Tag: Kings XI Punjab

  • ರಾಹುಲ್ Vs ಐಯ್ಯರ್, ಪಾಂಟಿಂಗ್ Vs ಕುಂಬ್ಳೆ – ಪಂಜಾಬ್, ಡೆಲ್ಲಿ ತಂಡಗಳ ಬಲಾಬಲ

    ರಾಹುಲ್ Vs ಐಯ್ಯರ್, ಪಾಂಟಿಂಗ್ Vs ಕುಂಬ್ಳೆ – ಪಂಜಾಬ್, ಡೆಲ್ಲಿ ತಂಡಗಳ ಬಲಾಬಲ

    ನವದೆಹಲಿ: ಐಪಿಎಲ್ ಎರಡನೇ ದಿನವಾದ ಇಂದು ಸಂಡೇ ಧಮಾಕದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಡೆಲ್ಲಿ ಕ್ಯಾಪಿಟಲ್ ತಂಡಗಳು ಮುಖಾಮುಖಿಯಾಗಲಿವೆ.

    ಎರಡು ತಂಡದಲ್ಲಿ ಯುವ ಆಟಗಾರರು ಮತ್ತು ಯುವ ನಾಯಕರು ಇಂದು ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಪಂಜಾಬ್ ಮತ್ತು ಡೆಲ್ಲಿ ಎರಡು ತಂಡದಲ್ಲಿ ಒಳ್ಳೆಯ ವಿದೇಶಿ ಆಟಗಾರಿದ್ದು, ಇಂದು ರನ್ ಮಳೆಯೇ ಹರಿಯುವ ಸಾಧ್ಯತೆ ಇದೆ. ಎರಡು ತಂಡಗಳ ಬಲಾಬಲವನ್ನು ನೋಡುವುದಾದರೆ ಉಭಯ ತಂಡಗಳಲ್ಲಿ ಸರಿಸಮಾನ ಆಟಗಾರರು ಇದ್ದಾರೆ.

    ರಾಹುಲ್ ವರ್ಸಸ್ ಐಯ್ಯರ್
    ಈ ಬಾರಿ ಭಾರತ ತಂಡದ ಪ್ರತಿಭಾನ್ವಿತ ಆಟಗಾರ ಕೆಎಲ್ ರಾಹುಲ್ ಅವರು ಕಿಂಗ್ಸ್ ಇಲೆವೆನ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಇತ್ತ ಯುವ ಆಟಗಾರ ಶ್ರೇಯಸ್ ಐಯ್ಯರ್ ಕೂಡ ಡೆಲ್ಲಿ ಕ್ಯಾಪಿಟಲ್ ತಂಡದ ಚುಕ್ಕಾಣಿ ಹಿಡಿದಿದ್ದು, ಬ್ಯಾಟಿಂಗ್ ಮತ್ತು ನಾಯಕ್ವ ಎರಡು ವಿಚಾರದಲ್ಲಿ ರಾಹುಲ್ ಹಾಗೂ ಐಯ್ಯರ್ ನಡುವೆ ಇಂದು ಬಿಗ್ ಫೈಟ್ ನಡೆಯಲಿದೆ. ಜೊತೆಗೆ ಭಾರತ ತಂಡದಲ್ಲಿ ಸ್ಥಾನ ಗಳಿಸಲು ಇಬ್ಬರಿಗೂ ಐಪಿಎಲ್ ಬಹಳ ಪ್ರಮುಖವಾಗಿದೆ.

    ಪಂಟರ್ ವರ್ಸಸ್ ಜಂಬೋ
    ಇಂದಿನ ಪಂದ್ಯಗಳು ಡೆಲ್ಲಿ ಮತ್ತು ಪಂಜಾಬ್ ತಂಡಗಳ ಕೋಚ್‍ಗಳಿಗೂ ಪ್ರತಿಷ್ಠೆಯ ಕಣವಾಗಿದೆ. ಪಂಜಾಬ್ ತಂಡವನ್ನು ಅನಿಲ್ ಕುಂಬ್ಳೆಯವರು ಮುನ್ನಡೆಸುತ್ತಿದ್ದರೆ, ಇತ್ತ ಆಸ್ಟೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಡೆಲ್ಲಿ ಕ್ಯಾಪಿಟಲ್ ತಂಡವನ್ನು ಕೋಚ್ ಮಾಡುತ್ತಿದ್ದಾರೆ. ಈ ಇಬ್ಬರು ದಿಗ್ಗಜ ಮಾಜಿ ಆಟಗಾರರ ತರಬೇತಿಯಲ್ಲಿ ಪಳಗಿರುವ ಯುವ ತಂಡಗಳು ಇಂದು ಮುಖಾಮುಖಿಯಾಗಲಿವೆ.

    ಮ್ಯಾಕ್ಸ್‌ವೆಲ್‌ಗೆ ಸ್ಟೋಯಿನಿಸ್ ಪವರ್
    ಎರಡು ತಂಡದಲ್ಲಿ ವಿದೇಶಿ ಆಟಗಾರರ ದಂಡೇ ಇದೆ. ಆದರೆ ಆಸೀಸ್‍ನ ಸ್ಟಾರ್ ಆಲ್‍ರೌಂಡರ್ ಗಳಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಉಭಯ ತಂಡದಲ್ಲಿ ಇದ್ದಾರೆ. ಪಂಜಾಬ್ ತಂಡದಲ್ಲಿ ಮ್ಯಾಕ್ಸ್‌ವೆಲ್ ಮ್ಯಾಜಿಕ್ ಮಾಡಲು ತಯಾರಗಿದ್ದರೆ, ಇತ್ತ ಸ್ಟೋಯಿನಿಸ್ ಕೂಡ ಪಂಜಾಬ್‍ಗೆ ಟಾಂಗ್ ಕೊಡಲು ಸಿದ್ಧವಾಗಿದ್ದಾರೆ. ಈ ಇಬ್ಬರು ಆಟಗಾರರು ಒಳ್ಳೆಯ ಲಯದಲ್ಲಿದ್ದು, ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 174 ರನ್‍ಗಳ ಜೊತೆಯಾಟವಾಡಿದ್ದರು.

    ಅಗರ್ವಾಲ್ ವರ್ಸಸ್ ಪೃಥ್ವಿ
    ಡೋಪಿಂಗ್ ವಿಚಾರದಲ್ಲಿ ಕೆಲ ಕಾಲ ಕ್ರಿಕೆಟ್‍ನಿಂದ ಬ್ಯಾನ್ ಆಗಿದ್ದ ಪೃಥ್ವಿ ಶಾ ಕಾಮ್‍ಬ್ಯಾಕ್ ಮಾಡಲು ಸಿದ್ಧವಾಗಿದ್ದಾರೆ. ಡೆಲ್ಲಿ ಕ್ಯಾಪಿಟಲ್ ತಂಡದ ಪರವಾಗಿ ಶಿಖರ್ ಧವನ್ ಅವರ ಜೊತೆ ಓಪನಿಂಗ್ ಮಾಡಲಿದ್ದಾರೆ. ಇತ್ತ ಮಯಾಂಕ್ ಅಗರ್ವಾಲ್ ಕೂಡ ಪಂಜಾಬ್ ತಂಡದಲ್ಲಿ ಆರಂಭಿಕನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ನೀಡಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸಲು ಪ್ರಯತ್ನ ಮಾಡುತ್ತಿದ್ದಾರೆ.

     

    ವಿಕೆಟ್ ಕೀಪಿಂಗ್‍ನಲ್ಲಿ ರಾಹುಲ್, ಪಂತ್
    ಉಭಯ ತಂಡದಲ್ಲಿ ಇಬ್ಬರು ಯುವ ವಿಕೆಟ್ ಕೀಪರ್ ಗಳು ಇದ್ದಾರೆ. ಡೆಲ್ಲಿಯಲ್ಲಿ ರಿಷಭ್ ಪಂತ್ ವಿಕೆಟ್ ಕೀಪರ್ ಜವಾಬ್ದಾರಿ ಹೊತ್ತುಕೊಂಡಿದ್ದರೆ, ಇತ್ತ ನಾಯಕ ರಾಹುಲ್ ಪಂಜಾಬ್ ತಂಡದಲ್ಲಿ ವಿಕೆಟ್ ಕೀಪಿಂಗ್ ಮಾಡಲಿದ್ದಾರೆ. ಧೋನಿ ನಂತರ ಯಾರು ಟೀಂ ಇಂಡಿಯಾಗೆ ಖಾಯಂ ವಿಕೆಟ್ ಕೀಪರ್ ಆಗಲಿದ್ದಾರೆ ಎಂಬುದಕ್ಕೆ ಈ ಬಾರಿ ಐಪಿಎಲ್ ಉತ್ತರ ನೀಡಲಿದ್ದು, ರಿಷಭ್ ಮತ್ತು ರಾಹುಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

    ಶಮಿ ಸ್ವಿಂಗ್, ಇಶಾಂತ್ ಬೌನ್ಸರ್
    ಬೌಲಿಂಗ್ ವಿಭಾಗಕ್ಕೆ ಬಂದರೆ ಎರಡು ತಂಡಗಳು ಕೂಡ ಒಳ್ಳೆಯ ವೇಗಿಗಳನ್ನು ಹೊಂದಿದೆ. ಭಾರತದ ಟೀಂನಲ್ಲಿ ಅನುಭವಿ ವೇಗಿ ಎನಿಸಿಕೊಂಡಿರುವ ಮೊಹಮ್ಮದ್ ಶಮಿ ಪಂಜಾಬ್ ತಂಡಕ್ಕೆ ಸಾಥ್ ನೀಡಲಿದ್ದಾರೆ. ಮತ್ತೋರ್ವ ಅನುಭವಿ ವೇಗಿ ಇಶಾಂತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ ತಂಡದಲ್ಲಿ ಆಡಲಿದ್ದಾರೆ. ಇಂದಿನ ಪಂದ್ಯದಲ್ಲಿ ಈ ಇಬ್ಬರು ಅನುಭವಿ ವೇಗಿಗಳ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

  • ಕ್ವಾರಂಟೈನ್‍ನಲ್ಲಿದ್ದರೂ ತಂಡಕ್ಕಾಗಿ ‘ಪ್ರೀತಿ’ಯ ಸಂದೇಶ

    ಕ್ವಾರಂಟೈನ್‍ನಲ್ಲಿದ್ದರೂ ತಂಡಕ್ಕಾಗಿ ‘ಪ್ರೀತಿ’ಯ ಸಂದೇಶ

    – ಪಂಜಾಬ್ ತಂಡದಲ್ಲಿ ಕನ್ನಡಿಗರದ್ದೇ ಪಾರುಪತ್ಯ

    ಅಬುಧಾಬಿ: ಕ್ವಾರಂಟೈನ್‍ನಲ್ಲಿದ್ದರೂ ಕೂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಒಡತಿ ಪ್ರೀತಿ ಜಿಂಟಾ ತಮ್ಮ ತಂಡಕ್ಕಾಗಿ ವಿಡಿಯೋ ಸಂದೇಶ ಕಳುಹಿಸಿದ್ದಾರೆ.

    ಐಪಿಎಲ್ ಹಬ್ಬ ಶುರುವಾಗಲು ಇನ್ನು ಕೇವಲ ಮೂರು ದಿನ ಬಾಕಿ ಇದೆ. ಈಗಾಗಲೇ ಸಿದ್ಧತೆಯಲ್ಲಿ ತೊಡಗಿರುವ ಎಲ್ಲ ತಂಡಗಳು ಕೂಡ ಟ್ರೋಫಿ ಮೇಲೆ ಕಣ್ಣಿಟ್ಟಿವೆ. ನೂತನ ಸಾರಥಿ ಮತ್ತು ಹೊಸ ಉತ್ಸಹದೊಂದಿಗೆ ಕಿಂಗ್ಸ್ ಇಲೆವೆನ್ ತಂಡ ತನ್ನ ಚೊಚ್ಚಲ ಟ್ರೋಫಿ ಗೆಲ್ಲಲು ತುದಿಗಾಲಲ್ಲಿ ನಿಂತಿದೆ. ಆಟಗಾರರನ್ನು ಹುರಿದುಂಬಿಸಲು ಗುಳಿಕನ್ನೆ ಮಾಲಕಿ ಪ್ರೀತಿ ಜಿಂಟಾ ಕೂಡ ಬಂದಿದ್ದಾರೆ.

    https://www.instagram.com/p/CFKYDbGpe8F/

    ಈಗ ತಮ್ಮ ತಂಡಕ್ಕಾಗಿ ವಿಡಿಯೋ ಸಂದೇಶವೊಂದನ್ನು ಕಳುಹಿಸಿರುವ ಜಿಂಟಾ, ನೀವು ಕಠಿಣವಾಗಿ ಅಭ್ಯಾಸ ಮಾಡುತ್ತಿರುವುದನ್ನು ನಾನು ಸಾಮಾಜಿಕ ಜಾಲತಾಣದ ಮೂಲಕ ನೋಡಿದ್ದೇನೆ. ನೀವು ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದೀರಾ, ನಾನು ಈ ಕ್ವಾರಂಟೈನ್ ಅವಧಿ ಮುಗಿಸಿ ನಿಮ್ಮನ್ನು ಸೇರಲು ಬಹಳ ಉತ್ಸುಕತೆಯಿಂದ ಕಾಯುತ್ತಿದ್ದೇನೆ. ನಿಮ್ಮನ್ನು ಬಹುಬೇಗ ಸೇರಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಸದ್ಯ ಐಪಿಎಲ್‍ಗಾಗಿ ಯುಇಎಗೆ ಹೋಗಿರುವ ಜಿಂಟಾ ಅಲ್ಲಿ ಕ್ವಾಂರಟೈನ್ ಆಗಿದ್ದಾರೆ.

    ಎಲ್ಲ ವಿಭಾಗದಲ್ಲೂ ಬಲಿಷ್ಠವಾಗಿ ಕಾಣುವ ಪಂಜಾಬ್ ತಂಡ ಮೊದಲ ಬಾರಿಗೆ ಟ್ರೋಫಿ ಗೆಲ್ಲಲು ಸಿದ್ಧತೆ ನಡೆಸಿದೆ. ಪಂಜಾಬ್ ತಂಡದಲ್ಲಿ ಈ ಬಾರಿ ಅತೀ ಹೆಚ್ಚು ಕನ್ನಡಿಗರೇ ಇದ್ದಾರೆ. ಅಶ್ವಿನ್ ಡೆಲ್ಲಿ ಕ್ಯಾಪಿಟಲ್ ತಂಡ ಸೇರಿದ ನಂತರ ತಂಡದ ನಾಯಕನ ಪಟ್ಟವನ್ನು ಕನ್ನಡಿಗ ಕೆ.ಎಲ್ ರಾಹುಲ್ ವಹಿಸಿಕೊಂಡಿದ್ದಾರೆ. ಜೊತೆಗೆ ಪಂಜಾಬ್ ತಂಡದ ಮುಖ್ಯ ಕೋಚ್ ಆಗಿ ಅನಿಲ್ ಕುಂಬ್ಳೆ ಇದ್ದಾರೆ. ಉಳಿದಂತೆ ಕರ್ನಾಟಕದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಬೌಲರ್ ಸುಚಿತ್ ಸಹ ತಂಡದಲ್ಲಿ ಇದ್ದಾರೆ. ಇದನ್ನು ಓದಿ: ಐಪಿಎಲ್‍ನಲ್ಲಿ ಹೆಚ್ಚು ಇಂಡಿಯನ್ ಕೋಚ್‍ಗಳನ್ನು ನೋಡ ಬಯಸುತ್ತೇನೆ: ಅನಿಲ್ ಕುಂಬ್ಳೆ

    ಕನ್ನಡಿಗರ ಜೊತೆ ವಿದೇಶಿ ಆಟಗಾರರಾಗಿ ಬ್ಯಾಂಟಿಂಗ್ ದೈತ್ಯ ಕ್ರಿಸ್ ಗೇಲ್, ವೆಸ್ಟ್ ಇಂಡೀಸ್‍ನ ನಿಕೋಲಸ್ ಪೂರನ್ ಮತ್ತು ಆಸ್ಟ್ರೇಲಿಯಾದ ಸ್ಫೋಟಕ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಇರಲಿದ್ದಾರೆ. ಇವರ ಜೊತೆಗೆ ಬೌಲಿಂಗ್ ನಲ್ಲಿ ಬಲ ತುಂಬಲು ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ, ವೆಸ್ಟ್ ಇಂಡೀಸ್‍ನ ಶೆಲ್ಡನ್ ಕಾಟ್ರೆಲ್ ಮತ್ತು ಮುಜೀಬ್-ಉರ್-ರೆಹ್ಮಾನ್ ಇದ್ದಾರೆ. ಪಂಜಾಬ್ ಸೆ. 20ರಂದು ದೆಹಲಿ ತಂಡದ ವಿರುದ್ಧ ಮೊದಲ ಪಂದ್ಯ ಆಡಲಿದೆ.

    ಈ ಹಿಂದೆ ತಮ್ಮ ತಂಡದ ಬಗ್ಗೆ ಮಾತನಾಡಿದ ಮುಖ್ಯ ಕೋಚ್ ಅನಿಲ್ ಕುಂಬ್ಳೆಯವರು, ನಮ್ಮ ತಂಡ ಎಲ್ಲ ವಿಭಾಗದಲ್ಲೂ ಬಹಳ ಬಲಿಷ್ಠವಾಗಿದೆ. ಯುವ ಆಟಗಾರರು ಇದ್ದಾರೆ. ಪ್ರತಿಭಾನ್ವಿತ ವಿದೇಶಿ ಆಟಗಾರರು ಇದ್ದಾರೆ ಎಂದು ಹೇಳಿದ್ದರು. ಜೊತೆಗೆ 40 ವರ್ಷದ ಗೇಲ್ ಅವರು ತಂಡದಲ್ಲಿ ಆಡಲಿದ್ದು, ಅವರು ಓರ್ವ ಆಟಗಾರನ ಜೊತಗೆ ಹಿರಿಯ ಮಾರ್ಗದರ್ಶಕರಾಗಿಯೂ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ತಿಳಿಸಿದ್ದರು. ಇದನ್ನು ಓದಿ: ಕ್ಯಾಪ್ಟನ್ ತ್ರಯರಿಂದ ಸಾಕಷ್ಟು ಕಲ್ತಿದ್ದೇನೆ: ಕೆಎಲ್ ರಾಹುಲ್

    ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡಿರುವ ಬಗ್ಗೆ ಮಾತನಾಡಿದ್ದ ಕೆಎಲ್ ರಾಹುಲ್, ಧೋನಿ, ಕೊಹ್ಲಿ ರೋಹಿತ್ ಅವರೊಂದಿಗೆ ಕಳೆದ 10 ವರ್ಷಗಳಿಂದ ಆಡುತ್ತಿದ್ದು, ಅವರ ನಾಯಕತ್ವದಲ್ಲಿ ಆಡಲು ನನಗೆ ಅವಕಾಶ ಲಭಿಸಿದೆ. ಕೊಹ್ಲಿ, ಧೋನಿ ವ್ಯಕ್ತಿಗತವಾಗಿ ಭಿನ್ನವಾಗಿದ್ದರೂ, ತಂಡವನ್ನು ಮುನ್ನಡೆಸುವ ವಿಚಾರದಲ್ಲಿ ಒಂದೇ. ಆದರೆ ಆ ಪದ್ಧತಿಗಳು ಮಾತ್ರ ಬೇರೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಇತ್ತ ಸಾಕಷ್ಟು ಅನುಭವವನ್ನು ಹೊಂದಿರುವ ಟೀಂ ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ತಂಡದ ಕೋಚ್ ಆಗಿ ತಮ್ಮ ಪಕ್ಕದಲ್ಲೇ ಇರುವುದು ಸಾಕಷ್ಟು ಸಂತಸ ತಂದಿದೆ ಎಂದಿದ್ದರು.

  • ಕುಂಬ್ಳೆ ಇರೋದ್ರಿಂದ ನಮ್ಮ ಕೆಲಸ ಸುಲಭವಾಗಿದೆ: ಕೆಎಲ್ ರಾಹುಲ್

    ಕುಂಬ್ಳೆ ಇರೋದ್ರಿಂದ ನಮ್ಮ ಕೆಲಸ ಸುಲಭವಾಗಿದೆ: ಕೆಎಲ್ ರಾಹುಲ್

    ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಅನಿಲ್ ಕುಂಬ್ಳೆ ಇರುವುದು ನಮ್ಮ ಅದೃಷ್ಟ ಎಂದು ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.

    ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳಿರುವ ಆಟಗಾರರು ಕ್ವಾರಂಟೈನ್‍ನಲ್ಲಿದ್ದು, ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೋಚ್ ಅನಿಲ್ ಕುಂಬ್ಳೆ ಅವರ ಬಗ್ಗೆ ಮಾತನಾಡಿದ್ದು, ಈ ಆವೃತ್ತಿಯಲ್ಲಿ ಅನಿಲ್ ಭಾಯ್ ನಮ್ಮೊಂದಿಗೆ ಇರುವುದು ಅದೃಷ್ಟ. ಒಂದೇ ನಗರದಿಂದ ಬಂದಿರುವುದರಿಂದ ಕ್ರೀಡಾಂಗಣದಲ್ಲಿ ಹಾಗೂ ಹೊರಗೂ ನನಗೆ ಉತ್ತಮ ಬಾಂಧವ್ಯವಿದೆ. ಅವರು ಕೋಚ್ ಆಗಿರುವುದರಿಂದ ನಾಯಕನಾಗಿ ನನ್ನ ಕೆಲಸ ಸುಲಭವಾಗಿದೆ. ತಂಡದ ಎಲ್ಲಾ ಯೋಜನೆಗಳನ್ನು ಅವರೇ ಮಾಡುತ್ತಾರೆ. ಅದನ್ನು ಜಾರಿ ಮಾಡುವುದಷ್ಟೇ ನನ್ನ ಕರ್ತವ್ಯ ಎಂದು ರಾಹುಲ್ ಹೇಳಿದ್ದಾರೆ.

    ಪಂಜಾಬ್ ತಂಡದಲ್ಲಿ ಗೇಲ್, ಮ್ಯಾಕ್ಸ್‌ವೆಲ್ ರೂಪದಲ್ಲಿ ಇಬ್ಬರು ಸ್ಫೋಟಕ ಆಟಗಾರರಿದ್ದು, ಇಬ್ಬರ ಕಾಂಬಿನೇಷನ್‍ನಲ್ಲಿ ಕಿಂಗ್ಸ್ ಇಲೆವೆನ್ ಉತ್ತಮ ಪ್ರದರ್ಶನ ನೀಡಲಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಪರ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ನೀಡಿದ್ದು, ಅವರು ತಂಡಕ್ಕೆ ಬೇಕು ಎಂದು ಹರಾಜಿನಲ್ಲಿ ಬೇಡಿಕೆ ಇಟ್ಟಿದೆ. ಕಳೆದ 2 ವರ್ಷಗಳಿಂದ ಅಂತಹ ಆಟಗಾರ ನಮ್ಮ ತಂಡದ ಮಧ್ಯಮ ಕ್ರಮಾಂಕದಲ್ಲಿ ಇಲ್ಲದ ಕೊರತೆ ಕಾಣಿಸಿತ್ತು. ಗೇಲ್ ಅವರೊಂದಿಗೂ ಹಲವು ವರ್ಷಗಳಿಂದ ಆಡುತ್ತಿದ್ದು, ಅವರ ಅನುಭವ ತಂಡಕ್ಕೆ ಸಹಕಾರಿಯಾಗಲಿದೆ. ಟೂರ್ನಿಯ ಆರಂಭಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.

  • ಚೀನಾ ಪ್ರಾಯೋಜಕತ್ವಕ್ಕೆ ಐಪಿಎಲ್ ಗುಡ್‍ಬೈ ಹೇಳಬೇಕಿದೆ: ನೆಸ್ ವಾಡಿಯಾ

    ಚೀನಾ ಪ್ರಾಯೋಜಕತ್ವಕ್ಕೆ ಐಪಿಎಲ್ ಗುಡ್‍ಬೈ ಹೇಳಬೇಕಿದೆ: ನೆಸ್ ವಾಡಿಯಾ

    – ‘ಐಪಿಎಲ್’ ಚೀನಾ ಪ್ರೀಮಿಯರ್ ಲೀಗ್ ಅಲ್ಲ!

    ಮುಂಬೈ: ಭಾರತ ಹಾಗೂ ಚೀನಾ ನಡುವೆ ನಿರ್ಮಾಣವಾಗಿರುವ ಉದ್ರಿಕ್ತ ಪರಿಸ್ಥಿತಿ ಐಪಿಎಲ್ ಮೇಲೂ ಪರಿಣಾಮ ಬೀರುತ್ತಿದೆ. ಚೀನಾ ಗಾಲ್ವಾನ್‍ನಲ್ಲಿ ವಂಚನೆಯಿಂದ ದಾಳಿ ನಡೆಸಿತ್ತು. ಪರಿಣಾಮ ಭಾರತದ 20 ಯೋದರು ಹುತಾತ್ಮರಾಗಿದ್ದರು. ಆ ಬಳಿಕ ದೇಶದಲ್ಲಿ ಚೀನಾ ಉತ್ಪನ್ನಗಳ ಬಳಕೆ ಕೈಬಿಡ ಬೇಕು ಎಂಬ ಅಂದೋಲನ ಹೆಚ್ಚಾಗಿದೆ. ಇದೇ ವೇಳೆ ಕೇಂದ್ರ ಸರ್ಕಾರ ಕೂಡ ದೇಶದ ಭದ್ರತೆಯ ದೃಷ್ಟಿಯಿಂದ 59 ಚೀನಾ ಮೂಲದ ಆ್ಯಪ್‍ಗಳಿಗೆ ನಿಷೇಧ ವಿಧಿಸಿದೆ. ಈ ಇದೇ ವೇಳೆ ಐಪಿಎಲ್ ಪ್ರಾಯೋಜಕತ್ವದ ವಿಚಾರದಲ್ಲೂ ಆಸಕ್ತಿಕರ ಚರ್ಚೆ ನಡೆದಿದೆ.

    ಐಪಿಎಲ್ ಟೈಟಲ್ ಪ್ರಾಯೋಜಕತ್ವವನ್ನು ಚೀನಾ ಮೂಲದ ವಿವೋ ಮೊದಲ ಸಂಸ್ಥೆ ಪಡೆದಿದೆ. ಬಿಸಿಸಿಐನೊಂದಿಗೆ 2018ರಲ್ಲಿ 5 ವರ್ಷಕ್ಕೆ 2,199 ಕೋಟಿ ರೂ. ಒಪ್ಪಂದವನ್ನು ಮಾಡಿಕೊಂಡಿದೆ. ಅಲ್ಲದೇ ಪ್ರತಿ ವರ್ಷ 440 ಕೋಟಿ ರೂ.ಗಳನ್ನು ಬಿಸಿಸಿಐಗೆ ಪಾವತಿ ಮಾಡುತ್ತಿದೆ. ಈ ಒಪ್ಪಂದ 2022ರ ಐಪಿಎಲ್ ಆವೃತ್ತಿ ಬಳಿಕ ಅಂತ್ಯವಾಗಲಿದೆ. ಆದರೆ ಈ ಒಪ್ಪಂದವನ್ನು ಅದಷ್ಟೂ ಶೀಘ್ರವೇ ರದ್ದು ಮಾಡಿಕೊಳ್ಳಬೇಕು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಅಭಿಪ್ರಾಯ ಪಟ್ಟಿದ್ದಾರೆ.

    ಐಪಿಎಲ್‍ನೊಂದಿಗೆ ಚೀನಾ ಮೂಲದ ವಿವೋ ಮಾತ್ರವಲ್ಲದೇ ಪೇಟಿಎಂ, ಸ್ವಿಗ್ಗಿ, ಡ್ರೀಮ್ ಇಲೆವೆನ್ ಸೇರಿದಂತೆ ಹಲವು ಸಂಸ್ಥೆಗಳು ಒಪ್ಪಂದವನ್ನು ಮಾಡಿಕೊಂಡಿವೆ. ಪರಿಣಾಮ ಏಕಾಏಕಿ ಬಿಸಿಸಿಐ ಒಪ್ಪಂದ ರದ್ದು ಮಾಡಿಕೊಂಡರೇ ಸಾಕಷ್ಟು ನಷ್ಟ ಎದುರಿಸಬೇಕಾಗುತ್ತದೆ.

    ಐಪಿಎಲ್‍ನಲ್ಲಿ ಚೀನಾ ಮೂಲದ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಬಿಸಿಸಿಐ ಕೈಬಿಡಬೇಕು. ಮೊದಲು ದೇಶ, ಆ ಬಳಿಕವೇ ಹಣ. ಐಪಿಎಲ್ ಎಂದರೇ ಇಂಡಿಯನ್ ಪ್ರೀಮಿಯರ್ ಲೀಗ್, ಚೀನಿಸ್ ಪ್ರೀಮಿಯರ್ ಲೀಗ್ ಅಲ್ಲ. ಒಪ್ಪಂದಗಳನ್ನು ರದ್ದು ಮಾಡಿಕೊಳ್ಳುವ ಮೂಲಕ ಬಿಸಿಸಿಐ ಎಲ್ಲರಿಗೂ ಆದರ್ಶವಾಗಿ ನಿಲ್ಲಬೇಕಿದೆ. ಸದ್ಯ ಇರುವ ಪ್ರಾಯೋಜಯತ್ವವನ್ನು ಕೈಬಿಟ್ಟರೇ ಕೂಡಲೇ ಬೇರೆ ಸಂಸ್ಥೆ ಸಿಗುವುದು ಕಷ್ಟ. ಆದರೆ ಭಾರತದ ಹಲವು ಸಂಸ್ಥೆಗಳು  ಪ್ರಾಯೋಜಕತ್ವ ವಹಿಸುವ ಸಾಮರ್ಥ್ಯವನ್ನು ಹೊಂದಿವೆ. ದೇಶಕ್ಕಾಗಿ, ಪ್ರಜಾಪ್ರಭುತ್ವಕ್ಕಾಗಿ, ಎಲ್ಲದಕ್ಕಿಂತ ನಮಗಾಗಿ ಪ್ರಾಣ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಯೋಧರಿಗೆ ನಾವು ಗೌರವ ನೀಡಬೇಕಿದೆ ಎಂದು ನೆಸ್ ವಾಡಿಯಾ ಹೇಳಿದ್ದಾರೆ.

  • ‘ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ’- ಜೇಮ್ಸ್ ನೀಶಮ್‍ ಸವಾಲು ಸ್ವೀಕರಿಸಿದ ಕೆಎಲ್ ರಾಹುಲ್

    ‘ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ’- ಜೇಮ್ಸ್ ನೀಶಮ್‍ ಸವಾಲು ಸ್ವೀಕರಿಸಿದ ಕೆಎಲ್ ರಾಹುಲ್

    ಮೌಂಟ್ ಮಾಂಗನುಯಿ: ನ್ಯೂಜಿಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಕೆ.ಎಲ್.ರಾಹುಲ್ ಹಾಗೂ ಜೇಮ್ಸ್ ನೀಶಮ್ ನಡುವೆ ಮಾತಿನ ಚಕಮಕಿ ಏರ್ಪಟ್ಟಿತ್ತು. ಪಂದ್ಯದ ಬಳಿಕ ಈ ಕುರಿತು ಟ್ವೀಟ್ ಮಾಡಿದ್ದ ಜೇಮ್ಸ್ ನೀಶಮ್, ರಾಹುಲ್ ಕಾಲೆಳೆಯಲು ಪ್ರಯತ್ನಿಸಿದ್ದರು. ಸದ್ಯ ಜೇಮ್ಸ್ ನೀಶಮ್ ಸವಾಲಿಗೆ ತಿರುಗೇಟು ನೀಡಿರುವ ರಾಹುಲ್ ಏಪ್ರಿಲ್‍ನಲ್ಲಿ ಇದನ್ನು ಸೆಟ್ಲ್ ಮಾಡಿಕೊಳ್ಳೋಣ ಎಂದು ಹೇಳಿದ್ದಾರೆ.

    ಮೌಂಟ್ ಮಾಂಗನುಯಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಟೀಂ ಇಂಡಿಯಾ 19.5ನೇ ಓವರಿನಲ್ಲಿ ರಾಹುಲ್ ರನ್ ಓಟಕ್ಕೆ ಜೇಮ್ಸ್ ನೀಶಮ್ ಅಡ್ಡ ಬಂದಿದ್ದರು. ಶ್ರೇಯಸ್ ಅಯ್ಯರ್ ರೊಂದಿಗೆ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಸಿಂಗಲ್ ರನ್ ಓಡಲು ಯತ್ನಿಸಿದ್ದರು. ಆದರೆ ಬೌಲಿಂಗ್ ಮಾಡುತ್ತಿದ್ದ ಜೇಮ್ಸ್ ನೀಶಮ್ ಕ್ರಿಸ್‍ನಲ್ಲಿ ರಾಹುಲ್ ಓಟಕ್ಕೆ ಅಡ್ಡಲಾಗಿ ನಿಂತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ರಾಹುಲ್ ಅಲ್ಲಿಯೇ ಜೇಮ್ಸ್ ನೀಶಮ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.

    ಇತ್ತ ಪಂದ್ಯದ ಬಳಿಕ ಈ ಘಟನೆಯ ಕುರಿತು ಫೋಟೋ ಟ್ವೀಟ್ ಮಾಡಿದ್ದ ಜೇಮ್ಸ್ ನೀಶಮ್, ‘ಪೇಪರ್, ಸಿಸರ್ಸ್, ರಾಕ್’ ಎಂದು ಬರೆದು ಹಲ್ಲು ಕಿಸಿಯುವ ಇಮೋಜಿ ಹಾಕಿದ್ದರು. ಅಲ್ಲದೇ ಪಂದ್ಯದ ಬಳಿಕ ಮಾತನಾಡಿದ್ದ ಜೇಮ್ಸ್ ನೀಶಮ್ ಕೆಎಲ್ ರಾಹುಲ್ ಅವರ ಬ್ಯಾಟಿಂಗ್‍ಗೆ ಪ್ರಶಂಸೆ ವ್ಯಕ್ತಪಡಿಸಿ, ಏಪ್ರಿಲ್‍ನಲ್ಲಿ ನಡೆಯಲಿರುವ ಐಪಿಎಲ್‍ಗೂ ರನ್‍ಗಳನ್ನು ಉಳಿಸಿಕೊಳ್ಳುವಂತೆ ತಮಾಷೆ ಮಾಡಿದ್ದರು. ಇತ್ತ ಜೇಮ್ಸ್ ನೀಶಮ್‍ರ ಟ್ವೀಟನ್ನು ರೀ ಟ್ವೀಟ್ ಮಾಡಿದ್ದ ಐಸಿಸಿ, ‘ಸೂಪರ್ ಓವರ್ ಬದಲು ನಾವು ಇದನ್ನು ಶುರು ಮಾಡಬೇಕೇನೋ’ ಎಂದು ಪ್ರಶ್ನಿಸಿ ಟ್ರೋಲ್ ಮಾಡಿತ್ತು.

    ಸದ್ಯ ಜೇಮ್ಸ್ ನೀಶಮ್ ಅವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ಇದನ್ನು ಏಪ್ರಿಲ್‍ನಲ್ಲಿ ಸೆಟ್ಲ್ ಮಾಡಿಕೊಳ್ಳೋಣ ಎಂದು ಪ್ರತಿಕ್ರಿಯೆ ನೀಡಿ ಸವಾಲು ಸ್ವೀಕರಿಸಿದ್ದಾರೆ. ಅಂದಹಾಗೆ ಜೇಮ್ಸ್ ನೀಶಮ್ ಮುಂದಿನ ಐಪಿಎಲ್‍ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಲಿದ್ದಾರೆ. 50 ಲಕ್ಷ ರೂ.ಗೆ ಜೇಮ್ಸ್ ನೀಶಮ್‍ರನ್ನು ಪಂಜಾಬ್ ತಂಡ ಖರೀದಿ ಮಾಡಿದೆ. ಅಂದಹಾಗೇ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಈ ಬಾರಿಯ ಆವೃತ್ತಿಯಲ್ಲಿ ಕೆಎಲ್ ರಾಹುಲ್ ಮುನ್ನಡೆಸಲಿದ್ದಾರೆ.

  • ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

    ಪ್ರತಿ ಐಪಿಎಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಿ: ಪಂಜಾಬ್ ಮಾಲೀಕ ಮನವಿ

    ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಪ್ರತಿ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುವಂತೆ ಕಿಂಗ್ಸ್ ಇಲೆವೆನ್ ತಂಡದ ಸಹ ಮಾಲೀಕ ನೆಸ್ ವಾಡಿಯಾ ಬಿಸಿಸಿಐಗೆ ಮನವಿ ಮಾಡಿದ್ದಾರೆ.

    ಈ ವಿಚಾರವಾಗಿ ಬಿಸಿಸಿಐಗೆ ಪತ್ರ ಬರೆದಿರುವ ವಾಡಿಯಾ, ಐಪಿಎಲ್ ಟೂರ್ನಿಯ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ರದ್ದು ಮಾಡಿದಕ್ಕೆ ಬಿಸಿಸಿಐ ನಡೆಯನ್ನು ಶ್ಲಾಘಿಸಿದ್ದಾರೆ. ಈ ವೇಳೆ 2020 ರ ಐಪಿಎಲ್ ಆವೃತ್ತಿಯ ಪ್ರತಿ ಪಂದ್ಯಕ್ಕೂ ಮುನ್ನ ನಮ್ಮ ಹೆಮ್ಮೆಯ ರಾಷ್ಟ್ರಗೀತೆಯನ್ನು ಹಾಡಿಸಬೇಕು ಎಂದು ಬಿಸಿಸಿಐಗೆ ಒತ್ತಾಯ ಮಾಡಿದ್ದಾರೆ.

    ಸಾಮಾನ್ಯವಾಗಿ ಅಂತಾರಾಷ್ಟೀಯ ಮಟ್ಟದ ಪಂದ್ಯದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸುತ್ತಾರೆ. ಆದರೆ ಐಪಿಎಲ್ ಕೂಡ ವಿಶ್ವದ ನಂಬರ್ ಒನ್ ಕ್ರಿಕೆಟ್ ಲೀಗ್ ಆಗಿದೆ. ಆದ್ದರಿಂದ ಐಪಿಎಲ್ ಪ್ರತಿ ಪಂದ್ಯದ ಆರಂಭಕ್ಕೂ ಮುಂಚೆ ರಾಷ್ಟ್ರಗೀತೆ ಹಾಡಿಸಬೇಕು. ಉದ್ಘಾಟನಾ ಕಾರ್ಯಕ್ರಮವನ್ನು ರದ್ದು ಮಾಡಿದ್ದು ಅತ್ಯುತ್ತಮ ನಡೆ. ಸಮಾರಂಭಕ್ಕೆ ಅಪಾರ ಪ್ರಮಾಣದ ಹಣ ಖರ್ಚು ಮಾಡುವ ಬದಲು ಪಂದ್ಯ ಮತ್ತು ಕ್ರೀಡಾ ಕೂಟದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿಸಬೇಕು ಎಂದು ವಾಡಿಯಾ ಹೇಳಿದ್ದಾರೆ.

    ನಾನು ಈ ವಿಚಾರವಾಗಿ ಈ ಮುಂಚೆಯೇ ಬಿಸಿಸಿಐಗೆ ಪತ್ರ ಬರೆದಿದ್ದೆ. ಆದರೆ ಈಗ ನೇರವಾಗಿ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಅವರಿಗೆ ಪತ್ರ ಬರೆದಿದ್ದೇನೆ. ರಾಷ್ಟ್ರಗೀತೆಯನ್ನು ನಮ್ಮ ದೇಶದಲ್ಲಿ ಇಂಡಿಯನ್ ಸೂಪರ್ ಲೀಗ್ (ಫುಟ್ಬಾಲ್) ಮತ್ತು ಪ್ರೊ-ಕಬ್ಬಡಿ ಲೀಗ್ ಪಂದ್ಯಗಳ ಆರಂಭಕ್ಕೂ ಮುನ್ನ ಹಾಡಿಸುತ್ತಾರೆ. ಹೊರ ದೇಶಗಳಲ್ಲೂ ಕೂಡ ಈ ವಿಧಾನ ಜಾರಿಯಲ್ಲಿದೆ. ಆದ್ದರಿಂದ ಐಪಿಎಲ್ ಲೀಗ್‍ನಲ್ಲೂ ಈ ವಿಧಾನ ಜಾರಿಗೆ ತರಬೇಕು ಎಂದು ವಾಡಿಯಾ ಮನವಿ ಮಾಡಿದ್ದಾರೆ.

    ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ನಂತರ ಭಾರತೀಯ ಕ್ರಿಕೆಟ್‍ನಲ್ಲಿ ಹಲವಾರು ಮಹತ್ವದ ಬದಲಾವಣೆಯನ್ನು ತರುತ್ತಿದ್ದಾರೆ. ಪ್ರತಿ ಐಪಿಎಲ್ ಆವೃತ್ತಿ ಆರಂಭದ ಸಮಯದಲ್ಲಿ ಉದ್ಘಾಟನಾ ಸಮಾರಂಭ ಆಯೋಜನೆ ಆಗುತಿತ್ತು. ಈ ಉದ್ಘಾಟನಾ ಸಮಾರಂಭಕ್ಕೆ ಸೌರವ್ ಗಂಗೂಲಿ ಬ್ರೇಕ್ ಹಾಕಿದ್ದಾರೆ. ಇಲ್ಲಿಯವರೆಗೆ ಬಿಸಿಸಿಐ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರಲಿಲ್ಲ. ಗಂಗೂಲಿ ಅಧ್ಯಕ್ಷರಾದ ಬಳಿಕ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕೆ ಒಪ್ಪಿಗೆ ಸಿಕ್ಕಿದೆ. ಮೊದಲ ಹಗಲು ರಾತ್ರಿ ಪಂದ್ಯ ಬಾಂಗ್ಲಾ ವಿರುದ್ಧ ನ.22 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ.

  • ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

    ದೆಹಲಿಗೆ ಅಶ್ವಿನ್, ಕಿಂಗ್ಸ್​​ಗೆ ಕನ್ನಡಿಗ ರಾಹುಲ್ ಕ್ಯಾಪ್ಟನ್?

    ನವದೆಹಲಿ: 2020ರ ಐಪಿಎಲ್ ಆವೃತ್ತಿಯಲ್ಲಿ ಕನ್ನಡಿಗ ಕೆ.ಎಲ್ ರಾಹುಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕನಾಗುವ ಸಾಧ್ಯತೆಯಿದೆ.

    ಕಿಂಗ್ಸ್ ಇಲೆವೆಲ್ ಪಂಜಾಬ್ ತಂಡದ ಆಡಳಿತ ಮಂಡಳಿ, ಕಳೆದ ಆವೃತ್ತಿಯಲ್ಲಿ ಆರಂಭಿಕನಾಗಿ ಉತ್ತಮವಾಗಿ ಬ್ಯಾಟ್ ಬೀಸಿದ ಕೆ.ಎಲ್ ರಾಹುಲ್ ಅವರಿಗೆ ನಾಯಕ ಸ್ಥಾನವನ್ನು ನೀಡಲು ತೀರ್ಮಾನ ಮಾಡಿದೆ. ಕಳೆದ ವರ್ಷ ಪಂಜಾಬ್ ತಂಡದ ನಾಯಕನಾಗಿದ್ದ ಅಶ್ವಿನ್ ದೆಹಲಿ ತಂಡಕ್ಕೆ ಹೋಗಲಿದ್ದಾರೆ ಎಂದು ವರದಿಯಾಗಿದೆ.

    ದೆಹಲಿ ತಂಡ, ನಾಯಕ ಶ್ರೇಯಸ್ ಅಯ್ಯರ್, ಮುಖ್ಯ ಕೋಚ್ ರಿಕಿ ಪಾಂಟಿಂಗ್ ಮತ್ತು ಮಾರ್ಗದರ್ಶಕ ಸೌರವ್ ಗಂಗೂಲಿಯವರ ನೇತೃತ್ವದಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಆದರೆ ದೆಹಲಿ ತಂಡದಲ್ಲಿ ಅನುಭವಿ ಸ್ಪಿನ್ನರ್‍ ಗಳ ಕೊರತೆ ಇದ್ದು, ಆರ್ ಅಶ್ವಿನ್ ಅವರಿಗೆ ಅ ಸ್ಥಾನ ನೀಡಲು ದೆಹಲಿ ಕ್ಯಾಪಿಟಲ್ ತಂಡದ ಆಡಳಿತ ಮಂಡಳಿ ತೀರ್ಮಾನ ಮಾಡಿದೆ ಎಂದು ಹೇಳಲಾಗಿದೆ.

    ಈಗ ಸದ್ಯ ದೆಹಲಿ ತಂಡದಲ್ಲಿ 36 ವರ್ಷದ ಸ್ಪಿನ್ನರ್ ಅಮಿತ್ ಮಿಶ್ರಾ ಇದ್ದು, ಅವರಿಂದ ನಿರೀಕ್ಷಿತ ಮಟ್ಟದ ಬೌಲಿಂಗ್ ಪ್ರದರ್ಶನ ಕಂಡು ಬಂದಿಲ್ಲ. ಅದ್ದರಿಂದ ಭಾರತ ತಂಡದಲ್ಲಿ ಹೆಚ್ಚು ಅನುಭವ ಇರುವ ಆರ್ ಅಶ್ವಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ತೀರ್ಮಾನವನ್ನು ದೆಹಲಿ ಕ್ಯಾಪಿಟಲ್ ಮಾಡಿದೆ. ಈ ಮೂಲಕ ಬೌಲಿಂಗ್ ವಿಭಾಗವನ್ನು ಬಲಪಡಿಸುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.

    ಕಳೆದ ಎರಡು ಆವೃತ್ತಿಯಲ್ಲಿ ಪಂಜಾಬ್ ತಂಡವನ್ನು ಮುನ್ನಡೆಸಿದ ಅಶ್ವಿನ್ ಅವರು, ತಂಡವನ್ನು ಫ್ಲೇ ಆಫ್ ಹಂತಕ್ಕೆ ಕರೆದುಕೊಂಡು ಹೋಗುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಬದಲಾವಣೆಯ ಯೋಜನೆ ಮಾಡಿರುವ ಪಂಜಾಬ್ ತಂಡ ಆರಂಭಿಕನಾಗಿ ಉತ್ತಮ ಪ್ರದರ್ಶನ ನೀಡಿರುವ ಯುವ ಆಟಗಾರ ಕನ್ನಡಿಗ ಕೆ.ಎಲ್ ರಾಹುಲ್‍ಗೆ ಅ ಸ್ಥಾನವನ್ನು ನೀಡಲು ಮುಂದಾಗಿದೆ ಎಂದು ಹೇಳಲಾಗಿದೆ.

    ಅಶ್ವಿನ್ ಐಪಿಎಲ್‍ನಲ್ಲಿ ಒಟ್ಟು 139 ಪಂದ್ಯಗಳನ್ನು ಆಡಿ 26.48 ಸರಾಸರಿಯಲ್ಲಿ 125 ವಿಕೆಟ್ ಪಡೆದಿದ್ದಾರೆ. 2018 ರಲ್ಲಿ ಚೆನ್ನೈ ತಂಡ ಇವರನ್ನು ಕೈಬಿಟ್ಟ ಮೇಲೆ ಪಂಜಾಬ್ 7.6 ಕೋಟಿ ರೂ. ನೀಡಿ ತಮ್ಮ ತಂಡಕ್ಕೆ ಖರೀದಿ ಮಾಡಿ ನಾಯಕ ಸ್ಥಾನ ನೀಡಿತ್ತು. ಆದರೆ ತಂಡವನ್ನು ಮುನ್ನಡೆಸುವಲ್ಲಿ ವಿಫಲರಾದ ಅಶ್ವಿನ್ ಕೆಳದ ಆವೃತ್ತಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 15 ವಿಕೆಟ್ ಕಿತ್ತು ಕೇವಲ 42 ರನ್ ಗಳಿಸಿದ್ದರು. ಈ ಮೂಲಕ ಪಂಜಾಬ್ ತಂಡ ಅಂಕ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿತ್ತು.

  • ಕಿಂಗ್ಸ್ ಇಲೆವೆನ್ ಪಂಜಾಬ್‍ನಿಂದ ಅಶ್ವಿನ್ ಔಟ್?- ಯಾರಾಗ್ತಾರೆ ಕಿಂಗ್ಸ್ ಕ್ಯಾಪ್ಟನ್?

    ಕಿಂಗ್ಸ್ ಇಲೆವೆನ್ ಪಂಜಾಬ್‍ನಿಂದ ಅಶ್ವಿನ್ ಔಟ್?- ಯಾರಾಗ್ತಾರೆ ಕಿಂಗ್ಸ್ ಕ್ಯಾಪ್ಟನ್?

    ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕರಾಗಿರುವ ಆರ್.ಅಶ್ವಿನ್ ಅವರನ್ನು ತಂಡದಿಂದ ಕೈಬಿಡಲು ತಂಡದ ಮ್ಯಾನೇಜ್‍ಮೆಂಟ್ ನಿರ್ಧರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬಾಲಿವುಡ್ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಕಳೆದ ಎರಡು ಟೂರ್ನಿಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ. ಕಳೆದ 2 ಟೂರ್ನಿಗಳಲ್ಲಿ ಅಶ್ವಿನ್ ನಾಯಕತ್ವದಲ್ಲಿ ಮುನ್ನಡೆದಿದ್ದ ತಂಡ 6 ಮತ್ತು 5ನೇ ಕ್ರಮಾಂಕದಲ್ಲಿ ತನ್ನ ಜರ್ನಿಯನ್ನು ಅಂತ್ಯಗೊಳಿಸಿತ್ತು. ಕಿಂಗ್ಸ್ ಇಲೆವೆನ್ ಪರ 28 ಪಂದ್ಯಗಳನ್ನು ಆಡಿರುವ ಅಶ್ವಿನ್, 25 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ಐಪಿಎಲ್‍ನಲ್ಲಿ 139 ಪಂದ್ಯಗಳನ್ನು ಆಡಿರುವ ಅಶ್ವಿನ್ 125 ವಿಕೆಟ್ ಪಡೆದಿದ್ದಾರೆ. 2018 ರಲ್ಲಿ ತಂಡ 7.8 ಕೋಟಿ ರೂ.ಗಳನ್ನು ನೀಡಿ ಅಶ್ವಿನ್ ರನ್ನು ಖರೀದಿ ಮಾಡಿತ್ತು.

    ಮುಂದಿನ ಟೂರ್ನಿಯಲ್ಲಿ ಅಶ್ವಿನ್ ಅವರನ್ನು ಬೇರೆ ತಂಡಕ್ಕೆ ಬಿಟ್ಟುಕೊಡಲು ತೀರ್ಮಾನಿಸಲಾಗಿದ್ದು, ಈ ಕುರಿತ ನಿರ್ಧಾರ ಶೀಘ್ರವೇ ಪ್ರಕಟ ಮಾಡಲಾಗುತ್ತದೆ ಎನ್ನಲಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡ ಅಶ್ವಿನ್ ರನ್ನು ಖರೀದಿ ಮಾಡಲು ಚಿಂತನೆ ನಡೆಸಿದೆಯಂತೆ. ಸದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮ್ಯಾನೇಜ್‍ಮೆಂಟ್ ಸದ್ಯ ಅಶ್ವಿನ್‍ರ ಸ್ಥಾನದಲ್ಲಿ ಕನ್ನಡಿಗ ಕೆಎಲ್ ರಾಹುಲ್‍ರನ್ನು ನಾಯಕರಾಗಿ ಆಯ್ಕೆ ಮಾಡುವ ಚಿಂತನೆಯಲ್ಲಿದೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇತ್ತ ತಂಡದ ಕೋಚ್ ಬದಲಾವಣೆಯನ್ನು ಮಾಡಲಾಗುತ್ತಿದೆ. ಈ ಸ್ಥಾನದಲ್ಲಿ ಜಾರ್ಜ್ ಬೈಲಿ ಮತ್ತು ಡ್ಯಾರೆನ್ ಲೆಹ್ಮನ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆ.

    ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಟೂರ್ನಿಯ ಮೊದಲ ಪಂದ್ಯದಿಂದಲೂ ಅಶ್ವಿನ್ ಅವಕಾಶವನ್ನು ಪಡೆದಿರಲಿಲ್ಲ. ತಂಡದಿಂದ ಅನುಭವಿ ಅಶ್ವಿನ್ ಹಾಗೂ ರೋಹಿತ್ ಶರ್ಮಾರನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಹಲವು ವಿಮರ್ಶೆಗಳು ಕೂಡ ಎದುರಾಗಿತ್ತು. ಅಲ್ಲದೇ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ತಂಡದ ಆಯ್ಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ಸಂದರ್ಭದಲ್ಲೇ ಕಿಂಗ್ಸ್ ಇಲೆವೆನ್ ತಂಡ ನಾಯಕತವ ಕಳೆದುಕೊಳ್ಳುವ ಸುದ್ದಿ ಹೊರಬಿದ್ದಿದೆ.

  • ಚೆನ್ನೈ, ರಾಜಸ್ಥಾನದ ಬಳಿಕ ಐಪಿಎಲ್‍ನಿಂದ ಪಂಜಾಬ್ ತಂಡ ಅಮಾನತು?

    ಚೆನ್ನೈ, ರಾಜಸ್ಥಾನದ ಬಳಿಕ ಐಪಿಎಲ್‍ನಿಂದ ಪಂಜಾಬ್ ತಂಡ ಅಮಾನತು?

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಬಳಿಕ ಈಗ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಐಪಿಎಲ್‍ನಿಂದ ಅಮಾನತುಗೊಳ್ಳುವ ಸಾಧ್ಯತೆಯಿದೆ.

    ಪಂಜಾಬ್ ತಂಡದ ಮಾಲೀಕರಾಗಿರುವ ನೆಸ್ ವಾಡಿಯಾ ಜಪಾನ್ ನಲ್ಲಿ ಮಾದಕ ಪದಾರ್ಥಗಳೊಂದಿಗೆ ಸಿಕ್ಕಿಬಿದ್ದು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿರುವ ಬಿಸಿಸಿಐ ನೆಸ್ ವಾಡಿಯಾ ಮೇಲಿರುವ ಆರೋಪ ಸಾಬೀತಾದರೆ ಪಂಜಾಬ್ ತಂಡವನ್ನು ನಿಷೇಧಿಸುವ ಸಾಧ್ಯತೆಯಿದೆ.

    ಐಪಿಎಲ್ ಫ್ರಾಂಚೈಸಿ ಮಾಲೀಕರು ಆನ್‍ಫೀಲ್ಡ್ ಮತ್ತು ಆಫ್ ಫೀಲ್ಡ್ ನಿಯಮಗಳನ್ನು ಮೀರುವಂತಿಲ್ಲ. ಒಂದು ವೇಳೆ ಈ ನಿಯಮಗಳನ್ನು ಮೀರಿ ಆರೋಪ ಸಾಬೀತಾಗಿ ದೋಷಿ ಎಂದಾದರೆ ಆ ತಂಡವನ್ನು ಅಮಾನತಿನಲ್ಲಿಡಲು ಬಿಸಿಸಿಐಗೆ ಅಧಿಕಾರವಿದೆ.

    ಈ ಪ್ರಕರಣದ ವಿಚಾರಣೆಗೆ ಬಿಸಿಸಿಐ ಒಂದು ಸಮಿತಿಯನ್ನು ನೇಮಿಸಲಿದ್ದು, ಈ ಸಮಿತಿ  ಒಂಬುಡ್ಸ್‌ಮನ್‌ ಅವರಿಗೆ ವರದಿ ಸಲ್ಲಿಸಲಿದೆ. ಹೀಗಾಗಿ ಈ ಪ್ರಕರಣದಲ್ಲಿ ಬಿಸಿಸಿಐ ನಡೆ ಏನು ಎನ್ನುವ ಕುತೂಹಲ ಹೆಚ್ಚಾಗಿದೆ.

    ಈ ಹಿಂದೆ ಐಪಿಎಲ್ ಮಾಲೀಕರ ಬೆಟ್ಟಿಂಗ್ ಪ್ರಕರಣ ಬೆಳಕಿಗೆ ಬಂದಾಗ ಲೋಧಾ ಸಮಿತಿ ತನಿಖೆ ನಡೆಸಿತ್ತು. ಇದಾದ ಬಳಿಕ ಚೆನ್ನೈ ಮತ್ತು ರಾಜಸ್ಥಾನ ರಾಯಲ್ಸ್ ತಂಡ 2 ವರ್ಷ ನಿಷೇಧ ಶಿಕ್ಷೆ ಅನುಭವಿಸಿತ್ತು.

    ಏನಿದು ಪ್ರಕರಣ?
    ಕಳೆದ ಮಾರ್ಚ್‍ನಲ್ಲಿ ನೆಸ್ ವಾಡಿಯಾ ಪ್ರವಾಸಕ್ಕೆಂದು ಜಪಾನ್‍ಗೆ ತೆರಳಿದ್ದ ವೇಳೆ ತಮ್ಮ ಬಳಿ 25 ಗ್ರಾಂ ಗಾಂಜಾ ಇಟ್ಟುಕೊಂಡಿದ್ದರು. ನ್ಯೂ ಚಿಟೋಸ್ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಶ್ವಾನಗಳು ಅವರ ಬಳಿಯಿದ್ದ ಗಾಂಜಾವನ್ನು ಪತ್ತೆ ಹಚ್ಚಿತ್ತು. ನಂತರ ಅವರನ್ನು ಬಂಧಿಸಿ, ವಿಚಾರಣೆ ನಡೆಸಲಾಗಿತ್ತು.

    ವಿಚಾರಣೆಯ ಸಂದರ್ಭದಲ್ಲಿ ನಾನು ಸ್ವಂತ ಬಳಕೆಗಾಗಿ ಗಾಂಜಾವನ್ನು ಇಟ್ಟುಕೊಂಡಿದ್ದೆ ಎಂದು ನೆಸ್ ತಿಳಿಸಿದ್ದರು. ಈ ಹೇಳಿಕೆಯನ್ನು ಪುರಸ್ಕರಿಸಿದ ಕೋರ್ಟ್ ನೆಸ್‍ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿದ್ದರೂ ನಿಯಮಗಳ ಅನ್ವಯ ಅವರ ಶಿಕ್ಷೆಯನ್ನು ಅಮಾನತ್ತಿನಲ್ಲಿ ಇಟ್ಟಿತ್ತು. ಹೀಗಾಗಿ ಅವರು ಜೈಲು ಶಿಕ್ಷೆಯಿಂದ ಪಾರಾಗಿ ಭಾರತಕ್ಕೆ ಮರಳಿದ್ದರು.

    ಜಪಾನಿನಲ್ಲಿ ಡ್ರಗ್ಸ್ ಕುರಿತಂತೆ ಕಠಿಣ ಕಾನೂನು ಜಾರಿಯಾಗಿದ್ದು, ದೋಷಿಯಾದರೆ 7 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದರೆ ಮೊದಲ ಬಾರಿಗೆ ಸಿಕ್ಕಿಬಿದ್ದರೆ ಶಿಕ್ಷೆಯನ್ನು ಅಮಾನತಿನಲ್ಲಿ ಇಡಬಹುದಾಗಿದೆ. ಎರಡನೇ ಬಾರಿಗೆ ಸಿಕ್ಕಿಬಿದ್ದರೆ ಶಿಕ್ಷೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತದೆ.

  • ಪಾದಾರ್ಪಣೆ ಪಂದ್ಯದ ಮೊದಲ ಓವರಿನಲ್ಲೇ 25 ರನ್ ಕೊಟ್ಟ ಬೌಲರ್: ಯಾರು ಈ ‘ವರುಣ್ ಚಕ್ರವರ್ತಿ’?

    ಪಾದಾರ್ಪಣೆ ಪಂದ್ಯದ ಮೊದಲ ಓವರಿನಲ್ಲೇ 25 ರನ್ ಕೊಟ್ಟ ಬೌಲರ್: ಯಾರು ಈ ‘ವರುಣ್ ಚಕ್ರವರ್ತಿ’?

    ಕೋಲ್ಕತ್ತಾ: 2019ರ ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಪಾದಾರ್ಪಣೆ ಮಾಡಿದ ವರುಣ್ ಚಕ್ರವರ್ತಿ ಮೊದಲ ಓವರಿನಲ್ಲೇ 25 ರನ್ ನೀಡಿ ದುಬಾರಿ ಬೌಲಿಂಗ್ ಮಾಡಿದ್ದಾರೆ.

    ವರುಣ್ ಐಪಿಎಲ್ ಟೂರ್ನಿಯ ಚೊಚ್ಚಲ ಪಂದ್ಯ ಇದಾಗಿದ್ದು, ಇನ್ನಿಂಗ್ಸ್ ನ 2ನೇ ಓವರ್ ಬೌಲ್ ಮಾಡಲು ಅವಕಾಶ ಪಡೆದಿದ್ದರು. ಸ್ಟ್ರೈಕ್ ನಲ್ಲಿದ್ದ ಕೆಕೆಆರ್ ತಂಡದ ಸುನೀಲ್   ನರೇನ್ ಭರ್ಜರಿ ಬೌಂಡರಿ, ಸಿಕ್ಸರ್ ಗಳೊಂದಿಗೆ 25 ರನ್ ಸಿಡಿಸಿದ್ದಾರೆ.

    27 ವರ್ಷದ ವರುಣ್ ಕರ್ನಾಟಕದ ಬೀದರ್ ನಲ್ಲಿ 1991 ರಲ್ಲಿ ಜನಿಸಿದ್ದು, ತಮಿಳುನಾಡಿನ ಪರ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್ ನಲ್ಲಿ 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ ವರುಣ್ ರನ್ನು 8.4 ಕೋಟಿಗೆ ಕಿಂಗ್ಸ್ ಇಲೆವೆನ್ ಖರೀದಿ ಮಾಡಿತ್ತು.

    ತಮಿಳುನಾಡು ಟಿ20 ಲೀಡ್, ಟಿಎನ್‍ಪಿಎಲ್ ನಲ್ಲಿ ಉತ್ತಮ ಅವಕಾಶ ಪಡೆದಿದ್ದರು. ಒಟ್ಟು 7 ಪಂದ್ಯಗಳಲ್ಲಿ 31 ವಿಕೆಟ್ ಕಬಳಿಸಿದ್ದರು. ಟೂರ್ನಿಯಲ್ಲಿ 4 ಓವರ್ ಗಳಲ್ಲಿ 28 ರನ್ ಮಾತ್ರ ನೀಡಿದ್ದರು. ಅಲ್ಲದೇ ವಿಜಯ್ ಹಜಾರೆ ಟ್ರೋಫಿಯಲ್ಲೂ 22 ವಿಕೆಟ್ ಕಬಳಿಸಿದ್ದರು. ಐಪಿಎಲ್ ಆರಂಭ 1 ಓವರಿನಲ್ಲೇ 25 ರನ್ ನೀಡಿ ನಿರಾಸೆ ಅನುಭವಿಸಿದರು. ಆದರೆ ಇದೇ ಪಂದ್ಯದಲ್ಲಿ ಮತ್ತೆ ತಿರುಗೇಟು ನೀಡಿದ ವರುಣ್ ತಮ್ಮ 3ನೇ ಓವರಿನಲ್ಲಿ ಕೇವಲ 1 ರನ್ ನೀಡಿ ವಿಕೆಟ್ ಕಬಳಿಸಿ ತಿರುಗೇಟು ನೀಡಿದರು. ಅಂತಿಮವಾಗಿ 3 ಓವರ್ ಗಳಲ್ಲಿ 35 ರನ್ ನೀಡಿ 1 ವಿಕೆಟ್ ಪಡೆದಿದ್ದಾರೆ.