Tag: KGF Cinema

  • ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಪ್ರಕರಣ – ತಿಂಗಳ ಬಳಿಕ ಆರೋಪಿ ಅರೆಸ್ಟ್

    ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಶೂಟೌಟ್ ಪ್ರಕರಣ – ತಿಂಗಳ ಬಳಿಕ ಆರೋಪಿ ಅರೆಸ್ಟ್

    ಹಾವೇರಿ: ಸಿಎಂ ತವರು ಕ್ಷೇತ್ರದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣ ಇಡೀ ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಕೆಜಿಎಫ್ 2 ಚಿತ್ರ ವೀಕ್ಷಣೆ ವೇಳೆ ಅಲ್ಲಿ ಗುಂಡಿನ ಸದ್ದು ಮೊಳಗಿತ್ತು. ಪ್ರಕರಣದ ಆರೋಪಿಯನ್ನು ಬಂಧಿಸುವುದು ಪೊಲೀಸರಿಗೂ ದೊಡ್ಡ ತಲೆನೋವಾಗಿತ್ತು. ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಚಿತ್ರಮಂದಿರದಲ್ಲಿ ಫೈರಿಂಗ್ ಮಾಡಿದ್ದ ಆರೋಪಿಯನ್ನು ಕೊನೆಗೂ ಬಂಧಿಸಿ ಜೈಲಿಗಟ್ಟಿದ್ದಾರೆ.

    ಅದು ಏಪ್ರಿಲ್ 19, ಸಮಯ ರಾತ್ರಿ ಸುಮಾರು 10 ಗಂಟೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿದ್ದ ಜನರೆಲ್ಲ ಕೆಜಿಎಫ್ 2 ಚಿತ್ರ ವೀಕ್ಷಣೆ ಮಾಡುತ್ತಿದ್ದರು. ಚಿತ್ರ ಆರಂಭವಾಗಿ ಕೆಲವೇ ನಿಮಿಷಗಳಲ್ಲಿ ಗುಂಡಿನ ಸದ್ದು ಕೇಳಿಸಿತ್ತು. ತಾಲೂಕಿನ ಮುಗಳಿ ಗ್ರಾಮದ ವಸಂತ್ ಕುಮಾರ್ ಮೇಲೆ ಗುಂಡು ಹಾರಿಸಲಾಗಿತ್ತು. ಗುಂಡಿನ ದಾಳಿಗೆ ಒಳಗಾಗಿದ್ದ ಯುವಕ ರಕ್ತಸಿಕ್ತವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ.

    ತಕ್ಷಣವೇ ಗಾಯಾಳಿಗೆ ಶಿಗ್ಗಾಂವಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗಲೂ ವಸಂತ್ ಕುಮಾರ್ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದ ಪೊಲೀಸರು ಆರೋಪಿ ಪತ್ತೆಗಾಗಿ ತನಿಖೆಗೆ ಇಳಿದಿದ್ದರು.

    ಚಿತ್ರಮಂದಿರದಲ್ಲಿ ಕತ್ತಲು ಕಳೆದು ಬೆಳಕು ಹಚ್ಚುವುದರೊಳಗೆ ಗುಂಡು ಹಾರಿಸಿದ್ದ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದ. ಹೀಗಾಗಿ ಆರೋಪಿಯನ್ನು ಗುರುತಿಸುವುದು ಅಷ್ಟು ಸುಲಭದ ಕೆಲಸ ಆಗಿರಲಿಲ್ಲ. ಆದರೂ ತನಿಖೆಗೆ ಇಳಿದಿದ್ದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಶಿಗ್ಗಾಂವಿ ಪಟ್ಟಣದ ನಿವಾಸಿ ಮಂಜುನಾಥ್ ಅಲಿಯಾಸ್ ಸಂತೋಷ್ ಅಲಿಯಾಸ್ ಮಲ್ಲಿಕ್ ಪಾಟೀಲ್ ಎಂದು ಗುರುತು ಪತ್ತೆ ಮಾಡಿದರು. ಆದರೆ ಆರೋಪಿ ಮಾತ್ರ ಪೊಲೀಸರ ಕೈಗೆ ಸಿಗದಂತೆ ಗೋವಾ, ಮಹಾರಾಷ್ಟ್ರ ಎಂಬಂತೆ ಅಲ್ಲಿ ಇಲ್ಲಿ ಓಡಾಡಿಕೊಂಡಿದ್ದ. ಆರೋಪಿಯ ಹೆಡೆಮುರಿ ಕಟ್ಟಲೇಬೇಕು ಎಂದು ಆತನ ಬೆನ್ನು ಬಿದ್ದಿದ್ದ ಪೊಲೀಸರು ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿ, ಕೊನೆಗೂ ಆತನನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಸನ್ನಿ ಲಿಯೋನ್: ಮಂಡ್ಯ ಫ್ಯಾನ್ಸ್ ಪ್ರೀತಿಗೆ ಧನ್ಯವಾದ ತಿಳಿಸಿದ ಸನ್ನಿ

    ಒಂದು ತಿಂಗಳ ಕಾಲ ಕಾರ್ಯಾಚರಣೆ ನಡೆಸಿದ ಪೊಲೀಸರು ಗುರುವಾರ(ಮೇ 19) ಬೆಳ್ಳಂಬೆಳಗ್ಗೆ ಕಾರವಾರ ಜಿಲ್ಲೆ ಮುಂಡಗೋಡ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನಿಂದ ಒಂದು ಗನ್, ಹದಿನೈದು ಜೀವಂತ ಗುಂಡುಗಳು, ಎರಡು ಖಾಲಿ ಕೋಕಾ, ಒಂದು ಸ್ಕೂಟಿ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಿದ್ದಾರೆ. ಘಟನೆ ಬಳಿಕ ಮಂಜುನಾಥ್‌ಗೆ ಪರಾರಿಯಾಗಲು ನೆರವು ನೀಡಿದ್ದ ಬಂಕಾಪುರ ಪಟ್ಟಣದ ನಿವಾಸಿ ಇಸ್ಮಾಯಿಲ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ತ್ರಿಶೂಲ ದೀಕ್ಷೆ, ತರಬೇತಿ ಪ್ರಕರಣ – ಸಾಯಿ ಶಂಕರ ವಿದ್ಯಾ ಸಂಸ್ಥೆಯಿಂದ ಟಿಸಿ ಪಡೆದ ಮೂವರು ಮುಸ್ಲಿಂ ವಿದ್ಯಾರ್ಥಿಗಳು

    ಚಿತ್ರಮಂದಿರದಲ್ಲಿ ಗಾಯಗೊಂಡಿದ್ದ ವಸಂತ್ ಕುಮಾರ್ ಹಾಗೂ ಆತನ ಸ್ನೇಹಿತರು ಚಿತ್ರವೀಕ್ಷಣೆ ವೇಳೆ ಅವರು ಕುಳಿತಿದ್ದ ಮುಂದಿನ ಸೀಟು ಖಾಲಿ ಇತ್ತು. ಖಾಲಿ ಸೀಟಿನ ಮೇಲೆ ಕಾಲಿಟ್ಟು ಕುಳಿತಿದ್ದ ಅವರಿಗೆ ಆರೋಪಿ ಮಂಜುನಾಥ್ ತಾಕೀತು ಮಾಡಿದ್ದ. ಆಗ ಮಾತಿಗೆ ಮಾತು ಬೆಳೆದಿತ್ತು. ಬಳಿಕ ಆರೋಪಿ ಮಂಜುನಾಥ್ ಕೆಲವು ನಿಮಿಷಗಳ ಕಾಲ ಚಿತ್ರಮಂದಿರದಿಂದ ಹೊರಗೆ ಹೋಗಿ ಮತ್ತೆ ಒಳಗೆ ಬಂದು ವಸಂತ್ ಕುಮಾರ್ ಮೇಲೆ ಗುಂಡು ಹಾರಿಸಿ ಪರಾಯಾಗಿದ್ದ. ಘಟನೆಯಲ್ಲಿ ವಸಂತ್ ಕುಮಾರ್ ಹೊಟ್ಟೆ ಮತ್ತು ಕಾಲಿಗೆ ಗುಂಡು ತಗುಲಿ ಗಾಯಗಳಾಗಿದ್ದವು. ಶೂಟೌಟ್ ಪ್ರಕರಣದ ಆರೋಪಿ ಬಂಧನದಿಂದ ಶಿಗ್ಗಾಂವಿ ಪಟ್ಟಣ ಹಾಗೂ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.

  • ಹೀರೋ ಅಲ್ಲ, ವಿಲನ್ ಬರುತ್ತಿದ್ದಾರೆ – ಅಭಿಮಾನಿಗಳಿಗೆ ರಾಕಿಭಾಯ್ ಗುಡ್‍ನ್ಯೂಸ್

    ಹೀರೋ ಅಲ್ಲ, ವಿಲನ್ ಬರುತ್ತಿದ್ದಾರೆ – ಅಭಿಮಾನಿಗಳಿಗೆ ರಾಕಿಭಾಯ್ ಗುಡ್‍ನ್ಯೂಸ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ -2’ ಸಿನಿಮಾಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಕೆಜಿಎಫ್ ಅಂಗಳದಿಂದ ಸ್ವಾತಂತ್ರ್ಯ ದಿನಾಚರಣೆಯಂದು ಅಭಿಮಾನಿಗಳಿಗೆ ಒಂದು ಗುಡ್‍ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ: ಕೆಜಿಎಫ್ ಅಧೀರನಿಗೆ ಕ್ಯಾನ್ಸರ್- ಶೀಘ್ರ ಚಿಕಿತ್ಸೆಗೆ ಅಮೆರಿಕಕ್ಕೆ ಹಾರಿದ ಸಂಜಯ್ ದತ್

    ಇತ್ತೀಚೆಗಷ್ಟೆ ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಿನಿಮಾ ಕುರಿತು ಶೀಘ್ರದಲ್ಲೆ ಅಪ್‍ಡೇಟ್ ನೀಡುವುದಾಗಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಇಂದು ಯಶ್ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋ ತುಣುಕನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಿನಿಮಾದ ಅಪ್‍ಡೇಟ್ ಏನೆಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ಯಶ್ ಶೇರ್ ಮಾಡಿರುವ ವಿಡಿಯೋದಲ್ಲಿ ಇದೇ 17 ರಂದು ಅಂದರೆ ಸೋಮವಾರ ಸಿನಿಮಾದ ಹೀರೋ ಅಲ್ಲ. ವಿಲನ್ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಕೂಡ “ಹೀರೋ ಅಲ್ಲ, ವಿಲನ್ ಬರುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸೋಮವಾರ ಕೆಜಿಎಫ್ ಸಿನಿಮಾದ ಖಳನಟನ ಪೋಸ್ಟರ್ ರಿಲೀಸ್ ಮಾಡುವ ಸಾಧ್ಯತೆ ಇದೆ.

    https://www.instagram.com/p/CD5mThZHPKm/?igshid=1ffhhnknmgvsb

    ‘ಕೆಜಿಎಫ್-1’ ಧೂಳೆಬ್ಬಿಸಿದ ಬಳಿಕ ಬಹುನಿರೀಕ್ಷಿತ ‘ಕೆಜಿಎಫ್-2’ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಯಶ್ ಅಭಿನಯದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು, ದೇಶ ವಿದೇಶಗಳಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿದೆ. ಬಾಲಿವುಡ್ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರು ಚಿತ್ರ ತಂಡ ಸೇರಿರುವುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.