ಶಿವಮೊಗ್ಗ: ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾ ಮಾಡಲಾಗಿದೆ.
ಇಂದು ಶಿವಮೊಗ್ಗದ ರೈತ ಸಂಘದ ಕಚೇರಿಯಲ್ಲಿ ನಡೆದ ರಾಜ್ಯ ರೈತ ಸಂಘದ ತುರ್ತು ಸಭೆಯಲ್ಲಿ ಈ ತೀರ್ಮಾನವನ್ನು ತೆಗದುಕೊಳ್ಳಲಾಗಿದೆ. ಸಭೆಯಲ್ಲಿ ರೈತರು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಕೋಡಿಹಳ್ಳಿ ವಜಾ ಮಾಡಲು ಆಗ್ರಹಿಸಿದರು.
ಹಸಿರು ಟವೆಲ್ ತಿರುಗಿಸಿ ಕೋಡಿಹಳ್ಳಿ ಚಂದ್ರಶೇಖರ್ ವಜಾ ಮಾಡುವಂತೆ ಆಕ್ರೋಶ ಹೊರಹಾಕಿದರು. ಅಂತೆಯೇ ರಾಜ್ಯ ರೈತ ಸಂಘದ ಅಧ್ಯಕ್ಷ ಸ್ಥಾನದಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ವಜಾಗೊಳಿಸಿ ನೂತನ ಅಧ್ಯಕ್ಷರ ಹೆಸರನ್ನು ಘೋಷಣೆ ಮಾಡಲಾಯಿತು. ಇದನ್ನೂ ಓದಿ: ರೋಹಿತ್ ಚಕ್ರತೀರ್ಥ ಅಣಕು ಶವಯಾತ್ರೆ ನಡೆಸಿ ಕರವೇ ಪ್ರತಿಭಟನೆ
ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷರಾಗಿ ಹೆಚ್.ಆರ್. ಬಸವರಾಜಪ್ಪ ಆಯ್ಕೆಯಾಗಿದ್ದಾರೆ. ರೈತ ಸಂಘ ಒಮ್ಮತದಿಂದ ತೀರ್ಮಾನಿಸಲಾಗಿದೆ.
ಹಾವೇರಿ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರೈತಸಂಘದಿಂದ ಪರ್ಯಾಯ ರಾಜಕಾರಣ ಮಾಡುತ್ತೇವೆ. ರಾಜ್ಯದಲ್ಲಿ ತತ್ವ ಸಿದ್ಧಾಂತಗಳಿಲ್ಲದ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದಿರುವ ಪಕ್ಷಗಳಿವೆ ಎಂದು ರಾಜ್ಯ ರೈತಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಹಾವೇರಿಯಲ್ಲಿ ಮಾತನಾಡಿದ ಚಂದ್ರಶೇಖರ್, ಇದೇ ತಿಂಗಳು 21ರಂದು ಬೆಂಗಳೂರಿನಲ್ಲಿ ನಡೆಯಲಿರುವ ರೈತ ಸಮಾವೇಶದಲ್ಲಿ ಪರ್ಯಾಯ ರಾಜಕಾರಣದ ಬಗ್ಗೆ ಘೋಷಣೆ ಮಾಡಲಾಗುವುದು. ಈಗಾಗಲೇ ಮಮತಾ ಬ್ಯಾನರ್ಜಿ, ದೆಹಲಿಯಿಂದ ಎಎಪಿ ಪಕ್ಷದ ಮುಖಂಡರು ಸಂಪರ್ಕ ಮಾಡಿದ್ದಾರೆ. ನಾವು ಯಾರ ಜೊತೆಗೂ ಕೈ ಜೋಡಿಸಬೇಕು ಎಂದೇನಿಲ್ಲ. ಏಪ್ರಿಲ್ 11 ರಂದು ರಾಜ್ಯ ಕೋರ ಕಮಿಟಿ ಸಭೆ ಇದೆ. ಸಾಧಕ ಬಾಧಕಗಳನ್ನು ಚರ್ಚಿಸಿ ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು. ಇದನ್ನೂ ಓದಿ: ಲವ್ ಜಿಹಾದ್ ಕೇಸ್‍ಗೆ ಟ್ವಿಸ್ಟ್ – ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ ಅಂದ ಯುವತಿ
ನಾವು ಈಗ ಸ್ವತಂತ್ರ್ಯರಾಗಿದ್ದು, ನಮ್ಮ ಸಿದ್ಧಾಂತಕ್ಕೆ ಬದ್ಧರಾಗಿದ್ದೇವೆ. ಸಿದ್ಧಾಂತಕ್ಕೆ ದಕ್ಕೆ ಬಾರದಂತೆ ಭ್ರಷ್ಟಾಚಾರ ಮುಕ್ತವಾಗಿ ಚುನಾವಣೆ ಮಾಡುತ್ತೇವೆ ಹಾಗೂ ಗೆಲ್ಲುತ್ತೇವೆ ಕೂಡ. ಬೇರೆಯವರಂತೆ ಇಪ್ಪತ್ತು-ಮೂವತ್ತು ಕೋಟಿ ಹೆಂಡ ಇಟ್ಟುಕೊಂಡು ಚುನಾವಣೆ ಮಾಡುವುದಾದರೆ ನಾವು ಕಳ್ಳರೆ ಆಗಬೇಕಾಗುತ್ತದೆ. ಬೊಮ್ಮಾಯಿಯವರ ಶೇ.40 ರಷ್ಟು ಸರ್ಕಾರಕ್ಕೆ ನಾವು ಪರ್ಯಾಯ ಆಗುತ್ತೇವೆ ಎಂದು ತಿಳಿಸಿದರು.
ಮಾವು ಮಾರಾಟದಲ್ಲಿ ಹಿಂದೂ ಮುಸ್ಲಿಂ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಮನಗರದಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಮಾವು ಉತ್ಪಾದನೆ ಮಾಡಲಾಗುತ್ತದೆ. ಅಲ್ಲಿ ಮಾರುಕಟ್ಟೆ ನಡೆಯುವುದೇ ಮುಸ್ಲಿಮರ ಕೈಯಲ್ಲಿ. ಅವರು ಬೆಲೆ ಸರಿಯಾಗಿ ಕೊಡುವುದಿಲ್ಲ ಅಥವಾ ಮುಸ್ಲಿಮರು ಎನ್ನುವುದು ಒಂದೇ ಟಾರ್ಗೆಟಾ? ಸಿಎಂ ಬೊಮ್ಮಾಯಿಯವರೇ, ಮಾವು ವಾರ್ಷಿಕ ಬೆಳೆ ಈ ಬಾರಿ ಫಸಲು ಕಡಿಮೆ ಇದೆ. ಮಾವಿಗೆ ವೈಜ್ಞಾನಿಕ ದರ ನೀಡಿ. ಮಾವಿನ ದರ ಕಡಿಮೆಯಾದರೆ ಸರ್ಕಾರದವರು ಖರೀದಿ ಮಾಡುತ್ತೀವಿ ಎಂದು ಘೋಷಣೆ ಮಾಡಿ. ಅದು ಬಿಟ್ಟು ಇಂತಹ ಕನಿಷ್ಠವಾದ ಕಾರ್ಯಕ್ರಮಗಳನ್ನು ಮಾಡಬೇಡಿ. ಸರ್ಕಾರ ಜನರ ಸಂಕಷ್ಟಕ್ಕೆ ಪರಿಹಾರ ಸೂಚಿಸಬೇಕೆ ಹೊರತು ನೀವೇ ಸಮಸ್ಯೆ ಸೃಷ್ಟಿ ಮಾಡಿ ಅಲ್ಲೋಲ ಕಲ್ಲೋಲ ಮಾಡಬೇಡಿ ಎಂದು ಗುಡುಗಿದರು. ಇದನ್ನೂ ಓದಿ: ಬೆಳಗಾವಿ ಆರ್‌ಎಸ್‌ಎಸ್ ಕಚೇರಿಗೆ ಗೋವಾ ಸಿಎಂ ಭೇಟಿ – ಇನ್ನೊಮ್ಮೆ ಮೋದಿ ಪ್ರಧಾನಿ ಆಗ್ತಾರೆ ಎಂದ ಸಾವಂತ್
ಮನುಷ್ಯ ದ್ವೇಷವನ್ನು ಹುಟ್ಟು ಹಾಕುವುದಾದರೆ ಸರ್ಕಾರವನ್ನು ನೀವೇ ಮಾಡ್ತಾ ಇದ್ದೀರಾ? ಅಥವಾ ವಿರೋಧ ಪಕ್ಷದವರು ಸರ್ಕಾರ ನಡೆಸುತ್ತಿದ್ದರಾ? ಸರ್ಕಾರದ ವಿರುದ್ಧ ಜನರನ್ನು ಸಂಘಟಿಸುವುದು ವಿರೋಧ ಪಕ್ಷದವರ ಕೆಲಸ. ಆದರೆ ಸರ್ಕಾರದವರೇ ಈ ಕೆಲಸಕ್ಕೆ ಇಳಿದುಬಿಟ್ಟಿದ್ದೀರಿ. ವೋಟ್ ಪರ್ಸಂಟೇಜ್ ಹೆಚ್ಚಾಗುತ್ತದೆ ಎಂದೋ? ಇದರಿಂದ ವೋಟ್ ಪರ್ಸಂಟೇಜ್ ಜಾಸ್ತಿ ಆಗುವುದಿಲ್ಲ. ನಿಮ್ಮ ಬಳಿ ಇಂತಹ ಅಜೆಂಡಾಗಳು ಬಹಳ ಇವೆ ಎಂದು ಕೇಳಿದ್ದೇನೆ. ಚುನಾವಣೆ ಬರುವವರೆಗೂ ಇದನ್ನು ಟ್ರಯಲ್ ಮಾಡುತ್ತಾ ಇರುತ್ತೀರಿ ಎಂದು ಕೇಳಿದ್ದೇನೆ ಎಂದು ಟೀಕಿಸಿದರು.
ನಿಮ್ಮ ಪಕ್ಷದ ಮಾನ ಮರ್ಯಾದೆ ಕಡಿಮೆ ಮಾಡಿಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮಗಳನ್ನು ಮುಂದುವರೆಸಿ. ಜನರು ಒಂದು-ಎರಡು ಸುಳ್ಳುಗಳನ್ನು ನಂಬುತ್ತಾರೆ. ಸುಳ್ಳು ಹೇಳುವುದೇ ನಿಮ್ಮ ಜಾಯಮಾನ ಆಗಿಬಿಟ್ರೆ ನಿಮ್ಮನ್ನು ಡಸ್ಟ್ ಬಿನ್‌ಗೆ ಎಸೆದುಬಿಡುತ್ತಾರೆ. ಇದರ ಬಗ್ಗೆ ಬಿಜೆಪಿಯವರಿಗೆ ಎಚ್ಚರಿಕೆ ಇರಲಿ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಕಿಡಿಕಾರಿದರು.
ಕೋಲಾರ: ಮೇಕೆದಾಟು ವಿಚಾರದಲ್ಲಿ ಎರಡು ಪಕ್ಷಗಳು ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್‍ಗೆ ನೈತಿಕತೆ ಇದ್ದಿದ್ದರೆ ಅವರ ಸರ್ಕಾರ ಇದ್ದಾಗ ಮಾಡಬಹುದಿತ್ತು. ಇಚ್ಚಾ ಶಕ್ತಿ ಇಲ್ಲದೇ ಮಾಡುವ ಕೆಲಸ ಇದಾಗಿದೆ.
ಕೋಲಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೇಕೆದಾಟು ವಿಚಾರದಲ್ಲಿ ಸದ್ಯ ರಾಜಕೀಯ ನಡೆಯುತ್ತಿದೆ. ಎರಡು ಪಕ್ಷಗಳು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಮೇಕೆದಾಟು ಪಾದಯಾತ್ರೆ ಅದೊಂದು ರಾಜಕೀಯ ಕಾರ್ಯಕ್ರಮ. ಅವರಿಗೆ ನೈತಿಕತೆ ಇದ್ದಿದ್ದರೆ ಅವರದೇ ಸರ್ಕಾರ ಇದ್ದಾಗ ಮಾಡಬಹುದಿತ್ತು. ಇಚ್ಚಾ ಶಕ್ತಿ ಇಲ್ಲದೇ ಮಾಡುವ ಕೆಲಸ ಇದಾಗಿದೆ. ಸಿದ್ದರಾಮಯ್ಯ ಆಗಲಿ ಡಿಕೆಶಿ ಆಗಲಿ ಪಾದಯಾತ್ರೆ ಮಾಡಲಿ ಕೋವಿಡ್ ನೀತಿ ನಿಯಮಗಳನ್ನು ಪಾಲನೆ ಮಾಡಬೇಕು. ಮೇಕೆದಾಟು ಪಾದಯಾತ್ರೆಗೆ ನನ್ನನ್ನು ಆಹ್ವಾನ ಮಾಡಿದ್ದರು. ಆದರೆ ಅದೊಂದು ರಾಜಕೀಯ ಪಕ್ಷದ ಅಜೆಂಡಾ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತೆಸೆಯುತ್ತೇವೆ: ಸಿದ್ದರಾಮಯ್ಯ
ನಿನ್ನೆ ಪಂಜಾಬ್‍ನಲ್ಲಿ ಪ್ರಧಾನಿ ಮೋದಿ ಅವರಿಗೆ ರೈತರ ಪ್ರತಿಭಟನೆ ಬಿಸಿ ತಟ್ಟಿದೆ. ಆದರೆ ಬಿಜೆಪಿ ಅವರು ಒಂದು ರಾಜ್ಯದ ಮೇಲೆ ಗುರುತರವಾದ ಆರೋಪ ಮಾಡಲಾಗುತ್ತಿದೆ. ಅವರನ್ನು ಖಾಲಿ ಸ್ಥಾನಿಗಳು, ಉಗ್ರ ಗಾಮಿಗಳ ಬೆಂಬಲ ಇದೆ ಎನ್ನುವುದು ಸರಿಯಲ್ಲ. ನಾವ್ಯಾರು ಮಾಡದ ತಪ್ಪನ್ನು ನಮ್ಮ ಮೇಲೆ ಹೊರೆಸಿದ್ದಾರೆ. ದೆಹಲಿಯಲ್ಲಿ ಕೆಂಪುಕೋಟೆ ಮೇಲೆ ರಾಷ್ಟ್ರ ಧ್ವಜ ಕಿತ್ತಾಕಿ ನಿಂದನೆ ಹೊರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪದೇ, ಪದೇ ಬಿಜೆಪಿ ಅವರು ಆರೋಪ ಮಾಡುತ್ತಲೇ ಇದ್ದಾರೆ. ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಸಂವಿಧಾನಾತ್ಮಕ ಹಾಗೂ ಜನಪರ: ಬೊಮ್ಮಾಯಿ
ಪ್ರಧಾನಿ ಮೋದಿ ಅವರು ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದು ಸಂತೋಷ. ಆದರೆ ರಾಜ್ಯ ಸರ್ಕಾರ ಅದನ್ನು ವಾಪಸ್ ಪಡೆದಿಲ್ಲ. ಮುಖ್ಯಮಂತ್ರಿಗಳು ಅಧಿವೇಶನ ಮಾಡಿ ಚರ್ಚೆ ಮಾಡಿ ವಾಪಸ್ ಪಡೆಯುತ್ತೇವೆ. ವಿಧಾನ ಸಭೆ, ಪಾರ್ಲಿಮೆಂಟ್ ನಲ್ಲಿ ಚರ್ಚೆ ಮಾಡದೇ ದೇಶದ ಉದ್ದಗಲಕ್ಕೂ ಇರುವ ರೈತರ ಮೇಲೆ ಕಾನೂನು ರೂಪಿಸಲು ಮುಂದಾಗಿದ್ದರು. 1961ರಿಂದಲೂ ಇರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳನ್ನು ಜಾರಿ ಮಾಡಿ ಕೃಷಿಯನ್ನು ಅತಂತ್ರ ಪರಿಸ್ಥಿತಿಗೆ ತಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಸರ್ಕಾರ ಕೋವಿಡ್ ಹೊಸ ಮಾರ್ಗ ಸೂಚಿಗಳನ್ನು ನೀಡಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ರೈತರಿಗೆ ವಿನಾಯಿತಿ ನೀಡಬೇಕು. ಹಣ್ಣು, ತರಕಾರಿ, ಹೂ ಸರಬರಾಜು ಮಾಡುವ ರೈತರಿಗೆ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಬೆಳೆಗಳಿಗೆ ಮುಕ್ತವಾಗಿ ವ್ಯಾಪಾರ ವಹಿವಾಟಿಗೆ ಅವಕಾಶ ಮಾಡಿಕೊಡಿ. ಈ ಹಿಂದೆ ಯಡಿಯೂರಪ್ಪ ಅವರಿಗೂ ಮನವಿ ಮಾಡಿದ್ವಿ. ಅದರಂತೆ ಸದ್ಯದ ಸರ್ಕಾರಕ್ಕೂ ರೈತರಿಗೆ ವಿಶೇಷ ವಿನಾಯಿತಿ ನೀಡುವಂತೆ ಮನವಿ ಮಾಡುತ್ತೇವೆ. ರೈತರಿಗೆ ಹಾಲಿನ ಬೆಲೆ ಕಡಿಮೆ ನೀಡಲಾಗುತ್ತಿದೆ. ಸಬ್ಸಿಡಿ ಕೊಡುವುದನ್ನು ಬಿಟ್ಟು ಮಾನದಂಡದ ಆಧಾರದ ಮೇಲೆ ಬೆಲೆ ನಿಗದಿ ಮಾಡಿ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಕಡಿಮೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಚಾಮರಾಜನಗರ: ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಸಾರಿಗೆ ಸಂಸ್ಥೆಯ ಚಾಲಕ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಒಕ್ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಘಟನೆಗೆ ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರಚೋದನೆಯೇ ಕಾರಣವಾಗಿದ್ದು, ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸುವಂತೆ ಚಾಮರಾಜನಗರ ಜಿಲ್ಲಾ ರೈತ ಸಂಘದ(ಒರಿಜಿನಲ್) ಅಧ್ಯಕ್ಷ ಕೆ.ಎಂ.ಮಾದಪ್ಪ ದೂರು ನೀಡಿದ್ದಾರೆ.
ಮುಷ್ಕರದ ನೇತೃತ್ವ ವಹಿಸಿರುವ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರಚೋದನೆಯೇ ಈ ಘಟನೆಗೆ ಕಾರಣವಾಗಿದ್ದು, ಅವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸುವಂತೆ ದೂರು ನೀಡಲಾಗಿದೆ. ಕೋಡಿಹಳ್ಳಿ ಚಂದ್ರಶೇಖರ್ ಅವರ ಸಂಚು ಹಾಗೂ ಪಿತೂರಿಯಿಂದ ರೈತರು ಈಗಾಗಲೇ ವಂಚನೆಗೆ ಒಳಗಾಗಿದ್ದಾರೆ. ಇದೀಗ ಸಾರಿಗೆ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ಅವರ ವಿಷಜಾಲಕ್ಕೆ ಸಿಲುಕಿದ್ದಾರೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆ.ಎಂ.ಮಾದಪ್ಪ ಆರೋಪಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು ಸಾರಿಗೆ ನೌಕರರ ಮುಷ್ಕರಕ್ಕೆ ಪ್ರಚೋದನೆ ನೀಡಿ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾರೆ. ಸಣ್ಣ ರೈತರು ಹೂ, ಹಣ್ಣು, ತರಕಾರಿ, ರೇಷ್ಮೆ ಮತ್ತಿತರ ಬೆಳೆಗಳ ಸಾಗಾಟಕ್ಕೆ ಸಾರಿಗೆ ಬಸ್ ಗಳನ್ನೇ ಅವಲಂಬಿಸಿದ್ದರು. ಆದರೆ ಈಗ ಸಾರಿಗೆ ನೌಕರರ ಮುಷ್ಕರದಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸಾರಿಗೆ ನೌಕರರ ಮುಷ್ಕರದ ನಡುವೆಯೂ ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿ ಚಾಲಕ ಕರ್ತವ್ಯಕ್ಕೆ ಹಾಜರಾಗಿದ್ದರು. ಈ ವೇಳೆ ದುಷ್ಕರ್ಮಿಗಳು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಚಾಲಕ ನಬೀದ್ ರಸೂಲ್ ಕೆ.ಅವಟಿ ಅವರು ಗಂಭೀರವಾಗಿ ಗಾಯಗೊಂಡು, ಮೃತಪಟ್ಟ ಘಟನೆ ನಡೆದಿದೆ.
ಬೆಳಗಾವಿ: ಸಾರಿಗೆ ನೌಕರರ ಒಕ್ಕೂಟದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಸುವರ್ಣ ಸೌಧದ ಬಳಿಕ ಗಾರ್ಡನ್ ನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಸಭೆ ಕರೆದಿದ್ದರು.
ನಗರದ ಮಿಲನ್ ಹೋಟೆಲ್ ಗೆ ಆಗಮಿಸಿದ ಕ್ಯಾಂಪ್ ಠಾಣೆಯ ಪೊಲೀಸರು ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಜೊತೆಯಲ್ಲಿದ್ದವರನ್ನ ಸಹ ವಶಕ್ಕೆ ಪಡೆದಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಕಾನೂನು ಬಾಹಿರವಾಗಿದೆ ಎಂದು ಕಾರ್ಮಿಕ ಇಲಾಖೆ ಹೇಳುತ್ತಿದೆ. ಆದರೆ ನಾವು ಹೇಳಿದ್ದು ಏಳನೆಯ ತಾರಿಖು ಹಾಗೂ ಚಳಿವಳಿ ಆರಂಭವಾಗಿದ್ದು ಎಳನೆ ತಾರಿಖೀನಂದು. ಆದರೆ ಆರನೇ ತಾರಿಖಿನಿಂದು ಪ್ರತಿಭಟನೆ ಆರಂಭ ಮಾಡಿದ್ದೀರಿ ಎಂದು ಕಾರ್ಮಿಕ ಇಲಾಖೆ ಹೇಳಿದೆ. ಚಳುವಳಿಯನ್ನು ದಮನ ಮಾಡುವ ಪ್ರಯತ್ನ ನಡೆದಿದೆ, ಇದಕ್ಕೆಲ್ಲಾ ಜಗ್ಗಲ್ಲ ಬಗ್ಗಲ್ಲಾ ಚಳುವಳಿ ಮುಂದುವರೆಯಲಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಪಬ್ಲಿಕ್ ಟಿವಿ ಗೆ ಹೇಳಿದ್ದಾರೆ.
6 ನೇ ವೇತನ ಆಯೋಗ ಸೇರಿದಂತೆ ಹಲವಾರು ಬೇಡಿಕೆಗಳು ಸರ್ಕಾರದ ಮುಂದಿಟ್ಟಿದ್ದೇವೆ. ಸರ್ಕಾರ ಈ ಹಿಂದೆ ಲಿಖಿತ ಪತ್ರ ನೀಡಿದ್ದಾರೆ ಅದನ್ನೇ ಪಾಲಿಸಿ ಎಂದು ನಾವು ಚಳುವಳಿ ಮಾಡುತ್ತಿರುವುದು ಎಂದರು.
ಬೆಂಗಳೂರು: ಸರ್ಕಾರ ಮೂರು ತಿಂಗಳ ಕಾಲಹರಣ ಮಾಡಿದ್ದು, ಬಜೆಟ್ ನಲ್ಲಿ ಆರನೇ ವೇತನ ಆಯೋಗ ಜಾರಿಗೆ ಹಣ ಮೀಸಲಿಡಬೇಕು ಎಂದು ಸಾರಿಗೆ ನೌಕರರ ಮುಂದಾಳು ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಕೊಟ್ಟ ಮಾತು ಮರೆತಿರುವ ಸರ್ಕಾರಕ್ಕೆ ನೆನೆಪಿಸುವ ಕೆಲಸ ಇವತ್ತು ಆಗಲಿದೆ. ಸಾರಿಗೆ ನೌಕರರ ಬೇಡಿಕೆಗೆ ಸರ್ಕಾರ ಯಾವ ಕ್ರಮ ತೆಗೆದುಕೊಂಡಿದೆ ಎಂಬುದರ ಕೇಳಲು ಈ ಸತ್ಯಾಗ್ರಹ ನಡೆಸಲಾಗುತ್ತಿದೆ. ಬಜೆಟ್ ನಲ್ಲಿ ಆರನೇ ವೇತನ ಆಯೋಗಕ್ಕೆ ಹಣವನ್ನ ಮೀಸಲಿಡಬೇಕಿದೆ. ಮೂರು ಕಾಸಿಗೆ ದುಡಿಯುವ ಜನರನ್ನ ದುಡಿಸಿಕೊಳ್ಳಬಾರದು. ಸಾರಿಗೆ ಇಲಾಖೆ ನಷ್ಟದಲ್ಲಿದ್ದು, ಬಜೆಟ್ ನಲ್ಲಿ ಏನು ಮಾಡಬೇಕು? ನಷ್ಟ ಸಮಸ್ಯೆಗೆ ಯಾವ ಪರಿಹಾರ ಕಂಡುಕೊಳ್ಳಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಮುಂದಾಗಬೇಕಿದೆ ಎಂದರು.
ಮಾರ್ಚ್ 15ಕ್ಕೆ ನೀಡಿದ ಗಡುವು ಮುಗಿಯಲಿದೆ. ನಷ್ಟದಲ್ಲಿರುವ ಸಾರಿಗೆ ಇಲಾಖೆಗೆ ಆರ್ಥಿಕ ಶಕ್ತಿ ತುಂಬಲು ಸರ್ಕಾರ ದಿಟ್ಟ ನಿರ್ಧಾರಕ್ಕೆ ಬರಬೇಕಿದೆ. ಸಾರಿಗೆ ಇಲಾಖೆಗೆ ಬಜೆಟ್ ನಲ್ಲಿ ವಿಶೇಷ ಹಂಚಿಕೆ ಅನಿವಾರ್ಯ ಎಂಬ ವಿಷಯವನ್ನು ನೆನಪಿಸಲು ಇಂದು ಮುಂದಾಗುತ್ತಿದ್ದೇವೆ. ಒಂದು ವೇಳೆ ಬೇಡಿಕೆ ಈಡೇರಿಸದಿದ್ರೆ ನಮ್ಮ ಗಡುವು ಮುಗಿದ ಕೂಡಲೇ ಸರ್ಕಾರದವರು ಮಾತಿಗೆ ತಪ್ಪಿದ ಮಕ್ಕಳು ಅಂತ ಹೇಳಿ ನಮ್ಮ ಹೋರಾಟವನ್ನ ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
– ನನ್ನ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ
– ನಾವು ಬಿಜೆಪಿಯವರು ಸಭ್ಯಸ್ಥರು
ಬೆಂಗಳೂರು: ಸಾರಿಗೆ ಸೌಕರರ ಹೋರಾಟಕ್ಕೆ ಕೈಜೋಡಿಸಿದ್ದ ರೈತ ಮುಖಂಡ ಕೋಡಿಹಳ್ಳಿ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೋಡಿಹಳ್ಳಿ ವಿರುದ್ಧ ಏಕವಚನ ಪ್ರಯೋಗ ಮಾಡಿದ ಶಾಸಕರು, ನೀನು ಯಾರಯ್ಯ ನನ್ ಬಗ್ಗೆ ಮಾತಾಡೋದಕ್ಕೆ. ನೀನು ಅಕ್ರಮ ಆಸ್ತಿ ಮಾಡಿದ್ದೀಯಾ, ಕೋಡಿಹಳ್ಳಿಯಲ್ಲಿದ್ದಾಗ ಎಷ್ಟಿತ್ತು ಆಸ್ತಿ?, ಐಷಾರಾಮಿ ಜೀವನ ಮಾಡ್ತಿದ್ದೀಯಾ, ಎಷ್ಟು ಐಷಾರಾಮಿ ಕಾರು ಇವೆ?. ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ಬ್ಲ್ಯಾಕ್ ಮೇಲರ್. ನನ್ನಲ್ಲಿ ಅವನ ಮನೆ ಬಂಗಲೆ ಫೋಟೋ ಇದೆ, ಐಷಾರಾಮಿ ಕಾರು ಇವೆ. ಎರಡೂವರೆ ಎಕರೆ ಇದ್ದ ಜಮೀನು ಈಗೆಷ್ಟು ಆಯ್ತು ಎಂದು ಪ್ರಶ್ನೆಗಳ ಸುರಿಮಳೆಗೈದ್ರು.
ಕೋಡಿಹಳ್ಳಿ ಚಂದ್ರಶೇಖರ್ ವಿಭಿನ್ನ ಪಾತ್ರಗಳು ಮಾಡ್ತಾರೆ. ಹಸಿರು ಶಾಲು ಹಾಕಿ ರೈತ ಮುಖಂಡ ಅಂತಾರೆ. ಕೋಡಿಹಳ್ಳಿಗೂ ಸಾರಿಗೆ ನೌಕರರಿಗೂ ಏನು ಸಂಬಂಧ?, ನೀನು ಎಷ್ಟು ವರ್ಷ ಆಯ್ತು ಉಳುಮೆ ಮಾಡಿ. ಹಳ್ಳಿ ಬಿಟ್ಟು ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದಾರೆ. ಐಷಾರಾಮಿ ಬಂಗಲೆ, ಐಷಾರಾಮಿ ಕಾರಿನಲ್ಲಿ ಓಡಾಡುತ್ತಾರೆ. ನನ್ನ ವೈಯಕ್ತಿಕ ವಿಚಾರ ಮಾತನಾಡಲು ನೀನ್ಯಾರು?, ಬಿಟ್ಟಿ ಹೋರಾಟ, ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಾರೆ. ಹೆಂಡತಿ, ಮಕ್ಕಳು ಎಲ್ಲರ ಹತ್ತಿರ ಐಷಾರಾಮಿ ಕಾರು ಇದೆ. ನನ್ನ ಬಗ್ಗೆ ಮಾತಾಡಿದ್ರೆ ಸರಿ ಇರಲ್ಲ ಎಂದು ಕಿಡಿಕಾರಿದರು.
ಪ್ರತಾಪ್ ಚಂದ್ರಶೆಟ್ಟಿ ರಾಜೀನಾಮೆ ಕೊಡಲು ಕಾಂಗ್ರೆಸ್ ಬಿಡಲಿಲ್ಲ. ಸಭಾಪತಿ ಘಟನೆಯಲ್ಲಿ ಬಲಿಪಶು ಆದ್ರು. ಬಿಹಾರ್, ಉತ್ತರಪ್ರದೇಶದಲ್ಲಿ ಗೂಂಡಾ ವರ್ತನೆ ನಡೆದಿತ್ತು. ಕಾಂಗ್ರೆಸ್ ಆಡಳಿತ ಮಾಡಿದ್ದ ಕಡೆ ಗೂಂಡಾರಾಜ್ ಇತ್ತು. ಹೀಗಾಗಿ ಕಾಂಗ್ರೆಸ್ ಎಲ್ಲ ಕಡೆ ಅಡ್ರೆಸ್ ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ಸಿಗೆ ರಾಜ್ಯದ ಜನರು ಛೀಮಾರಿ ಹಾಕ್ತಿದ್ದಾರೆ. ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಸಭಾಪತಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಸಭಾಪತಿ ಬರುವುದಿಲ್ಲ ಎಂದು ಉಪಸಭಾಪತಿ ಕೂತಿದ್ದರು. ಕಾಂಗ್ರೆಸ್ಸಿನವರು ಉಪಸಭಾಪತಿ ಮೇಲೆ ಹಲ್ಲೆ ಮಾಡಿದ್ದರು. ಉಪಸಭಾಪತಿ ರಕ್ಷಣೆಗಾಗಿ ಬಿಜೆಪಿ ಹೋಗಿದೆ. ನಾವು ಬಿಜೆಪಿಯವರು ಸಭ್ಯಸ್ಥರು, ಕಾಂಗ್ರೆಸ್ಸಿನವರೇ ಗಲಾಟೆ ಮಾಡಿದ್ದು ಎಂದು ಗರಂ ಆದರು.
ಬಿಜೆಪಿಗೆ ಯಾರೂ ಅನಿವಾರ್ಯ ಅಲ್ಲ. ಸಂಖ್ಯಾ ಬಲದ ಆಧಾರದ ಮೇಲೆ ಬಿಜೆಪಿ ಸರ್ಕಾರ ಮಾಡಿದೆ. ಆದರೆ ಜೆಡಿಎಸ್ ಗೆ ಯಾರ ಅನಿವಾರ್ಯ ಅನ್ನೋದು ನನಗೆ ಗೊತ್ತಿಲ್ಲ. ಮೈತ್ರಿ ಬಗ್ಗೆ ಎಲ್ಲ ಮಾತಾಡೋಕೆ ನಾನು ಚಿಕ್ಕವನು, ವರಿಷ್ಠರು ನಿರ್ಧಾರ ಮಾಡ್ತಾರೆ. ಸಭಾಪತಿ ಮೇಲೆ ಅವಿಶ್ವಾಸಕ್ಕೆ ನಾವು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಅವರು ಬಹಿರಂಗವಾಗಿಯೇ ಬೆಂಬಲ ನೀಡಿದ್ದಾರೆ ಎಂದರು.
ಮೈಸೂರು: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿರುಗಿ ಬಿದ್ದಿದ್ದಾರೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಾಲ್ಕು ದಿನಗಳ ಕಾಲ ರಾಜ್ಯದ ಜನ ಕಷ್ಟ ಅನುಭವಿಸಲು ಕೋಡಿಹಳ್ಳಿಯೇ ಕಾರಣ. ನೀವು ಸಾರಿಗೆ ನೌಕರರ ಪರ ಹೋರಾಟ ಮಾಡಿ. ಆದರೆ ಹಸಿರು ಟವಲ್ ಇಳಿಸಿ ಹೋರಾಟ ಮಾಡಿ. ಸುಮ್ಮನೆ ಹಸಿರು ಟವಲ್ ಹಾಕಿಕೊಂಡು ರೈತರಿಗೆ ಅವಮಾನ ಮಾಡಬೇಡಿ. ನಿಮ್ಮಿಂದ ರೈತ ಮುಖಂಡರು, ರೈತ ಸಂಘಟನೆಗಳ ಬಗ್ಗೆ ಜನರಿಗೆ ಕೆಟ್ಟ ಅಭಿಪ್ರಾಯ ಮೂಡಿದೆ ಎಂದು ಟೀಕಿಸಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಅವರು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಕೊಡಬೇಕಿತ್ತು. ಅದನ್ನು ಬಿಟ್ಟು ಸಾರಿಗೆ ನೌಕರರ ಜೊತೆ ಮುಷ್ಕರ ನಡೆಸಿ, ಅದನ್ನೂ ಹಳ್ಳ ಹಿಡಿಸಿದರು. ಅಲ್ಲದೆ ಇದರಿಂದ ರೈತ ಸಂಘದ ವರ್ಚಸ್ಸು ಕುಂದಿದೆ. ಗೌರವ ಕಡಿಮೆಯಾಗಿದೆ. ಹಸಿರು ಟವಲ್ ಹಾಕಿಕೊಂಡು ಆಟವಾಡಬೇಡಿ. ನಿಮಗೆ ಬದ್ಧತೆ ಇದ್ದರೆ ರೈತರ ಬಗ್ಗೆ ಆ ಕಾಳಜಿ ತೋರಿಸಿ. ಪ್ರಚಾರಕ್ಕಾಗಿ, ಬೇರೆ ಸಂಘಟನೆಗಳಲ್ಲಿ ಒಡಕು ಉಂಟುಮಾಡಲು ಈ ರೀತಿ ಮಾಡಬೇಡಿ ಎಂದು ತರಾಟೆಗೆ ತೆಗೆದುಕೊಮಡಿದ್ದಾರೆ.
ರಾಜ್ಯದ ಜನ ನಾಲ್ಕು ದಿನಗಳಿಂದ ಸಂಕಷ್ಟ ಅನುಭವಿಸುವುದಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಅವರ ತಪ್ಪು ನಿರ್ಧಾರಗಳೇ ಕಾರಣ. ಕೋಡಿಹಳ್ಳಿಗೆ ಸಮಸ್ಯೆಯ ಅರಿವಿಲ್ಲ ಹಾಗಾಗಿ ಅದಕ್ಕೆ ಪರಿಹಾರವೂ ಗೊತ್ತಿಲ್ಲ. ಸಾರಿಗೆ ನೌಕರರನ್ನು ದಿಕ್ಕು ತಪ್ಪಿಸಿರೋದೆ ಕೋಡಿಹಳ್ಳಿ ಚಂದ್ರಶೇಖರ್. ಭಾನುವಾರ ಮುಕ್ತಾಯವಾಗಿದ್ದ ಮುಷ್ಕರವನ್ನು ಮುಂದುವರೆಸಲು ಚಿತಾವಣೆ ಮಾಡಿದ್ದೇ ಕೋಡಿಹಳ್ಳಿ. ಸಾರಿಗೆ ನೌಕರರೇ ನಿಮ್ಮ ಬಗ್ಗೆ ಜನರಿಗೆ ಸಹಾನುಭೂತಿ ಇದೆ. ಕೋಡಿಹಳ್ಳಿ ಮಾತು ಕಟ್ಟಿಕೊಂಡು ಹೋದರೆ ಅವರ ಸಂಘಟಯೇ ಹಾಳಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬೆಂಗಳೂರು: ಸರ್ಕಾರ ಹಾಗೂ ಸಾರಿಗೆ ನೌಕರರ ಹಗ್ಗ ಜಗ್ಗಾಟ ತಾರಕಕ್ಕೇರಿದ್ದು, ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾನುವಾರ ಮುಷ್ಕರ ವಾಪಸ್ ಪಡೆಯುವುದಾಗಿ ಹೇಳಿ ನೌಕರರು ಯು ಟರ್ನ್ ಹೊಡೆದಿದ್ದರು. ಇಂದು ಸಹ ಸಂಧಾನ ಪ್ರಹಸನ ನಡೆಯುತ್ತಿದ್ದು, ನೌಕರರ ಬೇಡಿಕೆಗೆ ಒಪ್ಪಿರುವ ಕುರಿತು ನಡವಳಿಕೆ ಪತ್ರವನ್ನು ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಭಟನಾಕಾರರಿಗೆ ಕಳುಹಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಬೇಡಿಕೆ ಈಡೇರಿಕೆ ಕುರಿತು ಭಾನುವಾರವೇ ಒಪ್ಪಿದೆ. ಅದರಂತೆ ಭಾನುವಾರವೇ ಪತ್ರವನ್ನು ಸಹ ಸಿದ್ದ ಪಡಿಸಲಾಗಿದೆ. ಆದರೆ ನೌಕರರು ನಿನ್ನೆ ರಾತ್ರಿ ಯಾಕೆ ತಮ್ಮ ನಿರ್ಧಾರ ಬದಲಿಸಿದರೋ ಗೊತ್ತಿಲ್ಲ. ಇದೀಗ ಬೇಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿರುವ ಬಗ್ಗೆ ನೌಕರರು ಪತ್ರವನ್ನು ಕೇಳುತ್ತಿದ್ದಾರೆ. ಅದರಂತೆ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರ ಜೊತೆ ನಡವಳಿಕೆ ಪತ್ರವನ್ನು ಕಳುಹಿಸಿಕೊಡಲಾಗಿದೆ. ನೌಕರರು ಮುಷ್ಕರವನ್ನು ಹಿಂಪಡೆಯುತ್ತಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.
ಕೋಡಿಹಳ್ಳಿ ಚಂದ್ರಶೇಖರ್ ಪದೇ ಪದೇ ಮಾತು ಬದಲಾವಣೆ ಮಾಡುತ್ತಿದ್ದಾರೆ. ಅವರಲ್ಲಿ ಗೊಂದಲ ಇದ್ದಂತೆ ಕಾಣುತ್ತಿದೆ. ಈಗ ಪತ್ರ ಕಳಿಸಿದ್ದೇವೆ ನೋಡೋಣ. ವಾಪಸ್ ಪಡಿತಾರೆ ಅನ್ನೋ ವಿಶ್ವಾಸ ಇದೆ ಎಂದರು.
ಯಾವುದೇ ಕಾರಣಕ್ಕೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಸಾಧ್ಯವೇ ಇಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ 10 ಬೇಡಿಕೆಗಳ ಪೈಕಿ 9 ಬೇಡಿಕೆ ಈಡೇರಿಕೆ ಮಾಡಲಾಗಿದೆ. ನಿನ್ನೆ ಸಂಧಾನಕ್ಕೆ ಒಪ್ಪಿ, ಬಳಿಕ ಯಾಕೆ ಯೂಟರ್ನ್ ಆದರೋ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಬಂದ್ ವಾಪಸ್ ಪಡೆಯುತ್ತೇವೆ ಅಂತ ಹೇಳಿದ್ದಾರೆ. ಅವರು ಬೆಂಬಲ ವಾಪಸ್ ಪಡೆಯಲಿ ನಂತರ ಮಾತನಾಡುತ್ತೇನೆ. ಕೋಡಿಹಳ್ಳಿ ಪ್ರತಿಭಟನೆ ಹಿಂದೆ ರಾಜಕೀಯ ಇರುವುದರಲ್ಲಿ ಎರಡು ಮಾತಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಜೊತೆ ನಾವ್ಯಾಕೆ ಮಾತಾಡೋಣ. ನಮ್ಮ ನೌಕರರ ಜೊತೆ ನಾವು ಮಾತನಾಡುತ್ತೇವೆ. ಕೋಡಿಹಳ್ಳಿ ಚಂದ್ರಶೇಖರ್ ಯಾರು ಎಂದು ಸವದಿ ಪ್ರಶ್ನಿಸಿದರು.
ಈಗಾಗಲೇ ಬಸ್ ಸಂಚಾರ ಪ್ರಾರಂಭ ಆಗಿದೆ. ನೌಕರರಿಗೆ ತೊಂದರೆ ಆಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ. ನೌಕರರು ಮುಷ್ಕರ ಬಿಟ್ಟು ಕೆಲಸಕ್ಕೆ ಹಾಜರಾಗಬೇಕು ಎಂದು ನೌಕರರಿಗೆ ಸವದಿ ಮತ್ತೆ ಮನವಿ ಮಾಡಿದರು. ಎಸ್ಮಾ ಜಾರಿ ಈಗ ಅವಶ್ಯಕತೆ ಇಲ್ಲ. ಈಗಾಗಲೇ ಬಸ್ ಗಳು ಓಡಾಟ ಪ್ರಾರಂಭ ಮಾಡಿವೆ. ಅವರು ನಮ್ಮ ನೌಕರರೇ, ಉಳಿದ ಎಲ್ಲ ನೌಕರರು ಕೆಲಸಕ್ಕೆ ಹಾಜರಾಗಲು ಮನವಿ ಮಾಡುತ್ತೇನೆ. ಎಸ್ಮಾ ಅನ್ನೋದು ಬ್ರಹ್ಮಾಸ್ತ್ರ ಎಂದು ತಿಳಿಸಿದರು.
ಶಿವಮೊಗ್ಗ: ಸಾರಿಗೆ ನೌಕರರು ಕಳೆದ 4 ದಿನದಿಂದ ನಡೆಸುತ್ತಿರುವ ಮುಷ್ಕರಕ್ಕೆ ಸರ್ಕಾರ ಸ್ಪಂದಿಸಿ ಅವರ 9 ಬೇಡಿಕೆಗಳನ್ನು ಈಡೇರಿಸಿದೆ. ಆದರೂ ನೌಕರರು ಕೋಡಿಹಳ್ಳಿ ಚಂದ್ರಶೇಖರ್ ಮಾತನ್ನು ನಂಬಿ ಹಾಳಾಗುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೋಡಿಹಳ್ಳಿ ಚಂದ್ರಶೇಖರ್ ಎರಡು ತಲೆ ಹಾವು ಇದ್ದಂತೆ. ಹಾಗಾಗಿ ಇಂತಹ ವ್ಯಕ್ತಿಗಳನ್ನು ಸಂಘಟನೆಗಳಾಗಲಿ, ರಾಜ್ಯದ ಜನರಾಗಲಿ ನಂಬಬಾರದು. ನಾಯಕರು ಎಂದು ಮುಂದೆ ಬಂದು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ ಇಂತಹವರ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಈಶ್ವರಪ್ಪ ಕೋಡಿಹಳ್ಳಿ ವಿರುದ್ಧ ಹರಿಹಾಯ್ದರು.
ಒಂದು ವೇಳೆ ಎಸ್ಮಾ ಜಾರಿಯಾದರೆ ಗತಿ ಏನು. ನೌಕರರ ಕುಟುಂಬಕ್ಕೆ ಕೋಡಿಹಳ್ಳಿ ಜವಾಬ್ದಾರರು ಆಗುತ್ತಾರಾ ಎಂದು ಪ್ರಶ್ನಿಸಿದರು. ಕೋಡಿಹಳ್ಳಿ ಹಿಂದೆ ಮತ್ತೆ ಯಾರಿದ್ದಾರೋ ಗೊತ್ತಿಲ್ಲ. ಸಮಯ ಬಂದಾಗ ತಿಳಿಸುತ್ತೇನೆ. ವೈಯಕ್ತಿಕ ಪ್ರತಿಷ್ಠೆಯನ್ನು ಕಾರ್ಮಿಕರ ಮೇಲೆ ಹೇರುವ ಮೂಲಕ ರಾಜ್ಯದ 6 ಕೋಟಿ ಜನರಿಗೆ ತೊಂದರೆಯನ್ನುಂಟು ಮಾಡಿದ್ದಾರೆ. ಈ ಮುಷ್ಕರದಲ್ಲಿ ಕೋಡಿಹಳ್ಳಿ ಭಾಗವಹಿಸುವ ಮೂಲಕ ನೌಕರರ ಯೂನಿಯನ್ ಒಡೆಯುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದರು.
ಸಮಾಜಘಾತುಕ ಶಕ್ತಿಗೆ ಉದಾಹರಣೆಯೇ ಕೋಡಿಹಳ್ಳಿ ಚಂದ್ರಶೇಖರ್. ರಾಜ್ಯದಲ್ಲಿ ಅಶಾಂತಿ ಮೂಡಿಸುವ ಕೆಲಸವನ್ನು ಕೋಡಿಹಳ್ಳಿ ಮಾಡುತ್ತಿದ್ದಾರೆ. ನೌಕರರು ಕರ್ತವ್ಯಕ್ಕೆ ಹಾಜರಾಗಲು ಮುಂದಾದರೆ ಕೋಡಿಹಳ್ಳಿ ನೌಕರರಿಗೆ ದಾರಿ ತಪ್ಪಿಸುತ್ತಿದ್ದಾರೆ. ನೌಕರರಿಗೆ ಸ್ವತಂತ್ರವಾಗಿ ಯೋಚಿಸುವ ಬುದ್ಧಿ ಇಲ್ಲವಾ..? ಯಾರದ್ದೋ ಮಾತು ಕೇಳಿ ಪ್ರತಿಭಟನೆ ನಡೆಸುವುದು ಒಳ್ಳೆಯದಲ್ಲ. ಕೋಡಿಹಳ್ಳಿ ಮಾತು ಕೇಳಿದರೆ ನಿಮ್ಮ ಯೂನಿಯನ್ ಒಡೆದು ಹೋಗುತ್ತೆ. ನೌಕರರು ಹಾಳಾಗುತ್ತಾರೆ. 6 ಕೋಟಿ ಜನರಿಗೂ ತೊಂದರೆ ಆಗುತ್ತೆ. ಈಗಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಸಚಿವರು ನೌಕರರಿಗೆ ಮನವಿ ಮಾಡಿದರು.