Tag: kerala

  • ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ದರ 1 ರೂ. ಇಳಿಕೆ!

    ಕೇರಳದಲ್ಲಿ ಪೆಟ್ರೋಲ್, ಡೀಸೆಲ್ ದರ 1 ರೂ. ಇಳಿಕೆ!

    ತಿರುವನಂತಪುರಂ: ಕೇರಳ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 1 ರೂ. ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

    ಈ ಕುರಿತು ಮಾಹಿತಿ ನೀಡಿದ ಕೇರಳ ಹಣಕಾಸು ಸಚಿವ ಥಾಮಸ್ ಐಸಾಕ್, ರಾಜ್ಯ ಸರ್ಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 1 ರೂ. ಕಡಿತಗೊಳಿಸುತ್ತಿದ್ದು, ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 500 ಕೋಟಿ ರೂ. ಅಧಿಕ ಹೊರೆ ಆಗಲಿದೆ. ರಾಜ್ಯದ ಆದಾಯದಲ್ಲಿ ಇಂಧನ ಮಾರಾಟದಿಂದ ಬರುವ ತೆರಿಗೆ ಮೂರನೇ ಸ್ಥಾನದಲ್ಲಿದೆ. ಜೂನ್ 1ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದರು.

    ಬುಧವಾರ ಕೇರಳ ರಾಜಧಾನಿ ತಿರುವನಂತಪುರಂ ನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 82.61 ರೂ. ಇದ್ದರೆ, ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 75.10 ರೂ. ಇದೆ. ತೈಲ ಬೆಲೆ ಹೆಚ್ಚಳ ದಿಂದ ರಾಜ್ಯ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿತ್ತು. ಹಲವರು ಬೆಲೆ ಕಡಿತಗೊಳಿಸುವಂತೆ ಸಲಹೆ ನೀಡಿದ್ದರು. ಅದ್ದರಿಂದ ತಕ್ಷಣದ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಕೇಂದ್ರ ಸರ್ಕಾರ 2014ರ ರಿಂದ ಇದುವರೆಗೂ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿದ್ದು, 2016 ರಲ್ಲಿ ಎರಡು ಬಾರಿ ಮಾತ್ರ ಅಬಕಾರಿ ಸುಂಕವನ್ನು ಇಳಿಕೆ ಮಾಡಿತ್ತು.

    ಯಾವ ರಾಜ್ಯದಲ್ಲಿ ವ್ಯಾಟ್ ಎಷ್ಟಿದೆ?
    ಕರ್ನಾಟಕ: ಪೆಟ್ರೋಲ್ – ಶೇ.30, ಡೀಸೆಲ್ – ಶೇ.19
    ಮಹಾರಾಷ್ಟ್ರ: ಪೆಟ್ರೋಲ್ – ಶೇ.47.64, ಡೀಸೆಲ್ – ಶೇ.28.39
    ಆಂಧ್ರ ಪ್ರದೇಶ: ಪೆಟ್ರೋಲ್ – ಶೇ. 38.83, ಡೀಸೆಲ್ – ಶೇ. 30.82
    ಮಧ್ಯಪ್ರದೇಶ: ಪೆಟ್ರೋಲ್ – ಶೇ. 38.79, ಡೀಸೆಲ್ – ಶೇ. 30.22
    ತೆಲಂಗಾಣ: ಪೆಟ್ರೋಲ್ – ಶೇ. 35.20, ಡೀಸೆಲ್ – ಶೇ.27.00

    ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಆದಾಯ ಸಂಗ್ರಹ ಮಾಡುವ ರಾಜ್ಯಗಳ ಪೈಕಿ ಕರ್ನಾಟಕಕ್ಕೆ ದೇಶದಲ್ಲೇ ಐದನೇ ಸ್ಥಾನವಿದೆ. ದೇಶದಲ್ಲೇ ಅತಿ ಹೆಚ್ಚು ತೆರಿಗೆ ವಿಧಿಸೋ ಮಹಾರಾಷ್ಟ್ರ ಸರ್ಕಾರ ಆದಾಯ ಸಂಗ್ರಹದಲ್ಲಿ ಮೊದಲ ಸ್ಥಾನವಿದೆ. ಸೇವಾ ತೆರಿಗೆ, ಪ್ರವೇಶ ತೆರಿಗೆಗಳ ಮೂಲಕ ರಾಜ್ಯಗಳು ಸಂಗ್ರಹ ಮಾಡುವ ಹಣ ಈ ಕೆಳಗಿನಂತಿದೆ.

    ತೆರಿಗೆ ಸಂಗ್ರಹದಲ್ಲಿ ಯಾರು ಮೊದಲು:
    ನಂ.1 ಮಹಾರಾಷ್ಟ್ರ: 23,160 ಕೋಟಿ ರೂ.
    ನಂ.2 ಗುಜರಾತ್: 15,958 ಕೋಟಿ ರೂ.
    ನಂ.3 ಉತ್ತರಪ್ರದೇಶ: 15, 850 ಕೋಟಿ ರೂ.
    ನಂ.4 ತಮಿಳುನಾಡು: 12, 563 ಕೋಟಿ ರೂ.
    ನಂ.5 ಕರ್ನಾಟಕ: 11,103 ಕೋಟಿ ರೂ.

    ಯಾರಿಗೆ ಎಷ್ಟು?
    ಪೆಟ್ರೋಲ್ ಮೇಲೆ ಅಬಕಾರಿ ಸುಂಕ: 21.48 ಪೈಸೆ (ಲೀಟರ್ ಗೆ)
    ಪೆಟ್ರೋಲ್ ಮೇಲೆ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 3.23 (ಲೀಟರ್ ಗೆ)

    ಡೀಸೆಲ್ ಮೇಲೆ ಅಬಕಾರಿ ಸುಂಕ: 17.33 (ಲೀಟರ್ ಗೆ)
    ಡೀಸೆಲ್ ಮೇಲಿನ ವ್ಯಾಟ್: ಶೇ.27
    ಡೀಲರ್ಸ್‍ಗಳ ಕಮಿಷನ್: 2.17 (ಲೀಟರ್ ಗೆ)

  • ಗೆಳತಿಗೆ ಅಪ್ಪುಗೆ ನೀಡಿ ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ 91.2% ಅಂಕ ಪಡೆದ!

    ಗೆಳತಿಗೆ ಅಪ್ಪುಗೆ ನೀಡಿ ಸಸ್ಪೆಂಡ್ ಆಗಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ 91.2% ಅಂಕ ಪಡೆದ!

    ತಿರುವನಂತಪುರಂ: ಕಳೆದ ಕೆಲ ದಿನಗಳ ಹಿಂದೆ ಗೆಳತಿಗೆ ಅಪ್ಪುಗೆ ನೀಡಿ ಅಮಾನತುಗೊಂಡಿದ್ದ ವಿದ್ಯಾರ್ಥಿ ಸಿಬಿಎಸ್‍ಸಿ 12 ತರಗತಿಯ ಪರೀಕ್ಷೆಯಲ್ಲಿ 91.2% ಅಂಕ ಪಡೆದಿದ್ದಾನೆ.

    ಈ ಕುರಿತು ಸ್ಥಳೀಯ ಮಾಧ್ಯಮದೊಂದಿಗೆ ಸಂತಸ ವ್ಯಕ್ತಪಡಿಸಿರುವ ವಿದ್ಯಾರ್ಥಿ ಪೋಷಕರು ಶಾಲೆಯ ಆಡಳಿತ ಮಂಡಳಿ ನಿರ್ಧಾರದಿಂದ ಸಾಕಷ್ಟು ಬೇಸರ ಉಂಟಾಗಿತ್ತು. ಆದರೆ ವಿದ್ಯಾರ್ಥಿಗಳ ಭವಿಷ್ಯದ ಕಾರಣ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. ಸದ್ಯ ತಮ್ಮ ಮಗ ಎಲ್ಲವನ್ನು ಬದಿಗೊತ್ತಿ ಉತ್ತಮ ಅಂಕ ಪಡೆದಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.

    ವಿದ್ಯಾರ್ಥಿ ಎದುರಿಸಿದ್ದ ಪರೀಕ್ಷೆಯಲ್ಲಿ ಆಂಗ್ಲಭಾಷೆಯಲ್ಲಿ 87, ಅರ್ಥಶಾಸ್ತ್ರದಲ್ಲಿ 99, ವ್ಯವಹಾರ ಅಧ್ಯಯನದಲ್ಲಿ 90, ಲೆಕ್ಕಶಾಸ್ತ್ರದಲ್ಲಿ 88, ಮನಃಶಾಸ್ತ್ರದಲ್ಲಿ 92 ಅಂಕಗಳನ್ನು ಗಳಿಸಿದ್ದಾನೆ.

    ಏನಿದು ಪ್ರಕರಣ?
    ಕಳೆದ ಡಿಸೆಂಬರ್ ಅವಧಿಯಲ್ಲಿ ಕೇರಳದ ಸೇಂಟ್ ಥಾಮಸ್ ಸೆಂಟ್ರಲ್ ಶಾಲೆಯಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ವಿದ್ಯಾರ್ಥಿ ತನ್ನ ಗೆಳತಿಯನ್ನು ಅಪ್ಪಿಕೊಂಡಿದ್ದ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಆಗಿದ್ದಕ್ಕೆ ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಶಾಲೆ ಈ ನಿರ್ಣಯ ಕೈಗೊಂಡಿತ್ತು.

    ಶಾಲೆಯ ನಿರ್ಧಾರದ ವಿರುದ್ಧ ವಿದ್ಯಾರ್ಥಿ ಫೋಷಕರು ಕೇರಳ ಹೈಕೋರ್ಟ್ ಹಾಗೂ ಮಾನವ ಹಕ್ಕುಗಳ ಆಯೋಗದ ಮೆಟ್ಟಿಲು ಸಹ ಹತ್ತಿದ್ದರು. ಆದರೆ ನ್ಯಾಯಾಲಯ ಶಾಲೆಗೆ ಶಿಸ್ತು ನಿಯಮ ರೂಪಿಸುವ ಅಧಿಕಾರ ಇದೇ ಎಂದು ಅಭಿಪ್ರಾಯಪಟ್ಟು ಪ್ರಕರಣದಲ್ಲಿ ಮಧ್ಯ ಪ್ರವೇಶಿಸಲು ನಿರಾಕರಿಸಿತ್ತು. ಬಳಿಕ ಸಂಸದ ಶಶಿ ತರೂರ್ ಮಧ್ಯ ಪ್ರವೇಶದಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದು ಕೊಳ್ಳಲು ಅವಕಾಶ ನೀಡಲಾಗಿತ್ತು.

  • ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ನಿಪಾ ವೈರಸ್ ಬಾವಲಿಗಳಿಂದ ಬರಲ್ಲ -ವರದಿಯಲ್ಲಿ ಸಾಬೀತು

    ಭೋಪಾಲ್: ಇಂದು ಕೇರಳದಲ್ಲಿ ಹರಡುತ್ತಿರುವ ನಿಪಾ ವೈರಸ್ ಗೆ ದೇಶದ ಜನರು ಆತಂಕಗೊಂಡಿದ್ದಾರೆ. ನಿಪಾ ವೈರಸ್ ಬಾವಲಿಗಳಿಂದ ಬರುತ್ತೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಮಧ್ಯ ಪ್ರದೇಶ ರಾಜ್ಯದ ಭೋಪಾಲ ನಗರದ ‘ಹೈ ಸೆಕ್ಯೂರಿಟಿ ಅನಿಮಲ್ ಡಿಸೀಸ್ ಲ್ಯಾಬೊರೆಟರಿ’ ನಿಪಾ ವೈರಸ್ ಬಾವಲಿಗಳಿಂದ ಬರಲ್ಲ ಎಂದು ಸ್ಪಷ್ಟಪಡಿಸಿದೆ.

    ಕೇರಳದಿಂದ ಒಟ್ಟು ಸ್ಯಾಂಪಲ್ ರೂಪದಲ್ಲಿ 21 ಬಾವಲಿ ಮತ್ತು ಹಂದಿಗಳನ್ನು ಭೋಪಾಲ್ ನ ಲ್ಯಾಬೊರೇಟರಿಗೆ ಕಳುಹಿಸಿಕೊಡಲಾಗಿತ್ತು. ಈ ಸ್ಯಾಂಪಲ್‍ಗಳ ವರದಿ ಶುಕ್ರವಾರ ಬಂದಿದ್ದು, ಎಲ್ಲ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡು ಬಂದಿಲ್ಲ. ಈ ಹಿಂದೆ ಕೇಂದ್ರ ಪ್ರಾಣಿ-ಪಶು ಇಲಾಖೆಯ ಕಮಿಷನರ್ ಎಸ್‍ಪಿ ಸುರೇಶ್, ನಿಪಾ ವೈರಸ್ ನಿಂದ ಸಾವನ್ನಪ್ಪಿದವರ ಕುಟುಂಬಗಳ ಸುತ್ತಲಿನ ಪ್ರಾಣಿಗಳನ್ನು ಪರೀಕ್ಷೆಗೆ ಒಳಪಡಿಸಿದ್ರು. ಆದ್ರೆ ಅಲ್ಲಿಯ ಪ್ರಾಣಿಗಳಲ್ಲಿ ನಿಪಾ ವೈರಸ್ ಲಕ್ಷಣಗಳು ಕಂಡು ಬಂದಿರಲಿಲ್ಲ ಅಂತಾ ತಿಳಿಸಿದ್ರು.

    ನಿಪಾ ವೈರಸ್ ದಾಳಿಗೆ ತುತ್ತಾಗಿರುವ ಕೇರಳದ ಪೆರಂಬರಾ ಗ್ರಾಮದಿಂದ ಕೆಲ ಪ್ರಾಣಿಗಳನ್ನು ಸ್ಯಾಂಪಲ್ ರೂಪದಲ್ಲಿ ತೆಗೆದುಕೊಂಡು ಭೋಪಾಲ್‍ನ ಲ್ಯಾಬೋರೆಟರಿಗೆ ಕಳುಹಿಸಲಾಗಿತ್ತು.

    ಭೋಪಾಲ್ ಲ್ಯಾಬೊರೇಟರಿ ವರದಿಯ ಪ್ರಕಾರ, ನಿಪಾ ವೈರಸ್ ಬಾವಲಿಗಳಿಂದ ಬಂದಿಲ್ಲ ಅಂತಾ ಹೇಳಲಾಗಿತ್ತು. ಸದ್ಯ ಈ ಗೊಂದಲ ಇನ್ನು ಮುಂದುವರೆದಿದ್ದು, ಮತ್ತಷ್ಟು ನಿಪಾ ವೈರಸ್ ಪೀಡಿತ ಗ್ರಾಮಗಳಿಂದ ಪ್ರಾಣಿಗಳ ರಕ್ತವನ್ನು ಪಡೆದು ಪರೀಕ್ಷೆ ನಡೆಸಲಾಗುವುದು ಎಂದು ಲ್ಯಾಬೊರೆಟರಿ ಮೂಲಗಳು ತಿಳಿಸಿವೆ.

  • ಗಮನಿಸಿ, ಶಿವಮೊಗ್ಗ ಜಿಲ್ಲೆಯ ಯುವಕನಿಗೆ ನಿಪಾ ಸೋಂಕು ಇಲ್ಲ

    ಗಮನಿಸಿ, ಶಿವಮೊಗ್ಗ ಜಿಲ್ಲೆಯ ಯುವಕನಿಗೆ ನಿಪಾ ಸೋಂಕು ಇಲ್ಲ

    ಶಿವಮೊಗ್ಗ: ಜಿಲ್ಲೆಯ ಸಾಗರದ ತಾಲೂಕಿನ ಯುವಕನ ರಕ್ತದ ಮಾದರಿಯಲ್ಲಿ ನಿಪಾ ವೈರಸ್ ಸೋಂಕು ಪತ್ತೆಯಾಗಿಲ್ಲ ಎಂದು ಡಿಹೆಚ್‍ಒ ಡಾ. ವೆಂಕಟೇಶ್ ಹೇಳಿದ್ದಾರೆ.

    ನಿಪಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯ ಲ್ಯಾಬ್ ನಿಂದ ರಕ್ತದ ಮಾದರಿಯ ಪರೀಕ್ಷೆಯ ಫಲಿತಾಂಶ ಬಂದಿದ್ದು, ಅದರಲ್ಲಿ ನೆಗೆಟಿವ್ ಬಂದ ಕಾರಣ ಜಿಲ್ಲೆಯಲ್ಲಿ ಯಾರು ಭಯ ಪಡುವ ಅಗತ್ಯವಿಲ್ಲ ಎಂದು ಡಿಹೆಚ್‍ಒ ಡಾ. ವೆಂಕಟೇಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.  ಇದನ್ನು ಓದಿ: ಮಲೆನಾಡಿಗೂ ಕಾಲಿಟ್ಟಿತೇ ನಿಪಾ ಸೋಂಕು?

    ಕೇರಳದ ಕಾಸರಗೋಡಿನಲ್ಲಿ ಕೆಲಸ ಮಾಡುತ್ತಿದ್ದ ಶಿರವಂತೆಯ ಮಿಥುನ್ ನಿಪಾ ವೈರಸ್ ಹಾವಳಿ ಜೋರಾಗಿದ್ದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಮರಳಿದ್ದರು. ಈ ವೇಳೆ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಸಾಗರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೇರಳದಲ್ಲಿ ಈ ಸೋಂಕಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಆಗಮಿಸಿದ್ದ ಮಿಥುನ್‍ಗೂ ನಿಫಾ ಸೊಂಕು ತಗುಲಿದೆ ಎನ್ನುವ ಶಂಕೆ ಉಂಟಾಗಿತ್ತು.

  • ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

    ಕೋಝಿಕೋಡ್: ನರ್ಸಿಂಗ್ ಎಂಬುದು ಒಂದು ಕಷ್ಟದ ಕೆಲಸ. ಹೀಗಾಗಿ ನನ್ನ ಪತ್ನಿಯ ಬಗ್ಗೆ ನನಗೆ ಹೆಮ್ಮೆಯಾಗುತ್ತದೆ ಅಂತ ಕೇರಳದಲ್ಲಿ ಇತ್ತೀಚೆಗೆ ನಿಪಾ ವೈರಸ್ ಗೆ ಬಲಿಯಾದ ಲಿನಿ ಪತಿ ಸಜೀಶ್ ಹೇಳಿದ್ದಾರೆ.

    ನನ್ನ ಪತ್ನಿ ಎಷ್ಟು ನಿಯತ್ತಿನಿಂದ ಕೆಲಸ ಮಾಡುತ್ತಿದ್ದಳು ಅಂದ್ರೆ ಆಕೆಗೆ ಹುಷಾರಿಲ್ಲ ಅಂದ್ರೂ ರಜೆ ಹಾಕದೇ ಕಷ್ಟಪಟ್ಟಾದರೂ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದಳು ಅಂತ 36 ವರ್ಷದ ಸಜೀಶ್ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಗೆ ಕೇರಳದ ಲಿನಿ ಬಲಿಯಾಗಿದ್ದರು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 31 ವರ್ಷ ಲಿನಿ, ತನ್ನ ಸಾವು ಖಚಿತವಾದ ಹಿನ್ನೆಲೆಯಲ್ಲಿ ಪತಿಗೆ ಭಾವನಾತ್ಮಕ ಪತ್ರ ಬರೆದಿದ್ದರು. ಈ ವಿಚಾರ ತಿಳಿದು ಕೂಡಲೇ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದ ಪತಿ ಸಜೀಶ್ ಊರಿಗೆ ವಾಪಸ್ಸಾಗಿದ್ದರು. ಅಲ್ಲದೇ ಕೇವಲ 2 ನಿಮಿಷವಷ್ಟೇ ಪತ್ನಿ ಮುಖ ನೋಡಿದ್ದರು. ಭಾನುವಾರ ಸಂಜೆ ಲಿನಿ ಮೃತಪಟ್ಟಿದ್ದರು.

    `ಭಾನುವಾರ ಬೆಳಗ್ಗೆ ನಾನು ಪತ್ನಿಯನ್ನು ನೋಡಲೆಂದು ಆಸ್ಪತ್ರೆಗೆ ತೆರಳಿದ್ದೆ. ಆದ್ರೆ ಈ ವೇಳೆ ಅವಳ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಲಾಗಿತ್ತು. ಹೀಗಾಗಿ ನನಗೆ ಅವಳೊಂದಿಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ. ಕೇವಲ 2 ನಿಮಿಷವಷ್ಟೇ ಅವಳನ್ನು ನೋಡಿ, ಅವಳ ಮೇಲೆ ನನ್ನ ಕೈಯಿಟ್ಟೆ. ಆಗ ಅವಳಿಗೆ ಪ್ರಜ್ಞೆಯಿತ್ತು ‘ಅಂತ ಅವರು ವಿವರಿಸಿದ್ರು.

    ಬಿಡುವಿಲ್ಲದೇ ತಾನು ಅಸೌಖ್ಯದಿಂದ ಇದ್ದರೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದಳು. ಹೀಗಾಗಿ ನನಗೆ ಅವಳ ಬಗ್ಗೆ ಗೌರವ ಹಾಗೂ ಹೆಮ್ಮೆಯಿದೆ ಎಂದು ನೆನಪು ಮಾಡಿಕೊಂಡು ದುಃಖಿತರಾದ್ರು. ಇದನ್ನೂ ಓದಿ: ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ಸಾವಿಗೂ ಮೊದಲು ಅಂದ್ರೆ ಬುಧವಾರ ಫೋನ್ ಕರೆಯಲ್ಲಿ ಮಾತನಾಡಿದಾಗ, ನನಗೆ ಜ್ವರ ಬರೋ ಹಾಗೆ ಇದೆ ಅಂತ ಹೇಳಿದ್ದಳು. ಆಗ ನಾನು ರಜೆ ಮಾಡಿ ರೆಸ್ಟ್ ಮಾಡು ಅಂತ ಹೇಳಿದ್ದೆ. ಆದ್ರೆ ಆಸ್ಪತ್ರೆಯಲ್ಲಿ ತುಂಬಾ ರೋಗಿಗಳಿದ್ದಾರೆ. ಹೀಗಾಗಿ ರಜೆ ತಗೊಳಲ್ಲ ಅಂತ ಹೇಳಿದಳು. ಅಲ್ಲದೇ ಕೆಲಸಕ್ಕೆಂದು ಆಸ್ಪತ್ರೆಗೆ ತೆರಳಿದ್ದಳು ಅಂದ್ರು. ಇದನ್ನೂ ಓದಿ: ನಿಪಾ ವೈರಸ್ ಗೆ ಬಲಿಯಾದ ನರ್ಸ್ ಕುಟುಂಬಕ್ಕೆ 20 ಲಕ್ಷ ರೂ.: ಪತಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಕೇರಳ

    ಡೆತ್ ನೋಟ್:
    ತನ್ನ ಸಾವು ಖಚಿತವಾದ ಲಿನಿ ತನ್ನ ಪತಿ ಸಜೀಶ್ ಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಈ ಪತ್ರ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಸಜೀಶ್ ಅವರಿಗೂ ಈ ಪತ್ರ ತಲುಪಿತ್ತು. ಲಿನಿ ಅವರು ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರು. ಅಲ್ಲದೇ ಇತ್ತ 5 ಹಾಗೂ 2 ವರ್ಷದ ಮಕ್ಕಳ ಜೊತೆಯೂ ಕಾಲ ಕಳೆಯುತ್ತಿದ್ದರು. ಸದ್ಯ ಈ ಇಬ್ಬರೂ ಮಕ್ಕಳು ಇನ್ನೂ ತಾಯಿಯ ಬರುವಿಕೆಗೆ ಕಾದು ಕುಳಿತಿದ್ದು, ಮಕ್ಕಳ ಮುಖವನ್ನು ನೋಡಿದಾಗ ಕರುಳು ಚುರುಕ್ ಅನ್ನುತ್ತದೆ. ಇದನ್ನೂ ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಇದರಲ್ಲಿ ದೊಡ್ಡ ಮಗ ತನ್ನ ತಾಯಿಗೆ ಕರೆ ಮಾಡು ಮಾತಾಡಬೇಕು ಅಂತ ಹಠ ಹಿಡಿಯುತ್ತಿದ್ದರೆ, ಸಣ್ಣವ ಇನ್ನೂ ಚಿಕ್ಕವನಾಗಿದ್ದಿದ್ದರಿಂದ ಮಾತನಾಡುತ್ತಿಲ್ಲ. ಆದ್ರೆ ಈ ಇಬ್ಬರೂ ಅಮ್ಮ ಹೊರಗಡೆ ಹೋಗಿದ್ದಾಳೆ, ಇನ್ನೇನೋ ಬರುತ್ತಾಳೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಅಂತ ಲಿನಿ ಸೋದರ ಸಂಬಂಧಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಸದ್ಯ ಲಿನಿ ಪತಿಗೆ ಸರ್ಕಾರಿ ಕೆಲಸ ಹಾಗೂ 20 ಲಕ್ಷ ಪರಿಹಾರವನ್ನು ಕೊಡುವುದಾಗಿ ಕೇರಳ ಸರ್ಕಾರ ಘೋಷಿಸಿದೆ. ಹೀಗಾಗಿ ಸಜೀಶ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

  • ನಿಪಾ ವೈರಸ್ ಗೆ ಬಲಿಯಾದ ನರ್ಸ್ ಕುಟುಂಬಕ್ಕೆ 20 ಲಕ್ಷ ರೂ.: ಪತಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಕೇರಳ

    ನಿಪಾ ವೈರಸ್ ಗೆ ಬಲಿಯಾದ ನರ್ಸ್ ಕುಟುಂಬಕ್ಕೆ 20 ಲಕ್ಷ ರೂ.: ಪತಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಕೇರಳ

    ತಿರುವನಂತಪುರಂ: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಲಿನಿ ಕುಟುಂಬಕ್ಕೆ ಕೇರಳ ಸರ್ಕಾರದ 20 ಲಕ್ಷ ರೂ. ಪರಿಹಾರ ಹಾಗೂ ಪತಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆಯನ್ನು ನೀಡಿದೆ.

    ಈ ಕುರಿತು ಮಾಹಿತಿ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ನಿಪಾ ಸೋಂಕು ಹರಡುವಿಕೆಯ ಸದ್ಯದ ಪರಿಸ್ಥಿತಿ ಬಗ್ಗೆ ಕ್ಯಾಬಿನೆಟ್ ಮಾಹಿತಿ ಪಡೆದಿದ್ದು, ಇದುವರೆಗೂ ಸಾವನ್ನಪ್ಪಿರುವ ಕುರಿತ ನಿಖರ ಮಾಹಿತಿ ಸಂಗ್ರಹಿಸಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಸೋಂಕು ಹರಡಿ ಸಾವನ್ನಪ್ಪಿದ್ದ ಲಿನಿ ಅವರ ಕುಟುಂಬ ಸದಸ್ಯರಿಗೆ ಸೋಂಕು ವ್ಯಾಪಿಸಿದ್ದರೆ ಚಿಕಿತ್ಸೆಗಾಗಿ 5 ಲಕ್ಷ ರೂ. ನೀಡುವ ಕುರಿತು ಭರವಸೆ ನೀಡಿದ್ದಾರೆ.

    ಸೋಂಕಿನ ತಡೆಯುವ ಹಾಗೂ ಈ ಕುರಿತು ಜಾಗೃತಿ ಮೂಡಿಸುವ ಕುರಿತು ರಾಜ್ಯದ ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸೋಂಕು ನಿಯಂತ್ರಣಗೊಂಡ ಬಳಿಕವೂ ಕೆಲ ದಿನಗಳ ಕಾಲ ಈ ಕುರಿತು ಹೆಚ್ಚಿನ ಜಾಗೃತಿ ವಹಿಸಲಾಗುತ್ತದೆ. ಸೋಂಕು ತಡೆಯಲು ಬೇಕಾದ ಪೂರಕ ಸಹಾಯವನ್ನು ಕೇಂದ್ರ ಸರ್ಕಾರವು ಸಕಾಲದಲ್ಲಿ ನೀಡಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಶೈಲಜಾ ತಿಳಿಸಿದ್ದಾರೆ.

    ಇದುವರೆಗೂ ಯಾವುದೇ ಹೊಸ ವ್ಯಕ್ತಿಗೆ ಸೋಂಕು ಹರಡಿರುವ ಕುರಿತು ಮಾಹಿತಿ ಲಭಿಸಿಲ್ಲ. ಈ ಕುರಿತು ಹೆಚ್ಚಿನ ಜಾಗ್ರತಿ ವಹಿಸಲಾಗಿದೆ. ಕೇಂದ್ರ ಸರ್ಕಾರ ಸೋಂಕು ತಡೆಗೆ ಬೇಕಾದ ಮಾತ್ರೆಗಳನ್ನು ಬಳಸುವಂತೆ ಸಲಹೆ ನೀಡಿದೆ ಎಂದರು.

  • ಕೇರಳದ ಕರಾವಳಿಯಲ್ಲಿ ಡ್ಯುಯೆಟ್ ಹಾಡಿದ ಅಂಬಿ-ಸುಹಾಸಿನಿ

    ಕೇರಳದ ಕರಾವಳಿಯಲ್ಲಿ ಡ್ಯುಯೆಟ್ ಹಾಡಿದ ಅಂಬಿ-ಸುಹಾಸಿನಿ

    ಬೆಂಗಳೂರು: ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈಗ ಅವರು ಹಿರಿಯ ನಟಿ ಸುಹಾಸಿನಿ ಜೊತೆ ಡ್ಯುಯೆಟ್ ಹಾಡುತ್ತಿದ್ದಾರೆ.

    ರೆಬಲ್ ಸ್ಟಾರ್ ಅಂಬರೀಶ್ ಅಭಿನಯದ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಚಿತ್ರೀಕರಣ ಶೂಟಿಂಗ್ ವೇಗವಾಗಿ ನಡೆಯುತ್ತಿದೆ. ಅಂಬರೀಶ್ ರಾಜಕೀಯ ಬಿಟ್ಟು ತಮ್ಮನ್ನು ತಾವು ಸಿನಿಮಾದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದ ಚಿತ್ರದ ಶೂಟಿಂಗ್ ಸತತವಾಗಿ ನಡೆಯುತ್ತಿದೆ.

    ಈಗ `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾದ ಶೂಟಿಂಗ್ ಕೇರಳದಲ್ಲಿ ನಡೆಯುತ್ತದೆ. ಕೇರಳದ ಕರಾವಳಿಯಲ್ಲಿ ಅಂಬರೀಶ್ ಮತ್ತು ನಟಿ ಸುಹಾಸಿನಿ ಅವರ ಪಾತ್ರದ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತದೆ. ಈ ವೇಳೆ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ ಮತ್ತು ನಿರ್ಮಾಪಕ ಜಾಕ್ ಮಂಜು ಕೂಡ ಕಾಣಿಸಿಕೊಂಡಿದ್ದಾರೆ. ಆದ್ದರಿಂದ ಇದು ಹಾಡಿನ ಶೂಟಿಂಗ್ ಎನ್ನಲಾಗಿದೆ.

    ಈಗಾಗಲೇ ಚಿತ್ರತಂಡ ಬಹುತೇಕ ಅಂದರೆ ಸಿನಿಮಾದಲ್ಲಿ ಸುದೀಪ್ ಮತ್ತು ಶ್ರುತಿ ಹರಿಹರನ್ ಅವರ ಪಾತ್ರದ ಶೂಟಿಂಗ್ ಮುಗಿಸಿದ್ದು, ಚಿತ್ರೀಕರಣ ಅಂತಿಮ ಘಟ್ಟ ತಲುಪಿದೆ. ಈ ಸಿನಿಮಾದಲ್ಲಿ ನಟ ಅಂಬರೀಶ್ ನಾಯಕರಾಗಿದ್ದಾರೆ. ಅಂಬರೀಶ್ ಅವರು ಚಿಕ್ಕ ವಯಸ್ಸಿನಲ್ಲಿ ಹೇಗಿದ್ದರು ಎಂಬ ಪಾತ್ರವನ್ನು ಸುದೀಪ್ ನಿರ್ವಹಿಸುತ್ತಿದ್ದಾರೆ.

    `ಅಂಬಿ ನಿಂಗ್ ವಯಸ್ಸಾಯ್ತೋ’ ಸಿನಿಮಾ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿದೆ. ಈ ಸಿನಿಮಾವನ್ನು ಜ್ಯಾಕ್ ಮಂಜು ನಿರ್ಮಾಣ ಮಾಡುತ್ತಿದ್ದು, ಗುರುದತ್ ಗಾಣಿಗ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರ ತಮಿಳಿನ `ಪವರ್ ಪಾಂಡಿ’ ಸಿನಿಮಾದ ಚಿತ್ರದ ರಿಮೇಕ್ ಆಗಿದೆ.

  • ಮಂಗಳೂರಲ್ಲಿ ನಿಪಾ ಸೋಂಕು ಶಂಕೆ – ಹೈ ಅಲರ್ಟ್ ಜಾರಿ

    ಮಂಗಳೂರಲ್ಲಿ ನಿಪಾ ಸೋಂಕು ಶಂಕೆ – ಹೈ ಅಲರ್ಟ್ ಜಾರಿ

    ಮಡಿಕೇರಿ: ಕೇರಳದಲ್ಲಿ ಹಲವರನ್ನು ಬಲಿ ತೆಗೆದುಕೊಂಡಿರುವ ನಿಪಾ ವೈರಸ್ ರಾಜ್ಯಕ್ಕೂ ಆಗಮಿಸುವ ಶಂಕೆ ವ್ಯಕ್ತವಾಗಿದ್ದು, ಮಂಗಳೂರಿನ ಇಬ್ಬರಲ್ಲಿ ನಿಪಾ ವೈರಸ್ ಲಕ್ಷಣ ಕಂಡು ಬಂದಿದೆ.

    ಕೇರಳ ಮತ್ತು ಮಂಗಳೂರು ಮೂಲದ ಇಬ್ಬರಲ್ಲಿ ನಿಪಾ ವೈರಸ್ ಲಕ್ಷಣ ಕಾಣಿಸಿದ್ದು, ಇಬ್ಬರ ರಕ್ತವನ್ನು ಮಣಿಪಾಲದ ಕೆಎಂಸಿ ಸೆಂಟರ್‍ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಶಂಕಿತರಿಗೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ತೀವ್ರ ಎಚ್ಚರಿಕೆಯನ್ನು ವಹಿಸಲಾಗಿದೆ.

    ಈಗಾಗಲೇ ಸೋಂಕು ವ್ಯಾಪಿಸದಂತೆ ಎಚ್ಚರಿಕೆ ಕ್ರಮವಹಿಸಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಿಂದ ವರದಿ ತರಿಸಿಕೊಂಡಿರುವ ಜಿಲ್ಲಾ ಆರೋಗ್ಯ ಇಲಾಖೆ ಹೈ ಅಲರ್ಟ್ ಸೂಚನೆ ನೀಡಿದೆ. ಇದನ್ನು ಓದಿ: ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ಈ ನಡುವೆ ಮಂಗಳೂರಿನ ಆಸ್ಪತ್ರೆಗಳಿಗೆ ಕೇರಳ ಮೂಲದ ರೋಗಿಗಳೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಸೋಂಕು ಹರಡುವ ಆತಂಕ ಎದುರಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ರೋಗದ ಲಕ್ಷಣ ಕಂಡು ಬಂದರೆ ತಕ್ಷಣ ಕ್ರಮಕ್ಕಾಗಿ ವಾಟ್ಸಪ್ ಗ್ರೂಪ್ ಗಳನ್ನು ತೆರೆದಿದ್ದು, ಮುನ್ನಚ್ಚೆರಿಕಾ ಕ್ರಮವಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ವಾರ್ಡ್ ತೆರೆಯಲಾಗಿದೆ.ಇದನ್ನು ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಇನ್ನು ಕೇರಳದಲ್ಲಿ ಸಾವಿನ ಸಂಖ್ಯೆ ಏರಿಕೆ ಆಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊಯಿಕ್ಕೋಡ್ ವೈದ್ಯಕೀಯ ಕಾಲೇಜಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಉತ್ತರ ಕೇರಳದಲ್ಲಿ ಹೆಚ್ಚಾಗಿ ವೈರಾಣು ವ್ಯಾಪಿಸಿದ್ದು, ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ. 50ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ ಅಂತ ಕೇರಳ ಆರೋಗ್ಯ ಸಚಿವಾಲಯ ತಿಳಿಸಿದೆ.

  • ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

    ತಿರುವನಂತಪುರಂ: ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಗೆ ಬಲಿಯಾವುದಕ್ಕೂ ಮುನ್ನ ಪತಿಗೆ ಕೇರಳದ ನರ್ಸ್ ಒಬ್ಬರು ಭಾವನಾತ್ಮಕ ಪತ್ರ ಬರೆದು, ತಾನು ಸಾಯುವುದು ಖಚಿತವಾಗಿದ್ದು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.

    31 ವರ್ಷದ ಲಿನಿ ಅವರು ಕೇರಳದ್ಯಾಂತ ಹೆಚ್ಚಿನ ಮಂದಿಯನ್ನು ಬಲಿ ಪಡೆಯುತ್ತಿರುವ ನಿಪಾ ವೈರಸ್ ಸೋಂಕು ತಗಲಿದ್ದ ರೋಗಿಗೆ ಚಿಕಿತ್ಸೆ ನೀಡುವ ವೇಳೆ ವೈರಸ್ ಹರಡಿ ಸಾವನ್ನಪ್ಪಿದ್ದರು.

    ವೈರಸ್ ಸೋಂಕು ತಗಲಿದ ವೇಳೆ ತನ್ನ ಕುಟುಂಬವನ್ನು ನೋಡಲು ಸಾಧ್ಯವಾಗದ ಲಿನಿ ತಮ್ಮ ಪತಿಗೆ ಪತ್ರ ಬರೆದಿದ್ದರು. ಸೋಕಿನಿಂದ ಮೃತ ಪಟ್ಟ ಲಿನಿ ಅವರ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸದೇ ಆಸ್ಪತ್ರೆಯ ಆಡಳಿತ ಮಂಡಳಿ ಶವ ಸಂಸ್ಕಾರವನ್ನು ಮಾಡಿತ್ತು.

    ಲಿನಿ ಅವರಿಗೆ 7 ಹಾಗೂ 2 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಕೇರಳದ ಪೇರಾಂಬ್ರ ಆಸ್ಪತ್ರೆಯಲ್ಲಿ ದಾಖಲಾದ ಮೊದಲ ನಿಪಾ ವೈರಸ್ ಸೋಂಕು ತಗುಲಿದ್ದ ರೋಗಿಗೆ ಚಿಕಿತ್ಸೆ ನೀಡಿದ್ದರು. ಈ ವೇಳೆ ಅವರಿಗೂ ಸೋಂಕು ಹರಡಿತ್ತು. ತಮಗೆ ಸೋಂಕು ಹರಡಿರುವುದು ಖಚಿತವಾಗುತ್ತಿದ್ದಂತೆ ಪತಿಗೆ ಪತ್ರ ಬರೆದಿರುವ ಅವರು ನಾನು ಬಹುತೇಕ ಸಾಯುವುದು ಖಚಿತವಾಗಿದ್ದು, ನಿಮ್ಮನ್ನು ಮತ್ತೆ ನೋಡುತ್ತೇನೆ ಎಂದು ಅನ್ನಿಸುತ್ತಿಲ್ಲ. ನಮ್ಮ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ. ಅವರನ್ನು ನಿಮ್ಮೊಂದಿಗೆ ಗಲ್ಫ್ ಗೆ ಕರೆದುಕೊಂಡು ಹೋಗಿ. ನನ್ನ ತಂದೆಯಂತೆ ಅವರನ್ನು ಇಲ್ಲಿ ಏಕಾಂಗಿಯಾಗಿ ಬಿಡಬೇಡಿ. ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

    https://twitter.com/deepusebin/status/998573629435727873?

    ಲಿನಿ ಅವರ ಮೃತ ದೇಹವನ್ನು ಕೊನೆಯ ಬಾರಿಗೆ ನೋಡಲು ಸಹ ಯಾರಿಗೂ ಅವಕಾಶ ನೀಡದೇ ಅಂತಿಮ ಸಂಸ್ಕಾರ ನಡೆಸಲಾಗಿದೆ. ಸೋಂಕು ಇತರೇ ವ್ಯಕ್ತಿಗಳಿಗೂ ಹರಡುವ ಕಾರಣದಿಂದ ಆರೋಗ್ಯ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಲಿನಿ ಅವರ ನಿಸ್ವಾರ್ಥ ಸೇವೆಯನ್ನು ಕೇರಳ ಸ್ಮರಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಮೊದಲ ಬಾರಿಗೆ ನಿಪಾ ವೈರಸ್ ಗೆ ಬಲಿಯಾದ ಮೂವರು ಸಹ ಒಂದೇ ಕುಟುಂಬಕ್ಕೆ ಸೇರಿದ್ದು, ಅದರಲ್ಲಿ ಇಬ್ಬರು ಸಹೋದರರು ಹಾಗೂ ಆನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಳ್ಳುತ್ತಿದ್ದ ಮಹಿಳೆಯೂ ಸಾವನ್ನಪ್ಪಿದ್ದಾರೆ. ಉಳಿದಂತೆ ಕುಟುಂಬದ ಸಹೋದರರ ತಂದೆಗೂ ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೇರಾಂಬ್ರ ಆಸ್ಪತ್ರೆಯ ಮೂಲಗಳು ತಿಳಿಸಿದೆ. ಇದುವರೆಗೂ ಕೇರಳದಲ್ಲಿ 16ಕ್ಕೂ ಹೆಚ್ಚಿನ ಜನ ನಿಪಾ ವೈರಸ್ ಗೆ ಬಲಿಯಾಗಿದ್ದಾರೆ.

  • ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

    ಬೆಂಗಳೂರು: ಕರ್ನಾಟಕದ ಪಕ್ಕದ ರಾಜ್ಯ ಕೇರಳದಲ್ಲಿ ಬಾವಲಿಗಳ ಮೂಲಕ ನಿಪಾ ವೈರಸ್ ಜ್ವರಕ್ಕೆ 16 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ರಾಜ್ಯದಲ್ಲಿ ಫುಲ್ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲೂ ನಿಫಾ ಭಯ ಕಾಡತೊಡಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ರಾಜ್ಯದಾದ್ಯಂತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗೆ ಸುತ್ತೋಲೆ ರವಾನೆಯಾಗಿದೆ. ಜ್ವರ, ವಾಂತಿ, ಸುಸ್ತು ಇಂತಹ ಲಕ್ಷಣ ಕಾಣಿಸಿಕೊಂಡ ರೋಗಿಗಳ ರಕ್ತ ಪರೀಕ್ಷೆಯ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಮೂಲಗಳು ಪಬ್ಲಿಕ್ ಟಿವಿಗೆ ಖಚಿತಪಡಿಸಿವೆ.

    ನಿಪಾ ವೈರಸ್ ಎಂದರೇನು?
    1998ರಲ್ಲಿ ಮಲೇಷ್ಯಾದ ಕಾಂಪುಂಗ್ ಸುಂಗಾತ್ ನಿಪಾ ವಲಯದಲ್ಲಿ ಕಾಣಿಸಿಕೊಂಡ ಮಾರಕ ಜ್ವರಕ್ಕೆ ಕಾರಣವಾದ ವೈರಸನ್ನು ನಿಪಾ ವೈರಸ್ ಎಂದು ಕರೆಯುತ್ತಾರೆ. ನಿಪಾ ವೈರಸ್ ಬಾವಲಿಗಳ ಮೂಲಕ ಹರಡುತ್ತದೆ. ಈ ಕ್ಷಣದವರೆಗೆ ಈ ರೋಗಕ್ಕೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ನಿಪಾ ವೈರಸ್ ಮಾರಣಾಂತಿಕ ಎಂದೇ ಕುಖ್ಯಾತಿ ಪಡೆದಿದೆ. ಈ ವೈರಸ್ ಪತ್ತೆಯಾದರೆ ಶೇ.74ರಷ್ಟು ಸಾವು ಖಚಿತ ಎನ್ನಲಾಗಿದೆ.

    ವೈರಸ್ ಹೇಗೆ ಹರಡುತ್ತದೆ?
    ಸೋಂಕಿರುವ ಬಾವಲಿ ಕಚ್ಚಿದ ಹಣ್ಣನ್ನು ತಿನ್ನೋದ್ರಿಂದ ಹರಡುತ್ತೆ.
    ಸಾಂಕ್ರಾಮಿಕ ಕಾಯಿಲೆಯಾದ್ರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತೆ.
    ಹೀಗಾಗಿ ಬಾವಲಿಗಳು ಕಚ್ಚಿದ ಸಾಧ್ಯತೆಯಿರುವ ಹಣ್ಣುಗಳನ್ನು ತಿನ್ನಲೇಬೇಡಿ.

    ನಿಪಾ ವೈರಸ್ ಲಕ್ಷಣಗಳೇನು?
    – ಜ್ವರ, ತಲೆ ನೋವು, ವಾಂತಿ, ತಲೆ ಸುತ್ತುವಿಕೆ
    – ಕೆಲವರಲ್ಲಿ ಅಪಸ್ಮಾರದ ಲಕ್ಷಣಗಳು ಕಾಣಿಸುತ್ತವೆ
    – ಈ ಲಕ್ಷಣಗಳು ಸಾಮಾನ್ಯವಾಗಿ 10ರಿಂದ 12 ದಿನ ಕಾಣಿಸುತ್ತದೆ
    – ಬಳಿಕ ಪ್ರಜ್ಞಾಹೀನರಾಗುತ್ತಾರೆ
    – ನಂತರ ಈ ಜ್ವರ ತೀವ್ರವಾಗಿ ಮೆದುಳಿಗೆ ವ್ಯಾಪಿಸುತ್ತದೆ
    – ಕೆಲವು ಬಾರಿ ಸೂಕ್ತ ಚಿಕಿತ್ಸೆ ಲಭಿಸದಿದ್ದರೆ ಸಾವು ಸಂಭವಿಸಬಹುದು

    ಇನ್ನು ಕೇರಳದ ನಿಪಾ ವೈರಸ್ ಭೀತಿಯಿಂದ ಅಕ್ಕ ಪಕ್ಕದ ರಾಜ್ಯಗಳು ಎಚ್ಚರಿಕೆಯಿಂದ ಇರಬೇಕಾಗಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಸೂಚನೆಯಂತೆ ಇಂದು ಬೆಳಗ್ಗೆಯೇ ಕೇಂದ್ರ ಸರ್ಕಾರದ ವೈದ್ಯಕೀಯ ತಂಡವೊಂದು ಕೇರಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಕೇರಳದ ಆರೋಗ್ಯ ಸಚಿವರ ಜೊತೆ ಸಮಾಲೋಚನೆಯನ್ನು ನಡೆಸಿದೆ. ಸದ್ಯ ಕೇರಳದ ಕೋಯಿಕ್ಕೋಡ್ ಹಾಗೂ ಮಲಪ್ಪುರಂ ಜಿಲ್ಲೆಗಳಲ್ಲಿ ಬಾವಲಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಕೇರಳದ ಎಲ್ಲಾ ಜಿಲ್ಲಾಸ್ಪತ್ರೆಗಳಿಗೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿರುವ 6 ಮಂದಿಯ ಸ್ಥಿತಿ ಚಿಂತಾಜನಕವಾಗಿದ್ದು, ಇವರ ರಕ್ತದ ಮಾದರಿಯನ್ನು ಮಣಿಪಾಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇದರ ವರದಿ ಇನ್ನಷ್ಟೇ ಬರಬೇಕಿದ್ದು, ಇಂದು ರಾತ್ರಿಯೊಳಗೆ ವರದಿ ಅಧಿಕಾರಿಗಳ ಕೈಸೇರುವ ಸಾಧ್ಯತೆಯಿದೆ.