Tag: kolkata

  • ಕಾರಿನಲ್ಲಿ ಕುಳಿತಿದ್ದ ನಟಿಗೆ ಸನ್ನೆ ಮಾಡಿದ ಟ್ಯಾಕ್ಸಿ ಡ್ರೈವರ್ ಅರೆಸ್ಟ್

    ಕಾರಿನಲ್ಲಿ ಕುಳಿತಿದ್ದ ನಟಿಗೆ ಸನ್ನೆ ಮಾಡಿದ ಟ್ಯಾಕ್ಸಿ ಡ್ರೈವರ್ ಅರೆಸ್ಟ್

    – ನಟಿಯ ಕಾರನ್ನ ಹಿಂದಿಕ್ಕಿ ಮತ್ತೆ ಅಸಭ್ಯ ವರ್ತನೆ

    ಕೋಲ್ಕತ್ತಾ: ಬಂಗಾಲಿ ನಟಿ, ಟಿಎಂಸಿ ಸಂಸದೆ ಮಿಮಿ ಚಕ್ರವರ್ತಿ ಜೊತೆ ಅಸಭ್ಯವಾಗಿ ವರ್ತಿಸುವ ಮೂಲಕ ಕಿರುಕುಳ ನೀಡಿದ್ದ ಟ್ಯಾಕ್ಸಿ ಚಾಲಕನನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ಲಕ್ಷ್ಮಣ್ ಯಾದವ್ (32) ಎಂದು ಗುರುತಿಸಲಾಗಿದೆ. ಸಂಸದೆ ಮಿಮಿ ಚಕ್ರವರ್ತಿ ಜಿಮ್‍ನಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಟ್ಯಾಕ್ಸಿ ಡ್ರೈವರ್ ನನ್ನ ವಾಹನವನ್ನು ಹಿಂದಿಕ್ಕಿಲು ಪ್ರಯತ್ನಿಸುತ್ತಿದ್ದನು. ಅಲ್ಲದೇ ನನ್ನ ಜೊತೆ ಅಸಭ್ಯವಾಗಿ ಮಾತನಾಡಿದ್ದ ಎಂದು ನಟಿ ಆರೋಪಿಸಿದ್ದಾರೆ.

    ಮೊದಲಿಗೆ ಮಿಮಿ ಚಕ್ರವರ್ತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಟ್ಯಾಕ್ಸಿ ಡ್ರೈವರ್ ಮತ್ತೆ ಮತ್ತೆ ನಟಿಯ ಕಾರನ್ನು ಹಿಂದಿಕ್ಕಿ ಅಶ್ಲೀಲವಾಗಿ ಸನ್ನೆ ಮಾಡಿ ಕಿರುಕುಳ ನೀಡಿದ್ದನು. ಅಲ್ಲದೇ ನಟಿಯ ವಾಹನವನ್ನೇ ಹಿಂಬಾಲಿಸಿದ್ದನು. ಹೀಗಾಗಿ ನಟಿ ಆತನ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    “ಸಿಗ್ನಲ್ ಬಳಿ ನನ್ನ ಕಾರಿನ ಪಕ್ಕದಲ್ಲಿ ಒಂದು ಟ್ಯಾಕ್ಸಿ ನಿಂತಿತ್ತು. ನಾನು ನನ್ನ ಕಾರಿನಲ್ಲಿ ಕುಳಿತಿದ್ದೆ. ಆದರೆ ಟ್ಯಾಕ್ಸಿ ಚಾಲಕ ನನ್ನ ಕಡೆಗೆ ಅಶ್ಲೀಲವಾಗಿ ಸನ್ನೆ ಮಾಡುತ್ತಿದ್ದನು. ಮೊದಲಿಗೆ ನಾನು ಅದನ್ನು ನಿರ್ಲಕ್ಷಿಸಿದೆ. ಆದರೆ ಚಾಲಕ ನನ್ನ ಕಾರನ್ನು ಹಿಂದಿಕ್ಕಿ ಮತ್ತೆ ಅದೇ ರೀತಿ ಸನ್ನೆ ಮಾಡಿದನು. ಒಂದು ವೇಳೆ ನಾನು ಈಗ ಇದನ್ನು ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ಮಹಿಳೆ ಆತನ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದರೆ ಕಿರುಕುಳ ಎದುರಿಸಬೇಕಾಗುತ್ತದೆ ಎಂದು ನಾನು ಭಾವಿಸಿದೆ. ಅಲ್ಲದೇ ರಾತ್ರಿ ವೇಳೆ ಪ್ರಯಾಣಿಕರು ಆತನ ಟ್ಯಾಕ್ಸಿಯಲ್ಲಿ ಸುರಕ್ಷಿತವಾಗಿರುವುದಿಲ್ಲ” ಎಂದು ನಟಿ ಆಡಿಯೋ ಹೇಳಿಕೆ ಮೂಲಕ ಪೊಲೀಸರಿಗೆ ತಿಳಿಸಿದ್ದಾರೆ.

    ಮಿಮಿ ಚಕ್ರವರ್ತಿ ಗರಿಯಾಹತ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದನು. ಪೊಲೀಸರು ಕೂಡಲೇ ಟ್ಯಾಕ್ಸಿ ಚಾಲಕನನ್ನು ಬಂಧಿಸಿದ್ದಾರೆ. ಆರೋಪಿಯನ್ನು ಲಕ್ಷ್ಮಣ್ ಯಾದವ್ ಎಂದು ಗುರುತಿಸಲಾಗಿದ್ದು, ಪೂರ್ವ ಮೆಟ್ರೋಪಾಲಿಟನ್ ಬೈಪಾಸ್ ಬಳಿಯ ಆನಂದಪುರ ಪ್ರದೇಶದಲ್ಲಿ ವಾಸಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.

    ಬಂಧಿತ ಚಾಲಕನ ವಿರುದ್ಧ ಐಪಿಸಿ ಸೆಕ್ಷನ್ ಮತ್ತು ಇತರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆಂಗಾಲಿ ಚಿತ್ರರಂಗದಲ್ಲಿ ಪ್ರಸಿದ್ಧರಾಗಿರುವ ಮಿಮಿ ಚಕ್ರವರ್ತಿ 2019ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ವಿಜಯಿಯಾಗಿದ್ದಾರೆ.

  • ನಮಗೆ ರಕ್ಷಣೆ ಕಲ್ಪಿಸಿ- ಹೈಕೋರ್ಟಿಗೆ ಶಮಿ ಪತ್ನಿ ಅರ್ಜಿ

    ನಮಗೆ ರಕ್ಷಣೆ ಕಲ್ಪಿಸಿ- ಹೈಕೋರ್ಟಿಗೆ ಶಮಿ ಪತ್ನಿ ಅರ್ಜಿ

    ಕೋಲ್ಕತ್ತಾ: ಟೀಂ ಇಂಡಿಯಾ ವೇಗಿ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸಿನ್ ಜಹಾನ್ ರಕ್ಷಣೆ ಕಲ್ಪಿಸುವಂತೆ ಹೈಕೋರ್ಟಿಗೆ ಅಜಿ ಸಲ್ಲಿಸಿ ಮನವಿ ಮಾಡಿದ್ದಾರೆ.

    ರಾಮ ಮಂದಿರ ಭೂಮಿ ಪೂಜೆ ಪೋಸ್ಟ್ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಹಸಿನ್ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರು ನೀಡಿದ್ದರೂ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಹಸೀನ್ ಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿ, ತನಗೆ ಹಾಗೂ ತನ್ನ ಮಗಳಿಗೆ ಸೂಕ್ತ ಭದ್ರತೆ ನೀಡುವಂತೆ ಮನವಿ ಮಾಡಿದ್ದಾರೆ.

    ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಸಂದರ್ಭದಲ್ಲಿ ಹಸಿನ್ ಶುಭಾಶಯ ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆ ಬಳಿಕ ಅವರಿಗೆ ಹೆಚ್ಚಿನ ಬೆದರಿಕೆಗಳು ಬಂದಿದ್ದವು. ಕೆಲವರು ಹಸಿನ್ ವಿರುದ್ಧ ಅಸಹ್ಯಕರವಾಗಿ ದೂಷಿಸಿ, ಕೆಲವರು ರೇಪ್ ಮಾಡುವ ಬೆದರಿಕೆಯನ್ನು ಹಾಕಿದ್ದರು. ಈ ಕುರಿತು ಮಾತನಾಡಿರುವ ಹಸೀನ್, ಪೋಸ್ಟ್ ಮಾಡಿದ ಕೂಡಲೇ ಕೆಲವರು ಅಸಭ್ಯವಾಗಿ ನಿಂಧಿಸಿದ್ದರು. ನನಗೆ ಅಭದ್ರತೆಯ ಭಾವನೆ ಇದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮಾನಸಿಕವಾಗಿ ಕುಗ್ಗಿ ಹೋಗುತ್ತೇನೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.

    ಮಾನವೀಯತೆಯ ಆಧಾರದ ಮೇಲೆ ಪೊಲೀಸರು ಕ್ರಮಕೈಗೊಳ್ಳಬೇಕಿದೆ. ಆದರೆ ಅವರು ನನ್ನ ದೂರಿನ ಬಳಿಕವೂ ಯಾವುದೇ ಕ್ರಮಕೈಗೊಂಡಿಲ್ಲ. ಆದ್ದರಿಂದ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇನೆ ಎಂದಿದ್ದಾರೆ. 2014ರಲ್ಲಿ ಹಸಿನ್ ಜಹಾನ್, ಶಮಿ ಮದುವೆಯಾಗಿದ್ದರು. ಇಬ್ಬರೂ ಒಂದು ಹೆಣ್ಣು ಮಗು ಇದೆ. ನಾಲ್ಕು ವರ್ಷಗಳ ಕಾಲ ಸಂತಸದಿಂದ ಸಾಗಿದ್ದ ಇವರ ದಾಂಪತ್ಯ ಜೀವನ ಆ ಬಳಿಕ ಮುರಿದು ಬಿದ್ದಿತ್ತು. ಶಮಿ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದರು. ಅಲ್ಲದೇ ಶಮಿ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಸಾಕಷ್ಟು ಆರೋಪಗಳನ್ನು ಮಾಡಿದ್ದರು. ಕೆಲ ದಿನಗಳ ಹಿಂದೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಮಿ, ಮೂರು ಬಾರಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೆ ಎಂದು ತಿಳಿಸಿದ್ದರು.

    ಇತ್ತ ಐಪಿಎಲ್ 2020ರ ಟೂರ್ನಿಗಾಗಿ ಯುಎಇಗೆ ತೆರಳಿರುವ ಶಮಿ, ಪುತ್ರಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಕೊರೊನಾ, ಲಾಕ್‍ಡೌನ್ ಕಾರಣ ಪುತ್ರಿಯನ್ನು ಭೇಟಿಯಾಗಿಲ್ಲ. ಸದ್ಯ ಪುತ್ರಿ ಭೇಟಿ ಅಸಾಧ್ಯವಾಗಿದೆ. ಮಗಳನ್ನು ನೋಡದೆ ತುಂಬಾ ದಿನಗಳಾಗಿದೆ. ಪುತ್ರಿ ಈಗ ದೊಡ್ಡವಳಾಗಿದ್ದಾಳೆ. ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಶಮಿ ಹೇಳಿದ್ದು, ದುಬೈ ಪಿಚ್‍ನಲ್ಲೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಶಮಿ ಹೇಳಿದ್ದಾರೆ.

  • ಅಪರೂಪದ ಫಿಶ್ ಪತ್ತೆ- ಒಂದೇ ಮೀನು 20 ಲಕ್ಷಕ್ಕೆ ಮಾರಾಟ

    ಅಪರೂಪದ ಫಿಶ್ ಪತ್ತೆ- ಒಂದೇ ಮೀನು 20 ಲಕ್ಷಕ್ಕೆ ಮಾರಾಟ

    – ಔಷಧಿಯ ತಯಾರಿಕೆಯಲ್ಲೂ ಈ ಮೀನು ಬಳಕೆ

    ಕೋಲ್ಕತ್ತಾ: ಸುಮಾರು 780 ಕೆ.ಜಿ. ತೂಕದ ಅಪರೂಪದ ಮೀನೊಂದು ಪಶ್ಚಿಮ ಬಂಗಾಳದ ದಿಘಾದಲ್ಲಿ ಸಿಕ್ಕಿದೆ.

    ಚಿಲ್‍ಶಂಕರ್ ಮೀನು ಎಂದು ಕರೆಯಲಾಗುತ್ತದೆ. ಇದು ಸುಮಾರು 780 ಕೆ.ಜಿ ತೂಕ ಇದೆ. ಚಿಲ್‍ಶಂಕರ್ ಮೀನು ಅಪರೂಪದ ಜಾತಿಯಾಗಿದ್ದು, ಟ್ರಾಲರ್ ಬೋಟ್‍ನಲ್ಲಿ ಈ ಮೀನು ಸಿಕ್ಕಿದೆ. ಈ ಮೊದಲು ಇಂತಹ ಮೀನನ್ನು ನೋಡಿಲ್ಲ ಎಂದು ಮೀನುಗಾರರು ಹೇಳಿದ್ದಾರೆ.

    ಸೋಮವಾರ ಒರಿಸ್ಸಾದ ವ್ಯಕ್ತಿಯೊಬ್ಬನ ಒಡೆತನದ ಟ್ರಾಲರ್ ಬೋಟ್‍ನಲ್ಲಿ ಈ ಮೀನು ಸೆರೆ ಸಿಕ್ಕಿದೆ. ಅದರಲ್ಲೂ ಪಶ್ಚಿಮ ಬಂಗಾಳದ ಕಡಲಲ್ಲಿ ಈ ಅಪರೂಪದ ಮೀನು ಸಿಗುವುದೇ ಇಲ್ಲ. ಹೀಗಾಗಿ ಇದಕ್ಕೆ ಭಾರೀ ಬೆಲೆ ಹಾಗೂ ಬೇಡಿಕೆಯಿದೆ. ಆದ್ದರಿಂದ ಬೃಹತ್ ಚಿಲ್‍ಶಂಕರ್ ಮೀನನ್ನು ನೋಡಲು ಜನರು ಮತ್ತು ಸ್ಥಳೀಯ ಪ್ರವಾಸಿಗರು ಬಂದಿದ್ದರು.

    ಈ ಮೀನು ತುಂಬಾ ತೂಕವಾಗಿದ್ದು, ಅದನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಲು ಹಗ್ಗಗಳನ್ನು ಬಳಸಲಾಗಿತ್ತು. ಸ್ಥಳೀಯ ಮೀನುಗಾರರು ಹಗ್ಗದಿಂದ ಎಳೆದುಕೊಂಡು ಹೋಗಿ ವ್ಯಾನ್‍ಗೆ ಹಾಕಿದ್ದರು. ಅಲ್ಲಿಂದ ಸ್ಥಳೀಯ ಮೀನುಗಾರಿಕಾ ಸಹಕಾರ ಸಂಘದ ಮಾರುಕಟ್ಟೆಯಲ್ಲಿ ತೆಗೆದುಕೊಂಡು ಹೋಗಲಾಗಿತ್ತು.

    ಈ ಮೀನಿಗೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 2100 ರೂ.ಗೆ ಹರಾಜು ಹಾಕಲಾಯಿತು. ಮೀನಿನ ಒಟ್ಟು ಬೆಲೆ 20 ಲಕ್ಷ ರೂಪಾಯಿ ಆಗಿದೆ ಎಂದು ತಿಳಿದು ಬಂದಿದೆ. ಈ ಮೂಲಕ ಕೊರೊನಾ ಸಂಕಷ್ಟದಲ್ಲೂ ಮೀನುಗಾರರಿಗೆ ಲಾಟರಿ ಹೊಡೆದಂತಾಗಿದೆ.

    ಇದು ಚಿಲ್‍ಶಂಕರ್ ಮೀನು. ಇದರ ತೂಕ 780 ಕಿ.ಗ್ರಾಂ. ಈ ಮೀನಿನ ಮಾರುಕಟ್ಟೆ ಬೆಲೆ ಕೆ.ಜಿ.ಗೆ 2100 ರೂ. ಇಷ್ಟು ದೊಡ್ಡ ಮತ್ತು ಅಪರೂಪದ ಮೀನನ್ನು ನಾವು ನೋಡಿಲ್ಲ ಎಂದು ಸ್ಥಳೀಯ ಮೀನುಗಾರ ಹೇಳಿದರು. ಮೀನು ಮೂಳೆ ಮತ್ತು ಎಣ್ಣೆಯನ್ನು ಔಷಧಿಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇನ್ನುಳಿದದ್ದು ಖಾದ್ಯವಾಗಿ ಸವಿಯಲ್ಪಡುತ್ತದೆ ಎಂದು ಮೀನುಗಾರರು ಹೇಳುತ್ತಾರೆ.

  • ಬಿಜೆಪಿ ಸೇರಿದ 24 ಗಂಟೆಯಲ್ಲೇ ಮಾಜಿ ಫುಟ್ಬಾಲ್ ಆಟಗಾರ ರಾಜಕೀಯಕ್ಕೆ ಗುಡ್‍ಬೈ

    ಬಿಜೆಪಿ ಸೇರಿದ 24 ಗಂಟೆಯಲ್ಲೇ ಮಾಜಿ ಫುಟ್ಬಾಲ್ ಆಟಗಾರ ರಾಜಕೀಯಕ್ಕೆ ಗುಡ್‍ಬೈ

    ಕೋಲ್ಕತ್ತಾ: ಬಿಜೆಪಿ ಸೇರಿದ ಭಾರತದ ಮಾಜಿ ಫುಟ್ಬಾಲ್ ಆಟಗಾರ ಮೆಹ್ತಾಬ್ ಹುಸೇನ್ 24 ಗಂಟೆ ಕಳೆಯುವ ವೇಳೆಗೆ ರಾಜಕೀಯದಿಂದ ದೂರವಾಗಿದ್ದಾರೆ.

    ಪಶ್ಚಿಮ ಬಂಗಾಳದ ಮೆಹ್ತಾಬ್ ಹುಸೇನ್ ಫುಟ್ಬಾಲ್‍ನಲ್ಲಿ ಮಿಡ್ ಫೀಲ್ಡ್ ಜನರಲ್ ಆಗಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇತ್ತ ಗುರುವಾರಷ್ಟೇ ಬಿಜೆಪಿ ರಾಜಕೀಯ ಪ್ರವೇಶ ಮಾಡಿದ್ದ ಅವರು 24 ಗಂಟೆ ಕಳೆಯುವ ವೇಳೆಗೆ ರಾಜಕೀಯದಿಂದ ದೂರವಾಗಿದ್ದಾರೆ. ರಾಜಕೀಯಕ್ಕೆ ಸೇರಿದ ನನ್ನ ನಿರ್ಧಾರದ ಕುರಿತು ಕುಟುಂಬಸ್ಥರು ಮತ್ತು ಸ್ನೇಹಿತರು ಆತಂಕ ವ್ಯಕ್ತಪಡಿಸಿದ್ದರು. ಆದ್ದರಿಂದ ನನ್ನ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ಹುಸೇನ್ ಹೇಳಿದ್ದಾರೆ.

    ಪಶ್ಚಿಮ ಬಂಗಾಳ ಫುಟ್ಬಾಲ್ ಮಾಜಿ ನಾಯಕರಾಗಿರುವ ಹುಸೇನ್, ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ನೇತೃತ್ವದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆದರೆ 24 ಗಂಟೆ ಕಳೆಯುವ ಮುನ್ನವೇ ನನಗೆ ಇಂದಿನಿಂದ ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧವಿಲ್ಲ ಎಂದು ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

    ಭಾರತ ಪರ 30 ಪಂದ್ಯಗಳನ್ನು ಆಡಿರುವ ಹುಸೇನ್ ಪ್ರಜೆಗಳಿಗೆ ಸೇವೆ ಮಾಡಲು ರಾಜಕೀಯ ಪ್ರವೇಶ ಮಾಡುತ್ತಿರುವುದಾಗಿ ಹೇಳಿದ್ದರು. ಅಲ್ಲದೇ ತಮ್ಮ ಪ್ರಯತ್ನಕ್ಕೆ ಜನರು ಬೆಂಬಲ ನೀಡಬೇಕು ಎಂದು ಕೋರಿದ್ದರು. ಆದರೆ ಜನರು ನನ್ನನ್ನು ರಾಜಕೀಯ ನಾಯಕನಾಗಿ ನೋಡಲು ಇಷ್ಟಪಡಲಿಲ್ಲ ಎಂದು ಹುಸೇನ್ ಹೇಳಿದ್ದಾರೆ.

    2018-19ರಲ್ಲಿ ಫುಟ್ಬಾಲ್ ಆಟಕ್ಕೆ ನಿವೃತ್ತಿ ಘೋಷಿಸಿದ್ದ ಹುಸೇನ್, ಪತ್ನಿ ಹಾಗೂ ಮಕ್ಕಳಿಗೂ ಅವರು ರಾಜಕೀಯ ಸೇರ್ಪಡೆಯಾಗುವುದು ಇಷ್ಟವಿರಲಿಲ್ಲ ಎನ್ನಲಾಗಿದೆ. ಆದರೆ ಹುಸೇನ್ ರಾಜಕೀಯದಿಂದ ದೂರವಾಗಲು ತೃಣಮೂಲ ಕಾಂಗ್ರೆಸ್ ಪಕ್ಷದ ಬೆದರಿಕೆಗಳೇ ಕಾರಣ ಎಂದು ಬಿಜೆಪಿ ಆರೋಪಿಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ಬೆದರಿಕೆಗಳು ಈ ಹಿಂದೆಯೂ ಹಲವು ಬಾರಿ ನೋಡಿದ್ದೇವೆ. ಆದರೆ ಇಂತಹ ವರ್ತನೆಯಿಂದ ಜನರ ಬೆಂಬಲ ಪಡೆಯಲು ಸಾಧ್ಯವಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ಕಾರ್ಯದರ್ಶಿ ಸಯಂತನ್ ಬಸು ಆರೋಪಿಸಿದ್ದಾರೆ.

  • ಪರಿಚಯಸ್ಥನಿಂದ್ಲೇ ನಟಿಯ ಮೇಲೆ ಅತ್ಯಾಚಾರ- ವಿಡಿಯೋ ರೆಕಾರ್ಡ್

    ಪರಿಚಯಸ್ಥನಿಂದ್ಲೇ ನಟಿಯ ಮೇಲೆ ಅತ್ಯಾಚಾರ- ವಿಡಿಯೋ ರೆಕಾರ್ಡ್

    – ನಟಿಯ ಅಪಾರ್ಟ್‍ಮೆಂಟಿಗೆ ಬಂದು ರೇಪ್

    ಕೊಲ್ಕತ್ತಾ: ಬೆಂಗಾಲಿಯ 26 ವರ್ಷದ ನಟಿ ಮತ್ತು ರೂಪದರ್ಶಿಯ ಮೇಲೆ ಅತ್ಯಾಚಾರ ಎಸಗಿರುವ ಬಗ್ಗೆ ಕೊಲ್ಕತ್ತಾದ ಬಿಜೋಯ್ ಪ್ರದೇಶದಲ್ಲಿ ವರದಿಯಾಗಿದೆ.

    ಕೆಲವು ಟಿವಿ ಕಾರ್ಯಕ್ರಮಗಳಲ್ಲಿ ಮೂಲಕ ನಟಿ ಖ್ಯಾತಿ ಪಡೆದುಕೊಂಡಿದ್ದರು. ಜುಲೈ 8 ರಂದು ಜಾದವ್‍ಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಾಗಿದೆ.

    ಜುಲೈ 5 ರಂದು ನಟಿಗೆ ಪರಿಚಿತವಿರುವ ವ್ಯಕ್ತಿ ಬಿಜೋಯ್‍ದಲ್ಲಿರುವ ಅವರ ಅಪಾರ್ಟ್‍ಮೆಂಟಿಗೆ ಬಂದಿದ್ದನು. ಆತ ಆರ್ಥಿಕ ಸಹಾಯವನ್ನು ಕೇಳಿಕೊಂಡು ನಟಿಯ ಬಳಿ ಬಂದಿದ್ದನು. ಆದರೆ ಫ್ಲ್ಯಾಟ್‍ನಲ್ಲಿ ನಟಿ ಏಕಾಂಗಿಯಾಗಿ ಇರುವುದನ್ನು ನೋಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ವರದಿಯಾಗಿದೆ.

    ಅಷ್ಟೇ ಅಲ್ಲದೇ ಆತ ಅದನ್ನು ತನ್ನ ಫೋನ್‍ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾನೆ. ಒಂದು ವೇಳೆ ಪೊಲೀಸರಿಗೆ ದೂರು ನೀಡಿದರೆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ನಟಿ ಧೈರ್ಯದಿಂದ ಜಾದವ್‍ಪುರ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ ಎಂದು ಪೊಲಿಸರು ತುಳಿಸಿದ್ದಾರೆ.

    ನಟಿ ಮೂಲತಃ ಪಶ್ಚಿಮ ಬಂಗಾಳದ ನಾಡಿಯಾ ಮೂಲದವರಾಗಿದ್ದು, ಕೊಲ್ಕತ್ತಾದಲ್ಲಿ ವಾಸಿಸುತ್ತಿದ್ದರು. ಅತ್ಯಾಚಾರ ಎಸಗಿರುವ ವ್ಯಕ್ತಿ ಮತ್ತು ನಟಿ ಇಬ್ಬರು ಸ್ನೇಹಿತರಾಗಿದ್ದು, ಕೆಲವು ವರ್ಷಗಳ ಹಿಂದೆ ಜಗಳ ಮಾಡಿಕೊಂಡು ದೂರವಾಗಿದ್ದರು. ಲಾಕ್‍ಡೌನ್ ಸಮಯದಲ್ಲಿ ಆ ವ್ಯಕ್ತಿ ಫೇಸ್‍ಬುಕ್ ಮೂಲಕ ಮತ್ತೆ ನಟಿಯನ್ನು ಸಂಪರ್ಕಿಸಿ ಅವಳನ್ನು ಭೇಟಿಯಾಗುವಂತೆ ಮನವಿ ಮಾಡಿಕೊಂಡಿದ್ದಾನೆ. ಆದರೆ ನಟಿ ಆತನನ್ನು ಭೇಟಿಯಾಗಲು ನಿರಾಕರಿಸಿದ್ದರು ಎಂದು ತಿಳಿದು ಬಂದಿದೆ.

    ಕೊನೆಗೆ ಆ ವ್ಯಕ್ತಿ ತನ್ನ ವ್ಯವಹಾರದಲ್ಲಿ ನಷ್ಟವಾಗಿದೆ. ಹೀಗಾಗಿ ತನಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ಮನವೊಲಿಸಿದ್ದಾನೆ. ಹೀಗಾಗಿ ನಟಿಯಿದ್ದ ಅಪಾರ್ಟ್‍ಮೆಂಟಿಗೆ ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಪೊಲೀಸರು ನಟಿಯ ಹೇಳಿಕೆಯನ್ನು ದಾಖಲಿಸಿಕೊಂಡು ಈ ಕುರಿತು ತನಿಖೆ ಮುಂದುವರಿಸಿದ್ದಾರೆ.

  • ಸಮುದ್ರ ತೀರದಲ್ಲಿ 36 ಅಡಿ ಉದ್ದದ ಬೃಹತ್ ತಿಮಿಂಗಿಲದ ಶವ ಪತ್ತೆ

    ಸಮುದ್ರ ತೀರದಲ್ಲಿ 36 ಅಡಿ ಉದ್ದದ ಬೃಹತ್ ತಿಮಿಂಗಿಲದ ಶವ ಪತ್ತೆ

    ಕೊಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೋರ್ ಜಿಲ್ಲೆಯ ಸಮುದ್ರ ತೀರವೊಂದರಲ್ಲಿ 36 ಅಡಿ ಉದ್ದದ ಬೃಹತ್ ತಿಮಿಂಗಿಲದ ಶವವೊಂದು ಪತ್ತೆಯಾಗಿದೆ.

    ಮಿಡ್ನಾಪೋರ್ ಜಿಲ್ಲೆಯ ಮಂದಾರಮಣಿ ಬೀಚ್‍ನಲ್ಲಿ ಸೋಮವಾರ ಬೃಹತ್ ತಿಮಿಂಗಿಲದ ಶವ ಪತ್ತೆಯಾಗಿದೆ. ತಿಮಿಂಗಿಲದ ದೇಹ ಮತ್ತು ಬಾಲದ ಮೇಲೆ ಅನೇಕ ಗಾಯದ ಗುರುತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ತಿಮಿಂಗಿಲದ ಸಾವಿಗೆ ಕಾರಣ ತಿಳಿದುಬಂದಿಲ್ಲ.

    ತಿಮಿಂಗಿಲದ ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಸ್ಥಳೀಯ ಮಂದಾರಮಣಿ ಪೊಲೀಸ್ ಠಾಣೆ ಮತ್ತು ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದಾರೆ.

    ಇನ್ನೂ ಬೃಹತ್ ತಿಮಿಂಗಿಲವನ್ನು ಕಂಡು ಅಚ್ಚರಿಗೊಂಡ ಸ್ಥಳೀಯರು ಕಡಲತೀರದ ಬಳಿ ಜಮಾಯಿಸಿದ್ದು, ತಿಮಿಂಗಿಲದ ಮೃತದೇಹದೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಮಂದಾರಮಣಿ ಬೀಚ್‍ ಮಿಡ್ನಾಪೋರ್ ನ ಜನಪ್ರಿಯ ಪ್ರವಾಸಿ ತಾಣವಾಗಿದೆ.

  • ಮದ್ಯದ ಮತ್ತಲ್ಲಿ ಟಾಪ್ ಇಲ್ಲದೆ 5 ಕಿ.ಮೀ ನಡೆದ ಯುವತಿ

    ಮದ್ಯದ ಮತ್ತಲ್ಲಿ ಟಾಪ್ ಇಲ್ಲದೆ 5 ಕಿ.ಮೀ ನಡೆದ ಯುವತಿ

    – ಜನನಿಬಿಡ ರಸ್ತೆಯಲ್ಲೇ ಅಸಭ್ಯ ವರ್ತನೆ

    ಕೋಲ್ಕತ್ತಾ: ಮದ್ಯದ ಮತ್ತಲ್ಲಿ ಯುವತಿಯೊಬ್ಬಳು ಟಾಪ್ ಇಲ್ಲದೆ ರಸ್ತೆ ಇಳಿದು ಸುಮಾರು 5 ಕಿ.ಮೀ ನಡೆದ ಘಟನೆ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದಿದೆ.

    ಈ ಆಘಾತಕಾರಿ ಘಟನೆಯು ಮಂಗವಾರ ರಾತ್ರಿ ನಡೆದಿದ್ದು, ಅಸಭ್ಯವಾಗಿ ನಡೆದು ಹೋಗುತ್ತಿದ್ದ ಯುವತಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಕೋಲ್ಕತ್ತಾದ ಪದ್ಮಪುಕೂರ್ ಪ್ರದೇಶದ ನಿವಾಸಿಯಾಗಿದ್ದಾಳೆ. ಆದರೆ ಆಕೆಯ ಹೆಸರನ್ನು ಪೊಲೀಸರು ಬಹಿರಂಗಪಡಿಸಿಲ್ಲ.

    ಯುವತಿ ಮಂಗಳವಾರ ರಾತ್ರಿ ಮದ್ಯ ಕುಡಿದ ಮತ್ತಿನಲ್ಲಿ ಗೆಳೆಯನ ಜೊತೆಗೆ ಕೋಲ್ಕತ್ತಾದ ಜನನಿಬಿಡ ಪ್ರದೇಶ ಇಂದಿರಾ ಗಾಂಧಿ ರೆಡ್ ರೋಡ್‍ನಿಂದ ನಡೆದು ಇಡನ್ ಗಾರ್ಡ್ ವರೆಗೂ ನಡೆದುಕೊಂಡು ಹೋಗಿದ್ದಳು. ಆದರೆ ರಸ್ತೆಯುದ್ದರಕ್ಕೂ ಅಸಭ್ಯವಾಗಿ ವರ್ತಿಸುತ್ತಾ, ಟಾಪ್ ಇಲ್ಲದೆ ಸುಮಾರು 5 ಕಿ.ಮೀ. ನಡೆದಿದ್ದಾಳೆ. ಇದರಿಂದಾಗಿ ಸಂಚಾರಕ್ಕೆ ತೊಂದರೆ ಉಂಟಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಯುವತಿಯ ವರ್ತನೆಯಿಂದ ಬೇಸತ್ತ ಕೆಲ ಸ್ಥಳೀಯರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಯುವತಿಯನ್ನ ವಶಕ್ಕೆ ಪಡೆದು ವ್ಯಾನ್‍ನಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

  • ಕೊರೊನಾಗೆ ತೃಣಮೂಲ ಕಾಂಗ್ರೆಸ್ ಶಾಸಕ ಬಲಿ

    ಕೊರೊನಾಗೆ ತೃಣಮೂಲ ಕಾಂಗ್ರೆಸ್ ಶಾಸಕ ಬಲಿ

    ಕೋಲ್ಕತಾ: ಕೊರೊನಾ ವೈರಸ್‍ನಿಂದಾಗಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ತಮೋನಾಶ್ ಘೋಷ್ (60) ನಿಧನರಾಗಿದ್ದಾರೆ.

    ತಮೋನಾಶ್ ಘೋಷ್ ಕಳೆದ ತಿಂಗಳು ಕೊರೊನಾ ವೈರಸ್ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಕೊರೊನಾ ಟೆಸ್ಟ್ ಮಾಡಿದಾಗ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಆದರೆ ಇತ್ತೀಚೆಗೆ ತಮೋನಾಶ್ ಘೋಷ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ತಮೋನಾಶ್ ಘೋಷ್ ಸಾವಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ತುಂಬಾ ದುಃಖವಾಗಿದೆ. 1998 ರಿಂದ ತೃಣಮೂಲ ಕಾಂಗ್ರೆಸ್ ಪಕ್ಷದ ಖಜಾಂಚಿಯಾಗಿದ್ದು. ಮೂರು ಬಾರಿ ಶಾಸಕರಾಗಿದ್ದರು. 35 ವರ್ಷಗಳಿಂದ ನಮ್ಮೊಂದಿಗೆ ಇದ್ದರು. ಇವರು ಜನರ ಮತ್ತು ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಸಿದ್ದರು. ಅಲ್ಲದೇ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದರು. ಆದರೆ ಇಂದು ತಮೋನಾಶ್ ಘೋಷ್ ನಮ್ಮೊಂದಿಗಿಲ್ಲ” ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

    ಮತ್ತೊಂದು ಟ್ವೀಟ್ ಮಾಡಿ, ತಮೋನಾಶ್ ಘೋಷ್ ಅವರ ಪತ್ನಿ ಜರ್ನಾ, ಅವರ ಇಬ್ಬರು ಹೆಣ್ಣುಮಕ್ಕಳು, ಸ್ನೇಹಿತರು ಮತ್ತು ಹಿತೈಷಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರಿಗೆ ಕೊಡಲಿ ಎಂದು ಸಂತಾಪಗಳು ಸೂಚಿಸಿದ್ದಾರೆ.

  • ಬೆಂಗ್ಳೂರಿನಲ್ಲಿ ಪತ್ನಿಯ ಕೊಂದು, ಅತ್ತೆಯನ್ನು ಕೊಲ್ಲಲು ಕೋಲ್ಕತ್ತಾಗೆ ಹೋದ

    ಬೆಂಗ್ಳೂರಿನಲ್ಲಿ ಪತ್ನಿಯ ಕೊಂದು, ಅತ್ತೆಯನ್ನು ಕೊಲ್ಲಲು ಕೋಲ್ಕತ್ತಾಗೆ ಹೋದ

    – ಅತ್ತೆಗೆ ಗುಂಡಿಕ್ಕಿ, ತಾನು ಗುಂಡಿಕ್ಕಿಕೊಂಡು ಪ್ರಾಣ ಬಿಟ್ಟ

    ಕೋಲ್ಕತ್ತಾ: ಬೆಂಗಳೂರಿನಲ್ಲಿ ಪತ್ನಿಯನ್ನು ಕೊಂದು ನಂತರ ಕೋಲ್ಕತ್ತಾಗೆ ಹೋದ ಟೆಕ್ಕಿ ಅಲ್ಲಿ ಅತ್ತೆಗೆ ಗುಂಡಿಕ್ಕಿ ಕೊಂದು ನಂತರ ತಾನೂ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾನೆ.

    ಬೆಂಗಳೂರಿನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅಮಿತ್ ಅಗರ್ವಾಲ್ (42) ತನ್ನ ಪತ್ನಿ ಶಿಲ್ಪಿ ಧಂಧಾನಿಯಾ ಅವರನ್ನು ಬೆಂಗಳೂರಿನ ವೈಟ್‍ಫೀಲ್ಡ್ ನ ನಿವಾಸದಲ್ಲಿ ಕೊಲೆ ಮಾಡಿದ್ದಾನೆ. ನಂತರ ಕೋಲ್ಕತ್ತಾಗೆ ಹೋಗಿ ಅತ್ತೆ ಲಲಿತ ಧಂಧಾನಿಯಾ ಅವರನ್ನು ಶೂಟ್ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಪೊಲೀಸರ ಮಾಹಿತಿ ಪ್ರಕಾರ, ಅಮಿತ್ ಮತ್ತು ಶಿಲ್ಪಿ ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ವೈವಾಹಿಕ ಜೀವನದಲ್ಲಿ ಜಗಳವಾಗಿ ವಿಚ್ಛೇದನ ಪಡೆಯುವ ಮಟ್ಟಕ್ಕೆ ಬಂದು ನಿಂತಿದ್ದರು. ಹೀಗಾಗಿ ಕೋಪಗೊಂಡ ಅಮಿತ್ ಮೊದಲು ಶಿಲ್ಪಿಯನ್ನು ಕೊಂದಿದ್ದಾನೆ. ನಂತರ ಅದೇ ದಿನ ಕೋಲ್ಕತ್ತಾಗೆ ಹೋಗಿ ಅತ್ತೆಯನ್ನು ಶೂಟ್ ಮಾಡಿದ್ದಾನೆ. ಈ ವೇಳೆ ಮನೆಯಲ್ಲೇ ಇದ್ದ ಮಾವ ಹೊರೆಗೆ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾರೆ.

    ಪತ್ನಿಯನ್ನು ಸೋಮವಾರ ಬೆಳಗ್ಗೆ ಕೊಲೆ ಮಾಡಿದ ಅಗರ್ವಾಲ್, ಸಂಜೆ 5.30ರ ಸುಮಾರಿಗೆ ಕೋಲ್ಕತ್ತಾದ ಫೂಲ್‍ಬಾಗನ್ ಪ್ರದೇಶದ ತಮ್ಮ ಅತ್ತೆ-ಮಾವನ ಫ್ಲ್ಯಾಟ್‍ಗೆ ಬಂದಿದ್ದಾನೆ. ಈ ವೇಳೆ ಅತ್ತೆ-ಮಾವನ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕೆ ತಿರುಗಿ ಅಮಿತ್ ಗನ್ ತೆಗೆದು ಅತ್ತೆ ಲಲಿತಾ ಅವರಿಗೆ ಶೂಟ್ ಮಾಡಿದ್ದಾನೆ. ಈ ವೇಳೆ ಮನೆಯಿಂದ ಓಡಿ ಹೋದ ಮಾವ ಹೊರಗಿನಿಂದ ಲಾಕ್ ಮಾಡಿಕೊಂಡು ಅಕ್ಕಪಕ್ಕದ ಮನೆಯವರನ್ನು ಕರೆದಿದ್ದಾರೆ. ಆಗ ತಾನೂ ಶೂಟ್ ಮಾಡಿಕೊಂಡು ಅಮಿತ್ ಪ್ರಾಣ ಬಿಟ್ಟಿದಾನೆ.

    ಸ್ಥಳೀಯ ಮಾಹಿತಿ ಮೇರಗೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದಾಗ, ರೂಮಿನೊಳಗೆ ರಕ್ತದ ಮಡುವಿನಲ್ಲಿ ಅತ್ತೆ ಮತ್ತು ಅಳಿಯ ಸತ್ತು ಬಿದ್ದಿರುವುದು ಕಂಡು ಬಂದಿದೆ. ಅಮಿತ್ ಬಳಿ ಡೆತ್‍ನೋಟ್ ಕೂಡ ಸಿಕ್ಕಿದ್ದು, ಅದರಲ್ಲಿ ಬೆಂಗಳೂರಿನ ಮನೆಯಲ್ಲಿ ತನ್ನ ಹೆಂಡತಿಯನ್ನು ಕೊಂದಿರುವುದಾಗಿ ಬರೆದಿದ್ದಾನೆ. ತಕ್ಷಣ ಕೋಲ್ಕತ್ತಾ ಪೊಲೀಸರು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೋದ ಬೆಂಗಳೂರು ಪೊಲೀಸರು ಪತ್ನಿಯನ್ನು ಕೊಂದಿರುವುದನ್ನು ದೃಢಪಡಿಸಿದ್ದಾರೆ.

    ಅಮಿತ್ ಮತ್ತು ಶಿಲ್ಪಿ ದಂಪತಿಗೆ 10 ವರ್ಷದ ಒಬ್ಬ ಮಗನೂ ಇದ್ದು, ಅವನ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ. ಆದರೆ ಅವನು ಸುರಕ್ಷಿತವಾಗಿ ಇದ್ದಾನೆ ಎಂದು ಮಾತ್ರ ಹೇಳಿದ್ದಾರೆ. ಈಗ ಪ್ರಾಥಮಿಕ ತನಿಖೆ ಮುಗಿದಿದ್ದು, ಘಟನೆ ಕಾರಣವೇನು ಎಂಬುದನ್ನು ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  • ಮದ್ವೆಯಾದ್ರೂ ಪ್ರೀತ್ಸೆ ಪ್ರೀತ್ಸೆ ಎಂದು ಯುವತಿ ಹಿಂದೆ ಬಿದ್ದ- ಮನೆಗೆ ನುಗ್ಗಿ ಗುಂಡು ಹಾರಿಸ್ದ

    ಮದ್ವೆಯಾದ್ರೂ ಪ್ರೀತ್ಸೆ ಪ್ರೀತ್ಸೆ ಎಂದು ಯುವತಿ ಹಿಂದೆ ಬಿದ್ದ- ಮನೆಗೆ ನುಗ್ಗಿ ಗುಂಡು ಹಾರಿಸ್ದ

    – ಪರಸ್ಪರ ಪ್ರೀತಿಸ್ತಿದ್ದ ಪ್ರೇಮಿಗಳು

    ಕೋಲ್ಕತಾ: ಮಾಜಿ ಪ್ರಿಯಕರನೊಬ್ಬ ಹಾಡಹಗಲೇ ತನ್ನ ಪ್ರೇಯಿಸಿಗೆ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಕೋಲ್ಕತ್ತಾದ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ನಡೆದಿದೆ.

    ಪ್ರಿಯಾಂಕಾ ಪುರ್‍ಕೈಟ್ (20) ಕೊಲೆಯಾದ ಯುವತಿ. ನಗರದ ಮಹಿಳಾ ಕ್ರಿಶ್ಚಿಯನ್ ಕಾಲೇಜಿನ ಮೂರನೇ ವರ್ಷದ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದಳು. ದಕ್ಷಿಣ ಕೋಲ್ಕತ್ತಾದ ಆನಂದಪಲ್ಲಿ ಈ ಘಟನೆ ನಡೆದಿದ್ದು, ಪ್ರಿಯಾಂಕಾಳನ್ನು ಆಕೆಯ ಮನೆಯೊಳಗೆ ಆರೋಪಿ ಮಾಜಿ ಪ್ರಿಯಕರ ಜಯಂತಾ ಹಲ್ದಾರ್ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ಪೊಲೀಸ್ ವರದಿಯಲ್ಲಿ ತಿಳಿದುಬಂದಿದೆ.

    ಏನಿದು ಪ್ರಕರಣ?
    ಪ್ರಿಯಾಂಕಾ ಮತ್ತು ಜಯಂತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈಗಾಗಲೇ ಆರೋಪಿಗೆ ಮದುವೆಯಾಗಿದೆ. ಆದರೆ ಆರೋಪಿ ತನಗೆ ವಿವಾಹವಾಗಿರುವ ವಿಚಾರವನ್ನು ಪ್ರಿಯಾಂಕಾಳಿಂದ ಮುಚ್ಚಿಟ್ಟಿದ್ದನು. ಇತ್ತೀಚೆಗೆ ಜಯಂತಾಗೆ ಈಗಾಗಲೇ ಮದುವೆಯಾಗಿರುವ ವಿಚಾರ ಪ್ರಿಯಾಂಕಾಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡ ಪ್ರಿಯಾಂಕಾ ಲವ್ ಬ್ರೇಕಪ್ ಮಾಡಿಕೊಂಡಿದ್ದಳು. ಜೊತೆಗೆ ಮತ್ತೆ ನನ್ನನ್ನು ಭೇಟಿಯಾಗಬಾರದೆಂದು ಎಚ್ಚರಿಕೆ ನೀಡಿದ್ದಳು.

    ಆರೋಪಿ ಜಯಂತಾ ತನ್ನ ಪ್ರೇಯಸಿಯ ಮನೆಯ ಸಮೀಪವೇ ವಾಸಿಸುತ್ತಿದ್ದನು. ಪ್ರಿಯಾಂಕಾ ದೂರ ಮಾಡಿದ್ದಕ್ಕೆ ಕೋಪಗೊಂಡ ಆರೋಪಿ ಶನಿವಾರ ಬೆಳಗ್ಗೆ 8 ಗಂಟೆ ಪ್ರಿಯಾಂಕಾಳ ಮನೆಗೆ ನುಗ್ಗಿ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಆರೋಪಿ ಪರಾರಿಯಾಗಿದ್ದು, ಇದೀಗ ಆತನಿಗಾಗಿ ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ.

    ಪ್ರಿಯಾಂಕಾ ಮನೆಯ ಹೊರಗೆ ಸಾಕಷ್ಟು ಜನರು ನಿಂತಿರುವುದನ್ನು ನಾನು ನೋಡಿದೆ. ಆಗ ಯಾರೋ ಒಬ್ಬರು ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಪ್ರಿಯಾಂಕಾಳನ್ನು ಕುತ್ತಿಗೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಹೇಳಿದರು. ಜನರು ಪ್ರಿಯಾಂಕಾ ಮನೆಗೆ ಬರುವಷ್ಟರಲ್ಲಿ ಆರೋಪಿ ಪರಾರಿಯಾಗಿದ್ದನು. ತಕ್ಷಣ ಪ್ರಿಯಾಂಕಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು ಎಂದು ಪ್ರಿಯಾಂಕಾ ಪಕ್ಕದ ಮನೆಯವರು ಹೇಳಿದರು.

    ನಾನು ಬೆಳಗ್ಗೆ ಮಲಗಿದ್ದೆ, ಆಗ ಜೋರಾದ ಶಬ್ದ ಕೇಳಿತು. ನಾನು ಏನಾಯಿತು ಎಂದು ನೋಡಲು ಕಿಟಕಿಯತ್ತ ಓಡಿ ಬಂದೆ. ಆಗ ಯಾರೋ ಪ್ರಿಯಾಂಕಾಳಿಗೆ ಗುಂಡು ಹಾರಿಸಿದ್ದಾರೆ ಎಂದು ಕುಟುಂಬದವರು ಕಿರುಚುತ್ತಿದ್ದರು. ಗಾಬರಿಯಾದ ನಾನು ಕೆಳಗೆ ಓಡಿ ಹೋದೆ, ಅಷ್ಟರಲ್ಲಿ ಆರೋಪಿಗಳು ಓಡಿಹೋಗಿದ್ದರು ಎಂದು ಸ್ಥಳೀಯ ಮಹಿಳೆಯೊಬ್ಬರು ತಿಳಿಸಿದರು.

    ಸದ್ಯಕ್ಕೆ ರೀಜೆಂಟ್ ಪಾರ್ಕ್ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಯುತ್ತಿರುವುದರಿಂದ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಕುಟುಂಬದವರನ್ನು ವಿಚಾರಣೆ ಮಾಡುತ್ತಿದ್ದಾರೆ.