Tag: kerala

  • ಪ್ರಧಾನಿಗೆ ಪತ್ರ ಬರೆದು 100 ರೂ. ಚಹಾವನ್ನು 15 ರೂ.ಗೆ ಇಳಿಸಿದ ಗ್ರಾಹಕ

    ಪ್ರಧಾನಿಗೆ ಪತ್ರ ಬರೆದು 100 ರೂ. ಚಹಾವನ್ನು 15 ರೂ.ಗೆ ಇಳಿಸಿದ ಗ್ರಾಹಕ

    ತಿರುವನಂತಪುರಂ: 100 ರೂ.ಗೆ ಮಾರಾಟವಾಗುತ್ತಿದ್ದ ಚಹಾವನ್ನು ಗ್ರಾಹರೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ 15 ರೂ.ಗೆ ಇಳಿಸಿದ್ದಾರೆ.

    ಕೇರಳದ ತ್ರಿಶ್ಯೂರ್‌ ನಿವಾಸಿ ಶಾಜಿ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬಾರಿಗೆ ಬೆಲೆಗೆ ಚಹಾ ಮತ್ತು ತಿಂಡಿಗಳು ಮಾರಾಟವಾಗುತ್ತಿರುವುನ್ನು ನೋಡಿ ಪ್ರಧಾನಿಗೆ ಮೇಲ್‌ ಮಾಡಿದ್ದರು. ಈ ಮೇಲ್‌ಗೆ ಪ್ರಧಾನಿ ಸ್ಪಂದಿಸಿ ಗ್ರಾಹಕರ ಹಕ್ಕುಗಳ ಪರವಾಗಿ ನಿಂತಿದ್ದಾರೆ. ಎಲ್ಲ ವಿಮಾನ ನಿಲ್ದಾಣಗಳಲ್ಲಿ ಚಹಾ ಮತ್ತು ತಿಂಡಿಗಳಿಗೆ ದರ ನಿಗದಿ ಮಾಡಿ ಪ್ರಧಾನಿ ಸಚಿವಾಲಯ ಆದೇಶ ಪ್ರಕಟಿಸಿದೆ.

    ಆಗಿದ್ದು ಏನು?
    ಶಾಜಿಯವರು ಕೊಚ್ಚಿ ವಿಮಾನ ನಿಲ್ದಾಣಕ್ಕೆ ತೆರಳಿದಾಗ ಚಹಾಗೆ 100 ರೂ, ಮಜ್ಜಿಗೆಗೆ 110 ರೂ. ತಿಂಡಿಗೆ 200 ರೂ. ನೋಡಿ ಶಾಕ್‌ ಆಗಿದ್ದಾರೆ. ಇಷ್ಟೊಂದು ದುಬಾರಿ ದರದಲ್ಲಿ ಯಾಕೆ ಮಾರಾಟ ಮಾಡಲಾಗುತ್ತದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಅಧಿಕಾರಿಗಳ ಜೊತೆ ಈ ವಿಚಾರಕ್ಕೆ ಜಗಳ ಮಾಡಿದರೂ ಸಮಸ್ಯೆ ಪರಿಹಾರವಾಗದ ಕಾರಣ ನೇರವಾಗಿ ಪ್ರಧಾನಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನ ಮಹಿಳೆ

    ದೂರು ನೀಡಿದ ನಂತರದ ದಿನದಲ್ಲಿ ಪ್ರಧಾನಿ ವೆಬ್‌ಸೈಟ್‌ ಗಮನಿಸಿದೆ. ಈ ವೇಳೆ ನನ್ನ ಪತ್ರದ ಹಿನ್ನೆಲೆಯಲ್ಲಿ ಚಹಾಗೆ 15 ರೂ., ಕಾಫಿಗೆ 20 ರೂ., ವಡೆಗೆ 15 ರೂ. ಗರಿಷ್ಟ ದರ ನಿಗದಿ ಪಡಿಸುವಂತೆ ವಿಮಾನ ನಿಲ್ದಾಣಗಳಿಗೆ ನಿರ್ದೇಶನ ನೀಡಿರುವ ವಿಚಾರ ತಿಳಿಯಿತು ಎಂದು ಶಾಜಿ ತಿಳಿಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಶಾಜಿ, ವಿಮಾನ ನಿಲ್ದಾಣಗಳಿಗೆ ಪ್ರಯಾಣಿಕರು ಸಾಧಾರಣವಾಗಿ 2-3 ಗಂಟೆ ಮೊದಲೇ ಬರುತ್ತಾರೆ. ಹೀಗಾಗಿ ವಿಮಾನ ನಿಲ್ದಾಣಗಳಲ್ಲಿರುವ ಆಹಾರವನ್ನು ಬಲವಂತವಾಗಿ ದುಬಾರಿ ಬೆಲೆ ನೀಡಿ ಸೇವಿಸಬೇಕಾಗುತ್ತದೆ. ಹಿರಿಯರು ಮತ್ತು ಹಜ್‌ ಪ್ರವಾಸಿಗರಿಗೆ ಇದು ಬಹಳ ದುಬಾರಿಯಾಗುತ್ತದೆ ಎಂದು ಹೇಳಿದರು.

    ಎಂಆರ್‌ಪಿ ದರ ನಿಗದಿಯಾಗಿದ್ದರೂ ಅಂಗಡಿಗಳು 4-5 ಪಟ್ಟು ಹೆಚ್ಚು ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂತು. ಈ ವಿಚಾರವನ್ನು ಕೊಚ್ಚಿ ವಿಮಾನ ನಿಲ್ದಾಣ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಿದ್ದೆ. ಆದರೆ ನನಗೆ ಯಾವುದೇ ಸಕರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ನಾನು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು ದೂರು ನೀಡಿದ್ದೆ ಎಂದು ಶಾಜಿ ವಿವರಿಸಿದರು.

  • ನಾಣ್ಯ ನುಂಗಿ 3 ವರ್ಷದ ಬಾಲಕ ಸಾವು – ಕಂಟೈನ್ಮೆಂಟ್ ವಲಯದಲ್ಲಿ ಮನೆ ಇದ್ದುದ್ದೇ ತಪ್ಪಾಯ್ತು

    ನಾಣ್ಯ ನುಂಗಿ 3 ವರ್ಷದ ಬಾಲಕ ಸಾವು – ಕಂಟೈನ್ಮೆಂಟ್ ವಲಯದಲ್ಲಿ ಮನೆ ಇದ್ದುದ್ದೇ ತಪ್ಪಾಯ್ತು

    ತಿರುವನಂತಪುರಂ: ಆಕಸ್ಮಿಕವಾಗಿ ನಾಣ್ಯವನ್ನು ನುಂಗಿ ಮೂರು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಆದರೆ ಸರ್ಕಾರಿ ಆಸ್ಪತ್ರೆಗಳ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ.

    ಅಲುವಾ ಬಳಿಯ ಕೊಡುಂಗಲ್ಲೂರ್‌ನಲ್ಲಿ ಬಾಲಕ ವಾಸಿಸುತ್ತಿದ್ದನು. ಆದರೆ ಕೋವಿಡ್ 19 ನಿಂದಾಗಿ ಬಾಲಕ ವಾಸಿಸುತ್ತಿದ್ದ ಮನೆ ಕಂಟೈನ್ಮೆಂಟ್ ವಲಯದಲ್ಲಿತ್ತು. ಹೀಗಾಗಿ ಕಂಟೈನ್ಮೆಂಟ್ ವಲಯದಿಂದ ಬಂದಿದ್ದರಿಂದ ಆಸ್ಪತ್ರೆಯಲ್ಲಿ ಬಾಲಕನನ್ನು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಆದ್ದರಿಂದ ಚಿಕಿತ್ಸೆ ಸಿಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ಶನಿವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಮನೆಯಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾಲಕ ನಾಣ್ಯವನ್ನು ನುಂಗಿದ್ದಾನೆ. ಸ್ವಲ್ಪ ಸಮಯದ ನಂತರ ಬಾಲಕ ಅಸ್ವಸ್ಥನಾಗಿದ್ದಾನೆ. ತಕ್ಷಣ ಪೋಷಕರು ಮಗುವನ್ನು ಅಲುವಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಕ್ಸ ರೇ ಮಾಡಿದ್ದು, ನಾಣ್ಯವಿರುವ ಬಗ್ಗೆ ವೈದ್ಯರು ಪೋಷಕರಿಗೆ ತಿಳಿಸಿದ್ದಾರೆ.

    ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಮಕ್ಕಳ ಶಸ್ತ್ರಚಿಕಿತ್ಸಕರಿಲ್ಲದ ಕಾರಣ ಬಾಲಕನನ್ನು ದಾಖಲಿಸಿಕೊಂಡಿಲ್ಲ. ಆದ್ದರಿಂದ ಬಾಲಕನನ್ನು ಎರ್ನಾಕುಲಂ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿನ ವೈದ್ಯರು ಮಗುವನ್ನು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಲೆಪ್ಪಿಯದ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ. ಅಲ್ಲಿಯೂ ಬಾಲಕನ್ನು ಅಡ್ಮಿಟ್ ಮಾಡಿಕೊಳ್ಳಲು ನಿರಾಕರಿಸಿದ್ದರು ಎಂದು ಸಂಬಂಧಿಕರು ಆರೋಪಿಸಿದ್ದಾರೆ.

    ವೈದ್ಯರು ಮಗುವಿಗೆ ಹಣ್ಣುಗಳನ್ನು ನೀಡುವಂತೆ ಪೋಷಕರಿಗೆ ಸಲಹೆ ನೀಡಿದ್ದಾರೆ. ಕೊನೆಗೆ ಪೋಷಕರು ಮಗುವನ್ನು ಮತ್ತೆ ತಮ್ಮ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಸಂಜೆಯ ವೇಳೆಗೆ ಬಾಲಕನ ಸ್ಥಿತಿ ಗಂಭೀರವಾಗಿದೆ. ಇದರಿಂದ ಗಾಬರಿಯಾದ ಪೋಷಕರು ಮತ್ತೆ ಅಲುವಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಮಾರ್ಗದಲ್ಲಿಯೇ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗುವುದು. ಕೋವಿಡ್ ಟೆಸ್ಟ್‌ಗೆ ಬಾಲಕನಿಂದ ಸ್ವ್ಯಾಬ್ ಸಂಗ್ರಹಿಸಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ತಿಳಿದು ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಕೆ.ಕೆ. ಶೈಲಜಾ. “ನಾಣ್ಯ ನುಂಗಿ ಬಾಲಕ ಮೃತಪಟ್ಟ ಘಟನೆ ಅತ್ಯಂತ ದುರದೃಷ್ಟಕರ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಈ ಪ್ರಕರಣ ಕುರಿತು ಸಮಗ್ರ ವಿಚಾರಣೆಯ ನಂತರ ವರದಿಯನ್ನು ಸಲ್ಲಿಸುವಂತೆ ಪ್ರಧಾನ ಕಾರ್ಯದರ್ಶಿಗೆ ಆದೇಶ ನೀಡಿದ್ದಾರೆ. ಜೊತೆಗೆ ಸಂಬಂಧಿಕರು ಮಾಡುತ್ತಿರುವ ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ಸಾವನ್ನಪ್ಪಿದ ಮಗನ ನೆನಪಿನಲ್ಲಿ 61 ಭಾರತೀಯರನ್ನು ದುಬೈನಿಂದ ಕರೆಸುತ್ತಿರುವ ತಂದೆ

    ಸಾವನ್ನಪ್ಪಿದ ಮಗನ ನೆನಪಿನಲ್ಲಿ 61 ಭಾರತೀಯರನ್ನು ದುಬೈನಿಂದ ಕರೆಸುತ್ತಿರುವ ತಂದೆ

    ತಿರುವನಂತಪುರಂ: ಸಾವನ್ನಪ್ಪಿದ ಮಗನ ನೆನಪಿನಲ್ಲಿ ಕೇರಳದ ಮೂಲದ ತಂದೆಯೊಬ್ಬರು ದುಬೈನಲ್ಲಿ ಸಿಲುಕಿದ್ದ ಭಾರತೀಯರು ತಾಯ್ನಾಡಿಗೆ ವಾಪಸ್ ಬರಲು ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದಾರೆ.

    ಕೇರಳದ ತಿರುವನಂತಪುರಂನ ಟಿ.ಎನ್ ಕೃಷ್ಣಕುಮಾರ್ ಅವರ ಮಗ ಕಳೆದ ವರ್ಷ ರಸ್ತೆ ಅಫಘಾತದಲ್ಲಿ ಮೃತಪಟ್ಟಿದ್ದರು. ಈ ಮಗನ ನೆನಪಿನಲ್ಲಿ ಕೃಷ್ಣ ಕುಮಾರ್ ಅವರು, ದುಬೈನಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್ ಕರೆಸಲು ತೀರ್ಮಾನ ಮಾಡಿದ್ದರು. ಹೀಗಾಗಿ ಸುಮಾರು 61 ಕೇರಳಿಗರು ಭಾರತಕ್ಕೆ ದುಬೈನಿಂದ ವಾಪಸ್ ಬರಲು ತಮ್ಮ ಸ್ವಂತ ಹಣದಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡಿ ಮಾನವೀಯತೆ ಮರೆದಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಖಾಸಗಿ ಸಂಸ್ಥೆಯಲ್ಲಿ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕರಾಗಿ ಉದ್ಯೋಗದಲ್ಲಿರುವ ಕೃಷ್ಣಕುಮಾರ್ ಅವರು, ಈ ಕೊರೊನಾ ಸಮಯದಲ್ಲಿ ಸಾಕಷ್ಟು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಅಂತವರಿಗೆ ನಾನು ಸಹಾಯ ಮಾಡಲು ಬಯಸುತ್ತೇನೆ. ದುಬೈನಲ್ಲಿ ಕೆಲಸ ಮಾಡುವ ನಮ್ಮ ದೇಶದ ಕೆಲವರು ಅಲ್ಲಿ ಕೆಲಸ ಕಳೆದುಕೊಂಡು ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಅಂತವರಿಗೆ ಸಹಾಯ ಮಾಡಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.

    ಇವರ ಪುತ್ರ 2019ರಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪುತ್ರನ ನೆನಪಿನಲ್ಲಿ ಇವರು 61 ಜನರನ್ನು 14 ಲಕ್ಷ ಖರ್ಚು ಮಾಡಿ ಇಂಡಿಯಾಗೆ ವಾಪಸ್ ಕರೆಸುತ್ತಿದ್ದಾರೆ. ಇವರು ಕೂಡ 32 ವರ್ಷ ದುಬೈನಲ್ಲಿ ಕೆಲಸ ಮಾಡಿ ಬಂದಿದ್ದಾರೆ. ಇವರು ಈ ರೀತಿ ಸಮಾಜ ಸೇವೆ ಮಾಡುತ್ತಿರುವುದು ಇದೇ ಮೊದಲೇನಲ್ಲ, 2018ರಲ್ಲಿ ಕೇರಳದಲ್ಲಿ ಪ್ರವಾಹ ಬಂದಾಗಲೂ ಇವರು ಧನಸಹಾಯ ಮಾಡಿದ್ದಾರೆ. ಜೊತೆಗೆ ಪ್ರತಿವರ್ಷ ಇಫ್ತಾರ್ ವೇಳೆ ಕಾರ್ಮಿಕರ ಶಿಬಿರಗಳಿಗೆ ಆಹಾರ ಕಿಟ್ ಕೂಡ ಕಳುಹಿಸಿ ಕೊಡುತ್ತಾರೆ.

    1988ರಲ್ಲಿ ತಿರುವನಂತಪುರಂ ಎಂಜಿನಿಯರಿಂಗ್ ಕಾಲೇಜಿನಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರಾದ ಕೃಷ್ಣಕುಮಾರ್ ಅವರು, ಕೇರಳದ ವಿಜ್ಞಾನ ಮತ್ತು ಕಲಾ ಕಾಲೇಜುಗಳಿಂದ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ಯುಎಇಯಲ್ಲಿ ಸ್ಥಾಪಿಸಲಾದ ಸ್ವಯಂಸೇವಕ ಗುಂಪಿನ ಆಲ್ ಕೇರಳ ಕಾಲೇಜು ಅಲುಮ್ನಿ ಫ್ರಂಟ್ (ಎಕೆಸಿಎಎಫ್)ನ ಸಕ್ರಿಯ ಸದಸ್ಯರಾಗಿದ್ದಾರೆ.

  • ಕೋವಿಡ್ ವಾರ್ಡಿನಲ್ಲಿ ಕೆಲಸ ಮುಗಿಸಿ ಬರುತ್ತಿದ್ದಂತೆ ನರ್ಸ್ ಪತ್ನಿಯನ್ನೇ ಇರಿದು ಕೊಂದ ಪತಿ

    ಕೋವಿಡ್ ವಾರ್ಡಿನಲ್ಲಿ ಕೆಲಸ ಮುಗಿಸಿ ಬರುತ್ತಿದ್ದಂತೆ ನರ್ಸ್ ಪತ್ನಿಯನ್ನೇ ಇರಿದು ಕೊಂದ ಪತಿ

    – ಆಸ್ಪತ್ರೆಯ ಬಳಿಯೇ ಹೆಂಡ್ತಿಯ ಮೇಲೆ ಕಾರು ಹರಿಸಿದ

    ವಾಷಿಂಗ್ಟನ್: ಅಮೆರಿಕದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಲೆಯಾಳಿ ನರ್ಸ್ ಒಬ್ಬರನ್ನು ಅವರ ಪತಿಯೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದಕ್ಷಿಣ ಫ್ಲೋರಿಡಾದಲ್ಲಿ ನಡೆದಿದೆ.

    ಚೆನ್ನೈನ ಕೊಟ್ಟಾಯಂನ ಮೂಲದ ಮೆರಿನ್ ಜಾಯ್ (26) ಕೊಲೆಯಾದ ನರ್ಸ್. ನರ್ಸ್ ಕೋರಲ್ ಸ್ಪ್ರಿಂಗ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಆಸ್ಪತ್ರೆಯ ಬಳಿಯೇ ಮೆರಿನ್ ಜಾಯ್‍ಯನ್ನು ಪತಿ ಮಂಗಳವಾರ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಪತಿಯನ್ನು ಫಿಲಿಪ್ ಮ್ಯಾಥ್ಯೂ ಅಲಿಯಾಸ್ ನೆವಿನ್ (34) ಎಂದು ಗುರುತಿಸಲಾಗಿದೆ. ಈತ ಮೆರಿನ್ ಅವರಿಗೆ ಅನೇಕ ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ಆರೋಪಿ ನೆವಿನ್‍ನನ್ನು ಯುಎಸ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಮೃತ ಮೆರಿನ್ ಬ್ರೋವರ್ಡ್ ಹೆಲ್ತ್ ಕೋರಲ್ ಸ್ಪ್ರಿಂಗ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಕೋವಿಡ್ ವಾರ್ಡಿನಲ್ಲಿ ರಾತ್ರಿಯ ಕರ್ತವ್ಯ ಮುಗಿಸಿ ಆಸ್ಪತ್ರೆಯಿಂದ ಹೊರಬರುತ್ತಿದ್ದರು. ಆಗ ಆರೋಪಿ ನೆವಿನ್ ಪತ್ನಿ ಮೆರಿನ್ ಜಾಯ್‍ಗೆ ಚಾಕುವಿನಿಂದ ಅನೇಕ ಬಾರಿ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೇ ಆಸ್ಪತ್ರೆಯ ಪಾರ್ಕಿಂಗ್ ಸ್ಥಳದಲ್ಲಿ ನೆವಿನ್ ತನ್ನ ಕಾರನ್ನು ಪತ್ನಿಯ ಮೇಲೆ ಹರಿಸಿದ್ದಾನೆ.

    ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ತೀವ್ರವಾಗಿ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಮೆರಿನ್ ಜಾಯ್ ಮೃತಪಟ್ಟಿದ್ದಾರೆ. ಈ ಘಟನೆ ದಂಪತಿಯ ನಡುವಿನ ಜಗಳದಿಂದ ಆಗಿದೆ ಎಂದು  ಪೊಲೀಸರು ಶಂಕಿಸಿದ್ದಾರೆ.

    ಮೆರಿನ್ ಜಾಯ್ ಆರೋಪಿ ಪತಿ ನೆವಿನ್‍ನಿಂದ ದೂರವಿರುತ್ತಿದ್ದರು. ಅವರ ನಡುವೆ ಕೆಲವು ಸಮಸ್ಯೆಗಳು ಇತ್ತು. ಇದರಿಂದ ಕೋರಲ್ ಸ್ಪ್ರಿಂಗ್ಸ್ ಆಸ್ಪತ್ರೆಯಲ್ಲಿ ನರ್ಸ್ ಮೆರಿನ್ ಜಾಯ್ ಕೆಲಸ ಬಿಡಲು ಯೋಜಿಸುತ್ತಿದ್ದರು ಎಂದು ಮೆರಿನ್ ಸಂಬಂಧಿಕರು ಹೇಳಿದ್ದಾರೆ. ಸದ್ಯಕ್ಕೆ ಆರೋಪಿ ನೆವಿನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಯುಎಸ್ ಪೊಲೀಸರ ವಶದಲ್ಲಿದ್ದಾನೆ.

  • ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ- 1.5 ಕೋಟಿ ಮೌಲ್ಯದ ಡ್ರಗ್ಸ್ ವಶ

    ಕೇರಳ ಮೂಲದ ನಾಲ್ವರು ಡ್ರಗ್ಸ್ ಪೆಡ್ಲರ್‌ಗಳ ಬಂಧನ- 1.5 ಕೋಟಿ ಮೌಲ್ಯದ ಡ್ರಗ್ಸ್ ವಶ

    ಬೆಂಗಳೂರು: ನಗರದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1.25 ಕೋಟಿ ರೂ. ಮೌಲ್ಯದ ಮಾಧಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

    ಇಂದು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾದಕ ವಸ್ತುಗಳ ನಿರ್ಮೂಲನೆಗೆ ಪೊಲೀಸ್ ಇಲಾಖೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದೆ. ನಮ್ಮ ದೇಶಿ ಗಾಂಜಾದಿಂದ ಹಿಡಿದು ವಿದೇಶದಲ್ಲಿನ ಬೇರೆ ರೂಪದಲ್ಲಿ ಡ್ರಗ್ಸ್ ಮಾರಾಟ ಜಾಲ ಬೆಳೆದಿದೆ. ಆದ್ದರಿಂದ ‘ಡ್ರಗ್ಸ್ ಫ್ರೀ ಸಿಟಿ’ ಮಾಡುವ ಉದ್ದೇಶದಿಂದ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

    ರಾಜ್ಯಕ್ಕೆ ಎಲ್‍ಎಸ್‍ಡಿ ಸೇರಿದಂತೆ ಬೇರೆ ರೂಪದಲ್ಲಿ ಮಾದಕ ವಸ್ತುಗಳು ಬರುತ್ತಿದೆ. ಶಾಲಾ, ಕಾಲೇಜುಗಳ ಬಳಿಯೇ ಹೆಚ್ಚು ಮಾರಾಟ ಮಾಡಲಾಗುತ್ತಿದೆ. ವ್ಯವಸ್ಥಿತವಾದ ದಂಧೆಯನ್ನಾಗಿ ನಡೆಸಲಾಗುತ್ತಿದ್ದು, ಸರ್ಕಾರ ಕಡಿವಾಣಕ್ಕೆ ಸೂಚನೆ ನೀಡಿದೆ. ಇನ್ನು ಮುಂದೆ ಕಾಲೇಜುಗಳ ಕ್ಯಾಂಪಸ್‍ನಲ್ಲಿ ಡ್ರಗ್ಸ್ ಪತ್ತೆಯಾದರೆ ಮ್ಯಾನೇಜ್‍ಮೆಂಟ್ ವಿರುದ್ಧ ದೂರು ದಾಖಲಿಸಲಾಗುತ್ತದೆ. ಡ್ರಗ್ಸ್ ಕ್ಯಾಂಪಸ್ ಒಳಗೆ ಬರದಂತೆ ತಡೆಯುವುದು ಮ್ಯಾನೇಜ್‍ಮೆಂಟ್ ಜವಾಬ್ದಾರಿ ಎಂದು ಸಚಿವರು ತಿಳಿಸಿದರು.

    ಪೋಷಕರಿಂದ ಹಣ ಹೆಚ್ಚಿಗೆ ಪಡೆದು ಇಂತಹ ಚಟಗಳಿಗೆ ದಾಸರಾಗುತ್ತಿದ್ದಾರೆ. ಬಹಳ ದೊಡ್ಡವರು ಹಾಗೂ ಅವರ ಮಕ್ಕಳು ಜಾಲದಲ್ಲಿ ಇರುವ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಮುಂದೆ ಇದು ಕಂಡು ಬಂದರೆ ಕೂಡಲೇ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ವಿದೇಶದಿಂದ ಬಂದು ಇಲ್ಲಿ ಸಾಕಷ್ಟು ಜನ ನೆಲೆಸಿದ್ದಾರೆ. ಇದುವರೆಗೂ 533 ಪ್ರಕರಣ ದಾಖಲಿಸಿ, 14 ವಿದೇಶಿಯರು ಸೇರಿ 799 ಜನ ಬಂಧನವಾಗಿದೆ. 2019 ರಲ್ಲಿ 1260 ಆರೋಪಿಗಳನ್ನ ಬಂಧಿಸಿದ್ದು, 768 ಕೇಸ್ ಹಾಕಲಾಗಿತ್ತು. ಕೋವಿಡ್ 19 ಮುಗಿದ ಕೂಡಲೇ ಎಲ್ಲಾ ಕಾಲೇಜು, ಹಾಸ್ಟಲ್ ಮಾದಕ ವಸ್ತು ವಿರೋಧಿ ಅಭಿಯಾನ ಮಾಡುತ್ತೇವೆ. ಈಗಾಗಲೇ ಎಂಟು ಸೆನ್ ಪೊಲೀಸ್ ಸ್ಟೇಷನ್ ಗಳು ಮಾಡಿದ್ದು, ಟೆಕ್ನಿಕಲ್ ಎಕ್ಸ್ ಪರ್ಟ್ ಬೇಕಾಗಿದ್ದು ಅಂಥವರನ್ನು ನೇಮಕ ಮಾಡಲಾಗುತ್ತಿದೆ. ಅಲ್ಲದೇ ಸೈಬರ್ ಪ್ರಕರಣಗಳು ಹೆಚ್ಚಾಗಿದ್ದು, ಅದರ ಕಡಿವಾಣಕ್ಕೆ ಮುಂದಾಗಿದ್ದಾವೆ ಎಂದು ವಿವರಿಸಿದರು.

    ಕೇರಳ ಮೂಲದ ಡ್ರಗ್ ಡೀಲರ್ ಗಳಾದ ಶಹದ್ ಮೊಹಮ್ನದ್, ಅಜ್ಮಲ್, ಅಜಿನ್ ಕೆಜಿವರ್ಗೇಶ್, ನಿತಿನ್ ಮೋಹನ್ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಕಿಂಗ್ ಪಿನ್ ಧೀರಜ್ ಹೇಳಿದಂತೆ ಡ್ರಗ್ ಡೀಲ್ ಮಾಡುತ್ತಿದ್ದರು. ಧೀರಜ್ ಈತ ನೆದರ್‍ಲ್ಯಾಂಡ್, ಜರ್ಮನಿಯಿಂದ ಪೋಸ್ಟಲ್ ಮೂಲಕ ಡ್ರಗ್ ತರಿಸುತ್ತಿದ್ದ. ತನ್ನ ಹುಡುಗರ ಮೂಲಕ ಡ್ರಗ್ ರಿಸೀವ್ ಮಾಡಿಸಿಕೊಂಡು ಮಾರಾಟ ಮಾಡುತ್ತಿದ್ದ. ಇಂಥವರಿಗೆ ಮಾರಾಟ ಮಾಡಬೇಕು ಎಂದು ಮೆಸೇಜ್ ಮಾಡುತ್ತಿದ್ದ. ನೋಡಲು ಬಣ್ಣ ಬಣ್ಣ, ಚಿತ್ರ ವಿಚಿತ್ರದ ಪೇಪರ್ ರೀತಿ ಕಾರಣುತ್ತಿದ್ದ ಅವುಗಳಿಗೆ ಒಂದಕ್ಕೆ 5 ಸಾವಿರಕ್ಕೆ ಮಾರಾಟ ಮಾಡಲಾಗುತ್ತಿತ್ತು. ದೊಡ್ಡ ದೊಡ್ಡ ಪಾರ್ಟಿಗಳಲ್ಲಿ ಇನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದಂತೆ ಕಿಂಗ್ ಪಿನ್ ಧೀರಜ್‍ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

  • ವಿವಾಹದಲ್ಲಿ ಭಾಗವಹಿಸಿದ್ದ 43 ಜನರಿಗೆ ಕೊರೊನಾ ಸೋಂಕು

    ವಿವಾಹದಲ್ಲಿ ಭಾಗವಹಿಸಿದ್ದ 43 ಜನರಿಗೆ ಕೊರೊನಾ ಸೋಂಕು

    – ವಧು-ವರನಿಗೂ ಕೊರೊನಾ
    – ವಧುವಿನ ತಂದೆಗೆ 2 ವರ್ಷ ಜೈಲು, 10 ಸಾವಿರ ದಂಡ

    ತಿರುವನಂತಪುರಂ: ಹೆಚ್ಚು ಜನ ಸೇರುವ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕಿದ್ದರೂ ಲೆಕ್ಕಿಸದೆ ಹಲವರು ವಿವಾಹ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಒಂದೇ ವಿವಾಹಕ್ಕೆ ತೆರಳಿದ್ದ 43 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇನ್ನೂ ಆಶ್ಚರ್ಯ ಎಂಬಂತೆ ವರ ಹಾಗೂ ವಧುಗೂ ಸೋಂಕು ತಗುಲಿದೆ.

    ಕಾಸರಗೋಡು ಜಿಲ್ಲೆಯ ಚೆಂಗಲ ಪಂಚಾಯಿತಿ ವ್ಯಾಪ್ತಿಯ ಪಿಳಂಕಟ್ಟದಲ್ಲಿ ಜುಲೈ 17ರಂದು ನಡೆದ ಮದುವೆ ಸಮಾರಂಭದಲ್ಲಿ 125ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಜುಲೈ 17ರಂದು ನಡೆದ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ 128 ಜನರ ಪೈಕಿ 43 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ವರ ಹಾಗೂ ವಧುವಿಗೂ ಕೊರೊನಾ ಸೋಂಕು ತಗುಲಿದ್ದು, ವಿವಾಹದಲ್ಲಿ ಭಾಗವಹಿಸಿದ್ದ 128 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಧುವಿನ ತಂದೆಯ ವಿರುದ್ಧ ಕೇರಳ ಸಾಂಕ್ರಾಮಿಕ ರೋಗ ಸುಗ್ರೀವಾಜ್ಞೆ 2020ರ ಅಡಿ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಾಸರಗೋಡು ಜಿಲ್ಲಾಡಳಿತ ಮಾಹಿತಿ ನೀಡಿದೆ. ನಿಯಮ ಪಾಲಿಸದವರಿಗೆ 2 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

    ಸರ್ಕಾರದ ನಿಯಮಗಳ ಪ್ರಕಾರ ಯಾವುದೇ ಸಭೆ ಸಮಾರಂಭಗಳಲ್ಲಿ 50ಕ್ಕೂ ಹೆಚ್ಚು ಜನ ಸೇರುವಂತಿಲ್ಲ. ಆದರೆ ಈ ಮದುವೆ ಸಮಾರಂಭದಲ್ಲಿ 125ಕ್ಕೂ ಹೆಚ್ಚು ಜನ ಸೇರಿದ್ದರು. ವಧುವಿನ ತಂದೆಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇವರು ಹಾಗೂ ವರ ಕೆಲವೇ ತಿಂಗಳುಗಳ ಹಿಂದೆ ದುಬೈನಿಂದ ಕೇರಳಕ್ಕೆ ಆಗಮಿಸಿದ್ದರು.

    ಸೋಂಕಿತರೆಲ್ಲರಿಗೂ 14 ದಿನಗಳ ಕಾಲ ಹೋಮ್ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗಿದೆ. ಕೊರೊನಾ ಸೋಂಕಿನ ಗುಣ ಲಕ್ಷಣ ಹೊಂದಿರುವವರನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಕಾಸರಗೋಡು, ಮಂಜೇಶ್ವರಂ, ಹೊಸದುರ್ಗ, ಕುಂಬಳೆ ಹಾಗೂ ನೀಲೇಶ್ವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಸಹ ಬಂದ್ ಮಾಡಲಾಗಿದೆ. ಕೇರಳದಲ್ಲಿ ಪ್ರತಿ ದಿನ 20 ಸಾವಿರಕ್ಕೂ ಅಧಿಕ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.

  • ಕರ್ನಾಟಕ, ಕೇರಳದಲ್ಲಿ ಸಾಕಷ್ಟು ಐಸಿಸ್ ಭಯೋತ್ಪಾದಕರಿದ್ದಾರೆ: ವಿಶ್ವಸಂಸ್ಥೆ

    ಕರ್ನಾಟಕ, ಕೇರಳದಲ್ಲಿ ಸಾಕಷ್ಟು ಐಸಿಸ್ ಭಯೋತ್ಪಾದಕರಿದ್ದಾರೆ: ವಿಶ್ವಸಂಸ್ಥೆ

    ನವದೆಹಲಿ: ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಐಸಿಸ್ ಭಯೋತ್ಪಾದಕರಿದ್ದಾರೆ ಅನ್ನೋ ಬೆಚ್ಚಿ ಬೀಳುವ ಸುದ್ದಿಯನ್ನು ವಿಶ್ವಸಂಸ್ಥೆ ನೀಡಿದೆ.

    ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್‍ಗೆ ಸೇರಿದ ಸುಮಾರು 150ರಿಂದ 200 ಐಸಿಸ್ ಭಯೋತ್ಪಾದಕರು ಕರ್ನಾಟಕ, ಕೇರಳದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬ ಭಯಾನಕ ವಿಚಾರವನ್ನು ವಿಶ್ವಸಂಸ್ಥೆ ತಿಳಿಸಿದೆ. ಕಳೆದ ವರ್ಷ ಮೇನಲ್ಲಿ ಐಸಿಸ್ ಭಾರತದಲ್ಲಿ ಹೊಸ ಪ್ರಾಂತ್ಯವನ್ನು ತೆರೆದಿದ್ದೇವೆ ಎಂದು ಹೇಳಿಕೊಂಡಿತ್ತು.

    ವಿಶ್ವಸಂಸ್ಥೆಯ 26ನೇ ಅನಾಲಿಟಿಕಲ್ ಸಪೋರ್ಟ್ ಅಂಡ್ ಸ್ಯಾಂಕ್ಷನ್ಸ್ ಮಾನಿಟರಿಂಗ್ ತಂಡದ ವರದಿಯಲ್ಲಿ ಐಸಿಸ್, ಅಲ್‍ಖೈದಾ ಮತ್ತು ಅದರ ಸಹಚರ ಭಯೋತ್ಪಾದಕ ಗುಂಪುಗಳು ಈ 2 ರಾಜ್ಯಗಳಲ್ಲಿ ಸಕ್ರಿಯವಾಗಿವೆ. ಈ ಗುಂಪುಗಳನ್ನು ಭಾರತದ ಉಪಖಂಡದ ನೇತೃತ್ವ ವಹಿಸಿಕೊಂಡ ಅಲ್‍ಖೈದಾ ನಾಯಕ ಒಸಮಾ ಮಹಮ್ಮೂದ್ ಮುನ್ನಡೆಸುತ್ತಿದ್ದಾನೆ. ಇವರೆಲ್ಲರೂ ಉಗ್ರ ಆಸಿಮ್ ಉಮರ್ ಹತ್ಯೆಗೆ ಪ್ರತಿಕಾರವಾಗಿ ಭಾರಿ ದಾಳಿಗಳನ್ನು ನಡೆಸಲು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ. ಇದನ್ನು ಓದಿ: ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಸೈನಿಕರು

    ಅಲ್ ಖೈದಾ ಉಗ್ರ ಸಂಘಟನೆಯ ಭಾರತೀಯ ಉಪಖಂಡದ ಮುಖ್ಯಸ್ಥ ಅಸಿಮ್ ಉಮರ್ ನನ್ನು ಅಫ್ಘಾನಿಸ್ಥಾನದಲ್ಲಿ ಕಳೆದ ವರ್ಷ ಕೊಂದುಹಾಕಲಾಗಿತ್ತು. 2019 ಸೆಪ್ಟೆಂಬರ್ 23 ರಂದು ಹೆಲ್ಮಾಂಡ್ ಪ್ರಾಂತ್ಯದ ತಾಲಿಬಾನ್ ಕಾಂಪೌಂಡ್ ಮೇಲೆ ಅಮೇರಿಕಾ-ಅಫ್ಘನ್ ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಭಾರತೀಯ ಉಪಖಂಡದ ಅಲ್ ಖೈದಾದ ಮುಖ್ಯಸ್ಥ ಅಸಿಮ್ ಉಮರ್ ಮೃತಪಟ್ಟಿರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು.

  • ಓಡೋಡಿ ಬಂದು ಅಂಧವೃದ್ಧನನ್ನ ಬಸ್ಸಿಗತ್ತಿಸಿದ ಮಹಿಳೆಗೆ ಮನೆ ನೀಡಿದ ಜಾಯ್ ಅಲುಕ್ಕಾಸ್

    ಓಡೋಡಿ ಬಂದು ಅಂಧವೃದ್ಧನನ್ನ ಬಸ್ಸಿಗತ್ತಿಸಿದ ಮಹಿಳೆಗೆ ಮನೆ ನೀಡಿದ ಜಾಯ್ ಅಲುಕ್ಕಾಸ್

    – ಮುಖ್ಯಕಚೇರಿಗೆ ಬರಲು ಹೇಳಿ ಸುಪ್ರಿಯಾಗೆ ಸರ್ಪ್ರೈಸ್ ಗಿಫ್ಟ್

    ತಿರುವನಂತಪುರ: ಜುಲೈ ತಿಂಗಳ ಮೊದಲ ವಾರದಲ್ಲಿ ಅಂಧ ವೃದ್ಧರೊಬ್ಬರ ಕೈಹಿಡಿದು ಬಸ್ ಹತ್ತಿಸಿದ ಮಹಿಳೆಗೆ ಇದೀಗ ಬಿಗ್ ಸರ್ಪ್ರೈಸ್ ಒಂದು ದೊರಕಿದೆ.

    ಹೌದು. ಸುಪ್ರಿತಾ ಎಂಬ ಮಹಿಳೆ ತಾನು ಕೆಲಸ ಮಾಡುತ್ತಿರುವ ಅಂಗಡಿಯ ಬಳಿಯಿರುವ ಬಸ್ ನಿಲ್ದಾಣದಲ್ಲಿ ಅಂಧ ವೃದ್ಧರೊಬ್ಬರು ಬಸ್ಸಿಗೆ ಕಾಯುತ್ತಿರುವುದನ್ನು ಗಮನಿಸಿದ್ದಾರೆ. ಅಂತೆಯೇ ಬಸ್ ನಿಲ್ದಾಣಕ್ಕೆ ಇನ್ನೇನು ಹೊರ ಬೇಕೆನ್ನುವಷ್ಟುರಲ್ಲಿ ಅಜ್ಜ ಕೂಡ ಅದೇ ಬಸ್ಸಿಗೆ ಹತ್ತಲು ಹಪಹಪಿಸಿದ್ದಾರೆ. ಇವೆಲ್ಲವನ್ನು ಗಮನಿಸಿದ್ದ ಸುಪ್ರಿತಾ ಕೂಡಲೇ ಓಡೋಡಿ ಬಂದು, ಹೊರಡಲು ಅಣಿಯಾಗುತ್ತಿದ್ದ ಬಸ್ಸನ್ನು ನಿಲ್ಲಿಸಿದ್ದಾರೆ. ಅಲ್ಲದೆ ತಾತನ ಕೈ ಹಿಡಿದು ಬಸ್ ಹತ್ತಿಸಿದ್ದಾರೆ.

    ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಜಾಲತಾಣಿಗರು ಕೂಡ ಮಹಿಳೆಯ ಮಾನವೀಯ ಕಾರ್ಯಕ್ಕೆ ಮಾರು ಹೋಗಿ ಶಹಬ್ಬಾಸ್ ಅಂದಿದ್ದರು. ಇದಿಗ ಇದೇ ಮಹಿಳೆಗೆ ಒಂದು ದೊಡ್ಡ ಗಿಫ್ಟ್ ಸಿಕ್ಕಿದೆ. ಅದೇನಂದರೆ ಸುಪ್ರಿಯಾಗೆ ಕನಸಿನ ಮನೆಯೊಂದು ದೊರಕಿದೆ. ಈ ಮನೆಯನ್ನು ಪ್ರತಿಷ್ಠಿತ ಆಭರಣ ಮಳಿಗೆಯಾದ ಜಾಯ್ ಅಲುಕ್ಕಾಸ್ ಅವರು ನೀಡಿದ್ದಾರೆ. ಈ ಮೂಲಕ ಮಾನವೀಯತೆ ಮೆರೆದ ಮಹಿಳೆಯನ್ನು ಸಂಸ್ಥೆ ಗೌರವಿಸಿದೆ.

    ಮಾನವೀಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಾಯ್ ಅಲುಕ್ಕಾಸ್ ಗ್ರೂಪ್ ಮುಖ್ಯಸ್ಥ ಜಾಯ್ ಅಲುಕ್ಕಾಸ್ ಅವರು ಸುಪ್ರಿಯಾ ಅವರನ್ನು ಭೇಟಿ ಮಾಡಿ, ಮೊದಲು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆ ಬಳಿಕ ತ್ರಿಶೂರಿನಲ್ಲಿರುವ ಮುಖ್ಯ ಕಚೇರಿಗೆ ಬಂದು ಭೇಟಿಯಾಗುವಂತೆ ಹೇಳಿದ್ದಾರೆ ಈ ವೇಳೆ ಸುಪ್ರಿಯಾಗೆ ಅಲ್ಲಿ ಬಿಗ್ ಗಿಫ್ಟ್ ಸಿಕ್ಕಿದೆ. ಇದನ್ನೂ ಓದಿ: ಅಂಧ ವೃದ್ಧನಿಗಾಗಿ ಓಡೋಡಿ ಬಂದು ಬಸ್ ನಿಲ್ಲಿಸಿದ ಮಹಿಳೆ- ವಿಡಿಯೋ ವೈರಲ್

    ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸುಪ್ರಿಯಾ, ನಾನು ಮಾಡಿರುವ ಕಾರ್ಯಕ್ಕೆ ಇಂತಹದ್ದೊಂದು ದೊಡ್ಡ ಉಡುಗೊರೆ ಸಿಗುತ್ತೆ ಎಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ನಾನು ಜಾಯ್ ಅಲುಕ್ಕಾಸ್ ಮುಖ್ಯ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿರುವ ನೂರಾರು ಸಿಬ್ಬಂದಿ ನನ್ನನ್ನು ಹುರಿದುಂಬಿಸಿದರು. ಈ ವೇಳೆ ನನ್ನ ಕಣ್ಣಂಚಲ್ಲಿ ನೀರು ಬಂತು. ನಾನು ವೃದ್ಧನಿಗೆ ಮಾಡಿರುವ ಸಹಾಯ ಅಚಾನಕ್ ಆಗಿದೆ. ಆದರೆ ಆ ವಿಚಾರ ನನ್ನನ್ನು ಈ ಮಟ್ಟಕ್ಕೆ ಅಲ್ಲದೆ ಇಷ್ಟೊಂದು ಮಂದಿ ಮೆಚ್ಚಿ ಕೊಂಡಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ಖುಷಿ ಹಂಚಿಕೊಂಡಿದ್ದಾರೆ.

    ಇದೇ ವೇಳೆ ಅಲುಕ್ಕಾಸ್ ಮುಖ್ಯಸ್ಥರ ಪತ್ನಿ ಕೂಡ ನನ್ನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ನೀವು ಈ ಹಿಂದೆಯೂ ತುಂಬಾ ಒಳ್ಳೆಯ ಕೆಲಸವನ್ನು ಮಾಡಿರಬೇಕು. ಹೀಗಾಗಿ ಇಂದು ಈ ಕೆಲಸ ಮಾಡಲು ಅದು ಪ್ರೇರೇಪಿಸಿದೆ. ಈ ದೇಶದಲ್ಲಿ ಅನುಕಂಪ ಎಂಬುದು ಹರಿಯುವ ನದಿ ಆಗಿರಬೇಕು. ಅದು ಯಾವತ್ತೂ ಬತ್ತಬಾರದು ಎಂದು ಹೇಳಿರುವ ಮಾತನ್ನು ಸುಪ್ರಿಯಾ ಉಲ್ಲೇಖಿಸಿದ್ದಾರೆ.

    ಸುಪ್ರಿಯಾ ಅವರು ಜಾಲಿ ಸಿಲ್ಕ್ಸ್ ಎಂಬ ಟೆಕ್ಸ್ ಟೈಲ್ ನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಪರಿ ಕೂಡ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

  • ಕ್ವಾರಂಟೈನ್ ನಿಯಮ ಉಲ್ಲಂಘಿಸಬಾರದೆಂದು ಕರ್ನಾಟಕ-ಕೇರಳ ಗಡಿಯ ರಸ್ತೆಯಲ್ಲೇ ತಾಳಿ ಕಟ್ಟಿದ ವರ

    ಕ್ವಾರಂಟೈನ್ ನಿಯಮ ಉಲ್ಲಂಘಿಸಬಾರದೆಂದು ಕರ್ನಾಟಕ-ಕೇರಳ ಗಡಿಯ ರಸ್ತೆಯಲ್ಲೇ ತಾಳಿ ಕಟ್ಟಿದ ವರ

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿಯೇ ಇಂದು ಕೇರಳ ಮೂಲದ ಯುವಕ ಹಾಗೂ ಶಿವಮೊಗ್ಗ ಜಿಲ್ಲೆಯ ಯುವತಿ ವಿವಾಹವಾಗಿದ್ದಾರೆ.

    ಚಾಮರಾಜನಗರ-ಕೇರಳ ಗಡಿಯ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಕರ್ನಾಟಕ ಗಡಿ ಮೂಲೆಹೊಳೆಯಲ್ಲಿ ಮಧ್ಯಾಹ್ನ ಕೇರಳ ಮೂಲದ ಯುವಕನೊಂದಿಗೆ ಶಿವಮೊಗ್ಗ ಮೂಲದ ಯುವತಿ ಪರಸ್ಪರ ಹಾರ ಬದಲಾಯಿಸಿ, ವರ ತಾಳಿ ಕಟ್ಟುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೊನಾ ನಿಯಮ ಉಲ್ಲಂಘಿಸಬಾರದೆಂಬ ಉದ್ದೇಶದಿಂದ ದಂಪತಿ ಈ ನಿರ್ಧಾರ ಮಾಡಿದ್ದಾರೆ. ಅಲ್ಲದೆ ಅಂತರಾಜ್ಯ ಪ್ರಯಾಣ ಮಾಡಿದರೆ ಕ್ವಾರಂಟೈನ್ ಆಗಬೇಕು ಹೀಗಾಗಿ ಜೋಡಿ ಈ ಪ್ಲಾನ್ ಮಾಡಿದೆ.

    ಕಳೆದ ತಿಂಗಳು ಕೊರೊನಾ ನಡುವೆ ಇಬ್ಬರಿಗೂ ನಿಶ್ಚಿತಾರ್ಥವಾಗಿತ್ತು. ಇದೀಗ ಮನೆಯವರ ಸಮ್ಮತಿಯೊಂದಿಗೆ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ, ರಸ್ತೆಯಲ್ಲೇ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಂಧು ಮಿತ್ರರು ಹಾಗೂ ಗಡಿಯಲ್ಲಿದ್ದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

  • ಮುಪ್ಪಿನಲ್ಲೂ ಆ್ಯಕ್ಟೀವ್ ಆಗಿರಲು ಫ್ಯಾನ್ಸಿ ಕೊಡೆ ತಯಾರಿಸ್ತಿರೋ ಅಜ್ಜಿ

    ಮುಪ್ಪಿನಲ್ಲೂ ಆ್ಯಕ್ಟೀವ್ ಆಗಿರಲು ಫ್ಯಾನ್ಸಿ ಕೊಡೆ ತಯಾರಿಸ್ತಿರೋ ಅಜ್ಜಿ

    ತಿರುವನಂತಪುರಂ: ತನಗೆ 75 ವರ್ಷ ವಯಸ್ಸಾದರೂ ಆ್ಯಕ್ಟೀವ್ ಆಗಿರಬೇಕು ಎಂದು ಅಜ್ಜಿಯೊಬ್ಬರು ಛತ್ರಿ ತಯಾರು ಮಾಡುತ್ತಿದ್ದಾರೆ.

    ಹೌದು. ಚಾಕೋ ಮೂಲದ ಕೊಟ್ಟಪ್ಪಡಿ ಚೋವಲ್ಲೂರ್ ಪತ್ನಿ ಎಲ್ಸಿ ಎಂಬ ಅಜ್ಜಿ ವಿವಿಧ ರೀತಿಯ ಫ್ಯಾನ್ಸಿ ಕೊಡೆಗಳನ್ನು ತಯಾರು ಮಾಡುತ್ತಿದ್ದಾರೆ. ಈ ಮೂಲಕ ವೃದ್ಧೆ ತನ್ನನ್ನು ತಾನೂ ಕ್ರೀಯಾಶೀಲರನ್ನಾಗಿಸಿಕೊಳ್ಳುತ್ತಿದ್ದಾರೆ.

    ಸದ್ಯ ಅಜ್ಜಿ ತಯಾರಿಸಿದ ಛತ್ರಿಗಳು ಕೊಟ್ಟಪ್ಪಡಿ ಮಾರುಕಟ್ಟೆ ಪ್ರದೇಶದಲ್ಲಿ ಕಾಣಸಿಗುತ್ತದೆ. ಅಲ್ಲಿನ ಬಸ್, ಆಟೋ ರಿಕ್ಷಾಗಳಲ್ಲಿ ಚಿಕ್ಕ ಚಿಕ್ಕ ಫ್ಯಾನ್ಸಿ ರೀತಿಯ ಕೊಡೆಗಳನ್ನು ಕಾಣಬಹುದಾಗಿದೆ. ಆದರೆ ಇದನ್ನು ತಯಾರಿಸುವುದು ಎಲ್ಸಿ ಅಜ್ಜಿ ಎಂದು ಅಲ್ಲಿನ ಬಹುತೇಕ ಮಂದಿಗೆ ತಿಳಿದಿಲ್ಲ. ಕಲರ್ ಪೇಪರ್ಸ್ ಬಳಸಿ ಅಜ್ಜಿ ಈ ಕೊಡೆಗಳನ್ನು ತಯಾರಿಸಿ ಮನೆಯ ಗ್ರಿಲ್ ನಲ್ಲಿ ತೂಗು ಹಾಕುತ್ತಾರೆ. ಅಜ್ಜಿಯ ಮನೆ ರಸ್ತೆ ಬದಿಯಲ್ಲೇ ಇರುವುದರಿಂದ ದಾರಿಯಲ್ಲಿ ಹೋಗುವವರ ಕಣ್ಣುಗಳು ಈ ಕೊಡೆಗಳತ್ತ ಸೆಳೆಯುತ್ತವೆ.

    ಹೀಗೆ ಹೋಗುವ ದಾರಿ ಹೋಕರು ಫ್ಯಾನ್ಸಿ ಕೊಡೆಗಳಿಗೆ ಮಾರು ಹೋಗಿ ಖರೀದಿಸಲು ಅಜ್ಜಿಯ ಮನೆಗೆ ಬರುತ್ತಾರೆ. ಹಾಗೆಯೇ ಅಜ್ಜಿ, ಒಂದು ಕೊಡೆಗೆ 10 ರೂ. ನಂತೆ ಮಾರಾಟ ಮಾಡುತ್ತಾರೆ. ಕೇವಲ ಕೊಡೆ ಮಾತ್ರವಲ್ಲದೆ ಅಜ್ಜಿ ತಾಳೆ ಗರಿಗಳಿಂದ ಕೈ ಬೀಸಣಿಕೆ, ಪ್ಲಾಸ್ಟಿಕ್ ರೋಬೋಟ್, ಸಣ್ಣ ಸಣ್ಣ ಬಟ್ಟೆ ಚೀಲಗಳು ಹಾಗೂ ಇತರ ಕರಕುಶಲ ವಸ್ತುಗಳನ್ನು ಕೂಡ ತಯಾರಿಸುತ್ತಾರೆ.

    ಒಟ್ಟಿನಲ್ಲಿ ತನ್ನನ್ನು ತಾನು ಆ್ಯಕ್ಟೀವ್ ಆಗಿ ಇರಿಸಿಕೊಂಡಿದ್ದರಿಂದ ಯಾವುದೇ ಕಾಯಿಲೆಗಳಿಗೆ ಒಳಗಾಗಿಲ್ಲ ಎಂದು ಎಲ್ಸಿ ಅಭಿಪ್ರಾಯಪಟ್ಟಿದ್ದಾರೆ. ಸಾಮಾನ್ಯವಾಗಿ ಜನ ಸುಮ್ಮನೆ ಕುಳಿತರೆ ಸುಸ್ತು ಹಾಗೂ ಅನಾರೋಗ್ಯಕ್ಕೀಡಾಗುತ್ತಾರೆ. ಹೀಗಾಗಿ ನಾನು ಪ್ರತಿ ದಿನ ಆ್ಯಕ್ಟೀವ್ ಆಗಿರಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

    ಪ್ರಸ್ತುತ ಅಜ್ಜಿ ತನ್ನ ಕಿರಿಯ ಮಗನೊಂದಿಗೆ ವಾಸವಾಗಿದ್ದು, ಮಗನ ಪುತ್ರಿ ಅಜ್ಜಿಗೆ ವಸ್ತುಗಳನ್ನು ಖರೀದಿಸುವ ಮೂಲಕ ಅಜ್ಜಿಗೆ ಕರಕುಶಲ ವಸ್ತುಗಳನ್ನು ತಯಾರಿಸಲು ಸಾಥ್ ನೀಡುತ್ತಿದ್ದಾರೆ.