Tag: kolkata

  • ಬಡವರಿಗೆ ಉಚಿತ ಮಾಸ್ಕ್ ಹಂಚಿದ ಸಂಸದೆ ನುಸ್ರತ್ ಜಹಾನ್

    ಬಡವರಿಗೆ ಉಚಿತ ಮಾಸ್ಕ್ ಹಂಚಿದ ಸಂಸದೆ ನುಸ್ರತ್ ಜಹಾನ್

    ಕೋಲ್ಕತ್ತಾ: ಟಿಎಂಸಿ ಸಂಸದೆ, ನಟಿ ನುಸ್ರತ್ ಜಹಾನ್ ಬಡವರಿಗೆ ಉಚಿತ ಮಾಸ್ಕ್ ಹಂಚುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ನುಸ್ರತ್ ತಮ್ಮ ಇನ್‍ಸ್ಟಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ನುಸ್ರತ್ ಕೊರೊನಾದಿಂದ ತಪ್ಪಿಸಿಕೊಳ್ಳಲು ಜನರಿಗೆ ಉಚಿತ ಮಾಸ್ಕ್ ಹಂಚುತ್ತಿದ್ದಾರೆ. ನುಸ್ರತ್ ಅವರ ಈ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಇನ್‍ಸ್ಟಾದಲ್ಲಿ ನುಸ್ರತ್, ಬನ್ನಿ. ಈ ವೈರಸ್‍ನಿಂದ ತಪ್ಪಿಸಿಕೊಳ್ಳಲು ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗಳ್ಳೋಣ ಹಾಗೂ ಅಗತ್ಯ ಇರುವವರಿಗೆ ಸಹಾಯ ಮಾಡೋಣ. ಇಂತಹ ಸಂದರ್ಭಗಳಲ್ಲಿ ತರಕಾರಿಗಳನ್ನು ಮತ್ತು ದೈನಂದಿನ ಜೀವನದ ವಸ್ತುಗಳನ್ನು ಒದಗಿಸುವ ಜನರಿಗೆ ಸಹಾಯ ಮಾಡಲು ಮುಂದಾಗಿ ಎಂದು ಬರೆದುಕೊಂಡಿದ್ದಾರೆ.

    ಅಲ್ಲದೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲರಿಗೂ ಸಹಾಯ ಮಾಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ. ಅಗತ್ಯವಿರುವವರಿಗೆ ಸಹಾಯ ಮಾಡಲು ಮುಂದಾಗಿ. ಹಾಗೆಯೇ ನಿಮ್ಮ ಆರೋಗ್ಯ ಹಾಗೂ ಎಲ್ಲರ ಆರೋಗ್ಯವನ್ನು ನೋಡಿಕೊಳ್ಳಿ ಮತ್ತು ಒಟ್ಟಾಗಿ ಹೋರಾಡಿ ಎಂದು ಪೋಸ್ಟ್ ಮಾಡಿದ್ದಾರೆ.

    ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಪತ್ರಿದಿನ ಹೆಚ್ಚಾಗುತ್ತಿದೆ. ಕೊರೊನಾ ಭಯದಿಂದ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ಮನೆಯಲ್ಲಿಯೇ ತಮ್ಮ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗ ನುಸ್ರತ್ ಜನರಿಗೆ ಸಹಾಯ ಮಾಡಲು ರಸ್ತೆಗೆ ಇಳಿದಿದ್ದನು ನೋಡಿ ನೆಟ್ಟಿಗರು ಅವರನ್ನು ಹೊಗಳುತ್ತಿದ್ದಾರೆ.

  • ಕರ್ನಾಟಕದ ರಣಜಿ ಕನಸು ಭಗ್ನ- 13 ವರ್ಷದ ಬಳಿಕ ಫೈನಲ್ ಪ್ರವೇಶಿಸಿದ ಬಂಗಾಳ

    ಕರ್ನಾಟಕದ ರಣಜಿ ಕನಸು ಭಗ್ನ- 13 ವರ್ಷದ ಬಳಿಕ ಫೈನಲ್ ಪ್ರವೇಶಿಸಿದ ಬಂಗಾಳ

    ಕೋಲ್ಕತ್ತಾ: ರಣಜಿ ಕ್ರಿಕೆಟ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿ ಆರಂಭಿಸಿದ ಕರ್ನಾಟಕ ತಂಡದ ಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ವಿರುದ್ಧ ಬಂಗಾಳ 174 ರನ್ ಅಂತರದಿಂದ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ.

    ಕರ್ನಾಟಕದ ತಂಡದ ವಿರುದ್ಧ ಜಯದೊಂದಿಗೆ ಬಂಗಾಳ 2006-07ರ ಟೂರ್ನಿಯ ಬಳಿಕ ಇದೇ ಮೊದಲ ಬಾರಿಗೆ ರಣಜಿ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶ ಮಾಡಿದೆ. ಇತ್ತ ಲೀಗ್ ಹಾಗೂ ಕ್ವಾರ್ಟರ್ ಫೈನಲಿನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಸತತ ಮೂರನೇ ಬಾರಿಗೆ ಸೆಮಿಫೈನಲ್ ಹಂತದಲ್ಲಿ ಕರ್ನಾಟಕ ಟೂರ್ನಿಯಿಂದ ಹೊರಬಿದ್ದಿದೆ.

    3 ವಿಕೆಟ್ ನಷ್ಟಕ್ಕೆ 98 ರನ್ ಗಳಿಂದ 4ನೇ ದಿನದಾಟ ಆರಂಭ ಮಾಡಿದ ಕರ್ನಾಟಕ ತಂಡ ಬಂಗಾಳ ವೇಗದ ಬೌಲರ್, ಮಜುಂದರ್ ದಾಳಿಗೆ ಸಿಲುಕಿದ ತಂಡ 55.3 ಓವರ್ ಗಳಲ್ಲಿ 177 ರನ್‍ಗಳಿಗೆ ಆಲೌಟ್ ಆಗುವ ಮೂಲಕ ಟೂರ್ನಿಯಿಂದ ಹೊರ ನಡೆಯಿತು. ತಂಡಕ್ಕೆ ಆಸೆಯಾಗುವ ನಿರೀಕ್ಷೆಯೊಂದಿಗೆ ಆಗಮಿಸಿದ ಕೆಎಲ್ ರಾಹುಲ್ ಶೂನ್ಯ ಸಾಧನೆಯೊಂದಿಗೆ ನಿರಾಸೆ ಮೂಡಿಸಿದರೆ, ದೇವ್‍ದತ್ತ್ ಪಡಿಕ್ಕಲ್ ಪಾತ್ರ 129 ಎಸೆತಗಳಲ್ಲಿ 62 ಸಿಡಿಸಿ ಹೋರಾಟ ತೋರಿದರು. ಉಳಿದಂತೆ ಅಂತಿಮ ಹಂತದಲ್ಲಿ ಅಭಿಮನ್ಯು ಮಿಥುನ್ 30 ಎಸೆತಗಳಲ್ಲಿ 38 ರನ್ ಗಳಿಸಿದ್ದು ತಂಡದ 2ನೇ ಇನ್ನಿಂಗ್ಸ್‍ನಲ್ಲಿ ಗಳಿಸಿದ 2ನೇ ಅತ್ಯಧಿಕ ಮೊತ್ತವಾಗಿದೆ.

    ಪಂದ್ಯದ ಆರಂಭದಲ್ಲಿ ಗೆಲುವಿನ ನಿರೀಕ್ಷೆ ಮೂಡಿಸಿದ್ದ ಕರ್ನಾಟಕ ತಂಡದ ಆಟಗಾರರು ಟಾಸ್ ಗೆದ್ದ ಬಂಗಾಳ ತಂಡದವನ್ನು ಮೊದಲ ದಿನದಾಟದಲ್ಲೇ 67 ರನ್‍ಗಳಿಗೆ 6 ವಿಕೆಟ್ ಗಳಿಸಿ ಮಿಂಚಿದ್ದರು. ಆದರೆ ಅನುಸ್ತೂಪ್ ಮುಜುಮ್ದಾರ್ ಅಜೇಯ ಶತಕ (149 ರನ್) ಬಂಗಾಳ ತಂಡವನ್ನು ಸೋಲಿನಿಂದ ದೂರ ಮಾಡಿತ್ತು. ಪರಿಣಾಮ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

    ಟೂರ್ನಿಯಲ್ಲಿ ತಮಿಳುನಾಡು ತಂಡದ ವಿರುದ್ಧ 26 ರನ್ ಅಂತರದ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದ ಕರ್ನಾಟಕ ತಂಡ ಆ ಬಳಿಕ ಉತ್ತರ ಪ್ರದೇಶ, ಹಿಮಾಚಲ ಪ್ರದೇಶದ ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಪಡೆದಿತ್ತು. ಆದರೆ ಕ್ವಾಟರ್ ಫೈನಲಿನಲ್ಲಿ ಜಮ್ಮು ಕಾಶ್ಮೀರದ ವಿರುದ್ಧ 167 ರನ್ ಗಳಿಂದ ಗೆಲು ಸಾಧಿಸಿ ಸೆಮಿ ಪ್ರವೇಶಿಸಿತ್ತು.

    ಸಂಕ್ಷಿಪ್ತ ಸ್ಕೋರ್: ಬಂಗಾಳ ಮೊದಲ ಇನ್ನಿಂಗ್ಸ್- 321/10
    ಕರ್ನಾಟಕ ಮೊದಲ ಇನ್ನಿಂಗ್ಸ್- 122/10
    ಬಂಗಾಳ 2ನೇ ಇನ್ನಿಂಗ್ಸ್- 161/10
    ಕರ್ನಾಟಕ 2ನೇ ಇನ್ನಿಂಗ್- 177/10
    ಫಲಿತಾಂಶ: ಬಂಗಾಳಕ್ಕೆ 174 ರನ್ ಗೆಲುವು
    ಪಂದ್ಯ ಶ್ರೇಷ್ಠ ಪ್ರಶಸ್ತಿ: ಅನುಸ್ತೂಪ್ ಮಜುಂದಾರ್

  • ನಾವು ಅನ್ಯಾಯ ಸಹಿಸುವುದಿಲ್ಲ- ದೀದಿ ನೆಲದಲ್ಲಿ ವಿಪಕ್ಷಗಳ ವಿರುದ್ಧ ಶಾ ಗುಡುಗು

    ನಾವು ಅನ್ಯಾಯ ಸಹಿಸುವುದಿಲ್ಲ- ದೀದಿ ನೆಲದಲ್ಲಿ ವಿಪಕ್ಷಗಳ ವಿರುದ್ಧ ಶಾ ಗುಡುಗು

    – ದೇಶದ್ರೋಹಿಗಳಿಗೆ ಗುಂಡಿಕ್ಕಿ: ಸಮಾವೇಶದಲ್ಲಿ ಕೇಳಿಬಂದ  ಕೂಗು

    ಕೋಲ್ಕತ್ತಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವುದನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧಿಸಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.

    ಕೋಲ್ಕತ್ತಾದಲ್ಲಿ ‘ನಾವು ಅನ್ಯಾಯವನ್ನು ಸಹಿಸುವುದಿಲ್ಲ’ ಎಂಬ ಅಭಿಯಾನವನ್ನು ಇಂದು ಪ್ರಾರಂಭಿಸಿ ಮಾತನಾಡಿದ ಅವರು, ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ, ಎಡಪಂಥೀಯರೊಂದಿಗೆ ಸೇರಿ ರಾಮ್ ಮಂದಿರ ನಿರ್ಮಾಣವನ್ನು ವಿರೋಧಿಸಿದರು. ಅಷ್ಟೇ ಅಲ್ಲದೆ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಲ್ಪಸಂಖ್ಯಾತರನ್ನು ಎತ್ತಿ ಹಿಡಿದರು ಎಂದು ದೂರಿದರು.

    ‘ಲೋಕಸಭಾ ಚುನಾವಣೆಯ ಸಮಯದಲ್ಲಿ ನೀವು ನಮ್ಮನ್ನು ತಡೆಯಲು ಶ್ರಮಿಸಿದ್ದೀರಿ. ಹೆಲಿಕಾಪ್ಟರ್ ಇಳಿಸಲು ಅವಕಾಶ ನೀಡಲಿಲ್ಲ. ಸಮಾವೇಶಗಳಿಗೆ ಅವಕಾಶ ನೀಡಲಿಲ್ಲ. ಬಿಜೆಪಿ ಕಾರ್ಯಕರ್ತರ ಮೇಲೆ ಗುಂಡು ಹಾರಿಸಲಾಗಿತ್ತು. ಬಂಗಾಳದಲ್ಲಿ ಗಲಭೆಗಳು ನಡೆದವು, ರೈಲುಗಳು ಸುಟ್ಟುಹೋದವು, ಅಮಾಯಕರು ಕೊಲ್ಲಲ್ಪಟ್ಟರು. ನಮ್ಮ 40ಕ್ಕೂ ಹೆಚ್ಚು ಕಾರ್ಯಕರ್ತರು ಕೊಲೆಯಾದರು ಎಂದು ಮಮತಾ ಬ್ಯಾನರ್ಜಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

    ನೀವು ತೃಣಮೂಲ ಮತ್ತು ಎಡಪಂಥೀಯರಿಗೆ ಇಷ್ಟು ವರ್ಷಗಳ ಕಾಲ ಅವಕಾಶ ಕೊಟ್ಟಿದ್ದೀರಿ. ನಮಗೆ ಐದು ವರ್ಷಗಳ ಕಾಲ ಆಡಳಿತ ನಡೆಸಲು ಅವಕಾಶ ಕೊಡಿ. ನಾವು ಪಶ್ಚಿಮ ಬಂಗಾಳನ್ನು ಅಭಿವೃದ್ಧಿಗೊಳಿಸುತ್ತೇವೆ ಎಂದು ಶಾ ಮತದಾರರಲ್ಲಿ ಮನವಿ ಮಾಡಿಕೊಂಡರು.

    ಬಂಗಾಳದ ಅಭಿವೃದ್ಧಿಗೆ ದೀದಿಯಿಂದ ಫುಲ್ ಸ್ಟಾಪ್:
    ಪಶ್ಚಿಮ ಬಂಗಾಳವನ್ನು ಟಿಎಂಸಿ ಮತ್ತು ಎಡಪಂಥೀಯರು ಸಾಲಕ್ಕೆ ಮುಳುಗಿಸಿದ್ದಾರೆ. ದೀದಿ ನೇತೃತ್ವದ ಸರ್ಕಾರವು ಮೂರು ಲಕ್ಷ ಕೋಟಿ ರೂ. ಸಾಲ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳು ಪಶ್ಚಿಮ ಬಂಗಾಳದಲ್ಲಿ ಜಾರಿಗೆ ತರಲು ಮಮತಾ ಬ್ಯಾನರ್ಜಿ ಅನುಮತಿ ನೀಡುತ್ತಿಲ್ಲ. ಅವರು ಬಂಗಾಳದ ಅಭಿವೃದ್ಧಿಯನ್ನು ನಿಲ್ಲಿಸಿದ್ದಾರೆ. ರೈತರಿಗಾಗಿ ಪ್ರಾರಂಭಿಸಲಾದ ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತರಲಿಲ್ಲ. ರೈತರು ಸಾಲದಲ್ಲಿದ್ದಾರೆ. ಆದರೆ ಮಮತಾ ಬ್ಯಾನರ್ಜಿ ದುರಹಂಕಾರದಲ್ಲಿದ್ದಾರೆ. ಬಂಗಾಳದಲ್ಲಿ ಭ್ರಷ್ಟಾಚಾರ ಚಾಲ್ತಿಯಲ್ಲಿದೆ. ಸಿಂಡಿಕೇಟ್ ಸರ್ಕಾರದ ಆಶ್ರಯದಲ್ಲಿ ನಡೆಯುತ್ತಿದೆ. ಬಿಜೆಪಿ ಸರ್ಕಾರ ರಚನೆಯಾದ ನಂತರ ಅಂತಹವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

    ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯನ್ನು ನಿಷೇಧಿಸಿದ್ದಾರೆ. ಜನರು ಪೂಜಿ ಸಲ್ಲಿಸುವುದಕ್ಕೂ ಹೈಕೋರ್ಟಿಗೆ ಹೋಗಬೇಕಾಗಿತ್ತು. ರಾಮನವಮಿಯನ್ನು ಪಾಲಿಸಲು ದೀದಿ ಅನುಮತಿಸುವುದಿಲ್ಲ. ಸರಸ್ವತಿ ಪೂಜೆಯನ್ನು ಶಾಲೆಗಳಲ್ಲಿ ತಡೆಯಲಾಗಿದೆ ಎಂದು ದೂರಿದರು.

    ರಾಜ್ಯದಲ್ಲಿ ಅನ್ಯಾಯ, ಭ್ರಷ್ಟಾಚಾರ, ಗಲಭೆ, ನಿರುದ್ಯೋಗ ಹೆಚ್ಚಾಗುತ್ತದೆ ಎಂದು ಗುಡುಗಿದರು. ಆಗ ಕೆಲ ಕಾರ್ಯಕರ್ತರು ‘ದೇಶದ್ರೋಹಿಗಳನ್ನು ಶೂಟ್ ಮಾಡಿ’ ಎಂಬ ಘೋಷಣೆ ಕೂಗಿದರು.

    ಇದಕ್ಕೂ ಮುನ್ನ ಅಮಿತ್ ಶಾ ಅವರು ಕೋಲ್ಕತ್ತಾ ತಲುಪಿದಾಗ ತೃಣಮೂಲ ಕಾಂಗ್ರೆಸ್ ಮತ್ತು ಎಐವೈಎಲ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೆ ಕಪ್ಪು ಧ್ವಜಗಳನ್ನು ತೋರಿಸಿ ಶಾ ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದರು. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ಕೋಲ್ಕತ್ತಾದ ಅನೇಕ ಸ್ಥಳಗಳಲ್ಲಿ ತೃಣಮೂಲ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.

  • ಬಿಟ್ಟು ಹೋದ ಪ್ರಿಯಕರನಿಗಾಗಿ ನಂದಿಬೆಟ್ಟದ ಬಳಿ 2-3 ತಿಂಗಳಿಂದ ಕಾಯ್ತಿರೋ ಯುವತಿ

    ಬಿಟ್ಟು ಹೋದ ಪ್ರಿಯಕರನಿಗಾಗಿ ನಂದಿಬೆಟ್ಟದ ಬಳಿ 2-3 ತಿಂಗಳಿಂದ ಕಾಯ್ತಿರೋ ಯುವತಿ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಂದಿಬೆಟ್ಟದ ಅಂಚಿನಲ್ಲೇ ಇರುವ ಕಾರಹಳ್ಳಿ ಗ್ರಾಮದಲ್ಲಿ ಕಳೆದ 2-3 ತಿಂಗಳುಗಳಿಂದ ಅಪರಿಚಿತ ಯುವತಿಯೊಬ್ಬಳು ಮಾನಸಿಕ ಅಸ್ವಸ್ಥೆಯ ರೀತಿ ವರ್ತನೆ ಮಾಡುತ್ತಾ ನಂದಿಬೆಟ್ಟದ ರಸ್ತೆಯಲ್ಲಿ ಅಲೆದಾಡುತ್ತಿದ್ದಳು.

    ಗ್ರಾಮದ ಬಸ್ ನಿಲ್ದಾಣ, ಬೇಕರಿ, ಸೇರಿದಂತೆ ನಂದಿಬೆಟ್ಟದ ಕಡೆಯ ರಸ್ತೆಯುದ್ದಕ್ಕೂ ನಡೆದುಕೊಂಡು ಹೋಗುವುದು ಮರಳಿ ವಾಪಸ್ ಬಂದು ರಾತ್ರಿ ಬ್ಯಾಂಕಿನ ಸಿಸಿಟಿವಿ ಕೆಳಭಾಗದಲ್ಲಿ ಮಲಗುತ್ತಿದ್ದಳು. ಮತ್ತೆ ಬೆಳಾಗಾದರೆ ಇದೇ ಕಾಯಕ ಮಾಡುತ್ತಿದ್ದಳು. ಯಾರೋ ಮಾನಸಿಕ ಅಸ್ವಸ್ಥೆ ಹುಚ್ಚಿ ಎಂದು ಗ್ರಾಮಸ್ಥರು ಸುಮ್ಮನಾಗಿದ್ದರು. ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ, ಯಾರಾದರೂ ತಿನ್ನಲೂ ಏನಾದರೂ ಕೊಟ್ಟರೂ ತಿನ್ನುತ್ತಿರಲಿಲ್ಲ.

    ಹೀಗಾಗಿ 2-3 ತಿಂಗಳು ಗಳಿಂದ ಯುವತಿಯ ಇದೇ ರೀತಿಯ ವರ್ತನೆ ಕಂಡು ಗ್ರಾಮಸ್ಥರು ಯುವತಿಯ ಏನಾದರೂ ಅನಾಹುತ ಆಗಬಹುದು ಅಂತ ಯುವತಿಯನ್ನ ವಿಚಾರಿಸಲು ಮುಂದಾಗಿದ್ದಾರೆ. ಆದರೆ ಆಕೆಗೆ ಕನ್ನಡ ಭಾಷೆ ಅರ್ಥ ಆಗುತ್ತಿರಲಿಲ್ಲ. ಗ್ರಾಮಸ್ಥರಿಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಗ್ರಾಮದಲ್ಲಿ ಹಿಂದಿ ಮಾತನಾಡುತ್ತಿದ್ದ ಹಸಿನಾ ಎಂಬಾಕೆಯನ್ನ ಕರೆಸಿದ್ದು, ಆಗ ಆಸಲಿ ವಿಷಯ ಗೊತ್ತಾಗಿದೆ.

    ಅರ್ಧದಾರಿಯಲ್ಲೇ ಬಿಟ್ಟು ಹೋದ ಪ್ರಿಯಕರ
    ಕಾರಹಳ್ಳಿ ಗ್ರಾಮಕ್ಕೆ ತನ್ನ ಪ್ರಿಯಕರ ಜೊತೆ ಬಂದಿದ್ದ ಈ ಯುವತಿ, ಹಸೀನಾ ಮನೆ ಪಕ್ಕದಲ್ಲೇ ವಾಸವಾಗಿದ್ದರಂತೆ. ಪದೇ ಪದೇ ಸಣ್ಣ ಸಣ್ಣ ವಿಚಾರಗಳಿಗೂ ಗಲಾಟೆ ಮಾಡಿಕೊಳ್ಳುತ್ತಿದ್ದರು. ಆದರೆ ಒಂದು ದಿನ ಊರಿಗೆ ಹೋಗೋಣ ಎಂದು ಕರೆದುಕೊಂಡು ಹೋದ ಪ್ರಿಯಕರ ಅಜಯ್ ತನ್ನನ್ನ ಅರ್ಧದಾರಿಯಲ್ಲೇ ಬಿಟ್ಟು ಹೋಗಿದ್ದಾನೆ ಅಂತ ಈ ಯುವತಿ ಹೇಳುತ್ತಿದ್ದಾಳೆ.

    ಯುವತಿ ಹೇಳಿರುವ ಪ್ರಕಾರ ತಾನು ಕೋಲ್ಕತ್ತಾ ಮೂಲದವಳಾಗಿದ್ದು ತನ್ನನ್ನ ಪ್ರೀತಿಸಿದ ಅಜಯ್ ಎಂಬಾತ ಇಲ್ಲಿಗೆ ಕರೆದುಕೊಂಡು ಬಂದಿದ್ದ. ಆದರೆ ಊರಿಗೆ ವಾಪಸ್ ಹೋಗೋಣ ಎಂದು ಕರೆದುಕೊಂಡು ಹೋದವ ನನ್ನನ್ನ ಬಿಟ್ಟು ಹೋಗಿದ್ದಾನೆ. ಹೀಗಾಗಿ ಮರಳಿ ಅಜಯ್ ತನಗಾಗಿ ಇದೇ ಗ್ರಾಮಕ್ಕೆ ಬರುತ್ತಾನೆ ಎಂದು ತಾನು ಕಾಯುತ್ತಿರುವುದಾಗಿ ಹಿಂದಿ ಭಾಷೆಯಲ್ಲಿ ಹೇಳಿದ್ದಾಳೆ. ಯುವತಿಯ ಕಷ್ಟಕ್ಕೆ ಮನಸೋತ ಗ್ರಾಮಸ್ಥರು ಆಕೆಯನ್ನ ಸದ್ಯ ಮಹಿಳಾ ಸ್ವಾಂತಾನ ಕೇಂದ್ರಕ್ಕೆ ಕಳುಹಿಸಿದ್ದು, ಅಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಸದ್ಯ ಮಾನಸಿಕವಾಗಿ ಜರ್ಜರಿತಳಾಗಿರುವ ಯುವತಿ ಸರಿಯಾಗಿ ಪ್ರತಿಕ್ರಿಯೆ ಕೊಡುತ್ತಿಲ್ಲ.

  • ಕೆಲಸಕ್ಕೆಂದು ಮನೆಗೆ ಕರ್ಕೊಂಡು ಹೋದ ಪತ್ನಿ- ಯುವತಿ ಜೊತೆ ಪತಿ ಸೆಕ್ಸ್

    ಕೆಲಸಕ್ಕೆಂದು ಮನೆಗೆ ಕರ್ಕೊಂಡು ಹೋದ ಪತ್ನಿ- ಯುವತಿ ಜೊತೆ ಪತಿ ಸೆಕ್ಸ್

    – ಒಪ್ಪಿಗೆಯ ಮೇರೆಗೆ ಲೈಂಗಿಕ ಸಂಬಂಧ
    – ಪತಿ, ಪತ್ನಿ ಇಬ್ಬರೂ ಅರೆಸ್ಟ್

    ಕೋಲ್ಕತ್ತಾ: ಯುವತಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿದ ಒಂದು ವಾರದ ನಂತರ ಪತಿ ಮತ್ತು ಪತ್ನಿ ಇಬ್ಬರನ್ನೂ ಪೊಲೀಸರು ಬಂಧಿಸಿರುವ ಘಟನೆ ಕೋಲ್ಕತ್ತಾದ ಬಾಗಜಾಟಿನ್‍ನಲ್ಲಿ ನಡೆದಿದೆ.

    ಆರೋಪಿ ತಮ್ಮ ಬಾಡಿಗೆ ಮನೆಯಲ್ಲಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಎಂಟು ದಿನಗಳ ಹಿಂದೆ ವ್ಯಕ್ತಿಯೊಬ್ಬ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಪತುಲಿ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಳು.

    ದೂರು ದಾಖಲಿಸಿದ ನಂತರ ಪೊಲೀಸರು ಆರೋಪಿಗಳ ನಿವಾಸಕ್ಕೆ ತೆರಳಿ ಅವರನ್ನು ಬಂಧಿಸಿದ್ದಾರೆ. ಸದ್ಯಕ್ಕೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

    ಆರೋಪಿ, ಪತ್ನಿ ಬೆಲೆಘಾಟಾದ ಬ್ಯಾಗ್ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಸಂತ್ರಸ್ತೆ ಮತ್ತು ಆರೋಪಿ ಪತಿ ನಡುವಿನ ಲೈಂಗಿಕ ಸಂಬಂಧ ಸಹಮತದಿಂದ ಕೂಡಿತ್ತು ಎಂದು ಆರೋಪಿಗಳಾಗಿರುವ ದಂಪತಿ ಪೊಲೀಸರ ಬಳಿ ಹೇಳಿದ್ದಾರೆ.

    ಯುವತಿ ಮತ್ತು ಆರೋಪಿ ಪತ್ನಿ ದಕ್ಷಿಣ ಕೋಲ್ಕತ್ತಾದ ದೇವಾಲಯದ ಹೊರಗೆ ಇಬ್ಬರು ಮಾತನಾಡಿದ್ದರು. ಈ ವೇಳೆ ಒಬ್ಬರಿಗೊಬ್ಬರು ಪರಿಚಯವಾಗಿದೆ. ಆಗ ಯುವತಿ ನನಗೆ ಕೆಲಸವಿಲ್ಲ ಮತ್ತು ನಮ್ಮ ತಂದೆಯ ಆರೋಗ್ಯವೂ ಸರಿಯಲ್ಲ ಎಂದು ಆರೋಪಿ ಪತ್ನಿಯ ಜೊತೆ ಹೇಳಿಕೊಂಡಿದ್ದೆ. ನಂತರ ಆಕೆ ಕೆಲಸ ನೀಡುವ ನೆಪದಲ್ಲಿ ನನ್ನನ್ನು ಮನೆಗೆ ಕರೆದುಕೊಂಡು ಹೋಗಿದ್ದಳು. ಆದರೆ ಆಕೆಯ ಪತಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ.

    ಫೆಬ್ರವರಿ 9 ರಂದು ಆರೋಪಿ ಯುವತಿಯ ಒಪ್ಪಿಗೆಯ ಮೇರೆಗೆ ಸೆಕ್ಸ್ ಮಾಡಿದ್ದನು. ಅವನ ಪತ್ನಿ ಗರ್ಭಧರಿಸಲಾಗದ ಕಾರಣ ಯುವತಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದನು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.

    ಆರೋಪಿಗಳಿಗೆ ಮದುವೆಯಾಗಿ ಐದು ವರ್ಷಗಳಾಗಿದ್ದು, ಮಕ್ಕಳಿಲ್ಲ. ಮಹಿಳೆಗೆ ಎರಡು ಬಾರಿ ಗರ್ಭಪಾತವಾಗಿದೆ. ಆಗ ವೈದ್ಯರು ಮತ್ತೆ ಗರ್ಭಿಣಿಯಾಗದಂತೆ ಸಲಹೆ ನೀಡಿದ್ದರು. ಹೀಗಾಗಿ ಮಹಿಳೆ ಗರ್ಭಧರಿಸಲು ಸಾಧ್ಯವಾಗದ ಕಾರಣ ಸಂತ್ರಸ್ತೆಯನ್ನು ಸಂಪರ್ಕಿಸಿದ್ದಾಳೆ. ಗರ್ಭಧಾರಣೆ ಮತ್ತು ಮಗುವಿಗೆ ಬದಲಾಗಿ ಅವರು ತಮ್ಮ ಗ್ರಾಮದಲ್ಲಿ ಸಂತ್ರಸ್ತೆಗೆ ದೈನಂದಿನ ಆಹಾರ, ಹಣ ಮತ್ತು ಭೂಮಿಯನ್ನು ನೀಡಿದ್ದರು ಎಂದು ಆರೋಪಿಗಳು ಹೇಳಿದ್ದಾರೆ. ಹೀಗಾಗಿ ನಾವು ಅವರ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡು, ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದೇವೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

  • ಸೀರಿಯಲ್‍ನಲ್ಲಿ ಪ್ರಮುಖ ಪಾತ್ರ ಸಿಕ್ಕಿಲ್ಲವೆಂದು ನಟಿ ಆತ್ಮಹತ್ಯೆ

    ಸೀರಿಯಲ್‍ನಲ್ಲಿ ಪ್ರಮುಖ ಪಾತ್ರ ಸಿಕ್ಕಿಲ್ಲವೆಂದು ನಟಿ ಆತ್ಮಹತ್ಯೆ

    – ವಿದ್ಯಾಭ್ಯಾಸ ಮುಂದುವರಿಸಲು ಹುಟ್ಟೂರಿನಿಂದ ಬಂದಿದ್ರು
    – ನೇಣು ಬಿಗಿದುಕೊಂಡು ಕಿರುತೆರೆ ನಟಿ ಸೂಸೈಡ್

    ಕೋಲ್ಕತ್ತಾ: ಸೀರಿಯಲ್‍ನಲ್ಲಿ ಪ್ರಮುಖ ಪಾತ್ರ ಸಿಕ್ಕಿಲ್ಲವೆಂದು ಬಂಗಾಳಿ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ್‍ನಲ್ಲಿ ನಡೆದಿದೆ.

    ಸುಬರ್ನಾ ಜಾಶ್ (23) ಆತ್ಮಹತ್ಯೆ ಮಾಡಿಕೊಂಡ ನಟಿ. ಭಾನುವಾರ ರಾತ್ರಿ ಪೋಷಕರು ಸುಬರ್ನಾ ಜಾಶ್ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ್ದಾರೆ. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ನಟಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ನಟಿಯ ದೇಹವನ್ನು ಸೋಮವಾರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಟಿ ಸುಬರ್ನಾ ಜಾಶ್ ಕೆಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಯ ಬಾರಿಗೆ ‘ಮಯೂರ್ ಪಾಂಖಿ’ ಧಾರಾವಾಹಿಯಲ್ಲಿ ನಾಯಕಿಯ ಸ್ನೇಹಿತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಮೂಲತಃ ಬುರ್ದ್ವಾನ್‍ ಮೂಲದ ಸುಬರ್ನಾ ವಿದ್ಯಾಭ್ಯಾಸವನ್ನು ಮುಂದುವರಿಸಲು ಕೋಲ್ಕತ್ತಾಗೆ ಬಂದಿದ್ದರು. ಆದರೆ ಸುಬರ್ನಾ ಜಾಶ್‍ಗೆ ನಟಿಯಾಗಬೇಕೆಂಬ ಕನಸಿತ್ತು. ಕೊನೆಗೆ ತನ್ನ ವೃತ್ತಿಜೀವನಕ್ಕಾಗಿ ಕೋಲ್ಕತ್ತಾದಲ್ಲಿಯೇ ವಾಸಿಸುತ್ತಿದ್ದರು. ಅದರಂತೆಯೇ ಅನೇಕ ಆಡಿಷನ್‍ಗಳಿಗೆ ಹೋಗುತ್ತಿದ್ದರು. ನಂತರ ಕೆಲವು ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶವನ್ನು ಸಹ ಪಡೆದಿದ್ದರು.

    ಧಾರಾವಾಹಿಯಲ್ಲಿ ಮುಖ್ಯಪಾತ್ರಗಳು ಸಿಗದೆ ಇದ್ದ ಕಾರಣ ಸುಬರ್ನಾ ಜಾಶ್ ಖಿನ್ನತೆಗೆ ಒಳಗಾಗಿದ್ದರು. ಅಲ್ಲದೇ ಕೆಲವು ದಿನಗಳ ಹಿಂದೆ ತನ್ನ ಹುಟ್ಟೂರಿಗೆ ವಾಪಸ್ ಹೋಗಿದ್ದರು ಎಂದು ವರದಿಯಾಗಿದೆ. ಆದರೆ ನಟಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುಬರ್ನಾ ಜಾಶ್ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ಕುಟುಂಬದವರು ತಿಳಿಸಿದ್ದಾರೆ.

    ಇತ್ತೀಚೆಗೆ ಮುಂಬೈ ಮೂಲದ ಕಿರುತೆರೆ ನಟಿ ಸೆಜಲ್ ಶರ್ಮಾ ಸಹ ಆತ್ಮಹತ್ಯೆಗೆ ಶರಣಾಗಿದ್ದರು.

  • ಸಂಬಂಧ ಮುಂದುವರಿಸಲು ನಿರಾಕರಿಸಿದ್ದೇ ತಪ್ಪಾಯ್ತು

    ಸಂಬಂಧ ಮುಂದುವರಿಸಲು ನಿರಾಕರಿಸಿದ್ದೇ ತಪ್ಪಾಯ್ತು

    – ಇಬ್ಬರಿಂದ ಅರೆಬೆತ್ತಲೆ ಫೋಟೋ ಅಪ್ಲೋಡ್

    ಕೋಲ್ಕತಾ: ಸಂಬಂಧ ಮುಂದುವರಿಸಲು ನಿರಾಕರಿಸಿದ್ದಕ್ಕೆ ವ್ಯಕ್ತಿಗಳಿಬ್ಬರು ಮಹಿಳೆ ಅರೆಬೆತ್ತಲೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನಡೆದಿದೆ.

    ಇಬ್ಬರು ವ್ಯಕ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಅಪ್ಲೋಡ್ ಮಾಡುವ ಮೂಲಕ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಅಲೋಕ್ ರಾಜೋರಿಯಾ ತಿಳಿಸಿದ್ದಾರೆ.

    ಮಹಿಳೆ ಸ್ಥಳೀಯ ವ್ಯಕ್ತಿ ಜೊತೆ ಸಂಬಂಧ ಇಟ್ಟುಕೊಂಡಿದ್ದರು. ಆದರೆ ಕೆಲವು ದಿನಗಳ ನಂತರ ಮಹಿಳೆ ವ್ಯಕ್ತಿಯೊಂದಿಗೆ ಸಂಬಂಧವನ್ನು ಮುಂದುವರಿಸಲು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ಆಕೆಯ ಫೋನ್ ತೆಗೆದುಕೊಂಡು ಮಹಿಳೆಯ ಕೆಲವು ಅರೆಬೆತ್ತಲೆ, ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡಿದ್ದಾನೆ. ನಂತರ ಸಂಬಂಧವನ್ನು ಮುಂದುವರಿಸದಿದ್ದರೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡುವುದಾಗಿ ಬ್ಲ್ಯಾಕ್ ಮಾಡಿದ್ದಾನೆ.

    ಆರೋಪಿ ವ್ಯಕ್ತಿ ತನ್ನ ಸ್ನೇಹಿತನ ಸಹಾಯದಿಂದ ನನ್ನ ಬಳಿ ತೆಗೆದುಕೊಂಡ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಕುರಿತು ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದ ಫೋಟೋಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಅಲೋಕ್ ರಾಜೋರಿಯಾ ಹೇಳಿದ್ದಾರೆ.

  • ಕ್ಯಾಮೆರಾ ಅಳವಡಿಸಿ ಲೈಂಗಿಕ ಕ್ರಿಯೆ ನಡೆಸೋ 182 ವಿಡಿಯೋ ಚಿತ್ರೀಕರಿಸಿದ್ರು!

    ಕ್ಯಾಮೆರಾ ಅಳವಡಿಸಿ ಲೈಂಗಿಕ ಕ್ರಿಯೆ ನಡೆಸೋ 182 ವಿಡಿಯೋ ಚಿತ್ರೀಕರಿಸಿದ್ರು!

    – ಪ್ರೀತಿ ಹೆಸರಲ್ಲಿ ಹಣಕ್ಕಾಗಿ ಬ್ಲ್ಯಾಕ್ ಮೇಲ್

    ಕೋಲ್ಕತ್ತಾ: ಯುವತಿಯರಿಗೆ ನಂಬಿಸಿ ಮೋಸ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಇಬ್ಬರು ಉದ್ಯಮಿಗಳನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ.

    ಪಶ್ಚಿಮ ಬಂಗಾಳಕ್ಕೆ ಸೇರಿದ ಆದಿತ್ಯ ಅಗರ್ವಾಲ್, ಅನೀಶ್ ಬಂಧಿತ ಆರೋಪಿಗಳು. ಇಬ್ಬರು ಸ್ನೇಹಿತರಾಗಿದ್ದು, ಯುವತಿಯರನ್ನು ನಂಬಿಸಿ ತಮ್ಮೊಂದಿಗೆ ಅವರನ್ನು ರಹಸ್ಯ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಪ್ರೀತಿ ಹೆಸರಿನಲ್ಲಿ ನಂಬಿಸಿ ಅವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಈ ವೇಳೆ ರಹಸ್ಯ ಸ್ಥಳಗಳಲ್ಲಿ ಮೊದಲೇ ಕ್ಯಾಮೆರಾ ಅಳವಡಿಸಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಆ ಬಳಿಕ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ ಯುವತಿಯರಿಂದ ಹಣ ವಸೂಲಿ ಮಾಡುತ್ತಿದ್ದರು.

    2013ರಿಂದಲೇ ಇಂತಹ ಕೃತ್ಯ ನಡೆಸುತ್ತಿದ್ದ ಆರೋಪಿಗಳು 2018 ರಿಂದ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದರು. ಈ ವಿಡಿಯೋಗಳನ್ನು ತೋರಿಸಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಆರೋಪಿಗಳಿಂದ ಬ್ಲ್ಯಾಕ್ ಮೇಲ್ ಗೆ ಒಳಗಾದ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ಸಂದರ್ಭದಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ಬಳಿ ಮೊದಲು 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪಿಗಳು ಆಕೆ ಹಣವನ್ನು ನೀಡುತ್ತಿದಂತೆ ಮತ್ತೆ 10 ಲಕ್ಷ ರೂ. ನೀಡುವಂತೆ ಒತ್ತಾಯ ಮಾಡಿದ್ದರು.

    ಮಹಿಳೆಯ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕ್ ಕಾದಿತ್ತು. ಮೊದಲು ಅನೀಶ್‍ನನ್ನು ಬಂಧಿಸಿದ್ದ ಪೊಲೀಸರಿಗೆ ವಿಚಾರಣೆ ವೇಳೆ ಆದಿತ್ಯ ಬಗ್ಗೆ ಮಾಹಿತಿ ಲಭಿಸಿತ್ತು. ಇಬ್ಬರನ್ನು ಬಂಧಿಸಿದ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿ ಕೋರ್ಟ್ ಎದುರು ಹಾಜರುಪಡಿಸಿದ್ದಾರೆ. ಪೊಲೀಸರು ಬಂಧನದ ವೇಳೆ ಆರೋಪಿಗಳಿಂದ ಲ್ಯಾಪ್‍ಟಾಪ್ ವಶಕ್ಕೆ ಪಡೆದಿದ್ದು, ಇದರಲ್ಲಿ 180ಕ್ಕೂ ಹೆಚ್ಚು ಸೆಕ್ಸ್ ವಿಡಿಯೋಗಳು ಪತ್ತೆಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 2019 ನವೆಂಬರ್ ನಿಂದ ಆರೋಪಿಗಳ ಮೇಲೆ ಪೊಲೀಸರು ಕಣ್ಣಿಟ್ಟಿದ್ದರು. ಸದ್ಯ ಆರೋಪಿಗಳನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದನ್ನು ಓದಿ: ಹಳೆ ಗೆಳೆಯನನ್ನು ಮರೆಯಲು 2ನೇ ಲವ್- ಮೋಸ ಹೋಗಿ ವಿಷ ಸೇವಿಸಿದ ಯುವತಿ

  • ಮದ್ವೆಯಾಗಿ ಮೂರು ರಾತ್ರಿ ಕಳೆದ್ರೂ ಬದ್ಲಾಗದ ಪತಿಯ ವಿರುದ್ಧ ದೂರು

    ಮದ್ವೆಯಾಗಿ ಮೂರು ರಾತ್ರಿ ಕಳೆದ್ರೂ ಬದ್ಲಾಗದ ಪತಿಯ ವಿರುದ್ಧ ದೂರು

    – ಫಸ್ಟ್ ನೈಟ್‍ನಲ್ಲಿ ನಂಗೆ ಫೀಲಿಂಗ್ಸ್ ಇಲ್ಲ ಎಂದ ಗಂಡ

    ಕೋಲ್ಕತ್ತಾ: ಮದುವೆಯಾಗಿ ಮೂರು ದಿನ ಕಳೆದರೂ ಪತಿಯ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣದಿದ್ದಕ್ಕೆ ಪತ್ನಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಕಳೆದ ವಾರ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನ ಯುವತಿ ಅದೇ ಪ್ರದೇಶದ ಯುವಕನ ಜೊತೆ ಮದುವೆಯಾಗಿದ್ದಾಳೆ. ಮರುದಿನ ದಂಪತಿಗೆ ಕುಟುಂಬದವರು ಮೊದಲ ರಾತ್ರಿಯನ್ನು ಏರ್ಪಡಿಸಿದ್ದರು. ನವವಧು ಅನೇಕ ಕನಸುಗಳನ್ನು ಇಟ್ಟುಕೊಂಡು ಫಸ್ಟ್ ನೈಟ್ ರೂಮಿಗೆ ಹಾಲು ತೆಗೆದುಕೊಂಡು ಹೋಗಿದ್ದಾಳೆ. ಪತಿ ರೂಮಿನಲ್ಲಿ ಹಾಸಿಗೆ ಮೇಲೆ ಕುಳಿತುಕೊಂಡಿದ್ದನು.

    ಪತಿ ಹಾಲು ಕುಡಿದು ತಕ್ಷಣ ಮಲಗಿಕೊಂಡಿದ್ದಾನೆ. ಇದನ್ನು ನೋಡಿದ ಪತ್ನಿ ಅಚ್ಚರಿಗೊಂಡಿದ್ದಾಳೆ. ನಂತರ ಪತಿಯನ್ನು ಎಬ್ಬಿಸಲು ಪ್ರಯತ್ನ ಮಾಡಿದ್ದಾಳೆ. ಆಗ ಪತಿ “ನನಗೆ ಅಂತಹ ಭಾವನೆಗಳಿಲ್ಲ” ಎಂದು ಹೇಳಿ ಮಲಗಿಕೊಂಡಿದ್ದಾನೆ. ಪತಿಯ ಮಾತು ಕೇಳಿ ಶಾಕ್ ಆದ ಪತ್ನಿ ಕೆಲವು ದಿನಗಳ ನಂತರ ಸರಿ ಹೋಗಬಹುದು ಎಂದು ಸುಮ್ಮನಾಗಿದ್ದಾಳೆ.

    ಆದರೆ ಮೂರು ರಾತ್ರಿ ಕಳೆದರು ಪತಿಯ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ. ಜೊತೆ ಹೊಸದಾಗಿ ಮದುವೆಯಾಗಿದ್ದರು ಪತ್ನಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದನು. ತಕ್ಷಣ ಪೋಷಕರಿಗೆ ಫೋನ್ ಮಾಡಿ ಮೂರು ರಾತ್ರಿ ರೂಮಿನಲ್ಲಿ ನಡೆದುದ್ದನ್ನು ಹೇಳಿಕೊಂಡಿದ್ದಾಳೆ.

    ಇತ್ತ ಅತ್ತೆ ಮನೆಯವರು ನನ್ನ ಮಗನಲ್ಲಿ ಯಾವುದೇ ದೋಷವಿಲ್ಲ, ನೀನು ಸುಮ್ಮನೇ ಸುಳ್ಳು ಆರೋಪ ಮಾಡುತ್ತಿದ್ದೀಯಾ ಎಂದು ವಾದಿಸಿದ್ದಾರೆ. ಇದರಿಂದ ಕೋಪಗೊಂಡ ಪತ್ನಿ ಪೊಲೀಸ್ ಠಾಣೆಗೆ ಹೋಗಿ ಪತಿಯ ವಿರುದ್ಧ ದೂರು ದಾಖಲಿಸಿದ್ದಾಳೆ. ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಮಂಗ್ಳೂರು ಗಲಭೆ – ಮೃತರಿಗೆ ಮಮತಾ ಬ್ಯಾನರ್ಜಿ 5 ಲಕ್ಷ ರೂ. ಪರಿಹಾರ ಘೋಷಣೆ

    ಮಂಗ್ಳೂರು ಗಲಭೆ – ಮೃತರಿಗೆ ಮಮತಾ ಬ್ಯಾನರ್ಜಿ 5 ಲಕ್ಷ ರೂ. ಪರಿಹಾರ ಘೋಷಣೆ

    ಕೋಲ್ಕತ್ತಾ: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಮಂಗಳೂರು ಗಲಭೆ ಸಂದರ್ಭದಲ್ಲಿ ಪೊಲೀಸರ ಗೋಲಿಬಾರ್ ಮೃತರವರಿಗೆ ಪರಿಹಾರ ಘೋಷಣೆ ಮಾಡಿದ್ದಾರೆ.

    ಸಿಎಎ ವಿರುದ್ಧದ ಪ್ರತಿಭಟನಾ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ಕರ್ನಾಟಕ ಸರ್ಕಾರ ಸಿಎಎ ಪ್ರತಿಭಟನೆ ವೇಳೆ ಪೊಲೀಸರ ಗುಂಡಿಗೆ ಬಲಿಯಾದವರಿಗೆ ನೀಡುತ್ತೇವೆ ಎಂದಿದ್ದ ಪರಿಹಾರ ಹಣವನ್ನು ವಾಪಸ್ ಪಡೆದಿದೆ. ಬಿಜೆಪಿ ಸರ್ಕಾರ ಮೊದಲು ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಕರ್ನಾಟಕ ಸಿಎಂ ಅವರು ಕೊಟ್ಟ ಪರಿಹಾರವನ್ನು ವಾಪಾಸ್ ಪಡೆದಿರುವ ಹಲವು ಉದಾಹರಣೆಗಳಿದ್ದು, ಆದರೆ ನಾವು ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ನೆರವು ನೀಡುವುದಾಗಿ ತಿಳಿಸಿದರು.

    ಕೋಲ್ಕತ್ತಾದಲ್ಲಿ ಸಿಎಎ ವಿರುದ್ಧ ಬೃಹತ್ ಪ್ರತಿಭಟನೆಯನ್ನು ನಡೆಸಿದ ಮಮತಾ ಬ್ಯಾನರ್ಜಿ, ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಪ್ರತಿಭಟನೆಯನ್ನು ಪ್ರಜಾಪ್ರಭುತ್ವ ರೂಪದಲ್ಲಿ ವಿದ್ಯಾರ್ಥಿಗಳು ನಡೆಸಬೇಕು ಎಂದು ಕರೆ ನೀಡಿದರು.

    ಸಿಎಎ ಕಾಯ್ದೆಯನ್ನು ಪಶ್ವಿಮ ಬಂಗಾಳದಲ್ಲಿ ಜಾರಿ ಮಾಡುವುದಿಲ್ಲ ಎಂದಿದ್ದ ಮಮತಾ ಬ್ಯಾನರ್ಜಿ, ಸಿಎಎ ವಿರುದ್ಧ ಹೋರಾಟ ನಡೆಸಲು ಬೃಹತ್ ಪ್ರತಿಭಟನಾ ಸಮಾವೇಶಗಳಿಗೆ ಕರೆ ನೀಡಿದ್ದರು. ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಕೋಲ್ಕತ್ತಾದ ಗಾಂಧಿ ಪ್ರತಿಮೆಯಿಂದ ವಿವೇಕಾನಂದ ಭವನದವರೆಗೂ ಮೆರವಣಿಗೆ ನಡೆಸಿದರು. ಈ ಪ್ರತಿಭಟನಾ ಮೆರವಣಿಗೆಯಲ್ಲಿ ಟಿಎಂಸಿ ಕಾರ್ಯಕರ್ತರು, ಪಕ್ಷ ಹಿರಿಯ ಮುಖಂಡರು ಸೇರಿದಂತೆ ಹಲವರು ಮಮತಾ ಅವರಿಗೆ ಸಾಥ್ ನೀಡಿದ್ದರು.

    ಮಂಗಳೂರಿನಲ್ಲಿ ನಡೆದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ಗೋಲಿಬಾರ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಮೃತ ಜಲೀಲ್ ಮತ್ತು ನೌಶಿನ್ ಕುಟುಂಬಕ್ಕೆ ಸಿಎಂ ಬಿಎಸ್‍ವೈ ಅವರು ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಆದರೆ ಆ ಬಳಿಕ ಪೊಲೀಸರು ಬಿಡುಗಡೆ ಮಾಡಿದ್ದ ವಿಡಿಯೋಗಳಲ್ಲಿ ಉದ್ದೇಶ ಪೂರ್ವಕವಾಗಿ ಗಲಾಟೆ ಸೃಷ್ಟಿಮಾಡಿರುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಪರಿಹಾರ ಮೊತ್ತವನ್ನು ಸರ್ಕಾರ ವಾಪಸ್ ಪಡೆದಿತ್ತು.