Tag: kerala

  • ನಮ್ಮನ್ನು ಬದುಕಿಸಿ ಅವರು ಪ್ರಾಣ ತ್ಯಾಗ ಮಾಡಿದರು- ಪೈಲಟ್ ಶ್ಲಾಘಿಸಿದ ಪ್ರಯಾಣಿಕರು

    ನಮ್ಮನ್ನು ಬದುಕಿಸಿ ಅವರು ಪ್ರಾಣ ತ್ಯಾಗ ಮಾಡಿದರು- ಪೈಲಟ್ ಶ್ಲಾಘಿಸಿದ ಪ್ರಯಾಣಿಕರು

    ತಿರುವನಂತಪುರಂ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ಬದುಕುಳಿದ ಪ್ರಯಾಣಿಕರು ಪೈಲಟ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವಗಳನ್ನು ಕಾಪಾಡಿದರು. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆಯೇ ಆಗುವ ಅನಾಹುತ ತಪ್ಪಿಸಿ ನಮ್ಮನ್ನು ಉಳಿಸುವ ಮೂಲಕ ತಮ್ಮ ಪ್ರಾಣ ತ್ಯಾಗ ಮಾಡಿದರು ಎಂದು ಏರ್ ಇಂಡಿಯಾ ಪ್ರಯಾಣಿಕರು ಪೈಲಟ್ ಅನ್ನು ಶ್ಲಾಫಿಸಿದರು.

    ಧೈರ್ಯಶಾಲಿ ಪೈಲಟ್ ಹಾಗೂ ಸ್ಥಳೀಯ ನಿವಾಸಿಗಳು ನಡೆಯುತ್ತಿದ್ದ ಭಾರೀ ದುರಂತವನ್ನು ತಪ್ಪಿಸಿದ್ದಾರೆ. ವಿಮಾನ ಅಪಘಾತಕ್ಕೀಡಾದ ಕೂಡಲೇ ಜನರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದುರಂತದಲ್ಲಿ ಬದುಕುಳಿದವರು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಭಾರೀ ಮಳೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹವಾಮಾನ ಕೆಟ್ಟದಾಗಿದೆ ಎಂದು ಪೈಲಟ್ ವಿಮಾನವನ್ನು ಇಳಿಸುವ ಮೊದಲೇ ಎಚ್ಚರಿಕೆ ನೀಡಿದ್ದರು. ಅಲ್ಲದೆ ಎರಡು ಬಾರಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಲು ಪ್ರಯತ್ನಿಸಿದರೂ ನಿಯಂತ್ರಣ ಕಳೆದುಕೊಂಡರು. ಪರಿಣಾಮ ರನ್ ವೇ ಯಿಂದ ಜಾರಿ 33 ಅಡಿ ಕಂದಕಕ್ಕೆ ಜಾರಿ ಎರಡು ಭಾಗವಾಯಿತು ಎಂದು ದುರಂತದಲ್ಲಿ ಸಣ್ಣಪುಟ್ಟ ಗಾಯಗೊಂಡವರು ತಿಳಿಸಿದರು.

    ಘಟನೆಯಲ್ಲಿ ಇಬ್ಬರು ಪೈಲಟ್ ಸೇರಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರಯಾಣಿಕರೆಲ್ಲರೂ ಕೊರೊನಾ ವೈರಸ್‍ನಿಂದಾಗಿ ದುಬೈನಲ್ಲಿ ಸಿಲುಕಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಹೊತ್ತು ಏರ್ ಇಂಡಿಯಾ ವಿಮಾನ ಕರಿಪುರ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ರನ್ ವೇಯಿಂದ ಜಾರಿ 33 ಅಡಿ ಕಂದಕಕ್ಕೆ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ.

    1981ರಲ್ಲಿ ವಾಯಪಡೆಗೆ ಸೇರಿದ್ದ ಪೈಲಟ್ ದೀಪಕ್ ವಸಂತ್ ಸಾಠೆ(59) 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್‍ಎಎಲ್‍ನಲ್ಲಿ ಇರುವ ಏರ್ ಏರ್ ಫೋರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕ್ವಾಡ್ರನ್ ಲೀಡರ್ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದರು. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ಸುತ್ತಲೂ ಆಳ ಕಣಿವೆ ಇದ್ದು, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗುತ್ತದೆ. 2010ರಲ್ಲಿ ಮಂಗಳೂರಿನಲ್ಲಿ ಕೂಡ ಇದೇ ರೀತಿ ವಿಮಾನ ದುರಂತ ಸಂಭವಿಸಿದ 158 ಮಂದಿ ಮೃತಪಟ್ಟಿದ್ದರು. ಈ ಮೂಲಕ ಇದೀಗ ಟೇಬಲ್ ಟಾಪ್ ವಿಮಾನ ನಿಲ್ದಾಣದಲ್ಲಿ ನಡೆದ ಎರಡನೇ ದುರಂತ ಇದಾಗಿದೆ.

  • ವಿಮಾನ ಅವಘಡ- ಸಿಎಂ ಪಿಣರಾಯಿ ವಿಜಯನ್‍ಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

    ವಿಮಾನ ಅವಘಡ- ಸಿಎಂ ಪಿಣರಾಯಿ ವಿಜಯನ್‍ಗೆ ಕರೆ ಮಾಡಿ ಮಾಹಿತಿ ಪಡೆದ ಪ್ರಧಾನಿ ಮೋದಿ

    ತಿರುವನಂತಪುರಂ: ಕೇರಳದಲ್ಲಿ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತನಾಡಿದ್ದು, ಮಾಹಿತಿ ಪಡೆದಿದ್ದಾರೆ. ಅಲ್ಲದೆ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಕರೆ ಮಾಡಿ ವಿಮಾನ ಅವಘಡದ ಕುರಿತು ಮಾಹಿತಿ ಪಡೆದಿದ್ದಾರೆ. ಈ ವೇಳೆ ಕೋಯಿಕ್ಕೊಡ್ ಹಾಗೂ ಮಲಪ್ಪುರಂ ಜಿಲ್ಲಾಧಿಕಾರಿಗಳು ಹಾಗೂ ಐಜಿ ಅಶೋಕ್ ಯಾದವ್ ವಿಮಾನ ನಿಲ್ದಾಣವನ್ನು ತಲುಪಿದ್ದಾರೆ. ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಪಿಣರಾಯಿ ವಿಜಯನ್ ಅವರು ಮಾಹಿತಿ ನೀಡಿದ್ದಾರೆ.

    ಕೊರೊನಾ ವೈರಸ್ ಹಿನ್ನೆಲೆ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ‘ಒಂದೇ ಭಾರತ್’ ಮಿಷನ್ ಆರಂಭಿಸಲಾಗಿದ್ದು, ಇದರ ಭಾಗವಾಗಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುಬೈನಿಂದ ಕೇರಳದ ಕೋಯಿಕ್ಕೊಡ್‍ಗೆ ಆಗಮಿಸಿ ಲ್ಯಾಂಡ್ ಆಗುತ್ತಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ. ವಿಮಾನದಲ್ಲಿ ಒಟ್ಟು 190ಜನ ಪ್ರಯಾಣಿಸುತ್ತಿದ್ದು, 14 ಜನ ಸಾವನ್ನಪ್ಪಿದ್ದಾರೆ. 123ಜನ ಗಾಯಗೊಂಡಿದ್ದಾರೆ. 15 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಪೊಲೀಸರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಈಗಾಗಲೇ ಸೂಚಿಸಿದ್ದು, ಕೋಯಿಕ್ಕೊಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಅವಘಡದ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಅಲ್ಲದೆ ರಕ್ಷಣಾ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಈ ಕುರಿತು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದು, ಕೇರಳದ ಕೋಯಿಕ್ಕೊಡ್ ವಿಮಾನ ನಿಲ್ದಾಣದಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಅವಘಗಡದ ಸುದ್ದಿ ಕೇಳುತ್ತಿದ್ದಂತೆ ತುಂಬಾ ನೋವಾಯಿತು. ಆದಷ್ಟು ಬೇಗ ಸ್ಥಳಕ್ಕೆ ತೆರಳುವಂತೆ ಎನ್‍ಡಿಆರ್‍ಎಫ್ ಸಿಬ್ಬಂದಿಗೆ ಸೂಚಿಸಿದ್ದೇನೆ. ಅಲ್ಲದೆ ರಕ್ಷಣಾ ಕಾರ್ಯವನ್ನು ತ್ವರಿತಗತಿಯಲ್ಲಿ ನಡೆಸುವಂತೆ ತಿಳಿಸಿದ್ದೇನೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

    ರಾಜನಾಥ್ ಸಿಂಗ್ ಸಹ ಟ್ವೀಟ್ ಮಾಡಿದ್ದು, ಕೇರಳದ ಕೋಯಿಕ್ಕೊಡ್‍ನಿಂದ ಬಂದ ಸುದ್ದಿಯನ್ನು ಕೇಳಿ ತುಂಬಾ ಆಘಾತವಾಯಿತು. ಸಾವು, ನೋವು ಸಂಭವಿಸಿರುವುದರಿಂದ ನೋವಾಗಿದೆ. ದುಃಖತಪ್ತ ಕುಟುಂಬಕ್ಕೆ ಸಂದೇಶ ನೀಡಲು ಬಯಸುತ್ತೇನೆ. ಗಾಯಗೊಂಡವರು ಬೇಗನೇ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

  • ಕೋಯಿಕ್ಕೋಡ್ ವಿಮಾನ ದುರಂತ- 16 ಸಾವು, 15 ಮಂದಿ ಗಂಭೀರ

    ಕೋಯಿಕ್ಕೋಡ್ ವಿಮಾನ ದುರಂತ- 16 ಸಾವು, 15 ಮಂದಿ ಗಂಭೀರ

    ತಿರುವನಂತಪುರಂ: ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ದುರಂತ ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿದ್ದು, 15 ಮಂದಿಯ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ 123 ಮಂದಿ ಗಾಯಗೊಂಡಿದ್ದಾರೆ ಎಂದು ಮಲಪ್ಪುರಂ ಎಸ್‍ಪಿ ತಿಳಿಸಿದ್ದಾರೆ.

    ಇಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್‍ನ ಕರಿಪುರದಲ್ಲಿ ಲ್ಯಾಂಡಿಗೆ ವೇಳೆ ನಿಲ್ದಾಣದ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿದೆ. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಸದ್ಯ ಪ್ರಯಾಣಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

    ಭೀಕರ ದುರಂತದಲ್ಲಿ ಪುಟ್ಟ ಕಂದಮ್ಮವೊಂದು ಬದುಕುಳಿದಿದೆ. ವಿಮಾನ ಭೀಕರ ದುರಂತಕ್ಕೀಡಾದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿಗೆ ಪುಟ್ಟ ಮಗುವೊಂದು ಅಳುತ್ತಿರುವ ಶಬ್ದ ಕೇಳಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಮಗುವಿನ ಅಳು ಕೇಳುತ್ತಿರುವ ಕಡೆ ತೆರಳಿ ರಕ್ಷಿಸಿದ್ದಾರೆ. ಘಟನೆಯಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೊಂಡ್ರೊಟ್ಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.

  • ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ತಿರುವನಂತಪುರಂ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ದುರಂತದಲ್ಲಿ ಪುಟ್ಟ ಕಂದಮ್ಮವೊಂದು ಬದುಕುಳಿದಿದೆ.

    ವಿಮಾನ ಭೀಕರ ದುರಂತಕ್ಕೀಡಾದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿಗೆ ಪುಟ್ಟ ಮಗುವೊಂದು ಅಳುತ್ತಿರುವ ಶಬ್ದ ಕೇಳಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಮಗುವಿನ ಅಳು ಕೇಳುತ್ತಿರುವ ಕಡೆ ತೆರಳಿ ರಕ್ಷಿಸಿದ್ದಾರೆ. ಘಟನೆಯಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೊಂಡ್ರೊಟ್ಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.

    ಈ ಸಂಬಂಧ ಸಿವಿಲ್ ಪೊಲಿಸ್ ಅಧಿಕಾರಿ ಮಗುವನ್ನು ಹಿಡಿದ ಫೋಟೋದೊಂದಿಗೆ ಆಡಿಯೋ ಬಿಡುಗಡೆ ಮಾಡಿದ್ದು, ದುಬೈನಿಂದ ಬಂದ ವಿಮಾನ ಇಲ್ಲಿ ಅವಘಡಕ್ಕೆ ತುತ್ತಾಗಿದೆ. ಘಟನೆಯಲ್ಲಿ ಮಗುವೊಂದು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಮಗುವಿಗೆ ಯಾರೂ ಇಲ್ಲ. ಮಗುವನ್ನು ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ್ದಾರೆ.

    ಇಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಗೆ ವೇಳೆ ನಿಲ್ದಾಣದ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿದೆ. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಸದ್ಯ ಪ್ರಯಾಣಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

  • ಲ್ಯಾಂಡಿಂಗ್ ವೇಳೆ ಅವಘಡ – ಇಬ್ಭಾಗವಾದ ಏರ್ ಇಂಡಿಯಾ ವಿಮಾನ

    ಲ್ಯಾಂಡಿಂಗ್ ವೇಳೆ ಅವಘಡ – ಇಬ್ಭಾಗವಾದ ಏರ್ ಇಂಡಿಯಾ ವಿಮಾನ

    ತಿರುವನಂತಪುರಂ: ಲ್ಯಾಂಡಿಂಗ್ ವೇಳೆ ಅವಘಡ ಸಂಭವಿಸಿದ್ದು, 191 ಜನ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಇಬ್ಭಾಗವಾಗಿದೆ.

    ಕೇರಳದ ಕೋಯಿಕ್ಕೋಡ್ ನ ಕರಿಪುರ ವಿಮಾನ ನಿಲ್ದಾಣದಲ್ಲಿ ಘಟನೆ ಸಂಭವಿಸಿದ್ದು, ಲ್ಯಾಂಡ್ ಆಗುವ ವೇಳೆ ಅವಘಡ ಸಂಭವಿಸಿದೆ. ವಿಮಾನದಲ್ಲಿ ಒಟ್ಟು 191 ಜನ ಪ್ರಯಾಣಿಕರು ಇದ್ದರು. ಇದರಲ್ಲಿ 20 ಜನ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ  ಎಂದು ಶಂಕಿಸಲಾಗಿದೆ.

    ಲ್ಯಾಂಡ್ ಆಗುವ ವೇಳೆ ವಿಮಾನ ರನ್ ವೇಗೆ ಅಪ್ಪಳಿಸಿದೆ. ವಿಮಾನ ತುಂಡು ತುಂಡಾಗಿದ್ದು, ಹಲವು ಭಾಗಗಳಾಗಿದೆ. ಸಂಜೆ 7.40ರ ಹೊತ್ತಿಗೆ ಘಟನೆ ಸಂಭವಿಸಿದ್ದು, ಭಾರೀ ಮಳೆ ಬರುತ್ತಿರುವಾಗಲೇ ಈ ಅವಘಡ ಸಂಭವಿಸಿದೆ.

    ಏನಿದು ಟೇಬಲ್ ಟಾಪ್ ವಿಮಾನ ನಿಲ್ದಾಣ?
    ಸುತ್ತಲೂ ಆಳ ಕಣಿವೆಯಿಂದ ಕೂಡಿ, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗಿದೆ. ಮಂಗಳೂರು ಹೊರತು ಪಡಿಸಿ ದೇಶದಲ್ಲಿ ಕೋಯಿಕ್ಕೋಡ್ ಮತ್ತು ಲೆಂಗ್‍ಪುಯಿನಲ್ಲಿ ಈ ರೀತಿಯ ವಿಮಾನ ನಿಲ್ದಾಣಗಳನ್ನು ಕಾಣಬಹುದು.

  • ಕೇರಳ ಭೂಕುಸಿತ- ಮೃತರ ಕುಟುಂಬಕ್ಕೆ ಪಿಎಂ ಮೋದಿ 2, ಸಿಎಂ 5 ಲಕ್ಷ ಪರಿಹಾರ

    ಕೇರಳ ಭೂಕುಸಿತ- ಮೃತರ ಕುಟುಂಬಕ್ಕೆ ಪಿಎಂ ಮೋದಿ 2, ಸಿಎಂ 5 ಲಕ್ಷ ಪರಿಹಾರ

    – ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ

    ತಿರುವನಂತಪುರಂ: ಭಾರೀ ಮಳೆಯಿಂದ ಕೆರಳದ ಇಡುಕ್ಕಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸುಮಾರು 15 ಜನ ಸಾವನ್ನಪ್ಪಿದ್ದು, 15 ಜನರನ್ನು ರಕ್ಷಿಸಲಾಗಿದೆ. ಮೃತರ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರಿಹಾರ ಘೋಷಿಸಿದ್ದಾರೆ.

    ಈ ಕುರಿತು ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಾಯಗೊಂಡವರನ್ನು ಮುನ್ನಾರ್ ನ ಟಾಟಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇಂದು ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಜೀವಗಳನ್ನು ಕಳೆದುಕೊಂಡಿರುವುದು ತುಂಬಾ ನೋವಾಗಿದೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಪರಿಹಾರ ಘೋಷಿಸಲಾಗಿದ್ದು, ಸಾವನ್ನಪ್ಪಿದವರ ಪ್ರತಿ ಕುಟುಂಬಕ್ಕೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ.ಘೋಷಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಈ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದು, ಮುನ್ನಾರ್ ನಿಂದ 25 ಕಿ.ಮೀ.ದೂರದಲ್ಲಿರುವ ರಾಜಾಮಲೈ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದು, ಸುಮಾರು 80 ಜನ ಈ ಪ್ರದೇಶದಲ್ಲಿ ವಾಸವಿದ್ದರು. ಮಣ್ಣಿನಡಿ ಎಷ್ಟು ಜನ ಸಿಲುಕಿದ್ದಾರೆ ಎಂಬ ಕುರಿತು ಖಚಿತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

    ತಾಲೂಕು ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಗುರುವಾರ ಕೊಚ್ಚಿ ಹೋಗಿದ್ದು, ಘಟನೆ ನಡೆದ ಪ್ರದೇಶವನ್ನು ತಲುಪುವುದು ಕಷ್ಟಸಾಧ್ಯವಾಗಿದೆ. ಕಠಿಣ ಭೂ ಪ್ರದೇಶ ಇರುವುದರಿಂದ ರಕ್ಷಣಾ ತಂಡಗಳು ತಲುಪುವುದು ಸಹ ತಡವಾಗುತ್ತಿದೆ.

    ಅಗ್ನಿಶಾಮಕ ದಳದ 50 ಸದಸ್ಯರ ವಿಶೇಷ ಕಾರ್ಯಪಡೆಯನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದ್ದು, ರಾತ್ರಿ ಕೆಲಸ ಮಾಡಲು ಸಹ ಇವರ ಬಳಿ ಸಲಕರಣೆಗಳಿವೆ. ಇದರೊಂದಿಗೆ ತುರ್ತು ಸೇವೆಗಳ ಸಿಬ್ಬಂದಿಯನ್ನು ಸಹ ಕಳುಹಿಸಲಾಗಿದೆ. ಅಲ್ಲದೆ ಪರಿಹಾರ ಕಾರ್ಯಕ್ಕಾಗಿ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಗಳ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದು ಸಿಎಂ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

    ಎನ್‍ಡಿಆರ್‍ಎಫ್ ಸಿಬ್ಬಂದಿ ಸ್ಥಳ ತಲುಪಿದ್ದು, ತ್ರಿಶೂರ್ ನ ಎರಡನೇ ತಂಡ ಸಹ ಸ್ಥಳದಲ್ಲಿದೆ. ಅವರೊಂದಿಗೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಅರಣ್ಯ ಸಿಬ್ಬಂದಿ ಹಾಗೂ ಕಂದಾಯ ಅಧಿಕಾರಿಗಳು ಸಹ ಕೈಜೋಡಿಸಬೇಕು ಎಂದು ತಿಳಿಸಿದ್ದಾರೆ.

  • ಉಕ್ಕಿ ಹರಿಯುತ್ತಿರೋ ಮೂಲೆಹೊಳೆ – ಕೇರಳ ಕರ್ನಾಟಕ ಸಂಚಾರ ಬಂದ್

    ಉಕ್ಕಿ ಹರಿಯುತ್ತಿರೋ ಮೂಲೆಹೊಳೆ – ಕೇರಳ ಕರ್ನಾಟಕ ಸಂಚಾರ ಬಂದ್

    ಚಾಮರಾಜನಗರ: ಕೇರಳದ ವೈನಾಡಿನಲ್ಲಿ ಭಾರೀ ಪ್ರಮಾಣದ ಮಳೆ ಬೀಳುತ್ತಿದ್ದು, ಜಿಲ್ಲೆಯ ಮೂಲೆಹೊಳೆ ಹಳ್ಳ ತುಂಬಿ ಹರಿಯುತ್ತಿದೆ.

    ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲೆಹೊಳೆ ಹಳ್ಳ ತುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕರ್ನಾಟಕ-ಕೇರಳ ಸಂಚಾರ ಬಂದ್ ಮಾಡಿದ್ದಾರೆ.

    ಕೇರಳ-ಕರ್ನಾಟಕದ ಗಡಿಯಾದ ಮೂಲೆಹೊಳೆಯಲ್ಲಿ ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ. ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರಿಕೆ ವಹಿಸಿರುವ ಅರಣ್ಯಾಧಿಕಾರಿಗಳು ವಾಹನ ಸಂಚಾರ ಬಂದ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕಕ್ಕೆ ಸಂಚರಿಸುವ ಸರಕು ಸಾಗಣೆ ಮಾಡುವ ವಾಹನಗಳು ಮದ್ದೂರು ಚೆಕ್ ಪೋಸ್ಟ್ ನಲ್ಲಿ ಸಾಲುಗಟ್ಟಿ ನಿಂತಿವೆ.

    ಜಿಲ್ಲೆಯ ಮಳೆಯ ಅರ್ಭಟ ಕಡಿಮೆಯಾಗುವವರೆಗೆ ಯಾವುದೇ ವಾಹನ ಬಿಡದಿರಲೂ ಅರಣ್ಯಾಧಿಕಾರಿಗಳು ನಿರ್ಧಾರ ಮಾಡಿದ್ದಾರೆ.

  • ಕೇರಳ ಭೂ ಕುಸಿತಕ್ಕೆ ಐವರು ಬಲಿ, ಮಣ್ಣಿನಡಿಯಲ್ಲಿದ್ದಾರೆ 70 ಮಂದಿ

    ಕೇರಳ ಭೂ ಕುಸಿತಕ್ಕೆ ಐವರು ಬಲಿ, ಮಣ್ಣಿನಡಿಯಲ್ಲಿದ್ದಾರೆ 70 ಮಂದಿ

    ತಿರುವನಂತಪುರಂ: ಕಳೆದ ನಾಲ್ಕು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇಡುಕ್ಕಿ ಜಿಲ್ಲೆಯ ರಾಜಮಲೈನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಐವರು ಸಾವನ್ನಪ್ಪಿದ್ದಾರೆ.

    ಇಡುಕ್ಕಿಯಲ್ಲಿ ಐದು ಜನ ಸಾವನ್ನಪ್ಪಿದ ನಂತರ ಭಾರೀ ಮಳೆಯಿಂದ ಮುನ್ನಾರ್ ನಲ್ಲಿ ಸಂಭವಿಸಿದ ಗುಡ್ಡ ಕುಸಿತಕ್ಕೆ ಕನಿಷ್ಠ 70 ಜನರು ಮಣ್ಣಿನ ಕೆಳಗೆ ಸಿಕ್ಕಿಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಮೊಬೈಲ್ ವೈದ್ಯಕೀಯ ತಂಡ ಮತ್ತು 15 ಅಂಬುಲೆನ್ಸ್‌ಗಳನ್ನು ಕಳುಹಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಹೇಳಿದ್ದಾರೆ.

    ಮುಂಬರುವ ಮೂರು ದಿನಗಳಲ್ಲಿ ಕೇರಳದಲ್ಲಿ ಅತಿ ಹೆಚ್ಚು ಮಳೆಯಾಗುವ ಸಂಭವಿದೆ ಎಂದು ಭಾರತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮುಂಜಾಗೃತ ಕ್ರಮವಾಗಿ ಕೇರಳದ ವಯನಾಡು ಮತ್ತು ಇಡುಕ್ಕಿಗೆ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಳೆದ ಎರಡು ದಿನಗಳಲ್ಲಿ ಈ ಜಿಲ್ಲೆಗಳಿಗೆ ಭಾರಿ ಮಳೆಯಾಗುತ್ತಿರುವುದರಿಂದ, ಅಧಿಕಾರಿಗಳು ತೀವ್ರ ಎಚ್ಚರಿಕೆ ವಹಿಸಿದ್ದಾರೆ ಮತ್ತು ಭೂಕುಸಿತವಾಗುವ ನಿರೀಕ್ಷೆಯಿರುವ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಸ್ಥಳಾಂತರ ಮಾಡಲಾಗಿದೆ. ಜೊತೆಗೆ ನದಿ ಪಾತ್ರದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದು ಸೂಚನೆ ನೀಡಲಾಗಿದೆ.

    ಈ ಕುರಿತು ಮಾತನಾಡಿದ ಕೇರಳ ಸಿಎಂ ಪಿಣರಾಯಿ ವಿಜಯನ್, ಇಡುಕ್ಕಿಯ ರಾಜಮಲೈನಲ್ಲಿ ಭೂಕುಸಿತ ಸಂತ್ರಸ್ತರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‍ಡಿಆರ್‍ಎಫ್) ನಿಯೋಜಿಸಲಾಗಿದೆ. ಅಗ್ನಿಶಾಮಕ, ಅರಣ್ಯ ಮತ್ತು ಕಂದಾಯ ಅಧಿಕಾರಿಗಳಿಗೆ ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

  • ಕೋಳ ಸಮೇತ ಕೇರಳ ಆರೋಪಿಯ ಮೃತದೇಹ ಉಡುಪಿಯಲ್ಲಿ ಪತ್ತೆ

    ಕೋಳ ಸಮೇತ ಕೇರಳ ಆರೋಪಿಯ ಮೃತದೇಹ ಉಡುಪಿಯಲ್ಲಿ ಪತ್ತೆ

    ಉಡುಪಿ: ಕೇರಳ ರಾಜ್ಯದ ಕಾಸರಗೋಡಿನ ಪೋಕ್ಸೋ ಕಾಯ್ದೆಯಡಿಯ ಬಂದಿತ ಆರೋಪಿಯ ಮೃತದೇಹ ಉಡುಪಿಯಲ್ಲಿ ಪತ್ತೆಯಾಗಿದೆ.

    ಕೇರಳ ರಾಜ್ಯದ ಕೂಡ್ಲು ಕಾಳ್ಯಾಂಗಾಡ್‍ನ ಮಹೇಶ್ (28) ಪೋಕ್ಸೋ ಕೇಸಿನ ಆರೋಪಿ. ಶೌಚಾಲಯದಲ್ಲಿ ಅಪ್ರಾಪ್ತ ಬಾಲಕಿಯ ವಿಡಿಯೋ ಮಾಡಿದ್ದ ಮಹೇಶ್ ನನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ಮಹಜರಿನ ವೇಳೆ ಆತ ಕೇರಳದಲ್ಲಿ ಸಮುದ್ರಕ್ಕೆ ಹಾರಿದ್ದ. ಜುಲೈ 22ರಂದು ಈ ಘಟನೆ ನಡೆದಿದ್ದು, ಇಂದು ಮೃತದೇಹ ಪತ್ತೆಯಾಗಿದೆ.

    ಕೇರಳದಿಂದ ತೆಲಿಕೊಂಡು ಬಂದು ಉಡುಪಿಯ ಕೋಟ ಮಣೂರು ಪಡುಕರೆಯ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದ್ದು, ಶವದ ಬಟ್ಟೆ, ಕೈಕೋಳ ಗಮನಿಸಿ ಪೊಲೀಸರು ವ್ಯಕ್ತಿಯ ಚಹರೆ ಪತ್ತೆ ಮಾಡಿದ್ದಾರೆ. ಈ ಸಂಬಂಧ ಕೋಟ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

  • ಕಬಿನಿಯಲ್ಲಿ ಒಳ ಹರಿವು ಹೆಚ್ಚಳ – ಕಪಿಲಾ ನದಿ ಪಾತ್ರದ ಜನತೆಯಲ್ಲಿ ಪ್ರವಾಹದ ಆತಂಕ

    ಕಬಿನಿಯಲ್ಲಿ ಒಳ ಹರಿವು ಹೆಚ್ಚಳ – ಕಪಿಲಾ ನದಿ ಪಾತ್ರದ ಜನತೆಯಲ್ಲಿ ಪ್ರವಾಹದ ಆತಂಕ

    – ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

    ಮೈಸೂರು: ಕೇರಳದ ವೈನಾಡಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನಂಜನಗೂಡಿನಲ್ಲಿ ಕಪಿಲಾ ನದಿ ಮೈದುಂಬಿ ಹರಿಯುತ್ತಿದೆ.

    ಕೇರಳದಲ್ಲಿ ಹೆಚ್ಚು ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಒಳ ಹರಿವು ಹೆಚ್ಚಳವಾಗಿದೆ. ಹೀಗಾಗಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಬಿಡುಗಡೆ ಮಾಡಲಾಗಿದೆ. ಜಲಾಶಯದಿಂದ ಹೆಚ್ಚು ನೀರನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕಪಿಲಾ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.

    ಕಬಿನಿ ಜಲಾಶಯದ ಒಳ ಹರಿವು ಹೆಚ್ಚಾದ ಪರಿಣಾಮ ನಂಜನಗೂಡಿನ ಕಪಿಲಾ ನದಿ ಸ್ನಾನಘಟ್ಟ ಮುಳುಗಡೆಯಾಗಿದೆ. ಅಲ್ಲದೇ ಇಂದು ಮತ್ತು ನಾಳೆ ಇನ್ನೂ ನದಿಯ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ನಂಜನಗೂಡಿನ ತೋಪಿನ ಬೀದಿ, ಹಳ್ಳದಕೇರಿ, ಕುರುಬಗೇರಿ, ಮೇದರಗೇರಿ, ಸರಸ್ವತಿ ಕಾಲೋನಿ ಸೇರಿದಂತೆ ವಿವಿಧ ಬಡಾವಣೆಗಳ ಜನತೆಯಲ್ಲಿ ಆತಂಕ ಉಂಟಾಗಿದೆ.

    ಕಳೆದ ಬಾರಿ ಪ್ರವಾಹದಿಂದ ನೂರಾರು ಕುಟುಂಬಕ್ಕೆ ಸಮಸ್ಯೆಯಾಗಿತ್ತು. ಮನೆ ಮುಳುಗಿ ಅನೇಕು ಕುಟುಂಬಗಳು ಬೀದಿಗೆ ಬಂದಿದ್ದವು. ಇದೀಗಾ ಮತ್ತೆ ಕುಟುಂಬಗಳು ಪ್ರವಾಹ ಉಂಟಾಗಬಹುದು ಎಂಬ ಆತಂಕದಲ್ಲಿದ್ದಾರೆ.

    ಕಬಿನಿ ಜಲಾಶಯದ ಇಂದಿನ ಒಳಹರಿವು 38 ಸಾವಿರ ಕ್ಯೂಸೆಕ್ ಆಗಿದ್ದು, ಜಲಾಶಯದ ಇಂದಿನ ಹೊರಹರಿವು ಒಟ್ಟು 40 ಸಾವಿರ ಕ್ಯೂಸೆಕ್ ಆಗಿದೆ. ನಾಲೆಗಳಿಗೆ 600 ಕ್ಯೂಸೆಕ್, ನದಿಗೆ 21,458 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದ ಇಂದಿನ ನೀರಿನ ಮಟ್ಟ 79.87 ಅಡಿಯಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 84 ಅಡಿ ಆಗಿದೆ. ಜಲಾಶಯ ಒಟ್ಟು 19.52 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಜಲಾಶಯದಲ್ಲಿಂದು 16.97 ಟಿಎಂಸಿ ನೀರು ಸಂಗ್ರಹವಾಗಿದೆ.