Tag: Kodagu floods

  • ನಿರಂತರ ಮಳೆಯಿಂದ ಕೊಡಗಿನಲ್ಲಿ ಮತ್ತೆ ಭೂಕುಸಿತದ ಭೀತಿ

    ನಿರಂತರ ಮಳೆಯಿಂದ ಕೊಡಗಿನಲ್ಲಿ ಮತ್ತೆ ಭೂಕುಸಿತದ ಭೀತಿ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಕೆಲ ದಿನಗಳಿಂದ ಕೊಂಚ ಮಟ್ಟಿಗೆ ಬಿಡುವು ನೀಡಿದ ಮಳೆ ಕಳೆದ ಒಂದುವಾರದಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿದೆ. ಇದರಿಂದ ಜಿಲ್ಲೆಯ ಜನರು ಮತ್ತೆ ಹೈರಾಣಾಗುತ್ತಿದ್ದಾರೆ. ಈ ನಡುವೆ 2018 ರಲ್ಲಿ ಪ್ರಕೃತಿ ವಿಕೋಪ ಉಂಟಾಗಿದ್ದ ಗ್ರಾಮಗಳಲ್ಲಿ ಮತ್ತೆ ಭೂಕುಸಿತ ಉಂಟಾಗುವ ಲಕ್ಷಣಗಳು ಗೋಚರಿಸುತ್ತಿದ್ದು ಗ್ರಾಮೀಣ ಭಾಗದ ಜನರು ಮತ್ತೆ ಆತಂಕಕ್ಕೆ ಒಳಗಾಗುತ್ತಿದ್ದಾರೆ.

    ಬೆಟ್ಟ ಗುಡ್ಡದ ನಿವಾಸಿಗಳಿಗೆ ಭೂಕುಸಿತದ ಭೀತಿ
    ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಮಳೆ ಆರ್ಭಟ ಹೆಚ್ಚಾಗುತ್ತಿದೆ. ಜಿಲ್ಲೆಯ ಜನರು ಅಕ್ಷರಶಃ ತತ್ತರಿಸಿ ಹೋಗುತ್ತಿದ್ದಾರೆ. ಈ ನಡುವೆ ಹಳ್ಳ-ಕೊಳ್ಳ ನದಿ ತೊರೆಗಳಲ್ಲಿ ನಿಧಾನವಾಗಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಹೀಗಾಗಿ ಬೆಟ್ಟಗುಡ್ಡದ ನಿವಾಸಿಗಳಿಗೆ ಭೂಕುಸಿತದ (Landslides) ಭೀತಿ ಮತ್ತೆ ಕಾಡುತ್ತಿದೆ. ಇದನ್ನೂ ಓದಿ: ಕೊಡಗಿನಲ್ಲಿ ನಿರಂತರ ಮಳೆ – ಭೂಕುಸಿತ ಆತಂಕದ ನಡುವೆಯೇ ಜನರ ಜೀವನ

    ಹೌದು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಿರುದಾಲೆ ಗ್ರಾಮದಲ್ಲಿ 2018-19ರಲ್ಲಿ ಭೀಕರ ಪ್ರವಾಹ, ಭೂಕುಸಿತ ಸಂಭವಿಸಿತ್ತು. ಅಂದು ಇಲ್ಲಿನ ಜನ ಮನೆ ಮಠಗಳನ್ನ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ತೆರಳಿ ಜೀವ ಉಳಿಸಿಕೊಂಡಿದ್ರು. ಪ್ರತಿ ಮಳೆಗಾಲದ ಸಂದರ್ಭದಲ್ಲಿಯೂ ಇಲ್ಲಿನ ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಬದುಕು ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ನಿರಂತರ ಮಳೆಯಾಗುತ್ತಿರುವುದರಿಂದ ಈ ಆತಂಕ ಇನ್ನೂ ಹೆಚ್ಚಾಗಿದೆ. ಇದನ್ನೂ ಓದಿ: ಕೊಡಗಿನಲ್ಲಿ ನಿರಂತರ ಗಾಳಿ ಮಳೆಯಿಂದ ಹರಡುತ್ತಿದೆ ವೈರಲ್ ಫೀವರ್‌ – ಒಂದೇ ತಿಂಗಳಲ್ಲಿ 3,000 ಕೇಸ್‌

    ಈ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳ ಕೆಲ ಜಾಗಗಳಲ್ಲಿ ಜಲ ಹಾಗೂ ಸಣ್ಣಪುಟ್ಟ ಪ್ರಮಾಣದಲ್ಲಿ ಭೂಕುಸಿತ ಉಂಟಾಗುತ್ತಿದೆ. ಹೀಗಾಗಿ ಇಲ್ಲಿನ ಜನರು 2018ರ ಕರಾಳ ದಿನಗಳು ಮತ್ತೆ ಮರುಕಳಿಸುತ್ತಾ ಅನ್ನೋ ಆತಂಕದಲ್ಲೇ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಕೌನ್ಸಿಲಿಂಗ್‌ ಮೂಲಕ ಪಿಡಿಒ ವರ್ಗಾವಣೆ ಪ್ರಕ್ರಿಯೆ: ಪ್ರಿಯಾಂಕ್ ಖರ್ಗೆ

  • ಕೊಡಗಿನಲ್ಲಿ ನಿರಂತರ ಮಳೆ – ಭೂಕುಸಿತ ಆತಂಕದ ನಡುವೆಯೇ ಜನರ ಜೀವನ

    ಕೊಡಗಿನಲ್ಲಿ ನಿರಂತರ ಮಳೆ – ಭೂಕುಸಿತ ಆತಂಕದ ನಡುವೆಯೇ ಜನರ ಜೀವನ

    – 2018ರ ಪ್ರವಾಹ, ಭೂಕುಸಿತದ ಆತಂಕ

    ಮಡಿಕೇರಿ: ಕೊಡಗು (Kodagu) ಜಿಲ್ಲೆಯಲ್ಲಿ ಮಳೆಗಾಲ ಆರಂಭವಾಯಿತ್ತೆಂದರೆ ಎಲ್ಲಿ, ಯಾವಾಗ, ಯಾವ ಬೆಟ್ಟ ಕುಸಿಯುತ್ತೋ ಅನ್ನೋ ಆತಂಕ ಶುರುವಾಗುತ್ತೆ. ಎಲ್ಲೇ ಭೂಕುಸಿತ ಸಂಭವಿಸಿದ್ರೂ ಇಲ್ಲಿನ ಜನಕ್ಕೆ 2018ರ ಪ್ರವಾಹವೇ ಕಣ್ಣಮುಂದೆ ಬಂದು ಹೋಗುತ್ತೆ. ಇದೀಗ ನಿರಂತರ ಮಳೆಯಿಂದ (Heavy Rain) ಮತ್ತೆ ಜನರಲ್ಲಿ ಗುಡ್ಡ ಕುಸಿತದ ಆತಂಕ ಶುರುವಾಗಿದೆ.

    Kodagu

    ಹೌದು. ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಇರುವ ಮಲೆತಿರಿಕೆ ಅಯ್ಯಪ್ಪ ಬೆಟ್ಟದಲ್ಲಿ 2019ರಲ್ಲಿಯೇ ಹಲವೆಡೆ ದೊಡ್ಡ ದೊಡ್ಡ ಬಿರುಕುಗಳು ಮೂಡಿದ್ದವು. ಜೊತೆಗೆ ಹಲವೆಡೆ ಚಿಕ್ಕಪುಟ್ಟ ಭೂಕುಸಿತಗಳು (Landslides) ಅಂಭವಿಸಿವೆ. ವಿಪರ್ಯಾಸವೆಂದರೆ ಈ ಬೆಟ್ಟದಲ್ಲಿ ನೂರಾರು ಕುಟುಂಬಗಳು 35 ರಿಂದ 40 ವರ್ಷಗಳಿಂದ ಮನೆ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿವೆ. ಇದನ್ನೂ ಓದಿ: 104 ಸಂಭವನೀಯ ಭೂಕುಸಿತ, ಪ್ರವಾಹ ಪ್ರದೇಶಗಳ ಗುರುತು – 2,995 ಕುಟುಂಬಗಳ ಸ್ಥಳಾಂತರಕ್ಕೆ ಪ್ಲ್ಯಾನ್‌

    ಕಳೆದ 4-5 ವರ್ಷಗಳ ಹಿಂದೆಯೇ ಬೆಟ್ಟದಲ್ಲಿ ಸಾಕಷ್ಟು ಬಿರುಕುಗಳು ಮೂಡಿದ್ದರಿಂದ ಅಲ್ಲಿನ ಎಲ್ಲಾ ನಿವಾಸಿಗಳನ್ನು ಮಳೆಗಾಲದಲ್ಲಿ ಸ್ಥಳಾಂತರ ಮಾಡಿ ನಿರಾಶ್ರಿತರ ಶಿಬಿರಗಳಿಗೆ ಕಳುಹಿಸಲಾಗಿತ್ತು. ಈ ಕುಟುಂಬಗಳ ಒತ್ತಾಯದ ಮೇರೆಗೆ ವಿರಾಜಪೇಟೆ ಪಕ್ಕದಲ್ಲೇ ಇರುವ ಅಂಬಟ್ಟಿ ಎಂಬಲ್ಲಿ ನಿವೇಶನ ಹಂಚಲು ಅಂದಿನ ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಹಾಗೇ ಹೇಳಿ 4-5 ವರ್ಷಗಳೇ ಕಳೆದರೂ ಇಂದಿಗೂ ಆ ಕೆಲಸ ಆಗಿಲ್ಲ. ಇದನ್ನೂ ಓದಿ: ಮುಂಗಾರು ಅಬ್ಬರ – ಕಾವೇರಿ ನದಿಯಲ್ಲಿ ಪಿಂಡ ಪ್ರದಾನ ನಿಷೇಧ

    ಹೀಗಾಗಿ ಭಾರೀ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಇಲ್ಲಿನ ಬೆಟ್ಟದ ನಿವಾಸಿಗಳು ಆತಂಕಗೊಂಡಿದ್ದಾರೆ. ಈ ಬಾರಿ ಕಾಳಜಿ ಕೇಂದ್ರಕ್ಕೆ ಹೋಗಲ್ಲ, ಏನೇ ಆದ್ರೂ ಇಲ್ಲೇ ಇರುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಮಳೆಯಬ್ಬರ – ರಾಜ್ಯದ ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ

  • ಕೊಡಗಿನಲ್ಲಿ ಈ ಬಾರಿಯೂ ಪ್ರವಾಹ, ಭೂಕುಸಿತದ ಆತಂಕ – 2,965 ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ!

    ಕೊಡಗಿನಲ್ಲಿ ಈ ಬಾರಿಯೂ ಪ್ರವಾಹ, ಭೂಕುಸಿತದ ಆತಂಕ – 2,965 ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ!

    ಮಡಿಕೇರಿ: ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ಪ್ರತಿ ಮಳೆಗಾಲ ಬಂದ್ರೆ ಸಾಕು ಜಿಲ್ಲೆಯ ಜನರಲ್ಲಿ ಅದೇನೋ ಆತಂಕ ಮನೆಮಾಡಿಬಿಡುತ್ತೆ. ಅದರಲ್ಲೂ ಇದೀಗ ಜಿಲ್ಲಾಡಳಿತ ನೀಡಿರೋ ಆ ಸ್ಥಳಗಳಲ್ಲಿ ಮತ್ತೆ ಪ್ರವಾಹ, ಭೂಕುಸಿತ ಉಂಟಾಗುವ ಆತಂಕ ಎದುರಾಗಿದೆ. ಅದಕ್ಕಾಗಿ ಜಿಲ್ಲಾಡಳಿತ ಸೂಕ್ಷ್ಮ ಪ್ರದೇಶಗಳೆಂದು ಗುರುತು ಮಾಡಿರುವ ಸ್ಥಳದಿಂದ ಜನರನ್ನ ಸುರಕ್ಷಿತ ಸ್ಥಳ ಮತ್ತು ಕಾಳಜಿ ಕೇಂದ್ರಗಳಿಗೆ ಕಳುಹಿಸಲು ತಯಾರಿ ನಡೆಸಿದೆ.

    ಹೀಗಾಗಿ ಮುಂಬರುವ ಮಳೆಗಾಲದಲ್ಲಿ ಗುಡ್ಡಗಾಡು ಜನರಿಗೆ ಮತ್ತೆ 2018-19ರ ಆ ಕರಾಳ ದಿನಗಳ ಜೊತೆಗೆ ಮಳೆಯ ಆತಂಕವೂ ಎದುರಾಗಿದೆ.

    ಕೊಡಗು ಜಿಲ್ಲೆಯಲ್ಲಿ ಸದ್ಯ 45 ಕಡೆ ಸಂಭವನೀಯ ಭೂಕುಸಿತ ಹಾಗೂ 44 ಕಡೆಯಲ್ಲಿ ಸಂಭವನೀಯ ಜಲಪ್ರವಾಹದ ಸ್ಥಳಗಳನ್ನು ಜಿಲ್ಲಾಡಳಿತ ಗುರುತುಮಾಡಿದೆ. ಹೀಗಾಗಿ, ಕೊಡಗಿನ ಜನತೆ ಆತಂಕದಲ್ಲಿಯೇ ಜೀವನ ಕಳೆಯುವಂತಾಗಿದೆ.

    ಜಿಲ್ಲೆಯ 5 ತಾಲೂಕುಗಳ 10 ಹೋಬಳಿಯ 100 ಕಡೆಯಲ್ಲಿ ಜಲಕಂಟಕ ಎದುರಾಗುವ ಸೂಚನೆ ನೀಡಿದೆ. 2018-19ರಲ್ಲಿ ಭೀಕರ ಜಲ ಪ್ರವಾಹ ಉಂಟಾಗಿ ಬೆಟ್ಟ, ರಸ್ತೆಗಳು ಕುಸಿದು ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡ ಜನ ನಿರಾಶ್ರಿತರ ಕೇಂದ್ರದಲ್ಲಿ ವಾಸಮಾಡಿದ್ದರು. ಆ ಭೀತಿ ಜನರಲ್ಲಿ ಮಾಸುವ ಮುನ್ನವೇ ಜಿಲ್ಲಾಡಳಿತ ಮತ್ತೆ ಪ್ರಕೃತಿ ವಿಕೋಪದ ಮುನ್ಸೂಚನೆ ನೀಡಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.

    ಪೂರ್ವ ಮುಂಗಾರಿನಲ್ಲಿಯೇ ಹೆಚ್ಚು ಮಳೆ ಸುರಿಯುತ್ತಿದ್ದು, ಒಂದು ರೀತಿಯ ಭಯ ಸೃಷ್ಟಿಯಾಗಿದೆ. ಇನ್ನು ಕೆಲವು ದಿನಗಳಲ್ಲಿ ಮುಂಗಾರು ಜಿಲ್ಲೆಗೆ ಪ್ರವೇಶಿಸಲಿದ್ದು, ಜಿಲ್ಲೆಗೆ ಅಪಾಯ ತಂದೊಡ್ಡುತ್ತಾ ಎನ್ನುವ ಭೀತಿಯಲ್ಲಿದ್ದಾರೆ. ಮಳೆಗಾಲದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ ನಿಭಾಯಿಸಲು ಈಗಾಗಲೇ ಕೊಡಗು ಜಿಲ್ಲಾಡಳಿತ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳ ಪಟ್ಟಿ ಮಾಡಿಕೊಂಡು ಅಗತ್ಯ ಸಿದ್ಧತೆ ಮಾಡಿಕೊಂಡಿದೆ‌.

    ಇನ್ನೂ 2018 ರಿಂದ ನಿರಂತರವಾಗಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ. ಭೂಕುಸಿತ ಪ್ರವಾಹ ಜಲಸ್ಫೋಟ. ಸರಣಿ ಭೂಕಂಪಗಳು ಕಳೆದ ವರ್ಷದವರೆಗೂ ಅಲ್ಲಲ್ಲಿ ಭೂಕುಸಿತ ರಸ್ತೆ ಬಿರುಕು ಭೂ ಕುಸಿತ ಉಂಟಾಗುವ ಸ್ಥಳಗಳಲ್ಲಿ ವಾಸ ಮಾಡುವ ಜನರಿಗೆ ನೋಟಿಸ್ ಕೊಟ್ಟಿರುವುದನ್ನು ಗಮನಿಸಿದೇವೆ‌. ಈ ಬಾರಿಯೂ ಅದೇ ಆತಂಕ ಎದುರಾಗಿದೆ.

  • ಸಂತ್ರಸ್ತರಿಗೆ 42 ಎಕ್ರೆ ಜಾಗದಲ್ಲಿ ಸೂರು: ಕೊಡಗು ಪುನರ್ ನಿರ್ಮಾಣದ ಪ್ಲಾನ್ ತೆರೆದಿಟ್ಟ ಖಾದರ್

    ಸಂತ್ರಸ್ತರಿಗೆ 42 ಎಕ್ರೆ ಜಾಗದಲ್ಲಿ ಸೂರು: ಕೊಡಗು ಪುನರ್ ನಿರ್ಮಾಣದ ಪ್ಲಾನ್ ತೆರೆದಿಟ್ಟ ಖಾದರ್

    ಬೆಂಗಳೂರು: ಕೊಡಗು ಪುನರ್ ನಿರ್ಮಾಣದ ಜವಾಬ್ದಾರಿ ಸರ್ಕಾರ ಮೇಲಿದ್ದು, ಈ ಕುರಿತ ನೀಲಿ ನಕ್ಷೆ ಸಿದ್ಧವಾಗಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.

    ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಳೆಯಿಂದಾಗಿ ಕೊಡಗು, ದಕ್ಷಿಣ ಕನ್ನಡದಲ್ಲಿ ಭಾರೀ ಅನಾಹುತವಾಗಿದೆ. ಕೊಡಗು ಅನಾಹುತ ಸರಿಪಡಿಸಲು, ಪುನರ್ ನಿರ್ಮಾಣ ಮಾಡುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈಗಾಗಲೇ ಪುನರ್ ನಿರ್ಮಾಣದ ನೀಲಿ ನಕ್ಷೆ ಸಿದ್ಧವಾಗಿದ್ದು, ವರದಿ ಕೂಡಾ ಸಿದ್ಧವಾಗಿದೆ. ಈ ಕುರಿತು ಸಿಎಂ ಕುಮಾರಸ್ವಾಮಿ ಅವರಿಗೆ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಜೋಡುಪಾಲ ದುರಂತಕ್ಕೂ ಮುನ್ನ ಮೂಕ ಪ್ರಾಣಿಗಳಿಂದ ಸಿಕ್ಕಿತ್ತು ಮುನ್ಸೂಚನೆ!

    ಕೊಡಗಿನ ಜಿಲ್ಲಾಧಿಕಾರಿಗಳ ವರದಿ ಅನ್ವಯ 758 ಕುಟುಂಬಗಳು ನಿರ್ಗತಿಕರಾಗಿವೆ. ಇವರಿಗೆ ಮನೆ ಕಟ್ಟಿ ಕೊಡಿಸುವ ಜವಾಬ್ದಾರಿ ವಸತಿ ಇಲಾಖೆ ಕರ್ತವ್ಯವಾಗಿದೆ. ಈಗಾಗಲೇ ಮನೆ ನಿರ್ಮಾಣಕ್ಕೆ 42 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಇದರಲ್ಲಿ 24 ಎಕರೆ ಜಾಗಕ್ಕೆ ಸರ್ವೆ ನಂಬರ್ ಹಾಕಲಾಗಿದೆ. ಮಾದರಿ ಮನೆ ನಿರ್ಮಾಣ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತದೆ.  ಮನೆ ಕಳೆದುಕೊಂಡ ಎಲ್ಲರಿಗೂ ಒಂದೇ ಮಾದರಿಯ ಮನೆ ನಿರ್ಮಿಸಿ ಕೊಡಲಾಗುತ್ತದೆ. ಮನೆ ನಿರ್ಮಾಣಕ್ಕೆ 6 ರಿಂದ 7 ತಿಂಗಳ ಸಮಯದ ಅವಕಾಶ ಬೇಕಾಗುತ್ತದೆ. ಎರಡು ಮೂರು ಮನೆ ಮಾದರಿಗಳು ರೆಡಿ ಇದ್ದು ಸಿಎಂ ಜೊತೆ ನಿರ್ಧಾರ ಮಾಡಿ ಯಾವ ಮನೆ ಮಾದರಿ ಎನ್ನುವುದನ್ನು ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.

    ಮನೆ ನಿರ್ಮಾಣ ಮಾಡಲು ಸ್ಥಳಾವಕಾಶ ಇರುವ ಜನರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರ ಹಣ ಸಹಾಯ ಮಾಡುತ್ತದೆ. ಹಾನಿಯಾದ ಮನೆ ಸರಿಪಡಿಸಲೂ ಕೂಡ ಸರ್ಕಾರ ಹಣ ಸಹಾಯ ಮಾಡುತ್ತದೆ. ಈ ಎಲ್ಲಾ ಅಂಶಗಳ ವರದಿ ಸಿದ್ಧವಿದ್ದು ಸಿಎಂ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುವುದಾಗಿ ವಿವರಿಸಿದರು. ಇದನ್ನೂ ಓದಿ: ಕೋಟ್ಯಾಧಿಪತಿಯಾಗಿದ್ದ ತಂದೆ ಒಂದು ಪ್ಯಾಂಟು ಶರ್ಟಿಗೆ ಕೈ ಚಾಚಿದ್ದನ್ನು ಕಂಡು ಕಣ್ಣೀರಿಟ್ಟ ಮಗಳು!

    ಸಿಎಂ ಜೊತೆ ಚರ್ಚಿಸಿ ಅಗತ್ಯ ಬಿದ್ದರೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡುತ್ತೇವೆ. ಎಲ್ಲರೂ ಸಂತೋಷದಿಂದ ಇರುವಂತಹ ಮಾದರಿ ಮನೆ ನಿರ್ಮಾಣ ಮಾಡುತ್ತೆವೆ ಎಂದು ಆಶ್ವಾಸನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಶ್ಚಿಮ ಘಟ್ಟಗಳ ಮಧ್ಯೆ ಬಿರುಕು, ಬೃಹತ್ ಬೆಟ್ಟಗಳಲ್ಲಿ ಜಲಸ್ಫೋಟ..!

    ಪಶ್ಚಿಮ ಘಟ್ಟಗಳ ಮಧ್ಯೆ ಬಿರುಕು, ಬೃಹತ್ ಬೆಟ್ಟಗಳಲ್ಲಿ ಜಲಸ್ಫೋಟ..!

    -ಬಾಳುಗೋಡು ಗ್ರಾಮದ 30ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರ

    ಮಂಗಳೂರು: ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಭಾರೀ ದುರಂತದ ಲಕ್ಷಣಗಳು ಕಂಡುಬಂದಿವೆ. ಶಿರಾಡಿ, ಸಂಪಾಜೆ ಘಾಟ್ ಹೆದ್ದಾರಿಯ ಕುಸಿತದ ಬಳಿಕ ಈಗ ಬಿಸ್ಲೆ ಮತ್ತು ಕುದುರೆಮುಖ ಹೆದ್ದಾರಿಯ ಉದ್ದಕ್ಕೂ ಭಾರೀ ಭೂಕುಸಿತ ಸಂಭವಿಸಿದೆ. ಇತ್ತೀಚೆಗಷ್ಟೆ ಕಾಂಕ್ರೀಟ್ ಆಗಿದ್ದ ಬಿಸ್ಲೆ ಘಾಟ್ ರಾಜ್ಯ ಹೆದ್ದಾರಿ ಕುಕ್ಕೆ ಸುಬ್ರಹ್ಮಣ್ಯದಿಂದ ಸಕಲೇಶಪುರಕ್ಕೆ ಸಂಪರ್ಕಿಸುವ ರಸ್ತೆ. ಬಿಸ್ಲೆ ಘಾಟ್ ಉದ್ದಕ್ಕೂ ಜಲ ಸ್ಫೋಟಗೊಂಡು ಬೃಹತ್ ಮರಗಳು ತರಗೆಲೆಗಳಂತೆ ನೀರಿನ ರಭಸಕ್ಕೆ ತೇಲಿ ಬರುತ್ತಿವೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೂಜುಮಲೆ ಎಂಬಲ್ಲಿ ಸೇತುವೆಯೊಂದು ಕೊಚ್ಚಿಹೋಗಿದೆ. ಮುಂಜಾಗ್ರತಾವಾಗಿ ಬಾಳುಗೋಡು, ಕಲ್ಮಕಾರು, ಮರ್ಕಂಜ ಗ್ರಾಮಗಳ 30ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಭಾರೀ ದುರಂತ ಸಂಭವಿಸಿದ್ದ ಜೋಡುಪಾಲದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಜೋಡುಪಾಲ ಆಸುಪಾಸಿನ ಗ್ರಾಮಗಳ 700ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

    ಕುದುರೆಮುಖ- ಎಸ್ ಕೆ ಬಾರ್ಡರ್ ಹೆದ್ದಾರಿಯೂ ಕುಸಿದಿದ್ದು, ಮಂಗಳೂರು- ಬೆಂಗಳೂರು ರಸ್ತೆ ಸಂಚಾರವೇ ಕಷ್ಟವಾಗಿದೆ. ಏಕೈಕ ಹೆದ್ದಾರಿ ಆಗಿರುವ ಚಾರ್ಮಾಡಿ ಘಾಟಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ಸಂಪರ್ಕ ಕಷ್ಟವಾಗಿದೆ. ಇತ್ತ ಭಾರಿ ಮಳೆ ಪರಿಣಾಮ ಸಕಲೇಶಪುರ ಬಳಿಯ ವನಗೂರು, ಸೋಮವಾರಪೇಟೆ, ಹೆಗ್ಗದ್ದೆ ಕಡಗರವಳ್ಳಿ ರಸ್ತೆಗಳು ಭೂಕುಸಿತದಿಂದಾಗಿ ಕಡಿತಗೊಂಡಿವೆ. ಝರಿ ಜಲಪಾತಗಳು ತುಂಬಿ ಹರಿಯುತ್ತಿದ್ದು ಮಣ್ಣು ಸಡಿಲವಿರುವ ಸ್ಥಳಗಳಲ್ಲಿ ಭೂಕುಸಿತವಾಗುತ್ತಿದೆ. ಹಾಸನದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಹಾರಂಗಿಯಿಂದ ನೀರು ಕಡಿಮೆ ಬಿಡುಗಡೆ ಮಾಡಿದ ಪರಿಣಾಮ ಜಲಪ್ರವಾಹ ತಗ್ಗಿದೆ. ರಸ್ತೆ ಸಂಚಾರ ಕೂಡ ಸಹಜ ಸ್ಥಿತಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv