Tag: KitKat

  • ಕಿಟ್‌ಕ್ಯಾಟ್ ರ‍್ಯಾಪರ್‌ನಲ್ಲಿ  ಪುರಿ ಜಗನ್ನಾಥ ಫೋಟೋ – ಪ್ಯಾಕ್‌ಗಳನ್ನು ಹಿಂತೆಗೆದುಕೊಂಡ ನೆಸ್ಲೆ ಇಂಡಿಯಾ

    ಕಿಟ್‌ಕ್ಯಾಟ್ ರ‍್ಯಾಪರ್‌ನಲ್ಲಿ ಪುರಿ ಜಗನ್ನಾಥ ಫೋಟೋ – ಪ್ಯಾಕ್‌ಗಳನ್ನು ಹಿಂತೆಗೆದುಕೊಂಡ ನೆಸ್ಲೆ ಇಂಡಿಯಾ

    ನವದೆಹಲಿ: ನೆಸ್ಲೆ ಇಂಡಿಯಾದ ಉತ್ಪನ್ನವಾದ ಕಿಟ್‍ಕ್ಯಾಟ್‍ನ ರ‍್ಯಾಪರ್ ಅನ್ನು ಹೊಸದಾಗಿ ವಿನ್ಯಾಸಗೊಳಿಸಲಾಗಿದ್ದು, ಅದಕ್ಕೆ ಲಾರ್ಡ್ ಪುರಿ ಜನನ್ನಾಥ ಫೋಟೋವನ್ನು ಹಾಕಲಾಗಿದೆ. ಈ ಹಿನ್ನೆಲೆ ಗ್ರಾಹಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

    ಕಿಟ್‍ಕ್ಯಾಟ್ ಚಾಕೋಲೇಟ್ ರ‍್ಯಾಪರ್ ನಲ್ಲಿ ಲಾರ್ಡ್ ಪುರಿ ಜಗನ್ನಾಥನ ಫೋಟೋ ಇದ್ದು, ಈ ಫೋಟೋ ನೋಡಿ ಗ್ರಾಹಕರು ಆಕ್ರೋಶಗೊಂಡಿದ್ದರು. ನಂತರ ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ನೆಟ್ಟಿಗರು ಕಿಟ್‍ಕ್ಯಾಟ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಆ ಪ್ಯಾಕ್ ಅನ್ನು ನೆಸ್ಲೆ ಇಂಡಿಯಾ ಹಿಂತೆಗೆದುಕೊಂಡಿದೆ. ಇದನ್ನೂ ಓದಿ: ಆನಂದ್ ಮಹೀಂದ್ರಾ ಥ್ರೋಬ್ಯಾಕ್ ಫೋಟೋ ವೈರಲ್

    ಏನಿದು ವಿವಾದ?
    ಜಾಹೀರಾತು ಪ್ರಚಾರದ ಭಾಗವಾಗಿ, ಕಿಟ್‍ಕ್ಯಾಟ್ ರ‍್ಯಾಪರ್ ಮೇಲೆ ಭಗವಾನ್ ಜಗನ್ನಾಥ, ಬಲಭದ್ರ ಮತ್ತು ಮಾತಾ ಸುಭದ್ರೆಯ ಚಿತ್ರವನ್ನು ಒಳಸಲಾಗಿದೆ. ಆದರೆ, ಈ ಫೋಟೋ ನೋಡಿದ ನೆಟ್ಟಿಗರು ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಟ್ವಿಟ್ಟರ್‌ನಲ್ಲಿ ಹರಿಹಾಯ್ದಿದ್ದರು.

    ಈ ರೀತಿಯ ಪ್ರಚಾರದ ಗಿಮಿಕ್ ಸರಿಯಿಲ್ಲ. ದೇವರ ಫೋಟೋ ಇರುವ ಚಾಕೊಲೇಟ್ ಪೇಪರ್ ಅನ್ನು ಜನರು ರಸ್ತೆಗಳು, ಚರಂಡಿಗಳು ಮತ್ತು ಕಸದ ತೊಟ್ಟಿಗಳಲ್ಲಿ ಎಸೆಯುತ್ತಾರೆ. ಇದು ದೇವರಿಗೆ ಅವಮಾನ ಮಾಡಿದ ರೀತಿಯಾಗುತ್ತೆ ಎಂದು ಟ್ವೀಟ್ ನಲ್ಲಿ ಆಕ್ರೋಶವನ್ನು ಹೊರಹಾಕಿದ್ದರು.

    ಮತ್ತೊಬ್ಬ ವ್ಯಕ್ತಿ ಟ್ವೀಟ್ ಮಾಡಿ, ಕಿಟ್‍ಕ್ಯಾಟ್ ಪ್ಯಾಕೆಟ್‍ನಲ್ಲಿ ಜಗನ್ನಾಥ ಚಿತ್ರವನ್ನು ಮುದ್ರಿಸುವ ಹಕ್ಕನ್ನು ಅವರಿಗೆ ನೀಡಿದವರು ಯಾರು? ಇದು ನಮ್ಮ ದೇವರನ್ನು ಅವಮಾನಿಸುತ್ತದೆ. ಹಿಂದೂವಾಗಿ ನಾವು ಅದನ್ನು ಸಹಿಸುವುದಿಲ್ಲ, ಹಿಂದೂಗಳು ಅದನ್ನು ವಿರೋಧಿಸುತ್ತಾರೆ ಎಂದು ಕಿಡಿಕಾಡಿದ್ದಾರೆ.

    ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ನೆಸ್ಲೆ ಇಂಡಿಯಾ ಕಂಪನಿ ಕ್ಷಮೆಯಾಚಿಸಿದ್ದು, ಧಾರ್ಮಿಕ ನಂಬಿಕೆಗಳು ಅಥವಾ ಭಾವನೆಗಳನ್ನು ನೋಯಿಸುವ ಉದ್ದೇಶವನ್ನು ನಾವು ಹೊಂದಿಲ್ಲ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಜಾರ್ಖಂಡ್ ಮೂಲದ ಮೂವರು ಸೋಂಕಿತರು ಮಡಿಕೇರಿಯಿಂದ ಪರಾರಿ

    ನೆಸ್ಲೆ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಾ, ಕಿಟ್‍ಕ್ಯಾಟ್ ಟ್ರಾವೆಲ್ ಬ್ರೇಕ್ ಪ್ಯಾಕ್‍ಗಳು ನಮ್ಮ ದೇಶದಲ್ಲಿರುವ ಸುಂದರವಾದ ಸ್ಥಳಗಳನ್ನು ರ‍್ಯಾಪರ್ ಮೇಲೆ ಹಾಕಿ ಅದಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ರೀತಿ ಮಾಡಲಾಗಿದೆ. ಈ ಮೂಲಕ ನಮ್ಮ ಸಂಸ್ಕೃತಿ, ಕಲೆ ಮತ್ತು ಅದರ ಕುಶಲಕರ್ಮಿಗಳ ಬಗ್ಗೆ ಜಾಗೃತಿ ಮೂಡಿಸಲು ನಮ್ಮ ಕಂಪನಿ ಬಯಸಿದೆ. ಗ್ರಾಹಕರು ಈ ರೀತಿಯ ಪ್ಯಾಕ್ ಗಳನ್ನು ಸಂಗ್ರಹಿಸಲು ಇಷ್ಟಪಡುತ್ತಾರೆ ಎಂದು ತಿಳಿಸಿದೆ.

    ನಾವು ವಿಷಯದ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ನಾವು ಅಜಾಗರೂಕತೆಯಿಂದ ಯಾರ ಭಾವನೆಯನ್ನಾದರೂ ನೋಯಿಸಿದ್ದರೆ ವಿಷಾದಿಸುತ್ತೇವೆ. ತಕ್ಷಣದ ಕ್ರಮದೊಂದಿಗೆ ನಾವು ಈಗಾಗಲೇ ಮಾರುಕಟ್ಟೆಯಿಂದ ಈ ಪ್ಯಾಕ್‍ಗಳನ್ನು ಹಿಂತೆಗೆದುಕೊಳ್ಳಲು ಪ್ರಾರಂಭಿಸಿದ್ದೇವೆ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಬರೆದು ಟ್ವೀಟ್ ಮಾಡಿದೆ.