ನವದೆದಲಿ: ಇಂಡೋನೇಷಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಏರ್ ಪಿಸ್ತೂಲ್‍ನಲ್ಲಿ 16ನೇ ವರ್ಷದ ಸೌರಭ್ ಚೌಧರಿ ಚಿನ್ನ ಪದಕ ಜಯಿಸಿ ದೇಶದ ಜನರ ಮನ ಗೆದ್ದಿದ್ದಾರೆ.
ಕ್ರೀಡಾಕೂಟದ ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸೌರಭ್ ಚೌಧರಿ ಚಿನ್ನ ಪದಕ ಗೆದಿದ್ದಾರೆ. ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸದ್ಯ ಭಾರತ 4 ಚಿನ್ನ, 3 ಬೆಳ್ಳಿ ಮತ್ತು 4 ಕಂಚು ಗೆಲ್ಲುವ ಮೂಲಕ 6ನೇ ಸ್ಥಾನ ಗಳಿಸಿದೆ.
ಖೇಲೋ ಇಂಡಿಯಾ ಪ್ರತಿಭೆ: ಸೌರಭ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಖೇಲೋ ಇಂಡಿಯಾ ಮೂಲಕ ಬೆಳಕಿಗೆ ಬಂದವರು. ಫೆಬ್ರವರಿಯಲ್ಲಿ ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಶಾಲಾ ಕ್ರೀಡಾಕೂಟದಲ್ಲಿ ಭಾಗಹಿಸಿ ಪದಕ ಗೆದ್ದಿದ್ದರು. ಬಳಿಕ ತರಬೇತಿ ಪಡೆದು ಜುಲೈನಲ್ಲಿ ಜರ್ಮನಿಯಲ್ಲಿ ನಡೆದಿದ್ದ ಕಿರಿಯರ ವಿಶ್ವಕಪ್ ನಲ್ಲಿ 243.7 ಅಂಕ ಪಡೆದು ದಾಖಲೆ ನಿರ್ಮಿಸಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ ಅರ್ಜೆಂಟೀನಾದಲ್ಲಿ ನಡೆಯಲಿರುವ ಕಿರಿಯರ ಒಲಿಂಪಿಕ್ಸ್ ಗೂ ಆರ್ಹತೆ ಪಡೆದಿದ್ದರು. ಉತ್ತರ ಪ್ರದೇಶದ ಪ್ರತಿಭೆಯಾಗಿರುವ ಸೌರಭ್ ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ಶೂಟಿಂಗ್ ಕ್ರೀಡೆ ಆಯ್ಕೆ ಮಾಡಿಕೊಂಡಿದ್ದರು. 2016 ರಲ್ಲಿ ತೆಹ್ರಾನ್ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಮೊದಲ ಬಾರಿಗೆ ಪ್ರತಿನಿಧಿಸಿದ್ದರು.
ಖೇಲೋ ಇಂಡಿಯಾ: ಗ್ರಾಮೀಣ ಹಾಗೂ ತೆರೆಮರೆಯಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ, ಕೇಂದ್ರ ಸರ್ಕಾರ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆ `ಖೇಲೋ ಇಂಡಿಯಾ’. ಇದರ ಮೊದಲ ಚೊಚ್ಚಲ ಆವೃತ್ತಿ ಫೆಬ್ರವರಿಯಲ್ಲಿ 8 ದಿನಗಳ ಕಾಲ ದೆಹಲಿಯಲ್ಲಿ ನಡೆದಿತ್ತು.
ಪ್ರತಿಭಾವಂತರ ಆಯ್ಕೆ: ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಟಗಾರರಿಗೆ ಪದಕ ಗೆಲ್ಲುವ ಅವಕಾಶವಿರುತ್ತದೆ. ಈ ಯೋಜನೆಯ ಅನ್ವಯ ಒಟ್ಟು 1 ಸಾವಿರ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ ಅವರಿಗೆ ವಿಶ್ವದರ್ಜೆಯ ತರಬೇತಿ ಕಲ್ಪಿಸಲಾಗುತ್ತದೆ. ಕ್ರೀಡಾಕೂಟದಲ್ಲಿ 18 ಕ್ರೀಡೆಗಳಲ್ಲಿ ವಿವಿಧ ರಾಜ್ಯಗಳ ಸುಮಾರು 5 ಸಾವಿರ ಕ್ರೀಡಾಪಟುಗಳು ಭಾವಹಿಸಿದ್ದರು.
ಸೌಲಭ್ಯ ಏನು?
ಖೇಲೋ ಇಂಡಿಯಾ ಕ್ರೀಡಾಪಟುದಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಕೇಂದ್ರ ಸರ್ಕಾರ 8 ವರ್ಷಗಳ ಕಾಲ ವಾರ್ಷಿಕ 5 ಲಕ್ಷ ರೂ. ಆರ್ಥಿಕ ನೆರವು ನೀಡಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಕ್ರೀಡಾಪಟುಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡುಲಾಗುತ್ತದೆ.
16 ಕ್ರೀಡೆಗಳು: ಶೂಟಿಂಗ್, ವೇಟ್ ಲಿಫ್ಟಿಂಗ್, ಜುಡೋ, ಕುಸ್ತಿ, ಬಾಸ್ಕೆಟ್ ಬಾಲ್, ಫುಟ್ಬಾಲ್, ಹಾಕಿ, ಕಬಡ್ಡಿ, ಖೋ-ಖೋ, ವಾಲಿಬಾಲ್, ಜಿಮ್ನಾಸ್ಟಿಕ್ಸ್, ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಈಜು.
ಫೆಬ್ರವರಿಯಲ್ಲಿ ಒಂದು ವಾರದ ಕಾಲ ನಡೆದ ಕ್ರೀಡಾಕೂಟಕ್ಕೆ ಅಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ವೇಳೆ ಕ್ರೀಡಾಕೂಟದಲ್ಲಿ ಮುಂದಿನ ವರ್ಷದಿಂದ ಮತ್ತಷ್ಟು ಕ್ರೀಡೆಗಳನ್ನು ಖೇಲೋ ಇಂಡಿಯಾ ಯೋಜನೆಯಡಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಘೋಷಿಸಿದ್ದರು. ಅಲ್ಲದೇ ಭವಿಷ್ಯದ ಚಾಂಪಿಯನ್ ಕ್ರೀಡಾಪಟುಗಳನ್ನು ಗುರುತಿಸುವ ಅವರಿಗೆ ಉತ್ತಮ ಬೆಂಬಲ ನೀಡುವ ಉದ್ದೇಶ ಯೋಜೆನೆಯ ಹಿಂದಿದೆ ಎಂದು ತಿಳಿಸಿದ್ದರು. ಖೇಲೋ ಇಂಡಿಯಾ ಯೋಜನೆಯೂ ಈ ಹಿಂದೆ ಜಾರಿಗೆ ಮಾಡಲಾಗಿದ್ದ ರಾಜೀವ್ ಗಾಂಧಿ ಖೇಲ್ ಅಭಿಯಾನ್, ರಾಷ್ಟ್ರೀಯ ಕ್ರೀಡಾ ಪ್ರತಿಭಾನ್ವೇಷಣೆ ಯೋಜನೆ, ನಗರ ಕ್ರೀಡಾ ಸೌಕರ್ಯ ಯೋಜನೆಗಳ ವಿಲೀನ ರೂಪ ಇದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv