Tag: kerala

  • ಕನ್ನಡಿಗರ ಹೋರಾಟ ಕೇರಳ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿತು!

    ಕನ್ನಡಿಗರ ಹೋರಾಟ ಕೇರಳ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿತು!

    – ಯಶಸ್ವಿಯಾಯ್ತು #KasaragoduKannadaUlisiಅಭಿಯಾನ

    ಕಾಸರಗೋಡು: ಕನ್ನಡ ಭಾಷಾ ಅಲ್ಪಸಂಖ್ಯಾತರ ಮೇಲೆ ಕೇರಳ ರಾಜ್ಯ ಸರ್ಕಾರ ಕಡ್ಡಾಯವಾಗಿ ಮಲೆಯಾಳ ಭಾಷೆ ಹೇರಿರುವುದನ್ನು ಪ್ರತಿಭಟಿಸಿ ಕಾಸರಗೋಡಿನ ಕನ್ನಡಿಗರು ಇಂದು ಬೆಳಿಗ್ಗೆ ಕಲೆಕ್ಟರೇಟ್‍ಗೆ ನಡೆಸಿದ ದಿಗ್ಬಂಧನ ಯಶಸ್ವಿಯಾಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಕನ್ನಡಿಗರು ಆಗಮಿಸಿ ಕಾಸರಗೋಡು ಜಿಲ್ಲಾ ಕಲೆಕ್ಟರೇಟ್ ದಿಗ್ಬಂಧನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

    ಕನ್ನಡ ಹೋರಾಟಗಾರರು ಜಿಲ್ಲಾ ಕೇಂದ್ರದ ಆಡಳಿತ ಕಚೇರಿ ಇರುವ ವಿದ್ಯಾನಗರ ಸಿವಿಲ್ ಸ್ಟೇಷನ್‍ನ ಎಲ್ಲಾ ದ್ವಾರಗಳ ಮುಂದೆ ಕುಳಿತು `ಕನ್ನಡ ಉಳಿಸಿ, ಕನ್ನಡ ರಕ್ಷಿಸಿ’ ಘೋಷಣೆಗಳನ್ನು ಕೂಗಿ ಕಚೇರಿ ಒಳಗೆ ಹೋಗಲು ಆಗಮಿಸಿದ್ದ ಸರ್ಕಾರಿ ನೌಕರರನ್ನು ತಡೆದರು. ಇದರಿಂದಾಗಿ ಸಿಬ್ಬಂದಿಗೆ ಸಿವಿಲ್ ಸ್ಟೇಷನ್‍ಗೆ ಪ್ರವೇಶಿಸಲು ಸಾಧ್ಯವಾಗದೇ ಸಿವಿಲ್ ಸ್ಟೇಷನ್‍ನ ಎಲ್ಲಾ ಕಾರ್ಯಚಟುವಟಿಕೆಗಳು ಸ್ತಬ್ಧಗೊಂಡಿತ್ತು. ಜಿಲ್ಲಾಧಿಕಾರಿ, ಎಡಿಎಂ ಸಹಿತ ಯಾರಿಗೂ ಕಲೆಕ್ಟರೇಟ್‍ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಬೆಳಗ್ಗೆ 5 ಗಂಟೆಯಿಂದಲೇ ಕನ್ನಡಾಭಿಮಾನಿಗಳು ಕಾಸರಗೋಡಿನತ್ತ ಆಗಮಿಸಿದ ಹಿನ್ನೆಲೆಯಲ್ಲಿ ಯಾವುದೇ ಅಧಿಕಾರಿಗಳಿಗೂ ಕಚೇರಿಗೆ ತೆರಳಲು ಸಾಧ್ಯವಾಗಲಿಲ್ಲ.

    ಸಿವಿಲ್ ಸ್ಟೇಶನ್ ಮಹಾದ್ವಾರದಲ್ಲಿ ನಡೆದ ಚಳವಳಿಯನ್ನು ಕೊಂಡೆವೂರು ಯೋಗಾನಂದ ಸರಸ್ವತಿ ಸ್ವಾಮೀಜಿ, ಬೇಳ ಶೋಕಮಾತಾ ಇಗರ್ಜಿಯ ಧರ್ಮಗುರು ವಿನ್ಸೆಂಟ್ ಡಿ’ಸೋಜಾ, ಧಾರ್ಮಿಕ ನೇತಾರ ಮೌಲಾನ ಅಬ್ದುಲ್ ಅಸೀಸ್ ಎಂಬಿವರು ಸಂಯುಕ್ತವಾಗಿ ಚೆಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು. ಕರ್ನಾಟಕ ಸಮಿತಿ ಅಧ್ಯಕ್ಷ ಕೆ. ಮುರಳೀಧರ ಬಳ್ಳಕ್ಕುರಾಯ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಸ್ವಾಗತಿಸಿದರು. ಇದು ಕನ್ನಡ ವಿರೋಧಿ ಮಸೂದೆಯ ವಿರುದ್ಧ ಮಾತ್ರ ನಡೆಸುವ ದಿಗ್ಬಂಧನ ಚಳವಳಿಯಲ್ಲ, ಬದಲಾಗಿ ಕನ್ನಡ ವಿರೋಧಿಗಳ ಅಂತರಾಳದ ವಿರುದ್ಧ ನಡೆಸುತ್ತಿರುವ ಚಳವಳಿ ಎಂದು ಯೋಗಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಕನ್ನಡ ಭಾಷೆ ಅಳಿದರೆ ಕನ್ನಡ ಸಂಸ್ಕೃತಿಯೂ ಅಳಿಯಲಿದೆ. ಅಂತಹ ಯತ್ನವನ್ನು ನಾವು ಯಾವ ಬೆಲೆ ತೆತ್ತಾದರೂ ಹಿಮ್ಮೆಟ್ಟಿಸುತ್ತೇವೆ. ಕನ್ನಡದ ಮೇಲಿನ ದಬ್ಬಾಳಿಕೆಯನ್ನು ಕೊನೆಗೊಳಿಸಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯತ್ನಿಸಬೇಕಾಗಿದೆ ಎಂದು ಮೌಲಾನ ಅಬ್ದುಲ್ ಅಸೀಸ್ ಅಭಿಪ್ರಾಯಪಟ್ಟರು.

    ಸರ್ಕಾರ ಹೊರಡಿಸಿದ ಮಸೂದೆಯ ಹೊರಗೆ ಸಿಹಿ ಲೇಪಿಸಿದ್ದು ಒಳಗೆ ವಿಷ ಗುಳಿಗೆಯನ್ನು ತುಂಬಲಾಗಿದೆ. ಅದರ ವಿರುದ್ಧ ನಾವಿಂದು ಬೆವರು ಸುರಿಸಿ ಹೋರಾಟ ನಡೆಸುತ್ತಿದ್ದೇವೆ. ಅಗತ್ಯ ಬಂದಲ್ಲಿ ರಕ್ತ ಸುರಿಸಿ ಹೋರಾಟ ನಡೆಸಲೂ ನಾವು ಸಿದ್ಧ. ಕಾಸರಗೋಡಿನ 20 ಸಾವಿರದಷ್ಟು ಕೊಂಕಣಿ ಕ್ರೈಸ್ತರೂ ಈ ಹೋರಾಟದ ಜತೆಗಿದ್ದಾರೆಂದು ವಿನ್ಸೆಂಟ್ ಡಿ’ಸೋಜಾ ಅಭಿಪ್ರಾಯಪಟ್ಟರು.

    ಜಿಲ್ಲಾ ಪಂ. ಅಧ್ಯಕ್ಷ ಎ.ಜಿಸಿ ಬಶೀರ್, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹಕೀಂ ಕುನ್ನಿಲ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್, ನ್ಯಾಯವಾದಿ ಸುಬ್ಬಯ್ಯ ರೈ, ರವೀಶ ತಂತ್ರಿ ಕುಂಟಾರು, ಬಿ.ವಿ. ಕಕ್ಕಿಲಾಯ, ಹರ್ಷಾದ್ ವರ್ಕಾಡಿ, ಆಯಿಷಾ ಪೆರ್ಲ, ಕನ್ನಡ ಹಿರಿಯ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾಯ್ಕ್, ಪುರುಷೋತ್ತಮ ಮಾಸ್ತರ್, ಉಮೇಶ್ ಸಾಲಿಯಾನ್, ಕಾಸರಗೋಡು ಚಿನ್ನಾ, ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ, ಡಾ. ಸಿ. ಕೃಷ್ಣ ಭಟ್, ಕೇಶವ ಪ್ರಸಾದ್ ನಾಣಿತ್ತಿಲು, ಪ್ರಮೀಳಾ ಸಿ. ನಾಯಕ್, ವಾಮನ ರಾವ್ ಬೇಕಲ್, ಸೋಮಶೇಖರ ಜೆ.ಎಸ್, ಗಣಪತಿ ಕೋಟೆಕಣಿ, ಡಾ. ಮೋಹನ್ ಕುಮಾರ್ ಕುಂಟಾರು, ಪಿ.ಆರ್. ಸುನಿಲ್, ಕೃಷ್ಣ ಅಮೆಕ್ಕಳ, ಗೋಪಾಲ ಶೆಟ್ಟಿ ಅರಿಬೈಲು, ಹರಿಶ್ಚಂದ್ರ ಮಂಜೇಶ್ವರ, ಡಾ. ಜಯಪ್ರಕಾಶ್, ಟಿ.ಡಿ. ಸದಾಶಿವ ರಾವ್, ವೆಂಕಟ್ರಮಣ ಹೊಳ್ಳ, ಝೆಡ್. ಎ. ಕಯ್ಯಾರ್, ಹರೀಶ್ ಮಾಡ, ಅಶ್ರಫ್ ಮರ್ತ್ಯ, ಎ.ಕೆ.ಎಂ. ಅಶ್ರಫ್, ಕೋಳಾರು ಸತೀಶ್ಚಂದ್ರ ಭಂಡಾರಿ, ಸವಿತಾ, ಎಸ್.ವಿ. ಭಟ್, ಶೇಂತಾರು ನಾರಾಯಣ ಭಟ್, ಸುಧಾಮಗೋಸಾಡ, ಶೈಲಜಾ ಭಟ್, ಜೋಗೇಂದ್ರ, ಪುಂಡರೀಕಾಕ್ಷ ಕೆ.ಎಲ್., ಬಾಲಕೃಷ್ಣ ಅಗ್ಗಿತ್ತಾಯ, ಜಯರಾಮ ಮಂಜತ್ತಾಯ, ಶಿವರಾಮ ಕಾಸರಗೋಡು, ಮಹಾಲಿಂಗೇಶ್ವರ ಭಟ್, ಡಾ. ಶ್ರೀಪಡ್ರೆ, ಬಾಲಕೃಷ್ಣ ವೊರ್ಕೂಡ್ಲು ಸೇರಿದಂತೆ ಹಲವರು ಕಲೆಕ್ಟರೇಟ್ ದಿಗ್ಬಂಧನದ ಮುಂಚೂಣಿಯಲ್ಲಿದ್ದರು.

    ಇದನ್ನೂ ಓದಿ: ಕೇರಳ ಸರ್ಕಾರದ ವಿರುದ್ಧ ಕನ್ನಡಿಗರು ಪ್ರತಿಭಟನೆ ನಡೆಸಿದ್ದು ಯಾಕೆ?

  • ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ

    ಯುವತಿ ಅಲ್ಲ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದೆ: ಕಾಮಿ ಸ್ವಾಮೀಜಿ

    ತಿರುವನಂತಪುರಂ: ಅತ್ಯಾಚಾರಕ್ಕೆ ಯತ್ನಿಸಿದ್ದಕ್ಕೆ ನಾನು ಸ್ವಾಮೀಜಿಯ ಮರ್ಮಾಂಗವನ್ನೇ ಕತ್ತರಿಸಿದ್ದೇನೆ ಎಂದು ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದರೆ, ಸ್ವಾಮೀಜಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದಾನೆ.

    ಶ್ರೀಹರಿ ಅಲಿಯಾಸ್ ಗಣೇಶಾನಂದ ತೀರ್ಥಪಾದ ಸ್ವಾಮಿಯನ್ನು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಆತ, ನನ್ನ ಮರ್ಮಾಂಗವನ್ನು ನಾನೇ ಕತ್ತರಿಸಿದ್ದೇನೆ. ಯುವತಿ ಸುಳ್ಳು ಹೇಳುತ್ತಿದ್ದಾಳೆ. ಆಕೆಯ ಮಾತನ್ನು ನಂಬಬೇಡಿ. ಸುಳ್ಳು ವರದಿಯನ್ನು ಪ್ರಸಾರ ಮಾಡಬೇಡಿ ಎಂದು ಹೇಳಿದ್ದಾನೆ.

    ಈ ಘಟನೆಯ ಬಗ್ಗೆ ಕೇರಳ ಮುಖ್ಯಮಮತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿ ಯುವತಿಯ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ. ಹುಡುಗಿಯ ಉತ್ತಮವಾದ ಕೆಲಸವನ್ನೇ ಮಾಡಿದ್ದಾಳೆ ಎಂದು ಹೊಗಳಿದ್ದಾರೆ.

    23 ವರ್ಷದ ಕಾನೂನು ವಿದ್ಯಾರ್ಥಿನಿ ಶುಕ್ರವಾರ ರಾತ್ರಿ ಅತ್ಯಾಚಾರಕ್ಕೆ ಯತ್ನಿಸಿದ ಸ್ವಾಮೀಜಿ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿದ್ದಳು. ತನ್ನ ಕೃತ್ಯದ ಬಳಿಕ ತಿರುವನಂತಪುರಂ ಪೊಲೀಸ್ ಠಾಣೆಗೆ ಕರೆ ಮಾಡಿ ತನ್ನ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಳು.

    ಈ ಪ್ರಕರಣದ ಸಂಬಂಧ ಯುವತಿಯ ತಾಯಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಪೊಲೀಸರಿಗೆ ನೀಡಿದ ಹೇಳಿಕೆಯನ್ನು ಸ್ವಾಮೀಜಿ ನನ್ನ ಮೇಲೆ ಎಸಗುತ್ತಿದ್ದ ಕೃತ್ಯ ನನ್ನ ತಾಯಿಗೂ ತಿಳಿದಿತ್ತು ಎಂದು ಯುವತಿ ಹೇಳಿಕೆ ನೀಡಿದ್ದಳು.

    ಇದೇ ವೇಳೆ ಯುವತಿಯ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಸ್ವಾಮೀಜಿಯ ಮರ್ಮಾಂಗವನ್ನೇ ಕತ್ತರಿಸಿದ ಕಾನೂನು ವಿದ್ಯಾರ್ಥಿನಿ.. ಏನಿದು ಘಟನೆ?

  • ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

    ರೇಪಿಸ್ಟ್ ಕಾಮಿ ಸ್ವಾಮೀಜಿಯ ಮರ್ಮಾಂಗವನ್ನೇ ಕಟ್ ಮಾಡಿದ್ಳು ಯುವತಿ!

    ತಿರುವನಂತಪುರಂ: ತನ್ನ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದ ಸ್ವಾಮೀಜಿಯ ಮರ್ಮಾಂಗವನ್ನೇ ಯುವತಿಯೊಬ್ಬಳು ಕತ್ತರಿಸಿದ ಘಟನೆ ತಿರುವನಂತಪುರಂ ಸಮೀಪದ ಕನ್ನಮೂಲ ಎಂಬಲ್ಲಿ ನಡೆದಿದೆ.

    ಕೊಲ್ಲಂನ ಪನ್ಮನದಲ್ಲಿರುವ ಶ್ರೀಹರಿ ಅಲಿಯಾಸ್ ಗಣೇಶಾನಂದ ತೀರ್ಥಪಾದ ಸ್ವಾಮಿಯನ್ನು (53)ಈಗ ತಿರುವನಂತಪುರದಲ್ಲಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

    ಘಟನೆಯ ವಿವರ:
    ಶ್ರೀಹರಿ ಅಲಿಯಾಸ್ ಗಣೇಶಾನಂದ ಸ್ವಾಮೀಜಿ ಶುಕ್ರವಾರ ಯುವತಿಯ ಮನೆಗೆ ವಿಶೇಷ ಪೂಜೆಗೆಂದು ಆಗಮಿಸಿದ್ದಾನೆ. ರಾತ್ರಿ ಈತ ಅತ್ಯಾಚಾರಕ್ಕೆ ಯತ್ನಿಸಿದ್ದಾಗ ಯುವತಿ ಹರಿತವಾದ ಚೂರಿಯ ಸಹಾಯದಿಂದ ಮರ್ಮಾಂಗವನ್ನು ಕತ್ತರಿಸಿದ್ದಾಳೆ.

    ಶುಕ್ರವಾರ ಮಧ್ಯರಾತ್ರಿ 11.30ಕ್ಕೆ ಈ ಘಟನೆ ನಡೆದಿದೆ. ಈ ಘಟನೆಯ ಬಳಿಕ ಯುವತಿ ತಿರುವನಂತಪುರಂ ಪೊಲೀಸ್ ಠಾಣೆಗೆ ಕರೆ ಮಾಡಿ ನಾನು ಸ್ವಾಮೀಜಿಯ ಮರ್ಮಾಂಗವನ್ನು ಕತ್ತರಿಸಿದ್ದೇನೆ ಎಂದು ತಿಳಿಸಿದ್ದಾಳೆ.

    ಯುವತಿ ತನ್ನ ಹೇಳಿಕೆಯಲ್ಲಿ, ನಾನು ಹೈಸ್ಕೂಲ್ ಓದುತ್ತಿರುವಾಗಲೇ ಈತ ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದ. ಈತನ ಈ ಕೃತ್ಯ ನನ್ನ ತಾಯಿಗೆ ತಿಳಿದಿದೆ. ಶುಕ್ರವಾರ ಮನೆಗೆ ಬರುತ್ತಿರುವ ವಿಚಾರ ತಿಳಿದು ಆತನಿಗೆ ಪಾಠ ಕಲಿಸಬೇಕೆಂದು ನಿರ್ಧರಿಸಿದ್ದೆ. ಇದಕ್ಕಾಗಿ ನಾನು ಮೊದಲೇ ಹರಿತವಾದ ಚೂರಿಯನ್ನು ರೆಡಿ ಮಾಡಿ ಇಟ್ಟುಕೊಂಡಿದ್ದೆ ಎಂದು ಹೇಳಿದ್ದಾಳೆ.

    ಯಾಕೆ ಈ ರೀತಿ ಕೃತ್ಯ ಎಸಗಿದ್ದು ಎಂದು ಕೇಳಿದ್ದಕ್ಕೆ ಯುವತಿ, ದೇವಮಾನವ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಹೇಳಿದರೆ ಯಾರೂ ನಂಬುತ್ತಿರಲಿಲ್ಲ. ಈ ಕಾರಣಕ್ಕಾಗಿ ನನಗೆ ಬೇರೆ ದಾರಿ ಇಲ್ಲದೇ ಮರ್ಮಾಂಗವನ್ನೇ ಕತ್ತರಿಸಲು ಮುಂದಾದೆ ಎಂದು ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

    ಕೊಲ್ಲಂ ಮೂಲದ 54 ವರ್ಷದ ಹಿರಿಯ ವ್ಯಕ್ತಿ ನಸುಕಿನ ಜಾವ 12.39ಕ್ಕೆ ದಾಖಲಾಗಿದ್ದು, ಆಸ್ಪತ್ರೆಗೆ ಬರುವಾಗ ಮರ್ಮಾಂಗದ ಶೇ.90 ಭಾಗ ನೇತಾಡಿಕೊಂಡಿತ್ತು. ಯುರಲಾಜಿ ಮತ್ತು ಪ್ಲಾಸ್ಟಿಕ್ ಸರ್ಜನ್ ಗಳು ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಈಗ ಆರೋಗ್ಯ ಸ್ವಲ್ಪ ಸುಧಾರಿಸಿದೆ ಎಂದು ತಿರುವನಂತಪುರಂ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

    ಪಿಟಾಯ್ ಪೊಲೀಸರು ಐಪಿಸಿ ಸೆಕ್ಷನ್ 376(ಅತ್ಯಾಚಾರ) ಮತ್ತು ಪೋಸ್ಕೋ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ನಮಗೂ ಆತನಿಗೂ ಸಂಬಂಧ ಇಲ್ಲ: ಆತನ ಗುರುತು ಪತ್ರದಲ್ಲಿ ಆಶ್ರಮದ ವಿಳಾಸ ಸಿಕ್ಕಿದ ಹಿನ್ನೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪನ್ಮನ ಆಶ್ರಮದ ಮುಖ್ಯಸ್ಥ ಪ್ರಣವನಂದ ಅವರು, ಈ ಹಿಂದೆ ಆತ ಆಶ್ರಮದಲ್ಲಿ ನೆಲೆಸಿದ್ದ ನಂತರ ಆಶ್ರಮವನ್ನು ತೊರೆದು ತಿರುವನಂತಪುರಂನಲ್ಲಿ ಹೋಟೆಲ್ ನಡೆಸುತ್ತಿದ್ದ. ನಮ್ಮ ಆಶ್ರಮಕ್ಕೆ ಮತ್ತು ಆತನಿಗೆ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಪ್ಲಸ್ ಟು ಪರೀಕ್ಷೆಯಲ್ಲಿ 1200ಕ್ಕೆ 1180 ಅಂಕಗಳಿಸಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಯಿಂದ ಮನನೊಂದು ಆತ್ಮಹತ್ಯೆ!

    ಇದನ್ನೂ ಓದಿ :ಶವದ ಮರ್ಮಾಂಗ ಹಿಡಿದು ಮಹಿಳೆ ರೋಧನೆ: ಕಲಬುರಗಿಯಲ್ಲೊಂದು ವಿಚಿತ್ರ ಘಟನೆ

  • ಪ್ಲಸ್ ಟು ಪರೀಕ್ಷೆಯಲ್ಲಿ 1200ಕ್ಕೆ 1180 ಅಂಕಗಳಿಸಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಯಿಂದ ಮನನೊಂದು ಆತ್ಮಹತ್ಯೆ!

    ಪ್ಲಸ್ ಟು ಪರೀಕ್ಷೆಯಲ್ಲಿ 1200ಕ್ಕೆ 1180 ಅಂಕಗಳಿಸಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಯಿಂದ ಮನನೊಂದು ಆತ್ಮಹತ್ಯೆ!

    ಕಣ್ಣೂರು: ಕೇರಳದ ಪ್ಲಸ್ ಟು ಪರೀಕ್ಷೆಯಲ್ಲಿ ಅತಿ ಹೆಚ್ಚಿನ ಅಂಕ ತೆಗೆದು ಪಾಸಾಗಿದ್ದ ವಿದ್ಯಾರ್ಥಿನಿ ಮಾಧ್ಯಮಗಳ ವರದಿಗೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಹೌದು. ಕಣ್ಣೂರು ಜಿಲ್ಲೆಯ ಮಾಲೂರಿನ ಶಿವಪುರಂ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ರಫ್ಸೀನಾ(17) ಪ್ಲಸ್ ಟು ತರಗತಿಯಲ್ಲಿ ಒಟ್ಟು 1200 ಅಂಕಗಳಿಗೆ ನಡೆದ ಪರೀಕ್ಷೆಯಲ್ಲಿ  1180 ಅಂಕಗಳಿಸಿ ಪಾಸಾಗಿದ್ದಳು. ಈಕೆಯ ಸಾಧನೆಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಅಭಿನಂದನೆಗಳ ಸ್ವೀಕರಿಸಿದ ಬಳಿಕ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಬುಧವಾರ ನೇಣಿಗೆ ಶರಣಾಗಿದ್ದಾಳೆ.

    ತನ್ನ ಮರಣ ಪತ್ರದಲ್ಲಿ ರಫ್ಸಿನಾ, ನನ್ನ ಜೀವನ ನನ್ನ ಆಯ್ಕೆ, ನನ್ನ ಜೀವನದಲ್ಲಿ ಬೇರೆಯವರು ಮಧ್ಯಪ್ರವೇಶಿಸುವುದು ನನಗೆ ಇಷ್ಟ ಇಲ್ಲ ಎಂದು ಬರೆದಿದ್ದಳು.

    ಮಾಧ್ಯಮಗಳ ವರದಿಯಿಂದ ಆತ್ಮಹತ್ಯೆ?
    ತೀವ್ರ ಬಡತನದಲ್ಲಿ ಓದಿ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಒಂದು ಕೋಣೆಯ ಮನೆಯಲ್ಲಿ ವಾಸಿಸುತ್ತಿದ್ದ ರಫ್ಸೀನಾ ಬಡತನದ ವಿಷಯವನ್ನು ತನ್ನ ಸ್ನೇಹಿತರಲ್ಲೂ ಹೇಳಿರಲಿಲ್ಲ. ಮಾಧ್ಯಮಗಳು ತನ್ನ ಸಾಧನೆ ವಿಚಾರಕ್ಕಿಂತಲೂ ಬಡತನದ ವಿಚಾರವನ್ನೇ ಮುಂದಿಟ್ಟುಕೊಂಡು ಸುದ್ದಿಯನ್ನು ಪ್ರಕಟಿಸಿದ್ದಕ್ಕೆ ಬೇಸರಗೊಂಡಿದ್ದಳು.

    ಈಕೆಯ ಬಡತನವನ್ನು ನೋಡಿ ಹಲವು ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಸಹಕಾರವನ್ನು ನೀಡಲು ಮುಂದೆ ಬಂದಿತ್ತು. ಬುಧವಾರ ಶಿವಪುರಂ ಹೈಯರ್ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಕೆಯ ಮನೆಗೆ ಬಂದು ಅಭಿನಂದನೆ ಸಲ್ಲಿಸಿದ್ದರು. ಅಭಿನಂದನೆ ಸ್ವೀಕರಿಸಿದ ಬಳಿಕ ಆಕೆ ನೇಣಿಗೆ ಶರಣಾಗಿದ್ದಾಳೆ.

    ಮಾಧ್ಯಮಗಳು ಈಕೆಯ ಶಿಕ್ಷಣಕ್ಕೆ ಜನರು ಮುಂದೆ ಸಹಕಾರ ನೀಡಲಿ ಎನ್ನುವ ದೃಷ್ಟಿಯಿಂದ, ರಫ್ಸೀನಾಗೆ ಹಣಕಾಸಿನ ಸಹಾಯ ನೀಡಿದವರ ಫೋಟೋಗಳನ್ನು ಸಹ ಸುದ್ದಿಯಲ್ಲಿ ಪ್ರಸಾರ ಮಾಡಿತ್ತು. ಮಾಧ್ಯಮಗಳು ಈಕೆಯ ಸುದ್ದಿಯನ್ನು ಕವರ್ ಮಾಡಿದ ಬಗ್ಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ, ವಿರೋಧ ಚರ್ಚೆ ಆರಂಭವಾಗಿದೆ.

  • ಕರುನಾಡಿನ ಗಡಿಯಲ್ಲಿ ಬೇರುಬಿಡುತ್ತಿದೆ ಐಸಿಸ್ `ಉಗ್ರ’ಜಾಲ

    ಕರುನಾಡಿನ ಗಡಿಯಲ್ಲಿ ಬೇರುಬಿಡುತ್ತಿದೆ ಐಸಿಸ್ `ಉಗ್ರ’ಜಾಲ

    ಮಂಗಳೂರು: ಐಸಿಸ್ ಉಗ್ರಗಾಮಿ ಸಂಘಟನೆ ಕೇರಳದಲ್ಲಿ ಬೇರು ಬಿಟ್ಟಿರುವುದಕ್ಕೆ ಸಾಕ್ಷಿಯೆಂಬಂತೆ ಐಸಿಸ್ ಪರ ವಾಟ್ಸಪ್ ಗ್ರೂಪ್ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಈ ಬಗ್ಗೆ ಕರ್ನಾಟಕ ಗಡಿಭಾಗ ಕಾಸರಗೋಡು ಠಾಣೆಯಲ್ಲಿ ದೂರು ದಾಖಲಾಗಿದ್ದು, ಎನ್‍ಐಎ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಕಾಸರಗೋಡು ಜಿಲ್ಲೆಯ ಅಣಂಗೂರಿನ ನಿವಾಸಿಯೊಬ್ಬನನ್ನು ಆತನ ಒಪ್ಪಿಗೆಯಿಲ್ಲದೆ ಈ ವಾಟ್ಸಪ್ ಗ್ರೂಪಿಗೆ ಸೇರಿಸಲಾಗಿತ್ತು. ಗ್ರೂಪಿನಲ್ಲಿ 200ಕ್ಕಿಂತಲೂ ಹೆಚ್ಚು ಸದಸ್ಯರಿದ್ದು ಐಸಿಸ್ ಪರ ಒಲವುಳ್ಳವರೆಂಬ ಹೆಸರಲ್ಲಿ ಸ್ವಾಗತಿಸಲಾಗಿತ್ತು.

    ಪಾಲಕ್ಕಾಡ್ ಮೂಲದ ಅಬು ಇಸಾ ಎಂಬಾತ ಗ್ರೂಪ್ ಎಡ್ಮಿನ್ ಆಗಿದ್ದು ಅಫ್ಘಾನಿಸ್ತಾನದಲ್ಲಿದ್ದುಕೊಂಡೇ ಐಸಿಸ್ ಗೆ ಯುವಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದ್ದಾನೆ. ಜಿಹಾದಿಗಾಗಿ ನಾವು ಯಾಕೆ ಒಂದಾಗಬೇಕು ಅನ್ನುವ ನಿಟ್ಟಿನಲ್ಲಿ ಈತ ಗ್ರೂಪ್ ಸದಸ್ಯರ ಜೊತೆ ನಡೆಸಿದ ಫೋನ್ ಸಂಭಾಷಣೆಯನ್ನೂ ವಾಟ್ಸಪ್ ಗ್ರೂಪಿಗೆ ಹಾಕಿದ್ದು ಮಲೆಯಾಳ ಭಾಷೆಯಲ್ಲಿರುವ ವಾಯ್ಸ್ ರೆಕಾರ್ಡ್ ಈಗ ಮಾಧ್ಯಮಕ್ಕೆ ಲಭಿಸಿದೆ.

    ಮುಖ್ಯವಾಗಿ ಕರಾವಳಿ ಭಾಗದಲ್ಲಿ ನಡೆದ ಮುಸ್ಲಿಮರ ಕೊಲೆ ಪ್ರಕರಣಗಳು ಮತ್ತು ಅಮೆರಿಕ ಅಫ್ಘಾನಿಸ್ತಾನದಲ್ಲಿ ನಡೆಸುತ್ತಿರುವ ದಾಳಿಗೆ ನಾವು ಒಂದಾಗಬೇಕಿದ್ದು ಇಸ್ಲಾಮಿಕ್ ಸ್ಟೇಟ್ ನಿರ್ಮಿಸಬೇಕು. ಇದೆಲ್ಲ ಪ್ರವಾದಿಯವರ ಬಯಕೆಯಂತೆ ನಡೆಸುವ ಜಿಹಾದಿ ಅಷ್ಟೇ. ಅಫ್ಘಾನಿಸ್ತಾನದಲ್ಲಿ ಸಣ್ಣ ಮಕ್ಕಳನ್ನೂ ಅಮೆರಿಕ ಅಮಾಯಕವಾಗಿ ಕೊಲ್ಲುತ್ತಿದೆ. ಇದರ ವಿರುದ್ಧ ನಾವು ಹೋರಾಡಬೇಕಿದೆ ಅಂತಾ ಸಂದೇಶದಲ್ಲಿ ಹೇಳಿಕೊಂಡಿದ್ದಾನೆ.

    ಇದರಿಂದ ಗ್ರೂಪಿನ ದುರುದ್ದೇಶ ಅರಿತ ಕಾಸರಗೋಡಿನ ಹ್ಯಾರಿಸ್ ಎಂಬವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ವರ್ಷವಷ್ಟೆ ಕಾಸರಗೋಡಿನ ಒಂದೇ ಪಂಚಾಯತಿನ 17 ಮಂದಿ ನಿಗೂಢ ನಾಪತ್ತೆಯಾಗಿದ್ದು ಆಬಳಿಕ ಅವರೆಲ್ಲ ಸಿರಿಯಾದ ಐಸಿಸ್ ಸಂಘಟನೆ ಸೇರಿದ್ದಾರೆಂದು ಮಾಹಿತಿ ಲಭ್ಯವಾಗಿತ್ತು. ಇದೀಗ ವಾಟ್ಸಪ್ ಗ್ರೂಪ್ ಮೂಲಕ ಕರಾವಳಿಯ ಮೂಲಭೂತವಾದಿಗಳು ವ್ಯವಸ್ಥಿತವಾಗಿ ಉಗ್ರವಾದಿ ಸಂಘಟನೆ ಪರ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

    ಇದನ್ನೂ ಓದಿ: ಅಫ್ಘಾನಿಸ್ತಾನದ ಐಸಿಸ್ ನೆಲೆ ಮೇಲೆ `ಮದರ್ ಆಫ್ ಆಲ್ ಬಾಂಬ್’-ಇದರ ವಿಶೇಷತೆಯೇನು?

  • ಸಿರಿಯಾದಲ್ಲಿ ಅಮೆರಿಕ ದಾಳಿಗೆ ಕೇರಳ ಮೂಲದ ಶಂಕಿತ ಐಸಿಸ್ ಉಗ್ರ ಬಲಿ

    ಸಿರಿಯಾದಲ್ಲಿ ಅಮೆರಿಕ ದಾಳಿಗೆ ಕೇರಳ ಮೂಲದ ಶಂಕಿತ ಐಸಿಸ್ ಉಗ್ರ ಬಲಿ

    ಡಮಾಸ್ಕಸ್: ಸಿರಿಯಾದಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಕೇರಳ ಮೂಲದ ಶಂಕಿತ ಉಗ್ರನೊಬ್ಬ ಬಲಿಯಾಗಿದ್ದಾನೆ. ಅಬು ತಾಹಿರ್ ಬಲಿಯಾದ ಶಂಕಿತ ಉಗ್ರನಾಗಿದ್ದಾನೆ. ಈತ ಕೇರಳದ ಪಾಲ್ಛಾಟ್ ನಿವಾಸಿ ಎಂಬುದಾಗಿ ತಿಳಿದುಬಂದಿದೆ.

    ಅಬು ತಾಹಿರ್, ಕಳೆದ 2013ರಲ್ಲಿ ಉಮ್ರಾಗೆ ತೆರಳಿದ್ದು, ಆ ಬಳಿಕ ತಾಯ್ನಾಡಿಗೆ ಮರಳಿಲ್ಲ. ಆದ್ರೆ ಇದೀಗ ಶಾರ್ಜಾದಲ್ಲಿರುವ ಸಂಬಂಧಿಕರೊಬ್ಬರಿಗೆ ಅಬುತಾಹಿರ್ ಮೃತಪಟ್ಟಿರುವ ಕುರಿತು ಏಪ್ರಿಲ್ 4 ರಂದು ಮೆಸೇಜ್ ಬಂದಿತ್ತು.

    ಮೆಸೇಜ್ ನಲ್ಲಿ `ಐಸಿಸ್ ಸಂಘಟನೆಗೆ ಸೇರಿದ್ದ ಕೇರಳ ಮೂಲದ ಅಬು ತಾಹಿರ್ ಅಫ್ಗಾನಿಸ್ತಾನದ ನಂಗಾರ್ಹರ್ ಪ್ರಾಂತ್ಯದಲ್ಲಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದಾನೆ’ ಅಂತಾ ಬರೆದಿತ್ತು.

    ಇದಕ್ಕೂ ಮೊದಲು ಅಂದ್ರೆ ಫೆಬ್ರವರಿಯಲ್ಲಿ ಇದೇ ಸಂಘಟನೆಯ ಉಗ್ರನೊಬ್ಬ ಅಫ್ಘಾನಿಸ್ತಾನ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಬಲಿಯಾಗಿದ್ದನು. ಕಳೆದ ಒಂದು ವರ್ಷದಿಂದ ಕ್ರಿಶ್ಚಿಯನ್ ಹಾಗೂ ಹಿಂದೂ ಕುಟುಂಬದಿಂದ ಬಂದ ಸುಮಾರು 12 ಮಂದಿ ಇಸ್ಲಾಂಗೆ ಮತಾಂತರಗೊಂಡು ಬಳಿಕ ಇಂತಹ ಸಂಘಟನೆಗಳಿಗೆ ಸೇರುತ್ತಿದ್ದಾರೆ. ಇದರಲ್ಲಿ ಇಬ್ಬರು ಮೆಸೇಜ್ ಹಾಗೂ ವಾಯ್ಸ್ ಮೆಸೇಜ್ ಮೂಲಕ ತಾವು ಸಂಘಟನೆಗಳಿಗೆ ಸೇರುವ ಬಗ್ಗೆ ತಮ್ಮ ಕುಟುಂಬಕ್ಕೂ ತಿಳಿಸಿದ್ದಾರೆ ಅಂತಾ ವರದಿಯಾಗಿದೆ.

  • ಕೇರಳ: ಮೀನು ಸಾರು ತಿಂದು 400 ಸಿಆರ್‍ಪಿಎಫ್ ಯೋಧರು ಅಸ್ವಸ್ಥ

    ಕೇರಳ: ಮೀನು ಸಾರು ತಿಂದು 400 ಸಿಆರ್‍ಪಿಎಫ್ ಯೋಧರು ಅಸ್ವಸ್ಥ

    ತಿರುವನಂತಪುರಂ: ಮೀನು ಸಾರು ತಿಂದ ಬಳಿಕ 400 ಸಿಆರ್‍ಪಿಎಫ್ ಯೋಧರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಕೇರಳದ ಪಲ್ಲಿಪುರಂನಲ್ಲಿ ನಡೆದಿದೆ.

    ಶನಿವಾರದಂದು ಆಹಾರ ಸೇವಿಸಿದ ಬಳಿಕ ಯೋಧರಿಗೆ ವಾಂತಿ ಮತ್ತು ಬೇಧಿ ಆರಂಭವಾಗಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀನು ಸಾರು ತಿಂದ ಬಳಿಕ ಯೋಧರು ಅಸ್ವಸ್ಥರಾಗಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಫುಡ್ ಪಾಯ್ಸನಿಂಗ್‍ನಿಂದ ಈ ರೀತಿ ಆಗಿರಬಹುದೆಂದು ಶಂಕಿಸಲಾಗಿದೆ.

    ಅಸ್ವಸ್ಥರಾದ 400 ಮಂದಿಯಲ್ಲಿ 109 ಯೋಧರು ತಿರುವನಂತಪುರಂ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ರಾತ್ರಿ ರಾಜ್ಯ ಆರೋಗ್ಯ ಮಂತ್ರಿ ಕೆಕೆ ಶೈಲಜಾ ಆಸ್ಪತ್ರೆಗೆ ಭೇಟಿ ನೀಡಿ ಯೋಧರ ಆರೋಗ್ಯ ವಿಚಾರಿಸಿದ್ದಾರೆ.

    ಘಟನೆಯ ಬಗ್ಗೆ ಸಿಆರ್‍ಪಿಎಫ್ ಮಹಾನಿರ್ದೇಶಕ ಸುದೀಪ್ ಲಕ್ತಾಕಿಯಾ ರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿ, ತರಬೇತಿ ಶಿಬಿರಕ್ಕಾಗಿ ತೆರಳಿದ್ದ ಯೋಧರು ಮೀನಿನಿಂದ ಮಾಡಲಾದ ಆಹಾರ ಸೇವಿಸಿದ್ದರು. ಅನಂತರ ಅವರಿಗೆ ವಾಂತಿಯಾಗಿ ಅಸ್ವಸ್ಥರಾಗಿದ್ದಾರೆ ಎಂದು ಹೇಳಿದ್ದಾರೆ.

    ಅಸ್ವಸ್ಥರಾದ ಯೋಧರಿಗೆ ತರಬೇತಿ ಶಿಬಿರದಲ್ಲಿ ಕೂಡಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಹುತೇಕ ಯೋಧರನ್ನು ಈಗಾಗಲೇ ಡಿಸ್ಚಾರ್ಜ್ ಮಾಡಲಾಗಿದ್ದು, ಕೆಲವರು ಮಾತ್ರ ಆಸ್ಪತ್ರೆಯಲ್ಲಿದ್ದಾರೆ.

    ಯೋಧರಿಗೆ ನೀಡಿದ ಆಹಾರದಲ್ಲಿ ಬಳಸಲಾದ ವಸ್ತುವಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೆವೆ. ಮೀನು ಹಾಳಾಗಿರುವ ಕಾರಣ ಈ ರೀತಿ ಆಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಹೇಳಲಾಗಿದೆ. ತರಬೇತಿ ಕೇಂದ್ರದ ಉಸ್ತುವಾರಿ ವಹಿಸಿರುವವರು ಈ ಪ್ರಕರಣದ ಬಗ್ಗೆ ಪರಿಶೀಲಿಸುತ್ತಿದ್ದಾರೆ ಎಂದು ಸುದೀಪ್ ಲಕ್ತಾಕಿಯಾ ಹೇಳಿದ್ದಾರೆ.

  • ಈ ಬಾರಿಯ ಪರೀಕ್ಷೆಯಲ್ಲಿ ಪಿಯು ಬೋರ್ಡ್ ಪಾಸ್

    ಈ ಬಾರಿಯ ಪರೀಕ್ಷೆಯಲ್ಲಿ ಪಿಯು ಬೋರ್ಡ್ ಪಾಸ್

    ಬೆಂಗಳೂರು: ಕಳೆದ ವರ್ಷ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ ಭಾರೀ ಟೀಕೆಗೆ ಗುರಿಯಾಗಿದ್ದ ಪಿಯು ಬೋರ್ಡ್ ಈ ಬಾರಿಯ ಪರೀಕ್ಷೆಯಲ್ಲಿ ಪಾಸಾಗಿದೆ.

    2016-17ನೇ ಸಾಲಿನ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಸೋಮವಾರಕ್ಕೆ ಮುಕ್ತಾಯವಾಯಿತು. ಇಂದು ಇಂಗ್ಲಿಷ್ ವಿಷಯದ ಪರೀಕ್ಷೆ ನಡೆದಿದ್ದು ನಾಲ್ಕು ಜನ ಡಿಬಾರ್ ಆಗಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಶಿಖಾ ಮಾತನಾಡಿ, ಈ ಬಾರಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದೇ ಪಿಯು ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಮುಂದಿನ ಏಪ್ರಿಲ್ 5ರಿಂದ ಮೌಲ್ಯಮಾಪನ ಆರಂಭವಾಗಲಿದೆ. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯನ್ನು 6.84 ಲಕ್ಷ ವಿದ್ಯಾರ್ಥಿಗಳು ಬರೆದಿದ್ದು, ಇಂದಿನದ್ದು ಸೇರಿ ಒಟ್ಟು 38 ಮಂದಿ ವಿದ್ಯಾರ್ಥಿಗಳು ಡಿಬಾರ್ ಆಗಿದ್ದಾರೆ ಎಂದು ತಿಳಿಸಿದರು.

    ಈ ಬಾರಿ ಏನೇನು ಸುಧಾರಣೆಯಾಗಿತ್ತು?
    ಕಳೆದ ವರ್ಷ ರಸಾಯನ ವಿಜ್ಞಾನ ಪ್ರಶ್ನೆಪತ್ರಿಕೆ ಎರಡು ಬಾರಿ ಸೋರಿಕೆಯಾದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿಡುವ ಖಜಾನೆ (ಸ್ಟ್ರಾಂಗ್ ರೂಂ) ಬಳಿ ಯಾರದ್ದೇ ಚಲನವಲನ ಕಂಡರೂ ತಕ್ಷಣ ಅದರ ವಿಡಿಯೋ ತುಣುಕು ಸಮೇತ `ಅಲರ್ಟ್’ ಮಾಡುವಂತಹ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಈ ಬಾರಿ ಅಳವಡಿಸಿತ್ತು.

    ಖಜಾನೆಯ ಕಣ್ಗಾವಲು ಪ್ರದೇಶದ ವ್ಯಾಪ್ತಿಯೊಳಗೆ ಯಾರದ್ದೇ ಚಲನವಲನ ಕಂಡರೂ ಅದರ 15 ಸೆಕೆಂಡ್ ವಿಡಿಯೋ ತುಣುಕು ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಖಜಾನೆ ಅಧಿಕಾರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಮತ್ತು ಜಿಲ್ಲಾ ಉಪನಿರ್ದೇಶಕರ ಮೊಬೈಲ್‍ಗಳಿಗೆ ಸಂದೇಶ ರವಾನೆ ಆಗುವಂತಹ ಈ ವ್ಯವಸ್ಥೆಯಿಂದಾಗಿ ಈ ಬಾರಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ.

    ಅಷ್ಟೇ ಅಲ್ಲದೇ ಜಿಲ್ಲಾ ಕೇಂದ್ರಗಳಲ್ಲಿರುವ ಪ್ರಶ್ನೆಪತ್ರಿಕೆಗಳನ್ನು ದೂರದ ಪರೀಕ್ಷಾ ಕೇಂದ್ರಗಳಿಗೂ ತಲುಪಲು ಸಾಧ್ಯವಾಗುವಂತೆ ಪರೀಕ್ಷಾ ಸಮಯವನ್ನು ಈ ಬಾರಿ ಬದಲಾವಣೆ ಮಾಡಲಾಗಿತ್ತು. ಹಿಂದಿನ ವರ್ಷ ಪರೀಕ್ಷೆಗಳು ಬೆಳಿಗ್ಗೆ 9ರಿಂದ ಆರಂಭವಾಗುತ್ತಿದ್ದರೆ, ಈ ಬಾರಿ ಬೆಳಿಗ್ಗೆ 10.15ರಿಂದ ಆರಂಭಗೊಂಡು ಮಧ್ಯಾಹ್ನ 1.30ರವರೆಗೆ ನಡೆದಿತ್ತು.

    ಕೇರಳದಲ್ಲಿ ಸೋರಿಕೆ: ಕೇರಳದಲ್ಲಿ ಮಾರ್ಚ್ 25ರಂದು ಎಸ್‍ಎಸ್‍ಎಲ್‍ಸಿಯ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಮಾರ್ಚ್ 31ರಂದು ಮತ್ತೊಮ್ಮೆ ಪರೀಕ್ಷೆ ನಡೆಯಲಿದೆ.

    ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಪಿಯು ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದಕ್ಕೆ ಕಾಲೇಜಿನ ಮಾನ್ಯತೆ ರದ್ದು

     

     

  • ನ್ಯೂಸ್ ಚಾನೆಲ್ ಉದ್ಘಾಟನಾ ದಿನವೇ ಸೆಕ್ಸ್ ಆಡಿಯೋ ಸ್ಫೋಟ – ಸಚಿವ ರಾಜೀನಾಮೆ

    ನ್ಯೂಸ್ ಚಾನೆಲ್ ಉದ್ಘಾಟನಾ ದಿನವೇ ಸೆಕ್ಸ್ ಆಡಿಯೋ ಸ್ಫೋಟ – ಸಚಿವ ರಾಜೀನಾಮೆ

    ತಿರುವನಂತಪುರಂ: ಇಂದು ಉದ್ಘಾಟನೆಗೊಂಡ ಮಲಯಾಳಂ ನ್ಯೂಸ್ ಚಾನೆಲೊಂದು ಬ್ರೇಕ್ ಮಾಡಿದ ಸೆಕ್ಸ್ ಆಡಿಯೋ ಕ್ಲಿಪ್ ನ್ಯೂಸ್‍ನಿಂದಾಗಿ ಕೇರಳದ ಸಚಿವರೊಬ್ಬರು ರಾಜೀನಾಮೆ ನೀಡಿದ್ದಾರೆ.

    ಕೇರಳದ ನ್ಯೂಸ್ ಚಾನೆಲ್‍ಗಳ ಸಾಲಿಗೆ ಸೇರ್ಪಡೆಯಾಗಲು ಮಂಗಳಂ ಟಿವಿ ಇಂದು ಉದ್ಘಾಟನಾ ಕಾರ್ಯಕ್ರಮ ನಿಗದಿ ಮಾಡಿತ್ತು. ಇಂದು ಬೆಳಗ್ಗೆ ಚಾನೆಲ್ ಅಧಿಕೃತ ಪ್ರಸಾರ ಆರಂಭವಾಗುತ್ತಿದ್ದಂತೆಯೇ ಮಂಗಳಂ ಟಿವಿ ಚಾನೆಲ್, ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಅವರು ಸಹಾಯ ಯಾಚಿಸಿ ತನ್ನ ಬಳಿ ಬಂದಿದ್ದ ಮಹಿಳೆಯ ಜೊತೆ ಫೋನ್‍ನಲ್ಲಿ ಅಶ್ಲೀಲವಾಗಿ ಕಾಮೋತ್ತೇಜಿತನಾಗಿ ಮಾತನಾಡುತ್ತಿದ್ದ ಆಡಿಯೋವನ್ನು ಬಿಡುಗಡೆ ಮಾಡಿತು. ಅಲ್ಲದೆ ಇಂದು ಸ್ಫೋಟಕ ಸುದ್ದಿಯೊಂದಿಗೆ ಚಾನೆಲ್ ಪ್ರಸಾರ ಕಾರ್ಯ ಶುರು ಮಾಡಲಿದೆ ಎಂದು ಮಂಗಳಂ ದಿನ ಪತ್ರಿಕೆಯಲ್ಲಿ ವರದಿಯನ್ನೂ ಪ್ರಕಟಿಸಿತ್ತು.

    ಈ ಆಡಿಯೋ ಕ್ಲಿಪ್ ಮಂಗಳಂ ಟಿವಿ ಚಾನೆಲ್ ನಲ್ಲಿ ಬರುತ್ತಿದ್ದಂತೆಯೇ ಕೇರಳ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆದವು. ಕೇರಳ ಸಿಎಂ ಪಿಣರಾಯಿ ವಿಜಯನ್ ಇದೊಂದು ಗಂಭೀರ ವಿಚಾರ. ಎಲ್ಲಾ ಮಾಹಿತಿ ಪಡೆದ ಬಳಿಕ ಕ್ರಮಕೈಗೊಳ್ಳುತ್ತೇನೆ ಎಂದೂ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

    ಆದರೆ ಮಧ್ಯಾಹ್ನ 3 ಗಂಟೆಗೆ ಸ್ವತಃ ಎ.ಕೆ.ಶಶೀಂದ್ರನ್ ಅವರೇ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಘೋಷಿಸಿದರು. ಆದರೆ ಈ ಆಡಿಯೋದಲ್ಲಿರುವುದು ತನ್ನ ಧ್ವನಿ ಹೌದೋ ಅಲ್ಲವೋ ಎಂಬ ಬಗ್ಗೆ ಶಶೀಂದ್ರನ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಸಹಾಯ ಯಾಚಿಸಿ ಬಂದವರಿಗೆ ಉತ್ತಮ ರೀತಿಯಲ್ಲೇ ಪ್ರತಿಕ್ರಿಯಿಸಿದ್ದೇನೆ. ಈ ಪ್ರಕರಣದ ಬಗ್ಗೆ ಸರ್ಕಾರ ಯಾವ ತನಿಖಾ ಸಂಸ್ಥೆಯಿಂದ ಬೇಕಾದರೂ ತನಿಖೆ ನಡೆಸಲಿ ಎಂದು ಅವರು ಹೇಳಿದರು.

    ಆಡಿಯೋದಲ್ಲೇನಿದೆ?: ಮಂಗಳಂ ಟಿವಿ ಚಾನೆಲ್‍ನಲ್ಲಿ ಪ್ರಸಾರವಾದ ಆಡಿಯೋದಲ್ಲಿ ವ್ಯಕ್ತಿಯೊಬ್ಬರು ಮಹಿಳೆಯ ಜೊತೆಗೆ ಲೈಂಗಿಕಾಸಕ್ತಿಯಿಂದ ಮಾತನಾಡುತ್ತಿದ್ದಾರೆ. ಯಾರ ಜೊತೆಗೆ ಆ ವ್ಯಕ್ತಿ ಮಾತನಾಡುತ್ತಾರೆ ಎಂದು ಆಡಿಯೋದಲ್ಲಿ ಗೊತ್ತಾಗುತ್ತಿಲ್ಲ. ಆದರೆ ಈ ವ್ಯಕ್ತಿ ಮಾತ್ರ ನಾನು ಗೋವಾದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದೇನೆ ಎಂದು ಮಾತು ಆರಂಭಿಸಿ ಮುಂದೆ ಹಂತ ಹಂತವಾಗಿ ಸೆಕ್ಸ್ ವಿಚಾರಗಳನ್ನು ಪ್ರಸ್ತಾಪಿಸುತ್ತಾ ಹೋಗುತ್ತಾರೆ. ಈ ಆಡಿಯೋ ಯಾರೂ ಕೇಳಿಸಿಕೊಳ್ಳಲಾಗದಷ್ಟು ಅಸಹ್ಯಕರವಾಗಿದೆ ಎನ್ನಲಾಗಿದೆ.

    ಸಚಿವರ ವರ್ತನೆಗೆ ಕಾಂಗ್ರೆಸ್ ಮುಖಂಡ ರಮೇಶ್ ಚೆನ್ನಿತ್ತಲ ಪ್ರತಿಕ್ರಿಯಿಸಿ ಈ ರೀತಿಯ ಘಟನೆ ನಡೆಯಬಾರದಿತ್ತು. ರಾಜ್ಯದಲ್ಲಿ ಎಲ್‍ಡಿಎಫ್ ಸರ್ಕಾರ ಬಂದ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಈ ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

    ಕೇರಳದಲ್ಲಿ ಎಲ್‍ಡಿಎಫ್ ಸರ್ಕಾರಕ್ಕೆ ಬಂದ ನಂತರ ಸಚಿವರು ರಾಜೀನಾಮೆ ನೀಡುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ 2016ರ ಅಕ್ಟೋಬರ್ ನಲ್ಲಿ ಕೈಗಾರಿಕಾ ಸಚಿವ ಇ.ಪಿ.ಜಯರಾಜನ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಪ್ರತಿ ವಾರ ಮಂಗಳ, ಬಾಲಮಂಗಳನ್ನು ಹೊರ ತರುವ ಮಂಗಳ ಪಬ್ಲಿಕೇಶನ್ಸ್ ನವರು ಈ ವಾಹಿನಿಯನ್ನು ಆರಂಭಿಸಿದ್ದಾರೆ.

    https://www.youtube.com/watch?v=_FDOSa_p8-o&feature=youtu.be

  • ಕೈಗೆ ಮತ್ತೊಂದು ಶಾಕ್: ಕೇರಳ ಯೂಥ್ ಕಾಂಗ್ರೆಸ್ ಮುಖಂಡ ರಾಜೀನಾಮೆ

    ಕೈಗೆ ಮತ್ತೊಂದು ಶಾಕ್: ಕೇರಳ ಯೂಥ್ ಕಾಂಗ್ರೆಸ್ ಮುಖಂಡ ರಾಜೀನಾಮೆ

    ತಿರುವನಂತಪುರಂ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಡೆಯನ್ನು ಬಹಿರಂಗವಾಗಿ ಟೀಕಿಸಿದ್ದ ಕೇರಳದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಿಆರ್ ರಮೇಶ್ ಪಕ್ಷಕ್ಕೆ ಗುಡ್‍ಬೈ ಹೇಳಿದ್ದಾರೆ.

    ಹಿರಿಯ ನಾಯಕರ ಗುಂಪುಗಾರಿಕೆಯಿಂದ ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಮಾಧ್ಯಮಗಳಿಗೆ ರಮೇಶ್ ತಿಳಿಸಿದ್ದಾರೆ.

    ನಾನು ರಾಜಕೀಯದಿಂದ ಹೊರಬರಲು ಇದು ಸರಿಯಾದ ಸಮಯ. ರಾಜೀನಾಮೆ ನೀಡಿದ್ದೇನೆ ಎಂದಲ್ಲಿಗೆ ಬೇರೆ ಪಕ್ಷಕ್ಕೆ ಸೇರುತ್ತಿದ್ದೇನೆ ಎಂದರ್ಥವಲ್ಲ. ಕೆಲ ವರ್ಷಗಳಿಂದ ನಡೆಯುತ್ತಿರುವ ಗುಂಪುಗಾರಿಕೆಯಿಂದ ನಾನು ಬೇಸತ್ತು ಹೋಗಿದ್ದೇನೆ. ಪಕ್ಷದಲ್ಲಿ ಯಾವುದೇ ಸುಧಾರಣೆ ಕಾಣುತ್ತಿಲ್ಲ ಎಂದು ಟೀಕಿಸಿದರು.

    ಪಂಚರಾಜ್ಯಗಳ ಫಲಿತಾಂಶದ ಬಳಿಕ ಸಿಆರ್ ರಮೇಶ್ ಫೇಸ್‍ಬುಕ್‍ನಲ್ಲಿ ರಾಹುಲ್ ಗಾಂಧಿ ಅವರನ್ನು ಟೀಕಿಸಿ ಪೋಸ್ಟ್ ಅಪ್ಲೋಡ್ ಮಾಡಿದ್ದರು.

    2016ರ ವಿಧಾನಸಭಾ ಚುನಾವಣೆಯಲ್ಲಿ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿ ಕ್ಷೇತ್ರದಿಂದ ಮಹೇಶ್ ಸ್ಪರ್ಧಿಸಿದ್ದರು. ಆದರೆ ಸಿಪಿಐ ಅಭ್ಯರ್ಥಿ ಎದುರು 1,759 ಮತಗಳ ಅಂತರದಿಂದ ಸೋತಿದ್ದರು.

    ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್‍ಗೆ ಗುಡ್‍ಬೈ ಹೇಳುವ ನಾಯಕರಲ್ಲಿ ಸಿಆರ್ ರಮೇಶ್ ಮೊದಲೆನಲ್ಲ. ಮಾರ್ಚ್ 16ರಂದು ಗೋವಾ ಕಾಂಗ್ರೆಸ್‍ನ ಹಿರಿಯ ನಾಯಕ ಪ್ರತಾಪ್ ಸಿಂಗ್ ರಾಣೆ ಅವರ ಮಗ ವಿಶ್ವಜಿತ್ ರಾಣೆ ಅವರು ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ಕಾರ್ಯವೈಖರಿಯ ಬಗ್ಗೆ ಬೇಸತ್ತು ಹೋಗಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಮುಂದುವರಿಯುವುದಿಲ್ಲ. ಹೊಸದಾಗಿ ಚುನಾವಣೆ ಎದುರಿಸುತ್ತೇನೆ ಎಂದು ವಿಶ್ವಜಿತ್ ರಾಣೆ ಮಾಧ್ಯಮಗಳಿಗೆ ತಿಳಿಸಿದ್ದರು.