Tag: Kishan Reddy

  • ಸಚಿವ ಕಿಶನ್‌ ರೆಡ್ಡಿ ಮನೆಯಲ್ಲಿ ಸಂಕ್ರಾತಿ ಆಚರಿಸಿದ ಮೋದಿ!

    ಸಚಿವ ಕಿಶನ್‌ ರೆಡ್ಡಿ ಮನೆಯಲ್ಲಿ ಸಂಕ್ರಾತಿ ಆಚರಿಸಿದ ಮೋದಿ!

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಸಚಿವ ಮತ್ತು ತೆಲಂಗಾಣ ಬಿಜೆಪಿ ಅಧ್ಯಕ್ಷ ಜಿ.ಕಿಶನ್ ರೆಡ್ಡಿಯವರ ನಿವಾಸದಲ್ಲಿ ನಡೆದ ಸಂಕ್ರಾಂತಿ ಆಚರಣೆಯಲ್ಲಿ ಭಾಗವಹಿಸಿದ್ದರು.

    ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ಭಾರತದಾದ್ಯಂತ ಜನರು ಸಂಕ್ರಾಂತಿ ಮತ್ತು ಪೊಂಗಲ್‌ನ್ನು ಅತ್ಯಂತ ಉತ್ಸಾಹದಿಂದ ಆಚರಿಸುತ್ತಾರೆ. ಇದು ನಮ್ಮ ಸಂಸ್ಕೃತಿಯ, ಕೃಷಿ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿರುವ ನವೀಕರಣದ ಆಚರಣೆಯಾಗಿದೆ. ಸಂಕ್ರಾಂತಿ ಮತ್ತು ಪೊಂಗಲ್‌ಗೆ ನನ್ನ ಶುಭಾಶಯಗಳನ್ನು ಕೋರುತ್ತೇನೆ. ಎಲ್ಲರಿಗೂ ಸಂತೋಷ, ಉತ್ತಮ ಆರೋಗ್ಯ ಮತ್ತು ಮುಂದೆ ಸಮೃದ್ಧ ಸುಗ್ಗಿಯ ಕಾಲ ಬರಲಿ ಎಂದು ಹಾರೈಸುತ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

    ಪ್ರಧಾನಿ ಜೊತೆ ತೆಲುಗು ಚಲನಚಿತ್ರ ನಟ ಚಿರಂಜೀವಿ, ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಮತ್ತು ಕೆಲವು ಕೇಂದ್ರ ಸಚಿವರು, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹಾಜರಿದ್ದರು.

    ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುವ ಮತ್ತು ಸುಗ್ಗಿಯೊಂದಿಗೆ ಸಂಬಂಧ ಹೊಂದಿರುವ ಈ ಹಬ್ಬವನ್ನು ದೇಶದ ನಾನಾ ಭಾಗಗಳಲ್ಲಿ ಆವರಿಸಲಾಗುತ್ತದೆ. ದೇಶದ ಸಂಸ್ಕೃತಿ ಬಗ್ಗೆ ವಿಶೇಷ ಗೌರವ ಹೊಂದಿರುವ ಮೋದಿ, ವಿವಿಧ ಹಬ್ಬಗಳ ಆಚರಣೆ ವೇಳೆ ಅವರ ಕ್ಯಾಬಿನೆಟ್‌ನ ಸಚಿವರ ಮನೆಗಳಿಗೆ ಭೇಟಿ ನೀಡುತ್ತಿರುತ್ತಾರೆ.

  • ತೆಲಂಗಾಣ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕದ ಜನರ ಹಣ ಲೂಟಿ – ಕೇಂದ್ರ ಸಚಿವ ಕಿಶನ್ ರೆಡ್ಡಿ ಕಿಡಿ

    ತೆಲಂಗಾಣ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕದ ಜನರ ಹಣ ಲೂಟಿ – ಕೇಂದ್ರ ಸಚಿವ ಕಿಶನ್ ರೆಡ್ಡಿ ಕಿಡಿ

    ಹೈದರಾಬಾದ್‌: ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕಾಗಿ (Telangana Campaign) ಹಣ ಸಂಗ್ರಹಿಸಲು ಕರ್ನಾಟಕದ ಜನರಿಂದ ಹಣ ಲೂಟಿ ಮಾಡಲಾಗುತ್ತಿದೆ. ಕಾಂಗ್ರೆಸ್‌ ಸರ್ಕಾರವು ಕರ್ನಾಟಕದ ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸುತ್ತಿದೆ ಎಂದು ತೆಲಂಗಾಣ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ (Kishan Reddy) ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಹೈದರಾಬಾದ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಿಶನ್‌ ರೆಡ್ಡಿ, ʻʻಕೆಸಿಆರ್ ಕೋ ಹಟಾವೋ, ತೆಲಂಗಾಣ ಕೋ ಬಚಾವೋ, ಬಿಜೆಪಿ ಕೋ ಜಿತಾವೋʼʼ ಎಂದು ಘೋಷವಾಕ್ಯ ಮೊಳಗಿಸಿದ್ದಾರೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ಅವರಂತಹ ಹಲವು ಹಿರಿಯ ನಾಯಕರು ತೆಲಂಗಾಣದಲ್ಲಿ ಕಾಂಗ್ರೆಸ್‌ (Congress) ಪರ ವ್ಯಾಪಕ ಚುನಾವಣಾ ಪ್ರಚಾರ ನಡೆಸಿದ ಬಳಿಕ ಈ ಆರೋಪಗಳು ಕೇಳಿಬಂದಿವೆ.

    ಕಾಂಗ್ರೆಸ್‌ ಪಕ್ಷವು ಕರ್ನಾಟಕದಲ್ಲಿ 5 ಗ್ಯಾರಂಟಿಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದಿತು. ಆದ್ರೆ ಕೊಟ್ಟ ಮಾತಿನಂತೆ ಭರವಸೆಗಳನ್ನು ಈಡೇರಿಸುತ್ತಿಲ್ಲ. ಕರ್ನಾಟಕದಲ್ಲಿರುವ ಪ್ರತಿಯೊಂದು ವರ್ಗದ ಜನರೂ ಕೂಡ ಕಾಂಗ್ರೆಸ್‌ಗೆ ವಿರುದ್ಧವಾಗಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರ ಆದೇಶದಂತೆ ಕಾಂಗ್ರೆಸ್‌ ಭ್ರಷ್ಟಾಚಾರದಲ್ಲಿ ತೊಡಗಿದ್ದು, ತೆಲಂಗಾಣ, ಛತ್ತಿಸ್‌ಗಢ ಮತ್ತು ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಕರ್ನಾಟಕದಲ್ಲಿ ತೆರಿಗೆ ಮೂಲಕ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಇಂಫಾಲ ವಿಮಾನ ನಿಲ್ದಾಣದ ಮೇಲೆ ಕಾಣಿಸಿಕೊಂಡ ಡ್ರೋನ್ – ಹುಡುಕಾಟಕ್ಕೆ ತೆರಳಿದ 2 ರಾಫೆಲ್ ಜೆಟ್

    ನಾವು ಬಿಆರ್‌ಎಸ್‌ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸಮಿತಿ ನಿಯೋಜಿಸುತ್ತೇವೆ. ಕೆಸಿಆರ್ ಕುಟುಂಬ ಮತ್ತು ಬಿಆರ್‌ಎಸ್ ಶಾಸಕರು ಸೇರಿದಂತೆ ಯಾರನ್ನೂ ಈ ವಿಚಾರಣೆಯಿಂದ ಬಿಡುವುದಿಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಜಾಮೀನು ಪಡೆದ ನಾಲ್ಕೇ ದಿನದಲ್ಲಿ ಮುರುಘಾ ಶ್ರೀ ಮತ್ತೆ ಅರೆಸ್ಟ್

    ಅಲ್ಲದೇ ನಮ್ಮ ಪ್ರಣಾಳಿಕೆಯಲ್ಲಿ ನಾವು ಏನು ಹೇಳುತ್ತೇವೆಯೋ ಅದನ್ನೇ ಮಾಡುತ್ತೇವೆ, ಇದು ನಮ್ಮ ಟ್ರ್ಯಾಕ್‌ ರೆಕಾರ್ಡ್‌. ಲೋಕಸಭೆ ಚುನಾವಣೆಯಲ್ಲಿ ಬಹುಮತದ ಸರ್ಕಾರ ಸ್ಥಾಪನೆಯಾಗಿದ್ದರಿಂದ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕಿದ್ದೇವೆ. ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಗುರಿ ನಮ್ಮದು. ಆದ್ರೆ ಕಾಂಗ್ರೆಸ್‌ ಮತ್ತು ತೆಲಂಗಾಣದ ಬಿಆರ್‌ಎಸ್‌ ಭ್ರಷ್ಟಾಚಾರದಲ್ಲೇ ತೊಡಗಿದೆ. ಮರಳು ಮಾಫಿಯಾ, ಭೂಮಾಫಿಯಾ, ಗಣಿ ಮಾಫಿಯಾ, ಇತರ ಹಗರಣಗಳನ್ನು ಮಾಡುತ್ತಲೇ ಇದೆ. ಭ್ರಷ್ಟಾಚಾರವನ್ನು ಪೋಷಿಸಿ ತೆಲಂಗಾಣವನ್ನು ಲೂಟಿ ಮಾಡಿದೆ. ಇದರಿಂದ ಬೇಸತ್ತಿರುವ ಜನ ಮೋದಿ ಸರ್ಕಾರವೇ ಬೇಕೆಂದು ಬಯಸುತ್ತಿದ್ದಾರೆ.

  • ದೇಶಾದ್ಯಂತ ಸದ್ಯಕ್ಕೆ ಎನ್‌ಆರ್‌ಸಿ ಜಾರಿ ಮಾಡಲ್ಲ: ಕೇಂದ್ರ ಸರ್ಕಾರ

    ದೇಶಾದ್ಯಂತ ಸದ್ಯಕ್ಕೆ ಎನ್‌ಆರ್‌ಸಿ ಜಾರಿ ಮಾಡಲ್ಲ: ಕೇಂದ್ರ ಸರ್ಕಾರ

    ನವದೆಹಲಿ: ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯನ್ನು ಸದ್ಯ ದೇಶಾದ್ಯಂತ ಜಾರಿ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

    ಎನ್‌ಆರ್‌ಸಿ ಜಾರಿ ತರುವ ಸಂಬಂಧ ಸಿದ್ಧತೆಗಳು ನಡೆಯುತ್ತಿವೆ. 2003ರ ಪೌರತ್ವ ನಿಯಮಗಳ ಅನುಗುಣವಾಗಿ ಎನ್‌ಆರ್‌ಸಿ ನಿಯಮಗಳನ್ನು ಸಿದ್ಧಪಡಿಸಲಾಗುತ್ತಿದೆ. ನಿಯಮಗಳನ್ನು ರೂಪಿಸಿದ ಮೇಲೆ ಜಾರಿ ತರುವ ಬಗ್ಗೆ ತಿಳಿಸಲಾಗುವುದು ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

    ನವದೆಹಲಿಯಲ್ಲಿ ಮಾತನಾಡಿದ ಅವರು, ದೇಶದ್ಯಾಂತ ಎನ್‌ಆರ್‌ಸಿ ಜಾರಿ ತರುವ ಸಂಬಂಧ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಸಂಬಂಧ ನಿಯಮಗಳನ್ನು ರೂಪಿಸುತ್ತಿದ್ದೇವೆ. ಆದರೆ ಎನ್‌ಆರ್‌ಸಿ ಜಾರಿಗೆ ಯಾವುದೇ ದಿನಾಂಕ ಇದುವರೆಗೂ ನಿಗದಿ ಮಾಡಿಲ್ಲ. ಎನ್‌ಆರ್‌ಸಿ ಶೀಘ್ರದಲ್ಲಿ ಜಾರಿ ಆಗುವುದಿಲ್ಲ. ಸೂಕ್ತ ಸಮಯ ನೋಡಿಕೊಂಡು ಜಾರಿ ಮಾಡಲಿದ್ದೇವೆ ಎಂದರು.

    ಎನ್‌ಆರ್‌ಸಿ ಮೂಲಕ ದೇಶದ ಎಲ್ಲ ಮುಸ್ಲಿಮರನ್ನು ಹೊರ ಹಾಕಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ. ಆದರೆ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆ, ಕಿರುಕುಳ ಆಗುವುದಿಲ್ಲ ಎಂದು ಕಿಶನ್ ರೆಡ್ಡಿ ಸ್ಪಷ್ಟಪಡಿಸಿದರು.

    ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ಒಡಿಶಾದಲ್ಲಿ ನವೀನ್ ಪಟ್ನಾಯಕ್ ತಮ್ಮ ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 2011 ಮತ್ತು 2015 ರಲ್ಲಿ ರಾಷ್ಟ್ರೀಯ ಜನಸಂಖ್ಯಾ ನೊಂದಣಿ ಪ್ರಕ್ರಿಯೆ ನಡೆಸಿದೆ. ಏಪ್ರಿಲ್ ಸೆಪ್ಟೆಂಬರ್ 2020 ರಿಂದ 2021 ರಾಷ್ಟ್ರೀಯ ಜನಸಂಖ್ಯಾ ನೊಂದಣಿಯೂ ಎನ್‌ಆರ್‌ಸಿ ನಿಯಮಗಳ ಅಡಿಯಲ್ಲಿ ನಡೆಯಬೇಕು ಎಂದರು.

  • ಕಳೆದ 3 ವರ್ಷದಲ್ಲಿ 700ಕ್ಕೂ ಹೆಚ್ಚು ಉಗ್ರರ ಹತ್ಯೆ – ಗೃಹ ಸಚಿವಾಲಯ

    ಕಳೆದ 3 ವರ್ಷದಲ್ಲಿ 700ಕ್ಕೂ ಹೆಚ್ಚು ಉಗ್ರರ ಹತ್ಯೆ – ಗೃಹ ಸಚಿವಾಲಯ

    ನವದೆಹಲಿ: ಕಳೆದ ಮೂರು ವರ್ಷದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 700 ಕ್ಕೂ ಹೆಚ್ಚು ಉಗ್ರರನ್ನು ಕೊಲ್ಲಲಾಗಿದೆ ಎಂದು ಭಾರತೀಯ ಗೃಹ ಸಚಿವಾಲಯ ಮಂಗಳವಾರ ತಿಳಿಸಿದೆ.

    ಈ ವರ್ಷ ಜನವರಿಯಿಂದ ಜೂನ್ 16 ನಡುವೆ ಸುಮಾರು 113 ಮಂದಿ ಭಯೋತ್ಪಾದಕರನ್ನು ಕೊಲ್ಲಲಾಗಿದೆ. 2018ರಲ್ಲಿ ಒಟ್ಟು 257 ಉಗ್ರರನ್ನು ಕೊಂದಿದ್ದೇವೆ. 2017ರಲ್ಲಿ 213 ಮತ್ತು 2016 ರಲ್ಲಿ 150 ಮಂದಿ ಉಗ್ರರನ್ನು ಕೊಲ್ಲಲಾಗಿದೆ. ಒಟ್ಟು ಮೂರು ವರ್ಷದಲ್ಲಿ ಸುಮಾರು 733 ಉಗ್ರರನ್ನು ಕೊಂದಿದ್ದೇವೆ ಎಂದು ಗೃಹ ಸಚಿವಾಲಯ ತಿಳಿಸಿದೆ.

    ಈ ಅವಧಿಯಲ್ಲಿ 112 ಭಾರತೀಯ ನಾಗರಿಕರೂ ಕೂಡ ಪ್ರಾಣ ಕಳೆದುಕೊಂಡಿದ್ದಾರೆ. 2016ರಲ್ಲಿ 15 ಜನ ಮತ್ತು 2017ರಲ್ಲಿ 40 ಜನ, 2018ರಲ್ಲಿ 39 ಜನ ಮತ್ತು ಈ ವರ್ಷ ಜನವರಿಯಿಂದ ಜೂನ್ 16 ರವರೆಗೆ 18 ಮಂದಿ ಸಾವನ್ನಪ್ಪಿದ್ದಾರೆ ಎಂದು ಗೃಹ ಸಚಿವಾಲಯ ಅಂಕಿ ಅಂಶವನ್ನು ಬಿಡುಗಡೆ ಮಾಡಿದೆ.

    ಭಯೋತ್ಪಾದನೆಯನ್ನು ತಡೆಗಟ್ಟಲು ಭಾರತೀಯ ಭದ್ರತಾ ಪಡೆಗಳು ಪರಿಣಾಮಕಾರಿಯಾಗಿ ನಿರಂತರ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಇದ್ದರಿಂದ ಕಳೆದ ಮೂರು ವರ್ಷದಲ್ಲಿ ಇಷ್ಟೊಂದು ಉಗ್ರರನ್ನು ಕೊಂದಿದ್ದೇವೆ ಎಂದು ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಲೋಕಸಭೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

    ಭಾರತದಲ್ಲಿ ಭಯೋತ್ಪಾದಕರಿಗೆ ಬೆಂಬಲ ನೀಡುವ ವ್ಯಕ್ತಿಗಳ ಮೇಲೆ ಭದ್ರತಾ ಪಡೆಗಳು ನಿಗಾ ವಹಿಸಿವೆ. ಈ ರೀತಿಯ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲಾಗುತ್ತದೆ. ಭಯೋತ್ಪಾದಕ ಕೃತ್ಯಗಳಿಗೆ ಪರಿಣಾಮಕಾರಿಯಾದ ಪ್ರತೀಕಾರ ತೆಗೆದುಕೊಳ್ಳಲಾಗುತ್ತದೆ ಎಂದು ಕಿಶನ್ ರೆಡ್ಡಿ ಅವರು ತಿಳಿಸಿದರು.

  • ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸಚಿವ ಕಿಶನ್ ರೆಡ್ಡಿಗೆ ಶಾ ಕ್ಲಾಸ್

    ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸಚಿವ ಕಿಶನ್ ರೆಡ್ಡಿಗೆ ಶಾ ಕ್ಲಾಸ್

    ನವದೆಹಲಿ: ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಗೃಹ ಸಚಿವ ಅಮಿತ್ ಶಾ ತಮ್ಮ ಇಲಾಖೆಯ ಸಹಾಯಕ ಸಚಿವ ಕಿಶನ್ ರೆಡ್ಡಿ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ್ದ ಕಿಶನ್ ರೆಡ್ಡಿ, ಬೆಂಗಳೂರು, ಭೋಪಾಲ್ ಅಥವಾ ದೇಶದ ಯಾವುದೇ ನಗರದಲ್ಲಿ ಭಯೋತ್ಪಾದಕ ಕೃತ್ಯ ನಡೆದರೂ ಅದರ ಬೇರುಗಳು ಹೈದರಾಬಾದ್‍ನಲ್ಲಿದೆ. ಹೈದರಾಬಾದ್‍ನಲ್ಲಿ ಪ್ರತಿ 2-3 ತಿಂಗಳುಗಳಿಗೊಮ್ಮೆ ಉಗ್ರರ ಬಂಧನವಾಗುತ್ತದೆ ಎಂದು ಹೇಳಿಕೆ ನೀಡಿದ್ದರು.

    ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದಂತೆ ಅಮಿತ್ ಶಾ ಕಿಶನ್ ರೆಡ್ಡಿ ಅವರಿಗೆ ಕ್ಲಾಸ್ ತೆಗೆದುಕೊಂಡು, ಇನ್ನು ಮುಂದೆ ಈ ರೀತಿಯ ವಿವಾದಕ್ಕೆ ಕಾರಣವಾಗುವ ಹೇಳಿಕೆಯನ್ನು ನೀಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.

    ಶನಿವಾರ, ಸಂಸತ್ತಿನ ನಾರ್ತ್ ಬ್ಲಾಕ್‍ನಲ್ಲಿರುವ ಗೃಹ ಸಚಿವರ ಕಚೇರಿಯಲ್ಲಿ ಅಮಿತ್ ಶಾ ಅಧಿಕಾರ ಸ್ವೀಕರಿಸಿ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ನಂತರ ಅವರು, ಇಂದು ನಾನು ಗೃಹ ಇಲಾಖೆಯ ಉಸ್ತುವಾರಿಯನ್ನು ವಹಿಸಿಕೊಂಡಿದ್ದೇನೆ. ನನ್ನಲ್ಲಿ ನಂಬಿಕೆಯಿಟ್ಟು ನನಗೆ ಮುಖ್ಯವಾದ ಜವಾಬ್ದಾರಿ ನೀಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಕಿಶನ್ ರೆಡ್ಡಿಯವರ ಮಾತುಗಳಿಗೆ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ, ಸಚಿವರ ಮಾತು ಮುಸ್ಲಿಮರ ವಿರುದ್ಧ ಬಿಜೆಪಿ ಹೊಂದಿರುವ ದ್ವೇಷದ ಮನಸ್ಥಿತಿಯನ್ನು ಬಿಂಬಿಸುತ್ತದೆ. ಹೈದರಾಬಾದ್ ಉಗ್ರರ ಸ್ವರ್ಗ ಎಂದು ಗುಪ್ತಚರ, ರಾಷ್ಟ್ರೀಯ ತನಿಖಾ ದಳ ಸರ್ಕಾರಕ್ಕೆ ಲಿಖಿತ ರೂಪದಲ್ಲಿ ಸಲ್ಲಿಸಿದ್ಯಾ ಎಂದು ಪ್ರಶ್ನಿಸಿದ್ದಾರೆ.