Tag: kodaguFlood

  • ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ಕೊಡಗಿನಲ್ಲಿ 12 ದಿನಗಳ ಬಳಿಕ ಶಾಲೆಗಳು ಆರಂಭ- ಮಕ್ಕಳ ಸಂಖ್ಯೆ ಕಂಡು ಕಣ್ಣೀರಿಟ್ಟ ಶಿಕ್ಷಕರು

    ಮಡಿಕೇರಿ: ಪ್ರಕೃತಿಯ ಮುನಿಸಿಗೆ ನಲುಗಿಹೋಗಿರುವ ಕೊಡಗಿನಲ್ಲಿ ಇಂದು ಶಾಲೆಗಳು ಪುನಾರಂಭವಗೊಂಡಿವೆ. ಪ್ರವಾಹ ಪೀಡಿತ ಪ್ರದೇಶ ಬಿಟ್ಟು ಕುಶಾಲನಗರ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಶಾಲೆಗಳು ಇಂದಿನಿಂದ ಆರಂಭಗೊಂಡಿವೆ.

    12 ದಿನಗಳಿಂದ ಪಾಠವಿಲ್ಲದೇ ಮಕ್ಕಳು ಇಂದು ತರಗತಿಗಳಿಗೆ ಹಾಜರಾಗಿದ್ದಾರೆ. ಆದ್ರೆ ಇಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಂಡು ಕಣ್ಣೀರು ಹಾಕಿದ್ದಾರೆ.

    ಮಳೆ ಬಂದ ಕಾರಣ 12 ದಿನ ರಜೆ ಇತ್ತು. ಗೆಳೆಯರಿಲ್ಲದೇ ಬೇಜಾರಾಗುತ್ತಿತ್ತು. ಶಾಲೆಗ ಹೋಗಬೇಕನ್ನಿಸುತ್ತಿತ್ತು. ಆದ್ರೆ ಇಂದು ಶಾಲೆಗೆ ಬಂದು ತುಂಬಾ ಖುಷಿಯಾಗುತ್ತಿದೆ ಅಂತ ಬೋಯಕೇರಿ ಶಾಲೆಯ ವಿದ್ಯಾರ್ಥಿ ಅನಿರುದ್ಧ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾನೆ.

    ಮಕ್ಕಳು ಕರೆ ಮಾಡಿ ಯಾವ ಶಾಲೆ ಆರಂಭವಾಗುತ್ತದೆ ಅಂತ ಕೇಳುತ್ತಾನೇ ಇದ್ರು. ಯಾಕಂದ್ರೆ ಅವರ ಮನಸ್ಥಿತಿ ಕೂಡ ಹಾಗೆಯೇ ಇತ್ತು. ಮಕ್ಕಳಿಗೂ ಕೂಡ ಹೆತ್ತವರನ್ನು ಬಿಟ್ಟು ಹೋಗಲು ಕಷ್ಟವಾಗುತ್ತಿತ್ತು. ಆದ್ರೆ ಇಂದು ಶಾಲೆ ಆರಂಭವಾಗಿದೆ. ಇದೀಗ ಮಕ್ಕಳಿಗಿಂತ ನಮಗೆ ತುಂಬಾ ಸಂತಸವಾಗುತ್ತಿದೆ. ನಮ್ಮ ಶಾಲೆಯ ಮಕ್ಕಳು ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದೆವು ಅಂತ ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.

    ಭಾರೀ ಮಳೆಯಿಂದಾಗಿ ಶಾಲೆಯೂ ಕೂಡ ಮುಚ್ಚಿತ್ತು. ತುಂಬಾ ಬೇಜಾರಾಗುತ್ತಿತ್ತು. ಎಲ್ಲಿ ಏನಾಗಿದೆ ಅಂತ ನಾವು ಕರೆ ಮಾಡಿ ತಿಳಿದುಕೊಂಡಿದ್ವಿ. ಯಾವತ್ತೂ ಶಾಲಾ ಆವರಣಕ್ಕೆ ಬರುತ್ತಿದ್ದಂತೆಯೇ ಎಲ್ಲಾ ಮಕ್ಕಳು ಓಡಿಕೊಂಡು ಬರುತ್ತಿದ್ದರು. ಆದ್ರೆ ಇಂದು ಮಕ್ಕಳ ಸಂಖ್ಯೆ ಕಡಿಮೆ ಇದ್ದುದನ್ನು ಕಂಡು ಕಣ್ಣಲ್ಲಿ ನೀರು ಬಂತು. ನಾವು ಬರುತ್ತಿರುವುದನ್ನು ಕಂಡು ಕೆಲ ಮಕ್ಕಳು ಅರ್ಧ ದಾರಿಗೆ ಓಡಿ ಬರುತ್ತಿದ್ದರು. ಇಂದು ಆ ಮಕ್ಕಳನ್ನು ನೆನೆದು ನಿಜವಾಗಲೂ ದುಃಖವಾಯ್ತು ಅಂತ ಮತ್ತೊಬ್ಬ ಶಿಕ್ಷಕಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಭಾವುಕರಾದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು

    ಭಾರೀ ಶಬ್ಧದಿಂದ ಹೆದರಿ ಬಾಣಂತಿ, 2 ತಿಂಗ್ಳ ಮಗುವನ್ನು ಎತ್ತಿಕೊಂಡು ಓಡಿದ್ವಿ- ಜೋಡುಪಾಲದ ಮಹಿಳೆ ಕಣ್ಣೀರು

    ಮಡಿಕೇರಿ: ಕೊಡಗು ಜಿಲ್ಲೆಯ ಜೋಡುಪಾಲದಲ್ಲಿ ನಡೆದಿರುವ ದುರಂತದಿಂದ ಈ ಭಾಗದ ಜನ ಕಂಗೆಟ್ಟು ಹೋಗಿದ್ದಾರೆ. ಇಲ್ಲಿ ಭಾರೀ ದೊಡ್ಡ ಸ್ಫೋಟ ಸಂಭವಿಸಿದ್ದು, ಆ ಬಳಿಕ ಸಾಕಷ್ಟು ಮನೆಗಳಿಗೆ ನೀರು, ಮಣ್ಣು ನುಗ್ಗಿತ್ತು. ಹೀಗಾಗಿ ಇಲ್ಲಿಯ ನಿವಾಸಿಗಳು ಬಹಳ ತೊಂದರೆಗಳನ್ನು ಅನುಭವಿಸಿದ್ದು, ಜನ ತಮ್ಮ ನಿವಾಸದಿಂದ ತೆರಳಿ ನಿರಾಶ್ರಿತ ಕೇಂದ್ರಗಳಲ್ಲಿ ವಾಸವಿದ್ದರು.

    ಇದೀಗ ಸುಮಾರು 5 ದಿನಗಳ ಬಳಿಕ ಮನೆಗೆ ಬಂದು ಪರಿಸ್ಥಿತಿ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಈ ವೇಳೆ ಮನೆಯ ಸ್ಥಿತಿಯನ್ನು ನೋಡಲು ಬಂದ ಕುಟುಂಬವನ್ನು ಪಬ್ಲಿಕ್ ಟಿವಿ ಮಾತನಾಡಿಸಿತ್ತು. `ಮೊನ್ನೆ ಸುಮಾರು 8.30ಗೆ ಜೋಡುಪಾಲದಲ್ಲಿ ಭಾರೀ ಸ್ಫೋಟ ಸಂಭವಿಸಿತ್ತು. ಹೀಗಾಗಿ ಅಲ್ಲಿಂದ ಸುಮಾರು 20 ಮಂದಿ ನಮ್ಮ ಮನೆಗೆ ಬಂದ್ರು. ಅವರಿಗೆ ಬೆಳಗ್ಗಿನ ಉಪಹಾರ ನೀಡಿ, ಇನ್ನೇನು ಮಧ್ಯಾಹ್ನ ಊಟಕ್ಕೆ ಸಿದ್ಧತೆ ನಡೆಸುತ್ತಿರಬೇಕಾದ್ರೆ ಅಂದ್ರೆ 11.30 ಸುಮಾರಿಗೆ ನಮ್ಮ ಮನೆಯ ಹಿಂದೆಯೇ ಮತ್ತೊಂದು ಸ್ಫೋಟ ಸಂಭವಿಸಿತ್ತು. ಅಲ್ಲದೇ ನೋಡ ನೋಡುತ್ತಿದ್ದಂತೆಯೇ ನಮ್ಮ ತೋಟ, ಮರಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವು. ಇದರಿಂದ ಗಾಬರಿಗೊಂಡ ನಾವು ಮಗಳ 2 ತಿಂಗಳ ಮಗುವನ್ನು ಎತ್ತಿಕೊಂಡು ಬೆಟ್ಟಕ್ಕೆ ಓಡಿದೆವು. ಅಲ್ಲಿದ್ದಾಗ ಮತ್ತೊಮ್ಮೆ ಅಂತದ್ದೇ ದೊಡ್ಡ ಶಬ್ದವೊಂದು ಕೇಳಿಸಿತ್ತು. ಹೀಗಾಗಿ ಅಲ್ಲಿಂದ ಮತ್ತೊಂದು ಬೆಟ್ಟಕ್ಕೆ ಓಡಿದೆವು. ಅಲ್ಲಿಗೆ ಮಿಲಿಟ್ರಿಯವರು ಬಂದ್ರು. ನನ್ನ ಪತಿ, 2 ತಿಂಗಳ ಮಗುವನ್ನು ಹಿಡಿದುಕೊಂಡು ಪಾರಾದ್ರು, ನಾನು ಮತ್ತು ನನ್ನ ಬಾಣಂತಿ ಮಗಳನ್ನು ಮಿಲಿಟ್ರಿಯವರು ರಕ್ಷಿಸಿದ್ರು. ನಂತರ ನಾವು ಸ್ವಲ್ಪ ದೂರ ನಡೆದು ಪರಿಹಾರ ಕೇಂದ್ರಕ್ಕೆ ತೆರಳಿದೆವು ಅಂತ ನಡೆದ ಘಟನೆಯನ್ನು ಕಣ್ಣೀರು ಹಾಕುತ್ತಲೇ ಮಹಿಳೆಯೊಬ್ಬರು ವಿವರಿಸಿದ್ರು.

    ಮಗಳು ಬಾಣಂತಿಯಾಗಿದ್ದರಿಂದ ಮಗುವನ್ನು ಹಿಡಿದುಕೊಂಡು ಪರಿಹಾರ ಕೇಂದ್ರದಲ್ಲಿ ಇರಲು ಸಾಧ್ಯವಾಗಿಲ್ಲ. ಹೀಗಾಗಿ ನಾವು ಅಲ್ಲಿಂದ ಸಂಬಂಧಿಕರ ಮನೆಗೆ ತೆರಳಿದೆವು. ಮಳೆ ಸ್ವಲ್ಪ ಕಡಿಮೆಯಾದ ಬಳಿಕ ನಮಗೆ ಧೈರ್ಯ ಬಂತು. ಒಟ್ಟಿನಲ್ಲಿ 5 ದಿನದ ಬಳಿಕ ಮನೆಯ ಪರಿಸ್ಥಿತಿಯನ್ನು ನೋಡಲು ಮನೆ ಬಂದಿದ್ದೇವೆ ಅಂತ ಮನೆಯವರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=mYi6vJ3i3Wg

  • ಮಳೆಗೆ ಕೊಡಗು, ದಕ್ಷಿಣ ಕನ್ನಡದಲ್ಲಿ 21 ಬಲಿ- ಗುಡ್ಡ ತೆರವು, ಸೇತುವೆ ಜೋಡಣೆ ಆರಂಭ

    ಮಳೆಗೆ ಕೊಡಗು, ದಕ್ಷಿಣ ಕನ್ನಡದಲ್ಲಿ 21 ಬಲಿ- ಗುಡ್ಡ ತೆರವು, ಸೇತುವೆ ಜೋಡಣೆ ಆರಂಭ

    ಮಡಿಕೇರಿ/ಮಂಗಳೂರು: ಭೀಕರ ಜಲಪ್ರಳಯದ ನಂತರ ಕೊಡಗಿನ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಗಿತ್ತು. ಸದ್ಯ ಮಳೆ ಕೊಂಚ ಬಿಡುವು ಕೊಟ್ಟಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಕಂಡು ಕೇಳರಿಯದ ಮಹಾಮಳೆ ಕೊಡಗಿನಲ್ಲಿ ಒಟ್ಟು 16 ಜೀವಗಳನ್ನು ಬಲಿಪಡೆದಿದೆ. ಇತ್ತ ದಕ್ಷಿಣ ಕನ್ನಡದಲ್ಲಿ 5 ಮಂದಿ ಸಾವನ್ನಪ್ಪಿದ್ದು, ಗುಡ್ಡ ಕುಸಿತ, ಭೂಕುಸಿತಕ್ಕೆ ಸಾವನ್ನಪ್ಪಿದವರ ಸಂಖ್ಯೆ 21ಕ್ಕೇರಿದೆ. ಆದರೆ ನಾಪತ್ತೆಯಾದವರಿಗಾಗಿ ಇನ್ನೂ ಡ್ರೋನ್ ಕ್ಯಾಮೆರಾ ಮೂಲಕ ಶೋಧಕಾರ್ಯ ಮುಂದುವರಿದಿದೆ.

    ಭೀಕರ ಪ್ರವಾಹದಿಂದ ಕೊಡಗಿನ ವಿದ್ಯಾರ್ಥಿಗಳು ಕಳೆದ 12 ದಿನಗಳಿಂದ ಶಾಲಾ-ಕಾಲೇಜಿನ ಮುಖ ನೋಡಿರಲಿಲ್ಲ. ತೀವ್ರ ಹಾನಿಯಾಗಿರುವ ಭಾಗದ 61 ಶಾಲೆಗಳನ್ನ ಬಿಟ್ಟು ಉಳಿದ ಕಡೆ ಶಾಲಾ ಕಾಲೇಜುಗಳು ಇಂದಿನಿಂದ ಪುನಾರಂಭಗೊಳ್ಳುತ್ತಿದೆ. ಅಲ್ಲದೇ ಪರಿಹಾರ ಕೇಂದ್ರಗಳಲ್ಲಿ ಮಕ್ಕಳಿಗೆ ಶಾಲಾ ಪಠ್ಯ ಚಟುವಟಿಕೆ ಆರಂಭಿಸಲಾಗಿದೆ.


    ಜಿಲ್ಲೆಯ ವಾತಾವರಣ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಗುಡ್ಡ ತೆರವು, ಸೇತುವೆ ಜೋಡಣೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳು ಆರಂಭವಾಗ್ತಿದೆ. ಅಲ್ಲದೇ 10 ದಿನಗಳಿಂದ ಕತ್ತಲಲ್ಲಿರುವ ಮಡಿಕೇರಿಯಲ್ಲಿ ವಿದ್ಯುತ್ ಕಂಬಗಳ ದುರಸ್ಥಿ ಕಾರ್ಯ ಶುರುವಾಗಿದೆ. ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ಹಲವು ಭಾಗಗಳ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

    ಈ ನಡುವೆ ಸರ್ಕಾರ ಕೂಡ ಪುನರ್ವಸತಿ ಕಾರ್ಯಗಳನ್ನು ತ್ವರಿತವಾಗಿ ಮಾಡುತ್ತಿದ್ದು, ಅಡುಗೆ ಅನಿಲ, ಗ್ಯಾಸ್ ಗೀಜರ್, ಪೆಟ್ರೋಲ್, ಡೀಸಲ್ ಪೂರೈಕೆಯಲ್ಲಿ ಯಾವುದೇ ರೀತಿಯಲ್ಲಿ ವ್ಯತ್ಯಯ ಉಂಟಾಗದಂತೆ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಜಿಲ್ಲೆಯಾದ್ಯಂತ ಬಸ್ ಸಂಚಾರ ಹಾಗೂ ಸಾರಿಗೆ ಸಂಪರ್ಕ ವ್ಯವಸ್ಥೆಯನ್ನು ಸುಧಾರಿಸಲು ನಿರ್ದೇಶನ ನೀಡಲಾಗಿದೆ. ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸಲು ವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ರಕ್ಷಣಾ ತಡೆಗೋಡೆ ನಿರ್ಮಿಸಲು ಮರಳು ಚೀಲಗಳನ್ನು ಬಳಸುವ ಮೂಲಕ ತಾತ್ಕಾಲಿಕ ಪರಿಹಾರ ಕಾಮಗಾರಿ ಕೈಗೊಳ್ಳಲು ಸಂಬಂಧಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

    ರಾಜ್ಯ ನೈಸರ್ಗಿಕ ವಿಕೋಪ ಇಲಾಖೆ ಮತ್ತು ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ತಂಡ ಜೋಡುಪಾಲ, ಅರೇಕಲ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ದುರಂತ ನಡೆದಿರುವ ಮದೆನಾಡು, ಜೋಡುಪಾಲ, ಅರೇಕಲ್ ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. ಇನ್ನು ಇಂದು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಪ್ರವಾಹ ಪೀಡಿತ ಮಡಿಕೇರಿಗೆ ಭೇಟಿ ನೀಡಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=_MN3-brd8f0