Tag: kiims

  • ಹುಬ್ಬಳ್ಳಿ ಅಪಘಾತ ಪ್ರಕರಣ- ಇನ್ನೂ ಐದಾರು ಜನರ ಸ್ಥಿತಿ ಚಿಂತಾಜನಕವಾಗಿದೆ: ಕಿಮ್ಸ್ ನಿರ್ದೇಶಕ

    ಹುಬ್ಬಳ್ಳಿ ಅಪಘಾತ ಪ್ರಕರಣ- ಇನ್ನೂ ಐದಾರು ಜನರ ಸ್ಥಿತಿ ಚಿಂತಾಜನಕವಾಗಿದೆ: ಕಿಮ್ಸ್ ನಿರ್ದೇಶಕ

    ಹುಬ್ಬಳ್ಳಿ: ಲಾರಿ ಮತ್ತು ಬಸ್ ನಡುವೆ ನಡೆದ ಅಪಘಾತದಲ್ಲಿ ಈಗಾಗಲೇ 9 ಮಂದಿ ಮೃತಪಟ್ಟಿದ್ದು, ಇನ್ನೂ ಐದಾರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಕಿಮ್ಸ್ ನಿರ್ದೇಶಕ ರಾಮಲಿಂಗಪ್ಪ ಮಾಹಿತಿ ನೀಡಿದ್ದಾರೆ.

    ಘಟನೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಅಪಘಾತವಾಗಿದೆ. ಬಸ್ ಮತ್ತು ಲಾರಿ ನಡುವೆ ಈ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಆರು ಜನ ಮತ್ತು ಆಸ್ಪತ್ರೆಯಲ್ಲಿ ಇಬ್ಬರ ಸೇರಿ 9 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.

    ಇನ್ನೂ ಐದಾರು ಜನರ ಸ್ಥಿತಿ ಚಿಂತಾಜನಕವಾಗಿದೆ. ಒಟ್ಟು 20 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಕೆಲವೊಬ್ಬರು ತಮ್ಮಿಷ್ಟದನುಸಾರ ಕೊಲ್ಹಾಪುರಕ್ಕೆ ಸ್ಥಳಾಂತರವಾಗುತ್ತಿದ್ದಾರೆ ಎಂದು ಅವರು ಹೇಳಿದರು. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಬಸ್-ಲಾರಿ ನಡುವೆ ಡಿಕ್ಕಿ – 9 ಮಂದಿ ಸಾವು, 24 ಮಂದಿಗೆ ಗಾಯ

    ಹುಬ್ಬಳ್ಳಿ ಹೊರವಲಯದ ತಾರಿಹಾಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮಹಾರಾಷ್ಟ್ರದ ಕೊಲ್ಹಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಹಾಗೂ ಅಕ್ಕಿಚೀಲಗಳೊಂದಿಗೆ ಧಾರವಾಡ ಕಡೆ ಹೊರಟಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ಮುಂದೆ ಹೋಗುತ್ತಿದ್ದ ಟ್ರ್ಯಾಕ್ಟರ್ ಓವರ್ ಟೇಕ್ ಮಾಡಲು ಹೋದ ಲಾರಿ ಡ್ರೈವರ್ ಈ ಭೀಕರ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಲ್ಲದೇ ಮೃತರೆಲ್ಲರೂ ಮಹಾರಾಷ್ಟ್ರದ ಕೊಲ್ಹಾಪುರದವರಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ.

    ಸದ್ಯ ಗಾಯಾಳುಗಳಾದ ಸಹನಾ ಬಸವರಾಜ, ಬಾಬಾಸಾಬ ಚೌಗ್ಲಿ, ಓಂಕಾರ ಸುತಾರ, ಸಂಜಯ್ ಫಿಶೇ, ಚಂದ್ರಕಾಂತ ಪಾಂಡುರಂಗ, ಸುಲೋಚನ ಮಧುಕರ್, ತಾನಾಜೀ ಸೋಮಕಲ್, ಅನಿತಾ ರಾವುತ್, ಅನಿತಾ ಸಂಕಲ್, ಶುಭಂ ಚೌಗ್ಲಿ, ಮೊಹಮ್ಮದ್ ಫಯಾಜ್, ಸುಪ್ರಿಯಾ ಪಾಟೀಲ್, ಸಿಮ್ರಾನ್ ಪ್ರತಿಕ್, ರಾಜಾ ಪ್ರಾನನ್ಸ್, ಜ್ಯೋತಿ ರಾಯಿಜನ್, ದಿಗ್ವಿಜಯ ಬಾಪೂಸೊ, ಪ್ರತಿಕ್ಷ ರಮೇಶ್, ಕೃಷ್ಣ ಕಲ್ಲೂರ, ಸರೋಜ ಸತೀಶ್, ಮಹೇಂದ್ರ ರಾಯ್ಸನ್, ತೇಕ್ಸಿಂಗ್ ಹಾಗೂ ಸಂಜಯ್ ಸಿಂಧೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

  • ಕಿಮ್ಸ್ ಅಧೀಕ್ಷಕರಿಗೂ ಅಂಟಿದ ಕೊರೊನಾ

    ಕಿಮ್ಸ್ ಅಧೀಕ್ಷಕರಿಗೂ ಅಂಟಿದ ಕೊರೊನಾ

    ಹುಬ್ಬಳ್ಳಿ: ಹಗಲಿರುಳು ಎನ್ನದೇ ದುಡಿಯುತ್ತಿದ್ದ ಕೊರೊನಾ ವಾರಿಯರ್ಸ್ ಗೂ ಸದ್ಯ ಕೋವಿಡ್ 19 ಕಂಟಕವಾಗಿ ಪರಿಣಮಿಸಿದೆ. ಅಂತೆಯೇ ಕಿಮ್ಸ್ ಆಸ್ಪತ್ರೆಯ ಅಧೀಕ್ಷಕರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.

    ಇಷ್ಟು ದಿನ ಬಿಡುವಿಲ್ಲದೇ ಕೊವಿಡ್ ನಿಯಂತ್ರಣದ ಕೆಲಸದಲ್ಲಿ ಅಧೀಕ್ಷಕರು ತೊಡಗಿಕೊಂಡಿದ್ದರು. ಸದ್ಯ ಅಧೀಕ್ಷಕರಿಗೆ ಕೊರೊನಾ ಸೋಂಕು ಅಂಟಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಈ ಆಸ್ಪತ್ರೆಯ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿಗೆ ಕಂಟಕ ಶುರುವಾಗಿದೆ. ಅಲ್ಲದೆ ಜಿಲ್ಲಾಡಳಿತ ವಿವಿಧ ಮೀಟಿಂಗ್ ಗಳಲ್ಲೂ ಭಾಗವಹಿಸಿದ್ದರು. ಹೀಗಾಗಿ ವಿವಿಧ ಅಧಿಕಾರಿಗಳಿಗೆ ಆತಂಕ ಶುರುವಾಗಿದೆ.