪಂದ್ಯದಲ್ಲೇ ಅದೇ ನಿಯಮಗಳನ್ನು ಮರೆತು ಫೀಲ್ಡಿಂಗ್ ನಿರ್ವಹಿಸಿ ಟ್ರೋಲ್ ಆಗಿದ್ದಾರೆ.

    ಪಂದ್ಯದ 16.5 ಓವರಿನ ಎಸೆತದಲ್ಲಿ ಕೆಕೆಆರ್ ತಂಡ ರಸೆಲ್ ಔಟಾಗಿದ್ದರು. ಈ ವೇಳೆ ನಿಮಯಗಳ ಅನ್ವಯ ಇನ್ ಸೈಡ್ ಸರ್ಕಲ್ ನಲ್ಲಿ 4 ಆಟಗಾರರು ಕಡ್ಡಾಯವಾಗಿ ಫೀಲ್ಡಿಂಗ್ ಮಾಡಬೇಕಿತ್ತು. ಆದರೆ ಅಶ್ವಿನ್ 3 ಆಟಗಾರನ್ನು ಮಾತ್ರ ನಿಯೋಜಿಸಿದ್ದರು. ಪರಿಣಾಮ ರಸೆಲ್ ಕ್ಲೀನ್ ಬೌಲ್ಡ್ ಆಗಿದ್ದರೂ ಕೂಡ ಜೀವದಾನ ಪಡೆದರು.

    ಬಳಿಕ ಸ್ಫೋಟಕ ಆಟ ಪ್ರದರ್ಶಿಸಿದ ರಸೆಲ್ 19 ಎಸೆತಗಳಲ್ಲಿ 48 ರನ್ ಸಿಡಿಸಿ ತಂಡದ ಗೆಲುವಿಗೆ ಕಾರಣರಾದರು. ಕೊನೆಯ ಓವರಿನಲ್ಲಿ ರಸೆಲ್ ಕ್ಯಾಚ್ ನೀಡಿ ಪೆವಿಲಿಯನ್‍ಗೆ ತೆರಳಿದರು. ಪಂದ್ಯದ ಬಳಿಕ ನಾಯಕನ ತಪ್ಪನ್ನೇ ಗುರಿ ಮಾಡಿ ಟ್ವೀಟ್ ಮಾಡಿರುವ ನೆಟ್ಟಿಗರು, ಅಶ್ವಿನ್ ‘ಕರ್ಮ’ವನ್ನು ಅನುಭವಿಸಿದ್ದಾರೆ ಎಂದು ಹೇಳಿ ಕಾಲೆಳೆಯುತ್ತಿದ್ದಾರೆ.

    https://twitter.com/Gowthaman_Rockz/status/1110953803245719553

  • ಪಾದಾರ್ಪಣೆ ಪಂದ್ಯದ ಮೊದಲ ಓವರಿನಲ್ಲೇ 25 ರನ್ ಕೊಟ್ಟ ಬೌಲರ್: ಯಾರು ಈ ‘ವರುಣ್ ಚಕ್ರವರ್ತಿ’?

    ಪಾದಾರ್ಪಣೆ ಪಂದ್ಯದ ಮೊದಲ ಓವರಿನಲ್ಲೇ 25 ರನ್ ಕೊಟ್ಟ ಬೌಲರ್: ಯಾರು ಈ ‘ವರುಣ್ ಚಕ್ರವರ್ತಿ’?

    ಕೋಲ್ಕತ್ತಾ: 2019ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಪಾದಾರ್ಪಣೆ ಮಾಡಿದ ವರುಣ್ ಚಕ್ರವರ್ತಿ ಮೊದಲ ಓವರಿನಲ್ಲೇ 25 ರನ್ ನೀಡಿ ದುಬಾರಿ ಬೌಲಿಂಗ್ ಮಾಡಿದ್ದಾರೆ.

    ವರುಣ್ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯ ಇದಾಗಿದ್ದು, ಇನ್ನಿಂಗ್ಸ್ ನ 2ನೇ ಓವರ್ ಬೌಲ್ ಮಾಡಲು ಅವಕಾಶ ಪಡೆದಿದ್ದರು. ಸ್ಟ್ರೈಕ್ ನಲ್ಲಿದ್ದ ಕೆಕೆಆರ್ ತಂಡದ ಸುನೀಲ್   ನರೇನ್ ಭರ್ಜರಿ ಬೌಂಡರಿ, ಸಿಕ್ಸರ್ ಗಳೊಂದಿಗೆ 25 ರನ್ ಸಿಡಿಸಿದ್ದಾರೆ.

    27 ವರ್ಷದ ವರುಣ್ ಕರ್ನಾಟಕದ ಬೀದರ್ ನಲ್ಲಿ 1991 ರಲ್ಲಿ ಜನಿಸಿದ್ದು, ತಮಿಳುನಾಡಿನ ಪರ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ವರುಣ್ ರನ್ನು 8.4 ಕೋಟಿಗೆ ಕಿಂಗ್ಸ್ ಇಲೆವೆನ್ ಖರೀದಿ ಮಾಡಿತ್ತು.

    ತಮಿಳುನಾಡು ಟಿ20 ಲೀಡ್, ಟಿಎನ್‍ಪಿಎಲ್ ನಲ್ಲಿ ಉತ್ತಮ ಅವಕಾಶ ಪಡೆದಿದ್ದರು. ಒಟ್ಟು 7 ಪಂದ್ಯಗಳಲ್ಲಿ 31 ವಿಕೆಟ್ ಕಬಳಿಸಿದ್ದರು. ಟೂರ್ನಿಯಲ್ಲಿ 4 ಓವರ್ ಗಳಲ್ಲಿ 28 ರನ್ ಮಾತ್ರ ನೀಡಿದ್ದರು. ಅಲ್ಲದೇ ವಿಜಯ್ ಹಜಾರೆ ಟ್ರೋಫಿಯಲ್ಲೂ 22 ವಿಕೆಟ್ ಕಬಳಿಸಿದ್ದರು. ಐಪಿಎಲ್ ಆರಂಭ 1 ಓವರಿನಲ್ಲೇ 25 ರನ್ ನೀಡಿ ನಿರಾಸೆ ಅನುಭವಿಸಿದರು. ಆದರೆ ಇದೇ ಪಂದ್ಯದಲ್ಲಿ ಮತ್ತೆ ತಿರುಗೇಟು ನೀಡಿದ ವರುಣ್ ತಮ್ಮ 3ನೇ ಓವರಿನಲ್ಲಿ ಕೇವಲ 1 ರನ್ ನೀಡಿ ವಿಕೆಟ್ ಕಬಳಿಸಿ ತಿರುಗೇಟು ನೀಡಿದರು. ಅಂತಿಮವಾಗಿ 3 ಓವರ್ ಗಳಲ್ಲಿ 35 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.

  • ಸಂಪ್ರದಾಯಬದ್ಧವಾಗಿ ನಡೆಯಿತು ಮರಗಳ ವಿಶೇಷ ಮದುವೆ

    ಸಂಪ್ರದಾಯಬದ್ಧವಾಗಿ ನಡೆಯಿತು ಮರಗಳ ವಿಶೇಷ ಮದುವೆ

    ಕೋಲ್ಕತ್ತಾ: ರಾಜಧಾನಿಯ 15 ಕಿ.ಮೀ. ದೂರದಲ್ಲಿರುವ ಸೋಡೆಪುರದಲ್ಲಿ ಎರಡು ಮರಗಳಿಗೆ ಸಂಪ್ರದಾಯಬದ್ಧವಾಗಿ ಎರಡು ಸಾವಿರ ಅತಿಥಿಗಳ ಸಮ್ಮುಖದಲ್ಲಿ ಮದುವೆ ಮಾಡಲಾಗಿದೆ. ಅತಿಥಿಗಳೆಲ್ಲ ಮದುವೆ ಆಯೋಜಕರು ಮತ್ತು ಕುಟುಂಬಸ್ಥರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ನವದಂಪತಿಯಿಂದ ಆಶೀರ್ವಾದ ಪಡೆದುಕೊಂಡು ಹಿಂದಿರುಗಿದ್ದಾರೆ.

    12 ವರ್ಷಗಳಿಂದಲೂ ಪ್ರಣಯ್ (ಆಲದ ಮರ) ಸೇಡೆಪುರದಲ್ಲಿಯೇ ಇದ್ದಾನೆ. ಪ್ರಣಯ್ 2 ವರ್ಷದವನಿದ್ದಾಗ ಆತನಿಗೆ ದೇಬರತಿ (ಅರಳಿ ಮರ) ಸಾಥ್ ನೀಡಿದ್ದಳು. ಕಳೆದು 10 ವರ್ಷಗಳಿಂದಲೂ ಪ್ರಣಯ್ ಮತ್ತು ದೇಬರತಿ ಜೊತೆಯಾಗಿಯೇ ಇದ್ದಾರೆ. ಅಂದಿನಿಂದ ಸೇಡೆಪುರದಲ್ಲಿರುವ ಮರಗಳು ಸ್ಥಳೀಯರಿಗೆ ಸ್ವಚ್ಛ ಗಾಳಿಯನ್ನು ನೀಡುತ್ತಾ ಬಂದಿದೆ. ಇತ್ತೀಚೆಗೆ ಸೋಮ ನಾಗ ಎಂಬ ಮಹಿಳೆ ಆಲದ ಮರವನ್ನು ಮತ್ತು ಸುನಿತಾ ಸರ್ಕಾರ ಎಂಬವರು ಅರಳಿ ಮರವನ್ನು ದತ್ತು ಪಡೆದುಕೊಂಡಿದ್ದರು.

     

    ಗೌತಮ್ ದಾಸ್ ಎಂಬವರ ಸಲಹೆಯ ಮೇರೆಗೆ ಎರಡು ಮರಗಳಿಗೆ ಮದುವೆ ಮಾಡಲು ಇಬ್ಬರ ಕುಟುಂಬಸ್ಥರು ನಿರ್ಧರಿಸಿ, ಎರಡು ಸಾವಿರ ಜನರಿಗೆ ಲಗ್ನ ಪತ್ರಿಕೆಯನ್ನು ನೀಡಿದ್ದರು. ಮದುವೆ ದಿನ ಸಂಪ್ರದಾಯದಂತೆ ಸೋಮನಾಗ ಎಲ್ಲ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿ ಉಪವಾಸದ ವ್ರತ ಪಾಲನೆ ಮಾಡಿದ್ದರು. ಸೋಮನಾಗ ಹಾಗು ಪತಿ ಸುಪ್ರಕಾಶ್ ನಾಗ್ ಆಲದ ಮರದ (ವರ) ತಂದೆ-ತಾಯಿ ಸ್ಥಾನದಲ್ಲಿ ನಿಂತು ಎಲ್ಲ ಅತಿಥಿಗಳನ್ನು ಬರಮಾಡಿಕೊಂಡರು.

    ಅರಳಿ ಮರದ (ವಧು) ತಂದೆ-ತಾಯಿ ಸ್ಥಾನದಲ್ಲಿ ಸುನಿತಾ ಸರ್ಕಾರ್ ಹಾಗು ಅವರ ಪತಿ ಕಮಲ್ ನಿಂತು ಮದುವೆ ಮಾಡಿದರು. ಆರು ಅಡಿ ದೂರದಲ್ಲಿರುವ ಎರಡು ಮರಗಳನ್ನು ಅಲಂಕರಿಸಲಾಗಿತ್ತು. ಆಲದ ಮರಕ್ಕೆ ಪಂಚೆ ತೊಡಿಸಿದ್ರೆ, ಅರಳಿ ಮರಕ್ಕೆ ಬನಾರಸ ಸೀರೆಯನ್ನು ತೊಡಿಸಲಾಗಿತ್ತು.

    ಮಂತ್ರೋಚ್ಛಾರಣೆ, ಗಟ್ಟಿಮೇಳದ ಸಂಗೀತದ ಮಧ್ಯೆ ಗೋಧುಳಿ ಶುಭ ಮುಹೂರ್ತದಲ್ಲಿ ಮದುವೆ ನಡೆಯಿತು. ಮದುವೆ ಆಗಮಿಸಿದ್ದ ಎಲ್ಲ ಅತಿಥಿಗಳಿಗೆ ಸ್ವೀಟ್ ಜೊತೆ ಕಿಚಡಿಯನ್ನು ನೀಡಲಾಯ್ತು. ಬ್ಯಾಂಡ್ ಪಾರ್ಟಿ, ವಿಡಿಯೋ ಗ್ರಾಫರ್, ಫೋಟೋಗ್ರಾಫರ್ ಗಳನ್ನು ಮದುವೆಗೆ ಕರೆಸಿ ಸುಂದರ ಕ್ಷಣಗಳನ್ನು ಸೆರೆಹಿಡಿಯಲಾಯ್ತು. ಅತಿಥಿಗಳು ವಧು-ವರನ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು.