Tag: kerala

  • ಕೇರಳ ಸಿಎಂ ಮಗಳನ್ನು ವರಿಸಿದ ಡಿವೈಎಫ್‍ಐ ನಾಯಕ ರಿಯಾಸ್

    ಕೇರಳ ಸಿಎಂ ಮಗಳನ್ನು ವರಿಸಿದ ಡಿವೈಎಫ್‍ಐ ನಾಯಕ ರಿಯಾಸ್

    – ಸಿಎಂ ನಿವಾಸದಲ್ಲೇ ಮಗಳ ರಿಜಿಸ್ಟರ್ ಮ್ಯಾರೇಜ್
    – ವಧು, ವರ ಇಬ್ಬರಿಗೂ ಎರಡನೇ ಮದುವೆ

    ತಿರುವನಂತಪುರಂ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮಗಳು ಸಾಫ್ಟ್ ವೇರ್ ಎಂಜಿನಿಯರ್ ವೀಣಾ ಥಯಿಕ್ಕಂಡಿಯಿಲ್ ಡೆಮಾಕ್ರಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ ರಾಷ್ಟ್ರಾಧ್ಯಕ್ಷ ಪಿ.ಎ. ಮೊಹಮ್ಮದ್ ರಿಯಾಸ್ ಅವರನ್ನು ಇಂದು ಮದುವೆಯಾಗಿದ್ದಾರೆ.

    ವಿಶೇಷ ವಿವಾಹ ಕಾಯ್ಡೆಯಡಿ ಸಿಎಂ ಮಗಳು ವೀಣಾ ಅವರ ಮದುವೆಯನ್ನು ರಿಜಿಸ್ಟರ್ ಮಾಡಲಾಗಿದೆ. ಸಿಎಂ ಪಿಣರಾಯಿ ವಿಜಯನ್ ಅಧಿಕೃತ ನಿವಾಸದಲ್ಲಿ ಇಂದು ಬೆಳಗ್ಗೆ 10.30ಕ್ಕೆ ಇವರಿಬ್ಬರು ರಿಜಿಸ್ಟರ್ ಮದುವೆಯಾಗಿದ್ದಾರೆ. ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಎರಡೂ ಕುಟುಂಬಗಳ ಸದಸ್ಯರು ಮತ್ತು ಆಪ್ತ ಸ್ನೇಹಿತರು ಮಾತ್ರ ಈ ವಿವಾಹದಲ್ಲಿ ಭಾಗಿಯಾಗಿದ್ದರು. ಈ ಮೂಲಕ ಸಿಎಂ ಸರ್ಕಾರಿ ನಿವಾಸದಲ್ಲಿ ನಡೆದ ಮೊದಲ ಮದುವೆ ಇದಾಗಿದೆ.

    ವೀಣಾ ಬೆಂಗಳೂರಿನಲ್ಲಿ ಐಟಿ ಸಂಸ್ಥೆಯ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವೀಣಾ ಅವರು ಒರಾಕಲ್ ಸಂಸ್ಥೆಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಎಂಟು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದ್ದಾರೆ. ನಂತರ ಗಲ್ಫ್ ಮೂಲದ ಎನ್‍ಆರ್‍ಐ ರವಿ ಪಿಳ್ಳೈ ಒಡೆತನದ ತಿರುವನಂತಪುರಂನಲ್ಲಿ ಆರ್‌ಪಿ ಟೆಕ್ಸಾಫ್ಟ್ ನಲ್ಲಿ ಸಿಇಒ ಆಗಿದ್ದರು. ಪ್ರಸ್ತುತ ಅವರು ಬೆಂಗಳೂರಿನಲ್ಲಿ 2015 ರಲ್ಲಿ ಪ್ರಾರಂಭಿಸಿದ Exalogic Solutions Private Limitedನ ಮುಖ್ಯಸ್ಥರಾಗಿದ್ದಾರೆ.

    ರಿಯಾಸ್ ನಿವೃತ್ತ ಐಪಿಎಸ್ ಅಧಿಕಾರಿ ಪಿಎಂ ಅಬ್ದುಲ್ ಖಾದರ್ ಅವರ ಪುತ್ರರಾಗಿದ್ದು, ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಈ ಹಿಂದೆ ಡಿವೈಎಫ್‍ಐನ ರಾಷ್ಟ್ರೀಯ ಜಂಟಿ ಕಾರ್ಯದರ್ಶಿಯಾಗಿದ್ದ ಅವರು 2017ರ ಫೆಬ್ರವರಿಯಲ್ಲಿ ಅಧ್ಯಕ್ಷರಾಗಿ ನೇಮಕಗೊಂಡರು. 2009ರ ಲೋಕಸಭಾ ಚುನಾವಣೆಯಲ್ಲಿ ರಿಯಾಸ್ ಸಿಪಿಎಂ ಅಭ್ಯರ್ಥಿಯಾಗಿ ಕೊಜ್ಹಿಕೊಡೆ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಎಂ.ಕೆ.ರಾಘವನ್ ವಿರುದ್ಧ 838 ಮತಗಳ ಅಂತರದಿಂದ ಸೋತಿದ್ದರು. 2017ರ ಕೇರಳದ ಗೋಮಾಂಸ ನಿಷೇಧ ಪ್ರತಿಭಟನೆ ರಾಷ್ಟ್ರದಲ್ಲಿ ಭಾರೀ ಸುದ್ದಿ ಮಾಡಿತ್ತು. ಈ ಪ್ರತಿಭಟನೆಯ ಸಂದರ್ಭದಲ್ಲಿ ರಿಯಾಸ್ ಮುಖ್ಯ ಪಾತ್ರ ವಹಿಸಿದ್ದರು. ವಾಹಿನಿಗಳಲ್ಲಿ ಇವರು ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುತ್ತಾರೆ.

    43 ವರ್ಷದ ರಿಯಾಸ್ ಮತ್ತು ವೀಣಾ ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ. ರಿಯಾಸ್ 2002ರಲ್ಲಿ ಮದುವೆಯಾಗಿದ್ದು, 2015ರಲ್ಲಿ ವಿಚ್ಛೇದನ ಪಡೆದಿದ್ದರು. ಅಲ್ಲದೇ ರಿಯಾಸ್ ಇಬ್ಬರು ಮಕ್ಕಳ ತಂದೆಯಾಗಿದ್ದರೆ. ಇನ್ನೂ ವೀಣಾ ಕೂಡ ಈ ಹಿಂದೆ ಮದುವೆಯಾಗಿದ್ದು, ವೀಣಾ 2015ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಒಂದು ಮಗು ಕೂಡ ಇದೆ.

  • ಜೂನ್ 14ರಿಂದ ಅಯ್ಯಪ್ಪನ ದರ್ಶನ ಇಲ್ಲ: ತಿರುವಾಂಕೂರು ದೇವಸ್ವಂ ಮಂಡಳಿ ಸ್ಪಷ್ಟನೆ

    ಜೂನ್ 14ರಿಂದ ಅಯ್ಯಪ್ಪನ ದರ್ಶನ ಇಲ್ಲ: ತಿರುವಾಂಕೂರು ದೇವಸ್ವಂ ಮಂಡಳಿ ಸ್ಪಷ್ಟನೆ

    ತಿರುವನಂತಪುರಂ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆ ಶಬರಿಮಲೈ ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ಸದ್ಯ ತೆರೆಯದಿರಲು ನಿರ್ಧರಿಸಿದೆ. ಇಂದು ನಡೆದ ಮಹತ್ವದ ಸಭೆ ಬಳಿಕ ಈ ನಿರ್ಧಾರವನ್ನು ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಪ್ರಕಟಿಸಿದ್ದಾರೆ.

    ಜೂನ್ 14ರಿಂದ ಮಾಸಿಕ ಪೂಜೆ ಆರಂಭವಾಗಬೇಕಿದ್ದು, ದೇವಸ್ಥಾನ ತೆರೆಯುವ ಸಂಬಂಧ ತಿರುವಾಂಕೂರು ದೇವಸ್ವಂ ಮಂಡಳಿ ಸಭೆ ನಡೆಸಿತು. ಈ ಸಭೆಯಲ್ಲಿ ಕೇರಳದ ದೇವಸ್ವಂ ಖಾತೆ ಸಚಿವ ಕಡಕಂಪಲ್ಲಿ ಸುರೇಂದ್ರನ್ ಸೇರಿದಂತೆ ಎಲ್ಲ ಅರ್ಚಕರು ಭಾಗಿಯಾಗಿದ್ದರು.

    ಭಾರತ ಅನ್‍ಲಾಕ್ ಬಳಿಕ ಧಾರ್ಮಿಕ ಕ್ಷೇತ್ರಗಳನ್ನು ತೆರೆಯಲು ಷರತ್ತುಗಳೊಂದಿಗೆ ಅವಕಾಶ ನೀಡಿತ್ತು. ಈ ಹಿನ್ನೆಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ತೆರೆಯುವ ಸಂಬಂಧ ಚರ್ಚೆ ನಡೆಸಲಾಯಿತು. ಜೂನ್ 14ರಿಂದ ಶಬರಿಮಲೆಯಲ್ಲಿ ಮಾಸಿಕ ಪೂಜೆ ನಡೆಸಬೇಕಿತ್ತು. ಈ ಪೂಜೆ ನಡೆದರೆ ಕೇವಲ ಕೇರಳ ಮಾತ್ರವಲ್ಲದೆ ದೇಶದ ಹಲವು ಭಾಗಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಶಬರಿಮಲೈ ದೇವಸ್ಥಾನದಲ್ಲಿ ಮಾರ್ಗಸೂಚಿಗಳ ಪಾಲನೆ ಕಷ್ಟ. ಇದರಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಲಾಯಿತು.

    ಈ ಹಿನ್ನೆಲೆಯಲ್ಲಿ ಶಬರಿಮಲೈ ದೇವಸ್ಥಾನ ತೆರೆಯದಿರಲು ಮತ್ತು ತಿಂಗಳ ಪೂಜೆಗೆ ಭಕ್ತಾದಿಗಳಿಗೆ ಅವಕಾಶ ನೀಡದರಿಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರ ಜೊತೆಗೆ ದೇವಸ್ಥಾನ ಉತ್ಸವ ರದ್ದು ಮಾಡಲು ಕೂಡಾ ಒಮ್ಮತದ ತಿರ್ಮಾನ ತೆಗೆದುಕೊಳ್ಳಲಾಗಿದೆ.

  • ದುಬೈನಲ್ಲಿ ಪತಿ ಹೃದಯಾಘಾತದಿಂದ ಸಾವು – ಭಾರತದಲ್ಲಿ ಮಗುವಿಗೆ ಜನ್ಮ ನೀಡಿದ ಪತ್ನಿ

    ದುಬೈನಲ್ಲಿ ಪತಿ ಹೃದಯಾಘಾತದಿಂದ ಸಾವು – ಭಾರತದಲ್ಲಿ ಮಗುವಿಗೆ ಜನ್ಮ ನೀಡಿದ ಪತ್ನಿ

    – ಕೊರೊನಾ ಲಾಕ್‍ಡೌನ್‍ನಲ್ಲಿ ಪತ್ನಿಯನ್ನು ಊರಿಗೆ ಕಳುಹಿಸಿದ್ದ ಎಂಜಿನಿಯರ್
    – ತನ್ನ ಬದಲು ಬೇರೆಯವರನ್ನು ವಿಮಾನದಲ್ಲಿ ಕಳುಹಿಸಿದ್ದ ನಿತಿನ್

    ತಿರುವನಂತಪುರಂ: ದುಬೈನಲ್ಲಿ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ ಮರುದಿನವೇ ಆತನ ಪತ್ನಿ ಮಗುವಿಗೆ ಜನ್ಮ ನೀಡಿರುವ ಘಟನೆ ಕೇರಳದ ಕೋಝಿಕೋಡ್‍ನಲ್ಲಿ ನಡೆದಿದೆ.

    ಮೃತಪಟ್ಟ ಪತಿಯನ್ನು ಕೇರಳದ ನಿವಾಸಿ 28 ವರ್ಷದ ನಿತಿನ್ ಚಂದ್ರನ್ ಎಂದು ಗುರುತಿಸಲಾಗಿದೆ. ನಿತಿನ್ ಸೋಮವಾರ ದುಬೈನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇದಾದ ಒಂದೇ ದಿನದಲ್ಲಿ ಮಂಗಳವಾರ ಆತನ ಪತ್ನಿ 27 ವರ್ಷದ ಅದೀರಾ ಗೀತಾ ಶ್ರೀಧರನ್ ಕೇರಳದ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.

    ಮೆಕ್ಯಾನಿಕಲ್ ಎಂಜಿನಿಯರ್ ನಿತಿನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ಕೊರೊನಾ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ತನ್ನ ಗರ್ಭಿಣಿ ಪತ್ನಿಯನ್ನು ಭಾರತಕ್ಕೆ ವಾಪಸ್ ಕಳುಹಿಸಲು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಇದಾದ ನಂತರ ಒಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಇಂಡಿಯಾಗೆ ಬಂದ ಮೊದಲ ವಿಮಾನದಲ್ಲಿ ಪತ್ನಿಯನ್ನು ಭಾರತಕ್ಕೆ ಕಳುಹಿಸಿ ಅವರು ಅಲ್ಲೇ ಉಳಿದುಕೊಂಡಿದ್ದರು.

    ದುಬೈನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ನಿತಿನ್ ಅಲ್ಲಿನ ರಕ್ತದಾನ ಸಂಘದ ಸದಸ್ಯರು ಆಗಿದ್ದರು. ಪತ್ನಿ ಅದೀರಾಳ ಜೊತೆಯಲ್ಲಿ ವಾಪಸ್ ಬರಬೇಕಿದ್ದ ನಿತಿನ್ ದುಬೈನಲ್ಲಿ ಸಿಲುಕಿದ್ದ ಭಾರತದ ಬಡವರನ್ನು ಇವರ ಜಾಗದಲ್ಲಿ ಇಂಡಿಯಾಗೆ ಕಳುಹಿಸಿಕೊಟ್ಟಿದ್ದರು. ಅವರ ಪ್ರಯಾಣದ ವೆಚ್ಚವನ್ನು ಕೂಡ ಅವರೇ ಭರಿಸಿದ್ದರು. ನಂತರ ನನಗೆ ಚಾನ್ಸ್ ಸಿಗುತ್ತೆ ಆಗ ನಾನು ಭಾರತಕ್ಕೆ ಬರುತ್ತೇನೆ ಎಂದು ಹೇಳಿದ್ದರು.

    ಆದರೆ ವಿಧಿಯಾಟವೇ ಬೇರೆಯಾಗಿತ್ತು. ದುಬೈನಲ್ಲಿ ಏಕಾಂಗಿಯಾದ್ದ ನಿತಿನ್ ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮುಂಚೆಯಿಂದಲು ಅಧಿಕ ರಕ್ತದೊತ್ತಡ ಹಾಗೂ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ ನಿತಿನ್ ಇದಕ್ಕಾಗಿ ಚಿಕಿತ್ಸೆ ಪಡೆದಿದ್ದರು. ಆದರೆ ಸೋಮವಾರ ಮಲಗಿದ್ದವರು ಏಳಲೇ ಇಲ್ಲ. ಅವರು ನಿದ್ರೆಯಲ್ಲಿ ಇರುವಾಗಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ.

    https://www.facebook.com/publictv/posts/4369546059729779

     

  • ಕೊರೊನಾ ಎಫೆಕ್ಟ್- ಅಂತಾರಾಜ್ಯ ಗಡಿಯಲ್ಲಿ ಜೋಡಿಯ ಮದ್ವೆ

    ಕೊರೊನಾ ಎಫೆಕ್ಟ್- ಅಂತಾರಾಜ್ಯ ಗಡಿಯಲ್ಲಿ ಜೋಡಿಯ ಮದ್ವೆ

    – ಜೋಡಿಯ ‘ಗಡಿ’ಬಿಡಿಯ ಕಲ್ಯಾಣ

    ತಿರುವನಂತಪುರ: ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಜೋಡಿಯೊಂದು ಎರಡು ರಾಜ್ಯಗಳ ಗಡಿಯಲ್ಲಿಯೇ ಭಾನುವಾರ ಮದುವೆಯಾಗಿದೆ.

    ರಾಬಿನ್ಸನ್ ಮತ್ತು ಪ್ರಿಯಾಂಕ ಗಡಿಯಲ್ಲಿ ಮದುವೆಯಾದ ಜೋಡಿ. ಇಬ್ಬರ ಮದುವೆ ಮಾರ್ಚ್ 22ರಂದು ಗುರುಹಿರಿಯರು ನಿಶ್ಚಯಿಸಿದ್ದರು. ಮಾರ್ಚ್ 21ರಂದು ಜನತಾ ಕರ್ಫ್ಯೂ  ಹಿನ್ನೆಲೆ ಮದುವೆ ಮುಂದೂಡಲಾಗಿತ್ತು. ತದನಂತರ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ಮದುವೆ ದಿನಾಂಕವನ್ನು ಎರಡು ಕುಟುಂಬಗಳು ಮುಂದೂಡತ್ತಲೇ ಬಂದಿದ್ದವು.

    ಪ್ರಿಯಾಂಕ ಕೇರಳದವರಾಗಿದ್ದು, ರಾಬಿನ್ಸನ್ ತಮಿಳುನಾನ ನಿವಾಸಿ. ಅನ್‍ಲಾಕ್ ಘೋಷಣೆ ಬಳಿಕ ಪ್ರಿಯಾಂಕ ತಮಿಳುನಾಡಿನ ಗಡಿವರೆಗೆ ಬರುವ ಪಾಸ್ ಪಡೆದುಕೊಂಡಿದ್ದರು. ಇತ್ತ ರಾಬಿನ್ಸನ್ ಸಹ ಕೇರಳದ ಗಡಿವರೆಗೆ ಬರಲು ಪ್ರಯಾಣದ ಪಾಸ್ ಪಡೆದಿದ್ದರು. ಎರಡೂ ರಾಜ್ಯಗಳನ್ನು ಸಂಪರ್ಕಿಸುವ ಚಿನ್ನಾರ್ ಸೇತುವೆಯಲ್ಲಿ ಕಲ್ಯಾಣ ನಡೆದಿದೆ. ಎರಡು ಕುಟುಂಬದವರು ಸೇರಿ ಕೇವಲ 12 ಮಂದಿ ಕಲ್ಯಾಣಕ್ಕೆ ಹಾಜರಾಗಿದ್ದರು. ಜೊತೆಗೆ ಅರಣ್ಯಾಧಿಕಾರಿಗಳು, ಪೊಲೀಸರು ಮತ್ತು ಮಾಜಿ ಶಾಸಕ ಎ.ಕೆ.ಮಣಿ ಉಪಸ್ಥಿತರಿದ್ದರು.

    ಲಾಕ್‍ಡೌನ್ ಹಿನ್ನೆಲೆಯಲ್ಲಿ ಎರಡು ಕುಟುಂಬಗಳು ಯಾರ ಮನೆಗೆ ಬರುವಂತಿರಲಿಲ್ಲ. ಮದುವೆಗಾಗಿ ಜೋಡಿಯ ಎರಡೂ ಕುಟುಂಬಗಳು ಸ್ಥಳೀಯ ಅಧಿಕಾರಿಗಳಲ್ಲಿ ಅನುಮತಿಯನ್ನ ಕೇಳಿದ್ದವು. ಆದ್ರೆ ಎಲ್ಲರಿಗೂ ಪ್ರಯಾಣದ ಅನುಮತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜೋಡಿ ಕುಟುಂಬಸ್ಥರು ಮತ್ತು ಸ್ಥಳೀಯ ಪೊಲೀಸರ ಸಮ್ಮತಿಯ ಮೇರೆ ಗಡಿಭಾಗದಲ್ಲಿಯೇ ಸಾಂಸರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ದೇವಿಕುಲಂ ಕ್ಷೇತ್ರದ ಮಾಜಿ ಶಾಸಕ ಎ.ಕೆ.ಮಣಿ ಹೇಳಿದ್ದಾರೆ.

  • ಆಕಸ್ಮಿಕವಾಗಿ ಗರ್ಭಿಣಿ ಆನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿರಬಹುದು- ಪರಿಸರ ಸಚಿವಾಲಯ

    ಆಕಸ್ಮಿಕವಾಗಿ ಗರ್ಭಿಣಿ ಆನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿರಬಹುದು- ಪರಿಸರ ಸಚಿವಾಲಯ

    ನವದೆಹಲಿ: ಕೇರಳದಲ್ಲಿ ಆಕಸ್ಮಿಕವಾಗಿ ಗರ್ಭಿಣಿ ಆನೆ ಪಟಾಕಿ ತುಂಬಿದ ಹಣ್ಣನ್ನು ಸೇವಿಸಿರಬಹುದು ಎಂದು ಕೇಂದ್ರ ಪರಿಸರ ಸಚಿವಾಲಯ ಅಭಿಪ್ರಾಯಪಟ್ಟಿದೆ.

    ಪ್ರಾಥಮಿಕ ವರದಿಗಳ ಪ್ರಕಾರ 15 ವರ್ಷದ ಆನೆ ಪಟಾಕಿ ತುಂಬಿದ ಪೈನಾಪಲ್ ತಿಂದ ಪರಿಣಾಮ ಮೃತಪಟ್ಟಿದೆ ಎನ್ನಲಾಗಿದೆ. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅದು ಪೈನಾಪಲ್ ಅಲ್ಲ, ತೆಂಗಿನಕಾಯಿ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಆನೆಗೆ ಉಂಟಾಗಿದ್ದ ಗಾಯಗಳು ಕನಿಷ್ಠ ಎರಡು ವಾರಗಳಷ್ಟು ಹಳೆಯದ್ದಾಗಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ.

    ಕಾಡು ಹಂದಿಗಳು ತೋಟ, ಗದ್ದೆಗಳಿಗೆ ಪ್ರವೇಶಿಸದಂತೆ ಹಾಗೂ ಹಿಮ್ಮೆಟ್ಟಿಸಲು ಸ್ಥಳೀಯರು ಕಾನೂನುಬಾಹಿರವಾಗಿ ಸ್ಫೋಟಕ ತುಂಬಿದ ಹಣ್ಣುಗಳನ್ನು ಇಡುತ್ತಾರೆ. ಆನೆಯ ಸಾವಿಗೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಅನೇಕರು ಭಾಗಿಯಾಗಿದ್ದು, ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಸಚಿವಾಲಯ ಹೇಳಿದೆ.

    ಸಾಮಾಜಿಕ ಜಾಲತಾಣದಲ್ಲಿ ವದಂತಿ ಮತ್ತು ಸುಳ್ಳ ಸುದ್ದಿಗಳು ಪ್ರಸಾರವಾಗುತ್ತಿವೆ. ಅವುಗಳನ್ನು ನಂಬಬೇಡಿ ಎಂದು ಪರಿಸರ ಸಚಿವ ಬಾಬುಲ್ ಸುಪ್ರಿಯೋ ಜನರನ್ನು ಕೋರಿದ್ದಾರೆ. ಆನೆ ಸಾವಿನ ಪ್ರಕರಣವನ್ನು ಕೇರಳ ಸರ್ಕಾರ ಮತ್ತು ಸಚಿವಾಲಯದ ಎಲ್ಲಾ ಇಲಾಖೆಗಳು ಪಕ್ಷಪಾತವಿಲ್ಲದೆ ನಿರ್ವಹಿಸುತ್ತಿವೆ ಎಂದು ಸ್ಪಷ್ಟಪಡಿಸಿದೆ.

    ಗರ್ಭಿಣಿ ಆನೆ ಮಾನವನ ಸ್ವಾರ್ಥಕ್ಕಾಗಿ ಪ್ರಾಣ ಬಿಟ್ಟಿದೆ ಎಂದು ತಿಳಿದು ಇಡೀ ವಿಶ್ವವೇ ಮರುಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗಿತ್ತು. ಇಡೀ ದೇಶದಲ್ಲೇ ಸ್ಟಾರ್ ನಟ-ನಟಿಯರು ಕ್ರಿಕೆಟ್ ಆಟಗಾರರು ಕೂಡ ಆನೆ ಸಾವಿಗೆ ನ್ಯಾಯ ಕೊಡಿಸಿ ಎಂದು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಟ್ವೀಟ್ ಮಾಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನೆಯ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದರು.

  • ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

    ಆನೆ ಸತ್ತಿದ್ದು ಸ್ಫೋಟಕ ತುಂಬಿದ ಹಣ್ಣಿನಿಂದಲ್ಲ- ಬಂಧಿತ ಮೊದಲ ಆರೋಪಿ ಹೇಳಿದ್ದೇನು?

    ತಿರುವನಂತಪುರಂ: ಕೇರಳದಲ್ಲಿ ಗರ್ಭಿಣಿ ಆನೆ ಸಾವನ್ನಪ್ಪಿದ ಸುದ್ದಿ ದೇಶದ್ಯಾಂತ ಚರ್ಚೆಯಾಗಿತ್ತು. ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲ ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

    ಬಂಧಿತ ಮೊದಲ ಆರೋಪಿಯನ್ನು 40 ವರ್ಷದ ವಿಲ್ಸನ್ ಎಂದು ಗುರುತಿಸಲಾಗಿದ್ದು, ಈತ ರಬ್ಬರ್ ವ್ಯಾಪಾರಿಯಾಗಿದ್ದ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಈತ ಸ್ಫೋಟಕವನ್ನು ಬೇರೆಯವರಿಗೆ ತಯಾರು ಮಾಡಿಕೊಡುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಮನ್ನಾರ್ಕಡ್ ವಿಭಾಗೀಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್, ನಾವು ಈಗಾಗಲೇ ಆನೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೇ ಮೊದಲ ಆರೋಪಿಯನ್ನು ಪತ್ತೆ ಮಾಡಿದ್ದೇವೆ. ಇನ್ನಿಬ್ಬರನ್ನು ಪತ್ತೆ ಹಚ್ಚುವ ಸನಿಹದಲ್ಲಿ ಇದ್ದೇವೆ. ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತಪಟ್ಟ ಗರ್ಭಿಣಿ ಆನೆ ಸ್ಫೋಟಕ ತುಂಬಿದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿಲ್ಲ. ಆನೆ ಸ್ಫೋಟಕ ತುಂಬಿದ ತೆಂಗಿನಕಾಯಿಯನ್ನು ತಿಂದು ಸಾವನ್ನಪ್ಪಿದೆ ಎಂದು ತನಿಖೆ ವೇಳೆ ತಿಳಿದಿದೆ ಎಂದು ಹೇಳಿದ್ದಾರೆ.

    ಕೇರಳದಲ್ಲಿ ಬೆಳೆ ನಾಶ ಮಾಡಲು ಅಥವಾ ತಿನ್ನಲು ಬಂದ ಕಾಡುಹಂದಿಯಂತಹ ಪ್ರಾಣಿಗಳನ್ನು ಹೆದರಿಸಲು ಈ ರೀತಿಯ ಸ್ಫೋಟಕವನ್ನು ಸ್ಥಳೀಯವಾಗಿ ಬಳಸುತ್ತಾರೆ. ಸ್ಫೋಟಕವನ್ನು ಹಣ್ಣು ಮತ್ತು ಪ್ರಾಣಿಗಳ ಮಾಂಸದಲ್ಲಿ ಇಟ್ಟು ಅದನ್ನು ಸ್ಫೋಟಗೊಳಿಸಿ ಪ್ರಾಣಿಗಳನ್ನು ಓಡಿಸಲಾಗುತ್ತದೆ. ಆದರೆ ಇವರು ಆನೆಗೂ ಇದೇ ರೀತಿ ಮಾಡಿದ್ದಾರೆ. ಆದರೆ ಯಾರಿಗೂ ತೊಂದರೆ ಮಾಡದೇ ಆಹಾರವನ್ನು ಅರಸಿ ಬಂದ ಆನೆ ಇಲ್ಲಿ ದುರಂತವಾಗಿ ಸಾವನ್ನಪ್ಪಿದೆ.

    ಅಧಿಕಾರಿಗಳು ಹೇಳಿರುವ ಪ್ರಕಾರ, ಆನೆ ತೆಂಗಿನಕಾಯಿಯ ಒಂದು ಭಾಗವನ್ನು ಮುರಿದುಕೊಂಡು ಬಾಯಿಯೊಳಗೆ ಹಾಕಿಕೊಂಡಿದೆ. ಈ ವೇಳೆ ಅದು ಸ್ಫೋಟಗೊಂಡಿದ್ದು, ಆನೆಯ ಎಡಭಾಗದ ಬಾಯಿ ಸಂಪೂರ್ಣವಾಗಿ ಗಾಯಗೊಂಡಿದೆ. ಇದರಿಂದ ಆನೆಗೆ ಆಹಾರ ಮತ್ತು ನೀರನ್ನು ಸೇವಿಸಲು ಆಗಿಲ್ಲ. ಆನೆ ಬಾಯಿಯ ನೋವಿನ ಜೊತೆಗೆ ಒಂದು ದಿನವೆಲ್ಲ ನರಳಿದೆ. ನಂತರ ಅದು ಪಾಲಕ್ಕಾಡ್‍ನ ವೆಲ್ಲಿಯಾರ್ ನದಿಯಲ್ಲಿ ಬಂದು ನಿಂತುಕೊಂಡು ಪ್ರಾಣಬಿಟ್ಟಿದೆ ಎಂದು ಹೇಳಿದ್ದಾರೆ.

    ಗರ್ಭಿಣಿ ಆನೆ ಮಾನವನ ಸ್ವಾರ್ಥಕ್ಕಾಗಿ ಪ್ರಾಣ ಬಿಟ್ಟಿದೆ ಎಂದು ತಿಳಿದು ಇಡೀ ವಿಶ್ವವೇ ಮರುಗಿತ್ತು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬಹಳ ಚರ್ಚೆಯಾಗಿತ್ತು. ಇಡೀ ದೇಶದಲ್ಲೇ ಸ್ಟಾರ್ ನಟ-ನಟಿಯರು ಕ್ರಿಕೆಟ್ ಆಟಗಾರರು ಕೂಡ ಆನೆ ಸಾವಿಗೆ ನ್ಯಾಯ ಕೊಡಿಸಿ ಎಂದು ಟ್ವೀಟ್ ಮಾಡಿದ್ದರು. ಈ ವಿಚಾರವಾಗಿ ಗುರುವಾರ ಟ್ವೀಟ್ ಮಾಡಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆನೆಯ ಸಾವಿಗೆ ನ್ಯಾಯ ಸಿಗುತ್ತದೆ ಎಂದು ಹೇಳಿದ್ದರು.

  • ಸಂಕಷ್ಟಕ್ಕೊಳಗಾದ ವಿದ್ಯಾರ್ಥಿನಿಯರ ವಾಸಕ್ಕೆ ಮನೆಯನ್ನೇ ಬಿಟ್ಟುಕೊಟ್ಟ ಬದ್ರುದ್ದೀನ್

    ಸಂಕಷ್ಟಕ್ಕೊಳಗಾದ ವಿದ್ಯಾರ್ಥಿನಿಯರ ವಾಸಕ್ಕೆ ಮನೆಯನ್ನೇ ಬಿಟ್ಟುಕೊಟ್ಟ ಬದ್ರುದ್ದೀನ್

    – ವಿದ್ಯಾರ್ಥಿನಿಯರಿಗೆ ಮನೆ ಬಿಟ್ಟು, ಸಂಬಂಧಿಕರ ಮನೆಗೆ ತೆರಳಿದರು

    ಮಂಗಳೂರು: ಲಾಕ್‍ಡೌನ್ ಸಂದರ್ಭದಲ್ಲಿ ಮಂಗಳೂರಿನಲ್ಲಿ ತೀವ್ರ ಸಂಕಷ್ಟಕ್ಕೆ ಒಳಗಾದ ಕೇರಳದ ಮೂವರು ವಿದ್ಯಾರ್ಥಿನಿಯರ ವಾಸಕ್ಕೆ ತನ್ನ ಮನೆಯನ್ನೇ ಬಿಟ್ಟುಕೊಟ್ಟು ಬದ್ರುದ್ದೀನ್ ಮಾನವೀಯತೆ ಮೆರೆದಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲಾಯಿ ನಿವಾಸಿ ಬದ್ರುದ್ದೀನ್ ಯುವತಿಯರ ವಾಸಕ್ಕೆ ಮನೆ ಬಿಟ್ಟುಕೊಟ್ಟವರು. ಕೇರಳ ಮೂಲದ ಯುವತಿಯರಾದ ಆದಿರಾ, ನಿಲೋಫರ್, ಸೋನಿಯಾ ಲಾಕ್‍ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದರು. ಕೇರಳದ ತ್ರಿಶೂರ್, ಪಾಲಕ್ಕಾಡ್, ಕೋಝಿಕ್ಕೋಡ್ ಜಿಲ್ಲೆಯ ನಿವಾಸಿಗಳಾದ ಈ ವಿದ್ಯಾರ್ಥಿನಿಯರು ಮಂಗಳೂರಿನ ಬಲ್ಲಾಲ್ ಬಾಗ್ ನ ಖಾಸಗಿ ಕಾಲೇಜಿನಲ್ಲಿ ಫಿಸಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದರು. ಕಾಲೇಜು ಸಮೀಪದ ಪಿ.ಜಿ.ಯಲ್ಲಿ ತಂಗಿದ್ದ ಇವರಿಗೆ ಲಾಕ್‍ಡೌನ್ ಸಂದರ್ಭದಲ್ಲಿ ಊಟ, ತಿಂಡಿಯ ಸಮಸ್ಯೆಯೊಂದಿಗೆ ಪಿ.ಜಿ.ಯನ್ನೂ ಖಾಲಿ ಮಾಡಬೇಕಾದ ಪರಿಸ್ಥಿತಿ ಬಂದಿತ್ತು.

    ವಿದ್ಯಾರ್ಥಿನಿಯರು ತಮ್ಮ ಸಂಕಷ್ಟವನ್ನು ಮನೆಯವರಿಗೆ ತಿಳಿಸಿದ್ದರು. ಓರ್ವ ವಿದ್ಯಾರ್ಥಿನಿಯ ತಂದೆ, ಬೇರೆಯವರ ಮೂಲಕ ಬದ್ರುದ್ದೀನ್ ಅವರಿಗೆ ಪರಿಸ್ಥಿತಿ ತಿಳಿಸಿದ್ದಾರೆ. ತಕ್ಷಣವೇ ಬದ್ರುದ್ದೀನ್ ವಿದ್ಯಾರ್ಥಿನಿಯರನ್ನು ಸಂಪರ್ಕಿಸಿ ಅವರಿಗೆ ಉಳಿದುಕೊಳ್ಳಲು ಮನೆಯನ್ನು ನೀಡಿದ್ದಾರೆ. ಮೂಲತಃ ಬಂಟ್ವಾಳ ತಾಲೂಕಿನ ಕಲಾಯಿ ನಿವಾಸಿಯಾಗಿರುವ ಇವರು ಕುದ್ರೋಳಿಯ ಮಸೀದಿ ಬಳಿ ಬಾಡಿಗೆ ಮನೆಯೊಂದರಲ್ಲಿ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯೊಂದಿಗೆ ವಾಸವಿದ್ದಾರೆ. ತಾವು ವಾಸವಿದ್ದ ಮನೆಯನ್ನು ವಿದ್ಯಾರ್ಥಿನಿಯರಿಗೆ ಬಿಟ್ಟುಕೊಟ್ಟ ಬದ್ರುದ್ದೀನ್, ತಮ್ಮ ಕುಟುಂಬದೊಂದಿಗೆ ಕುದ್ರೋಳಿಯ ಅಳಕೆಯಲ್ಲಿರುವ ಅತ್ತೆ ಮನೆಗೆ ತೆರಳಿ ಲಾಕ್‍ಡೌನ್ ಮುಗಿಯುವವರೆಗೆ ಅಲ್ಲಿಯೇ ತಂಗಿದ್ದರು.

    ಮೂರನೇ ಹಂತದ ಲಾಕ್‍ಡೌನ್ ಮುಕ್ತಾಯದ ಬಳಿಕ ಆನ್‍ಲೈನ್ ಪಾಸ್ ಪಡೆದು ವಿದ್ಯಾರ್ಥಿನಿಯರನ್ನು ಕೇರಳಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಬದ್ರುದ್ದೀನ್ ಮಾಡಿದ್ದರು. ವಿದ್ಯಾರ್ಥಿನಿಯರನ್ನು ಕೇರಳ-ಕರ್ನಾಟಕ ಗಡಿ ತಲಪಾಡಿಗೆ ಖುದ್ದು ಅವರೇ ಕರೆದುಕೊಂಡು ಹೋಗಿ ಬೀಳ್ಕೊಟ್ಟಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ತೆಗೆದ ಪೋಟೊವನ್ನು ಬದ್ರುದ್ದೀನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಮಾನವೀಯ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.

  • ಮಗನನ್ನು ಮನೆಗೆ ಬಿಟ್ಟು ಬರುತ್ತೇನೆ- ಸಾಮೂಹಿಕ ಅತ್ಯಾಚಾರ ನಡೆಸಿದ ಕ್ರೂರಿಗಳಿಗೆ ಮಹಿಳೆ ಪ್ರಮಾಣ

    ಮಗನನ್ನು ಮನೆಗೆ ಬಿಟ್ಟು ಬರುತ್ತೇನೆ- ಸಾಮೂಹಿಕ ಅತ್ಯಾಚಾರ ನಡೆಸಿದ ಕ್ರೂರಿಗಳಿಗೆ ಮಹಿಳೆ ಪ್ರಮಾಣ

    – ಪುಣ್ಯಕೋಟಿ ಕಥೆ ನೆನಪಿಸುತ್ತೆ ಘಟನೆ
    – ಸಿಗರೇಟ್ ಬೆಂಕಿಯಿಂದ ಹಿಂಸಿಸಿದ ಕ್ರೂರಿಗಳು
    – ಪತಿಯ ಸಹಾಯದಿಂದ ಆತನ ಸ್ನೇಹಿತರಿಂದಲೇ ಗ್ಯಾಂಗ್ ರೇಪ್

    ತಿರುವನಂತಪುರಂ: ಕೇರಳದ ತಿರುವನಂತಪುರಂ ಅಮಾನವೀಯ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದು, ಇತ್ತೀಚೆಗಷ್ಟೆ ಗರ್ಭಿಣಿ ಆನೆಗೆ ಪೈನಾಪಲ್ ಹಣ್ಣಿನಲ್ಲಿ ಪಟಾಕಿ ಇಟ್ಟು ತಿನ್ನಿಸಿ ಸಾಯಿಸಲಾಗಿತ್ತು. ಇದೀಗ ಪುಟ್ಟ ಮಗನೆದುರೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಸಿಗರೇಟ್ ಬೆಂಕಿಯಿಂದ ಸುಟ್ಟು, ಸಾಮೂಹಿಕ ಅತ್ಯಾಚಾರ ಎಸಗಿ ಕ್ರೂರವಾಗಿ ವರ್ತಿಸಿರುವ ಘಟನೆ ನಡೆದಿದೆ.

    ಕೇರಳದ ತಿರುವನಂತಪುರಂನ 25 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದ್ದು, ಕ್ರೂರವಾಗಿ ವರ್ತಿಸಿರುವ ಕುರಿತು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಪತಿ ಹಾಗೂ ಮಗನೊಂದಿಗೆ ಇದ್ದಾಗ ಆತನ ಸ್ನೇಹಿತರೇ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದು, ನಂತರ ಪುಟ್ಟ ಮಗನೆದುರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯ ಪತಿ ಸೇರಿದಂತೆ ಐವರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.

    ಪ್ರಕರಣದ ಕುರಿತು ಮಹಿಳೆ ಹೇಳಿಕೆ ನೀಡಿದ್ದು, ನನ್ನನ್ನು ವಾಹನದಲ್ಲಿ ಎಳೆದು ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದರು. ನಂತರ ವಿಪರೀತವಾಗಿ ಥಳಿಸಿದರು ನಾನು ಪ್ರಜ್ಞಾಹೀನಳಾದೆ. ನಂತರ ನನ್ನ ಮಗುವಿನ ಅಳು ಶಬ್ದ ಕೇಳಿ ಪ್ರಜ್ಞೆ ಬಂದಿತು. ಆಗ ಸಿಗರೇಟ್ ಬೆಂಕಿಯಿಂದ ಸುಟ್ಟ ಗಾಯಗಳಿದ್ದವು ಎಂದು ತಿಳಿಸಿದ್ದಾರೆ.

    ನಾನು ಎಚ್ಚರಗೊಂಡಾಗ ನನ್ನ ಬಟ್ಟೆ ಇರಲಿಲ್ಲ ಕೇವಲ ಟಾಪ್ ಮಾತ್ರ ಇತ್ತು. ಮಗ ಅಳುತ್ತಿದ್ದ, ನನ್ನ ಮಗನನ್ನು ಮನೆಗೆ ಕರೆದುಕೊಂಡು ಹೋಗಲು ಬಿಡಿ ಎಂದು ಮನವಿ ಮಾಡಿದೆ. ಅಲ್ಲದೆ ನನ್ನ ಮಗನನ್ನು ಮನೆಗೆ ಬಿಟ್ಟು ಖಂಡಿತ ಮರಳಿ ಬರುತ್ತೇನೆ ಎಂದು ಮಾತು ಕೊಟ್ಟೆ. ನಂತರ ಮಗನೊಂದಿಗೆ ಓಡಿ ಬಂದು ಮುಖ್ಯ ರಸ್ತೆ ತಲುಪಿದೆ. ಮೋಟರ್ ಸೈಕಲ್‍ನಲ್ಲಿ ಬಂದ ವ್ಯಕ್ತಿ ನಮ್ಮ ಕಾರು ತಲುಪಲು ಸಹಾಯ ಮಾಡಿದ. ನಂತರ ಮನೆ ತಲುಪಿದೆವು ಎಂದು ವಿವರಿಸಿದ್ದಾರೆ.

    ಮಹಿಳೆ ತನ್ನ ಇಬ್ಬರು ಮಕ್ಕಳು ಹಾಗೂ ಪತಿಯೊಂದಿಗೆ ಗುರುವಾರ ತಿರುವನಂತಪುರಂ ಬಳಿಯ ಪುತ್ತುಕುರಿಚಿಯ ಬೀಚ್‍ಗೆ ತೆರಳಿದ್ದರು. ನಂತರ ಪತಿ ಮಹಿಳೆಯನ್ನು ತನ್ನ ಸ್ನೇಹಿತರಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಈ ವೇಳೆ ಆತನ ನಾಲ್ವರು ಸ್ನೇಹಿತರು ಮಹಿಳೆಗೆ ಮದ್ಯ ಕುಡಿಯುವಂತೆ ಒತ್ತಾಯಿಸಿದ್ದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

    ಪ್ರತಿ ದಿನ ಸಂಜೆ ಈ ಕುಟುಂಬ ಬೀಚ್‍ಗೆ ತೆರಳುತ್ತಿತ್ತು. ಆದರೆ ಈ ಬಾರಿ ಮಹಿಳೆಯ ಪತಿ ಆತನ ಸ್ನೇಹಿತರಿಗೆ ಮುಂಚಿತವಾಗಿ ಮಾಹಿತಿ ನೀಡಿದ್ದು, ಮದ್ಯದ ವ್ಯವಸ್ಥೆಯನ್ನೂ ಮಾಡಿದ್ದಾನೆ. ಸಂತ್ರಸ್ತೆಯನ್ನು ತನ್ನ ಸ್ನೇಹಿತರ ಬಳಿ ಬಿಟ್ಟು ಮರಳಿದ್ದಾನೆ. ಅವರು ಮದ್ಯ ಕುಡಿಯುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ.

    ರಸ್ತೆ ಬಳಿ ಸಹಾಯ ಮಾಡಿದ ವ್ಯಕ್ತಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಡಿಸ್ಚಾರ್ಜ್ ಆಗಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಸಂತ್ರಸ್ತೆಯ ಪತಿ ಹಾಗೂ ಆತನ ನಾಲ್ವರು ಸ್ನೇಹಿತನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

  • 14 ದಿನ ಊಟ, ನೀರು ಸೇವಿಸಲಾಗದೇ ನರಳಿ ನರಳಿ ಗರ್ಭಿಣಿ ಆನೆ ಸಾವು

    14 ದಿನ ಊಟ, ನೀರು ಸೇವಿಸಲಾಗದೇ ನರಳಿ ನರಳಿ ಗರ್ಭಿಣಿ ಆನೆ ಸಾವು

    – ಮರಣೋತ್ತರ ಪರೀಕ್ಷೆ ವರದಿ ಬಯಲು

    ತಿರುವನಂತಪುರಂ: ಬಾಯಿಯಲ್ಲಿ ಪೈನಾಪಲ್‍ನಲ್ಲಿ ಪಟಾಕಿ ಸಿಡಿದು 15 ವರ್ಷದ ಗರ್ಭಿಣಿ ಆನೆಯ ಸಾವಿನ ದುರಂತಕ್ಕೆ ಇಡೀ  ದೇಶವೇ ಮರಗುತ್ತಿದೆ. ಇದೀಗ ಆನೆಯ ಸಾವಿನ ಪ್ರಾಥಮಿಕ ಮರಣೋತ್ತರ ವರದಿಯನ್ನು ಅರಣ್ಯ ಇಲಾಖೆ ಬಿಡುಗಡೆ ಮಾಡಿದೆ.

    ಆನೆಯ ಬಾಯಲ್ಲಿ ಪೈನಾಪಲ್‍ ಸ್ಫೋಟಗೊಂಡ ಪರಿಣಾಮ 14 ದಿನಗಳ ಕಾಲ ಆಹಾರವನ್ನೇ ಸೇವಿಸಿಲ್ಲ ಎಂಬ ಅಂಶ ಮರಣೋತ್ತರ ಪರೀಕ್ಷೆಯಿಂದ ಬಯಲಾಗಿದೆ. ಆನೆಯ ಮರಣೋತ್ತರ ಪರೀಕ್ಷೆಯನ್ನು ಮನ್ನಾರ್ ಕಾಡ್ ವಿಭಾಗೀಯ ಆಸ್ಪತ್ರೆಯ ವೈದ್ಯರು ನಡೆಸಿದ್ದಾರೆ. ಪಟಾಕಿ ಸ್ಫೋಟದ ಪರಿಣಾಮ ಆನೆಗೆ ಶ್ವಾಸಕೋಶದ ವೈಫಲ್ಯವಾಗಿದೆ. ಹೀಗಾಗಿ ಆನೆ ಮೃತಪಟ್ಟಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಗರ್ಭಿಣಿ ಆನೆ ಹತ್ಯೆಗೈದ ಪ್ರಕರಣ- ಮೂವರು ಶಂಕಿತರು ವಶಕ್ಕೆ

    ಕೇರಳದ ಪಾಲಕ್ಕಾಡ್ ಜಿಲ್ಲೆಗೆ ಬಂದಿದ್ದ ಗರ್ಭಿಣಿ ಆನೆಗೆ ಹಸಿವು ತಾಳಲಾಗದೇ ಪೈನಾಪಲ್ ಹಣ್ಣು ತಿಂದಿದೆ. ಈ ವೇಳೆ ಬಾಯಿಯಲ್ಲಿ ಪಟಾಕಿ ಸ್ಫೋಟಗೊಂಡಿದ್ದು, ಆನೆಗೆ ಗಂಭೀರವಾಗಿ ಗಾಯವಾಗಿದೆ. ಇದರಿಂದ ಆನೆಗೆ ಆಹಾರ ಸೇವೆನೆ ಮಾಡಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಅವಳ ನಂಬಿಕೆಯನ್ನು ನಾವು ಉಳಿಸಿಕೊಳ್ಳಲಿಲ್ಲ: ವಿಜಯಲಕ್ಷ್ಮಿ ದರ್ಶನ್

    ಅಷ್ಟೇ ಅಲ್ಲದೇ ಆನೆಗೆ ನೀರನ್ನು ಕುಡಿಯಲೂ ಸಹ ಸಾಧ್ಯವಾಗಲಿಲ್ಲ. ಹೀಗಾಗಿ ಗರ್ಭಿಣಿ ಆನೆ ಸುಮಾರು ಎರಡು ವಾರ ಆಹಾರ, ನೀರು ಏನನ್ನು ಸೇವಿಸಲು ಸಾಧ್ಯವಾಗದೇ ನೋವನ್ನು ಅನುಭವಿಸಿದೆ. ಈ ನೋವನ್ನು ನಿವಾರಿಸಿಕೊಳ್ಳಲು ಆನೆ ಸದಾ ನೀರಿನಲ್ಲೇ ಕಾಲಕಳೆಯುತ್ತಿದೆ. ಕೊನೆಗೆ 14 ದಿನಗಳ ಕಾಲ ಹಸಿವು, ಗಾಯದ ನೋವು ಸಹಿಸಿಕೊಂಡು ನೀರಿನಲ್ಲಿ ಮುಳುಗಿ ಉಸಿರಾಡಲು ಸಾಧ್ಯವಾಗದೇ ಮೃತಪಟ್ಟಿದೆ ಎಂದು ವರದಿಯಲ್ಲಿ ಬಯಲಾಗಿದೆ.

    ಸದ್ಯಕ್ಕೆ ಗರ್ಭಿಣಿ ಆನೆಯನ್ನು ಹತ್ಯೆಗೈದ ಪ್ರಕರಣದ ಸಂಬಂಧ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಆರೋಪಿ ಕೇರಳದ ಮಲಪ್ಪುರಂ ಜಿಲ್ಲೆಯ ಮನ್ನಾರ್ಕಡ್ ಅರಣ್ಯ ಪ್ರದೇಶದನಾಗಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ಗರ್ಭಿಣಿ ಆನೆ ಮೃತಪಟ್ಟಿದೆ. ಈ ಸಂಬಂಧ ಅನೇಕರು ನಮಗೆ ದೂರು ನೀಡಿದ್ದಾರೆ. ನಿಮ್ಮ ಕಾಳಜಿ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ ಎಂದು ಭರವಸೆ ನೀಡುತ್ತೇನೆ. ನ್ಯಾಯ ಮೇಲುಗೈ ಸಾಧಿಸುತ್ತದೆ” ಎಂದು ತಿಳಿಸಿದ್ದಾರೆ.

  • ಗರ್ಭಿಣಿ ಆನೆ ಹತ್ಯೆಗೈದ ಪ್ರಕರಣ- ಮೂವರು ಶಂಕಿತರು ವಶಕ್ಕೆ

    ಗರ್ಭಿಣಿ ಆನೆ ಹತ್ಯೆಗೈದ ಪ್ರಕರಣ- ಮೂವರು ಶಂಕಿತರು ವಶಕ್ಕೆ

    ತಿರುವನಂತಪುರಂ: ಪೈನಾಪಲ್‍ನಲ್ಲಿ ಪಟಾಕಿ ಇಟ್ಟು 15 ವರ್ಷದ ಗರ್ಭಿಣಿ ಆನೆಯನ್ನು ಹತ್ಯೆಗೈದ ಪ್ರಕರಣದ ಸಂಬಂಧ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

    ಶಂಕಿತ ಮೂವರು ಆರೋಪಿಗಳು ಕೇರಳದ ಮಲಪ್ಪುರಂ ಜಿಲ್ಲೆಯ ಮನ್ನಾರ್ಕಡ್ ಅರಣ್ಯ ಪ್ರದೇಶದವರಾಗಿದ್ದಾರೆ. ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ಗರ್ಭಿಣಿ ಆನೆ ಮೃತಪಟ್ಟಿದೆ. ಈ ಸಂಬಂಧ ಅನೇಕರು ನಮಗೆ ದೂರು ನೀಡಿದ್ದಾರೆ. ನಿಮ್ಮ ಕಾಳಜಿ ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ ಎಂದು ಭರವಸೆ ನೀಡುತ್ತೇನೆ. ನ್ಯಾಯ ಮೇಲುಗೈ ಸಾಧಿಸುತ್ತದೆ ಎಂದು ತಿಳಿಸಿದ್ದಾರೆ.

    ಮೂವರು ಶಂಕಿತರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆಗಳು ಜಂಟಿಯಾಗಿ ಪ್ರಕರಣದ ತನಿಖೆ ನಡೆಸಲಿವೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ಮತ್ತು ಜಿಲ್ಲಾ ಅರಣ್ಯ ಅಧಿಕಾರಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿದ್ದರು. ಆರೋಪಿಗಳನ್ನು ನ್ಯಾಯಕ್ಕೆ ತರಲು ನಾವು ಎಲ್ಲ ಸಿದ್ಧತೆ ನಡೆಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

    ಏನಿದು ಪ್ರಕರಣ?:
    ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸ್ಥಳೀಯರು ಬುಧವಾರ ಪಟಾಕಿ ತುಂಬಿದ ಪೈನಾಪಲ್ ಹಣ್ಣನ್ನು ಗರ್ಭಿಣಿ ಆನೆಗೆ ತಿನ್ನಿಸಿದ್ದರು. ನಂತರ ಆನೆಯ ಬಾಯಿಯಲ್ಲಿ ಪಟಾಕಿ ಬ್ಲಾಸ್ಟ್ ಆಗಿ ಗಂಭೀರವಾಗಿ ಗಾಯಗೊಂಡಿತ್ತು. ಗರ್ಭಿಣಿ ಆನೆ ಯಾವೊಬ್ಬ ಗ್ರಾಮಸ್ಥರಿಗೂ ತೊಂದರೆ ನೀಡಿರಲಿಲ್ಲ. ಬಾಯಿಯಲ್ಲಿ ಪಟಾಕಿ ಸಿಡಿಯುತ್ತಿದ್ದಂತೆ ನೋವಿನಲ್ಲಿ ರಸ್ತೆ ತುಂಬಾ ಓಡಾಡಿತ್ತು. ಬಳಿಕ ವೆಲ್ಲಿಯಾರ್ ನದಿಯಲ್ಲಿ ಮುಳುಗಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಆನೆಯನ್ನು ಮೇಲೆತ್ತಲು ಅರಣ್ಯ ಇಲಾಖೆ ಅಧಿಕಾರಿಗಳು ನೀಲಕಂಠನ್ ಹಾಗೂ ಸುರೇಂದ್ರನ್ ಎಂಬ ಎರಡು ಆನೆಗಳನ್ನು ಕರೆ ತಂದಿದ್ದು, ಅಷ್ಟೊತ್ತಿಗಾಗಲೇ ಸಂಜೆ 4ರ ಸುಮಾರಿಗೆ ಆನೆ ನದಿಯಲ್ಲೇ ಸಾವನ್ನಪ್ಪಿತ್ತು.

    ಮಲಪ್ಪುರಂ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಅರಣ್ಯಾಧಿಕಾರಿಯೊಬ್ಬರು ಆನೆ ನೋವಿನ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿದ್ದರು.

    ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಕೇಂದ್ರ ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್, ಕೇರಳದಲ್ಲಿ ಆನೆಯ ಹತ್ಯೆಯ ಪ್ರಕರಣವನ್ನು ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲು ಸೂಚನೆ ನೀಡಲಾಗಿದೆ. ಆಹಾರದಲ್ಲಿ ಪಟಾಕಿ ಇಟ್ಟು ಕೊಲ್ಲುವುದು ಭಾರತೀಯ ಸಂಸ್ಕೃತಿಯಲ್ಲ ಎಂದು ಕಿಡಿಕಾರಿದ್ದರು.