Tag: KFD vaccine

  • ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ – ಸೋಂಕು ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಶಂಕೆ

    ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ – ಸೋಂಕು ತಗುಲಿ ಕೂಲಿ ಕಾರ್ಮಿಕ ಸಾವನ್ನಪ್ಪಿರುವ ಶಂಕೆ

    ಶಿವಮೊಗ್ಗ: ಮಂಗನ ಕಾಯಿಲೆ ಸೋಂಕು ತಗುಲಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

    ಮೃತಪಟ್ಟವರನ್ನು ಜಿಲ್ಲೆಯ ಸಾಗರ ತಾಲೂಕಿನ ಮಂಡವಳ್ಳಿ ಗ್ರಾಮದ ಚೌಡಪ್ಪ(33) ಎಂದು ಗುರುತಿಸಲಾಗಿದೆ. ಕಳೆದ ಮೂರು ದಿನಗಳಿಂದ ಜ್ವರದಿಂದ ಚೌಡಪ್ಪ ಬಳಲುತ್ತಿದ್ದರು. ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಮಲೆನಾಡಿನ ಭಾಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆಎಫ್‍ಡಿ ಲಸಿಕೆ ಹಾಕಲಾಗಿತ್ತು. ಆದರೆ ಕೆಎಫ್‍ಡಿ ಲಸಿಕೆ ಹಾಕಿಸಿಕೊಳ್ಳಲು ಚೌಡಪ್ಪ ನಿರಾಕರಿಸಿದ್ದರು ಎನ್ನಲಾಗಿದೆ.

    ಕಳೆದ ಮೂರ್ನಾಲ್ಕು ತಿಂಗಳಿನಿಂದ ಈ ಭಾಗದಲ್ಲಿ ಕೆಎಫ್‍ಡಿ ಸಂಬಂಧ ನಿರಂತರವಾಗಿ ಲಸಿಕೆ ನೀಡಲಾಗುತ್ತಿದೆ. ಅಲ್ಲದೇ ಮಂಡವಳ್ಳಿ ಭಾಗದಲ್ಲಿ ಕಳೆದ 5 ತಿಂಗಳಿನಿಂದ ಸುಮಾರು 14 ಮಂಗಗಳು ಕೂಡ ಸಾವನಪ್ಪಿರುವ ಪ್ರಕರಣ ವರದಿಯಾಗಿದ್ದು, ಈಗಾಗಲೇ ಇಲ್ಲಿನ 6 ಜನರಿಗೆ ಮಂಗನ ಕಾಯಿಲೆ ಸೋಂಕು ತಗುಲಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ 6 ಜನರಿಗೂ ನಿರಂತರವಾಗಿ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

    ಇತ್ತ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾತ್ರ ಚೌಡಪ್ಪ ಮಂಗನ ಕಾಯಿಲೆ ಸೋಂಕಿನಿಂದ ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ. ಆದರೂ ಕೆಎಫ್‍ಡಿ ಲಸಿಕೆ ಹಾಕಿಸಿಕೊಳ್ಳದ ಕಾರಣ ಮಂಗನ ಕಾಯಿಲೆ ಸೋಂಕು ತಗುಲಿಯೇ ಚೌಡಪ್ಪ ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.