Tag: Kolar

  • ಹುಡುಗ, ಹುಡುಗಿಯ ಲವ್ ಕೇಸ್‍ನಲ್ಲಿ ಉಪ್ಪಿಯ ಡಾ. ಮೋದಿ ಸ್ಕ್ರಿಪ್ಟ್ ಹೋಯ್ತು!

    ಹುಡುಗ, ಹುಡುಗಿಯ ಲವ್ ಕೇಸ್‍ನಲ್ಲಿ ಉಪ್ಪಿಯ ಡಾ. ಮೋದಿ ಸ್ಕ್ರಿಪ್ಟ್ ಹೋಯ್ತು!

    ಬೆಂಗಳೂರು: ಹುಡುಗ, ಹುಡುಗಿಯ ಲವ್, ಥಳಿತ ಕೇಸ್‍ನಲ್ಲಿ ನಟ ಉಪೇಂದ್ರ ಅವರ ಮುಂದಿನ ‘ಡಾಕ್ಟರ್ ಮೋದಿ’ ಸ್ಕ್ರಿಪ್ಟ್ ಕಾಪಿಯನ್ನು ಯುವತಿಯ ಪೋಷಕರು ಕದ್ದುಕೊಂಡು ಹೋಗಿದ್ದಾರೆಂಬ ಆರೋಪ ಕೇಳಿ ಬಂದಿದೆ.

    ಈ ಪ್ರಕರಣದ ಸಂಬಂಧ ಪ್ರಿಯಕರ ರಮೇಶ್ ತಾನು ಪ್ರೀತಿಸುತ್ತಿದ್ದ ಯುವತಿಯ ತಾಯಿ ವೇದಾವತಿ ಮತ್ತು ಮಾವ ರಮೇಶ್ ಮೇಲೆ ಎಚ್‍ಎಸ್‍ಆರ್ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಏನಿದು ಲವ್ ಸ್ಟೋರಿ?
    ತೀರ್ಥಹಳ್ಳಿ ಮೂಲದ ಎಂಕಾಂ ಓದಿರುವ ಶ್ರೀಕರ ಹಾಗೂ ಕೋಲಾರದ ಬಿಇ ಪದವೀಧರೆ ಶ್ವೇತಾಗೆ ಶಾದಿ ಡಾಟ್ ಕಾಂನಲ್ಲಿ ಪರಿಚಯವಾಗಿದೆ. ಈ ಪರಿಚಯ ಕೆಲ ದಿನಗಳ ಬಳಿಕ ಪ್ರೀತಿಗೆ ತಿರುಗಿದೆ. ನಗರದ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ಮಾಡಿಕೊಂಡಿದ್ದ ಇವರು ಕಳೆದ ಒಂದು ವರ್ಷ 8 ತಿಂಗಳಿನಿಂದ ಹೆಚ್‍ಎಸ್‍ಆರ್ ಲೇಔಟ್‍ನಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು.

    ಈ ಮಧ್ಯೆ ಶ್ವೇತಾ ಎರಡು ಭಾರಿ ಗರ್ಭವತಿಯಾಗಿದ್ದು, ತಾಯಿ ಅಬಾರ್ಷನ್ ಮಾಡಿಸಿದ್ದರಂತೆ. ಇದಾದ ಬಳಿಕ ಶ್ವೇತಾ ತಾಯಿ ವೇದಾವತಿ ಮತ್ತು ಮಾವ ರಮೇಶ್, ಕದ್ದು ಮುಚ್ಚಿ ಮದುವೆಯಾಗಿರುವುದು ಸರಿಯಲ್ಲ, ಅದ್ಧೂರಿಯಾಗಿ ಸಾರ್ವಜನಿಕವಾಗಿ ನಿಮ್ಮಿಬ್ಬರಿಗೂ ಮದುವೆ ಮಾಡಿಸುವುದಾಗಿ ಭರವಸೆ ನೀಡಿ ಮಗಳನ್ನು ಕೋಲಾರಕ್ಕೆ ಕರೆದೊಯ್ದಿದ್ದಾರೆ.

    ರಮೇಶ್ ಆರೋಪ ಏನು?
    ಊರಿಗೆ ಕರೆದೊಯ್ದ ನಂತರ ಶ್ವೇತಾ ಪೋಷಕರು ಮದುವೆ ವಿಚಾರ ಮಾತನಾಡಬೇಕು ಕೋಲಾರಕ್ಕೆ ಬಾ ಎಂದು ನನಗೆ ಫೋನ್ ಮಾಡಿ ತಿಳಿಸಿದ್ದರು. ಫೋನ್ ಕರೆಯ ಹಿನ್ನೆಲೆಯಲ್ಲಿ ಭಾನುವಾರ ಕೋಲಾರಕ್ಕೆ ಬಂದಾಗ ನನ್ನ ಮೇಲೆ ಮೇಲೆ ಶ್ವೇತಾ ತಾಯಿ ವೇದಾವತಿ ತಮ್ಮ ರಮೇಶ್ ಕೆಲ ಗೂಂಡಾಗಳನ್ನು ಕರೆಸಿ ಹಲ್ಲೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಕಾರಿನಲ್ಲಿ ನನ್ನನ್ನು ಬೆಂಗಳೂರಿನ ಹೆಚ್‍ಎಸ್‍ಆರ್ ಲೇಔಟ್‍ನ ಮನೆಗೆ ಕರೆ ತಂದು ನನ್ನ ಮತ್ತು ಶ್ವೇತಾ ಮದುವೆಗೆ ಸಂಬಂಧಿಸಿದ ಫೋಟೋಗಳು, ಲವ್ ಲೆಟರ್ ಗಳು ಮತ್ತು ನನ್ನ ಆಫೀಸ್‍ಗೆ ಸಂಬಂಧಿಸಿದ ಕೆಲ ಡಾಟಾ ಮತ್ತು ಮಾರ್ಕ್ಸ್ ಕಾರ್ಡ್‍ಗಳನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಮೋದಿ ಸ್ಕ್ರಿಪ್ಟ್ ಹೋಯ್ತು:
    ನಿರ್ದೇಶಕ ಉದಯ್ ಪ್ರಕಾಶ್ ಅವರಿಗೆ ಸಹಾಯಕನಾಗಿ ನಾನು ಕೆಲಸ ಮಾಡುತ್ತಿದ್ದು, ನಟ ಉಪೇಂದ್ರ ಅವರ ಮುಂದಿನ ಚಿತ್ರ ಡಾಕ್ಟರ್ ಮೋದಿಗೆ ಸ್ಕ್ರಿಪ್ಟ್ ಮಾಡಿದ್ದೆ. ಆ ಸ್ಕ್ರಿಪ್ಟ್ ಹಾರ್ಡ್ ಕಾಪಿಯನ್ನೂ ಶ್ವೇತಾ ಪೋಷಕರು ಕದ್ದುಕೊಂಡು ಹೋಗಿದ್ದಾರೆ. ಹೀಗಾಗಿ ನನಗೆ ಈ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕೆಂದು ಎಚ್‍ಎಸ್‍ಆರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಜಮೀನಿನಲ್ಲಿದ್ದ ವೀರಾಂಜನೇಯ ಸ್ವಾಮಿ ದೇಗುಲ ಧ್ವಂಸಗೊಳಿಸಿದ ಕಿಡಿಗೇಡಿಗಳು

    ಜಮೀನಿನಲ್ಲಿದ್ದ ವೀರಾಂಜನೇಯ ಸ್ವಾಮಿ ದೇಗುಲ ಧ್ವಂಸಗೊಳಿಸಿದ ಕಿಡಿಗೇಡಿಗಳು

    ಕೋಲಾರ: ಜಮೀನಿನಲ್ಲಿದ್ದ ವೀರಾಂಜನೇಯ ಸ್ವಾಮಿ ದೇಗುಲವನ್ನ ಧ್ವಂಸಗೊಳಿಸಿ ಬೆಂಕಿ ಇಟ್ಟಿರುವ ಘಟನೆ ಕೋಲಾರದಲ್ಲಿ ನಡೆದಿದೆ.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ತೆರ್ನಹಳ್ಳಿ ಗ್ರಾಮದಲ್ಲಿ ತಡ ರಾತ್ರಿ ಈ ಘಟನೆ ನಡೆದಿದೆ. ವಕೀಲ ಚಂದ್ರಪ್ಪ ಎಂಬವರಿಗೆ ಸೇರಿದ ಜಮೀನಿನಲ್ಲಿ ಈ ದೇವಾಲಯ ನಿರ್ಮಾಣವಾಗಿತ್ತು.

    ಜಮೀನಿನಲ್ಲಿ ದೇವಾಲಯ ನಿರ್ಮಿಸಿದ್ದಕ್ಕೆ ನಾರಾಯಣಮ್ಮ ಅಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಜಮೀನು ವಿವಾದದ ಹಿನ್ನೆಲೆಯಲ್ಲಿ ನಾರಾಯಣಮ್ಮ ದೇಗುಲಕ್ಕೆ ಬೆಂಕಿ ಇಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

    ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

  • ಬೆಳಕು ಇಂಪ್ಯಾಕ್ಟ್: 16 ವರ್ಷದಿಂದ ಕೇವಲ ಹಾಲು ಕುಡಿಯೋ ಬಾಲಕನಿಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ನೆರವು

    ಬೆಳಕು ಇಂಪ್ಯಾಕ್ಟ್: 16 ವರ್ಷದಿಂದ ಕೇವಲ ಹಾಲು ಕುಡಿಯೋ ಬಾಲಕನಿಗೆ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಿಂದ ನೆರವು

    ಕೋಲಾರ: ಈ ಹುಡುಗ ಅನ್ನ ತಿನ್ನಲ್ಲ, ನೀರು ಕುಡಿಯಲ್ಲ, ಕಳೆದ 16 ವರ್ಷಗಳಿಂದ ಅನ್ನ ನೀರು ಇಲ್ಲದೆ ಬದುಕುತ್ತಿರುವ ಬಾಲಕನಿಗೆ ಕೇವಲ ಹಾಲಷ್ಟೆ ಆಹಾರ. ಬರಿ ಹಾಲು ಕುಡಿದೇ ಜೀವನ ಸವೆಸುತ್ತಿರುವ ಬಾಲಕನಿಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ಆಸರೆಯಾಗಿದೆ. ಬೆಳಕಿನ ನೆರವಿನಿಂದ ಬಾಲಕನಿಗೆ ಹಾಲು, ಆತನನ್ನ ಪೋಷಣೆ ಮಾಡಲು ಕುಟುಂಬಕ್ಕೆ ನೆರವು ಸಿಕ್ಕಿದೆ.

    ಕೋಲಾರ ತಾಲೂಕಿನ ಕೋಡಿ ಕಣ್ಣೂರು ಗ್ರಾಮದ ಗೋವಿಂದಪ್ಪ ದಂಪತಿಯ ಎರಡನೆ ಮಗ ಸಂತೋಷ್ ಹುಟ್ಟಿದಾಗಿನಿಂದಲೂ ಅನ್ನವನ್ನು ಸೇವಿಸಲ್ಲ. ಈತ ಇದುವರೆಗೂ ಹಾಲನ್ನು ಕುಡಿದು ಬದುಕಿದ್ದಾನೆ. ಸಂತೋಷ್ ಪೋಷಕರು ಬೇರೆ ಆಹಾರ ತಿನ್ನಿಸಲು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಈತನ ಬಾಯಿಗೆ ತಿಂಡಿ ಅಥವಾ ಇನ್ನೇನಾದ್ರು ತಿನ್ನಿಸೋದಿಕ್ಕೆ ಬಂದ್ರೂ ಉಗಿದುಬಿಡ್ತಾನೆ. ಹಾಲು ತುಂಬಿದ ಬಾಟಲ್ ಮಾತ್ರ ಈತನಿಗೆ ಗೊತ್ತಿರೋದು. ಹೀಗಿರುವಾಗ ಈತನ ಪೋಷಕರು ಪಬ್ಲಿಕ್ ಟಿವಿಯನ್ನ ಸಂಪರ್ಕಿಸಿ ಪ್ರತಿ ನಿತ್ಯ ಹಾಲು ಕೊಡಿಸುವಂತೆ ಮನವಿ ಮಾಡಿದ್ರು.

    ಸಂತೋಷ್ 6 ತಿಂಗಳ ಮಗುವಾಗಿದ್ದಾಗ ಪಿಡ್ಸ್ ಬಂದು ಶಾಕ್ ಆದ ಕಾರಣ ಒಂದು ಕೈ, ಮೆದಳು ಸ್ವಾಧೀನ ಕಳೆದುಕೊಂಡಿದ್ದಾನೆ. ಬೆಂಗಳೂರಿನ ವಿಕ್ಟೋರಿಯಾ, ನಿಮ್ಹಾನ್ಸ್ ಆಸ್ಪತ್ರೆಗಳು ಸೇರಿದಂತೆ ಹಲವೆಡೆ ತೋರಿಸಲಾಗಿದೆ. ಆದ್ರೂ ಯಾವುದೇ ಪ್ರಯೋಜನವಾಗಿಲ್ಲ. ಮೆದುಳಿಗೆ ಶಾಕ್ ಆಗಿರೋ ಕಾರಣ ಜೀವನಪರ್ಯಂತ ಇದು ಸರಿಹೋಗಲ್ಲ ಎಂದು ವೈದ್ಯರು ಹೇಳಿ ಕಳುಹಿಸಿದ್ದಾರೆ.

    ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ಮಾಡಲಾದ ಮನವಿಯಂತೆ ಈಗ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಈ ಕುಟುಂಬಕ್ಕೆ ಪ್ರತಿನಿತ್ಯ ಹಾಲು ನೀಡುತ್ತಿದೆ. ಜೊತೆಗೆ ಕುಟುಂಬ ಪೋಷಣೆಗೆ ಒಂದು ಉದ್ಯೋಗಕ್ಕೆ ಕೂಡ ಬೆಳಕು ಆಸರೆಯಾಗಿದೆ. ಕೂಲಿ ಮಾಡಿ ಜೀವನ ಸಾಗಿಸುವವರಾಗಿರೋದ್ರಿಂದ ಕಷ್ಟಕರವಾದ ಜೀವನದಲ್ಲಿ ಮಗನಿಗೆ ದಿನಕ್ಕೆ ಅಲ್ಪಸ್ವಲ್ಪ ಹಾಲಿನ ಜೊತೆಗೆ, ಕೋಲಾರ ನೂತನ ವಿಧಾನ ಸೌಧ ಬಳಿ ಜೆರಾಕ್ಸ್ ಅಂಗಡಿ ಹಾಕಿ ಕೊಳ್ಳಲು ಅನುಮತಿ ಸಿಕ್ಕಿದೆ. ಅದರಂತೆ ಈಗ ಹಾಲಿನ ವ್ಯವಸ್ಥೆ ಹಾಗೂ ಉದ್ಯೋಗ ಕಲ್ಪಿಸುವ ಮೂಲಕ ಬಡ ಕುಟುಂಬಕ್ಕೆ ಬೆಳಕಿನ ಆಸರೆ ಸಿಕ್ಕಿದೆ.

     

  • ಕೋಲಾರದಲ್ಲಿ ಟೆಂಪೋ ಟ್ರಾವೆಲರ್‍ಗೆ ಆಯಿಲ್ ಟ್ಯಾಂಕರ್ ಡಿಕ್ಕಿ- ಮೂವರ ಸಾವು

    ಕೋಲಾರದಲ್ಲಿ ಟೆಂಪೋ ಟ್ರಾವೆಲರ್‍ಗೆ ಆಯಿಲ್ ಟ್ಯಾಂಕರ್ ಡಿಕ್ಕಿ- ಮೂವರ ಸಾವು

    ಕೋಲಾರ: ಟೆಂಪೋ ಟ್ರಾವೆಲರ್ ಗೆ ಆಯಿಲ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಂಡ್ರಿಗ ಎಂಬ ಗ್ರಾಮದಲ್ಲಿ ನಡೆದಿದೆ.

    ಟೆಂಪೋ ಟ್ರಾವೆಲರ್ ಚಾಲಕ ವಿಶಾಲ್ ಬಾಬು (35), ಕಾಮಾಕ್ಷಿ (27) ಹಾಗು ಬಾಲಕ ರಿದಯ್ (2) ಎಂಬವರು ಮೃತ ದುರ್ಧೈವಿಗಳಾಗಿದ್ದಾರೆ. ಇವರೆಲ್ಲರೂ ತುಮಕೂರು ಜಿಲ್ಲೆಯವರು ಎಂದು ಹೇಳಲಾಗಿದೆ.

    ತುಮಕೂರಿನಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 12 ಮಂದಿ ಟೆಂಪೋ ಟ್ರಾವೆಲರ್ ನಲ್ಲಿ ಹೊರಟಿದ್ದರು. ಈ ವೇಳೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಂಡ್ರಿಗ ಎಂಬಲ್ಲಿ ಟ್ರಾವೆಲರ್ ಅಪಘಾತಕ್ಕೀಡಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಿಂದ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಬಂಗಾರಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಸ್ಮಶಾನಕ್ಕೆ ಹೋಗಿ ಪೂರ್ವಜರ ಅಸ್ಥಿಪಂಜರ ತಿಂತಾರೆ ಮಕ್ಕಳು, ಮೊಮ್ಮಕ್ಕಳು- ಕೋಲಾರದ ಗಡಿಯಲ್ಲಿ ವಿಚಿತ್ರ ಆಚರಣೆ

    ಸ್ಮಶಾನಕ್ಕೆ ಹೋಗಿ ಪೂರ್ವಜರ ಅಸ್ಥಿಪಂಜರ ತಿಂತಾರೆ ಮಕ್ಕಳು, ಮೊಮ್ಮಕ್ಕಳು- ಕೋಲಾರದ ಗಡಿಯಲ್ಲಿ ವಿಚಿತ್ರ ಆಚರಣೆ

    ಕೋಲಾರ: ಇದು ಜನ ಮರಳೋ ಜಾತ್ರೆ ಮರಳೋ ಗೊತ್ತಿಲ್ಲ. ಮಕ್ಕಳು, ಮರಿ ಮಕ್ಕಳು ಸ್ಮಶಾನಕ್ಕೆ ತೆರಳಿ ಪೂರ್ವಜರ ಅಸ್ಥಿಪಂಜರ ತಿನ್ನುವ ವಿಚಿತ್ರ ಆಚರಣೆ ಕೋಲಾರ ಜಿಲ್ಲೆಯ ಗಡಿಯಲ್ಲಿ ನಡೀತಿದೆ.

    ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆ ದಿನ ಗಡಿಯಲ್ಲಿ ಈ ಆಚರಣೆ ನಡೀತಿದೆ. ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಕೊಲ್ಲಂ ಗ್ರಾಮದಲ್ಲಿ ಅಮವಾಸ್ಯೆ ದಿನ ಕುಟುಂಬಸ್ಥರೆಲ್ಲ ತೆರಳಿ ಪೂರ್ವಜರ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ಸಮಾಧಿಯಲ್ಲಿರುವ ಹಿರಿಯರ ಅಸ್ಥಿಪಂಜರ ತೆಗೆದು ಮೂಳೆ ಬುರಡೆ ತಿನ್ನುತ್ತಾರೆ.

    ಯಾವುದೇ ದುಷ್ಟ ಶಕ್ತಿಗಳು ಬರದಂತೆ ಹಾಗೂ ಹಿರಿಯರು ಸದಾ ಕಾಪಾಡುತ್ತಾರೆ ಎಂಬುದು ಇವರ ನಂಬಿಕೆಯಾಗಿದ್ದು, ಪ್ರತಿವರ್ಷ ನಡೆಯುವ ಒಂದು ವಿಶಿಷ್ಟ ಜಾತ್ರೆಯಲ್ಲಿ ಹೀಗೊಂದು ಆಚರಣೆ ಮಾಡ್ತಿದ್ದಾರೆ.

     

  • ದೇವಾಲಯದಲ್ಲಿ ಪಾಠ ಕೇಳುತ್ತಿರೋ ಕೋಲಾರದ ಪುಟ್ಟ ಮಕ್ಕಳಿಗೆ ಬೇಕಿದೆ ಶಿಶು ವಿಹಾರ

    ದೇವಾಲಯದಲ್ಲಿ ಪಾಠ ಕೇಳುತ್ತಿರೋ ಕೋಲಾರದ ಪುಟ್ಟ ಮಕ್ಕಳಿಗೆ ಬೇಕಿದೆ ಶಿಶು ವಿಹಾರ

    ಕೋಲಾರ: ಆ ಊರಲ್ಲಿರೋ ಅಂಗನವಾಡಿಯ ಮಕ್ಕಳಿಗೆ ಗಂಗಮ್ಮ ದೇವಿಯೇ ಆಶ್ರಯ. ಪಾಠ ಕಲಿಸೋ ಶಿಕ್ಷಕಿ, ಅಡುಗೆ ಮಾಡೋ ಅಡುಗೆಯವರನ್ನೂ ಗಂಗಮ್ಮ ತಾಯಿ ಕಾಪಾಡುತ್ತಿದ್ದಾಳೆ.

    ಕೋಲಾರ ನಗರಕ್ಕೆ ಕೂಗಳತೆ ದೂರದಲ್ಲಿರುವ ವರದೇನಹಳ್ಳಿಯಲ್ಲಿ ಬಿದ್ದು ಹೋಗುವ ಕಟ್ಟಡದಲ್ಲಿ ಹತ್ತಾರು ಮಕ್ಕಳು ಪಾಠ ಕೇಳುತ್ತಿದ್ದರು. ಬಡವರು-ಶ್ರೀಮಂತರು ಅಂತಾ ಈ ಊರಲ್ಲಿರೋ 85 ಮನೆಗಳ ಪೈಕಿ ಯಾವ ಮನೆಗಳೂ ಬಿದ್ದೋಗೋ ಸ್ಥಿತಿಯಲ್ಲಿಲ್ಲ. ಆದ್ರೆ ಗ್ರಾಮದ ಮಕ್ಕಳು ಕಲಿಯೋ ಅಂಗನವಾಡಿ ಕೇಂದ್ರದ ಕಟ್ಟಡ ಮಾತ್ರ ಇನ್ನೇನು ಆ ಪಟ್ಟ ಮಕ್ಕಳ ತಲೆ ಮೇಲೆ ಬಿದ್ದೋಯ್ತೇನೋ ಅನ್ನೋ ಸ್ಥಿತಿಯಲ್ಲಿದೆ. ಕಟ್ಟಡ ಶಿಥಿಲವಾಗಿರುವ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರ ಇದೀಗ ಗಂಗಮ್ಮ ದೇವಾಲಯಕ್ಕೆ ಶಿಫ್ಟ್ ಆಗಿದೆ. ಗಂಗಮ್ಮನ ದೇವಾಲಯದಲ್ಲೇ ಪಾಠ ಪ್ರವಚನ ಮಾಡುವ ದುಸ್ಥಿತಿ ಶಿಕ್ಷಕಿಯದ್ದಾದ್ರೆ, ಇಲ್ಲೆ ಕುಳಿತು ಪಾಠ ಕೇಳಬೇಕಾದ ಅನಿವಾರ್ಯ ಮಕ್ಕಳದ್ದು. ವಿಪರ್ಯಾಸ ಎಂದರೆ ಗ್ರಾಮದಲ್ಲಿ ಪೂಜೆ ಪುನಸ್ಕಾರ ಮಾಡಬೇಕಾದ್ರೆ ಅಂದು ಮಕ್ಕಳಿಗೆ ಅಂಗನವಾಡಿ ಸೂರಿಲ್ಲ. ಅಷ್ಟು ಮಾತ್ರವಲ್ಲದೇ ಅಂಗನವಾಡಿ ಶಿಕ್ಷಕಿಯ ಮುಟ್ಟಿನ ಸಂದರ್ಭದಲ್ಲಿ ಮೂರು ದಿನ ಅಂಗನವಾಡಿಗೆ ರಜೆ.

    ವರದನೇಹಳ್ಳಿಯಲ್ಲಿನ ಈ ಅಂಗನವಾಡಿ ಕಟ್ಟಡವನ್ನು ಹದಿನೈದು ವರ್ಷಗಳ ಹಿಂದಷ್ಟೇ ನಿರ್ಮಿಸಲಾಗಿದೆ. ಗುತ್ತಿಗೆದಾರನ ದುರಾಸೆಯಿಂದ, ಗುಣಮಟ್ಟ ಕಾಯ್ದುಕೊಳ್ಳದ ಹಿನ್ನೆಲೆಯಲ್ಲಿ ಕಟ್ಟಡದ ಮೇಲ್ಛಾವಣಿ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈ ಮಧ್ಯೆ ಸೆಂಟ್ರಿಂಗ್ ಕಂಬಿಗಳು ಕಿತ್ತು ಬಂದಿದ್ದು, ಗೋಡೆಗಳೂ ಬಿರುಕು ಬಿಟ್ಟಿವೆ. ಅಂಗನವಾಡಿಯ ಕಟ್ಟಡ ಹಾಳು ಬಿದ್ದಿರುವುದರಿಂದ ಮಕ್ಕಳ ಜೀವಕ್ಕೆ ಅಪಾಯವಾಗುವುದನ್ನರಿತ ಗ್ರಾಮಸ್ಥರು ಸರಿ ಮಾಡಿಕೊಡಿ ಅಂತಾ ಅಧಿಕಾರಿಗಳನ್ನು ಈ ಹಿಂದೆ ಹಲವು ಬಾರಿ ಮನವಿ ಮಾಡಿದ್ದಾರೆ. ಇದರಿಂದ ಕಟ್ಟಡ ರಿಪೇರಿ ಆಗೋವರೆಗೂ ಗಂಗಮ್ಮನ ದೇವಸ್ಥಾನದಲ್ಲಿ ಮಕ್ಕಳಿಗೆ ಕಲಿಸಲು ಅವಕಾಶ ಮಾಡಲಾಗಿದೆ. ಅಡುಗೆ ಮಾತ್ರ ಅದೇ ಹಾಳು ಬಿದ್ದಿರೋ ಕಟ್ಟಡದಲ್ಲಿ ಮಾಡ್ಕೊಳ್ಳಿ ಅಂತಾ ಅಧಿಕಾರಿಗಳು ಹೇಳಿ ಹೋಗಿದ್ದಾರೆ. ಆದ್ರೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸಲು ಗ್ರಾಮಸ್ಥರು ಇದೀಗ ಹಿಂದು-ಮುಂದು ನೋಡುತ್ತಾ ಇದ್ದಾರೆ.

    ಒಟ್ಟಿನಲ್ಲಿ ಅಂಗನವಾಡಿ ಮಕ್ಕಳಿಗೆ ಆಗ್ತಿರೋ ತೊಂದರೆಯನ್ನು ಪರಿಹರಿಸಲು ಕೋಲಾರ ಜಿಲ್ಲಾಡಳಿತ ತುರ್ತು ಕ್ರಮವನ್ನು ಜರುಗಿಸಬೇಕಾಗಿದೆ. ಭವ್ಯ ಭಾರತವನ್ನ ಕಟ್ಟುವ ಮಕ್ಕಳ ಭವಿಷ್ಯವು ಇಲ್ಲಿನ ಹಾಳು ಬಿದ್ದ ಕಟ್ಟಡಗಳಲ್ಲಿ ತಯಾರಾಗ್ತಾ ಇರೋ ದುಃಸ್ಥಿತಿ ಒದಗಿ ಬಂದಿರೋದು ವಿಪರ್ಯಾಸ.

    https://www.youtube.com/watch?v=Eb9ghgQWVVM

  • ಶಾಲಾ ಬಸ್ ಡಿಕ್ಕಿ ಹೊಡೆದು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕ ಸಾವು

    ಶಾಲಾ ಬಸ್ ಡಿಕ್ಕಿ ಹೊಡೆದು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕ ಸಾವು

    ಕೋಲಾರ: 6 ವರ್ಷದ ಬಾಲಕನಿಗೆ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಮಾಲೂರಿನ ನಂಬಿಗೇನಹಳ್ಳಿಯಲ್ಲಿ ನಡೆದಿದೆ.

    ಮೃತ ದುರ್ಧೈವಿ ಬಾಲಕನನ್ನು ಸಂತೋಷ್(6) ಎಂಬುವುದಾಗಿ ಗುರುತಿಸಲಾಗಿದೆ. ಈತ ರಸ್ತೆಬದಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ವ್ಕಕಲೇರಿ ಶ್ರೀರಾಮಕೃಷ್ಣ ವಿದ್ಯಾ ಸಂಸ್ಥಗೆ ಸೇರಿದ ಶಾಲಾ ಬಸ್ ಬಾಲಕನಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಬಸ್ ಚಾಲಕ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹಸಿವು ಅಂತ ಬಂದೋರಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೆ ಕೋಲಾರದ ಅಪ್ಸರ್ ಪಾಷಾ

    ಹಸಿವು ಅಂತ ಬಂದೋರಿಗೆ ಹೊಟ್ಟೆ ತುಂಬಾ ಊಟ ಹಾಕ್ತಾರೆ ಕೋಲಾರದ ಅಪ್ಸರ್ ಪಾಷಾ

    – ಮಂಗಳವಾರ, ಶುಕ್ರವಾರ ಬಿರಿಯಾನಿ ಊಟ
    – 6 ಜನ ಅನಾಥರಿಗೆ ಮನೆಯಲ್ಲೇ ಆಶ್ರಯ

    ಕೋಲಾರ: ಜಿಲ್ಲೆಯ ಸೈಯದ್ ಅಪ್ಸರ್ ಪಾಷಾ ಎಂಬವರು ಹಸಿವಿನಿಂದ ನೊಂದು ಅನ್ನದ ಬೆಲೆ ತಿಳಿದವರು. ಮದರ್ ತೆರೇಸಾರಿಂದ ಆಕರ್ಷಿತರಾಗಿ ಅವರಂತೆಯೇ ನಡೆಯುವವರು. ಹಗಲು ರಾತ್ರಿಯೆನ್ನದೇ ಹಸಿದವರ ಹೊಟ್ಟೆ ತುಂಬಿಸುವವರು. ಜೊತೆಗೆ ತಮ್ಮ ಮನೆಯಲ್ಲೇ 6 ಮಂದಿ ಅನಾಥರಿಗೆ ಆಶ್ರಯದಾತರಾಗಿದ್ದಾರೆ.

    ಇವರು ಹೊಟೇಲ್ ಆರಂಭಿಸಿ ಅನಾಥರಿಗೆ ಊಟ ಹಾಕುತ್ತಿಲ್ಲ. ಬದಲಾಗಿ ಪುಟ್ಟ ಧರ್ಮಛತ್ರವನ್ನು ಸ್ಥಾಪಿಸಿ ಈ ಮೂಲಕ ಅನಾಥರು, ಬಡವರು, ವಯಸ್ಸಾದವರು, ಅಂಗವಿಕರು, ವಿದ್ಯಾರ್ಥಿಗಳು ಹೀಗೆ ಯಾರೇ ಹಸಿವು ಅಂತಾ ಬಂದರೂ ಅವರ ಹೊಟ್ಟೆ ತುಂಬಾ ಊಟ ಹಾಕುತ್ತಾರೆ. ಪ್ರತಿದಿನ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆ ತನಕ ಇವರಿಗೆ ಇದೇ ಕಾಯಕ.

    ಕೋಲಾರದ ಬಂಗಾರಪೇಟೆಯ ಈ ಪಬ್ಲಿಕ್ ಹೀರೋಗೆ 2 ಹೊಟೇಲ್‍ಗಳಿವೆ. ಅದರಲ್ಲಿ ಬಂದ ಶೇ.50 ರಷ್ಟು ಹಣವನ್ನು ಹೀಗೆ ಸಮಾಜಸೇವೆಗೆ ಬಳಸ್ತಾರೆ. ವಿಶೇಷತೆ ಅಂದ್ರೆ ಮಂಗಳವಾರ ಹಾಗೂ ಶುಕ್ರವಾರ ಬಿರಿಯಾನಿ ಊಟ ಮಾಡಿ ಬಡಿಸ್ತಾರೆ. ಈ ಸೇವೆಯಲ್ಲೇ ನೆಮ್ಮದಿ ಕಂಡುಕೊಂಡಿದ್ದಾರೆ.

    ಪಾಷಾ ಅವರ ಸಮಾಜಸೇವೆ ಇಷ್ಟೇ ಅಲ್ಲ. 6 ಜನ ಅನಾಥ ಮಕ್ಕಳನ್ನ ತಮ್ಮ ಮನೆಯಲ್ಲಿಯೇ ಸಾಕುತ್ತಿದ್ದಾರೆ. ರಾತ್ರಿ ನಿದ್ದೆ ಬರದಿದ್ದಾಗ ಪಟ್ಟಣದಲ್ಲಿ ಸಂಚಾರ ಮಾಡಿ ಬೀದಿ ಬದಿ ಮಲಗಿರುವ ನಿರ್ಗತಿಕರಿಗೆ ಕಂಬಳಿ ಕೊಡೋದರ ಜೊತೆ ತಮ್ಮ ಕೈಲಾದ ಸಹಾಯ ಮಾಡ್ತಾರೆ.

    ಎಲ್ಲಾ ಇರೋರಿಗೆ ದಾನ ಮಾಡುವ ಮನಸ್ಸಿರಲ್ಲ. ಕೆಲವರಿಗೆ ದಾನ ಮಾಡುವ ಮನಸ್ಸಿದ್ರೆ ದುಡ್ಡಿರಲ್ಲ. ಇಂತಹ ಕಾಲದಲ್ಲೂ ಹಸಿದ ಹೊಟ್ಟೆಗೆ ಅನ್ನ ಹಾಕೋ ಪಾಷಾ ಅವರಿಗೆ ದೊಡ್ಡ ಸಲಾಂ.

    https://www.youtube.com/watch?v=W_feeyDHo-k

  • ಕೋಲಾರದ ಬರಡು ಭೂಮಿಯಲ್ಲೊಂದು ಸುಂದರ ಶೋ ಪ್ಲಾಂಟ್

    -ಯುವಕರಿಗೆ ಮಾದರಿಯಾಗಲಿದೆ ಶೋ ಪ್ಲಾಂಟ್ ಉದ್ಯಮ

    ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಯಲ್ದೂರು ಗ್ರಾಮದ ನಿವೃತ್ತ ತೋಟಗಾರಿಕಾ ಇಲಾಖೆಯ ಅಧಿಕಾರಿ ಜಯರಾಮಪ್ಪರವರು ಬರದ ನಾಡು ಕೋಲಾರ ಜಿಲ್ಲೆಯಲ್ಲಿ ತಮ್ಮ ಕನಸಿನ ಸುಂದರ ಶೋ ಪ್ಲಾಂಟ್ ನಿರ್ಮಾಣ ಮಾಡಿದ್ದಾರೆ.

    ಬೃಹತ್ ನಗರಗಳಲ್ಲಿ ಸಿರಿವಂತರ ಮನೆಯ ಸೌಂದರ್ಯವನ್ನು ಹೆಚ್ಚಿಸುವ ಅಂದದ ಗಿಡಗಳು, ಪಾರ್ಕ್‍ಗೆ ಹೋದಾಗ ಮನಸ್ಸಿಗೆ ನೆಮ್ಮದಿ ನೀಡುವ ಅಪರೂಪದ ಸಸ್ಯರಾಶಿಗಳನ್ನು ಜಯರಾಮಪ್ಪ ಅವರು ಮೂರು ದಶಕಗಳಿಂದಲೂ ಬೆಳೆಸುತ್ತಾ ಬಂದಿದ್ದಾರೆ. ಜಯರಾಮಪ್ಪರವರು ಕಳೆದ 28 ವರ್ಷಗಳ ಹಿಂದೆ ತಮ್ಮ 13 ಎಕರೆ ಭೂಮಿಯಲ್ಲಿ ನಗರಗಳಲ್ಲಿ ಬಹು ಬೇಡಿಕೆಯ ಅಲಂಕಾರಿಕ ಗಿಡಗಳನ್ನು ಬೆಳೆಸಲು ಆರಂಭಿಸಿದ್ದರು.

    ಅಲಂಕಾರಿಕ ಗಿಡಗಳಾದ ಕ್ರೋಟಾನ್, ಡೈಪನ್‍ಬೈಕ್ಯಾ, ಅಲ್ಯೂಮಿನಿಯಂ ಪ್ಲಾಂಟ್, ಎಲಿಫೆಂಟ್ ಹಿಯರ್, ಹೀಗೆ ಐವತ್ತಕ್ಕೂ ಹೆಚ್ಚು ಬಗೆಯ ಅಲಂಕಾರಿಕಾ ಗಿಡಗಳನ್ನ ತಮ್ಮ ನರ್ಸರಿ ಯಲ್ಲಿ ಬೆಳೆಯುತ್ತಿದ್ದಾರೆ. ಇಲ್ಲಿಯ ಅಲಂಕಾರಿಕ ಗಿಡಗಳನ್ನು ಬೆಂಗಳೂರು, ಚೆನೈ, ಹೈದರಾಬಾದ್, ನಾಸಿಕ್, ಬಾಂಬೆ, ದೆಹಲಿ ಸೇರಿದಂತೆ ಹಲವೆಡೆ ಈ ಶೋ ಪ್ಲಾಂಟ್‍ಗಳನ್ನು ಕಳಿಸಿಕೊಡಲಾಗುತ್ತದೆ.

    ಇಂತಹ ಅಲಂಕಾರಿಕ ಗಿಡಗಳಿಗೆ ಕೇವಲ ಮನೆಗಳಲ್ಲಷ್ಟೇ ಅಲ್ಲಾ, ಪಾರ್ಕ್‍ಗಳಲ್ಲಷ್ಟೇ ಅಲ್ಲಾ, ದೊಡ್ಡ ದೊಡ್ಡ ಕಂಪನಿಗಳಲ್ಲೂ ಕೂಡಾ ಬೇಡಿಕೆ ಇದೆ. ಕೇವಲ ದೇಶದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಹೆಚ್ಚಿನ ಬೇಡಿಕೆ ಇದೆ. ಪರಿಸರ ನಾಶವಾಗಿ ಎಲ್ಲೆಲ್ಲೂ ಕಾಂಕ್ರೀಟ್ ಕಾಡು ನಿರ್ಮಾಣವಾಗಿರುವ ಈ ಕಾಲದಲ್ಲಿ ಇವುಗು ನೆಮ್ಮದಿಯ ಉಸಿರು ನೀಡಬಲ್ಲವು. ಈ ಅಲಂಕಾರಿಕ ಗಿಡಗಳನ್ನು ಬೆಳೆಸುವ ಉದ್ಯಮ ನಿಜಕ್ಕೂ ಅದಾಯ ತರುವಂತದ್ದಾಗಿದೆ.