Tag: kerala

  • ಶೂಟಿಂಗ್ ವೇಳೆ ಕುಸಿದು ಬಿದ್ದು ನಟ ಸಾವು – ಸಾವಿಗೂ ಮುನ್ನ ನೀರು ಕೇಳಿ ಕುಡಿದ್ರು

    ಶೂಟಿಂಗ್ ವೇಳೆ ಕುಸಿದು ಬಿದ್ದು ನಟ ಸಾವು – ಸಾವಿಗೂ ಮುನ್ನ ನೀರು ಕೇಳಿ ಕುಡಿದ್ರು

    – ಸಹೋದ್ಯೋಗಿಗಳ ಜೊತೆ ಫೋಟೋ ಕ್ಲಿಕ್ಕಿಸುವಾಗ ದುರಂತ

    ತಿರುವನಂತಪುರಂ: ಚಿತ್ರೀಕರಣ ನಡೆಯುತ್ತಿದ್ದ ವೇಳೆ ಮಲಯಾಳಂ ನಟ ಪ್ರಬೀಶ್ ಚಕ್ಕಲಕ್ಕಲ್ (44) ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

    ಕೇರಳದ ಕೊಚ್ಚಿಯಲ್ಲಿ ಈ ಘಟನೆ ನಡೆದಿದೆ. ‘ಕೊಚ್ಚಿನ್ ಕೊಲಾಜ್’ ಚಿತ್ರೀಕರಣ ನಡೆಯುತ್ತಿದ್ದಾಗ ನಟ ಪ್ರಬೀಶ್ ಇದ್ದಕ್ಕಿದ್ದಂತೆ ಸೆಟ್‍ನಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಹೋಗುವ ಮೊದಲೆ ನಟ ಕೊನೆಯುಸಿರೆಳೆದಿದ್ದರು.

    ಚಿತ್ರತಂಡ ಕೇರಳದಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸುವ ಸಿನಿಮಾವನ್ನು ಚಿತ್ರೀಕರಣ ಮಾಡುತ್ತಿತ್ತು. ಕೊಚ್ಚಿಯ ಕುಂದನ್ನೂರ್ ರಸ್ತೆಯಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ಘಟಕದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಸಿನಿಮಾದಲ್ಲಿ ಪ್ರಬೀಶ್ ವಿದೇಶಿಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಚಿತ್ರೀಕರಣ ಸೆಟ್‍ನಲ್ಲಿ ನಟ ಪ್ರಬೀಶ್ ಭಾಗದ ಶೂಟಿಂಗ್ ಮುಗಿದಿತ್ತು. ನಂತರ ಅವರು ಸಹೋದ್ಯೋಗಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕುಸಿದು ಬೀಳುವ ಕೆಲ ನಿಮಿಷಗಳ ಹಿಂದೆ ತನ್ನ ನಾಲಿಗೆ ಒಣಗುತ್ತಿದೆ. ಕುಡಿಯಲು ನೀರು ಕೊಡಿ ಎಂದು ವಿಡಿಯೋಗ್ರಾಫರನ್ನು ಕೇಳಿದ್ದರು. ಅಲ್ಲದೇ ಕುಸಿದು ಬೀಳುವ ಮೊದಲು ಪ್ರಬೀಶ್ ನೀರು ಸಹ ಕುಡಿದಿದ್ದಾರೆ ಎಂದು ಸೆಟ್‍ನಲ್ಲಿ ನಡೆದ ಘಟನೆಯ ಬಗ್ಗೆ ಸಹ ಕಲಾವಿದರು ಹೇಳಿದ್ದಾರೆ.

    ಪ್ರಬೀಶ್ ಅನೇಕ ಟೆಲಿಫಿಲ್ಮ್ ಗಳಲ್ಲಿ ಕೆಲಸ ಮಾಡುವ ಮೂಲಕ ಗುರುತಿಸಿಕೊಂಡಿದ್ದರು. ಅಲ್ಲದೇ ಅನೇಕ ಮಲಯಾಳಂ ಚಿತ್ರಗಳಲ್ಲಿ ಡಬ್ಬಿಂಗ್ ಕಲಾವಿದರಾಗಿ ಕೆಲಸ ಮಾಡಿದ್ದರು. ಪ್ರಬೀಶ್ ತಂದೆ ಜೋಸೆಫ್, ಪತ್ನಿ ಜಾನ್ಸಿ ಮತ್ತು ಮಗಳು ತಾನಿಯಾಳನ್ನು ಅಗಲಿದ್ದಾರೆ.

  • ಠಾಣೆಯಲ್ಲಿ ತುಕ್ಕು ಹಿಡಿಯುತ್ತಿದ್ದ ವಾಹನಗಳಲ್ಲೇ ತರಕಾರಿ ಬೆಳೆದ ಪೊಲೀಸರು

    ಠಾಣೆಯಲ್ಲಿ ತುಕ್ಕು ಹಿಡಿಯುತ್ತಿದ್ದ ವಾಹನಗಳಲ್ಲೇ ತರಕಾರಿ ಬೆಳೆದ ಪೊಲೀಸರು

    – ಮೊದಲ ಬೆಳೆ ಬೆಳೆದು ಯಶಸ್ವಿಯಾಗಿ ಕಟಾವ್ ಮಾಡಿದ್ರು
    – ಜಪ್ತಿ ಮಾಡಿದ್ದ ವಾಹಗಳಲ್ಲಿ ಸಾವಯವ ಕೃಷಿ

    ತಿರುವನಂತಪುರಂ: ಸಾಮಾನ್ಯವಾಗಿ ಕದ್ದ ವಾಹನಗಳು, ಸರಿಯಾದ ದಾಖಲೆಗಳಿಲ್ಲ ವಾಹನಗಳು, ಅಪಘಾತ ನಡೆದ ವಾಹನಗಳು ಸೇರಿದಂತೆ ಅನೇಕ ವಾಹನಗಳು ಪೊಲೀಸ್ ಠಾಣೆಯಲ್ಲಿ ವರ್ಷಗಳಿಂದ ತುಕ್ಕು ಹಿಡಿಯುತ್ತಿರುತ್ತವೆ. ಆದರೆ ಕೇರಳ ಪೊಲೀಸರು ಅಂತಹ ಜಪ್ತಿ ಮಾಡಿದ್ದ ವಾಹನಗಳಲ್ಲಿಯೇ ಸಾವಯವ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ.

    ಪೊಲೀಸರು ಜಪ್ತಿ ಮಾಡುವ ವಾಹನಗಳನ್ನು ಇಷ್ಟು ವರ್ಷದೊಳಗೆ ಮಾಲೀಕರು ಬಂದು ತೆಗೆದುಕೊಂಡು ಹೋಗದೆ ಇದ್ದರೆ ಅಂತಹ ವಾಹನಗಳನ್ನು ಹರಾಜು ಮಾಡಲು ಪೊಲೀಸ್ ಇಲಾಖೆಗೆ ಅನುಮತಿ ಇದೆ. ಆದರೆ ಹಾಗೆ ಮಾಡುವುದರಲ್ಲಿ ಸಾಕಷ್ಟು ಕಾನೂನು ಸಮಸ್ಯೆಗಳಿವೆ. ಇದಲ್ಲದೆ ಈ ವಾಹನಗಳಿಗೆ ಹೆಚ್ಚು ಖರೀದಿದಾರರು ಇರುವುದಿಲ್ಲ. 2019ರ ವರದಿಯ ಪ್ರಕಾರ, ರಾಜ್ಯದ ಪೊಲೀಸ್ ಠಾಣೆಗಳಲ್ಲಿ 40,000ಕ್ಕೂ ಹೆಚ್ಚು ವಾಹನಗಳು ತುಕ್ಕು ಹಿಡಿಯುತ್ತಿವೆ.

    ತುಕ್ಕು ಹಿಡಿಯುತ್ತಿರುವ ವಾಹನಗಳನ್ನು ನೋಡಲಾಗದೆ ಬೇಸರ ಮಾಡಿಕೊಂಡಿದ್ದ ತ್ರಿಶೂರ್ ಜಿಲ್ಲೆಯ ಚೆರುತುರುತಿ ಪೊಲೀಸರು ಅವುಗಳಲ್ಲಿ ಕೆಲವು ವಾಹನಗಳಲ್ಲಿ ಸಾವಯವ ತರಕಾರಿಗಳನ್ನು ಬೆಳೆಯಲು ಪ್ರಾರಂಭಿಸಿದ್ದರು. ಸಿಂಪ್ಸನ್, ಸುಧಾಕರನ್, ಬೇಬಿ, ರಂಜಿತ್, ರಘು ಮತ್ತು ಅನಿಲ್ ಅವರೊಂದಿಗೆ ಕೃಷಿಕರೂ ಆಗಿರುವ ಸಿವಿಲ್ ಪೊಲೀಸ್ ಅಧಿಕಾರಿ ರಂಗರಾಜ್ ಕೃಷಿಯನ್ನು ನೋಡಿಕೊಳ್ಳುತ್ತಾರೆ.

    “ನಾವು ಮರಳು ಕಳ್ಳಸಾಗಣೆಯಲ್ಲಿ ಜಪ್ತಿ ಮಾಡಿದ್ದ ಕೆಲವು ಮಿನಿ ಲಾರಿಗಳನ್ನು ಹೊಂದಿದ್ದೇವೆ. ಮೂರು ತಿಂಗಳ ಹಿಂದೆ ಅವುಗಳಲ್ಲಿ ತರಕಾರಿಗಳನ್ನು ಬೆಳೆಸಲು ನಾವು ನಿರ್ಧರಿಸಿದ್ದೇವೆ. ಇದು ಯಶಸ್ವಿಯಾಗಿದ್ದು, ಕಳೆದ ವಾರ ನಮ್ಮ ಮೊದಲ ಬೆಳೆಯನ್ನ ಕೂಡ ಕಟಾವ್ ಮಾಡಿದ್ದೇವೆ. ನಾವು ತರಕಾರಿಗಳನ್ನು ನಮ್ಮ ಪೊಲೀಸ್ ಕ್ಯಾಂಟೀನ್‍ಗೆ ನೀಡಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಸಿಂಪ್ಸನ್ ಹೇಳಿದ್ದಾರೆ.

    ಕೃಷಿ ಯಶಸ್ವಿಯಾದ ಕಾರಣ, ಅದನ್ನು ಇತರ ವಾಹನಗಳಿಗೂ ವಿಸ್ತರಿಸಲು ಪೊಲೀಸ್ ಅಧಿಕಾರಿಗಳು ಯೋಜಿಸಿದ್ದಾರೆ. ಮೊದಲ ಹಂತದಲ್ಲಿ, ಅವರು ಬೆಂಡೆಕಾಯಿ, ಬೀನ್ಸ್ ಮತ್ತು ಪಾಲಕ್ ಸೊಪ್ಪನ್ನು ಬೆಳೆದಿದ್ದಾರೆ. ಈಗ ಇತರ ತರಕಾರಿಗಳನ್ನು ಬೆಳೆಯಲು ಯೋಜಿಸಿದ್ದಾರೆ.

    ಕಾನೂನುಬಾಹಿರ ಚಟುವಟಿಕೆಯಲ್ಲಿ ವಾಹನವನ್ನು ವಶಪಡಿಸಿಕೊಂಡರೆ, ಅದರ ಮಾಲೀಕರು ಎಂದಿಗೂ ವಾಪಸ್ ಪಡೆಯಲು ಬಯಸುವುದಿಲ್ಲ. ಇನ್ನೂ ಅಪಘಾತ ವಾಹನಗಳ ವಿಷಯದಲ್ಲಿ, ನ್ಯಾಯಾಲಯದ ಆದೇಶದ ನಂತರವೂ ಅವುಗಳನ್ನು ಮಾಲೀಕರು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ಯಾಕೆಂದರೆ ಅವರು ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕಾರಣ ಮತ್ತೆ ಆ ವಾಹನ ಬೇಡ ಎಂದುಕೊಂಡಿರಬಹುದು. ಇನ್ನೂ ಕೆಲವು ಕೇಸ್‍ಗಳಲ್ಲಿ ತೀರ್ಪು ಪಡೆಯಲು ಕೆಲವು ವರ್ಷಗಳು ತೆಗೆದುಕೊಳ್ಳಬಹುದು. ಆ ಹೊತ್ತಿಗೆ ವಾಹನವು ತುಕ್ಕು ಹಿಡಿದು ನಿಷ್ಪ್ರಯೋಜಕವಾಗುತ್ತವೆ. ಆದ್ದರಿಂದ ತೀರ್ಪು ಮಾಲೀಕರ ಕಡೆ ಬಂದರೂ ತುಕ್ಕು ಹಿಡಿದಿರುವ ವಾಹನವನ್ನು ವಾಪಸ್ ತೆಗೆದುಕೊಂಡು ಹೋಗಲು ಬಯಸುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

    ಸ್ಟೇಷನ್ ಹೌಸ್ ಆಫೀಸರ್ (ಎಸ್‍ಎಚ್‍ಒ) ಗಳು ವಾಹನಗಳನ್ನು ಹರಾಜು ಮಾಡುವ ಜವಾಬ್ದಾರಿಯನ್ನು ಹೊಂದಿದ್ದಾರೆ. ಆದರೆ ಅದನ್ನು ಮಾಡಲು ನಮಗೆ ಸಾಕಷ್ಟು ಕಾನೂನು ಅನುಮತಿ ಬೇಕಾಗುತ್ತವೆ. ಇದು ಸುಲಭವಲ್ಲ, ಆದ್ದರಿಂದ ಈ ವಾಹನಗಳು ಅನೇಕ ವರ್ಷಗಳ ಕಾಲ ಇಲ್ಲಿಯೇ ಇರುತ್ತವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಿಂದ ತೆರವುಗೊಳಿಸುವಂತೆ 2018ರಲ್ಲಿ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಎಲ್ಲಾ ಎಸ್‍ಎಚ್‍ಒಗಳಿಗೆ ನಿರ್ದೇಶನ ನೀಡಿದ್ದರು. ಆದರೆ ಅದು ಯಶಸ್ವಿಯಾಗಿಲ್ಲ.

  • 10 ವರ್ಷದೊಳಗೆ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿಸ್ತೇವೆ: ಮುಸ್ಲಿಂ ಧರ್ಮ ಪ್ರಚಾರಕ

    10 ವರ್ಷದೊಳಗೆ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿಸ್ತೇವೆ: ಮುಸ್ಲಿಂ ಧರ್ಮ ಪ್ರಚಾರಕ

    ತಿರುವನಂತಪುರಂ: ವಿವಾದಿತ ಭಾಷಣಗಳ ಮೂಲಕವೇ ಗುರುತಿಸಿಕೊಂಡಿರುವ ಕೇರಳದ ಮುಸ್ಲಿಂ ಧರ್ಮಗುರು ಮುಜಾಹಿದ್ ಬಲುಸ್ಸೆರಿ, ಇದೀಗ ಮತ್ತೆ ಅಂತಹದ್ದೇ ವಿವಾದಿತ ಹೇಳಿಕೆ ನೀಡುವ ಮೂಲಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮುಂದಿನ 10 ವರ್ಷದೊಳಗೆ ಕೇರಳವನ್ನು ಮುಸ್ಲಿಂ ರಾಜ್ಯವನ್ನಾಗಿಸುವುದಾಗಿ ಹೇಳಿದ್ದಾರೆ.

    ಈ ಕುರಿತು ವಿಡಿಯೋ ಇದೀಗ ವೈರಲ್ ಆಗಿದ್ದು, ವಿಡಿಯೋದಲ್ಲಿ ಮುಸ್ಲಿ ಧರ್ಮ ಪ್ರಚಾರಕ ಮುಜಾಹಿದ್ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಜನರಿಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಕೇರಳಕ್ಕೆ ‘ಕ್ಯಾಲಿಫೇಟ್’ ಎಂದು ಹೆಸರಿಡುವುದಾಗಿ ತಿಳಿಸಿದ್ದಾನೆ. ಕೇರಳವನ್ನು ಕ್ಯಾಲಿಫೇಟ್ ಆಗಿ ಪರಿವರ್ತಿಸುತ್ತೇವೆ. ಕೇರಳದ ಎಲ್ಲ ಮುಸ್ಲಿಮರನ್ನು ಶುಕ್ರವಾರದಂದು ಮುಜಾಹಿದ್ ಮಸೀದಿಗಳಿಗೆ ಕಳುಹಿಸಿ. 10 ವರ್ಷದೊಳಗೆ ಕೇರಳವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಮಾಡಬಹುದು ಎಂದು ಹೇಳಿದ್ದಾರೆ.

    ನಮ್ಮದು ಇಲ್ಲಿ ಕೆಲಸವಿದೆ. ಕೇರಳದ ಇತರ ಮುಸ್ಲಿಂ ಧಾರ್ಮಿಕ ಶಾಖೆಗಳನ್ನು ಮುಚ್ಚಿ ಮುಜಾಹಿದ್‍ಗಳ ಅಡಿಯಲ್ಲಿ ತಂದರೆ ಇನ್ನು 10 ವರ್ಷಗಳಲ್ಲಿ ಕೇರಳವನ್ನು ಇಸ್ಲಾಮಿಕ್ ಸ್ಟೇಟ್ ಆಗಿ ಪರಿವರ್ತಿಸಬಹುದು. ಒಬ್ಬ ಮನುಷ್ಯ ನೈತಿಕವಾಗಿ ಪರಿಪೂರ್ಣನಾಗಬಹುದು. ಆದರೆ ಇತರೆ ದೇವರನ್ನು ಆರಾಧಿಸಿದರೆ ಆತ ಸ್ವರ್ಗವನ್ನು ನಿರಾಕರಿಸುತ್ತಾನೆ.

    ಗುರುವಾಯೂರಪ್ಪ ನನ್ನನ್ನು ಉಳಿಸಿ ಎಂಬುದು ಶಿರ್ಕ್ ಮತ್ತು ವ್ಯಭಿಚಾರ, ಸಲಿಂಗಕಾಮ ಅಥವಾ ಬಡ್ಡಿಗಾಗಿ ಸಾಲ ನೀಡುವುದಕ್ಕಿಂತ ದೊಡ್ಡ ಪಾಪ. ಇದರಿಂದಾಗಿ ವ್ಯಕ್ತಿ ನರಕಕ್ಕೆ ಹೋಗುತ್ತಾನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

    ಅಲ್ಲದೆ ಈ ಹಿಂದಿನ ವಿಡಿಯೋದಲ್ಲಿ ಸಹ ಇದೇ ರೀತಿ ವಿವಾದಾತ್ಮವಾಗಿ ಮಾತನಾಡಿರುವ ಮುಜಾಹಿದ್, ಹಿಂದೂ ದೇವಸ್ಥಾನಗಳನ್ನು ವೇಶ್ಯಾಗೃಹಕ್ಕೆ ಹೋಲಿಸಿದ್ದಾರೆ. ನೀವು ಹಿಂದೂ ದೇವಸ್ಥಾನ ಹಾಗೂ ಹಬ್ಬಗಳಿಗೆ ದಾನ ನೀಡಿದರೆ ಶಿರ್ಕ್‍ನ್ನು ಪ್ರೋತ್ಸಾಹಿಸಿದಂತೆ. ಇದರು ಅತ್ಯಂತ ದೊಡ್ಡ ಪಾಪ. ನೀವು ವೇಶ್ಯಾಗೃಹ ಅಥವಾ ಪಬ್‍ಗೆ ಹಣವನ್ನು ದಾನ ನೀಡುವುದಿಲ್ಲ ತಾನೇ ಎಂದು ಮುಜಾಹಿದ್ ತಮ್ಮ ವಿಡಿಯೋದಲ್ಲಿ ಪ್ರಶ್ನಿಸಿದ್ದರು.

  • ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

    – ತಾಯಿ ಪಾರು, ಮಕ್ಕಳು ಸಾವು

    ಪಾಲಕ್ಕಾಡ್(ಕೇರಳ): ಮಹಿಳೆಯೊಬ್ಬರು ತನ್ನಿಬ್ಬರು ಪುಟ್ಟ ಕಂದಮ್ಮಗಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೇರಳದ ಪಾಲಕ್ಕಾಡ್ ನಲ್ಲಿ ನಡೆದಿದೆ.

    ಮಹಿಳೆಯನ್ನು ಮಂಜುಳಾ ಎಂದು ಗುರುತಿಸಲಾಗಿದೆ. ಈಕೆ ಅಭಿನ್(6) ಹಾಗೂ ಅಭಿತ್(3) ಎಂಬ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿದ್ದಾರೆ. ಮಂಜುಳಾ ಅವರು ಗಂಡನ ಬಿಟ್ಟಿದ್ದು, ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

    ಇತ್ತ ಮಹಿಳೆ ತನ್ನ ಮಕ್ಕಳೊಂದಿಗೆ ಬಾವಿಗೆ ಹಾರಿದ್ದು, ಚೀರಾಟ ಕೇಳುತ್ತಿದ್ದಂತೆಯೇ ಸ್ಥಳೀಯರು ರಕ್ಷಣೆಗೆ ಯತ್ನಿಸಿದ್ದಾರೆ. ಆದರೆ ಮಕ್ಕಳಿಬ್ಬರು ಅದಾಗಲೇ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮಹಿಳೆ ಪಾರಾಗಿದ್ದಾರೆ.

    ಮಕ್ಕಳ ಮೃತದೇಹವನ್ನು ಬಾವಿಯಿಂದ ಹೊರ ತೆಗೆಯಲಾಗಿದೆ. ಮದುವೆಯಲ್ಲಿನ ಸಮಸ್ಯೆಗಳಿಂದಾಗಿ ಮಂಜುಳಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆಕೆಯ ವಿಚ್ಚೇದನ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ.

    ಮಂಜುಳಾ ಅವರು ಪಾಲಕ್ಕಾಡ್ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

  • ಬೇರೊಬ್ಬಳ ಜೊತೆಗಿನ ಅಫೇರ್ ಬಗ್ಗೆ ಪ್ರಶ್ನೆ ಮಾಡಿದ ವಿಧವೆಯ ಕೊಲೆ

    ಬೇರೊಬ್ಬಳ ಜೊತೆಗಿನ ಅಫೇರ್ ಬಗ್ಗೆ ಪ್ರಶ್ನೆ ಮಾಡಿದ ವಿಧವೆಯ ಕೊಲೆ

    – ವಿಧವೆ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆಟೋ ಡ್ರೈವರ್
    – ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿ

    ತಿರುವನಂತಪುರಂ: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯನ್ನು ಆಟೋ ಡ್ರೈವರ್ ಕೊಲೆ ಮಾಡಿರುವ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಶೋಭಾ (37) ಮೃತ ಮಹಿಳೆ. ಆರೋಪಿ ಬಿಬಿನ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಶೋಭಾ ವಿಧವೆಯಾಗಿದ್ದು, ಆರೋಪಿ ಆಡೋ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು.

    ಏನಿದು ಪ್ರಕರಣ?
    ಮಂದಮಚೇರಿ ಮೂಲದ ಶೋಭಾ ಆಗಸ್ಟ್ 24 ರಂದು ಕಾಣೆಯಾಗಿದ್ದು, ಕುಟುಂಬದವರು ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದ ಪೊಲೀಸರಿಗೆ ಆಗಸ್ಟ್ 28 ರಂದು ಶೋಭಾ ಮನೆಯಿಂದ ಸುಮಾರು 34 ಕಿ.ಮೀ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ.

    ಮೃತ ಶೋಭಾಗೆ ಮದುವೆಯಾಗಿದ್ದು, ಪತಿ ಮೃತಪಟ್ಟಿದ್ದನು. ಆರೋಪಿ ಬಿಬಿನ್ ಫೇಸ್‍ಬುಕ್ ಮೂಲಕ ಶೋಭಾಗೆ ಪರಿಚಯವಾಗಿದ್ದನು. ನಂತರ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. ಆದರೆ ಬಿಬಿನ್ ಇತ್ತೀಚೆಗೆ ಇನ್ನೊಬ್ಬ ಯುವತಿಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದನು. ಈ ಬಗ್ಗೆ ಮಾತನಾಡಲು ಶೋಭಾ ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದಿದ್ದಾಳೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕೊನೆಗೆ ಆರೋಪಿ ಬಿಬಿನ್ ಕೋಪದಲ್ಲಿ ಶೋಭಾಳನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ನಂತರ ಮೃತ ಶೋಭಾಳ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದನು. ಪೊಲೀಸರು ಶೋಭಾ ಫೋನ್ ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ. ಆಗ ಆರೋಪಿ ಬಿಬಿನ್ ಶೋಭಾಳನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಇದೀಗ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

  • ಕೊರೊನಾ ಸೋಂಕಿತೆಯನ್ನ ಅತ್ಯಾಚಾರಗೈದ ಅಂಬುಲೆನ್ಸ್ ಡ್ರೈವರ್

    ಕೊರೊನಾ ಸೋಂಕಿತೆಯನ್ನ ಅತ್ಯಾಚಾರಗೈದ ಅಂಬುಲೆನ್ಸ್ ಡ್ರೈವರ್

    -ನಿರ್ಜನ ಪ್ರದೇಶಕ್ಕೆ ಕರೆದೊಯ್ದು ರೇಪ್

    ತಿರುವನಂತಪುರ: ಅಂಬುಲೆನ್ಸ್ ಚಾಲಕನೋರ್ವ 19 ವರ್ಷದ ಕೊರೊನಾ ಸೋಂಕಿತೆ ಅತ್ಯಾಚಾರ ಎಸಗಿರುವ ಘಟನೆ ಕೇರಳದ ಪಟನಮಿಟ್ಟಾ ಜಿಲ್ಲೆಯ ಅರಮಮುಲಾ ಇಲಾಖೆಯಲ್ಲಿ ನಡೆದಿದೆ.

    ಅಂಬುಲೆನ್ಸ್ ನಲ್ಲಿ ಇಬ್ಬರು ಕೊರೊನಾ ಸೋಂಕಿತರನ್ನ ಸಾಗಿಸಲಾಗುತ್ತಿತ್ತು. ಮೊದಲಿಗೆ ಒಬ್ಬ ರೋಗಿಯನ್ನ ಇಳಿಸಿದ್ದಾನೆ. ತದನಂತರ ಅಂಬುಲೆನ್ಸ್ ನಿರ್ಜನ ಪ್ರದೇಶಕ್ಕೆ ತೆಗದುಕೊಂಡು ಹೋಗಿ ಸೋಂಕಿತ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಸಂತ್ರಸ್ತೆಯನ್ನ ಕೋವಿಡ್ ಆರೈಕೆ ಕೇಂದ್ರಕ್ಕೆ ತಲುಪಿಸಿದ್ದಾನೆ. ಆರೋಪಿ ಚಾಲಕನನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕಳೆದ 24 ಗಂಟೆಯಲ್ಲಿ 90,633 ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ 1,065 ಜನರನ್ನ ರಾಕ್ಷಸಿ ಕೊರೊನಾ ಬಲಿ ಪಡೆದುಕೊಂಡಿದೆ. ಒಟ್ಟು ಸೋಂಕಿತರ ಸಂಖ್ಯೆ 41,13,812ಕ್ಕೆ ಏರಿಕೆಯಾಗಿದ್ದು, ಸದ್ಯ ದೇಶದಲ್ಲಿ 8,62,320 ಸಕ್ರಿಯ ಪ್ರಕರಣಗಳಿವೆ. ಇದುವರೆಗೂ 70,626 ಜನರನ್ನು ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದ್ದು, ಅಮರಿಕಾ ಮತ್ತು ಬ್ರೆಜಿಲ್ ಮೊದಲ, ಎರಡನೇ ಸ್ಥಾನದಲ್ಲಿವೆ.

  • ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಕೃಷ್ಣೈಕ್ಯ

    ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಕೃಷ್ಣೈಕ್ಯ

    – ಎಡನೀರು ಮಠದಲ್ಲಿ ಅಸ್ತಂಗತ

    ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ(79) ಕೃಷ್ಣೈಕ್ಯರಾಗಿದ್ದಾರೆ.

    ಇಂದು ರಾತ್ರಿ 12.45ರ ಸುಮಾರಿಗೆ ಎಡನೀರು ಮಠದಲ್ಲಿ ಸ್ವಾಮೀಜಿ ಕೃಷ್ಣೈಕ್ಯರಾಗಿದ್ದು,ಸೆ.2ರಂದು ಶ್ರೀಗಳು ಚಾತುರ್ಮಾಸ್ಯವನ್ನು ಪೂರೈಸಿದ್ದರು. ಕಳೆದ ಕೆಲವು ದಿನಗಳಿಂದ ಸ್ವಾಮೀಜಿ ಅನಾರೋಗ್ಯಕ್ಕೊಳಗಾಗಿದ್ದರು. ಶನಿವಾರ ರಾತ್ರಿ ಪೂಜೆ ಮುಗಿಸಿ ಊಟ ಮಾಡಿದ್ದ ಶ್ರೀಗಳು, ಮಧ್ಯರಾತ್ರಿಯ ವೇಳೆ ಅಸ್ತಂಗತರಾಗಿದ್ದಾರೆ.

    ನವಂಬರ್ 14, 1960ರಿಂದ ಎಡನೀರು ಮಠಾಧಿಶರಾಗಿದ್ದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ, ಸಂಗೀತ, ಯಕ್ಷಗಾನ, ಶಿಕ್ಷಣ, ಪ್ರವಾಸೋದ್ಯಮ ಸಹಿತ ಧಾರ್ಮಿಕ ಕ್ಷೇತ್ರಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಡನೀರು ಮಠದ ಕೊಡುಗೆ ಮಹತ್ವದ್ದಾಗಿತ್ತು. ಅಲ್ಲದೆ ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಯ ಕೇಂದ್ರವಾಗಿ ಎಡನೀರು ಗುರುತಿಸಲ್ಪಟ್ಟಿತ್ತು. ಕೇರಳದ ಕನ್ನಡ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಎಡನೀರು ಇಡೀ ದೇಶದ ಗಮನ ಸೆಳೆದ ಸಂಸ್ಥಾನವಾಗಿದೆ.

    ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿಯೂ ಸಕ್ರಿಯರಾಗಿದ್ದ ಶ್ರೀಗಳು ಗಡಿನಾಡಿನ ಸಂಸ್ಥಾನದಲ್ಲಿ ಯಕ್ಷಗಾನ, ಸಂಗೀತದ ಕೇಂದ್ರವನ್ನಾಗಿಸಿದ್ದರು. ಯಕ್ಷಗಾನ ಕಲೆಯ ಮೇಲೆ ಅತೀವ ಪ್ರೇಮ ಹೊಂದಿದ್ದ ಸ್ವಾಮೀಜಿ, ಮೇಳವನ್ನು ಮುನ್ನಡೆಸುತ್ತಾ ಸ್ವತಃ ಭಾಗವತಿಕೆಯನ್ನೂ ನಡೆಸುತ್ತಿದ್ದರು. ಪ್ರತೀ ವರ್ಷ ಯಕ್ಷಗಾನ ಸಪ್ತಾಹ, ತಾಳಮದ್ದಳೆ ಕೂಟಗಳನ್ನು ನಡೆಸುತ್ತಿದ್ದರು. ಶ್ರೀಗಳು ಹರಿಕಥೆಯನ್ನು ಸಹ ಮಾಡುತ್ತಿದ್ದರು.

  • ಕಿಡ್ನಿ ವೈಫಲ್ಯಗೊಳಗಾಗಿದ್ದ ತಂದೆಯನ್ನು ಮಂಚದಿಂದ ತಳ್ಳಿ ಥಳಿಸಿ ಕೊಂದ ಮಗ!

    ಕಿಡ್ನಿ ವೈಫಲ್ಯಗೊಳಗಾಗಿದ್ದ ತಂದೆಯನ್ನು ಮಂಚದಿಂದ ತಳ್ಳಿ ಥಳಿಸಿ ಕೊಂದ ಮಗ!

    ತಿರುವನಂತಪುರಂ: ಪಾಪಿ ಮಗನೊಬ್ಬ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಂದೆಯನ್ನೇ ಥಳಿಸಿ ಕೊಲೆಗೈದ ಘಟನೆಯೊಂದು ಕೇರಳದಲ್ಲಿ ನಡೆದಿದೆ.

    ಆರೋಪಿಯನ್ನು ಜೋಸಿ ಜಾನ್(37) ಎಂದು ಗುರುತಿಸಲಾಗಿದೆ. ಈತ ತಂದೆ ಜಾನ್ ಥೋಮಸ್ ಅಕಾ ಕೋಚುಟ್ಟಿ(65) ಅವರನ್ನು ಕೊಲೆ ಮಾಡಿದ್ದಾನೆ.

    ಮೃತ ಜಾನ್ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದರು. ಇವರ ಎರಡೂ ಕಿಡ್ನಿಗಳು ಕೂಡ ಫೇಲ್ ಆಗಿದ್ದು, ಕಳೆದ ಮೂರು ವರ್ಷಗಳಿಂದ ಡಯಾಲಿಸಿಸ್ ಗೆ ಒಳಗಾಗಿದ್ದಾರೆ. ಕಳೆದ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಇವರ ಮೇಲೆ ಮಗ ದಾಳಿ ಮಾಡಿದ್ದಾನೆ.

    ಅನಾರೋಗ್ಯಕ್ಕೀಡಾಗಿದ್ದರಿಂದ ಮಂಚದಲ್ಲಿ ಮಲಗಿದ್ದ ತಂದೆಯನ್ನು ನೆಲಕ್ಕೆ ತಳ್ಳಿ ಬಳಿಕ ಹಿಗ್ಗಾಮುಗ್ಗ ಥಳಿಸಿದ್ದಾನೆ. ಪರಿಣಾಮ ತಂದೆಯ ಪಕ್ಕೆಲುಬುಗಳು ಮುರಿತಕ್ಕೊಳಗಾಗಿತ್ತು. ಇತ್ತ ಮಗನ ರೌದ್ರನರ್ತನದಿಂದ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ನಿವಾಸಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಾನ್ ಥೋಮಸ್ ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ.

    ಸದ್ಯ ಆರೋಪಿ ಮಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಬಸ್ ಹತ್ತಲು ಹೋಗುತ್ತಿದ್ದ 6 ತಿಂಗಳ ಗರ್ಭಿಣಿ ಬಿದ್ದು ಸಾವು

    ಬಸ್ ಹತ್ತಲು ಹೋಗುತ್ತಿದ್ದ 6 ತಿಂಗಳ ಗರ್ಭಿಣಿ ಬಿದ್ದು ಸಾವು

    – ಪತಿಯ ಮುಂದೆಯೇ ಬಿದ್ದ ನರ್ಸ್

    ತಿರುವನಂತಪುರಂ: ಆರು ತಿಂಗಳ ಗರ್ಭಿಣಿ ನರ್ಸ್ ಬಸ್ ಹತ್ತಲು ಹೋಗುತ್ತಿದ್ದಾಗ ರಸ್ತೆಯಲ್ಲಿಯೇ ಬಿದ್ದು ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

    ದಿವ್ಯಾ (27) ಮೃತ ನರ್ಸ್. ದಿವ್ಯಾ ಕಣ್ಣೂರಿನ ಆಸ್ಟರ್ ಮಿಮ್ಸ್ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ದಿವ್ಯಾ ಮನೆಯ ಸಮೀಪವಿರುವ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಈ ಘಟನೆ ಸಂಭವಿಸಿದೆ.

    ದಿವ್ಯಾ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸುವಂತೆ ಕೈ ತೋರಿಸಿದ್ದಾರೆ. ಆಗ ಬಸ್ ಕೆಲವು ಮೀಟರ್ ಮುಂದೆ ಹೋಗಿ ನಿಲ್ಲಿಸಿದೆ. ಆಗ ನರ್ಸ್ ಬಸ್ಸಿನ ಕಡೆಗೆ ಓಡಿ ಹೋಗುತ್ತಿದ್ದಾಗ ರಸ್ತೆಯ ಮೇಲೆ ಬಿದ್ದಿದ್ದಾರೆ. ಬಸ್ ನಿಲ್ದಾಣದ ಬಳಿ ಡ್ರಾಪ್ ಮಾಡಲು ಬಂದಿದ್ದ ಪತಿ ವಿನು ಎದುರೇ ಬಿದ್ದಿದ್ದಾರೆ. ತಕ್ಷಣ ಪತಿ ವಿನು ಸ್ಥಳದಲ್ಲಿದ್ದವರ ಸಹಾಯದಿಂದ ದಿವ್ಯಾರನ್ನು ಆಸ್ಪತ್ರೆಗೆ ಕರೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲಿಯೇ ದಿವ್ಯಾ ಮೃತಪಟ್ಟಿದ್ದರು.

    ದಿವ್ಯಾ ತಲೆಗೆ ತೀವ್ರವಾಗಿ ಗಾಯವಾಗಿದ್ದಕ್ಕೆ ಮೃತಪಟ್ಟಿದ್ದಾರೆ. ಆದರೆ ಆಕೆಯ ತಲೆಗೆ ಹೇಗೆ ಪೆಟ್ಟಾಯಿತು ಎಂಬುದು ಸ್ಪಷ್ಟವಾಗಿಲ್ಲ. ಕೆಳಗೆ ಬಿದ್ದಾಗ ಬಸ್ಸಿಗೆ ತಲೆ ಹೊಡೆಯಿತಾ ಅಥವಾ ರಸ್ತೆಯ ಮೇಲೆ ಬಿದ್ದಿದ್ದರಿಂದ ಪೆಟ್ಟಾಯಿತ ಎಂಬುದು ತಿಳಿದುಬಂದಿಲ್ಲ. ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದ್ದೇವೆ. ಅದರಲ್ಲೂ ಸ್ಪಷ್ಟವಾಗಿ ಕಾಣಿಸಿಲಿಲ್ಲ. ಹೀಗಾಗಿ ಬಸ್ ಪ್ರಯಾಣಿಕರ ಹೇಳಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದ್ಯಕ್ಕೆ ಬಸ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಿವ್ಯಾ ಪ್ರತಿದಿನ ಒಂದೇ ಬಸ್ಸಿನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅದೇ ರೀತಿ ಬಸ್ ನಿಲ್ದಾಣಕ್ಕೆ ಪತಿ ವಿನು ಬೈಕ್ ಅಥವಾ ಕಾರಿನಲ್ಲಿ ಡ್ರಾಪ್ ಮಾಡುತ್ತಿದ್ದು, ನಂತರ ಬಸ್ ಹತ್ತಿ ಆಸ್ಪತ್ರೆಗೆ ಹೋಗುತ್ತಿದ್ದರು. ಸದ್ಯಕ್ಕೆ ಪೊಲೀಸರು ಇದೊಂದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿದೆ. . ಕೋವಿಡ್ 19 ಪರೀಕ್ಷೆಯನ್ನು ನಡೆಸಿದ ನಂತರ ಅಂತ್ಯಕ್ರಿಯೆ ನಡೆದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

  • ಸ್ಯಾಂಡಲ್‍ವುಡ್ ಡ್ರಗ್ಸ್‌ಗೆ ಕೇರಳ ರಾಜಕೀಯ ನಂಟು

    ಸ್ಯಾಂಡಲ್‍ವುಡ್ ಡ್ರಗ್ಸ್‌ಗೆ ಕೇರಳ ರಾಜಕೀಯ ನಂಟು

    – ಎನ್‍ಸಿಬಿ ಎದುರು ಅನೂಫ್ ಸ್ಫೋಟಕ ಹೇಳಿಕೆ

    ಬೆಂಗಳೂರು: ಭಾರೀ ಚರ್ಚೆಗೆ ಕಾರಣವಾಗಿರುವ ಡ್ರಗ್ಸ್ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಬಂಧಿತ ವಿಚಾರಣೆಯಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಕೇರಳ ರಾಜಕೀಯ ನಾಯಕರ ಪುತ್ರನ ಲಿಂಕ್ ಇರುವ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಹೊರ ಹಾಕಿದ್ದಾನೆ ಎಂಬ ಮಾಹಿತಿ ಲಭಿಸಿದೆ.

    ಕೇರಳದಲ್ಲಿ ಬೆಂಗಳೂರಿನ ಡ್ರಗ್ ಪ್ರಕರಣ ತಲ್ಲಣವನ್ನು ಉಂಟು ಮಾಡಿದೆ. ಪೊಲೀಸರ ಎದುರು ಡ್ರಗ್ಸ್ ದಂಧೆಯ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿರುವ ಆರೋಪಿ ಅನೂಫ್, ದಂಧೆಯಲ್ಲಿ ಕೇರಳದ ಸಿಪಿಎಂ ಪಕ್ಷದ ಮಗನಿಂದ ಹಣ ಹೂಡಿಕೆ ಮಾಡಲಾಗಿದೆ. ಸಿಪಿಐ(ಎಂ) ಪಕ್ಷದ ಕೊಡಿಯೇರಿ ಬಾಲಕೃಷ್ಣನ್ ಅವರ ಮಗ ಬಿನೀಶ್ ಕೊಡಿಯೇರಿ ಹಣ ಹೂಡಿಕೆ ಮಾಡಿದ್ದ ಎಂದು ತಿಳಿಸಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಬಾಲಕೃಷ್ಣನ್ ಕೇರಳದ ಸಿಪಿಐ(ಎಂ) ಪಕ್ಷದ ಜನರಲ್ ಸೆಕ್ರೆಟರಿ ಆಗಿದ್ದಾರೆ. ಸದ್ಯ ಬಂಧಿತ ಅನೂಫ್ ಕೊರೊನಾ ಲಾಕ್‍ಡೌನ್‍ನಿಂದ ಕೊಚ್ಚಿಯಲ್ಲಿದ್ದ ಪಬ್ ಬಿಸಿನೆಸ್‍ನಲ್ಲಿ ಲಾಸ್ ಮಾಡಿಕೊಂಡು ಹಾಳಾಗಿದ್ದ ಜೀವನ್ನು ಸರಿ ಮಾಡಿಕೊಳ್ಳುತ್ತೇನೆ ಎಂದು ಹೇಳಿ ಬೆಂಗಳೂರಿಗೆ ಆಗಮಿಸಿದ್ದ. ಅದಕ್ಕೂ ಮುನ್ನವೇ ಆತ ಬೆಂಗಳೂರಿನಲ್ಲಿ ಹಲವು ಬಿಸಿನೆಸ್ ನಡೆಸಿದ ಅನುಭವ ಹೊಂದಿದ್ದ. ಆದರೆ ಈ ಬಾರಿ ಬೆಂಗಳೂರಿಗೆ ಬಂದಿದ್ದ ಆತ, ಆರೋಪಿ ಅನಿಕಾಳಿಂದ ಡ್ರಗ್ಸ್ ಪಡೆದು ಲಾಕ್‍ಡೌನ್ ಅವಧಿಯಲ್ಲಿ ಮಾರಾಟ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದ. 550 ರೂಪಾಯಿಗೆ ಒಂದು ಮಾತ್ರೆ ಎಂಬಂತೆ 1 ಲಕ್ಷದ 37 ಸಾವಿರ ರೂಪಾಯಿಗೆ ಡ್ರಗ್ಸ್ ಖರೀದಿ ಮಾಡಿದ್ದೆ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ.

    ಅನೂಫ್ ಕೇರಳದ ಸಿಪಿಎಂ ನಾಯಕ ಪುತ್ರನೊಂದಿಗೆ ಸಂಪರ್ಕ ಹೊಂದಿರುವುದನ್ನು ಒಪ್ಪಿಕೊಂಡಿದ್ದು, ಆತನ ಹಣದಿಂದಲೇ ಡ್ರಗ್ಸ್ ಖರೀದಿ ಮಾಡಿದ್ದೆ ಎಂದಿದ್ದಾನೆ. ಬೆಂಗಳೂರಿನಲ್ಲಿ ಪಬ್‍ವೊಂದನ್ನು ನೋಡಿಕೊಳ್ಳುತ್ತಿದ್ದ ಆರೋಪಿ ಅಲ್ಲಿಂದಲೇ ಡ್ರಗ್ ಮಾರಾಟ ಮಾಡುತ್ತಿದ್ದ. ಸದ್ಯ ಆರೋಪಿ ಸ್ಯಾಂಡಲ್‍ವುಡ್‍ನ ಯಾವ ನಟ, ನಟಿಯರು, ಗಣ್ಯರಿಗೆ ಸಪ್ಲೇ ಮಾಡಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬರಬೇಕಿದೆ.

    ಸದ್ಯ ಡ್ರಗ್ಸ್ ದಂಧೆಯ ಆರೋಪದ ಕುರಿತು ಪ್ರತಿಕ್ರಿಯೆ ನೀಡಿರುವ ಬಿನೀಶ್ ಕೊಡಿಯೇರಿ, ತನ್ನ ಸ್ನೇಹಿತ ಅನೂಫ್ ಡ್ರಗ್ಸ್ ವ್ಯವಹಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಆತ ನನಗೆ 6 ರಿಂದ 7 ವರ್ಷಗಳಿಂದ ಪರಿಚಯ. ಬೆಂಗಳೂರಿನಲ್ಲಿ ರೆಸ್ಟೋರೆಂಟ್ ಬಿಸಿನೆಸ್ ಮಾಡುತ್ತಿದ್ದ. ಆದರೆ ಎನ್‍ಸಿಬಿ ಆತನನ್ನು ಬಂಧಿಸಿದ ಸುದ್ದಿ ಕೇಳಿ ಆಘಾತವಾಯಿತು. ಏಕೆಂದರೆ ನನಗೆ ಅಥವಾ ಆತನ ಪೋಷಕರಿಗೆ ಡ್ರಗ್ಸ್ ದಂಧೆಯ ಬಗ್ಗೆ ಯಾವುದೇ ಸುಳಿವು ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾನೆ.

    ಇತ್ತ ನಿನ್ನೆಯೇ ಈ ಕುರಿತು ಹೇಳಿಕೆ ನೀಡಿದ್ದ ಐಯುಎಂಎಲ್ ಮುಖಂಡ ಕೆಎಫ್ ಫಿರೋಜ್, ಅನೂಫ್ ಹಾಗೂ ಬಿನೀಶ್ ಇಬ್ಬರು ಸ್ನೇಹಿತರು ಎಂದು ಮಾಧ್ಯಮಗಳ ಹೇಳಿದ್ದ. ಸದ್ಯದ ಮಾಹಿತಿ ಅನ್ವಯ ಆರೋಪವನ್ನು ಎದುರಿಸುತ್ತಿರುವ ಬಿನೀಶ್, ಹಲವು ವ್ಯವಹಾರ ನಡೆಸುತ್ತಿದ್ದ. ಅಲ್ಲದೇ ಚಿತ್ರರಂದ ಗಣ್ಯರೊಂದಿಗೂ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

    ಬಿನೀಶ್ ಸಹೋದರ ಬಿನೊಯ್, ಮುಂಬೈ ಮೂಲದ 33 ವರ್ಷದ ಮಹಿಳೆಗೆ ಮದುವೆ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಹಾಗೂ ವಂಚಿಸಿದ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ಈ ಪ್ರಕರಣದ ವಿಚಾರಣೆ ಮುಂಬೈನಲ್ಲಿ ನಡೆಯುತ್ತಿದ್ದು, ಡಿಎನ್‍ಎ ಪರೀಕ್ಷೆಯ ಫಲಿಶಾಂಶಕ್ಕಾಗಿ ಪೊಲೀಸರು ಕಾಯುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.