Tag: kichcha Sudeepa

  • ಆಗಸ್ಟ್ 19ರಂದು ಭಾರತದಾದ್ಯಂತ ವಿಕ್ರಾಂತ್ ರೋಣ ರಿಲೀಸ್

    ಆಗಸ್ಟ್ 19ರಂದು ಭಾರತದಾದ್ಯಂತ ವಿಕ್ರಾಂತ್ ರೋಣ ರಿಲೀಸ್

    ಬೆಂಗಳೂರು: ದುಬೈನ ಬುರ್ಜ್ ಖಲೀಫಾದ 148ನೇ ಮಹಡಿಯಲ್ಲಿ ಟೈಟಲ್ ಲೋಗೋ ರಿವೀಲ್ ಮಾಡಿರುವ ಮೂಲಕ ಭಾರೀ ಸುದ್ದಿಯಾದ ವಿಕ್ರಾಂತ್ ರೋಣ ಸಿನಿಮಾದಿಂದ ಇದೀಗ ರೋಮಾಂವನಕಾರಿ ಸುದ್ದಿಯೊಂದು ಹೊರಬಿದ್ದಿದೆ.

    ಹೌದು. ವಿಕ್ರಾಂತ ರೋಣ ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

    ಈ ಸಂಬಂಧ ಟ್ವೀಟ್ ಮಾಡಿರುವನಟ ಕಿಚ್ಚ ಸುದೀಪ್, ವಿಕ್ರಾಂತ್ ರೋಣ ಸಿನಿಮಾದ ಚಿತ್ರೀಕರಣ ಸಿದ್ಧತೆ ಮತ್ತು ಪ್ರಕ್ರಿಯೆಯ ಆನಂದವನ್ನು ಅನುಭವಿಸಿದ ನಂತರ ಈಗ ರೋಮಾಂಚನಕಾರಿ ಸುದ್ದಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಸಮಯ. ವಿಕ್ರಾಂತ ರೋಣ ಸಿನಿಮಾ ಆಗಸ್ಟ್ 19 ರಂದು ಭಾರತದಾದ್ಯಂತ ಬಿಡುಗಡೆಗೊಳ್ಳುತ್ತಿದೆ ಎಂದು ತಿಳಿಸಲು ನಮ್ಮ ವಿಕ್ರಾಂತ್ ರೋಣ ತಂಡವು ಹರ್ಷಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    https://twitter.com/KicchaSudeep/status/1382570109034635274

    ಇದೇ ವರ್ಷ ಜನವರಿ 31ರಂದು ದುಬೈನ ಬುರ್ಜ್ ಖಲೀಫಾದ 148ನೇ ಮಹಡಿಯಲ್ಲಿ ಟೈಟಲ್ ಲೋಗೋ ರಿವೀಲ್ ಮಾಡಲಾಗಿತ್ತು. ಇದರ ಜೊತೆಗೆ 2 ಸಾವಿರ ಅಡಿ ಎತ್ತರದ ವರ್ಚೂವಲ್ ಪೋಸ್ಟರ್ ಕೂಡ ರಿಲೀಸ್ ಆಗಿತ್ತು. ಇದೇ ವೇಳೆ ಕಿಚ್ಚನ 25 ವರ್ಷಗಳ ಸಿನಿ ಪಯಣ ಕುರಿತ 3 ನಿಮಿಷದ ವೀಡಿಯೋ ಪ್ರಸಾರವಾಗಿತ್ತು.

    ಬುರ್ಜ್ ಖಲೀಫಾ ಕಟ್ಟಡದಲ್ಲಿ 3 ನಿಮಿಷಗಳ ಕಾಲ ಇದ್ದ ಕಟೌಟ್ ನೋಡಿ ಸುದೀಪ್ ಅಭಿಮಾನಿಗಳು ಥ್ರಿಲ್ ಆಗಿದ್ದರು. ಈ ಸುಂದರ ಸಂಭ್ರಮವನ್ನು 6 ಕ್ಯಾಮೆರಾದಲ್ಲಿ ಕಿಚ್ಚನ ತಂಡ ಸೆರೆ ಹಿಡಿದಿತ್ತು. ಈ ವೀಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಅಲ್ಲದೆ ಚಿತ್ರರಂಗದಲ್ಲಿ 25 ವರ್ಷಗಳು ಪೂರೈಸಿರುವ ಕಿಚ್ಚ ಸುದೀಪ್‍ಗೆ ಸಿನಿರಂಗದ ಹಲವು ಗಣ್ಯರು ಶುಭಹಾರೈಸಿದ್ದರು.

  • ಸರ್ಕಾರದ ನಿರ್ಧಾರವನ್ನು ಗೌರವಿಸುವುದು ನಮ್ಮ ಕರ್ತವ್ಯ: ಕಿಚ್ಚ ಸುದೀಪ್

    ಸರ್ಕಾರದ ನಿರ್ಧಾರವನ್ನು ಗೌರವಿಸುವುದು ನಮ್ಮ ಕರ್ತವ್ಯ: ಕಿಚ್ಚ ಸುದೀಪ್

    – ಗೆದ್ದು ಬೀಗುವಂತೆ ಯುವರತ್ನಗೆ ಶುಭ ಹಾರೈಕೆ

    ಬೆಂಗಳೂರು: ಥಿಯೇಟರ್ ಗಳಲ್ಲಿ ಶೇ.50ರಷ್ಟು ಭತೀಗೆ ಅವಕಾಶ ನೀಡಿರುವ ಸರ್ಕಾರದ ನಿರ್ಧಾರವನ್ನು ನಾವು ಗೌರವಿಸಬೇಕಾಗಿದೆ ಎಂದು ಸ್ಯಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹೇಳಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ನಟ, ಥಿಯೇಟರ್ ಗಳಲಿ ಮತ್ತೆ ಶೇ.50ರಷ್ಟು ಆಸನಗಳನ್ನು ಭರ್ತಿ ಮಾಡಬೇಕು ಎಂದರೆ ನಿಜಕ್ಕೂ ಇದೊಂದು ಶಾಕಿಂಗ್ ಬೆಳವಣಿಗೆಯಾಗಿದೆ. ಸರ್ಕಾರದ ನಿರ್ಧಾರದಿಂದ ಈಗ ತಾನೇ ಬಿಡುಗಡೆ ಆದ ಚಿತ್ರಕ್ಕೆ ಆತಂಕ ಎದುರಾಗಿದೆ. ಸರ್ಕಾರದ ನಿಯಮಗಳನ್ನು ಗೌರವಿಸುವುದು ಕೂಡ ನಮ್ಮ ಕರ್ತವ್ಯವಾಗುತ್ತದೆ. ಆದರೂ ಇಂತಹ ಸಂದರ್ಭವನ್ನು ಎದುರಿಸಿ ಗೆದ್ದು ಬರುವ ಶಕ್ತಿ ಯುವರತ್ನ ತಂಡಕ್ಕೆ ಸಿಗಲಿ ಎಂದು ಆಶಿಸುವುದಾಗಿ ಅವರು ತಿಳಿಸಿದರು.

    ರಾಜ್ಯದಲ್ಲಿ ಮಾಹಾಮಾರಿ ಕೊರೊನಾ ವೈರಸ್ ಅಬ್ಬರ ಮತ್ತೆ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಬೀದರ್ ಹಾಗೂ ಧಾರವಾಡ ಜಿಲ್ಲೆಗಳ ಸಿನಿಮಾ ಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿಗೆ ಸರ್ಕಾರ ಆದೇಶ ಹೊರಡಿಸಿತ್ತು.

    ಸರ್ಕಾರದ ಈ ನಿರ್ಧಾರಕ್ಕೆ ನಟ ಪುನೀತ್ ರಾಜ್ ಕುಮಾರ್ ತೀವ್ರ ಆಕ್ಷೇಪ ಹಾಗೂ ಬೇಸರ ಹೊರಹಾಕಿದ್ದರು. ಯಾಕಂದರೆ ಪುನೀತ್ ನಟನೆಯ ಯುವರತ್ನ ಚಿತ್ರ ಬಿಡುಗಡೆಯಾಗಿ ಕೇವಲ 2 ದಿನಕ್ಕೆ ಸರ್ಕಾರ ಈ ನಿರ್ಬಂದ ಹೇರಿದ್ದ ಕಾರಣ ನಟ ಆಕ್ರೋಶ ಹೊರಹಾಕಿದ್ದರು. ಕೇವಲ ಪುನೀತ್ ರಾಜ್ ಕುಮಾರ್ ಮಾತ್ರವಲ್ಲದೆ ಚಂದನವನದ ಇತರರು ಕೂಡ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.

  • ಅದ್ಭುತ ಮಡದಿಯಾಗಿದ್ದಕ್ಕೆ ಥ್ಯಾಂಕ್ಯೂ – ಕಿಚ್ಚನಿಂದ ಪತ್ನಿಗೆ ಮದ್ವೆ ವಾರ್ಷಿಕೋತ್ಸವದ ವಿಶ್

    ಅದ್ಭುತ ಮಡದಿಯಾಗಿದ್ದಕ್ಕೆ ಥ್ಯಾಂಕ್ಯೂ – ಕಿಚ್ಚನಿಂದ ಪತ್ನಿಗೆ ಮದ್ವೆ ವಾರ್ಷಿಕೋತ್ಸವದ ವಿಶ್

    ಬೆಂಗಳೂರು: ಒಳ್ಳೆಯ ಸ್ನೇಹಿತೆಯನ್ನು ಹುಡುಕಿಕೊಳ್ಳುವುದು ಕಷ್ಟ ಎಂದು ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್ ಅವರು ತಮ್ಮ ಪತ್ನಿಗೆ ಮದುವೆ ವಾರ್ಷಿಕೋತ್ಸವದ ಶುಭಕೋರಿದ್ದಾರೆ.

    ಇಂದು ಸ್ಯಾಂಡಲ್‍ವುಡ್‍ನ ಕಿಚ್ಚ, ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಪ್ರಿಯಾ ಸುದೀಪ್ 19ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ನೆಚ್ಚಿನ ನಟನ ಮದುವೆ ವಾರ್ಷಿಕೋತ್ಸಕ್ಕೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.

    ತಮ್ಮ ಮದುವೆ ವಾರ್ಷಿಕೋತ್ಸಕ್ಕೆ ತಮ್ಮ ಪತ್ನಿಗೆ ಟ್ವೀಟ್ ಮಾಡುವ ಮೂಲಕ ವಿಶ್ ಮಾಡಿರುವ ಸುದೀಪ್ ಅವರು, ನಾನು ನನ್ನ ಜೀವನದ ಅರ್ಧಭಾಗಕ್ಕೂ ಹೆಚ್ಚಿನ ಕಾಲದಿಂದ ನಿನ್ನನ್ನು ಬಲ್ಲೆ. ಈ 19ನೇ ಮದುವೆ ವಾರ್ಷಿಕೋತ್ಸವದಂದು ನೀನು ನನಗೆ ಸ್ನೇಹಿತೆಯಾಗಿ ಜೊತೆಗೆ ಇದಿದ್ದಕ್ಕೆ ಧನ್ಯವಾದ. ಓರ್ವ ಒಳ್ಳೆಯ ಸ್ನೇಹಿತೆಯನ್ನು ಹುಡುಕುವುದು ಕಷ್ಟ. ಅದ್ಭುತ ಮಡದಿಯಾಗಿದ್ದಕ್ಕೆ ಥ್ಯಾಂಕ್ಯೂ. ಯಾವಗಲೂ ಒಳ್ಳೆಯದನ್ನೇ ಕೋರುತ್ತೇನೆ. ತುಂಬು ಹೃದಯದ ಪ್ರೀತಿ ಪ್ರಿಯ. ಹ್ಯಾಪಿ 19 ಎಂದು ಬರೆದುಕೊಂಡಿದ್ದಾರೆ.

    ಕಿಚ್ಚ ಅವರ ಟ್ವೀಟಿಗೆ ಮಡದಿ ಪ್ರಿಯಾ ಅವರು ಟ್ವಿಟ್ಟರ್ ಮೂಲಕವೇ ಉತ್ತರ ನೀಡಿದ್ದು, ನಿಮ್ಮ ಸಾಮಥ್ರ್ಯಕ್ಕೂ ಮೀರಿ ನಮ್ಮನ್ನು ಖುಷಿಯಾಗಿಡಲು ಪ್ರಯತ್ನ ಮಾಡುತ್ತಿರುವ ಡಾರ್ಲಿಂಗ್ ಪತಿಗೆ ಧನ್ಯವಾದಗಳು. ಯಾವಾಗಲೂ ನಿಮ್ಮನ್ನು ಪ್ರೀತಿಸುತ್ತೇನೆ. ಹ್ಯಾಪಿ 19 ನಮಗೆ ಎಂದು ಬರೆದುಕೊಂಡಿದ್ದಾರೆ. ಚಂದನವನದ ನಟ-ನಟಿಯರು ಕಿಚ್ಚ ಮತ್ತು ಪ್ರಿಯಾ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯ ಹೇಳಿದ್ದಾರೆ.

    ಕಿಚ್ಚದ ಮದುವೆ ವಾರ್ಷಿಕೋತ್ಸಕ್ಕೆ ವಿಶ್ ಮಾಡಿರುವ ಬಾಲಿವುಡ್ ಹೀರೋ ರಿತೇಶ್ ದೇಶ್‍ಮುಖ್ ಮತ್ತು ಅವರ ಪತ್ನಿ ಜೆನಿಲಿಯಾ, ಸುಂದರವಾದ ವ್ಯಕ್ತಿಗಳಾದ ನಿಮಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮಿಬ್ಬರ ನಡುವೆ ಇರುವ ಸಂಬಂಧ ಹಲವರಿಗೆ ಸ್ಫೂರ್ತಿಯಾಗಿದೆ. ನಿಮಗೆ ದೇವರ ಒಳ್ಳೆಯದನ್ನು ಮಾಡಲಿ. ಜೊತೆಗೆ ಹೇರಳವಾದ ಪ್ರೀತಿ ನಿಮ್ಮಬ್ಬರಿಗೆ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ.

    ಕಿಚ್ಚ ಸುದೀಪ್ ಅವರು ಪ್ರಿಯಾ ಅವರನ್ನು 2001ರ ಅಕ್ಟೋಬರ್ 18ರಂದು ವಿವಾಹವಾಗಿದ್ದರು. ಇವರಿಗೆ 2004ರಲ್ಲಿ ಒಂದು ಹೆಣ್ಣುಮಗು ಜನಿಸಿತ್ತು. ಇಂದಿಗೆ ಈ ಜೋಡಿ ಮದುವೆಯಾಗಿ 19 ವರ್ಷಗಳಾಗಿವೆ. ಸದ್ಯ ಕಿಚ್ಚ ಸುದೀಪ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿದ್ದು, ಅವರ ನಟನೆಯ ಕೋಟಿಗೊಬ್ಬ-3 ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇತ್ತ ಸುದೀಪ್ ಅವರು ಫ್ಯಾಂಟಮ್ ಚಿತ್ರ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

  • ಸ್ನೇಹಿತರಾದ ನಿಮಗೆಲ್ಲ ಒಂದು ಸಣ್ಣ ಮನವಿ: ಕಿಚ್ಚ ಸುದೀಪ್

    ಸ್ನೇಹಿತರಾದ ನಿಮಗೆಲ್ಲ ಒಂದು ಸಣ್ಣ ಮನವಿ: ಕಿಚ್ಚ ಸುದೀಪ್

    ಬೆಂಗಳೂರು: ಕೊರೊನಾ ಕಾರಣದಿಂದ ಈ ವರ್ಷದ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಕಿಚ್ಚ ಸುದೀಪ್ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ತಿಳಿಸಿದ್ದಾರೆ.

    ಬುಧವಾರ 47 ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸುದೀಪ್ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವನ್ನು ಬರೆಯುವ ಮೂಲಕ ಮನವಿ ಮಾಡಿಕೊಂಡಿದ್ದಾರೆ.

    https://www.instagram.com/p/CEjmH0DHdiB/?utm_source=ig_web_copy_link

    ಪತ್ರದಲ್ಲಿ ಏನಿದೆ?
    ಬಹಳ ವರ್ಷಗಳಿಂದ ನಿಮ್ಮನ್ನೆಲ್ಲಾ ಭೇಟಿಯಾಗುವುದು ಒಂದು ಸಂಸ್ಕೃತಿಯಂತಾಗಿದೆ. ಬೇರೆ ಯಾವುದೇ ಸಂತೋಷ ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಪತ್ರಿವರ್ಷ ಶುಭಾಶಯ ಕೋರಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದ ನಿಮ್ಮೊಂದಿಗೆ ಒಂದು ದಿನ ಪೂರ್ತಿ ಸಮಯ ಕಳೆಯುವ ಅವಕಾಶ ನನಗೆ ಸಿಗುತ್ತಿತ್ತು.

    ಈ ವರ್ಷ ಸದ್ಯದ ಪರಿಸ್ಥಿತಿ ಸರಿಯಿಲ್ಲ. ಈ ಬಾರಿಯ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಣೆ ಮಾಡುತ್ತಿಲ್ಲ ಎಂದು ಹೇಳಲು ನಾನು ವಿಷಾದಿಸುತ್ತೇನೆ. ನಾನು ನಿಮ್ಮೆಲ್ಲರ ಹಾಗೂ ನನ್ನ ವಯಸ್ಸಾಗುತ್ತಿರುವ ಪೋಷಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತೆ. ಈ ಬಾರಿ ಹುಟ್ಟುಹಬ್ಬ ಆಚರಿಸಿದರೆ 10 ಹೆಜ್ಜೆ ಹಿಂದಿಟ್ಟು ಯಾವುದನ್ನು ತೊಲಗಿಸಲು ಪ್ರಯತ್ನಿಸುತ್ತಿದ್ದೇವೋ ಅದನ್ನು ಮತ್ತೆ ಆಮಂತ್ರಿಸಿದಂತೆ ಆಗುತ್ತದೆ.

    ಕೋವಿಡ್ ಇನ್ನು ದೊಡ್ಡ ಬೆದರಿಕೆಯಾಗಿಯೇ ಇದೆ. ನಾವೆಲ್ಲರೂ ಕುಟುಂಬಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಕುಟುಂಬದವರು ನಮ್ಮ ಕುಟುಂಬದವರು ಇದ್ದಂತೆ. ಅವರು ರೋಗಕ್ಕೆ ತುತ್ತಾಗಿ ಕಷ್ಟಪಟ್ಟರೆ, ನರಳುವ ಸುದ್ದಿ ಕೇಳಿದರೆ ನಿಮ್ಮಷ್ಟೇ ನನಗೂ ನೋವಾಗುತ್ತದೆ. ನಿಮ್ಮ ಶುಭಾಶಯಗಳು ನನಗೆ ಮುಖ್ಯವಾದದ್ದೇ ಹಾಗೂ ನಾನು ಹೇಳಿದಂತೆ ಬೃಹತ್ ಸಂಖ್ಯೆಯಲ್ಲಿ ಬರುವ ನಿಮ್ಮನ್ನು ಕಾಣುವ ಸಂತೋಷವನ್ನು ಬೇರೆ ಯಾವುದೂ ನನಗೆ ನೀಡುವುದಿಲ್ಲ.

    ನಾನು ಖಚಿತವಾಗಿ ಹೇಳುತ್ತೇನೆ ಬಹಳ ಬೇಗ ಆ ದಿನವೂ ಬರುತ್ತದೆ ಹಾಗೂ ನಾವು ಮತ್ತೆ ಭೇಟಿಯಾಗುತ್ತೇವೆ. ಆದರೆ ಸದ್ಯಕ್ಕೆ ನಿಮ್ಮಲ್ಲಿ ಕೋರುವುದೇನೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಎಲ್ಲೂ ಹುಟ್ಟುಹಬ್ಬ ಆಚರಿಸಬೇಡಿ. ಯಾವುದೇ ಸಂಭ್ರಮಾಚರಣೆ ಹಾಗೂ ಕಾರ್ಯಕ್ರಮಗಳು ಬೇಡ. ಸಾಧ್ಯವಾದರೆ ನಿಮ್ಮ ಸುತ್ತಮುತ್ತಲಿನ ಪ್ರದೇಶದ ಕೆಲವರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಿ.

    ಈ ಅನೇಕ ವರ್ಷಗಳು ನನ್ನ ಪರವಾಗಿ ನಿಂತಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು. ಒಂದೊಂದು ಸಲ ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ನಾನು ಇರುವುದಿಲ್ಲ. ಆ ರೀತಿ ಇರಲು ಖಂಡಿತವಾಗಿಯೂ ಪ್ರಯತ್ನ ಮಾಡುತ್ತೇನೆ. ನಿಮ್ಮನ್ನೆಲ್ಲಾ ಹೆಚ್ಚು ಮನೋರಂಜಿಸಲು ಯತ್ನಿಸುವೆ. ಕೋವಿಡ್ ಜೊತೆ ಯುದ್ಧ ಮುಗಿದ ನಂತರ ನಿಮ್ಮೊಂದಿಗೆ ಹೆಚ್ಚು ಸಮಯ ಕಳೆಯಲು ಯತ್ನಿಸುವೆ ಎಂದು ಕಿಚ್ಚ ಬರೆದುಕೊಂಡಿದ್ದಾರೆ.

  • ಅದ್ಭುತ ಕ್ರಿಕೆಟಿಗನ ಜೊತೆ ಒಬ್ಬ ಶ್ರೇಷ್ಠ ನಾಯಕನೂ ನಿವೃತ್ತಿ – ಧೋನಿ ವಿದಾಯಕ್ಕೆ ಕಿಚ್ಚ ಬೇಸರ

    ಅದ್ಭುತ ಕ್ರಿಕೆಟಿಗನ ಜೊತೆ ಒಬ್ಬ ಶ್ರೇಷ್ಠ ನಾಯಕನೂ ನಿವೃತ್ತಿ – ಧೋನಿ ವಿದಾಯಕ್ಕೆ ಕಿಚ್ಚ ಬೇಸರ

    – ಚಿತ್ರರಂಗದ ಹಲವಾರ ಕಲಾವಿದರಿಂದ ಧೋನಿಗೆ ಸಲಾಂ

    ಬೆಂಗಳೂರು: ಅದ್ಭುತ ಕ್ರಿಕೆಟಿಗನ ಜೊತೆ ಒಬ್ಬ ಶ್ರೇಷ್ಠ ನಾಯಕನೂ ನಿವೃತ್ತಿಯಾಗಿದ್ದಾರೆ ಎಂದು ಕಿಚ್ಚ ಸುದೀಪ್ ಅವರು ಎಂಎಸ್ ಧೋನಿಯವರ ವಿದಾಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

    ಭಾರತಕ್ಕಾಗಿ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದು ತಂದ ಹೆಮ್ಮೆಯ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಶನಿವಾರ ಸಂಜೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಒಂದು ಸುಳಿವನ್ನು ನೀಡದೇ ಧೋನಿ ನಿವೃತ್ತಿ ಘೋಷಿಸಿದಕ್ಕೆ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ವಿದಾಯ ಪಂದ್ಯವನ್ನೂ ಆಡದೇ ಧೋನಿ ನಿವೃತ್ತಿ ಹೇಳಿರುವುದು ಸುದೀಪ್‌ಗೆ ಬೇಸರ ತಂದಿದೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ಕಿಚ್ಚ, ಅದ್ಭುತ ಕ್ರಿಕೆಟಿಗನ ಜೊತೆಗೆ, ಒಬ್ಬ ಶ್ರೇಷ್ಠ ನಾಯಕ ಹಠಾತ್ತನೆ ನಿವೃತ್ತಿಗೊಂಡಿದ್ದಾರೆ. ನನಗೆ ಅನಿಸುತ್ತದೆ ನಾವೆಲ್ಲರೂ ಅವರ ಕೊನೆಯ ಪಂದ್ಯವನ್ನೂ ನೋಡಬೇಕಿತ್ತು ಎಂದು. ಯಾರಿಗೂ ಕೂಡ ಅವರು ನಿವೃತ್ತಿ ಹೊಂದುತ್ತಾರೆ ಎಂದು ಗೊತ್ತೇ ಆಗಲಿಲ್ಲ. ಅವರ ಅಭಿಮಾನಿಗಳಿಗೆ ಅವರ ನಿವೃತ್ತಿ ವಿಚಾರ ಗೊತ್ತಿತ್ತು ಎಂದು ಭಾವಿಸುತ್ತೇನೆ. ಜೊತೆಗೆ ಅವರಿಗೆ ವಿದಾಯ ಪಂದ್ಯದ ಜೊತೆ ಅವರನ್ನು ಕಳುಹಿಸಿ ಕೊಡಬೇಕು ಎಂದು ಹೇಳುತ್ತೇನೆ ಎಂದು ಕಿಚ್ಚ ಬರೆದುಕೊಂಡಿದ್ದಾರೆ.

    ಕಿಚ್ಚ ಸುದೀಪ್ ಅವರಂತೆ ಹಲವಾರ ಕನ್ನಡ ಚಿತ್ರರಂಗದ ಕಲಾವಿದರು ಧೋನಿಯವರ ನಿವೃತ್ತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ. ಅಂತಯೇ ಕನ್ನಡ ನಟಿ ಪ್ರಣಿತಾ ಸುಭಾಷ್ ಅವರು ಕೂಡ ಪೋಸ್ಟ್ ಹಾಕಿಕೊಂಡಿದ್ದು, ಎಂಎಸ್ ಧೋನಿಯವರು ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದ್ದಾರೆ. ಕಳೆದ 16 ವರ್ಷದಿಂದ ನಮ್ಮೆಲ್ಲರ ಖುಷಿ ಮತ್ತು ಹೆಮ್ಮೆಯ ಮೂಲವಾಗಿದಕ್ಕೆ ಧನ್ಯವಾದಗಳು. ಈ ವಿಚಾರ ಬಹಳ ಕಠಿಣವಾದದ್ದು ಎಂದು ಬರೆದುಕೊಂಡಿದ್ದಾರೆ.

    ಜೊತೆಗೆ ಕನ್ನಡ ನಿರ್ದೇಶಕ ತರುಣ್ ಸುಧೀರ್ ಅವರು ಟ್ವೀಟ್ ಮಾಡಿ, ನೀವು ನಮಗೆ ನಿಜವಾದ ಸ್ಫೂರ್ತಿ ಜೊತೆಗೆ ಉತ್ತಮ ನಾಯಕ. ನಮ್ಮೆಲ್ಲರನ್ನೂ ಹೆಮ್ಮೆ ಪಡುವಂತೆ ಮಾಡಿದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದರ ಜೊತೆಗೆ ಮತ್ತೊರ್ವ ನಿರ್ದೇಶಕ ಪವನ್ ಒಡೆಯರ್ ಅವರು ಕೂಡ ಟ್ವೀಟ್ ಮಾಡಿದ್ದು, ಧೋನಿ ಅಭಿಮಾನಿಗಳು ಎಂದು ಬಯಸದ ಕೊನೆಯ ದಿನ ಬಂದಿದೆ. ಆತ ನಿಜವಾದ ಚಾಂಪಿಯನ್ ಎಂದು ಬರೆದುಕೊಂಡಿದ್ದಾರೆ.

  • ‘ಆ’ ದಿನಗಳನ್ನು ತುಂಬಾ ಮಿಸ್ ಮಾಡ್ಕೊಳ್ತಿದ್ದೇನೆ: ಕಿಚ್ಚ ಸುದೀಪ್

    ‘ಆ’ ದಿನಗಳನ್ನು ತುಂಬಾ ಮಿಸ್ ಮಾಡ್ಕೊಳ್ತಿದ್ದೇನೆ: ಕಿಚ್ಚ ಸುದೀಪ್

    ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಬಾಲ್ಯದಲ್ಲಿ ಕುಟುಂಬದ ಜೊತೆಗೆ ತೆಗೆಸಿಕೊಂಡ ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ಆ ದಿನಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ ಎಂದು ಹೇಳಿದ್ದಾರೆ.

    ಸುದೀಪ್ ತಮ್ಮ ತಾಯಿ ಸರೋಜಾ, ಸಹೋದರಿಯರಾದ ಸುರೇಖಾ ಹಾಗೂ ಸುಜಾತಾ ಅವರೊಂದಿಗೆ ತೆಗೆಸಿಕೊಂಡ ಬ್ಲ್ಯಾಕ್ ಅಂಡ್ ವೈಟ್ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. “ಈಗಿನ ದಿನಗಳಲ್ಲಿ ಕುಟುಂಬದ ಜೊತೆಗೆ ಇಂತಹ ಅಪರೂಪದ ಫೋಟೋಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಕಷ್ಟವಾಗುತ್ತಿದೆ. ಆ ಗಳಿಗೆಯನ್ನು ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ” ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

    https://www.instagram.com/p/CB7cwjKn-sW/

    ವಿಶೇಷವೆಂದರೆ ಕಿಚ್ಚನ ತಂದೆ-ತಾಯಿ ಹಾಗೂ ಸಹೋದರಿಯರ ಹೆಸರು ಇಂಗ್ಲಿಷ್‍ನ ‘ಎಸ್’ ಅಕ್ಷರದಿಂದ ಪ್ರಾರಂಭವಾಗುತ್ತದೆ. ಸುಜಾತಾ-ಸಂಜೀವ್ ದಂಪತಿಯ ಮೊದಲ ಮಗಳು ಸುರೇಖಾ, ಎರಡನೇ ಸುಜಾತಾ ಕೊನೆಯ ಹಾಗೂ ಮೂರನೇ ಮಗ ಅಭಿಯನ ಚಕ್ರವರ್ತಿ ನಟ ಕಿಚ್ಚ ಸುದೀಪ್.

    ಕೊರೊನಾ ವೈರಸ್ ಭೀತಿಯಿಂದಾಗಿ ಸಿನಿಮಾ ಚಿತ್ರೀಕರಣ ಸ್ತಬ್ಧವಾಗಿದ್ದು, ನಟ-ನಟಿ, ಕಲಾವಿದರು, ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ನಟ ಸುದೀಪ್ ಕೂಡ ಪತ್ನಿ ಹಾಗೂ ಮಗಳ ಜೊತೆಗೆ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಕಳೆದ ತಿಂಗಳ 20ರಂದು ಸಾನ್ವಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದರು.

     

  • ಆಸೆಬುರುಕ ಅಪ್ಪನಿಗಾಗಿ ಮತ್ತೆ ಮಗುವಾಗು ನೀನು – ಮಗಳಿಗೆ ಕಿಚ್ಚನ ವಿಶ್

    ಆಸೆಬುರುಕ ಅಪ್ಪನಿಗಾಗಿ ಮತ್ತೆ ಮಗುವಾಗು ನೀನು – ಮಗಳಿಗೆ ಕಿಚ್ಚನ ವಿಶ್

    – ಎದೆಯೆತ್ತರ ಬೆಳದಿರೋ ಕನಸು ನೀನು

    ಬೆಂಗಳೂರು: ಆಸೆಬುರುಕ ಅಪ್ಪನಿಗಾಗಿ ಮತ್ತೆ ಮಗುವಾಗು ನೀನು ಎಂದು ವಿಶೇಷ ಬೇಡಿಕೆ ಇಡುವ ಮೂಲಕ ಕಿಚ್ಚ ಸುದೀಪ್ ಅವರು ತಮ್ಮ ಮುದ್ದು ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

    ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಸುದೀಪ್ ಅವರು ಇಂದು 16ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಚಾರವಾಗಿ ಮಗಳಿಗಾಗಿ ಸ್ಪೆಷಲ್ ವಿಶ್ ಮಾಡಿರುವ ಕಿಚ್ಚ, ಎದೆಯೆತ್ತರ ಬೆಳದಿರೋ ಕನಸು ನೀನು ಎಂದು ಮಗಳನ್ನು ಹಾಡಿಹೊಗಳಿದ್ದಾರೆ.

    ಮಗಳ ಹುಟ್ಟುಹಬ್ಬದ ವಿಚಾರವಾಗಿ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಅವರು, ನಿನ್ನೆ ಮೊನ್ನೆ ಇದ್ದ ಹಾಗಿದೆ. ಹೇಗಪ್ಪಾ ನಂಬೋದು ನನ್ನ ಮಗಳಿಗೀಗ ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ ಕನಸು ನೀನು. ನಿನ್ನಿಂದಲೇ ಕಲಿಯುವ ಕೂಸು ನಾನು. ಆಸೆಬುರುಕ ಅಪ್ಪ ನಾನು ಮತ್ತೆ ಮಗುವಾಗು ನೀನು ಎಂದು ಬರೆದು ಮಗಳ ಸವಿನೆನಪಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

    ಕಿಚ್ಚ ಸುದೀಪ್ ಅವರ ಮಗಳ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು ಕೂಡ ವಿಶ್ ಮಾಡುತ್ತಿದ್ದು, ಕಿಚ್ಚ ಸುದೀಪ್, ಅವರ ಪತ್ನಿ ಪ್ರಿಯಾ ಮತ್ತು ಮಗಳು ಸಾನ್ವಿ ಇರುವ ಫೋಟೋವನ್ನು ಕಾಮನ್ ಡಿಪಿ ಆಗಿ ಬಳಸಿ ಶುಭಾಕೋರುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ಮಗಳ ಹುಟ್ಟುಹಬ್ಬದ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ಕೂಡ ಕಮೆಂಟ್ ಮಾಡಿದ್ದು, ತನ್ನ ನೆಚ್ಚಿನ ನಟನ ಮಗಳಿಗೆ ಶುಭಾಶಯ ತಿಳಿಸಿ ಹರಸಿದ್ದಾರೆ.

    ಕಿಚ್ಚ ಸುದೀಪ್ ಅವರು 2001 ಅಕ್ಟೋಬರ್ 18ರಂದು ಪ್ರಿಯಾ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಮದುವೆಯಾದ ಮೂರು ವರ್ಷದ ನಂತರ ಅಂದರೆ 2004 ಮೇ 20ರಂದು ಹೆಣ್ಣು ಮಗು ಜನಿಸುತ್ತದೆ. ಈ ಹೆಣ್ಣು ಮಗುವೇ ಸಾನ್ವಿ ಸುದೀಪ್. ಸಾನ್ವಿ ಹುಟ್ಟಿದಾಗ ಚಿತ್ರರಂಗದಲ್ಲಿ ಆಗ ತಾನೇ ಗುರುತಿಸಿಕೊಳ್ಳುತ್ತಿದ್ದ ಸುದೀಪ್ ಈಗ ಭಾರತದ ಚಿತ್ರರಂಗದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಜೊತೆಗೆ ಹಾಲಿವುಡ್‍ನಲ್ಲೂ ನಟಿಸುತ್ತಿದ್ದಾರೆ.

    ಈಗ ಸದ್ಯ ಕಿಚ್ಚ ಸುದೀಪ್ ಅಭಿನಯದ ‘ಕೋಟಿಗೊಬ್ಬ-3’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಕೊರೊನಾ ವೈರಸ್ ಲಾಕ್‍ಡೌನ್ ನಿಂದ ಮುಂದಕ್ಕೆ ಹೋಗಿದೆ. ಈ ಸಿನಿಮಾದ ನಂತರ ಸುದೀಪ್ ಅವರು ಅನೂಪ್ ಭಂಡಾರಿ ನಿರ್ದೇಶನದ ‘ಫ್ಯಾಂಟಮ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಿಚ್ಚ ವಿಕ್ರಾಂತ್ ರೋಣ ಎಂಬ ಖಡಕ್ ಅಧಿಕಾರಿಯ ಪಾತ್ರ ಮಾಡಲಿದ್ದಾರೆ. ಈ ಚಿತ್ರದ ಮೊದಲ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ.

  • ಯೂಟ್ಯೂಬ್‍ನಲ್ಲಿ ಟ್ರೆಂಡ್ ಸೃಷ್ಟಿಸಿದ ಕೋಟಿಗೊಬ್ಬ-3 ಟೈಟಲ್ ಟ್ರ್ಯಾಕ್

    ಯೂಟ್ಯೂಬ್‍ನಲ್ಲಿ ಟ್ರೆಂಡ್ ಸೃಷ್ಟಿಸಿದ ಕೋಟಿಗೊಬ್ಬ-3 ಟೈಟಲ್ ಟ್ರ್ಯಾಕ್

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಕೋಟಿಗೊಬ್ಬ ಸಿನಿಮಾದ ಲಿರಿಕಲ್ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದ್ದು, ಯೂಟ್ಯೂಬ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ನಂ.1 ಟ್ರೆಂಡಿಂಗ್‍ನಲ್ಲಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 7 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಪಡೆದಿದೆ. ಅಲ್ಲದೆ ನಂ.1 ಟ್ರೆಂಡಿಂಗ್‍ನಲ್ಲಿದೆ. ಈ ಮೂಲಕ ಲಾಕ್‍ಡೌನ್‍ನಿಂದ ಬೇಸರದಲ್ಲಿದ್ದ ಅಭಿಮಾನಿಗಳನ್ನು ಕಿಚ್ಚ ಸುದೀಪ್ ರಂಜಿಸಿದ್ದಾರೆ. ಕಿಚ್ಚ ಸುದೀಪ್ ಏ.24ರಂದು ಟ್ವೀಟ್ ಮಾಡಿ ಹಾಡು ಬಿಡುಗಡೆ ಮಾಡುವುದರ ಕುರಿತು ತಿಳಿಸಿದ್ದರು. ನಿರೀಕ್ಷೆಯಂತೆಯೇ ಏಪ್ರಿಲ್ 27ರಂದು ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‍ನಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಕೋಟಿಗೊಬ್ಬ-2 ಚಿತ್ರದಲ್ಲಿನ ಮ್ಯೂಸಿಕ್‍ನ ಬೇರೆ ವರ್ಷನ್ ಇದಾಗಿದ್ದು, ಆಕಾಶನೇ ಅದರಿಸುವ, ಈ ಭೂಮಿನ ಪಳಗಿಸುವಾ, ಕೋಟಿ ಕೋಟಿ ನೋಟುಗಳ ಕೋಟೆ ಮೇಲೆ ಕುಳಿತಿರುವ ಎಂದು ಮುಂದುವರಿಯುತ್ತದೆ. ನಂತರ ನಾಲ್ಕು ತಲೆ ಬ್ರಹ್ಮನಿಗೂ ಅಬ್ಬಬ್ಬ ಕನ್ಫ್ಯೂಸು ಮಾಡೋನಿವಾ….ಎನ್ನುತ್ತಿದ್ದಂತೆ ಕೋಟಿಗೊಬ್ಬ ಎಂಬ ವಾಯ್ಸ್ ಬರುತ್ತದೆ. ಹೀಗೆ ವಿಭಿನ್ನ ಶೈಲಿಯ ಮ್ಯೂಸಿಕ್‍ನೊಂದಿಗೆ ಹಾಡು ಅಭಿಮಾನಿಗಳಲ್ಲಿ ಹುಚ್ಚು ಹಿಡಿಸಿದೆ.

    ಲಾಕ್‍ಡೌನ್ ಇರುವುದರಿಂದ ಸಿನಿಮಾದ ಬಿಡುಗಡೆ ತಡವಾಗಿದೆ. ಈ ಚಿತ್ರಕ್ಕೆ ಸ್ವತಃ ಕಿಚ್ಚ ಸುದೀಪ್ ಚಿತ್ರಕಥೆ ಬರೆದಿದ್ದು, ಶಿವಕಾರ್ತಿಕ್ ನಿರ್ದೇಶಿಸಿದ್ದಾರೆ. ಚಿತ್ರದ ಬಹುತೇಕ ಭಾಗವನ್ನು ಪೋಲ್ಯಾಂಡ್‍ನಲ್ಲಿ ಚಿತ್ರೀಕರಿಸಲಾಗಿದೆ. ಸುದೀಪ್‍ಗೆ ಜೋಡಿಯಾಗಿ ಮಲಯಾಳಂ ನಟಿ ಮಡೋನ್ನಾ ಸೆಬಾಸ್ಟೀನ್ ಕಾಣಿಸಿಕೊಂಡಿದ್ದು, ಶ್ರದ್ಧಾ ದಾಸ್, ಅಫ್ತಬ್ ಶಿವದಾಸನಿ, ರವಿಶಂಕರ್ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೂರಪ್ಪ ಬಾಬು ‘ಕೋಟಿಗೊಬ್ಬ 3’ ಚಿತ್ರವನ್ನು ನಿರ್ಮಿಸಿದ್ದಾರೆ. ಈಗಾಗಲೇ ಸ್ಯಾಟಲೈಟ್, ಡಬ್ಬಿಂಗ್ ಹಕ್ಕುಗಳಿಂದಲೇ ಸಿನಿಮಾ 27 ಕೋಟಿ ರೂ. ಗಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

  • ಕೊನೆಗೂ ಭೇಟಿಯಾಗಲು ಸಾಧ್ಯವಾಗಿಲ್ಲ- ಬುಲೆಟ್ ನಿಧನಕ್ಕೆ ಕಿಚ್ಚ ಸಂತಾಪ

    ಕೊನೆಗೂ ಭೇಟಿಯಾಗಲು ಸಾಧ್ಯವಾಗಿಲ್ಲ- ಬುಲೆಟ್ ನಿಧನಕ್ಕೆ ಕಿಚ್ಚ ಸಂತಾಪ

    ಬೆಂಗಳೂರು: ಸ್ಯಾಂಡಲ್‍ವುಡ್ ಹಾಸ್ಯ ನಟ ಬುಲೆಟ್ ಪ್ರಕಾಶ್ ನಿಧನಕ್ಕೆ ನಟ ಕಿಚ್ಚ ಸುದೀಪ್ ಸಂತಾಪ ಸೂಚಿಸಿದ್ದು, ಕೊನೆಯ ಬಾರಿಗೆ ಅವರನ್ನು ನೋಡಲು ಆಗಲಿಲ್ಲ ಎಂದು ಬೆಸರ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕಿಚ್ಚ ಸುದೀಪ್, ನನ್ನ ಸ್ನೇಹಿತ ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂದು ಕೇಳಿದಾಗ ಬೇಸರವಾಯಿತು. ಇನ್ನೂ ಹೆಚ್ಚು ದುಃಖಕರವಾದ ಸಂಗತಿಯೆಂದರೆ ಸಿನಿಮಾ ಉದ್ಯಮದ ಸ್ನೇಹಿತರು ಕೊನೆಯ ಬಾರಿಗೆ ಅವರನ್ನು ನೋಡಲು ಅವರ ಮನೆಗೆ ಭೇಟಿ ನೀಡಲು ಸಾಧ್ಯವಿಲ್ಲ. ಬಲೆಟ್ ಪ್ರಕಾಶ್ ಇದ್ದಲ್ಲಿ ನಗು ಇರುತ್ತಿತ್ತು. ಅವರೊಬ್ಬ ಅದ್ಭುತ ನಟ. ನನ್ನ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    44 ವರ್ಷದ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಲಿವರ್, ಕಿಡ್ನಿ ವೈಫಲ್ಯದಿಂದಾಗಿ ಚಿಕಿತ್ಸೆ ಫಲಿಸದೆ ಸೋಮವಾರ ಮಧ್ಯಾಹ್ನ ಬೆಂಗಳೂರಿನ ಫೋರ್ಟೀಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸುಮಾರು 325ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಬುಲೆಟ್ ಪ್ರಕಾಶ್, ಸ್ಯಾಂಡಲ್‍ವುಡ್ ಎಲ್ಲಾ ಸ್ಟಾರ್ ನಟರ ಜೊತೆಯಲ್ಲಿ ಕಾಣಿಸಿಕೊಂಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಕಾಂಬಿನೇಷನ್ ಭಾರೀ ಕಚಗುಳಿ ಇಡ್ತಿತ್ತು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಹೆಬ್ಬಾಳದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

    ಬುಲೆಟ್ ಪ್ರಕಾಶ್ ಅವರ ನಿಧನದ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ರಂಗಾಯಣ ರಘು ಅವರು, ನಾನು ಹಾಗೂ ಬುಲೆಟ್ ಪ್ರಕಾಶ್ ಹೋಗೋ ಬಾರೋ ಫ್ರೆಂಡ್ಸ್. ಅವರಿಗೆ ನಾನಷ್ಟೇ ಅಲ್ಲ ದೊಡ್ಡ ಸಂಖ್ಯೆಯ ಸ್ನೇಹ ಬಳಗವೇ ಇದೆ. ಪ್ರಕಾಶ್ ಅವರ ಏರಿಯಾದಲ್ಲಿ ಅನೇಕ ಸ್ನೇಹಿತರಿದ್ದರು. ಎಲ್ಲರೊಂದಿಗೂ ಹಾಸ್ಯವಾಗಿ, ನಗು ಮುಖದಿಂದ ಇರುತ್ತಿದ್ದರು. ಎಲ್ಲವನ್ನೂ ತಮಾಷೆಯಾಗಿ ತೆಗೆದುಕೊಳ್ಳುತ್ತಿದ್ದ ಎಂದು ನೆನೆದಿದ್ದರು.

    ಸಿನಿಮಾದಲ್ಲಿ ಹಾಸ್ಯನಟನಾಗಿ ಖ್ಯಾತಿ ಪಡೆದಿದ್ದ ಬುಲೆಟ್, ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಸ್ನೇಹಿಮುಖಿಯಾಗಿದ್ದ ಬುಲೆಟ್ ಪ್ರಕಾಶ್ ಅವರು ಅಷ್ಟೇ ನೇರನುಡಿ ಹೊಂದಿದ ವ್ಯಕ್ತಿಯಾಗಿದ್ದರು.

  • ಕೊರೊನಾ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ – ಕಿಚ್ಚನಿಗೆ ಚೇತನ್ ಟ್ವೀಟ್

    ಕೊರೊನಾ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ – ಕಿಚ್ಚನಿಗೆ ಚೇತನ್ ಟ್ವೀಟ್

    ಬೆಂಗಳೂರು: ಕೊರೊನಾ ವೈರಸ್ ತಡೆಯುವ ಬಗ್ಗೆ ಅವೈಜ್ಞಾನಿಕ ಥಿಯರಿ ಹರಡಬೇಡಿ ಎಂದು ಆದಿನಗಳು ನಟ ಚೇತನ್ ಕುಮಾರ್ ಕಿಚ್ಚ ಸುದೀಪ್ ಅವರಿಗೆ ಟ್ವೀಟ್ ಮಾಡಿದ್ದಾರೆ.

    ಸುದೀಪ್ ಅವರು ಭಾನುವಾರ ವಿಡಿಯೋ ಒಂದನ್ನು ಟ್ವೀಟ್ ಮಾಡಿ, ಸಂಜೆ 5 ಗಂಟೆಗೆ ಎಲ್ಲರೂ ಚಪ್ಪಾಳೆ ತಟ್ಟಲು ದಯವಿಟ್ಟು ಭಾಗವಹಿಸಿ. ಹೀಗೆ ಮಾಡಿದರೆ ನಾವು ಯಾವುದನ್ನಾದರೂ ಕಳೆದುಕೊಳ್ಳುತ್ತೇವೆಯೇ? ಇಲ್ಲವಲ್ಲ. ನಾವು ಗಳಿಸುತ್ತೇವೆಯೇ? ಬಹುಶಃ ಗಳಿಸಬಹುದು. ಆದರೆ ಕನಿಷ್ಠ ಪ್ರಯತ್ನಿಸೋಣ. ಎಲ್ಲವನ್ನೂ ಆಮೇಲೆ ಯೋಚಿಸೋಣ. ಇದು ನಮ್ಮ ಜೀವನಕ್ಕಾಗಿ ಎಂದು ಬರೆದುಕೊಂಡಿದ್ದರು.

    ವಿಡಿಯೋದಲ್ಲಿ ಏನಿದೆ?
    ಯುವತಿಯೊಬ್ಬರು ಮಾತನಾಡುತ್ತಾ, ‘ಚಪ್ಪಾಳೆ ತಟ್ಟುವುದನ್ನ ತುಂಬಾ ಲಘುವಾಗಿ ಪರಿಗಣಿಸಬೇಡಿ. ದಯವಿಟ್ಟು ಎಲ್ಲರೂ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟಲು ಭಾಗವಹಿಸಿ. ಪ್ರಧಾನಿ ನರೇಂದ್ರ ಮೋದಿ ಅವರ ಈ ಸಂದೇಶದಿಂದ ಎನರ್ಜಿ ಮೆಡಿಸಿನ್ ಸೃಷ್ಟಿಯಾಗುತ್ತದೆ ಎಂದು ಎಲ್ಲರಿಗೂ ತಿಳಿಸೋಣ. ನಿಮ್ಮ ಬಾಲ್ಕನಿ, ಮನೆಯಲ್ಲಿ ಮಾತ್ರ ನೀವು ಸುರಕ್ಷಿತವಾಗಿರಲು ಸಾಧ್ಯ. ನಿಮಗಾಗಿ ಶ್ರಮಿಸುವವರಿಗೆ ಚಪ್ಪಾಳೆ ಮೂಲಕ ಧನ್ಯವಾದ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದರು.

    ಇದಕ್ಕೆ ಪ್ರತಿಕ್ರಿತಿಯೆ ನೀಡಿರುವ ನಟ ಚೇತನ್, ಸುದೀಪ್ ಸರ್. ಸಿನಿಮಾ ಕ್ಷೇತ್ರದಲ್ಲಿ ನಿಮ್ಮ ಕೆಲಸವನ್ನು ನಾನು ಗೌರವಿಸುತ್ತೇನೆ. ವೈದ್ಯ ದಂಪತಿಯ ಮಗನಾಗಿ ನಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಪ್ರಶಂಸಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ಮೂಢನಂಬಿಕೆ ಮತ್ತು ತಪ್ಪು ಮಾಹಿತಿಯ ಹಾದಿಯಲ್ಲಿ ನಮ್ಮನ್ನು ಕೊಂಡೊಯ್ಯುವ ಇಂತಹ ಅವೈಜ್ಞಾನಿಕ ‘ಎನರ್ಜಿ ಮೆಡಿಸಿನ್’ ಸಿದ್ಧಾಂತಗಳನ್ನು ಹರಡುವುದರ ಮೂಲಕ ವೈದ್ಯರನ್ನು ಪ್ರಶಂಸಿಸುವುದು ಸರಿಯಲ್ಲ. ವಿಜ್ಞಾನದ ಮೂಲಕ ಕೊರೊನಾ ವೈರಸ್ ವಿರುದ್ಧ ಹೋರಾಡೋಣ ಎಂದು ಟ್ವೀಟ್ ಮಾಡಿದ್ದಾರೆ.