ಮಡಿಕೇರಿ: ಇದೇ ಅ.17ರಂದು ಜರುಗುವ ಕೊಡಗಿನ ಪವಿತ್ರ ಕಾವೇರಿ ತೀರ್ಥೋದ್ಭವ ವೀಕ್ಷಣೆಗೆ ತಲಕಾವೇರಿ ಕ್ಷೇತ್ರಕ್ಕೆ ಭಕ್ತರಿಗೆ ಮುಕ್ತ ಅವಕಾಶ ಕಲ್ಪಿಸಲಾಗುವುದೆಂದು ಶಾಸಕ ಕೆ.ಜಿ.ಬೋಪಯ್ಯ ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು, ಜಿಲ್ಲೆಯ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಲಾಗಿದೆ. ಈ ವೇಳೆ ತೀರ್ಥೋದ್ಭವ ಸಂದರ್ಭದಲ್ಲಿ ಭಕ್ತರಿಗೆ ಭಾಗವಹಿಸಲು ಕೋವಿಡ್ ನಿಯಮದಂತೆ ಮುಕ್ತ ಅವಕಾಶ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಇದಕ್ಕೆ ಸಿಎಂ ಸಮ್ಮತಿಸಿದ್ದು, ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹಾಗಾಗಿ ಈ ಬಾರಿ ಅವಕಾಶ ಸಿಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಗಣೇಶೋತ್ಸವದಂತೆ ದುರ್ಗಾದೇವಿ ಪ್ರತಿಷ್ಠಾಪನೆಗೂ ಪಾಲಿಕೆ ನಿರ್ಬಂಧ
ಪೂರ್ವ ಸಿದ್ಧತಾ ಸಭೆ!
ಪ್ರಸ್ತುತ ತಲಕಾವೇರಿ – ಭಗಂಡೇಶ್ವರ ವ್ಯವಸ್ಥಾಪನಾ ಸಮಿತಿ ಇಲ್ಲದೆ ಇರುವುದರಿಂದ ಸಂಪ್ರದಾಯದಂತೆ ತುಲಾ ಸಂಕ್ರಮಣ ಜಾತ್ರೆಯ ಜವಾಬ್ದಾರಿ ವಹಿಸುವ ನಿಟ್ಟಿನಲ್ಲಿ 7ರಂದು ಭಾಗಮಂಡಲದಲ್ಲಿ ಪೂರ್ವ ಸಿದ್ಧತಾ ಸಭೆ ಏರ್ಪಡಿರುವುದಾಗಿ ಅವರು ಸ್ಪಷ್ಟಪಡಿಸಿದರು.
– ರಾಷ್ಟ್ರೀಯ ಪಕ್ಷದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು
ಮಡಿಕೇರಿ: ದೇಶಕ್ಕಾಗಿ, ಸ್ವತಂತ್ರಕ್ಕಾಗಿ ಇದುವರೆಗೆ ಆರ್‌ಎಸ್‌ಎಸ್‌ನ ಯಾರು ಸತ್ತಿಲ್ಲ. ಬಿಜೆಪಿಯವರೆ ತಾಲೀಬಾನಿಗಳು ಎಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಟಿಪ್ಪುವಿನ ವಂಶಸ್ಥರಾಗಿರಬೇಕು. ಹೀಗಾಗಿ ಅವರು ಬಿಜೆಪಿಯವರು ತಾಲೀಬಾನಿಗಳು ಎಂದಿದ್ದಾರೆ ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ದೇಶಭಕ್ತರನ್ನು ಬೆಳೆಸಿದೆ. ಇಂದಿಗೂ ಜನರಲ್ಲಿ ದೇಶಭಕ್ತಿ ಮೂಡಿಸುತ್ತಿದೆ. ಆದರೆ ಟಿಪ್ಪುಸುಲ್ತಾನ್ ರಾಜ್ಯದಲ್ಲಿ ಸಾವಿರಾರು ಜನರನ್ನು ಬಲವಂತದಿಂದ ಮತಾಂತರ ಮಾಡಿದ. ನೂರಾರು ಹಿಂದೂ ದೇವಾಲಯಗಳನ್ನು ನಾಶ ಮಾಡಿದ. ಅಂತವನ ಜಯಂತಿಯನ್ನು ಆಚರಣೆಗೆ ತಂದಿದ್ದವರು ಸಿದ್ದರಾಮಯ್ಯ ಎಂದು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರೇ ಒಬ್ಬ ದೊಡ್ಡ ಭಯೋತ್ಪಾದಕ: ಕಟೀಲ್
ಹಿಂದೂ ಮುಸ್ಲಿಂ ಎಂಬ ಬೇಧ ಭಾವಗಳನ್ನು ಸೃಷ್ಟಿಸಿ ಸಮಾಜದಲ್ಲಿ ಒಡಕು ಮೂಡಿಸುವ ಸಿದ್ದರಾಮಯ್ಯನವರದು ತಾಲೀಬಾನ್ ಸಂಸ್ಕೃತಿ ಅಲ್ಲವೆ? ಎಂದು ಪ್ರಶ್ನಿಸಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯನವರು ಇಂತಹ ಮಾತನಾಡುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ಪಕ್ಷದ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕಾಗಿತ್ತು ಎಂದು ಬೋಪಯ್ಯ ಎಚ್ಚರಿಕೆಯನ್ನು ನೀಡಿದ್ದಾರೆ.
ಮಡಿಕೇರಿ: ಮತಾಂತರ ತಡೆಗೆ ಉತ್ತರ ಪ್ರದೇಶದ ರೀತಿಯಲ್ಲಿ ರಾಜ್ಯದಲ್ಲೂ ಕಾನೂನು ತರಬೇಕಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ವಿಧಾನಸಭೆಯಲ್ಲಿಂದು ಒತ್ತಾಯಿಸಿದರು.
ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಶಾಸಕ ಗೂಳಿಹಟ್ಟಿ ಶೇಖರ್, ಚಿತ್ರದುರ್ಗದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಮತಾಂತರವಾಗಿದ್ದಾರೆ. ನನ್ನ ಹೆತ್ತ ತಾಯಿಯನ್ನೂ ಮತಾಂತರ ಮಾಡಿದ್ದಾರೆ ಎಂದು ಹೇಳಿದರು. ಇದೇ ವೇಳೆ ಮಾತನಾಡಿದ ಬೋಪಯ್ಯ, ಎಲ್ಲ ಕಡೆ ಮತಾಂತರ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕೆಂದರೆ ಕಾಯ್ದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನನ್ನ ಹೆತ್ತ ತಾಯಿಯನ್ನ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್
ಕೆಲವು ಚರ್ಚ್‍ಗಳಲ್ಲಿ ಬ್ರೈನ್ ವಾಶ್ ಮಾಡುತ್ತಿದ್ದಾರೆ, ತಾಯಿಗೂ ಬ್ರೈನ್ ವಾಶ್ ಮಾಡಿದ್ದಾರೆ. ದಲಿತರು, ಹಿಂದುಳಿದ ವರ್ಗದವರನ್ನು ಜಾಸ್ತಿ ಮತಾಂತರ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಪಿಡುಗು. ಇದಕ್ಕೆ ಕಡಿವಾಣ ಹಾಕಬೇಕು ಎಂದು ಗೂಳಿಹಟ್ಟಿ ಶೇಖರ್ ಒತ್ತಾಯಿಸಿದರು.
ಸದಸ್ಯರ ಮಾತುಗಳನ್ನು ಕೇಳಿದ ಗೃಹಸಚಿವ ಆರಗ ಜ್ಞಾನೇಂದ್ರ, ಆಮಿಷವೊಡ್ಡಿ ಮತಾಂತರ ಮಾಡುವುದು ಅಪರಾಧ. ಶಾಂತಿ ಭಂಗವುಂಟು ಮಾಡುವ ಆತಂಕವೂ ಇದೆ. ಮುಂದೆ ಏನು ಮಾಡಬೇಕು ಎಂಬ ಕುರಿತು ರಾಜ್ಯ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಹೇಳಿದರು.
ಹಾಸನ: ಬಿಜೆಪಿ ಸರ್ಕಾರವು ದಲಿತ ವಿರೋಧಿ, ಮಹಿಳಾ ವಿರೋಧಿ ಸರ್ಕಾರ ಎಂದು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಹಾಸನದಲ್ಲಿ ಹೇಳಿದ್ದಾರೆ.
ಮಂತ್ರಿಮಂಡಲ ರಚನೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಮಂತ್ರಿಮಂಡಲವು ಅತ್ಯಂತ ಅಸಮತೋಲನದಿಂದ ಕೂಡಿದೆ. 30 ಜನ ಮಂತ್ರಿಗಳಿದ್ದರೂ 17 ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಿಲ್ಲ. ಅದು ಅಲ್ಲದೇ ಆರೋಪ ಇರೋರಿಗೆ ಮಂತ್ರಿ ಸ್ಥಾನವನ್ನು ಕೊಟ್ಟಿದ್ದಾರೆ. ಇವರು ದಲಿತ ವಿರೋಧಿ ಮತ್ತು ಮಹಿಳಾ ವಿರೋಧಿ ಸರ್ಕಾರವೆಂದು ನಾನು ಘಂಟಾಘೋಷವಾಗಿ ಹೇಳುತ್ತೇನೆ ಎಂದು ಕಿಡಿಕಾರಿದರು.
ಸರ್ಕಾರವು ಹೆಚ್ಚು ಸಂಖ್ಯೆಯಿರುವ ಬಲಗೈ ಸಮುದಾಯಕ್ಕೆ ಮಂತ್ರಿ ಸ್ಥಾನ ಕೊಟ್ಟಿಲ್ಲ. ಮಹಿಳೆಯರಿಗೂ ಸಹ ಸರಿಯಾದ ಪ್ರಾತಿನಿಧ್ಯ ಕೊಟ್ಟಿಲ್ಲ. ಗೊಲ್ಲ ಸಮಾಜದ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ. ಚುನಾವಣೆ ವೇಳೆ ಶಿರಾದ ಗೊಲ್ಲ ಸಮುದಾಯಕ್ಕೆ ನಿಗಮ ಸ್ಥಾಪಿಸುತ್ತೇವೆ ಎಂದಿದ್ದರು. ಆದರೆ ಆ ಕಡೆ ಗಮನವೇ ಕೊಟ್ಟಿಲ್ಲ. ರಾಜಕಾರಣಿಗಳು ಸಂದರ್ಭಕ್ಕೆ ತಕ್ಕಂತೆ ಏನಾದ್ರು ಆಶ್ವಾಸನೆ ಕೊಡುತ್ತೇವೆ. ಆದರೆ ಅದನ್ನು ಈಡೇರಿಸುವುದಿಲ್ಲ ಎಂದು ಟೀಕಿಸಿದ್ದಾರೆ.
ಹಾಸನದಲ್ಲಿನ ಪ್ರವಾಹ ಕುರಿತು ಮಾತನಾಡಿದ ಅವರು, ಇಲ್ಲಿ 4 ವರ್ಷಗಳಿಂದ ಮಳೆಯಾಗುತ್ತಿದೆ. ಸಚಿವರು, ಅಧಿಕಾರಿಗಳು ಮಳೆ ಬಂದಾಗ ಬಂದು ಸಮೀಕ್ಷೆ ಮಾಡುತ್ತಿದ್ದಾರೆ. ಆ ಸಮೀಕ್ಷೆಗೆ ತಕ್ಕಂತೆ ಹಣವನ್ನು ಸಹ ಸರಿಯಾಗಿ ಬಿಡುಗಡೆ ಮಾಡುತ್ತಿಲ್ಲ. 2017 ರಲ್ಲಿ 321 ಕೋಟಿ ರೂ. 2018 ರಲ್ಲಿ 178 ಕೋಟಿ ರೂ. 2019 ರಲ್ಲಿ 160 ಕೋಟಿ ರೂ. 2021 ರಲ್ಲಿ 78 ಕೋಟಿ ರೂ ನಷ್ಟ ಎಂದು ಜಿಲ್ಲಾಡಳಿತ ಸಮೀಕ್ಷೆ ಮಾಡಿದೆ ಎಂದು ತಿಳಿಸಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾರವಾರಕ್ಕೆ ಪ್ರವಾಹ ವಿಚಾರವಾಗಿ ಹೋಗಿ ಬಂದಿದ್ದಾರೆ. ಅದೇ ರೀತಿ ಎಲ್ಲ ಜಿಲ್ಲೆಗೂ ಸಿಎಂ ಬಂದು ಇಲ್ಲಿನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಅವರು ಸಕಲೇಶಪುರಕ್ಕೂ ಬರಬೇಕು ನಾವು ಸ್ವಾಗತ ಮಾಡುತ್ತೇವೆ. ಅವರು ಇಲ್ಲಿಗೆ ಬಂದಾಗ ಅನುಕೂಲ ಹೆಚ್ಚಾಗುತ್ತೆ. ಮಳೆಯಿಂದ ಕಾಫಿ, ಏಲಕ್ಕಿ, ಮೆಣಸು, ಭತ್ತದ ಬೆಳೆಗಳು ಸಾಕಷ್ಟು ಹಾನಿಯಾಗಿದೆ. ಸಕಲೇಶಪುರ ತಾಲೂಕಿನಲ್ಲಿ 225 ಕಿಲೋಮೀಟರ್ ರಸ್ತೆ ಹಾಳಾಗಿದೆ. ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಕನಿಷ್ಠ ನೂರು ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರನ್ನು ಅವರ ನಿವಾಸದಲ್ಲಿ ಸಿಎಂ ಭೇಟಿಯಾದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿ ಅವರ ಸಜ್ಜನಿಕೆ ಸೌಜನ್ಯವನ್ನು ಮೆಚ್ಚುತ್ತೇನೆ. ಅದನ್ನು ಸ್ವಾಗತ ಮಾಡುತ್ತೇನೆ. ಅದು ಅಲ್ಲದೇ ದೇವೇಗೌಡರು ಅತ್ಯಂತ ಹಿರಿಯ ರಾಜಕಾರಣಿ, ಮಾಜಿಪ್ರಧಾನಮಂತ್ರಿಯಾಗಿದ್ದವರು. ರಾಜ್ಯದ ಹಿತದೃಷ್ಟಿಯಿಂದ ದೇವೇಗೌಡರ ಮನೆಗೆ ಭೇಟಿ ಕೊಟ್ಟಿದ್ದಾರೆ. ಅವರ ಸಲಹೆ ಎಲ್ಲರಿಗೂ ಅಗತ್ಯವಿದೆ. ಅದನ್ನು ಪ್ರಶ್ನೆ ಮಾಡುವುದು ಸಣ್ಣತನ, ಅಲ್ಪತನ, ಅನುಭವದ ಕೊರತೆ ಇರುವವರು ಮಾತ್ರ ಆ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದು ಶಾಸಕ ಪ್ರೀತಂಗೌಡ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು- ಪ್ರೀತಂ ಗೌಡಗೆ ಎಚ್‍ಡಿಕೆ ತಿರುಗೇಟು
ಮಡಿಕೇರಿ: ಸಚಿವ ಸಂಪುಟ ವಿಸ್ತರಣೆ ವೇಳೆಯಲ್ಲಿ ಕೊಡಗು ಜಿಲ್ಲೆಗೂ ಒಂದು ಮಂತ್ರಿಸ್ಥಾನ ಸಿಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇದ್ದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಕೊನೆಗಳಿಗೆಯಲ್ಲಿ ಸಚಿವ ಸ್ಥಾನ ಕೈಯಿತಪ್ಪಿ ಹೋಗಿದೆ. ಈ ಕುರಿತಾಗಿ ಮಾಧ್ಯಮದವರೊಂದಿಗೆ ಅಪ್ಪಚ್ಚು ರಂಜನ್ ಮಾತಣಾಡಿದ್ದಾರೆ.
ನನ್ನ ಬೆನ್ನಿಗೆ ಬಿದ್ದ ಬೇತಾಳದಿಂದ ನನಗೆ ಸಚಿವಸ್ಥಾನ ಸಿಗಲಿಲ್ಲ. ನಾನೇ ಬೆಳೆಸಿದ ಬೇತಾಳ ನನ್ನ ತಲೆಗೆ ಹೊಡೆಯುತ್ತಿದೆ. ಆ ಬೇತಾಳವನ್ನು ಬೆಳೆಸಬಾರದೆಂದು ನನಗೆ ಗೊತ್ತಿರಲಿಲ್ಲ, ಈಗ ಬೇತಾಳ ಎತ್ತರಕ್ಕೆ ಬೆಳೆದು ನನಗೆ ಸಮಸ್ಯೆ ಆಗಿದೆ ಎಂದು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅಕ್ರೋಶ ಹೋರ ಹಾಕಿದ್ದಾರೆ. ಇದನ್ನೂ ಓದಿ: ಯಾಕ್ರೀ ಇಂತಹವರಿಗೆಲ್ಲ ಕೆಲಸ ಕೊಡ್ತೀರಾ, ನಿಮ್ಮನ್ನೆಲ್ಲ ಬಲಿ ಹಾಕ್ತೀವಿ- ರೇವಣ್ಣ ಆಕ್ರೋಶ
ಜಿಲ್ಲೆಯ ಜನ ಪ್ರತಿನಿಧಿಯೊಬ್ಬರು ಹಸ್ತಕ್ಷೇಪ ಮಾಡಿದ ಪರಿಣಾಮದಿಂದಾಗಿ ಈ ಬಾರೀ ಸಚಿವಸ್ಥಾನ ಸಿಕ್ಕಿಲ್ಲ. ಹೈಕಮಾಂಡ್‍ನ ಮೂವರಿಂದ ನನಗೆ ಕರೆ ಬಂದಿತ್ತು. ಸಚಿವಸ್ಥಾನ ಸಿಗೋದು ಖಚಿತ ಅಂತ ಹೈಕಮಾಂಡ್ ಹೇಳಿದ್ದರು. ಆದರೆ ಪಟ್ಟಿ ಬೆಂಗಳೂರಿಗೆ ಬಂದಾಗ ಎಲ್ಲವೂ ಕೈತಪ್ಪಿಹೋಯಿತು. ಅದಕ್ಕೆ ಈ ಬೇತಾಳವೇ ಕಾರಣ. ಸಚಿವ ಸಂಪುಟದಲ್ಲಿ ಜಿಲ್ಲಾವಾರು ಜಾತಿವಾರು ಸಾಮಾಜಿಕ ನ್ಯಾಯ ಇರುವುದಾಗಿ ಹೇಳಿದ್ರು. ಆದರೆ ಕೊಡಗು ಜಿಲ್ಲೆಗೆ ಪ್ರಾತಿನಿಧ್ಯವನ್ನೇ ಕೊಟ್ಟಿಲ್ಲ. ಕೊಡಗನ್ನು ಟೇಕ್ ಈಸ್ ಇಟ್ ಗ್ರ್ಯಾಂಟೆಡ್ ಎಂದು ಮಾಡಿಕೊಳ್ಳಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ರಾಜ್ಯದಲ್ಲಿ ಎಂಟು ಚುನಾವಣೆ ನಡೆದಿವೆ. ಅದರಲ್ಲಿ ಬಿಜೆಪಿ ಏಳು ಬಾರಿ ಸೋತಿದೆ ಮಡಿಕೇರಿಯಲ್ಲಿ ಮಾತ್ರ ಭರ್ಜರಿಯಾಗಿ ಗೆದ್ದಿದ್ದೇವೆ. ಹೀಗೆ ಗೆಲ್ಲಿಸಿದ್ದೇ ತಪ್ಪಾಯಿತಾ? ಜಿಲ್ಲಾವಾರು ಪ್ರಾತಿನಿಧ್ಯ ಕೊಡುತ್ತೇವೆ ಎಂದಿದ್ದರು. ಆದರೆ ಬೆಂಗಳೂರಿಗೆ ಎಂಟು ಸ್ಥಾನ ಮಂಗಳೂರಿಗೆ 3 ಸ್ಥಾನ, ಶಿವಮೊಗ್ಗಕ್ಕೆ ಮೂರುಸ್ಥಾನ ಬೆಳಗಾವಿಗೆ ಐದು ಸ್ಥಾನ ಕೊಡಲಾಗಿದೆ. ಕೊಡಗನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಬೇಸರ ಹೊರಹಾಕಿದರು.
ಸಂಸದರು ಕೂಡ ಇದರ ಬಗ್ಗೆ ಮೌನ ವಹಿಸಿದ್ಯಾಕೆ ?ಅವರಿಗೆ ಜಿಲ್ಲೆಯಿಂದ 80 ಸಾವಿರ ಮತಗಳ ಮುನ್ನಡೆಯನ್ನು ನೀಡಿದ್ದೆವು. ಅವರಾದರೂ ಹೈಕಮಾಂಡ್ ಜೊತೆಗೆ ಮಾತನಾಡಬಹುದಿತ್ತು. ಜಿಲ್ಲೆಯಲ್ಲಿ ನಾಲ್ಕೈದು ಬಾರಿ ಗೆದ್ದವರಿದ್ದಾರೆ ಎಂದು ಹೇಳಬಹುದಿತ್ತು. ಕೊಡಗು ಜಿಲ್ಲೆಯನ್ನು ಇಷ್ಟೊಂದು ಕಡೆಗಣಿಸಿದ್ದು, ಸರಿಯಲ್ಲ. ಇದರಿಂದ ನನಗೆ ಮತ್ತು ಜಿಲ್ಲೆಯ ಜನರಿಗೆ ತೀವ್ರ ಬೇಸರವಾಗಿದೆ ಮುಂದಿನ ಚುನಾವಣೆಗಳಲ್ಲಿ ಖಂಡಿತಾ ಇದರಿಂದ ಪಕ್ಷಕ್ಕೆ ನಷ್ಟವಾಗಲಿದೆ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ.
ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಇದೀಗ ಬಿಜೆಪಿಯಲ್ಲಿ ಒಳ ಜಗಳ ಕಂಡುಬರುತ್ತಿದ್ದು, ಕೊಡಗಿನಲ್ಲೂ ಇಬ್ಬರ ಶಾಸಕರ ನಡುವೆ ಆಂತರಿಕ ಒಳಜಗಳಕ್ಕೆ ಕಾರಣವಾಗುತ್ತಿದೆ.
ಮಡಿಕೇರಿ: ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನಲೆಯಲ್ಲಿ ಜುಲೈ 5ರ ಬಳಿಕವೂ ಕೊಡಗು ಜಿಲ್ಲೆ ಅನ್‍ಲಾಕ್ ಆಗೋದು ಬಹುತೇಕ ಡೌಟ್. ಈ ಕುರಿತು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯ ಹಂಚಿಕೊಂಡಿದ್ದು, ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆ ಆಗದಿದ್ದರೆ ಲಾಕ್‍ಡೌನ್ ತೆರವುಗೊಳಿಸುವುದು ಬೇಡ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜೀವನಕ್ಕಿಂತ ಜೀವ ಮುಖ್ಯ. ಹೀಗಾಗಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆ ಆಗದಿದ್ದರೆ, ಜಿಲ್ಲೆಯಲ್ಲಿ ಲಾಕ್‍ಡೌನ್ ಮುಂದುವರಿಸುವುದು ಅನಿವಾರ್ಯ ಎಂದು ಕೆ.ಜಿ.ಬೋಪಯ್ಯ ಅವರು ಲಾಕ್‍ಡೌನ್ ಮುಂದುವರಿಯುವ ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ಸುಳಿಯಲ್ಲಿ ಕೊಡಗು- ರಾಜ್ಯದಲ್ಲಿಂದು 3,382 ಮಂದಿಗೆ ಪಾಸಿಟಿವ್
ಇತ್ತರೆ ಜಿಲ್ಲೆಗಳಲ್ಲಿ ಅನ್‍ಲಾಕ್ ಅಗಿರುವುದರಿಂದ ಲಾಕ್‍ಡೌನ್ ಆಗಿರುವ ಕೊಡಗು ಜಿಲ್ಲೆಗೆ ಹೆಚ್ಚಾಗಿ ಪ್ರವಾಸಿಗರು ಬರುತ್ತಿರುವುದರಿಂದ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಗಡಿ ಭಾಗದಲ್ಲಿಯೂ ಹೆಚ್ಚಾಗಿ ಹೊರ ರಾಜ್ಯದ ಜನರನ್ನು ತಪಾಸಣೆ ನಡೆಸದಿರುವುದರಿಂದ ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ ಎನ್ನಲಾಗಿದೆ. ಅಲ್ಲದೆ ಬಹುತೇಕ ಜಿಲ್ಲೆಗಳಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದೆ. ಹಾಗೆಯೇ ನಮ್ಮ ಜಿಲ್ಲೆಯಲ್ಲೂ ಅನ್‍ಲಾಕ್ ಮಾಡಬೇಕು ಎಂದು ಜಿಲ್ಲೆಯಲ್ಲಿ ಕೆಲವರು ಹೇಳುತ್ತಿದ್ದಾರೆ.
ಕೊಡಗಿನಲ್ಲಿ ಇಂದು 209 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.9.08 ಕ್ಕೆ ಹೆಚ್ಚಳವಾಗಿದೆ. ಈ ಹಿನ್ನೆಲೆ ಅನ್‍ಲಾಕ್ ಮಾಡುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ಬಲವಾಗಿ ಕೇಳಿಬರುತ್ತಿದೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಅದರಲ್ಲೂ ಮಡಿಕೇರಿ ತಾಲೂಕಿನ ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಮಿತಿಮೀರುತ್ತಿದೆ. ಇದರೊಂದಿಗೆ ಮಳೆಗಾಲದಲ್ಲಿ ರಸ್ತೆ ಸಂಪರ್ಕ ಕಡಿಗೊಳ್ಳುವ ಭೀತಿ ಎದುರಾಗಿದೆ. ಹಾಗಾಗಿ ಹೋಬಳಿ ಮಟ್ಟದಲ್ಲಿ ಕೋವಿಡ್ ಆಸ್ಪತ್ರೆ ತೆರೆಯುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮಡಿಕೇರಿ ತಾಲೂಕಿನ ನಾಪೋಕ್ಲುನಲ್ಲಿ ನಿತ್ಯ ಹತ್ತಾರು ಪ್ರಕಣಗಳು ದಾಖಲಾಗುತ್ತಿದ್ದು, ಒಂದೇ ವಾರದಲ್ಲಿ ನಾಪೋಕ್ಲು ಪಟ್ಟಣವೊಂದರಲ್ಲೇ ನಾಲ್ವರು ಸೋಂಕಿನಿಂದ ಮೃತಪಟ್ಟಿದ್ದಾರೆ. ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ 12 ಕ್ಕೂ ಹೆಚ್ಚು ಗ್ರಾಮಗಳಿದ್ದು, 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಲಾಕ್‍ಡೌನ್ ಆದ ಬಳಿಕ ಬೆಂಗಳೂರಿನಿಂದ ತಮ್ಮ ಗ್ರಾಮಗಳಿಗೆ ಜನ ವಾಪಸ್ ಆಗಿದ್ದರಿಂದಾಗಿ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದೆ. ಇದನ್ನೂ ಓದಿ: ಕೋಣಗಳು ಕಾದಾಡಿದ್ದಕ್ಕೆ ಬಡಿದಾಡಿಕೊಂಡ ಮಾಲೀಕರು – ಆಸ್ಪತ್ರೆಗೆ ದಾಖಲು
ಕೋವಿಡ್ ಲಕ್ಷಣಗಳಿಂದ ಗ್ರಾಮದ ಹಲವು ಮಂದಿ ಬಳಲುತ್ತಿದ್ದಾರೆ. ಕೋವಿಡ್ ಆಸ್ಪತ್ರೆ ದೂರದಲ್ಲಿರುವುದರಿಂದ ಜನರು ಆಸ್ಪತ್ರೆಗೆ ಹೋಗಿ ಪರಿಶೀಲನೆ ಮಾಡಿಸಿಕೊಳ್ಳುವುದು ತಡವಾಗುತ್ತಿದೆ. ಜೊತೆಗೆ ಸೋಂಕಿತರು ಸ್ವತಃ ತಾವೇ ಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಸೋಂಕಿನಿಂದ ಆರೋಗ್ಯ ಸ್ಥಿತಿ ತೀವ್ರ ಗಂಭೀರಗೊಂಡ ಬಳಿಕ ಅನಿವಾರ್ಯವೆಂದು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಹೀಗೆ ತಡವಾಗಿ ಆಸ್ಪತ್ರೆಗೆ ದಾಖಲಾಗುವುತ್ತಿರುವುದರಿಂದ ಚಿಕಿತ್ಸೆ ಫಲಿಸದೆ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.
ಮತ್ತೊಂದೆಡೆ ಇನ್ನೇನು ಮಳೆಗಾಲ ಆರಂಭವಾಗುತ್ತಿರುವುದರಿಂದ ಕಾವೇರಿ ನದಿ ತುಂಬಿದಲ್ಲಿ ನಾಪೋಕ್ಲು ಸುತ್ತಮುತ್ತ ರಸ್ತೆಗಳೆಲ್ಲಾ ಸಂಪೂರ್ಣ ಬ್ಲಾಕ್ ಆಗಲಿವೆ. ಇಂತಹ ಸ್ಥಿತಿ ನಿರ್ಮಾಣವಾದಲ್ಲಿ ನಾಪೋಕ್ಲು ಭಾಗದ ನೂರಾರು ಸೋಂಕಿತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎನ್ನೋದು ಸ್ಥಳೀಯರ ಅಭಿಪ್ರಾಯ. ಇದನ್ನೂ ಓದಿ: ಜಾಮೀನಿನ ಮೇಲೆ ಹೊರಬಂದಿದ್ದವ ಆರೋಗ್ಯ ಇಲಾಖೆಯ ಲ್ಯಾಪ್‍ಟಾಪ್ ಎಗರಿಸಿ ಸಿಕ್ಕಿಬಿದ್ದ
ಈ ಕುರಿತು ಶಾಸಕ ಬೋಪಯ್ಯ ಅವರನ್ನು ಕೇಳಿದಾಗ, ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲೇ ಸಾಕಷ್ಟು ಬೆಡ್ ಗಳ ವ್ಯವಸ್ಥೆ ಇದೆ. ಜೊತೆಗೆ ವಿವಿಧ ಕೋವಿಡ್ ಕೇರ್ ಸೆಂಟರ್ ಗಳಲ್ಲೂ ಬೆಡ್ ಗಳು ಖಾಲಿ ಇವೆ. ಹೀಗಿರುವಾಗ ನಾಪೋಕ್ಲು ಭಾಗಕ್ಕೆ ಕೋವಿಡ್ ಆಸ್ಪತ್ರೆ ಅಗತ್ಯವಿಲ್ಲ. ಈಗಾಗಲೇ ಜಿಲ್ಲೆಯಲ್ಲಿ ಶೇ.50 ರಷ್ಟು ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇದೆ. ಆದರೂ ಪಟ್ಟಣದ ಪ್ರಥಮ ದರ್ಜೆ ಕಾಲೇಜು ಕಟ್ಟಡದಲ್ಲಿ ಕೋವಿಡ್ ಆಸ್ಪತ್ರೆ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯವಾದಲ್ಲಿ ತೆರೆಯಲಾಗುವುದು ಎಂದಿದ್ದಾರೆ.
ಮಡಿಕೇರಿ: ಸಚಿವ ಯೋಗೇಶ್ವರ್ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ ಎಂದು ವಿರಾಜ್‍ಪೇಟೆ ಬಿಜೆಪಿ ಶಾಸಕ ಕೆ.ಜಿ ಬೋಪಯ್ಯ ಗರಂ ಆಗಿದ್ದಾರೆ.
ಮಡಿಕೇರಿ ತಾಲೂಕಿನ ನಾಪೋಕ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಮಾತನ್ನೆಲ್ಲ ನಾನು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಅಂತವರ ಮಾತಿಗೆಲ್ಲಾ ಯಾವುದೇ ಬೆಲೆ ಇಲ್ಲ ಎಂದು ತಿರುಗೇಟು ನೀಡಿದರು.
ಸಿಎಂ ಯಡಿಯೂರಪ್ಪ ಅವರೇ ಮುಂದೆಯೂ ಸಿಎಂ ಆಗಿ ಮುಂದುವರಿಯುತ್ತಾರೆ. ಸಿಎಂ ಸ್ಥಾನದಿಂದ ಬದಲಾವಣೆಯ ಮಾತೇ ಇಲ್ಲ ಎಂದು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ರಾಷ್ಟ್ರೀಯ ಅಧ್ಯಕ್ಷರು ಅದನ್ನೇ ಹೇಳಿದ್ದಾರೆ.
ಇತ್ತೀಚಿನ ದಿನಗಳ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯೋಗೇಶ್ವರ್ ಅವರನ್ನು ಸಚಿವ ಸಂಪುಟದಿಂದ ಕೈಬೀಡುವಂತೆ ಬಿಜೆಪಿ ಸಚಿವ ಶಾಸಕರು ಹೇಳತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಆತನ ಬಗ್ಗೆ ಮಾತನಾಡುವಷ್ಟು ಯೋಗೇಶ್ವರ್ ದೊಡ್ಡ ವ್ಯಕ್ತಿ ಅಲ್ಲ ಎಂದು ಶಾಸಕರು ಗರಂ ಆಗಿದ್ದಾರೆ.
ಮಡಿಕೇರಿ: ಕೊರೋನಾ ವೈರಸ್‍ನ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಮೈಸೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ಪರಿಸ್ಥಿತಿ ಹಾಗೂ ಪರಿಹಾರ ಕ್ರಮಗಳ ಕುರಿತು ಚರ್ಚೆ ನಡೆಸಲು ವಿರಾಜಪೇಟೆಗೆ ಸಂಸದ ಪ್ರತಾಪ್ ಸಿಂಹ, ಸಚಿವ ಸೋಮಣ್ಣ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಾಲಿಗೆ ನಮಸ್ಕರಿಸಲು ಮುಂದಾದ ಪ್ರತಾಪ್ ಸಿಂಹ ಅವರನ್ನು ತಡೆದ ಶಾಸಕ ಬೋಪಯ್ಯ ಅವರು ದೂರದಿಂದಲೇ ನಮಸ್ಕರಿಸಲು ತಿಳಿಸಿದ ಘಟನೆ ನಡೆಯಿತು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರೊಂದಿಗೆ ವಿರಾಜಪೇಟೆಗೆ ಸಂಸದ ಪ್ರತಾಪ್ ಸಿಂಹ ಆಗಮಿಸಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕೆ.ಜಿ ಬೋಪಯ್ಯ ಅವರ ಕಾಲಿಗೆ ನಮಸ್ಕರಿಸಲು ಪ್ರತಾಪ್ ಸಿಂಹ ಮುಂದಾದರು. ಕೂಡಲೇ ಸಂಸದರನ್ನು ತಡೆದ ಬೋಪಯ್ಯ ಅವರು, ‘ದೂರವೇ ನಿಂತು ನಮಸ್ಕರಿಸಿ. ನೀವು ಮೈಸೂರಿನವರು ಸ್ವಲ್ಪ ಭಯವಾಗುತ್ತದೆ ಎಂದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಸಂಸದರು, ‘ಮೈಸೂರಿನವರನ್ನು ಕಂಡ್ರೆ ಭಯ ನಾ ಸರ್..!’ ಎಂದು ಸ್ಥಳದಿಂದ ತೆರಳಿದರು. ಇತ್ತ ಪಕ್ಷದ ಕಾರ್ಯಕರ್ತರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಉಸ್ತುವಾರಿ ಸಚಿವರನ್ನು ಮುಗಿಬಿದ್ದು ಮಾತಾನಾಡಿಸುವ ದೃಶ್ಯ ಕಂಡು ಬಂತು.
ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶವೇ ಲಾಕ್‍ಡೌನ್ ಆಗಿದೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾಕಷ್ಟು ತಿಳುವಳಿಕೆ ನೀಡಲಾಗುತ್ತಿದೆ. ಸಚಿವ ಸೋಮಣ್ಣ ಬಂದಿದ್ದ ವೇಳೆ ಸ್ಥಳೀಯರು, ಕಾರ್ಯಕರ್ತರು ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳಲಿಲ್ಲ. ಘಟನೆ ಬಳಿಕ ಎಚ್ಚೆತ್ತ ಪೊಲೀಸರು ಬಿಜೆಪಿ ಕಾರ್ಯಕರ್ತರು ಮತ್ತು ಅಧಿಕಾರಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಪದೇ ಪದೇ ಸೂಚನೆ ನೀಡಿದರು. ಪೊಲೀಸರ ಸೂಚನೆಯ ಬಳಿಕವೂ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿರ್ಲಷ್ಯ ವಹಿಸಲಾಗಿತ್ತು.
ಮಡಿಕೇರಿ: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಎದುರೇ ಶಾಸಕ, ಮಾಜಿ ಸ್ಪೀಕರ್ ಕೆಜಿ ಬೋಪಯ್ಯ ಹಾಗೂ ಕಾಫಿ ಪ್ಲಾಂಟರ್ ಒಬ್ಬರ ಜೊತೆ ಹಟ್ಟಿಹೊಳೆಯಲ್ಲಿ ಮಾತಿನ ಚಕಮಕಿ ನಡೆಯಿತು.
ಕೊಡಗಿನ ಪ್ರವಾಹ ಸಂಭವಿಸಿದ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಚಿವೆ ಭೂಕುಸಿತವಾಗಿರುವ ಹಟ್ಟಿಹೊಳೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಅಲ್ಲಿನ ನೆರೆ ಸಂತ್ರಸ್ತರೊಂದಿಗೆ ಮಾತಕತೆ ನಡೆಸಿ ಮಾಹಿತಿ ಪಡೆದರು.
ಈ ವೇಳೆ ಕಾಫಿ ಪ್ಲಾಂಟರ್ ಒಬ್ಬರು ಇಲ್ಲಿನ ಗ್ರಾಮಗಳ ಸ್ಥಳಾಂತರ ಮಾಡುವಂತೆ ಮನವಿ ಮಾಡಿದರು. ತಕ್ಷಣ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಜಿ ಬೋಪಯ್ಯ ಅವರು, ಯಾವುದೇ ಕಾರಣಕ್ಕೂ ಗ್ರಾಮಗಳ ಸ್ಥಳಾಂತರ ಮಾಡುವ ಮಾತುಬೇಡ ಎಂದು ಖಡಕ್ ಪ್ರತಿಕ್ರಿಯಿಸಿದರು.
ಗುರುವಾರ ಸಂಪಾಜೆಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿದ್ದ ಬೋಪಯ್ಯ ಅವರು, ಇಲ್ಲಿನ ಎಲ್ಲಾ ಗ್ರಾಮಗಳು ಸಂಪೂರ್ಣ ನಾಶವಾಗಿದ್ದು, ನಿರಾಶ್ರಿತರಿಗೆ ಈ ಹಿಂದೆ ಇರುವ ಸ್ಥಳದಲ್ಲೇ ಮತ್ತೆ ಮನೆ ನಿರ್ಮಾಣ ಮಾಡುವ ಪರಿಶೀಲನೆ ನಡೆಸುವ ಚಿಂತನೆ ಇದೆ. ತಜ್ಞರ ವರದಿ ಅನ್ವಯ ಸದ್ಯ ಕೆಲ ಪ್ರದೇಶಗಳು ವಾಸ ಮಾಡಲು ಸಾಧ್ಯವಿಲ್ಲ ಎಂದು ವರದಿ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, ಭೂಕುಸಿತ ಸಂಭವಿಸಲು ಯಾವುದೇ ರೆಸಾರ್ಟ್ ಕಾರಣವಲ್ಲ. ರೆಸಾರ್ಟ್ ಇರುವ ಪ್ರದೇಶದಲ್ಲಿ ಮಾತ್ರ ಭೂ ಕುಸಿತ ಸಂಭವಿಸಿಲ್ಲ. ಹೆಚ್ಚು ಬಡಜನರೇ ಇರುವ ಕಡೆ ಭೂ ಕುಸಿತ ಸಂಭವಿಸಿದೆ. ಈ ಕುರಿತು ಸಂಪೂರ್ಣ ವರದಿ ಪಡೆಯಲಾಗುವುದು. ಆದರೆ ಗುಡ್ಡ ಕುಸಿತ ಬಗ್ಗೆ ಖಚಿತ ಮಾಹಿತಿ ಇಲ್ಲದೇ ಮಾತನಾಡುವುದು ಬೇಡ. ವೈಜ್ಞಾನಿಕ ವರದಿ ಬಂದ ಮೇಲೆ ಮಾತ್ರ ಈ ಕುರಿತು ಕ್ರಮಕೈಗೊಳ್ಳಲಾಗುತ್ತದೆ. ಆದರೆ ಈ ಕುರಿತು ಅಪಪ್ರಚಾರ ಬೇಡ ಎಂದು ತಿಳಿಸಿದ್ದರು.
ಇತ್ತ ಪ್ರವಾಹದಲ್ಲಿ ನಾಪತ್ತೆಯಾಗಿರುವ ಜನರ ಮೃತ ದೇಹ ಹೊರತೆಗೆಯುವ ಕಾರ್ಯಾಚರಣೆ, ತಾತ್ಕಾಲಿಕ ರಸ್ತೆ ಸಂಪರ್ಕ ಕಲ್ಪಿಸುವ ಹಾಗೂ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ಮುಂದುವರಿಸುವಂತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೇನಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಭೂ ಕುಸಿತ ಪ್ರದೇಶ ವೀಕ್ಷಣೆಗೆ ತೆರಳಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದ್ದಾರೆ.