Tag: Kisan Samman

  • ಕಿಸಾನ್ ಸಮ್ಮಾನ್ ಯೋಜನೆಯಡಿ 20 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

    ಕಿಸಾನ್ ಸಮ್ಮಾನ್ ಯೋಜನೆಯಡಿ 20 ಸಾವಿರ ಕೋಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

    ಲಕ್ನೋ: ಕಿಸಾನ್ ನಿಧಿಯನ್ನು (PM-Kisan Samman Nidhi) ಪ್ರಧಾನಿ ಮೋದಿ ರಿಲೀಸ್ ಮಾಡಿದ್ದಾರೆ. ದೇಶದ ಒಟ್ಟು 9.26 ಕೋಟಿ ರೈತರ ಖಾತೆಗಳಿಗೆ 20 ಸಾವಿರ ಕೋಟಿ  ಬಿಡುಗಡೆ ಮಾಡಿದರು.

    ಮೂರನೇ ಬಾರಿಗೆ ಪ್ರಧಾನಿಯಾದ ನಂತರ ಪಿಎಂ ಕಿಸಾನ್ ನಿಧಿಗೆ ಸಂಬಂಧಿಸಿದ ಕಡತಕ್ಕೆ ಮೋದಿ (Narendra Modi) ಮೊದಲ ಸಹಿ ಹಾಕಿದ್ರು. ಇಂದು ಸ್ವಕ್ಷೇತ್ರದಲ್ಲಿ ನಡೆದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ, ಕೃಷಿ ಸಖಿಯರಾಗಿ ತರಬೇತಿ ಹೊಂದಿದ ಸ್ವಯಂ ಸಹಾಯಕ ತಂಡಗಳ ಮಹಿಳೆಯರಿಗೆ ಮೋದಿ ಪ್ರಮಾಣಪತ್ರ ವಿತರಿಸಿದರು. ಬಳಿಕ ವಾರಣಾಸಿಯ ದಶಾಶ್ವಮೇಧ ಘಾಟ್‍ನಲ್ಲಿ ನಡೆಯುವ ಗಂಗಾರತಿಯಲ್ಲಿ ಪ್ರಧಾನಿ ಮೋದಿ ಭಾಗಿಯಾದರು.

    ಇದೇ ವೇಳೆ ವಾರಣಾಸಿಯಲ್ಲಿ ನಡೆದ ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮೂರನೇ ಅವಧಿಯಲ್ಲಿ ರೈತರು ಮತ್ತು ಬಡವರಿಗೆ ಸಂಬಂಧಿಸಿದ ಮೊದಲ ನಿರ್ಧಾರ ತೆಗೆದುಕೊಂಡಿದ್ದೇನೆ. ದೇಶದಲ್ಲಿ ಬಡವರಿಗಾಗಿ ಮೂರು ಕೋಟಿ ಮನೆ ನಿರ್ಮಾಣ ಮಾಡುವ ಗುರಿ ಇದೆ. ಕಿಸಾನ್ ಸಮ್ಮಾನ್ ನಿಧಿ ಮುಂದುವರಿಸಲು ನಿರ್ಧಾರ ಕೈಗೊಂಡಿದ್ದೇವೆ. ಈ ಯೋಜನೆಯು ಕೋಟ್ಯಂತರ ಜನರಿಗೆ ಲಾಭ ಮಾಡಲಿದೆ. ಇಂದು ಕೋಟ್ಯಂತರ ರೈತರು ನಮ್ಮ ಜೊತೆಗೆ ಸೇರಿದ್ದಾರೆ. ಕಿಸಾನ್ ಸಮ್ಮಾನ್ ನಿಧಿ ವಿಶ್ವದ ಅತಿದೊಡ್ಡ ಡಿಬಿಟಿ ಯೋಜನೆಯಾಗಿದೆ. ತಂತ್ರಜ್ಞಾನ ಬಳಸಿಕೊಂಡು ಫಲಾನುಭವಿಗೆ ನೇರ ಸರ್ಕಾರದ ಯೋಜನೆ ತಲುಪಿಸುತ್ತಿದೆ. ಯೋಜನೆಗೆ ಸೇರಲು ನಿಯಮಗಳನ್ನು ಇನ್ನಷ್ಟು ಸಡಿಲಿಸಲಾಗಿದೆ. ಕೃಷಿಯಲ್ಲಿ ನಾವು ಇನ್ನಷ್ಟು ಸ್ವಾವಲಂಬಿಯಾಗಬೇಕಿದೆ ಎಂದು ಹೇಳಿದರು.

    ಭಾರತದ ಹಲವಾರು ತರಕಾರಿ ವಿದೇಶಿ ಮಾರುಕಟ್ಟೆ ತಲುಪುತ್ತಿದೆ. ಒಂದು ಜಿಲ್ಲೆ, ಒಂದು ಉತ್ಪನ್ನ ಯೋಜನೆಯಿಂದ ರಫ್ತು ಹೆಚ್ಚುತ್ತಿದೆ. ವಿಶ್ವದ ಪ್ರತಿ ಡೈನಿಂಗ್ ಟೇಬಲ್ ಮೇಲೆ ಭಾರತದ ಒಂದಲ್ಲ ಒಂದು ಉತ್ಪನ್ನ ಇರಬೇಕು ಎನ್ನುವುದು ನನ್ನ ಗುರಿ ಎಂದು ಅವರು ತಿಳಿಸಿದರು.

    ಕೃಷಿ ಸಖಿ ಯೋಜನೆ ಮೂಲಕ ಮಹಿಳೆಯರನ್ನು ಕೃಷಿಯಲ್ಲಿ ಗುರುತಿಸಲಾಗುವುದು. ಇದು ಲಕ್ ಪತಿ ದೀದಿಯನ್ನಾಗಿಸಲು ಅನುಕೂಲವಾಗಲಿದೆ. ಡೈರಿಗಳ ನಿರ್ಮಾಣದಿಂದ ರೈತರ ಬದುಕು ಬದಲಾಗಿದೆ. ಹಾಲಿನ ಉತ್ಪನ್ನ ದೊಡ್ಡ ಪ್ರಮಾಣ ಹೆಚ್ಚಾಗಿದೆ. ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಿದೆ. 40 ಸಾವಿರ ಜನರು ಸೋಲಾರ್ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಾಶಿ ಸುತ್ತಮುತ್ತಲಿನ ಸಾರಿಗೆ ಸಂಪರ್ಕ ಹೆಚ್ಚಿಸಿರುವುದು ಆರ್ಥಿಕತೆಗೆ ದೊಡ್ಡ ಶಕ್ತಿ ಸಿಕ್ಕಿದೆ ಎಂದು ಹೇಳಿದರು.

    ಕಾಶಿಯ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ದೇಶದ ಪ್ರಧಾನಿಯಾಗುವ ಅವಕಾಶ ಸಿಕ್ಕಿದೆ. ಕಾಶಿಯ ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಮೂರನೇ ಬಾರಿಗೆ ಅವರ ಪ್ರತಿನಿಧಿಯಾಗಿ ‘ಮಾ ಗಂಗಾ ನೆ ಮುಝೆ ಗೊದ್ ಲೇ ಲಿಯಾ ಹೈ, ಮೈನ್ ಯಹೀಂ ಕಾ ಹೋ ಗಯಾ ಹೂಂ’. 18ನೇ ಲೋಕಸಭೆ ಚುನಾವಣೆಯಲ್ಲಿ ದೇಶದ 64 ಕೋಟಿಗೂ ಅಧಿಕ ಮಂದಿ ಮತ ಚಲಾಯಿಸಿದ್ದಾರೆ. ಭಾರತದ ಚುನಾವಣೆ ವಿಶ್ವದ ಅತಿ ದೊಡ್ಡ ಚುನಾವಣೆ ಎಂದರು.

    ನಾನು ಇತ್ತೀಚೆಗೆ ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಇಟಲಿಗೆ ಹೋಗಿದ್ದೆ. ನಾವು ಜಿ7 ದೇಶಗಳ ಎಲ್ಲಾ ಮತದಾರರನ್ನು ಸೇರಿಸಿದರೂ ಭಾರತದ ಮತದಾರರ ಸಂಖ್ಯೆ 1.5 ಪಟ್ಟು ಹೆಚ್ಚಾಗುತ್ತದೆ. ಈ ಚುನಾವಣೆಯಲ್ಲಿ 31 ಕೋಟಿಗೂ ಹೆಚ್ಚು ಮಹಿಳಾ ಮತದಾರರು ಭಾಗವಹಿಸಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಮತದಾರರು, ಈ ಸಂಖ್ಯೆಯು ಇಡೀ ಜನಸಂಖ್ಯೆಗೆ ಹತ್ತಿರವಾಗಿದೆ. ಈ ಸೌಂದರ್ಯ ಭಾರತೀಯ ಪ್ರಜಾಪ್ರಭುತ್ವದ ಶಕ್ತಿಯು ಇಡೀ ಜಗತ್ತನ್ನು ಆಕರ್ಷಿಸುತ್ತದೆ. ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಕಾಶಿಯ ಜನರು ಮೂರನೇ ಬಾರಿಗೆ ಪ್ರಧಾನಿಯನ್ನು ಆಯ್ಕೆ ಮಾಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ದೇಶದ ಜನತೆ ನೀಡಿದ ಜನಾದೇಶವು ಹೊಸ ಇತಿಹಾಸವನ್ನು ಸೃಷ್ಟಿಸಿದೆ ಎಂದು ಮೋದಿ ತಿಳಿಸಿದರು.

  • ಸರ್ಕಾರದ ವಿರುದ್ಧ ಸುಧಾಕರ್ ಪ್ರತಿಭಟನೆ- ಬೊಮ್ಮಾಯಿ ಸಾಥ್

    ಸರ್ಕಾರದ ವಿರುದ್ಧ ಸುಧಾಕರ್ ಪ್ರತಿಭಟನೆ- ಬೊಮ್ಮಾಯಿ ಸಾಥ್

    ಬೆಂಗಳೂರು: ಸರ್ಕಾರದ ವಿರುದ್ಧ ಮಾಜಿ ಸಚಿವ ಸುಧಾಕರ್ (Sudhakar) ಇಂದು ಪ್ರತಿಭಟನೆ ನಡೆಸಲಿದ್ದಾರೆ.

    ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಸೋತಿದ್ದ ಸುಧಾಕರ್ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 6 ತಿಂಗಳ ಕಾಲಾವಕಾಶ ಕೊಡ್ತೇನೆ, ಈ ಹೊಸ ಸರ್ಕಾರದ ವಿರುದ್ಧ ನಾನೇನು ಮಾತಾಡಲ್ಲ ಟೀಕೆ ಮಾಡಲ್ಲ ಅಂದಿದ್ರು. ಆದ್ರೆ ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (Congress) ಸರ್ಕಾರ ಜನ ವಿರೋಧಿ, ರೈತ ವಿರೋಧಿ ನೀತಿ ತಾಳಿದೆ.

    ರೈತರಿಗೆ ಕನಿಷ್ಠ ವಿದ್ಯುತ್ ಕೊಡುತ್ತಿಲ್ಲ, ಪ್ರಧಾನಿ ಮೋದಿಯವರ (Narendra Modi) ಕಿಸಾನ್ ಸಮ್ಮಾನ್ ಯೋಜನೆ (Pradhan Mantri Kisan Samman Yojana) ಸ್ಥಗಿತ ಮಾಡಿದೆ, ರೈತರ ಮಕ್ಕಳಿಗಾಗಿಯೇ ಬೊಮ್ಮಾಯಿ (Basavaraj Bommai) ಜಾರಿಗೆ ತಂದಿದ್ದ ವಿದ್ಯಾನಿಧಿ ಪ್ರೋತ್ಸಾಹ ಧನ ಯೋಜನೆ ರದ್ದು ಮಾಡಿದೆ. ಕೇವಲ 5 ತಿಂಗಳಲ್ಲೇ ಈ ಸರ್ಕಾರ ರೈತರನ್ನ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ ಅಂತ ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆಗೆ ಸುಧಾಕರ್ ನಿರ್ಧರಿಸಿದ್ದಾರೆ. ಇದನ್ನೂ ಓದಿ: ಆರ್.ಆರ್ ನಗರದ ಅನುದಾನಕ್ಕೆ ಕೊಕ್ಕೆ- ಮುನಿರತ್ನ ಉಪವಾಸ ಸತ್ಯಾಗ್ರಹ

    ಈಗಾಗಲೇ ಪಂಚಾಯತಿವಾರು ಹಳ್ಳಿಹಳ್ಳಿಗೆ ಭೇಟಿ ನೀಡಿ ಕಾರ್ಯಕರ್ತರು, ಬೆಂಬಲಿಗರ ಸಭೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಸೇರುವ ನಿರೀಕ್ಷೆ ಇದೆ. ಪ್ರತಿಭಟನೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಚಿವ ಆರ್ ಆಶೋಕ್ ಸಹ ಭಾಗಿಯಾಗಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾದಾಮಿ, ಚಾಮುಂಡೇಶ್ವರಿ, ಕೋಲಾರ ಯಾವುದೂ ಸ್ಪಷ್ಟತೆ ಇಲ್ಲ ಎನ್ನುವುದು ಗೊತ್ತಾಯಿತು: ಸಿ.ಟಿ.ರವಿ

    ಬಾದಾಮಿ, ಚಾಮುಂಡೇಶ್ವರಿ, ಕೋಲಾರ ಯಾವುದೂ ಸ್ಪಷ್ಟತೆ ಇಲ್ಲ ಎನ್ನುವುದು ಗೊತ್ತಾಯಿತು: ಸಿ.ಟಿ.ರವಿ

    ಹಾವೇರಿ: ಸಿದ್ದರಾಮಯ್ಯ (Siddaramaiah) ವರುಣಾದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ವಿಚಾರಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ  ಕಾರ್ಯದರ್ಶಿ ಸಿ.ಟಿ ರವಿ (C.T.Ravi) ಲೇವಡಿ ಮಾಡಿದ್ದಾರೆ.

    ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ (Shiggaon) ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಈಗ ಅದರ ಬಗ್ಗೆ ಮಾತನಾಡಿದರೆ ವ್ಯಕ್ತಿಗತವಾಗಿ ತೆಗೆದುಕೊಳ್ಳುತ್ತಾರೆ. ಅದು ತಪ್ಪಾಗುತ್ತದೆ. ಆದರೆ ಒಂದಂತೂ ಸ್ಪಷ್ಟವಾಯಿತು. ಸಿದ್ದರಾಮಯ್ಯನವರಿಗೆ ಬಾದಾಮಿ (Badami), ಚಾಮುಂಡೇಶ್ವರಿ (Chamundeshwari), ಕೋಲಾರ (Kolar) ಯಾವುದೂ ಸ್ಪಷ್ಟತೆ ಇಲ್ಲ ಎನ್ನುವುದು ಗೊತ್ತಾಯಿತು ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಸಿದ್ದರಾಮಯ್ಯ ರಾಜ್ಯದ ಯಾವ ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ: ಆರ್.ಅಶೋಕ್ 

    ಮಾರ್ಚ್ 1ರಿಂದ ಆರಂಭವಾದ ರಥಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. 150 ಕ್ಷೇತ್ರಗಳಲ್ಲಿ ಯಾತ್ರೆ ಪೂರ್ಣಗೊಂಡಿದೆ. ಮಾ.21ರೊಳಗೆ ಎಲ್ಲಾ ಕ್ಷೇತ್ರಗಳಲ್ಲಿ ಯಾತ್ರೆ ಹಾಯ್ದು ಬರುತ್ತದೆ. ಮಾರ್ಚ್ 25ರಂದು ದಾವಣಗೆರೆಯಲ್ಲಿ (Davanagere) ಪ್ರಧಾನಿ ಮೋದಿಯವರ (Narendra Modi) ನೇತೃತ್ವದಲ್ಲಿ ಮಹಾ ಸಂಗಮವಾಗಲಿದೆ. ದೇಶ ಮೊದಲು ಎನ್ನುವುದು ನಮ್ಮ ನೀತಿ. ದೇಶ ಮೊದಲು ಎನ್ನುವ ನಂಬಿಕೆ ಕಾಂಗ್ರೆಸ್‌ಗೆ (Congress) ಇಲ್ಲ. ಜಾತಿ ಮೊದಲು, ಕುಟುಂಬ ಮೊದಲು, ಮತ ಮೊದಲು ಎನ್ನುವ ತತ್ವ ಕಾಂಗ್ರೆಸ್‌ನದ್ದು. ವಿಭಜಿಸಿ ಆಳುವುದು ಕಾಂಗ್ರೆಸ್ ಪಕ್ಷದ ನೀತಿ. ಬಿಜೆಪಿ (BJP) ಯಾವುದೇ ಯೋಜನೆಗಳಲ್ಲಿ ಜಾತಿ ತಾರತಮ್ಯ ಮಾಡಲಿಲ್ಲ. ಎಲ್ಲಾ ಅರ್ಹರಿಗೆ ಯೋಜನೆ ಲಾಭವಾಗುವಂತೆ ಮಾಡಿದ್ದೇವೆ ಎಂದರು. ಇದನ್ನೂ ಓದಿ: ಚಾಲಕರ ಮುಷ್ಕರ – ರಾತ್ರಿಯಿಡೀ ನಡೆದುಕೊಂಡೇ ಹೋಗಿ ವಧು ಮನೆ ಸೇರಿದ ವರನ ಕುಟುಂಬ 

    ಅಂದಿನ ಕಾಂಗ್ರೆಸ್ ಸರ್ಕಾರಕ್ಕೆ ಜಿಲೇಬಿ ಕಂಡರೆ ಆಗುವುದಿಲ್ಲ ಎನ್ನುವ ಮಾತಿತ್ತು. ಜಿಲೇಬಿ ಕಂಡರೆ ಅವರಿಗೆ ಅಲರ್ಜಿ. ಜನಮನ್ನಣೆ ಪಡೆದ ನೇತೃತ್ವ ನಮ್ಮದು. ಬಡವರಿಗೆ ನಿಯತ್ತಿರುವ ಕಾರಣಕ್ಕೆ ಬಡವರಿಗೆ ಆದ್ಯತೆ ನೀಡಿದೆವು. ಹೀಗಾಗಿ ಕಿಸಾನ್ ಸಮ್ಮಾನ್ (Kisan Samman) ತಂದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: `ಕೈ’ ಟಿಕೆಟ್ ಆಕಾಂಕ್ಷಿಯಿಂದ ಸೀರೆ, ತವಾ ವಿತರಣೆ- ಉಡುಗೊರೆ ಸಿಗದ ಮಹಿಳೆಯರು ಗರಂ

  • ಕಿಸಾನ್ ಸಮ್ಮಾನ ಹಣ ಬೇರೆಯವರ ಖಾತೆಗೆ ಜಮಾ, ರೈತ ಕಂಗಾಲು

    ಕಿಸಾನ್ ಸಮ್ಮಾನ ಹಣ ಬೇರೆಯವರ ಖಾತೆಗೆ ಜಮಾ, ರೈತ ಕಂಗಾಲು

    ಧಾರವಾಡ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಿಡುಗಡೆಯಲ್ಲಿ ಎಡವಟ್ಟಾಗಿದ್ದು, ರೈತರು ಕಚೇರಿಗಳಿಗೆ ಅಲೆದಾಡುವಂತಾಗಿದೆ.

    ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಪ್ರಕರಣ ನಡೆದಿದ್ದು, ಗ್ರಾಮದ ರೈತ ಸಂಕಪ್ಪ ಹುಬ್ಬಳ್ಳಿ ಅವರ 3 ಎಕರೆ ಜಮೀನು ಮರೇವಾಡ ಗ್ರಾಮದಲ್ಲಿದೆ. 2019ರ ಜೂನ್‍ನಲ್ಲಿ ಇವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದರು. ಆದರೆ ಎರಡು ಕಂತುಗಳ ಹಣ ಸಂಕಪ್ಪ ಅವರ ಬ್ಯಾಂಕ್ ಖಾತೆಗೆ ಬೀಳುವ ಬದಲು, ಬೇರೆಯವರ ಖಾತೆಗೆ ಹೋಗಿದೆ.

    ಈ ಕುರಿತು ಸಂಕಪ್ಪ ಅವರು ಸಿಂಡಿಕೇಟ್ ಬ್ಯಾಂಕ್‍ನಲ್ಲಿ ವಿಚಾರಣೆ ಮಾಡಿದ್ದಾರೆ. ಅಲ್ಲದೇ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನೂ ವಿಚಾರಿಸಿದ್ದಾರೆ. ಆದರೆ ಯಾರೂ ಈ ಕುರಿತು ಸೂಕ್ತ ಮಾಹಿತಿ ನೀಡಿಲ್ಲ. ಹೀಗಾಗಿ ಬಂದಿರುವ 2 ಕಂತಿನ 4 ಸಾವಿರ ರೂ.ಗಾಗಿ ಇಗಾಗಲೇ 4 ಸಾವಿರ ರೂ. ಸರ್ಕಾರಿ ಕಚೇರಿಗಳಿಗೆ ಅಲೆದು ಖರ್ಚು ಮಾಡಿದ್ದಾರೆ. ನಂತರ ಈ ಕುರಿತು ಪರಿಶೀಲಿಸಲಾಗಿದ್ದು, ಹಣ ನರೇಂದ್ರ ಗ್ರಾಮದ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ ಎಂದು ತಿಳಿದಿದೆ.

    ಈ ಕುರಿತು ಸಾಕಷ್ಟು ಬಾರಿ ಸರ್ಕಾರಿ ಕಚೇರಿಗಳಿಗೆ ಓಡಾಡಿದ್ದು, ಪ್ರಯೋಜನವಾಗಿಲ್ಲ. ಇದೀಗ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಮುಂದಾಗಿದ್ದಾರೆ. ಸದ್ಯ ಎರಡು ಕಂತಿನ ಹಣ ಬೇರೆ ಖಾತೆಗೆ ಹೋಗಿದೆ ಎಂಬುದು ತಿಳಿದಿದೆ. ಬರುವ ಮೂರು ಕಂತಿನ ಹಣವನ್ನಾದರೂ ನನ್ನ ಖಾತೆಗೆ ಬರುವ ಹಾಗೆ ಮಾಡಿ ಎಂದು ರೈತ ಎಲ್ಲ ಅಧಿಕಾರಿಗಳ ಬಳಿ ಗೋಗರೆಯುತ್ತಿದ್ದಾರೆ.

  • ರೈತರಲ್ಲಿ ಆಸೆ ಹೆಚ್ಚಿಸಿದ ಕಿಸಾನ್ ಸಮ್ಮಾನ್ – ಯಾವ ಜಿಲ್ಲೆಯ ರೈತರಿಗೆ ಸಿಕ್ತು ಮೊದಲ 2 ಸಾವಿರ..?

    ರೈತರಲ್ಲಿ ಆಸೆ ಹೆಚ್ಚಿಸಿದ ಕಿಸಾನ್ ಸಮ್ಮಾನ್ – ಯಾವ ಜಿಲ್ಲೆಯ ರೈತರಿಗೆ ಸಿಕ್ತು ಮೊದಲ 2 ಸಾವಿರ..?

    ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಚಾಲನೆ ನೀಡಿರುವ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಬಗ್ಗೆ ರಾಜ್ಯದ ರೈತರು ಕುತೂಹಲ ಹೊಂದಿದ್ದಾರೆ. ಯಾರ ಖಾತೆಗೆ ಎರಡು ಸಾವಿರ ರೂಪಾಯಿ ಬಂದಿದೆ ಅಂತ ರೈತರು ಖಾತೆಗಳನ್ನ ಪರಿಶೀಲಿಸಿಕೊಳ್ಳುತ್ತಿದ್ದಾರೆ. ರಾಯಚೂರಿನ ರೈತರು ಸಹ ಸಹಾಯ ಧನದ ನಿರೀಕ್ಷೆಯಲ್ಲಿದ್ದು, ರಾಜ್ಯ ಸರ್ಕಾರ ಘೋಷಿಸಿದ ಸಾಲಮನ್ನಾಕ್ಕೆ ಕೇಳಿದಂತೆ ನಾನಾ ದಾಖಲೆಗಳನ್ನ ಕೇಳದೆ ಸುಲಭವಾಗಿ ಹಣ ನೀಡಬೇಕು ಅಂತ ಒತ್ತಾಯಿಸಿದ್ದಾರೆ.

    ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದಂತೆ ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರ ಬ್ಯಾಂಕ್ ಖಾತೆಗೆ ವಾರ್ಷಿಕ 6 ಸಾವಿರ ರೂಪಾಯಿ ವರ್ಗಾಯಿಸುವ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಚಾಲನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ 75 ಸಾವಿರ ಕೋಟಿ ಮೊತ್ತದ ಯೋಜನೆಗೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಚಾಲನೆ ನೀಡಿದ್ದಾರೆ. ಮೂರು ಕಂತುಗಳ ಪೈಕಿ ಮೊದಲ ಕಂತಿನಲ್ಲಿ 1 ಕೋಟಿ ರೈತರ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿ ವರ್ಗಾವಣೆ ಆಗಿದೆ. ಮಾರ್ಚ್ ಅಂತ್ಯದೊಳಗೆ ಬಾಕಿ ರೈತರ ಖಾತೆಗೆ ಮೊದಲ ಕಂತು ಜಮಾ ಆಗಲಿದೆ. ಹಾಗಾದ್ರೆ ರಾಜ್ಯದ ಯಾವ್ಯಾವ ಜಿಲ್ಲೆಯ ಎಷ್ಟು ಜನ ರೈತರಿಗೆ ಕಿಸಾನ್ ಸಮ್ಮಾನ ನಿಧಿ ಸಿಕ್ಕಿದೆ ಅನ್ನೋದು ಇನ್ನೂ ಸ್ಪಷ್ಟವಾಗಬೇಕಿದೆ.

    ಯಾವ ಜಿಲ್ಲೆಯಲ್ಲಿ ರೈತರಿಗೆ ಸಿಕ್ಕಿದೆ..?
    ಬಾಗಲಕೋಟೆ ಜಿಲ್ಲೆಯಲ್ಲಿ 67,064 ಜನ ಸಣ್ಣ ಹಾಗೂ ಅತಿ ಸಣ್ಣ ರೈತರಿದ್ದು ಇದೂವರೆಗೆ 6,645 ಜನ ನೋಂದಣಿಯಾಗಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 25 ಸಾವಿರ ರೈತರ ನೋಂದಣಿ ಮಾಡಲಾಗಿದೆ. ಧಾರವಾಡದಲ್ಲಿ 10 ಸಾವಿರ, ಚಿತ್ರದುರ್ಗ ಜಿಲ್ಲೆಯ ಆರು ಸಾವಿರ ರೈತರು ನೋಂದಣಿಯಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಇದುವರೆಗೆ 13 ಸಾವಿರ ರೈತರ ಖಾತೆಗಳು ನೋಂದಣಿಯಾಗಿದ್ದು 3850 ರೈತರ ಖಾತೆಗೆ ಹಣ ಜಮಾ ಆಗಿದೆ. ರಾಯಚೂರು ಜಿಲ್ಲೆಯಲ್ಲಿ 6480 ರೈತರ ಖಾತೆಗಳು ನೋಂದಣಿಯಾಗಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲಾ ರೈತರ ಖಾತೆಗೆ ಮೊದಲ ಕಂತು ಸೇರಬೇಕಿದೆ. ಹೀಗಾಗಿ ಯಾವುದೇ ಗೊಂದಲಗಳು ಇಲ್ಲದೆ ಅಧಿಕಾರಿಗಳು ಹಣ ಜಮಾ ಮಾಡಬೇಕು ಅಂತ ರಾಯಚೂರಿನಲ್ಲಿ ರೈತರು ಒತ್ತಾಯಿಸಿದ್ದಾರೆ.

    ಇಂದಿನಿಂದ ರೈತರ ಸಂಪರ್ಕ ಕೇಂದ್ರ, ಬಾಪುಜಿ ಸೇವಾ ಕೇಂದ್ರ, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಬಜೆಟ್ ನಲ್ಲಿ ಘೋಷಿಸಿದಂತೆ ಮೋದಿ ಯೋಜನೆ ಜಾರಿಗೆ ಮಾಡಿದ್ದಾರೆ. ಆದ್ರೆ ಇನ್ನೂ ಯಾವೆಲ್ಲ ಗೊಂದಲಗಳಿವೆಯೋ ಅಂತ ರೈತರು ಯೋಚಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೈತರ ಖಾತೆಗೆ ಇಂದು ಎರಡು ಸಾವಿರದ ಗರಿ ಗರಿ ನೋಟು

    ರೈತರ ಖಾತೆಗೆ ಇಂದು ಎರಡು ಸಾವಿರದ ಗರಿ ಗರಿ ನೋಟು

    -ಕಿಸಾನ್ ಸಮ್ಮಾನ್ ಯೋಜನೆಗೆ ಪ್ರಧಾನಿ ಮೋದಿ ಚಾಲನೆ
    -ಚುನಾವಣಾ ನೀತಿ ಸಂಹಿತೆ ಘೋಷಣೆಯೊಳಗೆ ಎರಡು ಕಂತು ಬಿಡುಗಡೆಗೆ ಪ್ಲಾನ್

    ನವದೆಹಲಿ: ಕೇಂದ್ರ ಮೋದಿ ಸರ್ಕಾರ ಸಾಲ ಮನ್ನಾ ಮಾಡ್ತಿಲ್ಲ ಇದು ರೈತ ಪರವಲ್ಲ ಕಾರ್ಪೊರೇಟ್ ಸರ್ಕಾರ ಹೀಗಂತ ವಿರೋಧ ಪಕ್ಷಗಳು ಟೀಕೆ ಮಾಡಲು ಶುರುವಿಟ್ಟುಕೊಂಡಿದ್ದವು. ಇದನ್ನು ಚುನಾವಣಾ ಪ್ರಥಮ ಅಸ್ತ್ರವಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದ ವಿಪಕ್ಷಗಳಿಗೆ ಮೋದಿ ಮಧ್ಯಂತರ ಬಜೆಟ್ ನಲ್ಲಿ ಶಾಕ್ ಕೊಟ್ಟಿದ್ರು. ಫೆ 1 ರಂದು ಮಂಡನೆಯಾದ ಮಧ್ಯಂತರ ಬಜೆಟ್ ನಲ್ಲಿ ಘೋಷಣೆಯಾಗಿದ್ದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 1 ಗಂಟೆಗೆ ಚಾಲನೆ ನೀಡಲಿದ್ದಾರೆ. ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ತವರು ಗೋರಕಪುರ್ ನಲ್ಲಿ ಯೋಜನೆಗೆ ಚಾಲನೆ ಸಿಗಲಿದೆ.

    ಬಿಜೆಪಿ ರೈತಾ ಮೋರ್ಚಾ ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಎರಡು ಸಾವಿರ ರೂಪಾಯಿ ಚೆಕ್ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಉತ್ತರ ಪ್ರದೇಶ ಸರ್ಕಾರ ವೇಗವಾಗಿ ರೈತರ ಮಾಹಿತಿ ಕಲೆ ಹಾಕುತ್ತಿದ್ದು ಮೊದಲ ಹಂತದಲ್ಲಿ ರೈತರಿಗೆ ಎರಡು ಸಾವಿರ ತಲುಪಿಸುವ ಕೆಲಸಕ್ಕೆ ಮುಂದಾಗಿದೆ. ಎರಡು ಹೆಕ್ಟೇರ್‍ವರೆಗೂ ಭೂಮಿ ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೆರವಾಗಲೂ ಯೋಜನೆ ಘೋಷಿಸಲಾಗಿದ್ದು ದೇಶದ 12 ಕೋಟಿ ರೈತರು ಇದರ ಲಾಭ ಪಡೆಯಲಿದ್ದಾರೆ. ಈ ಯೋಜನೆಯಿಂದ ಕೇಂದ್ರ ಸರ್ಕಾರಕ್ಕೆ 75 ಸಾವಿರ ಕೋಟಿ ಹೆಚ್ಚುವರಿಯಾಗಲಿದೆ.

    ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಚುನಾವಣಾ ಆಯೋಗ ಚುನಾವಣಾ ದಿನಾಂಕ ಪ್ರಕಟಿಸಲಿದೆ. ಈ ಹಿನ್ನೆಲೆ ಶೀಘ್ರವಾಗಿ ಮೊದಲು ಹಾಗೂ ಎರಡನೇ ಕಂತುಗಳನ್ನು ಬಿಡುಗಡೆ ಮಾಡಬೇಕು ಮಾರ್ಚ್ ಒಳಗೆ ದೇಶದ ಎಲ್ಲ ರೈತರಿಗೂ ಎರಡು ಕಂತು ಬಿಡುಗಡೆ ಮಾಡುವ ಮೂಲಕ ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಪ್ಲಾನ್ ಮಾಡಿದೆ. ಈ ಹಿನ್ನೆಲೆ ಎಲ್ಲ ರಾಜ್ಯಗಳಿಗೂ ಕೇಂದ್ರ ಕೃಷಿ ಇಲಾಖೆ ಫೆ 1 ರಂದು ಸೂಚನೆ ರವಾನಿಸಿದ್ದು ಶೀಘ್ರವಾಗಿ ಡಾಟಾ ಕಲೆಹಾಕುವಂತೆ ಹೇಳಿತ್ತು.

    ಬಿಜೆಪಿ ಆಡಳಿತ ರಾಜ್ಯಗಳಲ್ಲಿ ರೈತರ ಮಾಹಿತಿ ಪಡೆಯುವ ಕೆಲಸ ಆರಂಭವಾಗಿದ್ದು ಸಾಕಷ್ಟು ವೇಗವಾಗಿ ನಡೆಯುತ್ತಿದೆ. ಆದರೆ ಕೇಂದ್ರ ಈ ಪ್ಲಾನ್‍ನ್ನು ಪ್ಲಾಪ್ ಮಾಡಲು ನಿರ್ಧರಿಸಿರುವ ವಿರೋಧ ಪಕ್ಷಗಳು ರೈತರ ಮಾಹಿತಿ ನೀಡುವಲ್ಲಿ ವಿಳಂಬ ನೀತಿ ಪಾಲಿಸುತ್ತಿವೆ. ಚುನಾವಣಾ ನೀತಿ ಸಂಹಿತೆ ಬಳಿಕ ರೈತರ ಪಟ್ಟಿ ತಯಾರಿಸಲು ಬ್ರೇಕ್ ಬೀಳಲಿದ್ದು ಚುನಾವಣಾ ರಾಜಕಾರಣಕ್ಕೆ ವಿಪಕ್ಷಗಳು ವೇದಿಕೆ ಸಿದ್ಧ ಮಾಡಿಕೊಳ್ಳುತ್ತಿವೆ ಎನ್ನಲಾಗಿದೆ. ಹೀಗಾಗಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಜಾರಿಯಾದ್ರು ದೇಶದ ಎಲ್ಲ ರೈತರಿಗೂ ಇದರ ಲಾಭ ಸಿಗುತ್ತಾ ಅನ್ನೊ ಅನುಮಾನ ಈಗ ಎದುರಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv