ಬೆಂಗಳೂರು: ಇಡೀ ಬೆಂಗಳೂರನ್ನೇ ಗುತ್ತಿಗೆ ಪಡೆಯಲು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಹೊರಟಿದ್ದಾರಾ ಅನ್ನೋ ಪ್ರಶ್ನೆ ಎದ್ದಿದೆ. ಯಾಕಂದ್ರೆ ಬೆಂಗಳೂರಿನ ಕಾಸ್ಟ್ಲಿ ಪ್ರಾಪರ್ಟಿ ಜಾರ್ಜ್ ಒಡೆತನದ ಎಂಬೆಸ್ಸಿ ಕೈಗೆ ಸಿಕ್ತಿದೆ. ಎಂಬೆಸ್ಸಿ ಸುಪರ್ದಿಗೆ ಇಂದಿರಾನಗರ ಬಿಡಿಎ ಕಾಂಪ್ಲೆಕ್ಸ್ ಮರು ನಿರ್ಮಾಣ ಗುತ್ತಿಗೆ ನೀಡಲಾಗ್ತಿದೆ.
ಮೊನ್ನೆ ತಾನೆ ಬಿಬಿಎಂಪಿಯ ಮಹತ್ವಾಕಾಂಕ್ಷೆಯ ಯೋಜನೆಯಾದ ಪಾಡ್ ಟ್ಯಾಕ್ಸಿಯ ಗುತ್ತಿಗೆಯನ್ನು ಪಾಲುದಾರಿಕೆಯಲ್ಲಿ ಪಡೆದ ಸಚಿವ ಕೆ.ಜೆ ಜಾರ್ಜ್, ಅದನ್ನು ಮಾನ್ಯತಾ ಟೆಕ್ ಪಾರ್ಕ್‍ವರೆಗು ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ರು. ಈಗ ಬಿಡಿಎಗೆ ಕಾಲಿಟ್ಟಿರೋ ಕೆ.ಜೆ. ಜಾರ್ಜ್ ಅಂಡ್ ಕಂಪನಿ ಬಿಡಿಎನ ಪ್ರಮುಖ ಶಾಪಿಂಗ್ ಕಾಂಪ್ಲೆಕ್ಸ್ ಗಳ ಮರು ಅಭಿವೃದ್ದಿಯ ಯೋಜನೆಯಡಿಯಲ್ಲಿ ತಮ್ಮ ಪಾಲುದಾರಿಕೆಯ ಕಂಪನಿ ಎಂಬೆಸ್ಸಿ ಗ್ರೂಪ್‍ಗೆ ಗುತ್ತಿಗೆ ಕೊಡಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ.
ಈಗಾಗಲೇ ಇಂದಿರಾ ನಗರದ ಶಾಂಪಿಂಗ್ ಕಾಂಪ್ಲೆಕ್ಸ್ ಗುತ್ತಿಗೆಯನ್ನು ಪಡೆಯೋ ಅಂತಿಮ ಹಂತದಲ್ಲಿರೋ ಎಂಬೆಸ್ಸಿ ಗ್ರೂಪ್ ಇನ್ನುಳಿದ ಆಸ್ಟೀನ್ ಟೌನ್, ಕೋರಮಂಗಲ, ಆರ್.ಟಿ. ನಗರ, ಸದಾಶಿವನಗರ ಕಾಂಪ್ಲೆಕ್ಸ್ ಸೇರಿದಂತೆ 6 ಕಾಂಪ್ಲೆಕ್ಸ್ ಗಳಿಗೂ ಅರ್ಜಿ ಸಲ್ಲಿಸಿದೆ. ಒಂದು ವೇಳೆ ಎಲ್ಲಾ ಕಂಪ್ಲೆಕ್ಸ್ ಗಳ ಗುತ್ತಿಗೆಯನ್ನು ಎಂಬೆಸ್ಸಿ ಗ್ರೂಪ್ ಪಡೆದರೆ ಬಿಡಿಎನ ಪ್ರಮುಖ ಆಸ್ತಿ ಕೆ.ಜೆ. ಜಾರ್ಜ್ ಪಾಲಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ. 657 ಕೋಟಿ ರೂಪಾಯಿಯ ಬೃಹತ್ ಯೋಜನೆ ಇದಾಗಿದ್ದು, 60 ವರ್ಷದವರೆಗೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲಾಗ್ತಾಯಿದೆ.
ಬೆಂಗಳೂರು: ಬಿಬಿಎಂಪಿಯು ಪಾಡ್ ಟ್ಯಾಕ್ಸಿ (ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್-ಪಿಆರ್‍ಟಿಎಸ್) ಯೋಜನೆಯ ಟೆಂಡರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ಎಂಬೆಸಿ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವ ಸ್ಮಾರ್ಟ್ ಪರ್ಸನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ಪ್ರೈವೇಟ್ (ಎಸ್‍ಪಿಆರ್ ಟಿಎಸ್) ಲಿಮಿಟೆಡ್ ಕಂಪೆನಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಬಿಎಂಪಿ ಟ್ರಿನಿಟಿ ಸರ್ಕಲ್‍ನಿಂದ ವೈಟ್‍ಫೀಲ್ಡ್ ಹಾಗೂ ಮಾನ್ಯತಾ ಟೆಕ್ ಪಾರ್ಕ್ ನಿಂದ ಕೆ.ಆರ್ ಪುರದವರೆಗೆ ಪಾಡ್ ಟ್ಯಾಕ್ಸಿ ಸೇವೆ ನೀಡುವ ಕುರಿತು ಯೋಜನೆ ಸಿದ್ಧಪಡಿಸಿ ಟೆಂಡರ್ ಕರೆದಿತ್ತು. ಆದರೆ ಈ ಟೆಂಡರ್‍ಗೆ ಎಸ್‍ಪಿಆರ್ ಟಿಎಸ್ ಕಂಪನಿ ಮಾತ್ರ ಅರ್ಜಿ ಸಲ್ಲಿಸಿದ ಕಾರಣ ಈ ಪಾಡ್ ಟ್ಯಾಕ್ಸಿಯ ನಿರ್ಮಾಣ ಯೋಜನೆಯ ಗುತ್ತಿಗೆ ಸಿಕ್ಕಿದೆ.
ಜಾರ್ಜ್ ಸಹಭಾಗಿತ್ವದ ಎಂಬಸ್ಸಿ ಗ್ರೂಪ್ ಜೊತೆ ಸಹಭಾಗಿತ್ವ ಹೊಂದಿರುವ ಎಸ್‍ಪಿಆರ್ ಟಿಎಸ್ 7.5 ಕೋಟಿ ಭದ್ರತಾ ಠೇವಣಿಯನ್ನು ಜನವರಿ 10 ರಂದು ಇಟ್ಟಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ 5 ಕೋಟಿ ರೂ.ಗಳನ್ನು ಠೇವಣಿ ಇಡಲು ಬಿಬಿಎಂಪಿ ಬಿಡ್ಡಿಂಗ್ ಕಂಪನಿಗಳಿಗೆ ಷರತ್ತು ವಿಧಿಸಿತ್ತು. ಟೆಂಡರ್ ಪಡೆಯಲು ಅರ್ಜಿ ಸಲ್ಲಿಸಲು ಜನವರಿ 10 ಕೊನೆಯ ದಿನವವಾಗಿತ್ತು.
ಟೆಂಡರ್ ಪಡೆದಿರುವ ದೆಹಲಿ ಮೂಲದ ಎಸ್‍ಪಿಆರ್ ಟಿಎಸ್ ಕಂಪೆನಿ ಲಂಡನ್ ಹೀಥ್ರೂ ನಗರದಲ್ಲಿ ಪಾಡ್ ಟ್ಯಾಕ್ಸಿ ಸೇವೆ ನೀಡುತ್ತಿದೆ. ಈ ಕಂಪನಿಯ ನಿರ್ದೇಶಕರಾದ ಧ್ರುವ್ ಮನೋಜ್ ಪಟೇಲ್ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಜನವರಿ 10 ರಂದು ನಾವು ಟೆಂಡರ್‍ಗೆ ಅರ್ಜಿ ಸಲ್ಲಿಸಿದ್ದೇವೆ. ಬಿಬಿಎಂಪಿ ರೂಪಿಸಿರುವ ನಿಯಮಗಳ ಪ್ರಕಾರ ಸಮಗ್ರ ಯೋಜನಾ ವರದಿಯನ್ನು ಸಲ್ಲಿಸಿದ್ದು, ಕ್ಯಾಬಿನೆಟ್ ಚರ್ಚೆಯಾಗಿ ಅನುಮತಿ ನೀಡಿದ 6 ತಿಂಗಳ ಒಳಗಡೆ ಕೆಲಸ ಪ್ರಾರಂಭಿಸುತ್ತೆವೆ. ಅಲ್ಲದೇ ಯೋಜನೆ ಆರಂಭವಾದ 30 ತಿಂಗಳುಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸುತ್ತೆವೆ ಎಂದು ತಿಳಿಸಿದರು.
ಯೋಜನೆ ಜಾರಿ ಸಂಬಂಧ ಹೆಚ್ಚಿನ ಆಸಕ್ತಿ ತೋರಿಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತರಿಗೆ ಧೃವ ಮನೋಜ್ ಪಟೇಲ್ ಧನ್ಯವಾದಗಳನ್ನು ಹೇಳಿದರು.
ಪ್ರತಿ ಕಿಲೋಮೀಟರ್‍ಗೆ 50 ಕೋಟಿ ವೆಚ್ಚವಾಗುವ ಈ ಯೋಜನೆಯನ್ನು ಕಂಪನಿ ತನ್ನ ಟೆಕ್‍ಪಾರ್ಕ್‍ಗೆ ಅನುಕೂಲ ಆಗುವ ರೀತಿಯಲ್ಲಿ ಪಾಡ್ ಟ್ಯಾಕ್ಸಿಯ ಮಾರ್ಗ ಬದಲಾವಣೆ ಮಾಡಿದೆ ಎನ್ನುವ ಆರೋಪ ಈಗ ಕೇಳಿ ಬಂದಿದೆ. ಅಲ್ಲದೇ ಇತ್ತೀಚೆಗೆ ಸಚಿವ ಜಾರ್ಜ್ ಅವರ ಮಗನ ಕಂಪನಿಗೆ ತೊಂದರೆ ಆಗುತ್ತೆ ಎಂದು ಬಿಬಿಎಂಪಿ ಸ್ಕೈವಾಕ್ ನಿರ್ಮಾಣವನ್ನೇ ಬೇರೆಡೆ ಸ್ಥಳಾಂತರ ಮಾಡಿದ್ದ ಆರೋಪ ಕೇಳಿ ಬಂದಿತ್ತು. ಈಗ ಸಚಿವ ಜಾರ್ಜ್‍ಗಾಗಿ ಸಹಭಾಗಿತ್ವದ ಕಂಪನಿಗೆ ಪಾಡ್ ಟ್ಯಾಕ್ಸಿ ಗುತ್ತಿಗೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದನ್ನೂ ಓದಿ: ಜಾರ್ಜ್ ಮಗನ ಮೇಲೆ ಸಿಎಂಗೆ ಫುಲ್ ಲವ್ – ಕಾಡಲ್ಲಿ ಸ್ವಂತ ವಾಹನದಲ್ಲಿ ಸವಾರಿಗೆ ಪರ್ಮಿಷನ್
ಟೆಂಡರ್ ಸಲ್ಲಿಕೆಗೆ ಬಿಬಿಎಂಪಿ ಆರಂಭದಲ್ಲಿ ಡಿಸೆಂಬರ್ 30 ಕೊನೆಯ ದಿನ ಎಂದು ಪ್ರಕಟಿಸಿತ್ತು. ಆದರೆ, ಕ್ರಿಸ್‍ಮಸ್ ರಜೆ ಇರುವುದರಿಂದ ಹಾಗೂ ಕೆಲ ಕಾರಣಗಳಿಂದ ಟೆಂಡರ್ ಅವಧಿಯನ್ನು ವಿಸ್ತರಿಸುವಂತೆ ಕಂಪೆನಿಗಳು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಜನವರಿ 10ಕ್ಕೆ ವಿಸ್ತರಣೆಯಾಗಿತ್ತು.
ಸಿಂಗಪುರದ ಆಲ್ಟ್ರಾ ಫೈರ್‍ವುಡ್ ಗ್ರೀನ್ ಟ್ರಾನ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್, ಅಮೆರಿಕದ ಸ್ಕೈ ಟ್ರ್ಯಾನ್ ಏಷಿಯಾ, ಜೆಪಾಡ್ಸ್ ಇಂಕ್ ಕಂಪೆನಿಗಳು ಆಸಕ್ತಿ ತೋರಿದ್ದು, ವಿಸ್ತೃತ ಯೋಜನಾ ವರದಿಗಳನ್ನೂ ಸಲ್ಲಿಸಿವೆ. ಇತ್ತೀಚೆಗೆ ತಾಂತ್ರಿಕ ಬಿಡ್ ನಡೆಯಿತು. ಪಾಡ್ ಟ್ಯಾಕ್ಸಿ ಯೋಜನೆ ಅನುಷ್ಠಾನದಲ್ಲಿ ಕನಿಷ್ಠ 2 ವರ್ಷ ಅನುಭವ ಹೊಂದಿರಬೇಕು ತಾಂತ್ರಿಕವಾಗಿ ಅರ್ಹತೆ ಹೊಂದಿರುವ ಕಂಪೆನಿಗೆ ಟೆಂಡರ್ ನೀಡಲಾಗುತ್ತದೆ ಎಂದು ಈ ಹಿಂದೆ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದರು. ಇದನ್ನೂ ಓದಿ: ಡಿಕೆ ರವಿ, ಗಣಪತಿ ಕೇಸನ್ನು ಪರಿಗಣಿಸಿದ್ದು ಯಾಕೆ: ಪಬ್ಲಿಕ್ ಟಿವಿ ಸಮೀಕ್ಷೆಗೆ ಜಾರ್ಜ್ ಪ್ರಶ್ನೆ
ಏನಿದು ಪಾಡ್ ಟ್ಯಾಕ್ಸಿ?
ಪಾಡ್ ಟ್ಯಾಕ್ಸಿ ಸೇವೆ ಗಂಟೆಗೆ ಸರಾಸರಿ 100 ಕಿ.ಮೀ. ವೇಗದಲ್ಲಿ ಸಂಚರಿಸುವ ಮೂಲಕ ಮೆಟ್ರೊ ರೈಲು ನಿಲ್ದಾಣಗಳಿಗೆ ಪೂರಕ ಸೇವೆ ಒದಗಿಸಲಿದೆ. ಪ್ರತಿ ಪಾಡ್ ಟ್ಯಾಕ್ಸಿ 3 ಮೀಟರ್ ಉದ್ದ, 2.2 ಮೀಟರ್ ಅಗಲವಿದ್ದು, ಕನಿಷ್ಠ 6 ಮಂದಿ ಪ್ರಯಾಣಿಸಬಹುದು. ಪ್ರತಿ ಕಿ.ಮೀ. ಮಾರ್ಗ ನಿರ್ಮಾಣಕ್ಕೆ ಅಂದಾಜು 50 ಕೋಟಿ ರೂ. ವೆಚ್ಚವಾಗಲಿದೆ. ಖಾಸಗಿ ಕಂಪೆನಿಗಳೇ ಸಂಪೂರ್ಣ ಬಂಡವಾಳ ಹೂಡಲಿದ್ದು, ಯೋಜನೆಯ ಆರಂಭವಾದ ನಂತರ 30 ವರ್ಷ ನಿರ್ವಹಣೆ ಮಾಡಲಿವೆ. ಯೋಜನೆ ಅನುಷ್ಠಾನಕ್ಕೆ ಬೇಕಾದ ರಸ್ತೆ ವಿಭಜಕಗಳ ನಡುವೆ ಜಾಗವನ್ನು ಬಿಬಿಎಂಪಿ ನೀಡಲಿದೆ.
ನಗರದಲ್ಲಿ ಮೊದಲ ಹಂತದಲ್ಲಿ ಟ್ರಿನಿಟಿ ಮೆಟ್ರೊ ನಿಲ್ದಾಣದಿಂದ ವೈಟ್‍ಫೀಲ್ಡ್‍ವರೆಗೆ 30 ಕಿ.ಮೀ. ಉದ್ದದ ಮಾರ್ಗ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ಅಗರ, ದೊಮ್ಮಲೂರು, ಲೀಲಾ ಪ್ಯಾಲೇಸ್ ಹೋಟೆಲ್, ಬಿಇಎಂಎಲ್, ಎಚ್‍ಎಎಲ್ ವಿಮಾನ ನಿಲ್ದಾಣ, ಮಾರತ್ತಹಳ್ಳಿ, ಗಾಂಧಿ ನಗರ, ಬ್ರೋಕ್‍ಫೀಲ್ಡ್, ಪರಿಮಳ ಸನ್‍ರಿಡ್ಜ್, ನಲ್ಲೂರಹಳ್ಳಿ, ವರ್ಜೀನಿಯಾ ಮಾಲ್, ವೈಟ್‍ಫೀಲ್ಡ್ ನಿಲ್ದಾಣಗಳು ಬರಲಿವೆ. ಅಲ್ಲದೇ 2,000ಕ್ಕೂ ಅಧಿಕ ಪಾಡ್ ಟ್ಯಾಕ್ಸಿಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಪ್ರತಿ ಗಂಟೆಗೆ 15 ರಿಂದ 20 ಸಾವಿರ ಜನರು ಪಾಡ್ ಟ್ಯಾಕ್ಸಿ ಸೇವೆಯಲ್ಲಿ ಪ್ರಯಾಣಿಸಬಹುದಾಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಸಚಿವ ಕೆ.ಜೆ. ಜಾರ್ಜ್ ರಾಜನಾದ್ರೆ, ಮಗ ಕಾಡಿಗೆ ರಾಜ!
ಬೆಂಗಳೂರು: ಡಿಕೆ ರವಿ ಮತ್ತು ಗಣಪತಿ ಪ್ರಕರಣಗಳನ್ನು ಸಮೀಕ್ಷೆಗೆ ಪರಿಗಣಿಸಿದ್ದು ಯಾಕೆ ಎಂದು ಸಚಿವ ಕೆಜೆ ಜಾರ್ಜ್ ಪಬ್ಲಿಕ್ ಟಿವಿಯನ್ನು ಪ್ರಶ್ನೆ ಮಾಡಿದ್ದಾರೆ.
ಪಬ್ಲಿಕ್ ಟಿವಿ ಸಮೀಕ್ಷೆಗೆ ಪ್ರತಿಕ್ರಿಯಿಸಿದ ಅವರು, ಸಮೀಕ್ಷೆಗಳ ಫಲಿತಾಂಶಗಳು ನಿಜವಾಗುವುದಿಲ್ಲ. ಇದು ಗುಜರಾತ್ ಚುನಾವಣೆಯಲ್ಲಿ ಸಾಬೀತಾಗಿದೆ. ನಿಮ್ಮ ಸರ್ವೆಯನ್ನ ನಾನು ನೋಡಿದ್ದೇವೆ. ಅದರಲ್ಲಿ ಡಿಕೆ ರವಿ ಕೇಸ್ ಹಾಗೂ ಗಣಪತಿ ಕೇಸ್ ಸರ್ಕಾರದ ಇಮೇಜ್‍ಗೆ ಧಕ್ಕೆ ಆಗುತ್ತೆ ಎಂದು ತೋರಿಸಲಾಗಿದೆ. ಇದನ್ನು ಯಾಕೆ ಸಮೀಕ್ಷೆಗೆ ಪರಿಗಣಿಸಿದ್ದು ಎನ್ನುವುದನ್ನು ನೀವು ಹೇಳಬೇಕು ಎಂದು ಪ್ರಶ್ನಿಸಿದರು.
ಡಿಕೆ ರವಿ ಕೇಸ್ ನಲ್ಲಿ ಸಿಬಿಐ ಆತ್ಮಹತ್ಯೆ ಅಂತ ವರದಿ ಕೊಟ್ಟಿದೆ. ಗಣಪತಿ ಕೇಸ್‍ನಲ್ಲಿ ಸಿಐಡಿ ಬಿ ರಿಪೋರ್ಟ್ ನೀಡಿದೆ. ಹೀಗಾಗಿ ನೀವು ಸರ್ವೆಯಲ್ಲಿ ಈ ವಿಚಾರವನ್ನು ಸೇರ್ಪಡೆ ಮಾಡಿರೋದು ಸರಿಯಲ್ಲ. ರಾಜ್ಯದ ಜನ ಯಾವ ಸರ್ಕಾರ ಬೇಕು ಅಂತ ನಿರ್ಧಾರ ಮಾಡುತ್ತಾರೆ. ಅತಂತ್ರ ಸರ್ಕಾರ ನಿರ್ಮಾಣ ಆಗುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು. ಇದನ್ನು ಓದಿ: ಯಾರಿಗೂ ಬಹುಮತವಿಲ್ಲ, ಮತ್ತೊಮ್ಮೆ ರಾಜ್ಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ!
2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಮೆಗಾ ಸಮೀಕ್ಷೆಯನ್ನು ನಡೆಸಿತ್ತು. ಜನವರಿ 1 ಮತ್ತು 2ನೇ ತಾರೀಕಿನಂದು ಮೆಗಾ ಸಮೀಕ್ಷೆಯ ಫಲಿತಾಂಶಗಳು ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಆಗಿತ್ತು
ಈ ಮೆಗಾ ಸರ್ವೆಯಲ್ಲಿ ಜನರಿಗೆ ಯಾವ ಹಗರಣಗಳು ಸಿದ್ದರಾಮಯ್ಯ ಇಮೇಜ್ ಮೇಲೆ ಹೆಚ್ಚು ಪರಿಣಾಮ ಬೀರಿವೆ ಎಂದು ಪ್ರಶ್ನೆಯನ್ನು ಕೇಳಲಾಗಿತ್ತು. ಈ ಪ್ರಶ್ನೆಗೆ ಹ್ಯೂಬ್ಲೋಟ್ ವಾಚ್ ಹಗರಣಕ್ಕೆ 7.69%, ಡಿಕೆ ರವಿ ಮತ್ತು ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ 31.84%, ಪರಮೇಶ್ವರ ನಾಯ್ಕ್ ಪ್ರಕರಣಕ್ಕೆ 2.96%, ಮೇಟಿ ಲೈಂಗಿಕ ಹಗರಣಕ್ಕೆ 6.71% ಮತ್ತು ಡಿಕೆ ಶಿವಕುಮಾರ್ ಐಟಿ ದಾಳಿ ಪ್ರಕರಣಕ್ಕೆ 6.91% ಫಲಿತಾಂಶ ಸಿಕ್ಕಿತ್ತು. ಒಟ್ಟು ಮೇಲಿನ ಎಲ್ಲ ವಿಚಾರಕ್ಕೆ ಸಂಬಂಧಿಸಿದಂತೆ 30.56%, ಏನೂ ಹೇಳಲ್ಲ 12.96% ಹಾಗೂ ಇತರೆಗೆ 0.37% ಫಲಿತಾಂಶ ಸಿಕ್ಕಿತ್ತು. ಇದನ್ನು ಓದಿ:ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದ
ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಮಗನ ಮೇಲೆ ಸಿಎಂ ಸಿದ್ದರಾಮಯ್ಯಗೆ ಫುಲ್ ಲವ್ವು. ಕೆಜೆ ಜಾರ್ಜ್ ಪುತ್ರ ರಾಣಾ ತನ್ನ ಸ್ವಂತ ವಾಹನದಲ್ಲಿ ಕಾಡಿನೊಳಗೆ ಸವಾರಿ ಮಾಡೋಕೆ ಸಿಎಂ ಸಿದ್ದರಾಮಯ್ಯ ಪರ್ಮಿಷನ್ ಕೊಟ್ಟಿದ್ದಾರೆ.
ತನ್ನ ಆಪ್ತನ ಮಗನ ಸವಾರಿಗಾಗಿ ಅನುಮತಿ ಪತ್ರವನ್ನ ಅರಣ್ಯ ಇಲಾಖೆಗೆ ಸಿಎಂ ಸಿದ್ದರಾಮಯ್ಯ ರವಾನಿಸಿದ್ದಾರೆ. ಕೇಂದ್ರ ಪರಿಸರ ಇಲಾಖೆ ಬೇಡ ಅಂದ್ರೂ ತಲೆ ಕೆಡಿಸಿಕೊಳ್ಳದೇ ಮತ್ತೆ ಸಿಎಂ ಅನುಮತಿ ನೀಡಿದ್ದಾರೆ.
ಕಾಡಿನೊಳಗೆ ಸ್ವಂತ ವಾಹನದಲ್ಲಿ ಸವಾರಿಗೆ ರಾಣಾ ಸಿಎಂ ಕಚೇರಿಯಿಂದ ಅನುಮತಿ ಕೇಳಿದ್ರು. ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಕೇಂದ್ರಕ್ಕೆ ಮಾಹಿತಿ ಹೋದಾಗ ಯಾರಿಗೂ ಸ್ವಂತ ವಾಹನದಲ್ಲಿ ಹೋಗೋದಕ್ಕೆ ಅನುಮತಿ ಇಲ್ಲ ಅಂತಾ ಖಡಕ್ ಆದೇಶ ಕೊಟ್ಟಿದೆ. ಆದರೆ ಇದಕ್ಕೆ ಸೊಪ್ಪು ಹಾಕದ ಸಿಎಂ ಸಿದ್ದರಾಮಯ್ಯ ತನ್ನ ಆಪ್ತನ ಮಗನ ಸವಾರಿಗೆ ಯಾರ್ರೀ ಅಡ್ಡಿ ಮಾಡೋದು, ನೀನು ಹೋಗಿ ಬಾ ಕಂದ ಅಂತಾ ಅನುಮತಿ ಪತ್ರವನ್ನು ಅರಣ್ಯ ಇಲಾಖೆಗೆ ರವಾನಿಸಿದ್ದಾರೆ.
ಈ ಹಿಂದೆ ರಾಣಾ ಕಾಡಲ್ಲಿ ಸ್ನೇಹಿತರ ಜೊತೆ ಹೋಗಿ ಗುಂಡು ಪಾರ್ಟಿ ಮಾಡಿ ವಿವಾದಕ್ಕೀಡಾಗಿದ್ರು. ಈಗ ಬೋರ್ಡ್ ಮೆಂಬರ್ ಆಗಿರುವ ರಾಣಾಗೆ ಗ್ರೀನ್ ಸಿಗ್ನಲ್ ಸಿಎಂ ಕಡೆಯಿಂದಲೇ ಸಿಕ್ಕಿದೆ.
ಬೆಂಗಳೂರು: ನಗರದ ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲೇ ಸಿಹಿ ಸುದ್ದಿ ಸಿಗಲಿದೆ. ಡಿಸೆಂಬರ್ ನಂತರ ಮೆಟ್ರೋ ಬೋಗಿಗಳ ಸಂಖ್ಯೆ ಹೆಚ್ಚಾಗಲಿದ್ದು ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ.
ಸದ್ಯ ಮೆಟ್ರೋಗಳಲ್ಲಿರುವ 3 ಬೋಗಿಯಿಂದ 6 ಬೋಗಿಗಳಿಗೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಬೋಗಿಗಳ ಖರೀದಿ ಬಿಇಎಂಎಲ್ ಸಂಸ್ಥೆಗೆ ವಹಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಡಿಸೆಂಬರ್ 2017 ನಂತರ ಹೆಚ್ಚುವರಿ ಬೋಗಿ ಅಳವಡಿಸಲಾಗುತ್ತೆ. ಪ್ರತಿ 3 ನಿಮಿಷಕ್ಕೆ ರೈಲು ಓಡಿಸುವ ನಿರ್ಧಾರ ಮಾಡಿದ್ದೇವೆ. ಹೆಚ್ಚುವರಿ ಬೋಗಿ ಬಂದಾಗ ಮಹಿಳೆಯರಿಗೆ, ಮಕ್ಕಳಿಗೆ ಒಂದು ಬೋಗಿ ಮೀಸಲು ಇಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಮಾಹಿತಿ ನೀಡಿದ್ರು. ಪರಿಷತ್‍ನಲ್ಲಿ ಸದಸ್ಯೆ ವೀಣಾ ಅಚ್ಚಯ್ಯ ಪ್ರಶ್ನೆಗೆ ಸಚಿವ ಕೆ.ಜೆ.ಜಾರ್ಜ್ ಈ ಮಾಹಿತಿ ನೀಡಿದ್ರು.
ಮೆಟ್ರೋದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಗುತ್ತಿಗೆ ಆಧಾರದ ಕನ್ನಡಿಗ ನೌಕರರಿಗೆ ದೌರ್ಜನ್ಯವಾಗುತ್ತಿದೆ. ಮೊದಲು ಕನ್ನಡಿಗರಿಗೆ ರಕ್ಷಣೆ ಕೊಡಿ. ಕನ್ನಡಿಗರಿಗೆ ರಕ್ಷಣೆ ಕೊಡದೇ ಇದ್ರೆ ನಾವು ಯಾಕೆ ಸದಸ್ಯರು ಆಗಿರಬೇಕು ಎಂದು ಸರ್ಕಾರದ ವಿರುದ್ಧ ಚೌಡರೆಡ್ಡಿ ತೂಪಲ್ಲಿ ಆಕ್ರೋಶ ವ್ಯಕ್ತಪಡಿಸಿದ್ರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್, ಕನ್ನಡಿಗರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ. ಈಗಾಗಲೇ 1500 ಖಾಯಂ ನೌಕರರಿದ್ದಾರೆ. ಮುಂದಿನ ಮೆಟ್ರೋ ನೇಮಕಾತಿಯಲ್ಲಿ ಸಂಪೂರ್ಣವಾಗಿ ಕನ್ನಡಿಗರ ನೇಮಕವೇ ಮಾಡಿಕೊಳ್ತೀವಿ. ಕನ್ನಡಿಗರಿಗೆ ಮೆಟ್ರೋ ಹುದ್ದೆ ನೀಡಲಾಗುತ್ತದೆ ಎಂದು ಹೇಳಿದ್ರು.
ವಿಜಯಪುರ: ಐಟಿ ಅಧಿಕಾರಿಗಳು ನಮ್ಮ ಕರೆಗಳನ್ನು ಕದ್ದಾಲಿಕೆ ಮಾಡುತ್ತಿದ್ದಾರೆಂದು ರಾಜ್ಯ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದ ಭಲೇಶ್ವರದಲ್ಲಿ ಮಾತನಾಡಿದ ಪಾಟೀಲ್, ಐಟಿ ಅಧಿಕಾರಿಗಳು ಒಂದು ವರ್ಷದಿಂದ ನನ್ನ ಫೋನ್ ಟ್ಯಾಪ್ ಮಾಡಿದ್ದಾರೆ. ಅಲ್ಲದೆ ನನ್ನ ಪತ್ನಿ, ಪುತ್ರ ಹಾಗೂ ನನ್ನ ವ್ಯವಹಾರಗಳನ್ನು ನೋಡಿಕೊಳ್ಳುವ ವಕೀಲರು, ಅವ್ರ ಪತ್ನಿಯ ಫೋನ್ ಕರೆಗಳನ್ನು ಐಟಿ ಅಧಿಕಾರಿಗಳು ಟ್ಯಾಪ್ ಮಾಡುತ್ತಿದ್ದಾರೆ ಎಂದರು.
ಇಂಧನ ಸಚಿವ ಡಿ.ಕೆ.ಶಿವಕುಮಾರ್, ಲೋಕೋಪಯೋಗಿ ಸಚಿವ ಮಹದೇವಪ್ಪ, ಬೆಂಗಳೂರು ಅಭಿವೃದ್ಧಿ ಸಚಿವ ಕೆಜೆ ಜಾರ್ಜ್ ಸೇರಿದಂತೆ ಬಹಳ ಜನರ ಮೊಬೈಲ್ ಟ್ಯಾಪ್ ಮಾಡಲಾಗ್ತಿದೆ. ರಾಜಕೀಯ ದುರುದ್ದೇಶದಿಂದ ಕೇಂದ್ರ ಸರ್ಕಾರ, ಐಟಿ ಇಲಾಖೆ ಅಥವಾ ಗೃಹ ಇಲಾಖೆ ಫೋನ್ ಟ್ಯಾಪ್ ಮಾಡ್ತಿದೆ ಎಂದರು.
ಶೀಘ್ರದಲ್ಲೇ ಫೋನ್ ಟ್ಯಾಪಿಂಗ್ ಬಗ್ಗೆ ದೂರು ನೀಡುವುದಾಗಿ ತಿಳಿಸಿದರು. ಇನ್ನು ಯಾವ ರೀತಿ ಟ್ಯಾಪ್ ಮಾಡಲಾಗ್ತಿದೆ ಅನ್ನೋದನ್ನ ಮುಂದಿನ ದಿನಗಳಲ್ಲಿ ನಿಮ್ಮ ಮುಂದೆ ತೋರಿಸ್ತೇನೆ ಎಂದು ಮಾಧ್ಯಮಗಳಿಗೆ ಸಚಿವ ಪಾಟೀಲ್ ಸ್ಪಷ್ಟಪಡಿಸಿದರು.
ಬೆಂಗಳೂರು: ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ರಾಜೀನಾಮೆ ನೀಡಬೇಕು ಎಂಬ ವಿಚಾರ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಎಫ್‍ಐಆರ್ ಹಾಕಿದಾಕ್ಷಣ ಜಾರ್ಜ್ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಸಿಬಿಐ ತನಿಖೆ ಆರಂಭಿಸಿ ಯಾವುದಾದರೂ ಸಾಕ್ಷ್ಯ ದೊರಕಿದರೆ ಆಗ ರಾಜೀನಾಮೆ ಕೊಡಬೇಕಾಗತ್ತದೆ ಎಂದು ಹೇಳಿದರು.
ಪ್ರಸ್ತುತ ಜಾರ್ಜ್ ಅವರು ರಾಜೀನಾಮೆ ಕೊಡಬೇಕು ಎಂದು ನಾನು ಹೇಳುವುದಿಲ್ಲ. ಗಣಪತಿಯವರ ಆತ್ಮಹತ್ಯೆ ಪ್ರಕರಣ ಸಂಬಂಧ ಹಾಗೂ ರಾಜ್ಯ ಸರ್ಕಾರ ಪ್ರಕರಣದ ಸಾಕ್ಷ್ಯ ನಾಶ ಮಾಡಿದೆ ಎಂದು ಆರೋಪಿಸಿ ಅವರ ಕುಟುಂಬದವರು ಸುಪ್ರೀಂ ಮೊರೆ ಹೋಗಿದ್ದರು. ಆ ಕಾರಣಕ್ಕೆ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ವಹಿಸಿದೆ. ಇದು ಕೇಂದ್ರ ಅಥವಾ ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದ ಪ್ರಕರಣ ಅಲ್ಲ. ಯಾವುದೇ ಪ್ರಕರಣ ಇದ್ದರೂ ಎಫ್‍ಐಆರ್ ಹಾಕೋದು ಸಹಜ ಎಂದು ತಿಳಿಸಿದರು.
ಇಂದಿನ ರಾಜಕಾರಣದಲ್ಲಿ ಪ್ರಾಮಾಣಿಕತೆ ಉಳಿದಿಲ್ಲ. ರಾಗ ದ್ವೇಷ ಇಲ್ಲದೆ ಕೆಲಸ ಮಾಡುವ ಭಾವನೆ ಕುಸಿತವಾಗಿದೆ. ಸಿಬಿಐ ನಿಷ್ಪಕ್ಷಪಾತ ತನಿಖೆ ನಡೆಸಲಿ. ಸಿಐಡಿ ತನಿಖೆ ವೇಳೆ ಸಾಕ್ಷ್ಯ ನಾಶಪಡಿಸಿದೆ ಎಂಬ ಆರೋಪ ಇದೆ. ಪೆನ್ ಡ್ರೈವ್, ಡಾಕ್ಯುಮೆಂಟ್ ನಾಶ ಪಡಿಸಿದ್ದೇ ನಿಜ ಆಗಿದ್ದರೆ ಸಿಬಿಐಗೆ ಮಾಹಿತಿ ಸಿಗುತ್ತಾ? ಸಾಕ್ಷ್ಯ ನಾಶ ನಿಜವೇ ಆಗಿದ್ದರೆ ಸಿಬಿಐ ನಿಂದ ಸತ್ಯಾಂಶ ಹೊರ ತರಲು ಸಾಧ್ಯವಾಗದೆ ಇರಬಹುದು ಎಂದು ಎಚ್‍ಡಿಕೆ ಹೇಳಿದರು.
ಜಂತಕಲ್ ಮೈನಿಂಗ್ ವಿಚಾರದಲ್ಲಿ ನನ್ನ ಮೇಲೂ ಎಸ್‍ಐಟಿ ಎಫ್‍ಐಆರ್ ದಾಖಲಿಸಿದೆ. ಆದರೆ ರಾಜ್ಯ ಸರ್ಕಾರ ನಮಗೆ ಸಂಬಂಧ ಇಲ್ಲ ಎನ್ನುತ್ತಿದೆ. ಇತ್ತೀಚೆಗೆ ಎಫ್‍ಐಆರ್ ಹಾಕೋದು ಕಾಮನ್, ತೆಗೆಸೋದು ಕಾಮನ್. ಬಿ ರಿಪೋರ್ಟ್ ಹಾಕಿಸೋದು ಸಹಜವಾಗಿದೆ. ಆದಾಗ್ಯೂ ಸುಪ್ರೀಂ ಮುಂದೆ ಎಸ್‍ಐಟಿ ಮೂಲಕ ಯಾಕೆ ಅರ್ಜಿ ಹಾಕಿಸಿದ್ರು ಅಂಥ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್‍ಡಿಕೆ ಚಾಟಿ ಬೀಸಿದರು.
ಬೆಂಗಳೂರು: ಇನ್ಮುಂದೆ ಬೆಂಗಳೂರಿನಲ್ಲಿ ಪಾರ್ಕಿಂಗ್ ವಿಚಾರಕ್ಕೆ ಮಹಿಳೆಯರು ಹೆಚ್ಚು ತೆಲೆಕೆಡಿಸಿಕೊಳ್ಳಬೇಕಾಗಿಲ್ಲ. ಯಾಕೆಂದರೆ, ವಾಹನ ಪಾರ್ಕಿಂಗ್ ಸ್ಪೇಸ್ ನಲ್ಲಿ ಮಹಿಳೆಯರಿಗೆ ಶೇ.20 ರಷ್ಟು ಮೀಸಲಾತಿ ಸಿಗಲಿದೆ.
ಬೆಂಗಳೂರಿನಲ್ಲಿ ವಾಹನ ಪಾರ್ಕಿಂಗ್ ಜಾಗದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲಾಗುವುದೆಂದು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಟ್ವೀಟ್ ಮಾಡಿದ್ದಾರೆ.
ಹೌದು, ಈ ಬಗ್ಗೆ ಕೆಜೆ ಜಾರ್ಜ್ ಇಂದು ಟ್ವೀಟ್ ಮಾಡಿದ್ದು, ಅತಿ ಹೆಚ್ಚು ವಾಣಿಜ್ಯ ವಹಿವಾಟು ನಡೆಯುವ ಪ್ರದೇಶದಲ್ಲಿ ಬಿಬಿಎಂಪಿ ಪಾರ್ಕಿಂಗ್ ಸ್ಥಳದಲ್ಲಿ ಶೇ.20 ರಷ್ಟು ಮಹಿಳೆಯರ ವಾಹನಕ್ಕೆ ಮೀಸಲಾತಿ ನೀಡಲಾಗುವುದೆಂದು ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನ ಇಂದಿರಾನಗರ, ಕೋರಮಂಗಲ, ಜೆಸಿ ರೋಡ್, ಸಿಐಡಿ, ವಿಧಾನಸೌಧ ಸುತ್ತಮುತ್ತಾ ಸೇರಿದಂತೆ ಸಿಬಿಡಿ ಸ್ಥಳದಲ್ಲಿ ಮಹಿಳೆಯರಿಗೆ ಪಾರ್ಕಿಂಗ್ ಸೌಲಭ್ಯದಲ್ಲಿ ಮೀಸಲಾತಿ ಸಿಗಲಿದೆ ಎಂದು ತಿಳಿಸಿದ್ದಾರೆ.
20% of parking spaces on 85 roads to be reserved for women. It is aimed at ensuring the safety of women. Motorists can download the app to find the parking space. #BLRDevelopmentpic.twitter.com/CmIlxI1fdu
ಬೆಂಗಳೂರು: ಕಳೆದ ರಾತ್ರಿ ನಗರದಲ್ಲಿ ಸುರಿದ ಮಹಾ ಮಳೆಗೆ 7 ಜನರ ದಾರುಣ ಸಾವು ಸಂಭವಿಸಿದ್ದು, ದುರ್ಘಟನೆ ಕುರಿತು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆಯನ್ನು ಎದುರಿಸಲು ಎಲ್ಲಾ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಹಲವು ವರ್ಷಗಳ ಹಿಂದೆಯೇ ಸೂಕ್ತ ಅಭಿವೃದ್ಧಿ ಯೋಜನೆಗಳನ್ನು ಆರಂಭ ಮಾಡಬೇಕಾಗಿತ್ತು ಆದರೆ ಮಾಡಿಲ್ಲ. ನಮ್ಮ ಸರ್ಕಾರವು ಇಂದು 1200 ಕೋಟಿ ರೂ. ಗಳ ರಾಜಕಾಲುವೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದೇವೆ. ಶೀಘ್ರವೇ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.
ನಾವು ಅಧಿಕಾರ ವಹಿಸಿಕೊಂಡಾಗ ಬೆಂಗಳೂರು 50 ಕಿ.ಮೀ ಮಾತ್ರ ರಾಜಕಾಲುವೆ ಇತ್ತು. ಇಂದು ಈ ಕಾಲುವೆಗಳನ್ನು 350 ಕಿ.ಮೀ ವರೆಗೆ ವಿಸ್ತರಿಸಿದ್ದೇವೆ. ಇನ್ನು ಒಂದು ವರ್ಷದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಅಂತ ಅವರು ಭರವಸೆ ನೀಡಿದ್ರು.
ಇದೇ ಸಂದರ್ಭದಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಸಾವನ್ನಪ್ಪಿರುವ ಜನರಿಗೆ ತಲಾ 5 ಲಕ್ಷ ರೂ.ಗಳನ್ನು ಪರಿಹಾರವಾಗಿ ಘೋಷಿಸಿರುವುದಾಗಿ ತಿಳಿಸಿದರು.
ಬೆಂಗಳೂರು: ಬಿಬಿಎಂಪಿ ಹಾಗೂ ಗುತ್ತಿಗೆದಾರರಿಗೆ ಸಿಎಂ ಸಿದ್ದರಾಮಯ್ಯ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಗುತ್ತಿಗೆದಾರರ ಸಂಘದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ರಸ್ತೆ ಗುಂಡಿ ಬೀಳೋದಕ್ಕೆ ಕಾರಣ ಏನು ಅಂತಾ ಕಂಟ್ರಾಕ್ಟರ್‍ಗಳನ್ನ ಪ್ರಶ್ನೆ ಮಾಡಿದ್ರು. ಅದಕ್ಕೆ ಗುತ್ತಿಗೆದಾರರೆಲ್ಲಾ ಒಮ್ಮೆಲೆ ಮಳೆ ಸಾರ್ ಅಂತಾ ಹೇಳಿದ್ರು. ಮಳೆ ಅಷ್ಟೇ ಅಲ್ಲ. ಕಾಮಗಾರಿಗೂ ಮೊದಲು ಪ್ರಾಪರ್ ಪ್ಲಾನ್ ಮಾಡಲ್ಲ ನೀವು. ಗುಟ್ಟಮಟ್ಟದ ಸಿಮೆಂಟ್, ಕಾಂಕ್ರೀಟ್, ಡಾಂಬರು, ಜೆಲ್ಲಿಕಲ್ಲು ಕೂಡಾ ಬಳಸಲ್ಲ ನೀವು ಅಂತಾ ಕಿಚಾಯಿಸಿದ್ರು.
ವರುಣಾ ನಾಲೆ ಕಾಮಗಾರಿ 18.5 ಕೋಟಿಯಲ್ಲಿ ಆರಂಭವಾಗಿತ್ತು. ಇದೀಗ 700 ರಿಂದ 800 ಕೋಟಿಗೆ ಖರ್ಚು ತಲುಪಿದೆ. ಆದ್ರೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದಷ್ಟು ಬೇಗ ಕಾಮಗಾರಿಗಳನ್ನ ಪೂರ್ಣಗೊಳಿಸಿ. ನೀವು ಸಾಲ ಮಾಡಿ ಗುತ್ತಿಗೆ ಪಡೆದು ಕಾಮಗಾರಿ ಶುರು ಮಾಡಿರ್ತೀರಿ. ಸ್ವಲ್ಪ ಲಾಭದಲ್ಲಿ ಕೆಲಸ ಮುಗಿಸಿ, ಉತ್ತಮ ಗುಣಮಟ್ಟದ ಕೆಲಸ ಮಾಡಿ ಅಂತಾ ಸಿಎಂ ಹೇಳಿದ್ರು.
ಬೆಂಗಳೂರಲ್ಲಿ ಕಸ ಎತ್ತದ ಗುತ್ತಿಗೆದಾರರಿಗೂ ಸಿಎಂ ಬಿಸಿ ಮುಟ್ಟಿಸಿದ್ರು. ಪ್ರತಿ ವರ್ಷ ದುಡ್ಡು ನೀಡಿದ್ರೂ ಕಸ ಮಾತ್ರ ಅಲ್ಲೇ ಇರುತ್ತೆ. ನಗರದ 1500 ಕಿಮೀ ಹೆಚ್ಚು ರಸ್ತೆಯನ್ನು ವೈಟ್ ಟ್ಯಾಪಿಂಗ್ ರಸ್ತೆ ಮಾಡಲು ತೀರ್ಮಾನಿಸಲಾಗಿದೆ. ಈ ವರ್ಷದಿಂದ ವೈಟ್ ಟ್ಯಾಪಿಂಗ್ ಶುರುವಾಗಿದ್ದು, ಈಗಾಗಲೇ 100 ಕೀಮೀ ವೈಟ್ ಟ್ಯಾಪಿಂಗ್ ಮುಗಿದಿದೆ. ಉತ್ತಮ ಗುಣಮಟ್ಟ ಮತ್ತು ಉತ್ತಮ ಬಾಳಿಕೆ ಬರಲಿ ಅನ್ನೋ ಕಾರಣಕ್ಕೆ ಈ ತೀರ್ಮಾನ ಅಂತ ಸಿಎಂ ಹೇಳಿದ್ರು.
ಇದೇ ವೇಳೆ ಮಾತಾಡಿದ ಸಚಿವ ಜಾರ್ಜ್, ಕೆಟ್ಟ ಗುತ್ತಿಗೆದಾರರನ್ನು ಹೊರಗಿಟ್ಟು ಗುತ್ತಿಗೆದಾರರ ಸಂಘವನ್ನ ಕಟ್ಟಿ ಅಂತಾ ಹೇಳಿದ್ರು. ಬಿಬಿಎಂಪಿಯವರು ಮತ್ತು ಗುತ್ತಿಗೆದಾರರೆಲ್ಲಾ ಸೇರಿ ರಸ್ತೆ ಹಾಳು ಮಾಡ್ತಾರೆ. ಮತ್ತೆ ಅವರೇ ರಿಪೇರಿ ಮಾಡ್ತಾರೆ ಅನ್ನೊ ಮಾತುಗಳು ಕೇಳಿ ಬರ್ತಿವೆ. ಇಂತಹ ಮಾತುಗಳನ್ನು ಸುಳ್ಳಾಗಿಸಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಅಂತ ಹೇಳಿದ್ರು.
ಸತತ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದರೂ ಇಂತಹ ಮಾತುಗಳು ಕೇಳಿ ಬರ್ತಿವೆ. ಮಳೆ ನಿಂತ ನಂತರ ರಸ್ತೆ ಗುಂಡಿ ಮುಚ್ಚೋಣ ಅಂದುಕೊಂಡಿದ್ವಿ. ಆದರೆ ಮುಖ್ಯಮಂತ್ರಿಗಳು ಕೂಡಲೆ ಮುಚ್ಚಲು ಸೂಚಿಸಿದ್ದಾರೆ. ಅದರಂತೆ ಗುಂಡಿ ಮುಚ್ಚಲು ಕ್ರಮ ಕೈಗೊಂಡಿದ್ದೇವೆ. ಹಿಂದಿನ ಸರ್ಕಾರಗಳು ನಗರದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ. ನಾವು ನಗರದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನ ಮಾಡ್ತಿದ್ದೇವೆ ಅಂದ್ರು.