ಕೊಲ್ಲಂ: ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಒಂದು ಮಾತಿದೆ. ಈ ಮಾತು ನಿಜಾನೋ ಸುಳ್ಳೋ ಗೊತ್ತಿಲ್ಲ. ಆದರೆ ಕೇರಳದ ಈ ಯುವತಿಯ ಪಾಲಿಗೆ ಮಾತ್ರ ಹಾವೇ ದಾರುಣ ಯಮಪಾಶವಾಗಿದೆ.
ಹೌದು, ಕೇರಳದ ಕೊಲ್ಲಂ ಜಿಲ್ಲೆಯ ಅಂಚಲ್ ಎಂಬಲ್ಲಿ ಹಾವು ಕಡಿದು ಚಿಕಿತ್ಸೆ ಪಡೆಯುತ್ತಿದ್ದ ಯುವತಿಯೊಬ್ಬರು 2ನೇ ಬಾರಿ ಹಾವು ಕಚ್ಚಿ ಸಾವನ್ನಪ್ಪಿದ್ದಾರೆ. ಏರಂ ವೆಳ್ಳಾಶೇರಿಯ ವಿಜಯಸೇನ ಹಾಗೂ ಮಣಿಮೇಘಲ ದಂಪತಿಯ ಪುತ್ರಿ 25 ವರ್ಷ ಉತ್ತರ ಸಾವನ್ನಪ್ಪಿದ್ದಾರೆ. ಮೂರು ತಿಂಗಳ ಹಿಂದೆ ಉತ್ತರಾಗೆ ಪತಿಯ ಮನೆಯಲ್ಲಿ ಹಾವು ಕಚ್ಚಿತ್ತು. ಇದಕ್ಕೆ ಅವರು ಚಿಕಿತ್ಸೆಯನ್ನೂ ಪಡೆಯುತ್ತಿದ್ದರು.
ಅಡೂರು ಪರಕೋಡ್ ಸೂರಜ್ ಭವನ್‍ನ ಸೂರಜ್‍ನನ್ನು ಮದುವೆಯಾಗಿದ್ದ ಉತ್ತರಾಗೆ ಮೂರು ತಿಂಗಳ ಹಿಂದೆ ಹಾವು ಕಚ್ಚಿತ್ತು. ಈ ಹಿನ್ನೆಲೆಯಲ್ಲಿ ಆಕೆ ತನ್ನ ತವರು ಮನೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದರು.
ನಿನ್ನೆ ಬೆಳಗ್ಗೆ ಉತ್ತರ ನಿದ್ದೆಯಿಂದ ಎದ್ದಿರಲಿಲ್ಲ. ಹೀಗಾಗಿ ಪೋಷಕರು ಹೋಗಿ ಆಕೆಯನ್ನು ಎಚ್ಚರಿಸಲು ಪ್ರಯತ್ನಿಸಿದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಗೊತ್ತಾಗಿದೆ. ತಕ್ಷಣ ಅಂಚಲ್‍ನಲ್ಲಿರುವ ಆಸ್ಪತ್ರೆಗೆ ಸೇರಿಸಲು ಯತ್ನಿಸಿದರೂ ಅಷ್ಟರಲ್ಲಾಗಲೇ ಉತ್ತರಾ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದೇ ವೇಳೆ ಆಕೆಯ ಕೊಠಡಿಯನ್ನು ಪರಿಶೋಧಿಸಿದಾಗ ಅಲ್ಲಿ ಹಾವು ಕಾಣಿಸಿಕೊಂಡಿದೆ. ಹಾವು ಕಡಿತದಿಂದಲೇ ಸಾವು ಸಂಭವಿಸಿರುವುದು ಖಚಿತವಾಗಿದೆ.
ತಿರುವನಂತಪುರ: ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಇದೀಗ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಶಾಪ್ ಗಳು ಓಪನ್ ಆಗುತ್ತಿವೆ. ಹಾಗೆಯೇ ಜ್ಯುವೆಲ್ಲರಿ ಶಾಪ್ ಮಾಲೀಕ ತನ್ನ ಅಂಗಡಿಯ ಬಾಗಿಲು ತೆರೆದಾಗ ಶಾಕ್ ಒಂದು ಕಾದಿತ್ತು.
ಈ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದ್ದು, ಮಾಲೀಕ ತನ್ನ ಅಂಗಡಿಯನ್ನು ಕ್ಲೀನ್ ಮಾಡಲೆಂದು ಬಾಗಿಲು ತೆರೆದಾಗ ಈ ಅಚ್ಚರಿಯ ಘಟನೆ ಬೆಳಕಿಗೆ ಬಂದಿದೆ.
ಲಾಕ್ ಡೌನ್ ಮುಗಿಸಿ ತಿಂಗಳ ಬಳಿಕ ಶಾಪ್ ಬಾಗಿಲು ಓಪನ್ ಮಾಡುತ್ತಿದ್ದಂತೆಯೇ ಸರಗಳ ಮಧ್ಯೆ ಹೆಬ್ಬಾವು ಕಾಣಿಸಿಕೊಂಡಿದೆ. ಅಲ್ಲದೆ ಶಾಪ್ ಒಳಗಡೆ ಹೆಬ್ಬಾವು ಬರೋಬ್ಬರಿ 22 ಮೊಟ್ಟೆಗಳನ್ನು ಕೂಡ ಇಟ್ಟಿರುವುದನ್ನು ಕಂಡು ಮಾಲೀಕ ಅಚ್ಚರಿಗೊಂಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಅಂಗಡಿ ಮಾಲೀಕ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅಧಿಕಾರಿಗಳು ಕೂಡ ಸ್ಥಳಕ್ಕೆ ದೌಡಾಯಿಸಿ ಹೆಬ್ಬಾವು ಹಾಗೂ ಮೊಟ್ಟೆಗಳನ್ನು ರಕ್ಷಣೆ ಮಾಡಿದ್ದಾರೆ.
– 1 ತಿಂಗ್ಳ ನಂತ್ರ ನಾಪತ್ತೆಯಾಗಿದ್ದ ಬ್ಯೂಟಿಷಿಯನ್ ಶವ ಪತ್ತೆ
ತಿರುವನಂತಪುರಂ: 42 ವರ್ಷದ ಮಹಿಳೆ ಕಾಣೆಯಾಗಿ ಒಂದು ತಿಂಗಳ ನಂತರ ಪೊಲೀಸರು ಆಕೆಯ ಶವವನ್ನು ಪಾಲಕ್ಕಾಡ್ ಜಿಲ್ಲೆಯಲ್ಲಿ ಪತ್ತೆ ಮಾಡಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ಸುಚಿತ್ರಾ ಮೃತ ಮಹಿಳೆ. ಈಕೆಯನ್ನು ಪಾಲಕ್ಕಾಡ್ ಮೂಲದ ಸಂಗೀತ ಶಿಕ್ಷಕ ಪ್ರಶಾಂತ್(34) ಕೊಲೆ ಮಾಡಿದ್ದಾನೆ. ಬುಧವಾರ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ಕಾಲುಗಳನ್ನು ಕತ್ತರಿಸಿ ಅರ್ಧ ಸುಟ್ಟು, ಸಮಾಧಿ ಮಾಡಿದ್ದ ಸ್ಥಿತಿಯಲ್ಲಿ ಸುಚಿತ್ರಾ ಮೃತದೇಹ ಪತ್ತೆಯಾಗಿದೆ.
ಏನಿದು ಪ್ರಕರಣ?
ಜಿಲ್ಲೆಯ ಕೊಟ್ಟಿಯಂ ಬಳಿಯ ತ್ರಿಕೋವಿಲ್‍ವಟ್ಟಂ ಮೂಲದ ಸುಚಿತ್ರಾ ಬ್ಯೂಟಿಷಿಯನ್ ಆಗಿದ್ದಳು. ಸುಚಿತ್ರಾಗೆ ಮದುವೆಯಾಗಿ ಪತಿಯಿಂದ ವಿಚ್ಛೇದನ ಪಡೆದುಕೊಂಡು ಪೋಷಕರ ಮನೆಯಲ್ಲಿದ್ದಳು. ಸುಚಿತ್ರಾ ಮಾರ್ಚ್ 18 ರಂದು ಕೊಚ್ಚಿಯಲ್ಲಿ ನಡೆಯುತ್ತಿದ್ದ ತರಬೇತಿ ಅಧಿವೇಶನಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋಗಿದ್ದಳು. ಆದರೆ ಮಾರ್ಚ್ 20 ರಿಂದ ಆಕೆಯ ಫೋನ್ ನಾಟ್ ರೀಚೆಬಲ್ ಬಂದಿದೆ. ನಂತರ ಮಾರ್ಚ್ 22 ರಂದು ಸುಚಿತ್ರಾ ಕುಟುಂಬದವರು ಕೊಟ್ಟಿಯಂ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಈ ವೇಳೆ ಸುಚಿತ್ರಾ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಐದು ದಿನಗಳ ಕಾಲ ರಜೆ ತೆಗೆದುಕೊಂಡಿದ್ದು ತಿಳಿದುಬಂದಿದೆ. ನಂತರ ಪೊಲೀಸರು ಸುಚಿತ್ರಾರ ಕಾಲ್ ಡಿಟೈಲ್ಸ್ ಪರಿಶೀಲನೆ ನಡೆಸಿದ್ದಾರೆ. ಆಗ ಮೃತ ಸುಚಿತ್ರಾ ಪಾಲಕ್ಕಾಡ್‍ನ ಸಂಗೀತ ಶಿಕ್ಷಕನಾಗಿದ್ದ ಪ್ರಶಾಂತ್ ಜೊತೆ ಸಂಪರ್ಕದಲ್ಲಿರುವುದು ಗೊತ್ತಾಗಿದೆ. ಮೃತ ಸುಚಿತ್ರಾ ಮತ್ತು ಪ್ರಶಾಂತ್ ಇಬ್ಬರು ಸಂಬಂಧ ಹೊಂದಿದ್ದರು ಎಂದು ವರದಿಯಾಗಿದೆ.
ಕೊಲ್ಲಂನ ಅಪರಾಧ ವಿಭಾಗದ ಅಧಿಕಾರಿಗಳ ತಂಡ ತನಿಖೆಗಾಗಿ ಪಾಲಕ್ಕಾಡ್‍ಗೆ ಹೋಗಿದೆ. ಅಲ್ಲಿ ಸೈಬರ್ ಸೆಂಟರ್ ಸಹಾಯದಿಂದ ಆತನ ಕಾಲ್ ಟ್ರೇಸ್ ಮಾಡಿ ಪ್ರಶಾಂತ್ ನನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಈ ವೇಳೆ ಪ್ರಶಾಂತ್ ಸುಚಿತ್ರಾಳನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಾರ್ಚ್ 18 ರಂದು ಪ್ರಶಾಂತ್ ತಮ್ಮ ಕುಟುಂಬದವರನ್ನು ಊರಿಗೆ ಕಳುಹಿಸಿದ್ದಾನೆ. ಅದೇ ದಿನ ಸುಚಿತ್ರಾ ಆತನ ಮನೆಗೆ ಹೋಗಿದ್ದಾಳೆ. ಇಬ್ಬರು ಒಟ್ಟಿಗೆ ಇದ್ದಾಗ ಜಗಳವಾಗಿದೆ. ಕೋಪದಲ್ಲಿ ಸುಚಿತ್ರಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಆರೋಪಿ ಪ್ರಶಾಂತ್‍ಗೆ ಈಗಾಗಲೇ ಮದುವೆಯಾಗಿ ಒಂದು ಮಗು ಕೂಡ ಇದೆ. ಮೃತ ಸುಚಿತ್ರಾ ಆರೋಪಿ ಪ್ರಶಾಂತ್ ಪತ್ನಿಯ ದೂರದ ಸಂಬಂಧಿಯಾಗಿದ್ದು, ಮಗುವಿನ ನಾಮಕರಣ ದಿನ ಇಬ್ಬರಿಗೂ ಪರಿಚಯವಾಗಿದೆ. ಅಂದಿನಿಂದ ಇಬ್ಬರೂ ಸ್ನೇಹಿತರಾಗಿದ್ದರು. ದಿನ ಕಳೆದಂತೆ ಸುಚಿತ್ರಾ, ಪ್ರಶಾಂತ್‍ನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಇರಲು ಇಷ್ಟಪಟ್ಟಿದ್ದಳು. ಆದರೆ ಆರೋಪಿ ಪ್ರಶಾಂತ್ ಸಮಾಜದ ಭಯದಿಂದ ಇದಕ್ಕೆ ಒಪ್ಪಲಿಲ್ಲ. ಇದರಿಂದ ಮಧ್ಯೆ ಜಗಳ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಪ್ರಶಾಂತ್ ಆಕೆಯ ಎರಡು ಕಾಲುಗಳನ್ನು ಕತ್ತರಿಸಿ, ಮೃತದೇಹವನ್ನು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಡಲು ಪ್ರಯತ್ನಿಸಿದ್ದಾನೆ. ಕೊನೆಗೆ ಸುಡುವುದು ಬೇಡ ಎಂದು ಸಮಾಧಿ ಮಾಡಿದ್ದಾರೆ. ಪಾಲಕ್ಕಾಡ್‍ನ ರಾಮನಾಥಪುರಂ ಬಳಿಯ ಆತನ ಬಾಡಿಗೆ ಮನೆಯ ಆವರಣದಲ್ಲಿ ಸುಚಿತ್ರಾ ಮೃತದೇಹ ಪತ್ತೆಯಾಗಿದೆ. ಸದ್ಯಕ್ಕೆ ಪೊಲೀಸರು ಆಕೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಆರೋಪಿ ಪ್ರಶಾಂತ್‍ನನ್ನು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.
ತಿರುವನಂತಪುರ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ಲಾಕ್‍ಡಾನ್ ಜಾರಿ ಮಾಡಿದೆ. ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿ ಮನೆಯಲ್ಲೇ ಉಳಿಯುವಂತೆ ಮಾಡಲು ಪೊಲೀಸರು, ಅಧಿಕಾರಿಗಳು ಹರ ಸಾಹಸ ಮಾಡುತ್ತಿದ್ದಾರೆ. ಆದರೆ ಕೇರಳದ ಗ್ರಾಮ ಪಂಚಾಯತಿಯೊಂದು ವಿಶೇಷ ಸ್ಪರ್ಧೆ ಏರ್ಪಡಿಸುವ ಮೂಲಕ ಜನರಲ್ಲಿ ಲಾಕ್‍ಡೌನ್ ನಿಯಮಗಳನ್ನು ಪಾಲನೆ ಮಾಡುವಂತೆ ಮನವಿ ಮಾಡಿದೆ.
ಕೇರಳದ ಮಲಪ್ಪುರಂ ಜಿಲ್ಲೆಯ ತಜ್ಹೆಕ್ಕೊಡ್ ಗ್ರಾಮ ಪಂಚಾಯಿತಿ ತನ್ನ ವ್ಯಾಪ್ತಿಯ ನಿವಾಸಿಗಳಿಗೆ ಲಾಕ್‍ಡೌನ್ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಲು ಮನವಿ ಮಾಡಿದೆ. ಅಲ್ಲದೇ ಯಾರು ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತಾರೋ ಅಂತಹವರಿಗೆ ಮೊದಲ ಮೂರು ಬಹುಮಾನಗಳಾಗಿ ಗೋಲ್ಡ್, ಫ್ರೀಡ್ಜ್ ಹಾಗೂ ವಾರ್ಷಿಂಗ್ ಮಿಷನ್ ನೀಡುವುದಾಗಿ ಹೇಳಿದೆ. ಅಲ್ಲದೇ ಇತರೇ 50 ಬಹುಮಾನಗಳನ್ನು ಕೂಡ ನೀಡುವುದಾಗಿ ತಿಳಿಸಿದೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪಂಚಾಯತ್ ಅಧ್ಯಕ್ಷ ಎಕೆ ನಸಾರ್, ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಸಾವಿರ ಕುಟುಂಗಳಿವೆ. ಕೆಲ ಮಂದಿಯನ್ನು ಲಾಕ್‍ಡೌನ್ ನಿಯಮಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಮಾಹಿತಿ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸ್ವಯಂ ಸೇವಕರನ್ನು ಸ್ಪರ್ಧೆಯಿಂದ ಹೊರಗಿಡಲಾಗಿದೆ ಎಂದು ತಿಳಿಸಿದ್ದಾರೆ.
ಮೇ 3ರ ಬಳಿಕ ಲಾಕ್‍ಡೌನ್ ಅಂತ್ಯವಾಗುವ ಸೂಚನೆ ಇದೆ. ಆ ವೇಳೆಗೆ ಸ್ವಯಂ ಸೇವಕರಿಂದ ಮಾಹಿತಿ ಸಂಗ್ರಹಿಸಿ ಮನೆಯಿಂದ ಯಾರು ಹೊರಹೋಗಿಲ್ಲ ಎಂದು ಹೇಳುವ ಎಲ್ಲರಿಗೂ ಅಫಿಡವಿಡ್ ಕೇಳುತ್ತೇವೆ. ಅಂತಹ ಎಲ್ಲಾ ಕುಟುಂಗಳಿಗೂ ಕೂಪನ್ ನೀಡಿ ಲಕ್ಕಿ ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದು ಎಂದಿದ್ದಾರೆ.
ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲೂ ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ಕೊರೊನಾ ಕುರಿತು ಜಾಗೃತಿ ಮೂಡಿಸಲು ವಿಭಿನ್ನ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ರಸ್ತೆ ಮೇಲೆ ಕೊರೊನಾ ಜಾಗೃತಿ ಚಿತ್ರ, ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಕೊರೊನಾದಂತೆ ವೇಷ ಧರಿಸಿ ಜಾಗೃತಿ ಮೂಡಿಸುತ್ತಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಆದರೂ ಸಾಕಷ್ಟು ಮಂದಿ ನಿಯಮಗಳನ್ನು ಉಲ್ಲಂಘಿಸುತ್ತಿರುವ ಕಾರಣ ಕೇರಳದ ಗ್ರಾಮಪಂಚಾಯಿತಿ ಹೊಸ ಕಾರ್ಯಕ್ರಮಕ್ಕೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಹಾವೇರಿ: ಜಿಲ್ಲೆಯಿಂದ ಕೆಲಸ ಅರಸಿಕೊಂಡು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಗೆ ದುಡಿಯಲು ಹೋಗಿದ್ದ 40ಕ್ಕೂ ಅಧಿಕ ಕಾರ್ಮಿಕರು ಊರಿಗೆ ಬರಲಾಗದೆ ಪರದಾಡ್ತಿದ್ದಾರೆ.
ಕಣ್ಣೂರು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ವಾಸವಾಗಿರೋ ಕಾರ್ಮಿಕರು ಲಾಕ್ ಡೌನ್ ನಂತರ ರಾಜ್ಯಗಳ ಗಡಿ ಬಂದ್ ಆಗಿದ್ದರಿಂದ ಊರಿಗೆ ಬರಲು ಪರದಾಡ್ತಿದ್ದಾರೆ. ಅಲ್ಲದೆ ಲಾಕ್ ಡೌನ್ ನಂತರ ಕೆಲಸವೂ ಇಲ್ಲದೆ ಇದ್ದ ಹಣವೂ ಖರ್ಚಾಗಿದೆ. ಊಟಕ್ಕೆ ಬೇಕಾದ ಪದಾರ್ಥಗಳು ಖಾಲಿ ಆಗಿವೆ.
ಹೀಗಾಗಿ ನಮ್ಮನ್ನ ನಮ್ಮ ನಮ್ಮ ಊರಿಗೆ ತಲುಪಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ. ಮೊಬೈಲ್ ನಲ್ಲಿ ವಿಡಿಯೋ ಮಾಡಿ ಹರಿಬಿಡೋ ಮೂಲಕ ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಊರಿಗೆ ತಲುಪಿಸುವಂತೆ ಕೇಳಿಕೊಳ್ತಿದ್ದಾರೆ.
ತಿರುವನಂತಪುರಂ: ಕೋವಿಡ್-19 ಆರ್ಭಟಕ್ಕೆ ಇಡಿ ವಿಶ್ವವೇ ಈಗ ತತ್ತರಿಸಿ ಹೋಗಿದ್ದು ಹಲವೆಡೆ ಉದ್ಯೋಗ ಕಡಿತ ಆರಂಭವಾಗಿದೆ. ಇದರ ನೇರ ಪರಿಣಾಮ ಭಾರತದ ರಾಜ್ಯಗಳಿಗೂ ತಟ್ಟಲಿದ್ದು, ಸೆಪ್ಟೆಂಬರ್ ವೇಳೆಗೆ 3 ಲಕ್ಷ ಮಲೆಯಾಳಿಗಳು ಕೇರಳಕ್ಕೆ ಮರಳಲಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಕೋವಿಡ್-19 ವಿಶ್ವದ ಆರ್ಥಿಕತೆಗೆ ಬಲವಾದ ಹೊಡೆತ ನೀಡಿದೆ. ಗಲ್ಫ್ ರಾಷ್ಟ್ರಗಳಲ್ಲಿ ಇದು ಗಂಭೀರ ಸಮಸ್ಯೆಯನ್ನು ತಂದೊಡ್ಡಿದೆ. ಪರಿಣಾಮ ಮೂರು ಲಕ್ಷಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡು ರಾಜ್ಯಕ್ಕೆ ಬರಬಹುದು ಎಂದು ಕೇರಳ ಸರ್ಕಾರ ನೇಮಿಸಿದ ಉನ್ನತ ಮಟ್ಟದ ಸಮಿತಿಯ ಸದಸ್ಯ, ವಲಸೆ ತಜ್ಞ ಎಸ್ ಇರುಡಯ ರಾಜನ್ ತಿಳಿಸಿದ್ದಾರೆ.
ಗಲ್ಫ್ ದೇಶಗಳ ಪೈಕಿ ವಿಶೇಷವಾಗಿ ಕುವೈತ್ ನಿಂದ ಒಂದು ಲಕ್ಷ ಮಂದಿ ಮರಳಬಹುದು. ವಲಸೆ ದಾಖಲೆಗಳು ಸರಿ ಇಲ್ಲದ ಹಿನ್ನೆಲೆಯಲ್ಲಿ ಅವರನ್ನು ಕಳುಹಿಸಬಹುದು. ಮುಂದೆ ಹಲವು ರಾಷ್ಟ್ರಗಳು ಇದನ್ನೇ ಅನುಸರಿಸುವ ಸಾಧ್ಯತೆಯಿದೆ. ಕೋವಿಡ್ 19 ನಿಂದ ಮಧ್ಯಪ್ರಾಚ್ಯ ರಾಷ್ಟ್ರಗಳ ಆರ್ಥಿಕತೆ ಹೇಗೆ ಚೇತರಿಕೆ ಆಗುತ್ತದೆ ಎನ್ನುವುದರ ಮೇಲೆ ಈ ವಲಸೆ ಪ್ರಮಾಣ ನಿಂತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
1990-91ರ ಅವಧಿಯಲ್ಲಿ ನಡೆದ ಗಲ್ಫ್ ಯುದ್ಧ ಸಮಯದಲ್ಲಿ 10 ಲಕ್ಷ ಕೇರಳಿಗರು ರಾಜ್ಯಕ್ಕೆ ಮರಳಿದ್ದರು. ಇದಾದ ಬಳಿಕ 2008ರಲ್ಲಿ ಜಾಗತಿಕ ಆರ್ಥಿಕ ಹಿಂಜರಿತದ ವೇಳೆ ಸಾಕಷ್ಟು ಜನ ಉದ್ಯೋಗ ಕಳೆದುಕೊಂಡಿದ್ದರು. 2011ರಲ್ಲಿ ಸೌದಿ ಅರೇಬಿಯಾ ಖಾಸಗಿ ಕ್ಷೇತ್ರದಲ್ಲಿ ಶೇ.10 ರಷ್ಟು ಉದ್ಯೋಗಗಳನ್ನು ಸೌದಿ ಜನತೆಗೆ ನೀಡಬೇಕೆಂದು ಕಾನೂನು ರೂಪಿಸಿದ ಹಿನ್ನೆಲೆಯಲ್ಲಿ ಹಲವು ಮಂದಿಯ ಉದ್ಯೋಗ ಹೋಗಿತ್ತು.
ಅಂತಾರಾಷ್ಟ್ರೀಯ ವಿಮಾನ ಹಾರಾಟ ಆರಂಭಗೊಂಡ ಕೂಡಲೇ ಭಾರತಕ್ಕೆ ಭಾರೀ ಸಂಖ್ಯೆಯಲ್ಲಿ ಜನ ಮರಳಲಿದ್ದಾರೆ. ವಿದೇಶಗಳಲ್ಲಿ ಉದ್ಯೋಗ ಕಡಿತ ಈಗಾಗಲೇ ಆರಂಭಗೊಂಡಿದೆ. ಹೀಗಾಗಿ ಸರ್ಕಾರಗಳು ಅಲ್ಲಿನ ಪ್ರಜೆಗಳಿಗೆ ಉದ್ಯೋಗ ನೀಡಲು ವೀಸಾ ವಿಚಾರದಲ್ಲಿ ಕಠಿಣ ನೀತಿಯನ್ನು ಅನುಸರಿಸಿದರೆ ಲಕ್ಷಾಂತರ ಭಾರತೀಯರು ಉದ್ಯೋಗ ಕಳೆದುಕೊಳ್ಳವುದು ನಿಶ್ಚಿತ ಎಂಬ ಅಭಿಪ್ರಾಯ ಈಗಾಗಲೇ ವ್ಯಕ್ತವಾಗಿದೆ.
– ಮದ್ವೆಗೆ ಖರ್ಚು ಮಾಡಬೇಕೆಂದಿದ್ದ ಹಣವನ್ನ ದೇಣಿಗೆ ನೀಡಿದ್ರು
ತಿರುವನಂತಪುರಂ: ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ಮಲಯಾಳಂ ಚಿತ್ರರಂಗದ ಪ್ರಶಸ್ತಿ ವಿಜೇತ ನಟರೊಬ್ಬರು ದೇವಾಲಯದಲ್ಲಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನಟ ಮಣಿಕಂದನ್ ಆಚಾರಿ ತಮ್ಮ ಗೆಳತಿ ಅಂಜಲಿಯನ್ನು ಭಾನುವಾರ ಮದುವೆಯಾಗಿದ್ದಾರೆ. ಯಾವುದೇ ಆಡಂಬರ, ಅದ್ಧೂರಿ, ಹೆಚ್ಚು ಜನರಿಲ್ಲದೆ ಅತ್ಯಂತ ಸರಳ ರೀತಿಯಲ್ಲಿ ಕೇರಳದ ದೇವಸ್ಥಾನವೊಂದರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಷ್ಟೇ ಅಲ್ಲದೇ ಮಣಿಕಂದನ್ ಮತ್ತು ಅಂಜಲಿ ಇಬ್ಬರೂ ತಮ್ಮ ಮದುವೆಗೆ ಖರ್ಚು ಮಾಡಬೇಕೆಂದುಕೊಂಡಿದ್ದ ಹಣವನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.
ಮಣಿಕಂದನ್ ಮತ್ತು ಅಂಜಲಿ ಮದುವೆ ಸಂದರ್ಭದಲ್ಲಿ ಕುಟುಂಬದವರು ಲಾಕ್‍ಡೌನ್ ನಿಯಮಗಳು ಪಾಲಿಸಿದ್ದಾರೆ. ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದು, ಮಾಸ್ಕ್ ಧರಿಸಿದ್ದರು.
ಮಣಿಕಂದನ್ ಮತ್ತು ಅಂಜಲಿ ಮದುವೆ ಆರು ತಿಂಗಳ ಹಿಂದೆಯೇ ನಿಶ್ಚಯವಾಗಿತ್ತು. ಆದರೆ ಕೊರೊನಾ ಲಾಕ್‍ಡೌನ್‍ನಿಂದಾಗಿ ತಮ್ಮ ಮದುವೆಯನ್ನು ಮುಂದೂಡಲು ಈ ಜೋಡಿ ಇಷ್ಟಪಡಲಿಲ್ಲ. ಹೀಗಾಗಿ ಎರಡೂ ಕುಟುಂಬದವರು ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಲು ನಿರ್ಧರಿಸಿದ್ದರು. ಅದರಂತೆಯೇ ಕೇರಳದ ದೇವಾಲಯದಲ್ಲಿ ಕುಟುಂಬದ ಕೆಲವು ಮಂದಿಯ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ.
ಮಣಿಕಂದನ್ ಮತ್ತು ಅಂಜಲಿ ಇಬ್ಬರೂ ಒಂದೂವರೆ ವರ್ಷದ ಹಿಂದೆ ದೇವಸ್ಥಾನವೊಂದರ ಉತ್ಸವದಲ್ಲಿ ಭೇಟಿಯಾಗಿದ್ದರು. ಪರಿಚಯ ಸ್ನೇಹವಾಗಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇವರಿಬ್ಬರು ತಮ್ಮ ಪ್ರೀತಿಯ ಬಗ್ಗೆ ಮನೆಯವರಿಗೆ ತಿಳಿಸಿದ್ದಾರೆ. ಎರಡು ಕುಟುಂಬದವರು ಇವರ ಪ್ರೀತಿಗೆ ಒಪ್ಪಿಗೆ ಸೂಚಿಸಿ ಮದುವೆ ಮಾಡಿಸಿದ್ದಾರೆ.
ಈ ವೇಳೆ ಮಾತನಾಡಿದ ವರ ಮಣಿಕಂದನ್, “ಕೊರೊನಾ ಲಾಕ್‍ಡೌನ್‍ನಿಂದ ನಾವು ಸರಳವಾಗಿ ವಿವಾಹವಾಗಿದ್ದೇವೆ. ಅಲ್ಲದೇ ನಮ್ಮ ಮದುವೆಗೆ ಖರ್ಚು ಮಾಡಬೇಕೆಂದಿದ್ದ ಹಣವನ್ನು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡುತ್ತಿರುವುದಕ್ಕೆ ನಮಗೆ ಸಂತಸವಾಗಿದೆ. ನಮ್ಮ ಮದುವೆ ಅದ್ಧೂರಿಯಾಗಿ ನಡೆಯಲಿಲ್ಲ ಎಂದು ನಮಗೆ ಬೇಸರವಾಗಿಲ್ಲ. ಇದು ಸಂಭ್ರಮ ಪಡುವ ಸಮಯವಲ್ಲ. ಯಾಕೆಂದರೆ ಇಡೀ ಜಗತ್ತು ಕೊರೊನಾದಿಂದ ಸಂಕಷ್ಟದಲ್ಲಿದೆ. ನಾವು ಯಾವಾಗ ಬೇಕಾದರೂ ಸಂಭ್ರಮಾಚರಣೆ ಮಾಡಬಹುದು” ಎಂದರು.
ನಮ್ಮ ಮದುವೆಯನ್ನು ಮುಂದೂಡದೆ ಎರಡು ಕುಟುಂಬದವರು ಸೇರಿ ದೇವಸ್ಥಾನದಲ್ಲಿ ಮಾಡಲು ನಿರ್ಧಾರ ತೆಗೆದುಕೊಂಡಿದ್ದರು. ಇದರ ಬಗ್ಗೆ ನನಗೆ ತುಂಬಾ ಸಂತೋಷವಿದೆ ಎಂದು ವಧು ಅಂಜಲಿ ಹೇಳಿದ್ದಾರೆ.
ಮಣಿಕಂದನ್ 2016ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು, ತಾವು ನಟಿಸಿದ ಮೊದಲ ‘ಕಮ್ಮಟಿಪಾದ’ ಸಿನಿಮಾದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದರು. ಈ ಮೂಲಕ ಮಲಯಾಳಂ ಚಿತ್ರರಂಗದಲ್ಲಿ ಮಣಿಕಂದನ್ ಗುರುತಿಸಿಕೊಂಡಿದ್ದಾರೆ.
– ಖರ್ಚು ಮಾಡಲು ಮನಸ್ಸಾಗಿಲ್ಲ ಎಂದ ಅಜ್ಜಿ
– ಕೂಲಿ ಮಾಡಿ ಏಕಾಂಗಿಯಾಗಿ ವಾಸ
ತಿರುವನಂತಪುರಂ: ಕೊರೊನಾ ವೈರಸ್ ಹೋರಾಟಕ್ಕೆ ಈಗಾಗಲೇ ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಇದೀಗ 70 ವರ್ಷದ ಅಜ್ಜಿಯೊಬ್ಬರು ಕೂಲಿ ಮಾಡಿ ಉಳಿತಾಯ ಮಾಡಿದ್ದ ಹಣವನ್ನು ದೇಣಿಗೆಯಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಲಲಿತಮ್ಮ ದೇಣಿಗೆ ನೀಡಿದ ಅಜ್ಜಿ. ಇವರು ಪ್ರತಿವರ್ಷ ತಮ್ಮ ವರ್ಷಪೂರ್ತಿ ಮಾಡಿದ್ದ ಉಳಿತಾಯವನ್ನು ಹತ್ತಿರದ ದೇವಸ್ಥಾನದಲ್ಲಿ ನಡೆಯುವ ಹಬ್ಬಕ್ಕಾಗಿ ದಾನ ಮಾಡುತ್ತಿದ್ದರು. ಇವರಿಗೆ ಮಾಸಿಕ 1,200 ರೂ. ಪಿಂಚಣಿ ಬರುತ್ತದೆ. ಜೊತೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಬರುವ ವೇತನದಿಂದ ಸ್ವಲ್ಪ ಉಳಿತಾಯ ಮಾಡಿದ್ದರು.
ಕೊರೊನಾದಿಂದ ಈ ವರ್ಷ ದೇವಾಲಯ ಉತ್ಸವ ನಡೆಯಲಿಲ್ಲ. ಹೀಗಾಗಿ ಅವರು ತಮ್ಮ ಉಳಿತಾಯದ ಹಣವನ್ನು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನ ಮಾಡಿದರು. 70 ವರ್ಷದ ಲಲಿತಮ್ಮ ಕೊಲ್ಲಂ ಜಿಲ್ಲೆಯ ಅರಿನಲ್ಲೂರ್ ನಲ್ಲಿರುವ ಒಂದು ಶೆಡ್‍ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಲಲಿತಮ್ಮ 2009 ರವರೆಗೆ ಗೋಡಂಬಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ಇದು ನನ್ನ ಕಳೆದ ಒಂದು ವರ್ಷದ ಉಳಿತಾಯ. ಆದರೆ ನನ್ನ ಸ್ವಂತ ಬಳಕೆಗಾಗಿ ಹಣವನ್ನು ಖರ್ಚು ಮಾಡಬೇಕು ಎಂದು ನನಗೆ ಅನಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಕೊರೊನಾ ನಿಯಂತ್ರಿಸಲು ಪರದಾಡುತ್ತಿದ್ದಾರೆ. ಹೀಗಾಗಿ ನಾನು ಅದೇ ಹಣವನ್ನು ದೇಣಿಗೆಯಾಗಿ ನೀಡಿದ್ದೇನೆ. ಮೊದಲಿಗೆ ನಾನು ಈ ಹಣವನ್ನು ಹೇಗೆ ಪರಿಹಾರ ನಿಧಿಗೆ ನೀಡುವುದು ಎಂದು ಯೋಚಿಸಿದೆ. ನಮ್ಮ ಮನೆಯ ಜಂಕ್ಷನ್‍ನಲ್ಲಿ ಪ್ರತಿದಿನ ಪೊಲೀಸ್ ವಾಹನ ಹೋಗುತ್ತದೆ. ಒಂದು ದಿನ ಆ ವಾಹನವನ್ನು ನಿಲ್ಲಿಸಿ, ಪೊಲೀಸ್ ಅಧಿಕಾರಿಗೆ ನಾನು ಹಣವನ್ನು ಸಿಎಂ ಪರಿಹಾರ ನಿಧಿಗೆ ನೀಡಬೇಕು ಎಂದು ಕೇಳಿದೆ. ಅವರು ನಿಮ್ಮ ಬಳಿಗೆ ಅಧಿಕಾರಿಗಳು ಬರುವುದಾಗಿ ಹೇಳಿ ಹೋದರು.
ಎರಡು ದಿನಗಳ ನಂತರ ಸರ್ಕಲ್ ಇನ್ಸ್ ಪೆಕ್ಟರ್ ರಾಜೇಶ್ ಕುಮಾರ್ ಮತ್ತು ಅವರ ಸಹೋದ್ಯೋಗಿಗಳು ಹಣವನ್ನು ಪಡೆದುಕೊಂಡರು ಎಂದು ತಿಳಿಸಿದ್ದಾರೆ. ಲಲಿತಮ್ಮ ವರ್ಷ ಪೂರ್ತಿ ಉಳಿಸಿದ್ದ 5,101 ರೂಪಾಯಿಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ.
ನನ್ನ ಮಗಳು ಮತ್ತು ಮಗ ಮದುವೆಯಾಗಿ ಹತ್ತಿರದಲ್ಲೇ ವಾಸಿಸುತ್ತಿದ್ದಾರೆ. ಆದರೆ ನಾನು ಯಾರನ್ನೂ ಅವಲಂಬಿಸದೆ ಏಕಾಂಗಿಯಾಗಿ ಬದುಕಲು ಇಷ್ಟಪಡುತ್ತೇನೆ. ಸದ್ಯಕ್ಕೆ ದೇಶ ಕೊರೊನಾ ವೈರಸ್‍ನಿಂದ ಮುಕ್ತವಾಗಬೇಕು. ಆಗ ದೈನಂದಿನ ಕೂಲಿ ಕಾರ್ಮಿಕರಾಗಿರುವ ನನ್ನಂತ ಜನರು ಮತ್ತೆ ಕೆಲಸಕ್ಕೆ ಹೋಗಬಹುದು ಎಂದು ಲಲಿತಮ್ಮ ಹೇಳಿದರು.
ತಿರುವನಂತಪುರ: 16 ವರ್ಷದ ಬಾಲಕನೋರ್ವ ತನ್ನ ಸಹಪಾಠಿಯನ್ನು ಕೊಲೆಗೈದಿರುವ ಘಟನೆ ಕೇರಳದ ಪತ್ತನಂತಿಟ್ಟ ಜಿಲ್ಲೆಯಲ್ಲಿ ನಡೆದಿದೆ.
ಅಂಗದಿಕ್ಕಲ್ ನಿವಾಸಿಯಾದ ಅಖಿಲ್ (16) ಸ್ನೇಹಿತರಿಂದಲೇ ಕೊಲೆಯಾದ ಬಾಲಕ. ಎಲ್‍ಐಡಿ ಆಟದಲ್ಲಿ ಸ್ನೇಹಿತರ ಮಧ್ಯೆ ಜಗಳ ನಡೆದಿದೆ. ಈ ವೇಳೆ ಅಖಿಲ್ ನನ್ನು ಆತನ ಗೆಳೆಯರೇ ಕೊಡಲಿಯಿಂದ ಕೊಂದಿದ್ದಾರೆ. ತದನಂತರ ಶವವನ್ನು ಕೊಡುಮಾನ್ ಪ್ರದೇಶದ ರಬ್ಬರ್ ತೋಟದಲ್ಲಿ ಯಾರಿಗೂ ತಿಳಿಯದಂತೆ ಸಮಾಧಿ ಮಾಡಿದ್ದಾರೆ.
ಭಾನುವಾರ ಈ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರು ಕೊಲೆಗೆ ಬೇರೆ ಕಾರಣಗಳಿರುಬಹುದಾ ಎಂದು ಅನುಮಾನಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
– ಬಡ ವ್ಯಕ್ತಿಯಿಂದ ಪೊಲೀಸ್ ಸಿಬ್ಬಂದಿಗೆ ಸಹಾಯ
– ಒಂದು ಮರ ಹತ್ತಿ ಕಾಯಿ ಕಿತ್ರೆ 100 ರೂ. ಆದಾಯ
ತಿರುವನಂತಪುರಂ: ಲಾಕ್‍ಡೌನ್ ಆದಾಗಿನಿಂದ ಪೊಲೀಸರು ಹಗಲು-ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಾಕ್‍ಡೌನ್‍ನಿಂದಾಗಿ ಹೊಟೇಲ್ ಮುಚ್ಚಿರುವ ಕಾರಣ ಪೊಲೀಸರಿಗೆ ಸರಿಯಾಗಿ ಆಹಾರ ಸಿಗುತ್ತಿಲ್ಲ. ಈ ವೇಳೆ ಕೇರಳ ಮೂಲದ ಬಡ ವ್ಯಕ್ತಿಯೊಬ್ಬ ಪೊಲೀಸರಿಗೆ ನೀರು ಮತ್ತು ಊಟ ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.
ಗಿರೀಶ್ ಕೇರಳದ ಅಲಪ್ಪಿ ಜಿಲ್ಲೆಯ ಕಲವೂರ್ ಗ್ರಾಮದಲ್ಲಿ ಪೊಲೀಸರಿಗೆ ನೀರು ಹಾಗೂ ಆಹಾರ ಸರಬರಾಜು ಮಾಡಿ ಗಮನ ಸೆಳೆಯುತ್ತಿದ್ದಾರೆ. ಗಿರೀಶ್ ತೆಂಗಿನ ಮರ ಹತ್ತಿ ಕಾಯಿಕೀಳುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ತೆಂಗಿನ ಮರ ಹತ್ತಿ ಕಾಯಿ ಕಿತ್ತು 100 ರೂ. ಆದಾಯ ಗಳಿಸುತ್ತಾರೆ. ಆದರೆ ತಮಗೆ ಬರುವ ಕಡಿಮೆ ಆದಾಯದಲ್ಲಿಯೇ ಗಿರೀಶ್ ಪೊಲೀಸರಿಗೆ ಆಹಾರ ವಿತರಣೆ ಮಾಡುವ ಕಾಯಕದಲ್ಲಿ ನಿರತರಾಗಿದ್ದಾರೆ.
ಗಿರೀಶ್ ಲಾಕ್‍ಡೌನ್ ಪ್ರಾರಂಭವಾದಾಗಿನಿಂದಲೂ ಪೊಲೀಸ್ ಸಿಬ್ಬಂದಿಗೆ ಉಚಿತ ಆಹಾರ ಮತ್ತು ನೀರನ್ನು ನೀಡುತ್ತಿದ್ದಾರೆ. ಪೊಲೀಸರು ನಿರಾಕರಿಸಿದರೂ ಗಿರೀಶ್ ಮಾತ್ರ ತಮ್ಮ ಕೈಲಾದ ತಿಂಡಿಯನ್ನು ತಂದು ನೀಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಕಲವೂರ್ ಸಬ್ ಇನ್ಸ್ ಪೆಕ್ಟರ್ ಟೋಲ್ಸನ್ ಜೋಸೆಫ್, ಈ ವ್ಯಕ್ತಿಯು ಪ್ರತಿದಿನ ತನ್ನ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಜೊತೆಗೆ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಆಹಾರ ನೀಡುತ್ತಿದ್ದರು. ಒಂದು ದಿನ ವ್ಯಕ್ತಿಯ ಬಗ್ಗೆ ವಿಚಾರಿಸಿದೆ. ಆ ವ್ಯಕ್ತಿಯು ಪ್ರತಿದಿನ ನೀರು ಮತ್ತು ತಿಂಡಿಯನ್ನು ಪೊಲೀಸರಿಗೆ ಪೂರೈಸುತ್ತಾರೆ ಎಂದು ಪೊಲೀಸರು ನನಗೆ ಹೇಳಿದರು ಎಂದರು.
I see this man travelling in his two-wheeler daily & exchanging pleasantries with cops on duty. When I inquired about him, the police personnel told me that the man is supplying them water & snacks daily: Tolson Joseph, Kalavoor, Sub Inspector #Keralapic.twitter.com/H9FzsDtwmK
ಗಿರೀಶ್ ಇಡೀ ದಿನ ಕರ್ತವ್ಯದಲ್ಲಿರುವವರಿಗೆ ನೀರು ಮತ್ತು ಬಾಳೆಹಣ್ಣುಗಳನ್ನು ತರುತ್ತಾರೆ. ಈ ಬಿಸಿಲಿನಲ್ಲೂ ನಾವು ನಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇವೆ. ಈ ಲಾಕ್‍ಡೌನ್ ಸಮಯದಲ್ಲಿ ಯಾವುದೇ ಅಂಗಡಿಗಳು ತೆರೆದಿಲ್ಲ. ನಮ್ಮ ಇಲಾಖೆಯು ಆಹಾರ ಮತ್ತು ನೀರನ್ನು ಪೂರೈಸುತ್ತಿದೆ. ಆದರೂ ಗಿರೀಶ್ ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಮಹಿಳಾ ಪೊಲೀಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಿರೀಶ್ ಗೆ ಬರುವ ಕಡಿಮೆ ಆದಾಯದಲ್ಲೂ ನಮಗೆ ಸಹಾಯ ಮಾಡುತ್ತಿದ್ದಾರೆ. ಅವರು ಪೊಲೀಸರು ಕರ್ತವ್ಯದಲ್ಲಿರುವ ಸ್ಥಳಗಳಿಗೆ ಹೋಗಿ ನೀರು ಮತ್ತು ತಿಂಡಿಯನ್ನು ನೀಡುತ್ತಾರೆ. ಹೀಗಾಗಿ ಅವರಿಂದ ನಮಗೆ ತುಂಬಾ ಸಹಾಯವಾಗುತ್ತಿದೆ ಎಂದು ಕಾನ್‍ಸ್ಟೆಬಲ್ ಹೇಳಿದರು.
ನನ್ನ ಗಳಿಕೆಯಿಂದ ಪೊಲೀಸ್ ಸಿಬ್ಬಂದಿಗೆ ಒಂದು ಭಾಗವನ್ನು ಖರ್ಚು ಮಾಡುತ್ತಿದ್ದೇನೆ. ಅವರು ಕೊರೊನಾ ವೈರಸ್‍ನಿಂದ ಕಾಪಾಡಲು ನಮಗಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅವರಿಗೆ ಊಟ ಖರೀದಿಸುವಷ್ಟು ಹಣ ನನ್ನ ಬಳಿ ಹಣವಿಲ್ಲ. ಹೀಗಾಗಿ ನಾನು ಬಾಳೆಹಣ್ಣು ಅಥವಾ ಸೋಡಾ ಕೊಡುತ್ತಿದ್ದೇನೆ ಎಂದು ಗಿರೀಶ್ ಹೇಳಿದ್ದಾರೆ.