Tag: kidnapp

  • ವೃದ್ಧಾಶ್ರಮದ ಹೆಸರಿನಲ್ಲಿ ಆಸ್ತಿ ಕಬಳಿಸಲು ನಿವೃತ್ತ ಪಿಎಸ್‍ಐಯನ್ನೇ ಕಿಡ್ನಾಪ್ ಮಾಡಿದ್ರು!

    ವೃದ್ಧಾಶ್ರಮದ ಹೆಸರಿನಲ್ಲಿ ಆಸ್ತಿ ಕಬಳಿಸಲು ನಿವೃತ್ತ ಪಿಎಸ್‍ಐಯನ್ನೇ ಕಿಡ್ನಾಪ್ ಮಾಡಿದ್ರು!

    ತುಮಕೂರು: ಸಮಾಜದಲ್ಲಿ ನೊಂದಿರುವ ಹಿರಿಯ ಜೀವಗಳಿಗೆ ಕೊನೆಗಾಲದಲ್ಲಿ ಸಂತಸದಿಂದ ಕಾಲ ಕಳೆಯುವಂತೆ ಆಗಲಿ. ಹಣದ ಅಮಲಿನಲ್ಲಿ ತೇಲುವ ಮಕ್ಕಳು ಪೋಷಕರನ್ನು ಸರಿಯಾಗಿ ನೋಡಿಕೊಳ್ಳದಿದ್ರೆ ಇಲ್ಲಾದ್ರು ನೆಮ್ಮದಿ ಜೀವನ ಸಿಗಲಿ ಅಂತ ವೃದ್ಧಾಶ್ರಮಗಳನ್ನು ಮಾಡ್ತಾರೆ.

    ಆದ್ರೆ ಮಾಜಿ ಗೃಹ ಸಚಿವರೊಬ್ಬರ ಜಿಲ್ಲೆಯಲ್ಲೊಂದು ಉಲ್ಟಾ ಕೇಸ್. ಮೂಲತಃ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಎನ್ ಗೋಪಾಲಯ್ಯ ಎಂಬವರು ಬೆಂಗಳೂರಿನ ಎಮ್‍ಎಸ್ ಬಿಲ್ಡಿಂಗ್‍ನಲ್ಲಿರುವ ಸಹಕಾರಿ ಇಲಾಖೆ ಉಪ ಕಾರ್ಯದರ್ಶಿ. ಆಸ್ತಿ ಕಬಳಿಸುವ ಉದ್ದೇಶದಿಂದ ವೃದ್ಧಾಶ್ರಮ ನಡೆಸುವ ನಾಟಕ ಮಾಡ್ತಿದ್ದಾರೆ ಅನ್ನೋ ಆರೋಪ ಎದುರಾಗಿದೆ.

    ಗೋಪಾಲಯ್ಯ ಶಿರಾ ಪಟ್ಟಣದ ನಿವೃತ್ತ ಪಿಎಸ್‍ಐ ನರಸಿಂಹಯ್ಯರನ್ನು ಕಿಡ್ನಾಪ್ ಮಾಡಿ ಆಸ್ತಿ ಬರೆಸಿಕೊಳ್ಳಲು ಸಂಚು ರೂಪಿಸಿದ್ದಾರೆ ಅಂತ ಸ್ವತಃ ನರಸಿಂಹಯ್ಯ ಪತ್ನಿ ತಿಪ್ಪಮ್ಮ ಶಿರಾ ಠಾಣೆಯಲ್ಲಿ ದೂರು ನೀಡಿದ್ದಾರೆ.

    ನನ್ನ ಗಂಡನ ಬಳಿ 60 ಕೋಟಿಗೂ ಹೆಚ್ಚು ಆಸ್ತಿ ಇದ್ದು, ನಿವೃತ್ತ ಜೀವನ ನಡೆಸುವ ಉದ್ದೇಶದಿಂದ 9 ಎಕರೆ ಜಮೀನು ಖರೀದಿ ಮಾಡಲಾಗಿತ್ತು. ಅದರಲ್ಲಿ ಈಗಾಗಲೇ 3 ಎಕರೆ ಜಮೀನು ಗೋಪಾಲಯ್ಯನೇ ಬರೆಸಿಕೊಂಡಿದ್ದು, ಇನ್ನುಳಿದ ಜಮೀನು ಕಬಳಿಸುವ ಪ್ಲಾನ್ ಮಾಡಿದ್ದಾರೆ ಅಂತ ಪತ್ನಿ ದೂರಿನಲ್ಲಿ ಹೇಳಿದ್ದಾರೆ.

    ವೃದ್ಧಾಶ್ರಮ ಹಾಗೂ ಅನಾಥಾಶ್ರಮ ನಡೆಸಲು 3 ಎಕರೆ ದಾನ ಕೊಡಿ ಎಂದು ದುಂಬಾಲು ಬಿದ್ದ ಗೋಪಾಲಯ್ಯ, ಅನಾಥಾಶ್ರಮದ ಬದಲು ತನ್ನ ಮಗಳು ಹಾಗೂ ಮಗನ ಹೆಸರಿಗೆ 3 ಎಕರೆ ಜಮೀನನ್ನು ಬರೆಸಿಕೊಂಡಿದ್ದಾರೆ. ನರಸಿಂಹಯ್ಯ ಕಟ್ಟಿಸಿದ ಮನೆಯಿಂದ ಅವರನ್ನೇ ಹೊರಹಾಕಿ ತನ್ನ ಮಗಳ ಹೆಸರಿಗೆ ಮನೆ ಖಾತೆ ಮಾಡಿಸಿಕೊಂಡಿದ್ದಾರೆ. 8 ಜನ ಮಕ್ಕಳ ನಡುವೆಯೇ ವೈಷಮ್ಯ ತಂದಿಟ್ಟು ಆಸ್ತಿ ಲಪಟಾಯಿಸುವ ಯತ್ನ ನಡೆಸಿದ್ದಾರಂತೆ.

    ಡಿಎಸ್‍ಎಸ್ ಮುಖಂಡ ಭರತ್ ಕುಮಾರ್ ಸಹಕಾರಿ ಇಲಾಖೆ ಉಪಕಾರ್ಯದರ್ಶಿ 420 ಕೆಲಸಕ್ಕೆ ಸಾಥ್ ನೀಡುತ್ತಿದ್ದಾನೆ. ಗ್ಯಾಂಗ್ರಿನ್‍ನಿಂದ ಬಳಲುತ್ತಿದ್ದ ನರಸಿಂಹಯ್ಯರ ಕಾಲು ತೆಗೆಯಲಾಗಿತ್ತು. ಕಿಡ್ನ್ಯಾಪ್ ಆಗಿದ್ದಾರೆ ಅಂತ ದೂರು ಕೊಟ್ರೂ ಕಾನೂನು ಸಚಿವರ ಜಿಲ್ಲೆಯ ಖಾಕಿಗಳು ಕೈ ಕಟ್ಟಿ ಕುಳಿತಿದ್ದಾರೆ ಅನ್ನೋದು ವೃದ್ಧ ಪತ್ನಿ ಮತ್ತು ಮಕ್ಕಳ ಆರೋಪವಾಗಿದೆ.

  • 20ರ ಹುಡ್ಗಿ ಬೇಕುಂತ ಕಿಡ್ನ್ಯಾಪ್ ಮಾಡಿ ಮಧ್ಯರಾತ್ರಿ ತಾಳಿ ಕಟ್ಟಿ ರೇಪ್ ಮಾಡ್ದ!

    20ರ ಹುಡ್ಗಿ ಬೇಕುಂತ ಕಿಡ್ನ್ಯಾಪ್ ಮಾಡಿ ಮಧ್ಯರಾತ್ರಿ ತಾಳಿ ಕಟ್ಟಿ ರೇಪ್ ಮಾಡ್ದ!

    ಬೆಂಗಳೂರು: ನಡು ವಯಸ್ಸಿನ ವ್ಯಕ್ತಿಯೊಬ್ಬನಿಗೆ 20 ರ ಹರೆಯದ ಹುಡುಗಿ ಬೇಕಿತ್ತು. ನಿಮ್ಮ ಮಗಳನ್ನ ಮದುವೆ ಮಾಡಿಕೊಡಿ ಅಂತಾ ದಿನಾಲೂ ದುಂಬಾಲು ಬೀಳುತ್ತಿದ್ದ. ನಿನಗೆ ಹೆಣ್ಣು ಕೊಡಲ್ಲ ಅಂದಿದ್ದಕ್ಕೆ ಹುಡುಗಿಯನ್ನ ಹೊತ್ತೊಯ್ದು ನಡು ರಾತ್ರಿಯಲ್ಲಿ ತಾಳಿ ಕಟ್ಟಿ ಅತ್ಯಾಚಾರವೆಸಗಿದ್ದಾನೆ.

    ಹೌದು. ಬೆಂಗಳೂರಿನ ದಾಸರಹಳ್ಳಿಯ ನಿವಾಸಿ ಸಂತೋಷ್ ಎಂಬಾತನಿಗೆ 20ರ ಹರೆಯದ ಹುಡುಗಿ ಬೇಕಂತೆ. ಹೀಗಾಗಿ ನಿಮ್ಮ ಮಗಳನ್ನ ಮದುವೆ ಮಾಡಿಕೊಡಿ ಅಂತಾ ತನ್ನ ಎದುರು ಮನೆಯವರ ಬೆನ್ನು ಬಿದ್ದಿದ್ದ. ಈಗಾಗಲೇ ಮದುವೆಯಾಗಿ ಹೆಂಡ್ತಿ ಮಕ್ಕಳಿದ್ದು, ಅವರಿಂದ ದೂರವಿರೋ ಇವನಿಗೆ ನೆರೆಮನೆಯವರು ಈ ವಿಚಾರವನ್ನು ನಿರಾಕರಿಸಿದ್ದರು. ಯಾವ ಪೋಷಕರು ಕೂಡ ಆ ಕೆಲಸ ಮಾಡಲ್ಲ. ಹೀಗಾಗಿ ಸಂತೋಷನ ಕೀಚಕನ ಆಸೆಗೆ ತಣ್ಣೀರು ಬಿದ್ದಿತ್ತು.

    ಆದ್ರೆ ಮೂರು ದಿನಗಳ ಹಿಂದೆ ಅಂದ್ರೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಹುಡುಗಿ ಎಂದಿನಂತೆ ತನ್ನ ಅಜ್ಜಿಯ ಮನೆಗೆ ಮಲಗಲು ಹೋಗುತ್ತಿದ್ದಳು. ಈ ವೇಳೆ ಸಂತೋಷ ಹುಡುಗಿಯನ್ನ ತನ್ನ ಮನೆಗೆ ಹೊತ್ತೊಯ್ದು ಬಲವಂತವಾಗಿ ತಾಳಿ ಕಟ್ಟಿದ್ದಾನೆ. ಬಳಿಕ ಬಲವಂತವಾಗಿಯೇ ಅತ್ಯಾಚಾರ ಕೂಡ ಎಸಗಿದ್ದಾನೆ. ಇತ್ತ ಅಜ್ಜಿ ಮನೆಗೆ ಮಗಳು ಹೋಗಿಲ್ಲ..? ಎಲ್ಲಿಗೆ ಹೋದ್ಲು..? ಅಂತಾ ಹುಡುಕಾಡಿದಾಗ ಮಾರನೇ ದಿನ ಮಧ್ಯಾಹ್ನದ ವೇಳೆಗೆ ಸಂತೋಷನ ಮನೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದು ಬೆಳಕಿಗೆ ಬಂದಿದೆ.

    ಆರೋಪಿ ಸಂತೋಷ್ ವಿರುದ್ಧ ಕಿಡ್ನ್ಯಾಪ್ ಮಾಡಿ ಅಕ್ರಮವಾಗಿ ಕೂಡಿಟ್ಟು ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಸಂತೋಷನನ್ನ ಪೊಲೀಸರು ಜೈಲಿಗಟ್ಟಿದ್ದಾರೆ.

  • ವಿಕಲಚೇತನ ಅಪ್ರಾಪ್ತೆಯ ಅಪಹರಣ: ಮಗಳನ್ನು ಹುಡುಕಿಕೊಡುವಂತೆ ಕುಟುಂಬ ಡಿಎಸ್‍ಪಿ ಮೊರೆ

    ವಿಕಲಚೇತನ ಅಪ್ರಾಪ್ತೆಯ ಅಪಹರಣ: ಮಗಳನ್ನು ಹುಡುಕಿಕೊಡುವಂತೆ ಕುಟುಂಬ ಡಿಎಸ್‍ಪಿ ಮೊರೆ

    ಕೊಪ್ಪಳ: ಬಯಲು ಶೌಚಕ್ಕೆ ಹೋದ ವಿಕಲಚೇತನ ಅಪ್ರಾಪ್ತ ಬಾಲಕಿಯನ್ನ ಅಪಹರಣ ಮಾಡಿರೋ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕೊಪ್ಪಳ ತಾಲೂಕಿನ ಮತ್ತೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮಾತು ಬಾರದ, ಶ್ರವಣದೋಷವುಳ್ಳ 16 ವರ್ಷದ ಬಸಮ್ಮ ಅಪಹರಣಕ್ಕೊಳಗಾದ ಬಾಲಕಿ.

    ಜುಲೈ 28 ರಂದು ರಾತ್ರಿ ಬಹಿರ್ದೆಸೆಗೆ ಹೋದಾಗ ಮತ್ತೂರು ಗ್ರಾಮದ ನಾಗರಾಜ (23) ಎನ್ನುವ ಯುವಕ ಅಪಹರಣ ಮಾಡಿದ್ದಾನೆಂದು ಬಸಮ್ಮ ತಂದೆ ಕೊಟ್ರಪ್ಪ ಅಳವಂಡಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

    ಈ ಬಗ್ಗೆ ದೂರು ದಾಖಲಾದರೂ ಆರೋಪಿಯನ್ನ ಬಂಧಿಸಲು ಪೊಲೀಸರು ವಿಳಂಬ ಮಾಡ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಗಳನ್ನ ಹುಡುಕಿಕೊಡಿ, ಆರೋಪಿಯನ್ನು ಬಂಧಿಸಿ ಅಂತ ಕೊಪ್ಪಳ ಡಿಎಸ್‍ಪಿ ಶ್ರೀಕಾಂತ ಕಟ್ಟಿಮನಿಯವರಿಗೆ ನೊಂದ ಕುಟುಂಬ ಮೊರೆ ಹೋಗಿದೆ.

  • ಪಕ್ಕದ ಮನೆಯವಳಿಂದಲೇ 4 ವರ್ಷದ ಹೆಣ್ಣು ಮಗು ಕಿಡ್ನಾಪ್?

    ಪಕ್ಕದ ಮನೆಯವಳಿಂದಲೇ 4 ವರ್ಷದ ಹೆಣ್ಣು ಮಗು ಕಿಡ್ನಾಪ್?

    ಬಳ್ಳಾರಿ: ನಾಲ್ಕು ವರ್ಷದ ಹೆಣ್ಣು ಮಗುವನ್ನು ಪಕ್ಕದ ಮನೆಯ ಮಹಿಳೆಯೇ ಅಪಹರಿಸಿಕೊಂಡು ಹೋಗಿದ್ದಾಳೆ ಎನ್ನುವ ಆರೋಪವೊಂದು ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಕೇಳಿಬಂದಿದೆ.

    ಕಮಲಾಪುರ ಪಟ್ಟಣದ ಕುಂಟೆ ಎರಿಯಾ ನಿವಾಸಿಯಾದ ನೀಲಮ್ಮ ವಿರೇಶಪ್ಪ ದಂಪತಿಯ ಮಗಳಾದ ಮಲ್ಲೇಶ್ವರಿ ಎಂಬಾತ ಅಪಹರಣವಾದ ಬಾಲಕಿ.

    ಬಾಲಕಿ ಮಲ್ಲೇಶ್ವರಿ ಜುಲೈ 18 ರಂದು ಚಾಕಲೇಟ್ ತರಲು ಹೋದ ವೇಳೆಯಲ್ಲಿ ಪಕ್ಕದ ಮನೆಯ ಮಹಿಳೆ ಅಂಬಮ್ಮ ಅಪಹರಿಸಿಕೊಂಡು ಹೋಗಿದ್ದಾಳೆ ಎಂದು ಆರೋಪಿಸಿ ಮಲ್ಲೇಶ್ವರಿ ಪೋಷಕರು ಕಮಲಾಪುರ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲು ಮಾಡಿದ್ದಾರೆ.

    ದೂರು ದಾಖಲಿಸಿಕೊಂಡಿರುವ ಕಮಲಾಪುರ ಪೊಲೀಸ್ ಠಾಣೆಯ ಪೊಲೀಸರು ಅಪಹರಣವಾದ ಬಾಲಕಿ ಮಲ್ಲೇಶ್ವರಿಯನ್ನ ಪತ್ತೆ ಮಾಡಲು ಹಾಗೂ ಕಿಡ್ನಾಪ್ ಮಾಡಿದ ಆರೋಪಿ ಮಹಿಳೆ ಅಂಬಮ್ಮರ ಬಗ್ಗೆ ಪ್ರಕಟಣೆ ಹೊರಡಿಸಿ ಬಾಲಕಿಯನ್ನು ಪತ್ತೆ ಮಾಡಲು ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.

  • ಅಣ್ಣನಿಂದಲೇ ತಮ್ಮನ ಕುಟುಂಬ ಕಿಡ್ನ್ಯಾಪ್- ಸಚಿವೆ ಉಮಾಶ್ರೀ ಆಪ್ತನಿಂದ ಕೃತ್ಯ

    ಅಣ್ಣನಿಂದಲೇ ತಮ್ಮನ ಕುಟುಂಬ ಕಿಡ್ನ್ಯಾಪ್- ಸಚಿವೆ ಉಮಾಶ್ರೀ ಆಪ್ತನಿಂದ ಕೃತ್ಯ

    ಬಾಗಲಕೋಟೆ: ಆಸ್ತಿ ವಿಚಾರವಾಗಿ ನಡೆದ ಕಲಹದ ಹಿನ್ನೆಲೆಯಲ್ಲಿ ಅಣ್ಣನಿಂದಲೇ ತಮ್ಮನ ಕುಟುಂಬ ಕಿಡ್ನ್ಯಾಪ್ ಆಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಬನಹಟ್ಟಿ ಪಟ್ಟಣದಲ್ಲಿ ನಡೆದಿದೆ.

    ಶಂಕರ್ ಉರ್ಫ್ ರಾಜಶೇಕರ್ ಸೋರಗಾವಿ ಸಹೋದರನ ಕುಟುಂಬಸ್ಥರನ್ನ ಕಿಡ್ನ್ಯಾಪ್ ಮಾಡಿಸಿರುವ ವ್ಯಕ್ತಿ. ಮೂಲತಃ ತೇರದಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿರುವ ಶಂಕರ್ ಸೋರಗಾವಿ, ಸಚಿವೆ ಉಮಾಶ್ರೀ ಆಪ್ತ ಸಹ ಆಗಿದ್ದಾನೆ.

    ಈ ಹಿಂದೆ ಆಸ್ತಿ ವಿಚಾರವಾಗಿ ಅಣ್ಣ ಶಂಕರ್ ಹಾಗೂ ತಮ್ಮ ಯಶವಂತ್ ಸೋರಗಾವಿ ಮಧ್ಯೆ ಕಲಹವಾಗಿತ್ತು. ಅಲ್ಲದೆ ಶಂಕರ್ ಯಶವಂತ ಹಾಗೂ ಮನೆಯವರ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಈ ಬಗ್ಗೆ ಕಳೆದ ವರ್ಷ ಆಕ್ಟೋಬರ್ 14ರಂದು ಹಲ್ಲೆಗೊಳಗಾದ ಯಶವಂತ್ ಕುಟುಂಬದವರು ಆಗಿನ ಪೊಲೀಸ್ ವರೀಷ್ಠಾಧಿಕಾರಿ ಎಂಎನ್ ನಾಗರಾಜ್ ಬಳಿ ದುಗುಡ ಹೇಳಿಕೊಂಡು ದೂರು ದಾಖಲಿಸಿದ್ದರು.

    ಆದ್ರೆ ಕಳೆದ ತಡರಾತ್ರಿ ಯಶವಂತ ಅವರ ಮನೆಗೆ ನುಗ್ಗಿದ್ದ ಅಪಹರಣಕಾರರು ಯಶವಂತ್ ಸೋರಗಾವಿ, ಪತ್ನಿ ಮಂಜುಳಾ, ಮಕ್ಕಳಾದ ವಿಶಾಲ್ ಪ್ರಶಾಂತ್ ಹಾಗೂ ವಿದ್ಯಾಶ್ರೀ ಅವರ ಮೇಲೆ ಹಲ್ಲೆ ನಡೆಸಿ, ಕ್ರೂಸರ್ ವಾಹನದಲ್ಲಿ ಅವ್ರನ್ನೆಲ್ಲ ಹೊತ್ತೊಯ್ದಿದ್ದಾರೆ. ಈ ಎಲ್ಲ ಕೃತ್ಯಕ್ಕೆ ಯಶವಂತ ಅಣ್ಣ ಶಂಕರ್ ಸೋರಗಾವಿ ಕಾರಣ ಎಂದು ಸ್ವತಃ ಯಶವಂತ್ ತಾಯಿ ಗೌರಮ್ಮ ಹೇಳಿದ್ದಾರೆ.

    ಸದ್ಯ ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಗೌರಮ್ಮ ಅವರು ಪ್ರಕರಣ ದಾಖಲಿಸಿದ್ದು, ಕಿಡ್ನ್ಯಾಪ್ ಆದ ಯಶವಂತ್ ಮನೆಯವರ ಹುಡುಕಾಟ ನಡೆಸಿದ್ದಾರೆ.

  • ಕಿಡ್ನ್ಯಾಪ್ ಪ್ರಕರಣದಲ್ಲಿ `ಎರಡು ಕನಸು’ ಚಿತ್ರದ ನಿರ್ದೇಶಕ ಸೇರಿ ಐವರ ಬಂಧನ

    ಕಿಡ್ನ್ಯಾಪ್ ಪ್ರಕರಣದಲ್ಲಿ `ಎರಡು ಕನಸು’ ಚಿತ್ರದ ನಿರ್ದೇಶಕ ಸೇರಿ ಐವರ ಬಂಧನ

    ಬೆಂಗಳೂರು: ರವಿ ಅಕ್ಷಯ ಅಡ್ವರ್ಟೈಸಿಂಗ್ ಮಾಲೀಕ ಪರಮೇಶ್‍ರನ್ನು ಬಸವೇಶ್ವರ ನಗರದ ಮನೆಯಿಂದ ಕಿಡ್ನ್ಯಾಪ್ ಮಾಡಿದ ಆರೋಪದ ಮೇಲೆ ಎರಡು ಕನಸು ಚಿತ್ರದ ನಿರ್ದೇಶಕ ಮದನ್‍ರನ್ನು ಪೊಲೀಸರು ಬಂಧಿಸಿದ್ದಾರೆ.

    ಚಿತ್ರದ ಪ್ರಮೋಷನ್‍ಗಾಗಿ ನಿರ್ದೇಶಕ ಮದನ್, ಪರಮೇಶ್‍ಗೆ 16.3 ಲಕ್ಷ ಹಣ ಕೊಟ್ಟಿದ್ದರು. ಚಿತ್ರದ ಪ್ರಮೋಷನ್ ಸರಿಯಾಗಿ ಮಾಡದ ಹಿನ್ನೆಲೆಯಲ್ಲಿ 8 ಲಕ್ಷ ರೂ. ಹಣ ವಾಪಸ್ ನೀಡುವಂತೆ ಕೇಳಿದ್ದರು. ಈ ನಡುವೆ ನಿರ್ದೇಶಕ ಮದನ್‍ರಿಂದ ಪರಮೇಶ್ ಅಂತರ ಕಾಯ್ದುಕೊಂಡಿದ್ದರು. ಪರಮೇಶ್ ಹಣ ಕೊಡಲು ನಿರಾಕರಿಸಿದಾಗ ಮದನ್ ತನ್ನ ಸಹಚರರಾದ ಚಲಪತಿ, ಕಿರಣ್, ಮೂರ್ತಿ ಮತ್ತು ಮೋಹನ್ ಜೊತೆಗೂಡಿ ಕಿಡ್ನ್ಯಾಪ್ ಪ್ಲಾನ್ ಮಾಡಿದ್ದಾರೆ.

    ಮೂರು ದಿನಗಳ ಹಿಂದೆ ಪರಮೇಶ್‍ರನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳು, ಬಳಿಕ ಬ್ಯಾಟ್ ಮತ್ತು ಬೆಲ್ಟ್‍ನಿಂದ ಪರಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ದೇವನಹಳ್ಳಿ ಹತ್ತಿರ ಡೈರೆಕ್ಟರ್ ಮದನ್ ಸೇರಿದಂತೆ ಐವರು ಆರೋಪಿಗಳನ್ನು ಶುಕ್ರವಾರ ರಾತ್ರಿ ಮಾಗಡಿ ರೋಡ್ ಪೊಲೀಸರು ಬಂಧಿಸಿದ್ದಾರೆ.

  • ಕಾಶ್ಮೀರದಲ್ಲಿ ಮದುವೆ ಮನೆಯಿಂದ ಕಿಡ್ನ್ಯಾಪ್ ಆಗಿದ್ದ ಯುವ ಸೈನ್ಯಾಧಿಕಾರಿ ಶವವಾಗಿ ಪತ್ತೆ!

    ಕಾಶ್ಮೀರದಲ್ಲಿ ಮದುವೆ ಮನೆಯಿಂದ ಕಿಡ್ನ್ಯಾಪ್ ಆಗಿದ್ದ ಯುವ ಸೈನ್ಯಾಧಿಕಾರಿ ಶವವಾಗಿ ಪತ್ತೆ!

    ಶ್ರೀನಗರ: ಸಂಬಂಧಿಕರ ಮದುವೆ ಮನೆಯಿಂದ ಕಿಡ್ನ್ಯಾಪ್ ಆಗಿದ್ದ ಯುವ ಸೈನ್ಯಾಧಿಕಾರಿಯೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

    ಶೋಪಿಯಾನ್ ಜಿಲ್ಲೆಯ ಹರ್ವೆನ್ ಪ್ರದೇಶದಲ್ಲಿ ಇಂದು ಬೆಳಗ್ಗೆ 22 ವರ್ಷದ ಉಮ್ಮರ್ ಫಯಾಜ್ ಶವ ಪತ್ತೆಯಾಗಿದ್ದು, ದೇಹದೊಳಗೆ ಗುಂಡು ಹೊಕ್ಕಿರುವುದು ಕಂಡು ಬಂದಿದೆ.

    ನಡೆದಿದ್ದೇನು?: ದಕ್ಷಿಣ ಕಾಶ್ಮೀರದ ಕುಲ್ಗಾನ್ ಗ್ರಾಮದ ನಿವಾಸಿಯಾಗಿರೋ ಉಮ್ಮರ್, ಸಂಬಂಧಿಕರ ಮದುವೆ ಇದೆ ಎಂದು ತನ್ನ ಕೆಲಸಕ್ಕೆ ರಜೆ ಹಾಕಿ ತೆರಳಿದ್ದರು. ಅಂತೆಯೇ ಮಂಗಳವಾರ ಸಂಜೆ ಮದುವೆಗೆ ತೆರಳಿದ್ದ ಅವರನ್ನು ಅಂದು ರಾತ್ರಿ 10 ಗಂಟೆ ಸುಮಾರಿಗೆ ಅಪಹರಿಸಲಾಗಿತ್ತು.

    ಸೈನ್ಯಾಧಿಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಚಾರ ತಿಳಿದ ಮೂವರು ಉಗ್ರರು, ಉಮ್ಮರ್ ಇದ್ದ ಸ್ಥಳಕ್ಕೆ ಗನ್‍ಗಳೊಂದಿಗೆ ಬಂದು ಮನೆಯಿಂದ ಹೊರಗೆಳೆದು ಬಳಿಕ ಅಲ್ಲಿಂದ ಅಪಹರಿಸಿದ್ದಾರೆ ಅಂತಾ ಸಂಬಂಧಿಕರು ತಿಳಿಸಿದ್ದಾರೆ.

    ಉಮ್ಮರ್ ಅಪಹರಣದಿಂದ ಆತಂಕಕ್ಕೀಡಾಗಿರೋ ಸಂಬಂಧಿಕರು ಜೀವಂತವಾಗಿ ಹಿಂದುರುಗಿ ಬರುತ್ತಾರೆ ಅಂತಾ ನಂಬಿದ್ದರು. ಈ ಬಗ್ಗೆ ಭಯದಿಂದಲೇ ಹೇಳಿಕೆ ನೀಡಿದ್ದರು. ಆದ್ರೆ ಇಂದು ಬೆಳಗ್ಗೆ ಉಮ್ಮರ್ ಶವವಾಗಿ ಪತ್ತೆಯಾಗಿದ್ದಾರೆ ಅಂದಾಗ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

    ಲೆಫ್ಟಿನೆಂಟ್ ದರ್ಜೆಯ ಅಧಿಕಾರಿ ಉಮರ್ ಫಯಾಜ್ 6 ತಿಂಗಳ ಹಿಂದಷ್ಟೇ ಸೇನೆಗೆ ಸೇರ್ಪಡೆಯಾಗಿದ್ದರು. ಅಲ್ಲದೇ ಇವರು ಉತ್ತಮ ವಾಲಿಬಾಲ್ ಹಾಗೂ ಹಾಕಿ ಆಟಗಾರರೂ ಕೂಡ ಆಗಿದ್ದರು. ಪುಲ್ವಾಮಾ, ಶೋಪಿಯಾನ, ಅನಂತ್ನಾಗ್ ಹಾಗೂ ಕುಲ್ಗಾಮ್ ಪ್ರದೇಶದಲ್ಲಿ ಉಗ್ರರ ಉಪಟಳವಿದೆ. ಇದರಿಂದ ತನಗೆ ಅಪಾಯವಿದೆ ಅಂತಾ ಗೊತ್ತಿದ್ದರೂ ಫಾರೂಕ್ ಯಾವುದೇ ಶಸ್ತ್ರಾಸ್ತ್ರಗಳಿಲ್ಲದೇ ಮದುವೆ ಮನೆಗೆ ತೆರಳಿರುವುದರಿಂದ ಈ ಘಟನೆ ಸಂಭವಿಸಿದೆ ಅಂತಾ ಮೂಲಗಳು ತಿಳಿಸಿವೆ.

    ಸೇನಾ ಪಡೆಗಳು ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಫಾರೂಕ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಯಾವೊಬ್ಬ ಅಧಿಕಾರಿಯೂ ಉಗ್ರರ ಉಪಟಳ ತೀವ್ರವಾಗಿರುವ ಪ್ರದೇಶಗಳ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಬಾರದು ಎಂದು ರಾಜ್ಯ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

  • ತಾಯಿಯ ಮಡಿಲು ಸೇರಿದ ಪುಟಾಣಿ- ದುಷ್ಕರ್ಮಿಗಳು ಎಸ್ಕೇಪ್

    ತಾಯಿಯ ಮಡಿಲು ಸೇರಿದ ಪುಟಾಣಿ- ದುಷ್ಕರ್ಮಿಗಳು ಎಸ್ಕೇಪ್

    ಬೆಂಗಳೂರು: ಇಲ್ಲಿನ ಸಿದ್ದಾಪುರದಲ್ಲಿ ಅಪಹರಣವಾಗಿದ್ದ ಹೆಣ್ಣು ಮಗು ಕೊನೆಗೂ ಹೆತ್ತವರ ಕೈಸೇರಿದೆ. ಮೂರು ದಿನಗಳ ಹಿಂದೆ ಗುಟ್ಟೆಪಾಳ್ಯ ನಿವಾಸಿ ಶಬನಮ್ ಹಾಗೂ ಸೈಯದ್ ದಂಪತಿಯ ಮೂರು ವರ್ಷದ ಮಗು ಕತೀಜಾರನ್ನು ಯಾರೋ ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿದ್ರು.

    ಮನೆಯ ಪಕ್ಕದ ಅಂಗಡಿಗೆ ಐಸ್ ತರಲು ಹೋದ ಮಗುವನ್ನು ಎತ್ತಿಕೊಂಡೋಗಿದ್ರು. ಸಿಸಿಟಿವಿಯಲ್ಲಿ ಆ ದೃಶ್ಯ ಸೆರೆಯಾಗಿತ್ತು. ಸಿದ್ದಾಪುರ ಪೊಲೀಸರು ಮಗುಗಾಗಿ ಹುಡುಕಾಟ ನಡೆಸ್ತಿದ್ರು. ಆದ್ರೆ ಸೋಮವಾರ ಮಧ್ಯಾಹ್ನ ಮಡಿವಾಳದ ದರ್ಗಾ ಬಳಿ ಬಂದ ಮಹಿಳೆಯೊಬ್ಬಳು ಮಗುವನ್ನು ಬಿಟ್ಟು ಎಸ್ಕೇಪ್ ಆಗಿದ್ದಾಳೆ.

    ಇತ್ತ ಮಾಧ್ಯಮಗಳಲ್ಲಿ ಮಗು ನಾಪತ್ತೆ ಸುದ್ದಿ ನೋಡಿದ್ದ ವ್ಯಕ್ತಿ ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಬಂದ ಮಡಿವಾಳ ಪೊಲೀಸ್ರು ಮಗುವನ್ನು ಹೆತ್ತವರಿಗೆ ಹಸ್ತಾಂತರ ಮಾಡಿದ್ದಾರೆ. ಇನ್ನೂ, ಆರೋಪಿಗಳು ಮಗುವನ್ನು ಕಿಡ್ನಾಪ್ ಮಾಡಿ ಬಸ್ಸಿನಲ್ಲಿ ಬೇರೆ ಕಡೆಗೆ ಕರೆದೊಯ್ದಿದ್ದರಂತೆ. ಒರ್ವ ಮಹಿಳೆಯ ಜತೆ ಮನೆಯೊಂದರಲ್ಲಿ ಬಚ್ಚಿಡಲಾಗಿತ್ತಂತೆ. ಆದ್ರೆ ಮಾಧ್ಯಮಗಳಲ್ಲಿ ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿರುವುದು ನೋಡಿದ ಅರೋಪಿಗಳು ಮಗು ಬಿಟ್ಟು ಪರಾರಿಯಾಗಿರಬಹುದು ಎನ್ನಲಾಗುತ್ತಿದೆ.

    ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

    https://www.youtube.com/watch?v=3AexHtfodPM

  • ಎಟಿಎಂನಿಂದ ಹಣ ಡ್ರಾ ಮಾಡಿ ಹೊರಬಂದ ವ್ಯಕ್ತಿ ಅಪಹರಣ!

    ಎಟಿಎಂನಿಂದ ಹಣ ಡ್ರಾ ಮಾಡಿ ಹೊರಬಂದ ವ್ಯಕ್ತಿ ಅಪಹರಣ!

    ಬೆಂಗಳೂರು: ಪೊಲೀಸ್ ಸ್ಟೇಷನ್ ಕೂಗಳತೆ ದೂರದಲ್ಲೇ ವ್ಯಕ್ತಿಯನ್ನು ಅಪಹರಣ ಮಾಡಿರೋ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

    ಮಾರುತಿ ಅಪಹರಣಕ್ಕೊಳಗಾದ ವ್ಯಕ್ತಿ. ಪೀಣ್ಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ಮೆಕ್ಯಾನಿಕ್ ಆಗಿ ಮಾರುತಿ ಕೆಲಸ ಮಾಡ್ತಾ ಇದ್ದರು. ಸ್ನೇಹಿತ ಹಣ ಕೇಳಿದ್ದರಿಂದ ಹಣ ಡ್ರಾ ಮಾಡಲೆಂದು ಎಟಿಎಂಗೆ ಹೋಗಿದ್ದರು. ಅಂತೆಯೇ ಹಣ ಡ್ರಾ ಮಾಡಿ ಹೊರ ಬರುತ್ತಿದ್ದಂತೆಯೇ ಕಾರಲ್ಲಿ ಬಂದ ದುಷ್ಕರ್ಮಿಗಳು ಮಾರುತಿ ಅವರನ್ನು ಅಪಹರಣ ಮಾಡಿದ್ದಾರೆ.

    ಕಾರಿನಲ್ಲಿ ನಾಲ್ವರು ಅಪಹರಣಕಾರರು ಇದ್ದರು ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಅಡ್ಡಹೆಸರಿನಿಂದ ಎಡವಟ್ಟು: ಅಮಾಯಕ ಯುವಕನನ್ನ ಅಪಹರಿಸಿ ಹಲ್ಲೆ!

    ಅಡ್ಡಹೆಸರಿನಿಂದ ಎಡವಟ್ಟು: ಅಮಾಯಕ ಯುವಕನನ್ನ ಅಪಹರಿಸಿ ಹಲ್ಲೆ!

    ಬೆಳಗಾವಿ: ಅಡ್ಡಹೆಸರಿನ ತಪ್ಪು ಗ್ರಹಿಕೆಯಿಂದ ಯುವಕನೊಬ್ಬನನ್ನು ಅಪಹರಿಸಿ ಹಲ್ಲೆ ನಡೆಸಿದ ಘಟನೆಯೊಂದು ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.

    ಹಲ್ಲೆಗೊಳಗಾದವನನ್ನು ಟಿಳಕವಾಡಿಯ ರೋಷನ್ ಅಲಿಯಾಸ್ ಟವರ್ ಎಂದು ಗುರುತಿಸಲಾಗಿದೆ. ಟಿಳಕವಾಡಿಯಲ್ಲಿ ಟವರ್ ಅನ್ನೋ ಅಡ್ಡಹೆಸರು ಇರುವ ಇಬ್ಬರು ವ್ಯಕ್ತಿಗಳಿದ್ದಾರೆ. ಬೇರೊಬ್ಬ ಟವರ್ ಹೆಸರಿನ ಯುವಕನನ್ನು ಅಪಹರಿಸಲು ಸ್ಕೇಚ್ ರೂಪಿಸಿದ್ದ ದುಷ್ಕರ್ಮಿಗಳು ಇದೇ ಅಡ್ಡಹೆಸರು ಇರೋ ಅಮಾಯಕ ಯುವಕ ರೋಷನ್‍ನನ್ನು ಬೆಳಗಾವಿಯ ಆರ್.ಪಿ.ಡಿ ಕಾಲೇಜು ಬಳಿಯಿಂದ ಅಪಹರಿಸಿ ಹಲ್ಲೆ ಮಾಡಿದ್ದಾರೆ.

    ಸದ್ಯ ಹಲ್ಲೆಗೊಳಗಾದ ಟವರ್ ಅಲಿಯಾಸ್ ರೋಷನ್ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಘಟನೆ ಸಂಬಂಧ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.