Tag: Kodihalli Chandrasekhar

  • ರೈತರು ಧ್ವಜಾರೋಹಣ ಮಾಡಬಾರದೆಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗ್ಬೇಕು: ಚಂದ್ರಶೇಖರ್

    ರೈತರು ಧ್ವಜಾರೋಹಣ ಮಾಡಬಾರದೆಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗ್ಬೇಕು: ಚಂದ್ರಶೇಖರ್

    ಬೆಂಗಳೂರು: ರೈತರು ಧ್ವಜಾರೋಹಣ ಮಾಡಬಾರದು ಎಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗಬೇಕು. ನೈಸ್ ರೋಡ್ ಜಂಕ್ಷನ್ ನಿಂದ ರಾಷ್ಟ್ರ ಬಾವುಟವನ್ನು ಹಿಡಿದು ರ್ಯಾಲಿ ಆರಂಭ ಮಾಡುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯಿದೆಯನ್ನು ವಿರೋಧಿಸಿ ಇಂದು ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಮುಂಜಾನೆ ಕೋಲಾರದಿಂದ ಬೆಂಗಳೂರಿಗೆ ಬರುತ್ತಿದ್ದ ಟ್ರ್ಯಾಕ್ಟರ್‍ಗಳನ್ನು ಪೊಲೀಸರು ಅಡ್ಡ ಹಾಕಿ ವಶಪಡಿಸಿಕೊಂಡಿದ್ದಾರೆ. ಹೀಗಾಗಿ ರ್ಯಾಲಿಯಲ್ಲಿ ಕೆಲವು ರೈತರು ಭಾಗಿಯಾಗಿದ್ದರೆ, ಇನ್ನೂ ಕೆಲ ರೈತರು ಹೆದ್ದಾರಿ, ಟೋಲ್ ಗಳಲ್ಲಿಯೇ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.

    ಈ ಕುರಿತಂತೆ ಮಾತನಾಡಿದ ಕೋಡಿಹಳ್ಳಿ, ಸರ್ಕಾರ, ರೈತರ ಸ್ವಾಭಿಮಾನವನ್ನ ಕೆರಳಿಸುತ್ತಿದೆ. ರೈತರ ಚಳುವಳಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ರೈತರು ಧ್ವಜಾರೋಹಣ ಮಾಡಬಾರದು ಎಂಬ ಸರ್ಕಾರದ ಧೋರಣೆಗೆ ನಾಚಿಕೆಯಾಗಬೇಕು. ನೈಸ್ ರೋಡ್ ಜಂಕ್ಷನ್ ನಿಂದ ರಾಷ್ಟ್ರ ಬಾವುಟವನ್ನು ಹಿಡಿದು ರ್ಯಾಲಿ ಆರಂಭ ಮಾಡುತ್ತೇವೆ. ಜೊತೆಗೆ ಟೋಲ್, ಹೆದ್ದಾರಿಗಳಲ್ಲಿಯೂ ಹೋರಾಟದ ತೀವ್ರತೆ ಹೆಚ್ಚಾಗಿರುತ್ತದೆ. ರೈತರ ವಾಹನಗಳನ್ನ ತಡೆಯಲು ಸರ್ಕಾರ ಪೊಲೀಸರ ಸರ್ಪಗಾವಲು ಹಾಕಿದೆ. ಎಲ್ಲಾ ಚೆಕ್ ಪೋಸ್ಟ್, ಟೋಲ್ ಗಳಲ್ಲಿ ರೈತರನ್ನ ಪೊಲೀಸರು ತಡೆಯುತ್ತಿದ್ದಾರೆ. ಆದರೆ ಟ್ರ್ಯಾಕ್ಟರ್, ಎತ್ತಿನ ಗಾಡಿಯನ್ನು ಪೊಲೀಸರು ತಡೆದರು ಇತರೆ ವಾಹನಗಳ ಮೂಲಕ ರೈತರು ಬೆಂಗಳೂರಿಗೆ ಬರುತ್ತಿದ್ದಾರೆ.

    ಇಂದು ರೈತರೆಲ್ಲರೂ ಸೇರಿ ವಿಧಾನಸೌಧಕ್ಕೆ ನುಗ್ಗುವ (ಮುತ್ತಿಗೆ) ಹಾಕುವ ಪ್ರಯತ್ನ ನಡೆಸಲಾಗುತ್ತದೆ. ಆದರೆ ಪ್ರಯತ್ನದಲ್ಲಿ ಕೆಲ ಬದಲಾವಣೆಗಳು ಆಗುತ್ತದೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

  • ಸಾರಿಗೆ ನೌಕರರ 10 ಬೇಡಿಕೆಯಲ್ಲಿ 9 ಈಡೇರಿಸುತ್ತೇವೆ: ಸವದಿ

    ಸಾರಿಗೆ ನೌಕರರ 10 ಬೇಡಿಕೆಯಲ್ಲಿ 9 ಈಡೇರಿಸುತ್ತೇವೆ: ಸವದಿ

    – ಸಿಬ್ಬಂದಿಗೆ ಧನ್ಯವಾದದ ಜೊತೆಗೆ ಮನವಿ

    ಬೆಂಗಳೂರು: ಸಾರಿಗೆ ನೌಕರರು ಹತ್ತು ಬೇಡಿಕೆಗಳನ್ನು ಇಟ್ಟಿದ್ದಾರೆ. ಇವಿಗಳಲ್ಲಿ ನಾವು 9 ಬೇಡಿಕೆಯನ್ನು ಈಡೇರಿಸುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರನ್ನಾಗಿ ಮಾಡುವುದರಿಂದ ಸರ್ಕಾರಕ್ಕೆ ಬಹಳಷ್ಟು ಹಣಕಾಸಿನ ಹೊಡೆತ ಬರುತ್ತದೆ. 30 ರಿಂದ 40 ನಿಗಮಗಳಿವೆ, ಅವರೆಲ್ಲರೂ ಬೇಡಿಕೆ ಇಡುತ್ತಾರೆ. ಆಗ ಭಾರೀ ಪ್ರಮಾಣದ ಹಣಕಾಸಿನ ಹೊಡೆತ ಬಿದ್ದು ಅಭಿವೃದ್ಧಿಯು ನಿಂತು ಹೋಗುತ್ತದೆ. ಸರ್ಕಾರಿ ನೌಕರನ್ನಾಗಿ ಮಾಡುವುದು ಸಾಧ್ಯವಿಲ್ಲ ಎಂದರು.

    ಕೋಡಿಹಳ್ಳಿ ಚಂದ್ರಶೇಖರ್ ಅವರಿಗು ನಮಗೂ ಸಂಬಂಧ ಇಲ್ಲ. ನಾವು ನಮ್ಮ ಸಾರಿಗೆ ನೌಕರರೊಂದಿಗೆ ಚರ್ಚೆ ಮಾಡುತ್ತವೆ. ಈಗಾಗಲೇ ಅನೇಕ ಕಡೆಗಳಲ್ಲಿ ಬಸ್ ಪ್ರಾರಂಭವಾಗಿವೆ. ನಮ್ಮ ಸಾರಿಗೆ ನೌಕರರು ನಮ್ಮ ಮಾತಿಗೆ ಬೆಲೆ ಕೊಟ್ಟು ಪ್ರಾರಂಭಿಸಿದ್ದಾರೆ. ಹೀಗಾಗಿ ನಾನು ಅವರಿಗೆ ಅಭಿನಂದನೆ ಹೇಳುತ್ತೇನೆ. ಯಾರ ಮಾತಿಗೂ ಕಿವಿ ಕೊಡಬೇಡಿ ನಿಮ್ಮ ಕೆಲಸವನ್ನು ನೀವು ಕಾರ್ಯಾರಂಭ ಮಾಡಿ. ಸರ್ಕಾರ ನಿಮ್ಮ ಜೊತೆಗೆ ಇದೆ ಎಂದು ಸಾರಿಗೆ ಕಾರ್ಮಿಕರಲ್ಲಿ ಮನವಿ ಮಾಡಿದರು.

    ಮುಷ್ಕರವನ್ನು ವಾಪಸ್ ಪಡೆಯಬೇಕು ಎಂದು ನಿರ್ಧಾರ ಮಾಡಿರುವುದು ನನಗೆ ಮಾಧ್ಯಮದ ಮುಖಾಂತರ ತಿಳಿಯಿತು. ಅಧಿಕೃತವಾಗಿ ಘೋಷಣೆ ಮಾಡುವವರೆಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ನಿನ್ನೆ ನಮ್ಮ ಹತ್ತಿರ ಬಂದು ವಾಪಸ್ ಪಡೆಯುತ್ತೇವೆ ಮುಷ್ಕರವನ್ನು ಎಂದು ಮಾತು ಕೊಟ್ಟು ಮತ್ತೆ ಮಾತು ಬದಲಾಯಿಸಿದ್ದಾರೆ. ನಾನು ಈ ವಿಷಯವಾಗಿ ಯಾವುದೇ ಹೇಳಿಕೆ ಕೊಡುವುದಾಗಲಿ ಅಥವಾ ಟೀಕೆ ಟಿಪ್ಪಣಿ ಮಾಡುವುದಾಗಲಿ ಮಾಡುವುದಿಲ್ಲ. 11 ಗಂಟೆಗೆ ಅವರ ನಿರ್ಧಾರವನ್ನು ಹೇಳುತ್ತೇವೆ ಎಂದು ಹೇಳಿದ್ದಾರೆ ಎಂದರು.

    ಎಸ್ಮಾ ಜಾರಿ ಮಾಡುವಂತ ಸಂದರ್ಭ ಬರುವುದಿಲ್ಲ. ಈ ಬ್ರಹ್ಮಾಸ್ತ್ರವನ್ನು ನಾವು ಉಪಯೋಗಿಸುವುದಿಲ್ಲ. ಕೋಡಿಹಳ್ಳಿ ಚಂದ್ರಶೇಖರ್ ಬಂದಿರುವುದು ರಾಜಕೀಯ ಪ್ರೇರಿತ ಎಂದು ಎಲ್ಲರಿಗೂ ಎನ್ನಿಸುತ್ತದೆ ಎಂದರು.

  • ಎಸ್ಮಾ ಜಾರಿ ಮಾಡುವ ಚಿಂತನೆ ಇದೆ: ಬಸವರಾಜ್ ಬೊಮ್ಮಾಯಿ

    ಎಸ್ಮಾ ಜಾರಿ ಮಾಡುವ ಚಿಂತನೆ ಇದೆ: ಬಸವರಾಜ್ ಬೊಮ್ಮಾಯಿ

    – ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಿ: ಸಿಎಂ ಕರೆ

    ಬೆಂಗಳೂರು: ಕರ್ನಾಟಕದಲ್ಲಿ ಈ ಹಿಂದೆಯೂ ಎಸ್ಮಾ ಕಾಯ್ದೆ ಜಾರಿಯಾಗಿತ್ತು. ಈಗಲೂ ಜಾರಿ ಮಾಡುವ ಚಿಂತನೆ ಇದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಸಿಎಂ ಕರೆದ ತುರ್ತುಸಭೆಗೆ ಆಗಮಿಸಿದ್ದ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಬಸವರಾಜ್ ಬೊಮ್ಮಾಯಿ, ಬೆಳಗ್ಗೆ 10 ಗಂಟೆಯಿಂದ ಮಾತುಕತೆ ನಡೆಸಲಾಗಿತ್ತು. ಎಲ್ಲರೂ ಸಂಧಾನದಲ್ಲಿ ಒಪ್ಪಿಗೆ ಕೊಟ್ಟು, ಮಾಧ್ಯಮಗಳ ಮುಂದೆ ಸಕಾರಾತ್ಮಕವಾಗಿದೆ ಅಂತ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದರು. ಅಲ್ಲಿ ಹೋಗಿ ಕೆಲವರ ಮಾತು ಕೇಳಿರುವ ಕೋಡಿಹಳ್ಳಿ ಚಂದ್ರಶೇಖರ್ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಕೋವಿಡ್-19 ಸಂದರ್ಭದಲ್ಲಿಯೂ ಸಾರಿಗೆ ನೌಕರರಿಗೆ ಸಂಬಳ ಕೊಟ್ಟಿದ್ದೇವೆ. ಕೋಡಿಹಳ್ಳಿ ಚಂದ್ರಶೇಖರ್ ಪ್ರತಿಷ್ಠೆಗೆ ಸಾರಿಗೆ ನಿಗಮ ಹಾಳಾಗುತ್ತದೆ. ಕೋಡಿಹಳ್ಳಿ ಚಂದ್ರಶೇಖರ್ ಇಲ್ಲೊಂದು, ಅಲ್ಲೊಂದು ಹೇಳೋದನ್ನ ಖಂಡಿಸುತ್ತೇನೆ ಎಂದು ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.

    ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಸಾರಿಗೆ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಮನವಿ ಮಾಡಿಕೊಂಡಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಜೊತೆಗೂಡಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರು ಅನಗತ್ಯವಾಗಿ ನೌಕರರ ದಾರಿತಪ್ಪಿಸುತ್ತಿರುವುದು ಸರಿಯಲ್ಲ. ಅವರ ದುರುದ್ದೇಶಪೂರಿತ ನಡೆ ಖಂಡನೀಯ. ಮುಷ್ಕರದಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ, ಸಾರಿಗೆ ಸಂಸ್ಥೆಗೆ ನಷ್ಟ ಹಾಗೂ ಸಾರಿಗೆ ಸಂಸ್ಥೆಯ ನೌಕರರಿಗೂ ತೊಂದರೆಯಾಗುತ್ತದೆ. ನೌಕರರು ಮುಷ್ಕರವನ್ನು ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಿಎಂ ಕರೆ ನೀಡಿದ್ದಾರೆ.

  • ಯಾವ ಕ್ಷಣದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ: ಕೋಡಿಹಳ್ಳಿ ಎಚ್ಚರಿಕೆ

    ಯಾವ ಕ್ಷಣದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ: ಕೋಡಿಹಳ್ಳಿ ಎಚ್ಚರಿಕೆ

    ಬೆಂಗಳೂರು: ಯಾವ ಕ್ಷಣದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ. ನಮ್ಮ ಬೇಡಿಕೆ ಈಡೇರುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಕೆ ನೀಡಿದ್ದಾರೆ.

    ಪ್ರತಿಭಟನೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ಸಚಿವರೇ ನಮಗೆ ಧನಾತ್ಮಕವಾಗಿ ಸ್ಪಂದನೆ ಕೊಡಿ. ಸರ್ಕಾರ ಸಾರಿಗೆ ನೌಕರರನ್ನ ಅರೆ ಹೊಟ್ಟೆಯಲ್ಲಿ ದುಡಿಸಿಕೊಳ್ತಿದೆ. ಇದು ಮಾನವೀಯತೆನಾ..? ಪೊಲೀಸರನ್ನ ಬಿಟ್ಟು ಅಪಮಾನ ಮಾಡ್ತಿರಲ್ಲ. ಮಿಸ್ಟರ್ ಸವದಿಯವ್ರೇ…? ಮುಖಾಮುಖಿ ಕೂತು ಚರ್ಚೆಯಾಗಲಿ. ಗೌರವಯುತವಾಗಿ ಕರೆದು ಮಾತನಾಡಿದ್ರೆ ನಾವು ರೆಡಿ ಇದ್ದೇವೆ ಎಂದು ಆಗ್ರಹಿಸಿದ್ದಾರೆ.

    ಎಸ್ಮಾ ಜಾರಿ(ಅಗತ್ಯ ಸೇವೆ ನಿರ್ವಹಣೆ ಕಾಯಿದೆ)ಗೆ ಮಾಡ್ತೀವಿ ಅಂತ ಹೆದರಿಸ್ತಿದ್ದಾರೆ. ಎಲ್ಲರ ಮೇಲೂ ಎಸ್ಮಾ ಜಾರಿ ಮಾಡುತ್ತೀರಾ..? ಸರ್ಕಾರದಿಂದ ಸ್ಪಂದನೆ ಸಿಗೋ ತನಕ ನಮ್ಮ ಮತ್ತು ಬಸ್ ಬಂದ್ ನಡೆಯುತ್ತಲೇ ಇರುತ್ತದೆ. ಸರ್ಕಾರ ಸ್ಪಂದಿಸಿದ್ರೆ ತಕ್ಷಣಕ್ಕೆ ಕರ್ತವ್ಯಕ್ಕೆ ಹಾಜರಾಗ್ತೇವೆ. ಸಾರಿಗೆ ನೌಕರರ ಜೊತೆ ರೈತ ಸಂಘಟನೆಗಳಿವೆ. ದಿನಾಂಕ ಹೇಳಲ್ಲ. ಯಾವ ಸಮಯದಲ್ಲಾದ್ರೂ ವಿಧಾನಸೌಧಕ್ಕೆ ನುಗ್ಗುತ್ತೇವೆ. ಇನ್ನು ನಾವು ಸುಮ್ಮನೆ ಕೂಡೋಕೆ ಆಗಲ್ಲ. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದ್ದೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 2 ಬಸ್‍ಗಳಲ್ಲಿ ರೈತರನ್ನ ವಶಕ್ಕೆ ಪಡೆದ ಪೊಲೀಸರು

    2 ಬಸ್‍ಗಳಲ್ಲಿ ರೈತರನ್ನ ವಶಕ್ಕೆ ಪಡೆದ ಪೊಲೀಸರು

    ಬೆಂಗಳೂರು: ಅಧಿವೇಶನದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಎಪಿಎಂಸಿ ಮಸೂದೆ ಮಂಡಿಸಿದ ಬೆನ್ನಲ್ಲೇ ರಾಜ್ಯ ರೈತ ಸಂಘದ ಅಧ್ಯಕ್ಷ ಸೆಪ್ಟೆಂಬರ್ 28ಕ್ಕೆ ಕರ್ನಾಟಕ ಬಂದ್‍ಗೆ ಕರೆ ನೀಡಿದ್ದಾರೆ. ಈಗಾಗಲೇ ಫ್ರೀಡಂಪಾರ್ಕ್ ಮತ್ತು ಮೌರ್ಯ ಸರ್ಕಲ್‍ನಲ್ಲಿ ರೈತರು ರಸ್ತೆ ತಡೆಗೆ ಸಜ್ಜಾಗುತ್ತಿದ್ದರು. ಇದೀಗ ಪೊಲೀಸರು ಹಲವು ರೈತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೆದ್ದಾರಿ ಬಂದ್ ಮಾಡಿ ಶುಕ್ರವಾರ ಬೃಹತ್ ಪ್ರತಿಭಟನೆ  ಮಾಡಲು ನಿರ್ಧರಿಸಲಾಗಿದೆ. ಆದರೆ ಈಗಲೇ ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದರು. ಅಲ್ಲದೇ ರಸ್ತೆಯಲ್ಲೇ ಮಲಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ರೈತರನ್ನು ತಡೆದಿದ್ದಾರೆ. ಆಗ ನೂಕು-ನುಗ್ಗಲು ಉಂಟಾಗಿದ್ದು, ರೈತರು ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದಾರೆ.

    ಮೌರ್ಯ ಸರ್ಕಲ್ ರಸ್ತೆಯಲ್ಲಿ ರೈತರು ಕುಳಿತುಕೊಂಡು ಪ್ರತಿಭಟನೆ ಮಾಡಿದ್ದಾರೆ. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿದೆ. ಕೊನೆಗೆ ಪೊಲೀಸರು ಪ್ರತಿಭಟನಾನಿರತ ರೈತರನ್ನು ವಶಕ್ಕೆ ಪಡೆದಿದ್ದಾರೆ. ಸುಮಾರು 2 ಬಸ್ಸುಗಳಲ್ಲಿ ಪೊಲೀಸರು ರೈತರನ್ನ ಕರೆದುಕೊಂಡು ಹೋಗಿದ್ದಾರೆ.

    ಸೋಮವಾರ ಬಂದ್‍ಗೆ ಕರೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಮ್ಮ ಒತ್ತಾಯಕ್ಕೆ ಮಣಿದು ಮಸೂದೆಯನ್ನ ತಡೆ ಹಿಡಿಯಬಹುದು ಎಂಬ ವಿಶ್ವಾಸವಿತ್ತು. ಆದರೆ ಸರ್ಕಾರದ ಮೊಸಳೆ ಕಣ್ಣೀರು ಎಂಬುವುದು ಖಚಿತವಾಗಿದೆ. ಬೀದಿಯಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೂ ನಮ್ಮನ್ನ ಮಾತನಾಡಿಸಲು ಸರ್ಕಾರ ಮುಂದಾಗಿಲ್ಲ. ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದರು.

    ಇದೊಂದು ಕಾರ್ಪೊರೇಟ್ ಸರ್ಕಾರವಾಗಿದ್ದು, ಮಸೂದೆ ಬಗ್ಗೆ ರೈತರ ಸಲಹೆ ಸಹ ಪಡೆದುಕೊಂಡಿಲ್ಲ. ಎಪಿಎಂಸಿ ಮಸೂದೆ ರೈತರ ಮರಣ ಶಾಸನವಾಗಿದೆ. ಬಂಡವಾಳ ಶಾಹಿ ಸರ್ಕಾರ ಇದಾಗಿದೆ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಯಡಿಯೂರಪ್ಪನವರ ಮುಖವಾಡ ಬಯಲಾಗಿದೆ ಎಂದು ಕಿಡಿಕಾರಿದ್ದಾರೆ.

  • ಸೆ.25ಕ್ಕೆ ಕರ್ನಾಟಕ ಬಂದ್ ಇರಲ್ಲ- ಕೋಡಿಹಳ್ಳಿ ಚಂದ್ರಶೇಖರ್

    ಸೆ.25ಕ್ಕೆ ಕರ್ನಾಟಕ ಬಂದ್ ಇರಲ್ಲ- ಕೋಡಿಹಳ್ಳಿ ಚಂದ್ರಶೇಖರ್

    ಬೆಂಗಳೂರು: ಕರ್ನಾಟಕ ಬಂದ್ ಕುರಿತು ನಡೆಯುತ್ತಿದ್ದ ಚರ್ಚೆಗೆ ತೆರೆ ಬಿದ್ದಿದ್ದು, ಶುಕ್ರವಾರ ಕರ್ನಾಟಕ ಬಂದ್ ಇರುವುದಿಲ್ಲ, ಸರ್ಕಾರದ ಮುಂದಿನ ನಡೆ ನೋಡಿಕೊಂಡು ಬಂದ್ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಇಂದು ಜೂಮ್ ಮೀಟಿಂಗ್‍ನಲ್ಲಿ ವಿವಿಧ ರೈತ ಮುಖಂಡರ ಜೊತೆ ಸಭೆ ನಡೆಸಿದ ನಂತರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸೆಪ್ಟೆಂಬರ್ 25ರಂದು ಕರ್ನಾಟಕ ಬಂದ್ ಇರುವುದಿಲ್ಲ. ಕೇವಲ ರಾಷ್ಟ್ರಿಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ. ಇದೀಗ ಅಧಿವೇಶನ ನಡೆಯುತ್ತಿದ್ದು, ಸದನಲ್ಲಿ ಈ ಕುರಿತು ಚರ್ಚಿಸಿ ಸರ್ಕಾರ ಬಿಲ್ ಹಿಂಪಡೆಯದಿದ್ದರೆ ಬಂದ್ ದಿನಾಂಕವನ್ನು ಪ್ರಕಟ ಮಾಡುತ್ತೇವೆ ಎಂದರು.

    ಅಖಿಲ ಭಾರತೀಯ ಕಿಸಾನ್ ಸಂಘರ್ಷ ಸಮಿತಿ ಬಂದ್‍ಗೆ ಕರೆ ಕೊಟ್ಟಿದೆ. ಪಂಜಾಬ್ ಹರಿಯಾಣ ಮತ್ತು ಇತರ ರಾಜ್ಯಗಳಲ್ಲಿ ಚಳುವಳಿ ತೀವ್ರವಾಗಿ ನಡೆಯುತ್ತಿದೆ. ಈ ಬಂದ್‍ಗೆ ನಾವು ಬೆಂಬಲ ಕೊಡುತ್ತೇವೆ. ಕರ್ನಾಟಕ ಸರ್ಕಾರ ಸುಗ್ರೀವಾಜ್ಞೆಯನ್ನು ಕೈಬಿಟ್ಟರೆ ರಾಜ್ಯ ರೈತಸಂಘದಿಂದ ಬಂದ್ ಇರಲ್ಲ. ಒಂದು ವೇಳೆ ಇದೇ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಜಾರಿಗೆ ತಂದರೆ ಬಂದ್ ಮಾಡುತ್ತೇವೆ. ಪ್ರತಿಭಟನೆ ನೋಡಿ ಯಡಿಯೂರಪ್ಪನವರು ಮನಸ್ಸು ಬದಲಿಸಬಹುದು, ಕಾದುನೋಡುತ್ತೇವೆ ಎಂದು ತಿಳಿಸಿದರು.

  • ಜನರನ್ನ ಸೆಳೆಯುವ ದುಂದು ವೆಚ್ಚದ ಕಾರ್ಯಕ್ರಮವೇ ಗ್ರಾಮ ವಾಸ್ತವ್ಯ: ಕೊಡಿಹಳ್ಳಿ ಚಂದ್ರಶೇಖರ್

    ಜನರನ್ನ ಸೆಳೆಯುವ ದುಂದು ವೆಚ್ಚದ ಕಾರ್ಯಕ್ರಮವೇ ಗ್ರಾಮ ವಾಸ್ತವ್ಯ: ಕೊಡಿಹಳ್ಳಿ ಚಂದ್ರಶೇಖರ್

    ಯಾದಗಿರಿ: ಸಿಎಂ ಮಾಡುತ್ತಿರುವ ಗ್ರಾಮ ವಾಸ್ತವ್ಯ ದುಂದು ವೆಚ್ಚವಾಗಿದ್ದು, ಜನರ ಗಮನವನ್ನು ತಮ್ಮತ್ತ ಸೆಳೆಯಲು ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆಂದು ರೈತ ಸಂಘದ ರಾಜ್ಯಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಟೀಕಿಸಿದ್ದಾರೆ.

    ಜಿಲ್ಲೆಯಲ್ಲಿ ರೈತ ಸಂಘದ ಕಚೇರಿ ಉದ್ಘಾಟನೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸದ್ಯ ಮೈತ್ರಿ ಸರ್ಕಾರ ರಾಜ್ಯದ ಜನರ ಮನಸ್ಸಿನಲ್ಲಿ ಅಸ್ಥಿರಗೊಂಡಿದೆ. ಹೀಗಾಗಿ ಜನರ ಗಮನ ಸೆಳೆಯಲು ಸಿಎಂ ಈ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡರು.

    ಸಿಎಂ ವಿಧಾನಸೌಧಲ್ಲಿಯೇ ಕುಳಿತು ಗ್ರಾಮಗಳ ಅಭಿವೃದ್ಧಿಗೆ ಸೂಕ್ತ ಕಾನೂನು ತಂದು ಹಳ್ಳಿಗಳನ್ನು ಅಭಿವೃದ್ಧಿಪಡಿಸಬಹುದು. ಆದರೆ ಗ್ರಾಮ ವಾಸ್ತವ್ಯ ಮಾಡಿ ಜನರ ಮನಸ್ಸು ಬೇರೆ ರೀತಿಗೆ ತಿರುಗಿಸಲು ಸಿಎಂ ಮುಂದಾಗಿದ್ದಾರೆ. ಇನ್ನೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡದೆ, ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಗುಡುಗಿದರು.

    ಸಿಎಂ ಜಿಲ್ಲೆಗೆ ಗ್ರಾಮ ವಾಸ್ತವ್ಯಕ್ಕೆ ಬರುವ ದಿನ ರೈತ ಸಂಘದಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದರು.

  • ದರ್ಶನ್ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ಕೆಂಡಾಮಂಡಲ

    ದರ್ಶನ್ ಹೇಳಿಕೆಗೆ ಕೋಡಿಹಳ್ಳಿ ಚಂದ್ರಶೇಖರ್ ಕೆಂಡಾಮಂಡಲ

    -ರೈತರ ಕಷ್ಟ ದರ್ಶನ್‍ಗೆ ಏನು ಗೊತ್ತು?
    -ಬೆಂಬಲ ಬೆಲೆ ಅನ್ನೋದು ಮೂರ್ಖತನ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಶನಿವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸಾಲಮನ್ನಾ ಮಾಡದಿದ್ರೆ ಪರವಾಗಿಲ್ಲ. ರೈತರ ಬೆಳೆಗಳಿಗೆ ಬೆಂಬಲ ನೀಡಿದರೆ ಅವರೇ ಸಾಲದಿಂದ ಋಣಮುಕ್ತರಾಗುತ್ತಾರೆ ಎಂದು ಹೇಳಿದ್ದರು. ಸದ್ಯ ದರ್ಶನ್ ಹೇಳಿಕೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದ್ದಾರೆ.

    ಇಂದು ರೈತರು ನೇಣು ಬಿಗಿದುಕೊಂಡು ಜೀವ ಬಿಡುತ್ತಿದ್ದಾರೆ. ದರ್ಶನ್ ಅವರಿಗೆ ಆತ್ಮಹತ್ಯೆಗೆ ಶರಣಾಗುತ್ತಿರುವ ಕಷ್ಟ ಗೊತ್ತಿಲ್ಲ. ತಿಳುವಳಿಕೆ ಇಲ್ಲದೆ ದರ್ಶನ್ ಈ ರೀತಿ ಮಾತನಾಡಿದ್ದಾರೆ. ರೈತರ ಬಗ್ಗೆ ವಿಷಯಗಳು ಗೊತ್ತಿಲ್ಲದಿದ್ದರೆ, ನಮ್ಮೊಂದಿಗೆ ಚರ್ಚಿಸಿ ತಮ್ಮ ಪ್ರತಿಕ್ರಿಯೆ ನೀಡಬೇಕು. ರಾಜಕೀಯ ಭರಾಟೆಯಲ್ಲಿ ತಮಗೆ ತೋಚಿದ್ದನ್ನು ಮಾತನಾಡಿರಬಹುದು ಮುಂದಿನ ದಿನಗಳಲ್ಲಿ ತಮ್ಮ ಹೇಳಿಕೆಯನ್ನು ಸರಿ ಮಾಡಿಕೊಳ್ಳಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದರು.

    ತಿಳಿದು ಮಾತನಾಡಲಿ: ಜೀವದ ಅರಿವಿಲ್ಲದೆ ದರ್ಶನ್ ಮಾತನಾಡುತ್ತಿದ್ದಾರೆ. ಬೆಂಬಲ ಬೆಲೆ ಎನ್ನುವುದೇ ಮೂರ್ಖತನದ ಮಾತು. ರೈತರ ಬೆಳೆಗಳಿಗೆ ಬೆಂಬಲ ಬೆಲೆ ಬದಲಾಗಿ ಸರ್ಕಾರ ಯೋಗ್ಯ ಬೆಲೆ ನೀಡಬೇಕು ಎಂಬುವುದು ನಮ್ಮ ವಾದ ಮತ್ತು ಹೋರಾಟ. ಬೆಂಬಲ ಬೆಲೆ ಎಂಬ ಪದವನ್ನು ಮೋಸಗಾರರು ಮತ್ತು ತಂತ್ರಗಾರರು ಬಳಸುತ್ತಾರೆ. ದರ್ಶನ್ ತಮ್ಮ ಸಿನಿಮಾಗೆ ಅರ್ಧ ಸಂಭಾವನೆ ತೆಗೆದುಕೊಳ್ಳುತ್ತೀನಿ ಎಂದು ಹೇಳಲಿ. ಅರ್ಧ ಸಂಭಾವನೆಯಲ್ಲಿ ಐಷಾರಾಮಿ ಕಾರುಗಳಲ್ಲಿ ಓಡಾಡೋಕ್ಕೆ ಆಗುತ್ತಾ ಅಂತಾ ನೋಡುತ್ತೇವೆ. ಚಿತ್ರದಲ್ಲಿ ನಿಮ್ಮ ಯೋಗ್ಯತೆಗೆ ತಕ್ಕ ಸಂಭಾವನೆ ಪಡೆಯುವ ಹಾಗೆ ರೈತರ ಬೆಳೆಗಳಿಗೂ ಯೋಗ್ಯ ಬೆಲೆ ನೀಡಬೇಕು. ರೈತರ ಶ್ರಮಕ್ಕೆ ಗೌರವವಾದ ಯೋಗ್ಯ ಬೆಲೆ ಬಂದಾಗ ಯಾರು ಸಾಲಮನ್ನಾ ಕೇಳುತ್ತಾರೆ. ದರ್ಶನ್ ಚಿಕ್ಕ ವಯಸ್ಸಿನವರಾಗಿದ್ದು, ಮುಂದಿನ ದಿನಗಳಲ್ಲಿ ತಿಳಿದು ಮಾತನಾಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

    ದರ್ಶನ್ ಹೇಳಿದ್ದೇನು?: ನಾವೆಲ್ಲ ಇಲ್ಲಿ ನೆಮ್ಮದಿಯಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮನ್ನು ಕಾಯುತ್ತಿರುವ ಸೈನಿಕರು. ಅದೇ ರೀತಿ ತುಂಬಾ ಕಡೆ ಸಾಲಮನ್ನ ಮಾಡಿಲ್ಲ, ಮಾಡಿಲ್ಲ ಎಂದು ಹೇಳುತ್ತಿದ್ದರು. ಆದರೆ ರೈತರ ಸಾಲಮನ್ನಾ ಮಾಡುವುದು ಬೇಡ. ಅವರಿಗೆ ಬೆಂಬಲ ಕೊಟ್ಟರೆ ಸಾಕು ರೈತರೇ ತಮ್ಮ ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದು ದರ್ಶನ್ ಹೇಳಿದ್ದರು.