Tag: kerala

  • 6.3 ಕಿ.ಮೀ ಉದ್ದ, 27 ಸಾವಿರ ಕೆಜಿ ಕೇಕ್ ಮಾಡಿ ಚೀನಾ ದಾಖಲೆ ಮುರಿದ ಕೇರಳ ಬೇಕರ್ಸ್

    6.3 ಕಿ.ಮೀ ಉದ್ದ, 27 ಸಾವಿರ ಕೆಜಿ ಕೇಕ್ ಮಾಡಿ ಚೀನಾ ದಾಖಲೆ ಮುರಿದ ಕೇರಳ ಬೇಕರ್ಸ್

    ತಿರುವನಂತಪುರಂ: 6.3 ಕಿಲೋ ಮೀಟರ್ ಉದ್ದ ಮತ್ತು 27 ಸಾವಿರ ಕೆಜಿ ತೂಕದ ವಿಶ್ವದ ಅತಿ ಉದ್ದದ ಕೇಕ್ ತಯಾರಿಸಿ ಕೇರಳ ಬೇಕರ್ಸ್ ತಂಡ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

    ಕೇರಳದ ತ್ರಿಶೂರ್‍ನಲ್ಲಿ ಬೇಕರ್ಸ್ ಅಸೋಸಿಯೇಷನ್ ಕೇರಳ (ಬಿಎಕೆಇ) ಅವರು ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 500 ಬೇಕರಿಗಳಿಂದ 1500 ಬೇಕರ್ಸ್‍ಗಳು ಮತ್ತು ಅಡುಗೆ ಮಾಡುವವರು ಸೇರಿ ವಿಶ್ವದ ಅತಿ ಉದ್ದದ ಕೇಕ್ ತಯಾರಿಸಿದ್ದಾರೆ. 12 ಸಾವಿರ ಕೆ.ಜಿ ಸಕ್ಕರೆ ಮತ್ತು ಹಿಟ್ಟನ್ನು ಬಳಸಿ ಈ ಕೇಕ್ ತಯಾರಿಸಲಾಗಿದೆ.

    ಕೇವಲ 4 ಗಂಟೆಗಳಲ್ಲಿ 1500 ಜನರ ಸೇರಿ, 10 ಸೆಂಟಿಮೀಟರ್ ಅಗಲ ಮತ್ತು ದಪ್ಪವಾದ ವೆನಿಲ್ಲಾ ಕೇಕ್ ಅನ್ನು ತಯಾರಿಸಿ ವಿಶ್ವದಾಖಲೆ ಬರೆದಿದ್ದಾರೆ. ಈ ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ವಿಶ್ವದ ಅತಿ ಉದ್ದವಾದ ಕೇಕ್ ತಯಾರಿಸಿ ವಿಶ್ವ ದಾಖಲೆ ನಿರ್ಮಿಸಿದ ಬೇಕರ್ಸ್ ಅಸೋಸಿಯೇಷನ್ ಕೇರಳದವರಿಗೆ ಧನ್ಯವಾದಗಳು ಎಂದು ಬರೆದುಕೊಂಡು, ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿದೆ.

    ಈ ಹಿಂದೆ ಮೇ 2018 ರಲ್ಲಿ 3.18 ಕಿಲೋಮೀಟರ್ ಉದ್ದದ ಕೇಕ್ ಅನ್ನು ತಯಾರಿಸಿದ್ದ ಚೀನಾದ ಜಿಯಾಂಗ್ಕ್ಸಿ ಬೇಕರಿ ಅಸೋಸಿಯೇಷನ್ (ಚೀನಾ) ವಿಶ್ವದ ಅತಿ ಉದ್ದದ ಕೇಕ್ ತಯಾರಿಸಿದ ದಾಖಲೆ ಮಾಡಿತ್ತು. ಈ ಕೇಕ್ ಅನ್ನು ಜಿಕ್ಸಿ ಬ್ರೆಡ್ ಅಂತರರಾಷ್ಟ್ರೀಯ ಪ್ರವಾಸೋದ್ಯಮ ಉತ್ಸವದಲ್ಲಿ, 23 ಗಂಟೆಗಳ ಅವಧಿಯಲ್ಲಿ 60 ಬೇಕರ್ಸ್ ಗಳು ಮತ್ತು 120 ಸಹಾಯಕರು ಸೇರಿ ಕೇಕ್ ತಯಾರಿಸಿದ್ದರು. ಇಲ್ಲಿ ತಯಾರದ ಫ್ರೂಟ್‍ಕೇಕ್ 12.2 ಸೆಂಟಿಮೀಟರ್ ಎತ್ತರ ಮತ್ತು 10.4 ಸೆಂಟಿಮೀಟರ್ ಉದ್ದವಿತ್ತು. ಕಾರ್ಯಕ್ರಮದ ನಂತರ ಕೇಕ್ ಅನ್ನು ಪ್ರೇಕ್ಷಕರಿಗೆ ಮತ್ತು ದೂರದ ಹಳ್ಳಿಗಳ ಕುಟುಂಬಗಳಿಗೆ ವಿತರಿಸಲಾಗಿತ್ತು.

  • ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ – ವಿಸ್ಮಯ ಕಣ್ತುಬಿಕೊಂಡ ಭಕ್ತಗಣ

    ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ – ವಿಸ್ಮಯ ಕಣ್ತುಬಿಕೊಂಡ ಭಕ್ತಗಣ

    ತಿರುವನಂತಪುರಂ: ಪ್ರತಿ ವರ್ಷದಂತೆ ಈ ಬಾರಿ ಶಬರಿಮಲೆಯಲ್ಲಿ ಮಕರ ಜ್ಯೋತಿಯನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ. ದೇವಾಲಯದಿಂದ 8 ಕಿ.ಮೀ ದೂರದಲ್ಲಿರುವ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿ ಬುಧವಾರ ಸಂಜೆ 6.45ರ ಸುಮಾರಿಗೆ ಕಾಣಿಸಿಕೊಂಡಿತು.

    ಈ ವಿಶೇಷ ಘಳಿಗೆಗಾಗಿ ಕಾದಿದ್ದ ಲಕ್ಷಾಂತರ ಭಕ್ತರು ಮಕರ ಜ್ಯೋತಿಯ ದರ್ಶನವಾಗುತ್ತಿದ್ದಂತೆ ಗಟ್ಟಿ ಸ್ವರದಲ್ಲಿ “ಸ್ವಾಮಿಯೇ ಶರಣಂ ಅಯ್ಯಪ್ಪ” ಎಂದು ಹೇಳಿ ಜಯಘೋಷ ಕೂಗಿದರು. ಭಕ್ತಿಯಿಂದ ಮಕರ ಜ್ಯೋತಿಗೆ ನಮಸ್ಕರಿಸಿ ಧನ್ಯರಾದರು.

    ಪ್ರತಿ ವರ್ಷ ಜನವರಿ 14ರ ಸಂಜೆ ಅಯ್ಯಪ್ಪ ಸ್ವಾಮಿಗೆ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿ ದರ್ಶನವಾಗುತ್ತದೆ. ಆದರೆ ಈ ಬಾರಿ ಮಕರ ಜ್ಯೋತಿ ಜನವರಿ 15ರಂದು ಕಾಣಿಸಿಕೊಂಡಿದೆ. ದೇಶದ ವಿವಿಧ ಭಾಗಗಳಿಂದ ಜಾತಿ, ಧರ್ಮ ಬೇದಭಾವವಿಲ್ಲದೆ ಶಬರಿಮಲೆಗೆ ಬರುವ ಭಕ್ತರು, ಅಯ್ಯಪ್ಪನ ಸನ್ನಿಧಾನದಲ್ಲಿ ಜ್ಯೋತಿಯ ದರ್ಶನ ಪಡೆಯಲು ಎರಡು ಮೂರು ದಿನಗಳ ಮುಂಚೆಯೇ ಆಗಮಿಸುತ್ತಾರೆ.

    ಐತಿಹಾಸಿಕ ಸಾಂಪ್ರದಾಯದಂತೆ ಪಂದಳದಿಂದ ಘೋಷಯಾತ್ರೆಯ ಮೂಲಕ ತಂದ ತಿರುವಾಭರಣಗಳನ್ನು ಅಯ್ಯಪ್ಪನಿಗೆ ತೊಡಿಸಿ ದೀಪಾರಾಧನೆ ನಡೆಸಿದ ಬಳಿಕ ಮಹಾ ಮಂಗಳರಾತಿಯನ್ನು ಮಾಡಲಾಗುತ್ತದೆ. ಮಹಾ ಮಂಗಳಾರತಿ ನಡೆದ ಬಳಿಕ ಪೊನ್ನಂಬಲಮೇಡು ಬೆಟ್ಟದಲ್ಲಿ ಮೂರು ಬಾರಿ ಜ್ಯೋತಿ ಕಾಣಿಸುತ್ತದೆ.

  • ಪ್ರವಾಸದಿಂದ ವಾಪಸ್ ಬರ್ತಿದ್ದ ನಗರಸಭಾ ಸದಸ್ಯ-ಜೆಡಿಎಸ್ ಮುಖಂಡ ದುರ್ಮರಣ

    ಪ್ರವಾಸದಿಂದ ವಾಪಸ್ ಬರ್ತಿದ್ದ ನಗರಸಭಾ ಸದಸ್ಯ-ಜೆಡಿಎಸ್ ಮುಖಂಡ ದುರ್ಮರಣ

    ಚಿತ್ರದುರ್ಗ: ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಚಿತ್ರದುರ್ಗ ಮೂಲದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೇರಳದ ಮಲಂಪುರದ ಬಳಿ ನಡೆದಿದೆ.

    ಹಿರಿಯೂರು ನಗರಸಭೆ ಸದಸ್ಯ ಎ.ಪಾಂಡುರಂಗ (37) ಹಾಗೂ ಐಮಂಗಲ ಹೋಬಳಿಯ ಜೆಡಿಎಸ್ ಮುಖಂಡ ಪ್ರಭಾಕರ್ (52) ಮೃತ ದುರ್ದೈವಿಗಳು.

    ಎ.ಪಾಂಡುರಂಗ ಮತ್ತು ಪ್ರಭಾಕರ್ ಕಳೆದ ಭಾನುವಾರ ಪ್ರವಾಸಕ್ಕೆಂದು ಕೇರಳಕ್ಕೆ ತೆರಳಿದ್ದರು. ಅಲ್ಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ, ಮಂಗಳವಾರ ರಾತ್ರಿ ವಾಪಸ್ ಹಿಂದಿರುಗುತ್ತಿದ್ದಾಗ ಈ ನಡೆದಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಜೆಡಿಎಸ್ ಜಿಲ್ಲಾಧ್ಯಕ್ಷ ಯಶೋಧರ ತೆರಳುವುದಾಗಿ ತಿಳಿಸಿದ್ದಾರೆ.

    ಹಿರಿಯೂರಿನ ಜೆಡಿಎಸ್ ತಾಲೂಕು ಘಟಕದಲ್ಲಿ ಪ್ರಭಾವಿ ಎನಿಸಿದ್ದ ಎ. ಪಾಂಡುರಂಗ, ಹಿರಿಯೂರು ನಗರಸಭೆಯ 7ನೇ ವಾರ್ಡ್ ಗೆ ಅವಿರೋಧವಾಗಿ ಜೆಡಿಎಸ್‍ನಿಂದ ಆಯ್ಕೆಯಾಗಿದ್ದರು. ಐಮಂಗಲ ಹೋಬಳಿಯ ಪ್ರಭಾಕರ್ ಕೂಡ ಉತ್ತಮ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಜನರ ಪ್ರೀತಿ ಗಳಿಸಿ, ಉದಯೋನ್ಮುಖ ಜನನಾಯಕರಾಗಿ ಬೆಳೆಯುತಿದ್ದರು. ಅಲ್ಲದೇ ಇಬ್ಬರು ಕೂಡ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.

  • ಲಾಠಿ ಹಿಡಿದು ತಮಿಳರ ವಿರುದ್ಧ ಕನ್ನಡಿಗರ ಪ್ರತಿಭಟನೆ

    ಲಾಠಿ ಹಿಡಿದು ತಮಿಳರ ವಿರುದ್ಧ ಕನ್ನಡಿಗರ ಪ್ರತಿಭಟನೆ

    ಚಾಮರಾಜನಗರ: ಇತ್ತೀಚೆಗೆ ತಮಿಳುನಾಡಿನಲ್ಲಿ ಪಾರ್ಕಿಂಗ್ ಕುರಿತು ನಮ್ಮ ರಾಜ್ಯದ ಬಸ್ ತಡೆದು ಗಲಾಟೆ ಮಾಡಿದ್ದ ಪ್ರಕರಣದ ಬೆನ್ನಲ್ಲೇ ಕನ್ನಡ ಪರ ಸಂಘಟನೆಗಳು ಎಚ್ಚೆತ್ತುಕೊಂಡಿವೆ. ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ, ಲಾಠಿ ಹಿಡಿದು ಪ್ರತಿಭಟನೆ ನಡೆಸಿದರು.

    ಚಾಮರಾಜನಗರದ ಚಾಮರಾಜೇಶ್ವರ ಪಾರ್ಕ್ ಮುಂಭಾಗದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಲಾಠಿ ಹಿಡಿದು ಪ್ರತಿಭಟನೆ ನಡೆಸಿದರು. ಪ್ರವಾಸಕ್ಕೆಂದು ತೆರಳುವ ಕನ್ನಡಿಗರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆಯುತ್ತಿರುವುದು ಖಂಡನಾರ್ಹ. ಇದನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

    ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮುಂದುವರಿಸಿದರೆ ರಾಜ್ಯದಲ್ಲಿ ನಾವು ಕೈಕಟ್ಟಿ ಕೂರುವುದಿಲ್ಲ. ತಮಿಳುನಾಡು ಸರ್ಕಾರ ಅಲ್ಲಿರುವ ಕನ್ನಡಿಗರಿಗೆ ಹಾಗೂ ಕರ್ನಾಟಕದಿಂದ ತೆರಳುವ ಪ್ರವಾಸಿಗರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

    ಇತ್ತೀಚೆಗೆ ರಾಜ್ಯದ ಬಸ್ ತಮಿಳುನಾಡು ಪ್ರವಾಸಕ್ಕೆ ತೆರಳಿದಾಗ ಪಾರ್ಕಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿತ್ತು. ಅಲ್ಲದೆ ಬಸ್ ಮೇಲೆ ಕನ್ನಡದ ಬಾವುಟ ಇದ್ದಿದ್ದಕ್ಕೆ ತಮಿಳಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಕೇರಳದಲ್ಲಿಯೂ ಇದೇ ರೀತಿಯ ಪ್ರಕರಣ ನಡೆದಿತ್ತು. ಕನ್ನಡ ಬಾವುಟ ಇದ್ದಿದ್ದಕ್ಕೆ ರಾಜ್ಯದೊಳಗೆ ವಾಹನ ಬಿಡುವುದಿಲ್ಲ ಎಂದು ಕೇರಳ ಪೊಲೀಸರು ವಾಹನ ತಡೆದಿದ್ದರು. ಇದಾದ ನಂತರ ಎಲ್ಲ ಟ್ರಾವೆಲ್ಸ್ ವಾಹನಗಳಿಗೂ ಕನ್ನಡ ಬಾವುಟ ಕಟ್ಟಿ ಕೇರಳ ಪ್ರವೇಶಿಸುವ ಮೂಲಕ ಚಾಲಕರು ಕ್ರಾಂತಿ ಎಬ್ಬಿಸಿದ್ದರು. ಇದು ರಾಜ್ಯದಲ್ಲಿ ತೀವ್ರ ಸಂಚಲನವನ್ನು ಸೃಷ್ಟಿಸಿತ್ತು. ಆಗಿನಿಂದ ಕನ್ನಡಪರ ಸಂಘಟನೆಗಳು ಎಚ್ಚೆತ್ತುಕೊಂಡು ರಾಜ್ಯದಲ್ಲಿ ಪ್ರತಿಭಟನೆ ನಡೆಸುತ್ತಿವೆ.

  • ಕೊಚ್ಚಿಯಲ್ಲಿ ಧರೆಗುರುಳಿದ ಅಕ್ರಮ ಕಟ್ಟಡಗಳು- ಬೆಂಗ್ಳೂರಲ್ಲಿ ಕೆರೆದಂಡೆಯ ಮನೆಯವರಿಗೆ ಢವ ಢವ

    ಕೊಚ್ಚಿಯಲ್ಲಿ ಧರೆಗುರುಳಿದ ಅಕ್ರಮ ಕಟ್ಟಡಗಳು- ಬೆಂಗ್ಳೂರಲ್ಲಿ ಕೆರೆದಂಡೆಯ ಮನೆಯವರಿಗೆ ಢವ ಢವ

    ಬೆಂಗಳೂರು: ಕೇರಳದ ಕೊಚ್ಚಿಯಲ್ಲಿ ಕೋಟಿಗಟ್ಟಲೇ ಮೌಲ್ಯದ ಕಟ್ಟಡಗಳು ಉರುಳಿವೆ. ಕೊಚ್ಚಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಕೆರೆ ಭೂಮಿಗಳ್ಳರಿಗೆ ನಡುಕ ಶುರುವಾಗಿದೆಯಾ? ಲೇಕ್ ವ್ಯೂವ್ ಪಾಯಿಂಟ್ ಮೂಡ್ ನಲ್ಲಿದ್ದವರು ಆತಂಕಗೊಂಡಿದ್ದಾರೆ. ಬೆಂಗಳೂರಿನಲ್ಲೂ ಕೊಚ್ಚಿ ಮಾದರಿಯಲ್ಲಿ ಶುರುವಾಗುತ್ತಾ ಎಂಬ ಪ್ರಶ್ನೆಗಳು ಮೂಡಿವೆ.

    ಕೇರಳದಂತೆ ಬೆಂಗಳೂರಿನಲ್ಲೂ ಅಕ್ರಮ ಗಗನಚುಂಬಿ ಕಟ್ಟಡಗಳಿದೆ ಇದೇ ಸ್ಥಿತಿಯಾಗುತ್ತಾ ಎಂಬ ಚರ್ಚೆ ಶುರುವಾಗಿದೆ. ಬೆಂಗಳೂರಿನಲ್ಲಿಯೂ ಸಾಕಷ್ಟು ಕೆರೆಯನ್ನು ನುಂಗಿ ನಿರ್ಮಾಣವಾಗಿರುವ ಕಟ್ಟಡದ ಸಂಖ್ಯೆ ಅತ್ಯಧಿಕವಾಗಿದೆ. ಕೊಚ್ಚಿಯಲ್ಲಿ ನಡೆದ ಘಟನೆ ಬೆನ್ನಲ್ಲೆ ಬೆಂಗಳೂರಿನಲ್ಲಿ ಮೇಯರ್ ಆಯುಕ್ತರ ಜೊತೆ ಸಭೆ ಚರ್ಚೆ ನಡೆಸಿ, ಬಫರ್ ಝೋನ್ ಗೊಂದಲ, ಹಾಗೂ ಕೆರೆಯ ಪಕ್ಕ ನಿರ್ಮಾಣವಾಗಿರುವ ಕಟ್ಟಡಗಳ ವಿರುದ್ಧ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

    ಎನ್.ಜಿ.ಟಿ ಆದೇಶದ ಪ್ರಕಾರ ಕೆರೆಯ 72 ಮೀಟರ್ ಪರಿದಿಯಲ್ಲಿ ಕಟ್ಟಡ ನಿರ್ಮಾಣ ಮಾಡುವಂತಿಲ್ಲ. ಆದರೆ ಸುಪ್ರೀಂ ಕೋರ್ಟ್ ನಲ್ಲಿ ಈ ಪರಿದಿ ಬಗ್ಗೆ ಸ್ಟೇ ಇದೆ. ಹಾಗಾಗಿ ಬಿಬಿಎಂಪಿ ಮೂವತ್ತು ಮೀಟರ್ ಅಂತಾನೇ ಪರಿಗಣನೆ ಮಾಡಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ಅಸುಪಾಸು ಹತ್ತೊಂಬತ್ತು ಲಕ್ಷ ಕಟ್ಟಡ ಇದೆ. ಅದರಲ್ಲಿ ಬಿಬಿಎಂಪಿ ಅನುಮತಿ ಪಡೆಯದೆ ಬಿ ಖಾತಾ ಇರುವ ಮೂರು ಲಕ್ಷ ಕಟ್ಟಡಗಳು ಹಾಗೂ ಕೃಷಿ ಜಮೀನಿನಲ್ಲೂ ಕಟ್ಟಡವಿದೆ. ಒಟ್ಟು ಮೂರು ಲಕ್ಷ ಅದನ್ನು ಅನಧಿಕೃತ ಎಂದೂ ಪರಿಗಣಿಸಲಾಗಿದೆ. ರಾಜಕಾಲುವೆ ವ್ಯಾಪ್ತಿಯಲ್ಲಿ 2,626 ಅನಧಿಕೃತ ಕಟ್ಟಡವಿದೆ. ಒಟ್ಟು ಹತ್ತು ಕೆರೆಯಲ್ಲಿ ಭೂ ಒತ್ತುವರಿಯ ಸಂಪೂರ್ಣ ಚಿತ್ರಣ ಸಿಕ್ಕಿದ್ದು ಆರು ಕೆರೆಯ ಒತ್ತುವರಿ ಬಿಡಿಸಿ ಪೆನ್ಸಿಂಗ್ ಹಾಕಲಾಗಿದೆ.

    ಸುಪ್ರೀಂ ಕೋರ್ಟ್ ನಲ್ಲಿ ಅಕ್ರಮ – ಸಕ್ರಮದ ತೀರ್ಪಿಗೆ ಬಿಬಿಎಂಪಿ ಕಾಯುತ್ತಿದ್ದು ತದನಂತರ ಕೆರೆಯಂಗಳದಲ್ಲಿ ಅನಧಿಕೃತ ಕಟ್ಟಡ ತೆರವಿನ ಬಗ್ಗೆ ಪ್ಲಾನ್ ರೂಪಿಸಲಿದೆ. ಈಗಾಗಲೇ ಬಿಬಿಎಂಪಿಗೆ ಕೆರೆಯ ಪಕ್ಕ ಕಟ್ಟಡ ನಿರ್ಮಿಸಿದವರಿಗೆ ನೋಟಿಸ್ ಕೊಡಲಾಗಿದೆ. ಆದರೆ ಕೋರ್ಟ್ ನಲ್ಲಿ ಹೋಗಿ ಸ್ಟೇ ತರೋದ್ರಿಂದ ಕಾನೂನಾತ್ಮಕ ತೊಡಕು ಎದುರಾಗುತ್ತಿದೆ. ಈ ಬಾರಿ ಅಕ್ರಮ – ಅಕ್ರಮದ ಸ್ಪಷ್ಟ ಚಿತ್ರಣ, ಬಫರ್ ಝೋನ್ ಗೊಂದಲ ನಿವಾರಣೆಯಾದ ಬಳಿಕ ಸೂಕ್ತ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿ ನಿರ್ಧರಿಸಿದೆ.

  • ನೆಲಕ್ಕುರುಳಿದ ಗಗನಚುಂಬಿ ಕಟ್ಟಡ- 4 ಅಪಾರ್ಟ್​ಮೆಂಟ್​ಗಳ ಪೈಕಿ 2 ನೆಲಸಮ

    ನೆಲಕ್ಕುರುಳಿದ ಗಗನಚುಂಬಿ ಕಟ್ಟಡ- 4 ಅಪಾರ್ಟ್​ಮೆಂಟ್​ಗಳ ಪೈಕಿ 2 ನೆಲಸಮ

    – 800 ಕೆಜಿ ಸ್ಫೋಟಕ ಬಳಸಿ ಬ್ಲಾಸ್ಟ್

    ತಿರುವನಂತಪುರಂ: ನಿಯಮಮೀರಿ ಕೆರೆದಂಡೆಯ ಮೇಲೆ ಅಕ್ರಮವಾಗಿ ಕಟ್ಟಿದ್ದ ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡುವ ಕೆಲಸವನ್ನು ಕೇರಳ ಸರ್ಕಾರ ಶುರುಮಾಡಿದೆ.

    ಸುಪ್ರೀಕೋರ್ಟ್ ನ ಆದೇಶದ ಬೆನ್ನಲ್ಲೇ ಸುಮಾರು ನಾಲ್ಕು ತಿಂಗಳ ನಂತರ ಕಟ್ಟಡವನ್ನು ನೆಲಸಮ ಮಾಡಲು ಸರ್ಕಾರ ಮುಂದಾಗಿದೆ. ಕೇರಳದ ಕೊಚ್ಚಿಯ ತೀರ ಪ್ರದೇಶದ ಮರಡು ವಸತಿ ಪ್ರದೇಶದ ಹಿನ್ನೀರಿನಲ್ಲಿ ಅಕ್ರಮವಾಗಿ ನಿರ್ಮಾಣವಾಗಿದ್ದ ನಾಲ್ಕು ಗಗನಚುಂಬಿ ಅಪಾರ್ಟ್​ಮೆಂಟ್​ಗಳ ನೆಲಸಮ ಶುರುವಾಗಿದೆ. ಇಂದು 4 ಅಪಾರ್ಟ್​ಮೆಂಟ್​ಗಳ ಪೈಕಿ 2 ಅಪಾರ್ಟ್​ಮೆಂಟ್​ಗಳನ್ನು 800 ಕೆಜಿ ಸ್ಫೋಟಕ ಬಳಸಿ ನೆಲಸಮ ಮಾಡಲಾಗಿದೆ.

    ಈ ನಾಲ್ಕು ಅಪಾರ್ಟ್​ಮೆಂಟ್​ಗಳಲ್ಲಿ 350 ಫ್ಲ್ಯಾಟ್‍ಗಳು ಇದ್ದವು. 90 ಫ್ಲ್ಯಾಟ್ ಹೊಂದಿದ್ದ 19 ಫ್ಲೋರ್ ನ 60 ಮೀಟರ್ ಎತ್ತರದ H2O ಹೋಲಿಫೇತ್ ಅಪಾರ್ಟ್​ಮೆಂಟ್​ ಮತ್ತು 73 ಫ್ಲ್ಯಾಟ್ ಹೊಂದಿದ್ದ ಆಲ್ಫಾ ಸಿರೀನ್ ಅಪಾರ್ಟ್​ಮೆಂಟ್​ಗಳ ಧ್ವಂಸವಾಗಿದೆ. ಈ ಅಪಾರ್ಟ್​ಮೆಂಟ್​ಗಳಲ್ಲಿ 240 ಕುಟುಂಬಗಳು ಆಶ್ರಯ ಪಡೆದುಕೊಂಡಿದ್ದವು.

    ಕೋಸ್ಟಲ್ ರೆಗ್ಯುಲೇಷನ್ ಝೋನ್ ರೂಲ್ಸ್ ಉಲ್ಲಂಘಿಸಿ ಅಪಾರ್ಟ್​ಮೆಂಟ್​ ನಿರ್ಮಾಣ ಮಾಡಲಾಗಿತ್ತು. ನದಿಯ ಪಕ್ಕ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಇದರಿಂದ ಎಲ್ಲಾ ಕಾನೂನು ನಿಯಮಗಳನ್ನು ಮೀರಿ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಪಾರ್ಟ್​ಮೆಂಟ್​ಗಳ ಧ್ವಂಸಕ್ಕೆ ಸೂಚನೆ ಕೊಟ್ಟಿತ್ತು.

    ಅಲ್ಲದೇ ಸುಪ್ರೀಕೋರ್ಟ್ ಅಕ್ರಮ ಗಗನಚುಂಬಿ ಕಟ್ಟಡಗಳ ತೆರವಿಗೆ 138 ದಿನಗಳ ಡೆಡ್‍ಲೈನ್ ನೀಡಿತ್ತು. ಇದೀಗ ಕೋರ್ಟ್ ಆದೇಶದಂತೆ ನಾಲ್ಕು ಕಟ್ಟಗಳಲ್ಲಿ ಇಂದು ಎರಡು ಕಟ್ಟಡವನ್ನು ನೆಲಸಮ ಮಾಡಲಾಗಿದೆ. ಎರಡು ಅಪಾರ್ಟ್ ಮೆಂಟ್​ಗಳ ನೆಲಸಮ ಮಾಡಲು ಸುಮಾರು 800 ಕೆಜಿ ಸ್ಫೋಟಕವನ್ನು ಬಳಸಲಾಗಿದೆ. ಕ್ಷಣಾರ್ಧದಲ್ಲಿ ಕಟ್ಟಡಗಳು ನೆಲಕ್ಕುರುಳಿರುವ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ನೆರೆಹೊರೆಯವನ್ನು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಸೂಚಿಸಲಾಗಿತ್ತು. ಅಲ್ಲದೇ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ. ಮನೆ ಕಳೆದುಕೊಂಡವರಿಗೆ ತಲಾ 25 ಲಕ್ಷ ಪರಿಹಾರ ಕೊಡುವಂತೆ ಕೋರ್ಟ್ ಸೂಚನೆ ನೀಡಿದೆ. ಭಾನುವಾರ ಜೈನ್ ಕೋರಲ್ ಕೋವ್ ಮತ್ತು ಗೋಲ್ಡನ್ ಕಯಾಲೋರಾಂ ಅಪಾರ್ಟ್​ಮೆಂಟ್​ಗಳನ್ನು ನೆಲಸಮ ಮಾಡಲಾಗುತ್ತದೆ.

  • ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೂವರೆ ಕೆಜಿ ಚಿನ್ನ ವಶ

    ಮಂಗಳೂರು ವಿಮಾನ ನಿಲ್ದಾಣದಲ್ಲಿ ಒಂದೂವರೆ ಕೆಜಿ ಚಿನ್ನ ವಶ

    – ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಬೇಟೆ

    ಮಂಗಳೂರು: ದುಬೈನಿಂದ ಮಂಗಳೂರಿಗೆ ಬರುವ ಕೆಲವರು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಪ್ರಕರಣ ಪದೇ ಪದೇ ಬೆಳಕಿಗೆ ಬರುತ್ತಿದ್ದು, ಮತ್ತೆ ಈ ಅಕ್ರಮ ಚಿನ್ನ ಸಾಗಾಟ ಮುಂದುವರೆದಿದೆ.

    ಮೂರು ಬೇರೆ ಬೇರೆ ಪ್ರಕರಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಒಂದೂವರೆ ಕೆ.ಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಚಿನ್ನದ ಒಟ್ಟು ಮೌಲ್ಯವು 63.73 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

    ದುಬೈನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಈ ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ವಿಮಾನದಲ್ಲಿದ್ದ ಪ್ರಯಾಣಿಕನಿಂದ 336.7 ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 13.43 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಇನ್ನೋರ್ವ ಪ್ರಯಾಣಿಕನಿಂದ 21.24 ಲಕ್ಷ ರೂ. ಮೌಲ್ಯದ 523 ಗ್ರಾಂ ಚಿನ್ನ ಹಾಗೂ ಮತ್ತೋರ್ವ ಪ್ರಯಾಣಿಕನಿಂದ 29.06 ಲಕ್ಷ ರೂ. ಮೌಲ್ಯದ 716 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.

    ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸುವ ವೇಳೆ ಈ ಚಿನ್ನ ಸಾಗಾಟ ಬೆಳಕಿಗೆ ಬಂದಿದ್ದು, ಮೂವರನ್ನು ಬಂಧಿಸಿ ಹೆಚ್ಚಿನ ತನಿಖೆಗಾಗಿ ಬಜಪೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಬಂಧಿತ ಮೂವರೂ ಕೇರಳ ಮೂಲದವರಾಗಿದ್ದು, ಈ ಹಿಂದಿನಿಂದಲೂ ಇದೇ ರೀತಿ ಅಕ್ರಮ ಚಿನ್ನ ಸಾಗಾಟದಲ್ಲಿ ಸಿಕ್ಕಿ ಬಿದ್ದವರು ಕೇರಳ ಮೂಲದವರೇ ಎನ್ನುವುದು ವಿಶೇಷವಾಗಿದೆ.

  • ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರೇ ಲಾಟರಿ ದಂಧೆಕೋರರ ಟಾರ್ಗೆಟ್

    ಚಾಮರಾಜನಗರದಲ್ಲಿ ಕೂಲಿ ಕಾರ್ಮಿಕರೇ ಲಾಟರಿ ದಂಧೆಕೋರರ ಟಾರ್ಗೆಟ್

    ಚಾಮರಾಜನಗರ: ದಶಕದ ಹಿಂದೆಯೇ ರಾಜ್ಯದಲ್ಲಿ ಲಾಟರಿ ಮಾರಾಟ ನಿಷೇಧ ಮಾಡಲಾಗಿದೆ. ಆದರೆ ರಾಜ್ಯದ ಗಡಿಯಂಚಿನಲ್ಲಿರುವ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಭಾಗದಲ್ಲಿ ಕದ್ದುಮುಚ್ಚಿ ಹೊರ ರಾಜ್ಯಗಳ ಲಾಟರಿ ದಂಧೆ ನಡೆಯುತ್ತಿದೆ. ಕೂಲಿ ಕಾರ್ಮಿಕರು, ಬಡವರೇ ದಂಧೆಕೋರರ ಟಾರ್ಗೆಟ್ ಆಗಿರುವುದು ಆಂತಕಕಾರಿ ವಿಷಯವಾಗಿದೆ.

    ಕೇರಳ ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯದ ಏಕಮಾತ್ರ ಪಟ್ಟಣ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ. ಗುಂಡ್ಲುಪೇಟೆಯಿಂದ ಕೇರಳದ ಸುಲ್ತಾನ್ ಬತ್ತೇರಿ ಹಾಗೂ ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುವ ಎರಡು ರಾಷ್ಟ್ರೀಯ ಹೆದ್ದಾರಿಗಳು ಇಲ್ಲಿವೆ. ಈ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ ಸಾವಿರಾರು ಮಂದಿ ಪ್ರಯಾಣಿಸುತ್ತಾರೆ. ರಾಜ್ಯದಲ್ಲಿ ಲಾಟರಿ ನಿಷೇಧವಿದ್ದರೂ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಲಾಟರಿ ಚಾಲ್ತಿಯಲ್ಲಿದೆ.

    ಕೆಲವು ದಂಧೆಕೋರರು ಕೇರಳ ಮತ್ತು ತಮಿಳುನಾಡಿನಲ್ಲಿ ಚಾಲ್ತಿಯಲ್ಲಿ ಇರುವ ಲಾಟರಿಗಳನ್ನು ಗುಂಡ್ಲುಪೇಟೆ ಭಾಗಕ್ಕೆ ತಂದು ಕದ್ದು ಮಾರಾಟ ಮಾಡುತ್ತಿದ್ದಾರೆ. ಜೇಬಿನಲ್ಲಿ ಲಾಟರಿಗಳನ್ನು ತಂದು ಮಾರಾಟ ಮಾಡಿ ಹೋಗುತ್ತಾರೆ. ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ತಮ್ಮ ರಾಜ್ಯದಲ್ಲಿ ಲಾಟರಿ ಖರೀದಿಸಿ ಜೇಬಿನಲ್ಲಿ ಇಟ್ಟುಕೊಂಡಿದ್ದೇವೆ. ಕೆಲಸದ ನಿಮಿತ್ತ ಇಲ್ಲಿಗೆ ಬಂದಿದ್ದೇವೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದ್ ಕುಮಾರ್ ಪ್ರತಿಕ್ರಿಯಿಸಿ, ಗುಂಡ್ಲುಪೇಟೆ ಭಾಗದಲ್ಲಿ ಸಂಜೆ ವೇಳೆ ಹೊರ ರಾಜ್ಯದ ಲಾಟರಿಗಳನ್ನು ಕದ್ದು ಮಾರಾಟ ಮಾಡುವುದು ತಿಳಿದು ಬಂದಿದೆ. ಲಾಟರಿ ಮಾರಾಟ ಮಾಡಿ ಸಿಕ್ಕಿ ಬಿದ್ದವರ ಮೇಲೆ ಈಗಾಗಲೇ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ಹೊರ ರಾಜ್ಯದ ಲಾಟರಿ ಮಾರಾಟದ ಬಗ್ಗೆ ಹದ್ದಿನ ಕಣ್ಣಿಡಲಾಗುವುದು ಎಂದು ತಿಳಿಸಿದ್ದಾರೆ.

    ಖದೀಮರ ಬಗ್ಗೆ ಪೊಲೀಸರು ಎಷ್ಟೇ ಹದ್ದಿನ ಕಣ್ಣು ಇಟ್ಟಿದ್ದರೂ ಲಾಟರಿ ಮಾರಾಟ ದಂಧೆ ನಡೆಯುತ್ತಲೇ ಇದೆ. ಅಮಾಯಕ ಕೂಲಿ ಕಾರ್ಮಿಕರು, ಬಡವರು ಲಾಟರಿ ದಂಧೆಗೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಿದ್ದಾರೆ.

  • ‘ಅಮ್ಮ ನಾನು ನಿನ್ನ ಮಗಳು’ – ಅನುರಾಧ ಪೋಡ್ವಾಲ್‍ರಿಂದ 50 ಕೋಟಿ ರೂ. ಬೇಡಿಕೆ ಇಟ್ಟ ಪುತ್ರಿ

    ‘ಅಮ್ಮ ನಾನು ನಿನ್ನ ಮಗಳು’ – ಅನುರಾಧ ಪೋಡ್ವಾಲ್‍ರಿಂದ 50 ಕೋಟಿ ರೂ. ಬೇಡಿಕೆ ಇಟ್ಟ ಪುತ್ರಿ

    ತಿರುವನಂತಪುರಂ: ತಮ್ಮ ಅದ್ಭುತ ಕಂಠಸಿರಿಯಿಂದ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿರುವ ಗಾಯಕಿ ಅನುರಾಧ ಪೋಡ್ವಾಲ್‍ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಮಹಿಳೆಯೊಬ್ಬರು ತಾನು ಅನುರಾಧ ಪೋಡ್ವಾಲ್‍ ಮಗಳು, ನನ್ನನ್ನು ದೂರ ಇಟ್ಟಿದ್ದಕ್ಕೆ ಅನುರಾಧ ಅವರಿಂದ ನನಗೆ 50 ಕೋಟಿ ರೂ. ಪರಿಹಾರ ಕೊಡಿಸಿ ಎಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.

    ಕರ್ಮಲಾ ಮೊಡೆಕ್ಸ್(45) ಅನುರಾಧ ಅವರಿಂದ 50 ಕೋಟಿ ರೂ. ಪರಿಹಾರ ಕೊಡಿಸುವಂತೆ ತಿರುವನಂತಪುರ ಕೋರ್ಟ್ ಮೆಟ್ಟಿಲೇರಿದ್ದಾರೆ. ಅನುರಾಧ ಹಾಗೂ ಅರುಣ್ ಪೋಡ್ವಾಲ್‍ ನನ್ನ ತಂದೆ ತಾಯಿ. ನಾನು ಹುಟ್ಟಿದ ನಾಲ್ಕೇ ದಿನಕ್ಕೆ ತಂದೆ ತಾಯಿ ನನ್ನನ್ನು ದೂರ ಮಾಡಿದ್ದರು. ಪೊನ್ನಚ್ಚನ್ ಹಾಗೂ ಅಗ್ನಿಸ್ ದಂಪತಿ ಮಡಲಿಗೆ ನನ್ನನ್ನು ಹಾಕಿ ತಂದೆ, ತಾಯಿ ಹೋಗಿದ್ದರು. ತಮ್ಮ ಬ್ಯುಸಿ ಕೆಲಸದ ಕಾರಣದಿಂದ ನನ್ನನ್ನು ಸಾಕಲು ಆಗದೇ ಅವರು ನನ್ನಿಂದ ದೂರವಾಗಿದ್ದರು ಎಂದು ಕರ್ಮಾಲಾ ತಿಳಿಸಿದ್ದಾರೆ.

    ಇಷ್ಟು ವರ್ಷದ ಮೇಲೆ ತಾಯಿಯ ನೆನಪು ಯಾಕೆ ಆಯ್ತು ಎಂದು ಪ್ರಶ್ನಿಸಿದಾಗ, ದತ್ತು ತಂದೆ ಪೊನ್ನಚ್ಚನ್ ಅವರು ಸಾಯುವ ಕೊನೆ ಕ್ಷಣದಲ್ಲಿ ನನಗೆ ಸತ್ಯ ತಿಳಿಸಿದರು. ನೀನು ನಮ್ಮ ಮಗಳಲ್ಲ ಅನುರಾಧ ಹಾಗೂ ಅರುಣ್ ಪೋಡ್ವಾಲ್‍ ಮಗಳು ಎಂದು ನನ್ನ ಜನ್ಮರಹಸ್ಯ ತೆರೆದಿಟ್ಟರು ಎಂದು ಕರ್ಮಾಲಾ ಹೇಳಿದ್ದಾರೆ.

    ದತ್ತು ತಂದೆ ಸಾವನ್ನಪ್ಪಿದ ಬಳಿಕ ನಾನು ನನ್ನ ಸ್ವಂತ ತಾಯಿಗೆ(ಅನುರಾಧ) ಕರೆ ಮಾಡಿದೆ. ನನ್ನನ್ನು ಮಗಳೆಂದು ಒಪ್ಪಿಕೊಳ್ಳುವಂತೆ ಹೇಳಿದೆ. ಆದರೆ ಅವರು ನನಗೆ ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ನನ್ನ ದತ್ತು ತಂದೆ-ತಾಯಿಗೆ ಮೊದಲೇ ಮೂವರು ಮಕ್ಕಳಿದ್ದರು. ಆದರೂ ಅವರು ನನ್ನನ್ನು ದತ್ತು ಪಡೆದು ಸ್ವಂತ ಮಗಳಂತೆ ಸಾಕಿ ಸಲುಹಿದ್ದಾರೆ. ಜೀವನ ನಡೆಸಲು ಕಷ್ಟವಿದ್ದರೂ ನನ್ನು ಸಾಕಿದ್ದಾರೆ ಎಂದಿದ್ದಾರೆ.

    ಅಗ್ನಿಸ್ ಅವರಿಗೆ ಮರುವಿನ ಕಾಯಿಲೆ ಇದೆ. ಆದರೆ ಚಿಕಿತ್ಸೆಗಾಗಿ ಹಣವಿಲ್ಲ. ತುಂಬಾ ಕಷ್ಟಪಟ್ಟು ಜೀವನ ನಡೆಸುತ್ತಿದ್ದೇವೆ. ತಮ್ಮ ಕಷ್ಟದಲ್ಲೂ ನನ್ನನ್ನು ಸಾಕಿ ಸಲುಹಿದ ತಾಯಿಗೆ ನಾನು ನೆರವಾಗಬೇಕಿದೆ. ಆದ್ದರಿಂದ ತನ್ನ ಸ್ವಂತ ತಾಯಿ ಅನುರಾಧ ಅವರ ನಮ್ಮ ಆಸ್ತಿಯಲ್ಲಿ ನನಗೆ ಪಾಲು ಕೊಡಬೇಕು. ನನ್ನನ್ನು ದೂರವಿಟ್ಟಿದ್ದಕ್ಕೆ ಪರಿಹಾರ ಕೊಡಬೇಕೆಂದು ಕರ್ಮಾಲಾ ಆಗ್ರಹಿಸಿದ್ದಾರೆ.

    ನಾನು ಸಾಕಷ್ಟು ಬಾರಿ ಅಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಅಮ್ಮ ನನ್ನ ಕರೆಗಳಿಗೆ ಸ್ಪಂದಿಸಿಲ್ಲ. ನನ್ನ ನಂಬರ್ ಕೂಡ ಬ್ಲಾಕ್ ಮಾಡಿದ್ದಾರೆ. ಆದ್ದರಿಂದ ಕೋರ್ಟ್ ಮೆಟ್ಟಿಲೇರಿದ್ದೇನೆ ಎಂದು ಕರ್ಮಾಲಾ ಮಾಧ್ಯಮವೊಂದರಲ್ಲಿ ಹೇಳಿಕೊಂಡಿದ್ದಾರೆ.

  • ಕೇರಳ ಕಸ ಕರ್ನಾಟಕಕ್ಕೆ ರವಾನೆ – 2 ಲಾರಿ ಜಪ್ತಿ

    ಕೇರಳ ಕಸ ಕರ್ನಾಟಕಕ್ಕೆ ರವಾನೆ – 2 ಲಾರಿ ಜಪ್ತಿ

    ಮಂಡ್ಯ: ಕೇರಳದ ಕಸ ಕರ್ನಾಟಕಕ್ಕೆ ರವಾನೆಯಾಗುತ್ತಿದ್ದು, ಇದರಿಂದ ಮೈಸೂರು ಮತ್ತು ಮಂಡ್ಯ ವ್ಯಾಪ್ತಿಯಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ.

    ಸಕ್ಕರೆ ನಗರಿ ಮಂಡ್ಯಗೆ ಕೇರಳದಿಂದ ಅತೀ ಹೆಚ್ಚು ತ್ಯಾಜ್ಯ ರವಾನೆಯಾಗುತ್ತಿದೆ. ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಕೇರಳದ ತ್ಯಾಜ್ಯ ವಸ್ತುಗಳಾದ ರಬ್ಬರ್, ಬಟ್ಟೆ, ಪ್ಲಾಸ್ಟಿಕ್‍ಗಳು ಲಾರಿ ಮೂಲಕ ಬರುತ್ತಿದೆ. ಆಲೆಮನೆಗಳಲ್ಲಿ ಪರಿಸರಕ್ಕೆ ಮಾರಕವಾದ ತ್ಯಾಜ್ಯಗಳನ್ನು ಬಳಕೆ ಮಾಡುತ್ತಿರುವುದರಿಂದ ಹೆಚ್ಚಿನ ಮಾಲಿನ್ಯ ಉಂಟಾಗುತ್ತಿದೆ.

    ಈ ಕುರಿತು ಎಚ್ಚೆತ್ತಿರುವ ಪೊಲೀಸರು ಕೇರಳದ ತ್ಯಾಜ್ಯ ತುಂಬಿದ ಎರಡು ಲಾರಿಯನ್ನು ಜಿಲ್ಲೆಯ ಶ್ರೀರಂಗಪಟ್ಣದಲ್ಲಿ ಜಪ್ತಿ ಮಾಡಿದ್ದಾರೆ. ಕೇರಳದಿಂದ ತ್ಯಾಜ್ಯ ತುಂಬಿರುವ 25 ಕ್ಕೂ ಹೆಚ್ಚು ಲಾರಿಗಳು ಕರ್ನಾಟಕಕ್ಕೆ ಬಂದಿವೆ ಎನ್ನಲಾಗಿದೆ. ಶ್ರೀರಂಗಪಟ್ಟಣದ ಬಳಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಶ್ರೀರಂಗಪಟ್ಟಣದ ಟೌನ್ ರಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ತ್ಯಾಜ್ಯ ತುಂಬಿದ ಲಾರಿಗಳನ್ನು ಜಪ್ತಿ ಮಾಡಿದ್ದಾರೆ.

    ಲಾರಿಯಲ್ಲಿ ತಂದ ತ್ಯಾಜ್ಯವನ್ನು ಮಂಡ್ಯ ಜಿಲ್ಲೆಯ ಆಲೆಮನೆಗಳಿಗೆ ಬಳಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಲಾರಿ ಚಾಲಕರಿಬ್ಬರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಪರಿಸರ ಇಲಾಖೆ ಅಧಿಕಾರಿ ಅಶ್ವಿನಿ ಅವರು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂದ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.