ಜೈಪುರ: 2019ರ ಐಪಿಎಲ್ ಭಾರತೀಯ ಕ್ರಿಕೆಟರ್‍ಗಳ ಪಾಲಿನ ಅತ್ಯುತ್ತಮ ಅವಕಾಶಗಳನ್ನು ತೆರೆದಿಟ್ಟಿದೆ ಎಂದು ಕರೆಯಬಹುದಾಗಿದ್ದು, ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಹೆಚ್ಚು ಯುವ ಆಟಗಾರು ಕೋಟಿ ಕೋಟಿ ರೂ. ಮೊತ್ತಕ್ಕೆ ಹರಾಜು ಆಗುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ಐಪಿಎಲ್ ಅಚ್ಚರಿಯ ಸಾಲಿಗೆ ಸೇರಿದ ಮತ್ತೊಬ್ಬ ಯುವ ಆಟಗಾರ ವರುಣ್ ಚಕ್ರವರ್ತಿ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಬರೋಬ್ಬರಿ 8.4 ಕೋಟಿ ರೂ.ಗೆ ಖರೀದಿ ಮಾಡಿದೆ. 27 ವರ್ಷದ ವರುಣ್ ತಮಿಳುನಾಡು ತಂಡದ ಆಟಗಾರರಾಗಿದ್ದು, ಕಳೆದ ವರ್ಷದ ವಿಜಯ್ ಹಜರೆ ಟ್ರೋಫಿ ಹಾಗೂ ಈ ವರ್ಷದ ತಮಿಳುನಾಡು ಪ್ರೀಮಿಯರ್ ಲೀಗ್‍ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿ ಸಂತಸ ವ್ಯಕ್ತಪಡಿಸಿರುವ ವರುಣ್ ಚಕ್ರವರ್ತಿ, ಪ್ರೀಮಿಯರ್ ಲೀಗ್ ಬಳಿಕ ನನಗೆ ಹೆಚ್ಚಿನ ಅವಕಾಶಗಳು ಲಭಿಸುವ ಬಗ್ಗೆ ಆತ್ಮವಿಶ್ವಾಸ ಇತ್ತು. ಆದರೆ ಪಂಜಾಬ್ ತಂಡ ಇಷ್ಟು ಮೊತ್ತಕ್ಕೆ ನನ್ನನ್ನು ಪಡೆದುಕೊಳ್ಳುತ್ತದೆ ಎಂಬುವುದನ್ನು ನಾನು ಊಹೆ ಕೂಡ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಅತ್ಯುತ್ತಮ ಬೌಲರ್ ಎಂದು ಗುರುತಿಸಿಕೊಂಡಿದ್ದ ವರುಣ್, 22 ವಿಕೆಟ್ ಪಡೆಯುವ ಮೂಲಕ 4.23 ಎಕಾನಮಿಯಲ್ಲಿ ಟೂರ್ನಿಯ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿದ್ದರು. ಅಲ್ಲದೇ ವರುಣ್ 8 ಶೈಲಿಯಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ.
ಸದ್ಯ ನಾನು ಐದು ಶೈಲಿಗಳನ್ನು ಮಾತ್ರ ಇದುವರೆಗೂ ಆಟದಲ್ಲಿ ಪ್ರಯೋಗ ಮಾಡಿದ್ದು, ಸ್ಟ್ರೈಟ್, ಇನ್ ಸ್ವಿಂಗ್, ಔಟ್ ಸ್ವಿಂಗ್, ಫ್ಲಿಪರ್, ಝೂಟರ್ ಶೈಲಿಗಳಲ್ಲಿ ಎಸೆದಿದ್ದೇನೆ. ಮತ್ತು ಕೆಲ ಬದಲಾವಣೆಗಳನ್ನು ನನ್ನ ಬೌಲಿಂಗ್‍ನಲ್ಲಿ ಕಾಣಬಹುದು. ಕಳೆದ 2 ವರ್ಷಗಳಲ್ಲಿ ನನ್ನ ಬೌಲಿಂಗ್‍ನಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಸಿಕ್ಕ ಎಲ್ಲಾ ಜವಾಬ್ದಾರಿಗಳನ್ನು ಸಾಮರ್ಥವಾಗಿ ನಿಭಾಯಿಸಿದ್ದಾಗಿ ವರುಣ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಪರ ನೆಟ್ ಬೌಲರ್ ಆಗಿಯೂ ವರುಣ್ ಕಾರ್ಯನಿರ್ವಹಿಸಿದ್ದರು. ಹರಾಜು ಪ್ರಕ್ರಿಯೆ ವೇಳೆ ಇತ್ತಂಡಗಳು ಪಂಜಾಬ್ ತಂಡಕ್ಕೆ ಪೈಪೋಟಿ ನೀಡಿದ ಕಾರಣ ವರುಣ್ ಕೋಟಿ ಕೋಟಿ ರೂ. ಹಣಗಳಿಸಲು ಕಾರಣವಾಯಿತು.
ಆರ್ ಅಶ್ವಿನ್ ಮುಂದಾಳತ್ವದ ಪಂಜಾಬ್ ಅಂತಿಮವಾಗಿ ವರುಣ್‍ರನ್ನು ಪಡೆಯಲು ಸಫಲವಾಯಿತು. 1991 ರಲ್ಲಿ ಜನಿಸಿರುವ ವರುಣ್ 9 ಲಿಸ್ಟ್ `ಎ’ ಪಂದ್ಯಗಳನ್ನು ಆಡಿದ್ದು, 22 ವಿಕೆಟ್ ಪಡೆದಿದ್ದಾರೆ. ಉಳಿದಂತೆ ಏಕೈಕ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 1 ವಿಕೆಟ್ ಪಡೆದಿದ್ದಾರೆ. ಅಂದಹಾಗೇ ಈ ಬಾರಿ ಪಂಜಾಬ್ ಪರ ದುಬಾರಿ ಪ್ಲೇಯರ್ ಕೂಡ ಆಗಿದ್ದಾರೆ.
ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv