Tag: kerala

  • ಕೇರಳದಲ್ಲಿ ನಾಳೆಯಿಂದ ಹೋಟೆಲ್ ಓಪನ್- ವಾಹನ ಸಂಚಾರಕ್ಕೆ ಷರತ್ತುಬದ್ಧ ಅನುಮತಿ

    ಕೇರಳದಲ್ಲಿ ನಾಳೆಯಿಂದ ಹೋಟೆಲ್ ಓಪನ್- ವಾಹನ ಸಂಚಾರಕ್ಕೆ ಷರತ್ತುಬದ್ಧ ಅನುಮತಿ

    – ಕೇರಳದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ
    – ಷರತ್ತುಗಳೊಂದಿಗೆ ಅನುಮತಿ ನೀಡಿದ ಕೇರಳ
    – ಕೆಂಪು ವಲಯದಲ್ಲಿ ಮೇ 3ರವರೆಗೆ ಲಾಕ್‍ಡೌನ್ ಮುಂದುವರಿಕೆ

    ತಿರುವನಂತಪುರಂ: ಮಹತ್ವದ ನಿರ್ಧಾರವೊಂದರಲ್ಲಿ ಕೇರಳ ಸರ್ಕಾರ ರಾಜ್ಯದಲ್ಲಿ ಹೋಟೆಲ್, ರೆಸ್ಟೋರೆಂಟ್‍ಗಳ ಓಪನ್‍ಗೆ ಅನುಮತಿ ನೀಡುವುದರ ಜೊತೆಗೆ  ಕೆಲ ಜಿಲ್ಲೆಗಳಲ್ಲಿ  ವಾಹನಗಳ ಓಡಾಟಕ್ಕೆ  ಲಾಕ್ಡೌನ್‍ನಿಂದ ವಿನಾಯಿತಿ ನೀಡಿದೆ.

    21 ದಿನಗಳ ಲಾಕ್‍ಡೌನ್ ಬಳಿಕ ವಿನಾಯ್ತಿ ನೀಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕೇರಳ ಪ್ರಸ್ತಾವನೆಯನ್ನು ಸಲ್ಲಿಸಿತ್ತು. ಆ ಪ್ರಸ್ತಾವನೆಯನ್ನು ಶುಕ್ರವಾರ ಪ್ರಧಾನಿ ಮೋದಿ ಸರ್ಕಾರ ಒಪ್ಪಿಕೊಂಡಿದೆ. ಲಾಕ್‍ಡೌನ್‍ನಿಂದ ವಿನಾಯ್ತಿ ನೀಡುವ ಸಲುವಾಗಿ ಕೇರಳದಲ್ಲಿರುವ ಒಟ್ಟು 14 ಜಿಲ್ಲೆಗಳನ್ನು ಕೆಂಪು ವಲಯ, ಹಳದಿ ವಲಯ(ಎ), ಹಳದಿ ವಲಯ(ಬಿ), ಹಸಿರು ವಲಯವಾಗಿ ವಿಂಗಡಿಸಲಾಗಿತ್ತು. ಶನಿವಾರ ಕೇರಳದಲ್ಲಿ ಕೇವಲ ಮೂರು ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿತ್ತು. ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಈಗ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

    ಕೆಂಪು ವಲಯ:
    ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಮಲ್ಲಪುರಂ ಮೇ3 ರವರೆಗೆ ಸಂಪೂರ್ಣ ಲಾಕ್‍ಡೌನ್ ಆಗಿರಲಿದೆ. ಕೊರೊನಾ ಹಾಟ್ ಸ್ಪಾಟ್ ಜಾಗದಲ್ಲಿ ಅಗತ್ಯ ವಸ್ತು ಸಾಗಾಟಕ್ಕೆ ಎರಡು ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ಇರಲಿದೆ. ಇಲ್ಲಿ ಯಾವುದೇ ವಿನಾಯಿತಿ ಇಲ್ಲ. ಇದನ್ನೂ ಓದಿ: ಕೇರಳದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ – ಕೊರೊನಾ ನಿಯಂತ್ರಣವಾಗಿದ್ದು ಹೇಗೆ?

    ಕಿತ್ತಳೆ(ಎ) ವಲಯ:
    ಪತನಂತಿಟ್ಟ, ಎರ್ನಾಕುಲಂ, ಕೊಲ್ಲಂ ಜಿಲ್ಲೆಗಳಲ್ಲಿ ಏಪ್ರಿಲ್ 24ರ ಬಳಿಕ ಲಾಕ್‍ಡೌನ್ ಸಡಿಲಿಕೆ ಆಗಲಿದೆ.

    ಕಿತ್ತಳೆ(ಬಿ) ವಲಯ:
    ಅಲಪ್ಪುಜ, ತ್ರಿಶೂರ್, ಪಾಲಕ್ಕಾಡ್, ತಿರುವನಂತಪುರಂ, ವಯನಾಡಿನಲ್ಲಿ ಏಪ್ರಿಲ್ 20ರ ಬಳಿಕ ಕೆಲವೆಡೆ ವಿನಾಯಿತಿ.

    ಹಸಿರು ವಲಯ:
    ಕೊರೊನಾ ಪ್ರಕರಣಗಳು ಬಾರದೇ ಇರುವ ಕೊಟ್ಟಾಯಂ, ಇಡುಕ್ಕಿಯಲ್ಲಿ ಏಪ್ರಿಲ್ 20ರಿಂದ ವಿನಾಯಿತಿ ಸಿಗಲಿದೆ.

    ವಿನಾಯಿತಿ ಹೇಗಿರಲಿದೆ?
    ಕೆಂಪು ವಲಯ ಹೊರತುಪಡಿಸಿ ಉಳಿದ ಕಡೆಗಳಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ, ಬುಧವಾರ, ಶುಕ್ರವಾರ ಬೆಸ ಸಂಖ್ಯೆಯೊಂದಿಗೆ ಕೊನೆ ಆಗುವ ವಾಹನಗಳು ಸಂಚರಿಸಬಹುದು. ಮಂಗಳವಾರ, ಗುರುವಾರ ಶನಿವಾರ – ಸಮ ಸಂಖ್ಯೆಯೊಂದಿಗೆ ಅಂತ್ಯವಾಗುವ ವಾಹನಗಳ ಓಡಾಟಕ್ಕೆ ಅನುಮತಿ ಸಿಕ್ಕಿದೆ.

    ಬೈಕ್ ಸವಾರರು ತಮ್ಮ ಸಂಬಂಧಿಕರೊಂದಿಗೆ ಡಬಲ್ ರೈಡಿಂಗ್‍ಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    ಶನಿವಾರ ಮತ್ತು ಭಾನುವಾರ ಸಲೂನ್ ಅಂಗಡಿ ತೆರೆಯಬಹುದು. ಸಂಜೆ 7 ಗಂಟೆವರೆಗೆ ಹೋಟೆಲ್-ರೆಸ್ಟೋರೆಂಟ್ ತೆರೆಯಬಹುದು, 8 ಗಂಟೆವೆರೆಗೆ ಪಾರ್ಸೆಲ್‍ಗೆ ಅವಕಾಶ ಸಿಕ್ಕಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೆ ಒಪ್ಪಿಗೆ ಸಿಕ್ಕಿದ್ದು, ಹಸಿರು ವಲಯದಲ್ಲಿ ಬಟ್ಟೆ ಅಂಗಡಿ ತೆರೆಯಬಹುದು. ವಾರದಲ್ಲಿ ಎರಡು ದಿನ ಮೊಬೈಲ್, ಆಟೋ ವರ್ಕ್‍ಶಾಪ್, ಕಂಪ್ಯೂಟರ್ ಸೆಂಟರ್, ಬುಕ್‍ಸ್ಟೋರ್  ಗಳನ್ನು ತೆರೆಯಲು ಅನುಮತಿ ಸಿಕ್ಕಿದೆ.

    ಶನಿವಾರ ಮತ್ತು ಭಾನುವಾರ ಹೊರತು ಪಡಿಸಿದ ವಾರದ ಎಲ್ಲ ದಿನ ಸರ್ಕಾರಿ ಕಚೇರಿಗಳು ತೆರೆದಿರುತ್ತದೆ. ಸಹಕಾರ ಸಂಸ್ಥೆಗಳಲ್ಲಿ ಶೇ.33 ರಷ್ಟು ಉದ್ಯೋಗಿಗಳು, ಗ್ರಾಮೀಣ ಪಂಚಾಯತ್ ನಲ್ಲಿ ಶೇ. 35ರಷ್ಟು ಉದ್ಯೋಗಿಗಳು ಕರ್ತವ್ಯ ನಿರ್ವಹಿಸಲು ಅನುಮತಿ. ಇದನ್ನೂ ಓದಿ: ಕೇರಳ ಆಸ್ಪತ್ರೆಯಿಂದ ಓಡಿ ಹೋಗಿದ್ದ ಅಮೆರಿಕ ದಂಪತಿ ಕೊನೆಗೂ ಪತ್ತೆ ಹಚ್ಚಿದ ಪೊಲೀಸರು

    ನಿರ್ಬಂಧ ಮುಂದುವರಿಕೆ:
    ಹಸಿರು ವಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದು, ಶಿಕ್ಷಣ, ಧಾರ್ಮಿಕ ಸ್ಥಳ ತೆರೆಯುವಂತಿಲ್ಲ. ಜಿಲ್ಲೆಯಿಂದ ಯಾರೂ ಹೊರಗಡೆ ತೆರಳುವಂತಿಲ್ಲ. ಕೇಂದ್ರ ಗೃಹ ಇಲಾಖೆಯ ಮಾರ್ಗಸೂಚಿಯಂತೆ ಮದುವೆ ಮತ್ತು ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿ 20ಕ್ಕಿಂತ ಹೆಚ್ಚು ಜನ ಪಾಲ್ಗೊಳ್ಳುವಂತಿಲ್ಲ.

    ಎಷ್ಟು ಪ್ರಕರಣವಿದೆ?
    ದೇಶದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾದ ಕೇರಳದಲ್ಲಿ 399 ಮಂದಿಗೆ ಸೋಂಕು ಬಂದಿದ್ದು, 257 ಮಂದಿ ಗುಣಮುಖರಾಗಿದ್ದಾರೆ. ಈಗ 140 ಸಕ್ರೀಯ ಪ್ರಕರಣವಿದ್ದು, ಕೇವಲ 2 ಮಂದಿ ಮಾತ್ರ ಮೃತಪಟ್ಟಿದ್ದಾರೆ.

  • ಕೊರೊನಾ ಹೋರಾಟಕ್ಕೆ ಪ್ಲಾಸ್ಮಾ ಥೆರಪಿ ಅಸ್ತ್ರ – ಐಸಿಎಂಆರ್ ಅನುಮತಿ, ಶೀಘ್ರದಲ್ಲಿ ಆರಂಭ

    ಕೊರೊನಾ ಹೋರಾಟಕ್ಕೆ ಪ್ಲಾಸ್ಮಾ ಥೆರಪಿ ಅಸ್ತ್ರ – ಐಸಿಎಂಆರ್ ಅನುಮತಿ, ಶೀಘ್ರದಲ್ಲಿ ಆರಂಭ

    ನವದೆಹಲಿ: ಭಾರತದಲ್ಲಿ ಪ್ಲಾಸ್ಮಾ ಥೆರಪಿ ಆರಂಭಿಸಲು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು(ಐಸಿಎಂಆರ್) ಅನುಮತಿ ನೀಡಿದ್ದು ಕೇರಳದಲ್ಲಿ ಮೊದಲು ಪ್ರಾಯೋಗಿಕವಾಗಿ ಆರಂಭಿಸಲಿದ್ದು ದೇಶದ್ಯಾಂತ ಎಲ್ಲ ಕೊರೊನಾ ಆಸ್ಪತ್ರೆಗಳಲ್ಲಿ ಶೀಘ್ರದಲ್ಲಿ ಆರಂಭವಾಗುವ ಸಾಧ್ಯತೆ ಇದೆ.

    ಕೊರನಾಗೆ ಲಸಿಕೆ ಇಲ್ಲದ ಹಿನ್ನೆಲೆ ಚೀನಾ ಅಮೆರಿಕಾ ಬ್ರಿಟನ್ ದೇಶಗಳಲ್ಲಿ ಕೊರೊನಾ ಚಿಕಿತ್ಸೆಗೆ ಪ್ಲಾಸ್ಮಾ ಥೆರಪಿ ಮಾಡಲಾಗಿತ್ತು. ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಥೆರಪಿ ಸಹಾಯಕವಾಗುವುದು ಸಾಬೀತಾದ ಮೇಲೆ ದೇಶದಲ್ಲೂ ಆರಂಭಿಸಲು ಒತ್ತಡ ಕೇಳಿ ಬಂದಿತ್ತು. ಈ ಬಗ್ಗೆ ಪರಿಶೀಲನೆ ನಡೆಸಿರುವ ಐಸಿಎಂಆರ್ ಈಗ ಅನುಮತಿ ನೀಡಿದೆ.

    ಕೊರೊನಾದಿಂದ ಚೇತರಿಸಿಕೊಂಡ ವ್ಯಕ್ತಿಯ ರಕ್ತದಲ್ಲಿ ಆ್ಯಂಟಿಬಾಡಿಗಳು ಇರುತ್ತವೆ. ಅವು ರೋಗ ನಿರೋಧಕ ಶಕ್ತಿ ಹೊಂದಿರುತ್ತವೆ. ಆ ಪ್ಲಾಸ್ಮಾವನ್ನು ತೆಗೆದು ಸೋಂಕಿತ ಅಥವಾ ಸೋಂಕು ಶಂಕೆ ಹೊಂದಿರುವ ವ್ಯಕ್ತಿಗೆ ನೀಡುವುದನ್ನೇ ಪ್ಲಾಸ್ಮಾ ಥೆರಪಿ ಎನ್ನಲಾಗುತ್ತದೆ. ಪ್ಲಾಸ್ಮಾ ಥೆರಪಿಗೆ ಒಳಗಾದ ವ್ಯಕ್ತಿಗಳು ಬೇಗನೆ ಕೊರೊನಾದಿಂದ ಗುಣಮುಖರಾಗುವುದು ವಿದೇಶಗಳಲ್ಲಿ ಸಾಬೀತಾಗಿದೆ.

    ಸೋಂಕು ಮುಕ್ತವಾದ ವ್ಯಕ್ತಿ ಚೇತರಿಸಿಕೊಂಡ 28 ದಿನಗಳ ಬಳಿಕ ಪ್ಲಾಸ್ಮಾವನ್ನು ದಾನ ಮಾಡಬಹುದು, ಮೊದಲ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, 2ನೇ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ಕೂಡಾ ದಾನ ಮಾಡಬಹುದಾಗಿದ್ದು ದಾನಿಯೊಬ್ಬನ ಪ್ಲಾಸ್ಮಾವನ್ನು ಅದೇ ರಕ್ತದ ಗುಂಪಿನ ರೋಗಿಗಳಿಗೆ ಮಾತ್ರ ನೀಡಬಹುದು ಎಂದು ತಜ್ಞರು ಹೇಳಿದ್ದಾರೆ.

    ಏನಿದು ಪ್ಲಾಸ್ಮಾ ಥೆರಪಿ?
    ಕೊರೊನಾದಿಂದ ಗುಣಮುಖರಾದ ವ್ಯಕ್ತಿಯಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ. ಅವರ ರಕ್ತ ಕಣಗಳನ್ನು ಬೇರ್ಪಡಿಸಿ ಸೋಂಕಿತರ ಚಿಕಿತ್ಸೆಗೆ ಬಳಸಲಾಗುತ್ತದೆ. ಕೊರೊನಾ ವೈರಸ್ಸಿನೊಂದಿಗೆ ಹೋರಾಡಿದ ಪರಿಣಾಮ ಈ ರಕ್ತಕ್ಕೆ ವೈರಸ್ ಗಳನ್ನು ತಡೆಯುವ ಶಕ್ತಿ ಇರುತ್ತದೆ. ಹೀಗಾಗಿ ಪ್ಲಾಸ್ಮಾ ಥೆರಪಿ ನೀಡಿದರೆ ಉತ್ತಮ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

    ಪ್ರಯೋಗ ನಡೆದಿದೆಯೇ?
    ಚೀನಾದಲ್ಲೂ ಕೂಡ ಕೊರೊನಾ ನಿಯಂತ್ರಣಕ್ಕೆ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ಪ್ಲಾಸ್ಮಾವನ್ನೇ ಬಳಸಲಾಗಿದೆ. ಚೀನಾದ 2 ವೈದ್ಯರ ತಂಡ 2 ಪ್ರತ್ಯೇಕ ಆಸ್ಪತ್ರೆಗಳಲ್ಲಿ 15 ಮಂದಿ ಸೋಂಕಿತರಿಗೆ ಮೊದಲು ಈ ಪರೀಕ್ಷೆ ನಡೆಸಿ ಅವರಲ್ಲಿ ಸುಧಾರಣೆ ಕಂಡದ್ದನ್ನು ದಾಖಲಿಸಿವೆ.

    ಒಬ್ಬನಿಂದ ಎಷ್ಟು ಮಂದಿಗೆ ನೀಡಬಹುದು?
    ಒಬ್ಬನಿಂದ ಇಷ್ಟೇ ಮಂದಿಗೆ ನೀಡಬಹುದು ಎಂದು ಹೇಳಲು ಸಾಧ್ಯವಿಲ್ಲ. ಎಷ್ಟು ಪ್ರಮಾಣದಲ್ಲಿ ಪ್ಲಾಸ್ಮಾ ಸಿಗುತ್ತದೆ ಎಂಬುದರ ಮೇಲೆ ಎಷ್ಟು ಮಂದಿಗೆ ನೀಡಬಹುದು ಎನ್ನುವ ಲೆಕ್ಕಾಚಾರವನ್ನು ಹಾಕಲಾಗುತ್ತದೆ. ಒಬ್ಬನಿಂದ ಕನಿಷ್ಟ ಇಬ್ಬರು ಗರಿಷ್ಟ 5 ಮಂದಿಗೆ ಪ್ಲಾಸ್ಮಾ ನೀಡಬಹುದು. ಒಬ್ಬ ರೋಗಿಯನ್ನು ಗುಣಪಡಿಸಲು ಅಂದಾಜು 200-250 ಎಂಎಲ್ ಪ್ಲಾಸ್ಮಾ ಬೇಕಾಗುತ್ತದೆ.

    ಎಷ್ಟು ದಿನಗಳ ನಂತರ ಪ್ಲಾಸ್ಮಾ ಸಂಗ್ರಹಿಸಬಹುದು?
    ಇದು ಬಹಳ ಕಠಿಣ ಪ್ರಶ್ನೆ. ಕೊರೊನಾ ವಾಸಿಯಾದ ನಂತರವು ಸೋಂಕು ಬಂದಿದೆ ಎನ್ನುವ ವರದಿಗಳು ಚೀನಾದಲ್ಲಿ ದಾಖಲಾಗಿದೆ. ಹೀಗಾಗಿ ರೋಗಿ ಸಂಪೂರ್ಣವಾಗಿ ಗುಣವಾದ 28 ದಿನಗಳ ನಂತರ ಪ್ಲಾಸ್ಮಾವನ್ನು ಸಂಗ್ರಹಿಸಬಹುದು ಎನ್ನುವ ಲೆಕ್ಕಾಚಾರಕ್ಕೆ ಬರಲಾಗಿದೆ.

    ಯಾರಿಗೆ ನೀಡಬಹುದು?
    ಕೊರೊನಾ ಪೀಡಿತ ಎಲ್ಲರಿಗೆ ಈ ಥೆರಪಿಯ ಅಗತ್ಯವಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಗಳು ಉತ್ತಮ ಆಹಾರ, ಔಷಧಿ, ತಮ್ಮಲ್ಲಿನ ದೃಢ ವಿಶ್ವಾಸದಿಂದಲೇ ಗುಣಮುಖರಾಗುತ್ತಾರೆ. ಆದರೆ ಗಂಭೀರವಾಗಿರುವ ರೋಗಿಗಳಿಗೆ ನೀಡಲು ಯಾವುದೇ ಔಷಧ ಇಲ್ಲದ ಕಾರಣ ಈ ಥೆರಪಿ ಮಾಡಬಹುದು. ಈ ಥೆರಪಿ ಮೂಲಕ ರೋಗಿಯನ್ನು 5-7 ದಿನಗಳಲ್ಲಿ ಗುಣಪಡಿಸಬಹುದು ಎನ್ನುವ ಅಭಿಪ್ರಾಯಕ್ಕೆ ಬರಲಾಗಿದೆ.

  • ವಿಡಿಯೋ: ರಸ್ತೆ ಮಧ್ಯೆಯೇ ಆಟೋ ತಡೆದ ಪೊಲೀಸ್ರು- ತಂದೆಯನ್ನು ಎತ್ತಿಕೊಂಡೇ ನಡೆದ ಮಗ

    ವಿಡಿಯೋ: ರಸ್ತೆ ಮಧ್ಯೆಯೇ ಆಟೋ ತಡೆದ ಪೊಲೀಸ್ರು- ತಂದೆಯನ್ನು ಎತ್ತಿಕೊಂಡೇ ನಡೆದ ಮಗ

    ತಿರುವನಂತಪುರಂ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾಡಲಾಗಿದ್ದ ಲಾಕ್ ಡೌನ್ ಅನ್ನು ಮೇ.3ರವರೆಗೆ ವಿಸ್ತರಿಸಲಾಗಿದೆ. ಈ ಮಧ್ಯೆ ಕೆಲವೊಂದು ಮನಕಲಕುವ ಘಟನೆಗಳು ನಡೆದಿವೆ. ಇದಕ್ಕೆ ಕೇರಳದಲ್ಲಿ ನಡೆದ ಒಂದು ಘಟನೆಯೇ ಸಾಕ್ಷಿ.

    ಹೌದು. ಆಸ್ಪತ್ರೆಯಿಂಂದ ಡಿಸ್ಚಾರ್ಜ್ ಆದ ವ್ಯಕ್ತಿ ಮನೆಗೆ ವಾಪಸ್ ಹೋಗುತ್ತಿದ್ದಾಗ ಪೊಲೀಸರು ಆಟೋ ತಡೆದಿದ್ದಾರೆ. ಇದರಿಂದಾಗಿ ತಂದೆಯನ್ನು ಮಗನೇ ಎತ್ತಿಕೊಂಡು ಹೋಗಿ ಮನೆ ತಲುಪಿದ ಘಟನೆಯೊಂದು ಬೆಳಕಿಗೆ ಬಂದಿದೆ.

    ಕೊಲ್ಲಂ ಸಮೀಪದ 65 ವರ್ಷದ ವೃದ್ಧ ಅನಾರೋಗ್ಯದಿಂದಾಗಿ ಪುನಕಲುರ್ ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಬುಧವಾರ ಡಿಸ್ಚಾರ್ಜ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಮಗ ತನ್ನ ವೃದ್ಧ ತಂದೆಯನ್ನು ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ದಾರಿ ಮಧ್ಯೆ ಪೊಲೀಸರು ತಡೆದಿದ್ದಾರೆ. ಆಗ ಡಿಸ್ಚಾರ್ಜ್ ಆದ ಕುರಿತು ಆಸ್ಪತ್ರೆಯ ದಾಖಲೆಗಳನ್ನು ವೃದ್ಧನ ಮಗ ತೋರಿಸದರೂ ಪೊಲೀಸರು ಮುಂದೆ ಹೋಗಲು ಬಿಡಲಿಲ್ಲ. ಇದನ್ನೂ ಓದಿ: ವಿಡಿಯೋ: ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಹಂಚಿಕೊಂಡ ಶ್ವಾನ, ಮಾನವ

    ಅಲ್ಲದೆ ಆಟೋದೊಳಗಿದ್ದ ಕುಟುಂಬವನ್ನು ಪೊಲೀಸರು ಇಳಿಯುವಂತೆ ಹೇಳಿದರು. ಹೀಗಾಗಿ ಮುಂದೆ ಹೋಗಲು ಪೊಲೀಸರು ಬಿಡದಿದ್ದರಿಂದ 1 ಕಿ.ಮೀ ನಡೆದುಕೊಂಡು ಹೋಗುವುದೇ ಅನಿವಾರ್ಯ ಎದುರಾಯಿತು. ಒಟ್ಟಿನಲ್ಲಿ ಪೊಲೀಸರ ವರ್ತನೆಯಿಂದ ಬೇಸರಗೊಂಡು ವ್ಯಕ್ತಿ ತನ್ನ ತಂದೆಯನ್ನು ಎತ್ತಿಕೊಂಡೇ ಮುಂದೆ ಸಾಗಿದರು. ಇದನ್ನೂ ಓದಿ: “ಅನ್ನ ಬಿಟ್ರೆ ಏನಿಲ್ಲ, ಎದೆಯಲ್ಲಿ ಹಾಲು ಬರ್ತಿಲ್ಲ- 8 ದಿನದ ಮಗುವಿಗೆ ಏನು ನೀಡಲಿ”

    ವೃದ್ಧನನ್ನು ಎತ್ತಿಕೊಂಡು ರಸ್ತೆಯಲ್ಲೇ ಹೋಗುತ್ತಿರುವುದನ್ನು ಅಲ್ಲೇ ಇದ್ದ ಕೆಲವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗವು ಸ್ವಯಂಪ್ರೇರಿತ ಕೇಸ್ ದಾಖಲಿಸಿದೆ.

    ಬುಧವಾರದವರೆಗೆ ಕೇರಳದಲ್ಲಿ 388 ಮಂದಿಯಲ್ಲಿ ಕೊರೊನಾ ಪ್ರಕರಣ ಪತ್ತೆಯಾಗಿದ್ದು, 218 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿರುತ್ತಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ಕೇರಳದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ – ಕೊರೊನಾ ನಿಯಂತ್ರಣವಾಗಿದ್ದು ಹೇಗೆ?

  • ಗಡಿ ಮೀರಿದ ಪ್ರೀತಿ – 25 ದಿನಗಳ ಬಳಿಕ ಹೆತ್ತವರನ್ನು ಸೇರಿದ 3ರ ಕಂದಮ್ಮ

    ಗಡಿ ಮೀರಿದ ಪ್ರೀತಿ – 25 ದಿನಗಳ ಬಳಿಕ ಹೆತ್ತವರನ್ನು ಸೇರಿದ 3ರ ಕಂದಮ್ಮ

    – ಮಗು ಹೆತ್ತವರನ್ನು ಸೇರಲು ಸಹಾಯ ಮಾಡಿದ ಪಬ್ಲಿಕ್ ಟಿವಿ

    ಮಡಿಕೇರಿ: ಜಗತ್ತನ್ನೇ ತಲ್ಲಣಗೊಳಿಸುತ್ತಿರುವ ಕೊರೊನಾ ಮಹಾಮಾರಿ ಲಕ್ಷಾಂತರ ಜನರ ಪ್ರಾಣಕ್ಕೆ ಕುತ್ತು ತಂದಿರುವುದಷ್ಟೇ ಅಲ್ಲ, ಹೆತ್ತವರಿಂದ ಮುದ್ದು ಕಂದಮ್ಮಗಳ ಪ್ರೀತಿಯನ್ನು ದೂರ ಮಾಡಿದೆ. ಅದಕ್ಕೆ ಇಂದು ಕೇರಳ, ಕರ್ನಾಟಕದ ಗಡಿಯಲ್ಲಿ ನಡೆದ ಮನಕಲಕುವ ದೃಶ್ಯವೇ ಸಾಕ್ಷಿಯಾಗಿದೆ.

    ಹೌದು. ಕೇರಳದ ಇರಿಟ್ಟಿಯ ನಿವಾಸಿ ರಾಜೇಶ್ ಅವರ ಮೂರು ವರ್ಷದ ಮಗ ಆದಿಕೇಶ್ ರಾಜ್ ಕೊಡಗಿನ ಮಡಿಕೇರಿಯಲ್ಲಿ ತನ್ನ ಅಜ್ಜಿ ಮನೆಗೆ ಕಳೆದ 25 ದಿನಗಳ ಹಿಂದೆ ಬಂದಿದ್ದ. ಮಗು ಅಜ್ಜಿ ಮನೆಗೆ ಬಂದ ಎರಡೇ ದಿನಕ್ಕೆ ಕೊರೊನಾ ಮಹಾಮಾರಿ ಭೀತಿಗೆ ಇಡೀ ದೇಶದಲ್ಲೇ ಲಾಕ್‍ಡೌನ್ ಜಾರಿಯಾಯಿತು. ಜೊತೆಗೆ ಕೊಡಗಿನಿಂದ ಕೇರಳದ ಇರಿಟ್ಟಿಗೆ ಸಂಪರ್ಕ ಕಲ್ಪಿಸುವ ಅಂತರ್ ರಾಜ್ಯ ಹೆದ್ದಾರಿಯನ್ನು ಗಡಿಭಾಗ ಮಾಕುಟ್ಟದಲ್ಲಿ ಸಂಪೂರ್ಣ ಬಂದ್ ಮಾಡಲಾಗಿತ್ತು. ಹೀಗಾಗಿ ಆದಿಕೇಶ್ ಮಡಿಕೇರಿಯಲ್ಲೇ ಉಳಿಯಬೇಕಾಗಿತ್ತು.

    ಹೀಗೆ ಕೊರೊನಾ ಭೀತಿಗೆ ರಾಜ್ಯ ರಾಜ್ಯಗಳ ನಡುವಿನ ಗಡಿಯೇ ಬಂದ್ ಆಗಿದ್ದರಿಂದ ಆದಿಕೇಶ್ ಬರೋಬ್ಬರಿ 25 ದಿನಗಳ ಕಾಲ ತಂದೆ ತಾಯಿಯಿಂದ ದೂರವಾಗಿ, ಹಗಲು ರಾತ್ರಿ ಹೆತ್ತವರನ್ನು ನೆನೆದು ಅಳುತ್ತಾ ಅಜ್ಜಿ ಮನೆಯಲ್ಲಿ ಕಾಲ ಕಳೆಯಬೇಕಾಗಿತ್ತು.

    ದಿನಗಳು ಕಳೆದಂತೆ ಊಟ ತಿಂಡಿಯನ್ನು ತಿನ್ನುವುದನ್ನು ಮಗು ನಿಲ್ಲಿಸಿದ್ದನು. ಮಗುವನ್ನು ತಂದೆ ತಾಯಿಯ ಬಳಿಗೆ ಸೇರಿಸದೆ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿ ಹೇಗೋ ಪರದಾಡಿ ಮಡಿಕೇರಿಯಿಂದ 55 ಕಿ.ಮೀ ದೂರದಲ್ಲಿ ಕೇರಳ-ಕರ್ನಾಟಕ ಗಡಿ ಬಂದ್ ಮಾಡಿರುವ ಜಾಗಕ್ಕೆ ಆದಿಕೇಶ್‍ನನ್ನು ಪಬ್ಲಿಕ್ ಟಿವಿ ಸಹಯೋಗದಲ್ಲಿ ಸಂಬಂಧಿ ಕರೆದೊಯ್ದರು. ಅತ್ತ ತನ್ನ ಮಗ ತಮ್ಮನ್ನು ನೆನೆದು ಅಳುತ್ತಿರುವ ವಿಷಯ ತಿಳಿದ ತಂದೆ ರಾಜೇಶ್ ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿಯಿಂದ 13 ಕಿಲೋ ಮೀಟರ್ ದೂರದಲ್ಲಿ ಗಡಿ ಬಂದ್ ಆಗಿರುವ ಕರ್ನಾಟಕದ ಮಾಕುಟ್ಟ ಗಡಿಗೆ ನಡೆದೇ ಬಂದಿದ್ದರು.

    ಕೊನೆಗೆ ಮಾಕುಟ್ಟದಲ್ಲಿ ತಂದೆಯನ್ನು ನೋಡಿದ್ದೇ ತಡ ಆದಿಕೇಶ್ ಆನಂದಕ್ಕೆ ಪಾರವೇ ಇರಲಿಲ್ಲ. ತಂದೆಯ ತೋಳಿಗೆ ಹೋಗಿ ಕೊರಳನ್ನು ಬಿಗಿದಪ್ಪಿಕೊಂಡು ಖುಷಿಪಟ್ಟ. ತನ್ನ ತಂದೆಗೆ ತನ್ನನ್ನು ಸೇರಿಸಿದ ಮಾವನ ಗಡ್ಡವನ್ನು ಎಳೆದಾಡಿ ಮುತ್ತುಕೊಟ್ಟು ಮುದ್ದಾಡಿದ. ಮಗು ತಂದೆಯನ್ನು ಸೇರಿದ ಆ ಕ್ಷಣ, ತಂದೆ ಮತ್ತು ಮಗುವಿನ ಖುಷಿ, ಕೊರೊನಾದಿಂದ ರಾಜ್ಯದ ಗಡಿಗೆ ಆಳೆತ್ತರದ ಮಣ್ಣು ಸುರಿದಿದ್ದರೂ ಆ ಕರುಳ ಬಳ್ಳಿ ಸಂಬಂಧ ಮಾತ್ರ ಎಲ್ಲಾ ಅಡೆತಡೆಗಳನ್ನು ಮೀರಿ ಒಂದಾದ ಆ ಕ್ಷಣ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ. ಕೊರೊನಾ ಎಫೆಕ್ಟ್ ನಡುವೆಯೂ ಪೋಷಕರ ಬಳಿ ಮಗುವನ್ನು ಸೇರಿಸಿದ ಕಾರ್ಯಕ್ಕೆ ಕೇರಳದ ಪೋಲಿಸರು ಮೆಚ್ಚುಗೆ ವ್ಯಕ್ತಪಡಿಸಿದರು.

  • ಕೇರಳದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ – ಕೊರೊನಾ ನಿಯಂತ್ರಣವಾಗಿದ್ದು ಹೇಗೆ?

    ಕೇರಳದಲ್ಲಿ ಸೋಂಕಿತರ ಸಂಖ್ಯೆ ಇಳಿಕೆ – ಕೊರೊನಾ ನಿಯಂತ್ರಣವಾಗಿದ್ದು ಹೇಗೆ?

    ತಿರುವನಂತಪುರಂ: ಕೊರೊನಾ ವೈರಸ್‍ಗೆ ಇಡೀ ಜಗತ್ತಿನಾದ್ಯಂತ ಹರಡಿದ್ದು, ಜನರು ಭಯಭೀತಾಗಿದ್ದಾರೆ. ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಕೇರಳದಲ್ಲಿ ವೃದ್ಧ ದಂಪತಿ ಕೊರೊನಾ ವೈರಸ್‍ನಿಂದ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದೀಗ ಕೇರಳದಿಂದ ಮತ್ತೊಂದು ಸಿಹಿ ಸುದ್ದಿ ಬಂದಿದೆ.

    ಇಡೀ ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇದರಿಂದ ಕೇರಳ ‘ಕೊರೊನಾ ಹಾಟ್‍ಸ್ಟಾಟ್’ ಎನ್ನಿಸಿಕೊಂಡಿತ್ತು. ಆದರೆ ಈಗ ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

    ಇಷ್ಟು ದಿನ ಕೇರಳದಲ್ಲಿ ಒಂದೇ ದಿನಕ್ಕೆ ಅನೇಕ ಕೊರೊನಾ ಪಾಸಿಟಿವ್ ಕಂಡುಬರುತ್ತಿತ್ತು. ಆದರೆ ಸೋಮವಾರ ಮೂರು ಕೊರೊನಾ ಪ್ರಕರಣ ದಾಖಲಾಗಿವೆ. ಇನ್ನೂ ಭಾನುವಾರ ಕೇವಲ ಎರಡು ಪ್ರಕರಣ ಮಾತ್ರ ದೃಢಪಟ್ಟಿತ್ತು. ಈ ಮೂಲಕ ಕೇರಳದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 378 ಇದೆ. ಇವರಲ್ಲಿ ಈಗಾಗಲೇ 200 ಮಂದಿ ಗುಣಮುಖರಾಗಿದ್ದಾರೆ. ಹೀಗಾಗಿ ಕೇರಳದಲ್ಲಿ ಈಗ ಕೇವಲ 178 ಮಂದಿ ಕೊರೊನಾ ರೋಗಿಗಳಿದ್ದಾರೆ.

    ಪ್ರತಿದಿನ ಕೊರೊನಾ ಪಾಸಿಟಿವ್ ಪ್ರಕರಣಗಳಿಂತ ವೈರಸ್‍ನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕೇರಳದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.

    ಕೊರೊನಾ ನಿಯಂತ್ರಿಸಿದ್ದು ಹೇಗೆ?
    1. ಈ ಹಿಂದೆ ಕೇರಳದಲ್ಲಿ ನಿಫಾ ವೈರಸ್ ಕಂಡು ಬಂದಿತ್ತು. ಇದರಿಂದ ಅನೇಕ ಸಮಸ್ಯೆಗಳನ್ನು ಎದುರಿಸಿತ್ತು. ಹೀಗಾಗಿ ಕೇರಳ ಭಾರತದಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುವ ಮೊದಲೇ ಅಗತ್ಯ ಪೂರ್ವ ಯೋಜನೆಗಳನ್ನು ಕೈಗೊಂಡಿತ್ತು.
    2. ಕೊರೊನಾ ಸೋಂಕಿತರ ಸಂಖ್ಯೆ 100ಕ್ಕೆ ಏರಿಕೆಯಾದ ತಕ್ಷಣ ಸರ್ಕಾರ ಅಪಾಯಕಾರಿ ಪ್ರದೇಶಗಳನ್ನು ಸಂಪೂರ್ಣ ಲಾಕ್‍ಡೌನ್ ಮಾಡಿತ್ತು. ಅಲ್ಲಿಂದ ಇತರಿಗೆ ಸೋಂಕು ತಗುಲದಂತೆ ಕ್ರಮಕೈಗೊಂಡಿತ್ತು.
    3. ಕೊರೊನಾ ವೈರಸ್ ವಿದೇಶದಿಂದ ಬಂದವರಿಂದಲೇ ಹೆಚ್ಚಾಗಿ ಹರಡುತ್ತದೆ ಎನ್ನಲಾಗಿತ್ತು. ಹೀಗಾಗಿ ಎಚ್ಚೆತ್ತ ಕೇರಳ ಸರ್ಕಾರ ವಿಮಾನ ನಿಲ್ದಾಣದಲ್ಲೇ ವಿದೇಶದಿಂದ ಬಂದವರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿತ್ತು. ಅಲ್ಲದೇ 5 ಸಾವಿರ ಐಸೋಲೇಷನ್ ವಾರ್ಡ್ ತೆರೆದಿತ್ತು.

    4. ವಿದೇಶ ಹಾಗೂ ಬೇರೆ ರಾಜ್ಯ ಪ್ರಯಾಣ ಮಾಡಿದ್ದವರ ಮಾಹಿತಿಯನ್ನು ಕೊಡದೆ ಮುಚ್ಚಿಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
    5. ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿತ್ತು. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸರ್ಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಿತು.
    6. ಆ್ಯಪ್ ಮೂಲಕ ಕೊರೊನಾ ವೈರಸ್ ಬಗ್ಗೆ ಜನರಿಗೆ ಮಾಹಿತಿ ನೀಡಿತ್ತು.

  • ಲಾಕ್‍ಡೌನ್ ಮಧ್ಯೆಯೂ ಪ್ರೇಮಿಗಳು ಎಸ್ಕೇಪ್ – ಒಟ್ಟಿಗಿರಲು ನ್ಯಾಯಾಲಯ ಅವಕಾಶ

    ಲಾಕ್‍ಡೌನ್ ಮಧ್ಯೆಯೂ ಪ್ರೇಮಿಗಳು ಎಸ್ಕೇಪ್ – ಒಟ್ಟಿಗಿರಲು ನ್ಯಾಯಾಲಯ ಅವಕಾಶ

    – ನಿಯಮ ಉಲ್ಲಂಘಿಸಿದ್ದಕ್ಕೆ ಪ್ರೇಮಿಗಳ ವಿರುದ್ಧ ಪ್ರಕರಣ ದಾಖಲು

    ತಿರುವನಂತಪುರ: ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಆದರೆ ಈ ಲಾಕ್‍ಡೌನ್ ನಡುವೆಯೂ ಪ್ರೇಮಿಗಳು ಓಡಿ ಹೋಗಿರುವ ಘಟನೆ ಕೇರಳದ ಕೊಜಿಕೊಡ್‍ನಲ್ಲಿ ನಡೆದಿದೆ.

    21 ವರ್ಷದ ಹುಡುಗಿ ತನ್ನ 23 ವರ್ಷದ ಪ್ರೇಮಿಯೊಂದಿಗೆ ಓಡಿಹೋಗಿದ್ದಾಳೆ. ಪ್ರೇಮಿಗಳಿಬ್ಬರು ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರ ಜಾತಿ ಬೇರೆಯಾಗಿರುವುದರಿಂದ ಹುಡುಗಿಯ ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಪ್ರೇಮಿಗಳಿಬ್ಬರು ಲಾಕ್‍ಡೌನ್ ನಡುವೆಯೂ ಶನಿವಾರ ರಾತ್ರಿ ಓಡಿ ಹೋಗಿದ್ದಾರೆ.

    ಇತ್ತ ಹುಡುಗಿಯ ತಂದೆ ಮಗಳು ನಾಪತ್ತೆಯಾದ ದೂರು ದಾಖಲಿಸಿದ್ದರು. ಪೊಲೀಸರು ಇಬ್ಬರನ್ನು ಪತ್ತೆ ಮಾಡಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ಇಬ್ಬರು ಮೇಜರ್ ಆಗಿದ್ದರಿಂದ ಪ್ರೇಮಿಗಳಿಗೆ ಹೋಗಲು ಅವಕಾಶ ನೀಡಲಾಗಿದೆ. ಅಲ್ಲದೇ ಹುಡಗಿ ತನ್ನ ಸ್ವಂತ ಇಚ್ಚೆಯಂತೆ ತನ್ನ ಗೆಳೆಯನೊಂದಿಗೆ ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ನ್ಯಾಯಾಲಯದ ಆದೇಶದ ಮೇರೆಗೆ ಪ್ರೇಮಿಗಳು ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೋವಿಡ್ -19 ತಡೆಯುವ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದೆ. ಕೇರಳದಲ್ಲಿ ಲಾಕ್‍ಡೌನ್ ನಿಯಮ ಕಠಿಣವಾಗಿದ್ದು, ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘಿಸಬಾರದು ಎಂದು ಆದೇಶಿಸಲಾಗಿದೆ. ಆದರೆ ಈ ಪ್ರೇಮಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಟ್ಟಿಗೆ ಓಡಿಹೋಗುವ ಮೂಲಕ ಲಾಕ್‍ಡೌನ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಇಬ್ಬರ ಪ್ರೇಮಿಗಳ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನಾಲ್ವರ ಸಮ್ಮುಖದಲ್ಲಿ ಸರಳ ಮದ್ವೆ

    ನಾಲ್ವರ ಸಮ್ಮುಖದಲ್ಲಿ ಸರಳ ಮದ್ವೆ

    ಮಡಿಕೇರಿ: ವಿಶ್ವವನ್ನೇ ತಲ್ಲಣಗೊಳಿಸುವಂತೆ ಮಾಡಿರುವ ಕೊರೊನಾ ಮಹಾಮಾರಿ ಮದುವೆ ಸಮಾರಂಭಗಳನ್ನು ಬಿಟ್ಟಿಲ್ಲ. ಎಲ್ಲೆಡೆ ಸೆಕ್ಷನ್ 144 ಜಾರಿ ಮಾಡಿರುವುದರಿಂದ 5 ಜನರಗಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ. ಹೀಗಾಗಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಕೇವಲ ನಾಲ್ಕು ಜನರ ಸಮ್ಮುಖದಲ್ಲಿ ಮದುವೆ ನಡೆದಿದೆ.

    ತೋರಾ ಗ್ರಾಮದ ಪ್ರಭು ಎಂಬವರು ಕೇರಳ ಮೂಲದ ವಿಧವೆಯೊಬ್ಬರೊಂದಿಗೆ ವಿರಾಜಪೇಟೆಯಲ್ಲಿ ಮದುವೆಯಾಗಿದ್ದಾರೆ. ಕೊರೊನಾ ಹರಡುವ ಆತಂಕದ ಹಿನ್ನೆಲೆಯಲ್ಲಿ ನಾಲ್ಕು ಜನರ ಸಮ್ಮುಖದಲ್ಲಿ ಸರಳವಾಗಿ ಈ ಜೋಡಿಯ ಮದುವೆ ನೆರವೇರಿದೆ.


    ವರ ಪ್ರಭು ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ತೋರಾ ಗ್ರಾಮದಲ್ಲಿ ಸಂಭವಿಸಿದ್ದ ಭಾರೀ ಭೂ-ಕುಸಿತದಲ್ಲಿ ತಮ್ಮ ಇಡೀ ಕುಟುಂಬವನ್ನು ಕಳೆದುಕೊಂಡಿದ್ದರು. ಹೆಂಡತಿ, ಇಬ್ಬರು ಮಕ್ಕಳು ಹಾಗೂ ತಾಯಿಯನ್ನು ಕಳೆದುಕೊಂಡಿದ್ದರು. ಹಲವು ದಿನಗಳ ಹುಡುಕಾಟದ ಬಳಿಕ ಹೆಂಡತಿಯ ಶವ ಮಾತ್ರ ದೊರೆತಿತ್ತು. ಆದರೆ ಇಬ್ಬರು ಮಕ್ಕಳು ಹಾಗೂ ತಾಯಿ ಮೃತದೇಹಗಳು ಮಾತ್ರ ಸಿಗಲೇ ಇಲ್ಲ. ಕೊನೆಗೆ ಒಂದು ವರ್ಷದ ಬಳಿಕ ಪ್ರಭು ಕೇರಳ ಮಹಿಳೆಯೊಬ್ಬರನ್ನು ಮದುವೆಯಾಗಿದ್ದಾರೆ.

  • ಕೇರಳದಿಂದ ಮಂಗ್ಳೂರಿಗೆ ಕಾಲ್ನಡಿಗೆಯಲ್ಲಿ ಬಂದ ಗರ್ಭಿಣಿ

    ಕೇರಳದಿಂದ ಮಂಗ್ಳೂರಿಗೆ ಕಾಲ್ನಡಿಗೆಯಲ್ಲಿ ಬಂದ ಗರ್ಭಿಣಿ

    ಮಂಗಳೂರು: ಕೇರಳದಿಂದ ಮಂಗಳೂರಿಗೆ ಗರ್ಭಿಣಿ ಕಾಲ್ನಡಿಗೆಯಲ್ಲಿ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾಡಳಿತದ ನೆರವಿನಿಂದ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕೇರಳದ ಕಣ್ಣೂರಿನಲ್ಲಿ ವಿಜಯಪುರ ಮೂಲದ ಎಂಟು ಜನರು ಕೆಲಸ ಮಾಡಿಕೊಂಡಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಹೋಗಲು ಈ ಎಂಟು ಕಾರ್ಮಿಕರು ನಿರ್ಧರಿದ್ದರು. ವಾಹನಗಳ ಸೌಲಭ್ಯ ಸಿಗದಿದ್ದಕ್ಕೆ ಕಾಲ್ನಡಿಗೆಯಲ್ಲಿ ತೆರಳಲು ನಿರ್ಧರಿಸಿದ್ದರು.

    ಏಳು ದಿನಗಳ ಹಿಂದೆ ಕಣ್ಣೂರಿನಿಂದ ನಡೆಯಲಾರಂಭಿಸಿದ್ದ ಎಂಟು ಜನ ಇಂದು ಮಂಗಳೂರು ತಲುಪಿದ್ದಾರೆ. ಗರ್ಭಿಣಿ ಸುಸ್ತಾಗಿದ್ದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ನೆರವಿನಿಂದ ಗರ್ಭಿಣಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    ಶುಭ ಸುದ್ದಿ, ಕೊರೊನಾ ಗೆದ್ದ ವೃದ್ಧ ದಂಪತಿ ಡಿಸ್ಚಾರ್ಜ್- ಆಹಾರ ಏನಿತ್ತು?

    – ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ರೂ ಗುಣಮುಖ

    ಕೇರಳ: ಮಹಾಮಾರಿ ಕೊರೊನಾ ಎಂದರೆ ಸಾಕು ಜನರು ಭಯಭೀತರಾಗುತ್ತಾರೆ. ಅದರಲ್ಲೂ ಈ ವೈರಸ್ 60 ವರ್ಷ ಮೇಲ್ಪಟ್ಟವರಿಗೆ ಬಂದರೆ ಗುಣಮುಖರಾಗುವುದು ಕಷ್ಟ ಎಂಬ ಆತಂಕವಿದೆ. ಇದೇ ವೇಳೆ ಕೇರಳದಿಂದ ಶುಭ ಸುದ್ದಿ ಸಿಕ್ಕಿದ್ದು, ವೃದ್ಧ ದಂಪತಿ ಮಹಾಮಾರಿ ಕೋವಿಡ್-19 ವೈರಸ್‍ನಿಂದ ಗೆದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಥಾಮಸ್ (93) ಮತ್ತು ಅವರ ಪತ್ನಿ ಮರಿಯಮ್ಮ (88) ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ದಂಪತಿ ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇದೀಗ ಈ ದಂಪತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕೇರಳದ ಕೊಟ್ಟಾಯಂನಲ್ಲಿರುವ ತಮ್ಮ ಮನೆಗೆ ತೆರಳಿದ್ದಾರೆ.

    ಥಾಮಸ್ ಕೋವಿಡ್-19 ವೈರಸ್‍ನಿಂದ ಪಾರಾದ ಭಾರತದ ಅತ್ಯಂತ ವೃದ್ಧರಾಗಿದ್ದಾರೆ. ಇತ್ತೀಚಿಗೆ ನಡೆಸಿದ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಹೀಗಾಗಿ ಥಾಮಸ್ ಅವರನ್ನು ಪತ್ನಿಯೊಂದಿಗೆ ಡಿಸ್ಚಾರ್ಜ್ ಮಾಡಲಾಗಿದೆ.

    ಸೋಂಕು ಬಂದಿದ್ದು ಹೇಗೆ?
    ವೃದ್ಧ ದಂಪತಿಯನ್ನು ಮಾರ್ಚ್ 9 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಥಾಮಸ್ ಮತ್ತು ಮರಿಯಮ್ಮ ವೃದ್ಧ ದಂಪತಿ ಪತ್ತನಂತಿಟ್ಟ ಜಿಲ್ಲೆಯ ರಾಣಿ ಗ್ರಾಮದ ನಿವಾಸಿಯಾಗಿದ್ದು, ಮಾರ್ಚ್‍ನಲ್ಲಿ ಇಟಲಿಯಿಂದ ವೃದ್ಧ ದಂಪತಿಯ ಮಗ, ಸೊಸೆ ಮತ್ತು ಮೊಮ್ಮಗ ಹಿಂದಿರುಗಿದ್ದರು. ಇವರ ಜೊತೆ ಸಂಪರ್ಕ ಹೊಂದಿದ್ದ ವೃದ್ಧ ದಂಪತಿಗೆ ಕೊರೊನಾ ಬಂದಿತ್ತು. ಅವರ ಮಗ, ಸೊಸೆ ಮತ್ತು ಮೊಮ್ಮಗನಿಗೂ ಕೊರೊನಾ ಪಾಸಿಟಿವ್ ಬಂದಿತ್ತು.

    ದಂಪತಿ ಎರಡು ವಾರಗಳವರೆಗೆ ಕಟ್ಟುನಿಟ್ಟಿನಿಂದ ಹೋಂ ಕ್ಯಾರೆಂಟೈನ್‍ನಲ್ಲಿ ಉಳಿದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರಿಬ್ಬರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ದಂಪತಿ ಈಗಾಗಲೇ ಮಧುಮೇಹ, ರಕ್ತದೊತ್ತಡ, ಹೃದಯ ಕಾಯಿಲೆ ಮತ್ತು ವಯಸ್ಸಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ಹೀಗಾಗಿ ಮೊದಲ ಹಂತದ ಚಿಕಿತ್ಸೆಯಲ್ಲಿ ದಂಪತಿಯ ಸ್ಥಿತಿ ಗಂಭೀರವಾಗಿತ್ತು.

    ಅಷ್ಟೇ ಅಲ್ಲದೇ ಚಿಕಿತ್ಸೆಯ ಸಮಯದಲ್ಲಿ ಥಾಮಸ್‍ಗೆ ಹೃದಯಾಘಾತವಾಗಿತ್ತು. ಅಲ್ಲದೇ ರಕ್ತದೊತ್ತಡದಿಂದ ವೈದ್ಯರು ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಸಮಯದಲ್ಲಿ ಥಾಮಸ್ ಮತ್ತು ಮರಿಯಮ್ಮ ಇಬ್ಬರಿಗೂ ಮೂತ್ರದ ಸೋಂಕು ಕೂಡ ಕಂಡುಬಂದಿತ್ತು. ಆದರೂ ಇಷ್ಟೆಲ್ಲಾ ಕಷ್ಟದಿಂದಲೂ ವೃದ್ಧ ದಂಪತಿ ಧೈರ್ಯದಿಂದ ಕೊರೊನಾ ವೈರಸ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ.

    ಸ್ಥಳಿಯವಾಗಿ ವೃದ್ಧದಂಪತಿ ಎಲ್ಲ ಆಹಾರವನ್ನು ಇಷ್ಟ ಪಡುತ್ತಾರೆ. ಥಾಮಸ್ ಅವರಿಗೆ ಫಿಶ್ ಫ್ರೈ ಅಂದರೆ ತುಂಬಾ ಇಷ್ಟ. ಹೀಗಾಗಿ ನಾವು ತಿನ್ನಲು ಫಿಶ್  ಫ್ರೈ ಕೊಡುತ್ತಿದ್ದೆವು. ಅಲ್ಲದೇ ಅಕ್ಕಿ ಗಂಜಿ, ಮರಗೆಣಸು ಮತ್ತು ಹಲಸಿನ ಹಣ್ಣನ್ನು ಆಹಾರವಾಗಿ ತಿನ್ನಲು ಕೊಡುತ್ತಿದ್ದೆವು ಎಂದು ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರು ಹೇಳಿದ್ದಾರೆ.

    ಇದೀಗ ವೃದ್ಧ ದಂಪತಿಯನ್ನು ಉಳಿಸಲು ಶ್ರಮಿಸಿದ ವೈದ್ಯರು, ನರ್ಸ್ ಗಳು ಮತ್ತು ಇತರ ಸಿಬ್ಬಂದಿಗೆ ಕೇರಳ ಆರೋಗ್ಯ ಸಚಿವ ಕೆ.ಕೆ.ಶೈಲಾಜಾ ಧನ್ಯವಾದ ತಿಳಿಸಿದ್ದಾರೆ. ಸರ್ಕಾರದ ಪ್ರಕಾರ, ಏಳು ವೈದ್ಯರ ತಂಡವು ಚಿಕಿತ್ಸೆ ನೀಡಿದ್ದು, ಇವರಿಗೆ 25 ಮಂದಿ ನರ್ಸ್ ಸೇರಿದಂತೆ 40 ವೈದ್ಯಕೀಯ ಸಿಬ್ಬಂದಿ ಸಹಕಾರ ನೀಡಿದ್ದರು ಎಂದು ತಿಳಿದುಬಂದಿದೆ.

  • ಗಡಿ ಬಂದ್‍ನಿಂದ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ- ಸುಪ್ರೀಂಗೆ ಕೇರಳ ಮಾಹಿತಿ

    ಗಡಿ ಬಂದ್‍ನಿಂದ 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ- ಸುಪ್ರೀಂಗೆ ಕೇರಳ ಮಾಹಿತಿ

    ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ-ಕೇರಳ ಗಡಿ ಬಂದ್ ಮಾಡಲಾಗಿದ್ದು, ಪರಿಣಾಮ ಕೇರಳದ ಎಂಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇರಳ ಸರ್ಕಾರ ಆರೋಪಿಸಿದೆ.

    ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿರುವ ಕೇರಳ ಸರ್ಕಾರ, ಕೂಡಲೇ ಗಡಿ ಭಾಗವನ್ನು ತೆರವು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲು ಮನವಿ ಮಾಡಿಕೊಂಡಿದೆ. ಕೇರಳ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮತ್ತಷ್ಟು ಮಾಹಿತಿ ಕೋರಿ ನೋಟಿಸ್ ಜಾರಿ ಮಾಡಿತ್ತು. ಈ ನೋಟಿಸ್‍ಗೆ ಅಫಿಡವಿಟ್ ಮೂಲಕ ಉತ್ತರ ಸಲ್ಲಿಸಿರುವ ಕೇರಳ ಈ ಆರೋಪಗಳನ್ನು ಮಾಡಿದೆ.

    ಗಡಿ ಭಾಗ ಬಂದ್ ಆಗಿರುವ ಹಿನ್ನೆಲೆ ಕೇರಳಕ್ಕೆ ತೊಂದರೆಯಾಗಿದೆ. ತುರ್ತು ಆರೋಗ್ಯ ಕಾರ್ಯಗಳಿಗೆ ತೊಂದರೆ ಉಂಟಾಗಿದೆ. ಇತರ ಅಗತ್ಯ ವಸ್ತುಗಳು ಸಾಗಾಟಕ್ಕೂ ತೊಂದರೆಯಾಗಿದೆ. ಕರ್ನಾಟಕ ತನ್ನ ರಸ್ತೆ ತಡೆ ಕ್ರಮ ಹಿಂಪಡೆಯಬೇಕೆಂದು ಆಗ್ರಹ ಮಾಡಿತ್ತು. ಆದರೆ ಕಾಸರಗೋಡು ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು ಗಡಿ ಭಾಗ ತೆರವು ಮಾಡಿದ್ದಲ್ಲಿ ಮತ್ತಷ್ಟು ಸೋಂಕು ಕರ್ನಾಟಕಕ್ಕೆ ಹಬ್ಬುವ ಸಾಧ್ಯತೆ ಇದೆ. ಈ ಹಿನ್ನೆಲೆ ಗಡಿ ಭಾಗ ತೆರವು ಮಾಡಲು ಸಾಧ್ಯವಿಲ್ಲ. ಇದಲ್ಲದೇ ಕೇಂದ್ರ ಸರ್ಕಾರದಿಂದಲೂ ಈ ಬಗ್ಗೆ ಆದೇಶಗಳಿದೆ ಎಂದು ಕರ್ನಾಟಕ ವಾದ ಮಂಡಿಸಿತ್ತು.

    ಎರಡೂ ಕಡೆಯ ವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಸೂಚನೆ ನೀಡಿತ್ತು. ಇದಕ್ಕೂ ಮುನ್ನ ಕೇರಳ ಹೈಕೋರ್ಟ್ ಗಡಿ ತೆರವು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಕರ್ನಾಟಕ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದೆ.