Tag: kodachadri

  • ‌ಪ್ರಕೃತಿ ಸೃಷ್ಟಿಸಿದ ಸ್ವರ್ಗ – ಪಶ್ಚಿಮ ಘಟ್ಟದ ಚಾರಣಸ್ನೇಹಿ ಬೆಟ್ಟ ಕೊಡಚಾದ್ರಿ 

    ‌ಪ್ರಕೃತಿ ಸೃಷ್ಟಿಸಿದ ಸ್ವರ್ಗ – ಪಶ್ಚಿಮ ಘಟ್ಟದ ಚಾರಣಸ್ನೇಹಿ ಬೆಟ್ಟ ಕೊಡಚಾದ್ರಿ 

    ಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಸುರಿಯುವ ಮಳೆಯ ಅಬ್ಬರದ ನಡುವೆ ಪ್ರಕೃತಿಯನ್ನು ನೋಡುವುದು ಮತ್ತು ಅನುಭವಿಸುವುದೇ ಒಂದು ಖುಷಿ. ನಗರದಲ್ಲಿ ಒತ್ತಡದ ಜೀವನದಿಂದ ತತ್ತರಿಸಿರುವ ಅನೇಕ ಮಂದಿ ಸ್ವಲ್ಪ ಮಟ್ಟಿಗೆ ಒತ್ತಡದಿಂದ ಮುಕ್ತಿಹೊಂದಿ  ಮನಸ್ಸು ಸಂತೃಪ್ತಿಗೊಳಿಸುವ ಸಲುವಾಗಿ ಪಶ್ಚಿಮ ಘಟ್ಟಗಳತ್ತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದೀಗ ನಿರಂತರವಾಗಿ ಸುರಿದ ಮಳೆಯಿಂದ ಪಶ್ಚಿಮ ಘಟ್ಟಗಳಲ್ಲಿನ ಗಿರಿಶಿಖರಗಳು ಹಚ್ಚ ಹಸಿರಿನಿಂದ ಎಲ್ಲರ ಕಣ್ಮನ ಸೆಳೆಯುತ್ತಿವೆ. ಚಾರಣಿಗರ ಪಾಲಿಗೆ ಸ್ವರ್ಗವಾಗಿ ಮಾರ್ಪಟ್ಟಿದೆ. ಈ ಗಿರಿಶಿಖರಗಳ ಪೈಕಿ ಕೊಡಚಾದ್ರಿ (Kodachadri) ಬೆಟ್ಟವೂ ಒಂದು. 

    ಕೊಡಚಾದ್ರಿ ಬೆಟ್ಟ ಕರ್ನಾಟಕದ (Karnataka) ಅತ್ಯಂತ ಎತ್ತರದ ಗಿರಿಶಿಖರಗಳಲ್ಲಿ ಒಂದು. ಪಶ್ಚಿಮ ಘಟ್ಟದ ವಿಶೇಷ ಸೊಬಗು, ಟ್ರೆಕ್ಕಿಂಗ್‌ (Trekking) ಪ್ರಿಯರನ್ನು ಇಲ್ಲಿಗೆ ಕೈಬೀಸಿ ಕರೆಯುವಂತೆ ಮಾಡುತ್ತಿದೆ. ಕರಾವಳಿಗರು ಸೇರಿದಂತೆ ರಾಜ್ಯದ ವಿವಿಧೆಡೆ ಹಾಗೂ ಹೊರರಾಜ್ಯಗಳಿಂದಲೂ ಚಾರಣಿಗರು ಈ ಬೆಟ್ಟಕ್ಕೆ ಟ್ರೆಕ್ಕಿಂಗ್‌ ಬರುತ್ತಾರೆ. ಕಾಡಿನ ಮಧ್ಯೆ ನಡೆದಾಡುತ್ತಾ, ಜಲಪಾತಗಳ ಸೌಂದರ್ಯ ಸವಿಯುತ್ತಾ, ಪ್ರಕೃತಿಯ ಮಡಿಲಲ್ಲಿ ವಿಶ್ರಾಂತಿ ಪಡೆಯಲು ಇದು ಸೂಕ್ತ ಸಮಯ. ಹಾಗಿದ್ರೆ ಎಲ್ಲಿದೆ ಈ ಕೊಡಚಾದ್ರಿ ಬೆಟ್ಟ? ತಲುಪುವುದು ಹೇಗೆ ಎಂಬ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    ಕೊಡಚಾದ್ರಿಯನ್ನು ನಿಸರ್ಗ ಸೃಷ್ಟಿಸಿದ ಸ್ವರ್ಗವೆಂದೂ ಕರೆಯಲಾಗುತ್ತದೆ. ಕೊಲ್ಲೂರು ಮೂಕಾಂಬಿಕೆಯ ತಪ್ಪಲಿನಲ್ಲಿರುವ ಕೊಡಚಾದ್ರಿ ಕೇವಲ ಚಾರಣ ತಾಣ ಮಾತ್ರವಲ್ಲ, ಇದೊಂದು ಆಧ್ಯಾತ್ಮಿಕ ಮಹತ್ವವನ್ನು ಹೊಂದಿರುವ ಸ್ಥಳವಾಗಿದೆ. ಕೊಡಚಾದ್ರಿ ಸಾಕಷ್ಟು ಧಾರ್ಮಿಕ ಹಾಗೂ ಆಧ್ಯಾತ್ಮಿಕ ರಹಸ್ಯಗಳನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ.

    ಕೊಡಚಾದ್ರಿ ಎಲ್ಲಿದೆ?
    ಕೊಡಚಾದ್ರಿ ಬೆಟ್ಟವು ಮಲೆನಾಡಿನ ಹೆಬ್ಬಾಗಿಲು ಎಂದೇ ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿದೆ. ಇದು ಸಮುದ್ರ ಮಟ್ಟದಿಂದ 1,343 ಮೀಟರ್ ಎತ್ತರದಲ್ಲಿದೆ ಮತ್ತು ಕರ್ನಾಟಕದ ಅತಿ ಎತ್ತರದ ಶಿಖರಗಳಲ್ಲಿ ಒಂದಾಗಿದೆ.ಕೊಡಚಾದ್ರಿ ಎನ್ನುವ ಪದವು ಎರಡು ಸಂಸ್ಕೃತ ಪದಗಳಾದ ಕೊಡಚ ಮತ್ತು ಆದ್ರಿ ಎನ್ನುವುದರಿಂದ ಸೃಷ್ಟಿಯಾಗಿದೆ. ಪುರಾತನ ಕಾಲದಲ್ಲಿ ಇಲ್ಲಿ ಜನರು ವಾಸಿಸುತ್ತಿದ್ದರು ಎನ್ನುವ ಊಹೆಗಳಿವೆ. ಆದಿಶಂಕರಾಚಾರ್ಯಾರು ಸುಮಾರು ಕ್ರಿ.ಶ 6 ಅಥವಾ 7ನೇ ಶತಮಾನದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಪುರಾವೆಗಳು ತಿಳಿಸುತ್ತವೆ.

    ಕೊಡಚಾದ್ರಿ ಬೆಟ್ಟ ಪ್ರಕೃತಿ ಪ್ರಿಯರಿಗೆ ಹಾಗೂ ಟ್ರೆಕ್ಕಿಂಗ್‌ ಮಾಡುವವರಿಗೆ ಹೇಳಿ ಮಾಡಿಸಿದ ಸ್ಥಳ. ಇಲ್ಲಿ ಚಾರಣ ಮಾಡುವ ಅನುಭವ ಒಂದಾದರೆ, ಜೀಪ್‌ನಲ್ಲಿ ತೆರಳುವುದು ಮತ್ತೊಂದು ಹೊಸ ಅನುಭವವನ್ನು ನೀಡುತ್ತದೆ. ಸ್ಥಳೀಯ ಗೈಡ್‌ಗಳು ಕೂಡ ಇಲ್ಲಿ ಮಾರ್ಗದರ್ಶನ ನೀಡುತ್ತಾರೆ. ಜೀಪ್‌ ಮೂಲಕ ತೆರಳಿದರೆ ಕೊಡಚಾದ್ರಿಯ ಸೊಬಗನ್ನು ಸವಿಯಲು 2 ಗಂಟೆಗಳ ಕಾಲ ಅವಕಾಶವಿರುತ್ತದೆ. ಅದೇ ಚಾರಣವಾದರೆ ಬೆಳಗ್ಗೆ 6ರಿಂದ ಸಂಜೆ 4 ಗಂಟೆಯವರೆಗೆ ಅವಕಾಶವಿರುತ್ತದೆ. ಇಲ್ಲಿನ ತಂಪಾದ ಗಾಳಿ, ಪ್ರಕೃತಿಯ ಸೌಂದರ್ಯ ನಮ್ಮ ಮನಸ್ಸಿನಲ್ಲಿರುವ ಚಿಂತೆಗಳನ್ನು ದೂರಮಾಡಿ ಹಿತವನ್ನು ನೀಡುತ್ತದೆ.

    ಕೊಡಚಾದ್ರಿ ಬೆಟ್ಟ ಸಾಲುಗಳು ಮೂಕಾಂಬಿಕ ವನ್ಯ ಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರುತ್ತದೆ. ಕೊಡಚಾದ್ರಿ ಬೆಟ್ಟದ ಮೇಲೆ ಸರ್ವಜ್ಞ ಪೀಠವೆಂಬ ಒಂದು ಸಣ್ಣ ದೇವಾಲಯವಿದೆ. ಈ ಜಾಗದಲ್ಲಿ ಭಗವಾನ್ ಶ್ರೀ ಶಂಕರಾಚಾರ್ಯರು ತಪಸ್ಸು ಮಾಡಿದ್ದರು ಎಂಬ ಪ್ರತೀತಿಯಿದೆ. ಸರ್ವಜ್ಞ ಪೀಠಕ್ಕಿಂತ 2 ಕಿ.ಮೀ ಮೊದಲು ಮೂಲ ಮೂಕಾಂಬಿಕ ದೇವಸ್ಥಾನವಿದೆ. ಸರ್ವಜ್ಞ ಪೀಠದಿಂದ ಮುಂದಕ್ಕೆ ಕಡಿದಾದ ಬೆಟ್ಟವನ್ನು ಇಳಿದರೆ ಚಿತ್ರಮೂಲ ಎಂಬ ಸ್ಥಳ ತಲುಪಬಹುದು. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ. ಈ ಜಾಗವು ಹಲವಾರು ಜಾತಿಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಕೊಡಚಾದ್ರಿ ಬೆಟ್ಟವು ದಟ್ಟವಾದ ಅರಣ್ಯ ಹಾಗು ಶೋಲ ಕಾಡುಗಳಿಂದ ಆವೃತವಾಗಿದೆ. 

    ಕೊಡಚಾದ್ರಿ ಬೆಟ್ಟದ  ಪ್ರಮುಖ ಆಕರ್ಷಣೆಗಳು:
    ಕೊಡಚಾದ್ರಿ ಪಶ್ಚಿಮ ಘಟ್ಟದ ವಿಹಂಗಮ ನೋಟಗಳನ್ನು ನೀಡುತ್ತದೆ.  ಮೋಡಗಳಿಲ್ಲದ ದಿನದಲ್ಲಿ ದೂರದ ಅರಬ್ಬೀ ಸಮುದ್ರವನ್ನು  ಮತ್ತು ಕೊಲ್ಲೂರು ಪಟ್ಟಣವನ್ನು ನೋಡಬಹುದಾಗಿದೆ. 

    ಗಣೇಶ ಗುಹೆ: ಸಂತ ಆದಿ ಶಂಕರಾಚಾರ್ಯರು ಧ್ಯಾನ ಮಾಡಿದ್ದಾರೆಂದು ಹೇಳಲಾಗುವ ಕೊಡಚಾದ್ರಿ ಬೆಟ್ಟದ ಮೇಲಿರುವ ಗಣೇಶ ಗುಹೆ ಮತ್ತು ಸರ್ವಜ್ಞ ಪೀಠ ನೋಡಲೇಬೇಕಾದ ತಾಣಗಳಾಗಿವೆ. 

    ಹಿಡ್ಲುಮನೆ ಜಲಪಾತ: ಚಾರಣ ಮಾಡಿ ಕೊಡಚಾದ್ರಿಯಿಂದ 5 ಕಿ.ಮೀ. ದೂರ ಇರುವ ಹಿಡ್ಲುಮನೆ ಜಲಪಾತ ನೋಡಬಹುದಾಗಿದೆ.

    ಸೂರ್ಯಾಸ್ತ: ಕೊಡಚಾದ್ರಿಯಿಂದ ಅರಬ್ಬೀ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡುವುದು ಒಂದು ಮರೆಯಲಾಗದ ಅನುಭವವಾಗಲಿದೆ. 

    ನಗರ ಕೋಟೆ (30 ಕಿ.ಮೀ), ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ (37 ಕಿ.ಮೀ), ಸಿಗಂದೂರು ದೇವಸ್ಥಾನ (51 ಕಿ.ಮೀ) ಮತ್ತು ಜೋಗ ಜಲಪಾತ (100 ಕಿ.ಮೀ) ಹತ್ತಿರದ ಆಕರ್ಷಣೆಗಳಾಗಿದ್ದು, ಮನಸ್ಸಿಗೆ ಮುದ ನೀಡುತ್ತವೆ.

    ಚಾರಣಕ್ಕೂ ಮೊದಲು ನೋಂದಣಿ:
    ಕೊಡಚಾದ್ರಿ ಸರ್ವಜ್ಞಪೀಠ, ಹಿಡ್ಲುಮನೆ ಜಲಪಾತ, ಆಗುಂಬೆ ಜೋಗಿಗುಂಡಿ ಜಲಪಾತ ಮತ್ತು ಸೀತಾನದಿ ಚಾರಣಕ್ಕೆ ಅವಕಾಶಗಳಿವೆ. ಈ ಸ್ಥಳಗಳಿಗೆ ಚಾರಣಕ್ಕೆ ಹೋಗಲು ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿರುವ ಅರಣ್ಯ ವಿಹಾರದಲ್ಲಿ ನೋಂದಾಯಿಸಿಕೊಳ್ಳಬೇಕು. ವೆಬ್‌ಸೈಟ್‌ನಲ್ಲಿ, ಅರಣ್ಯ ವಿಹಾರ ವಿಭಾಗದಲ್ಲಿ, ನಿಮಗೆ ಬೇಕಾದ ಚಾರಣವನ್ನು ಆಯ್ಕೆ ಮಾಡಿಕೊಳ್ಳಬಹುದು ಮತ್ತು ನೋಂದಾಯಿಸಿಕೊಳ್ಳಬಹುದು.

    ಕೊಡಚಾದ್ರಿ ತಲುಪುವುದು ಹೇಗೆ?
    ಕೊಡಚಾದ್ರಿ ತಲುಪಲು ಕೊಲ್ಲೂರು ಪಟ್ಟಣಕ್ಕೆ ಬರಬೇಕು. ಕೊಲ್ಲೂರು ಮಂಗಳೂರಿನಿಂದ (ಹತ್ತಿರದ ವಿಮಾನ ನಿಲ್ದಾಣ) 130 ಕಿ.ಮೀ ಮತ್ತು ಬೆಂಗಳೂರಿನಿಂದ 430 ಕಿ.ಮೀ ದೂರದಲ್ಲಿದೆ. ಮಂಗಳೂರು ಮತ್ತು ಕೊಲ್ಲೂರು ನಡುವೆ ದಿನವಿಡೀ ಹಲವಾರು ಖಾಸಗಿ ಬಸ್ಸುಗಳು ಚಲಿಸುತ್ತವೆ. ಬೈಂದೂರಿನ ಮೂಕಾಂಬಿಕಾ ರಸ್ತೆ ರೈಲು ನಿಲ್ದಾಣ ಕೊಲ್ಲೂರಿನಿಂದ 20 ಕಿ.ಮೀ ದೂರದಲ್ಲಿದೆ.

    ಕೊಲ್ಲೂರಿನಿಂದ ಪ್ರವಾಸಿಗರು ಕೊಡಾಚಾದ್ರಿ ತಲುಪಲು 4×4 ಜೀಪ್‌ಗಳನ್ನು ಬಾಡಿಗೆಗೆ ಪಡೆಯಬಹುದು. ಬೆಟ್ಟದ ರಸ್ತೆಯ ಕೊನೆಯ ಕೆಲವು ಕಿ.ಮೀ ತುಂಬಾ ಕಡಿದಾಗಿದ್ದು ಸಾಮಾನ್ಯ ವಾಹನಗಳಿಗೆ ಸೂಕ್ತವಲ್ಲ. ತಮ್ಮ 4×4 ಜೀಪ್‌ಗಳಲ್ಲಿ ಅನುಭವಿ ಸ್ಥಳೀಯ ಚಾಲಕರು ಮಾತ್ರ ಪ್ರವಾಸಿಗರನ್ನು ಬೆಟ್ಟದ ಮೇಲೆ ನಿಗದಿತ ಶುಲ್ಕ ಪಡೆದು ಕರೆದೊಯ್ಯುತ್ತಾರೆ. 

    ಅನುಭವಿ ಬೈಕು ಸವಾರರು ಸಹ ಬೆಟ್ಟದ ತುದಿಯವರೆಗೆ ಸವಾರಿ ಮಾಡುತ್ತಾರೆ. ಸ್ವಂತ ವಾಹನಗಳು ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಂಡು ಹತ್ತಿರದ ಪಟ್ಟಣವಾದ ನಿಟ್ಟೂರು ತಲುಪಿ ನಿಟ್ಟೂರಿನಿಂದ ಚಾರಣ ಅಥವಾ ಬಾಡಿಗೆ ಜೀಪಿನ ಮೂಲಕ ಕೊಡಚಾದ್ರಿ ತಲುಪಲು ಸಾಧ್ಯವಿದೆ. 

    ಕೊಡಚಾದ್ರಿ ಟ್ರೆಕ್ಕಿಂಗ್‌ಗೆ ಸೂಕ್ತ ಸಮಯ:
    ಸುರಕ್ಷತಾ ಕಾರಣಗಳಿಗಾಗಿ ಸ್ಥಳೀಯ ಮಾರ್ಗದರ್ಶಿಯನ್ನು ನೇಮಿಸಿಕೊಳ್ಳಲು ಮತ್ತು ಗುಂಪುಗಳಲ್ಲಿ ಚಾರಣ ಮಾಡಲು ಶಿಫಾರಸು ಮಾಡಲಾಗಿದೆ. ಮಳೆಗಾಲದಲ್ಲಿ ಇಂಬಳಗಳು ಮತ್ತು ಜಾರುವ ಹಾದಿಯ ಬಗ್ಗೆ ಎಚ್ಚರವಹಿಸುವುದು ಉತ್ತಮವಾಗಿದೆ. ಕೊಡಚಾದ್ರಿಗೆ ಭೇಟಿ ನೀಡಲು ಅಕ್ಟೋಬರ್‌ನಿಂದ ಮೇವರೆಗೆ ಉತ್ತಮ ಸಮಯ.  

    ತಂಗುವುದು ಎಲ್ಲಿ?
    ಮೂಲ ಮೂಕಾಂಬಿಕ ದೇವಸ್ಥಾನದ ಬಳಿ ಕರ್ನಾಟಕ ಲೋಕೋಪಯೋಗಿ ಇಲಾಖೆಯವರ ಅತಿಥಿ ಗೃಹವಿದೆ. ಇಲ್ಲಿ ಉಳಿಯಲು ಮೊದಲು ಅನುಮತಿ ಪಡೆದಿರಬೇಕು. ಹಾಗೆಯೆ ಕೊಡಚಾದ್ರಿಯಲ್ಲಿ ಮೂಲ ಮೂಕಾಂಬಿಕ ದೇವಸ್ಥಾನದ ಅರ್ಚಕರ ಮನೆಗಳಲ್ಲಿ ಊಟ ಮತ್ತು ಉಳಿಯಲು ಅನುಕೂಲವಿದೆ. ಕೊಲ್ಲೂರಿನಲ್ಲಿ ಹಲವಾರು ಹೋಟೆಲ್‌ಗಳು ಮತ್ತು ಅತಿಥಿಗೃಹಗಳು ಲಭ್ಯವಿದೆ.

  • ಕೊಡಚಾದ್ರಿ ಬಳಿ ಜೀಪ್, ಟಿಟಿ ನಡುವೆ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಕೊಡಚಾದ್ರಿ ಬಳಿ ಜೀಪ್, ಟಿಟಿ ನಡುವೆ ಮುಖಾಮುಖಿ ಡಿಕ್ಕಿ: 8 ಮಂದಿಗೆ ಗಾಯ, ಮೂವರ ಸ್ಥಿತಿ ಗಂಭೀರ

    ಶಿವಮೊಗ್ಗ: ಜೀಪ್ ಹಾಗೂ ಟಿಟಿ ನಡುವೆ ಮುಖಾಮುಖಿ ಡಿಕ್ಕಿ (Accident) ಸಂಭವಿಸಿ 8 ಮಂದಿ ಗಾಯಗೊಂಡ ಘಟನೆ ಹೊಸನಗರ ತಾಲೂಕಿನ ನಿಟ್ಟೂರು ಸಮೀಪ ನಡೆದಿದೆ.

    ಕೊಲ್ಲೂರಿನಿಂದ ಕೊಡಚಾದ್ರಿಗೆ (Kodachadri) ತೆರಳುತ್ತಿದ್ದ ಜೀಪ್‌ಗೆ ಶಿವಮೊಗ್ಗ (Shivamogga) ಕಡೆಯಿಂದ ತೆರಳುತ್ತಿದ್ದ ಟಿಟಿ ವಾಹನ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಎರಡು ವಾಹನಗಳ ಮುಂಭಾಗ ಸಂಪೂರ್ಣ ಜಖಂಗೊಂಡಿವೆ. ಪರಿಣಾಮ ಜೀಪ್‌ನಲ್ಲಿದ್ದ 8 ಜನಗಾಯಗೊಂಡಿದ್ದಾರೆ. ಇದರಲ್ಲಿ ಮೂವರಿಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಎಲ್ಲರೂ ಕೇರಳದಿಂದ ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಬಂದಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • ಚಾರಣ ಸ್ನೇಹಿ ಬೆಟ್ಟ ಕೊಡಚಾದ್ರಿಯ ಪ್ರಮುಖ ಆಕರ್ಷಣೀಯ ಸ್ಥಳಗಳು

    ಚಾರಣ ಸ್ನೇಹಿ ಬೆಟ್ಟ ಕೊಡಚಾದ್ರಿಯ ಪ್ರಮುಖ ಆಕರ್ಷಣೀಯ ಸ್ಥಳಗಳು

    ಭೂಮಿ ಮೇಲಿನ ಸ್ವರ್ಗ ಎಂದೇ ಕರೆಯಲ್ಪಡುವ ಕೊಡಚಾದ್ರಿ (Kodachadri) ಬೆಟ್ಟವು ತನ್ನದೇ ಆದ ಪ್ರಾಕೃತಿಕ ಪರಂಪರೆಯನ್ನು ಹೊಂದಿರುವ ತಾಣವಾಗಿದೆ. ಪಶ್ಚಿಮ ಘಟ್ಟಗಳ ಭಾಗವಾಗಿರುವ ಇಲ್ಲಿನ ಅದ್ಭುತವಾದ ಸೂರ್ಯೋದಯ ಮತ್ತು ಸೂರ್ಯಾಸ್ತಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಕಾತರರಾಗಿರುತ್ತಾರೆ.

    ಪುರಾತನ ಕಾಲದಿಂದಲೂ ಜನ ಕೊಡಚಾದ್ರಿಗೆ ಜನ ಹೋಗುತ್ತಿದ್ದರಂತೆ. ಈ ಸ್ಥಳಕ್ಕೆ ಕ್ರಿ.ಶ 7ನೇ ಶತಮಾನದಲ್ಲಿ ಶಂಕರಾಚಾರ್ಯರು (Shankaracharya)   ಭೇಟಿ ಕೊಟ್ಟಿದ್ದರು. ಮೂಲ ಮೂಕಾಂಬಿಕೆಯನ್ನು (Kolluru Mookambika) ಪರ್ವತದ ತಳದಲ್ಲಿರುವ ಕೊಲ್ಲೂರಿನಲ್ಲಿ ಪ್ರತಿಷ್ಠೆ ಮಾಡಿದರು ಎಂದು ಇತಿಹಾಸ ಹೇಳುತ್ತದೆ.

    ಆಕರ್ಷಣೀಯ ಸ್ಥಳಗಳು: ನಾಗರ ಕೋಟೆ, ಕೊಲ್ಲೂರು ಮೂಕಾಂಬಿಕಾ ದೇವಾಲಯ, ಸಿಂಗದೂರು ದೇವಾಲಯ ಮತ್ತು ಜೋಗ್ ಜಲಪಾತ ಇವೆಲ್ಲವೂ ಕೊಡಚಾದ್ರಿ ಸಮೀಪದಲ್ಲಿರುವ ಪ್ರವಾಸಿ ಆಕರ್ಷಣೀಯ ಸ್ಥಳಗಳಾಗಿವೆ.

    ಇಷ್ಟು ಮಾತ್ರವಲ್ಲದೇ ಇಲ್ಲಿನ ತಂಪಾದ ಗಾಳಿ, ಪ್ರಕೃತಿಯ ಸೌಂದರ್ಯ, ಆಧ್ಯಾತ್ಮವನ್ನು ಇಮ್ಮಡಿಗೊಳಿಸುವ ಶ್ರೀ ಶಂಕರಾಚಾರ್ಯರ ಸರ್ವಜ್ಞ ಪೀಠ, ಗಣಪತಿ ಗುಹೆ ಅದ್ಭುತವಾದುದು. ನವವಧುವಿನಂತೆ ಸಿಂಗಾರಗೊಂಡಿರುವಂತೆ ಈ ಕೊಡಚಾದ್ರಿಯು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಕೊಡಚಾದ್ರಿ ಟ್ರಕ್ಕಿಂಗ್ ಹೋಗುವ ಪ್ಲಾನ್ ಇದ್ದರೆ ಗಣೇಶ ಗುಹೆಗೂ ಒಂದು ಬಾರಿ ಭೇಟಿ ಕೊಡಬಹುದು. ಆದಿ ಶಂಕರಾಚಾರ್ಯರು ಧ್ಯಾನ ಮಾಡಿದ್ದಾರೆಂದು ಹೇಳಲಾಗುತ್ತಿರುವ ಗಣೇಶ ಗುಹೆ ಬೆಟ್ಟದ ಮೇಲಿದೆ. ಇದರ ಜೊತೆ ಸರ್ವಜ್ಞ ಪೀಠ ನೋಡಲೇಬೇಕಾದ ತಾಣವಾಗಿದೆ.

    ಹೀಗೆ ಟ್ರೆಕ್ಕಿಂಗ್ ಮಾಡಿ ಕೊಡಚಾದ್ರಿಯಿಂದ 5 ಕಿ.ಮೀ ದೂರ ಇರುವ ಹಿಡ್ಲುಮನೆ ಜಲಪಾತವನ್ನೂ ನೋಡಬಹುದಾಗಿದೆ. ಜೊತೆಗೆ ಕೊಡಚಾದ್ರಿಯಿಂದ ಅರಬ್ಬೀ ಸಮುದ್ರದಲ್ಲಿ ಮುಳುಗುವ ಸೂರ್ಯನನ್ನು ನೋಡುವುದು ಈ ಚಾರಣದಲ್ಲಿ ಮರೆಯಲಾಗದ ಒಂದು ಅತ್ಯದ್ಭುತ ಅನುಭವವಾಗಿರುತ್ತದೆ. ಒಟ್ಟಿನಲ್ಲಿ ಬೆಟ್ಟದ ತುದಿಯವರೆಗೆ ಟ್ರೆಕ್ಕಿಂಗ್ ಹೋಗಲು ಎಲ್ಲೆಡೆಯಿಂದಲೂ ಜನ ಬರುತ್ತಿರುತ್ತಾರೆ.

    ಕೊಡಚಾದ್ರಿಗೆ ಹೋಗುವುದು ಹೇಗೆ?: ಸಿಲಿಕಾನ್ ಸಿಟಿಯಿಂದ ಕೊಡಚಾದ್ರಿ ಸುಮಾರು 430 ಕಿ.ಮೀ ದೂರದಲ್ಲಿದೆ. ಹೀಗಾಗಿ ಬೆಂಗಳೂರಿನಿಂದ ಕೊಡಚಾದ್ರಿಗೆ ಬಸ್ಸು, ಖಾಸಗಿ ವಾಹನದ ಮೂಲಕ ಹೊರಡಬಹುದು. ವಿಮಾನದ ಮೂಲಕ ಮಂಗಳೂರಿಗೆ ತೆರಳಿದರೆ ಸಮೀಪವಾಗುತ್ತದೆ. ಮಂಗಳೂರಿನಿಂದ ಸುಮಾರು 130 ಕಿ.ಮೀ ದೂರದಲ್ಲಿ ಕೊಡಚಾದ್ರಿ ಇದೆ. ಮಂಗಳೂರು ಹಾಗೂ ಕೊಲ್ಲೂರಿನ ನಡುವೆ ಹಲವಾರು ಖಾಸಗಿ ಬಸ್ಸುಗಳಿವೆ.

    ಗುಂಪು ಟ್ರೆಕ್ಕಿಂಗ್ ಮಾಡಲು ಕೊಡಚಾದ್ರಿ ಬೆಸ್ಟ್ ಪ್ಲೆಸ್ ಆಗಿರುತ್ತದೆ. ಅಕ್ಟೋಬರ್ ತಿಂಗಳಿನಿಂದ ಮೇ ತಿಂಗಳವರೆಗೆ ಭೇಟಿ ನೀಡಲು ಅತ್ಯುತ್ತಮವಾದ ಸಮಯ. ಆದರೆ ಮಳೆಗಾಲದಲ್ಲಿ ಜಿಗಣೆ ಮತ್ತು ಕಡಿದಾದ ಇಳಿಜಾರು ಇರುವುದರಿಂದ ಸ್ವಲ್ಪ ಜಾಗೃತೆ ವಹಿಸಿಕೊಳ್ಳಬೇಕು. ಜೀಪಿನಲ್ಲಿ ತೆರಳಿದರೆ ಈ ಟ್ರಕ್ಕಿಂಗ್‍ನ ಮಜಾನೇ ಬೇರೆಯಾಗಿರುತ್ತದೆ.

    ಉಳಿದುಕೊಳ್ಳಲು ವ್ಯವಸ್ಥೆ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕೊಡಚಾದ್ರಿ ಸಮೀಪ ಪ್ಯಾರಡೈಸ್ ವೈಲ್ಡ್ ಹಿಲ್ ರೆಸಾರ್ಟ್ ನಡೆಸುತ್ತಿದೆ. ಅಲ್ಲದೆ ಹತ್ತಿರದ ಪಟ್ಟಣವಾದ ಕೊಲ್ಲೂರಿನಲ್ಲಿ ಹೋಟೆಲ್‍ಗಳು ಮತ್ತು ಹೋಂ ಸ್ಟೇಗಳು ಲಭ್ಯವಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಯಾತ್ರಾಸ್ಥಳ ಕೊಡಚಾದ್ರಿಯಲ್ಲಿ ಆಕ್ಸಲ್ ಕಟ್ಟಾಗಿ ಜೀಪ್ ಪಲ್ಟಿ- ಮಹಿಳೆಯ ದುರ್ಮರಣ

    ಯಾತ್ರಾಸ್ಥಳ ಕೊಡಚಾದ್ರಿಯಲ್ಲಿ ಆಕ್ಸಲ್ ಕಟ್ಟಾಗಿ ಜೀಪ್ ಪಲ್ಟಿ- ಮಹಿಳೆಯ ದುರ್ಮರಣ

    ಶಿವಮೊಗ್ಗ: ಪುರಾಣ ಪ್ರಸಿದ್ಧ ಯಾತ್ರ ಸ್ಥಳ ಕೊಡಚಾದ್ರಿಗೆ ಹೋಗುವಾಗ ಜೀಪ್ ಪಲ್ಟಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ.

    ಮೃತ ಮಹಿಳೆಯನ್ನು ಕೇರಳ ತ್ರಿಶ್ಯೂರ್ ಮೂಲದ 38 ವರ್ಷದ ಸರಿತಾ ಎಂದು ಗುರುತಿಸಲಾಗಿದೆ. ಜೀಪಿನಲ್ಲಿ ಇದ್ದ ಇನ್ನಿತರರಿಗೆ ಗಾಯಗಳಾಗಿದ್ದು, ಅವರನ್ನು ಕುಂದಾಪುರ ಆಸ್ಪತ್ರೆಗೆ ಸೇರಿಸಲಾಗಿದೆ

    ಕೇರಳದಿಂದ ಬಂದಿದ್ದ ಎಂಟು ಜನ ಯಾತ್ರಿಕರು ಇದ್ದ ಈ ಜೀಪ್ ಕೊಡಚಾದ್ರಿಯ ದುರ್ಗಮ ಮಾರ್ಗದಲ್ಲಿ ಹತ್ತುವಾಗ ಆಕ್ಸಲ್ ಕಟ್ಟಾಗಿದೆ. ಇದರಿಂದಾಗಿ ಜೀಪ್ ನಿಯಂತ್ರಣ ತಪ್ಪಿದಾಗ ಮುಂದಿನ ಸೀಟಿನಲ್ಲಿ ಕೂತಿದ್ದ ಮಹಿಳೆ ಕೆಳಗೆ ಉರುಳಿ, ಅವರ ಮೇಲೆ ಜೀಪು ಪಲ್ಟಿಯಾಗಿ ಬಿದ್ದಿದೆ.

    ಕೊಲ್ಲೂರಿಗೆ ಬಂದು ಮೂಕಾಂಬಿಕೆ ದರ್ಶನ ಪಡೆದು ಅಲ್ಲಿಂದ ಹೊಸನಗರ ತಾಲೂಕಿನಲ್ಲಿರುವ ಕೊಡಚಾದ್ರಿಯ ತುದಿಯಲ್ಲಿ ಇರುವ ಸರ್ವಜ್ಞ ಪೀಠಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸುವುದು ವಾಡಿಕೆ.

    ಈ ಮಾರ್ಗ ಅತ್ಯಂತ ದುರ್ಗಮವಾಗಿದ್ದು, ಜೀಪು ಸೇರಿ ಯಾವುದೇ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಆದರೆ, ಅರಣ್ಯ ಇಲಾಖೆ ಜೀಪ್ ಮಾಲೀಕರಿಂದ ಹಣ ಕಟ್ಟಿಸಿಕೊಂಡು ಸಂಚಾರಕ್ಕೆ ಅವಕಾಶ ಮಾಡಿಕೊಡುತ್ತಿದೆ. ಹಲವು ಬಾರಿ ಈ ರೀತಿಯ ಅವಘಡಗಳು ನಡೆದಿದ್ದರೂ, ಪ್ರಾಣಾಪಾಯ ಸಂಭವಿಸಿರಲಿಲ್ಲ. ಈಗ ಜೀಪ್ ಚಾಲಕರ ಹಣದಾಸೆ ಹಾಗೂ ಅರಣ್ಯ ಇಲಾಖೆ ನಿರ್ಲಕ್ಷ್ಯಕ್ಕೆ ಯಾತ್ರೆಗೆ ಬಂದಿದ್ದ ಮಹಿಳೆ ಜೀವ ಬಲಿ ಪಡೆದಿದೆ.

    ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಘಟನೆ ನಡೆದಿದೆ.