Tag: Kiran Mazumdar Shaw

  • ಗುಂಡಿ ಜಟಾಪಟಿ – ಡಿನ್ನರ್ ಮೀಟಿಂಗ್ ಬಳಿಕ ಡಿಕೆಶಿಯನ್ನ ಹಾಡಿಹೊಗಳಿದ ಉದ್ಯಮಿಗಳು

    ಗುಂಡಿ ಜಟಾಪಟಿ – ಡಿನ್ನರ್ ಮೀಟಿಂಗ್ ಬಳಿಕ ಡಿಕೆಶಿಯನ್ನ ಹಾಡಿಹೊಗಳಿದ ಉದ್ಯಮಿಗಳು

    ಬೆಂಗಳೂರು: ಬೆಂಗಳೂರಿನ ಗುಂಡಿ (Bengaluru Road Potholes) ಸಮಸ್ಯೆ, ಕಸದ ಸಮಸ್ಯೆ, ಮೂಲಭೂತ ಸಮಸ್ಯೆಗಳ ವಿರುದ್ಧ ಉದ್ಯಮಿಗಳು ಸಿಡಿದೆದಿದ್ದರು. ಸರ್ಕಾರದ ವಿರುದ್ಧ ಖಾರವಾಗಿ ಎಕ್ಸ್ ಖಾತೆಯಲ್ಲಿ ಟೀಕೆ ಮಾಡಿದ್ದರು. ಕೆಲದಿನ ಸರ್ಕಾರ ವರ್ಸಸ್ ಉದ್ಯಮಿಗಳ ನಡುವೆ ಟ್ವೀಟ್ ವಾರ್, ಟಾಕ್‌ವಾರ್ ನಡೆದಿತ್ತು. ಇದು ರಾಷ್ಟ್ರಮಟ್ಟದಲ್ಲೂ ಚರ್ಚೆ ಆಗಿತ್ತು. ಆದರೆ ಈಗ ಬೆಂಗಳೂರಿನ ಗುಂಡಿ ಸಮಸ್ಯೆ ಬಗ್ಗೆ ಟೀಕಿಸಿದ್ದ ಉದ್ಯಮಿಗಳ (Businessmen) ಜೊತೆಯೇ ಉಪಮುಖ್ಯಮಂತ್ರಿ ಡಿಕೆಶಿ (DK Shivakumar) ಡಿನ್ನರ್ ಮೀಟಿಂಗ್ ಮಾಡಿದ್ದಾರೆ.

    ಬಯೋಕಾನ್ ಮುಖ್ಯಸ್ಥೆ, ಉದ್ಯಮಿ ಕಿರಣ್ ಮಜುಂದಾರ್ ಶಾ  (Kiran Mazumdar Shaw) ನಿವಾಸದಲ್ಲಿ ಶನಿವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ನಡೆಸಿದ್ದಾರೆ. ಕಿರಣ್ ಮಜುಂದರ್ ಶಾ, ಉದ್ಯಮಿ ಮೋಹನ್ ದಾಸ್ ಪೈ (Mohandas Pai) ಸೇರಿದಂತೆ ಹಲವು ಉದ್ಯಮಿಗಳು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತ ಮಹೇಶ್ವರ ರಾವ್ ಸಹ ಡಿನ್ನರ್ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದರು. ಡಿನ್ನರ್ ಮೀಟಿಂಗ್ ವೇಳೆ ಗುಂಡಿಗಳ ದುರಸ್ತಿ, ಹೊರ ವರ್ತುಲ ರಸ್ತೆಯ ಅಭಿವೃದ್ಧಿ, ನಗರಾದ್ಯಂತ ಸ್ವಚ್ಛತಾ ಅಭಿಯಾನ, ಓಆರ್‌ಆರ್ ಉದ್ದಕ್ಕೂ ನಡೆಯುತ್ತಿರುವ ಮೆಟ್ರೋ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಡಿಸಿಎಂ ಡಿಕೆಶಿಗೆ ಉದ್ಯಮಿಗಳು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಭವಿಷ್ಯ ನುಡಿಯಲು ಅವರ‍್ಯಾರು, ಜ್ಯೋತಿಷಿನಾ? – ಡಿಕೆಶಿ ವಿರುದ್ಧ ನಿಖಿಲ್‌ ಆಕ್ರೋಶ

    ಉದ್ಯಮಿಗಳೊಂದಿನ ಡಿನ್ನರ್ ಮೀಟಿಂಗ್ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ, ಉದ್ಯಮಿಗಳ ಜೊತೆ ಡಿನ್ನರ್ ಮಿಟಿಂಗ್ ಮಾಡಿದ್ದೀನಿ. ಬೆಂಗಳೂರಿನ ಹಲವು ಸಮಸ್ಯೆಗಳಿಗೆ ಸಲಹೆ ನೀಡಿದ್ದಾರೆ. ಉದ್ಯಮಿಗಳ ಸಲಹೆಯನ್ನ ನಾವು ಸ್ವೀಕರಿಸುತ್ತೇವೆ. ಸರ್ಕಾರ ಒಂದು ನಿರ್ಧಾರ ತೆಗೆದುಕೊಳ್ಳುವಾಗ ದೂರದೃಷ್ಟಿ ಇರುತ್ತದೆ. ನಮಗೆ ಸಲಹೆ ಕೊಡಿ ಆದ್ರೆ ನಮ್ಮನ್ನು ಹರ್ಟ್ ಮಾಡುವಂತೆ ಮಾಡಬೇಡಿ ಅಂತಾ ಹೇಳಿದ್ದೇನೆ ಎಂದರು. ಇದನ್ನೂ ಓದಿ: Anekal | ಕಂದಕಕ್ಕೆ ಉರುಳಿದ ಕಂಟೈನರ್ ಲಾರಿ – ಇಬ್ಬರು ದುರ್ಮರಣ, ನಾಲ್ವರು ಗಂಭೀರ

    ಡಿಕೆಶಿ ನಡಿಗೆ ಕಾರ್ಯಕ್ರಮ ಮೆಚ್ಚಿ ಪೋಸ್ಟ್:
    ಇನ್ನು ಶನಿವಾರ ರಾತ್ರಿ ಡಿನ್ನರ್ ಮೀಟಿಂಗ್ ಮೂಲಕ ಉದ್ಯಮಿಗಳನ್ನು ಡಿಕೆ ಶಿವಕುಮಾರ್ ವಿಶ್ವಾಸಕ್ಕೆ ಪಡೆದಿದ್ದಾರೆ. ಇದರ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಕಾರ್ಯಕ್ರಮಗಳನ್ನ ಉದ್ಯಮಿಗಳು ಶ್ಲಾಘಿಸಿದ್ದಾರೆ. ಡಿಕೆಶಿ ನಾಗರಿಕರೊಂದಿಗೆ ನಡಿಗೆ ಕಾರ್ಯಕ್ರಮವನ್ನ ಉದ್ಯಮಿ ಮೋಹನ್ ದಾಸ್ ಪೈ ಹೊಗಳಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಬೆಂಗಳೂರಿಗಾಗಿ ಅದ್ಭುತ ಕಾರ್ಯಕ್ರಮ ಮಾಡುತ್ತಿದ್ದೀರಿ. ಈ ಕಾರ್ಯಕ್ರಮದ ಮೂಲಕ ಜನರನ್ನ ಭೇಟಿ ಮಾಡಿ ಸಮಸ್ಯೆ ಪರಿಹರಿಸುವ ದೊಡ್ಡ ಕೆಲಸ ಮಾಡುತ್ತಿದ್ದೀರಿ. ಮೂರು ತಿಂಗಳಲ್ಲಿ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಅನೇಕ ಉತ್ತಮ ನಿರ್ಧಾರ ಮಾಡಿದ್ದೀರಿ. ಜಿಬಿಎ ರಚಿಸಿ ಭಾರತದ ದೊಡ್ಡ ನಗರಕ್ಕೆ ಸುಧಾರಣೆ ಮಾಡುತ್ತಿದ್ದೀರಿ. ನೀವು ಎಲ್ಲ ಕಾರ್ಯಗಳನ್ನ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಡಿಕೆ ಬೆಂಗಳೂರು ನಡಿಗೆ ಕಾರ್ಯಕ್ರಮದ ಕುರಿತ ಪೋಸ್ಟ್ ಟ್ಯಾಗ್ ಮಾಡಿ ಉದ್ಯಮಿ ಮೋಹನ್ ದಾಸ್ ಪೈ ಹೊಗಳಿದ್ದಾರೆ. ಇದನ್ನೂ ಓದಿ: ರಿಲಯನ್ಸ್‌ AI ಕಂಪನಿಯಲ್ಲಿ 30% ಪಾಲನ್ನು ಪಡೆದ ಫೇಸ್‌ಬುಕ್‌

  • ಡಿಕೆಶಿಯನ್ನು ಭೇಟಿಯಾದ ಕಿರಣ್ ಮಜುಂದಾರ್ ಶಾ – ಉತ್ತಮ ಚರ್ಚೆಯಾಗಿದೆ ಎಂದ ಡಿಸಿಎಂ

    ಡಿಕೆಶಿಯನ್ನು ಭೇಟಿಯಾದ ಕಿರಣ್ ಮಜುಂದಾರ್ ಶಾ – ಉತ್ತಮ ಚರ್ಚೆಯಾಗಿದೆ ಎಂದ ಡಿಸಿಎಂ

    ಬೆಂಗಳೂರು: ರಾಜಧಾನಿಯ ರಸ್ತೆ ಗುಂಡಿ ನಿರ್ವಹಣೆ ವಿಚಾರದಲ್ಲಿ ಸರ್ಕಾರವನ್ನು ಟೀಕಿಸಿದ್ದ ಬಯೋಕಾನ್‌ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (Kiran Mazumdar-Shaw) ಇಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

    ಡಿಕೆಶಿಯ ಸದಾಶಿವನಗರದ ನಿವಾಸಕ್ಕೆ ಆಗಮಿಸಿದ ಅವರು ದೀಪಾವಳಿ (Deepavali) ಹಬ್ಬದ ಶುಭಾಶಯ ತಿಳಿಸಿ ಸುಮಾರು 40 ನಿಮಿಷಗಳ ಕಾಲ ಮಾತನಾಡಿದ್ದಾರೆ. ಭೇಟಿಯ ಬಳಿಕ ಯಾವುದೇ ಪ್ರತಿಕ್ರಿಯೆ ನೀಡದೇ ಕಿರಣ್ ಮಜುಂದಾರ್ ಶಾ ತೆರಳಿದರು. ಇದನ್ನೂ ಓದಿ:  ದೀಪಾವಳಿ ಹಬ್ಬ | ಪಟ್ಟಕ್ಕಾಗಿ ಕೈ ಶಾಸಕರಿಂದ ಎರಡೂ ಪವರ್ ಸೆಂಟರ್ ಬ್ಯಾಲೆನ್ಸ್‌!

    ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಡಿಕೆಶಿ, ಇಂದು ನನ್ನ ನಿವಾಸದಲ್ಲಿ ಉದ್ಯಮಿ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರನ್ನು ಭೇಟಿಯಾಗಿದ್ದು ಸಂತೋಷವಾಯಿತು. ಬೆಂಗಳೂರಿನ ಬೆಳವಣಿಗೆ, ನಾವೀನ್ಯತೆ ಮತ್ತು ಕರ್ನಾಟಕದ ಬೆಳವಣಿಗೆಯ ಕಥೆಯ ಮುಂದಿನ ಹಾದಿಯ ಕುರಿತು ನಾವು ಉತ್ತಮ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.

     

  • ಬೆಂಗಳೂರು ನಿರಂತರ ಟೀಕೆಗೆ ಇರೋ ನಗರವಲ್ಲ, ಸಾಮೂಹಿಕ ಪ್ರಯತ್ನಕ್ಕೆ ಅರ್ಹವಾಗಿರೋ ಸಿಟಿ: ಡಿಕೆಶಿ ತಿರುಗೇಟು

    ಬೆಂಗಳೂರು ನಿರಂತರ ಟೀಕೆಗೆ ಇರೋ ನಗರವಲ್ಲ, ಸಾಮೂಹಿಕ ಪ್ರಯತ್ನಕ್ಕೆ ಅರ್ಹವಾಗಿರೋ ಸಿಟಿ: ಡಿಕೆಶಿ ತಿರುಗೇಟು

    ಬೆಂಗಳೂರು: ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (Kiran Mazumdar Shaw) ಟ್ವೀಟ್ ಗೆ ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ತಿರುಗೇಟು ನೀಡಿದ್ದಾರೆ. ಏನನ್ನೂ ಯಾರನ್ನೂ ಉಲ್ಲೇಖಿಸದೇ ಎಕ್ಸ್‌ ಮೂಲಕವೇ ಡಿಕೆಶಿ ಟಾಂಗ್ ಕೊಟ್ಟಿದ್ದಾರೆ.

    ಬೆಂಗಳೂರನ್ನು (Bengaluru) ಕೆಡವುದರ ಬದಲು, ಒಟ್ಟಾಗಿ ನಿರ್ಮಿಸೋಣ. ಜಗತ್ತು ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ಒಗ್ಗಟ್ಟಿನಿಂದ ಎತ್ತರಕ್ಕೇರಲು ನಮ್ಮ ಬೆಂಗಳೂರಿಗೆ ನಾವು ಋಣಿಯಾಗಿದ್ದೇವೆ. ಬೆಂಗಳೂರು ಲಕ್ಷಾಂತರ ಜನರಿಗೆ ಅವಕಾಶಗಳನ್ನ ನೀಡಿದೆ. ಅವರದ್ದೇ ಆದ ವ್ಯಕ್ತಿತ್ವ ಗುರುತಿಸಿ ಯಶಸ್ಸನ್ನು ನೀಡಿದೆ. ಬೆಂಗಳೂರು ನಿರಂತರ ಟೀಕೆಗೆ ಇರುವ ನಗರವಲ್ಲ. ಸಾಮೂಹಿಕ ಪ್ರಯತ್ನಕ್ಕೆ ಅರ್ಹವಾದ ನಗರ ಎಂದಿದ್ದಾರೆ.

    ಹೌದು, ಸವಾಲುಗಳು ನಮಗೆ ಇವೆ. ನಾವು ಅವುಗಳನ್ನ ಗಮನದಲ್ಲಿಟ್ಟುಕೊಂಡು, ತುರ್ತಾಗಿ ಪರಿಹರಿಸುತ್ತಿದ್ದೇವೆ. ರಸ್ತೆ ದುರಸ್ತಿಗಾಗಿ 1,100 ಕೋಟಿ ರೂ. ಮಂಜೂರಾಗಿದೆ. 10000+ ಗುಂಡಿಗಳನ್ನು ಗುರುತಿಸಲಾಗಿದೆ. 5000ಕ್ಕೂ ಹೆಚ್ಚು ಗುಂಡಿಗಳನ್ನ ಈಗಾಗಲೇ ಆದ್ಯತೆಯ ಮೇಲೆ ಮುಚ್ಚಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ರಸ್ತೆ ಗುಂಡಿ, ತೆರೆದ ಮ್ಯಾನ್‌ಹೋಲ್‌ಗಳಿಗೆ ಬಿದ್ದು ಮೃತಪಡುವವರ ಕುಟುಂಬಕ್ಕೆ 6 ಲಕ್ಷ ಪರಿಹಾರ ನೀಡಿ: ಬಾಂಬೆ ಹೈಕೋರ್ಟ್‌ ಆದೇಶ

    ಬೆಂಗಳೂರನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿ ಬೆಳೆಯಲು ಪ್ರಮುಖ ಮೂಲಸೌಕರ್ಯ ಕಾರ್ಯಗಳು ನಡೆಯುತ್ತಿವೆ. ಬೃಹತ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಪೂರ್ವ 50 ವಾರ್ಡ್‌ಗಳಲ್ಲಿ ಮೂಲಸೌಕರ್ಯವನ್ನು ನೇರವಾಗಿ ಸುಧಾರಿಸಲು ಈಗ 1,673 ಕೋಟಿ ರೂ. ಸ್ವಂತ ಆದಾಯವನ್ನು ಉಳಿಸಿಕೊಳ್ಳಲಿದೆ. ನಮ್ಮ ಐಟಿ ಕಾರಿಡಾರ್‌ಗಳಿಗೆ ನೇರವಾಗಿ ಪ್ರಯೋಜನವಾಗಲಿದೆ. ಸಿಎಸ್‌ಬಿ-ಕೆಆರ್ ಪುರಂಎಲಿವೇಟೆಡ್ ಕಾರಿಡಾರ್‌ಗಳಂತಹ ಪ್ರಮುಖ ಕಾರ್ಯಗಳು ನಡೆಯತ್ತಿವೆ. ನಾವು ನಾಗರಿಕರು, ಉದ್ಯೋಗಿಗಳು ಮತ್ತು ಕಂಪನಿಗಳಿಗೆ ಮೂಲಸೌಕರ್ಯವನ್ನು ಬಲಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

  • ಯುಪಿ, ಮಹಾರಾಷ್ಟ್ರದಲ್ಲಿ ಟೀಕೆ ಟಿಪ್ಪಣಿ ಮಾಡಿದ್ರೆ ಜೈಲಿಗೆ ಹೋಗ್ತಿದ್ರು – ಕಿರಣ್ ಮಜುಂದಾರ್ ಷಾ ಟ್ವೀಟ್‌ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

    ಯುಪಿ, ಮಹಾರಾಷ್ಟ್ರದಲ್ಲಿ ಟೀಕೆ ಟಿಪ್ಪಣಿ ಮಾಡಿದ್ರೆ ಜೈಲಿಗೆ ಹೋಗ್ತಿದ್ರು – ಕಿರಣ್ ಮಜುಂದಾರ್ ಷಾ ಟ್ವೀಟ್‌ಗೆ ಪ್ರಿಯಾಂಕ್ ಖರ್ಗೆ ತಿರುಗೇಟು

    ಬೆಂಗಳೂರು: ಯುಪಿ, ಮಹಾರಾಷ್ಟ್ರದಲ್ಲಿ ಈ ರೀತಿ ಟೀಕೆ ಟಿಪ್ಪಣಿ ಮಾಡಲಿ ನೋಡೋಣ, ಅಲ್ಲಿ ಮಾಡಿದ್ರೆ ಜೈಲಿಗೆ ಹೋಗುತ್ತಿದ್ರು ಎಂದು ಬೆಂಗಳೂರಿನ ರಸ್ತೆಗುಂಡಿಗಳು (Patholes) ಹಾಗೂ ಕಸದ ಸಮಸ್ಯೆ ಬಗ್ಗೆ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ (Kiran Mazumdar-Shaw) ಟ್ವೀಟ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ರಸ್ತೆ ಗುಂಡಿಗಳ ಬಗ್ಗೆ ಉದ್ಯಮಿಯೊಬ್ಬರ ಅಭಿಪ್ರಾಯವನ್ನ ಕಿರಣ್ ಮಜುಂದಾರ್ ಟ್ವೀಟ್ ಮಾಡಿದ್ದಾರೆ. ಮೆಸೇಜ್ ಮಾಡಿ ಸಲಹೆ ಕೊಡಲಿ, ಬೇರೆ ಸರ್ಕಾರ ಇದ್ದಾಗ ಹೀಗೆ ಆಗುತ್ತಾ? ಯುಪಿ, ಮಹಾರಾಷ್ಟ್ರದಲ್ಲಿ ಟೀಕೆ ಟಿಪ್ಪಣಿ ಮಾಡಲಿ ನೋಡೋಣ. ನಾವು ಕೇಳ್ತೀವಿ ಅಂತ ಹೀಗೆಲ್ಲಾ ಮಾಡ್ತಾರೆ. ಅಲ್ಲಿ ಮಾಡಿದರೆ ಜೈಲಿನಲ್ಲಿ ಇರ್ತಾರೆ ಎಂದು ಅಸಮಾಧಾನ ಹೊರಹಾಕಿದರು.ಇದನ್ನೂ ಓದಿ: ಬೆಂಗಳೂರಲ್ಲಿ ರಸ್ತೆ ಗುಂಡಿ, ಕಸದ ಅದ್ವಾನ – ರಾಜ್ಯ ಸರ್ಕಾರದ ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಕಿಡಿ

    ಉದ್ಯಮಿಗಳು ಹೇಳಿದ್ದನ್ನು ನಾವು ಕೇಳ್ತೀವಲ್ಲಾ ಅದಕ್ಕೆ ಅವರು ಟೀಕೆ ಮಾಡ್ತಾರೆ. ನಿರಂತರವಾಗಿ ಒಂದೂವರೆ ತಿಂಗಳಿಂದ ಅನಿರೀಕ್ಷಿತ ಮಳೆ ಆಗ್ತಿದೆ. ಸ್ವಲ್ಪ ಸಮಯ ಬೇಕಾಗುತ್ತೆ ಅಂತಾ ಸಿಎಂ ಹೇಳಿದ್ದಾರೆ. ಸಲಹೆ ಪಡೆಯಲು ಸಮಿತಿ ಕೂಡ ಮಾಡಿದ್ದಾರೆ. ಡಿಟೇಲ್ ರೂಟ್ ಮ್ಯಾಪ್ ಮಾಡ್ತಿದ್ದಾರೆ. ಟಾಸ್ಕ್‌ಫೋರ್ಸ್‌ ಮಾಡಿದಾಗ ಕಿರಣ್ ಮಜುಂದಾರ್, ಮೋಹನ್ ದಾಸ್ ಪೈ ಎಲ್ಲಾ ಇರುತ್ತಾರೆ. ಈ ಉದ್ಯಮಿಗಳದ್ದು ಅವರದ್ದೇ ಆದ ಕೊಡುಗೆ ಇದೆ. ಕಸ ಹಾಕೋರು ಯಾರು? ಮೇಲಿಂದ ಬಂದು ಬೀಳುತ್ತಾ? ನಾಗರಿಕರು ಜವಾಬ್ದಾರಾಗಬೇಕು, ಸಹಕಾರ ಕೊಡಬೇಕು ಎಂದು ಹೇಳಿದರು.

    ಆಂಧ್ರಪ್ರದೇಶದ ಐಟಿ ಮಿನಿಸ್ಟರ್ ರಣಹದ್ದು ಥರ ಕಾಯ್ಕೊಂಡು ಇರುತ್ತಾರೆ. ಯಾರು ಎಲ್ಲಿಗೆ ಬರ್ತಾರೆ, ಎಲ್ಲಿಗೆ ಹೋಗ್ತಾರೆ ಎಂದು ಕಾಯ್ಕೊಂಡು ಕುಳಿತಿರುತ್ತಾರೆ. ಅಭಿವೃದ್ಧಿ ಬಗ್ಗೆ ಪ್ರತಿಪಕ್ಷದವರು ಸಲಹೆ ಕೊಡಲ್ಲ, ಆ ನಿರೀಕ್ಷೆಯೂ ಇಲ್ಲ. ಈ ರೀತಿ ಆದ್ರೆ ಅನ್ಯ ರಾಜ್ಯದವರು ಉದ್ಯಮಿಗಳಿಗೆ ಆಹ್ವಾನ ಮಾಡೋದು ಸಹಜ ಅಲ್ಲವಾ? ಎಂದು ಕಿಡಿಕಾರಿದರು.ಇದನ್ನೂ ಓದಿ: ಸಿಎಂ, ಡಿಸಿಎಂ ಮನೆಗೆ ಬಾಂಬ್‌ ಬೆದರಿಕೆ ಬೆನ್ನಲ್ಲೇ ಅಲರ್ಟ್‌ – ಪ್ರಕರಣ ಭೇದಿಸಲು SIT ರಚಿಸಿದ ಸರ್ಕಾರ

  • ಇನ್ಫೋಸಿಸ್ ಮಂಡಳಿಯಿಂದ ಕಿರಣ್ ಮಜುಂದಾರ್ ಶಾ ನಿವೃತ್ತಿ

    ಇನ್ಫೋಸಿಸ್ ಮಂಡಳಿಯಿಂದ ಕಿರಣ್ ಮಜುಂದಾರ್ ಶಾ ನಿವೃತ್ತಿ

    ಬೆಂಗಳೂರು: ಕಿರಣ್ ಮಜುಂದಾರ್ ಶಾ (Kiran Mazumdar Shaw) ಅವರು ಇನ್ಫೋಸಿಸ್‌ನಲ್ಲಿ (Infosys) ಸ್ವತಂತ್ರ ನಿರ್ದೇಶಕಿಯಾಗಿ ತಮ್ಮ ಅಧಿಕಾರವನ್ನು ಪೂರ್ಣಗೊಳಿಸಿದ್ದು, ಮಾರ್ಚ್ 22 ರಿಂದ ಜಾರಿಗೆ ಬರುವಂತೆ ನಿವೃತ್ತರಾಗಿದ್ದಾರೆ (Retirement) ಎಂದು ಕಂಪನಿ ತಿಳಿಸಿದೆ.

    ಬಯೋಕಾನ್‌ನ (Biocon) ಕಿರಣ್ ಮಜುಂದಾರ್ ಶಾ ಅವರು ಇನ್ಫೋಸಿಸ್ ಮಂಡಳಿಯ ಸ್ವತಂತ್ರ ನಿರ್ದೇಶಕಿಯಾಗಿ ನಿವೃತ್ತರಾಗಿದ್ದಾರೆ ಎಂದು ಕಂಪನಿ ತಿಳಿಸಿದೆ. ಇದೀಗ ಇನ್ಫೋಸಿಸ್‌ನ ಮಂಡಳಿಯು ನಾಮನಿರ್ದೇಶನ ಹಾಗೂ ಸಂಭಾವನೆಯ ಶಿಫಾರಸಿನ ಆಧಾರದ ಮೇಲೆ ಮಾರ್ಚ್ 23ರಿಂದ ಕಂಪನಿಯ ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ ಡಿ ಸುಂದರಂ ಅವರನ್ನು ನೇಮಿಸಿಕೊಂಡಿದೆ.

    ಇನ್ಫೋಸಿಸ್ ಕುಟುಂಬದ ಇಂತಹ ಅವಿಭಾಜ್ಯ ಸದಸ್ಯರಾಗಿರುವ ಕಿರಣ್ ಮಜುಂದಾರ್ ಶಾ ಅವರಿಗೆ ನಾವು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಹಲವು ವರ್ಷಗಳಿಂದ ಮಂಡಳಿಗೆ ಅಮೂಲ್ಯವಾದ ಮಾರ್ಗದರ್ಶನ ಮತ್ತು ನಾಯಕತ್ವವನ್ನು ನೀಡಿರುವುದಕ್ಕೆ, ಅವರು ನನ್ನ ಅದ್ಭುತವಾದ ಸ್ನೇಹಿತೆ ಹಾಗೂ ಸಹೋದ್ಯೋಗಿಯಾಗಿರುವುದರಿಂದ ನಾನು ಅವರಿಗೆ ವೈಯಕ್ತಿಕವಾಗಿ ಕೃತಜ್ಞತೆ ತಿಳಿಸುತ್ತೇನೆ ಎಂದು ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಲ್ ಹೇಳಿದ್ದಾರೆ. ಇದನ್ನೂ ಓದಿ: ನಾಳೆ ಕರೆದಿದ್ದ ಸಾರಿಗೆ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್

    ಕಿರಣ್ ಮಜುಂದಾರ್ ಶಾ ಅವರು 2014 ರಲ್ಲಿ ಇನ್ಫೋಸಿಸ್ ಮಂಡಳಿಗೆ ಸ್ವತಂತ್ರ ನಿರ್ದೇಶಕಿಯಾಗಿ ಮತ್ತು 2018 ರಲ್ಲಿ ಪ್ರಮುಖ ಸ್ವತಂತ್ರ ನಿರ್ದೇಶಕಿಯಾಗಿ ನೇಮಕಗೊಂಡರು. ಅವರು ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿ ಮತ್ತು ಸಿಎಸ್‌ಆರ್ ಸಮಿತಿಯ ಅಧ್ಯಕ್ಷರಾಗಿ ಮಂಡಳಿಯ ಅಪಾಯ ನಿರ್ವಹಣೆ ಮತ್ತು ಇಎಸ್‌ಜಿ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ವೈಯಕ್ತಿಕ ವಿಷಯ ಬಿಟ್ಟು ತಂಡ ಬಲಗೊಳಿಸಿ ರೋಹಿತ್ ಶರ್ಮಾಗೆ ಗವಾಸ್ಕರ್ ಸಲಹೆ

  • ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಪತಿ ಜಾನ್ ಶಾ ನಿಧನ

    ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಪತಿ ಜಾನ್ ಶಾ ನಿಧನ

    ಬೆಂಗಳೂರು: ಬಯೋಕಾನ್ (Biocon) ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ (Kiran Mazumdar Shaw) ಅವರ ಪತಿ, ಬಯೋಕಾನ್ ಇಂಡಿಯಾದ ಮಾಜಿ ಉಪಾಧ್ಯಕ್ಷ ಜಾನ್ ಶಾ (John Shaw) ಅವರು ಸೋಮವಾರ ತಮ್ಮ 72 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

    ಜಾನ್ ಶಾ ಅವರು ಕರುಳಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ಶಾ ನಿಧನ ಹೊಂದಿದ್ದಾರೆ. ಶಾ ನಿಧನಕ್ಕೆ ಉದ್ಯಮ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಂತ್ಯಕ್ರಿಯೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ಸ್ಮಶಾನದಲ್ಲಿ ಸೋಮವಾರ ಸಂಜೆ ನೆರವೇರಲಿದೆ.

    ಇಂಗ್ಲೆಂಡ್ ಮೂಲದ ಜಾನ್ ಶಾ ಅವರು ವಿದೇಶಿ ಪ್ರವರ್ತಕರಾಗಿ ಮತ್ತು ವಿವಿಧ ಬಯೋಕಾನ್ ಗ್ರೂಪ್ ಕಂಪನಿಗಳ ಸಲಹಾ ಮಂಡಳಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು ಮಧುರಾ ಕೋಟ್ಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರಾಗಿ ಮತ್ತು ಕೋಟ್ಸ್ ವಿಯೆಲ್ಲಾ ಗ್ರೂಪ್‌ನ ಮಾಜಿ ಹಣಕಾಸು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

    ಶಾ ಅವರು ಗ್ಲ್ಯಾಸ್ಗೋ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಹಾಗೂ ರಾಜಕೀಯ ಆರ್ಥಿಕತೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು. ಜೊತೆಗೆ ಅದೇ ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿದ್ದರು. ಇದನ್ನೂ ಓದಿ: ಪಾಕಿಸ್ತಾನದ ಹಿರಿಯ ಪತ್ರಕರ್ತ ಕೀನ್ಯಾದಲ್ಲಿ ಹತ್ಯೆ

    2001 ರಲ್ಲಿ ಇವರ ಬಯೋಕಾನ್ ಸಂಸ್ಥೆ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಅಣುವಿನ ತಯಾರಿಕೆಗಾಗಿ ಹಾಗೂ ಆಹಾರ ಮತ್ತು ಔಷಧ ಆಡಳಿತದ ಅನುಮೋದನೆಯನ್ನು ಪಡೆದ ಮೊದಲ ಭಾರತೀಯ ಕಂಪನಿಯಾಗಿದೆ. ಕಿರಣ್ ಮಜುಂದಾರ್ ತಮ್ಮ ಬಯೋಕಾನ್ ಸಂಸ್ಥೆಯನ್ನು ವಿಶ್ವದ ಪ್ರತಿಷ್ಠಿತ ಸಂಸ್ಥೆಯಾಗಿ ಪರಿವರ್ತಿಸಿದ್ದಾರೆ.

    ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಪ್ರತಿಷ್ಠಿತ ಉತ್ಪನ್ನಗಳನ್ನು ನೀಡುತ್ತಿರುವ ಬಯೋಕಾನ್ ಸಂಸ್ಥೆಯನ್ನು ಕಿರಣ್ ಮಜುಂದಾರ್ ಅವರು ಪ್ರಾರಂಭಿಸಿದ್ದು ತಮ್ಮ ಮನೆಯ ಶೆಡ್ ಒಂದರಲ್ಲಿ. ಅದೂ ಕೇವಲ 10 ಸಾವಿರ ರೂ. ಬಂಡವಾಳದ ಮೂಲಕ. ಅಂದಿನ ದಿನದಲ್ಲಿ ಅವರಿಗೆ ಯಾರೂ ಸಹಾಯಕ್ಕೆ ಬಂದಿರಲಿಲ್ಲ. ತಮ್ಮ ನಿರಂತರ ಪರಿಶ್ರಮದಿಂದ ಇಂದು ಬಯೋಕಾನ್ ಸಂಸ್ಥೆ ವಿಶ್ವದಲ್ಲೇ 7ನೇ ಅತಿ ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಇದನ್ನೂ ಓದಿ: SC-ST ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ – ಮುಂದಿನ ಅಧಿವೇಶನದಲ್ಲಿ ಅನುಮೋದನೆ: ಬೊಮ್ಮಾಯಿ

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರು ವಿಮಾನ ನಿಲ್ದಾಣದ ಹಿಂದಿನ ಖ್ಯಾತಿ ಹಾಳಾಗುತ್ತಿದೆ: ಕಿರಣ್ ಮಜುಂದಾರ್ ಶಾ

    ಬೆಂಗಳೂರು ವಿಮಾನ ನಿಲ್ದಾಣದ ಹಿಂದಿನ ಖ್ಯಾತಿ ಹಾಳಾಗುತ್ತಿದೆ: ಕಿರಣ್ ಮಜುಂದಾರ್ ಶಾ

    ಬೆಂಗಳೂರು: ಸಿಲಿಕಾನ್ ಸಿಟಿ ವಿಮಾನ ನಿಲ್ದಾಣ ಹಾಗೂ ನಮ್ಮ ನಗರದ ಬಗ್ಗೆ ಈ ಹಿಂದೆ ಇದ್ದ ದಕ್ಷತೆ ಹಾಗೂ ಖ್ಯಾತಿ ಇತ್ತೀಚೆಗೆ ಹಾಳಾಗುತ್ತಿದೆ ಎಂದು ಖ್ಯಾತ ಉದ್ಯಮಿ ಹಾಗೂ ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಮಾಜಿ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಟ್ವಿಟ್ಟರ್‌ನಲ್ಲಿ ಟೀಕೆ ಮಾಡಿದ್ದಾರೆ.

    ಟ್ವಿಟ್ಟರ್‌ನಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಬಗ್ಗೆ ಟೀಕಿಸಿರುವ ಕಿರಣ್, ನಮ್ಮ ಪ್ರಯಾಣ ಯಾವಾಗಲೂ ಸ್ಮಾರ್ಟ್ ಹಾಗೂ ಡಿಜಿಟಲ್ ಆಗಿರಬೇಕು. ಮುಖವನ್ನು ಗುರುತಿಸುವ ತಂತ್ರಜ್ಞಾನ, ಬಯೋಮೆಟ್ರಿಕ್ಸ್ ಪ್ರವೇಶ ಹಾಗೂ ನಿರ್ಗಮನವನ್ನು ಪರಿಣಾಮಕಾರಿಯಾಗಿ ಮಾಡಬೇಕು. ಆದರೆ ಪ್ರಯಾಣದ ಬಗ್ಗೆ ಇರುವ ಈ ತಂತ್ರಜ್ಞಾನದ ನಮ್ಮ ನಿರೀಕ್ಷೆ ದುಃಸ್ವಪ್ನವಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಮರು ಪರೀಕ್ಷೆ ನಡೆದರೆ ಜ್ಞಾನೇಂದ್ರರಂತಹ ಅಸಮರ್ಥರು ಪಿಎಸ್‍ಐಗಳಾಗಿ ನೇಮಕಗೊಂಡರೂ ಆಶ್ಚರ್ಯ ಇಲ್ಲ: ಸಿದ್ದು

    ಈ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಖಾತೆ, ಪತ್ರ ಬರೆದಿರುವುದಕ್ಕಾಗಿ ಧನ್ಯವಾದಗಳು. ನಾವು ಖಂಡಿತವಾಗಿಯೂ ನಿಮ್ಮ ಪ್ರತಿಕ್ರಿಯೆಯನ್ನು ನಮ್ಮ ಕಾರ್ಯಾಚರಣೆ ತಂಡದೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಬರೆದಿದೆ. ಇದನ್ನೂ ಓದಿ: ಶೀಘ್ರದಲ್ಲೇ ಪಿಎಸ್‍ಐ ಮರುಪರೀಕ್ಷೆ ದಿನಾಂಕ ಪ್ರಕಟ: ಆರಗ ಜ್ಞಾನೇಂದ್ರ

  • ರಾಜ್ಯದ ಕೋಮು ಸಂಘರ್ಷ ದೇಶದ ಐಟಿ ಹಬ್‍ಗೆ ಮಾರಕ ಬೊಮ್ಮಾಯಿ ಬಗೆಹರಿಸುವ ಭರವಸೆ ನೀಡಿದ್ದಾರೆ: ಕಿರಣ್ ಮಜುಂದಾರ್

    ರಾಜ್ಯದ ಕೋಮು ಸಂಘರ್ಷ ದೇಶದ ಐಟಿ ಹಬ್‍ಗೆ ಮಾರಕ ಬೊಮ್ಮಾಯಿ ಬಗೆಹರಿಸುವ ಭರವಸೆ ನೀಡಿದ್ದಾರೆ: ಕಿರಣ್ ಮಜುಂದಾರ್

    ಬೆಂಗಳೂರು: ಪಟ್ಟಭದ್ರಾ ಹಿತಾಸಕ್ತಿಗಳು ವಿಷಯವನ್ನು ರಾಜಕೀಯವಾಗಿ ಹೈಜಾಕ್ ಮಾಡುತ್ತಿವೆ. ರಾಜ್ಯದ ಕೋಮು ಸಂಘರ್ಷ ದೇಶದ ಐಟಿ ಹಬ್‍ಗೆ ಮಾರಕವಾಗಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಶಾಂತಿಯುತವಾಗಿ ಬಗೆಹರಿಸುವ ವಿಶ್ವಾಸ ನನ್ನದು ಎಂದಿದ್ದಾರೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ -ಶಾ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.

    ಇಂದು ಬೆಳಗ್ಗೆ ಜಾತ್ರೆ, ಉತ್ಸವ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವಂತೆ ಬಲಪಂಥೀಯ ಗುಂಪುಗಳ ನೀಡಿರುವ ಕರೆಗೆ ಸಂಬಂಧಿಸಿದಂತೆ ಕಿರಣ್ ಮಜುಂದಾರ್-ಶಾ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ್ದರು. ತಂತ್ರಜ್ಞಾನ ಕ್ಷೇತ್ರವು ಕೋಮುವಾದಿಯಾದರೆ ಅದು ಭಾರತದ ಜಾಗತಿಕ ನಾಯಕತ್ವವನ್ನು ನಾಶ ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮುಖ್ಯಮಂತ್ರಿಗಳೇ, ಕೋಮುಗಳ ನಡುವಿನ ವಿಭಜನೆ ತಡೆಯಿರಿ: ಕಿರಣ್‌ ಮಜುಂದಾರ್‌ ಶಾ ಒತ್ತಾಯ

    ಟ್ವೀಟ್‍ನಲ್ಲೇನಿದೆ?
    ಎಲ್ಲಾ ಸಮುದಾಯಗಳನ್ನೂ ಒಳಗೊಂಡ ಆರ್ಥಿಕ ಅಭಿವೃದ್ಧಿಯನ್ನು ಕರ್ನಾಟಕ ರೂಪಿಸಿದೆ. ಇಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು. ಐಟಿಬಿಟಿ ಯಂತಹ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ. ಬಸವರಾಜ ಬೊಮ್ಮಾಯಿ ಅವರೇ, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ. ಇದನ್ನೂ ಓದಿ: ರತನ್‌ ಟಾಟಾಗೆ ಭಾರತ ರತ್ನ ನೀಡುವಂತೆ ಮನವಿ ಮಾಡಿದ್ದ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

    ನಾನು ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸುತ್ತೇನೆ. ರಾಜ್ಯದ ಪರಿಸ್ಥಿತಿಯನ್ನು ಶಾಂತಿಯುತವಾಗಿ ಬಗೆಹರಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಚರ್ಚೆ ನಡೆಸುವ ಕುರಿತು ಸಿಎಂ ತಿಳಿಸಿರುವುದು ಅಭಿನಂದನಾರ್ಹ.

  • ಮುಖ್ಯಮಂತ್ರಿಗಳೇ, ಕೋಮುಗಳ ನಡುವಿನ ವಿಭಜನೆ ತಡೆಯಿರಿ: ಕಿರಣ್‌ ಮಜುಂದಾರ್‌ ಶಾ ಒತ್ತಾಯ

    ಮುಖ್ಯಮಂತ್ರಿಗಳೇ, ಕೋಮುಗಳ ನಡುವಿನ ವಿಭಜನೆ ತಡೆಯಿರಿ: ಕಿರಣ್‌ ಮಜುಂದಾರ್‌ ಶಾ ಒತ್ತಾಯ

    ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ವಿಭಜನೆ ಬಿಕ್ಕಟ್ಟನ್ನು ಪರಿಹರಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಅವರು ತಾಕೀತು ಮಾಡಿದ್ದಾರೆ.

    ಜಾತ್ರೆ, ಉತ್ಸವ ಸಂದರ್ಭದಲ್ಲಿ ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿಷೇಧಿಸುವಂತೆ ಬಲಪಂಥೀಯ ಗುಂಪುಗಳ ನೀಡಿರುವ ಕರೆಗೆ ಸಂಬಂಧಿಸಿದಂತೆ ಕಿರಣ್ ಮಜುಂದಾರ್-ಶಾ ಟ್ವಿಟ್ಟರ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ. ತಂತ್ರಜ್ಞಾನ ಕ್ಷೇತ್ರವು ಕೋಮುವಾದಿಯಾದರೆ ಅದು ಭಾರತದ ಜಾಗತಿಕ ನಾಯಕತ್ವವನ್ನು ನಾಶ ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿರೋದು ಬಿಜೆಪಿ ಸರ್ಕಾರ, RSS, VHP, ಬಜರಂಗದಳವಲ್ಲ: ಹೆಚ್.ವಿಶ್ವನಾಥ್ ಕಿಡಿ

    ಟ್ವೀಟ್‌ನಲ್ಲೇನಿದೆ?
    ಎಲ್ಲಾ ಸಮುದಾಯಗಳನ್ನೂ ಒಳಗೊಂಡ ಆರ್ಥಿಕ ಅಭಿವೃದ್ಧಿಯನ್ನು ಕರ್ನಾಟಕ ರೂಪಿಸಿದೆ. ಇಲ್ಲಿ ಕೋಮುವಾದಕ್ಕೆ ಅನುಮತಿ ನೀಡಬಾರದು. ಐಟಿಬಿಟಿ ಯಂತಹ ಕ್ಷೇತ್ರಗಳಲ್ಲಿ ಕೋಮುವಾದ ಬೆಳೆದರೆ, ಅದು ನಮ್ಮ ಜಾಗತಿಕ ನಾಯಕತ್ವವನ್ನು ನಾಶಪಡಿಸುತ್ತದೆ. ಬಸವರಾಜ ಬೊಮ್ಮಾಯಿ ಅವರೇ, ದಯವಿಟ್ಟು ಕೋಮುಗಳ ನಡುವಿನ ವಿಭಜನೆಯನ್ನು ತಡೆಯಿರಿ ಎಂದು ಟ್ವೀಟ್‌ ಮಾಡಿ ಕಿರಣ್‌ ಮಜುಂದಾರ್‌ ಅವರು ಒತ್ತಾಯಿಸಿದ್ದಾರೆ.

    ಬೊಮ್ಮಾಯಿ ಮತ್ತು ಕಿರಣ್‌ ಶಾ ಅವರಿಗೆ ಟ್ಯಾಗ್‌ ಮಾಡಿ ವ್ಯಕ್ತಿಯೊಬ್ಬ, ಬೊಮ್ಮಾಯಿ ಅವರು ಕೋಮುಗಳ ನಡುವಿನ ವಿಭಜನೆಯನ್ನು ಹೆಚ್ಚಿಸುತ್ತಾರೆ. ನಮ್ಮ ಕಣ್ಣೆದುರೇ ಕರ್ನಾಟಕ ಬಿಕ್ಕಟ್ಟು ಬಗೆಹರಿಸುವಲ್ಲಿ ವಿಫಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಹಲಾಲ್ ಧಾರ್ಮಿಕ ಆಚರಣೆ, ಇದರಲ್ಲಿ ಸರ್ಕಾರ ಮೂಗು ತೂರಿಸುವುದಿಲ್ಲ: ಬಿ.ಸಿ ನಾಗೇಶ್

    ಇದಕ್ಕೆ ಪ್ರತಿಕ್ರಿಯಿಸಿರುವ ಕಿರಣ್‌ ಶಾ ಅವರು, ನಮ್ಮ ಮುಖ್ಯಮಂತ್ರಿಗಳು ಪ್ರಗತಿಪರ ನಾಯಕ. ಈ ಬಿಕ್ಕಟ್ಟನ್ನು ಅವರು ಪರಿಹರಿಸುತ್ತಾರೆಂಬ ಭರವಸೆಯಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

  • ಚೈನಾದಿಂದ ಹೊರ ಬರುತ್ತಿರುವ ಕಂಪನಿಗಳನ್ನ ಸೆಳೆಯಲು ರಾಜ್ಯ ಸರ್ಕಾರದಿಂದ ಪ್ಲಾನ್

    ಚೈನಾದಿಂದ ಹೊರ ಬರುತ್ತಿರುವ ಕಂಪನಿಗಳನ್ನ ಸೆಳೆಯಲು ರಾಜ್ಯ ಸರ್ಕಾರದಿಂದ ಪ್ಲಾನ್

    – ಕೈಗಾರಿಕೋದ್ಯಮಿಗಳೊಂದಿಗೆ ಸಚಿವ ಜಗದೀಶ್ ಶೆಟ್ಟರ್ ಸಮಾಲೋಚನೆ

    ಬೆಂಗಳೂರು: ಕೋವಿಡ್-19 ಲಾಕ್‍ಡೌನ್ ನಂತರ ರಾಜ್ಯದ ಆರ್ಥಿಕತೆಗೆ ಉತ್ತೇಜನ ನೀಡಲು ಹಾಗೂ ಚೈನಾ ದೇಶದಿಂದ ಹೊರ ಬರುತ್ತಿರುವ ಕಂಪನಿಗಳನ್ನು ರಾಜ್ಯಕ್ಕೆ ಸೆಳೆಯುವ ಬಗ್ಗೆ ಇಂದು ವಿಧಾನಸೌಧದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

    ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಜೊತೆಯಲ್ಲಿ ರಾಜ್ಯದ ಪ್ರಮುಖ ಕೈಗಾರಿಕೋದ್ಯಮಿಗಳಾದ ಇನ್ಫೋಸಿಸ್‍ನ ನಾನ್ ಎಕ್ಸಿಕ್ಯೂಟಿವ್ ಚೇರ್ಮನ್ ನಂದನ್ ನೀಲೇಕಣಿ, ಬಯೋಕಾನ್ ಚೇರ್ ಪರ್ಸನ್ ಕಿರಣ್ ಮಜುಂದಾರ್ ಷಾ ಹಾಗೂ ಇನ್ಫೋಸಿಸ್‍ನ ಸಿಇಓ ಕ್ರಿಸ್ ಗೋಪಾಕೃಷ್ಣನ್ ಅವರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆಯನ್ನು ನಡೆಸಲಾಯಿತು.

    ವಿಡಿಯೋ ಕನ್ಫರೆನ್ಸ್ ನಲ್ಲಿ ಮಾತನಾಡಿದ ಕೈಗಾರಿಕ ಸಚಿವ ಜಗದೀಶ್ ಶೆಟ್ಟರ್, ಲಾಕ್‍ಡೌನ್ ಸಮಯದಲ್ಲಿ ಕೈಗಾರಿಕೆಗಳ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳು ಹಾಗೂ ಮುತುವರ್ಜಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಇದೇ ವೇಳೆ ರಾಜ್ಯ ಸರ್ಕಾರ ರಾಜ್ಯಕ್ಕೆ ಕೈಗಾರಿಕೆಗಳನ್ನು ಸೆಳೆಯುವ ನಿಟ್ಟಿನಲ್ಲಿ ಹೂಡಿಕೆ ಸ್ನೇಹಿ ಕ್ರಮಗಳನ್ನು ಕೈಗೊಳ್ಳುತ್ತಿರುವ ಬಗ್ಗೆ ತಿಳಿಸಿದರು.

    ಕೈಗಾರಿಕೋದ್ಯಮಿಗಳಾದ ನಂದನ್ ನೀಲೇಕಣಿ, ಕಿರಣ್ ಮಜುಂದಾರ್ ಷಾ ಹಾಗೂ ಕ್ರಿಸ್ ಗೋಪಾಕೃಷ್ಣನ್ ಕೊರೊನಾ ಮಹಾಮಾರಿಯನ್ನು ನಿಯಂತ್ರಣದಲ್ಲಿಡಲು ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ಕೈಗಾರಿಕಾ ಕ್ಷೇತ್ರದ ಸಕಾರಾತ್ಮಕ ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಹಲವಾರು ಸಲಹೆಗಳನ್ನು ನೀಡಿದರು. ಏಕಗವಾಕ್ಷಿ ಅರ್ಜಿಗಳ ವಿಲೇವಾರಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು, ಭೂಮಿಯನ್ನು ಕೊಳ್ಳುವ ಹಾಗೂ ಪರಭಾರೆ ಮಾಡಿಕೊಳ್ಳುವ ನಿಯಮಗಳ ಸಡಲಿಕೆ, ರಾಜ್ಯದಲ್ಲಿ ನೂತನ ಕಾರ್ಖಾನೆಯನ್ನು ಪ್ರಾರಂಭಿಸಲು ಇರುವ ನಿಯಮಗಳಲ್ಲಿ ಸ್ಪಷ್ಟತೆ ತರುವುದು ಹೀಗೆ ಹತ್ತು ಹಲವು ಸಲಹೆಗಳನ್ನು ನೀಡಿದರು.

    ಕೊರೊನಾ ಮಹಮಾರಿಯ ನಂತರ ಹಲವಾರು ಕಂಪನಿಗಳು ಚೈನಾ ದೇಶದಿಂದ ತಮ್ಮ ಉತ್ಪಾದನಾ ಕಾರ್ಖಾನೆಗಳನ್ನು ಹೊರ ಬರಲು ಯೋಚನೆ ನಡೆಸುತ್ತಿವೆ. ಈ ಸನ್ನಿವೇಶದ ಸದುಪಯೋಗವನ್ನು ಪಡೆದುಕೊಳ್ಳವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು. ಹೊರ ಬರುತ್ತಿರುವ ನೂರು ಕಂಪನಿಗಳ ಲಿಸ್ಟ್ ಅನ್ನು ತಯಾರಿಸಿ ಆ ಕಂಪನಿಗಳ ಜೊತೆ ಚರ್ಚೆ ಮಾಡಬೇಕು. ಈ ಹಂತದಲ್ಲಿ ಆ ಕೈಗಾರಿಕೆಗಳ ಸಿಇಓಗಳ ಜೊತೆ ಸಭೆ ನಡೆಸಲು ಕೈಗಾರಿಕೋದ್ಯಮಿಗಳು ಅಗತ್ಯ ಸಹಾಯ ನೀಡುವ ಭರವಸೆಯನ್ನು ನೀಡಿದರು.

    ಕೈಗಾರಿಕೋದ್ಯಮಿಗಳು ನೀಡಿದ ಸಲಹೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು. ಜೊತೆಗೆ ನೂತನ ಕೈಗಾರಿಕಾ ನೀತಿ ಸದ್ಯದಲ್ಲೇ ಹೊರ ಬೀಳಲಿದ್ದು, ಎಂಎಸ್‍ಎಂಇ ಕೈಗಾರಿಕೆಗಳಿಗೆ ಪರಿಹಾರ ನೀಡುವ ಪ್ಯಾಕೇಜ್ ತರುವ ಬಗ್ಗೆ ಸರ್ಕಾರದ ಜೊತೆ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

    ಸಭೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಕೈಗಾರಿಕಾ ಇಲಾಖೆಯ ಆಯುಕ್ತೆ ಶ್ರಿಮತಿ ಗುಂಜನ್ ಕೃಷ್ಣ ಪಾಲ್ಗೊಂಡಿದ್ದರು.