ಕೋಲಾರ: ಜಿಲ್ಲೆಯ ಬಂಗಾರಪೇಟೆಯ ಸರ್ಕಾರಿ ಹಾಸ್ಟೇಲೊಂದರಲ್ಲಿ ಐದನೇ ತರಗತಿ ವಿದ್ಯಾರ್ಥಿನಿ ಮೇಲೆ 50 ವರ್ಷದ ಅಡುಗೆ ಸಾಹಾಯಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ವಸತಿ ನಿಲಯದ ಅಡುಗೆ ಸಹಾಯಕ ನಾರಾಯಣಪ್ಪ ಎಂಬಾತ ಕಳೆದ ಕೆಲವು ದಿನಗಳಿಂದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಗಸ್ಟ್ 16 ರಂದು ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದು, ಬಳಿಕ ಯಾರಿಗೂ ಹೇಳದಂತೆ ಬೆದರಿಕೆ ಹಾಕಿರುವ ಕಾಮುಕ ಸದ್ಯ ತಲೆಮರೆಸಿಕೊಂಡಿದ್ದಾನೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಕಿರುವ ಸರ್ಕಾರಿ ವಸತಿ ನಿಲಯದಲ್ಲಿ ಘೋರ ಕೃತ್ಯ ನಡೆದಿದ್ದು, ಅಲ್ಲಿಯ ವಾರ್ಡನ್ ಸೇರಿದಂತೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಬಾಲಕಿಯನ್ನ ಹಾಸ್ಟೇಲ್ ನಲ್ಲಿ ಕೂಡಿ ಹಾಕಿ ಅತ್ಯಾಚಾರ ಯತ್ನ ನಡೆಸಿರುವುದಾಗಿ ಬಾಲಕಿ ಪೋಷಕರ ಬಳಿ ಹಾಗೂ ದೂರಿನಲ್ಲಿ ಹೇಳಿಕೊಂಡಿದ್ದಾರೆ. ಬಾಲಕಿ ಪೋಷಕರು ಕೋಲಾರ ಸಿಇಒ ಬಿಬಿ ಕಾವೇರಿ ಅವರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಕೋಲಾರ: ಮಧ್ಯ ರಾತ್ರಿ ಮನೆಗೆ ಬಂದಾತ ಸುಮ್ಮನೆ ಹೋಗಿದ್ರೆ ಆತನು ಬದುಕುತ್ತಿದ್ದ. ಆ ಮನೆಯಲ್ಲಿದ್ದವರು ನಿಶ್ಚಿಂತೆಯಿಂದ ಮನೆಯಲ್ಲಿರುತ್ತಿದ್ದರು. ಆದರೆ ಆ ‘ಅತಿಥಿ’ ಮುಟ್ಟಿದ ಪರಿಣಾಮ ಬಾಲಕ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾನೆ.
ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ಜುಲೈ 5 ರಂದು ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಜಿಂಕವಾರಪಲ್ಲಿ ಗ್ರಾಮದ ರಹೀಂ ಖಾನ್ ಮನೆಯಲ್ಲಿ ನಡೆದ ಘಟನೆ. ಅಂದು ರಾತ್ರಿ ಎಲ್ಲರಂತೆ ಊಟ ಮಾಡಿ ಮನೆಯ ಸದಸ್ಯರು ಮಲಗಿದ್ದರು. ಆದರೆ ಮನೆಗೆ ಕಪ್ಪೆ ನುಂಗಲು ಬಂದ ನಾಗರ ಹಾವು ಅಲ್ಲೇ ಪಕ್ಕದಲ್ಲೆ ಮಲಗಿದ್ದ ಸಮೀರ್‍ನ ಎಡ ಕಾಲಿಗೆ ಕಚ್ಚಿ ಗಾಯಗೊಳಿಸಿತ್ತು.
ಅಷ್ಟೊತ್ತಿಗಾಗಲೇ ನೋವಿನಿಂದ ಸಮೀರ್‍ನ ಚೀರಾಟ ಕಂಡ ಪೋಷಕರು ಹಾವನ್ನ ಕೊಂದು ಬಾಲಕನನ್ನು ಆಸ್ಪತ್ರೆ ದಾಖಲು ಮಾಡಿದ್ದರು. ಮೊದಲಿಗೆ ನಾಟಿ ಔಷಧ ಕೊಡಿಸಿದರಾದರೂ ಮಗನ ಜೀವಕ್ಕೆ ಅಪಾಯ ಇರುವುದನ್ನರಿತ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಆರ್‍ಎಲ್ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ 2 ಶಸ್ತ್ರ ಚಿಕಿತ್ಸೆ ಮಾಡಿರುವುದರಿಂದ ಕೊಂಚ ಚೇತರಿಕೆ ಕಂಡಿರುವ ಸಮೀರ್ ಗೆ ಮತ್ತೊಂದು ಶಸ್ತ್ರ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಇಗಾಗಲೇ 1 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಚಿಕಿತ್ಸೆ ನೀಡಲಾಗಿದೆ. ಎರಡು ಶಸ್ತ್ರಚಿಕಿತ್ಸೆ ಮಾಡಿದ್ದು, ಮತ್ತೊಂದು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಇದಕ್ಕೆ 50 ಸಾವಿರ ರೂಪಾಯಿ ಆರ್ಥಿಕ ನೆರವು ಬೇಕಾಗಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ರಹೀಂ ಖಾನ್‍ಗೆ ಕುಟುಂಬ ಪೋಷಣೆಯೆ ಕಷ್ಟವಾಗಿದೆ. ಮುರುಕಲು ಮನೆಯಲ್ಲಿ ಮಲಗಿದ್ದರಿಂದಲೇ ಈ ಅನಾಹುತ ನಡೆದಿದೆ. ಅದರಲ್ಲಿ ಸಮೀರ್‍ಗೆ ಮಾತ್ರ ಕಳೆದ ಒಂದು ವರ್ಷದಿಂದ ಆಗಾಗ ಅನಾರೋಗ್ಯಕ್ಕೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ.
ಈ ಹಿಂದೆ ಮೂರ್ಛೆ ರೋಗ, ನಾಯಿ ಕಚ್ಚಿ ಕಂಗಾಲಾಗಿದ್ದ ಕುಟುಂಬಸ್ಥರಿಗೆ ಸದ್ಯ ಹಾವು ಕಚ್ಚಿ ಮಗ ಆಸ್ಪತ್ರೆ ಪಾಲಾಗಿರುವುದು ದಿಕ್ಕೆ ತೋಚದಂತಾಗಿದೆ. ಆದ್ರೆ ಈ ಬಾರಿಯ ಶಸ್ತ್ರ ಚಿಕಿತ್ಸೆ ವೆಚ್ಚ ಭರಿಸಿದ್ರೆ ಸಾಕು ತನ್ನ ಮಗ ಗುಣಮುಖನಾಗುತ್ತಾನೆ. ಇದರಿಂದ ಮಗನ ಜೀವ ಉಳಿಯುತ್ತೆ ಎನ್ನುತ್ತಾರೆ ಪೋಷಕರು.
ಒಟ್ಟಿನಲ್ಲಿ ಜೀವಕ್ಕೆ ಯಾವುದೇ ತೊಂದರೆಯಿಲ್ಲದಂತೆ ಗುಣ ಮುಖನಾದರೆ ಸಾಕು ಜೀವದಾನ ಮಾಡಿದಂತೆ ಎಂದು ಬೆಳಕಿನ ಆಸರೆ ಬೇಡುತ್ತಿದೆ ಬಡ ಕುಟುಂಬ.
ಕೋಲಾರ: ಕಾಲುಜಾರಿ ಕೃಷಿ ಹೊಂಡಕ್ಕೆ ಬಿದ್ದು ದಂಪತಿ ಮೃತಪಟ್ಟಿರೋ ಘಟನೆ ಕೋಲಾರ ತಾಲೂಕಿನ ಹರಟಿ ಗ್ರಾಮದಲ್ಲಿ ನಡೆದಿದೆ.
ಶ್ರೀರಾಮಪ್ಪ(50) ಹಾಗೂ ಲಲಿತಮ್ಮ(45) ಮೃತ ದುರ್ದೈವಿ ದಂಪತಿಯಾಗಿದ್ದು, ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ಕೆಲಸಕ್ಕೆಂದು ಹೊಲಕ್ಕೆ ಹೋದ ವೇಳೆ ಲಲಿತಮ್ಮ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾರೆ. ಈ ಸಂದರ್ಭ ಪತ್ನಿಯನ್ನು ರಕ್ಷಿಸಲೆಂದು ಹೋದ ಪತಿ ಶ್ರೀರಾಮಪ್ಪ ಕೂಡಾ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಕೋಲಾರ: ಸಾವಿರಾರು ಅಡಿ ಬೋರ್‍ವೆಲ್ ಕೊರೆದ್ರೂ ಜೀವ ಜಲ ಸಿಗದ ಕೋಲಾರದಲ್ಲಿ ರೈತರೊಬ್ರು ಬೋರ್‍ವೆಲ್, ಕರೆಂಟ್ ಯಾವುದೂ ಇಲ್ಲದೆ ಕೃಷಿಯಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಬರಡು ಭೂಮಿಯಲ್ಲಿ ವ್ಯವಸಾಯ ಮಾಡಿ, ಬರದಲ್ಲೂ ಹಚ್ಚ ಹಸುರಿನ ಬೆಳೆ ಬೆಳೆದು ಮಾದರಿ ಕೃಷಿಕರಾಗಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ರಾಂಪುರ ಗ್ರಾಮದ ಪ್ರಗತಿಪರ ರೈತ ಅಶೋಕ್‍ಕುಮಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. 16 ವರ್ಷಗಳಿಂದ ಕೃಷಿಕರಾಗಿದ್ದಾರೆ. 13 ವರ್ಷಗಳ ಕಾಲ ಶ್ರೀನಿವಾಸಪುರ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಂಪೂರ್ಣ ಕೃಷಿಕನಾಗಬೇಕು ಅಂತ ನಿರ್ಧರಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಅಶೋಕ್‍ಕುಮಾರ್, ಪಿತ್ರಾರ್ಜಿತ 70 ಎಕರೆ ಭೂಮಿಯಲ್ಲಿ ಸಾವಯವ ಹಾಗೂ ಸಹಜ ಕೃಷಿ ಮಾಡುತ್ತಿದ್ದಾರೆ. ತಮ್ಮ ಭೂಮಿಯನ್ನೇ ಪ್ರಯೋಗ ಶಾಲೆಯನ್ನಾಗಿಸಿಕೊಂಡು ಕೃಷಿ ಕಾರ್ಯಕ್ಕೆ ಇಳಿದಿದ್ದಾರೆ.
ಜಮೀನಿನಲ್ಲಿ ಐದಾರು ಕೃಷಿ ಹೊಂಡ, ಇಂಗುಗುಂಡಿ ಮೂಲಕ ಕೃಷಿ ಮಾಡ್ತಿದ್ದಾರೆ. ಒಂದು ಬೋರ್‍ವೆಲ್ ಸಹ ಹಾಕಿಸದೆ, ವಿದ್ಯುತ್ ಕೂಡಾ ಬಳಸದೆ, ಕೇವಲ ಮಳೆಯಾಶ್ರಿತ ಸಹಜ ಕೃಷಿ ಮಾಡ್ತಿರೋದು ಇವರ ವಿಶೇಷತೆ. ಕೃಷಿಯ ಜೊತೆಗೂ ಹೈನುಗಾರಿಕೆ, ಮೀನುಗಾರಿಕೆ ಕೂಡ ಮಾಡ್ತಿದ್ದಾರೆ. ತಮ್ಮದೇ ರೀತಿಯ ವಿಧಾನದಲ್ಲಿ ಅಶೋಕ್ ಕುಮಾರ್ ಕೃಷಿ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಜೊತೆ ಸುಂದರ ಬದುಕು ಕಟ್ಟಿಕೊಂಡಿದ್ದಾರೆ.
ಕೋಲಾರ: ಆರೋಗ್ಯ ಸಚಿವ ರಮೇಶ್‍ಕುಮಾರ್ ಅವರ ತವರು ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಜಿಲ್ಲಾಸ್ಪತ್ರೆಯಲ್ಲಿ 10ಕ್ಕೂ ಹೆಚ್ಚು ಜನ ಮಕ್ಕಳು ಬಲಿಯಾಗಿದ್ದಾರೆ.
ಬರದ ನಾಡು ಕೋಲಾರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ, ಮಕ್ಕಳ ಬೆಳವಣಿಗೆ ಕುಂಠಿತ, ಪೋಷಕಾಂಶಗಳ ಕೊರತೆ, ತೂಕ ಕಡಿಮೆ ಸೇರಿ ವಿವಿಧ ಅನಾರೋಗ್ಯದಿಂದ ಶಿಶುಗಳು ಸಾವನ್ನಪ್ಪಿವೆ.
ಸೋಮವಾರ ಒಂದೇ ದಿನ ಮೂರು ಹಸುಗೂಸುಗಳ ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿರುವ ಬಾಣಂತಿಯರು ಹಾಗೂ ಮಕ್ಕಳ ಪೋಷಕರಲ್ಲಿ ಆತಂಕ ಶುರುವಾಗಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಹೋಗಲು ಬಾಣಂತಿ ಮಹಿಳೆಯರು ಹಾಗೂ ಪೋಷಕರು ಚಿಂತನೆ ನಡೆಸಿದ್ದು, ಆಸ್ಪತ್ರೆ ವೈದ್ಯರ ವಿರುದ್ಧ ನವಜಾತ ಶಿಶುಗಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Would like to inform – sufficient pediatricians (4 nos) working in the hospital & no dearth of meds & equipment
ಕೋಲಾರ: ಬರದ ನಾಡು ಕೋಲಾರ ಜಿಲ್ಲೆಯಲ್ಲಿ ಹನಿ ನೀರಿಗೂ ಪ್ರಾಣಿ, ಪಕ್ಷಿಗಳು ಪರದಾಡುವ ಪರಿಸ್ಥಿತಿ. ಇಂತದ್ರಲ್ಲಿ ಇಲ್ಲೊಬ್ರು ಪ್ರತಿದಿನ ಮುಂಜಾನೆ ನೂರಾರು ನಾಯಿ-ಕೋತಿಗಳಿಗೆ ಹಾಲು, ಬ್ರೆಡ್, ಬಾಳೆ ಹಣ್ಣುಗಳನ್ನ ನೀಡುತ್ತಾ ಪ್ರಾಣಿಗಳ ಆರೈಕೆಯಲ್ಲಿ ತೊಡಗಿದ್ದಾರೆ.
ಹೌದು. ಕೋಲಾರದ ಕೆಜಿಎಫ್‍ನ ರಾಬರ್ಟ್ ಸನ್ ಪೇಟೆಯ ನಿವಾಸಿ ಮನೋಹರ್ ಲಾಲ್ ವೃತ್ತಿಯಲ್ಲಿ ಖಾಸಗಿ ಬಸ್ ಚಾಲಕ. ಪ್ರವೃತ್ತಿಯಲ್ಲಿ ಪ್ರಾಣಿಪ್ರೇಮಿಯಾಗಿದ್ದಾರೆ. ಬೀದಿನಾಯಿಗಳಿಗೆ ಹಾಗೂ ಕೋತಿಗಳಿಗೆ ಬ್ರೆಡ್, ಬಾಳೆಹಣ್ಣು ನೀಡುತ್ತಿದ್ದಾರೆ.
ಶ್ವಾನಗಳು ಅಂದ್ರೆ ಇವ್ರಿಗೆ ಎಲ್ಲಿಲ್ಲದ ಪ್ರೀತಿ. ತಾನು ದುಡಿದ ಅರ್ಧ ಹಣವನ್ನ ಮೂಕ ಜೀವಗಳಿಗೆ ಮೀಸಲಿಡ್ತಾರೆ. ನಿತ್ಯ ಬೆಳಗ್ಗೆ ಆಟೋದಲ್ಲಿ ಹಾಲು, ಬಾಳೆಹಣ್ಣು, ಬ್ರೆಡ್‍ಗಳನ್ನ ತುಂಬಿಸಿಕೊಂಡು ನಗರದ ಮೂಲೆ ಮೂಲೆ ಸುತ್ತಿ ನಾಯಿಗಳಿಗೆ ಪ್ರೀತಿಯಿಂದ ನೀಡ್ತಾರೆ. ಕಳೆದ 30 ವರ್ಷಗಳಿಂದ ಮನೋಹರ್ ಲಾಲ್ ಬೀದಿನಾಯಿಗಳ ರಕ್ಷಕನಾಗಿ ಕೆಲಸ ನಿರ್ವಹಿಸ್ತಿದ್ದಾರೆ. ಕೋತಿಗಳಿಗೂ ಆಹಾರ ನೀಡ್ತಾರೆ.
ಅಲ್ಲದೇ ನಾಯಿಗಳಿಗೆ ರೋಗ ಬಂದ್ರೂ ಇವರೇ ಟ್ರೀಟ್‍ಮೆಂಟ್ ನೀಡ್ತಾರೆ. ಆಹಾರದ ಜೊತೆ ಔಷಧವನ್ನು ನಾಯಿಗಳಿಗೆ ನೀಡ್ತಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸ್ತಾರೆ. ಮನೋಹರ್ ಲಾಲ್ ಅವರ ಕೊನೆಯ ಮಗ ಕೊನೆಯುಸಿರೆಳೆದ ನಂತರ ನಾಯಿ ಮತ್ತು ಕೋತಿಗಳ ಮೇಲೆ ಅಪಾರ ಪ್ರೀತಿ ಬೆಳೆಸಿಕೊಂಡಿದ್ದಾರೆ. ಅವುಗಳನ್ನು ಪುಟ್ಟ ಮಕ್ಕಳಂತೆ ನೋಡಿಕೊಳ್ತಿದ್ದಾರೆ.
ಒಟ್ಟಾರೆ ಮಕ್ಕಳನ್ನೇ ಸಾಕಿ ಸಲಹೋದು ಕಷ್ಟ. ಇಂತಹ ದಿನದಲ್ಲೂ ಬೀದಿನಾಯಿಗಳನ್ನು ಹೆತ್ತಮಕ್ಕಳಂತೆ ಸಾಕ್ತಿರೋ ಮನೋಹರ್ ಲಾಲ್ ಅವರ ಈ ಪ್ರಾಣಿ ಪ್ರೀತಿ ಮೆಚ್ಚುವಂತದ್ದು.
ಕೋಲಾರ: ಹಿಂದೂ ಪಂಚಾಂಗದಲ್ಲಿ ಶ್ರಾವಣ ಮಾಸ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದೆ. ಹಾಗಾಗಿ ಶ್ರಾವಣ ಮಾಸದ ಕೊನೆಯ ವಾರ ಶನಿವಾರದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ದೇವಾಲಯಗಳಲ್ಲಿ ಜನರು ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬಂಗಾರ ತಿರುಪತಿ ವೆಂಕಟರಮಣ ಸ್ವಾಮಿ, ಮಾಲೂರು ತಾಲೂಲಿನ ಚಿಕ್ಕತಿರುಪತಿ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯಕ್ಕೆ ಜನ ಸಾಗರವೇ ಹರಿದು ಬರುತ್ತಿದೆ.
ಶ್ರಾವಣ ಮಾಸ ದೇವಾನು ದೇವತೆಗಳಿಗೆ ಶುಭ ಸಂದರ್ಭವಾಗಿದ್ದು, ಈ ಸಂದರ್ಭದಲ್ಲಿ 17 ನಕ್ಷತ್ರಗಳು ಒಂದೇ ರೇಖೆಯಲ್ಲಿ ಬಂದು ಮಂಗಳವಾಗುತ್ತದೆ ಎಂಬ ನಂಬಿಕೆ ಇದೆ. ವಿವಿಧ ಹಬ್ಬಗಳು ಈ ಸಂದರ್ಭದಲ್ಲಿ ಬಂದು ಎಲ್ಲಾ ಒಳಿತಾಗುತ್ತೆ ಅನ್ನೋ ನಂಬಿಕೆ ನಡೆದು ಬಂದಿದೆ. ಹಾಗಾಗಿ ಸಾವಿರಾರು ಜನರು ಕೊನೆಯ ಶನಿವಾರದ ಪ್ರಯುಕ್ತ ದೇವಾಲಯಗಳಲ್ಲಿ ವಿಶೇಷ ಪೂಜೆಗಳನ್ನ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಕೋಲಾರ: ಚಾಲಕನ ನಿಯಂತ್ರಣ ತಪ್ಪಿ ಲಾರಿವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಐವರಿಗೆ ಗಾಯಗಳಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಮಾಲೂರು ತಾಲೂಕಿನ ದೊಡ್ಡಕಡತೂರು ಗ್ರಾಮದ ಬಳಿ ಬೆಳಗ್ಗೆ 6.30 ರ ಸುಮಾರಿಗೆ ಈ ಘಟನೆ ನಡೆದಿದೆ. ರಮೇಶ್(28) ಹಾಗೂ ನಾಗರಾಜ್ (30) ಮೃತ ದುರ್ದೈವಿಗಳು. ಗಾಯಾಳುಗಳನ್ನು ಮಾಲೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕೂಲಿ ಕೆಲಸದವರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಕೋಲಾರ: ಖಡಕ್ ರಾಜಕಾರಣಿ ಆರೋಗ್ಯ ಸಚಿವ ರಮೇಶ್ ಕುಮಾರ್ ತವರಲ್ಲೇ ಕೆರೆಗಳ ಕಗ್ಗೊಲೆ ನಡೆಯುತ್ತಿದೆ. ಕೋಲಾರದ ಮಾಲೂರಿನಲ್ಲಿರುವ ಬಹುತೇಕ ಕೆರೆಗಳಲ್ಲಿ ಫಿಲ್ಟರ್ ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಮುಂಗಾರು ಕೊರತೆಯ ನಡುವೆಯೂ ಕೆರೆಗಳಲ್ಲಿ ಸಂಗ್ರಹವಾಗಿರುವ ಅಲ್ಪಸ್ವಲ್ಪ ನೀರನ್ನು ಫಿಲ್ಟರ್ ದಂಧೆಗೆ ಬಳಸಲಾಗುತ್ತಿದೆ. ಇದೇ ಮರಳನ್ನು ರಾತ್ರೋರಾತ್ರಿ ಮಹಾನಗರಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಸರಬರಾಜು ಮಾಡಲಾಗ್ತಿದೆ. ಮರಳು ದಂಧೆಕೋರ ಪ್ರಭಾಕರ್‍ನಿಂದ ಮಾಲೂರು ಠಾಣೆಗೆ ತಿಂಗಳಿಗೆ 50 ಸಾವಿರ ರೂಪಾಯಿ ಸಂದಾಯವಾಗಿದೆ ಎಂದು ತಿಳಿದುಬಂದಿದೆ.
ದಂಧೆ ಬಗ್ಗೆ ಪ್ರಶ್ನೆ ಮಾಡಿದವರನ್ನೇ ಪೊಲೀಸರು ಬೆದರಿಸ್ತಿದ್ದಾರಂತೆ. ಯಾವುದಾದರೊಂದು ಕೇಸ್ ಹಾಕಿ ಸಿಲುಕಿಸೋ ಧಮ್ಕಿ ಹಾಕ್ತಿದ್ದಾರೆ ಎನ್ನಲಾಗಿದೆ. ಮಾಲೂರು ಪೊಲೀಸ್ ಠಾಣೆಯ ಮುಖ್ಯಪೇದೆ ವೆಂಕಟರಾಮೇಗೌಡ ಮರಳು ದಂಧೆಯಲ್ಲಿ ಭಾಗಿಯಾಗಿರುವ ಸೋಮಶೇಖರ್ ನಡೆಸಿರುವ ಆಡಿಯೋ ತುಣುಕು ಕೂಡ ಲಭ್ಯವಾಗಿದೆ. ಆದ್ರೆ ಡಿಸಿ ಮಾತ್ರ ಫಿಲ್ಟರ್ ಮರಳು ದಂಧೆಯನ್ನು ಸುತಾರಂ ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗಿದೆ.
ಕೋಲಾರ: ಎರಡು ಇನ್ನೋವಾ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಈ ಘಟನೆ ಕೋಲಾರ ತಾಲೂಕು ಪಟ್ನಾ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಬೆಂಗಳೂರು ರಾಮಮೂರ್ತಿ ನಗರ ನಿವಾಸಿ ರೂಪಾ(28) ಮೃತ ದುರ್ದೈವಿ ಮಹಿಳೆ. ಇವರು ಕೋಲಾರ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.
ಘಟನೆಯಲ್ಲಿ ಕೋಲಾರ ನಗರಸಭೆ 27 ನೇ ವಾರ್ಡ್ ಸದಸ್ಯೆ ಸಾಕಮ್ಮ ಹಾಗೂ ಪ್ರಭಾಕರ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.