Tag: Kings XI Punjab

  • 22 ಬಾಲಿಗೆ ದಿನೇಶ್ ಕಾರ್ತಿಕ್ ಅರ್ಧಶತಕ – ರಾಹುಲ್ ಪಡೆಗೆ 165 ರನ್‍ಗಳ ಗುರಿ

    22 ಬಾಲಿಗೆ ದಿನೇಶ್ ಕಾರ್ತಿಕ್ ಅರ್ಧಶತಕ – ರಾಹುಲ್ ಪಡೆಗೆ 165 ರನ್‍ಗಳ ಗುರಿ

    – ಟೀಕೆಗಳಿಗೆ ಬ್ಯಾಟ್‍ನಿಂದ ಉತ್ತರ ಕೊಟ್ಟ ಕೆಕೆಆರ್ ನಾಯಕ

    ಅಬುಧಾಬಿ: ಇಂದು ವಿಕೇಂಡ್ ಧಮಾಕಾದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ಎದುರಾಳಿ ಪಂಜಾಬ್ ತಂಡಕ್ಕೆ 165 ರನ್‍ಗಳ ಗುರಿಯನ್ನು ನೀಡಿದೆ.

    ಟೀಕೆಗಳಿಗೆ ಬ್ಯಾಟ್‍ನಿಂದ ಕಾರ್ತಿಕ್ ಉತ್ತರ
    ಇಂದು ಬೇಗನೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಕೋಲ್ಕತ್ತಾ ತಂಡಕ್ಕೆ ನಾಯಕ ದಿನೇಶ್ ಕಾರ್ತಿಕ್ ತಮ್ಮ ಸ್ಫೋಟಕ ಬ್ಯಾಟಿಂಗ್‍ನಿಂದ ನೆರವಾದರು. ಕೇವಲ 22 ಬಾಲಿಗೆ ಅರ್ಧಶತಕ ಪೂರ್ಣಗೊಳಿಸಿದ ದಿನೇಶ್ ಕಾರ್ತಿಕ್, ಅಂತಿಮವಾಗಿ 29 ಬಾಲಿಗೆ 58 ರನ್ ಸಿಡಿಸಿ ಔಟ್ ಆದರು. ಈ ಮೂಲಕ ನಾಯಕ ಮತ್ತು ಬ್ಯಾಟಿಂಗ್‍ನಲ್ಲಿ ಕಾರ್ತಿಕ್ ವಿಫಲರಾಗಿದ್ದಾರೆ. ಅವನ್ನು ನಾಯಕತ್ವದಿಂದ ಕೆಳಗಿಳಸಬೇಕು ಎಂದವರಿಗೆ ತಮ್ಮ ಬ್ಯಾಟಿಂಗ್ ಮೂಲಕ ಉತ್ತರ ನೀಡಿದ್ದಾರೆ.

    ಪವರ್ ಪ್ಲೇನಲ್ಲಿ ಪಂಜಾಬ್ ವೇಗಿಗಳು ಮಿಂಚು
    ಕಳೆದ ಪಂದ್ಯಗಳಲ್ಲಿ ದುಬಾರಿಯಾಗಿ ಟೀಕೆಗೆ ಒಳಗಾಗುತ್ತಿದ್ದ ಪಂಜಾಬ್ ವೇಗಿಗಳು ಇಂದಿನ ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಿದರು. ಪವರ್ ಪ್ಲೇ ವೇಳೆ 23 ಡಾಟ್ ಬಾಲ್ ಎಸೆದ ವೇಗಿಗಳು ಎರಡು ವಿಕೆಟ್ ಕಿತ್ತು ಕೇವಲ 25 ರನ್ ನೀಡಿದರು. ಪಂಜಾಬ್ ಪರ ಮೊಹಮ್ಮದ್ ಶಮಿ, ಅರ್ಷ್‍ದೀಪ್ ಸಿಂಗ್ ಮತ್ತು ರವಿ ಬಿಷ್ಣೋಯ್ ಅವರು ತಲಾ ಒಂದು ವಿಕೆಟ್ ಪಡೆದುಕೊಂಡರು.

    ಟಾಸ್ ಗೆದ್ದು ಬ್ಯಾಟಿಂಗ್‍ಗೆ ಬಂದ ಕೋಲ್ಕತ್ತಾ ತಂಡಕ್ಕೆ ಮೂರನೇ ಓವರಿನಲ್ಲೇ ಮೊಹಮ್ಮದ್ ಶಮಿ ಶಾಕ್ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ ರಾಹುಲ್ ತ್ರಿಪಾಠಿ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇವರ ನಂತರ ಕ್ರೀಸಿಗೆ ಬಂದ ನಿತೀಶ್ ರಾಣಾ ಅವರು ಇಲ್ಲದ ರನ್ ಕದಿಯಲು ಹೋಗಿ ಸಲುಭವಾಗಿ ರನ್‍ಔಟ್ ಆಗಿ ಹೊರ ನಡೆದರು. ಇನ್ನಿಂಗ್ಸ್ ಆರಂಭದಲ್ಲೇ ಪಂಜಾಬ್ ತಂಡ ಕೋಲ್ಕತ್ತಾದ ಮೇಲೆ ಒತ್ತಡ ಹಾಕಲು ಆರಂಭಿಸಿತು.

    ಪಂಜಾಬ್ ತಂಡದ ವೇಗಿಗಳ ಬಿಗಿ ಬೌಲಿಂಗ್ ದಾಳಿಗೆ ನಲುಗಿದ ಕೋಲ್ಕತ್ತಾ, ಪವರ್ ಪ್ಲೇ ಮುಕ್ತಾಯದ ವೇಳಗೆ ಎರಡು ವಿಕೆಟ್ ಕಳೆದುಕೊಂಡು ಕೇವಲ 25 ರನ್ ಪೇರಿಸಿತು. ನಂತರ ಒದಾದ ಶುಭ್‍ಮನ್ ಗಿಲ್ ಮತ್ತು ಇಯೊನ್ ಮೋರ್ಗಾನ್ ಅವರು ನಿಧಾನವಾಗಿ ತಂಡಕ್ಕೆ ರನ್ ಸೇರಿಸುತ್ತಾ ಹೋದರು. ಪರಿಣಾಮ 10 ಓವರ್ ಮುಕ್ತಾಯಕ್ಕೆ ಕೋಲ್ಕತ್ತಾ ತಂಡ ಎರಡು ವಿಕೆಟ್ ಕಳೆದುಕೊಂಡು 60 ರನ್ ಕಲೆ ಹಾಕಿತು. ಈ ಜೋಡಿ 42 ಬಾಲಿಗೆ 49 ರನ್‍ಗಳ ಜೊತೆಯಾಟವಾಡಿತು.

    ಆದರೆ 23 ಬಾಲಿಗೆ 24 ರನ್ ಸಿಡಿಸಿ ತಾಳ್ಮೆಯಿಂದ ಆಡುತ್ತಿದ್ದ ಇಯೊನ್ ಮೋರ್ಗಾನ್ ಅವರು 10ನೇ ಓವರಿನ ನಾಲ್ಕನೇ ಬಾಲಿನಲ್ಲಿ ಕ್ಯಾಚ್ ನೀಡಿ ಔಟ್ ಆದರು. ಆರಂಭದಿಂದಲೂ ಉತ್ತಮವಾಗಿ ಆಡಿದ ಶುಭ್‍ಮನ್ ಗಿಲ್ ಅವರು 42 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ನಂತರ ನಾಯಕ ದಿನೇಶ್ ಕಾರ್ತಿಕ್ ಅವರು ಅಬ್ಬರದ ಬ್ಯಾಟಿಂಗ್‍ಗೆ ಮುಂದಾದರು. ಹೀಗಾಗಿ ಕಾರ್ತಿಕ್ ಗಿಲ್ ಜೋಡಿ 31 ಬಾಲಿಗೆ ಅರ್ಧಶತಕ ಜೊತೆಯಾಟವಾಡಿತು.

    ಇದೇ ವೇಳೆ ಸ್ಫೋಟಕ ಆಟಕ್ಕೆ ಮುಂದಾದ ನಾಯಕ ದಿನೇಶ್ ಕಾರ್ತಿಕ್ ಕೇವಲ 22 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. 17ನೇ ಓವರಿನ ಐದನೇ ಬಾಲಿನಲ್ಲಿ ಎರಡು ರನ್ ಓಡಲು ಹೋದ ಶುಭ್‍ಮನ್ ಗಿಲ್ ಅವರು 47 ಬಾಲಿಗೆ 57 ರನ್ ಸಿಡಿಸಿ ರನೌಟ್ ಆದರು. ನಂತರ ಬಂದ ಆಂಡ್ರೆ ರಸ್ಸೆಲ್ ಅವರು ಕೇವಲ 5 ರನ್‍ಗಳಿಸಿ 18ನೇ ಓವರಿನಲ್ಲಿ ಔಟ್ ಆದರು.

  • 3 ವಿಕೆಟ್, 12 ರನ್, 1 ಮೇಡನ್ ಓವರ್ – ರಶೀದ್ ಬೌಲಿಂಗ್ ದಾಳಿಗೆ ಪಂಜಾಬ್ ಉಡೀಸ್

    3 ವಿಕೆಟ್, 12 ರನ್, 1 ಮೇಡನ್ ಓವರ್ – ರಶೀದ್ ಬೌಲಿಂಗ್ ದಾಳಿಗೆ ಪಂಜಾಬ್ ಉಡೀಸ್

    – ಸೋಲಿನ ಯಾನ ಮುಂದುವರಿಸಿದ ರಾಹುಲ್ ಪಡೆ
    – ಪೂರನ್ ಆಕರ್ಷಕ ಅರ್ಧಶತಕ

    ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸನ್‍ರೈಸರ್ಸ್ ಹೈದರಾಬಾದ್ ತಂಡ 69 ರನ್‍ಗಳ ಭರ್ಜರಿ ಗೆಲುವನ್ನು ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ.

    ಇಂದು ನಡೆದ ಐಪಿಎಲ್-2020ಯ 22ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ನಾಯಕ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್  ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 201 ರನ್ ಗುರಿ ನೀಡಿತು. ಇದನ್ನು ಬೆನ್ನಟ್ಟಿದ ಪಂಜಾಬ್ ತಂಡ ಆರಂಭದಲ್ಲೇ ಎಡವಿತು. ಹೈದರಾಬಾದ್ ತಂಡದ ಬೌಲಿಂಗ್ ದಾಳಿಗೆ ನಲುಗಿದ ಪಂಜಾಬ್ 16.5 ಓವರ್ ಬ್ಯಾಟ್ ಮಾಡಿ 132 ರನ್ ಗಳಿಸಿ ಆಲೌಟ್ ಆಯ್ತು. ಪಂಜಾಬ್ ತಂಡ ಟೂರ್ನಿಯಲ್ಲಿ ಐದನೇ ಸೋಲಿನ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿಯಿತು.

    ರಶೀದ್ ಖಾನ್ ಸ್ಪಿನ್ ಜಾದು
    ಇಂದು ಹೈದರಾಬಾದ್ ಬೌಲರ್ ಗಳು ಪಂಜಾಬ್ ತಂಡವನ್ನು ಬಿಡದೇ ಕಾಡಿದರು. ನಾಲ್ಕು ಓವರ್ ಬೌಲ್ ಮಾಡಿದ ರಶೀದ್ ಖಾನ್ ಅವರು ಪ್ರಮುಖ ಮೂರು ವಿಕೆಟ್ ಪಡೆದು ಕೇವಲ 12 ರನ್ ನೀಡಿದರು. ಜೊತೆಗೆ 15ನೇ ಓವರಿನಲ್ಲಿ ಮೇಡನ್ ಮಾಡಿ ಎರಡು ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ವೇಗಿಗಳಾದ ಖಲೀಲ್ ಅಹ್ಮದ್ ಮತ್ತು ಟಿ ನಟರಾಜನ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು.

    ದೊಡ್ಡ ಮೊಟ್ಟದ ರನ್ ಬೆನ್ನಟ್ಟಿದ ಪಂಜಾಬ್ ತಂಡ ಆರಂಭದಲ್ಲೇ ಎಡವಿತು. ಎರಡನೇ ಓವರಿನಲ್ಲೇ ಇಲ್ಲದ ರನ್ ಕದಿಯಲು ಹೋದ ಮಯಾಂಕ್ ಅಗರ್ವಾಲ್ ಅವರು ರನೌಟ್ ಆದರು. ನಂತರ ಬಂದ ಸಿಮ್ರಾನ್ ಸಿಂಗ್ ಅವರು ಸ್ಫೋಟಕ ಆಟಕ್ಕೆ ಮುಂದಾಗಿ 11 ರನ್ ಗಳಿಸಿ ಕೆ ಖಲೀಲ್ ಅಹ್ಮದ್ ಬೌಲಿಂಗ್‍ನಲ್ಲಿ ಪ್ರಿಯಮ್ ಗರ್ಗ್ ಅವರಿಗೆ ಕ್ಯಾಚ್ ಕೊಟ್ಟು ಹೊರನಡೆದರು. ಪರಿಣಾಮ ಪಂಜಾಬ್ ತಂಡ ಆರು ಓವರ್ ಮುಕ್ತಾಯಕ್ಕೆ ಎರಡು ವಿಕೆಟ್ ಕಳೆದುಕೊಂಡು 45 ರನ್ ಪೇರಿಸಿತು.

    ಪೂರನ್ ಅಬ್ಬರದ ಅರ್ಧಶತಕ
    ನಂತರ ತಾಳ್ಮೆಯ ಆಟಕ್ಕೆ ಮುಂದಾಗಿದ್ದ ನಾಯಕ ಕೆಎಲ್ ರಾಹುಲ್ ಅವರನ್ನು ಅಭಿಷೇಕ್ ಶರ್ಮಾ ಅವರು ಔಟ್ ಮಾಡಿದರು. 16 ಬಾಲಿಗೆ 11 ರನ್ ಗಳಿಸಿದ್ದ ರಾಹುಲ್ ಕೇನ್ ವಿಲಿಯಮ್ಸನ್ ಅವರಿಗೆ ಕ್ಯಾಚ್ ಕೊಟ್ಟ ಹೊರನಡೆದರು. ನಂತರ ಅಬ್ಬರಿಸಿದ ನಿಕೋಲಸ್ ಪೂರನ್ ಅವರು ಕೇವಲ 17 ಬಾಲಿಗೆ ಅರ್ಧಶತಕ ಸಿಡಿಸಿ ಐಪಿಎಲ್‍ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಐದನೇ ಆಟಗಾರ ಎಂಬ ಖ್ಯಾತಿಗೆ ಒಳಗಾದರು. 2018ರಲ್ಲಿ 14 ಬಾಲಿಗೆ 50 ರನ್ ಹೊಡೆದ ಕೆಎಲ್ ರಾಹುಲ್ ಅವರು ಮೊದಲ ಸ್ಥಾನದಲ್ಲಿ ಇದ್ದಾರೆ.

    ಇದಾದ ಬಳಿಕ 11 ಬಾಲಿಗೆ 7 ರನ್ ಸಿಡಿಸಿ ಆಡುತ್ತಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಪ್ರಿಯಮ್ ಗಾರ್ಗ್ ಅವರ ಡೈರೆಕ್ಟ್ ಹಿಟ್‍ಗೆ ಬಲಿಯಾಗಿ ಪೆವಿಲಿಯನ್ ಸೇರಿದರು. ಈ ಮೂಲಕ ಐಪಿಎಲ್‍ನಲ್ಲಿ ತಮ್ಮ ವಿಫಲ ಬ್ಯಾಟಿಂಗ್ ಅನ್ನು ಮುಂದುವರೆಸಿದರು. ನಂತರ ಬಂದ ಮಂದೀಪ್ ಸಿಂಗ್ ಅವರು ರಶೀದ್ ಖಾನ್ ಅವರ ಗೂಗ್ಲಿಯನ್ನು ಗುರುತಿಸಲಾಗದೆ ಆರು ರನ್ ಗಳಿಸಿ ಬೌಲ್ಡ್ ಆಗಿ ಹೊರನಡೆದರು. ನಂತರ ಮುಜೀಬ್ ಉರ್ ರಹಮಾನ್ ಕೂಡ ಔಟ್ ಆದರು.

    ನಂತರ 37 ಬಾಲಿನಲ್ಲಿ ಏಳು ಸಿಕ್ಸರ್ ಮತ್ತು ಐದು ಬೌಂಡರಿಯೊಂದಗೆ 77 ರನ್ ಸಿಡಿಸಿ ಆಡುತ್ತಿದ್ದ ನಿಕೋಲಸ್ ಪೂರನ್ ಪೂರನ್ ಅವರು, ರಶೀದ್ ಖಾನ್ ಅವರ ಬೌಲಿಂಗ್ ಜಾದುಗೆ ಕ್ಯಾಚ್ ನೀಡಿ ಔಟ್ ಆದರು. ನಂತರದ ಬಾಲಿಗೆ ಕ್ರೀಸಿಗೆ ಬಂದ ಮೊಹಮ್ಮದ್ ಶಮಿ ಅವರು ಕೂಡ ಶೂನ್ಯಕ್ಕೆ ಔಟ್ ಆಗಿ ಹೊರನಡೆದರು. ನಂತರ ಕಣಕ್ಕಿಳಿದ ಪಂಜಾಬ್‍ನ ಎಲ್ಲ ಬ್ಯಾಟ್ಸ್ ಮ್ಯಾನ್‍ಗಳು ಪೆವಿಲಿಯನ್ ಪರೇಡ್ ನಡೆಸಿದರು.

  • ಕೊನೆಗೆ 41 ರನ್‍ಗಳಿಗೆ 6 ವಿಕೆಟ್ ಪತನ – ಪಂಜಾಬ್‍ಗೆ 202 ರನ್‍ಗಳ ಟಾರ್ಗೆಟ್

    ಕೊನೆಗೆ 41 ರನ್‍ಗಳಿಗೆ 6 ವಿಕೆಟ್ ಪತನ – ಪಂಜಾಬ್‍ಗೆ 202 ರನ್‍ಗಳ ಟಾರ್ಗೆಟ್

    – ಬಿಷ್ಣೋಯ್ ಸ್ಪಿನ್ ಮೋಡಿ ವಾರ್ನರ್ ಪಡೆ ಕುಸಿತ
    – 5ನೇ ಬಾರಿಗೆ ಶತಕದ ಜೊತೆಯಾಟವಾಡಿದ ಆರಂಭಿಕ ಆಟಗಾರರು
    – ವಾರ್ನರ್, ಬೈರ್‌ಸ್ಟೋವ್ ಸ್ಫೋಟಕ ಆಟ

    ದುಬೈ: ಇಂದು ದುಬೈ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್-2020ಯ 22ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ತಂಡಕ್ಕೆ 202 ರನ್‍ಗಳ ದೊಡ್ಡ ಮೊತ್ತವನ್ನು ಟಾರ್ಗೆಟ್ ನೀಡಿದೆ..

    ರೈಸರ್ಸ್‍ಗೆ ಸೂಪರ್ ಓಪನಿಂಗ್
    ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್ ಅವರು ಉತ್ತಮ ಆರಂಭ ನೀಡಿದರು. ಐಪಿಎಲ್‍ನಲ್ಲಿ 5ನೇ ಬಾರಿಗೆ ಭರ್ಜರಿ ಶತಕದ ಜೊತೆಯಾಟವಾಡಿದ ಈ ಜೋಡಿ ಮೊದಲ ವಿಕೆಟ್‍ಗೆ 160 ರನ್‍ಗಳ ಕಾಣಿಕೆ ನೀಡಿತು. ವಾರ್ನರ್ 52 ಮತ್ತು ಬೈರ್‍ಸ್ಟೋವ್ 97 ರನ್ ಸಿಡಿಸಿ ಮಿಂಚಿದರು. ಆದರೆ 16ನೇ ಓವರಿನಲ್ಲಿ ಇಬ್ಬರು ಔಟ್ ಆದ ನಂತರ ಹೈದರಾಬಾದ್ ದಿಢೀರ್ ಕುಸಿತಕ್ಕೆ ಒಳಗಾಗಿತು. ನಂತರ ಬಂದ ಬ್ಯಾಟ್ಸ್‍ಮ್ಯಾನ್‍ಗಳು ಪೆವಿಲಯನ್ ಪೆರೇಡ್ ನಡೆಸಿದರು.

    ಬಿಷ್ಣೋಯ್ ಬೌಲಿಂಗ್ ಮೋಡಿ
    ವಾರ್ನರ್ ಮತ್ತು ಬೈರ್‌ಸ್ಟೋವ್ ಅವರ ಸ್ಫೋಟಕ ಬ್ಯಾಟಿಂಗ್‍ಗೆ ಪಂಜಾಬ್ ಬೌಲರ್ ಗಳು ತತ್ತರಿಸಿ ಹೋಗಿದ್ದರು. ಆದರೆ 16ನೇ ಓವರ್ ಬೌಲ್ ಮಾಡಿದ ರವಿ ಬಿಷ್ಣೋಯ್ ಅವರು ಒಂದೇ ಓವರಿನಲ್ಲಿ ಇಬ್ಬರು ಆರಂಭಿಕ ಜೋಡಿಯನ್ನು ಔಟ್ ಮಾಡಿ ಅದೇ ಓವರಿನಲ್ಲಿ 1 ರನ್ ನೀಡಿ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟರು. ಈ ಮೂಲಕ 230ರನ್ ಟಾರ್ಗೆಟ್ ನೀಡುವ ಹಂತದಲ್ಲಿದ್ದ ರೈಸರ್ಸ್ ತಂಡವನ್ನು ಪಂಜಾಬ್ ಕೊಂಚ ಕಟ್ಟಿ ಹಾಕಿತು. ಮೂರು ಓವರ್ ಬೌಲ್ ಮಾಡಿದ ಬಿಷ್ಣೋಯ್ ಮೂರು ವಿಕೆಟ್ ಪಡೆದು 29 ರನ್ ಬಿಟ್ಟುಕೊಟ್ಟರು. ಇವರಿಗೆ ಸಾಥ್ ನೀಡಿದ ಅರ್ಷ್‍ದೀಪ್ ಸಿಂಗ್ ಎರಡು ವಿಕೆಟ್ ಪಡೆದು ಮಿಂಚಿದರು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ಡೇವಿಡ್ ವಾರ್ನರ್ ಅವರು, ಆರಂಭಿಕರಾಗಿ ಕಣಕ್ಕಿಳಿದು ಜಾನಿ ಬೈರ್‌ಸ್ಟೋವ್ ಅವರ ಜೊತೆಗೆ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಬೌಂಡರಿ ಸಿಕ್ಸರ್ ಸಿಡಿಸಿದ ಈ ಆರಂಭಿಕ ಜೋಡಿ 30 ಬಾಲಿಗೆ 50 ರನ್‍ಗಳ ಅರ್ಧಶತಕದ ಜೊತೆಯಾಟವಾಡಿತು. ಪರಿಣಾಮ ಪವರ್ ಪ್ಲೇ ಮುಕ್ತಾಯದ ವೇಳೆಗೆ ವಿಕೆಟ್ ಕಳೆದುಕೊಳ್ಳದೇ 57 ರನ್ ಸಿಡಿಸಿ ಹೈದರಾಬಾದ್ ತಂಡ ದೊಡ್ಡ ಮೊತ್ತ ಕಲೆ ಹಾಕುವ ಮನ್ಸೂಚನೆ ನೀಡಿತು.

    ಇದೇ ವೇಳೆ ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ ಜಾನಿ ಬೈರ್‍ಸ್ಟೋವ್ ಅವರು 28 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಮೊದಲಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಜಾನಿ ಎರಡು ಸಿಕ್ಸರ್ ಮತ್ತು ಐದು ಬೌಂಡರಿ ಸಮೇತ ಭರ್ಜರಿ ಅರ್ಧಶತಕ ಹೊಡೆದರು. ಜೊತೆಗೆ 10 ಓವರ್ ಮುಕ್ತಾಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಬ್ಯಾಟ್ ಬೀಸಿದ ಬೈರ್‌ಸ್ಟೋವ್ ಹಾಗೂ ವಾರ್ನರ್ ಶತಕದ ಜೊತೆಯಾಟವಾಡಿದರು. 60 ಬಾಲಿಗೆ 100 ರನ್ ಸಿಡಿಸಿದರು.

    10 ಓವರಿನ ನಂತರ ಸ್ಫೋಟಕ ಆಟವಾಡಿದ ಬೈರ್‌ಸ್ಟೋವ್ ಮತ್ತು ವಾರ್ನರ್ 13 ಓವರ್ ಮುಕ್ತಾಯಕ್ಕೆ 138 ರನ್ ಸಿಡಿಸಿತು. ನಂತರ ನಾಯಕ ಡೇವಿಡ್ ವಾರ್ನರ್ ಅವರು ಕೂಡ 37 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಜೊತೆಗೆ ಆರಂಭಿಕ ಜೋಡಿ 83 ಬಾಲಿಗೆ 150 ರನ್‍ಗಳ ಜೊತೆಯಾಟವಾಡಿ ಮುನ್ನುಗಿತು. ಈ ವೇಳೆ 15ನೇ ಓವರಿನ ಮೊದಲನೇ ಬಾಲಿನಲ್ಲಿ ತಂಡ 160 ರನ್ ಗಳಿಸಿದ್ದಾಗ ನಾಯಕ ಡೇವಿಡ್ ವಾರ್ನರ್ ಅವರು 52 ರನ್ ಸಿಡಿಸಿ ಔಟ್ ಆದರು. ನಂತರ ಅದೇ ಓವರಿನಲ್ಲಿ 55 ಬಾಲಿಗೆ 97 ರನ್ ಸಿಡಿಸಿ ಆಡುತ್ತಿದ್ದ ಬೈರ್‌ಸ್ಟೋವ್ ರವಿ ಬಿಷ್ಣೋಯ್ ಅವರು ಬೌಲಿಂಗ್ ಮೋಡಿಗೆ ಔಟ್ ಆಗಿ ಪೆವಿಲಿಯನ್ ಸೇರಿದರು.

    ನಂತರ ಕಣಕ್ಕಿಳಿದ ಕನ್ನಡಿಗ ಮನೀಶ್ ಪಾಂಡೆಯವರು ಕೇವಲ ಒಂದು ರನ್ ಸಿಡಿಸಿ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಸ್ ಆದರು. ನಂತರ ಮೂರು ಓವರಿನಲ್ಲಿ ಕಿಂಗ್ಸ್ ಇಲೆವೆನ್ ಬೌಲರ್ ಗಳು ಬಿಗಿವಿನ ಬೌಲಿಂಗ್ ದಾಳಿ ಮಾಡಿದರು. 16 ಮತ್ತು 17 ಓವರಿನಲ್ಲಿ ಕೇವಲ 5 ರನ್ ನೀಡಿದರು. ನಂತರ 18ನೇ ಓವರಿನಲ್ಲಿ ಅಬ್ದುಲ್ ಸಮದ್ ಅವರು ಇಲ್ಲದ ಹೊಡೆತಕ್ಕೆ ಕೈ ಹಾಕಿ ರವಿ ಬಿಷ್ಣೋಯ್ ಅವರಿಗೆ ಔಟ್ ಆದರು. ನಂತರ ಪ್ರಿಯಮ್ ಗರ್ಗ್ ಅವರು ಶೂನ್ಯಕ್ಕೆ ಔಟ್ ಆದರು.

  • ಸಿಕ್ಸ್, ಫೋರ್‌ಗಳ ಸುರಿಮಳೆ- ಡುಪ್ಲೆಸಿಸ್, ವ್ಯಾಟ್ಸನ್ ಅದ್ಭುತ ಬ್ಯಾಟಿಂಗ್- ಗೆದ್ದು ಬೀಗಿದ ಚೆನ್ನೈ

    ಸಿಕ್ಸ್, ಫೋರ್‌ಗಳ ಸುರಿಮಳೆ- ಡುಪ್ಲೆಸಿಸ್, ವ್ಯಾಟ್ಸನ್ ಅದ್ಭುತ ಬ್ಯಾಟಿಂಗ್- ಗೆದ್ದು ಬೀಗಿದ ಚೆನ್ನೈ

    – ಡುಪ್ಲೆಸಿಸ್ 53 ಬಾಲ್‍ಗೆ 87 ರನ್
    – ವ್ಯಾಟ್ಸನ್ 53 ಬಾಲ್‍ಗೆ 83 ರನ್

    ದುಬೈ: ಡುಪ್ಲೆಸಿಸ್ ಹಾಗೂ ವ್ಯಾಟ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ, ಸಿಕ್ಸ್, ಬೌಂಡರಿಗಳ ಸುರಿಮಳೆಯೊಂದಿಗೆ ಜೊತೆಯಾಟವಾಡಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಂದೂ ವಿಕೆಟ್ ಕಳೆದುಕೊಳ್ಳದೆ 10 ವಿಕೆಟ್‍ಗಳಿಂದ ಗೆದ್ದು ಬೀಗಿತು.

    ದುಬೈನಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ್ದ 179 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಪಂಜಾಬ್ ತಂಡದ ಬೌಲರ್ ಗಳನ್ನು ಧೂಳೀಪಟ ಮಾಡಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದಿದ್ದ ಫಾಫ್ ಡು’ಪ್ಲೆಸಿಸ್ ಹಾಗೂ ಶೇನ್ ವ್ಯಾಟ್ಸನ್ ಭರ್ಜರಿ ಜೊತೆಯಾಟವಾಡುವ ಮೂಲಕ ಬೌಲರ್ ಗಳ ಬೆವರಿಳಿಸಿದರು.

    ಫಾಫ್ ಡು’ಪ್ಲೆಸಿಸ್, ಶೇನ್ ವ್ಯಾಟ್ಸನ್ ತಾ ಮುಂದು ನಾ ಮುಂದು ಎಂದು ಆಟವಾಡಿದರು. ಈ ಮೂಲಕ ಇಬ್ಬರ ಜೋಡಿ ಪಂಜಾಬ್ ತಂಡದ ಪೂರ್ತಿ ಮೊತ್ತವನ್ನು ಬಾರಿಸಿತು. ಡುಪ್ಲೆಸಿಸ್ 53 ಬಾಲ್‍ಗೆ 87 ರನ್(ಸಿಕ್ಸರ್, 11 ಬೌಂಡರಿ) ಚೆಚ್ಚಿದರು. ವ್ಯಾಟ್ಸನ್ ತಾವೂ 53 ಬಾಲ್ ಎದುರಿಸಿ 83 ರನ್(3 ಸಿಕ್ಸ್, 11 ಬೌಂಡರಿ) ಚೆಚ್ಚುವ ಮೂಲಕ ತಂಡಕ್ಕೆ ಜಯದ ಉಡುಗೊರೆ ನೀಡಿದರು.

    ಡುಪ್ಲೆಸಿಸ್ ಒಂದೇ ಓವರ್ ನಲ್ಲಿ ನಾಲ್ಕು ಬೌಂಡರಿ
    ಪವರ್ ಪ್ಲೇಯ ಕೊನೇಯ ಓವರ್ ನಲ್ಲೇ ಡುಪ್ಲೆಸಿಸ್ ಬರೋಬ್ಬರಿ ನಾಲ್ಕು ಬೌಂಡರಿ ಚೆಚ್ಚುವ ಮೂಲಕ ಒಂದೇ ಓವರ್ ನಲ್ಲಿ 18 ರನ್ ಕಲೆ ಹಾಕಿದರು. ವ್ಯಾಟ್ಸನ್ ಮೊದಲ ಬಾಲ್‍ನಲ್ಲಿ ಸಿಂಗಲ್ ತೆಗೆದುಕೊಟ್ಟ ಬಳಿಕ ಡುಪ್ಲೆಸಿಸ್ ಮೇಲಿಂದ ಮೇಲೆ ಬೌಂಡರಿ ಬಾರಿಸಿದರು. ಇದೇ ಓವರ್ ನಲ್ಲಿ ಡುಪ್ಲೆಸಿಸ್ ಹೆಚ್ಚು ರನ್ ಗಳಿಸಿದರು.

    ಪವರ್ ಪ್ಲೇ ಮುಗಿಯುವಷ್ಟರಲ್ಲಿ ಇಬ್ಬರ ಜೋಡಿ 66 ರನ್ ಗಳಿಸುವ ಮೂಲಕ ಭರ್ಜರಿ ರನ್ ಕಲೆ ಹಾಕಿತು. ವಿಕೆಟ್ ಕಾಯ್ದುಕೊಂಡು ಅಬ್ಬರದ ಆಟವಾಡಿದ ಡು’ಪ್ಲೆಸಿಸ್ ಹಾಗೂ ವ್ಯಾಟ್ಸನ್, ಸಿಕ್ಸ್ ಹಾಗೂ ಬೌಂಡರಿಗಳ ಸುರಿಮಳೆಗೈದರು. ಈ ಮೂಲಕ ಪಂಜಾಬ್ ಬೌಲರ್ ಗಳ ಬೆವರಿಳಿಸಿದರು. ಬೌಲಿಂಗ್‍ನಲ್ಲಿಯೂ ಪಂಜಾಬ್ ತಂಡವನ್ನು ಕಟ್ಟಿಹಾಕಿದ್ದ ಚೆನ್ನೈ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸುಲಭವಾಗಿ ಜಯಗಳಿಸಿತು. ಪವರ್ ಪ್ಲೇ ಮುಗಿಯುವಷ್ಟರಲ್ಲಿ ಡು’ಪ್ಲೆಸಿಸ್ 22 ಬಾಲ್‍ಗೆ 37 ರನ್ ಹಾಗೂ ವ್ಯಾಟ್ಸನ್ 20 ಬಾಲ್‍ಗೆ 23 ರನ್ ಗಳಿಸಿದ್ದರು.

    ಹತ್ತನೇ ಓವರ್ ತಲುಪುವ ವೇಳೆಗೆ ಈ ಜೋಡಿ 101 ರನ್‍ಗಳನ್ನು ಕಲೆ ಹಾಕಿತ್ತು. ಇದೇ ವೇಳೆ ಓವರ್ ಮುಗಿಯುವಷ್ಟರಲ್ಲಿ ಶೇನ್ ವ್ಯಾಟ್ಸನ್ 31 ಬಾಲ್‍ಗೆ ಮೊದಲು ಅರ್ಧ ಶತಕ ಬಾರಿಸಿದರು. ಬಳಿಕ ಡುಪ್ಲೆಸಿಸ್ ಸಹ 33 ಬಾಲ್‍ಗೆ ಅರ್ಧ ಶತಕ ಸಿಡಿಸಿದರು. ನಂತರ ಆರಾಮದಾಯಕ ಆಟವಾಡಿದ ಜೋಡಿ 13 ಓವರ್ ಮುಗಿಯುವಷ್ಟರಲ್ಲಿ 123 ರನ್ ಗಳಿಸಿತು.

    15ನೇ ಓವರ್ ಮುಗಿಯುವ ಹೊತ್ತಿಗೆ ಇಬ್ಬರ ಭರ್ಜರಿ ಜೊತೆಯಾಟದಿಂದಾಗಿ ಬರೋಬ್ಬರಿ 150 ರನ್ ಸಿಡಿಸಿದ್ದರು. ವ್ಯಾಟ್ಸನ್ 49 ಬಾಲ್‍ಗೆ 76 ರನ್(3 ಸಿಕ್ಸ್, 10 ಬೌಂಡರಿ) ಚೆಚ್ಚಿದರೆ, ಡುಪ್ಲೆಸಿಸ್ 43 ಬಾಲ್‍ಗೆ 63 ರನ್(8 ಬೌಂಡರಿ)ಬಾರಿಸಿದರು. ಅದಾಗಲೇ ಚೆನ್ನೈ ತಂಡದಲ್ಲಿ ಗೆಲುವಿನ ನಗೆ ಮೂಡಿತ್ತು.

  • ಕೆ.ಎಲ್.ರಾಹುಲ್ ಅರ್ಧ ಶತಕ- ಚೆನ್ನೈಗೆ 179 ರನ್‍ಗಳ ಟಾರ್ಗೆಟ್

    ಕೆ.ಎಲ್.ರಾಹುಲ್ ಅರ್ಧ ಶತಕ- ಚೆನ್ನೈಗೆ 179 ರನ್‍ಗಳ ಟಾರ್ಗೆಟ್

    ದುಬೈ: ಐಪಿಎಲ್ 13ನೇ ಆವೃತ್ತಿಯ 18ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ತಂಡ ಎದುರಾಳಿಗೆ 179 ರನ್‍ಗಳ ಟಾರ್ಗೆಟ್ ನೀಡಿದೆ.

    ಪಂಜಾಬ್ ತಂಡ ಆರಂಭದಿಂದಲೂ ವಿಕೆಟ್ ಕಾಯ್ದುಕೊಂಡು ಉತ್ತಮ ಲಯದಲ್ಲಿ ತಾಳ್ಮೆಯ ಆಟವನ್ನ ಆಡಿತ್ತು. ಆದರೆ ಕೊನೆಯ ಹಂತದಲ್ಲಿ ಒಂದೊಂದೇ ವಿಕೆಟ್ ಕಳೆದುಕೊಂಡಿದ್ದರಿಂದ 179 ಗುರಿಯನ್ನ ಚೆನ್ನೈಗೆ ನೀಡಿದೆ. ಶಾರ್ದುಲ್ ಠಾಕೂರ್, ರವೀಂದ್ರ ಜಡೇಜಾ ಹಾಗೂ ಪಿಯೂಶ್ ಚಾವ್ಲಾ ಬೌಲಿಂಗ್ ಮೂಲಕ ಪಂಜಾಬ್ ವೇಗವನ್ನು ತಡೆದರು. ಠಾಕೂರ್ ಎರಡು ವಿಕೆಟ್ ಪಡೆದರೆ, ಜಡೇಜಾ ಹಾಗೂ ಚಾವ್ಲಾ ತಲಾ ಒಂದು ವಿಕೆಟ್ ಪಡೆದರು. ಹೀಗಾಗಿ 178 ರನ್ ಗಳಿಸಲು ಶಕ್ತವಾಯಿತು.

    ಕೆ.ಎಲ್.ರಾಹುಲ್ ಮಿಂಚಿನಾಟ
    ಆರಂಭದಿಂದಲೂ ವಿಕೆಟ್ ಕಾಯ್ದುಕೊಂಡು ಆಟವಾಡಿದ್ದ ಕೆ.ಎಲ್.ರಾಹುಲ್ ಇದರ ಮಧ್ಯದಲ್ಲೇ ಸಿಕ್ಸ್ ಹಾಗೂ ಬೌಂಡರಿಗಳನ್ನು ಚಚ್ಚಿದರು. 52 ಬಾಲ್‍ಗೆ 63(1 ಸಿಕ್ಸ್, 7 ಬೌಂಡರಿ) ರನ್‍ಗಳಿಸುವ ಮೂಲಕ ತಂಡದಲ್ಲಿ ಅಧಿಕ ರನ್ ಗಳಿಸಿದರು. ಪೂರನ್ ಔಟಾಗುತ್ತಿದ್ದಂತೆ 17ನೇ ಓವರ್‍ನ 2ನೇ ಬಾಲ್‍ಗೆ ವಿಕೆಟ್ ಒಪ್ಪಿಸಿ ಕೆ.ಎಲ್.ರಾಹುಲ್ ಪೆವಿಲಿಯನ್ ಸೇರಿದರು.

    ರಾಹುಲ್, ಮಯಾಂಕ್ ಅಬ್ಬರದ ಆಟ:
    ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ನಾಯಕ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ಉತ್ತಮ ಜೊತೆಯಾಟವಾಡಿದರು. ನಂತರ 8ನೇ ಓವರ್ ನಲ್ಲಿ ಅಗರ್ವಾಲ್ ಕ್ಯಾಚ್ ನೀಡಿದರು. ಉತ್ತಮವಾಗಿಯೇ ಆಟ ಆರಂಭಿಸಿದ್ದ ಈ ಜೋಡಿ 49 ಬಾಲ್‍ಗೆ 61 ರನ್ ಸೇರಿಸಿತ್ತು. ಈ ಮೂಲಕ 19 ಬಾಲ್‍ಗೆ 26 ರನ್(3 ಬೌಂಡರಿ) ಗಳಿಸಿ ಮಾಯಾಂಕ್ ಅಗರ್ವಾಲ್ ಔಟಾದರು. ನಂತರ ಆಗಮಿಸಿದ ಮಂದೀಪ್ ಸಿಂಗ್ ಸಹ 11.6ನೇ ಓವರ್ ವೇಳೆಗೆ 16 ಬಾಲ್‍ಗೆ 26(3 ಬೌಂಡರಿ) ಸಿಡಿಸಿ ವಿಕೆಟ್ ಒಪ್ಪಿಸಿದರು.

    ಪವರ್ ಪ್ಲೇ ವೇಳೆ ಯಾವುದೇ ವಿಕೆಟ್ ಕಳೆದುಕೊಳ್ಳದೇ ಜಾಗೃತೆಯಿಂದ ಆಟವಾಡಿದ್ದ ಪಂಜಾಬ್ ತಂಡ, 55 ರನ್‍ಗಳ ಭರ್ಜರಿ ಮೊತ್ತವನ್ನೇ ಕಲೆ ಹಾಕಿತ್ತು. ಆರು ಓವರ್ ಬಳಿಕ ಮಾಯಾಂಕ್ ಅಗರ್ವಾಲ್ ಸ್ಫೋಟಕ ಆಟವಾಡಲು ಮುಂದಾದರು. ಈ ವೇಳೆ 8ನೇ ಓವರ್ ನ ಮೊದಲ ಬಾಲ್‍ಗೆ ಸ್ಯಾಮ್ ಕರ್ರನ್‍ಗೆ ಕ್ಯಾಚ್ ನೀಡಿದರು. ನಂತರ ಕೆ.ಎಲ್.ರಾಹುಲ್ ಹಾಗೂ ಮಂದೀಪ್ ಸಿಂಗ್ ಬಿರುಸಿನ ಆಟವಾಡಿದರು. ಈ ವೇಳೆ 11ನೇ ಓವರ್ ನ ಕೊನೆಯ ಬಾಲ್‍ಗೆ ಕ್ಯಾಚ್ ನೀಡಿದರು.

    ನಿಕೋಲಸ್ ಪೂರನ್ ಅಬ್ಬರದ ಆಟವಾಡಿದರೂ ವಿಕೆಟ್ ಕಾಯ್ದುಕೊಂಡಿದ್ದರು. ಆದರೆ ಜಡೇಜಾ ಹಾಕಿದ 17ನೇ ಓವರ್ ಮೊದಲ ಬಾಲ್‍ಗೆ ವಿಕೆಟ್ ಒಪ್ಪಿಸಿದರು. ಪೂರನ್ ವಿಕೆಟ್ ಒಪ್ಪಿಸುತ್ತಿದ್ದಂತೆ ನಂತರದ ಬಾಲ್‍ಗೆ ಕೆ.ಎಲ್.ರಾಹುಲ್ ಸಹ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಇಬ್ಬರ ಜೊತೆಯಾಟದಲ್ಲಿ 31 ಬಾಲ್‍ಗೆ 58 ರನ್ ಸಿಡಿಸಿದ್ದರು.

    17.3ನೇ ಓವರ್ ಗೆ ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ಸರ್ಫರಾಜ್ ಖಾನ್ ಆಗಮಿಸಿ ಉತ್ತಮ ಆಟವಾಡಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಮ್ಯಾಕ್ಸ್ ವೆಲ್ 7 ಬಾಲ್‍ಗೆ 11ರನ್(1 ಬೌಂಡರಿ) ಹಾಗೂ ಸರ್ಫರಾಜ್ ಖಾನ್ 9 ಬಾಲ್‍ಗೆ 14 ರನ್(2 ಬೌಂಡರಿ) ಸಿಡಿಸಿದರು.

  • ಮುಂಬೈ ತಂಡಕ್ಕೆ 1 ರನ್‌ ನೀಡಿಲ್ಲ ಯಾಕೆ – ಬಿಸಿ ಬಿಸಿ ಚರ್ಚೆ

    ಮುಂಬೈ ತಂಡಕ್ಕೆ 1 ರನ್‌ ನೀಡಿಲ್ಲ ಯಾಕೆ – ಬಿಸಿ ಬಿಸಿ ಚರ್ಚೆ

    – ವಿಶ್ವಕಪ್‌ ಫೈನಲ್‌ನಲ್ಲಿ ಸಮಸ್ಯೆಯಾದ್ರೆ ತಂಡಕ್ಕೆ ನಷ್ಟ
    – ಕೂಡಲೇ ಐಸಿಸಿ ನಿಯಮವನ್ನು ಬದಲಾಯಿಸಬೇಕು

    ಅಬುದಾಬಿ: ಗುರುವಾರ ನಡೆದ ಪಂದ್ಯದಲ್ಲಿ ಕಿಂಗ್ಸ್‌ ಇಲೆವನ್‌ ಪಂಜಾಬ್‌ ವಿರುದ್ಧ ಮುಂಬೈ ತಂಡ 48 ರನ್‌ಗಳಿಂದ ಜಯಗಳಿಸಿದರೂ ಒಂದು ರನ್‌ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.

    17ನೇ ಓವರಿನ ಕೊನೆಯ ಎಸೆತವನ್ನು ಪೊಲಾರ್ಡ್‌ ಎದುಸಿದ್ದರು. ಶಮಿ ಎಸೆದ ಬಾಲ್‌ ಎಡಗಡೆಗೆ ಹೋಯಿತು. ಕೂಡಲೇ ಪಾಂಡ್ಯ ಮತ್ತು ಪೊಲಾರ್ಡ್‌ ಒಂದು ರನ್‌ ಓಡತೊಡಗಿದರು. ಶಮಿ ಎಲ್‌ಬಿ ಔಟ್‌ಗೆ ಮನವಿ ಮಾಡಿದ್ದ ಕಾರಣ ಅಂಪೈರ್‌ ಔಟ್‌ ಎಂದು ತೀರ್ಪು ನೀಡಿದರು.

    ಪೊಲಾರ್ಡ್‌ ಕ್ರೀಸ್‌ ತಲುಪಿದ ಬಳಿಕ ತೀರ್ಪನ್ನು ಪುನರ್‌ ಪರಿಶೀಲನೆ ಮಾಡುವಂತೆ ಅಂಪೈರ್ ಮನವಿ ಮಾಡಿಕೊಂಡರು. ಅಲ್ಟ್ರಾ ಎಡ್ಜ್‌ ವೇಳೆ ಬಾಲ್‌ ಬ್ಯಾಟಿಗೆ ಬಡಿದು ಎಡಗಡೆಗೆ ಹೋಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಬಳಿಕ ಅಂಪೈರ್‌ ನಾಟೌಟ್‌ ತೀರ್ಪು ನೀಡಿದರು. ಇದನ್ನೂ ಓದಿ: ಸೂಪರ್ ಓವರ್‌ನಲ್ಲೂ ಟೈ ಆದ್ರೆ ಫಲಿತಾಂಶ ನಿರ್ಧಾರ ಹೇಗೆ?

    ಪ್ರಶ್ನೆ ಯಾಕೆ?
    ಅಂಪೈರ್‌ ನಾಟೌಟ್‌ ತೀರ್ಪು ನೀಡಿದ ಬೆನ್ನಲ್ಲೇ ಈಗ ಚರ್ಚೆ ಆರಂಭವಾಗಿದೆ. ಒಂದು ವೇಳೆ ಇಬ್ಬರು ಬ್ಯಾಟ್ಸ್‌ ಮನ್‌ಗಳು ಒಂದು ರನ್‌ ಓಡದೇ ಇದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಇಲ್ಲಿ ಒಂದು ರನ್‌ ಓಡಿದ್ದಾರೆ. ಅಷ್ಟೇ ಅಲ್ಲದೇ ಬ್ಯಾಟ್‌ ತುದಿಗೆ ಬಾಲ್‌ ಬಡಿದಿರುವುದು ರಿಪ್ಲೇಯಲ್ಲಿ ಸ್ಪಷ್ಟವಾಗಿ ಕಾಣಿಸಿದೆ. ಹೀಗಾಗಿ ಒಂದು ರನ್‌ ಮುಂಬೈಗೆ ಮತ್ತು ಪೊಲಾರ್ಡ್‌ಗೆ ನೀಡಬೇಕು. ನ್ಯಾಯಬದ್ಧವಾಗಿ 1 ರನ್‌ ಓಡಿದ್ದರೂ 1 ರನ್‌ ನೀಡಿಲ್ಲ ಯಾಕೆ ಎಂಬ ಪ್ರಶ್ನೆಯನ್ನು ಇಟ್ಟುಕೊಂಡು ಕ್ರಿಕೆಟ್‌ ಅಭಿಮಾನಿಗಳು ಬಿಸಿಸಿಐ ಮತ್ತು ಐಸಿಸಿಯನ್ನು ಪ್ರಶ್ನಿಸುತ್ತಿದ್ದಾರೆ.

     

    ಮಾಜಿ ಕ್ರಿಕೆಟಿಗ, ಕ್ರಿಕೆಟ್‌ ವೀಕ್ಷಕ ವಿವರಣೆಗಾರ ಆಕಾಶ್‌ ಚೋಪ್ರಾ ಅವರು, ಪೊಲಾರ್ಡ್‌ ಮತ್ತು ಮುಂಬೈ ಇಂಡಿಯನ್ಸ್‌ ತಂಡಕ್ಕೆ 1 ರನ್‌ ಸಿಗಲಿಲ್ಲ. ಎಲ್‌ಬಿಡಬ್ಲ್ಯೂ ನೀಡಿದರು. ಮರುಪರಿಶೀಲನೆಯ ವೇಳೆ ಇನ್‌ಸೈಡ್‌ ಎಡ್ಜ್‌ ಆಗಿರುವುದು ದೃಢವಾಯಿತು. ಆದರೆ ಅವರು ಸುಲಭವಾಗಿ ಓಡಿದ ರನ್‌ ಕೌಂಟ್‌ ಆಗಲಿಲ್ಲ. ಪ್ರೀತಿಯ ಐಸಿಸಿ ಮುಂದೆ ಯಾವುದಾದರೂ ವಿಶ್ವಕಪ್‌ ವೇಳೆ ಈ ನಿಯಮದಿಂದ ಒಂದು ತಂಡಕ್ಕೆ ಸಮಸ್ಯೆಯಾಗಬಹುದು. ಈ ವಿಚಾರದ ಬಗ್ಗೆ ಮತ್ತೊಮ್ಮೆ ಆಲೋಚನೆ ಮಾಡಬೇಕಿದೆ ಎಂದು ಬರೆದುಕೊಂಡಿದ್ದಾರೆ.

    ಆಕಾಶ್‌ ಚೋಪ್ರಾ ಅವರ ಈ ವಿಚಾರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ವಿಶ್ವಕಪ್‌ ಫೈನಲ್‌ ವೇಳೆ ಒಂದು ತಂಡಕ್ಕೆ ಕೊನೆಯ ಎಸೆತದಲ್ಲಿ 2 ರನ್‌ ಬೇಕಿದ್ದಾಗ ಒಂದು ವೇಳೆ ಈ ರೀತಿಯಾದರೆ ಏನು ಕಥೆ? ಅಂಪೈರ್‌ ಔಟ್‌ ಎಂದು ಘೋಷಿಸಿ ನಂತರ ನಾಟೌಟ್‌ ಎಂದರೆ ಆ ತಂಡ ಸೋಲು ಕಾಣುತ್ತದೆ. 2019ರ ವಿಶ್ವಕಪ್ ಫೈನಲ್‌ ನಿರ್ಧಾರದಂತೆ ಈ ನಿಯಮ ಸಹ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬ್ಯಾಟಿಂಗ್‌ ತಂಡ ಔಟ್‌ ನಿರ್ಧಾರವನ್ನು ಪುನರ್‌ ಪರಿಶೀಲನೆ ಮಾಡುವಂತೆ ಕೇಳಿದ ಬಳಿಕ ಅಂಪೈರ್‌ ನಾಟೌಟ್‌ ತೀರ್ಪು ನೀಡಿದರೂ ಈ ಎಸೆತದಿಂದ ಪಡೆದ ರನ್‌ಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಅಂಪೈರ್‌ ಎಲ್‌ಬಿ ಔಟ್‌ ತೀರ್ಪು ನೀಡುವ ಸಮಯದಲ್ಲ ಇಬ್ಬರು ಬ್ಯಾಟ್ಸ್‌ಮನ್‌ಗಳು ಓಡುತ್ತಿರುತ್ತಾರೆ.  ಈ ಕಾರಣಕ್ಕೆ ಈ ರನ್‌ ಸೇರ್ಪಡೆಯಾಗುವುದಿಲ್ಲ.

    https://twitter.com/ProudBhupesh910/status/1311693961736540160

    ಪಂಜಾಬ್‌ ವಿರುದ್ಧ 20 ಎಸೆತಗಳಲ್ಲಿ 47 ರನ್‌(3 ಬೌಂಡರಿ, 4 ಸಿಕ್ಸರ್)‌ ಸಿಡಿಸಿದ ಪೊಲಾರ್ಡ್‌ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.

    ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಏನಾಗಿತ್ತು?
    2019ರ ವಿಶ್ವಕಪ್ ನಲ್ಲಿ ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್ ನಡುವಿನ ಫೈನಲ್‌ ಪಂದ್ಯ ಸೂಪರ್ ಓವರ್‌ನಲ್ಲೂ ಟೈ ಆಗಿತ್ತು. ಆದರೆ ಅತಿ ಹೆಚ್ಚು ಬೌಂಡರಿ ಹೊಡೆದಿದ್ದ ಕಾರಣ ಇಂಗ್ಲೆಂಡ್ ವಿಶ್ವಕಪ್ ಜಯಿಸಿತ್ತು. ವಿಶ್ವಕಪ್‍ನಂತಹ ಮಹತ್ವದ ಪಂದ್ಯದಲ್ಲಿ ಬೌಂಡರಿ ಆಧಾರದ ಮೇಲೆ ಪಂದ್ಯ ನಿರ್ಧರಿಸುವುದಕ್ಕೆ ಘಟಾನುಘಟಿ ಆಟಗಾರರೇ ಭಾರೀ ವಿರೋಧ ವ್ಯಕ್ತಪಡಿಸಿದರು. ಟೀಕೆ ವ್ಯಕ್ತವಾದ ಬಳಿಕ ಐಸಿಸಿ 2020ರ ಫೆಬ್ರವರಿಯಲ್ಲಿ ಸೂಪರ್ ಓವರ್ ನಿಯಮಗಳನ್ನು ಬದಲಾವಣೆ ಮಾಡಿತು.

  • ರೋಹಿತ್ ಫಿಫ್ಟಿ, 5 ಸಾವಿರ ರನ್ ಸಾಧನೆ- ಕಿಂಗ್ಸ್‌ಗೆ 192 ರನ್ ಗುರಿ

    ರೋಹಿತ್ ಫಿಫ್ಟಿ, 5 ಸಾವಿರ ರನ್ ಸಾಧನೆ- ಕಿಂಗ್ಸ್‌ಗೆ 192 ರನ್ ಗುರಿ

    – ಹಾರ್ದಿಕ್, ಪೊಲ್ಲಾರ್ಡ್ ಸ್ಫೋಟಕ ಜೊತೆಯಾಟ

    ಅಬುಧಾಬಿ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾರ ಅರ್ಧ ಶತಕ ಹಾಗೂ ಹಾರ್ದಿಕ್ ಪಾಂಡ್ಯ, ಪೊಲ್ಲಾರ್ಡ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ 192 ರನ್ ಗುರಿ ನೀಡಿದೆ.

    ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕೆಎಲ್ ರಾಹುಲ್ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ವೇಗಿ ಶೆಲ್ಡನ್ ಕಾಟ್ರೆಲ್ ಮುಂಬೈ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಅವರನ್ನು ಖಾತೆ ತೆರೆಯುವ ಮುನ್ನವೇ ಕ್ಲೀನ್ ಬೌಲ್ಡ್ ಮಾಡಿದರು. ಮೊದಲ ವಿಕೆಟ್ ಬಹುಬೇಗ ಕಳೆದುಕೊಂಡರೂ ನಾಯಕ ರೋಹಿತ್ ಶರ್ಮಾ ಬೌಂಡರಿಯೊಂದಿಗೆ ಖಾತೆ ತೆರೆದರು. ಆದರೆ 7 ಎಸೆತಗಳಲ್ಲಿ 10 ರನ್ ಗಳಿಸಿದ್ದ ಸೂರ್ಯ ಕುಮಾರ್ ಯಾದವ್ ರನೌಟ್ ಆಗುವ ಮೂಲಕ ನಿರ್ಗಮಿಸಿದರು. 21 ರನ್ ಗಳಿಗೆ ಮುಂಬೈ ತನ್ನ 2ನೇ ವಿಕೆಟ್ ಕಳೆದುಕೊಂಡಿತ್ತು. ಪವರ್ ಪ್ಲೇ ಅಂತ್ಯ ವೇಳೆಗೆ 41 ರನ್ ಗಳಿಸಿದ್ದ ಮುಂಬೈ 2 ವಿಕೆಟ್ ಕಳೆದುಕೊಂಡಿತ್ತು.

    ರೋಹಿತ್ 5 ಸಾವಿರ ರನ್: ಈ ನಡುವೆಯೇ ಬ್ಯಾಟಿಂಗ್ ಮುಂದುವರಿಸಿದ್ದ ರೋಹಿತ್ ಶರ್ಮಾ ಇನ್ನಿಂಗ್ಸ್ ನಲ್ಲಿ 4 ರನ್ ಗಳಿಸಿದ್ದ ಸಂದರ್ಭದಲ್ಲಿ ಐಪಿಎಲ್ ನಲ್ಲಿ 5 ಸಾವಿರ ರನ್ ಪೂರೈಸಿದರು. ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ತಂಡದ ಸುರೇಶ್ ರೈನಾ ಮಾತ್ರ ಐಪಿಎಲ್‍ನಲ್ಲಿ 5 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದು, ರೋಹಿತ್ 3ನೇ ಆಟಗಾರರಾಗಿ ಪಟ್ಟಿಗೆ ಸೇರ್ಪಡೆಯಾದರು.

    ಬಹುಬೇಗ ಮುಂಬೈ ಮೊದಲ ಎರಡು ವಿಕೆಟ್‍ಗಳನ್ನು ಕಳೆದುಕೊಂಡರೂ ಇಶಾನ್ ಕಿಶನ್ ಹಾಗೂ ನಾಯಕ ರೋಹಿತ್‍ರ ತಾಳ್ಮೆಯ ಆಟದಿಂದ ಈ ಜೋಡಿ 3ನೇ ವಿಕೆಟ್‍ಗೆ ಅರ್ಧ ಶತಕದ ಜೊತೆಯಾಟ ನೀಡಿತು. 10 ಓವರ್ ಗಳ ಅಂತ್ಯಕ್ಕೆ ಮುಂಬೈ 2 ವಿಕೆಟ್ ನಷ್ಟಕ್ಕೆ 62 ರನ್ ಪೇರಿಸಿತ್ತು. 30 ರನ್ ಗಳಿಸಿದ್ದ ಸಂದರ್ಭದಲ್ಲಿ ನೀಶಾಮ್ ಬೌಲಿಂಗ್‍ನಲ್ಲಿ ಬಿಷ್ಣೋಯಿ ಕ್ಯಾಚ್ ಕೈಚೆಲ್ಲುವ ಮೂಲಕ ಜೀವದಾನ ನೀಡಿದರು. ಈ ನಡುವೆ ದಾಳಿಗಿಳಿದ ಗೌತಮ್ ಬೌಲಿಂಗ್‍ನಲ್ಲಿ ಉತ್ತಮವಾಗಿ ಆಡುತ್ತಿದ್ದ ಇಶಾನ್ ಕಿಶನ್ ಭಾರೀ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. 32 ಎಸೆತಗಳಲ್ಲಿ ಬೌಂಡರಿ, ಸಿಕ್ಸರ್ ನೆರವಿನೊಂದಿಗೆ ಕಿಶನ್ 28 ರನ್ ಗಳಿಸಿದ್ದರು.

    ವಿಕೆಟ್ ಕಳೆದುಕೊಳ್ಳುತ್ತಿದ್ದರು ತಂಡದ ಮೊತ್ತವನ್ನು ಹೆಚ್ಚಿಸುವತ್ತ ಗಮನ ನೀಡಿದ್ದ ರೋಹಿತ್ ಶರ್ಮಾ ರೊಂದಿಗೆ ಕೂಡಿಕೊಂಡ ಪೊಲ್ಲಾರ್ಡ್ ರನ್‍ಗಳಿಗೆ ವೇಗ ನೀಡಿದರು. 40 ಎಸೆತಗಳಲ್ಲಿ ಅರ್ಧ ಶತಕ (53 ರನ್) ಪೂರೈಸಿ ರೋಹಿತ್ ಶರ್ಮಾ ಬಿರುಸಿನ ಬ್ಯಾಟಿಂಗ್‍ಗೆ ಮುಂದಾದರು. 16ನೇ ಓವರಿನಲ್ಲಿ 22 ರನ್ ಸಿಡಿಸಿದ ರೋಹಿತ್ ಶರ್ಮಾ, ಶಮಿ ಬೌಲಿಂಗ್ ನಲ್ಲಿ ಮ್ಯಾಕ್ಸ್ ವೆಲ್ ಅವರ ಸಮಯೋಚಿತ ಫೀಲ್ಡಿಂಗ್ ನಿಂದ 70 ರನ್ ಗಳಿಸಿದ್ದ ಸಂದರ್ಭದಲ್ಲಿ ಔಟಾದರು.

    ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅಂತಿಮ 4 ಓವರ್ ಗಳಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆ ಮಾಡಿದ ಹಾರ್ದಿಕ್ 11 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಿಡಿಸಿ 30 ರನ್ ಗಳಿಸಿದರು. ಪೊಲ್ಲಾರ್ಡ್, ಹಾರ್ದಿಕ್ ಜೋಡಿ 23 ಎಸೆತಗಳಲ್ಲಿ 67 ರನ್ ಜೊತೆಯಾಟ ನೀಡಿ ತಂಡದ ಮೊತ್ತವನ್ನು 191ಕ್ಕೇರಿದರು.

  • 9 ಬಾಲಿನಲ್ಲಿ 7 ಸಿಕ್ಸರ್ – ತೆವಾಟಿಯಾ ಸ್ಫೋಟಕ ಆಟ, ರಾಯಲ್ಸ್‌ಗೆ ರೋಚಕ ಜಯ

    9 ಬಾಲಿನಲ್ಲಿ 7 ಸಿಕ್ಸರ್ – ತೆವಾಟಿಯಾ ಸ್ಫೋಟಕ ಆಟ, ರಾಯಲ್ಸ್‌ಗೆ ರೋಚಕ ಜಯ

    ಶಾರ್ಜಾ: ಇಂದು ನಡೆದ ಐಪಿಎಲ್ 9ನೇ ಮ್ಯಾಚಿನಲ್ಲಿ ರಾಹುಲ್ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ರಾಜಸ್ಥಾನ್ ರಾಯಲ್ಸ್ ತಂಡ 4 ವಿಕೆಟ್‍ಗಳಿಂದ ರೋಚಕ ಗೆಲುವು ಸಾಧಿಸಿದೆ.

    ಇಂದು ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಟಾಸ್ ಸೋತ ಪಂಜಾಬ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಮಯಾಂಕ್ ಅಗರ್ವಾಲ್ ಅವರ ಸೂಪರ್ ಸೆಂಚ್ಯೂರಿ ಮತ್ತು ನಾಯಕ ರಾಹುಲ್ ಅವರ ಅರ್ಧಶತಕದಿಂದ ನಿಗದಿತ 20 ಓವರಿನಲ್ಲಿ 223 ರನ್ ಸೇರಿಸಿತು. ಇದನ್ನು ಬೆನ್ನಟ್ಟಿದ ರಾಜಸ್ಥಾನ್ ತಂಡ ನಾಯಕ ಸ್ಟೀವ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಅವರ ಅರ್ಧಶತಕ ಹಾಗೂ ಕೊನೆಯಲ್ಲಿ ತೆವಾಟಿಯಾ ಅವರ ಸ್ಫೋಟಕ ಬ್ಯಾಟಿಂಗ್‍ನಿಂದ 3 ಎಸೆತ ಇರುವಂತೆಯೇ ಗುರಿಯನ್ನು ತಲುಪಿತು.

    ತೆವಾಟಿಯಾ ಸ್ಫೋಟಕ ಆಟ
    ಉತ್ತಮವಾಗಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 16ನೇ ಓವರಿನಲ್ಲಿ ಔಟ್ ಆದರು. ಈ ವೇಳೆ ಪಂದ್ಯ ರಾಯಲ್ಸ್ ಕೈಜಾರುವ ಹಂತದಲ್ಲಿ ಇತ್ತು. ಆದರೆ ಈ ವೇಳೆ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾದ ತೆವಾಟಿಯಾ 17ನೇ ಓವರಿನಲ್ಲಿ ಕಮಾಲ್ ಮಾಡಿದರು. ಶೆಲ್ಡನ್ ಕಾಟ್ರೆಲ್ ಎಸೆದ ಈ ಓವರಿನಲ್ಲಿ ಬರೋಬ್ಬರಿ ಐದು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ರೋಚಕ ಟ್ವಿಸ್ಟ್ ಕೊಟ್ಟರು. ನಂತರ ಬಂದ ಜೋಫ್ರಾ ಆರ್ಚರ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿ ರಾಯಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

    ಮೊದಲ 23 ಎಸೆತದಲ್ಲಿ 17 ರನ್‌ ನಂತರದ 8 ಎಸೆತದಲ್ಲಿ ತೆವಾಟಿಯಾ 36 ರನ್‌ ಚಚ್ಚಿದ್ದರು. ಜೊತೆಗೆ 31 ಬಾಲಿಗೆ 51 ರನ್ ಸಿಡಿಸಿ ಔಟ್ ಆದರು. ಈ ಗೆಲುವಿನ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ ಚೇಸ್‌ ಮಾಡಿದ ತಂಡ ಎಂಬ ಹೆಗ್ಗಳಿಕಗೆ ರಾಜಸ್ಥಾನ ಪಾತ್ರವಾಗಿದೆ.

    ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡಿದ ಶೆಲ್ಡನ್ ಕಾಟ್ರೆಲ್ ಜೋಸ್ ಬಟ್ಲರ್ ಅವರನ್ನು ಔಟ್ ಮಾಡಿದರು. ಇದಾದ ನಂತರ ಜೊತೆಯಾದ ನಾಯಕ ಸ್ಟೀವನ್ ಸ್ಮಿತ್ ಮತ್ತು ಸಂಜು ಸ್ಯಾಮ್ಸನ್ ಬಿರುಸಿನ ಆಟವಾಡಿದರು. ಪರಿಣಾಮ ರಾಜಸ್ಥಾನ್ ತಂಡ ಕೇವಲ 4.3 ಓವರಿನಲ್ಲೇ ಅರ್ಧಶತಕ ದಾಟಿತು. ಜೊತೆಗೆ ಸ್ಮಿತ್ ಅವರ ಭರ್ಜರಿ ಬ್ಯಾಕ್ ಟು ಬ್ಯಾಕ್ ಬೌಂಡರಿಗಳ ಸಹಾಯದಿಂದ ಪವರ್ ಪ್ಲೇ ಮುಕ್ತಾಯದ ವೇಳೆಗೆ ಬರೋಬ್ಬರಿ 69 ರನ್ ಕಲೆಹಾಕಿತು.

    ನಂತರ ಭರ್ಜರಿ ಬ್ಯಾಟಿಂಗ್ ಆಡಿದ ಸ್ಮಿತ್ ಮತ್ತು ಸಂಜು ಬೌಂಡರಿ ಸಿಕ್ಸ್‍ಗಳ ಸುರಿಮಳೆಗೈದರು. ಈ ಮೂಲಕ ಕೇವಲ 8.5 ಓವರಿನಲ್ಲಿ ರಾಜಸ್ಥಾನ್ ತಂಡ 100ರ ಗಡಿ ದಾಟಿತು. ಆದರೆ 27 ಎಸೆತದಲ್ಲಿ ಅರ್ಧಶತಕ ಸಿಡಿಸಿ ಆಡುತ್ತಿದ್ದ ಸ್ಮಿತ್ ಅವರು 8ನೇ ಓವರಿನ ಕೊನೆಯ ಬಾಲಿನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ನಂತರ ತನ್ನ ಅಬ್ಬರವನ್ನು ಮುಂದುವರಿಸಿದ ಸಂಜು ಸ್ಯಾಮ್ಸನ್ ಮಿಂಚಿನ ಅರ್ಧಶತಕ ಸಿಡಿಸಿ ಮಿಂಚಿದರು.

    ಸ್ಯಾಮ್ಸನ್ ಸ್ಫೋಟಕ ಆಟ:
    ಇದೇ ವೇಳೆ ರಾಹುಲ್ ತೆವಾಟಿಯಾ ರನ್ ಗಳಿಸಲು ಕಷ್ಟಪಟ್ಟರು. ಆದರೆ ಇನ್ನೊದಡೆ ಭರ್ಜರಿಯಾಗಿ ಬ್ಯಾಟ್ ಮಾಡುತ್ತಿದ್ದ ಸ್ಯಾಮ್ಸನ್ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದರು. ಮ್ಯಾಕ್ಸ್ ವೆಲ್ ಮಾಡಿದ 15ನೇ ಓವರಿನಲ್ಲಿ ಅವರು ಭರ್ಜರಿ 21 ರನ್ ಸಿಡಿಸಿ ಮಿಂಚಿದರು. ಆದರೆ 16ನೇ ಓವರಿನ ಮೊದಲ ಬಾಲಿನಲ್ಲಿ 42 ಎಸೆತಗಳಿಗೆ 85 ರನ್ ಸಿಡಿಸಿ ಆಡುತ್ತಿದ್ದ ಸಂಜು ಸ್ಯಾಮ್ಸನ್ ಶಮಿಯವರ ಬೌಲಿಂಗ್ ಔಟ್ ಆದರು.

    17ನೇ ಓವರಿನಲ್ಲಿ ತೆವಾಟಿಯಾ ಕಮಾಲ್ ನಾಲ್ಕು ಬಾಲಿಗೆ ನಾಲ್ಕು ಸಿಕ್ಸರ್ ಸಿಡಿಸಿ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟರು. ಜೊತೆ ಅದೇ ಓವರಿನ ಕೊನೆ ಬಾಲಿನಲ್ಲಿ ಇನ್ನೊಂದು ಸಿಕ್ಸ್ ಸಿಡಿಸಿ ಒಟ್ಟು ಒಂದೇ ಈವರಿನಲ್ಲಿ 5 ಸಿಕ್ಸರ್ ಸಿಡಿಸಿ ರಾಯಲ್ಸ್ ಅನ್ನು ಗೆಲುವಿನ ದಡಕ್ಕೆ ಕರೆದುಕೊಂಡು ಬಂದರು. ಆದರೆ ರಾಬಿನ್ ಉತ್ತಪ್ಪ ಅವರು 18ನೇ ಓವರಿನ ಮೊದಲ ಬಾಲಿನಲ್ಲೇ ಔಟ್ ಆದರು. ಆಗ ಬಂದ ಜೋಫ್ರಾ ಆರ್ಚರ್ ಅವರು ಬ್ಯಾಕ್ ಟು ಬ್ಯಾಕ್ ಎರಡು ಸಿಕ್ಸರ್ ಸಿಡಿಸಿದರು.

    ಈ ಹಿಂದೆ 2012ರಲ್ಲಿಆರ್‌ಸಿಬಿ ಆಟಗಾರ ಕ್ರಿಸ್ ಗೇಲ್ ಪುಣೆ ವಾರಿಯರ್ಸ್ ತಂಡ ಸ್ಪಿನ್ನರ್ ರಾಹುಲ್ ಶರ್ಮಾ ಅವರ 5 ಎಸೆತಗಳನ್ನು ಸಿಕ್ಸರ್‍ ಗೆ ಅಟ್ಟಿದ್ದರು.

  • ಸಿಕ್ಸ್, ಫೋರ್‌ಗಳ ಸುರಿಮಳೆ – ಮಯಾಂಕ್, ರಾಹುಲ್ ಶತಕದ ಜೊತೆಯಾಟ – ರಾಜಸ್ಥಾನಕ್ಕೆ 224 ಟಾರ್ಗೆಟ್

    ಸಿಕ್ಸ್, ಫೋರ್‌ಗಳ ಸುರಿಮಳೆ – ಮಯಾಂಕ್, ರಾಹುಲ್ ಶತಕದ ಜೊತೆಯಾಟ – ರಾಜಸ್ಥಾನಕ್ಕೆ 224 ಟಾರ್ಗೆಟ್

    – ಕನ್ನಡಿಗರ ಕೆಚ್ಚೆದೆಯ ಆಟಕ್ಕೆ ಸ್ಮಿತ್ ಬೌಲಿಂಗ್ ಪಡೆ ಉಡೀಸ್

    ಶಾರ್ಜಾ: ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಲ್ ರಾಹುಲ್ ಅವರ ಭರ್ಜರಿ ಶತಕದ ಜೊತೆಯಾಟದಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 224 ರನ್‍ಗಳ ಟಾರ್ಗೆಟ್ ನೀಡಿದೆ.

    ಮೊದಲ ವಿಕೆಟ್‍ಗೆ ಮಯಾಂಕ್ ಮತ್ತು ರಾಹುಲ್ ಅವರು 183 ರನ್‍ಗಳ ಆರಂಭಿಕ ಜೊತೆಯಾಟವಾಡಿದರು. ಇದರಲ್ಲಿ ಮಯಾಂಕ್ ಶತಕ ಸಿಡಿಸಿ ಮಿಂಚಿದರೆ ಇವರಿಗೆ ಉತ್ತಮ ಸಾಥ್ ಕೊಟ್ಟ ರಾಹುಲ್ 69 ರನ್ ಸಿಡಿಸಿದರು. ಈ ಮೂಲಕ ಐಪಿಎಲ್‍ನಲ್ಲಿ ಆರಂಭಿಕ ಜೊತೆಯಾಟದಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಮೂರನೇ ಜೋಡಿ ಎಂಬ ಹೆಗ್ಗಳಿಕೆಗೆ ಈ ಜೋಡಿ ಪಾತ್ರವಾಯಿತು. 2019ರಲ್ಲಿ ಆರ್‌ಸಿಬಿ ವಿರುದ್ಧ 185 ರನ್ ಸಿಡಿಸಿದ ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್‌ಸ್ಟೋವ್ ಮೊದಲ ಸ್ಥಾನದಲ್ಲಿದ್ದರೆ, 2017ರಲ್ಲಿ 184 ರನ್‍ಗಳ ಜೊತೆಯಾಟವಾಡಿದ ಕೋಲ್ಕತ್ತಾದ ಗೌತಮ್ ಗಂಭೀರ್ ಮತ್ತು ಕ್ರಿಸ್ ಲೀನ್ ಜೋಡಿ ಎರಡನೇ ಸ್ಥಾನದಲ್ಲಿದೆ.

    ಕಿಂಗ್ಸ್ ಇಲೆವೆನ್ ಪಂಜಾಬ್‍ಗೆ ಭರ್ಜರಿ ಓಪನಿಂಗ್ ನೀಡಿದ ಮಯಾಂಕ್ ಅಗರ್ವಾಲ್ ಮತ್ತು ನಾಯಕ ಕೆ.ಎಲ್ ರಾಹುಲ್ ಮೊದಲ ನಾಲ್ಕು ಓವರಿನಲ್ಲೇ 41 ರನ್ ಚಚ್ಚಿದರು. ಜೊತೆಗೆ ಕೇವಲ 28 ಎಸೆತಗಳಲ್ಲೇ ಅರ್ಧಶತಕದ ಜೊತೆಯಾಟವಾಡಿದರು. ಇದೇ ವೇಳೆ ಬೌಂಡರಿ ಸಿಕ್ಸರ್ ಗಳ ಸುರಿಮಳೆಗೈದ ಮಯಾಂಕ್ ಅಗರ್ವಾಲ್ ಕೇವಲ 26 ಬಾಲಿಗೆ ಅರ್ಧಶತಕ ಸಿಡಿಸಿ ಮಿಂಚಿದರು. ಮಯಾಂಕ್ ಇನ್ನಿಂಗ್ಸ್‍ನಲ್ಲಿ 4 ಫೋರ್ ಮತ್ತು 6 ಭರ್ಜರಿ ಸಿಕ್ಸರ್ ಸಿಡಿಸಿದರು.

    ರಾಹುಲ್ ಮತ್ತು ಮಯಾಂಕ್ ಅವರ ಸೂಪರ್ ಬ್ಯಾಟಿಂಗ್ ನಿಂದ ಕೇವಲ 8.4 ಓವರಿನಲ್ಲೇ ಪಂಜಾಬ್ ತಂಡ ನೂರರ ಗಡಿ ದಾಟಿತು. ಈ ಮೂಲಕ ಐಪಿಎಲ್-2020ಯಲ್ಲಿ ಆರಂಭಿಕ ಜೋಡಿಯಾಗಿ ಮೊದಲ ಶತಕದ ಜೊತೆಯಾಟವಾಡಿದರು. ಕ್ರೀಸಿಗೆ ಕಚ್ಚಿಕೊಂಡಂತೆ ಬ್ಯಾಟ್ ಬೀಸಿದ ಮಯಾಂಕ್ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸಿ ಮಿಂಚಿದರು. ಇದಕ್ಕೆ ಉತ್ತಮ ಸಾಥ್ ಕೊಟ್ಟ ರಾಹುಲ್ 35 ಬಾಲಿಗೆ ಶತಕ ಸಿಡಿಸಿದರು. ಈ ಮೂಲಕ ಐಪಿಎಲ್‍ನಲ್ಲಿ ತನ್ನ 17ನೇ ಅರ್ಧಶತಕವನ್ನು ದಾಖಲಿಸಿದರು.

    ಆರಂಭದಿಂದ ಭರ್ಜರಿಯಾಗಿ ಆಡಿದ ಮಯಾಂಕ್ 7 ಭರ್ಜರಿ ಸಿಕ್ಸರ್ ಮತ್ತು 9 ಫೋರ್ ಗಳ ಸಹಾಯದಿಂದ 45 ಬಾಲಿಗೆ ಶತಕ ಸಿಡಿಸಿ ಮಿಂಚಿದರು. ಈ ಮೂಲಕ ಐಪಿಎಲ್‍ನಲ್ಲಿ ತನ್ನ ಮೊದಲ ಶತಕ ದಾಖಲಿಸಿದರು. ಈ ವೇಳೆ ಉತ್ತಮವಾಗಿ ಬ್ಯಾಟ್ ಬೀಸಿದ್ದ ಮಯಾಂಕ್ ಅಗರ್ವಾಲ್ 50 ಎಸೆತಗಳಲ್ಲಿ 106 ರನ್ ಸಿಡಿಸಿ ಔಟ್ ಆದರು. ನಂತರ 54 ಎಸೆತಗಳಲ್ಲಿ 69 ರನ್ ಸಿಡಿಸಿದ್ದ ರಾಹುಲ್ ಅವರು ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಕೊನೆಯಲ್ಲಿ ನಿಕೋಲಸ್ ಪೂರನ್ 8 ಎಸೆತಗಳಲ್ಲಿ ಮೂರು ಸಿಕ್ಸ್ ಒಂದು ಫೋರ್ ಮೂಲಕ 25 ರನ್ ಸಿಡಿಸಿ ಪಂಜಾಬ್ ತಂಡವನ್ನು 200ರ ಗಡಿ ದಾಟಿಸಿದರು.

  • ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ

    ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ

    ದುಬೈ: 2020ರ ಐಪಿಎಲ್ ಆವೃತ್ತಿಯಲ್ಲಿ ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋಲಿನ ಕಹಿ ಅನುಭವಿಸಿದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

    ಪಂದ್ಯದಲ್ಲಿ ಕೆಎಲ್ ರಾಹುಲ್ ಅವರ ಎರಡು ಕ್ಯಾಚ್‍ಗಳನ್ನು ಕೈಚೆಲ್ಲಿದ್ದ ಕೊಹ್ಲಿ, ಬ್ಯಾಟಿಂಗ್‍ನಲ್ಲೂ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲಿಲ್ಲ. ದುಬೈ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಕ್ಯಾಚ್ ಕೈಚೆಲ್ಲಿ ಕೊಹ್ಲಿ ದುಬಾರಿಯಾಗಿದ್ದರು. 207 ರನ್ ಬೃಹತ್ ಗುರಿಯನ್ನ ಬೆನ್ನಟ್ಟಿದ್ದ ಆರ್‌ಸಿಬಿ 97 ರನ್‍ಗಳ ಭಾರೀ ಅಂತರದಲ್ಲಿ ಸೋಲುಂಡಿತ್ತು. ಇದನ್ನೂ ಓದಿ: ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಎಡವಿದ್ದೆಲ್ಲಿ?- ಕೊಹ್ಲಿ ಪಡೆಯ ಬಿಗ್ 3 ಮಿಸ್ಟೇಕ್ಸ್

    ಇದರ ನಡುವೆಯೇ ಕೊಹ್ಲಿ ಅವರಿಗೆ ನಿಧಾನಗತಿ ಬೌಲಿಂಗ್ ರೇಟ್ ಕಾರಣದಿಂದ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಐಪಿಎಲ್ ನಿಯಮಗಳ ಅನ್ವಯ ಮೊದಲ ತಪ್ಪಾಗಿರುವ ಕಾರಣದಿಂದ ದಂಡ ವಿಧಿಸಲಾಗಿದೆ. ಟಿ20 ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡುವ ತಂಡಕ್ಕೆ ಡ್ರಿಂಕ್ಸ್ ಬ್ರೇಕ್ ಸೇರಿಸಿ 75 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ನಿಗಧಿತ ಕಾಲಾವಧಿಯೊಳಗೆ 20 ಓವರ್ ಗಳನ್ನು ತಂಡದ ನಾಯಕ ಮುಗಿಸಬೇಕಿರುತ್ತದೆ. ಅವಧಿಯೊಳಗೆ ಓವರ್ ಮುಕ್ತಾಯ ಮಾಡದಿದ್ದರೇ ಪಂದ್ಯದ ರೆಫ್ರಿ ದಂಡವನ್ನು ವಿಧಿಸುತ್ತಾರೆ.  ಇದನ್ನೂ ಓದಿ: ಶತಕದೊಂದಿಗೆ ಸಚಿನ್ ದಾಖಲೆ ಮುರಿದ ರಾಹುಲ್

    ಪಂದ್ಯದ ಬಳಿಕ ತಂಡದ ಸೋಲಿನ ಕಾರಣ ಬಿಚ್ಚಿಟ್ಟಿರುವ ಕೊಹ್ಲಿ, ತಂಡದ ಬೌಲರ್ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ನಾವು ಮಾಡಿದ ತಪ್ಪಿನಿಂದ ದುಬಾರಿ ಬೆಲೆ ಕಟ್ಟಿದ್ದೇವೆ. ಪಂಜಾಬ್ ತಂಡವನ್ನು 180 ರನ್ ಗಳಿಗೆ ಕಟ್ಟಿ ಹಾಕುವ ಅವಕಾಶವಿತ್ತು. ಆದರೆ ಕ್ಯಾಚ್ ಬಿಟ್ಟಿದ್ದು ತಂಡಕ್ಕೆ ಮಾರಕವಾಯಿತು. ಸದ್ಯ ನಾವು ಮಾಡಿದ ಕೆಲ ತಪ್ಪುಗಳನ್ನು ತಿದ್ದಿಕೊಂಡು ಸಮಯದೊಂದಿಗೆ ಮುನ್ನಡೆಯಬೇಕಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.