Tag: kerala

  • ಹೆಣ್ಣು ಮಗು ಹುಟ್ಟಿದ್ರೆ 1 ಗ್ರಾಂ ಚಿನ್ನ ಸಿಗುತ್ತೆ!

    ಹೆಣ್ಣು ಮಗು ಹುಟ್ಟಿದ್ರೆ 1 ಗ್ರಾಂ ಚಿನ್ನ ಸಿಗುತ್ತೆ!

    ತಿರುವನಂತಪುರ: ಹೆಣ್ಣು ಮಗು ಹುಟ್ಟಿದ್ರೆ ಸಾಕು ಶಾಪ ಹಾಕುವ ಅಥವಾ ಹೆಣ್ಣು ಭ್ರೂಣವನ್ನು ಕಸದ ಬುಟ್ಟಿಗೆ ಎಸೆಯೋ ಅನೇಕ ಘಟನೆಗಳು ಪ್ರತಿನಿತ್ಯ ನಡೆಯುತ್ತವೆ. ಅಂತದ್ದರಲ್ಲಿ ಕೇರಳದ ವ್ಯಕ್ತಿಯೊಬ್ಬರು ಹೆಣ್ಣು ಮಗು ಹುಟ್ಟಿದ್ರೆ ಚಿನ್ನ ನೀಡೋ ಮೂಲಕ ರಕ್ಷಣೆಗೆ ನಿಂತಿದ್ದಾರೆ.

    ಹೌದು. ಕೇರಳದ ಮುಸ್ಲಿಂ ಪ್ರಾಬಲ್ಯವಿರುವ ಜಿಲ್ಲೆಯಲ್ಲಿ ಹೆಣ್ಣು ಮಗು ಹುಟ್ಟಿದ ಸಂತಸದ ಜೊತೆಗೆ ಮಗುವಿನ ಕುಟುಂಬಕ್ಕೆ ಈ ಉಡುಗೊರೆಯನ್ನು ನೀಡುತ್ತಾರೆ. ಮಲಪ್ಪುರಂ ಜಿಲ್ಲೆಯ ಪುಸಭೆ ಕೌನ್ಸಿಲರ್ 38 ವರ್ಷ ವಯಸ್ಸಿನ ಅಬ್ದುಲ್ ರಹೀಮ್ ಎಂಬವರೇ ಈ ಮಹಾನ್ ಕಾರ್ಯ ಮಾಡುತ್ತಿರೋ ವ್ಯಕ್ತಿಯಾಗಿದ್ದಾರೆ. ಇವರು ತನ್ನ ವಾರ್ಡ್ ನಲ್ಲಿ ಯಾವುದೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ರೆ ಅದರ ಸಂಭ್ರಮಾಚರಣೆಯ ಜೊತೆಗೆ ಆ ಕುಟುಂಬಕ್ಕೆ ಒಂದು ಗ್ರಾಂ ಚಿನ್ನ ನೀಡುತ್ತಿದ್ದಾರೆ. ರಹೀಮ್ ಅವರು ಈ ಕೆಲಸವನ್ನು ಕಳೆದ 2 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.

    `ಹುಟ್ಟಿದ ಮಗು ಹೆಣ್ಣಾದ್ರೆ ಕೆಲ ಕುಟುಂಬಗಳು ಶಪಿಸುವುದನ್ನು ನಾನು ನೋಡಿದ್ದೇನೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಯಾಕಂದ್ರೆ ಹೆಣ್ಣು ಮಗು ಮನೆಗೆ ಸಂಪತ್ತನ್ನು ತರುತ್ತಾಳೆ. ಹೆಚ್ಚಿನ ಜನರಿಗೆ ಈ ವಿಚಾರ ತಿಳಿದಿಲ್ಲ. ಹೆಣ್ಣು ಇಲ್ಲದಿದ್ದಲ್ಲಿ ಈ ಜಗತ್ತನ್ನು ಕಲ್ಪನೆ ಮಾಡಲು ಸಾಧ್ಯವೇ ಅಂತ 4 ವರ್ಷದ ಮಗುವಿನ ತಂದೆಯಾಗಿರೋ ಅಬ್ದುಲ್ ರಹೀಮ್ ಪ್ರಶ್ನಿಸಿದ್ದಾರೆ.

    ರಹೀಮ್ ಅವರು ಇಲ್ಲಿಯವರೆಗೆ ಸುಮಾರು 16 ಹೆಣ್ಣು ಮಗುವಿನ ತಾಯಂದಿರಿಗೆ ಈ ಉಡುಗೊರೆಯನ್ನು ನೀಡಿದ್ದಾರೆ. ಅಲ್ಲದೇ ಈ ಚಿನ್ನದ ನಾಣ್ಯದ ಪ್ರಮಾಣವನ್ನು ಎರಡಷ್ಟು ಹೆಚ್ಚಿಸಲು ಚಿಂತಿಸಿದ್ದಾರೆ. ಹುಟ್ಟಿದ ಮಗು ಹೆಣ್ಣಾದ್ರೆ ಸಾಕು ಆಸ್ಪತ್ರೆಯಿಂದಲೇ ರಹೀಮಾನ್ ಅವರಿಗೆ ಕರೆ ಬರುತ್ತದೆ. ಕೂಡಲೇ ಅವರು ಆಸ್ಪತ್ರೆಗೆ ತೆರಳಿ ಅವರು ಚಿನ್ನದ ನಾಣ್ಯವನ್ನು ನೀಡಿ ಗಿಫ್ಟ್ ನೀಡುತ್ತಾರೆ.

    ಮಹಿಳೆಗೆ ಹೆಣ್ಣು ಮಗು ಹುಟ್ಟಿದ ವಿಚಾರವನ್ನು ನಮಗೂ ತಿಳಿಸಿ, ನಾವು ಕೂಡ ಚಿನ್ನ ಕೊಡುತ್ತೇವೆ ಎಂದು ಕೊಟ್ಟಕ್ಕಲ್ ನ ಪ್ರಮುಖ ಆಭರಣ ಮಳಿಗೆಗಳು ರಹೀಮ್ ಅವರೆ ಮುಂದೆ ಆಫರ್ ಪ್ರಸ್ತಾಪಿಸಿದ್ದವು. ಆದ್ರೆ ರಹೀಮಾನ್ ಮಳಿಗೆಗಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ನಾನು ಯಾವುದೇ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಅಂತ ಹೇಳಿದ್ದಾರೆ.

    ಪುರಸಭೆ ಕೌನ್ಸಿಲರ್ ಆಗಿರೋ ನನಗೆ ತಿಂಗಳಿಗೆ 8 ಸಾವಿರದಿಂದ 10 ಸಾವಿರ ಸಂಬಳ ಬರುತ್ತದೆ. ಒಂದು ಗ್ರಾಂ ನಾಣ್ಯಕ್ಕೆ 2500 ರೂ. ವೆಚ್ಚವಾಗುತ್ತದೆ. ನನ್ನ ಸಂಬಳದ ಸಣ್ಣ ಮೊತ್ತವನ್ನು ಇದಕ್ಕಾಗಿ ನಾನು ಖರ್ಚ ಮಾಡಬಲ್ಲೆ ಎಂದು ರಹೀಮ್ ಹೇಳಿದ್ದಾರೆ.

    ದೇಶದ ಇತರ ಭಾಗಗಳಿಗಿಂತ ಕೇರಳದಲ್ಲಿ 1000 ಪುರುಷರಿಗೆ 1084 ಮಹಿಳೆಯರಿದ್ದಾರೆ. ಆದರೆ ಜನನ ದರ ಇಳಿಕೆಯಾಗುತ್ತಿದ್ದು, ಲಿಂಗಾನುಪಾತ ಇಳಿಕೆಯಾಗುವ ಸಾಧ್ಯತೆಯಿದೆ.

  • ನಾನು ಯಾವ ಟೈಂನಲ್ಲಾದ್ರೂ ಕೊಲೆಯಾಗ್ಬಹುದು- ಸಹಾಯಕ್ಕೆ ಕೇರಳ ಲವ್ ಜಿಹಾದ್ ಸಂತ್ರಸ್ತೆಯಿಂದ ಮನವಿ

    ನಾನು ಯಾವ ಟೈಂನಲ್ಲಾದ್ರೂ ಕೊಲೆಯಾಗ್ಬಹುದು- ಸಹಾಯಕ್ಕೆ ಕೇರಳ ಲವ್ ಜಿಹಾದ್ ಸಂತ್ರಸ್ತೆಯಿಂದ ಮನವಿ

    ತಿರುವನಂತಪುರ: ಭಾರೀ ವಿವಾದಕ್ಕೀಡಾಗಿ ಕೋರ್ಟ್ ಮೆಟ್ಟಿಲೇರಿದ್ದ ಕೇರಳದ ಲವ್ ಜಿಹಾದ್ ಪ್ರಕರಣದ ಪ್ರಮುಖ ಕೇಂದ್ರ ಬಿಂದುವಾಗಿದ್ದ ಯುವತಿ ಇದೀಗ ಮತ್ತೊಂದು ಹೊಸ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.

    ಯುವತಿ ಅಖಿಲಾ ಅಶೋಕನ್ ಅಥವಾ ಹಾದಿಯಾ ಆಗಸ್ಟ್ 17ರಂದು ಈ ರೀತಿ ಮನವಿ ಮಾಡಿಕೊಂಡಾಗ ಹೋರಾಟಗಾರ ರಾಹುಲ್ ಈಶ್ವರ್ ವಿಡಿಯೋ ಮಾಡಿದ್ದು, ಗುರುವಾರ ಬಹಿರಂಗವಾಗಿದೆ.

    ವಿಡಿಯೋದಲ್ಲೇನಿದೆ?: `ನಾನು ನಾಳೆ ಅಥವಾ ನಾಳಿದ್ದು ಹೀಗೆ ಯಾವುದೇ ಸಮಯದಲ್ಲಿ ಇಲ್ಲಿ ಕೊಲೆಯಾಗಬಹುದು ಅನ್ನೋ ನಂಬಿಕೆ ನನ್ನಲ್ಲಿದೆ. ನನಗೆ ಗೊತ್ತು ತಂದೆಗೆ ನನ್ನ ಮೇಲೆ ವಿಪರೀತ ಸಿಟ್ಟಿದೆ. ನಾನು ನಡೆದುಕೊಂಡು ಹೋಗುವಾಗ ಅವರು ಹೊಡೆಯುತ್ತಾರೆ. ಹಾಗೆಯೇ ಒದೆಯುತ್ತಾರೆ. ಇದರಿಂದ ತಲೆ ಅಥವಾ ನನ್ನ ದೇಹದ ಯಾವುದೇ ಭಾಗಕ್ಕಾಗಾದ್ರೂ ಗಂಭೀರ ಗಾಯಗಳಾಗಿ ಸಾಯುತ್ತೇನೆ. ಹೀಗಾಗಿ ನನ್ನನ್ನು ಇಲ್ಲಿಂದ ಹೊರಗಡೆ ಕರೆದುಕೊಂಡು ಹೋಗಿ ಅಂತ ವಿಡಿಯೋದಲ್ಲಿ ಆಕೆ ಮನವಿ ಮಾಡಿದ್ದಾಳೆ.

    24 ವರ್ಷದ ಹೋಮಿಯೋಪತಿ ವೈದ್ಯೆ ಅಖಿಲ ಇಸ್ಲಾಂಗೆ ಮತಾಂತರಗೊಂಡು ಹೆಸರನ್ನು ಹಾದಿಯಾ ಎಂದು ಬದಲಾಯಿಸಿಕೊಂಡು ಮುಸ್ಲಿಂ ಯುವಕ ಶಫಿನ್ ಜಹಾನ್ ಎಂಬಾತನ ಜತೆ 2016ರಲ್ಲಿ ವಿವಾಹವಾಗಿದ್ದಳು. ಕೇರಳದ ಮಲಪ್ಪುರಂ ಜಿಲ್ಲೆಯಿಂದ ಹಾದಿಯಾಳನ್ನು ಅಪಹರಿಸಿ, ಆಕೆಯ ಗೆಳೆಯರು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಲಾಗಿದೆ ಅಂತ ಹಾದಿಯಾ ತಂದೆ ಆರೋಪಿಸಿದ್ದರು.

    ಈ ಕುರಿತು ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಇದೊಂದು ಲವ್ ಜಿಹಾದ್ ಎಂದು ಬಣ್ಣಿಸಿ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕೇರಳ ಪೊಲೀಸರಿಗೆ ಆದೇಶ ನೀಡಿತ್ತು. ಅಲ್ಲದೇ ಯುವಕ ಶಫಿನ್ ಜಾಹನ್ ಗೆ ಉಗ್ರರೊಂದಿಗೆ ಸಂಪರ್ಕವಿರುವುದನ್ನು ಕೋರ್ಟ್ ಒಪ್ಪಿಕೊಂಡಿತ್ತು. ಕೇರಳದ ಹಿಂದೂ ಯುವತಿಯೊಬ್ಬಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿಂ ಯುವಕನ ಜತೆ ವಿವಾಹವಾದ ಪ್ರಕರಣದ ಬಗ್ಗೆ ಎನ್‍ಐಎ ತನಿಖೆ ನಡೆಸಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಪ್ರಕರಣದ ವಿಚಾರವನ್ನು ಈ ವರ್ಷದ ಆರಂಭದಲ್ಲಿ ಕೈಗೆತ್ತಿಕೊಂಡ ಹೈ ಕೋರ್ಟ್ ವಯಸ್ಕರ ಒಪ್ಪಿಗೆ ಇಲ್ಲದೇ ಈ ಮದುವೆ ನಡೆಯಲು ಹೇಗೆ ಸಾಧ್ಯ ಅಂತ ಪ್ರಶ್ನಿಸಿತ್ತು.

    ಯುವತಿ ಹಾದಿಯಾ ಈ ಮೊದಲು ಒಂದು ವಿಡಿಯೋ ಬಿಡುಗಡೆ ಮಾಡಿದ್ದು ಅದರಲ್ಲಿ `ಮತಾಂತರಗೊಂಡ ಪ್ರಕರಣ ಬೆಳಕಿಗೆ ಬಳದ ಬಳಿಕ ನನ್ನ ಮನೆಯವರು ನನ್ನ ಕೂಡಿ ಹಾಕಿದ್ದು. ಎಲ್ಲೂ ಹೊರ ಹೊಗುವಂತಿಲ್ಲ. ಅಲ್ಲದೇ ನನ್ನ ಮನೆಯ ಹೊರಗಡೆ ಪೋಲೀಸ್ ಅಧಿಕಾರಿಗಳು ಕೂಡ ಕಾವಲು ಕಾಯುತ್ತಿದ್ದಾರೆ. ಇಲ್ಲಿ ಹೇಗೆ ಜೀವನ ಮಾಡಲು ಸಾಧ್ಯ? ಇದು ನನ್ನ ಜೀವನಾನಾ? ಅಂತ ತನ್ನ ಅಲವತ್ತುಕೊಂಡಿದ್ದಳು.

  • ಶಾಲೆಯ 3ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ದುರ್ಮರಣ!

    ಶಾಲೆಯ 3ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ದುರ್ಮರಣ!

    ತಿರುವನಂತಪುರ: ಕೇರಳದ ಖಾಸಗಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    15 ವರ್ಷದ ಗೌರಿ ನೇಹಾ ಕೇರಳದ ಕೊಲ್ಲಂನ ಟ್ರನಿಟಿ ಲೈಸಿಯಂ ಶಾಲೆಯಲ್ಲಿ ಓದುತ್ತಿದ್ದು, ಶುಕ್ರವಾರ ಮಧ್ಯಾಹ್ನ ಶಾಲೆಯ ಮೂರನೇ ಮಹಡಿಯಿಂದ ಹಾರಿದ್ದಳು. ಕೂಡಲೇ ಆಕೆಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಇಂದು ಮೃತಪಟ್ಟಿದ್ದಾಳೆ ಅಂತ ವರದಿಯಾಗಿದೆ.

    ಏನಿದು ಘಟನೆ?: 13 ವರ್ಷದ ಸಹೋದರಿ ಕ್ಲಾಸಿನಲ್ಲಿ ಮಾತನಾಡಿದ್ದಕ್ಕೆ ಶಿಕ್ಷಕರೊಬ್ಬರು ಆಕೆಯನ್ನು ಹುಡುಗರ ಮಧ್ಯೆ ಕುಳಿತು ಪಾಠ ಕೇಳುವ ಶಿಕ್ಷೆ ನೀಡಿದ್ದರು. ಈ ರೀತಿ ಶಿಕ್ಷೆ ಕೊಟ್ಟ ವಿಚಾರವನ್ನು ಬಾಲಕಿ ತಾಯಿಗೆ ಹೇಳಿದ್ದಾಳೆ. ತಾಯಿ ಶಾಲೆಗೆ ಬಂದು ಈ ಕುರಿತು ಶಾಲಾ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಅಲ್ಲದೇ ಮಗಳಿಗೆ ಇನ್ನೊಂದು ಬಾರಿ ಈ ರೀತಿ ಶಿಕ್ಷೆ ನೀಡಿದರೆ ದೂರು ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

    ಈ ಘಟನೆಯ ನಂತರ ಮತ್ತೊಮ್ಮೆ ಈ ರೀತಿಯ ಪ್ರಕರಣ ನಡೆದು ಆಕೆ ಈ ವಿಚಾರವನ್ನು ಸಹೋದರಿಗೆ ತಿಳಿಸಿದ್ದಾಳೆ. ಇದಾದ ಬಳಿಕ ಬ್ರೇಕ್ ನಡುವೆ ಅಕ್ಕ ಈಗ ತಂಗಿ ಎಲ್ಲಿ ಕುಳಿತಿದ್ದಾಳೆ ಎನ್ನುವುದನ್ನು ಪರಿಶೀಲಿಸಲು ತರಗತಿಗೆ ಬರುತ್ತಿದ್ದಳು. ಅಕ್ಕ ತಂಗಿಯನ್ನು ನೋಡಲು ತರಗತಿಗೆ ಬರುವುದನ್ನು ನೋಡಿ ಉಳಿದ ವಿದ್ಯಾರ್ಥಿಗಳು ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಸಿಟ್ಟುಗೊಂಡ ವಿದ್ಯಾರ್ಥಿನಿ ಶಾಲೆಯ ಮೂರನೇಯ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಹಾರಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.

    ಸದ್ಯ ಇತರ ವಿದ್ಯಾರ್ಥಿಗಳು ಮೃತ ವಿದ್ಯಾರ್ಥಿನಿಯ ಶವವಿಟ್ಟು, ಬಾಲಕಿ ಸಾವಿಗೆ ಶಾಲಾ ಆಡಳಿತ ಮಂಡಳಿಯೇ ಕಾರಣವೆಂದು ಪ್ರತಿಭಟನೆ ನಡೆಸಿದರು. ಬಾಲಕಿಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಿಕ್ಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆದಿದೆ ಅಂತ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಪೊಲೀಸರು ಬಾಲಕಿಯ ಹೇಳಿಕೆಯನ್ನು ಪಡೆಯುವಲ್ಲಿ ವಿಫಲರಾಗಿದ್ದು, ತಂದೆಯ ಹೇಳಿಕೆಯನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

  • ಕೇಕ್ ಕದ್ದನೆಂದು ಬಾಲಕನ ಕಿವಿಯಲ್ಲಿ ರಕ್ತ ಬರುವಂತೆ ಥಳಿಸಿದ ಅಂಗಡಿ ಮಾಲೀಕ!

    ಕೇಕ್ ಕದ್ದನೆಂದು ಬಾಲಕನ ಕಿವಿಯಲ್ಲಿ ರಕ್ತ ಬರುವಂತೆ ಥಳಿಸಿದ ಅಂಗಡಿ ಮಾಲೀಕ!

    ತಿರುವನಂತಪುರ: ಕೇಕ್ ಪೀಸ್ ಕದ್ದ ಅಂತ ಆರೋಪಿಸಿ 14 ವರ್ಷದ ಬಾಲಕನಿಗೆ ಅಂಗಡಿ ಮಾಲೀಕನೊಬ್ಬ ಹಿಗ್ಗಾಮುಗ್ಗವಾಗಿ ಥಳಿಸಿದ ಅಮಾನವೀಯ ಘಟನೆ ನಡೆದಿದೆ.

    ಈ ಘಟನೆ ಕೇರಳದ ಕೊಲ್ಲಂನ ಕೊಟ್ಟಾರಕ್ಕರ ಎಂಬಲ್ಲಿ ಗುರುವಾರ ಸಂಜೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಥಳಿತಕ್ಕೊಳಗಾದ ಬಾಲಕನನ್ನು ಅರ್ಜುನ್(ಹೆಸರು ಬದಲಾಯಿಸಲಾಗಿದೆ) ಎಂದುದು ಗುರುತಿಸಲಾಗಿದೆ.

    ಏನಿದು ಘಟನೆ?: ಕುಲಕ್ಕಡ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರೋ ಅರ್ಜುನ್ ಮತ್ತು ಆತನ ಗೆಳೆಯರು ತಂಪು ಪಾನೀಯ ಕುಡಿಯಲೆಂದು ಶಾಲೆಯ ಹತ್ತಿರವಿರೋ ಶಶಿಧರನ್ ಎಂಬಾತನ ಅಂಗಡಿಗೆ ಸಂಜೆ ಸುಮಾರು 4.30ರ ವೇಳೆ ಬಂದಿದ್ದರುನೀ ವೇಳೆ ಬಾಲಕ ಕೇಕ್ ಕದ್ದ ಅಂತ ಅಂಗಡಿ ಮಾಲೀಕ ಬಲಕನನ್ನು ಥಳಿಸಿದ್ದಾನೆ. ಸದ್ಯ ಬಾಲಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಘಟನೆ ಕುರಿತು ಅರ್ಜುನ್ ತಾಯಿ ಸಾವಿತ್ರಿ ಮಾಧ್ಯಮದೊಂದಿಗೆ ಮಾತನಾಡಿ, ನಾನು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ತಾಯಿ ಕರೆ ಮಾಡಿ ಅರ್ಜುನ್ ಶಾಲೆಯಿಂದ ಇನ್ನೂ ಬಂದಿಲ್ಲ. ಅಲ್ಲದೇ ಅಂಗಡಿ ಮಾಲೀಕ ಅರ್ಜುನ್ ಜೊತೆ ಅಮಾನುಷವಾಗಿ ನಡೆದುಕೊಂಡಿರುವ ಬಗ್ಗೆ ಆತನ ಗೆಳೆಯರು ಹೇಳಿರುವುದಾಗಿ ತಿಳಿಸಿದ್ರು. ಇದರಿಂದ ಗಾಬರಿಗೊಂಡ ನಾನು ಕೂಡಲೇ ಸ್ಥಳೀಯ ಅಂಗಡಿಗಳಿಗೆ ತೆರಳಿ ಹುಡುಕಾಡಿದೆ. ಆದ್ರೆ ಅರ್ಜುನ್ ಎಲ್ಲೂ ಕಾಣಿಸಿಲ್ಲ. ತಕ್ಷಣವೇ ಮಗನನ್ನು ವಿಚಾರಿಸಿಕೊಂಡು ಬರಲೆಂದು ಅಲ್ಲಿಂದ ಶಾಲೆಗೆ ತೆರಳಿದೆ. ಸುಮಾರು 1 ಗಂಟೆಗೂ ಅಧಿಕ ಸಮಯ ಅರ್ಜುನ್ ಅಂಗಡಿಯಲ್ಲಿರುವುದನ್ನು ಗಮನಿಸಿದ್ದ ಶಿಕ್ಷಕಿ ಮತ್ತು ನಾನು ಅರ್ಜುನ್ ನನ್ನು ಕರೆದು ಮಾತನಾಡಿಸಿದಾಗ ಈ ವಿಚಾರ ಬೆಳಕಿಗೆ ಬಂತು ಅಂದ್ರು.

    ಅರ್ಜುನ್ ಕೈ ತಾಗಿ ಅಂಗಡಿಯಲ್ಲಿ ಕೇಕ್ ಪೀಸ್ ಒಂದು ಕೆಳಗೆ ಬಿದ್ದಿದೆ. ಅಂತೆಯೇ ಆತನ ಗೆಳೆಯರು ತಂಪು ಪಾನೀಯ ಕುಡಿದು ಅಲ್ಲಿಂದ ತೆರಳಿದ್ದಾರೆ. ಗೆಳೆಯರು ಹಿಂದಿರುಗುತ್ತಿದ್ದಾರೆ ಅಂತ ತಿಳಿದ ಅರ್ಜುನ್ ಕೆಳಗೆ ಬಿದ್ದ ಕೇಕ್ ಪೀಸ್ ಅನ್ನು ಕೌಂಟರ್ ಮೇಲಿಟ್ಟು ಅಲ್ಲಿಂದ ಗೆಳೆಯರ ಹಿಂದೆ ಓಡಿದ್ದಾನೆ. ತನ್ನ ಮಗ ಓಡಿದ್ದನ್ನು ಗಮನಿಸಿದ ಅಂಗಡಿ ಮಾಲೀಕ ಆತನನ್ನು ಮತ್ತೆ ಹಿಂದಕ್ಕೆ ಕರೆದು ಮನಬಂದಂತೆ ಥಳಿಸಿದ್ದಾನೆ. ಪರಿಣಾಮ ಮಗನ ಎರಡೂ ಕಿವಿಗಳಲ್ಲೂ ರಕ್ತ ಬರುತ್ತಿರುವುದನ್ನು ಕಂಡು ದಂಗಾದೆ. ಅಲ್ಲದೇ ಅರ್ಜುನ್ ಕುತ್ತಿಗೆಯ ಸುತ್ತ ಗಾಯದ ಬರೆಗಳಿದ್ದು, ತಲೆಗೆ ಕೂಡ ಗಾಯಗಳಾಗಿತ್ತು. ಆತನ ಬ್ಯಾಗನ್ನು ಕೂಡ ಅಂಗಡಿಯವನು ಬಿಸಾಡಿದ್ದಾನೆ. ಅಲ್ಲದೇ ಆತನ ಶರ್ಟ್ ಕಾಲರ್ ಹಿಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಆರೋಪಿ ಅಂಗಡಿ ಮಾಲೀಕ ಶಶಿಧರನನ್ನು ಶುಕ್ರವಾರ ಬಂಧಿಸಿ, ಆತನ ವಿರುದ್ಧ ಐಪಿಸಿ ಸೆಕ್ಷನ್ 341, 323 ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಆದ್ರೆ ಆರೋಪಿ ಅದೇ ದಿನ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ ಎಂಬುದಾಗಿ ವರದಿಯಾಗಿದೆ.

  • ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ದುಬೈ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡಲು ಆಸಕ್ತಿ ತೋರಿದ್ದಾರೆ. ಬಿಸಿಸಿಐ ನನಗೆ ಟೀಂ ಇಂಡಿಯಾ ಪರವಾಗಿ ಅವಕಾಶ ನೀಡದಿದ್ದರೆ ನಾನು ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡುತ್ತೇನೆ ಎಂದು ಶ್ರೀಶಾಂತ್ ದುಬೈನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಆದರೆ ಶ್ರೀಶಾಂತ್ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಅಜೀವ ನಿಷೇಧಕ್ಕೊಳಗಾಗಿರುವುದರಿಂದ ಶ್ರೀಶಾಂತ್ ಬೇರೆ ಯಾವುದೇ ಕ್ರಿಕೆಟ್ ಅಸೋಸಿಯೇಷನ್ ಪರ ಆಡುವುದು ಸಾಧ್ಯವಿಲ್ಲ ಎಂದು ಹೇಳಿದೆ. ಮೊನ್ನೆಯಷ್ಟೇ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ಬಿಸಿಸಿಐ ಅಜೀವ ನಿಷೇಧ ತೆರವಿಗೆ ತಡೆಯಾಜ್ಞೆ ನೀಡಿತ್ತು.

    ನನ್ನ ಮೇಲೆ ಬಿಸಿಸಿಐ ಮಾತ್ರ ನಿಷೇಧ ಹೇರಿದೆಯೇ ವಿನಃ ಐಸಿಸಿ ನಿಷೇಧ ಹೇರಿಲ್ಲ. ಭಾರತದಲ್ಲಿ ಅವಕಾಶ ಸಿಗದಿದ್ದರೆ ನಾನು ಬೇರೆ ದೇಶದ ಪರ ಆಡಬಹುದು. ಸದ್ಯ ನನಗೆ 34 ವರ್ಷ ವಯಸ್ಸಾಗಿದ್ದು ಇನ್ನೂ 6 ವರ್ಷ ಕ್ರಿಕೆಟ್ ಆಡಬಹುದು ಎಂದು ಹೇಳಿದ್ದಾರೆ. ಓರ್ವ ಕ್ರಿಕೆಟ್ ಪ್ರೇಮಿಯಾಗಿ ನಾನು ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತೇನೆ. ಬಿಸಿಸಿಐ ಎನ್ನುವುದು ಖಾಸಗಿ ಸಂಸ್ಥೆ. ಇದನ್ನು ನಾವು ಮಾತ್ರ ಟೀಂ ಇಂಡಿಯಾ ಎಂದು ಕರೆಯುತ್ತೇವೆ. ಆದರೆ ವಾಸ್ತವದಲ್ಲಿ ಅದೊಂದು ಖಾಸಗಿ ಸಂಸ್ಥೆ ಎಂದು ಹೇಳಿದ್ದಾರೆ.

    ಕೇರಳ ಪರ ರಣಜಿ ಆಡುವುದು ಬೇರೆಯೇ ವಿಚಾರ. ನನಗೆ ಕೇರಳ ಪರ ರಣಜಿ ಹಾಗೂ ಇರಾನಿ ಟ್ರೋಫಿ ಆಡಬೇಕು ಎಂಬ ಆಸೆಯಿತ್ತು. ಆದರೆ ಇದರ ಬಗ್ಗೆ ಬಿಸಿಸಿಐ ನಿರ್ಧರಿಸಬೇಕು ಎಂದು ಹೇಳಿದರು. ಮೊನ್ನೆ ಬಂದ ಕೇರಳ ಹೈಕೋರ್ಟ್ ತೀರ್ಪಿನಿಂದಾಗಿ ಶ್ರೀಶಾಂತ್ ಗೆ ಈಗ ಕೇರಳ ತಂಡದಲ್ಲಿ ಆಡುವುದು ಸಾಧ್ಯವಿಲ್ಲ. ಜೊತೆಗೆ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಡಿ ಬರುವ ಯಾವುದೇ ಜಾಗದಲ್ಲೂ ಪ್ರಾಕ್ಟೀಸ್ ಕೂಡಾ ನಡೆಸುವಂತಿಲ್ಲ.

  • ಕರ್ನಾಟಕದಿಂದ ಕೇರಳಕ್ಕೆ ರಾತ್ರಿ ಬಸ್ಸಲ್ಲಿ ಅಕ್ರಮವಾಗಿ 4 ಬ್ಯಾಗಲ್ಲಿ ಸಾಗಾಟವಾಗ್ತಿತ್ತು 34 ಕೆಜಿ ಚಿನ್ನ!

    ಕರ್ನಾಟಕದಿಂದ ಕೇರಳಕ್ಕೆ ರಾತ್ರಿ ಬಸ್ಸಲ್ಲಿ ಅಕ್ರಮವಾಗಿ 4 ಬ್ಯಾಗಲ್ಲಿ ಸಾಗಾಟವಾಗ್ತಿತ್ತು 34 ಕೆಜಿ ಚಿನ್ನ!

    ಬೆಂಗಳೂರು: ಕರ್ನಾಟಕದಿಂದ ಕೇರಳಕ್ಕೆ 34 ಕೆಜಿ ಚಿನ್ನವನ್ನು ಅಕ್ರಮವಾಗಿ ಬಸ್ ನಲ್ಲಿ ಸಾಗಿಸುತ್ತಿದ್ದ ತಂಡವನ್ನು ಕೇರಳದ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದಿಂದ ಕೇರಳಕ್ಕೆ ಅಕ್ರಮವಾಗಿ ಚಿನ್ನ ಹಾಗೂ ಮಾದಕ ವಸ್ತು ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಕೇರಳದ ವಯನಾಡಿನ ಅಬಕಾರಿ ಗುಪ್ತ ದಳದ ಪೊಲೀಸರು 6 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಸ್ ನಲ್ಲಿ ತಪಾಸಣೆ ನಡೆಸಿದ ವೇಳೆ 4 ಬ್ಯಾಗ್ ಗಳಲ್ಲಿ 34 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇಲ್ಲಿನ ತೋಲ್ಪೆಟ್ಟಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ವೇಳೆ 11 ಕೋಟಿ ಮೌಲ್ಯದ 34 ಕೆಜಿ ಚಿನ್ನ ಪತ್ತೆಯಾಗಿದೆ ಎಂದು ಇಂಟೆಲಿಜೆನ್ಸ್ ಇನ್ಸ್ ಪೆಕ್ಟರ್ ಎ.ಜೆ.ಶಾಜಿ ಹೇಳಿದ್ದಾರೆ. ಅಕ್ರಮ ಚಿನ್ನ ಹಾಗೂ ಮಾದಕ ವಸ್ತುಗಳ ಸಾಗಾಟ ರಾತ್ರಿಕಾಲದಲ್ಲೇ ನಡೆಯುತ್ತವೆ. ಕೇರಳ ಹಾಗೂ ಕರ್ನಾಟಕ ಗಡಿಯಲ್ಲಿ ರಾತ್ರಿ ವೇಳೆಯಲ್ಲಿ ತೆರೆದಿರುವ ಚೆಕ್ ಪೋಸ್ಟ್ ತೋಲ್ಪೆಟ್ಟಿ ಮಾತ್ರ. ಹೀಗಾಗಿ ಯಾವುದೇ ಅಕ್ರಮ ಸಾಗಾಟ ನಡೆದರೂ ಈ ಚೆಕ್ ಪೋಸ್ಟ್ ಮೂಲಕವೇ ನಡೆಯಬೇಕು. ಮುಂಜಾನೆ 4 ಗಂಟೆಗೆ ಈ ದಾರಿಯಲ್ಲಿ ಸಂಚರಿಸುತ್ತಿದ್ದ ಲಕ್ಷುರಿ ಬಸ್ ತಪಾಸಣೆ ವೇಳೆ ನಮಗೆ 34 ಕೆಜಿ ಚಿನ್ನ ಸಿಕ್ಕಿದೆ ಎಂದು ಹೇಳಿದ್ದಾರೆ.

    ಬಂಧಿತರನ್ನು ಶಂಕೇಶ್ ಬಿ ಜೈನ್, ಅಭಯ್ ಎಂ ಜೈನ್, ಚಾಂಬರಂ ದೇವಸಿ, ಮದನ್ ಲಾಲ್ ದೇವಸಿ, ವಿಕ್ರಮ್ ಸಿ ಹಾಗೂ ಕಮಲೇಶ್ ಜೈನ್ ಎಂದು ಗುರುತಿಸಲಾಗಿದೆ. ಆರೋಪಿಗಳು 2 ಕಾಲೇಜ್ ಬ್ಯಾಗ್ ಹಾಗೂ 2 ಟ್ರಾವೆಲ್ ಬ್ಯಾಗ್ ಸೇರಿ ಒಟ್ಟು 4 ಬ್ಯಾಗ್ ಗಳಲ್ಲಿ ಯಾರಿಗೂ ಸಂಶಯ ಬಾರದಂತೆ ಪ್ಯಾಕ್ ಮಾಡಿದ್ದರು. ಬಂಧಿತರಲ್ಲಿ ಓರ್ವ ಬೆಂಗಳೂರಿನ ಜ್ಯುವೆಲ್ಲರಿ ಮಳಿಗೆಯೊಂದರ ಮಾಲೀಕರ ಪುತ್ರ ಎಂದು ತನಿಖೆ ವೇಳೆ ಬಯಲಾಗಿದೆ ಎಂದು ಇನ್ಸ್ ಪೆಕ್ಟರ್ ಶಾಜಿ ಹೇಳಿದ್ದಾರೆ.

    ಬಂಧಿತರು ಮಾದಕ ವಸ್ತುಗಳನ್ನು ಕೂಡಾ ಅಕ್ರಮವಾಗಿ ಸಾಗಿಸುತ್ತಿದ್ದರು. ಸದ್ಯ ಬಂಧಿತರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಗೂ ಮಾಹಿತಿ ನೀಡಿದ್ದೇವೆ ಎಂದು ಶಾಜಿ ಹೇಳಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಚಿನ್ನದ ಅಕ್ರಮ ಸಾಗಾಟ ಕೇರಳದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ. ತೆರಿಗೆಯಿಂದ ತಪ್ಪಿಸಿಕೊಳ್ಳಲು ಸಾಮಾನ್ಯವಾಗಿ ಚಿನ್ನವನ್ನು ಈ ರೀತಿ ಅಕ್ರಮವಾಗಿ ಸಾಗಾಟ ಮಾಡುತ್ತಾರೆ. 11 ಕೋಟಿ ಮೌಲ್ಯದ ಚಿನ್ನಕ್ಕೆ ಸುಮಾರು 65 ಲಕ್ಷ ತೆರಿಗೆ ಪಾವತಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪ್ರಕರಣವನ್ನು ದಾಖಲಿಸಿ ತನಿಖೆ ಮುಂದುವರೆಸಲಿದ್ದಾರೆ.

     

  • ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್?

    ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್?

    ತಿರುವನಂತಪುರಂ: ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ ದಾಖಲಾಗುವ ಸಾಧ್ಯತೆ ಇದೆ. ಬಹುಕೋಟಿ ಸೋಲಾರ್ ಹಗರಣದಲ್ಲಿ ಏಕಕಾಲಕ್ಕೆ ಭ್ರಷ್ಟಾಚಾರ ಹಾಗೂ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಲು ಕೇರಳ ಸರ್ಕಾರ ಚಿಂತನೆ ನಡೆಸಿದೆ.

    ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ನಾಯರ್ 2013ರ ಜುಲೈನಲ್ಲಿ ಜೈಲಿನಿಂದಲೇ ಒಂದು ಪತ್ರ ಬರೆದಿದ್ದರು. ಆ ಪತ್ರವನ್ನು ಆಧರಿಸಿ ರಾಜ್ಯದ ಪ್ರಮಖ ರಾಜಕೀಯ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲು ಸೂಚನೆ ನೀಡಲಾಗಿದೆ.

    ಈ ವಿಚಾರದ ಬಗ್ಗೆ ತಿರುವನಂತಪುರಂನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್, ಸರಿತಾ ನಾಯರ್ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ನಡೆದಿದೆ. ಹೀಗಾಗಿ ಸರಿತಾ ನಾಯರ್ ಪತ್ರದಲ್ಲಿ ಯಾರ ಹೆಸರನ್ನು ಬರೆದಿದ್ದಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

    ಕೇರಳ ಸಿಎಂ ಪಿಣರಾಯ್ ವಿಜಯನ್ ನೇತೃತ್ವದ ಎಡಪಕ್ಷಗಳ ಒಕ್ಕೂಟದ ಸರ್ಕಾರಕ್ಕೆ ಸೋಲಾರ್ ತನಿಖಾ ಆಯೋಗದ ವರದಿ ಬಂದಿದ್ದು, ಆರೋಪಿ ಸರಿತಾ ಪತ್ರದಲ್ಲಿ ಉಲ್ಲೇಖ ಮಾಡಿರುವ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಬಹುದು ಎಂದು ಹೇಳಿದೆ. ಲೈಂಗಿಕ ಬಯಕೆ ಈಡೇರಿಸುವಂತೆ ಬೇಡಿಕೆ ಇಡುವುದು ಭ್ರಷ್ಟಾಚಾರದ ಭಾಗವೆಂದು ಪರಿಗಣಿಸಲಾಗಿದೆ. ವರದಿಯನ್ನೇ ಆಧರಿಸಿ ಕಾಂಗ್ರೆಸ್‍ಗೆ ಶಾಕ್ ನೀಡಲು ಕೇರಳದ ಎಡಪಕ್ಷಗಳ ಸರ್ಕಾರ ಮುಂದಾಗಿದೆ.

    ಮಾಧ್ಯಮಗಳಿಗೆ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ಮಾಜಿ ಸರಿತಾ ನಾಯರ್ ಪತ್ರದಲ್ಲಿ, ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಂಸದ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಆಗಿರುವ ವೇಣುಗೋಪಾಲ್, ಹೈಬಿ ಈಡನ್, ಅರ್ಯಾಡನ್ ಮೊಹಮ್ಮದ್, ಅಡೂರ್ ಪ್ರಕಾಶ್, ಲೋಕಸಭಾ ಸಂಸದ ಜೋಸ್ ಕೆ ಮನಿ, ಕೆಪಿ ಅನಿಲ್ ಕುಮಾರ್ ಹೆಸರು ಇದೆ.

  • ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾದ್ರಿ

    ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪಾದ್ರಿ

    ತಿರುವನಂತಪುರ: ಚರ್ಚ್ ಗೆ ಬೈಬಲ್ ಓದಲು ಬಂದಿದ್ದ ಅಪ್ರಾಪ್ತೆಯ ಮೇಲೆ ಪಾದ್ರಿ (ಫಾದರ್) ಲೈಂಗಿಕ ಕಿರುಕುಳ ನೀಡಿರುವ ಘಟನೆ ಕೇರಳದ ಕಂದನಥಿಟ್ಟ ಪಟ್ಟಣದಲ್ಲಿರೋ ಸಿಎಸ್‍ಐ ಚರ್ಚ್ ನಲ್ಲಿ ನಡೆದಿದೆ.

    65 ವರ್ಷದ ಫಾದರ್ ದೇವರಾಜ್ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ ವ್ಯಕ್ತಿ. 16 ವರ್ಷದ ಬಾಲಕಿ ಚರ್ಚ್ ಗೆ ಬೈಬಲ್ ಓದಲು ಆಗಮಿಸಿದ್ದಳು. ಈ ವೇಳೆ ಚರ್ಚ್ ನಲ್ಲಿದ್ದ ಫಾದರ್ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಬಾಲಕಿಯ ಮೇಲಾಗುವ ದೌರ್ಜನ್ಯವನ್ನು ಆಕೆಯ ತಂದೆ ನೋಡಿದ್ದು, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

    ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದ್ದು, ಆರೋಪಿ ಫಾದರ್ ದೇವರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಇಂದು ಸಂಜೆ ವೇಳೆಗೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

    ಫಾದರ್ ದೇವರಾಜ್ ಕಳೆದ ಒಂದು ವರ್ಷದಿಂದ ಕಂದನಥಿಟ್ಟ ಚರ್ಚ್ ನಲ್ಲಿ ಧರ್ಮಗುರುವಾಗಿ ಕೆಲಸ ಮಾಡಿಕೊಂಡಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  • ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯನ್ನು ಪರೀಕ್ಷಿಸದ್ದಕ್ಕೆ ಇಬ್ಬರು ವೈದ್ಯರು ಅಮಾನತು

    ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಯನ್ನು ಪರೀಕ್ಷಿಸದ್ದಕ್ಕೆ ಇಬ್ಬರು ವೈದ್ಯರು ಅಮಾನತು

    ತಿರುವಂತನಪುರಂ: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ 5 ವರ್ಷದ ಬಾಲಕಿಯನ್ನು ಪರೀಕ್ಷಿಸದ್ದಕ್ಕೆ ಕೇರಳದ ಪಥನಂತಿಟ್ಟ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದೆ.

    ವೈದ್ಯರಾದ ಎಂ.ಸಿ ಗಂಗಾ ಮತ್ತು ಲೇಖಾಳನ್ನು ಕೆಲಸದಿಂದ ಆರೋಗ್ಯ ಇಲಾಖೆ ಅಮಾನತುಗೊಳಿಸಿದೆ.

    ಕೊಝೆಚೆರ್ರಿ ನಗದಲ್ಲಿರುವ ಆಸ್ಪತ್ರೆಗೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಬಾಲಕಿಯನ್ನು ಕೊಯಿಪ್ರಾಮ ಠಾಣೆಯ ಪೊಲೀಸರು ಕರೆದುಕೊಂಡು ಬಂದಿದ್ದರು. ಆದರೆ ವೈದ್ಯರು ನಾವು ನೋಡುವುದಿಲ್ಲ ಎಂದು ನಿರಾಕರಿಸಿದ್ದಾರೆ. ಈ ಘಟನೆಯ ಜಿಲ್ಲಾಧಿಕಾರಿ ಆರ್. ಗಿರಿಜಾ, ವೈದ್ಯರು ಯಾವುದೇ ಪರೀಕ್ಷೆ ಮಾಡದೇ ಬಾಲಕಿ ಮತ್ತು ಪೊಲೀಸರನ್ನು 6 ಗಂಟೆಯ ಕಾಲ ಕಾಯಿಸಿದ್ದಾರೆ ಎಂದು ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರಿಗೆ ವರದಿ ನೀಡಿದ್ದರು. ಈ ವರದಿಯ ನಂತರ ಶೈಲಜಾ ಅವರು ಆರೋಗ್ಯ ಕಾರ್ಯದರ್ಶಿಗೆ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.

    ಪೋಸ್ಕೋ ವಿಶೇಷ ನ್ಯಾಯಲಯದ ಸಾರ್ವಜನಿಕ ಪ್ರಾಸಿಕ್ಯೂಟರ್ ಹನ್ಸಾಲಾಹ್ ಮೊಹಮ್ಮದ್, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 166 ಎ ಮತ್ತು 166 ಬಿ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ಪೋಸ್ಕೋ ಕಾಯ್ದೆಯ ಪ್ರಕಾರ ಅಪರಾಧಕ್ಕೆ 6 ತಿಂಗಳು ಅಥವಾ 2 ವರ್ಷ ಶಿಕ್ಷೆಯನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

    ಈ ಘಟನೆಯ ಕುರಿತು ಮಾನವ ಹಕ್ಕುಗಳ ಕಾರ್ಯಕರ್ತರು ಗುರುವಾರ ಪ್ರತಿಕಾಗೋಷ್ಠಿಯನ್ನು ನಡೆಸಿ, ವೈದ್ಯರು ಬಾಲಕಿಯನ್ನು ಸೆಪ್ಟಂಬರ್ 15 ರಂದು ಮಧ್ಯಾಹ್ನ 2 ರಿಂದ ರಾತ್ರಿ 8 ಗಂಟೆಯ ವರೆಗೆ ಕಾಯಿಸಿದ್ದಾರೆ. ಅಷ್ಟೇ ಅಲ್ಲದೇ 5 ವರ್ಷದ ಬಾಲಕಿಯನ್ನು ಹೇಗೆ ಪರೀಕ್ಷಿಸಬೇಕು ನಮಗೆ ಗೊತ್ತಿಲ್ಲ ಎಂದು ಸುಳ್ಳು ಹೇಳಿದ್ದಾರೆ. ಪೊಲಿಸರು ಮತ್ತು ಬಾಲಕಿಯ ಸಂಬಂಧಿಕರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು.

    ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಆಟೋಚಾಲಕ ರೆಜಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

  • ಯೋಗ ತರಬೇತಿ ವೇಳೆ ಕೈ, ಕಾಲುಗಳನ್ನು ತಿರುಚಿ ಕೇರಳದಲ್ಲಿ ಬೆಂಗ್ಳೂರು ಯುವತಿ ಮೇಲೆ ಹಲ್ಲೆ!

    ಯೋಗ ತರಬೇತಿ ವೇಳೆ ಕೈ, ಕಾಲುಗಳನ್ನು ತಿರುಚಿ ಕೇರಳದಲ್ಲಿ ಬೆಂಗ್ಳೂರು ಯುವತಿ ಮೇಲೆ ಹಲ್ಲೆ!

    ಬೆಂಗಳೂರು: ಕೇರಳದ ಎರ್ನಾಕುಲಂನಲ್ಲಿ ಬೆಂಗಳೂರು ಮೂಲದ ಯುವತಿಯೊಬ್ಬರಿಗೆ ಹಲ್ಲೆ ಮಾಡಿ ಧಮ್ಕಿ ಹಾಕಿರೋ ಘಟನೆ ನಡೆದಿದೆ.

    ಕೇರಳದ ಶಿವಶಕ್ತಿ ಯೋಗ ವಿದ್ಯಾಕೇಂದ್ರದಲ್ಲಿ ಬೆಂಗಳೂರು ಮೂಲದ ವಂದನಾ ಎಂಬ ಯುವತಿ ಮೇಲೆ ಈ ಹಲ್ಲೆ ನಡೆದಿದೆ.

    ಯೋಗ ತರಬೇತಿ ವೇಳೆ ಆಕೆಯ ಕೈ ಕಾಲುಗಳನ್ನು ತಿರುಚಿ ಹಿಂಸೆ ಮಾಡಿ, ಹಲ್ಲೆ ಮಾಡಲಾಗಿದೆ. ನೀನು ಪ್ರೀತಿ ಮಾಡೋ ಕ್ರಿಶ್ಚಿಯನ್ ಹುಡುಗನನ್ನು ಮರೆಯಬೇಕು. ಆತನನ್ನು ಮದುವೆ ಆಗಬಾರದು. ಬದಲಾಗಿ ಹಿಂದೂ ಹುಡುಗನನ್ನು ಮದುವೆ ಆಗಬೇಕು. ಇಲ್ಲದಿದ್ರೆ ಪರಿಣಾಮ ನೆಟ್ಟಗಿಲ್ಲ ಅಂತಾ ಧಮ್ಕಿ ಹಾಕಿ ಬೆದರಿಸಿದ್ದಾರೆ.

    ಕಳೆದ ಒಂದು ತಿಂಗಳ ಹಿಂದಯಷ್ಟೇ ಇಬ್ಬರು ಮಹಿಳೆಯರು ಇದೇ ಯೋಗ ಕೇಂದ್ರದ ವಿರುದ್ಧ ಪೊಲೀಸ್ ಠಾಣೆಯಲ್ಲಿ ಹಲ್ಲೆ ದೂರು ನೀಡಿದ್ರು. ಇದೀಗ ಮತ್ತೆ ಇಂಥದ್ದೇ ಘಟನೆ ಮರುಕಳಿಸಿದ್ದು, ವಂದನಾ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಈ ಕುರಿತು ಮನೆಯವರಿಗೂ ವಿಷಯ ತಿಳಿಸಿದ್ದಾರೆ.