Tag: kerala

  • ಗೆಳೆಯನ ಜೊತೆ ನಯನತಾರಾ ಓಣಂ ಆಚರಣೆ – ರೊಮ್ಯಾಂಟಿಕ್ ಫೋಟೋಶೂಟ್

    ಗೆಳೆಯನ ಜೊತೆ ನಯನತಾರಾ ಓಣಂ ಆಚರಣೆ – ರೊಮ್ಯಾಂಟಿಕ್ ಫೋಟೋಶೂಟ್

    ತಿರುವನಂತಪುರಂ: ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿರುವುದು ತಿಳಿದಿರುವ ವಿಚಾರ. ಶೀಘ್ರದಲ್ಲೇ ಈ ಜೋಡಿ ವಿವಾಹ ಸಹ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೀಗ ಈ ಜೋಡಿ ಒಟ್ಟಿಗೆ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

    ಕೇರಳದ ಅತೀ ದೊಡ್ಡ ಹಬ್ಬ ಓಣಂ. ಹೀಗಾಗಿ ಕೊರೊನಾ ನಡುವೆಯೂ ಪ್ರಪಂಚದಾದ್ಯಂತ ಮಲಯಾಳಿಗಳು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಅದೇ ರೀತಿ ನಟಿ ನಯನತಾರಾ ತಮ್ಮ ಹುಟ್ಟೂರಿನಲ್ಲಿ ಓಣಂ ಹಬ್ಬವನ್ನು ಆಚರಣೆ ಮಾಡಿದ್ದಾರೆ. ಗೆಳೆಯ ವಿಘ್ನೇಶ್ ಸಹ ಜೊತೆಯಲ್ಲಿ ಇದ್ದಿದ್ದು ಓಣಂ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದಂತಾಗಿದೆ.

    https://www.instagram.com/p/CEjZ16VB_q2/?igshid=3qzdep2f1uzt

    ನಯನತಾರಾ ಗೆಳೆಯ ವಿಘ್ನೇಶ್ ಶಿವನ್ ಜೊತೆ ತಮ್ಮ ಹುಟ್ಟೂರು ಕೊಚ್ಚಿಗೆ ಹೋಗಿದ್ದಾರೆ. ಅಲ್ಲಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಹಬ್ಬದ ಜೊತೆಗೆ ಇಬ್ಬರು ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಪು ಧರಿಸಿರುವ ನಯನತಾರಾ ಮತ್ತು ವಿಘ್ನೇಶ್ ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ನಯನತಾರ ಮತ್ತು ವಿಘ್ನೇಶ್ ಶಿವನ್ ಇಬ್ಬರು ಇನ್‍ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಆ ಫೋಟೋಗಳಿಗೆ “ಖುಷಿಯಾಗಿರಲು ಕಾರಣಗಳನ್ನು ಕಂಡುಕೊಳ್ಳೋಣ. ಅವುಗಳನ್ನು ಎಲ್ಲರೊಂದಿಗೆ ಭರವಸೆಯಿಂದ ಹೆಚ್ಚಿಕೊಳ್ಳೋಣ. ಈ ಕೊರೊನಾ ಸಂದರ್ಭದಲ್ಲಿಯೂ ಮುಖದಲ್ಲಿ ಮಂದಹಾಸವನ್ನು ಆಹ್ವಾನಿಸುವ ಏಕೈಕ ಮಾರ್ಗವಾಗಿದೆ” ಎಂದು ವಿಘ್ನೇಶ್ ಬರೆದುಕೊಂಡಿದ್ದಾರೆ.

    https://www.instagram.com/p/CEjRm3-Be7S/?igshid=13lry2wyew4uh

    ಈ ಜೋಡಿಯ ಜೊತೆ ನಯನತಾರಾ ತಾಯಿ ಕೂಡ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ರಿಲೇಷನ್‍ಶಿಪ್‍ನಲ್ಲಿದ್ದು, ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾವಾಗ ಮದುವೆಯಾಗುತ್ತದೆ ಎಂದು ಇಬ್ಬರೂ ಅಧಿಕೃತವಾಗಿ ಹೇಳಿಲ್ಲ.

    https://www.instagram.com/p/CEjPqFDhqNn/?igshid=2hto1mjpkaey

  • ಓಣಂ ಮುನ್ನಾದಿನವೇ ಇಬ್ಬರು ಡಿವೈಎಫ್‍ಐ ಕಾರ್ಯಕರ್ತರ ಬರ್ಬರ ಕೊಲೆ

    ಓಣಂ ಮುನ್ನಾದಿನವೇ ಇಬ್ಬರು ಡಿವೈಎಫ್‍ಐ ಕಾರ್ಯಕರ್ತರ ಬರ್ಬರ ಕೊಲೆ

    – ರಸ್ತೆಯಲ್ಲೇ ಹಲ್ಲೆ ಮಾಡಿದ ಗುಂಪು
    – ಕೊಲೆಯ ದೃಶ್ಯ ಸಿಸಿಟಿಯಲ್ಲಿ ಸೆರೆ

    ತಿರುವನಂತಪುರಂ: ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ (ಡಿವೈಎಫ್‍ಐ) ಇಬ್ಬರು ಕಾರ್ಯಕರ್ತರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಮೃತರನ್ನು ಮಿಥಿಲಾಜ್ (30) ಮತ್ತು ಹಕ್ ಮುಹಮ್ಮದ್ (24) ಎಂದು ಗುರುತಿಸಲಾಗಿದೆ. ತಿರುವನಂತಪುರಂ ಜಿಲ್ಲೆಯ ತೆಂಬಮೂಡ್‍ನಲ್ಲಿ ಭಾನುವಾರ ಮಧ್ಯರಾತ್ರಿ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದೆ. ದಾಳಿಯಿಂದ ಮಿಥಿಲಾಜ್ ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮೊಹಮ್ಮದ್ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬೈಕಿನಲ್ಲಿ ಮಿಥಿಲಾಜ್ ಮನೆಗೆ ಹೋಗುತ್ತಿದ್ದಾಗ ಗುಂಪೊಂದು ಹಲ್ಲೆ ನಡೆಸಿದೆ. ಹಲ್ಲೆ ಮಾಡಿರುವ ದೃಶ್ಯ ಆ ಪ್ರದೇಶದ ಸಿಸಿಟಿಯಲ್ಲಿ ಸೆರೆಯಾಗಿದೆ. ಗುಂಪಿನಲ್ಲಿ ಎಂಟು ಜನರಿದ್ದು, ರಸ್ತೆಯಲ್ಲಿಯೇ ಇಬ್ಬರು ಯುವಕನ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಒಬ್ಬ ಅವರಿಂದ ತಪ್ಪಿಸಿಕೊಂಡು ಓಡಿಹೋಗಿದ್ದಾನೆ. ಆದರೆ ಗುಂಪು ಆತನನ್ನು ಬೆನ್ನಟ್ಟಿ ಹಲ್ಲೆ ಮಾಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಪೊಲೀಸರು ವಶಕ್ಕೆ ಪಡೆದಕೊಂಡಿದ್ದಾರೆ. ತಿರು ಓಣಂ ಮುನ್ನಾದಿನ ತಮ್ಮ ಕಾರ್ಯಕರ್ತರ ಮೇಲೆ ನಡೆದ ದಾಳಿಯ ಹಿಂದೆ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ ಎಂದು ಡಿವೈಎಫ್‍ಐ ಆರೋಪಿಸಿದೆ.

    ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಹತ್ಯೆಯನ್ನು ಖಂಡಿಸಿದ್ದು, ಕೊಲೆಯ ಹಿಂದಿರುವ ಆರೋಪಿಗಳನ್ನು ಹಿಡಿಯಲು ಸಮಗ್ರ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಅಲ್ಲದೇ ಕೊಲೆಗೆ ನಿಖರ ಕಾರಣ ಮತ್ತು ಹತ್ಯೆ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯಲಿದೆ ಎಂದು ಮುಹಮ್ಮದ್ ಮತ್ತು ಮಿಥಿಲಾಜ್ ಇಬ್ಬರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

  • ಮನೆಗೆ ವಾಪಸ್ ಬರುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ವಿಮಾನ ನಿಲ್ದಾಣದಲ್ಲೇ ಸಾವು

    ಮನೆಗೆ ವಾಪಸ್ ಬರುತ್ತಿದ್ದ ಸಂಶೋಧನಾ ವಿದ್ಯಾರ್ಥಿನಿ ವಿಮಾನ ನಿಲ್ದಾಣದಲ್ಲೇ ಸಾವು

    – ಅನಾರೋಗ್ಯವಿದ್ರೂ ವಿದ್ಯಾಭ್ಯಾಸ ಮುಂದುವರಿಸಿದ್ದ ವಿದ್ಯಾರ್ಥಿನಿ
    – ಆಕೆಯ ಪಾಲಿಗೆ ಅಧ್ಯಯನದ ಮೇಲಿನ ಉತ್ಸಾಹ ಎಲ್ಲಕ್ಕಿಂತ ಹೆಚ್ಚಾಗಿತ್ತು

    ತಿರುವನಂತಪುರಂ: ಕೇರಳ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ತಮ್ಮ ಮನೆಗೆ ವಾಪಸ್ ಬರುವ ಮೊದಲೇ ವಿಮಾನ ನಿಲ್ದಾಣದಲ್ಲಿಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

    ಲೀಜಾ ಜೋಸ್ (28) ಮೃತ ಸಂಶೋಧನಾ ವಿದ್ಯಾರ್ಥಿನಿ. ಇವರು ದಕ್ಷಿಣ ಕೊರಿಯಾದಿಂದ ಕೇರಳದ ಇಡುಕ್ಕಿಯಲ್ಲಿರುವ ತಮ್ಮ ಮನೆಗೆ ವಾಪಸ್ ಬರುತ್ತಿದ್ದರು. ಆದರೆ ಅನಾರೋಗ್ಯದಿಂದ ಬಳಲುತ್ತಿದ್ದ ಲೀಜಾ ಜೋಸ್ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

    ಇಡುಕ್ಕಿ ಜಿಲ್ಲೆಯ ಚೆರುಥೋನಿ ಮೂಲದ ಲೀಜಾ ಜೋಸ್, ದಕ್ಷಿಣ ಕೊರಿಯಾದ ಪುಸಾನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದರು. ಮನೆಗೆ ವಾಪಸ್ ಬರಲು ಇಂಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಆದರೆ ಇದ್ದಕ್ಕಿದ್ದಂತೆ ವಿಮಾನ ನಿಲ್ದಾಣದಲ್ಲಿ ಕುಸಿದುಬಿದ್ದಿದ್ದಾರೆ. ತಕ್ಷಣ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟರಲ್ಲಿಯೇ ಲೀಜಾ ಜೋಸ್ ಮೃತಪಟ್ಟಿದ್ದರು. ಆದರೆ ವಿದ್ಯಾರ್ಥಿನಿಯ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

    ಕುಟುಂಬದವರು ಆಕೆ ಅನಾರೋಗ್ಯದಿಂದ ಬಳಲುತ್ತಿದ್ದು, ಕಿವಿ ನೋವಿತ್ತು ಎಂದು ಹೇಳಿದ್ದಾರೆ. ಮೃತ ಲೀಜಾ ಜೋಸ್ ದಕ್ಷಿಣ ಕೊರಿಯಾದಲ್ಲಿ ನಾಲ್ಕು ವರ್ಷಗಳಿಂದ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾರೆ. ಫೆಬ್ರವರಿಯಲ್ಲಿ ಕೇರಳಕ್ಕೆ ಬಂದಿದ್ದಾಗ ಲೀಜಾ ಜೋಸ್ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ ವೀಸಾ ಅವಧಿ ಮುಗಿಯಲಿದ್ದರಿಂದ ಲೀಜಾ ಮತ್ತೆ ದಕ್ಷಿಣ ಕೊರಿಯಾಕ್ಕೆ ಹೋಗಿದ್ದರು.

    ನಾನು ಇಲ್ಲಿಯವರೆಗೆ ಮಾಡಿದ ಪ್ರಾಜೆಕ್ಟ್‌ಗಳನ್ನು ಹಿಂತಿರುಗಿಸದಿದ್ದರೆ ನನ್ನ ಸಂಶೋಧನೆ ವ್ಯರ್ಥವಾಗುತ್ತದೆ ಎಂದು ಪೋಷಕರಿಗೆ ಹೇಳಿದ್ದಳು. ದಕ್ಷಿಣ ಕೊರಿಯಾಕ್ಕೆ ಹಿಂದಿರುಗಿದ ನಂತರ ಲೀಜಾ 14 ದಿನಗಳ ಕಾಲ ಕ್ವಾರಂಟೈನಲ್ಲಿದ್ದರು. ಈ ಸಮಯದಲ್ಲಿಯೇ ಅವಳಿಗೆ ಕಿವಿ ನೋವು ಕಾಣಿಸಿಕೊಂಡಿದೆ. ಅಲ್ಲದೇ ಕಫ ಕೂಡ ಇತ್ತು. ಆದರೆ ಕೋವಿಡ್ ಟೆಸ್ಟ್ ಮಾಡಿಸಿದಾಗ ವರದಿಯಲ್ಲಿ ನೆಗೆಟಿವ್ ಬಂದಿತ್ತು. ನಂತರ ವೈದ್ಯಕೀಯ ಸಲಹೆ ಮೇರೆಗೆ ಕ್ಯಾರೆಂಟೈನ್ ಅವಧಿ ಮುಗಿದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಳು ಎಂದು ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

    ಲೀಜಾಗೆ ವೈದ್ಯರು ಔಷಧಿ ನೀಡಿದ್ದರು. ಒಂದು ವೇಳೆ ಔಷಧಿಗಳಿಂದ ಗುಣಮುಖವಾಗದಿದ್ದರೆ ಶಸ್ತ್ರಚಿಕಿತ್ಸೆ ಮಾಡಿಸಬೇಕಾಗುತ್ತದೆ ಎಂದು ತಿಳಿಸಿದ್ದರು. ಲೀಜಾ ಪೋಷಕರು ಮಗಳ ಆರೋಗ್ಯ ಸ್ಥಿತಿಯನ್ನು ತಿಳಿದ ನಂತರ ಶೀಘ್ರದಲ್ಲೇ ಮನೆಗೆ ವಾಪಸ್ ಬರುವಂತೆ ಕೇಳಿಕೊಂಡಿದ್ದರು. ಆದರೆ ಲೀಜಾ ತನ್ನ ಅಧ್ಯಯನವನ್ನು ಮುಂದುವರಿಸಲು ಮತ್ತು ಪಿಎಚ್‍ಡಿ ಪಡೆಯಲು ನಿರ್ಧರಿಸಿದ್ದಳು. ಅವಳ ಪಾಲಿಗೆ ಅಧ್ಯಯನದ ಮೇಲಿನ ಉತ್ಸಾಹ ಎಲ್ಲಕ್ಕಿಂತ ಹೆಚ್ಚಾಗಿತ್ತು ಎಂದು ಲೀಜಾ ಚಿಕ್ಕಪ್ಪ ಹೇಳಿದ್ದಾರೆ.

  • ಕೊರೊನಾ ಗೆದ್ದ 110 ವರ್ಷದ ಅಜ್ಜಿ- ಸಚಿವರಿಂದ ವೈದ್ಯರಿಗೆ ಮೆಚ್ಚುಗೆ

    ಕೊರೊನಾ ಗೆದ್ದ 110 ವರ್ಷದ ಅಜ್ಜಿ- ಸಚಿವರಿಂದ ವೈದ್ಯರಿಗೆ ಮೆಚ್ಚುಗೆ

    – ಇದೊಂದು ಹೆಮ್ಮೆಯ ವಿಚಾರವೆಂದ ಸಚಿವರು

    ತಿರುವನಂತಪುರಂ: ಕೊರೊನಾ ವಿರುದ್ಧದ ಹೋರಾಟದಲ್ಲಿ 110 ವರ್ಷದ ಅಜ್ಜಿ ಗೆಲುವು ಸಾಧಿಸಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಮಲಪ್ಪುರಂ ಜಿಲ್ಲೆಯ ರಂದಾಥನಿ ವರಿಯಾಥ್ ಪಥು ಕೊರೊನಾದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದು, ಉತ್ತರ ಕೇರಳದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೊನಾದಿಂದ ಗುಣಮುಖರಾದವರ ಪೈಕಿ ಹಿರಿಯ ವ್ಯಕ್ತಿಯಾಗಿದ್ದಾರೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಸಂತಸ ವ್ಯಕ್ತಪಡಿಸಿದ್ದಾರೆ.

    ಆಗಸ್ಟ್ 18ರಂದು 110 ವರ್ಷದ ಅಜ್ಜಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಜ್ಜಿ ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದು, ಯಾವುದೇ ತೊಂದರೆಯಿಲ್ಲದೆ ಗುಣಮುಖರಾಗಿದ್ದಾರೆ. ಪಥು ಅವರಿಗೆ ಮಗಳಿಂದ ಕೊರೊನಾ ಸೋಂಕು ತಗುಲಿತ್ತು. ಅವರಿಗೆ ಸಣ್ಣ ಪ್ರಮಾಣದ ಗುಣಲಕ್ಷಣಗಳಿದ್ದವು ಎಂದು ವೈದ್ಯರು ತಿಳಿಸಿದ್ದಾರೆ.

    ಇಷ್ಟೊಂದು ವಯಸ್ಸಾದ ಅಜ್ಜಿಗೆ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಸಿಬ್ಬಂದಿ ಕಾಳಜಿ ವಹಿಸಿ ಉತ್ತಮ ಚಿಕಿತ್ಸೆ ನೀಡಿದ್ದಾರೆ. ಹೀಗಾಗಿ ಅವರನ್ನು ಮೆಚ್ಚಲೇಬೇಕು ಎಂದು ಆರೋಗ್ಯ ಸಚಿವೆ ವೈದ್ಯರಿಗೆ ಶುಭ ಕೊರಿದ್ದಾರೆ. ಅಲ್ಲದೆ ಕೊರೊನಾ ವಿರುದ್ಧ ಹೋರಾಟದಲ್ಲಿ ರಾಜ್ಯದ ಆರೋಗ್ಯ ಇಲಾಖೆಗೆ ಇದೊಂದು ಹೆಮ್ಮೆಯ ವಿಚಾರವಾಗಿದೆ ಎಂದು ಸಚಿವೆ ಶೈಲಜಾ ತಿಳಿಸಿದ್ದಾರೆ.

    ಪಥು ಅವರನ್ನು ಉಳಿಸಿದ್ದಕ್ಕೆ ಕುಟುಂಬಸ್ಥರು ಸಹ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನೂ 14 ದಿನಗಳ ಕಾಲ ಅಜ್ಜಿಯನ್ನು ಮನೆಯಲ್ಲೇ ಕಾಳಜಿಯಿಂದ ನೋಡಿಕೊಳ್ಳುವಂತೆ ವೈದ್ಯರು ತಿಳಿಸಿದ್ದಾರೆ. ಈ ಹಿಂದೆ 105 ವರ್ಷದ ಮಹಿಳೆ ಹಾಗೂ 103 ವರ್ಷದ ಪುರುಷ ಕೊರೊನಾದಿಂದ ಗುಣಮುಖರಾಗಿದ್ದರು. ಇದೀಗ 110 ವರ್ಷದ ಅಜ್ಜಿ ಗುಣಮುಖರಾಗಿದ್ದಾರೆ.

  • ಮೀನು ಸಾಕಾಣೆ ಕೇಂದ್ರವಾಗಿ ಬದಲಾಯ್ತು ಸ್ವಿಮ್ಮಿಂಗ್ ಪೂಲ್- ಭರ್ಜರಿ ಆದಾಯದ ನಿರೀಕ್ಷೆ

    ಮೀನು ಸಾಕಾಣೆ ಕೇಂದ್ರವಾಗಿ ಬದಲಾಯ್ತು ಸ್ವಿಮ್ಮಿಂಗ್ ಪೂಲ್- ಭರ್ಜರಿ ಆದಾಯದ ನಿರೀಕ್ಷೆ

    ತಿರುವನಂತಪುರ: ರೆಸಾರ್ಟ್ ಒಂದರ ಸ್ವಿಮ್ಮಿಂಗ್ ಪೂಲನ್ನು ಮೀನು ಸಾಕಾಣಿಕೆ ಕೇಂದ್ರವಾಗಿ ಬದಲಾಯಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್ ಕಾರಣದಿಂದ ಗ್ರಾಹಕರು ಇಲ್ಲದೇ ರೆಸಾರ್ಟ್ ಆದಾಯಕ್ಕೆ ಹೊಡೆತ ಬಿದ್ದಿದ್ದು, ಇದನ್ನು ಸರಿದೂಗಿಸುವ ಹಿನ್ನೆಲೆಯಲ್ಲಿ ರೆಸಾರ್ಟ್ ಮಾಲೀಕರು ಹೊಸ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

    ಕೇರಳದ ಕುಮಾರಕೋಮ್‍ನಲ್ಲಿರುವ ಅವೆಡಾ ರೆಸಾರ್ಟ್ ಈಗ ಮೀನು ಸಾಕಾಣಿಕಾ ಕೇಂದ್ರವಾಗಿ ಬದಲಾಗಿದ್ದು, ಇಲ್ಲಿನ ಐಶಾರಾಮಿ ಸ್ಪಾ ಹಾಗೂ ಈಜುಕೊಳದಲ್ಲಿ ಮೀನುಗಳನ್ನು ಸಾಕಲಾಗುತ್ತಿದೆ.

    ಕಳೆದ ಮಾರ್ಚ್ ತಿಂಗಳಿನಿಂದ ರೆಸಾರ್ಟಿಗೆ ಗ್ರಾಹಕರಿಲ್ಲದೇ ಆದಾಯಕ್ಕೆ ಪೆಟ್ಟುಬಿದ್ದಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲಸಗಾರರಿಗೂ ಸಂಬಳ ನೀಡಲು ಮಾಲೀಕರು ಸಂಕಷ್ಟ ಎದುರಿಸಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಚಿಂತನೆಯೊಂದಿಗೆ ಆದಾಯ ಗಳಿಸಲು ರೆಸಾರ್ಟಿನಲ್ಲಿದ್ದ 75 ಲಕ್ಷ ಲೀಟರ್ ಸಾಮಥ್ರ್ಯದ ಈಜುಕೊಳದಲ್ಲಿ ಮೀನು ಸಾಕಾಣಿಕೆ ಆರಂಭಿಸಿದ್ದರು.

    ಈ ಕುರಿತು ಮಾತನಾಡಿರುವ ರೆಸಾರ್ಟ್ ಮ್ಯಾನೇಜರ್ ಸುರೇಂದ್ರನ್, ಲಾಕ್‍ಡೌನ್ ಕಾರಣದಿಂದ ನಮ್ಮ ಆದಾಯ ನಿಂತು ಹೋಗಿತ್ತು. ಆದ್ದರಿಂದ ಜೂನ್ ತಿಂಗಳಿನಿಂದ ರೆಸಾರ್ಟಿನಲ್ಲಿದ್ದ ಈಜುಕೊಳದಲ್ಲಿ ಮೀನು ಸಾಕುತ್ತಿದ್ದೇವೆ. 2 ತಿಂಗಳ ವಯಸ್ಸಿನ 16 ಸಾವಿರ ಪರ್ಲ್ ಸ್ಪಾಟ್ ಮೀನುಗಳನ್ನು ಸಾಕಿದ್ದು, ನವೆಂಬರ್ ವೇಳೆಗೆ ಮೀನು ಮಾರಾಟಕ್ಕೆ ಲಭಿಸುತ್ತದೆ. ಈ ಮೀನುಗಳನ್ನು ಮಧ್ಯಪ್ರಾಚ್ಯಕ್ಕೆ ರಫ್ತು ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಸದ್ಯ ನಮ್ಮಲಿರುವ ಈಜುಕೊಳದಲ್ಲಿ 40 ಲಕ್ಷ ಟನ್ ಮೀನು ಸಾಕಾಣಿಕೆ ಮಾಡಲು ಸಾಧ್ಯವಿದೆ. ಈ ಮೀನಿನ ಮಾರಾಟದಿಂದ 40 ಸಾವಿರ ಡಾಲರ್ (ಸುಮಾರು 29,90,892 ರೂ.) ಆದಾಯ ಗಳಿಸುವ ಸಾಧ್ಯತೆ ಇದೆ. ಇದರಿಂದ ನಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಹಾಗೂ ರೆಸಾರ್ಟ್ ನಿರ್ವಹಣೆ ಮಾಡಲು ಬಳಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಕರ್ನಾಟಕದ ಪಡಿತರ ಅಕ್ಕಿ ಕೇರಳಕ್ಕೆ- ಐವರು ಖದೀಮರ ಅರೆಸ್ಟ್

    ಕರ್ನಾಟಕದ ಪಡಿತರ ಅಕ್ಕಿ ಕೇರಳಕ್ಕೆ- ಐವರು ಖದೀಮರ ಅರೆಸ್ಟ್

    -ಉಡುಪಿ ಡಿಸಿಐಬಿ ಪೊಲೀಸರ ಕಾರ್ಯಚರಣೆ

    ಉಡುಪಿ: ಕರ್ನಾಟಕದ ಉಚಿತ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಕೇರಳಕ್ಕೆ ಸಾಗಿಸುವ ದಂಧೆಯ ಮೇಲೆ ಉಡುಪಿ ಡಿಸಿಐಬಿ ಪೊಲೀಸರು ದಾಳಿ ಮಾಡಿದ್ದಾರೆ. ಸರ್ಕಾರ ಉಚಿತವಾಗಿ ಬಡವರಿಗೆ ಕೊಡುವ ಉಚಿತ ಅಕ್ಕಿಯನ್ನು ಕೇರಳಕ್ಕೆ ಸಾಗಿಸುವ ಐವರು ಚೋರರ ಬಂಧನವಾಗಿದೆ.

    ಬಡವರು ಹಸಿದಿರಬಾರದು. ಮೂರೊತ್ತು ಊಟ ಮಾಡಬೇಕೆಂದು ಸರ್ಕಾರ ಉಚಿತ ಅಕ್ಕಿ ವಿತರಿಸುತ್ತಿದೆ. ಆದ್ರೆ ಸರ್ಕಾರದ ಅಕ್ಕಿ ಪಡೆದು ಕೆಲವರು ಅದನ್ನು ದಂಧೆಕೋರರಿಗೆ ಮಾರಾಟ ಮಾಡಿ ದ್ರೋಹ ಬಗೆಯುತ್ತಿದ್ದಾರೆ. ಇಂತಹ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

    ಉಡುಪಿಯಲ್ಲಿ ಡಿಸಿಐಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿದ್ದು, ಅಕ್ಕಿ ಸಂಗ್ರಹ ಮತ್ತು ಕೇರಳಕ್ಕೆ ಮಾರಾಟ ಮಾಡುವ ದಂಧೆಗೆ ಬಲೆ ಬೀಸಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕೋಟೇಶ್ವರದ ಅಕ್ರಮ ಅಕ್ಕಿ ದಾಸ್ತಾನು ಗೋಡಾನ್ ನಲ್ಲಿ ಸಂಗ್ರಹಿಸಿ ಇಟ್ಟಿದ್ದ 55 ಟನ್ ಅಂದ್ರೆ 55 ಸಾವಿರ ಕಿಲೋ ಅಕ್ಕಿಯನ್ನು ಸುಪರ್ದಿಗೆ ಪಡೆದಿದ್ದಾರೆ.

    ಡಿಸಿಐಬಿ ಪೊಲೀಸ್ ಇನ್‍ಸ್ಪೆಕ್ಟರ್ ಮಂಜಪ್ಪ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಂಡದ ಜೊತೆ ತೆರಳಿ ರೈಡ್ ನಡೆಸಿದ್ದಾರೆ. ಸ್ಥಳದಲ್ಲಿದ್ದ ಐವರ ಬಂಧನವಾಗಿದ್ದು, ಕೆಲ ಖದೀಮರು ಪರಾರಿಯಾಗಿದ್ದಾರೆ. ಅಕ್ಕಿ ತುಂಬಿ ಕೇರಳಕ್ಕೆ ಹೊರಟಿದ್ದ ಲಾರಿ, ಅಕ್ಕಿ ವಶವಾಗಿದೆ. ಕಾರ್ಯಾಚರಣೆಯಲ್ಲಿ 2.75 ಲಕ್ಷ ರೂಪಾಯಿ ನಗದು ವಶವಾಗಿದ್ದು, ಸ್ಥಳದಲ್ಲಿದ್ದ ಮೂರು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಲಾರಿ ಸೇರಿ ಸುಮಾರು ಒಂದು ಕೋಟಿ ರುಪಾಯಿ ಸೊತ್ತು ವಶವಾಗಿದೆ ಎಂದು ಡಿಸಿಐಬಿ ಇನ್‍ಸ್ಪೆಕ್ಟರ್ ಮಂಜಪ್ಪ ಮಾಹಿತಿ ಕೊಟ್ಟಿದ್ದಾರೆ. ಬಂಧಿತರಾದ ಇಸ್ಮಾಯಿಲ್ ಬ್ಯಾರಿ, ಮುಸ್ತಫಾ ತೌಫಿಕ್, ಉಬೇದುಲ್ಲಾ, ಮಹಮ್ಮದ್ ಮೇಚ್ರಾ, ನಿಯಾಸ್ ಸರ್ಕಾರದ ಫ್ರೀ ರೇಶನ್ ಅಕ್ಕಿಯನ್ನು ಒಟ್ಟು ಮಾಡುತ್ತಿದ್ದರು. ಉಚಿತ ಅಕ್ಕಿಗೆ ಪುಡಿಗಾಸು ರೇಟ್ ಫಿಕ್ಸ್ ಮಾಡಿ ಖರೀದಿಸುತ್ತಿದ್ದರು. ಉಚಿತ ಅಕ್ಕಿಗೆ ಪಾಲಿಶ್ ಮಾಡಿ ಸೋನ ಮಸೂರಿಯ ಶೇಪ್ ಕೊಟ್ಟು ಕೇರಳಕ್ಕೆ ಸಪ್ಲೈ ಮಾಡುತ್ತಿದ್ದರು ಎಂದು ಪೊಲೀಸರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಖದೀಮರು ಕುಂದಾಪುರ ಮೂಡು ಗೋಪಾಡಿ ಮತ್ತು ಕೇರಳ ಮೂಲದವರಾಗಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯ ಆಗಬೇಕಿದೆ. ರಾಜ್ಯಾದ್ಯಂತ ಪೊಲೀಸರು ತಪಾಸಣೆ ಮಾಡಿದರೆ ದೊಡ್ಡ ಮಟ್ಟದ ಅಕ್ಕಿ ಮಾರಾಟ ಜಾಲ ಪತ್ತೆಹಚ್ಚಬಹುದು. ಉಣ್ಣುವ ಅನ್ನಕ್ಕೆ ದ್ರೋಹ ಬಗೆಯುವ ಜನರ ಮೇಲೂ ಸರ್ಕಾರ ಕಣ್ಣಿಡಬೇಕು.

  • ಕೂದಲೆಳೆಯ ಅಂತರದಲ್ಲಿ ತಪ್ಪಿತು ಭಾರೀ ಅನಾಹುತ- ಎದೆ ಝಲ್ ಎನ್ನಿಸುತ್ತೆ ವಿಡಿಯೋ

    ಕೂದಲೆಳೆಯ ಅಂತರದಲ್ಲಿ ತಪ್ಪಿತು ಭಾರೀ ಅನಾಹುತ- ಎದೆ ಝಲ್ ಎನ್ನಿಸುತ್ತೆ ವಿಡಿಯೋ

    – ವೇಗವಾಗಿ ಬಂದ ವಾಹನದಿಂದ ವ್ಯಕ್ತಿ ಪಾರು
    – ವಾಹನದ ವೇಗ ನೋಡಿ ಒಂದು ಕ್ಷಣ ನಿಬ್ಬೆರಗಾದ ಪಾದಚಾರಿ

    ತಿರುವನಂತಪುರಂ: ನಿತ್ಯ ಹಲವು ಅಪಘಾತಗಳನ್ನು ನೋಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ವೇಗವಾಗಿ ಬರುತ್ತಿದ್ದ ವಾಹನದಿಂದ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದು, ಎದೆ ಝಲ್ ಎನಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. 22 ಸೆಕೆಂಡ್ ಈ ವಿಡಿಯೋ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು, ವಿಡಿಯೋ ನೋಡಿದ ಪ್ರತಿಯೊಬ್ಬರ ಎದೆ ಝಲ್ ಅನ್ನುತ್ತದೆ.

    ಪಾದಚಾರಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಈ ಹಿಂದಿನಿಂದ ವೇಗವಾಗಿ ಬಂದ ವಾಹನ ಅವನ ಪಕ್ಕದಲ್ಲೇ ಕ್ಷಣಮಾತ್ರದಲ್ಲಿ ಕಾಣದ ಹಾಗೆ ತೆರಳುತ್ತದೆ. ವ್ಯಕ್ತಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಿ ವಾಹನ ಚಾಲಕ ಭಾರೀ ವೇಗವಾಗಿ ಪಾದಚಾರಿ ಪಕ್ಕದಲ್ಲಿ ಪಾಸ್ ಆಗುತ್ತದೆ. ವಾಹನ ವೇಗವಾಗಿ ಸಾಗಿದ್ದನ್ನು ನೋಡಿದ ವ್ಯಕ್ತಿ ಒಂದು ಕ್ಷಣ ನಿಬ್ಬರಗಾಗುತ್ತಾನೆ. ವಿಚಲಿತನಾಗಿ ಹಿಂದಕ್ಕೆ ನಡೆದು ಬರಲು ಆರಂಭಿಸುತ್ತಾನೆ. ಈ ವೇಳೆ ಅವನಿಗೆ ಅರಿವಾಗಿ ತುಂಬಾ ಅದೃಷ್ಟವೆಂಬಂತೆ ಪಾರಾದೆ ಎಂದು ಸಮಾಧಾನಪಟ್ಟುಕೊಳ್ಳುತ್ತಾನೆ.

    ಟ್ವಿಟ್ಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು ‘ತಿಂಗಳ ಅದೃಷ್ಟಶಾಲಿ ಅವಾರ್ಡ್ ಈ ವ್ಯಕ್ತಿಗೆ ಲಭಿಸಿದೆ’ ಎಂದು ಬರೆದು ವಿಡಿಯೋ ಟ್ವೀಟ್ ಮಾಡಿದ್ದಾರೆ. ಸಾವಿರಾರು ಜನ ಈ ವಿಡಿಯೋ ನೋಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

  • ಕಳ್ಳಸಾಗಣೆ ಬಗ್ಗೆ ಪೊಲೀಸರಿಗೆ ಮಾಹಿತಿ – ಸೋದರಿಯ ಮಗನಿಂದ್ಲೇ ಗುಂಡಿಕ್ಕಿ ಮಹಿಳೆ ಹತ್ಯೆ

    ಕಳ್ಳಸಾಗಣೆ ಬಗ್ಗೆ ಪೊಲೀಸರಿಗೆ ಮಾಹಿತಿ – ಸೋದರಿಯ ಮಗನಿಂದ್ಲೇ ಗುಂಡಿಕ್ಕಿ ಮಹಿಳೆ ಹತ್ಯೆ

    ತಿರುವನಂತಪುರಂ: 34 ವರ್ಷದ ಮಹಿಳೆಯೊಬ್ಬಳನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ  ಪಾಲಪ್ಪೆಟ್ಟಿ ನಿವಾಸಿ ಚಂದ್ರಿಕಾಳನ್ನು ಶುಕ್ರವಾರ ರಾತ್ರಿ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ಹುಡುಗ ಸೇರಿದಂತೆ ಮೂವರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಚಂದ್ರಿಕಾಳ ಸಹೋದರಿಯ ಮಗನಾದ 20 ವರ್ಷದ ಕಲಿಯಪ್ಪನ್ ಪಾಲಪ್ಪೆಟ್ಟಿಯಲ್ಲಿರುವ ತನ್ನ ಜಮೀನಿನಲ್ಲಿ ಬಂದೂಕಿನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

    ಶ್ರೀಗಂಧ ಮರಗಳ ಕಳ್ಳಸಾಗಣೆ ಮಾಡುತ್ತಿದ್ದ ಕಲಿಯಪ್ಪನನ್ನು ಇತ್ತೀಚೆಗೆ ಅರಣ್ಯ ಇಲಾಖೆ ಬಂಧಿಸಿತ್ತು. ಈ ಮಾಹಿತಿಯನ್ನು ಚಂದ್ರಿಕಾ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ಕಳೆದ ವಾರ ಕಲಿಯಪ್ಪನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು. ಹೀಗಾಗಿ ಈ ದ್ವೇಷದಿಂದಾಗಿ ಕಲಿಯಪ್ಪನ್, ಚಂದ್ರಿಕಾಳನ್ನು ಕೊಲೆ ಮಾಡಿದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

    ವಶಕ್ಕೆ ಪಡೆದ ಇತರ ಆರೋಪಿ 19 ವರ್ಷದ ಮಣಿ. ಅಪ್ರಾಪ್ತ ಹುಡುಗ ಅಪರಾಧದ ಸಮಯದಲ್ಲಿ ಕಲಿಯಪ್ಪನ್ ಜೊತೆಯಿದ್ದನು. ಘಟನೆಯ ನಂತರ ಚಂದ್ರಿಕಾ ಅವರ ನೆರೆಹೊರೆಯವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಪ್ರದೇಶವು ಅರಣ್ಯ ಪ್ರದೇಶದ ಸಮೀಪದಲ್ಲಿದೆ ಮತ್ತು ರಸ್ತೆ ಮುಗಿದ ನಂತರ ಅಲ್ಲಿಗೆ ತಲುಪಲು ಒಂದು ಗಂಟೆಯ ಸಮಯ ಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

    ಕಲಿಯಪ್ಪನ್ ಈ ಪ್ರದೇಶದ ಇನ್ನೊಬ್ಬ ವ್ಯಕ್ತಿಗೆ ಸೇರಿದ ಬಂದೂಕಿನಿಂದ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯು ಬಂದೂಕನ್ನು ಇಟ್ಟುಕೊಂಡಿದ್ದನು. ಅದನ್ನು ಬೇಟೆಯಾಡಲು ಬಳಸಲಾಗುತ್ತಿತ್ತು. ಇದು ಕಾನೂನು ಬಾಹಿರವಾದ್ದರಿಂದ ವ್ಯಕ್ತಿಯು ಬಂದೂಕನ್ನು ಕಾಡಿನಲ್ಲಿ ಅಡಗಿಸಿಟ್ಟಿದ್ದನು. ಕಲಿಯಪ್ಪನ್‍ಗೆ ಆ ಸ್ಥಳದ ಬಗ್ಗೆ ತಿಳಿದಿತ್ತು. ಹೀಗಾಗಿ ಅಲ್ಲಿಂದ ಬಂದೂಕನ್ನು ತೆಗೆದುಕೊಂಡು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಈ ಘಟನೆ ನಡೆದಾಗ ಆರೋಪಿಗಳು ಮದ್ಯಪಾನ ಮಾಡಿದ್ದರು. ಸದ್ಯಕ್ಕೆ ನಾವು ಅವರಿಂದ ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದೇವೆ. ಆದರೆ ಅವರು ನಮ್ಮ ಪ್ರಶ್ನೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿ ಹೇಳಿದರು.

  • ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲೆ ಕ್ರೌರ್ಯ – ಗರ್ಭಿಣಿ ಕಾಡು ಎಮ್ಮೆ ಬಲಿ

    ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲೆ ಕ್ರೌರ್ಯ – ಗರ್ಭಿಣಿ ಕಾಡು ಎಮ್ಮೆ ಬಲಿ

    – ಐದು ಜನರ ಬಂಧನ

    ತಿರುವನಂತಪುರಂ: ಕೇರಳದಲ್ಲಿ ಮತ್ತೆ ಪ್ರಾಣಿಗಳ ಮೇಲಿನ ಕ್ರೌರ್ಯ ಮರುಕಳಿಸಿದೆ. ಗರ್ಭಿಣಿ ಕಾಡು ಎಮ್ಮೆಯನ್ನು ಅಮಾನುಷವಾಗಿ ಬೇಟೆಯಾಡಿ ಕೊಲ್ಲಲಾಗಿದೆ.

    ಗರ್ಭಿಣಿ ಕಾಡು ಎಮ್ಮೆ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಅರಣ್ಯ ಇಲಾಖೆ ಈಗ ಐದು ಜನರನ್ನು ಬಂಧಿಸಿದೆ. ಆರೋಪಿಗಳನ್ನು ಪುಲ್ಲಾರ ಅಬು ಅಕಾ ನಾನಿಪ್ಪ (47), ಮುಹಮ್ಮದ್ ಬುಸ್ತಾನ್ (30), ಮುಹಮ್ಮದ್ ಅನ್ಸಿಫ್ (23), ಆಶಿಕ್ (27) ಮತ್ತು ಸುಹೇಲ್ (28) ಎಂದು ಗುರುತಿಸಲಾಗಿದೆ.

    ಕಳೆದ ಎರಡು ತಿಂಗಳ ಹಿಂದೆ ಇದೇ ಕೇರಳದ ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಡ್ ಅರಣ್ಯ ವ್ಯಾಪ್ತಿಯಲ್ಲಿ ಗರ್ಭಿಣಿ ಆನೆಯನ್ನು ಹಣ್ಣಿನಲ್ಲಿ ಪಟಾಕಿ ಇಟ್ಟು ಕೊಲೆ ಮಾಡಲಾಗಿತ್ತು. ಈಗ ನಿಲಾಂಬೂರ್ ದಕ್ಷಿಣ ಅರಣ್ಯ ವಿಭಾಗದ ಕಾಳಿಕಾವ್ ವ್ಯಾಪ್ತಿಯಲ್ಲಿರುವ ಚಕ್ಕಿಕುಜಿ ಅರಣ್ಯ ಕೇಂದ್ರದ ವ್ಯಾಪ್ತಿಯ ಪುಂಚ ಅರಣ್ಯದಲ್ಲಿ ಆರೋಪಿಗಳು ಕಾಡು ಎಮ್ಮೆಯನ್ನು ಬೇಟೆಯಾಡಿದ್ದಾರೆ ಎಂದು ವರದಿಯಾಗಿದೆ.

    ಆಗಸ್ಟ್ 10ರಂದು ರಾತ್ರಿ ನಡೆದ ದಾಳಿಯಲ್ಲಿ ಅರಣ್ಯ ಅಧಿಕಾರಿಗಳು ಆರೋಪಿಗಳ ಮನೆಯಿಂದ ಕಾಡು ಎಮ್ಮೆ ಮಾಂಸವನ್ನು ಪತ್ತೆ ಮಾಡಿದ್ದಾರೆ. ಅರಣ್ಯ ಅಧಿಕಾರಿಗಳು ಸುಮಾರು 25 ಕೆಜಿಗಳಷ್ಟು ಮಾಂಸವನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 200 ಕೆಜಿಗಳಷ್ಟು ಮಾಂಸ ಇತ್ತು ಎಂದು ಅಂದಾಜಿಸಲಾಗಿದೆ. ಆರೋಪಿಗಳು ಎರಡು ತಲೆಬುರುಡೆ ಮತ್ತು ಇತರ ಕಾಡು ಎಮ್ಮೆಯ ಅವಶೇಷಗಳನ್ನು ಕಾಡಿನ ವಿವಿಧ ಭಾಗಗಳಲ್ಲಿ ಎಸೆದಿದ್ದಾರೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಕಾಡು ಎಮ್ಮೆಯ ಹತ್ಯೆ ಪ್ರಕರಣದಲ್ಲಿ ಹೆಚ್ಚಿನ ಆರೋಪಿಗಳು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ. ಆರೋಪಿಗಳನ್ನು ಇಂದು ಮಲಪ್ಪುರಂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.

  • ಕೇರಳದ ವಿಮಾನ ಅಪಘಾತ – ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ

    ಕೇರಳದ ವಿಮಾನ ಅಪಘಾತ – ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ 22 ಅಧಿಕಾರಿಗಳಿಗೆ ಕೊರೊನಾ

    ತಿರುವನಂತಪುರಂ: ಕೇರಳ ವಿಮಾನ ದುರಂತದ ವೇಳೆ ರಕ್ಷಣಾ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ 22 ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮಲಪ್ಪುರಂ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

    ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಕೊರೊನಾ ನಡುವೆಯೂ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಭಾರತಕ್ಕೆ ಕರೆತರುತ್ತಿತ್ತು. ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ 184 ಪ್ರಯಾಣಿಕರನ್ನು ಕೇರಳಗೆ ಬಂದಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯಿಂದ ವಿಮಾನ 35 ಅಡಿ ಕಂದಕಕ್ಕೆ ಜಾರಿ ಬಿದ್ದಿತ್ತು. ಪರಿಣಾಮ ಇಬ್ಬರು ಪೈಲಟ್‍ಗಳು ಸೇರಿ 18 ಜನರು ಸಾವನ್ನಪ್ಪಿದ್ದರು.

    ಕಂದಕಕ್ಕೆ ಬಿದ್ದಿದ್ದ ವಿಮಾನದಲ್ಲಿ ಸಿಲುಕಿದ್ದ ಪ್ರಯಾಣಿಕರನ್ನು ಸ್ಥಳೀಯರು ಮತ್ತು ಸ್ಥಳದಲ್ಲಿದ್ದ ಹಲವು ಅಧಿಕಾರಿಗಳು ಬಂದು ರಕ್ಷಣೆ ಮಾಡಿದ್ದರು. ಇದಾದ ನಂತರ ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದ ಎಲ್ಲ ಅಧಿಕಾರಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಈಗ ಇವರ ಪೈಕಿ 22 ಮಂದಿ ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. ಈ ಎಲ್ಲ ಅಧಿಕಾರಿಗಳು 4 ಗಂಟೆಗಳ ಕಾಲ ರಕ್ಷಣಾ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

    ಅಗಸ್ಟ್ 7ರಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್‍ನ ಕರಿಪುರದಲ್ಲಿ ಲ್ಯಾಂಡಿಗೆ ವೇಳೆ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿತ್ತು. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 184 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು.

    ದುಬೈಯಿಂದ 184 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಪೈಲಟ್ ದೀಪಕ್ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್ ಟಾಪ್ ರನ್‍ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಗಳು ಸೇರಿ 18 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಜೊತೆಗೆ 150ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು.