Tag: Kolar

  • ಕೋಲಾರ ಬಂದ್ ಬಿಸಿ: ಊಟಕ್ಕೆ ಮದುವೆ ಮನೆಗಳಿಗೆ ಎಂಟ್ರಿ ಕೊಟ್ಟ ಪ್ರತಿಭಟನಾಕಾರರು

    ಕೋಲಾರ ಬಂದ್ ಬಿಸಿ: ಊಟಕ್ಕೆ ಮದುವೆ ಮನೆಗಳಿಗೆ ಎಂಟ್ರಿ ಕೊಟ್ಟ ಪ್ರತಿಭಟನಾಕಾರರು

    ಕೋಲಾರ: ಇಂದು ಕನ್ನಡಪರ ಸಂಘಟನೆಗಳು ನೀಡಿದ್ದ `ಕರ್ನಾಟಕ ಬಂದ್’ಗೆ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆದರೆ ಬಹುತೇಕ ಮದುವೆಗೆ ಬರಬೇಕಾದ ಜನ ಬರದೇ ಮಂಟಪಗಳು ಬಿಕೋ ಎನ್ನುತ್ತಿದ್ದವು.

    ನಗರದ ವಕೀಲ ಕೋದಂಡಪ್ಪನವರ ಮಗ ವೀರೇಂದ್ರ ಹಾಗೂ ಚಿತ್ರಾ ಎಂಬವರ ಮದುವೆಗೂ ಬಂದ್ ಬಿಸಿ ತಟ್ಟಿತ್ತು. ಬಂದ್‍ನಿಂದಾಗಿ ಮದುವೆಗಳಿಗೆ ಬರಬೇಕಾದ ಬಂಧುಗಳು ಹಾಗು ಸ್ನೇಹಿತರು ಬರದೇ ಇದ್ದಿದರಿಂದ ಕಲ್ಯಾಣ ಮಂಟಪಗಳು ಜನರಿಲ್ಲದೇ ಖಾಲಿ ಖಾಲಿಯಾಗಿತ್ತು.

    ಬಂಧುಗಳು ಬರದೇ ಇದಿದ್ದರಿಂದ ಮಾಡಿದ್ದ ಅಡುಗೆ ಹಾಗೆಯೇ ಉಳಿದಿತ್ತು. ಮದುವೆ ಮನೆಯವರ ಆಹ್ವಾನದ ಮೇರೆಗೆ ಹೋರಾಟಗಾರರೆಲ್ಲರೂ ಬಂದು ಊಟ ಮಾಡಿದ್ದಾರೆ. ಪ್ರತಿಭಟನೆ ಮಾಡಿ ಸುಸ್ತಾಗಿದ್ದ ಪ್ರತಿಭಟನಾಕಾರರು ರುಚಿಯಾದ ಊಟ ಮಾಡಿ ತಮ್ಮ ಹಸಿವು ನೀಗಿಸಿಕೊಂಡರು.

    https://www.youtube.com/watch?v=8OR7M716AWI

     

     

  • ಕೋಲಾರದಲ್ಲಿ ಸರ್ಕಾರಿ ಬಸ್‍ಗೆ ಕಲ್ಲು- ತೆಲುಗು ನಟ ನಂದಮೂರಿ ತಾರಕರತ್ನ ಕಾರಿಗೆ ತಡೆ

    ಕೋಲಾರದಲ್ಲಿ ಸರ್ಕಾರಿ ಬಸ್‍ಗೆ ಕಲ್ಲು- ತೆಲುಗು ನಟ ನಂದಮೂರಿ ತಾರಕರತ್ನ ಕಾರಿಗೆ ತಡೆ

    – ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಬೆಂಕಿ ಹಚ್ಚಿ ಕಿಡಿ
    – ಅತ್ತಿಬೆಲೆಯಲ್ಲಿ ತಮಿಳುನಾಡು ಬಸ್‍ಗೆ ತಡೆ
    – ದಕ್ಷಿಣ ಕನ್ನಡದಲ್ಲಿ ಬಂದ್ ಇಲ್ಲ

    ಕೋಲಾರ: ವಿವಿಧ ಬೇಡಿಕೆಗಳ ಈಡೆರಿಕೆಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನೀಡಿರುವ ಬಂದ್ ಗೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಗ್ಗೆ 5 ಗಂಟೆಯಿಂದಲೆ ಹೋರಾಟಗಾರರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ವಿವಿಧ ಸಂಘಟನೆಗಳ ಮುಖಂಡರು ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಸ್‍ಗಳ ಮೇಲೆ ಕಲ್ಲು ತೂರಾಟ ಮಾಡುವ ಮೂಲಕ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಬೆಳಗ್ಗಿನಿಂದಲೆ ಅಂಗಡಿ-ಮುಂಗಟ್ಟುಗಳು ಬಂದ್ ಆಗಿದ್ದು, ಅಟೋ, ಬಸ್ ಸಂಚಾರ ಸಂಪೂರ್ಣ ಸ್ಥಬ್ದವಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅದೇಶ ಹೊರಡಿಸಿದ್ದಾರೆ. ಮುನ್ನೆಚ್ಚರಿಜಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ.

    ಈ ಮಧ್ಯೆ ತೆಲುಗು ಚಿತ್ರ ನಟ, ಎನ್‍ಟಿಆರ್ ಮೊಮ್ಮಗ ನಂದಮೂರಿ ತಾರಕ ರತ್ನ ಅವರಿಗೂ ಕರ್ನಾಟಕ ಬಂದ್ ಬಿಸಿ ತಟ್ಟಿತ್ತು. ಭಾನುವಾರದಂದು ಖಾಸಗಿ ಕಾರ್ಯಕ್ರಮದ ನಿಮಿತ್ತ ಕೋಲಾರಕ್ಕೆ ಆಗಮಿಸಿದ್ದರು. ಇಂದು ಬಂದ್ ವೇಳೆ ಕೋಲಾರದ ಶ್ರೀನಿವಾಸಪುರ ವೃತ್ತದಲ್ಲಿ ಅವರನ್ನ ತಡೆದು ಪ್ರತಿಭಟನೆ ನಡೆಸಲಾಯ್ತು. ಈ ವೇಳೆ ತಾರಕ ರತ್ನ ಅವರು ಕಾರಿಂದ ಕೆಳಗೆ ಇಳಿದು ಕರ್ನಾಟಕ ಬಂದ್ ಗೆ ನಮ್ಮ ಕುಟುಂಬದ ಬೆಂಬಲ ಇದೆ ಎಂದು ಹೇಳಿ ಚಿಕ್ಕಬಳ್ಳಾಪುರ, ಅನಂತಪುರ ಮೂಲಕ ಆಂಧ್ರಪ್ರದೇಶಕ್ಕೆ ತೆರಳಿದ್ರು.

    ಚಿಕ್ಕಬಳ್ಳಾಪುರದಲ್ಲಿ ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಶಾಶ್ವತ ನೀರಾವರಿ ಹೋರಾಟಗಾರರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಳ್ಳಂಬೆಳಿಗ್ಗೆಯೇ ಪಂಜಿನ ಮೆರವಣಿಗೆ ಮೂಲಕ ಶಿಡ್ಲಘಟ್ಟ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದ ಪ್ರತಿಭಟನಕಾರರು ಬಯಲುಸೀಮೆ ಭಾಗಕ್ಕೆ ಶಾಶ್ವತ ನೀರಾವರಿ ಯೋಜನೆ ಜಾರಿ ಮಾಡುವಂತೆ ಆಗ್ರಹಿಸಿದ್ರು.

    ರಾಮನಗರದಲ್ಲಿ ಬಂದ್‍ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದೆಡೆ ಪ್ರತಿಭಟನೆಗಳು ಶುರುವಾಗಿದ್ರೆ, ಮತ್ತೊಂದೆಡೆ ಕೆಎಸ್‍ಆರ್‍ಟಿಸಿ ಬಸ್‍ಗಳು ನಿರಾತಂಕವಾಗಿ ರಸ್ತೆಗಿಳಿದಿದ್ದು, ಅಂಗಡಿ ಮುಂಗಟ್ಟುಗಳು ನಿಧಾನವಾಗಿ ತೆರೆದುಕೊಳ್ತಾ ಇವೆ. ಇನ್ನೂ ಬೆಳ್ಳಂಬೆಳಿಗ್ಗೆ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ಇದೇ ವೇಳೆ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆತಡೆಗೆ ಮುಂದಾದ ಪ್ರತಿಭಟನಕಾರರನ್ನು ಪೊಲೀಸರು ತಡೆದರು. ಶಾಶ್ವತ ನೀರಾವರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸದೆ ಮಲತಾಯಿ ಧೋರಣೆ ತೋರುತ್ತಿದೆ. ಕೂಡಲೇ ರಾಜ್ಯ ಸರ್ಕಾರದ ಮೇಕೆದಾಟು, ಮಹಾದಾಯಿ, ಕಳಸಾ ಬಂಡೂರಿ ನೀರಾವರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ಮದ್ಯಸ್ಥಿಕೆ ವಹಿಸಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ್‍ಗೌಡ ಆಗ್ರಹಿಸಿದ್ರು.

    ವಿಜಯಪುರದಲ್ಲಿ ಬಂದ್‍ಗೆ ಪೂರ್ಣ ಬೆಂಬಲ ಸಿಕ್ಕಿದೆ. ಬಸ್ ಸಂಚಾರ ಎಂದಿನಂತೆ ಪ್ರಾರಂಭವಾಗಿತ್ತು. ಆದ್ರೆ ಬಸ್ ನಿಲ್ದಾಣಕ್ಕೆ ಲಗ್ಗೆ ಇಟ್ಟ ಕರವೇ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಬಸ್ ಸಂಚಾರ ಸ್ಥಗಿತಗೊಳಿಸಿದರಲ್ಲದೆ, ನಿಲ್ದಾಣದ ಅಂಗಡಿ ಮಂಗಟ್ಟಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಿದರು. ನಂತರ ನಿಲ್ದಾಣದಲ್ಲೆ ಪ್ರತಿಭಟನೆ ನಡೆಸಿದರು. ಅಲ್ಲದೆ ನಗರದ ಗಾಂಧಿಚೌಕ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.

    ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣ ಹಾಗೂ ತಮಿಳುನಾಡು ಗಡಿಭಾಗವಾದ ಅತ್ತಿಬೆಲೆಯಲ್ಲಿ ಬಂದ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆನೇಕಲ್ ಪಟ್ಟಣದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಿಲ್ಲಿಸಿದ್ದು, ವಾಹನ ಸಂಚಾರ ವಿರಳವಾಗಿದೆ. ದಲಿತ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ವಾಟಾಳ್ ನಾಗರಾಜ್ ಅಭಿಮಾನಿ ಬಳಗ ಹಾಗೂ ಪ್ರಜಾ ವಿಮೋಚನ ಚಳುವಳಿ ಸಂಘಟನೆಯ ಆದೂರು ಪ್ರಕಾಶ್ ಹಾಗೂ ವಾಟಳ್ ನಾಗರಾಜ್ ಅಭಿಮಾನಿ ಬಳಗದ ಸನಾವುಲ್ಲಾ ನೇತೃತ್ವದ ಕಾರ್ಯಕರ್ತರು ಆನೇಕಲ್ ಪಟ್ಟಣದಲ್ಲಿ ಟೈರ್‍ಗಳಿಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗವಾದ ಅತ್ತಿಬೆಲೆಯಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುವ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಂಡಿದ್ದು, ತಮಿಳುನಾಡಿನ ಸಾರಿಗೆ ವಾಹನಗಳು ಕರ್ನಾಟಕಕ್ಕೆ ಪ್ರವೇಶಿಸದ ಕಾರಣ ಪ್ರಯಾಣಿಕರು ತಮಿಳುನಾಡು ಗಡಿ ಹಾಗೂ ಅತ್ತಿಬೆಲೆ ಭಾಗದಿಂದ ನಡೆದುಕೊಂಡು ಹೋಗಿ ಬಸ್‍ಗಳಲ್ಲಿ ಸಂಚರಿಸುವಂತಾಗಿದೆ.

    ಇನ್ನು ಚಿಕ್ಕಮಗಳೂರಿನಲ್ಲಿ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರಿ, ಖಾಸಗಿ ಬಸ್ ಹಾಗೂ ಆಟೋ ಸಂಚಾರ ಎಂದಿನಂತಿದೆ. ಅಂಗಡಿ, ಮುಂಗಟ್ಟುಗಳು ಎಂದಿನಂತೆ ತೆರೆದಿವೆ. ಜನಜೀವನ ಸಾಮಾನ್ಯವಾಗಿದೆ. ನಗರದಲ್ಲಿ ಪ್ರತಿಭಟನೆ ನಡೆಸ್ತಿರೋ ವಿವಿಧ ಕನ್ನಡ ಪರ ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಐ.ಜಿ.ರಸ್ತೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಣುಕು ಶವಯಾತ್ರೆ ನಡೆಸಿದ ಕಾರ್ಯಕರ್ತರು ಮೋದಿ ಹಾಗೂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಮಡಕೆ ಹಿಡಿದು ಮೆರವಣಿಗೆಯುದ್ಧಕ್ಕೂ ಶವಗಳ ಮೇಲೆ ಮಂಡಕ್ಕಿ ತೂರುತ್ತಾ ಬಾಯಿ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನೂ ಬಂದ್ ಹಿನ್ನಲೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಕೊಪ್ಪಳ ಹಾಗೂ ಹುಬ್ಬಳ್ಳಿಯಲ್ಲೂ ಕೂಡ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಧಾರವಾಡದಲ್ಲಿ, ಬಾಗಲಕೋಟೆ, ತುಮಕೂರು ಹಾಗೂ ರಾಯಚೂರಿನಲ್ಲಿ ನೀರಸ ಪ್ರತಿಕ್ರಿಯೆ ಇದೆ. ಚಾಮರಾಜನಗರ, ಹಾವೇರಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್‍ಗೆ ಬೆಂಬಲ ವ್ಯಕ್ತವಾಗಿಲ್ಲ.

  • ದಾನಿಗಳ ನೆರವಿನಲ್ಲೇ SSLC ಮುಗಿಸಿರೋ ಕೋಲಾರದ ಕೀರ್ತಿಯ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿದೆ ಸಹಾಯ

    ದಾನಿಗಳ ನೆರವಿನಲ್ಲೇ SSLC ಮುಗಿಸಿರೋ ಕೋಲಾರದ ಕೀರ್ತಿಯ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿದೆ ಸಹಾಯ

    ಕೋಲಾರ: ತನ್ನ ಪಾಡಿಗೆ ತಾನು ಓದುತ್ತಿರುವ ವಿದ್ಯಾರ್ಥಿನಿ ಒಂದೆಡೆಯಾದ್ರೆ, ಆಕೆಯ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಾ ಮೊಮ್ಮಗಳನ್ನ ನೋಡುತ್ತಿರುವ ವಯಸ್ಸಾದ ಜೀವಗಳು ಇನ್ನೊಂದೆಡೆ. ಇದು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹರಳಕುಂಟೆ ಗ್ರಾಮದ ಬಡ ವಿದ್ಯಾರ್ಥಿನಿ ಕೀರ್ತಿಯ ದುಸ್ಥಿತಿ.

    ಈಕೆಗೆ ತಂದೆಯಿಲ್ಲ, ಮನೆ ಪೋಷಣೆಗೆ ತಾಯಿ ಕೂಲಿ-ನಾಲಿಯೆ ಜೀವನಾಧಾರ. ಇಂತಹ ಸ್ಥಿತಿಯಲ್ಲಿ ಮಗಳನ್ನ ಓದಿಸುವುದು ಹಗಲುಗನಸಾದ್ರೂ ಇಷ್ಟು ದಿನ ಶಿಕ್ಷಕರು ಹಾಗೂ ದಾನಿಗಳ ಸಹಾಯದಿಂದ ಎಸ್‍ಎಸ್‍ಎಲ್‍ಸಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ವಿಶೇಷತೆ ಅಂದ್ರೆ ಗ್ರಾಮೀಣ ಪ್ರತಿಭೆಯಾಗಿರುವ ಈಕೆ ಹತ್ತನೆ ತರಗತಿಯಲ್ಲಿ ಶೇ.91 ಅಂಕ ಗಳಿಸಿದ್ದಾಳೆ. ಆದ್ರೆ ಮುಂದಿನ ವಿದ್ಯಾಭ್ಯಾಸ ಕಷ್ಟಕರವಾಗಿದ್ದು, ಯಾವುದಾರೊಂದು ವಸತಿ ಕಾಲೇಜಿನಲ್ಲಿ ದಾಖಲಾತಿ ಸಿಕ್ಕರೆ ಉತ್ತಮ ವಿದ್ಯಾಭ್ಯಾಸ ಮಾಡಿ ಮನೆಯ ಪೋಷಣೆ ಜೊತೆಗೆ ಸಮಾಜ ಸೇವೆ ಮಾಡುವ ಕನಸು ಹೊಂದಿದ್ದಾಳೆ.

    ತಂದೆ ಸಾವನ್ನಪ್ಪಿದ 8 ದಿನಗಳಿಗೆ ಜನಿಸಿರುವ ಕೀರ್ತಿಗೆ ಲಕ್ಷ್ಮೀ ಕೃಪೆ ಇಲ್ಲದಿದ್ದರೂ ಸರಸ್ವತಿ ಒಲಿದಿದ್ದಾಳೆ. ಬಡತನದ ನಡುವೆ ದಾನಿಗಳ ಆಸರೆಯಲ್ಲೆ ಒಳ್ಳೇ ಅಂಕ ಪಡೆದಿರುವ ವಿದ್ಯಾರ್ಥಿನಿ ಮುಂದೆ ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿ ಐಎಎಸ್ ಮಾಡುವ ಕನಸು ಹೊಂದಿದ್ದಾಳೆ. ಆದ್ರೆ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ರಕ್ಷಣೆ ಹಾಗೂ ಸುರಕ್ಷತೆ ದೃಷ್ಠಿಯಿಂದ ವಸತಿ ಕಾಲೇಜುಗಳ ಮೊರೆ ಹೋಗುತ್ತಿದ್ದಾಳೆ.

    ಒಟ್ಟಿನಲ್ಲಿ ಎಲ್ಲವೂ ಇದ್ರು ಏನೂ ಸಾಧನೆ ಮಾಡದ ಇವತ್ತಿನ ದಿನಗಳಲ್ಲಿ ಉತ್ತಮ ಅಂಕ ಪಡೆದ ಕೀರ್ತಿ ವಿಭಿನ್ನವಾಗಿ ಕಾಣ್ತಾಳೆ. ಬಡತನದ ಹಿನ್ನೆಲೆ ವಿದ್ಯಾಭ್ಯಾಸಕ್ಕೆ ಯಾರಾದ್ರು ನೆರವಾಗಿ ಈಕೆಯ ಕನಸು ನನಸಾಗಲಿ ಅನ್ನೋದು ನಮ್ಮ ಆಶಯ.

    https://www.youtube.com/watch?v=IBNFsqWdu48

  • ಹೈಟೆಕ್ ಆಗ್ತಿದೆ ಕೋಲಾರ ಮುನೇಶ್ವರ ನಗರ: ಇದು ಯುಪಿಎಸ್‍ಸಿ ಟಾಪರ್ ನಂದಿನಿ ಎಫೆಕ್ಟ್

    ಹೈಟೆಕ್ ಆಗ್ತಿದೆ ಕೋಲಾರ ಮುನೇಶ್ವರ ನಗರ: ಇದು ಯುಪಿಎಸ್‍ಸಿ ಟಾಪರ್ ನಂದಿನಿ ಎಫೆಕ್ಟ್

    ಕೋಲಾರ: ಯುಪಿಎಸ್‍ಸಿ ಟಾಪರ್ ಆಗಿ ಕೆ.ಆರ್.ನಂದಿನಿ ಅವರು ಹೊರಹೊಮ್ಮಿದ ಬಳಿಕ ಕೋಲಾರದ ಮುನೇಶ್ವರ ನಗರಕ್ಕೆ ಕಾಯಕಲ್ಪ ಸಿಕ್ಕಿದೆ.

    ಹೌದು. ದೇಶಕ್ಕೆ ಟಾಪರ್ ಆಗುವ ಮೂಲಕ ಗಮನ ಸೆಳೆದಿದ್ದ ನಂದಿನಿ ಅವರ ಫಲಿತಾಂಶದಿಂದಾಗಿ ತಂದೆ ತಾಯಿ ವಾಸವಿರುವ, ತಾವು ಹುಟ್ಟಿ ಬೆಳೆದ ವಠಾರದ ಚಿತ್ರಣ ಈಗ ಬದಲಾಗುತ್ತಿದೆ.

    ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿದ್ದ ಮುನೇಶ್ವರ ನಗರ ಈಗ ರಾತ್ರೋರಾತ್ರಿ ಹೈ-ಟೆಕ್ ಸ್ಪರ್ಶ ಪಡೆದುಕೊಂಡಿದೆ. ನಗರಕ್ಕೆ ಕಾಂಕ್ರೀಟ್ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ ಸೇರಿದಂತೆ ಬೀದಿ ದೀಪ ವ್ಯವಸ್ಥೆಗಳನ್ನು ಮಾಡುವ ಮೂಲಕ ನಗರಸಭೆ ಸಾಕಷ್ಟು ಬದಲಾವಣೆಗಳನ್ನು ಮಾಡಿದೆ.

    ಈ ಹಿಂದೆ ಸಾಕಷ್ಟು ಬಾರಿ ಮನವಿ ಮಾಡಿದ್ರೂ ಬದಲಾವಣೆಯಾಗದ ವ್ಯವಸ್ಥೆ ಈಗ ನಂದಿನಿ ಅವರಿಂದಾಗಿ ಬದಲಾವಣೆ ಆಗುತ್ತಿದೆ ಎಂದು ಮುನೇಶ್ವರ ನಗರದ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

    https://www.youtube.com/watch?v=uGLO7ROjcVg

  • ವಿಡಿಯೋ: ಗಾಯಗೊಂಡ ಕೋತಿ ಬಳಿ ಮರಿಕೋತಿಯ ರೋಧನೆ- ಮನಕಲಕುವ ದೃಶ್ಯ ಕಂಡು ಮಾನವೀಯತೆ ಮೆರೆದ ಸ್ಥಳೀಯರು

    ವಿಡಿಯೋ: ಗಾಯಗೊಂಡ ಕೋತಿ ಬಳಿ ಮರಿಕೋತಿಯ ರೋಧನೆ- ಮನಕಲಕುವ ದೃಶ್ಯ ಕಂಡು ಮಾನವೀಯತೆ ಮೆರೆದ ಸ್ಥಳೀಯರು

    ಕೋಲಾರ: ಗಾಯಗೊಂಡ ಕೋತಿಯ ಬಳಿ ಮರಿಕೋತಿರೊಂದು ರೋಧಿಸುತ್ತಿದ್ದ ವೇಳೆ ಸ್ಥಳೀಯರು ಮಾನವೀಯತೆ ಮೆರೆದ ಘಟನೆ ಕೋಲಾರದಲ್ಲಿ ನಡೆದಿದೆ.

    ಕೋಲಾರದ ರಾಷ್ಟ್ರೀಯ ಹೆದ್ದಾರಿ 75 ರ ಟಮಕ ಬಳಿ ಈ ಘಟನೆ ನಡೆದಿದೆ. ಕೋತಿಯೊಂದಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೋತಿ ಗಾಯಗೊಂಡಿತ್ತು. ಗಾಯವಾಗಿ ಮಲಗಿದ್ದ ಕೋತಿಯ ಎದುರು ಮರಿಕೋತಿ ರೋಧಿಸುತ್ತಿತ್ತು. ಈ ಮನಕಲಕುವ ದೃಶ್ಯ ಕಂಡ ಸ್ಥಳೀಯರು ಕೋತಿಯ ನೆರವಿಗೆ ಧಾವಿಸಿದ್ದಾರೆ.

    ಗಾಯಗೊಂಡಿದ್ದ ಕೋತಿಗೆ ನೀರು ಕುಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ನಂತರ ಎಚ್ಚೆತ್ತ ಕೋತಿಯನ್ನು ಒಂದು ಟ್ರೇನಲ್ಲಿ ಹಾಕಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ. ಮೊದಲಿಗೆ ಪುಟಾಣಿ ಕೋತಿ ಟ್ರೇನಲ್ಲಿ ಹಾಕಿದ್ದು, ತಾಯಿ ಕೋತಿಯನ್ನು ಟ್ರೇಯೊಳಗೆ ಹಾಕುತ್ತಿದ್ದಂತೆ ಅದು ಓಡಿಹೋಗಲು ಯತ್ನಿಸಿದೆ. ಆದ್ರೆ ಮತ್ತೆ ಅದನ್ನು ಹಿಡಿದು ತಂದು ಪುಟಾಣಿ ಕೋತಿಯ ಜೊತೆಯಲ್ಲೇ ಕೋಲಾರದ ಪಶುವೈದ್ಯಕೀಯಕ್ಕೆ ಕರೆದುಕೊಂಡು ಹೋಗಿ ಇಂಜೆಕ್ಷನ್ ಕೊಡಿಸಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಮರಿಯೊಂದಿಗೆ ತಾಯಿ ಕೋತಿ ಓಡಿಹೋಗಿದೆ.

    https://www.youtube.com/watch?v=F7HrZruTZhU&feature=youtu.be

     

  • ಮರ್ಯಾದಾ ಹತ್ಯೆ: ಪ್ರೀತಿಯಲ್ಲಿ ಬಿದ್ದ ಮಗಳು ತಾಯಿಯಿಂದ ಕೊಲೆಯಾದ್ಳು!

    ಮರ್ಯಾದಾ ಹತ್ಯೆ: ಪ್ರೀತಿಯಲ್ಲಿ ಬಿದ್ದ ಮಗಳು ತಾಯಿಯಿಂದ ಕೊಲೆಯಾದ್ಳು!

    ಕೋಲಾರ: ಪ್ರೇಮ ವಿಚಾರ ತಿಳಿದು ತಾಯಿಯೇ ತಾನು ಬೆಳಸಿದ್ದ ಮಗಳನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಕೋಲಾರ ತಾಲೂಕಿನ ಚಿನ್ನಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.

    18 ವರ್ಷದ ರಾಜೇಶ್ವರಿ ಕೊಲೆಯಾದ ಯುವತಿ. ತಂದೆಯಿಲ್ಲದ ರಾಜೇಶ್ವರಿಯನ್ನು ತಾಯಿ ವೆಂಕಟಮ್ಮ ಕೂಲಿ ನಾಲಿ ಮಾಡಿ ಸಾಕಿದ್ದರು. ಮಗಳು ಚೆನ್ನಾಗಿರಲಿ ಎಂದು ಪಿಯುಸಿ ಓದಿಸುತ್ತಿದ್ದರು. ಆದರೆ ರಾಜೇಶ್ವರಿ ಅದೇ ಗ್ರಾಮದ ಯುವಕನ ಪ್ರೇಮಪಾಶದಲ್ಲಿ ಸಿಲುಕಿದ್ದಳು.

    ರಾಜೇಶ್ವರಿಯ ಪ್ರೇಮ ವಿಚಾರವನ್ನು ತಿಳಿದ ಗ್ರಾಮಸ್ಥರು ಆಕೆಯ ತಾಯಿಯನ್ನು ನಿಂದಿಸಿದ್ರು. ಇದರಿಂದ ನೊಂದ ತಾಯಿ ಸಾಕಷ್ಟು ಬಾರಿ ಮಗಳಿಗೆ ಬುದ್ದಿ ಮಾತು ಹೇಳಿದ್ರು ಕೇಳಲಿಲ್ಲ. ಸೋಮವಾರ ರಾತ್ರಿ ಮರ್ಯಾದೆಗೆ ಅಂಜಿದ ತಾಯಿ ಮಗಳನ್ನ ಥಳಿಸಿದ್ದಾಳೆ. ಈ ವೇಳೆ ಕಪಾಳಕ್ಕೆ ಜೋರಾಗಿ ಪೆಟ್ಟುಬಿದ್ದ ಪರಿಣಾಮ ರಾಜೇಶ್ವರಿ ಮೃತಪಟ್ಟಿದ್ದಾಳೆ.

    ಇನ್ನೂ ಬೆಳಗ್ಗೆ ಗುಟ್ಟಾಗಿ ಮಗಳ ಅಂತ್ಯಸಂಸ್ಕಾರಕ್ಕೆ ವೆಂಕಟಮ್ಮ ಮುಂದಾಗಿದ್ರು. ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆಯಲ್ಲಿ ವೆಂಕಟಮ್ಮ ಮಗಳ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ನಾಯಿಗಳಿಗೆ ಹೆದರಿ ನೇಗಿಲು ಸಹಿತ 30 ಅಡಿ ಪಾಳು ಬಾವಿಗೆ ಬಿದ್ದ ಎತ್ತುಗಳು

    ನಾಯಿಗಳಿಗೆ ಹೆದರಿ ನೇಗಿಲು ಸಹಿತ 30 ಅಡಿ ಪಾಳು ಬಾವಿಗೆ ಬಿದ್ದ ಎತ್ತುಗಳು

    ಕೋಲಾರ: ಉಳುಮೆ ಮಾಡುವ ವೇಳೆ ನಾಯಿಗಳಿಗೆ ಬೆದರಿದ ಎತ್ತುಗಳು ನೇಗಿಲು ಸಹಿತ 30 ಅಡಿ ಆಳದ ಪಾಳು ಬಾವಿಗೆ ಬಿದ್ದ ಘಟನೆ ಬಂಗಾರಪೇಟೆ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ಜೀಡಮಾಕನಪಲ್ಲಿ ಗ್ರಾಮದ ನಿವಾಸಿ ರೈತ ಮುನಿಯಪ್ಪ ಎಂಬವರ ಎತ್ತುಗಳು ಪಾಳು ಬಾವಿಗೆ ಬಿದ್ದು ಗಾಯಗೊಂಡಿವೆ. ಕೆಲವು ದಿನಗಳಿಂದ ಗ್ರಾಮದಲ್ಲಿ ಮಳೆಯಾಗಿದ್ದು, ರೈತ ಮುನಿಯಪ್ಪ ಅವರು ಉಳುಮೆ ಮಾಡಲು ತಮ್ಮ ಎತ್ತುಗಳ ಜೊತೆಗೆ ಹೊಲಕ್ಕೆ ಆಗಮಿಸಿದ್ದರು.

    ಎತ್ತುಗಳಿಗೆ ನೇಗಿಲು ಕಟ್ಟಿ ಉಳುಮೆ ಮಾಡುವಷ್ಟರಲ್ಲಿ ನಾಯಿಗಳನ್ನು ಕಂಡು ಬೆದರಿದ ಎತ್ತುಗಳು ಓಡಿ ಹೋಗಿ ಹತ್ತಿರದ 30 ಅಡಿ ಪಾಳು ಬಾವಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿವೆ. ಬಾವಿಗೆ ಬಿದ್ದ ಎತ್ತುಗಳನ್ನು ಸ್ಥಳೀಯರ ನೆರವಿನಿಂದ ಮೇಲೆತ್ತಲು ಸಿದ್ಧತೆ ನಡೆಸಿದ್ದಾರೆ.

     

  • ತುಂಬು ಗರ್ಭಿಣಿಯನ್ನ ವಾಪಸ್ ಕಳುಹಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು

    ತುಂಬು ಗರ್ಭಿಣಿಯನ್ನ ವಾಪಸ್ ಕಳುಹಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು

    ಕೋಲಾರ: ಹೆರಿಗೆಗೆಂದು ದಾಖಲಾಗಿದ್ದ ತುಂಬು ಗರ್ಭಿಣಿಯನ್ನ ವೈದ್ಯರು ವಾಪಸ್ ಕಳುಹಿಸಿದ ಘಟನೆ ಜಿಲ್ಲೆಯ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

    ಮಾಲೂರು ತಾಲೂಕಿನ ಚಿಕ್ಕ ಇಗ್ಗಲೂರು ನಿವಾಸಿಯಾಗಿರುವ ಪ್ರಿಯಾಂಕ (23) ಎಂಬವರು ಹೆರಿಗೆಗೆಂದು ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಮಾಡಲು ಆಕ್ಸಿಜನ್ ಇಲ್ಲ ಎಂದು ಸರ್ಕಾರಿ ಆಸ್ಪತ್ರೆ ವೈದ್ಯರು ಮಾಲೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

    ಈ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಕೇಳಿದಾಗ ತಾಲೂಕು ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗುತ್ತಿದೆ. ಆಕ್ಸಿಜನ್ ಇಲ್ಲ ಎಂದು ಹೊರಗೆ ಕಳಿಸಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

  • ಚಪ್ಪರದ ದಿನವೇ ವರ ಶವವಾಗಿ ಪತ್ತೆ

    ಚಪ್ಪರದ ದಿನವೇ ವರ ಶವವಾಗಿ ಪತ್ತೆ

    ಕೋಲಾರ: ಚಪ್ಪರದ ದಿನವೇ ವರನೊಬ್ಬ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಬಂಗಾರಪೇಟೆ ತಾಲೂಕು ಮರಲಹಳ್ಳಿ ರೈಲ್ವೇ ಟ್ರ್ಯಾಕ್ ಬಳಿ ಶವ ಪತ್ತೆಯಾಗಿದೆ.

    ಮಾಲೂರು ತಾಲೂಕು ಜಂಗಾನಹಳ್ಳಿಯಲ್ಲಿ ನಾರಾಯಣಸ್ವಾಮಿ (28) ಮೃತದೇಹ ಪತ್ತೆಯಾಗಿದೆ. ಬಂಗಾರಪೇಟೆ ಪಟ್ಟಣದ ಎಸ್.ಎನ್.ಆರ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಂಜೆ ಆರತಕ್ಷತೆ, ನಾಳೆ ಬೆಳಗ್ಗೆ ಮದುವೆ ನಡೆಯಬೇಕಿತ್ತು.

    ಶನಿವಾರ ರಾತ್ರಿ ಫೋನ್ ಬಂದಿದೆ ಎಂದು ಮನೆಯಿಂದ ಹೊರ ಹೋಗಿದ್ದ ನಾರಾಯಣಸ್ವಾಮಿಯ ಇಂದು ಶವವಾಗಿ ಪತ್ತೆಯಾಗಿದ್ದಾರೆ. ಯಾರೋ ಕೊಲೆ ಮಾಡಿ ರೈಲ್ವೇ ಟ್ರ್ಯಾಕ್‍ನಲ್ಲಿ ಬಿಸಾಡಿರುವುದಾಗಿ ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

    ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಕೋಲಾರದಲ್ಲಿ ಗಾಂಜಾ ಮತ್ತಿನಲ್ಲಿ 6 ಜನರಿಗೆ ಚಾಕು ಇರಿತ- ಆರೋಪಿ ಪೊಲೀಸ್ ವಶ

    ಕೋಲಾರದಲ್ಲಿ ಗಾಂಜಾ ಮತ್ತಿನಲ್ಲಿ 6 ಜನರಿಗೆ ಚಾಕು ಇರಿತ- ಆರೋಪಿ ಪೊಲೀಸ್ ವಶ

    ಕೋಲಾರ: ಗಾಂಜಾ ಮತ್ತಿನಲ್ಲಿದ್ದ ವ್ಯಕ್ತಿಯೊರ್ವ 6 ಜನರಿಗೆ ಚಾಕುವಿನಿಂದ ಇರಿದು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಕೋಲಾರದಲ್ಲಿ ಶನಿವಾರ ರಾತ್ರಿ ನಡೆದಿದೆ.

    ಕೋಲಾರ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಸದ್ಯ ಆರೋಪಿ 22 ವರ್ಷದ ಮುಕ್ತಾರ್ ಪೊಲೀಸರ ವಶದಲ್ಲಿದ್ದಾನೆ.

    ನಡೆದಿದ್ದೇನು?: ಗಾಂಜಾ ಮತ್ತಿನಲ್ಲಿ ಯುವಕ ಮುಕ್ತಾರ್ ಕೋಲಾರ ಹೊರವಲಯದ ಟಮಕ ನಿವಾಸಿ 37 ವರ್ಷದ ಶ್ರೀನಿವಾಸ್, ಕೀಲುಕೋಟೆ ನಿವಾಸಿ 46 ವರ್ಷದ ವೆಂಕಟೇಶಪ್ಪ ಹಾಗೂ ಇನ್ನಿತರರ ಮುಖ, ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಸಾರ್ವಜನಿಕರು ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ಆರೋಪಿ ಮುಕ್ತಾರ್‍ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಘಟನೆಯಲ್ಲಿ ಗಾಯಗೊಂಡವರಲ್ಲಿ ಇಬ್ಬರು ಕೋಲಾರ ಜಿಲ್ಲಾ ಆಸ್ಪತ್ರೆಯಲ್ಲಿ, ಉಳಿದಂತೆ ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕೋಲಾರ ಎಸ್ಪಿ ದಿವ್ಯಾಗೋಪಿನಾಥ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೋಲಾರ ನಗರ ಪೊಲೀಸ್ ಠಾಣೆ ಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.