Tag: kerala

  • ಲಾಕ್‍ಡೌನ್‍ನಲ್ಲಿ ಮನೆಯಲ್ಲಿ ಸ್ನೇಹಿತನಿಗೆ ಜಾಗ ಕೊಟ್ಟ ಪತಿ – ಆತನ ಜೊತೆಗೇ ಓಡೋದ್ಲು ಪತ್ನಿ

    ಲಾಕ್‍ಡೌನ್‍ನಲ್ಲಿ ಮನೆಯಲ್ಲಿ ಸ್ನೇಹಿತನಿಗೆ ಜಾಗ ಕೊಟ್ಟ ಪತಿ – ಆತನ ಜೊತೆಗೇ ಓಡೋದ್ಲು ಪತ್ನಿ

    – ಕೊರೊನಾ ಸಂಕಷ್ಟದಲ್ಲಿ ಸಹಾಯ ಮಾಡಿದ್ದೆ ತಪ್ಪಾಯ್ತು
    – 2 ತಿಂಗಳ ಪ್ರೀತಿಗಾಗಿ 20 ವರ್ಷದ ಸ್ನೇಹಕ್ಕೆ ಮೋಸ

    ತಿರುವನಂತಪುರಂ: ವಿಶ್ವವ್ಯಾಪಿ ಅಟ್ಟಹಾಸ ಮೆರೆಯುತ್ತಾ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿರುವ ಕೊರೊನಾ ವೈರಸ್ ಕರಿನೆರಳು ಈಗ ವೈವಾಹಿಕ ಸಂಬಂಧಗಳ ಮೇಲೂ ಬಿದ್ದಿದೆ. ಕೊರೊನಾ ಲಾಕ್‍ಡೌನ್‍ನಿಂದ ಊರಿಗೆ ಹೋಗಲು ಸಾಧ್ಯವಾಗದೆ ಪರದಾಡುತ್ತಿದ್ದ ಸ್ನೇಹಿತನಿಗೆ ವ್ಯಕ್ತಿಯೋರ್ವ ತನ್ನ ಮನೆಯಲ್ಲಿಯೇ ಆಶ್ರಯ ಕೊಟ್ಟಿದ್ದ. ಆದರೆ ಸ್ನೇಹಿತ ಮಾತ್ರ ವ್ಯಕ್ತಿಯ ಪತ್ನಿಯನ್ನೇ ಪ್ರೀತಿಸಿ ಆಕೆಯ ಜೊತೆ ಓಡಿಹೋಗಿದ್ದಾನೆ.

    ಕೇರಳದ ಇಡುಕ್ಕಿ ಜಿಲ್ಲೆಯ 32 ವರ್ಷದ ಲೋಥಾರಿಯೋ ಎರ್ನಾಕುಲಂನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಮಾರ್ಚ ತಿಂಗಳಲ್ಲಿ ಲಾಕ್‍ಡೌನ್ ಫೋಷಿಸಿದ ವೇಳೆ ಊರಿಗೆ ವಾಪಸ್ ಹೋಗಲು ಆಗದೆ ಮುವಾಟ್ಟುಪುಳದಲ್ಲಿ ಸಿಲುಕಿಕೊಂಡಿದ್ದ. ಆಗ ವ್ಯಕ್ತಿಗೆ 20 ವರ್ಷದ ನಂತರ ಆತನ ಬಾಲ್ಯದ ಸ್ನೇಹಿತನ ಸಂಪರ್ಕ ಸಿಕ್ಕಿತು. ಮುವಾಟ್ಟುಪುಳದಲ್ಲಿ ಇದ್ದ ಸ್ನೇಹಿತನನ್ನು ಸಂಪರ್ಕಿಸಿ ಸಹಾಯ ಕೇಳಿದ್ದನು.

    ಈ ವೇಳೆ ಸ್ನೇಹಿತ ಆತನಿಗೆ ತನ್ನ ಮನೆಯಲ್ಲಿಯೇ ಇರಲು ಆಶ್ರಯ ಕೊಟ್ಟಿದ್ದನು. ಸ್ನೇಹಿತನ ಮನೆಯಲ್ಲಿ ಆತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ವಾಸವಾಗಿದ್ದನು. ಏಪ್ರಿಲ್ ಅಂತ್ಯದವರೆಗೂ ಊಟ ವಸತಿ ನೀಡಿದ್ದನು. ಆದರೆ ಏಪ್ರಿಲ್ ನಂತರ ಎರ್ನಾಕುಲಂ ಕೊರೊನಾ ಮುಕ್ತವಾಗಿ ಗ್ರೀನ್ ಝೋನ್‍ಗೆ ಬಂದಿತ್ತು. ಹೀಗಾಗಿ ಅಲ್ಲಿ ಲಾಕ್‍ಡೌನ್ ಸೆಡಿಲಿಕೆ ಮಾಡಲಾಗಿತ್ತು. ಆದರೂ ಲೋಥಾರಿಯೋ ವಾಪಸ್ ತೆರಳದಿದ್ದಾಗ ಸ್ನೇಹಿತನಿಗೆ ಅನುಮಾನ ಮೂಡಿತ್ತು. ಆ ಬಳಿಕ ಸ್ವಲ್ಪ ದಿನದಲ್ಲೇ ಲೋಥಾರಿಯೋ ಸ್ನೇಹಿತನ ಪತ್ನಿ ಜೊತೆ ಇಬ್ಬರು ಮಕ್ಕಳನ್ನು ಕರೆದುಕೊಂಡು ಓಡಿ ಹೋಗಿದ್ದನು. ಆಗ ಸ್ನೇಹಿತನ ಜೊತೆ ತನ್ನ ಪತ್ನಿ ಓಡಿಹೋಗಿರುವುದಾಗಿ ಪತಿ ಪೊಲೀಸರಿಗೆ ದೂರು ನೀಡಿದ್ದನು.

    ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದಾಗ ಓಡಿ ಹೋಗಿದ್ದ ಲೋಥಾರಿಯೋ ಸ್ನೇಹಿತನ ಪತ್ನಿ ಹಾಗೂ ಮಕ್ಕಳ ಜೊತೆ ವಾಪಸ್ ಬಂದಿದ್ದ. ಈ ವೇಳೆ ಸ್ನೇಹಿತ ತನ್ನ ಪತ್ನಿಯನ್ನು ಕ್ಷಮಿಸಿ ಮಕ್ಕಳೊಂದಿಗೆ ಮನೆಗೆ ಕರೆದುಕೊಂಡು ಹೋಗಿದ್ದನು. ಆದರೆ ಕಳೆದ ವಾರ ಮತ್ತೆ ಮಕ್ಕಳನ್ನು ಕರೆದುಕೊಂಡು ಪತ್ನಿ ಲೋಥಾರಿಯೋ ಜೊತೆ ಪತಿ ತನ್ನ ಹೆಸರಲ್ಲಿ ಖರೀದಿಸಿದ್ದ ಕಾರಿನಲ್ಲಿಯೇ ಓಡಿಹೋಗಿದ್ದಾಳೆ. ಮನೆಯಲ್ಲಿದ್ದ ತನ್ನ ಬಂಗಾರದ ಒಡವೆಗಳನ್ನು ದೋಚಿಕೊಂಡು ಪ್ರೇಮಿ ಜೊತೆ ಪರಾರಿಯಾಗಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

  • ಮಲೆನಾಡಿಗೆ ತಬ್ಲಿಘಿ, ಮುಂಬೈ ನಂತರ ಕೇರಳ, ಆಂಧ್ರದವರ ಕಂಟಕ

    ಮಲೆನಾಡಿಗೆ ತಬ್ಲಿಘಿ, ಮುಂಬೈ ನಂತರ ಕೇರಳ, ಆಂಧ್ರದವರ ಕಂಟಕ

    – ಮಲೆನಾಡು ಜಿಲ್ಲೆಯಲ್ಲಿ ಹೆಚ್ಚಿದ ಕೊರೊನಾ ಸೋಂಕಿತರ ಸಂಖ್ಯೆ
    – ಒಂದೇ ದಿನ 10 ಪಾಸಿಟಿವ್ ಪ್ರಕರಣಗಳು ಪತ್ತೆ
    – ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯದ ಜನರಿಗಿಲ್ಲ ಪ್ರವೇಶ

    ಶಿವಮೊಗ್ಗ: ಕಳೆದ ಒಂದೂವರೆ ತಿಂಗಳಿನಿಂದ ಗ್ರೀನ್ ಜೋನ್ ನಲ್ಲಿದ್ದ ಶಿವಮೊಗ್ಗಕ್ಕೆ ಇದೀಗ ಸಿಡಿಲಾಘಾತವಾಗಿದ್ದು, ಒಂದೇ ದಿನ 10 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 14ರಿಂದ ಒಂದೇ ಬಾರಿಗೆ ಏರಿಕೆ ಕಂಡಿದ್ದು, 24ಕ್ಕೆ ಏರಿದೆ. ಹೀಗಾಗಿ ಹೊರ ರಾಜ್ಯಗಳಿಂದ ಶಿವಮೊಗ್ಗಕ್ಕೆ ಬರುವವರಿಗೆ ನೋ ಎಂಟ್ರಿ ಎನ್ನಲಾಗಿದ್ದು, ಇನ್ನು 167 ಮಂದಿಯ ಫಲಿತಾಂಶ ಬರುವುದು ಬಾಕಿ ಇದೆ.

    ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಇತರೆ ಜಿಲ್ಲೆಗಳ ಕೊರೊನಾ ಸೋಂಕಿತರ ಸಂಖ್ಯೆ ಕಂಡು ಆತಂಕದಲ್ಲಿದ್ದ ಮಲೆನಾಡಿನ ಜನತೆಗೆ ಇದೀಗ ಸಿಡಿಲಾಘಾತವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಒಂದೇ ಬಾರಿಗೆ ಸೋಂಕು ಪೀಡಿತರ ಸಂಖ್ಯೆ 24ಕ್ಕೆ ಏರಿಕೆಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಅದರಲ್ಲೂ ಸೋಮವಾರ ಸಂಜೆಯವರೆಗೂ ಕೇವಲ 14 ಸೋಂಕಿತರ ಸಂಖ್ಯೆ ಇದ್ದು, ರಾತ್ರಿ ಬಳಿಕ 10 ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ. ಈ ಮೊದಲು ತಬ್ಲಿಘಿಗಳು ನಂತರ ಮುಂಬೈನಿಂದ ಬಂದವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇದೀಗ ಹೊಸದಾಗಿ ಕೇರಳ ಹಾಗೂ ಆಂಧ್ರಪ್ರದೇಶದಿಂದ ಬಂದವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

    ಸ್ಥಳೀಯರಲ್ಲೂ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಾಳೆಕೊಪ್ಪ, ತೀರ್ಥಹಳ್ಳಿಯ ಹಳ್ಳಿಬೈಲು ಹಾಗೂ ಶಿಕಾರಿಪುರದ ತರಲಘಟ್ಟ ಗ್ರಾಮಗಳನ್ನು ಕಂಟೈನ್ ಮೆಂಟ್ ಜೋನ್‍ಗಳಾಗಿ ಪರಿವರ್ತಿಸಲಾಗಿದೆ. ಜಿಲ್ಲೆಯ ತೀರ್ಥಹಳ್ಳಿಗೆ ಮುಂಬೈ ಮೂಲದಿಂದ ಬಂದಿದ್ದ ಐವರಿಗೆ ಸೋಂಕು ತಗುಲಿರುವುದು ಧೃಢವಾಗಿದ್ದು, ಕೇರಳದಿಂದ ಶಿವಮೊಗ್ಗಕ್ಕೆ ಬಂದಿದ್ದ ಸೂಳೆಬೈಲು ಬಡಾವಣೆಯ ಇಬ್ಬರು ನಿವಾಸಿಗಳು ಹಾಗೂ ಆಂಧ್ರ ಮೂಲದ ಓರ್ವ ವ್ಯಕ್ತಿಗೆ ಸೋಂಕು ಧೃಢವಾಗಿದೆ.

    ಇನ್ನೂ ಆಘಾತಕಾರಿ ವಿಚಾರವೆಂದರೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಇಬ್ಬರಿಗೆ ಸೋಂಕು ತಗುಲಿದೆ. ಕುಂಸಿಯ ಬಾಳೆಕೊಪ್ಪ ಗ್ರಾಮದ 63 ವರ್ಷದ ಹಾಲು ವ್ಯಾಪಾರಿ ಮತ್ತು ಶಿಕಾರಿಪುರದ ತರ್ಲಘಟ್ಟ ಗ್ರಾಮದ ಯುವತಿಯೊಬ್ಬಳಿಗೆ ಹೇಗೆ ಸೋಂಕು ತಗುಲಿದೆ ಎಂಬುದೇ ತಿಳಿಯದಾಗಿದೆ. ಈ ಸಂಬಂಧ ಅಧಿಕಾರಿಗಳು ತನಿಖೆ ಸಹ ಕೈಗೊಂಡಿದ್ದಾರೆ. ಇವರಿಬ್ಬರಿಗೆ ಸೋಂಕು ಹೇಗೆ ತಗುಲಿದೆ ಎಂಬುದೇ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

    ಒಟ್ಟಾರೆ ಶಿವಮೊಗ್ಗದಲ್ಲಿ ಪ್ರಸ್ತುತ 916 ಜನ ಸಾಂಸ್ಥಿಕ ಕ್ವಾರೆಂಟೈನ್ ಮತ್ತು 64 ಮಂದಿ ಹೋಮ್ ಕ್ವಾರೆಂಟೈನ್‍ನಲ್ಲಿದ್ದು, ಕ್ವಾರೆಂಟೈನ್ ವ್ಯವಸ್ಥೆಗಾಗಿ 50 ವಸತಿ ಶಾಲೆಗಳು, ಹೊಟೇಲ್‍ಗಳು ಮತ್ತು ಗ್ರಾಮೀಣ ಭಾಗದಲ್ಲಿ 7 ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪಾಸಿಟಿವ್ ಬಂದ ಪ್ರಕರಣಗಳಿಗೆ ಸಂಬಂಧಿಸಿದಂತೆ 67 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ 150 ಮಂದಿ ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಕ್ವಾರೆಂಟೈನ್ ಮಾಡಲಾಗಿದೆ.

  • ಕೊರೊನಾ ಆತಂಕದ ಮಧ್ಯೆ ಚಂಡಮಾರುತದ ನಡುಕ

    ಕೊರೊನಾ ಆತಂಕದ ಮಧ್ಯೆ ಚಂಡಮಾರುತದ ನಡುಕ

    ಬೆಂಗಳೂರು: ಡೆಡ್ಲಿ ಕೊರೊನಾ ಮಧ್ಯೆ ಇದೀಗ ರಾಜ್ಯದಲ್ಲಿ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ.

    ಕೇರಳದ ಹಲವು ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಮೇ 17ರೊಳಗೆ ಆಮ್‍ಫಾನ್ ಚಂಡಮಾರುತದಿಂದ ಭಾರೀ ಮಳೆಯಾಗಲಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮೇ 15 ಮತ್ತು 16ರಂದು ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

    ಮೇ 18ರಂದು ಈ ಆಮ್‍ಫಾನ್ ಚಂಡಮಾರುತದ ಅಬ್ಬರ ಹೆಚ್ಚಾಗಲಿದ್ದು, ಒಂದು ಗಂಟೆಗೆ 172 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಅಲ್ಲದೆ ಬಂಗಾಳಕೊಲ್ಲಿಯಲ್ಲಿ ಮೇ 15ರಂದು ಪ್ರತಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಕೇರಳಕ್ಕೆ ಇದರ ನೇರ ಪರಿಣಾಮ ಬೀರುವುದಿಲ್ಲ. ಆದರೆ ಮೇ 17ರಂದು ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ. ಒಟ್ಟು 13 ದೇಶಗಳಿಗೆ ಈ ಚಂಡಮಾರುತ ಪರಿಣಾಮ ಬೀರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

    ಮೇ 16ರಿಂದ ಚಂಡಮಾರುತದ ಅಬ್ಬರ ಹೆಚ್ಚಾಗಲಿದ್ದು, ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ ಜೂನ್ 21ರ ವರೆಗೆ ಮಳೆ ತರುತ್ತದೆ. ಅಲ್ಲದೆ ಇದರ ಪ್ರಭಾವ ಜುಲೈ ಹಾಗೂ ಅಕ್ಟೋಬರ್ ವರೆಗೆ ಮುಂದುವರಿಯಲಿದೆ. ಇದೇ ಚಂಡಮಾರುತ ಮಾನ್ಸೂನ್ ಹೊತ್ತು ಬರಲಿದ್ದು, ಹೀಗಾಗಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಈಗಾಗಲೇ ಕೊಡಗು, ಬೆಳಗಾವಿ, ಉಡುಪಿಯಲ್ಲಿ ವರುಣನ ಅಬ್ಬರ ಪ್ರಾರಂಭವಾಗಿದೆ.

  • ಸಹೋದರಿ ಸೇರಿ ಆಕೆಯ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ – ಪೊಲೀಸರಿಗೆ 8ರ ಪೋರನಿಂದ ದೂರು

    ಸಹೋದರಿ ಸೇರಿ ಆಕೆಯ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ – ಪೊಲೀಸರಿಗೆ 8ರ ಪೋರನಿಂದ ದೂರು

    – ಬಾಲಕನ ಮನೆಗೆ ಬಂದು ಪ್ರಕರಣ ಬಗೆಹರಿಸಿದ ಪೊಲೀಸರು

    ತಿರುವಂತಪುರಂ: ನನ್ನ ಸಹೋದರಿ ಸೇರಿ ಆಕೆಯ ನಾಲ್ಕು ಜನ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ ಎಂದು 8 ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೇರಳದ ಉಮಾರ್ ನಿಧಾರ್ ಕೋವಿಡ್ 19 ಲಾಕ್‍ಡೌನ್ ವೇಳೆ ತನ್ನ ಜೊತೆ ಆಟವಾಡಲು ಬಾರದಕ್ಕೆ ಸಹೋದರಿ ಮತ್ತು ಆಕೆಯ ನಾಲ್ಕು ಜನ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ ಎಂದು ಕಂಪ್ಲೇಟ್ ಕೊಟ್ಟಿದ್ದಾನೆ. ಇವರು ಲಾಕ್‍ಡೌನ್ ಎಂದು ನನ್ನ ಜೊತೆ ಲುಡೋ, ಶೆಟಲ್ ಕಾಕ್ ಮತ್ತು ಕಳ್ಳ ಪೊಲೀಸ್ ಆಟವಾಡಲು ಬರುತ್ತಿಲ್ಲ ಎಂದು ದೂರಿದ್ದಾನೆ.

    ಲಾಕ್‍ಡೌನ್ ಇರುವ ಕಾರಣ ಉಮಾರ್ ಜೊತೆ ಯಾರು ಆಟವಾಡಲು ಬಂದಿಲ್ಲ. ಜಗಳ ನಡೆದಾಗ ನೀನು ಹುಡುಗ ನಮ್ಮ ಜೊತೆ ಆಟವಾಡಬೇಡ ಎಂದು ಆತನ ಸಹೋದರಿ ಸಿಟ್ಟಿನಲ್ಲಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಉಮಾರ್ ಮೊದಲು ತನ್ನ ತಂದೆಯ ಬಳಿ ದೂರು ನೀಡಿದ್ದಾನೆ. ಈ ವೇಳೆ ತಂದೆ ತಮಾಷೆಗೆ ಅವರ ವಿರುದ್ಧ ಪೊಲೀಸರಲ್ಲಿ ದೂರು ನೀಡು ಎಂದಿದ್ದಾರೆ. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಮುಗ್ಧ ಬಾಲಕ ಪೊಲೀಸರಿಗೆ ದೂರು ನೀಡಿದ್ದಾನೆ.

    ಮೇ 10ರಂದು ಯಾವುದೋ ಬೇರೆ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಪೊಲೀಸ್ ಅಧಿಕಾರಿಗಳು ಉಮಾರ್ ನಿಧಾರ್ ಮನೆಯ ಹತ್ತಿರ ಬಂದಿದ್ದಾರೆ. ಈ ವೇಳೆ ಈ ಪೋರ ತನ್ನ ಕೈಯಾರೆ ಇಂಗ್ಲಿಷ್‍ನಲ್ಲಿ ದೂರನ್ನು ಬರೆದು ಪೊಲೀಸರಿಗೆ ನೀಡಿದ್ದಾನೆ. ಆಗ ಸ್ವಲ್ಪ ಬ್ಯುಸಿ ಇದ್ದ ಪೊಲೀಸರು ಲೆಟರ್ ತೆಗೆದುಕೊಂಡು ಹೋಗುತ್ತಾರೆ. ಆದರೆ ನಂತರ ಆ ಲೆಟರ್ ಓದಿ ಮತ್ತೆ ಆತನ ಮನೆಗೆ ಬಂದು ಅವನ ಸಮಸ್ಯೆ ಬಗೆಹರಿಸಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸಿವಿಲ್ ಪೊಲೀಸ್ ಅಧಿಕಾರಿ ಉಮೇಶ್, ಆತ ಕಂಪ್ಲೇಟ್ ಕೊಟ್ಟಾಗ ತಡವಾಗಿದ್ದ ಕಾರಣ ನಾವು ವಾಪಸ್ ಹೋಗಿದ್ದೇವು. ಆದರೆ ನಂತರ ಬೆಳಗ್ಗೆ ವಾಪಸ್ ಬಂದು ಸಮಸ್ಯೆ ಬಗೆಹರಿಸಿದ್ದೇವೆ. ಅವರ ಸಹೋದರಿ ಮತ್ತು ಆಕೆಯ ಸ್ನೇಹಿತರನ್ನು ಕರೆದು ಮುಂದಿನ ಬಾರಿ ಆಟವಾಡಲು ಹೋದಾಗ ಉಮಾರ್ ನನ್ನು ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.

    ಆಗ ಸ್ಥಳದಲ್ಲೇ ಇದ್ದ ಉಮಾರ್ ಇಲ್ಲ ನಾನು ಬಹಳ ಬಾರಿ ಅವರಿಗೆ ನನ್ನ ಆಟವಾಡಲು ಕರೆದುಕೊಂಡು ಹೋಗಿ ಎಂದು ಹೇಳಿದ್ದೇನೆ ಆದರೆ ಅವರಂತು ಕರೆದುಕೊಂಡು ಹೋಗಲ್ಲ ಎಂದಿದ್ದಾನೆ. ಆದರೆ ಪೊಲೀಸರು ಇಲ್ಲ ನಾವು ಅವರಿಗೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ. ಆಗ ಅವರ ಸಹೋದರಿ ಅವನು ಈ ರೀತಿ ದೂರು ನೀಡುತ್ತಾನೆ ಎಂದು ನಾನು ಊಹಿಸಿರಲಿಲ್ಲ. ಮುಂದಿನ ಬಾರಿ ಆಟವಾಡಲು ಖಂಡಿತ ಕರೆದುಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದ್ದಾಳೆ.

  • ಭಾರತದಲ್ಲಿ ಕಿಲ್ಲರ್ ಕೊರೊನಾಗೆ 2,415 ಮಂದಿ ಬಲಿ – 74 ಸಾವಿರ ಗಡಿದಾಟಿತ ಸೋಂಕಿತರ ಸಂಖ್ಯೆ

    ಭಾರತದಲ್ಲಿ ಕಿಲ್ಲರ್ ಕೊರೊನಾಗೆ 2,415 ಮಂದಿ ಬಲಿ – 74 ಸಾವಿರ ಗಡಿದಾಟಿತ ಸೋಂಕಿತರ ಸಂಖ್ಯೆ

    – 24,453 ಮಂದಿ ಸೋಂಕಿನಿಂದ ಗುಣಮುಖ

    ನವದೆಹಲಿ: ವಿಶ್ವವ್ಯಾಪಿ ಹರಡಿರುವ ಕಿಲ್ಲರ್ ಕೊರೊನಾ ವೈರಸ್‍ಗೆ ಭಾರತದಲ್ಲಿ ಬರೋಬ್ಬರಿ 2,415 ಮಂದಿ ಬಲಿಯಾಗಿದ್ದಾರೆ. ಈವರೆಗೆ 74,292 ಮಂದಿ ಸೋಂಕಿಗೆ ತುತ್ತಾಗಿದ್ದು, 24,453 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

    ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತದಲ್ಲಿ ಮಾರ್ಚ್ 24ರಿಂದ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಮೇ 17 ರಂದು ಮುಗಿಯಬೇಕಿದ್ದ ಲಾಕ್‍ಡೌನ್ ಅವಧಿಯನ್ನು ವಿಸ್ತರಿಸುವ ಸಾಧ್ಯತೆ ಇದೆ. ಲಾಕ್‍ಡೌನ್ 4.0 ಈವರೆಗೆ ಇದ್ದ ಲಾಕ್‍ಡೌನ್ ನಿಯಮಗಳಿಗಿಂತ ಭಿನ್ನವಾಗಿರಲಿದೆ ಎನ್ನಲಾಗಿದೆ.

    ಮಹಾರಾಷ್ಟ್ರದಲ್ಲಿ ಈವರೆಗೆ ಹೆಚ್ಚು ಕೊರೊನಾ ವೈರಸ್ ಸೋಂಕು ಹರಡಿದ್ದು, 24,427 ಮಂದಿ ಸೋಂಕಿಗೆ ತುತ್ತಾಗಿದ್ದಾರೆ. 5,125 ಮಂದಿ ಕೊರೊನಾದಿಂದ ಈವರೆಗೆ ಗುಣಮುಖರಾಗಿದ್ದು, 921 ಮಂದಿಯನ್ನು ಮಹಾಮಾರಿ ಬಲಿ ಪಡೆದಿದೆ. ಗುಜರಾತ್‍ನಲ್ಲಿ 8,904 ಮಂದಿಗೆ ಸೋಂಕು ತಗುಲಿದ್ದು, 537 ಮಂದಿ ಜೀವ ಕಳೆದುಕೊಂಡಿದ್ದಾರೆ. ತಮಿಳುನಾಡಿನಲ್ಲಿ 8,718 ಮಂದಿ ಸೋಂಕಿಗೆ ತುತ್ತಾಗಿದ್ದು, 61 ಮಂದಿ ಸಾವನ್ನಪ್ಪಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 7,639ಕ್ಕೆ ಏರಿದೆ. 86 ಮಂದಿ ಸಾವನ್ನಪ್ಪಿದ್ದು, 2,512 ಮಂದಿ ಕಿಲ್ಲರ್ ಕೊರೊನಾಗೆ ಬಲಿಯಾಗಿದ್ದಾರೆ.

    ಕರ್ನಾಟಕದಲ್ಲಿ ಈವರೆಗೆ 925 ಮಂದಿಗೆ ಸೋಂಕು ತಗುಲಿದ್ದು, 433 ಮಂದಿ ಕೊರೊನಾಗೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. 31 ಮಂದಿ ಸೋಂಕಿನಿಂದ ಜೀವ ಕಳೆದುಕೊಂಡಿದ್ದಾರೆ. ಅಂತರರಾಜ್ಯ ವಲಸಿಗರಿಂದ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಗ್ರೀನ್ ಝೋನ್‍ನಲ್ಲಿದ್ದ ಜಿಲ್ಲೆಗಳಲ್ಲಿ ಈಗ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ಕೇರಳದಲ್ಲಿ 525 ಮಂದಿ ಈವರೆಗೆ ಕೊರೊನಾಗೆ ತುತ್ತಾಗಿದ್ದು, 4 ಮಂದಿ ಸಾವನ್ನಪ್ಪಿದ್ದಾರೆ. 489 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, 32 ಮಂದಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇತ್ತ ಮಂಗಳವಾರ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿಯ ವಿಶೇಷ ಅರ್ಥಿಕ ಪ್ಯಾಕೇಜ್ ಘೋಷಣೆ ಮಾಡಿ, ಆತ್ಮ ನಿರ್ಭರ ಭಾರತಕ್ಕೆ ಕರೆ ನೀಡಿದ್ದಾರೆ.

  • 4 ವರ್ಷದ ಪ್ರೀತಿ, ಒಂದೂವರೆ ತಿಂಗಳು ವರನ ಮನೆಯಲ್ಲೇ ಕ್ವಾರಂಟೈನ್, ಬಳಿಕ ಮದುವೆ!

    4 ವರ್ಷದ ಪ್ರೀತಿ, ಒಂದೂವರೆ ತಿಂಗಳು ವರನ ಮನೆಯಲ್ಲೇ ಕ್ವಾರಂಟೈನ್, ಬಳಿಕ ಮದುವೆ!

    ಕೋಝಿಕ್ಕೋಡ್: ಮದುವೆ ಮಾಡಿಕೊಳ್ಳಲು ವರನ ಊರಿಗೆ ಬಂದ ವಧು ಹಾಗೂ ಆಕೆಯ ಸಂಬಂಧಿಕರು ವರನ ಮನೆಯಲ್ಲೇ ಒಂದೂವರೆ ತಿಂಗಳ ಕಾಲ ಕ್ವಾರಂಟೈನ್‍ಗೆ ಒಳಗಾಗಿ, ಕೊನೆಗೂ ಮದುವೆಯಾಗಿದ್ದಾರೆ. ಈ ವಿಚಿತ್ರ ಸನ್ನಿವೇಶಕ್ಕೆ ಕೇರಳ ಸಾಕ್ಷಿಯಾಗಿದೆ. ಕಳೆದ ಶುಕ್ರವಾರ ಈ ಮದುವೆ ಕೇರಳ ಸರ್ಕಾರದ ಕೋವಿಡ್-19 ನಿಯಮಾವಳಿಗಳ ಪ್ರಕಾರವೇ ನೆರವೇರಿದೆ.

    ಕುಂಡುಪರಂಬ್ ಉಜ್ವಲ್ ಕೃಷ್ಣ ನಿವಾಸದ ರಾಜನ್ ಪುತ್ತನ್‍ಪುರ – ಅನಿತಾ ರಾಜನ್ ಎಂಬವರ ಪುತ್ರ ಉಜ್ವಲ್ ರಾಜ್ ಹಾಗೂ ಮುಂಬೈ ನಿವಾಸಿ ಹೇತಲ್ ಮೋದಿ ವಿವಾಹ ಶುಕ್ರವಾರ ಸರಳವಾಗಿ ನಡೆಯಿತು.

    ಲವ್, ಕ್ವಾರಂಟೈನ್, ಮದುವೆ!: ಇವರಿಬ್ಬರೂ 4 ವರ್ಷದಿಂದ ಪ್ರೀತಿಸುತ್ತಿದ್ದರು. ಆಸ್ಟ್ರೇಲಿಯಾದ ಖಾಸಗಿ ಕಂಪೆನಿಯೊಂದರಲ್ಲಿ ಉಜ್ವಲ್ ಕೆಲಸ ಮಾಡುತ್ತಿದ್ದರೆ, ವಧು ಮುಂಬೈನ ಖಾಸಗಿ ಕಂಪೆನಿಯಲ್ಲಿ ಐಟಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ. 2015-16ರಲ್ಲಿ ಲಂಡನ್‍ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಇವರಿಬ್ಬರಿಗೂ ಲವ್ ಆಗಿದೆ.

    ಈ ಹಿಂದೆಯೇ ನಿಗದಿಯಾಗಿರುವಂತೆ ಏಪ್ರಿಲ್ 5ರಂದು ಹಿಲ್ ಟಾಪ್ ಆಡಿಟೋರಿಯಂನಲ್ಲಿ ವಿವಾಹ ನಡೆಯಬೇಕಿತ್ತು. ಜೊತೆಗೆ 1 ಸಾವಿರಕ್ಕೂ ಹೆಚ್ಚು ಜನರಿಗೆ ಆಹ್ವಾನವೂ ಹೋಗಿತ್ತು. ಮದುವೆಗೆ ಇನ್ನೇನು ಒಂದು ವಾರ ಬಾಕಿ ಇರುವಾಗ ಆಸ್ಟ್ರೇಲಿಯಾದಿಂದ ಕೇರಳಕ್ಕೆ ಬರಲು ಉಜ್ವಲ್ ಪ್ಲ್ಯಾನ್ ಮಾಡಿದ್ದರು. ಹೀಗಿದ್ದಾಗಲೇ ಕೇರಳದಲ್ಲಿ ಕೊರೋನಾ ಸೋಂಕು ವ್ಯಾಪಿಸಲು ಆರಂಭವಾಗಿತ್ತು. ಹೀಗಾಗಿ ಊರಿಗೆ ಬಂದರೆ ಕ್ವಾರಂಟೈನ್‍ನಲ್ಲಿರಲೇಬೇಕು ಎನ್ನುವುದನ್ನು ಮನಗಂಡು ಮಾರ್ಚ್ 17ಕ್ಕೇ ಉಜ್ವಲ್ ಕೇರಳದಲ್ಲಿರೋ ತಮ್ಮ ಮನೆ ಸೇರಿದ್ರು. ನಿಯಮಗಳ ಪ್ರಕಾರ ಈ ಮಾಹಿತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿ ಹೋಮ್ ಕ್ವಾರಂಟೈನ್ ಶುರುವಾಯ್ತು.

    ವಧುವಿಗೆ ವರನ ಮನೆಯಲ್ಲೇ ಕ್ವಾರಂಟೈನ್!: ಇದೇ ವೇಳೆ ಮುಂಬೈಯಿಂದ ಬರುವ ವಧು ಕೂಡಾ 14 ದಿನ ಕ್ವಾರಂಟೈನ್‍ಗೆ ಒಳಗಾಗಲೇಬೇಕು ಬೇಕು ಎಂದು ಅಧಿಕಾರಿಗಳು ಹೇಳಿದ್ರು. ಹೀಗಾಗಿ ಮದುವೆಗೆ ಹಿಂದಿನ ದಿನ ಕ್ವಾರಂಟೈನ್ ಮುಗಿಯೋ ರೀತಿಯಲ್ಲಿ ಹೇತಲ್ ಮೋದಿ ಹಾಗೂ ತಾಯಿ ಚೇತನಾ ತಮ್ಮ ಪ್ರಯಾಣ ಬದಲಾಯಿಸಿದರು. ಅದರಂತೆ ಮಾರ್ಚ್ 23ರಂದು ಹೇತಲ್ ಮೋದಿ ಹಾಗೂ ಆಕೆಯ ತಾಯಿ ಚೇತನಾ ಮೋದಿ ಕೋಝಿಕ್ಕೋಡ್‍ಗೆ ತಲುಪಿದರು. ಇವರು ಕೂಡಾ ಉಜ್ವಲ್ ಮನೆಯಲ್ಲಿಯೇ ಕ್ವಾರಂಟೈನ್ ವಾಸಕ್ಕೊಳಗಾದರು. ಆದರೆ ಮಾರ್ಚ್ 24ರಂದು ದೇಶಾದ್ಯಂತ ಕೇಂದ್ರದ ಮೋದಿ ನೇತೃತ್ವದ ಸರ್ಕಾರದಿಂದ ಲಾಕ್‍ಡೌನ್ ಘೋಷಣೆಯಾಯಿತು.

    ಕ್ವಾರಂಟೈನ್‍ನಲ್ಲಿದ್ದ ಎಲ್ಲಾ ದಿನಗಳಲ್ಲೂ ಕೇರಳದ ಅಧಿಕಾರಿಗಳು ಫೋನ್ ಮಾಡಿ ಇವರ ಯೋಗ ಕ್ಷೇಮ ವಿಚಾರಿಸುತ್ತಿದ್ದರು. ಈ ನಡುವೆಯೇ ವಿದೇಶದಿಂದ ಬಂದವರು 14 ದಿನಗಳ ಬದಲು 28 ದಿನಗಳ ಕಡ್ಡಾಯ ಕ್ವಾರಂಟೈನ್‍ನಲ್ಲಿರಬೇಕು ಎಂದು ಸರ್ಕಾರ ಆದೇಶ ಹೊರಡಿಸಿತು. ಅದರಂತೆ 28 ದಿನಗಳ ಕ್ವಾರಂಟೈನ್ ಕೂಡಾ ಮುಗಿಯಿತು. ಈ ವೇಳೆಗಾಗಲೇ ಲಾಕ್‍ಡೌನ್ ಸಡಿಲಿಕೆ ಶುರುವಾಗಿತ್ತು. ಇನ್ನು ಮದುವೆ ವಿಳಂಬ ಮಾಡೋದು ಬೇಡ ಎಂದು ಕೇವಲ 15 ಜನರ ಸಮ್ಮುಖದಲ್ಲಿ ಉಜ್ವಲ್ – ಹೇತಲ್ ಮೋದಿ ಮದ್ವೆಯಾದರು.

    ಲಾಕ್‍ಡೌನ್ ಕಾಲದಲ್ಲಿ ಕೇರಳದ ಆಹಾರ ವಧು ಹಾಗೂ ಆಕೆಯ ಅಮ್ಮನಿಗೆ ಇಷ್ಟದ ಖಾದ್ಯಗಳಾಗಿ ಬದಲಾಯಿತು. ಹಲಸಿನ ಕಾಯಿ ಹಾಗೂ ಹಲಸಿನ ಹಣ್ಣಿನಿಂದ ಮಾಡಿದ ತಿಂಡಿಗಳು, ಮರಗೆಣಸಿನ ತಿನಿಸುಗಳು ಇವರಿಗೆ ಪ್ರಿಯವಾದವು.

    ಮದುವೆಗೂ ಮುಂಚೆ ಉತ್ತರಭಾರತ ಶೈಲಿಯಲ್ಲಿ ಅರಿಶಿಣ, ಮದರಂಗಿ ಶಾಸ್ತ್ರವೂ ನಡೆಯಿತು. ಇದರಲ್ಲಿ ಕೇವಲ 6 ಮಂದಿ ಮಾತ್ರ ಭಾಗವಹಿಸಿದ್ದರು. ಮದುವೆಗೆ ಬರಲು ಸಾಧ್ಯವಾಗದವರಿಗೆ ಝೂಮ್ ಲಿಂಕ್ ಐಡಿ ಹಾಗೂ ಪಾಸ್ ವರ್ಡ್ ನೀಡಿ ಅವರಿದ್ದಲ್ಲೇ ಮದುವೆ ನೋಡುವ ವ್ಯವಸ್ಥೆಯನ್ನೂ ಉಜ್ವಲ್ ಮಾಡಿದ್ದರು.

  • ಕೇರಳದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ- 63ನೇ ವಯಸ್ಸಿನಲ್ಲಿ ಶೈಲಜಾ ಕಾರ್ಯಕ್ಕೆ ಜನಮೆಚ್ಚುಗೆ

    ಕೇರಳದಲ್ಲಿ ನಿಯಂತ್ರಣಕ್ಕೆ ಬಂದ ಕೊರೊನಾ- 63ನೇ ವಯಸ್ಸಿನಲ್ಲಿ ಶೈಲಜಾ ಕಾರ್ಯಕ್ಕೆ ಜನಮೆಚ್ಚುಗೆ

    – ಹಾಟ್‍ಸ್ಟಾಟ್ ಕೇರಳದಲ್ಲಿ ಸೋಂಕು ಹಿಡಿತಕ್ಕೆ ಬರಲು ಕಾರಣವೇನು?
    – ಕೇರಳದ 8 ಜಿಲ್ಲೆಗಳು ಕೊರೊನಾ ರಹಿತ

    ತಿರುವನಂತಪುರಂ: ಭಾರತದಲ್ಲಿ ಮೊದಲ ಕೊರೊನಾ ಪ್ರಕರಣ ದಾಖಲಾಗಿದ್ದ ಕೇರಳದಲ್ಲಿ ಈಗ ಕೊರೊನಾ ಹಿಡಿತಕ್ಕೆ ಬಂದಿದೆ. ಕೊರೊನಾ ವೈರಸ್ ನ ಹಾಟ್‍ಸ್ಟಾಟ್ ಆಗಿದ್ದ ಕೇರಳ ಅಲ್ಲಿನ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ದಿಟ್ಟ ಕಾರ್ಯದಿಂದ ಕೊರೊನಾ ಮುಕ್ತವಾಗುತ್ತಿದೆ.

    ಕಳೆದ ವರ್ಷ ಡಿಸೆಂಬರ್ ನಲ್ಲಿ ಚೀನಾದ ವುಹಾನ್ ಪ್ರದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಇಂದು ವಿಶ್ವಕ್ಕೆ ಮಹಾಮಾರಿಯಾಗಿ ಕಾಡುತ್ತಿದೆ. ಭಾರತದಲ್ಲಿ ಈ ಸೋಂಕು ಮೊದಲಿಗೆ ಕಾಣಿಸಿಕೊಂಡಿದ್ದು ಕೇರಳದಲ್ಲಿ, ಚೀನಾದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗೆ ಈ ಸೋಂಕು ಜನವರಿ 30ರಂದು ಭಾರತದಲ್ಲಿ ಮೊದಲಿಗೆ ಪತ್ತೆಯಾಗಿತ್ತು. ಇದಾದ ನಂತರ ಕೇರಳ ಕೊರೊನಾ ಹಾಟ್‍ಸ್ಟಾಟ್ ಆಗಿತ್ತು.

    ಈ ಹಿಂದೆಯಿಂದಲೂ ಈ ರೀತಿಯ ಪರಿಸ್ಥಿತಿಯನ್ನು ಬಹಳ ಎದುರಿಸಿದ್ದ ಕೇರಳ, ನಿಫಾ, ಹೆಚ್1ಎನ್1, ಚಿಕನ್‍ಗುನ್ಯಾನಂತಹ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿ ಗೆದ್ದಿತ್ತು. ಈ ಅನುಭವದಿಂದಲೇ ಕೇರಳ ಜನವರಿ 24ರಂದೇ ಕೊರೊನಾ ಕಂಟ್ರೋಲ್ ರೂಂ ಅನ್ನು ಓಪನ್ ಮಾಡಿತ್ತು. ಭಾರತದಲ್ಲಿ ಕೊರೊನಾ ಪ್ರಭಾವ ಹೆಚ್ಚಾಗುವುದಕ್ಕೂ ಮುನ್ನವೇ ಜನರನ್ನು ಐಸೋಲೇಟ್ ಮಾಡಲು ಶುರು ಮಾಡಿತ್ತು. ಜೊತೆಗೆ ಎನ್ 95 ಮಾಸ್ಕ್ ಗಳು ಮತ್ತು ಪಿಪಿಇ ಕಿಟ್‍ಗಳ ಖರೀದಿಗೆ ಮುಂದಾಗಿತ್ತು.

    ದಿಟ್ಟ ನಿರ್ಧಾರ ತೆಗೆದುಕೊಂಡ ಶೈಲಜಾ:
    ಇಂದು ಕೇರಳದಲ್ಲಿ ಕೊರೊನಾ ಹಿಡಿತಕ್ಕೆ ಬರಲು ಕಾರಣ ಅಲ್ಲಿನ ಕೊರೊನಾ ವಾರಿಯರ್ಸ್ ಮತ್ತು ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರ ದಿಟ್ಟ ನಿರ್ಧಾರಗಳು. ಮೊದಲ ಕೊರೊನಾ ಪ್ರಕರಣ ದಾಖಲಾಗುತ್ತಿದ್ದಂತೆ ಎಚ್ಚೆತ್ತಿದ್ದ ಶೈಲಜಾ ಅವರು, ಮೂರು ಕಾರ್ಯಸೂಚಿಗಳನ್ನು ಜಾರಿಗೆ ತಂದಿದ್ದರು. ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಸ್ನೇಹಿಯಾಗಿರಬೇಕು. ಹೈಟೆಕ್ ಆಗಿರಬೇಕು. ಹಣವಿಲ್ಲದ ಅಥವಾ ಕಡಿಮೆ ದುಡ್ಡಿಗೆ ಚಿಕಿತ್ಸೆ ನೀಡಬೇಕು ಎಂದು ಮೂರು ಕಾರ್ಯಸೂಚಿಗಳನ್ನು ಮಾಡಿಕೊಂಡಿದ್ದರು.

    ಈ ವಿಚಾರದ ಬಗ್ಗೆ ಮಾತನಾಡಿರುವ ಶೈಲಜಾ ಅವರು, ಈ ಸಮಯದಲ್ಲಿ ಪ್ರಾಥಮಿಕ ಆರೋಗ್ಯ ಘಟಕಗಳು ಬಹಳ ಮುಖ್ಯ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಈಗ ನಮ್ಮಲ್ಲಿ ಗ್ರಾಮೀಣ ಪ್ರದೇಶದಲ್ಲೂ ಪರೀಕ್ಷಾ ಪ್ರಯೋಗಾಲಯಗಳನ್ನು ಮಾಡಲಾಗಿದೆ. ಅವು ವಿವಿಧ ರೋಗಗಳನ್ನು ಆರಂಭಿಕವಾಗಿಯೇ ಕಂಡುಹಿಡಿಯಲು ಸಮರ್ಥವಾಗಿವೆ. ನಮ್ಮಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಹೊಸ ಉಪಕರಣಗಳನ್ನು ಹೊಂದಿವೆ ಮತ್ತು ಉತ್ತಮ ಮೂಲಸೌಕರ್ಯಗಳನ್ನು ಹೊಂದಿವೆ ಎಂದು ತಿಳಿಸಿದ್ದಾರೆ.

    2018ರಲ್ಲಿ ನಿಫಾ ವೈರಸ್ ಬಂದಾಗಿನಿಂದ ನಮ್ಮ ಸರ್ಕಾರ ವೈದ್ಯಕೀಯ ಸಿಬ್ಬಂದಿಗೆ ನಿಯಮಿತ ತರಬೇತಿಯನ್ನು ಜಾರಿಗೆ ತಂದಿತು. ಇದು ಈಗ ಕೊರೊನಾ ತಡೆಗಟ್ಟುವಲ್ಲಿ ನಮಗೆ ಸಹಾಯವಾಯಿತು. ನಮ್ಮ ವೈದ್ಯಕೀಯ ಸಿಬ್ಬಂದಿ ಸಾಂಕ್ರಾಮಿಕ ರೋಗದ ವಿರುದ್ಧ ಏಕಾಏಕಿ ತಯಾರಿಗಾಗಿ ಅಣಕು ಡ್ರಿಲ್‍ಗಳನ್ನು ಸಹ ಮಾಡಿದ್ದರು. ಅವರ ಕಾರ್ಯದಿಂದ ನಾವು ಇಂದು ಕೊರೊನಾ ವಿರುದ್ಧ ಪ್ರಬಲವಾಗಿ ಹೋರಾಡುತ್ತಿದ್ದೇವೆ. ನಮ್ಮ ಈ ಕೆಲಸ ಖಂಡಿತವಾಗಿಯೂ ವ್ಯವಸ್ಥೆಯನ್ನು ಬಲಪಡಿಸಿತು ಎಂದು ಹೇಳಿದ್ದಾರೆ.

    ನಾವು ಕೆಲಸ ಮಾಡುವಾಗ ನಾವೇಲ್ಲ ಒಂದೇ ಎಂಬ ಭಾವನೆಯನ್ನು ಮೂಡಿಸಿಕೊಂಡಿದ್ದೆವು. ದಿನ ಕೆಳಮಟ್ಟದ ಆರೋಗ್ಯ ಸಿಬ್ಬಂದಿಯಿಂದ ಹಿಡಿದು ಎಲ್ಲರ ಜೊತೆ ವಿಡಿಯೋ ಕಾನ್ಫೆರೆನ್ಸ್ ಮಾಡುತ್ತಿದ್ದೇವು. ಆಶಾ ಕಾರ್ಯಕರ್ತೆಯರು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ದಿನಲೂ ನಾನು ಮಾತನಾಡುತ್ತಿದ್ದೆ. ಮಾಹಿತಿ ಪಡೆಯುತ್ತಿದ್ದೆ. ನಾವು ಹೀಗೆ ಕೆಳಹಂತದಿಂದ ಮಾಹಿತಿ ಪಡೆದುಕೊಂಡಿದ್ದು, ಕೆಲಸ ಮಾಡಲು ನಮಗೆ ಸಲಭವಾಗತ್ತದೆ ಎಂದು ಶೈಲಜಾ ಅವರು ಅಭಿಪ್ರಾಯ ಪಟ್ಟಿದ್ದಾರೆ.

    63 ವರ್ಷದ ಕೆಕೆ ಶೈಲಜಾ ಅವರಿಗೆ ಗಂಡ ಮತ್ತು ಇಬ್ಬರು ಮಕ್ಕಳು ಇದ್ದಾರೆ. ಈ ವಯಸ್ಸಿನಲ್ಲೂ ಪ್ರತಿದಿನ 8 ರಿಂದ 9 ಗಂಟೆಗಳ ಕಾಲ ಸಭೆ ಮತ್ತು ವಿಡಿಯೋ ಕಾನ್ಫೆರೆನ್ಸ್ ನಿರತರಾಗಿರುತ್ತಾರೆ. ಇದರ ಜೊತೆಗೆ ಮನೆಯಲ್ಲಿ ಇದ್ದರೆ ರಾತ್ರಿಯ ವೇಳೆಯೂ ಕೂಡ ಯಾವುದೇ ಕರೆ ಬರಲಿ ಮಾತನಾಡುತ್ತಾರೆ ಎಂದು ಅವರ ಮನೆಯವರು ಹೇಳಿದ್ದಾರೆ. 63ನೇ ವಯಸ್ಸಿನಲ್ಲೂ ತನ್ನ ರಾಜ್ಯಕ್ಕಾಗಿ ದುಡಿಯುತ್ತಿರುವ ಶೈಲಜಾ ಅವರ ಕಾರ್ಯಕ್ಕೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಶೈಲಜಾ ಅವರ ಕಾರ್ಯಕ್ಷಮತೆಯಿಂದ ಇಂದು ಕೇರಳದ 8 ಜಿಲ್ಲೆಗಳು ಕೊರೊನಾ ಮುಕ್ತವಾಗಿವೆ. ಕೇರಳದಲ್ಲಿ ಕೊರೊನಾ ಹಾಟ್‍ಸ್ಟಾಟ್ ಆಗಿದ್ದ ಕಾಸರಗೋಡು, ಕೋಜಿಕೋಡ್, ಪಾಲಕ್ಕಾಡ್, ಅಲಾಪ್ಪುಜಾ, ಕೊಟ್ಟಾಯಂ, ಇಡುಕ್ಕಿ, ಪಥನಮತ್ತತ್ತ ಮತ್ತು ತಿರುವನಂತಪುರಂ ಜಿಲ್ಲೆಗಳು ಕೊರೊನಾ ರಹಿತ ಜಿಲ್ಲೆಗಳಾಗಿವೆ. ಜೊತೆಗೆ ಕೇರಳದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಕಮ್ಮಿ ಆಗುತ್ತಿದ್ದು, ಸೋಂಕಿನಿಂದ ಗಣಮುಖರಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ.

    ಕೇರಳದಲ್ಲಿ ಕೊರೊನಾ ಕಾಣಿಸಿಕೊಂಡದಿಂದ ಇಲ್ಲಿಯವರೆಗೆ ಸುಮಾರು 512 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಕೇವಲ ಮೂರು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಈಗ ಕೇವಲ 20 ಜನರು ಕೊರೊನಾ ಚಿಕತ್ಸೆ ಪಡೆಯುತ್ತಿದ್ದು, ಇನ್ನುಳಿದ 488 ಜನರು ಕೊರೊನಾದಿಂದ ಗುಣಮುಖರಾಗಿ ಡಿಸ್ಚಾರ್ಚ್ ಆಗಿದ್ದಾರೆ. ಇಲ್ಲಿಯವರೆಗೂ ಸುಮಾರು 37,464 ಸ್ಯಾಂಪಲ್‍ಗಳನ್ನು ಪರೀಕ್ಷೆ ಮಾಡಿದ್ದು, ಅದರಲ್ಲಿ 36,630 ಸ್ಯಾಂಪಲ್ಸ್ ಗಳು ನೆಗೆಟಿವ್ ಬಂದಿವೆ.

    ಇದರ ಜೊತೆಗೆ ಕೆಕೆ ಶೈಲಜಾ ಅವರು, ಬೇರೆ ಪ್ರದೇಶದಿಂದ ಕೇರಳಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಕೊರೊನಾದ ಒಂದು ಲಕ್ಷಣ ಕಂಡುಬಂದರೂ ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಲಕ್ಷಣ ಕಂಡುಬಾರದೆ ಇದ್ದರೇ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ನಿಯಮ ಮಾಡಿದ್ದಾರೆ.

  • ನಮ್ಮನ್ನು ಊರಿಗೆ ಕಳುಹಿಸಿಕೊಡಿ- ಪೊಲೀಸರ ಮೇಲೆ ಕಲ್ಲು ತೂರಿದ ವಲಸೆ ಕಾರ್ಮಿಕರು

    ನಮ್ಮನ್ನು ಊರಿಗೆ ಕಳುಹಿಸಿಕೊಡಿ- ಪೊಲೀಸರ ಮೇಲೆ ಕಲ್ಲು ತೂರಿದ ವಲಸೆ ಕಾರ್ಮಿಕರು

    – ಹಾಟ್‍ಸ್ಪಾಟ್ ಆಗಿದ್ದ ಕಾಸರಗೋಡಿನಲ್ಲಿಲ್ಲ ಒಂದೇ ಒಂದು ಪ್ರಕರಣ

    ತಿರುವನಂತಪುರಂ: ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಸುಮಾರು 700 ವಲಸೆ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೇರಳದ ಅಕ್ಕಲಂ ಬಳಿಯ ಒರುವತಿಲ್ಕೋಟದಲ್ಲಿ ಭಾನುವಾರ ತಡರಾತ್ರಿ ಸುಮಾರು 700 ವಲಸೆ ಕಾರ್ಮಿಕರು ಸೇರಿಕೊಂಡು ನಮ್ಮನ್ನು ಊರಿಗೆ ಕಳುಹಿಸಲು ವ್ಯವಸ್ಥೆ ಮಾಡಿ ಎಂದು ಪ್ರತಿಭಟಿಸಿದ್ದಾರೆ. ಈ ವೇಳೆ ಅಲ್ಲಿಗೆ ಪೊಲೀಸರು ಬಂದು ಪ್ರತಿಭಟನೆ ನಿಲ್ಲಿಸುವಂತೆ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ.

    ಈ ಎಲ್ಲ ಕಾರ್ಮಿಕರು ದೇಶದ ವಿವಿಧೆಡೆಯಿಂದ ಬಂದು ಕೇರಳದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಕಟ್ಟಡ ಕಾರ್ಮಿಕರಾಗಿದ್ದ ಇವರು ಲಾಕ್‍ಡೌನ್ ಆದ ಮೇಲೆ ಎಲ್ಲ ಕೆಲಸಗಳು ನಿಂತು ಹೋಗಿದೆ. ನಮ್ಮ ಬಳಿ ಊಟ ತಿನ್ನಲು ದುಡ್ಡು ಇಲ್ಲ, ಮಾಡಲು ಕೆಲಸವಿಲ್ಲ ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಒತ್ತಾಯ ಮಾಡಿದ್ದಾರೆ. ಮಾರ್ಚ್ 24ರಂದು ದೇಶ ಲಾಕ್‍ಡೌನ್ ಆದ ಬಳಿಕ ಇವರು ತಿನ್ನಲು ಊಟವಿಲ್ಲದೇ ಪರದಾಡುವ ಸ್ಥಿತಿ ತಲುಪಿದ್ದಾರೆ.

    ಈ ಕಾರಣದಿಂದ ಕಾರ್ಮಿಕರು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಈ ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆ ಪೊಲೀಸರು ಸ್ಥಳಕ್ಕೆ ಜಮಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ನಂತರ ಪೊಲೀಸ್ ಅಧಿಕಾರಿಗಳು ನಿಮ್ಮನ್ನು ಊರಿಗೆ ಕಳುಹಿಸುವ ವ್ಯವಸ್ಥೆ ಮಾಡುತ್ತೇವೆ ಎಂದು ಭರವಸೆ ನೀಡಿದ ಬಳಿಕೆ ಕಾರ್ಮಿಕರು ಅಲ್ಲಿಂದ ತೆರೆಳಿದ್ದಾರೆ.

    ಕೇರಳದಲ್ಲಿ ಹಿಡಿತಕ್ಕೆ ಬಂದ ಕೊರೊನಾ:
    ದೇಶದಲ್ಲಿ ಮೊದಲು ಕೊರೊನಾ ಕಾಣಿಸಿಕೊಂಡಿದ್ದ ಕೇರಳದಲ್ಲಿ ಈಗ ಹಿಡಿತಕ್ಕೆ ಬಂದಿದೆ. ಕೇರಳದಲ್ಲಿ ಕೊರೊನಾ ಹಾಟ್‍ಸ್ಟಾಟ್ ಆಗಿದ್ದ ಕಾಸರಗೋಡು ಜಿಲ್ಲೆಯಲ್ಲಿ ಈಗ ಒಂದೇ ಒಂದು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ. ಈ ನಡುವೆ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಾಜ ಅವರ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇದರ ಜೊತೆಗೆ ಕೆಕೆ ಶೈಲಾಜ ಅವರು, ಬೇರೆ ಪ್ರದೇಶದಿಂದ ಕೇರಳಕ್ಕೆ ಬಂದವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಬೇಕು. ಪರೀಕ್ಷೆಯಲ್ಲಿ ಕೊರೊನಾದ ಒಂದು ಲಕ್ಷಣ ಕಂಡುಬಂದರೂ ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಬೇಕು. ಒಂದು ವೇಳೆ ಪರೀಕ್ಷೆಯಲ್ಲಿ ಲಕ್ಷಣ ಕಂಡುಬಾರದೆ ಇದ್ದರೇ ಅವರು 14 ದಿನಗಳ ಕಾಲ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ನಿಯಮ ಮಾಡಿದ್ದಾರೆ.

  • ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ KSRTCಯಿಂದ ಅಂತರ-ರಾಜ್ಯ ಸಾರಿಗೆ ಸೌಲಭ್ಯ

    ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ KSRTCಯಿಂದ ಅಂತರ-ರಾಜ್ಯ ಸಾರಿಗೆ ಸೌಲಭ್ಯ

    – ನಾಳೆಯಿಂದ ಸೌಲಭ್ಯ ಜಾರಿ

    ಬೆಂಗಳೂರು: ಸೇವಾಸಿಂಧು ಇ-ಪಾಸ್ ಹೊಂದಿರುವವರಿಗೆ ಅಂತರ-ರಾಜ್ಯ ಸಾರಿಗೆ ಸೌಲಭ್ಯವನ್ನು ಒದಗಿಸಲು ಕೆಎಸ್ಆರ್‌ಟಿಸಿ ಮುಂದಾಗಿದೆ.

    ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್‌ಟಿಸಿ ಸಹಾಯವಾಣಿ ಆರಂಭಿಸಿದೆ. ಇ-ಪಾಸ್ ಹೊಂದಿರುವವರಿಗೆ ಅಂತರ-ರಾಜ್ಯ ಸಾರಿಗೆ ಸೌಲಭ್ಯವನ್ನು ಒದಗಿಸಲು ಸಹಾಯವಾಣಿಯನ್ನು ದಿನಾಂಕ 11-05-2020 ರಿಂದ ಜಾರಿಗೆ ತರಲಿದೆ.

    ಸಹಾಯವಾಣಿ ಸಂಖ್ಯೆ:
    * ತಮಿಳುನಾಡು ರಾಜ್ಯ/ಪಾಂಡಿಚೇರಿ ಪ್ರಯಾಣಿಕರಿಗೆ ಸಹಾಯವಾಣಿ ಸಂಖ್ಯೆ: 7760990100, 7760990560, 7760990034, 7760990035, 7760991295.

    * ಆಂಧ್ರಪ್ರದೇಶ/ತೆಲಂಗಾಣ ರಾಜ್ಯ ಪ್ರಯಾಣಿಕರಿಗೆ ಸಹಾಯವಾಣಿ ಸಂಖ್ಯೆ: 7760990561, 7760990532, 7760990955, 7760990530, 7760990967.

    * ಕೇರಳ ರಾಜ್ಯ ಪ್ರಯಾಣಿಕರಿಗೆ ಸಹಾಯವಾಣಿ ಸಂಖ್ಯೆ: 7760990287, 7760990988, 7760990531, 6366423895, 6366423896.

    ಹೊರ ರಾಜ್ಯಗಳಿಂದ ಬಂದವರು ಕ್ವಾರಂಟೈನ್:
    ಹೊರರಾಜ್ಯಗಳಿಂದ ಬೆಂಗಳೂರಿಗೆ ಸಾಕಷ್ಟು ಮಂದಿ ಬರುತ್ತಿರುವ ಹಿನ್ನೆಲೆ ಅವರಿಂದ ನಗರದಲ್ಲಿ ಕೊರೊನಾ ಸೋಂಕು ಹರಡಬಾರದು ಎಂದು ಎಚ್ಚರಿಕೆ ವಹಿಸಲಾಗಿದ್ದು, ಹೊರ ರಾಜ್ಯದಿಂದ ಸಿಲಿಕಾನ್ ಸಿಟಿಗೆ ಬರುವವರಿಗೆ ಕಡ್ಡಾಯವಾಗಿ ಕೈಗೆ ಸ್ಟಾಂಪಿಂಗ್ ಮಾಡಲಾಗುತ್ತದೆ. ಅವರು 14 ದಿನ ಕಡ್ಡಾಯವಾಗಿ ಹೋಂ ಕ್ವಾರಂಟೈನ್ ಇರಲೇಬೇಕು ಎಂದು ಜಿಲ್ಲಾಡಳಿತ ತಿಳಿಸಿತ್ತು.

    ಹೊರ ರಾಜ್ಯದವರಿಂದ ನಗರದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಬಾರದು ಎಂಬ ಕಾರಣಕ್ಕೆ ಅತ್ತಿಬೆಲೆ ಚೆಕ್‍ಪೋಸ್ಟ್ ನಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ಬೇರೆ ರಾಜ್ಯದಿಂದ ಬಂದವರ ಕೈಗೆ ಸ್ಟಾಂಪಿಂಗ್ ಹಾಕಿ, ಥರ್ಮಲ್ ಸ್ಕ್ಯಾನಿಂಗ್ ಮಾಡಿ, 14 ದಿನ ಹೋಂ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಸೂಚಿಸಲಾಗುತ್ತದೆ. ಬೈಕು, ಕಾರು ಯಾವುದೇ ಖಾಸಗಿ ವಾಹನದಲ್ಲೂ ಬಂದರೂ ಸೀಲ್ ಫಿಕ್ಸ್, ಕ್ವಾರಂಟೈನ್ ಕಡ್ಡಾಯ ಎಂದು ಬೆಂಗಳೂರು ಜಿಲ್ಲಾಡಳಿತ ಮಾಹಿತಿ ನೀಡಿತ್ತು.

    ಷರತ್ತು ಪಾಲಿಸಿ:
    ಲಾಕ್‍ಡೌನ್ ಘೋಷಣೆಗೂ ಮುನ್ನ ನೆರೆ ರಾಜ್ಯಕ್ಕೆ ಹೋಗಿರುವ ಕನ್ನಡಿಗರು ಪಾಸ್ ಪಡೆಯುವ ಮೂಲಕ ಮರಳಿ ಕರ್ನಾಟಕಕ್ಕೆ ಬರಬಹುದಾಗಿದೆ. ರಾಜ್ಯಕ್ಕೆ ಬರುವ ಕನ್ನಡಿಗರು ಸೇವಾ ಸಿಂಧು ವೆಬ್‍ಸೈಟ್‍ಗೆ ತೆರಳಿ ವಿವರಗಳನ್ನು ನೀಡಬೇಕಾಗುತ್ತದೆ. ಈ ಎಲ್ಲ ವಿವರಗಳು ಸರಿಯಾಗಿದ್ದರೆ ಇ ಪಾಸ್ ಡೌನ್‍ಲೋಡ್ ಮಾಡಬಹುದು.

    ಇ ಪಾಸ್ ಸಿಕ್ಕಿದ ದಿನದಿಂದ ಒಂದು ವಾರದ ವರೆಗೆ ಮಾತ್ರ ಈ ಪಾಸ್ ಉರ್ಜಿತದಲ್ಲಿರುತ್ತದೆ. ಸ್ವಂತ ವಾಹನ, ಬಾಡಿಗೆ ವಾಹನ ಅಥವಾ ಬಸ್ ಇವುಗಳ ಮೂಲಕ ಬರಬಹುದು. ವಾಹನದಲ್ಲಿ ಬರಬೇಕಾದರೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕುಳಿತುಕೊಳ್ಳಬೇಕು. ಒಂದು ಕಾರಿನಲ್ಲಿ ಗರಿಷ್ಟ 3 ಮಂದಿ, ಎಸ್‍ಯುವಿ ವಾಹನದಲ್ಲಿ 5, ವ್ಯಾನ್ ನಲ್ಲಿ 10 ಮಂದಿ, ಬಸ್ ನಲ್ಲಿ ಗರಿಷ್ಟ 25 ಮಂದಿ ಪ್ರಯಾಣಿಸಬಹುದು. ಯಾವ ಚೆಕ್ ಪೋಸ್ಟ್ ಮೂಲಕ ಅನುಮತಿ ನೀಡಲಾಗಿದೆಯೋ ಆ ಚೆಕ್ ಪೋಸ್ಟ್ ಮೂಲಕ ಮಾತ್ರ ಪ್ರವೇಶ ನೀಡಲಾಗುತ್ತದೆ.

    ವೆಬ್‍ಸೈಟಿಗ್ ಭೇಟಿ ನೀಡಲು ಕ್ಲಿಕ್ ಮಾಡಿ:  www.sevasindhu.karnataka.gov.in/

  • ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಸ್ಥಳಾಂತರಿಸುವುದಕ್ಕೆ ಕೆ.ಜಿ.ಬೋಪಯ್ಯ ವಿರೋಧ

    ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಸ್ಥಳಾಂತರಿಸುವುದಕ್ಕೆ ಕೆ.ಜಿ.ಬೋಪಯ್ಯ ವಿರೋಧ

    ಮಡಿಕೇರಿ: ಕೆಲಸ ಹರಸಿ ಬಂದು ಮೈಸೂರಿನಲ್ಲಿ ಸಿಲುಕಿದ್ದ 60 ಕ್ಕೂ ಹೆಚ್ಚು ಕೇರಳ ಕಾರ್ಮಿಕರನ್ನು ಕೊಡಗಿನ ಮೂಲಕ ಕೇರಳಕ್ಕೆ ಸ್ಥಳಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಘಟನೆ ಕೊಡಗಿನ ಕುಶಾಲನಗರ ಚೆಕ್‍ಪೋಸ್ಟ್ ನಲ್ಲಿ ನಡೆಯಿತು.

    ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಕುಶಾಲನಗರದ ಚೆಕ್ ಪೋಸ್ಟಿಗೆ ಭೇಟಿ ನೀಡಿದ್ದರು. ಇದೇ ವೇಳೆ ಮೈಸೂರಿನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಮೈಸೂರು ಜಿಲ್ಲಾಡಳಿತ ಮೂರು ಬಸ್‍ಗಳಲ್ಲಿ ಕೊಡಗಿನ ಮೂಲಕ ಕೇರಳಕ್ಕೆ ಸಾಗಿಸುತಿತ್ತು. ಕುಶಾಲನಗರ ಚೆಕ್ ಪೋಸ್ಟ್ ಮೂಲಕ ಕೊಡಗಿಗೆ ಬಸ್‍ಗಳು ಪ್ರವೇಶ ಮಾಡಿದಕ್ಕೆ ಶಾಸಕ ಕೆ.ಜಿ. ಬೋಪಯ್ಯ ಕೆಂಡಾಮಂಡಲವಾದರು.

    ಚೆಕ್‍ಪೋಸ್ಟಿನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗರಂ ಆದರು. ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡಲಾಗಿದೆ. ಆದರೂ ಮೈಸೂರು ಕಮಿಷನರ್ ಈ ಬಸ್‍ಗಳನ್ನು ಕೊಡಗಿನ ಮೂಲಕ ಕೇರಳಕ್ಕೆ ಕಳುಹಿಸಲು ಮುಂದಾಗಿದ್ದು ಏಕೆ? ಇಷ್ಟು ಕಾರ್ಮಿಕರನ್ನು ಕೇರಳಕ್ಕೆ ಸಾಗಿಸುವಾಗ ಮಾರ್ಗ ಮಧ್ಯೆದಲ್ಲಿ ಕಾಫಿ, ಟೀಗೆ ಅಥವಾ ಊಟಕ್ಕೆ ಎಂದು ಇಳಿಯದೇ ಇರುವುದಿಲ್ಲ. ಈ ವೇಳೆ ಯಾರಿಗಾದರೂ ವೈರಸ್ ಇದ್ದು, ಕೊಡಗಿನ ಜನತೆಗೆ ಹರಡಿದರೆ ಅದಕ್ಕೆ ಹೊಣೆ ಯಾರು? ಹೀಗಾಗಿ ಕೊಡಗಿನ ಮೂಲಕ ಕಾರ್ಮಿಕರನ್ನು ಸಾಗಿಸಬಾರದು ಎಂದು ಶಾಸಕರು ಬಸ್‍ಗಳನ್ನು ತಡೆ ಹಿಡಿದರು.

    ಬೇರೆ ಯಾವ ಮಾರ್ಗದಲ್ಲಿ ಕಾರ್ಮಿಕರನ್ನು ಕೇರಳಕ್ಕೆ ಕಳುಹಿಸಲಿ ಎಂದು ಮೈಸೂರು ಜಿಲ್ಲೆಯಿಂದ ಆಗಮಿಸಿದ್ದ ಮೂರು ಬಸ್‍ಗಳನ್ನು ವಾಪಸ್ ಕಳುಹಿಸಿದರು. ಅಲ್ಲದೆ ಚೆಕ್‍ಪೋಸ್ಟ್ ನಲ್ಲಿರುವ ಅಧಿಕಾರಿಗಳು ಇನ್ನಷ್ಟು ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿ ಕೆಲಸ ಮಾಡಲಿ ಎಂದರು.