Tag: kerala

  • ‘ಬಾವಲಿ ಜ್ವರ’ಕ್ಕೆ ಕೇರಳದಲ್ಲಿ 10 ಸಾವು – ರೋಗ ಲಕ್ಷಣ ಏನು, ತಡೆಗಟ್ಟೋದು ಹೇಗೆ?

    ‘ಬಾವಲಿ ಜ್ವರ’ಕ್ಕೆ ಕೇರಳದಲ್ಲಿ 10 ಸಾವು – ರೋಗ ಲಕ್ಷಣ ಏನು, ತಡೆಗಟ್ಟೋದು ಹೇಗೆ?

    ಪೇರಾಂಬ್ರ: ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಜ್ವರಕ್ಕೆ ಕೇರಳದಲ್ಲಿ ಇದುವರೆಗೆ 10 ಮಂದಿ ಸಾವನ್ನಪ್ಪಿದ್ದಾರೆ. ಪುಣೆಯಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ ಮೂವರ ಸಾವಿಗೆ ನಿಪಾ ವೈರಸ್ ಕಾರಣ ಎನ್ನುವುದನ್ನು ದೃಢಪಡಿಸಿದೆ. ಕೇರಳದ ಕೋಝಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಈ ರೋಗ ವ್ಯಾಪಕವಾಗಿ ಹರಡಿದೆ ಎನ್ನಲಾಗಿದೆ.

    ಸಾವಿನ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಜೊತೆಗೆ ಎಲ್ಲಾ ವಿವರಗಳನ್ನು ಆರೋಗ್ಯ ಇಲಾಖೆಗೆ ಪ್ರತಿ ನಿತ್ಯ ಆರೋಗ್ಯ ಇಲಾಖೆಗೆ ನೀಡುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸೂಚನೆಯಂತೆ ಇಂದು ಬೆಳಗ್ಗೆಯೇ ಕೇಂದ್ರ ಸರ್ಕಾರದ ವೈದ್ಯಕೀಯ ತಂಡವೊಂದು ಕೇರಳಕ್ಕೆ ಆಗಮಿಸಿದೆ.

    ನಿಪಾ ವೈರಸ್ ಎಂದರೇನು?
    1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪ್ಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಪಾ ವೈರಸ್ ಎಂದು ಕರೆಯುತ್ತಾರೆ. ನಿಪಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಪಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.

    ವೈರಸ್ ಹೇಗೆ ಹರಡುತ್ತದೆ?
    ಬಾವಲಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ
    ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುತ್ತದೆ
    ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. (ಬಾವಲಿಗಳು ಕಚ್ಚಿದ ಹಣ್ಣನ್ನು ತಿನ್ನುವುದರಿಂದ ಹರಡುತ್ತದೆ)
    ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ
    ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ

    ನಿಪಾ ವೈರಸ್ ಲಕ್ಷಣಗಳೇನು?
    – ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ
    – ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ
    – ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ
    – ಬಳಿಕ ಪ್ರಜ್ಞಾಹೀನರಾಗುತ್ತಾರೆ
    – ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ
    – ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು

    ಎಚ್ಚರಿಕೆಯಿಂದಿರಿ..!
    – ಪ್ರಾಣಿ ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬೇಡಿ
    – ಒಂದು ವೇಳೆ ನೀವು ರೋಗಿಯ ಜೊತೆಗಿದ್ದರೆ ಶುಚಿತ್ವಕ್ಕೆ ಹೆಚ್ಚು ಗಮನ ಕೊಡಿ
    – ರೋಗಿಯ ಚಿಕಿತ್ಸೆ ವೇಳೆ ಮುಖಕ್ಕೆ ಮಾಸ್ಕ್, ಕೈಗವಚ ಧರಿಸಿ
    – ಬಾವಲಿಗಳ ಸಂಖ್ಯೆ ಹೆಚ್ಚಿರುವ ಕಡೆ ಸಂಗ್ರಹಿಸುವ ಶೇಂದಿ, ಪಾನೀಯಗಳನ್ನು ಸೇವಿಸಬೇಡಿ

    ಚಿಕಿತ್ಸೆ ನೀಡಿದ ನರ್ಸ್ ಸಾವು: ನಿಪಾ ವೈರಸ್ ಹರಡಿ ಆಸ್ಪತ್ರೆ ಸೇರಿದವರಿಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಬಾವಲಿ ಜ್ವರದಿಂದ ಸಾವನ್ನಪ್ಪಿದ್ದಾರೆ. ಪೇರಾಂಬ್ರ ತಾಲೂಕು ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಲೀನಾ ಮೃತಪಟ್ಟವರು. ಈ ರೋಗ ಬೇರೆಯವರಿಗೂ ಹರಡುವ ಸಾಧ್ಯತೆ ಇದೆ ಎಂದು ಸಂಬಂಧಿಕರಿಗೆ ಈಕೆಯ ಮೃತದೇಹ ಬಿಟ್ಟು ಕೊಡದೆ ಕೇರಳ ಸರ್ಕಾರವೇ ಈಕೆಯ ಅಂತ್ಯಸಂಸ್ಕಾರ ನಡೆಸಿದೆ.

    ಘಟನೆ ಹಿನ್ನೆಲೆಯಲ್ಲಿ ಕೇರಳದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಇಂದು ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದಾರೆ. ರೋಗ ನಿಯಂತ್ರಣಕ್ಕೆ ಎಲ್ಲಾ ವಿಧದ ಕ್ರಮಕೈಗೊಂಡಿದ್ದೇವೆ. ಈಗ ಚಿಕಿತ್ಸೆಯಲ್ಲಿರುವ 8 ಮಂದಿಯಲ್ಲಿ ವೈರಸ್ ಇರುವುದು ಖಚಿತಪಟ್ಟಿದೆ ಎಂದು ಹೇಳಿದ್ದಾರೆ. ಅಗತ್ಯ ನಿರ್ವಹಣೆಗಾಗಿ ಮೆಡಿಕಲ್ ಕಾಲೇಜಿಗೆ 20 ಲಕ್ಷ ರೂಪಾಯಿಯನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಹೇಳಿದ್ದಾರೆ.

    ಬಾವಲಿಗಳಿದ್ದ ಬಾವಿಯ ನೀರು ಸೇವನೆ ಹಾಗೂ ಬಾವಲಿಗಳು ಕಚ್ಚಿದ ಮಾವಿನ ಹಣ್ಣು ತಿಂದಿದ್ದರಿಂದ ಈ ರೋಗ ಹರಡಿದೆ ಎನ್ನುವುದು ಸದ್ಯಕ್ಕೆ ಖಚಿತವಾಗಿದೆ. ಬಾವಿಯ ನೀರಿನಲ್ಲಿ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಾವಿಯನ್ನು ಮುಚ್ಚಿದ್ದೇವೆ ಎಂದು ಶೈಲಜಾ ಸ್ಪಷ್ಟನೆ ನೀಡಿದ್ದಾರೆ. ರೋಗಿಗಳ ಜೊತೆ ಸಂಪರ್ಕದಲ್ಲಿದ್ದ ಎಲ್ಲರ ಆರೋಗ್ಯ ತಪಾಸಣೆ ಮಾಡಲು ಸೂಚನೆ ನೀಡಿದ್ದೇವೆ ಎಂದು ಅವರು ಹೇಳಿದ್ದಾರೆ.

  • ಕರ್ನಾಟಕ ಶಾಸಕರಿಗೆ ರೆಸಾರ್ಟ್ ಆಫರ್ ಕೊಟ್ಟ ಕೇರಳ ಪ್ರವಾಸೋದ್ಯಮ!

    ಕರ್ನಾಟಕ ಶಾಸಕರಿಗೆ ರೆಸಾರ್ಟ್ ಆಫರ್ ಕೊಟ್ಟ ಕೇರಳ ಪ್ರವಾಸೋದ್ಯಮ!

    ತಿರುವನಂತಪುರಂ: ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಮೇಲೆ ಕಣ್ಣಿಟ್ಟಿರುವ ಕೇರಳ ಪ್ರವಾಸೋದ್ಯಮ ಇಲಾಖೆ ರಾಜ್ಯದ ಶಾಸಕರಿಗೆ ಸುಂದರ, ಸುರಕ್ಷಿತ ಸ್ಥಳಗಳ ನೀಡುವುದಾಗಿ ಆಫರ್ ನೀಡಿದೆ.

    ಈ ಕುರಿತು ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದು ಕೊಂಡಿರುವ ಕೇರಳ ಪ್ರವಾಸೋದ್ಯಮ, ಕರ್ನಾಟಕದಲ್ಲಿ ಉಂಟಾಗಿರುವ ರಾಜಕೀಯ ಬೆಳವಣಿಗೆಗಳ ಬಳಿಕ ನಾವು ಎಲ್ಲಾ ಶಾಸಕರನ್ನು ಆಹ್ವಾನಿಸುತ್ತೇವೆ, ಸುರಕ್ಷಿತ ಹಾಗೂ ಸುಂದರ ರೆಸಾರ್ಟ್ ಗೆ ಬನ್ನಿ ಎಂದು ಟ್ವೀಟ್ ಮಾಡಿದೆ.

    ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷವೂ ಬಹುಮತ ಪಡೆಯದ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯ ನಡೆಯಬಹುದು ಎನ್ನುವ ಊಹೆಯ ಮೇರೆಗೆ ಕೇರಳ ಪ್ರವಾಸೋದ್ಯಮ ಇಲಾಖೆ ಫಲಿತಾಂಶ ಪ್ರಕಟವಾದ ಮೇ 15 ರ ಸಂಜೆ 5.48ಕ್ಕೆ ಟ್ವೀಟ್ ಮಾಡಿತ್ತು. ಕೇರಳ ಪ್ರವಾಸೋದ್ಯಮದ ಪೋಸ್ಟ್ ಅನ್ನು ಸಚಿವ ಸುರೇಂದ್ರನ್ ಶೇರ್ ಮಾಡಿದ್ದರು ಆದ್ರೆ  ಬಳಿಕ ಇಲಾಖೆ ಆಫರ್ ನೀಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.

    ಈ ಟ್ವೀಟ್‍ಗೆ ಹಲವಾರು ಕಮೆಂಟ್ ಗಳು ಬಂದಿತ್ತು. ಪ್ರವಾಸೋದ್ಯಮವನ್ನು ಪ್ರಚಾರ ಮಾಡುವುದು ಹೇಗೆ ಎನ್ನುವುದು ಕೇರಳವನ್ನು ನೋಡಿ ಕಲಿಯಬೇಕು ಎಂದು ಟ್ವೀಟ್ ಮಾಡಿದ್ದಾರೆ. ಬೆಸ್ಟ್ ಎಡ್ಮಿನ್ ಈ ರೀತಿ ಟ್ರೋಲ್ ಮಾಡಿದ್ದನ್ನು ಇದೂವರೆಗೂ ನಾವು ನೋಡಿಲ್ಲ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

    ಕರ್ನಾಟಕ ರಾಜ್ಯಪಾಲ ವಜುಬಾಯಿವಾಲ ಅವರು ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿ 15 ದಿನಗಳ ಕಾಲಾವಕಾಶ ನೀಡಿದ ಬಳಿಕ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಶಾಸಕ ರಕ್ಷಣೆಗೆ ರೆಸಾರ್ಟ್ ಗಳ ಮೇರೆ ಹೋಗಲು ನಿರ್ಧರಿಸಿದ್ದಾರೆ. ಕೇರಳ ಅಲೆಪ್ಪಿಯಲ್ಲಿರುವ ರೆಸಾರ್ಟ್ ಒಂದರಲ್ಲಿ ಕರ್ನಾಟಕದ ಶಾಸಕರಿಗಾಗಿ 120 ರೂಂಗಳನ್ನು ಬುಕ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

  • ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯ ಬ್ರಾ ತೆಗೆಸಿದ ಪರೀಕ್ಷಾ ವೀಕ್ಷಕರು!

    ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿನಿಯ ಬ್ರಾ ತೆಗೆಸಿದ ಪರೀಕ್ಷಾ ವೀಕ್ಷಕರು!

    ತಿರುವಂತನಪುರಂ: ದೇಶಾದ್ಯಂತ ಮೇ 6ರಂದು ಭಾನುವಾರ ಮೆಡಿಕಲ್ ಹಾಗೂ ದಂತ ವೈದ್ಯಕೀಯ ಸೀಟುಗಳಿಗೆ ನಡೆಯುವ ನೀಟ್ ಪರೀಕ್ಷೆ ನಡೆದಿದೆ.

    ವಿದ್ಯಾರ್ಥಿನಿಯೊಬ್ಬರು ಪರೀಕ್ಷೆಯ ದಿನ ನನಗೆ ಒಳ ಉಡುಪು ಬಿಚ್ಚುವಂತೆ ಹೇಳಿದ್ದರು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಕೇರಳದ ಪಾಲಕ್ಕಾಡ್ ಸಮೀಪದ ಕೊಪ್ಪಾದ ಲಯನ್ಸ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ನೀಟ್ ಪರೀಕ್ಷೆ ಬರೆಯುವ ಮುನ್ನ ಪರೀಕ್ಷಾ ವೀಕ್ಷಕರು ವಿದ್ಯಾರ್ಥಿನಿಯ ಒಳಉಡುಪು ಬಿಚ್ಚುವಂತೆ ಹೇಳಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ.

    ವಿದ್ಯಾರ್ಥಿನಿ ಪರೀಕ್ಷೆ ಬರೆಯಲು ಕೊಠಡಿಗೆ ಹೋಗುವ ಸಂದರ್ಭದಲ್ಲಿ ಪರೀಕ್ಷಾ ವೀಕ್ಷಕರು ಪರೀಕ್ಷಿಸಿದ್ದಾರೆ. ಆಗ ವಿದ್ಯಾರ್ಥಿನಿ ಸೇರಿದಂತೆ ಕೆಲ ವಿದ್ಯಾರ್ಥಿನಿಯರ ಒಳ ಉಡುಪಿನಲ್ಲಿ ಮೆಟಲ್ ಹುಕ್ ಇದ್ದ ಕಾರಣ ಪರೀಕ್ಷಾ ವೀಕ್ಷಕರು ಶಂಕಿಸಿ ಒಳ ಉಡುಪುಗಳನ್ನು ತೆಗೆಸಿ ಪರೀಕ್ಷೆ ಬರೆಸಿದ್ದಾರೆ.

    ತಾನು ಪರೀಕ್ಷೆ ಬರೆಯುವ ವೇಳೆ ಪರೀಕ್ಷಾ ವೀಕ್ಷಕರು ತನ್ನನ್ನು ಅಸಭ್ಯವಾಗಿ ನೋಡುತ್ತಿದ್ದರು. ಆದ್ದರಿಂದ ನನಗೆ ಮುಜುಗರವಾಗಿ ಸರಿಯಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ನೊಂದ ವಿದ್ಯಾರ್ಥಿನಿ ಹೇಳಿದ್ದಾರೆ.

    ಪರೀಕ್ಷಾ ವೀಕ್ಷಕರು ನನ್ನ ಸಹೋದರಿ ಬಳಿ ಪದೇ ಪದೇ ಬಂದು ನಿಲ್ಲುತ್ತಿದ್ದರು. ಆದ್ದರಿಂದ ಅವಳು ಪ್ರಶ್ನೆಪತ್ರಿಕೆಯಿಂದ ತನ್ನನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ಇದರಿಂದ ನನ್ನ ಸಹೋದರಿಗೆ ಮಾನಸಿಕವಾಗಿ ಹಿಂಸೆಯಾಗಿದ್ದು, ಪರೀಕ್ಷೆಯನ್ನು ಸರಿಯಾಗಿ ಬರೆಯಲಿಲ್ಲ ಎಂದು ವಿದ್ಯಾರ್ಥಿನಿಯ ಸಹೋದರಿ ತಿಳಿಸಿದ್ದಾರೆ.

    ವಿದ್ಯಾರ್ಥಿನಿಯ ದೂರಿನ ಆಧಾರದ ಮೇರೆಗೆ ಪೊಲೀಸರು ಈ ಪ್ರಕರಣವನ್ನು ಐಪಿಸಿ ಸೆಕ್ಷನ್ 509 ಅಡಿಯಲ್ಲಿ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಅದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಇತರೆ ವಿದ್ಯಾರ್ಥಿಗಳನ್ನು ವಿಚಾರಣೆ ಮಾಡಿ ನಂತರ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

    ಈ ಬಾರಿ ಕೇರಳದಲ್ಲಿ ಸುಮಾರು ಒಂದು ಲಕ್ಷಕೂ ಅಧಿಕ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದಾರೆ.

  • ಮಂಗ್ಳೂರಲ್ಲಿ ನಕಲಿ ಮತದಾರರ ಸೃಷ್ಠಿ- ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು

    ಮಂಗ್ಳೂರಲ್ಲಿ ನಕಲಿ ಮತದಾರರ ಸೃಷ್ಠಿ- ಕಾಂಗ್ರೆಸ್ ವಿರುದ್ಧ ಬಿಜೆಪಿ ದೂರು

    ಮಂಗಳೂರು: ಚುನಾವಣೆಯಲ್ಲಿ ಅಧಿಕಾರಿಗಳನ್ನು ವಂಚಿಸಿ ನಕಲಿ ಮತ ಹಾಕೋದನ್ನು ಕೇಳಿದ್ದೇವೆ. ಆದರೆ, ಇಲ್ಲಿ ರಾಜಾರೋಷವಾಗಿಯೇ ನಕಲಿ ಮತದಾರರನ್ನು ಸೃಷ್ಟಿಸಲಾಗಿದೆ.

    ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಹಾಸ್ಟೆಲ್ ಗಳಲ್ಲಿ ವಾಸವಿರುವ ಹೊರರಾಜ್ಯದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಮತಪಟ್ಟಿಗೆ ಸೇರಿಸಲಾಗಿದೆ. ಕೇರಳ ಮೂಲದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರಿನಲ್ಲಿದ್ದು ತಾತ್ಕಾಲಿಕ ನೆಲೆಯಲ್ಲಿ ಹೊರಗಡೆ ಇದ್ದರೂ, ಅವರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ.

    ಈ ಪೈಕಿ ಕೆಲವರ ಹೆಸರು ಕೇರಳದಲ್ಲಿಯೂ ಚಾಲ್ತಿಯಲ್ಲಿರುವುದು ಕಂಡುಬಂದಿದೆ. ದೀನಾ ಶಾಜಿ ಎನ್ನುವ ವಿದ್ಯಾರ್ಥಿನಿ ಕೇರಳದಲ್ಲಿ ಇಲೆಕ್ಟೋರಲ್ ಡಿವಿಶನ್ (ಚುನಾವಣಾ ವಿಭಾಗ)ದಲ್ಲಿ ಹೆಸರು ಹೊಂದಿದ್ದರೂ, ಮಂಗಳೂರಿನಲ್ಲಿ ಮತಪಟ್ಟಿಗೆ ಹೆಸರು ನೋಂದಣಿ ಮಾಡಿಸಿದ್ದು, ಎರಡು ಕಡೆ ಮತದಾನದ ಹಕ್ಕು ಪಡೆದಿದ್ದು, ಅಪರಾಧವಾಗಿದೆ.

    ಮಂಗಳೂರಿನಲ್ಲಿ ಹೀಗೆ ಶೇ.350 ರಷ್ಟು ಕೇರಳ ಮೂಲದವರು ಎರಡು ಕಡೆ ಮತದಾನದ ಹಕ್ಕು ಹೊಂದಿರುವುದನ್ನು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿ, ಈ ನಕಲಿ ಮತದಾರರ ಸೃಷ್ಟಿಯ ಹಿಂದೆ ಕಾಂಗ್ರೆಸ್ ಕೈವಾಡ ಇದೆ. ಹಾಲಿ ಶಾಸಕ ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್ ಲೋಬೊ ಸೋಲುವ ಭೀತಿಯಿಂದ ಹೊರರಾಜ್ಯದ ವಿದ್ಯಾರ್ಥಿಗಳನ್ನು ಮತದಾನದ ಪಟ್ಟಿಗೆ ಸೇರಿಸಿದ್ದಾರೆ ಅಂತಾ ಆರೋಪಿಸಿದ್ದಾರೆ.

  • ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಿ- ಪ್ರಿಯತಮನ ಜೊತೆ ಹೊಸ ಜೀವನ ಆರಂಭಿಸಲು ತಂದೆ-ತಾಯಿ, ಇಬ್ಬರು ಹೆಣ್ಮಕ್ಕಳನ್ನೇ ಕೊಲೆಗೈದ್ಳು!

    ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಿ- ಪ್ರಿಯತಮನ ಜೊತೆ ಹೊಸ ಜೀವನ ಆರಂಭಿಸಲು ತಂದೆ-ತಾಯಿ, ಇಬ್ಬರು ಹೆಣ್ಮಕ್ಕಳನ್ನೇ ಕೊಲೆಗೈದ್ಳು!

    ತಿರುವನಂತಪುರ: ತನ್ನ ಪ್ರಿಯತಮನ ಜೊತೆ ಹೊಸ ಜೀವನ ನಡೆಸಲು ಅಡ್ಡಿಯಾಗುತ್ತಿದ್ದಾರೆಂದು ತಂದೆ-ತಾಯಿ ಹಾಗೂ ತನ್ನಿಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದ ಖತರ್ನಾಕ್ ಮಹಿಳೆಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

    ಬಂಧಿತ ಮಹಿಳೆಯನ್ನು 34 ವರ್ಷದ ಸೌಮ್ಯ ಎಂದು ಗುರುತಿಸಲಾಗಿದೆ. ಬಂಧಿಸಿದ ಬಳಿಕ ಬರೋಬ್ಬರಿ 11 ಗಂಟೆ ವಿಚಾರಣೆ ನಡೆಸಿದಾಗ ನಾಲ್ವರ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.

    ಹೆತ್ತವರು, ಮಗಳ ಕೊಲೆ: ಜನವರಿ 31ರಂದು ಸೌಮ್ಯ ಮಗಳು 8 ವರ್ಷದ ಐಶ್ವರ್ಯಾ ಸಾವನ್ನಪ್ಪಿದ್ದಳು. ಈ ಮೊದಲು ಮಾರ್ಚ್ 7ರಂದು ಆಕೆಯ ತಾಯಿ 68 ವರ್ಷದ ತಾಯಿ ಕಮಲ ಹಾಗೂ ಏಪ್ರಿಲ್ 13ರಂದು ತಂದೆ 76 ವರ್ಷದ ಕುನ್ಹಿಕನ್ನಣ್ ಮೃತಪಟ್ಟಿದ್ದರು. ಇನ್ನೊರ್ವ ಮಗಳು ಕೀರ್ತನಾ 2012ರಲ್ಲಿ ಮೃತಪಟ್ಟಿದ್ದಳು. ಈ ನಾಲ್ವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸದ ಪಕ್ಕದ ನಿವಾಸದಲ್ಲಿದ್ದು, ಇವೆರೆಲ್ಲರೂ ವಾಂತಿ ಬಾಧೆಯಿಂದ ಮೃತಪಟ್ಟಿದ್ದಾರೆಂದು ವರದಿಯಾಗಿತ್ತು.

    ಇತ್ತ ಒಬ್ಬರಾದ ಮೇಲೊಬ್ಬರಂತೆ ಕುಟುಂಬದವರೆಲ್ಲ ಸಾವನ್ನಪ್ಪಿದ್ದರಿಂದ ಸಂಶಯಗೊಂಡ ಕುಟುಂಬಸ್ಥರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ತನ್ನ ನಿವಾಸದ ಬಳಿಯೇ ನಿಗೂಢವಾಗಿ ವ್ಯಕ್ತಿಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಪಿಣರಾಯಿ ವಿಜಯನ್ ಪೊಲೀಸರಿಗೆ ತನಿಖೆ ನಡೆಸಿ ಕೊಲೆ ರಹಸ್ಯವನ್ನು ಬೇಧಿಸುವಂತೆ ಸೂಚಿಸಿದ್ದರು. ತನಿಖೆಗೆ ಒತ್ತಡ ಜಾಸ್ತಿಯಾಗುತ್ತಿದ್ದಂತೆ ಮೃತದೇಹಗಳನ್ನು ಸಮಾಧಿಯಿಂದ ಮೇಲಕ್ಕೆ ಎತ್ತಲಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದವರು ಮೃತದೇಹವನ್ನು ಪರಿಶೀಲಿಸಿದಾಗ ಐಶ್ವರ್ಯಾ ದೇಹದಲ್ಲಿ ಅಲ್ಯೂಮಿನಿಯಂ ಫಾಸ್ಫೈಡ್ ಇರುವ ಅಂಶ ಪತ್ತೆಯಾಗಿತ್ತು. ಸಾಧಾರಣವಾಗಿ ಕೀಟನಾಶಕದಲ್ಲಿ ಬಳಸುವ ಈ ರಾಸಾಯನಿಕ ದೇಹದಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಇದೊಂದು ಕೊಲೆ ಎನ್ನುವುದು ಪೊಲೀಸರಿಗೆ ಗೊತ್ತಾಯಿತು.

    ಈ ನಡುವೆ ತನ್ನ ಮೇಲೆ ಯಾರೂ ಸಂಶಯ ವ್ಯಕ್ತಪಡಿಸಬಾರದೆಂದು ಸೌಮ್ಯ ಮಕ್ಕಳು ಹಾಗೂ ಪೋಷಕರಿಗೆ ಕಂಡು ಬಂದಿದ್ದ ಸಮಸ್ಯೆ ನನ್ನಲ್ಲೂ ಕಂಡುಬರುತ್ತದೆ ಎಂದು ಹೇಳಿ ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿದ್ದಳು. ಚಿಕಿತ್ಸೆಯಿಂದ ಡಿಸ್ಚಾರ್ಜ್ ಆದ ಕೂಡಲೇ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ನಿಜವಾದ ಸಂಗತಿ ಪ್ರಕಟವಾಗಿದ್ದು, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿ ಸೌಮ್ಯಾಳನ್ನು 4 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

    ಕೊಲೆ ಮಾಡಿದ್ದು ಯಾಕೆ?
    ಮದುವೆಯಾಗಿ ಈಗಾಗಲೇ ಮಕ್ಕಳನ್ನು ಹೊಂದಿರುವ ಸೌಮ್ಯಳಿಗೆ ಅಕ್ರಮ ಸಂಬಂಧವಿತ್ತು. ಅಷ್ಟೇ ಅಲ್ಲದೇ ಗಂಡ ಜೊತೆ ಡೈವೋರ್ಸ್ ಪಡೆದಿದ್ದಳು. ಒಂದು ದಿನ ತಾಯಿ ಸೌಮ್ಯ ಪ್ರಿಯಕರ ಜೊತೆ ಲೈಂಗಿಕ ಸಂಪರ್ಕ ನಡೆಸುತ್ತಿದ್ದಾಗ ಸಣ್ಣ ಮಗಳು ಕೀರ್ತನಾ ನೋಡಿದ್ದಾಳೆ. ಈ ವಿಚಾರ ಗೊತ್ತಾದ ಕೂಡಲೇ ಸಿಟ್ಟುಗೊಂಡ ಸೌಮ್ಯ ಮಗಳನ್ನು ಇಲಿಪಾಷಾಣ ಹಾಕಿ 2012 ರಲ್ಲಿ ಕೊಲೆ ಮಾಡಿದ್ದಳು. ನಂತರ ತನ್ನ ಅಕ್ರಮ ಸಂಬಂಧಕ್ಕೆ ಮುಂದುವರಿಸಲು ಮನೆಯವರು ಅಡ್ಡಿ ಆಗುತ್ತಿದ್ದಾರೆ ಎಂದು ತಿಳಿದು ಹಂತ ಹಂತವಾಗಿ ಒಬ್ಬೊಬ್ಬರನ್ನು ಮುಗಿಸಲು ಪ್ಲಾನ್ ಮಾಡುತ್ತಾ ಬಂದಿದ್ದಾಳೆ. ಅದರಂತೆ ಎಲ್ಲರಿಗೂ ಆಹಾರದಲ್ಲಿ ಇಲಿ ಪಾಷಾಣ ಹಾಕಿ ಕೊಲೆ ಮಾಡಿದ್ದಾಳೆ. ನಿಗೂಢವಾಗಿ ಸಾವನ್ನಪ್ಪುತ್ತಿದ್ದ ಹಿನ್ನೆಲೆಯಲ್ಲಿ ಜನರು ಪ್ರಶ್ನೆ ಮಾಡುತ್ತಿದ್ದಾಗ ಆಕೆ ನನ್ನ ಮಗಳು ಹಿಂದೆ ವಾಂತಿ ಮಾಡಿ ಮೃತಪಟ್ಟಿದ್ದಳು. ಇದಾದ ನಂತರ ಪೋಷಕರು ಈ ರೀತಿಯಾಗಿ ಸಾವನ್ನಪ್ಪಿದ್ದಾರೆ. ಯಾವ ಕಾರಣಕ್ಕೆ ಇವರೆಲ್ಲ ಮೃತಪಡುತ್ತಿದ್ದಾರೆ ಎನ್ನುವುದು ತಿಳಿದಿಲ್ಲ ಎಂದು ಜನರಲ್ಲಿ ಹೇಳಿ ತಾನು ಈ ಪ್ರಕರಣದಲ್ಲಿ ಅಮಾಯಕಿ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಳು.

  • ಮದ್ವೆ ಫೋಟೋದಿಂದಾಗಿ ಸುದ್ದಿಯಾದ ಫೋಟೋಗ್ರಾಫರ್

    ಮದ್ವೆ ಫೋಟೋದಿಂದಾಗಿ ಸುದ್ದಿಯಾದ ಫೋಟೋಗ್ರಾಫರ್

    ತಿರುವನಂತಪುರ: ಸಾಮಾನ್ಯವಾಗಿ ಫೋಟೋಗ್ರಾಫರ್ ತೆಗೆದ ಫೊಟೋಗಳು ವೈರಲ್ ಆಗುವುದನ್ನು ನೋಡಿದ್ದೇವೆ. ಆದ್ರೆ ಇದೀಗ ವಧು-ವರರ ಫೋಟೋ ತೆಗೆಯುತ್ತಿರೋ ಫೋಟೋಗ್ರಾಫರೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದಾರೆ.

    ಈ ಘಟನೆ ಕೇರಳದಲ್ಲಿ ನಡೆದಿದೆ. ವಿಡಿಯೋದಲ್ಲಿ ಮಲಯಾಳಂ ಮಾತನಾಡುತ್ತಾ, ನಗುವುದನ್ನು ಗಮನಿಸಬಹುದು. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಪರ-ವಿರೋಧ ಕಾಮೆಂಟ್ ಗಳು ಹರಿದಾಡುತ್ತಿವೆ.

    ವಿಡಿಯೋದಲ್ಲೇನಿದೆ?: ವಧು-ವರರ ಫೋಟೋ ತೆಗೆಯುತ್ತಿರೋ ಫೋಟೋಗ್ರಾಫರ್, ಅವರ ಫೋಟೋವನ್ನು ವಿವಿಧ ಭಂಗಿಗಳಲ್ಲಿ ತೆಗೆಯಲೆಂದು ಮರವೇರುತ್ತಾರೆ. ನಂತ್ರ ಮರದ ಕೊಂಬೆಗೆ ಕಾಲುಗಳಿಂದ ಜೋತು ಬಿದ್ದು ತೆಗೆದಿದ್ದಾರೆ.

    ವಧು-ವರರು ಕೆಳಗೆ ನಿಂತು, ಫೋಟೋಗ್ರಾಫರ್ ಜೋತು ಬಿದ್ದು ಫೋಟೋ ತೆಗೆಯುತ್ತಿರುವ ದೃಶ್ಯವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋವನ್ನು ನವದಂಪತಿಗಳು ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿ ಹಾಕಿದ ತಕ್ಷಣವೇ ಸಾವಿರಾರು ಮಂದಿ ವೀಕ್ಷಿಸಿ ಕಮೆಂಟ್ ಮಾಡಿದ್ದಾರೆ. ಫೋಟೋ ತೆಗೆದಿರುವ ಫೋಟೋಗ್ರಾಫರ್ ನ ಸಾಹಸ ಮತ್ತು ಕಾರ್ಯತತ್ಪರತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಪ್ರಶಂಸೆ ವ್ಯಕ್ತವಾಗಿದೆ.

    ಮರದ ಕೊಂಬೆ ನೆಲದಿಂದ ಸುಮಾರು ಅಡಿಗಳ ಅಂತರದಲ್ಲಿ ಇದೆ. ಜೋತು ಬಿದ್ದ ಫೋಟೋಗ್ರಾಫರ್, ತನ್ನ ಕೈಯಲ್ಲಿ ಕ್ಯಾಮೆರಾ ಹಿಡಿದು ಫೋಟೊ ತೆಗೆಯುವುದರಲ್ಲಿ ಮಗ್ನರಾಗಿದ್ದರು. ಅವರ ಕಾಲುಗಳಷ್ಟೇ ಆಧಾರವಾಗಿತ್ತು. ಒಂದು ವೇಳೆ ಕಾಲುಗಳು ಜಾರಿದಲ್ಲಿ ಇಲ್ಲ ಕೊಂಬೆ ಮುರಿದಲ್ಲಿ ತಲೆಗೆ ಅಪಾಯ ಖಚಿತವಾಗಿತ್ತು ಅಂತಾ ಕೆಲವರು ಭಯ ವ್ಯಕ್ತಪಡಿಸಿದ್ದಾರೆ.

    ವಿಭಿನ್ನ ಭಂಗಿಗಳಲ್ಲಿ ಫೋಟೋ ತೆಗೆದ್ದಿದ್ದರಿಂದ ದಂಪತಿ ಫೋಟೋಗ್ರಾಫರ್ ಗೆ ಧನ್ಯವಾದ ಸಲ್ಲಿಸಿದ್ದಾರೆ. ಫೋಟೋ ತೆಗೆದ ನಂತರ ದಂಪತಿ ಖುಷಿಯಿಂದ ಸ್ಥಳದಿಂದ ಹೊರಟಿದ್ದಾರೆ. ಫೋಟೋಗ್ರಾಫರ್ ಕೂಗಿ ಕ್ಯಾಮೆರಾ ಹಿಡಿಯಲು ಹೇಳಿ ಮರದಿಂದ ಕೆಳಗೆ ಇಳಿದಿದ್ದಾರೆ.

     

  • ಬುಧವಾರ ಹೆರಿಗೆ, ಆದ್ರೆ ಮಂಗಳವಾರ ಆಸ್ಪತ್ರೆಯಿಂದಲೇ ಗರ್ಭಿಣಿ ನಾಪತ್ತೆ- ಮಹಿಳೆಯ ಹೈಡ್ರಾಮಕ್ಕೆ ಪೊಲೀಸರು ಸುಸ್ತು!

    ಬುಧವಾರ ಹೆರಿಗೆ, ಆದ್ರೆ ಮಂಗಳವಾರ ಆಸ್ಪತ್ರೆಯಿಂದಲೇ ಗರ್ಭಿಣಿ ನಾಪತ್ತೆ- ಮಹಿಳೆಯ ಹೈಡ್ರಾಮಕ್ಕೆ ಪೊಲೀಸರು ಸುಸ್ತು!

    ತಿರುವನಂತಪುರಂ: ಗರ್ಭಿಣಿಯಾಗದೇ ಪತಿಯ ಮನೆಯವರನ್ನು ನಂಬಿಸಿ, ಹೆರಿಗೆಂದು ಆಸ್ಪತ್ರೆಗೆ ಬಂದು ನಂತರ ನಾಪತ್ತೆಯಾಗಿ ಹೈಡ್ರಾಮ ಮಾಡಿದ್ದ ಮಹಿಳೆಯನ್ನು ಕೊನೆಗೂ ಪತ್ತೆಹಚ್ಚುವಲ್ಲಿ ಕೇರಳ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮದವೂರ್ ಸಮೀಪದ ಪಲ್ಲಿಕಲ್ ನ ನಿವಾಸಿ ಅನ್ಶಾದ್ ಪತ್ನಿ ಶಾಮ್ನಾ ಹೈಡ್ರಾಮ ಸೃಷ್ಟಿಸಿದ್ದ ಮಹಿಳೆ. ಈಕೆ ಗರ್ಭಿಣಿ ಆಗದಿದ್ದರೂ ಪತಿಯ ಮನೆಯವರಿಗೆ ತಾನು ಗರ್ಭಿಣಿ ಎಂದು ನಂಬಿಸಿದ್ದಾಳೆ. ನಂತರ ಅವರು ಬುಧವಾರ ನಗರದ ಎಸ್‍ಎಟಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವ ಕುರಿತು ವೈದ್ಯರು ಸೂಚಿಸಿದ್ದರು.

    ಇದರಂತೆ ಮಂಗಳವಾರ ಶಾಮ್ನಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶಾಮ್ನಾ ತಾನು ಗರ್ಭಿಣಿ ಆಗಿಲ್ಲ ಎನ್ನುವುದು ಕುಟುಂಬದವರಿಗೆ ತಿಳಿಯುತ್ತದೆ ಎಂದು ಭಯಗೊಂಡು ಮಂಗಳವಾರ ಮಧ್ಯಾಹ್ನದ ವೇಳೆಗೆ ಇದ್ದಕ್ಕಿದಂತೆ ಆಸ್ಪತ್ರೆಯಿಂದ ಕಣ್ಮರೆಯಾಗಿದ್ದಾಳೆ.

    ಈ ಬಗ್ಗೆ ಕುಟುಂಬದವರು ಮೆಡಿಕಲ್ ಕಾಲೇಜ್ ಪೊಲೀಸರಿಗೆ ದೂರು ನೀಡಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹುಡುಕಾಟವನ್ನು ಆರಂಭಿಸಿದ್ದಾರೆ. ಶಾಮ್ನಾ ಮಂಗಳವಾರ ಬೆಳಿಗ್ಗೆ ಪರೀಕ್ಷೆಗಾಗಿ ಹೊರ ರೋಗಿ ವಿಭಾಗಕ್ಕೆ ಬಂದಿದ್ದಾಳೆ. ಆದರೆ ಮಧ್ಯಾಹ್ನ 1.30 ರ ವೇಳೆಗೆ ಆಕೆ ಅಲ್ಲಿಂದ ಕಾಣೆಯಾಗಿದ್ದಳು.

    ಆಸ್ಪತ್ರೆಯ ಸಿಬ್ಬಂದಿ, ಪತಿ, ಅವರ ಮನೆಯವರು ಸೇರಿ ಇಡೀ ಆಸ್ಪತ್ರೆಯಲ್ಲಿ ಹುಡುಕಾಟ ನಡೆಸಿದರೂ ಆಕೆ ಮಾತ್ರ ಪತ್ತೆಯಾಗಿರಲಿಲ್ಲ. ಪೊಲೀಸರು ಆಕೆ ಮೊಬೈಲ್ ಫೋನ್ ಟವರ್ ಟ್ರೇಸ್ ಮಾಡಿದ್ದಾರೆ. ಮಂಗಳವಾರ ರಾತ್ರಿ ಆಕೆ ಕೇರಳದ ಎರ್ನಾಕುಲಂ ನಲ್ಲಿ ಇರುವುದು ಗೊತ್ತಾಗಿದೆ. ನಂತರ ಅಲ್ಲಿದ್ದ ಎಲ್ಲಾ ಆಸ್ಪತ್ರೆಯಲ್ಲಿ ಹುಡಕಾಟ ನಡೆಸಿದ್ದಾರೆ. ಅಲ್ಲೂ ಪತ್ತೆಯಾಗಿಲ್ಲ.

    ಪೊಲೀಸರು, ಪೋಷಕರು ಹುಡುಕುತ್ತಿದ್ದರೂ ಶಾಮ್ನಾ, ಸಂಬಂಧಿಗೆ ಕರೆ ಮಾಡಿ ನಾನು ಸೇಫಾಗಿ ಇದ್ದೀನಿ. ಭಯಪಡಬೇಡಿ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾಳೆ.

    ಪೊಲೀಸರು ಮತ್ತೆ ಆಕೆಯ ಫೋನ್ ಟ್ರೇಸ್ ಮಾಡಿ ನೋಡಿದಾಗ ವೆಲ್ಲೂರಿನಲ್ಲಿ ಪತ್ತೆಯಾಗಿದೆ. ಸದ್ಯ ಶಾಮ್ನಾ ಮೊಬೈಲ್ ಕರೆ ಆಧರಿಸಿ ಪೊಲೀಸರು ಪತ್ತೆಕಾರ್ಯ ನಡೆಸಿದ್ದಾರೆ. ಕೊನೆಗೆ ಕರುಣಗಪ್ಪಲ್ಲಿಯಲ್ಲಿ ಪತ್ತೆಯಾಗಿದ್ದಾಳೆ.

    ಪೊಲೀಸರು ಮಹಿಳೆಯನ್ನ ವೈದ್ಯರ ಬಳಿ ಪರೀಕ್ಷಿಸಿದಾಗ ಆಕೆ ಗರ್ಭಿಣಿಯಾಗಿಲ್ಲ ಎಂಬ ಸತ್ಯ ಹೊರಬಂದಿದೆ. ಬಳಿಕ ಆಕೆಯನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ಮಾಡಿದಾಗ ತಾನು ಗರ್ಭಿಣಿಯಲ್ಲ ಅದಕ್ಕಾಗಿ ಈ ರೀತಿ ನಾಟಕ ಮಾಡಿದೆ ಎಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

  • ಭಯಾನಕ ‘ಐರನ್ ಬೂಟ್’ ಬೈಕ್ ಗೇಮ್‍ಗೆ ಕೇರಳದ ಯುವಕ ಚಿತ್ರದುರ್ಗದಲ್ಲಿ ಬಲಿ

    ಭಯಾನಕ ‘ಐರನ್ ಬೂಟ್’ ಬೈಕ್ ಗೇಮ್‍ಗೆ ಕೇರಳದ ಯುವಕ ಚಿತ್ರದುರ್ಗದಲ್ಲಿ ಬಲಿ

    ಚಿತ್ರದುರ್ಗ: ಬೈಕ್ ಗೇಮ್ ಚಾಲೆಂಜ್ ನಲ್ಲಿ ಭಾಗಿಯಾಗಿದ್ದ ಯುವಕನೊಬ್ಬ ಚಾಲನೆ ವೇಳೆ ಲಾರಿಗೆ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

    ಮೂಲತಃ ಕೇರಳದ ಒಟ್ಟಾಪಾಲಂ ನಿವಾಸಿಯಾಗಿರುವ ಮಿಥುನ್ ಘೋಷ್ ಸಾವನ್ನಪ್ಪಿದ ಯುವಕ. ಈತ ಕೇರಳದ ಕಾಲೇಜುವ ಪಂಬಡಿ ನೆಹರು ಕಾಲೇಜಿನಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ.

    ಮಿಥುನ್ ಅಮೆರಿಕದ ಸಂಸ್ಥೆ ನಡೆಸುವ ಆನ್ ಲೈನ್ `ಐರನ್ ಬೂಟ್’ ಭಾಗವಹಿಸಲು ಕೇರಳ ದಿಂದ ಪ್ರಯಾಣ ಬೆಳೆಸಿದ್ದ. ತನ್ನ ಸ್ವ-ಸ್ಥಳ ಒಟ್ಟಾಪಾಲಂ ನಿಂದ ಮಂಗಳವಾರ ಪ್ರಯಾಣ ಬೆಳೆಸಿದ್ದ ಮಿಥುನ್, ತನ್ನ ಪೋಷಕರಿಗೆ ಕೊಯಂಬತ್ತೂರ್ ಗೆ ತೆರಳುವುದಾಗಿ ಹೇಳಿದ್ದ. ಆದರೆ ಆತ ಐರನ್ ಗೇಮ್ ನಲ್ಲಿ ಭಾಗವಹಿಸಲು ತೆರಳಿದ್ದು, ಗೇಮ್ ನ ಭಾಗವಾಗಿ ಬೆಂಗಳೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ತೆರಳುತ್ತಿದ್ದ ವೇಳೆ ಲಾರಿಗೆ ಬೈಕ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾನೆ.

    ಏನಿದು ಐರನ್ ಬೂಟ್ ಗೇಮ್: ಇದು ಅಮೆರಿಕ ಸಂಸ್ಥೆಯೊಂದು ನಡೆಸುವ ಆನ್ ಲೈನ್ ಬೈಕ್ ಗೇಮ್ ಆಗಿದ್ದು, ಒಂದೇ ದಿನದಲ್ಲಿ (24 ಗಂಟೆ) ಒಳಗೆ 1,624 ಕಿಮೀ ದೂರ ಬೈಕ್ ಸವಾರಿ ನಡೆಸುವ ಚಾಲೆಂಜ್ ಹೊಂದಿದೆ.

    ಮೊದಲು ಬೈಕ್ ಮೀಟರ್ ಬೋರ್ಡ್ ಫೋಟೋ ತೆಗೆದು ಆದನ್ನು ಆನ್ ಲೈನ್ ವಿಳಾಸದಲ್ಲಿ ಪೋಸ್ಟ್ ಮಾಡಬೇಕಾಗುತ್ತದೆ. ಬಳಿಕ ಗೇಮ್ ನಲ್ಲಿ ಭಾಗವಹಿಸುವ ವ್ಯಕ್ತಿಯ ಜರ್ನಿ ಆರಂಭವಾಗುತ್ತದೆ. ಆತ 24 ಗಂಟೆಗಳಲ್ಲಿ ಗುರಿ ತಲುಪಬೇಕಿರುತ್ತದೆ. ಗುರಿ ತಲುಪಿದ ಬಳಿಕ ಆನ್ ಲೈನ್ ನಲ್ಲೇ ಬೈಕ್ ಮೀಟರ್ ಬೋರ್ಡ್ ಫೋಟೋ ಸಲ್ಲಿಸಿದರೆ ಆತನಿಗೆ ಆ ತಂಡದ ಸದಸ್ಯತ್ವ ಸಿಗುತ್ತದೆ.

    ಐರನ್ ಬೂಟ್ ಗೇಮ್ ಚಾಲೆಂಜ್ ಪಡೆದಿದ್ದ ಮಿಥುನ್ ಕೊಯಾಂಬತ್ತೂರ್ ಮಾರ್ಗವಾಗಿ ಬೆಂಗಳೂರು, ಹುಬ್ಬಳ್ಳಿಗೆ ತೆರಳುವ ಯೋಜನೆ ನಿರ್ಮಿಸಿದ್ದ. ಈ ವೇಳೆ ಚಿತ್ರದುರ್ಗದ ಬಳಿ ಬೈಕ್ ಅಪಘಾತದಲ್ಲಿ ಗೇಮ್ ಪೂರ್ಣಗೊಳಿಸದೆ ಸಾವನ್ನಪ್ಪಿದ್ದಾನೆ.

    ಬೆಳಕಿಗೆ ಬಂದಿದ್ದು ಹೇಗೆ: ಮಿಥುನ್ ಸಾವಿನ ಬಳಿಕ ಆತನ ಬಗ್ಗೆ ಕೇರಳ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಈ ವೇಳೆ ಆತನ ಪೋಷಕರಿಗೆ ಕೇರಳ ಪೊಲೀಸರು ಮಾಹಿತಿ ನೀಡಿದ್ರು. ಆಗ ಮಿಥುನ್ ಕೊಠಡಿಯನ್ನು ಪರಿಶೀಲನೆ ನಡೆಸಿದ ವೇಳೆ ಆತ ಐರನ್ ಬೂಟ್ ಗೇಮ್ ನಲ್ಲಿ ಭಾಗವಹಿಸಿದ್ದ ಕುರಿತ ಮಾಹಿತಿ ತಿಳಿದುಬಂದಿದೆ. ಅಲ್ಲದೇ ಈ ಗೇಮ್‍ಗೆ ಸಂಬಂಧಿಸಿದ್ದ ಪೂರ್ಣ ಮಾಹಿತಿಯನ್ನು ಮಿಥುನ್ ತಿಳಿದಿದ್ದ. ಈಗಾಗಲೇ ಜಗತ್ತಿನಾದ್ಯಂತ ಈ ಚಾಲೆಂಜ್ ಪಡೆದು ಸುಮಾರು 60 ಸಾವಿರ ಮಂದಿ ಐರನ್ ಬೂಟ್ ಅಸೋಸಿಯೆಷನ್ ನಲ್ಲಿ ಸದಸ್ಯರಾಗಿದ್ದಾರೆ.

  • ಕಥುವಾ ರೇಪ್ ಪ್ರಕರಣ- ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದ ಬ್ಯಾಂಕ್ ಮ್ಯಾನೇಜರ್ ಅಮಾನತು

    ಕಥುವಾ ರೇಪ್ ಪ್ರಕರಣ- ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದ ಬ್ಯಾಂಕ್ ಮ್ಯಾನೇಜರ್ ಅಮಾನತು

    ಕೊಚ್ಚಿ: ದೇಶದೆಲ್ಲೆಡೆ ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ವೇಳೆ ಬಾಲಕಿಯನ್ನು ಕೊಂದಿದ್ದು ಒಳ್ಳೆದಾಯಿತೆಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದ ಕೇರಳ ಖಾಸಗಿ ಬ್ಯಾಂಕ್ ಮ್ಯಾನೇಜರ್ ಒಬ್ಬರನ್ನು ಅಮಾನತು ಮಾಡಲಾಗಿದೆ.

    ಕೇರಳದ ಕೊಚ್ಚಿಯ ಕೋಟಕ್ ಮಹೀಂದ್ರ ಬ್ಯಾಂಕ್ ಶಾಖೆಯ ಮ್ಯಾನೇಜರ್ ಆಗಿರುವ ವಿಷ್ಣು ನಂದಕುಮಾರ್ ಕೆಲಸ ಕಳೆದುಕೊಂಡ ವ್ಯಕ್ತಿ. ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಈತ ನೀಡಿರುವ ಪ್ರತಿಕ್ರಿಯೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

    ಜಮ್ಮು ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರರಕಣದ ಸಂಬಂಧ ವಿಷ್ಣು ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದ. ಚಿಕ್ಕ ವಯಸ್ಸಿನಲ್ಲೇ ಆಕೆಯನ್ನು ಕೊಲೆ ಮಾಡಿರುವುದು ಒಳ್ಳೆದಾಯಿತು, ಇಲ್ಲವಾದರೆ ಆಕೆ ದೊಡ್ಡವಳಾದ ಮೇಲೆ ಭಾರತದ ಮೇಲೆ ಬಾಂಬ್ ಎಸೆಯುತ್ತಿದ್ದಳು ಎಂದು ತನ್ನ ಕಾಮೆಂಟ್ ನಲ್ಲಿ ಬರೆದುಕೊಂಡಿದ್ದ. ಈತ ಎಂದು ಈ ಕಾಮೆಂಟ್ ಮಾಡಿದ್ದ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಆದರೆ ಆತನ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ತನ್ನ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದಾನೆ ಎಂದು ವರದಿಯಾಗಿದೆ.

    ಬಾಲಕಿಯ ಕುರಿತು ವಿಷ್ಣು ಮಾಡಿದ್ದ ಕಾಮೆಂಟ್ ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು, ಅಲ್ಲದೇ ಆತನನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಆಕ್ರೋಶ ವ್ಯಕ್ತವಾಗಿತ್ತು. ಟ್ವಿಟ್ಟರ್ ನಲ್ಲೂ ಆತನ ವಿರುದ್ಧ ವ್ಯಾಪಕ ಟೀಕೆ ಮಾಡಿ ಹಲವರು ಪ್ರತಿಕ್ರಿಯೆ ನೀಡಿದ್ದರು. ಅಲ್ಲದೇ #Dismiss_your_manager ಎಂದು ಟ್ರೆಂಡ್ ಮಾಡಿ ಟ್ರೋಲ್ ಮಾಡಿದ್ದರು.

    ಘಟನೆ ತೀವ್ರತೆ ಕುರಿತು ಎಚ್ಚೆತ್ತ ಕೋಟಕ್ ಬ್ಯಾಂಕ್ ಆಡಳಿತ ಮಂಡಳಿ ಶುಕ್ರವಾರ ಸಂಜೆ ಈ ಕುರಿತು ಪ್ರತಿಕ್ರಿಯೆ ನೀಡಿದೆ. ಏಪ್ರಿಲ್ 11 ಕ್ಕೆ ಅನ್ವಯ ಆಗುವಂತೆ ವಿಷ್ಣು ನಂದಕುಮಾರ್ ನನ್ನು ಸೇವೆಯಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ನೀಡಿ ತೆಗೆದು ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ. ಅಲ್ಲದೇ ಆತನ ಹೇಳಿಕೆಯನ್ನು ಖಂಡಿಸುತ್ತಿರುವುದಾಗಿ ತಿಳಿಸಿದೆ.

    https://www.facebook.com/KotakBank/photos/a.214267861951331.59019.210520628992721/1949907218387378/?type=3&theater

  • ಒಂದರ ಮೇಲೊಂದರಂತೆ  ಏಳು ಮೊಟ್ಟೆ ಹೊರ ಹಾಕಿದ ನಾಗರಾಜ!

    ಒಂದರ ಮೇಲೊಂದರಂತೆ ಏಳು ಮೊಟ್ಟೆ ಹೊರ ಹಾಕಿದ ನಾಗರಾಜ!

    ತಿರುವನಂತಪುರ : ನಾಗರಹಾವೊಂದು ಕೋಳಿ ಗೂಡಿಗೆ ನುಗ್ಗಿ 8 ಮೊಟ್ಟೆಗಳನ್ನು ನುಂಗಿದ್ದು, ಅದರಲ್ಲಿ 7 ಮೊಟ್ಟೆಗಳನ್ನು ಹೊರ ಹಾಕಿರುವ ವಿಡಿಯೋ ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಏಪ್ರಿಲ್ 12ರಂದು ಕೇರಳದ ಮನಂತವಾಡಿ ತಾಲೂಕಿನ ತಲಪ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಗಿರೀಶ್ ಎಂಬವರ ಮನೆಯ ಕೋಳಿ ಗೂಡಿಗೆ ನಾಗರಹಾವು ನುಗ್ಗಿತ್ತು. ಗೂಡಿನಲ್ಲಿದ್ದ ಕೋಳಿಯನ್ನು ಸಾಯಿಸಿದ ನಾಗರಹಾವು ಅಲ್ಲಿದ್ದ 8 ಮೊಟ್ಟೆಗಳನ್ನು ನುಂಗಿದೆ. ಕೂಡಲೇ ಭಯಬೀತರಾದ ಗಿರೀಶ್ ಉತ್ತರ ವಯನಾಡ್ ಬೇಗೂರು ಅರಣ್ಯ ಪ್ರದೇಶದ ವನ್ಯಜೀವಿ ರಕ್ಷಕರಾಗಿರುವ ವಿ.ಪಿ ಸುಜಿತ್ ಗೆ ವಿಷಯ ತಿಳಿಸಿದ್ದಾರೆ.

    ಮೊಟ್ಟೆಗಳನ್ನು ನುಂಗಿದ ಹಾವು ಚಲಿಸಲಾರದೇ ಗೂಡಿನಲ್ಲಿ ಉಳಿದುಕೊಂಡಿತ್ತು. ಸ್ಥಳಕ್ಕಾಗಮಿಸಿದ ಸುಜಿತ್, ಹಾವನ್ನು ಗೂಡಿನಿಂದ ಹೊರ ತೆಗೆದಿದ್ದಾರೆ. ಗೂಡಿನಿಂದ ಹೊರ ಬಂದ ನಾಗರಾಜ ನುಂಗಿದ 8 ಮೊಟ್ಟೆಗಳ ಪೈಕಿ 7 ನ್ನು ಹೊರಹಾಕಿದ್ದಾನೆ.

    ನಾಗರಹಾವುಗಳು ಮೊಟ್ಟೆಗಳನ್ನು ನುಂಗಿದಾಗ ಅವುಗಳಿಗೆ ಚಲಿಸಲು ಕಷ್ಟವಾಗುತ್ತದೆ. ಈ ವೇಳೆ ಹಾವುಗಳಿಗೆ ಜನರು ತೊಂದರೆ ನೀಡಬಾರದು. ರಕ್ಷಿಸಿರುವ ಹಾವನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಅಂತಾ ಸುಜಿತ್ ತಿಳಿಸಿದ್ದಾರೆ.