Tag: Kodagu neighborhood

  • ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ಗುಡ್ಡ ಕುಸಿತ ಸಾಧ್ಯತೆ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ ನೋಡಿ

    ಮತ್ತೆ ಜೋಡುಪಾಲ, ಮದೆನಾಡಿನಲ್ಲಿ ಗುಡ್ಡ ಕುಸಿತ ಸಾಧ್ಯತೆ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ ನೋಡಿ

    ಮಡಿಕೇರಿ: ಕೊಡಗಿನ ಜೋಡುಪಾಲ, ಮದೆನಾಡು ಪ್ರದೇಶಗಳು ವಾಸಕ್ಕೆ ಯೋಗ್ಯವಾಗಿಲ್ಲ ಎಂದು ರಾಜ್ಯ ನೈಸರ್ಗಿಕ ನಿರ್ವಹಣೆ ಉಸ್ತುವಾರಿ ಕೇಂದ್ರದ ವಿಜ್ಞಾನಿಗಳು ಹೇಳಿದ್ದಾರೆ.

    ಭೂ ಕುಸಿತಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ, ಗುಡ್ಡ ಪ್ರದೇಶದಲ್ಲಿ ನೀರು ಇಂಗಿ ಸ್ಫೋಟಗೊಂಡು ಹೊರಬಂದಿದೆ. ಮತ್ತೆ ಕೆಲವು ಕಡೆ ಗುಡ್ಡಗಳು ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

    ಭಾರೀ ಮಳೆಯಿಂದಾಗಿ ಮಣ್ಣು ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಕಳೆದುಕೊಂಡ ಪರಿಣಾಮ ಅಂತರ್ಜಲ ಮಟ್ಟ ಏರಿ ಈ ಕುಸಿತ ಸಂಭವಿಸಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು, ಮುಂದೆ ಪರಿಸ್ಥಿತಿಯನ್ನು ಯಾವ ರೀತಿ ಎದುರಿಸಬೇಕು ಎಂಬುದಕ್ಕೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲಿನ ವಾತಾವರಣವನ್ನು ನೋಡಿದರೆ ಜನರಿಂದ ಯಾವುದೇ ರೀತಿಯ ತೊಂದರೆ ಆಗಿಲ್ಲ. ಈಗ ನಾವು ಪ್ರಾಥಮಿಕ ಮಾಹಿತಿ ಕಲೆ ಹಾಕಲು ಬಂದಿದ್ದು ಮುಂದೆ ಸಮಗ್ರ ಅಧ್ಯಯನಕ್ಕೆ ತಂಡ ಬರಲಿದೆ. ಘಟನೆಗೆ ಏನು ಕಾರಣ ಎಂಬ ಬಗ್ಗೆ 2 ತಿಂಗಳು ಅಧ್ಯಯನ ನಡೆಸಿ ವರದಿ ನೀಡಲಾಗುತ್ತದೆ ಎಂದು ವಿವರಿಸಿದರು.

    ಇಲ್ಲಿ ಜನರು ವಾಸಿಸಬಹುದೇ ಇಲ್ಲವೇ ಎಂಬುದನ್ನು ನೋಡಲು ಬಂದಿದ್ದೇವೆ. ಬಳಿಕ ಪರಿಸ್ಥಿತಿಯನ್ನು ಹೇಗೆ ಸರಿಪಡಿಸಲಾಗುತ್ತದೆ ಎಂಬುದನ್ನು ಕಂಡು ಕೊಳ್ಳಬೇಕಿದೆ ಪ್ರಕೃತಿ ವಿಕೋಪವನ್ನು ತಡೆಯಲು ಸಾಧ್ಯವಿಲ್ಲ. ಆದರೆ ನಾವು ಮಾಡಿರುವ ತಪ್ಪನ್ನು ಮುಂದೆ ಮಾಡದೇ ಇರುವ ಹಾಗೇ ನೋಡಿಕೊಳ್ಳಬೇಕಿದೆ ಎಂದು ಶ್ರೀನಿವಾಸರೆಡ್ಡಿ ಹೇಳಿದರು.

    ಬೋಪಯ್ಯ ತಿರುಗೇಟು: ಜೋಡುಪಾಲ ವಾಸ ಯೋಗ್ಯ ಅಲ್ಲವೆಂಬ ತಜ್ಞರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಬೋಪಯ್ಯ ಹತ್ತಾರು ವರ್ಷಗಳಿಂದ ವಾಸವಿದ್ದವರನ್ನು ಎಬ್ಬಿಸುವುದು ಸರಿಯಲ್ಲ ಎಂದಿದ್ದಾರೆ.

    ಸಂಪಾಜೆಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿದ ಅವರು, ಯಾವುದೇ ಹೋಮ್ ಸ್ಟೇಗಳಿದ್ದಲ್ಲಿ ಭೂ ಕುಸಿತ ಆಗಿಲ್ಲ, ಬರೀ ಬಡವರ ಮನೆಗಳಿರುವಲ್ಲಿ ಹೆಚ್ಚು ಭೂಕುಸಿತವಾಗಿ ನಾಶ ಆಗಿದೆ. ಹೋಮ್ ಸ್ಟೇ ಇಲ್ಲದ ಮೊಣ್ಣಂಗೇರಿ ಸ್ಥಳಗಳಲ್ಲಿ ಪೂರ್ತಿ ನಾಶವಾಗಿದೆ. ಒಂದು ವರ್ಷದಲ್ಲಿ ಬೀಳಬೇಕಾಗಿದ್ದ ಮಳೆ 15 ದಿನದಲ್ಲಿ ಬಿದ್ದ ಪರಿಣಾಮ ಈ ದುರ್ಘಟನೆಯಾಗಿದೆ ಎಂದು ಎಂದು ವಿಜ್ಞಾನಿಗಳ ಹೇಳಿಕೆಗೆ ತಿರುಗೇಟು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಬೆಂಗಳೂರು: ಪ್ರಕೃತಿಯ ಮುಂದೆ ಮನುಷ್ಯ ಎಷ್ಟು ಕುಬ್ಜನಾಗುತ್ತಾನೆ ಅನ್ನೋದಕ್ಕೆ ಸಾಕ್ಷಿ ಕೊಡಗು ಜಲಪ್ರಳಯ. ಕೋಟಿ ಕೋಟಿ ದುಡ್ಡಿದ್ದ, ಆಸ್ತಿಯಿದ್ದ ಸಿರಿವಂತನೂ, ಏನು ಇಲ್ಲದ ಬಡವನೂ ಪ್ರಕೃತಿಯ ರೌದ್ರನರ್ತನದ ಮುಂದೆ ಮೌನ. ಇಬ್ಬರದು ಒಪ್ಪೊತ್ತಿನ ಊಟಕ್ಕೆ ಪರದಾಟ.

    ಪ್ರಕೃತಿಯ ಸೌಂದರ್ಯದ ಮುಕುಟವಾಗಿದ್ದ ಕೊಡಗಿನಲ್ಲಿ ಈಗ ನರಕ ದರ್ಶನ. ಜಲಪ್ರಳಯದ ರೌದ್ರ ನರ್ತನಕ್ಕೆ ಕೊಡಗಿನಲ್ಲಿ ಈಗ ಸಿರಿವಂತ ಕೋಟ್ಯಾಧಿಪತಿಯೂ ಏನು ಇಲ್ಲದ ಬಡವರು ಒಂದೇ. ಮಹಾಮಳೆಗೇ ಇಡೀ ಆಸ್ತಿಪಾಸ್ತಿ ಬದುಕು ಕೊಚ್ಚಿ ಹೋಗಿದೆ. ಇಂತದ್ದೆ ಕಣ್ಣೀರಿನ ಕಥೆಗೆ ಸಾಕ್ಷಿಯಾಯ್ತು ಇಂದು ಬೆಂಗಳೂರಿನ ಕೊಡವ ಸಮಾಜ. ಕೋಟ್ಯಾಧಿಪತಿಯಾಗಿದ್ದ ವ್ಯಕ್ತಿಯೊಬ್ಬರು ಪ್ರವಾಹಕ್ಕೆ ಬೀದಿಗೆ ಬಂದಿದ್ದು ಪಬ್ಲಿಕ್ ಟಿವಿ ಮುಂದೆ ಕಣ್ಣೀರಿನ ಕಥೆ ಬಿಚ್ಚಿಟ್ಟಿದ್ದು ಹೀಗೆ.

    ನನ್ನ ಸೈಜ್ ದು ಪ್ಯಾಂಟ್ ಇದ್ದರೆ ಕೊಡಿ. ಬಟ್ಟೆ ಏನಿಲ್ಲ ಅಂತಾ ಅಲ್ಲಿರುವ ಬಾಕ್ಸ್ ಗಳನ್ನು ತಡಕಾಡುತ್ತಿದ್ದರು ಕಾಕೇರ ಉತ್ತಯ್ಯ. ಅಲ್ಲೇ ಪಕ್ಕದಲ್ಲಿದ್ದ ಮಗಳು ಸುಶೀಲ ತಂದೆಯ ತಡಕಾಟ ನೋಡಿ ಕಣ್ಣಿರಾದರು. ಮೂವತ್ತು ಎಕ್ರೆ ಜಮೀನು ಇತ್ತು. ಅದೆಷ್ಟೋ ಜನರಿಗೆ ಭೂಮಿಯನ್ನು ದಾನ ಕೊಟ್ಟ ಕೈ. ಈಗ ಒಂದು ಪ್ಯಾಂಟಿಗಾಗಿ ಬಟ್ಟೆ ತುಂಡಿಗಾಗಿ ಕೈ ಚಾಚಿದ್ದಾರೆ ಅಂತಾ ಕಣ್ಣೀರು ಹಾಕಿದರು.

    ತಂದೆಗೆ ಒಟ್ಟು ಮೂವತ್ತು ಎಕರೆ ಜಮೀನು ಇತ್ತು. ಅಂದು ಕೋಟ್ಯಾಧಿಪತಿಯಾಗಿದ್ದ ನಮ್ಮಪ್ಪ, ಅದೆಷ್ಟೋ ಜನರಿಗೆ ಆಸ್ತಿ ಕೊಟ್ಟಿದ್ದರು. ಆದರೆ ಈಗ ಒಂದು ಪ್ಯಾಂಟು ಶರ್ಟಿಗಾಗಿ ಕೊಡವ ಸಮಾಜದ ಮುಂದೆ ಕೈ ಚಾಚಿದ್ದಾರೆ. ಬೆಟ್ಟಗುಡ್ಡಗಳು ಕುಸಿದು ಹೊಳೆಗಳೆಲ್ಲವೂ ತುಂಬಿ ಹರಿಯುತ್ತಿತ್ತು. ನಮ್ಮ ಮನೆ ಕಣ್ಣೆದುರೆ ನೆಲಸಮವಾಗಿದೆ. ಆಸ್ತಿಪಾಸ್ತಿ ಕೊಚ್ಚಿ ಹೋಗಿದೆ. ತೋಟಗಳೆಲ್ಲವೂ ಕುಸಿದು ಬೀಳುತ್ತಿದ್ದವು. ಕೋಟಿಗಟ್ಟಲೇ ಆಸ್ತಿ ಇದ್ದಿದ್ದು, ಮಳೆಯಲ್ಲಿ ಕೊಚ್ಚಿ ಹೋಗಿದೆ ಎಂದು ಸುಶೀಲ ನೋವು ತೋಡಿಕೊಂಡರು.

    ಕಾಕೇರ ಉತ್ತಯ್ಯ ಮಾತನಾಡಿ, ಊರಿನಿಂದ ಹಾಕಿರುವ ಬಟ್ಟೆಯಲ್ಲಿ ಬಂದಿದ್ದೇವೆ. ಮಕ್ಕಳು ಒಬ್ಬರ ಮುಂದೆ ಕೈಚಾಚದೇ ಇರಲಿ ಎಂದು ಹಗಲು ರಾತ್ರಿ ಎನ್ನದೇ ದುಡಿದಿದ್ದು ಎಲ್ಲ ನಾಶವಾಗಿದೆ. ಕೊಡಗಿನಲ್ಲಿ ಕಾಲೂರು ಎನ್ನುವ ಸ್ಥಳವೇ ಇಲ್ಲದಂತಾಗಿದೆ. ಕೋಟ್ಯಾಧಿಪತಿ ಯಾಗಿದ್ದ ನಾವು ಪ್ರಕೃತಿಯ ಆಟದ ಮುಂದೆ ಬಿಕರಿಯಾಗಿದ್ದೇವೆ. ಅಲ್ಲಿ ಹೋದ್ರು ನಮ್ಮ ಹಳೆಯ ಜಮೀನು ಪತ್ತೆ ಹಚ್ಚಲು ಸಾಧ್ಯವೇ ಇಲ್ಲ ಎಂದು ಕಣ್ಣೀರಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv