Tag: kiran bedi

  • ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಯೋಪಿಕ್ ಅನೌನ್ಸ್

    ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಬಯೋಪಿಕ್ ಅನೌನ್ಸ್

    ಭಾರತದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದ ಕಿರಣ್ ಬೇಡಿ (Kiran Bedi) ಸಾಹಸಗಾಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ. ಕಿರಣ್ ಬೇಡಿ ಬಯೋಪಿಕ್ (Kiran Bedi Biopic) ಬರಲಿದೆ ಎಂದು ಅನೌನ್ಸ್ ಕೂಡ ಮಾಡಿದ್ದಾರೆ. ಡ್ರೀಮ್ ಸ್ಲೇಟ್ ಪಿಕ್ಚರ್ಸ್‌ ಅಡಿಯಲ್ಲಿ ಗೌರವ್ ಚಾವ್ಲಾ ನಿರ್ಮಾಣ ಮಾಡುತ್ತಿದ್ದಾರೆ. ಇದನ್ನೂ ಓದಿ:ರೇವ್ ಪಾರ್ಟಿ ಪ್ರಕರಣ: ತೆಲುಗು ನಟಿ ಹೇಮಾಗೆ ಷರತ್ತುಬದ್ಧ ಜಾಮೀನು

    ಸಿನಿಮಾ ಅನೌನ್ಸ್‌ಮೆಂಟ್ ಬಳಿಕ ಕಿರಣ್ ಬೇಡಿ ಮಾತನಾಡಿ ಈ ಕಥೆ ಕೇವಲ ನನ್ನ ಕಥೆಯಲ್ಲ. ಇದು ಭಾರತೀಯ ಮಹಿಳೆಯ ಕಥೆಯಾಗಿದೆ. ಭಾರತದಲ್ಲಿ ಬೆಳೆದ, ಭಾರತದಲ್ಲಿ ಅಧ್ಯಯನ ಮಾಡಿದ, ಭಾರತೀಯ ಪೋಷಕರಿಂದ ಬೆಳೆದ ಮತ್ತು ತನ್ನ ವೃತ್ತಿ ಜೀವನದುದ್ದಕ್ಕೂ ಭಾರತದ ಜನರಿಗಾಗಿ ಕೆಲಸ ಮಾಡಿದ ಮಹಿಳೆಯ ಕಥೆ. ನಾವು ಈ ಚಿತ್ರವನ್ನು 50ನೇ ಅಂತಾರಾಷ್ಟ್ರೀಯ ಮಹಿಳಾ ರ‍್ಷದಲ್ಲಿ ಬಿಡುಗಡೆ ಮಾಡುವ ಗುರಿ ಹೊಂದಿದ್ದೇವೆ ಎಂದು ಮಾತನಾಡಿದರು. ಇದನ್ನೂ ಓದಿ:ಹೊಸ ಸಿನಿಮಾ ಒಪ್ಪಿಕೊಂಡ ರಾಮ್ ಪೋತಿನೇನಿ

     

    View this post on Instagram

     

    A post shared by Kushaal Chawla (@kushaalchawla)

    ಡೈರೆಕ್ಟರ್ ಕುಶಾಲ್ ಚಾವ್ಲಾ (Kushal Chawla) ಮಾತನಾಡಿ, ಈ ಚಿತ್ರವು ಪ್ರೀತಿಯ ಶ್ರಮ. ನಾಲ್ಕು ವರ್ಷಗಳ ಕಾಲ ಸಂಶೋಧನೆಯಲ್ಲಿ ತೊಡಗಿ ಮಾಡಿರುವ ಸಿನಿಮಾ ಇದಾಗಿದೆ. ಡಾ.ಕಿರಣ್ ಬೇಡಿಯವರ ಜೀವನದ ಕುರಿತು ಸಿನಿಮಾ ಮಾಡಿ ನಿರ್ದೇಶಿಸಿರುವುದು ನನ್ನ ಸೌಭಾಗ್ಯ ಎಂದು ಮಾತನಾಡಿದ್ದಾರೆ.

    ಅಂದಹಾಗೆ, ಈ ಚಿತ್ರಕ್ಕೆ ‘ದಿ ನೇಮ್ ಯು ನೋ: ದ ಸ್ಟೋರಿ ಯು ಡೋಂಟ್’ ಎಂದು ಟೈಟಲ್ ಇಡಲಾಗಿದೆ. ಮುಂದಿನ ವರ್ಷ ಈ ಸಿನಿಮಾ ರಿಲೀಸ್ ಆಗಲಿದೆ.

  • ರಾಜಕಾರಣಿಗಳಷ್ಟೇ ಅಲ್ಲ ಅಧಿಕಾರಿಗಳೂ ಜನರೊಂದಿಗೆ ಬೆರೆಯುವ ಪರಿಪಾಠ ಬೆಳೆಸಿಕೊಳ್ಬೇಕು: ಕಿರಣ್ ಬೇಡಿ

    ರಾಜಕಾರಣಿಗಳಷ್ಟೇ ಅಲ್ಲ ಅಧಿಕಾರಿಗಳೂ ಜನರೊಂದಿಗೆ ಬೆರೆಯುವ ಪರಿಪಾಠ ಬೆಳೆಸಿಕೊಳ್ಬೇಕು: ಕಿರಣ್ ಬೇಡಿ

    ಬೆಂಗಳೂರು: ಜನರ ಸಮಸ್ಯೆಗಳ ಪರಿಹಾರಕ್ಕೆ ಕೇವಲ ರಾಜಕಾರಣಿಗಳಷ್ಟೇ ಅಲ್ಲ ಪ್ರಮುಖ ಅಧಿಕಾರಿಗಳೂ ಕೂಡಾ ಜನರೊಂದಿಗೆ ಬೆರೆಯುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಜನರ ಹಲವಾರು ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಲು ಸಾಧ್ಯ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಪಾಂಡಿಚೇರಿಯ ಮಾಜಿ ಲೆಫ್ಟೆನೆಂಟ್ ಗವರ್ನರ್ ಕಿರಣ್ ಬೇಡಿ ಅಭಿಪ್ರಾಯಪಟ್ಟರು.

    ಇಂದು ಬೆಂಗಳೂರಿನಲ್ಲಿ ಸುರಾನಾ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ 3ನೇ ಆವೃತ್ತಿಯ ಸಿಜಿಎಸ್ ಕಾನ್ ಕ್ಲೇವ್ ನಲ್ಲಿ ದೇಶ ಮತ್ತು ಸಮುದಾಯಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲಾದ, ಜಿಸಿ ಸುರಾನಾ ಲೀಡರ್‌ಶೀಪ್ ಅವಾರ್ಡ್ 2022 ಅನ್ನು ಸ್ವೀಕರಿಸಿ ಮಾತನಾಡಿದರು. ಇದನ್ನೂ ಓದಿ: ಪ್ಯಾನ್ ಇಂಡಿಯಾ’ – ಸಿನಿಮಾಗಳಿಗೆ ಅಗೌರವ ತೋರುವ ಪದ, ಇದನ್ನು ತೆಗೆದುಹಾಕಬೇಕು: ಸಿದ್ಧಾರ್ಥ್ 

    ಸರ್ಕಾರದ ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಿಗಳು ತಮ್ಮ ನಾಯಕತ್ವದ ಸರಿಯಾದ ಉಪಯೋಗ ಮಾಡಿಕೊಳ್ಳುವುದು ಬಹಳ ಅಗತ್ಯ. ನಾನು ಐಪಿಎಸ್ ಅಧಿಕಾರಿಯಾಗಿ ಕೆಲಸ ಪ್ರಾರಂಭಿಸಿದ ಸಂಧರ್ಭದಲ್ಲಿ ಅಧಿಕಾರಿಗಳ ಮಧ್ಯೆ ಸಂವಹನವೇ ಇರುತ್ತಿರಲಿಲ್ಲ. ಇದು ಪಾಂಡಿಚೇರಿಯಲ್ಲೂ ಕಂಡುಬಂದಿತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನನ್ನ ಆಡಳಿತದಲ್ಲಿ 6 ‘ಪಿ’ ಗಳನ್ನು ಅಳವಡಿಸಿಕೊಂಡೆ. ಜನರಲ್ಲಿ ನಮ್ಮ ಆಡಳಿತದ ಬಗ್ಗೆ ನಂಬಿಕೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು ಎಂದರು.

    ಅಧಿಕಾರಿಗಳು ಮತ್ತು ಪ್ರತಿ ಇಲಾಖೆಯ ಪ್ರಮುಖರು ಜನರ ಮಧ್ಯೆ ಬೆರೆಯುವ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಸ್ವತಃ ಪರಿಶೀಲಿಸುವ ಪರಿಪಾಠವನ್ನು ಬೆಳೆಸಲಾಯಿತು. ಇದರಿಂದ ಅಭಿವೃದ್ಧಿ ಕೆಲಸಗಳು ಬಹಳ ವೇಗ ಪಡೆದುಕೊಂಡವು. ಯಾರೋ ಗುರುತಿಸಲಿ ಎನ್ನುವ ಮನೋಭಾವನೆಯಿಂದ ಕೆಲಸಗಳನ್ನು ಮಾಡಬಾರದು. ನಮ್ಮ ಕೆಲಸಗಳೇ ನಮ್ಮನ್ನು ಗುರುತಿಸುವಂತಾಗಬೇಕು. ಶಿಕ್ಷಣ ನೀಡಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡುವಂತೆ ಕರೆ ನೀಡಿದರು. ಇದನ್ನೂ ಓದಿ: ಸೌತ್‌ ಸಿನಿಮಾದಿಂದ ಬಾಲಿವುಡ್‌ನಲ್ಲಿ ಅಭದ್ರತೆ – ಖಡಕ್‌ ಉತ್ತರ ಕೊಟ್ಟ ನವಾಜುದ್ದೀನ್ ಸಿದ್ದಿಕಿ

    ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್ ನಾರಾಯಣ ಮಾತನಾಡಿ, ಇಂದು ಶೈಕ್ಷಣಿಕ ಅಂಕಗಳು ಮಾತ್ರ ಉದ್ಯೋಗ ಪಡೆಯುವ ಮಾನದಂಡ ಅಲ್ಲ. ಕ್ರೀಡೆ, ವ್ಯಕ್ತಿತ್ವ ಬೆಳವಣಿಗೆ ಮತ್ತು ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ನಮ್ಮ ಶೈಕ್ಷಣಿಕ ಪರಿಕ್ಷಾ ಪದ್ಧತಿಯ ಮಾನದಂಡಗಳೇ ಬದಲಾಗಿವೆ. ಮೊದಲೆಲ್ಲಾ ಪುಸ್ತಕಗಳನ್ನು ಬಾಯಿಪಾಠ ಮಾಡಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಬಹುದಿತ್ತು. ಆದರೆ ಈಗ ವಿಷಯವನ್ನು ಸಮರ್ಥವಾಗಿ ತಿಳಿದುಕೊಂಡರೆ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಬೆಂಗಳೂರು ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಕ್ಷಿಪ್ರವಾಗಿ ಬೆಳೆಯುತ್ತಿದೆ. ಎಲ್ಲಾ ರಂಗಗಳಲ್ಲೂ ಕೂಡಾ ವಿಫುಲ ಅವಕಾಶಗಳು ಇವೆ. ಸುರಾನಾ ಶೈಕ್ಷಣಿಕ ಸಂಸ್ಥೆಗಳು ನಗರದ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸುರಾನಾ ಕಾಲೇಜು ಸ್ವಾಯತ್ತ ಸ್ಥಾನಮಾನ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವನ್ನೂ ಪ್ರಾರಂಭಿಸಲಿ. ಇದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಹೇಳಿದರು.

    ಪದ್ಮಶ್ರೀ ಪುರಸ್ಕೃತ ಡಾ. ರಮಣರಾವ್ ಮಾತನಾಡಿ, ಮೈಕ್ರೋಲ್ಯಾಬ್ಸ್ ಸಂಸ್ಥೆಯ ವತಿಯಿಂದ ಸುರಾನಾ ಕುಟುಂಬ ದೇಶದ ಆರೋಗ್ಯ ಕ್ಷೇತ್ರಕ್ಕೆ ಬಹಳ ಕೊಡುಗೆ ನೀಡಿದೆ. ನಾನು ಪ್ರತಿ ಭಾನುವಾರ ನಡೆಸುತ್ತಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಉಚಿತವಾಗಿ ಮಾತ್ರೆಗಳನ್ನು ನೀಡಿ ಸಹಕರಿಸುತ್ತಿದ್ದನ್ನು ನೆನಪಿಸಿಕೊಂಡರು.

    ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸುರಾನಾ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸುರಾನಾ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ, ಮೈಕ್ರೋಲ್ಯಾಬ್ಸ್‍ನ ಎಂ.ಡಿ ದಿಲೀಪ್ ಸುರಾನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

    ಸುರಾನಾ ಕಾಲೇಜಿನ ವತಿಯಿಂದ ಆಯೋಜಿಸಿದ್ದ 3ನೇ ಆವೃತ್ತಿಯ ಸಿಜಿಎಸ್ ಕಾನ್ ಕ್ಲೇವ್ ನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಮತ್ತು ಪಾಂಡಿಚೇರಿಯ ಮಾಜಿ ಲೆಪ್ಟಿನೆಂಟ್ ಗೌರ್ನರ್ ಕಿರಣ್ ಬೇಡಿ, ಸಮರ್ಥನಂ ಸಂಸ್ಥೆಯ ಡಾ. ಜಿ.ಕೆ ಮಹಾಂತೇಶ್, ಶಿಕ್ಷಣ ತಜ್ಞ ಡಾ. ಹೆಚ್. ಆರ್ ಅಪ್ಪನ್ನಯ್ಯ, ಪದ್ಮಶ್ರೀ ಪುರಸ್ಕೃತ ಡಾ. ಬಿ ರಮಣರಾವ್ ಅವರಿಗೆ ಜಿಸಿ ಸುರಾನಾ ಲೀಡರ್‌ಶೀಪ್ ಅವಾರ್ಡ್ 2022 ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸಚಿವರಾದ ಡಾ. ಸಿ ಎನ್ ಅಶ್ವಥ್ ನಾರಾಯಣ, ಸುರಾನಾ ಟ್ರಸ್ಟ್‍ನ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ, ಮೈಕ್ರೋಲ್ಯಾಬ್ಸ್‌ನ ಎಂ.ಡಿ ದಿಲೀಪ್ ಸುರಾನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

  • ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿ ವಜಾ

    ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಕಿರಣ್ ಬೇಡಿ ವಜಾ

    – ಪುದುಚೇರಿ ಜನರ ಗೆಲುವು ಅಂದ್ರು ದಿನೇಶ್ ಗುಂಡೂರಾವ್

    ಪುದುಚೇರಿ: ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ಮಾಜಿ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ರಾಷ್ಟ್ರಪತಿ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.

    ಕಿರಣ್ ಬೇಡಿ ತೆಲಂಗಾಣದ ಲೆಫ್ಟಿನೆಂಟ್ ಗವರ್ನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಅವರನ್ನು ಈ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನದಿಂದ ಈ ಬಗ್ಗೆ ಅಧಿಕೃತ ಆದೇಶ ಪ್ರಕಟಗೊಂಡಿದ್ದು, ಹೊಸ ರಾಜ್ಯಪಾಲರ ನೇಮಕವಾಗುವವರೆಗೂ ತೆಲಂಗಾಣದ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಅವರಿಗೆ ಪುದುಚೆರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.

    ಪುದುಚೇರಿಯ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇದ್ದಾಗ ಕೇಂದ್ರ ಸರ್ಕಾರ ರಾಜ್ಯಪಾಲರ ಬದಲಾವಣೆ ಮಾಡಿರುವುದು ಕುತೂಹಲ ಮೂಡಿಸಿದೆ. ಪುದುಚೆರಿಯ ಅಭಿವೃದ್ಧಿಗೆ ಕೇಂದ್ರದ ಸೂಚನೆಯಂತೆ ಕಿರಣ್ ಬೇಡಿ ಅಡ್ಡಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಈ ಹಿಂದೆ ಆರೋಪ ಮಾಡಿತ್ತು.

    ಇದೀಗ ಏಕಾಏಕಿ ಪುದುಚೇರಿಯ ರಾಜ್ಯಪಾಲರ ಹುದ್ದೆಯಿಂದ ವಜಾಮಾಡಲಾಗಿದ್ದು, ಕಿರಣ್ ಬೇಡಿ ಅವರನ್ನು ತಡೆಯಲಾಗಿದೆ. ಹೊಸ ರಾಜ್ಯಪಾಲರ ನೇಮಕವಾಗುವವರೆಗೆ ತೆಲಂಗಾಣದ ರಾಜ್ಯಪಾಲರಾದ ತಮಿಳುಸಾಯಿ ಸೌಂದರರಾಜನ್ ಅವರಿಗೆ ಪುದುಚೆರಿಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ ಎಂದು ರಾಷ್ಟ್ರಪತಿ ಭವನದಿಂದ ಅಧಿಕೃತ ಹೇಳಿಕೆ ಪ್ರಕಟವಾಗಿದೆ.

    ಕಳೆದ ತಿಂಗಳು ಪುದುಚೆರಿಯಲ್ಲಿ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬಂದಿದ್ದ ಇಬ್ಬರು ಶಾಸಕರು ಕಿರಣ್ ಬೇಡಿ ಅವರನ್ನು ರಾಜ್ಯಪಾಲರ ಹುದ್ದೆಯಿಂದ ವಜಾಗೊಳಿಸಬೇಕೆಂದು ಬೇಡಿಕೆ ಇಟ್ಟಿದ್ದರಂತೆ. ಈ ಎಲ್ಲಾ ಹಾಗು- ಹೋಗುಗಳ ನಡುವೆ ಇದೀಗ ಕಿರಣ್ ಬೇಡಿ ಪದಚ್ಯುತಿ ಕೂತುಹಲ ಕೆರಳಿಸಿದೆ.

    ಪುದುಚೇರಿ ಜನರಿಗೆ ಗೆಲುವು:
    ಲೆಫ್ಟಿನೆಂಟ್ ಗವರ್ನರ್ ಹುದ್ದೆಯಿಂದ ವಜಾಗೊಳಿಸಿರುವುದು ಪುದುಚೇರಿ ಜನರ ಗೆಲುವು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

    ಭಾರತದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಲೆಫ್ಟಿನೆಂಟ್ ಜನರಲ್ ಆಗಿದ್ದಾರೆ. ಅವರು ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಲು ಬಿಟ್ಟಿರಲಿಲ್ಲ. ಬಿಜೆಪಿ/ಆರ್‍ಎಸ್‍ಎಸ್ ಕಚೇರಿಯೇ ಕಿರಣ್ ಬೇಡಿ ಕಚೇರಿಯಾಗಿತ್ತು ಎಂದು ದಿನೇಶ್ ಬರೆದುಕೊಂಡಿದ್ದಾರೆ.

  • ರೌಡಿ ಬೇಬಿ ಹಾಡಿಗೆ ಸೊಂಟ ಬಳುಕಿಸಿದ ಅಜ್ಜಿ – ವಿಡಿಯೋ ವೈರಲ್

    ರೌಡಿ ಬೇಬಿ ಹಾಡಿಗೆ ಸೊಂಟ ಬಳುಕಿಸಿದ ಅಜ್ಜಿ – ವಿಡಿಯೋ ವೈರಲ್

    – ಅಜ್ಜಿ ಹೆಜ್ಜೆಗೆ ಕಿರಣ್ ಬೇಡಿ ಫಿದಾ

    ಪಾಂಡಿಚೇರಿ: ನಗರದಲ್ಲಿ ಪೊಂಗಲ್ ಸಂಭ್ರಮಾಚರಣೆ ವೇಳೆ ಅಜ್ಜಿಯೊಬ್ಬರು ರೌಡಿ ಬೇಬಿ ಹಾಡಿಗೆ ಸಖತ್ ಆಗಿ ಸೊಂಟ ಬಳುಕಿಸಿದ್ದು, ಈ ವಿಡಿಯೋ ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ.

    ವಿಡಿಯೋವನ್ನು ಪಾಂಡಿಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದವರು ಅಜ್ಜಿ ಡ್ಯಾನ್ಸ್ ಗೆ ಫಿದಾ ಆಗಿದ್ದು, ಇಳಿ ವಯಸ್ಸಿನಲ್ಲೂ ಖುಷಿಯಿಂದ ಡ್ಯಾನ್ಸ್ ಮಾಡಿದ ಅಜ್ಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

    ಪಾಂಡಿಚೇರಿಯಲ್ಲಿ ಕಿರಣ್ ಬೇಡಿ ಅವರು ನಗರದ ಪೌರ ಕಾರ್ಮಿಕರು ಹಾಗೂ ಸಚ್ಛತಾ ಕಾರ್ಪೊರೇಷನ್‍ನ ಮಹಿಳೆಯರೊಂದಿಗೆ ಪೊಂಗಲ್ ಆಚರಣೆ ಮಾಡಿದ್ದಾರೆ. ಈ ಸಂಭ್ರಮಾಚರಣೆ ವೇಳೆ ಕೆಲವು ಮಹಿಳೆಯರು ಖುಷಿಯಾಗಿ ಕುಣಿದಿದ್ದಾರೆ. ಅದರಲ್ಲೂ ವೃದ್ಧೆಯೊಬ್ಬರು ತಮಿಳಿನ ‘ಮಾರಿ-2’ ಚಿತ್ರದ ‘ರೌಡಿ ಬೇಬಿ’ ಹಾಡಿಗೆ ಸಖತ್ ಹೆಜ್ಜೆ ಹಾಕಿ ಎಲ್ಲರ ಮನಗೆದ್ದಿದ್ದಾರೆ. ವೃದ್ಧೆಯ ಡ್ಯಾನ್ಸ್ ಗೆ ಸ್ವತಃ ಕಿರಣ್ ಬೇಡಿ ಅವರೇ ಫಿದಾ ಆಗಿದ್ದಾರೆ.

    ಈ ವಿಡಿಯೋ ಸುಮಾರು 28 ಸಾವಿರಕ್ಕೂ ಅಧಿಕ ಬಾರಿ ವಿಕ್ಷಣೆಯಾಗಿದ್ದು, 3 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಸಾವಿರಾರು ಮಂದಿ ಶೇರ್ ಕೂಡ ಮಾಡಿಕೊಂಡಿದ್ದಾರೆ.

    ಇನ್ನೊಂದು ಟ್ವೀಟ್‍ನಲ್ಲಿ ಪೊಂಗಲ್ ಸಂಭ್ರಮಾಚರಣೆಯ ಬಳಿಕ ಕಿರಣ್ ಬೇಡಿಯವರು ದಾನಿಗಳ ಜೊತೆ ಸೇರಿ ಪುರುಷ ಕಾರ್ಮಿಕರಿಗೆ ಟವಲ್ ಹಾಗೂ ಮಹಿಳೆಯರಿಗೆ ಸೀರೆ ಉಡುಗೊರೆಯಾಗಿ ನೀಡಿರುವ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.

  • ಸಿಎಂ, ಗವರ್ನರ್ ನಡುವೆ ಹೆಲ್ಮೆಟ್ ವಾರ್- ಟ್ವಿಟ್ಟರ್‌ನಲ್ಲಿ ಒಬ್ಬರಿಗೊಬ್ಬರು ಟಾಂಗ್

    ಸಿಎಂ, ಗವರ್ನರ್ ನಡುವೆ ಹೆಲ್ಮೆಟ್ ವಾರ್- ಟ್ವಿಟ್ಟರ್‌ನಲ್ಲಿ ಒಬ್ಬರಿಗೊಬ್ಬರು ಟಾಂಗ್

    ಪುದುಚೇರಿ: ಹೆಲ್ಮೆಟ್ ಧರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪುದುಚೇರಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಹಾಗೂ ಉಪರಾಜ್ಯಪಾಲೆ ಕಿರಣ್ ಬೇಡಿ ನಡುವಿನ ಟ್ವೀಟ್ ವಾರ್ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಕಿರಣ್ ಬೇಡಿ ಹಾಗೂ ನಾರಾಯಣಸ್ವಾಮಿ ಇಬ್ಬರೂ ಸಹ ವಿವಿಧ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಇದೀಗ ಹೆಲ್ಮೆಟ್ ಕುರಿತು ಒಬ್ಬರಿಗೊಬ್ಬರು ಟ್ವೀಟ್ ಮಾಡುವ ಮೂಲಕ ಚರ್ಚೆಗೆ ಕಾರಣವಾಗಿದ್ದಾರೆ.

    ನಾರಾಯಣಸ್ವಾಮಿಯವರು ಹೆಲ್ಮೆಟ್ ಧರಿಸದೆ ಚುನಾವಣಾ ಪ್ರಚಾರದ ರ್ಯಾಲಿಯಲ್ಲಿ ಭಾಗವಹಿಸಿದ್ದನ್ನು ಕಂಡು ಕಿರಣ್ ಬೇಡಿ ಕಿಡಿಕಾರಿದ್ದರು. ಈ ಕುರಿತು ಟ್ವೀಟ್ ಮಾಡಿ ಮೋಟಾರು ವಾಹನಗಳ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನಾರಾಯಣಸ್ವಾಮಿಯವರ ಫೋಟೋವನ್ನು ಟ್ವೀಟ್ ಮಾಡಿದ್ದರು.

    ಸುಪ್ರೀಂ ಕೋರ್ಟ್, ಮದ್ರಾಸ್ ಹೈ ಕೋರ್ಟ್ ನಿರ್ದೇಶನ ಹಾಗೂ ಮೋಟಾರು ವಾಹನ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿರುವ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಕುರಿತು ಪುದುಚೇರಿ ಪೊಲೀಸ್ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ್ ಅವರಿಗೆ ನಿವೃತ್ತ ಐಪಿಎಸ್ ಅಧಿಕಾರಿಯೂ ಆಗಿರುವ ಕಿರಣ್ ಬೇಡಿ ನಿರ್ದೇಶನ ನೀಡಿದ್ದಾರೆ.

    ಕಿರಣ್ ಬೇಡಿ ಅವರು ಪುದುಚೇರಿ ಡಿಜಿಪಿ ಹಾಗೂ ನಿತಿನ್ ಗಡ್ಕರಿ ಅವರಿಗೆ ಟ್ವೀಟ್ ಮಾಡಿದ್ದಾರೆ. ಪುದುಚೇರಿ ಮುಖ್ಯಮಂತ್ರಿ ಕಾಮರಾಜ್ ನಗರದಲ್ಲಿ ಹೆಲ್ಮೆಟ್ ಇಲ್ಲದೆ ಪ್ರಚಾರ ಮಾಡುತ್ತಿರುವ ಫೋಟೋವನ್ನು ಹಾಕಿದ್ದಾರೆ.

    ಇದಕ್ಕೆ ಪ್ರತಿಯಾಗಿ ಸಿಎಂ ನಾರಾಯಣಸ್ವಾಮಿ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಉಪ ರಾಜ್ಯಪಾಲೆ ಕಿರಣ್ ಬೇಡಿ ಅವರು 2017ರಲ್ಲಿ ಹೆಲ್ಮೆಟ್ ಇಲ್ಲದೆ ಸ್ಕೂಟರ್‍ನಲ್ಲಿ ಸಂಚರಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೆ ಅಧಿಕೃತ ಸಂವಹನಕ್ಕಾಗಿ ಟ್ವಿಟ್ಟರ್ ಬಳಸುವ ಮೂಲಕ ಮದ್ರಾಸ್ ಹೈ ಕೋರ್ಟ್‍ನ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಉಪರಾಜ್ಯಪಾಲೆ ಕಿರಣ್ ಬೇಡಿ ಅವರು ಮತ್ತೊಬ್ಬರಿಗೆ ಬೋಧಿಸುವ ಮುನ್ನ ತಾವು ತಿಳಿದುಕೊಳ್ಳಲಿ ಎಂದು ಟ್ವೀಟ್‍ನಲ್ಲಿ ಸಾಲುಗಳನ್ನು ಬರೆದಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ನಾರಾಯಣಸ್ವಾಮಿ, ಉಪರಾಜ್ಯಪಾಲರು ವಸ್ತು ಸ್ಥಿತಿಯನ್ನು ಅರಿಯಬೇಕು. ಚುನಾವಣೆ ನಡೆಯುತ್ತಿದೆ. ಚುನಾವಣೆಗಳನ್ನು ಶಾಂತಿಯುತವಾಗಿ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ ಎಂದರು.

    ನಿನ್ನೆ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ್ದರಿಂದ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಈ ವೇಳೆ ನಾನೂ ಕಾರ್ಯಕರ್ತರೊಂದಿಗೆ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದೆ. ನಾನು ಹೆಲ್ಮೆಟ್ ಧರಿಸಿದರೆ ಮುಖ್ಯಮಂತ್ರಿ ಬರುತ್ತಿದ್ದಾರೆ ಎಂದು ಯಾರಿಗೆ ತಿಳಿಯುತ್ತದೆ. ಅಲ್ಲದೆ ಹೆಲ್ಮೆಟ್ ಧರಿಸದ್ದನ್ನು ಟ್ವೀಟ್ ಮೂಲಕ ಡಿಜಿಪಿಗೆ ತಿಳಿಸಿದ್ದಾರೆ. ಆದರೆ ಅಧಿಕೃತ ಸಂವಹನಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಬಾರದು ಎಂದು ಕೋರ್ಟ್ ಸ್ಪಷ್ಟವಾಗಿ ತಿಳಿಸಿದೆ. ಕಿರಣ್ ಬೇಡಿಯವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ.

  • ಆಡಳಿತದಲ್ಲಿ ಹಸ್ತಕ್ಷೇಪ ಸಲ್ಲ: ಕಿರಣ್ ಬೇಡಿಗೆ ಮದ್ರಾಸ್ ಹೈಕೋರ್ಟ್ ಆದೇಶ

    ಆಡಳಿತದಲ್ಲಿ ಹಸ್ತಕ್ಷೇಪ ಸಲ್ಲ: ಕಿರಣ್ ಬೇಡಿಗೆ ಮದ್ರಾಸ್ ಹೈಕೋರ್ಟ್ ಆದೇಶ

    ಪುದುಚೇರಿ: ಪುದುಚೇರಿ ಸರ್ಕಾರದ ದೈನಂದಿನ ಚಟುವಟಿಕಗಳಲ್ಲಿ ಮಧ್ಯ ಪ್ರವೇಶ ಮಾಡುವ ಅಧಿಕಾರ ರಾಜ್ಯಪಾಲರಾದ ಕಿರಣ್ ಬೇಡಿ ಅವರಿಗೆ ಇಲ್ಲ ಎಂದು ಮದ್ರಾಸ್ ಹೈಕೋರ್ಟ್ ಇಂದು ಮಹತ್ವದ ಆದೇಶ ಪ್ರಕಟಿಸಿದೆ.

    ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಹಾಗೂ ಅಲ್ಲಿನ ರಾಜ್ಯಪಾಲರಾದ ಕಿರಣ್ ಬೇಡಿ ಮಧ್ಯೆ ಉಂಟಾಗಿದ್ದ ವಿವಾದಕ್ಕೆ ಮದ್ರಾಸ್ ಹೈಕೋರ್ಟ್ ತೆರೆ ಎಳೆದಿದೆ. ಇದನ್ನೂ ಓದಿ: ಕಿರಣ್ ಬೇಡಿ ನಿವಾಸದ ಎದುರೇ ಮಲಗಿದ ಪುದುಚೇರಿ ಸಿಎಂ

    ಸಿಎಂ ವಿ.ನಾರಾಯಣ ಸ್ವಾಮಿ ಅವರ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬೇಡಿ. ಸರ್ಕಾರದ ಯಾವುದೇ ರೀತಿಯ ದಾಖಲೆಗಳನ್ನು ರಾಜ್ಯಪಾಲರು ಕೇಳುವ ಅಧಿಕಾರ ಹೊಂದಿಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ.

    ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿ.ನಾರಾಯಣ ಸ್ವಾಮಿ ಅವರು, ಮದ್ರಾಸ್ ಹೈಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇನೆ. ಇದು ಸಂವಿಧಾನ ಉಳಿಸಲು ಸರ್ಕಾರ ನಡೆಸಿದ ಹೋರಾಟಕ್ಕೆ ಸಿಕ್ಕ ಜಯ ಎಂದು ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ಪುದುಚೇರಿ ರಾಜ್ಯಪಾಲರಾದ ಕಿರಣ್ ಬೇಡಿ ಅವರು ಸರ್ಕಾರದ ಕಾರ್ಯವೈಕರಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಸಿಎಂ ವಿ.ನಾರಾಯಣ ಸ್ವಾಮಿ ಆರೋಪಿಸಿದ್ದರು. ಬಳಿಕ ನಾರಾಯಣಸ್ವಾಮಿ ಅವರು ಪುದುಚೇರಿ ರಾಜಭವನದ ಮುಂದೆ ತಮ್ಮ ಸಚಿವರು, ಶಾಸಕರೊಂದಿಗೆ ಪ್ರತಿಭಟನೆ ಕೂಡ ನಡೆಸಿದ್ದರು.

    ಕಿರಣ್ ಬೇಡಿ ಅವರು ಆಡಳಿತದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಲಕ್ಷ್ಮೀ ನಾರಾಯಣನ್ 2017ರಲ್ಲಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.

  • ಕಿರಣ್ ಬೇಡಿ ನಿವಾಸದ ಎದುರೇ ಮಲಗಿದ ಪುದುಚೇರಿ ಸಿಎಂ

    ಕಿರಣ್ ಬೇಡಿ ನಿವಾಸದ ಎದುರೇ ಮಲಗಿದ ಪುದುಚೇರಿ ಸಿಎಂ

    – ಸಿಎಂ ವರ್ಸಸ್ ಕಿರಣ್‍ಬೇಡಿ

    ಪುದುಚೇರಿ: ದೆಹಲಿ ಮತ್ತು ಪಶ್ಚಿಮ ಬಂಗಾಳದ ಮಾರ್ಗದಲ್ಲಿ ಪುದುಚೇರಿ ಸಿಎಂ ವಿ.ನಾರಾಯಾಣಸ್ವಾಮಿ ಉಪ ರಾಜ್ಯಪಾಲರ ನಿವಾಸ ಎದುರೇ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಉಪ ರಾಜ್ಯಪಾಲರಾದ ಕಿರಣ್ ಬೇಡಿ, ಸರ್ಕಾರದ 1993ರ ವ್ಯಾಪಾರಿ ನಿಯಮದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಂ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

    ಸಿಎಂ ಜೊತೆಯಾಗಿ ಸಚಿವರು, ಶಾಸಕರು ಮತ್ತು ಕಾಂಗ್ರೆಸ್ ನಾಯಕರು ಉಪ ರಾಜ್ಯಪಾಲರ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನಾನಿರತ ಜನಪ್ರತಿನಿಧಿಗಳು ಕಪ್ಪು ಶರ್ಟ್ ಧರಿಸುವ ಮೂಲಕ ಆಕ್ರೋಶ ಹೊರಹಾಕಿ, ಇಡೀ ರಾತ್ರಿ ಕಿರಣ್ ಬೇಡಿ ನಿವಾಸದ ರಸ್ತೆಯಲ್ಲಿ ಮಲಗಿದರು. ಸರ್ಕಾರದ ಆಡಳಿತದಲ್ಲಿ ಕಿರಣ್ ಬೇಡಿ ಹಸ್ತಕ್ಷೇಪ ಮಾಡ್ತಿದ್ದಾರೆ. ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳಿಗೆ ಸಹಿ ಹಾಕದೇ ತಡೆ ನೀಡುತ್ತಿದ್ದಾರೆ ಎಂದು ಪುದುಚೇರಿ ಸರ್ಕಾರ ಆರೋಪ ಮಾಡಿದೆ.

    ಜನತೆಗಾಗಿ ಸರ್ಕಾರ ಉಚಿತವಾಗಿ ನೀಡಲು ನಿರ್ಧರಿಸುವ ಅಕ್ಕಿಯ ಯೋಜನೆಯನ್ನು ಕಿರಣ್‍ಬೇಡಿ ತಡೆಹಿಡಿದಿದ್ದಾರೆ. ಈ ಯೋಜನೆಯ ಕಡತವನ್ನು ಸಹಿ ಮಾಡದೇ ಸರ್ಕಾರಕ್ಕೆ ಹಿಂದಿರುಗಿಸಿದ್ದಾರೆ. ಇದೇ ರೀತಿ 36 ಯೋಜನೆಗಳನ್ನು ತಡೆಹಿಡಿದ್ದಿದ್ದಾರೆ. ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ತಡೆಹಿಡಿಯುವ ಅಧಿಕಾರವನ್ನು ಕಿರಣ್ ಬೇಡಿ ಅವರಿಗೆ ನೀಡಿದ್ಯಾರು ಎಂದು ಸಿಎಂ ಪ್ರಶ್ನಿಸಿದ್ದಾರೆ.

    ಸಿಎಂಗೆ ತಾಳ್ಮೆ ಬೇಕಿತ್ತು: ಮುಖ್ಯಮಂತ್ರಿ ವಿ.ನಾರಾಯಾಣಸ್ವಾಮಿ ಅವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಕಿರಣ್‍ಬೇಡಿ, ಫೆಬ್ರವರಿ 21ರಂದು ಈ ಸಂಬಂಧ ಮಾತುಕತೆ ನಡೆಸಲು ಸಿಎಂ ಅವರನ್ನು ರಾಜಭವನಕ್ಕೆ ಆಹ್ವಾನಿಸಲಾಗಿತ್ತು. ರಾಜಭವನದಿಂದ ಉತ್ತರ ಬರುವ ಮೊದಲೇ ನಮ್ಮ ನಿವಾಸಕ್ಕೆ ಸಿಎಂ ಆತುರರಾಗಿ ಆಗಮಿಸಿದ್ದು ನಮಗೆ ನೋವಾಗಿದೆ. ಈ ರೀತಿ ಪ್ರತಿಭಟನೆ ಕುಳಿತುಕೊಳ್ಳುವುದು ಮುಖ್ಯಮಂತ್ರಿಗಳಿಗೆ ಶೋಭೆ ತರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಫ್ರಾನ್ಸ್ ಫಿಫಾ ಫುಟ್ಬಾಲ್ ಕಪ್ ವಿಕ್ಟರಿ ಟ್ವೀಟ್ ಮಾಡಿ ಟ್ರೋಲ್ ಆದ್ರು ಕಿರಣ್ ಬೇಡಿ

    ಫ್ರಾನ್ಸ್ ಫಿಫಾ ಫುಟ್ಬಾಲ್ ಕಪ್ ವಿಕ್ಟರಿ ಟ್ವೀಟ್ ಮಾಡಿ ಟ್ರೋಲ್ ಆದ್ರು ಕಿರಣ್ ಬೇಡಿ

    ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಕಪ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ಜಯಗಳಿಸಿದ ಬಳಿಕ ಮಾಜಿ ಐಪಿಎಸ್ ಅಧಿಕಾರಿ, ಪಾಂಡಿಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿರುವ ಕಿರಣ್ ಬೇಡಿ ಅವರು ಮಾಡಿದ್ದ ಟ್ವೀಟ್ ಸದ್ಯ ಟ್ರೋಲ್‍ಗೆ ಒಳಗಾಗಿದೆ.

    ಭಾನುವಾರ ನಡೆದ ಪಂದ್ಯದಲ್ಲಿ ಫ್ರಾನ್ಸ್, ಕ್ರೊವೇಷಿಯಾ ವಿರುದ್ಧ 4-2 ಗೋಲುಗಳಿಂದ ಜಯಗಳಿಸಿತ್ತು. ಈ ವೇಳೆ ಫ್ರಾನ್ಸ್ ಜಯವನ್ನು ಸಂಭ್ರಮಿಸಲು ಟ್ವೀಟ್ ಮಾಡಿದ್ದ ಕಿರಣ್ ಬೇಡಿ ಅವರು, ಪಾಂಡಿಚೇರಿ ಸ್ವಾತಂತ್ರ್ಯ ಪೂರ್ವ ಫ್ರೆಂಚ್ ವಸಾಹತು ಆಗಿದ್ದ ಕಾರಣ ಫ್ರಾನ್ಸ್ ಗೆಲುವುವನ್ನು ನಾವು ಸಂಭ್ರಮಿಸಬಹುದು. ಕ್ರೀಡೆ ಎಲ್ಲರನ್ನು ಒಂದಾಗಿಸುತ್ತದೆ ಎಂದು ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದರು.

    ಕಿರಣ್ ಬೇಡಿ ಅವರ ಆ ಟ್ವೀಟ್ ಬಳಿಕ ಹಲವರು ಈ ಕುರಿತು ಅಸಮಾಧಾನ ವ್ಯಕ್ತಿ ಪಡಿಸಿ ಮರುಟ್ವೀಟ್ ಮಾಡಿದ್ದಾರೆ. ಅದರಲ್ಲೂ ಕೆಲ ಅಭಿಮಾನಿಗಳು ಕಿರಣ್ ಬೇಡಿ ಅವರು ವಸಾಹತು ಸಂಸ್ಕೃತಿಗೆ ಬೆಂಬಲ ನೀಡಿರುವುದು ತೀವ್ರ ನಿರಾಸೆ ಉಂಟು ಮಾಡಿದೆ ಎಂದು ಹೇಳಿದ್ದಾರೆ. ಇನ್ನು ಇಂಗ್ಲೆಂಡ್ ವಿಶ್ವಕಪ್ ಗೆದ್ದರೆ ನೀವು ಸಂಭ್ರಮಾಚರಣೆ ಮಾಡುತ್ತೀರಾ? ಏಕೆಂದರೆ ಭಾರತ ಬ್ರಿಟಿಷರ ವಸಾಹತು ಕಾಲೋನಿ ಆಗಿತ್ತು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

    ತೀವ್ರ ಹಣಾಹಣಿಯಿಂದ ಕೂಡಿದ್ದ ಫಿಫಾ ಫುಟ್ಬಾಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಚಾಂಪಿಯನ್ ಆದ ಫ್ರಾನ್ಸ್ ತಂಡ ಬರೋಬ್ಬರಿ 260 ಕೋಟಿ ರೂ. ಹಾಗೂ ರನ್ನರ್-ಅಪ್ ತಂಡ ಕ್ರೊವೇಷಿಯಾ 191 ಕೋಟಿ ರೂ. ನಗದು ಬಹುಮಾನ ಪಡೆಯಿತು.

    https://twitter.com/TrueFactsIndia1/status/1018619534394052608

    https://twitter.com/PatakaBomb/status/1018622487490203648

  • ಕಿರಣ್ ಬೇಡಿ ಭಾಷಾಂತರ ಪರೀಕ್ಷೆಯಲ್ಲಿ ಪುದುಚೇರಿ ಸಿಎಂ ಪಾಸ್- ವಿಡಿಯೋ ನೋಡಿ

    ಕಿರಣ್ ಬೇಡಿ ಭಾಷಾಂತರ ಪರೀಕ್ಷೆಯಲ್ಲಿ ಪುದುಚೇರಿ ಸಿಎಂ ಪಾಸ್- ವಿಡಿಯೋ ನೋಡಿ

    ಪುದುಚೆರಿ: ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಅವರು ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಭಾಷಣವನ್ನು ಭಾಷಾಂತರಿಸುವ ಮೂಲಕ ಈಗ ಸುದ್ದಿಯಾಗಿದ್ದಾರೆ.

    ಕಿರಣ್ ಬೇಡಿ ಮತ್ತು ಪುದುಚೇರಿ ಸಿಎಂ ಸ್ವಾಮಿ ತಮ್ಮಿಬ್ಬರ ನಡುವಿನ ಕಚ್ಚಾಟದಿಂದ ಹಿಂದೆ ಸುದ್ದಿಯಾಗಿದ್ದರು. ಆದರೆ ಇವರಿಬ್ಬರು ಪರಸ್ಪರ ಕಾಲೆಳೆದುಕೊಂಡು ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಗೆ ಮನರಂಜನೆ ನೀಡಿದ್ದಾರೆ.

    53ನೇ ಸಾಹಿತ್ಯ ಹಬ್ಬ ‘ಕಂಬನ್ ವಿಳಾ’ದ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಿರಣ್ ಬೇಡಿ ಭಾಗವಹಿಸಿದ್ದರು. ತಮ್ಮ ಭಾಷಣದ ವೇಳೆ, ಇಲ್ಲಿ ಎಷ್ಟು ಜನರಿಗೆ ಇಂಗ್ಲಿಷ್ ಬರುತ್ತದೆ ಎಂದು ಪ್ರಶ್ನಿಸಿದರು. ಈ ವೇಳೆ ಕೆಲವರು ಮಾತ್ರ ಕೈ ಎತ್ತಿದರು. ಆಗ ಶಿಕ್ಷಣ ಸಚಿವ ಕಮಲಾಕಣ್ಣನ್ ಮುಂದೆ ಬಂದು ತಮಿಳಿಗೆ ನಾನು ಭಾಷಾಂತರ ಮಾಡುವುದಾಗಿ ತಿಳಿಸಿದರು.

    ಸಚಿವರ ಮಾತಿಗೆ ಕಿರಣ್ ಬೇಡಿ, ನನ್ನ ಇಂಗ್ಲಿಷ್ ಭಾಷಣವನ್ನು ಮುಖ್ಯಮಂತ್ರಿಗಳು ಅನುವಾದ ಮಾಡಬೇಕು. ಇದು ನನ್ನ ಆಸೆ ಎಂದು ಹೇಳಿದರು. ಬೇಡಿ ಮಾತು ಕೇಳಿ ವೇದಿಕೆಯಲ್ಲಿ ಕುಳಿತುಕೊಂಡಿದ್ದ ಸ್ವಾಮಿ ಅವರು ಮುಂಭಾಗಕ್ಕೆ ಆಗಮಿಸಿ, ಜನ ಬಯಸಿದ್ದಾರೆ. ನಾನು ಭಾಷಾಂತರ ಮಾಡುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ, ನಾನು ಏನು ಭಾಷಣ ಮಾಡುತ್ತೇನೋ ಅದನ್ನು ಮಾತ್ರ ಹೇಳಬೇಕು ಎಂದು ಬೇಡಿ ಷರತ್ತು ವಿಧಿಸಿದರು.

    ಈ ಷರತ್ತಿಗೆ ಸಿಎಂ, ಹಾಗೆಲ್ಲ ಖಾತ್ರಿ ಕೊಡಲು ಸಾಧ್ಯವಿಲ್ಲ ಎಂದು ಚಟಾಕಿ ಹಾರಿಸಿದಾಗ ಬೇಡಿ, ನಾನು ನಿಮ್ಮನ್ನು 10 ನಿಮಿಷಗಳ ಕಾಲ ನಂಬುತ್ತೇನೆ. ಇದೊಂದು ತಾತ್ಕಾಲಿಕ ಸ್ನೇಹ ಎಂದು ಹೇಳಿದರು. ಇದಕ್ಕೆ ನಾರಾಯಣ ಸ್ವಾಮಿ ನಾನು ಸ್ನೇಹ ಶಾಶ್ವತವಾಗಿರಲಿ ಎಂದು ಹೇಳಿ ಭಾಷಾಂತರಕ್ಕೆ ಸಿದ್ಧರಾದರು.

    ತನ್ನ ಎಲ್ಲ ಮಾತುಗಳನ್ನು ನಾರಾಯಣ ಸ್ವಾಮಿ ಸಮರ್ಥವಾಗಿ ಭಾಷಾಂತರಿಸಿದ್ದು ಬೇಡಿ ಅವರಿಗೆ ಖುಷಿ ನೀಡಿತು. ನಂತರ, ಸ್ವಾಮಿ ಅವರಿಗೆ ತಮಿಳು, ಇಂಗ್ಲಿಷ್ ಅಲ್ಲದೇ ಹಿಂದಿ ಮತ್ತು ಫ್ರೆಂಚ್ ಭಾಷೆಯೂ ಬರುತ್ತದೆ. ನನ್ನ ಭಾಷಣವನ್ನು ಅನುವಾದ ಮಾಡಲು ಬಂದಿದ್ದು ನನಗೆ ಬಹಳ ಸಂತಸ ನೀಡಿದೆ ಎಂದು ಶ್ಲಾಘಿಸಿದರು.

    ಕಾರ್ಯಕ್ರಮ ಮುಗಿದ ಬಳಿಕ ಪ್ರತಕರ್ತರು ಸಿಎಂ ಮತ್ತು ನಿಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಿಟ್ಟಿದ್ದೀರಾ ಎಂದು ಕೇಳಿದ್ದಕ್ಕೆ, ಪುದುಚೇರಿ ಅಭಿವೃದ್ಧಿಯ ಕಾಳಜಿಯನ್ನು ನಾನು ಹೊಂದಿದ್ದೇನೆ. ನಾನು ಒಂದು ಉದ್ದೇಶಕ್ಕಾಗಿ ಇಲ್ಲಿಗೆ ಆಗಮಿಸಿದ್ದು, ಅದು ಬಿಟ್ಟು ಬೇರೇನೂ ಇಲ್ಲ ಎಂದು ಉತ್ತರಿಸಿ ತೆರಳಿದರು.

    ಬುಧವಾರ ನೈತಿಕ ಹೊಣೆಯನ್ನು ಹೊತ್ತು ಕಿರಣ್ ಬೇಡಿ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಸಿಎಂ ನಾರಾಯಣ ಸ್ವಾಮಿ ಆಗ್ರಹಿಸಿದ್ದರು.