Tag: kerala

  • ಗುಡ್‍ಬೈ 2019, ವೆಲ್‍ಕಂ 2020- ದೇಶದೆಲ್ಲೆಡೆ ಹೊಸ ವರ್ಷ ಸಂಭ್ರಮಾಚರಣೆ

    ಗುಡ್‍ಬೈ 2019, ವೆಲ್‍ಕಂ 2020- ದೇಶದೆಲ್ಲೆಡೆ ಹೊಸ ವರ್ಷ ಸಂಭ್ರಮಾಚರಣೆ

    – ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ಗಳು ವರ್ಣರಂಜಿತ
    – ಬೆಂಗಳೂರು, ಮಂಗಳೂರಿನಲ್ಲಿ ಸಂಭ್ರಮದ ಮೇಲೆ ಖಾಕಿ ಕಣ್ಣು

    ಬೆಂಗಳೂರು: “ಗುಡ್‍ಬೈ 2019, ವೆಲ್‍ಕಂ 2020”. ಹೊಸ ವರ್ಷಕ್ಕೆ ಭಾರತ ಕಾಲಿಟ್ಟಿದ್ದು, ರಾಜ್ಯದ ಜನತೆ 2020ನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.

    ದೇಶಾದ್ಯಂತ ಹೊಸವರ್ಷದ ಆಚರಣೆ ರಂಗೇರಿತ್ತು. ನ್ಯೂ ಇಯರ್ ಹ್ಯಾಂಗೋವರ್‍ನಲ್ಲಿ ಬೆಂಗಳೂರು ಮಿಂದೆದ್ದಿದ್ದು, ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಏರಿಯಾಗಳಾದ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ಗಳು ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು. ಯುವಕ-ಯುವತಿಯರು ಸಾಕಷ್ಟು ಸಂಖ್ಯೆಯಲ್ಲಿ ಜಮಾಯಿಸಿ, ಕುಣಿದು ಕುಪ್ಪಳಿಸಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

    ಪೊಲೀಸರು ಕೂಡ ಹಿಂದೆಂದೂ ಕೇಳಿರದ ಮಟ್ಟಿಗೆ ಟೈಟ್ ಮೇಲೆ ಟೈಟ್ ಸೆಕ್ಯೂರಿಟಿ ಮಾಡಿಕೊಂಡಿದ್ದರು. ಪೊಲೀಸರು ಇಲ್ಲ ಎಂದುಕೊಂಡರೂ ಚಲನವಲನ, ಕಿಡಿಗೇಡಿ ಕೆಲಸಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ. ಇದಕ್ಕಾಗಿ, 12 ಗಂಟೆ ಹೊತ್ತಲ್ಲಿ ಸಂಭ್ರಮಕ್ಕಾಗಿ ಲೈಟ್ಸ್ ಆಫ್ ಮಾಡದಂತೆ ಪೊಲೀಸರು ಸೂಚಿಸಿದ್ದರು. ಸಂಚಾರಿ ಪೊಲೀಸರು ಕೂಡ ನಗರದಾದ್ಯಂತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು.

    ಫ್ಲೈ ಓವರ್‍ಗಳನ್ನು ಬಂದ್ ಮಾಡಿ, ಡ್ರಿಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡುತ್ತಿದ್ದರು. ಹೊಸ ವರ್ಷದ ಪಾರ್ಟಿ ಕುಡುಕರಿಗೆ ರಾಜಮರ್ಯಾದೆ ನೀಡಲಾಗಿತ್ತು. ಕುಡಿದು ಟೈಟ್ ಆಗೋ ಮದ್ಯ ಶೂರರಿಗೆ ಸೆಕ್ಯೂರಿಟಿ ಐಲ್ಯಾಂಡ್ ಹೆಸರಿನಲ್ಲಿ ಕೋರಮಂಗಲದಲ್ಲಿ 18 ಕುಡುಕರ ಆಶ್ರಯ ಕೇಂದ್ರ ಸ್ಥಾಪಿಸಿದ್ದರು. ಕರ್ಲಾನ್ ಬೆಡ್, ದಿಂಬಿನ ವ್ಯವಸ್ಥೆ ಸಹ ಮಾಡಲಾಗಿತ್ತು. ಇವರನ್ನು ಕರೆತರಲು ಓಲಾ, ಉಬರ್, ಅಂಬುಲೆನ್ಸ್ ಗಳನ್ನೂ ತಯಾರಿಯಲ್ಲಿಟ್ಟುಕೊಂಡಿದ್ದರು.

    ಮಧ್ಯರಾತ್ರಿ 2 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ವೈನ್‍ಶಾಪ್‍ಗಳಿಗೆ ರಾತ್ರಿ 11, ಬಾರ್ ಅಂಡ್ ರೆಸ್ಟೋರೆಂಟ್‍ಗಳಿಗೆ ಮಧ್ಯರಾತ್ರಿ 1, ಮದ್ಯ ಮಾರಾಟಕ್ಕೆ ಮಧ್ಯರಾತ್ರಿ 2 ಗಂಟೆವರೆಗೆ ಅವಕಾಶ ನೀಡಲಾಗಿದೆ. ಕೋರಮಂಗಲ, ಇಂದಿರಾ ನಗರ, ಮಹದೇವಪುರ, ವೈಟ್‍ಫೀಲ್ಡ್, ಮಾರತ್‍ಹಳ್ಳಿ, ಹೆಬ್ಬಾಳದ ಮಾನ್ಯತಾ ಟೆಕ್ ಪಾರ್ಕ್‍ಗಳು, ಮಾಲ್‍ಗಳು, ಥಿಯೇಟರ್‍ಗಳಲ್ಲಿ ಜನವೋ ಜನ. ರಾಜ್ಯದ ಮಂಗಳೂರು, ಮಡಿಕೇರಿ, ಮೈಸೂರು ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ, ಕೋಲಾರಗಳಲ್ಲೂ ಭಾರೀ ಸಂಭ್ರಮ ಇತ್ತು. ಗೋಲಿಬಾರ್ ನಡೆದಿರುವ ಮಂಗಳೂರಿನಲ್ಲಂತೂ ಯಾರೂ ಕೆಮ್ಮಂಗಿಲ್ಲ. ಬಾಲಬಿಚ್ಚಂಗಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

    ದೆಹಲಿ, ಪಂಜಾಬ್, ಮುಂಬೈ, ಗೋವಾ, ಕೇರಳದ ಬೀಚ್‍ಗಳು, ಚೆನ್ನೈ, ಕೋಲ್ಕತ್ತಾ, ಎಲ್‍ಒಸಿಯಲ್ಲಿ ಸೈನಿಕರು ಹೀಗೇ ದೇಶಾದ್ಯಂತ ಸಂಭ್ರಮ ಮನೆ ಮಾಡಿತ್ತು. ವಿಶ್ವಾದ್ಯಂತ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಗಿದೆ. ನ್ಯೂಜಿಲೆಂಡ್‍ನ ಆಕ್ಲೆಂಡ್, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಹ ಸಂಭ್ರಮ ಮನೆ ಮಾಡಿತ್ತು. ಹಾಂಕಾಂಗ್, ಫಿಜಿ, ಇಂಗ್ಲೆಂಡ್, ಅಮೆರಿಕ, ಬ್ರೆಜಿಲ್, ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ತಾಕರ್ಷಕ ಬಾಣಬಿರುಸು, ವರ್ಣರಂಚಿತ ಫೈರ್ ವರ್ಕ್‍ಗಳು ಕಣ್ಮನ ಸೆಳೆದೆವು.

  • ಸಿಎಎ ರದ್ದುಗೊಳಿಸಿ : ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಸಿಎಂ ಪಿಣರಾಯಿ ವಿಜಯನ್

    ಸಿಎಎ ರದ್ದುಗೊಳಿಸಿ : ಕೇರಳ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಸಿಎಂ ಪಿಣರಾಯಿ ವಿಜಯನ್

    ತಿರುವನಂತಪುರಂ: ದೇಶಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ರದ್ದುಗೊಳಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದಾರೆ.

    ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಎಸ್‍ಸಿ ಮತ್ತು ಎಸ್‍ಟಿಗಳಿಗೆ ಮೀಸಲಾತಿಯನ್ನು ಮತ್ತೊಂದು ದಶಕಗಳವರೆಗೆ ವಿಸ್ತರಿಸುವುದನ್ನು ಅಂಗೀಕರಿಸಲು ಒಂದು ದಿನದ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಇದೇ ವೇಳೆ ಸಿಎಎ ವಿಚಾರದಲ್ಲಿ ಸಾರ್ವಜನಿಕರಲ್ಲಿ ವ್ಯಾಪಕವಾದ ಕಳವಳಗಳನ್ನು ಗಮನದಲ್ಲಿಟ್ಟುಕೊಂಡು ಸಿಎಎ ವಿರುದ್ಧದ ನಿರ್ಣಯವನ್ನು ಸಹ ಕೈಗೊಳ್ಳಲಾಗಿದೆ.

    ಸಿಎಎ ವಿರುದ್ಧ ನಿರ್ಣಯವನ್ನು ಮಂಡಿಸುವಾಗ ಸಿಎಂ ಪಿಣರಾಯಿ ವಿಜಯನ್ ಸಿಎಎ ದೇಶದ ‘ಜಾತ್ಯಾತೀತ’ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ ಮತ್ತು ಪೌರತ್ವ ನೀಡುವಲ್ಲಿ ಧರ್ಮ ಆಧಾರಿತ ತಾರತಮ್ಯ ಸರಿಯಲ್ಲ ಈ ಕಾಯ್ದೆಯು ಸಂವಿಧಾನದ ಮೂಲ ಮೌಲ್ಯಗಳು ಮತ್ತು ತತ್ವಗಳಿಗೆ ವಿರುದ್ಧವಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ದೇಶದ ಜನರಲ್ಲಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಸಿಎಎಯನ್ನು ಕೈಬಿಡಬೇಕು ಎಂದು ಆಗ್ರಹಿಸಿದ ಅವರು ಸಂವಿಧಾನದ ಜಾತ್ಯಾತೀತ ದೃಷ್ಟಿಕೋನವನ್ನು ಎತ್ತಿಹಿಡಿಯಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಮನವಿ ಮಾಡಿದರು. ಅಲ್ಲದೇ ಕೇರಳದಲ್ಲಿ ಯಾವುದೇ ಬಂಧನ ಕೇಂದ್ರಗಳು ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಸಿಎಎ ವಿರುದ್ಧ ನಿರ್ಣಯ ಮಂಡಿಸುವ ಸಂಬಂಧ ಬಿಜೆಪಿ ಏಕೈಕ ಸದಸ್ಯ ಓ ರಾಜಗೋಪಾಲ್ ವಿರೋಧ ವ್ಯಕ್ತಪಡಿಸಿದರು. ಸಂಸತ್ತಿನ ಉಭಯ ಸದನಗಳಲ್ಲಿ ಸಿಎಎ ಕಾಯ್ದೆಯನ್ನು ಅಂಗೀಕರಿಸಿದ್ದರಿಂದ ಇದು ‘ಕಾನೂನುಬಾಹಿರ’ ಎಂದು ಹೇಳುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವಿಷಯದ ಬಗ್ಗೆ ಚರ್ಚಿಸಲು ಸಿಎಂ ಪಿಣರಾಯಿ ವಿಜಯನ್ ಡಿಸೆಂಬರ್ 29 ರಂದು ಕರೆದ ಸರ್ವಪಕ್ಷ ಸಭೆಯಲ್ಲಿ ವಿಶೇಷ ಅಧಿವೇಶನ ನಡೆಸಿ ಸಿಎಎ ವಿರುದ್ಧ ನಿರ್ಣಯ ಮಂಡಿಸುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಎಡ ಸರ್ಕಾರಕ್ಕೆ ಒತ್ತಾಯಿಸಿತ್ತು.

  • ವೃದ್ಧಾಶ್ರಮದಲ್ಲಿ 60ರ ಹರೆಯದ ಜೋಡಿಯ ವಿವಾಹ

    ವೃದ್ಧಾಶ್ರಮದಲ್ಲಿ 60ರ ಹರೆಯದ ಜೋಡಿಯ ವಿವಾಹ

    ತಿರುವಂತನಪುರಂ: ಕೇರಳದ ಕೃಷಿ ಮಂತ್ರಿ ವಿ.ಎಸ್ ಸುನೀಲ್ ಕುಮಾರ್ ಅವರ ನೇತೃತ್ವದಲ್ಲಿ ತ್ರಿಶೂರ್ ನ ವೃದ್ಧಾಶ್ರಮವೊಂದರಲ್ಲಿ 60 ವರ್ಷದ ವೃದ್ಧ ಜೋಡಿಗಳು ಶನಿವಾರ ಮದುವೆಯಾಗಿದ್ದಾರೆ.

    ಥೈಕ್ಕಟ್ಟುಸೇರಿಯದ ಲಕ್ಷ್ಮಿ ಅಮ್ಮಲ್ (65) ಮತ್ತು ಕೊಚಾನಿಯನ್ ಮೆನನ್ (67) ಮದುವೆ ಮಾಡಿಕೊಂಡ ದಂಪತಿ. ಮೆನನ್ ಲಕ್ಷ್ಮಿ ಅಮ್ಮಲ್ ಅವರ ಮಾಜಿ ಪತಿಯ ಜೊತೆ ಕೆಲಸ ಮಾಡುತ್ತಿದ್ದ ವ್ಯಕ್ತಿಯಾಗಿದ್ದು, ಇಬ್ಬರು ಕಳೆದ 20 ವರ್ಷದಿಂದ ಸ್ನೇಹಿತರಾಗಿದ್ದರು.

    ಲಕ್ಷ್ಮಿ ಅಮ್ಮಲ್ ಅವರ ಪತಿ ಸಾವನ್ನಪ್ಪಿದ ನಂತರ ಅವರು ತ್ರಿಶೂರ್ ನಲ್ಲಿರುವ ಸರ್ಕಾರಿ ವೃದ್ಧಾಶ್ರಮ ಸೇರಿದ್ದರು. ಇತ್ತ ಮಕ್ಕಳಿಂದ ಮನೆಯಿಂದ ಹೊರಹಾಕಲ್ಪಟ್ಟು ಬೀದಿ ಬೀದಿ ಸುತ್ತುತ್ತಿದ್ದ ಮೆನನ್ ಅವರನ್ನು ಸರ್ಕಾರೇತರ ಸಂಸ್ಥೆಯೊಂದು ಅದೇ ವೃದ್ಧಾಶ್ರಮಕ್ಕೆ ಸೇರಿಸಿತ್ತು. ಇದಕ್ಕೂ ಮುಂಚೆಯೇ ಪರಿಚಯವಿದ್ದ ಕಾರಣ ಲಕ್ಷ್ಮಿ ಅಮ್ಮಲ್ ಮತ್ತು ಮೆನನ್ ವೃದ್ಧಾಶ್ರಮದಲ್ಲಿ ಸ್ನೇಹಿತರಾಗಿದ್ದಾರೆ.

    ಹೀಗೆ ದಿನ ಪೂರ್ತಿ ಜೊತೆಗೆ ಇರುತ್ತಿದ್ದ ಇವರು, ತಮ್ಮ ಜೀವನದ ದು:ಖವನ್ನು ಪರಸ್ಪರ ಹಂಚಿಕೊಂಡಿದ್ದಾರೆ. ಹೀಗೆ ಕಾಲ ಕಳೆಯುತ್ತಿದ್ದ ಹಾಗೇ ಅವರ ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಆಗ ಇಬ್ಬರು ಸೇರಿ ನಾವು ಮದುವೆಯಾಗಬೇಕು ಎಂದುಕೊಂಡಿದ್ದನ್ನು ವೃದ್ಧಾಶ್ರಮದವರಿಗೆ ಹೇಳಿದ್ದಾರೆ. ಆಗ ವೃದ್ಧಾಶ್ರಮದವರು ಈ ಇಬ್ಬರು ವೃದ್ಧ ಜೋಡಿಗೆ ವೃದ್ಧಾಶ್ರಮದಲ್ಲೇ ಮದುವೆ ಮಾಡಿಸಿದ್ದಾರೆ.

    ಈ ಮದುವೆಗೆ ಕೇರಳದ ಕೃಷಿ ಸಚಿವ ವಿ.ಎಸ್ ಸುನೀಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಎಸ್. ಶಾನವಾಸ್ ಕೂಡ ಆಗಮಿಸಿ ಶುಭ ಹಾರೈಸಿದರು. ವೃದ್ಧಾಶ್ರಮದ ಎಲ್ಲರೂ ಸೇರಿ ಹಾಡಿ ಕುಣಿದು ಈ ವೃದ್ಧಜೋಡಿಯ ಮದುವೆ ಮಾಡಿದ್ದಾರೆ. ಹಾಗೂ ಕೊಚಾನಿಯನ್ ಮೆನನ್ ಅವರು ಲಕ್ಷ್ಮಿ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.

  • ಕಂಕಣ ಸೂರ್ಯಗ್ರಹಣದ ವಿಸ್ಮಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಘಳಿಗೆ!

    ಕಂಕಣ ಸೂರ್ಯಗ್ರಹಣದ ವಿಸ್ಮಯ ಕ್ಯಾಮರಾ ಕಣ್ಣಲ್ಲಿ ಸೆರೆಯಾದ ಘಳಿಗೆ!

    ಕಾಸರಗೋಡು: ಈ ದಶಕದ ಕೊನೆಯ ಕಂಕಣ ಗ್ರಹಣ ಜಿಲ್ಲೆಯ ಪಾಲಿಗೆ ಅದ್ಭುತ ದೃಶ್ಯ ವಿಸ್ಮಯ ನೀಡಿತ್ತು. ಭಾರತದಲ್ಲೇ ಕಾಸರಗೋಡು ಜಿಲ್ಲೆಯ ಚೆರುವತ್ತೂರಿನಲ್ಲಿ ಮೊದಲ ಬಾರಿಗೆ ಸೂರ್ಯಗ್ರಹಣ ಗೋಚರವಾಯಿತು. ದೇಶದಲ್ಲೇ ಮೊದಲ ಬಾರಿಗೆ ಗ್ರಹಣ ಚೆರುವತ್ತೂರಿನಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಡಳಿತ ಸೂರ್ಯಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿತ್ತು. ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಗ್ರಹಣ ವೀಕ್ಷಿಸಿದರು.

    ಚೆರುವತ್ತೂರಿನಲ್ಲಿ ಗ್ರಹಣ ವೀಕ್ಷಣೆಗೆ ತೆರಳಿದ್ದ ಕಾಸರಗೋಡು ನಗರದ ಫೋಟೋಸ್ಟಾರ್ ಸಂಜು ಅವರು ತೆಗೆದ ಫೋಟೋಗಳು ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ವೈರಲ್ ಆಗುತ್ತಿದೆ. ಬೆಳಗ್ಗೆ 8.04ರಿಂದ 9.40ರವರೆಗಿನ ಅವಧಿಯ ಫೋಟೋ ಕೊಲಾಜ್ ಮಾಡಿ ಸಂಜು ಅವರು ತಮ್ಮ ಫೇಸ್‍ಬುಕ್ ಹಾಗೂ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ರಿಂಗ್ ಆಫ್ ಫೈರ್ – ಸೋಲಾರ್ ಎಕ್ಲಿಪ್ಸ್ 2019’ ಹೆಸರಿನಲ್ಲಿ ಹಾಕಿರೋ ಫೋಟೋ ಎಲ್ಲರ ಮನಸೆಳೆಯುತ್ತಿದೆ.

    ಗ್ರಹಣ ಶುರುವಾದಾಗಿನಿಂದ ಗ್ರಹಣ ಮೋಕ್ಷದವರೆಗಿನ ಒಟ್ಟು 16 ಫೋಟೋಗಳ ಕೊಲಾಜನ್ನು ಸಂಜು ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ಇಂದು ಕಾಣಿಸಿದ ಗ್ರಹಣ ಹೇಗಿತ್ತು ಎನ್ನುವುದನ್ನು ಸ್ಪಷ್ಟವಾಗಿ ಜನರಿಗೆ ಅರ್ಥ ಮಾಡಿಸುತ್ತಿದೆ. ಅಲ್ಲದೆ ಬಾನಂಗಳದ ವಿಸ್ಮಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದ ಸಂಜು ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

    ಚೆರುವತ್ತೂರಿನಲ್ಲಿ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಎಂ.ರಾಜಗೋಪಾಲನ್, ಕಾಸರಗೋಡು ಜಿಲ್ಲಾಧಿಕಾರಿ ಡಿ.ಸಜಿತ್ ಬಾಬು ಕೂಡಾ ಗ್ರಹಣ ವೀಕ್ಷಣೆಗೆ ಆಗಮಿಸಿದ್ದರು.

    ಚೆರುವತ್ತೂರಿನ ಭೌಗೋಳಿಕ ವಿಶೇಷತೆ ಹಿನ್ನೆಲೆಯಲ್ಲಿ ಸ್ಪೇಸ್ ಇಂಡಿಯಾ ಸಂಸ್ಥೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಬೃಹತ್ ಪರದೆಯ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ವಿಶೇಷ ಕನ್ನಡಕಗಳ ಮೂಲಕವೂ ಜನರು ಗ್ರಹಣ ವೀಕ್ಷಿಸಿದರು. ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗ್ರಹಣ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿದ್ದರು.

  • ಬೇಸಿಗೆ ಮುನ್ನವೇ ಎಳನೀರಿಗೆ ಬೇಡಿಕೆ – ಕೇರಳದ ಎಳನೀರು ಮಾರಾಟ

    ಬೇಸಿಗೆ ಮುನ್ನವೇ ಎಳನೀರಿಗೆ ಬೇಡಿಕೆ – ಕೇರಳದ ಎಳನೀರು ಮಾರಾಟ

    -ಕಾಯಿ ಮೇಲ್ಮೈನ ಬಣ್ಣದಲ್ಲೂ ವ್ಯತ್ಯಾಸ

    ಕೊಪ್ಪಳ: ಎಳನೀರು ಆರೋಗ್ಯಕ್ಕೆ ಒಳ್ಳೆಯದು. ದಿನಕ್ಕೆ 2 ಎರಡು ಎಳನೀರು ಸೇವಿಸುವಂತೆ ವೈದ್ಯರ ಸಲಹೆ ಮೇರೆಗೆ ಬೆಳಗ್ಗೆ ಅಥವಾ ಸಂಜೆ ವಾಯು ವಿಹಾರಕ್ಕೆ ಬರುವವರು ಎಳನೀರು ಸೇವಿಸುವುದು ಕಡ್ಡಾಯ ಮಾಡಿಕೊಂಡಿದ್ದಾರೆ. ಇದರಿಂದ ಬೇಸಿಗೆ ಮುನ್ನವೇ ಎಳನೀರು ಗಗನಕ್ಕೇರಿದ್ದು, 35ರಿಂದ 40ರೂ.ಗಳಿಗೆ ಮಾರಾಟವಾಗುತ್ತಿವೆ.

    ಜಿಲ್ಲೆಯಲ್ಲಿ ತೆಂಗಿನ ಗಿಡಗಳು ನುಸಿ ರೋಗಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳಿಂದ ವ್ಯಾಪಾರಿಗಳು ನಿರೀಕ್ಷಿಸಿದಷ್ಟು ಎಳನೀರು ಕಾಯಿ ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಮದ್ದೂರು, ಗುಬ್ಬಿ, ತುಮಕೂರುಗಳಿಂದ ಎಳನೀರುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಅಲ್ಲಿಂದಲೂ ಬೇಡಿಕೆಗೆ ತಕ್ಕಂತೆ ಬಾರದಿದ್ದರಿಂದ ಕೇರಳದ ಮೊರೆ ಹೋಗಿದ್ದು, ದುಬಾರಿಯಾದರೂ ಆಮದು ಮಾಡಿಕೊಳ್ಳಲಾಗುತ್ತಿದೆ. ಆರಂಭದಲ್ಲಿ ಒಬ್ಬರೇ ದಲ್ಲಾಳಿಯಿದ್ದರು. ಆದರೆ ಬೇಡಿಕೆ ಹೆಚ್ಚುತ್ತಿದ್ದಂತೆ ದಲ್ಲಾಳಿಗಳ ಸಂಖ್ಯೆಯಲ್ಲೂ ಏರಿಕೆಯಾಗಿದೆ.

    ವಿಭಿನ್ನ:
    ರಾಜ್ಯದ ಎಳನೀರಿನಂತೆ ಕೇರಳದ ಎಳನೀರು ಕಾಯಿಗಳಿಲ್ಲ. ಕಾಯಿ ಮೇಲ್ಮೈನ ಬಣ್ಣದಲ್ಲೂ ವ್ಯತ್ಯಾಸವಿದ್ದು, ಹಳದಿ ಬಣ್ಣವಿದೆ. ರುಚಿಯಲ್ಲಿ ವಗರಾಗಿದ್ದು, ಗಾತ್ರದಲ್ಲೂ ಸಾಮಾನ್ಯ ಅಳತೆಯಲ್ಲಿದೆ. ನೀರಿದ್ದು, ಕೊಬ್ಬರಿಯಿಲ್ಲ. ಕರಾವಳಿ ತೀರದ ಎಳನೀರು ಕಾಯಿಗಳು ಬರುತ್ತಿದ್ದು, ವ್ಯಾಪಾರಿಗಳಿಗೆ ಪ್ರತಿ ಕಾಯಿಗೆ 28 ರೂ.ಗಳಿಗೆ ದೊರೆಯುತ್ತಿದೆ. ಮದ್ದೂರಿನ ಕಾಯಿಗಳ ದರ ಕಡಿಮೆಯಿದ್ದು, ಗಾತ್ರದಲ್ಲಿ ದೊಡ್ಡದಿವೆ. ನೀರು ಮತ್ತು ಕೊಬ್ಬರಿ ಹೊಂದಿರುವ ಕಾಯಿಗಳಿಗೆ ಇತ್ತೀಚಿನ ದಿನಗಳಲ್ಲಿ ನೀರಿಕ್ಷಿಸಿದಷ್ಟು ಜಿಲ್ಲೆಗೆ ಬರುತ್ತಿಲ್ಲ. ಅನಿವಾರ್ಯವಾಗಿ ಕೇರಳದ ಕಾಯಿಗಳನ್ನು ಪಡೆಯುವ ಸ್ಥಿತಿ ಬಂದಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. ಹೊಸ ಬಗೆಯ ಎಳನೀರು ಕಾಯಿಗಳ ಮೇಲೆ ಗ್ರಾಹಕರ ಆಸಕ್ತಿ ಹೆಚ್ಚಿದ್ದು, ವ್ಯಾಪಾರದಲ್ಲಿ ಏರಿಕೆಯಾಗಿದೆ.

    ಆತಂಕ:
    ಬೇಸಿಗೆ ಮುನ್ನವೇ ಎಳನೀರು ಕಾಯಿಗಳ ದರ ದುಪ್ಪಟ್ಟ ಹೆಚ್ಚಿರುವುದು ಗ್ರಾಹಕರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ ವರ್ಷ 20ರೂ.ಗಳಿಂದ 25ರೂ.ವರಿಗೂ ಎಳನೀರು ಮಾರಾಟವಾಗಿದ್ದವು. ದುಬಾರಿ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಚಳಿಗಾಲದಲ್ಲಿ 40ರೂ.ದರವಿದ್ದು, ಬೇಸಿಗೆಗೆ ಇನ್ನಷ್ಟು ದುಬಾರಿಯಾಗುವ ಸಾಧ್ಯತೆಗಳಿವೆ. ಶಾಪಿಂಗ್ ಮಾಲ್‍ನಲ್ಲೂ ಎಳನೀರು ಮಾರಾಟ ಮಾಡಲಾಗುತ್ತಿದ್ದು, ಸಂಸ್ಕರಿಸಿದ ಎಳನೀರು ಪ್ಯಾಕೇಟ್‍ಗಳು ಇನ್ನೂ ಬಂದಿಲ್ಲ. ಕೇರಳದ ಎಳನೀರನ್ನು ನಾಲ್ಕೈದು ದಿನಗಳಿಗೆ ಮಾತ್ರ ಸಂಗ್ರಹಿಸಿಡಲು ಸಾಧ್ಯವಿದೆ. ಹೀಗಾಗಿ ಬಹುದಿನಗಳವರಿಗೂ ಶೇಖರಿಸಿಡುವ ಸಂಸ್ಕರಿಸಿದ ಪ್ಯಾಕೇಟ್‍ಗಳು ಬರುವುದು ಉತ್ತಮ ಎನ್ನುತ್ತಾರೆ.

  • ಕೇರಳದಲ್ಲಿ ಸಿಎಂ ಬಿಎಸ್‍ವೈಗೆ ಪ್ರತಿಭಟನೆಯ ಬಿಸಿ

    ಕೇರಳದಲ್ಲಿ ಸಿಎಂ ಬಿಎಸ್‍ವೈಗೆ ಪ್ರತಿಭಟನೆಯ ಬಿಸಿ

    ತಿರುವನಂತಪುರಂ: ಯಜ್ಞ ಯಾಗಕ್ಕಾಗಿ ಕೇರಳಕ್ಕೆ ಹೋಗಿದ್ದ ಸಿಎಂ ಯಡಿಯೂರಪ್ಪಗೆ ಪ್ರತಿಭಟನೆಯ ಬಿಸಿ ತಟ್ಟಿದೆ.

    ತಿರುವನಂತಪುರಂನ ಹೋಟೆಲ್ ನಿಂದ ಹೊರಟ ಬಿಎಸ್‍ವೈ ಬೆಂಗಾವಲು ವಾಹನಕ್ಕೆ ಅಡ್ಡ ಬಂದ ಪ್ರತಿಭಟನಾಕಾರರು ಕಪ್ಪು ಪಟ್ಟಿ ಹಿಡಿದ ಗೊ ಬ್ಯಾಕ್ ಬಿಎಸ್‍ವೈ ಎಂದು ಕೂಗಿದ್ದಾರೆ. ಕೇರಳ ಯೂತ್ ಕಾಂಗ್ರೆಸ್ ಸದಸ್ಯರು, ಬಿಎಸ್‍ವೈ ಹೊರಡುವ ಸಮಯಕ್ಕೆ ಬೆಂಗಾವಲು ವಾಹನಕ್ಕೆ ಅಡ್ಡ ಬರಲು ಯತ್ನಿಸಿ, ಕಪ್ಪು ಬಾವುಟ ಪ್ರದರ್ಶನ ಮಾಡಿ ಪೊಲೀಸರ ಅತಿಥಿಯಾಗಿದ್ದಾರೆ.

    ಇಷ್ಟಕ್ಕೂ ಇವರು ಗೊ ಬ್ಯಾಕ್ ಬಿಎಸ್‍ವೈ ಎನ್ನಲು ಕಾರಣ, ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಮತ್ತು ಕೇರಳ ಪತ್ರಕರ್ತರ ಅರೆಸ್ಟ್ ಖಂಡಿಸಿ ಮಾಡಿದ್ದು ಎಂದು ತಿಳಿದು ಬಂದಿದೆ. ಎರಡು ದಿನಗಳ ಕಾಲ ಅನಂತಪದ್ಮನಾಭನ ಸನ್ನಿಧಿಯಲ್ಲಿ ವಿಶೇಷ ಹೋಮ ಹವನಕ್ಕಾಗಿ ಹೋಗಿದ್ದ ಬಿಎಸ್‍ವೈಗೆ ಗೊ ಬ್ಯಾಕ್ ಎಂದು ಪ್ರತಿಭಟನೆ ನಡೆಸಿ, ಮುಜುಗರ ಉಂಟು ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಬೆಂಗಾವಲು ವಾಹನಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಎಲ್ಲಾ ಯೂತ್ ಕಾಂಗ್ರೆಸ್ ಸದಸ್ಯರನ್ನು ಅರೆಸ್ಟ್ ಮಾಡಲಾಗಿದೆ.

  • 2 ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿ ಅಪಘಾತಕ್ಕೆ ಬಲಿ

    2 ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿದ್ದ ದಂಪತಿ ಅಪಘಾತಕ್ಕೆ ಬಲಿ

    ಕ್ಯಾನ್ಬೆರಾ: ಕೇರಳ ಮೂಲದ ನವವಿವಾಹಿತ ದಂಪತಿ ಆಸ್ಟ್ರೇಲಿಯಾದಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

    ಮೃತರನ್ನು ಎರ್ನಾಕುಲಂನ ವೆಂಗೋಲಾ ಮೂಲದ ಅಲ್ಬಿನ್ ಟಿ ಮ್ಯಾಥ್ಯೂ (30) ಮತ್ತು ಪತ್ನಿ ನಿನು ಸುಸೆನ್ ಎಲ್ಧೋ (28) ಎಂದು ಗುರುತಿಸಲಾಗಿದೆ. ಮೃತ ಅಲ್ಬಿನ್ ಮತ್ತು ನಿನು ಜೊತೆ ಕಳೆದ ಅಕ್ಟೋಬರ್ 28 ರಂದು ಮದುವೆಯಾಗಿದ್ದರು.

    ಮದುವೆಯಾದ ಸ್ವಲ್ಪ ದಿನಗಳ ನಂತರ ಅಂದರೆ ನವೆಂಬರ್ 20 ರಂದು ಈ ನವ ದಂಪತಿ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ನಿನು ಆಸ್ಟ್ರೇಲಿಯಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಬಳಿ ಎರಡು ದಿನಗಳ ಹಿಂದೆ ಕಾರು ಅಪಘಾತ ಸಂಭವಿಸಿದೆ. ಪರಿಣಾಮ ಅಲ್ವಿನ್ ಮತ್ತು ನಿನು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

    ಅಲ್ಬಿನ್ ನಿವೃತ್ತ ಎಸ್‍ಐ ಮಗನಾಗಿದ್ದು, ನಿನು ನಿವೃತ್ತ ಎಲ್‍ಐಸಿ ಅಧಿಕಾರಿಯ ಪುತ್ರಿ ಎಂದು ತಿಳಿದು ಬಂದಿದೆ. ಈ ದಂಪತಿ ಪ್ರಯಾಣಿಸುತ್ತಿದ್ದ ಕಾರು ರಸ್ತೆಯಿಂದ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ. ನಂತರ ಕಾರಿಗೆ ಬೆಂಕಿ ಹೊತ್ತಿಕೊಂಡು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಆದರೆ ಈಗ ತಾನೇ ಮದುವೆಯಾಗಿದ್ದ ಮಕ್ಕಳನ್ನು ಕಳೆದುಕೊಂಡಿರುವ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಪ್ರೀ-ವೆಡ್ಡಿಂಗ್ ಫೋಟೋಶೂಟ್‍ನಲ್ಲೂ ಪೌರತ್ವದ ಕಿಚ್ಚು- ಕೇರಳ ದಂಪತಿ ಫೋಟೋ ವೈರಲ್

    ಪ್ರೀ-ವೆಡ್ಡಿಂಗ್ ಫೋಟೋಶೂಟ್‍ನಲ್ಲೂ ಪೌರತ್ವದ ಕಿಚ್ಚು- ಕೇರಳ ದಂಪತಿ ಫೋಟೋ ವೈರಲ್

    ತಿರುವನಂತಪುರಂ: ಪೌರತ್ವ ಕಾಯ್ದೆ(ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ(ಎನ್ಆರ್‌ಸಿ) ವಿರೋಧಿಸಿ ಕೇರಳದ ದಂಪತಿ ಮಾಡಿಸಿರುವ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಸಖತ್ ವೈರಲ್ ಆಗಿದೆ.

    ಇತ್ತೀಚೆಗೆ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸುವುದು ಟ್ರೆಂಡ್ ಆಗಿಬಿಟ್ಟಿದೆ. ಸುಂದರ ಲೊಕೆಷನ್‍ನಲ್ಲಿ ದಂಪತಿ ಫೋಟೋಗಳಿಗೆ ಪೋಸ್‍ಕೊಟ್ಟು ಫೋಟೋಶೂಟ್ ಮಾಡಿಕೊಳ್ಳುತ್ತಾರೆ. ಆದರೆ ಕೇರಳದ ಅರುಣ್ ಗೋಪಿ ಹಾಗೂ ಆಶಾ ಶೇಖರ್ ದಂಪತಿ ಸಿಎಎ ಮತ್ತು ಎನ್ಆರ್‌ಸಿ ವಿರೋಧಿಸಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿರುವುದು ವಿಶೇಷವಾಗಿದೆ. ಸುಂದರವಾದ ಪೊನ್ಮುಡಿ ಬೆಟ್ಟದ ಮುಂಭಾಗ ‘ಸಿಎಎ ಬೇಡ’, ‘ಎನ್ಆರ್‌ಸಿ ಬೇಡ’ ಎಂಬ ಫಲಕಗಳನ್ನು ಹಿಡಿದು ಕೇರಳ ದಂಪತಿ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು ತಮ್ಮ ಫೇಸ್‍ಬುಕ್‍ನಲ್ಲಿ ದಂಪತಿ ಹಂಚಿಕೊಂಡಿದ್ದು, ಸಿಎಎ, ಎನ್ಆರ್‌ಸಿ ವಿರೋಧಿಸಿದ ಪ್ರೀ-ವೆಡ್ಡಿಂಗ್ ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ಇದನ್ನೂ ಓದಿ: ಪ್ರಿ-ವೆಡ್ಡಿಂಗ್ ಶೂಟ್‍ನಲ್ಲಿ ಕಿಸ್ ಮಾಡೋವಾಗ ಮಗುಚಿದ ದೋಣಿ – ವಿಡಿಯೋ ನೋಡಿ

    ಡಿಸೆಂಬರ್ 18ರಂದು ‘ಫಸ್ಟ್ ಲುಕ್ ಫೋಟೋಗ್ರಾಫಿ’ ಹೆಸರಿನ ಫೇಸ್‍ಬುಕ್ ಖಾತೆಯಿಂದ ಅರುಣ್ ಗೋಪಿ ಹಾಗೂ ಆಶಾ ಶೇಖರ್ ಅವರ ಪ್ರೀ-ವೆಡ್ಡಿಂಗ್ ಫೋಟೋಶೂಟ್ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ನಂತರ ಈ ಫೋಟೋಗಳನ್ನು ಇತರ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಶೇರ್ ಮಾಡಿಕೊಂಡಿದ್ದು, ಈ ಫೋಟೋಶೂಟ್ ಪರ ಹಾಗೂ ವಿರೋಧ ಕಮೆಂಟ್‍ಗಳು ವ್ಯಕ್ತವಾಗಿದೆ. ಆದರೆ ಎಲ್ಲೆಡೆ ಪ್ರತಿಭಟನೆ, ಗಲಾಟೆಗಳು ಮಾಡುವ ಮೂಲಕ ಸಿಎಎ, ಎನ್ಆರ್‌ಸಿ ವಿರೋಧಿಸುತ್ತಿರುವ ಜನರ ನಡುವೆ ಈರೀತಿ ವಿನೂತನವಾಗಿ ತಮ್ಮ ವಿರೋಧ ವ್ಯಕ್ತಪಡಿಸಿದ ದಂಪತಿ ಫೋಟೋಗಳು ಎಲ್ಲರ ಗಮನ ಸೆಲೆದಿದೆ.  ಇದನ್ನೂ ಓದಿ: ಕೆಸರಿನಲ್ಲಿ ಜೋಡಿಯ ವೆಡ್ಡಿಂಗ್ ಫೋಟೋಶೂಟ್

    ತಿರುವನಂತಪುರಂ ಜಿಲ್ಲಾ ಮಕ್ಕಳ ಕಲ್ಯಾಣ ಮಂಡಳಿಯ ಖಜಾಂಚಿಯಾಗಿರುವ ಅರುಣ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾಕ್ರ್ಸ್‍ವಾದಿ) ಅಧೀನದಲ್ಲಿರುವ ಮಕ್ಕಳ ಸಂಸ್ಥೆ ಬಾಲಸಂಘಂನ ರಾಜ್ಯಾಧ್ಯಕ್ಷರಾಗಿದ್ದಾರೆ. ಫಸ್ಟ್ ಲುಕ್ ಫೋಟೋಗ್ರಾಫಿಯ ಪಾರ್ಟ್‍ನರ್ ಆಗಿರುವ ಅರ್ಜುನ್ ಎಪಿ ಅವರು ಈ ಫೋಟೋಶೂಟ್ ಬಗ್ಗೆ ಪ್ರತಿಕ್ರಿಯಿಸಿ, ದಂಪತಿಯ ಈ ವಿಶೇಷ ಫೋಟೋಶೂಟ್‍ಗೆ ನಾವು ಐಡಿಯಾ ಕೊಟ್ಟಿದ್ದು, ಆದರೆ ದಂಪತಿ ಖುಷಿಯಿಂದ ಈ ಐಡಿಯಾವನ್ನು ಒಪ್ಪಿಕೊಂಡು ಸಹಕರಿಸಿದರು. ನಾವು ಫೇಸ್‍ಬುಕ್ ಪೋಸ್ಟ್ ಟ್ಯಾಗ್‍ಲೈನ್ ಹಾಕಿದಂತೆ ಇವರು ಜವಾಬ್ದಾರಿ ಇರುವ ದಂಪತಿ ಎಂದು ತಿಳಿಸಿದರು.

  • ಕೇರಳ ಲಾಟರಿ ಮಾರಾಟ – ಕೊಡಗಿನಲ್ಲಿ ಆರೋಪಿ ಬಂಧನ

    ಕೇರಳ ಲಾಟರಿ ಮಾರಾಟ – ಕೊಡಗಿನಲ್ಲಿ ಆರೋಪಿ ಬಂಧನ

    ಮಡಿಕೇರಿ: ನಿಷೇಧಿತ ಕೇರಳ ರಾಜ್ಯದ ಲಾಟರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೇಂಬುಕೊಲ್ಲಿಯಲ್ಲಿ ಕುಟ್ಟ ಪೊಲೀಸರು ಬಂಧಿಸಿದ್ದಾರೆ.

    ವಿರಾಜಪೇಟೆ ತಾಲೂಕಿನ ಕುಟ್ಟ ಗ್ರಾಮದ ನಿವಾಸಿ ರಾಜು ಬಂಧಿತ ಆರೋಪಿ. ಈತ ಕೇಂಬುಕೊಲ್ಲಿಯಲ್ಲಿ ಲಾಠರಿಯನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ರಾಜು ಬಳಿ ಇದ್ದ 6,000 ಮೌಲ್ಯದ ಕೇರಳ ಮೂಲದ ಲಾಟರಿ ಟಿಕೆಟ್ ಹಾಗೂ ಬೈಕನ್ನು ವಶಪಡಿಸಿಕೊಳ್ಳಲಾಗಿದೆ.

    ಈ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಸರ್ಕಾರ ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇಧಿಸಿರುವುದರಿಂದ ಕೊಡಗು-ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ವಿರಾಜಪೇಟೆ ತಾಲೂಕಿನ ಗಡಿ ಭಾಗದಲ್ಲಿ ಲಾಟರಿ ದಂಧೆ ಅವ್ಯಹತವಾಗಿ ನಡೆಯುತ್ತಿದೆ.

  • ಹಸಿದುಕೊಂಡಿದ್ದ ವ್ಯಕ್ತಿಯ ಜೊತೆ ಊಟ ಹಂಚಿ ತಿಂದ ಪೊಲೀಸ್ – ವಿಡಿಯೋ ವೈರಲ್

    ಹಸಿದುಕೊಂಡಿದ್ದ ವ್ಯಕ್ತಿಯ ಜೊತೆ ಊಟ ಹಂಚಿ ತಿಂದ ಪೊಲೀಸ್ – ವಿಡಿಯೋ ವೈರಲ್

    ತಿರುವನಂತಪುರಂ: ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ ಎನ್ನುತ್ತಾರೆ. ಹಾಗೆಯೇ ಕೇರಳದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹಸಿದುಕೊಂಡಿದ್ದ ಬಡ ವ್ಯಕ್ತಿಯ ಜೊತೆ ತಾವು ತಿನ್ನುತ್ತಿದ್ದ ಊಟವನ್ನು ಹಂಚಿಕೊಂಡು ತಿಂದು ಮಾನವೀಯತೆ ಮೆರೆದಿದ್ದಾರೆ.

    ಕೇರಳದ ಎಸ್.ಎಸ್ ಶ್ರೀಜಿತ್(30) ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ. ತಿರುವನಂತಪುರದ ಹೊರವಲಯದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಸೋಮವಾರ ಇಲ್ಲಿ ನೂರಾರು ಮಂದಿ ಮುಷ್ಕರ ನಡೆಸುತ್ತಿದ್ದರು. ಹೀಗಾಗಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ತೆರೆಳಿದ್ದರು. ಆಗ ಮಧ್ಯಾಹ್ನ ಶ್ರೀಜಿತ್ ಅವರು ಊಟ ಪಾರ್ಸಲ್ ತಂದು ತಿನ್ನುತ್ತಿದ್ದರು. ಈ ವೇಳೆ ಮುಷ್ಕರದಲ್ಲಿ ಭಾಗಿಯಾಗಿದ್ದ ಓರ್ವ ಬಡ ವ್ಯಕ್ತಿ, ಶ್ರೀಜಿತ್ ಊಟ ಮಾಡುವುದನ್ನೇ ನೋಡುತ್ತಿದ್ದನು. ಆಗ ಶ್ರೀಜಿತ್ ಆತ ಹಸಿದುಕೊಂಡಿದ್ದಾನೆ ಎಂದು ತಿಳಿದ ತಕ್ಷಣ, ಬನ್ನಿ ನನ್ನೊಂದಿಗೆ ಊಟ ಮಾಡಿ ಎಂದು ಕರೆದು, ತಮ್ಮ ಊಟವನ್ನು ಆತನೊಂದಿಗೆ ಹಂಚಿ ತಿಂದರು. ಇದನ್ನೂ ಓದಿ: ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಹೆಗಲ ಮೇಲೆ 4 ಕಿ.ಮೀ ಹೊತ್ತುಕೊಂಡು ಹೋದ ಪೇದೆ

    ಹೀಗೆ ಶ್ರೀಜಿತ್ ಅವರು ಊಟವನ್ನು ಹಂಚಿ ತಿನ್ನುತ್ತಿರುವ ದೃಶ್ಯವನ್ನು ಅವರ ಸ್ನೇಹಿತರು ವಿಡಿಯೋ ಮಾಡಿ ವಾಟ್ಸಾಪ್ ಗ್ರೂಪ್‍ನಲ್ಲಿ ಹಾಕಿದ್ದರು. ಅಲ್ಲದೆ ಫೇಸ್‍ಬುಕ್‍ನಲ್ಲೂ ಈ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ತದನಂತರ ಈ ವಿಡಿಯೋ ಶೇರ್ ಆಗುತ್ತಾ ಎಲ್ಲೆಡೆ ಸಖತ್ ವೈರಲ್ ಆಗಿದೆ. ಸದ್ಯ ಶ್ರೀಜಿತ್ ಅವರು ತಮ್ಮ ಹೃದಯವೈಶಾಲ್ಯತೆಯಿಂದಲೇ ಹೀರೋ ಆಗಿಬಿಟ್ಟಿದ್ದಾರೆ. ವಿಡಿಯೋ ನೋಡಿದವರು ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹ್ರಾ ಅವರು ಕೂಡ ಶ್ರೀಜಿತ್ ಕಾರ್ಯವನ್ನು ಅಭಿನಂದಿಸಿದ್ದಾರೆ.

    https://www.facebook.com/statepolicemediacentrekerala/videos/505185316758034/

    ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಜಿತ್, ನಾನು ನನ್ನ ಊಟದ ಪಾರ್ಸಲ್ ತೆರೆಯುವಾಗ ದೂರದಲ್ಲಿ ಒಬ್ಬರು ನನ್ನನ್ನೇ ನೋಡುತ್ತಾ ನಿಂತಿದ್ದರು. ಹೀಗಾಗಿ, ಅವರಿಗೆ ಹಸಿವಾಗಿದೆ ಎಂದು ನನಗೆ ಗೊತ್ತಾಗಿ, ನಿಮ್ಮ ಊಟ ಆಯ್ತಾ ಎಂದು ಕೇಳಿದೆ. ಅದಕ್ಕೆ ಅವರು ಇಲ್ಲ ಎಂದರು. ನಾನು ನನ್ನೊಂದಿಗೆಯೇ ಊಟ ಮಾಡಿ ಬನ್ನಿ ಎಂದೆ, ಮೊದಲು ಹಿಂಜರಿದರು ಬಳಿಕ ನಾನು ಒತ್ತಾಯಿಸಿದಾಗ ನನ್ನೊಂದಿಗೆ ಊಟ ಮಾಡಿದರು ಎಂದು ತಿಳಿಸಿದ್ದಾರೆ.

    ಸಾಮಾನ್ಯವಾಗಿ ಹಸಿದವರಿಗೆ ಊಟ ನೀಡುತ್ತಾರೆ. ಆದರೆ ಯಾರೋ ಪರಿಚಯವಿಲ್ಲದ ವ್ಯಕ್ತಿ ಜೊತೆ ತಾವು ತಿನ್ನುತ್ತಿದ್ದ ಊಟವನ್ನು ಹಂಚಿ ತಿನ್ನುವ ಮಂದಿ ವಿರಳ. ಶ್ರೀಜಿತ್ ಅವರು ಪರಿಚಯವಿಲ್ಲದಿದ್ದರೂ ಬಡ ವ್ಯಕ್ತಿ ಹಸಿದುಕೊಂಡಿದ್ದಾನೆ ಎಂದು ಗೊತ್ತಾಗಿ ತಕ್ಷಣ ತಮ್ಮ ಊಟವನ್ನು ಹಂಚಿ ತಿಂದು ಮಾನವೀಯತೆ ಮೆರೆದಿದ್ದಾರೆ. ಪೊಲೀಸ್ ಅಧಿಕಾರಿಯ ಈ ಹೃದಯಶೀಲತೆಗೆ ಜನರು ಮನಸೋತಿದ್ದಾರೆ.