Tag: KingPin

  • ಈಗ ಸಿಕ್ಕವರು ಕಿಂಗ್‌ಪಿನ್‌ಗಳಲ್ಲ, ಗೃಹ ಸಚಿವರ ಮೇಲೆಯೇ ನನಗೆ ಅನುಮಾನ – ಪ್ರಿಯಾಂಕ್ ಖರ್ಗೆ

    ಈಗ ಸಿಕ್ಕವರು ಕಿಂಗ್‌ಪಿನ್‌ಗಳಲ್ಲ, ಗೃಹ ಸಚಿವರ ಮೇಲೆಯೇ ನನಗೆ ಅನುಮಾನ – ಪ್ರಿಯಾಂಕ್ ಖರ್ಗೆ

    ಮೈಸೂರು: ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದ ಬಗ್ಗೆ ಧ್ವನಿ ಎತ್ತಿರುವ ಶಾಸಕ ಪ್ರಿಯಾಂಕ್ ಖರ್ಗೆ ಈಗ ಅಕ್ರಮದ ಹಿಂದೆ ಗೃಹ ಸಚಿವರೇ ಇದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    araga jnanendra

    ಮೈಸೂರಿನಲ್ಲಿಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಖರ್ಗೆ, ಈ ಪ್ರಕರಣದಲ್ಲಿ ಈಗ ಬಂಧನವಾಗಿರುವವರು ಕಿಂಗ್‌ಪಿನ್‌ಗಳಲ್ಲ ಕೇವಲ ಮಧ್ಯವರ್ತಿಗಳು. ಇವರಿಗೆ ಕೆಲಸ ವಹಿಸಿದ್ದು ಯಾರು? ದುಡ್ಡು ಯಾರಿಗೆ ಸಂದಾಯವಾಗಿದೆ? ಅನ್ನೋದು ಮುಖ್ಯ ನನಗೆ ಗೃಹ ಸಚಿವರ ಮೇಲೆಯೆ ಅನುಮಾನವಿದೆ. ಅಕ್ರಮ ನಡೆಯುತ್ತಿದೆ ಎಂದು ಗೊತ್ತಿದ್ದರೂ ಸುಮ್ಮನೆ ಕೂತಿದ್ದರು, ಅದರ ಅರ್ಥವೇನು? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಎರಡೂವರೆ ಗಂಟೆ ಸಭೆ – ರಾಜ್ಯದಲ್ಲೂ ಯುವ ಮುಖಗಳಿಗೆ ಮಣೆ?

    ಪ್ರಕರಣ ಸರಿಯಾಗಿ ತನಿಖೆಯಾದರೆ ಅದು ಸರ್ಕಾರಕ್ಕೆ ಸುತ್ತಿಕೊಳ್ಳುತ್ತದೆ. ಅಕ್ರಮದ ಬಗ್ಗೆ ಮಾತಾಡಿದ್ದಕ್ಕೆ ನನಗೆ ನೋಟಿಸ್ ಕೊಟ್ಟಿದ್ದಾರೆ. ನಾನು ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದೇನೆ. ಹಾಗಾಗಿ ಖುದ್ದಾಗಿ ವಿಚಾರಣೆಗೆ ಹೋಗುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

    Priyankkharge

    ಪ್ರಿಯಾಂಕ್ ಖರ್ಗೆ ಹಿಟ್ ಅಂಡ್ ರನ್ ವ್ಯಕ್ತಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ ಖರ್ಗೆ, ನಾನು ಹಿಟ್ ಅಂಡ್ ರನ್ ಆಗಿದ್ದರೆ ನಾನು ಧ್ವನಿ ಎತ್ತಿದ ಕೇಸ್‌ಗಳನ್ನೇಲ್ಲ ಏಕೆ ತನಿಖೆ ಮಾಡಿಸುತ್ತಿದ್ದೀರಿ? ನಾನು ಮುಖ್ಯ ಅಲ್ಲ ಅನ್ನೋದಾದರೆ ನನ್ನ ಮಾತಿಗೆ ಏಕೆ ಪ್ರಾಮುಖ್ಯತೆ ಕೊಡುತ್ತೀರಿ? ಬಿಟ್ಟುಬಿಡಿ ಎಂದು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಪುಂಡಾಟ

    ಸರ್ಕಾರ ತನಿಖೆ ನಡೆಸದೇ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುತ್ತಿದೆ. ಈವರೆಗೆ ಒಂದೇ ಒಂದು ಪರೀಕ್ಷಾ ಕೇಂದ್ರದ ಬಗ್ಗೆ ಮಾತ್ರ ಎಫ್‌ಐಆರ್ ದಾಖಲಿಸಿದೆ. ಪರೀಕ್ಷಾರ್ಥಿಗಳು ಹಲವು ಕೇಂದ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಅವುಗಳ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಮರು ಪರೀಕ್ಷೆ ಮಾಡಬೇಕೆಂದ ಸರ್ಕಾರ ಮತ್ತೆ 545 ಮಂದಿಯ ಒಎಂಆರ್ ಶೀಟ್ ತರಿಸಿಕೊಂಡಿದ್ದಾದರೂ ಏಕೆ..? ಇಲ್ಲಿ ಸರ್ಕಾರದ ದಡ್ಡತನವೆ ಎದ್ದು ಕಾಣುತ್ತಿದೆ. 300 ಜನರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಅವರೇ ಹೇಳಿ, ಈವರೆಗೆ ಎಷ್ಟು ಜನರನ್ನು ಅರೆಸ್ಟ್ ಮಾಡಿದ್ದಾರೆ? ಒಂದೆರಡು ಕಿಂಗ್ ಪಿನ್ ಸಿಕ್ಕರೆ ಅದರಲ್ಲೇ ಪ್ರಕರಣ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಇದನ್ನೂ ಓದಿ: ಶಾಲೆಗಳಲ್ಲಿ ವೇದ, ರಾಮಾಯಣ, ಗೀತೆಗಳನ್ನು ಕಲಿಸಬೇಕು: ಧನ್ ಸಿಂಗ್ ರಾವತ್

    ರಾಜ್ಯಕ್ಕೆ 3ನೇ ಸಿಎಂ ಸಿಗಲಿದ್ದಾರೆ: ಬಿಟ್‌ಕಾಯಿನ್ ಪ್ರಕರಣ ಚುರುಕುಗೊಂಡರೆ ರಾಜ್ಯಕ್ಕೆ 3ನೇ ಸಿಎಂ ಸಿಗಲಿದ್ದಾರೆ ಎಂದು ಪ್ರಿಯಾಂಕ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಬಿಟ್ ಕಾಯಿನ್ ಪ್ರಕರಣದಲ್ಲಿ ಯಾವುದೇ ರೀತಿಯ ತನಿಖೆ ನಡೆಯುತ್ತಿಲ್ಲ. ಇಂದಿಗೂ ನಾನು ಅದನ್ನೇ ಹೇಳುತ್ತೇನೆ ಬಿಟ್ ಕಾಯಿನ್ ಪಾರದರ್ಶಕ ತನಿಖೆಯಾದರೆ ನಮ್ಮ ರಾಜ್ಯಕ್ಕೆ ಬಿಜೆಪಿಯಿಂದ 3 ನೇ ಮುಖ್ಯಮಂತ್ರಿ ಸಿಗಲಿದ್ದಾರೆ ಎಂದು ಕುಟುಕಿದರು.

  • ಬೆಂಗಳೂರು ಕಿಂಗ್‍ಪಿನ್‍ಗಳ ಕ್ಲೀನ್‍ಗೆ ‘ತ್ರೀ ಮಂಥ್ ಮಿಷನ್’

    ಬೆಂಗಳೂರು ಕಿಂಗ್‍ಪಿನ್‍ಗಳ ಕ್ಲೀನ್‍ಗೆ ‘ತ್ರೀ ಮಂಥ್ ಮಿಷನ್’

    -ಸಿಸಿಬಿ ಅಧಿಕಾರಿಗಳ ಚಳಿ ಬಿಡಿಸಿದ ಅಲೋಕ್ ಕುಮಾರ್

    ಬೆಂಗಳೂರು: ರೌಡಿಗಳಿಗೆ ಸಿಂಹ ಸ್ವಪ್ನರಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಸಿಸಿಬಿ ಎಡಿಜಿಪಿ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ‘ತ್ರೀ ಮಂಥ್ ಮಿಷನ್’ ಹೆಸರಿನಲ್ಲಿ ಬೆಂಗಳೂರು ಕಿಂಗ್‍ಪಿಂನ್‍ಗಳ ಕ್ಲೀನ್‍ಗೆ ಮುಂದಾಗಿದ್ದಾರೆ.

    ಇಂದು ಕಮೀಷನರ್ ಕಚೇರಿಯಲ್ಲಿ ಸಿಸಿಬಿಯ ಎಲ್ಲ ಎಸಿಪಿ, ಇನ್ಸ್‍ಪೆಕ್ಟರ್ ಹಾಗೂ ಸಿಬ್ಬಂದಿ ಜೊತೆಗೆ ಅಲೋಕ್ ಕುಮಾರ ಸಭೆ ನಡೆಸಿದ್ದು, ಈ ವೇಳೆ ಕಿಂಗ್‍ಪಿನ್‍ಗಳ ಮಟ್ಟಹಾಕುವ ಕಾರ್ಯಾಚರಣೆ ಕುರಿತು ಮಾಹಿತಿ ಹಾಗೂ ಸೂಚನೆ ನೀಡಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

    ಸಭೆಯಲ್ಲಿ ಚರ್ಚೆ ಆಗಿದ್ದೇನು?
    ಸಂಘಟಿತ ಅಪರಾಧ ತಡೆ ಸೇರಿದಂತೆ ಮೀಟರ್ ಬಡ್ಡಿ ವ್ಯವಹಾರ, ಲ್ಯಾಂಡ್ ಗ್ರ್ಯಾಬಿಂಗ್, ಮಟ್ಕಾ ದಂಧೆ, ಇಸ್ಪೀಟ್ ಅಡ್ಡೆಗಳಿಗೆ ಬ್ರೇಕ್ ಹಾಕಲು ಮೊದಲ ಆದ್ಯತೆ ನೀಡಬೇಕು. ರಿಯಲ್ ಎಸ್ಟೇಟ್ ಮಾಫಿಯಾ, ಸಿವಿಲ್ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಬಾರದು. ಸದಾ ಜಾಗೃತರಾಗಿದ್ದು, ರೌಡಿಗಳ ಪತ್ತೆ ಹಾಗೂ ಅವರ ಮೇಲೆ ನಿಗಾ ಇಡಬೇಕು. ಸಿಸಿಬಿ ಅಂದ್ರೆ ವಾರ್ ರೂಮ್, ಹಗಲು-ರಾತ್ರಿ ಕೆಲಸ ನಡೆಯುತ್ತಿರಬೇಕು. ದಿನಾಂಕ ಗುರುತಿಸಿ ಕೆಲಸ ಮಾಡುವುದನ್ನು ಬಿಟ್ಟು, 24*7 ವಾರ್ ರೀತಿ ಕೆಲಸ ಮಾಡಬೇಕು. ಕೂಡಲೇ ಎಲ್ಲರೂ ಕಾರ್ಯ ಪ್ರವೃತ್ತರಾಗಿ, ಇಲ್ಲದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

    ನಮ್ಮ ಬಗ್ಗೆ ಇಲಾಖೆ ಹಿರಿಯ ಅಧಿಕಾರಿಗಳು, ಸಾರ್ವಜನಿಕರು ಮತ್ತು ರಾಜಕಾರಣಿಗಳಿಗೆ ನಂಬಿಕೆ ಬರುವಂತಿರುವಂತೆ ಕೆಲಸ ನಿರ್ವಹಿಸಬೇಕು. ಈ ಮೂಲಕ ಸಿಸಿಬಿಗೆ ಮತ್ತೆ ಹಳೇ ಚಾರ್ಮ್ ತಂದುಕೊಡಲು ಶ್ರಮಿಸಿ ಎಂದು ಸೂಚಿಸಿರುವ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನನ್ನ ಮೇಲೆ ನಂಬಿಕೆ ಇಟ್ಟು ಇಲ್ಲಿಗೆ ಕಳುಹಿಸಿದ್ದಾರೆ. ನಂಬಿಕೆ ಉಳಿಸಿಕೊಳ್ಳುವ ರೀತಿ ಕೆಲಸ ಆಗಬೇಕು ಎಂದು ಎಚ್ಚರಿಕೆ ನೀಡಿದ್ದಾರಂತೆ.

    ನಾರ್ವೆ ಸೋಮಶೇಖರ್ ಹೆಸರು ಎತ್ತಿದ ಅಲೋಕ್ ಕುಮಾರ್, ಸೋಮಶೇಖರ್ ಈಗ ಏನು ಮಾಡುತ್ತಿದ್ದಾನೆ ಅಂತ ನಿಮಗೆ ಗೊತ್ತಿದೆಯಾ? ಏನು ಕೆಲಸವಿಲ್ಲದೆ ಅವನಿಗೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು? ಈ ಬಗ್ಗೆ ನನಗೆ ಮಾಹಿತಿ ಇದೆ. ಯಾರ ಹಿಂದೆ ಯಾರು ಇದ್ದಾರೆ ಎನ್ನವ ಲಿಸ್ಟ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಅಧಿಕಾರಿಗಳಿ ಕ್ಲಾಸ್:
    ಒಂದು ವರ್ಷದಿಂದ ಎಷ್ಟು ಕೆಲಸ ಮಾಡಿರುವಿರಿ, ಎಷ್ಟು ಪ್ರಕರಣ ದಾಖಲಿಸಿರುವಿರಿ, ಗೀತಾ ವಿಷ್ಣು ಪ್ರಕರಣದ ಕುರಿತು ಚಾರ್ಜ್ ಶೀಟ್ ಏಕೆ ಹಾಕಿಲ್ಲ? ಆರು ತಿಂಗಳನಿಂದ ಬಾಕಿಯಿರುವ ಪ್ರಕರಣಗಳು ಎಷ್ಟು? ಎಂದು ಪ್ರಶ್ನಿಸಿರುವ ಅವರು, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ. ನಮ್ಮ ಕೆಲಸ ನಮಗೆ ತೃಪ್ತಿ ತರುವಂತಿರಬೇಕು. ಕೆಲಸ ಮಾಡಲು ಆಗದವರು ಜಾಗ ಖಾಲಿ ಮಾಡಿ. ನಾನು ನಿಮ್ಮ ಹತ್ತಿರ ಬೇರೆ ಏನೂ ಕೇಳುವುದಿಲ್ಲ, ಕೆಲಸ ಮಾತ್ರ ಕೇಳುತ್ತೇನೆ ಎಂದು ತಿಳಿಸಿದ್ದಾರಂತೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಒಂದು ಮಗುವಿಗೆ 45 ಲಕ್ಷ ರೂ.ನಂತೆ 300 ಮಕ್ಕಳನ್ನು ಮಾರಾಟ ಮಾಡಿದ್ದ ಕಿಂಗ್‍ಪಿನ್ ಅರೆಸ್ಟ್!

    ಒಂದು ಮಗುವಿಗೆ 45 ಲಕ್ಷ ರೂ.ನಂತೆ 300 ಮಕ್ಕಳನ್ನು ಮಾರಾಟ ಮಾಡಿದ್ದ ಕಿಂಗ್‍ಪಿನ್ ಅರೆಸ್ಟ್!

    ಮುಂಬೈ: ವಿದೇಶಕ್ಕೆ ಮಕ್ಕಳನ್ನು ಮಾರಾಟ ನಡೆಸುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಯು ಗುಜರಾತ್‍ನ ರಾಜುಭಾಯ್ ಗಮ್ಳೆವಾಲಾ ಅಲಿಯಾಸ್ ರಾಜುಭಾಯ್ ಆಗಿದ್ದಾನೆ. ಆರೋಪಿಯು 2007 ರಿಂದಲೂ ಮಕ್ಕಳ ಮಾರಾಟ ದಂಧೆಯಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದಾನೆ. ಒಂದು ಮಗುವನ್ನು ಅಮೆರಿಕಕ್ಕೆ 45 ಲಕ್ಷ ರೂಪಾಯಿಯಂತೆ ಮಾರಾಟ ಮಾಡಿದ್ದಾನೆಂದು ಪೊಲೀಸರು ಹೇಳಿದ್ದಾರೆ.

    ಭಾರತದಿಂದ ಅಮೆರಿಕಕ್ಕೆ ಸುಮಾರು 300 ಅಪ್ರಾಪ್ತ ವಯಸ್ಸಿನ ಬಾಲಕ ಹಾಗೂ ಬಾಲಕಿಯರನ್ನು ತಲಾ 45 ಲಕ್ಷ ರೂ.ಗೆ ಮಾರಾಟ ಮಾಡಿದ್ದು, ಹೆಚ್ಚಿನವರು ಗುಜರಾತ್ ಮೂಲದ ಮಕ್ಕಳಾಗಿದ್ದಾರೆ. ಗುಜರಾತಿನ ಬಡ ಕುಟುಂಬಗಳು ತಮ್ಮ 11 ರಿಂದ 16 ವರ್ಷದ ಮಕ್ಕಳನ್ನು ಸಾಕಲಾಗದೇ ರಾಜುಭಾಯ್‍ನಿಗೆ ಮಾರಾಟ ಮಾಡಿದ್ದಾರೆ. ಆದರೆ ಮಾರಾಟವಾದ ನೂರಾರು ಮಕ್ಕಳ ಸ್ಥಿತಿಗತಿ ಏನಾಗಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲವೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಮಾರಾಟ ಹೇಗೆ ನಡೆಯುತ್ತಿತ್ತು? ಹೇಗೆ ಅಮೆರಿಕಕ್ಕೆ ಕಳುಹಿಸುತ್ತಿದ್ದರು?
    ಅಮೆರಿಕದಿಂದ ಮಕ್ಕಳನ್ನು ಕೊಂಡುಕೊಳ್ಳಲು ಗಿರಾಕಿಗಳು ಆರ್ಡರ್ ಮಾಡಿದ ಕೂಡಲೇ ರಾಜುಭಾಯ್ ಹಾಗೂ ಆತನ ಸಹಚರರು ಬಡ ಕುಟುಂಬದ ಮಕ್ಕಳನ್ನು ಹುಡುಕುತ್ತಿದ್ದರು. ಹೆಚ್ಚಾಗಿ ಇವರಿಗೆ ಗುಜರಾತಿನ ಮೂಲದವರು ತಮ್ಮ ಹೆತ್ತಮಕ್ಕಳನ್ನೇ ಮಾರಾಟ ಮಾಡುತ್ತಿದ್ದರು. ಮಗುವನ್ನು ಪಡೆದುಕೊಂಡ ಬಳಿಕ, ಮಗುವಿನ ಹೋಲಿಕೆಯನ್ನೇ ಹೋಲುವ ಪಾಸ್‍ಪೋರ್ಟ್ ಹೊಂದಿರುವ ಮಕ್ಕಳ ಪೋಷಕರನ್ನು ಸಂಪರ್ಕಿಸುತ್ತಿದ್ದರು. ಅವರಿಂದ ಅಸಲಿ ಪಾಸ್‍ಪೋರ್ಟ್ ಪಡೆದುಕೊಂಡು ಮಕ್ಕಳಿಗೆ ಪಾಸ್‍ಪೋರ್ಟ್‍ನಲ್ಲಿರುವಂತೆಯೇ ಮೇಕ್‍ಅಪ್ ಮಾಡಿಸುತ್ತಿದ್ದರು. ನಂತರ ಮಗುವನ್ನು ಅಮೆರಿಕಕ್ಕೆ ಕಳುಹಿಸಿ, ಅಸಲಿ ಪಾಸ್‍ಪೋರ್ಟ್‍ಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸುತ್ತಿದ್ದರು ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.

    ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
    ಬಾಲಿವುಡ್ ನಟಿ ಪ್ರೀತಿ ಸೂದ್‍ರವರು ಇದೇ ತಿಂಗಳ ಮಾರ್ಚ್ ನಲ್ಲಿ ನಗರದ ಸಲೂನ್‍ಗೆ ಹೋಗಿದ್ದಾರೆ. ಈ ವೇಳೆ ಸಲೂನ್‍ನಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮೇಕಪ್ ಮಾಡುತ್ತಿದ್ದನ್ನು ಕಂಡು ಪ್ರಶ್ನಿಸಿದ್ದಾರೆ. ಮಕ್ಕಳ ಜೊತೆ ಬಂದಿದ್ದ ಮೂವರು ವ್ಯಕ್ತಿಗಳು, ಇವರು ಅಮೆರಿಕ ದೇಶದವರಾಗಿದ್ದು, ಅವರ ಪೋಷಕರ ಬಳಿ ಕಳುಹಿಸಿ ಕೊಡಲು ಈ ರೀತಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ನಟಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದಾಗ ಮೂವರು ವ್ಯಕ್ತಿಗಳ ಪೈಕಿ ಇಬ್ಬರು ಪರಾರಿಯಾಗಿದ್ದು, ಓರ್ವ ಸಿಕ್ಕಿಬಿದ್ದಿದ್ದಾನೆ. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಕ್ಕಳ ಕಳ್ಳ ಸಾಗಾಣಿಕೆ ಬೃಹತ್ ಜಾಲ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ನಿವೃತ್ತ ಪೊಲೀಸ್ ಇನ್ಸ್‍ಫೆಕ್ಟರ್ ಮಗ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.

    ಆದರೆ ಪ್ರಕರಣದ ಕಿಂಗ್‍ಪಿನ್ ರಾಜುಭಾಯ್ ತಲೆಮರೆಸಿಕೊಂಡಿದ್ದ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು, ವಾಟ್ಸಪ್ ಮೂಲಕ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯು ಈ ಮೊದಲು 2007ರಲ್ಲಿ ಪಾಸ್‍ಪೋರ್ಟ್ ನಕಲು ಮಾಡಿದ್ದ ಆರೋಪದ ಮೇರೆಗೆ ಶಿಕ್ಷೆ ಅನುಭವಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 34 ಹಾಗೂ 373ರಡಿ ಪ್ರಕರಣ ದಾಖಲಾಗಿದ್ದು, ಆಗಸ್ಟ್ 18ರವರೆಗೆ ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಡಿಸಿಪಿ ಪರಮ್‍ಜಿತ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv