Tag: kolara

  • ಬೆಳಕು ಫಲಶೃತಿ: ಎಂಬಿಎ ಪದವಿ ಮುಗಿಸಿ ಉದ್ಯೋಗ ಪಡೆದ ಕೋಲಾರದ ಪ್ರತಿಭೆ

    ಬೆಳಕು ಫಲಶೃತಿ: ಎಂಬಿಎ ಪದವಿ ಮುಗಿಸಿ ಉದ್ಯೋಗ ಪಡೆದ ಕೋಲಾರದ ಪ್ರತಿಭೆ

    ಕೋಲಾರ: ತಂದೆಯನ್ನು ಕಳೆದುಕೊಂಡು ತಾಯಿಯ ಆಸರೆಯಲ್ಲಿ ಬೆಳೆದು ಪದವಿ ಮುಗಿಸಿದ ಕೋಲಾರ ತಾಲೂಕು ಕೋಡಿ ಕಣ್ಣೂರು ಗ್ರಾಮದ ಭಾಗ್ಯಶ್ರೀ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಚೆನ್ನಾಗಿ ಓದಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಎಂಬಿಎ ಸೀಟು ಪಡೆದು ಪ್ರವೇಶ ಶುಲ್ಕ ಭರಿಸಲಾಗದೇ ದಿಕ್ಕು ದೋಚದೇ ಕಂಗಲಾಗಿದ್ದರು. ಓದಲೇ ಬೇಕು ಎಂಬ ಛಲದಿಂದ ಓದಲು ಸಹಾಯ ಮಾಡಿ ಎಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು.

    ಬೆಳಕು ಕಾರ್ಯಕ್ರಮದ ಮೂಲಕ ಎಂಬಿಎ ಮಾಡಬೇಕೆಂಬ ಹೆಬ್ಬಯಕೆಯನ್ನು ಈಡೇರಿಸುವುದಾಗಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅಂದು ಭರವಸೆ ನೀಡಿದ್ದರು. ಆದಾಗಿ ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಯುವತಿಯ ವಿದ್ಯಾಭ್ಯಾಸದ ಆಸಕ್ತಿಯನ್ನು ನೋಡಿ ಆಕೆಯ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಭರಿಸುವುದಾಗಿ ಹೇಳಿದರು. ಅವರು ಕೊಟ್ಟ ಮಾತಿನಿಂದ ವಿದ್ಯಾಭ್ಯಾಸಕ್ಕೆ 2 ಲಕ್ಷ ರೂಪಾಯಿಗಳ ನೆರವು ನೀಡಿ ಯುವತಿಯ ಬದುಕಿಗೆ ಬೆಳಕಾಗಿದ್ದಾರೆ.

    ವಿದ್ಯಾರ್ಥಿನಿ ಭಾಗ್ಯಶ್ರೀ ಓದಿ ಎಂಬಿಎ ಪದವಿಯನ್ನು ಪೂರ್ಣ ಗೊಳಿಸಿ ಕೆಲಸಕ್ಕೆ ಸೇರಿಕೊಂಡು ಖುಷಿ ಪಟ್ಟಿದ್ದಾರೆ. ಅಷ್ಟಕ್ಕೆ ತೃಪ್ತಿ ಪಡದ ವಿದ್ಯಾರ್ಥಿನಿ ತನ್ನ ಮೊದಲ ತಿಂಗಳ 20 ಸಾವಿರ ರೂಪಾಯಿ ಸಂಬಳವನ್ನ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ನೀಡಲು ಬಂದಿದ್ದಾರೆ. ಪಬ್ಲಿಕ್ ಟಿವಿ ಮೂಲಕ ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಾಯ ಮಾಡುವ ಕನಸು ಕಟ್ಟಿಕೊಂಡಿದ್ದಾರೆ.

     

    ಒಟ್ಟಿನಲ್ಲಿ ಅದೆಷ್ಟೋ ನೊಂದವರಿಗೆ, ಕತ್ತಲೆಯಲ್ಲಿರುವವರಿಗೆ ಬೆಳಕಿನ ಆಸರೆ ನೀಡಿ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವ ಬೆಳಕು ಕಾರ್ಯಕ್ರಮ ನೊಂದರ ಬಾಳಿನ ದಾರಿ ದೀಪವಾಗಿ ಕಂಗೊಳಿಸುತ್ತಿದೆ.

    https://youtu.be/ipVNIalXQ9M

  • ಕೋಲಾರ ಚಿನ್ನದ ಗಣಿಗೆ ಇಳಿದಿದ್ರು ಕರುಣಾನಿಧಿ

    ಕೋಲಾರ ಚಿನ್ನದ ಗಣಿಗೆ ಇಳಿದಿದ್ರು ಕರುಣಾನಿಧಿ

    ಕೋಲಾರ: ಕರ್ನಾಟಕದಲ್ಲಿಯೂ ಡಿಎಂಕೆ ಪಕ್ಷದ ಅಸ್ತಿತ್ವ ಸಾಧಿಸುವ ಉದ್ದೇಶವನ್ನು ಕರುಣಾನಿಧಿ ಹೊಂದಿದ್ದರು. ಹೀಗಾಗಿ ಜಿಲ್ಲೆಯ ಕೆಜಿಎಫ್‍ಗೆ ಮೂರು ಬಾರಿ ಭೇಟಿ ನೀಡಿದ್ದರಂತೆ.

    ಜಿಲ್ಲೆಯಲ್ಲಿ ಡಿಎಂಕೆ ಬೆಳವಣಿಗೆ ಉದ್ದೇಶದಿಂದ ಕೆಜಿಎಫ್‍ನ ಪಕ್ಷ ಮುಖಂಡರು ಕರುಣಾನಿಧಿ ಅವರಿಗೆ ಆಮಂತ್ರಣ ನೀಡುತ್ತಿದ್ದರಂತೆ. ಹೀಗಾಗಿ ಅವರು 1954 ಜುಲೈ 6ರಂದು ಕಾರ್ಯಕರ್ತರ ಸಭೆ ಹಾಗೂ 1972ರ ಅಕ್ಟೋಬರ್ 4ರಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ, ಪಕ್ಷಕ್ಕೆ ಬೆಂಬಲ ನೀಡುವಂತೆ ಜಿಲ್ಲೆಯ ತಮಿಳು ಭಾಷಿಗರ ಮನವೊಲಿಸಿದ್ದರು.

    1972ರಲ್ಲಿ ಹೆನ್ರೀಸ್ ಬಳಿಯ ಚಿನ್ನದ ಗಣಿಗೆ ಭೇಟಿ ನೀಡಿ, ಕೆಳಗೆ ಇಳಿದಿದ್ದರು. ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಜೊತೆಗೆ ಮಾತನಾಡಿ, ಕಾರ್ಮಿಕರೊಬ್ಬರ ಟೋಪಿ ಕೇಳಿ ಪಡೆದು, ಹಾಕಿಕೊಂಡು ಫೋಟೋ ತೆಗೆಸಿಕೊಂಡಿದ್ದರು. ಜೊತೆಗೆ ಅಂದು ರಾಬರ್ಟ್ ಸನ್ ಪೇಟೆಯ ಕೃಷ್ಣ ಭವನ್ ವಸತಿ ಗೃಹದಲ್ಲಿ ತಂಗಿದ್ದರೆಂಬ ಮಾಹಿತಿಯಿದೆ.

    1984ರಲ್ಲಿ ರಾಬರ್ಟ್ ಸನ್ ಪೇಟೆಯಲ್ಲಿ ನಡೆದ ಡಿಎಂಕೆ ಸಮಾವೇಶದಲ್ಲಿ ಮತ್ತೊಮ್ಮೆ ಭಾಗವಹಿಸಿದ್ದರು. ಅಂದು ಅಭಿಮಾನಿಗಳು ಬೈಕ್ ಜಾಥಾದ ಮೂಲಕ ಬೇತಮಂಗಲದಿಂದ ಕಾರ್ಯಕ್ರಮ ವೇದಿಕೆಗೆ ಕರೆ ತಂದಿದ್ದರು. ಸಮಾವೇಶದಲ್ಲಿ ಮಾತನಾಡಿದ ಕರುಣಾನಿಧಿ ಅವರು, ನಿಮ್ಮನ್ನು ನೀವು ಈ ಮಣ್ಣಿಗೆ ತಕ್ಕಂತೆ ಬದಲಾಯಿಸಿಕೊಳ್ಳಿ. ಮಾತೃ ಭಾಷೆ ತಮಿಳು ಆಗಿದ್ದರೂ ಅದು ನಿಮ್ಮ ಮನದಲ್ಲಿ ಇರಲಿ ಎಂದು ಹೇಳಿ ತಮಿಳು ಭಾಷಿಕರ ಮನ ಗೆದ್ದಿದ್ದರು ಎಂದು ವರದಿಯಾಗಿದೆ.

    ತಮಿಳುನಾಡಿಗೆ ಸಮೀಪವಿರುವ ಕೆಜಿಎಫ್‍ನಲ್ಲಿ ಈಗಲೂ ಎಂ.ಜಿ.ರಾಮಚಂದ್ರನ್ ಹಾಗೂ ಕರುಣಾನಿಧಿ ಅಪಾರ ಬೆಂಬಲಿಗರು ಇದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರೇಷ್ಮೆ ಬೆಲೆ ಕುಸಿತ, ಮನನೊಂದು ರೈತ ಆತ್ಮಹತ್ಯೆ!

    ರೇಷ್ಮೆ ಬೆಲೆ ಕುಸಿತ, ಮನನೊಂದು ರೈತ ಆತ್ಮಹತ್ಯೆ!

    ಕೋಲಾರ: ರೇಷ್ಮೆ ಬೆಲೆ ಕುಸಿತ ಹಾಗೂ ಸಾಲಬಾಧೆಯಿಂದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ತಾಲೂಕಿನ ಮಟ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮಟ್ನಹಳ್ಳಿ ಗ್ರಾಮದ ವೆಂಕಟಪ್ಪ(55) ಆತ್ಮಹತ್ಯೆಗೆ ಶರಣಾದ ರೈತ. ವೆಂಕಟಪ್ಪ ಮಟ್ನಹಳ್ಳಿ ಗ್ರಾಮದಲ್ಲಿ 4 ಎಕರೆ ಜಮೀನಿನಲ್ಲಿ ರೇಷ್ಮೆ ಕೃಷಿ ಮಾಡುತ್ತಿದ್ದರು. ಅಲ್ಲದೇ ಇತ್ತೀಚೆಗೆ ಬೆಳೆದ ರೇಷ್ಮೆಯನ್ನ ಮಾರುಕಟ್ಟೆಗೆ ಹಾಕಿದ್ದರು. ಮಾರುಕಟ್ಟೆಯಲ್ಲಿ ರೇಷ್ಮೆಗೆ ಪ್ರತಿ ಕೆಜಿಗೆ 200 ರಿಂದ 300 ರೂಪಾಯಿಗೆ ಮಾರಾಟವಾಗಿದ್ದರಿಂದ  ಬೇಸತ್ತ ರೈತ ವೆಂಕಟಪ್ಪ ಇಂದು ಮುಂಜಾನೆ ರೇಷ್ಮೆ ಬೆಳೆಯುವ ಮನೆ ಬಳಿ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮೃತ ವೆಂಕಟಪ್ಪ ಕೆನರಾ ಬ್ಯಾಂಕ್, ಪ್ರಗತಿ ಗ್ರಾಮೀಣ ಬ್ಯಾಂಕ್ ಹಾಗೂ ಕೈ ಸಾಲ ಸೇರಿದಂತೆ ಸುಮಾರು 20 ಲಕ್ಷದಷ್ಟು ಸಾಲ ಮಾಡಿಕೊಂಡಿದ್ದರು. ಬೆಳೆದ ರೇಷ್ಮೆ ಬೆಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಸಾಲ ತೀರಿಸಲು ಭಯಪಟ್ಟು ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

    ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    https://www.youtube.com/watch?v=Ak9d50WwJAY

  • ಅನುಮಾನಾಸ್ಪದ ರೀತಿಯಲ್ಲಿ ಒಂಟಿ ಸಲಗ ಸಾವು – ಜನರೇ ವಿಷ ಹಾಕಿ ಕೊಂದ್ರಾ?

    ಅನುಮಾನಾಸ್ಪದ ರೀತಿಯಲ್ಲಿ ಒಂಟಿ ಸಲಗ ಸಾವು – ಜನರೇ ವಿಷ ಹಾಕಿ ಕೊಂದ್ರಾ?

    ಕೋಲಾರ: ಜಿಲ್ಲೆಯ ಗಡಿ ಪ್ರದೇಶವಾದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂನಲ್ಲಿ ಒಂಟಿ ಸಲಗವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದೆ.

    ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಾಳ್ಯಂನ ನಾಯುಡು ಎಂಬ ಮಾವಿನ ತೋಟದಲ್ಲಿ ಅನುಮಾನಾಸ್ಪದವಾಗಿ ಆನೆಯೊಂದು ಮೃತಪಟ್ಟಿದೆ. ಬಂಗಾರಪಾಳ್ಯಂ ಅರಣ್ಯ ಪ್ರದೇಶದಲ್ಲಿ ವ್ಯಾಪ್ತಿಯಲ್ಲಿ ಕಳೆದೊಂದು ತಿಂಗಳಿನಿಂದ 5 ಆನೆಗಳ ಹಿಂಡು ಬೀಡು ಬಿಟ್ಟಿದ್ದವು. ಮಾವಿನ ತೋಪಿನಲ್ಲಿ ಆನೆ ಸಾವನ್ನಪ್ಪಿದ್ದನ್ನು ಕಂಡ ಕುರಿಗಾಹಿಗಳು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

    ಘಟನೆ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಐದು ಆನೆಗಳ ಹಿಂಡು ಆಗಾಗ ಜಿಲ್ಲೆಯ ಕೆಜಿಎಫ್ ಹಾಗೂ ಬಂಗಾರಪೇಟೆ ತಾಲೂಕಿನ ಗಡಿ ಪ್ರದೇಶದಲ್ಲಿ ದಾಳಿ ನಡೆಸಿ ರೈತರ ಬೆಳೆ ಹಾನಿ ಮಾಡಿದ್ದವು. ಅಲ್ಲದೇ ಮಾವು ಸೇರಿದಂತೆ ವಿವಿಧ ಬೆಳೆಗಳ ನಾಶ ಮಾಡಿದ್ದರಿಂದ ರೈತರೇ ಆನೆಗೆ ವಿಷ ಹಾಕಿ ಕೊಂದಿರಬಹುದೆಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

  • ಖಾಸಗಿ ಬಸ್‍ಗಳ ಮುಖಾಮುಖಿ ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು!

    ಖಾಸಗಿ ಬಸ್‍ಗಳ ಮುಖಾಮುಖಿ ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು!

    ಕೋಲಾರ: ಖಾಸಗಿ ಬಸ್‍ಗಳು ಮುಖಾಮುಖಿ ಡಿಕ್ಕಿಯಾಗಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ನರಸಾಪುರ ಗ್ರಾಮದ ಬಳಿ ನಡೆದಿದೆ.

    ನರಸಾಪುರ ಗ್ರಾಮದ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಖಾಸಗಿ ಬಸ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ ರಭಸಕ್ಕೆ ಬಸ್‍ವೊಂದು ಪಲ್ಟಿ ಹೊಡೆದು ಬಿದ್ದಿದೆ. ಬಸ್ ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, 15 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

    ಖಾಸಗಿ ಬಸ್‍ಗಳು ಬೆಂಗಳೂರಿನಿಂದ ಪುಂಗನೂರು ಕಡೆಗೆ ಹಾಗೂ ಕೋಲಾರದಿಂದ ನರಸಾಪುರಕ್ಕೆ ಹೋಗುತ್ತಿದ್ದವು ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಬಂಡೀಪುರದ ವ್ಯಕ್ತಿ ಕೋಲಾರದಲ್ಲಿ ಅರೆಸ್ಟ್!

    ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಬಂಡೀಪುರದ ವ್ಯಕ್ತಿ ಕೋಲಾರದಲ್ಲಿ ಅರೆಸ್ಟ್!

    ಕೋಲಾರ: ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಜಿಲ್ಲೆಯ ಸೈಬರ್ ಕ್ರೈಂ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

    ಶೇಖರ್ ಬಂಧಿತ ಆರೋಪಿಯಾಗಿದ್ದಾನೆ. ಇವನು ಮೂಲತಃ ಚಾಮರಾಜನಗರ ಜಿಲ್ಲೆಯ ಬಂಡೀಪುರದ ನಿವಾಸಿ ಎಂದು ತಿಳಿದು ಬಂದಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹುಣಸಹಳ್ಳಿ ಗ್ರಾಮದ ಅಂಬರೀಶ್ ಎಂಬುವರ ಬಾಡಿಗೆ ಮನೆಯಲ್ಲಿ ಕಳೆದ 4 ತಿಂಗಳಿಂದ ವಾಸವಾಗಿದ್ದಾನೆ.

    ನೂರಕ್ಕು ಹೆಚ್ಚು ಸಿಮ್ ಕಾರ್ಡ್‍ಗಳನ್ನು ಖರೀದಿಸಿ, ಹಲವು ಜನರಿಗೆ ಭಯೋತ್ಪಾದನೆಗೆ ಕೈ ಜೋಡಿಸುವಂತೆ ಸಂದೇಶಗಳನ್ನು ರವಾನಿಸಿದ್ದ ಹಿನ್ನೆಲೆಯಲ್ಲಿ ಅನುಮಾನಗೊಂಡು ಸೈಬರ್ ಕ್ರೈಂ ಹಾಗೂ ಆರ್ಥಿಕ ಮಾದಕ ದ್ರವ್ಯ ವಿಭಾಗದ ಪೊಲೀಸರು ಆರೋಪಿಯ ಮನೆಯ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.

    ದಾಳಿ ವೇಳೆ ಆರೋಪಿ ಮನೆಯಲ್ಲಿ ನೂರಕ್ಕೂ ಹೆಚ್ಚು ಸಿಮ್ ಕಾರ್ಡ್, ಮೊಬೈಲ್ ಫೋನ್ ಹಾಗೂ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಮೇಲ್ನೋಟಕ್ಕೆ ಆರೋಪಿಯು ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದಾನೆ ಎಂದು ತಿಳಿದು ಬಂದಿದೆ.

    ಹುಣಸೇಹಳ್ಳಿ ಗ್ರಾಮದಲ್ಲಿ ಶೇಖರ್ ಎಂದು ಹೆಸರು ಹೇಳಿ ಮನೆ ಪಡೆದಿದ್ದಾನೆ. ಹಲವು ವ್ಯಕ್ತಿಗಳಿಗೆ ಕಳುಹಿಸಿರುವ ಸಂದೇಶಗಳಲ್ಲಿ “ಒಸಾಮಾ ಬಿನ್ ಲಾಡೆನ್ ಮೈ ಗಾಡ್”, ಭಯೋತ್ಪಾದನೆಗೆ ಕೈ ಜೋಡಿಸುವಂತೆ ಪ್ರಚೋದನೆ ನೀಡಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • 5 ವರ್ಷದಿಂದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದ್ದಕ್ಕೆ ಪ್ರತಿಭಟನೆ

    5 ವರ್ಷದಿಂದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡದ್ದಕ್ಕೆ ಪ್ರತಿಭಟನೆ

    ಕೋಲಾರ: ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ವಿದ್ಯಾರ್ಥಿ ವೇತನವನ್ನು ನೀಡದ್ದಕ್ಕೆ ಆಕ್ರೋಶಗೊಂಡ ದಲಿತ ಸಂಘಟನಾ ಸಮಿತಿ ಕಾರ್ಯಕರ್ತರು ಇಂದು ನಗರದ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದಾರೆ.

    ದಲಿತಾ ಸಂಘಟನಾ ಸಮಿತಿ ಕಾರ್ಯಕರ್ತರು ಇಂದು ಕೋಲಾರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಎದುರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿದ್ಯಾರ್ಥಿ ವೇತನ ನುಂಗಿ ಹಾಕಿದರ ವಿರುದ್ಧ ಪ್ರತಿಭಟನೆ ನಡೆಸಿದರು.

    ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ಯಾವುದೇ ಎಸ್‍ಎಸ್‍ಎಲ್‍ಸಿ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಮಂಜೂರು ಮಾಡಿಲ್ಲ. ಸರ್ಕಾರ ಮಂಜೂರು ಮಾಡಿದ ವಿದ್ಯಾರ್ಥಿ ವೇತನವನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ನುಂಗಿ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅಧಿಕಾರಿಗಳು ಬಡ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳ ಜೊತೆ ಆಟವಾಡುತ್ತಿದ್ದು, ವಿದ್ಯಾಭ್ಯಾಸಕ್ಕೆ ತೊಂದರೆ ಮಾಡುತ್ತಿದ್ದಾರೆ. ವಿದ್ಯಾರ್ಥಿ ವೇತನ ನುಂಗಿಹಾಕಿದ ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

  • ಮುನಿಯಪ್ಪಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ರೆ ಕಾಂಗ್ರೆಸ್ ನಿರ್ನಾಮ: ಬಲಗೈ ಹೊಲೆಯ ಸಮಾಜದ ಅಧ್ಯಕ್ಷ ಹೇಳಿಕೆ!

    ಮುನಿಯಪ್ಪಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದ್ರೆ ಕಾಂಗ್ರೆಸ್ ನಿರ್ನಾಮ: ಬಲಗೈ ಹೊಲೆಯ ಸಮಾಜದ ಅಧ್ಯಕ್ಷ ಹೇಳಿಕೆ!

    ಕೋಲಾರ: ಸಂಸದ ಕೆ.ಎಚ್.ಮುನಿಯಪ್ಪನವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೇ ಕಾಂಗ್ರೆಸ್ ನಿರ್ನಾಮವಾಗುತ್ತದೆ ಎಂದು ಬಲಗೈ ಹೊಲೆಯರ ಜನಾಂಗದ ಅಧ್ಯಕ್ಷ ಬಾಲಾಜಿ ಚನ್ನಯ್ಯರವರು ಹೇಳಿಕೆ ನೀಡಿದ್ದಾರೆ.

    ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುನಿಯಪ್ಪನವರು ತಮ್ಮ ಪುತ್ರಿಗೆ ಸಚಿವ ಸ್ಥಾನ ನೀಡುವುದಕ್ಕೆ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ. ಹಲವು ಪಕ್ಷಗಳ ಜೊತೆ ಅನೈತಿಕ ಕುಟುಂಬ ರಾಜಕಾರಣ ಮಾಡುತ್ತಿರುವ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಇಂತಹ ವ್ಯಕ್ತಿಗೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ, ಅವರು ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಅನೈತಿಕ ರಾಜಕಾರಣ ಮಾಡಿ, ಕಾಂಗ್ರೆಸ್ ನಿರ್ನಾಮ ಮಾಡುವುದುರಲ್ಲಿ ಸಂದೇಹವಿಲ್ಲ ಎಂದು ವಾಗ್ದಾಳಿ ನಡೆಸಿದರು.

    ಜೂನ್ 14ರಂದು ದೆಹಲಿಯಲ್ಲಿ ಬಲಗೈ ಸಮುದಾಯ ಕಾಂಗ್ರೆಸ್‍ಗೆ ಬೆಂಬಲ ನೀಡಿಲ್ಲ ಎನ್ನುವ ಕೆ.ಎಚ್.ಮುನಿಯಪ್ಪನವರು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಬಲಗೈ ಸಮುದಾಯದ ಬೆಂಬಲವಿಲ್ಲದೇ 7 ಬಾರಿ ಸಂಸದರಾದರೇ ಎಂದು ಅವರು ಪ್ರಶ್ನಿಸಿದರು.  ಇದನ್ನೂ ಓದಿ: ಅವಕಾಶ ಕೊಟ್ರೆ ಸಂಸತ್ತಿಗೆ ಸ್ಪರ್ಧಿಸದೇ ಕೆಪಿಸಿಸಿ ಅಧ್ಯಕ್ಷನಾಗ್ತೀನಿ: ಕೆಹೆಚ್ ಮುನಿಯಪ್ಪ

    ಮುನಿಯಪ್ಪನವರು ಸಂಸದರಾದ ಬಳಿಕ ಇಲ್ಲಿಯವರೆಗೂ ಬಲಗೈ ಸಮುದಾಯದ ಏಳಿಗೆಗೆ ಶ್ರಮಿಸಿಲ್ಲ ಹಾಗೂ ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ, ರಾಜ್ಯದ ಹಲವೆಡೆ ಕಾಂಗ್ರೆಸ್ ಗೆಲುವಿಗೆ ಬಲಗೈ ಹೊಲೆಯ ಸಮುದಾಯ ಕಾರಣ ಎಂದು ಹೇಳಿದರು.

  • ತಾವೇ ರಸ್ತೆ ನಿರ್ಮಿಸಿ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದ ಮುಳಬಾಗಿಲಿನ ಮೂರಳ್ಳಿ ಗ್ರಾಮಸ್ಥರು

    ತಾವೇ ರಸ್ತೆ ನಿರ್ಮಿಸಿ ಜನಪ್ರತಿನಿಧಿಗಳಿಗೆ ಸೆಡ್ಡು ಹೊಡೆದ ಮುಳಬಾಗಿಲಿನ ಮೂರಳ್ಳಿ ಗ್ರಾಮಸ್ಥರು

    ಕೋಲಾರ: ಜನ ಒಗ್ಗಟ್ಟಾಗಿ ಮನಸು ಮಾಡಿದ್ರೆ ಏನ್ ಬೇಕಾದ್ರೂ ಸಾಧಿಸ್ತಾರೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ಕೋಲಾರದ ಮುಳಬಾಗಿಲು ತಾಲೂಕಿನ ಪೂಜೇನಹಳ್ಳಿ, ಹಿರಣ್ಯ ಗೌಡೇನಹಳ್ಳಿ, ಜೆ.ಓಬೇನಹಳ್ಳಿಯ ಗ್ರಾಮಸ್ಥರು.

    ಕೋಟ್ಯಾಂತರ ರೂಪಾಯಿ ರಿಲೀಸ್ ಆದ್ರೂ ಸದ್ಬಳಕೆ ಆಗದೆ, ಊರಿಗೆ ರಸ್ತೆ ಅನ್ನೋದೇ ಇರ್ಲಿಲ್ಲ. ಆದ್ರೆ, ಗ್ರಾಮದವರೆಲ್ಲಾ ಒಗ್ಗೂಡಿ ರಸ್ತೆ ಮಾಡಿದ್ದಾರೆ. ಬೈರಕೂರಿನವರೆಗೆ ಪಕ್ಕಾ ರಸ್ತೆ ಇದ್ದು, ಅಲ್ಲಿಂದ ಈ ಗ್ರಾಮಗಳಿಗೆ ಕಾಲುದಾರಿಯಂತಹ ರಸ್ತೆ ಇತ್ತು. ಹಲವು ವರ್ಷಗಳಿಂದ ಈ ಗ್ರಾಮಗಳಿಗೆ ರಸ್ತೆ ನಿರ್ಮಿಸಲು ಹಣ ಬಿಡುಗಡೆಯಾಗಿದ್ರೂ, ಪ್ರಭಾವಿಗಳು ಹಾಗೂ ಅಕ್ಕಪಕ್ಕದ ಜಮೀನಿನವರು ರಸ್ತೆ ನಿರ್ಮಾಣಕ್ಕೆ ಅಡ್ಡಗಾಲಾಗಿದ್ದರು.

    ರಸ್ತೆ ಇಲ್ಲ ಅಂದ್ಮೇಲೆ ವಾಹನ ಸಂಚಾರ ಎಲ್ಲಿಂದ ಬಂತು. ಬಸ್, ಆಟೋ ಏನು ಬರ್ತಿರಲಿಲ್ಲ. ಶಾಲೆ, ಆಸ್ಪತ್ರೆಗೆ ಹೋಗ್ಬೇಕು ಅಂದರೆ ಜನ ಪರದಾಡ್ತಿದ್ರು. ಜನಪ್ರತಿನಿಧಿಗಳಿಗೆ ಮನವಿಕೊಟ್ರೂ ಪ್ರಯೋಜನ ಆಗ್ಲಿಲ್ಲ. ರೊಚ್ಚಿಗೆದ್ದ ಈ ಮೂರು ಗ್ರಾಮಗಳ ಗ್ರಾಮಸ್ಥರು ಮನೆಗೊಬ್ಬರಂತೆ ಮಕ್ಕಳು, ಮಹಿಳೆಯರಾದಿಯಾಗಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ್ರು.

    ರಸ್ತೆ ಸಮತಟ್ಟಿಗೆ ಜೆಸಿಬಿ, ಟ್ರಾಕ್ಟರ್‍ಗಳನ್ನೂ ಬಳಸಿಕೊಂಡು ಸದ್ಯಕ್ಕೆ ಎರಡು ಕಿ.ಮೀ. ರಸ್ತೆಯನ್ನ ಅಚ್ಚುಕಟ್ಟಾಗಿ ಮಾಡಿದ್ದಾರೆ. ರಸ್ತೆ ನಿರ್ಮಾಣಕ್ಕೆ ಅಕ್ಕಪಕ್ಕದ ಜಮೀನಿನವರು ಮೊದಲಿಗೆ ವಿರೋಧ ವ್ಯಕ್ತಪಡಿಸಿದ್ರು. ಯಾವುದನ್ನೂ ಲೆಕ್ಕಿಸದ ಗ್ರಾಮಸ್ಥರು ಮೊದಲಿಗಿದ್ದ ಮೂರಡಿ ರಸ್ತೆಯನ್ನ ಈಗ ಐದು ಅಡಿಗೆ ಅಗಲೀಕರಣ ಮಾಡುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಅನ್ನೋದನ್ನ ತೋರಿಸಿದ್ದಾರೆ.

    ನಾವೀಗ ಕಚ್ಚಾ ರಸ್ತೆ ಮಾಡಿಕೊಂಡಿದ್ದೇವೆ, ಜನಪ್ರತಿನಿಧಿಗಳೆನಿಸಿಕೊಂಡವರು ಇದಕ್ಕೆ ಡಾಂಬರ್ ಹಾಕಿ, ಪಕ್ಕಾ ರಸ್ತೆ ಮಾಡಿಕೊಡಲಿ ಅಂತ ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

    https://www.youtube.com/watch?v=c77lC9Unu7U

  • ಕೋಲಾರದಲ್ಲಿ ಕಲ್ಯಾಣ ಮಂಟಪದಲ್ಲಿಯೇ ವಸತಿ ಶಾಲೆ ಆರಂಭಿಸಿದ್ರು!

    ಕೋಲಾರದಲ್ಲಿ ಕಲ್ಯಾಣ ಮಂಟಪದಲ್ಲಿಯೇ ವಸತಿ ಶಾಲೆ ಆರಂಭಿಸಿದ್ರು!

    ಕೋಲಾರ: ನಗರದ ಖಾದರ್ ಲೇಔಟ್‍ನ ಕಲ್ಯಾಣ ಮಂಟಪದಲ್ಲಿಯೇ ವಸತಿ ಶಾಲೆಯನ್ನು ಆರಂಭಿಸಲಾಗಿದೆ.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ತನ್ನ ಪತ್ನಿ ಸುಗುಣ ಹೆಸರಿನಲ್ಲಿ ಕೆಸಿಆರ್ ಎಂಬ ಫಂಕ್ಷನ್ ಹಾಲ್ ನಿರ್ಮಿಸಿದ್ರು. ಇದಕ್ಕಾಗಿ ಸರ್ವೇ ನಂಬರ್ 1ರಲ್ಲಿ ರಸ್ತೆ ಮತ್ತು ರಾಜಕಾಲುವೆ ಒತ್ತುವರಿ ಮಾಡಿದ್ದಾರೆ ಅನ್ನೋ ಆರೋಪವೂ ಕೇಳಿ ಬಂದಿತ್ತು.

    ಆದ್ರೆ ಇದೀಗ ಅದೇ ಕಟ್ಟಡದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗಿದೆ. ಕಳೆದ ವರ್ಷ ತರಾತುರಿಯಲ್ಲಿ ಕಟ್ಟಿರುವ ಈ ಕಟ್ಟಡದಲ್ಲಿ 37 ಮಕ್ಕಳು ದಾಖಲಾಗಿದ್ದಾರೆ. ಆದ್ರೆ ಇಲ್ಲಿ ಸರಿಯಾದ ಗಾಳಿ, ಬೆಳಕಿನ ವ್ಯವಸ್ಥೆಗಳಿಲ್ಲ. ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿಗಳಿಲ್ಲ ಎನ್ನಲಾಗಿದೆ.

    ಕೆ.ಚಂದ್ರಾರೆಡ್ಡಿ ತನ್ನ ಪ್ರಭಾವ ಬಳಸಿ ಗಡಿಗ್ರಾಮ ದೊಡ್ಡಪೊನ್ನಾಂಡಹಳ್ಳಿಗೆ ಮಂಜೂರಾದ ಶಾಲೆಯನ್ನು ಬಂಗಾರಪೇಟೆಯಲ್ಲಿ ಆರಂಭಿಸಿ, 1 ಲಕ್ಷದ 85 ಸಾವಿರದ 650 ರೂಪಾಯಿ ಬಾಡಿಗೆ ಪೀಕುತ್ತಿದ್ದಾನೆ ಎಂಬುದಾಗಿ ಸ್ಥಳೀಯರು ದೂರಿದ್ದಾರೆ.