Tag: kerala

  • ಯುಎಇ 700 ಕೋಟಿ ರೂ. ನೆರವಿಗೆ ಕೇಂದ್ರ ನೀತಿ ಅಡ್ಡಿ?

    ಯುಎಇ 700 ಕೋಟಿ ರೂ. ನೆರವಿಗೆ ಕೇಂದ್ರ ನೀತಿ ಅಡ್ಡಿ?

    ನವದೆಹಲಿ: ಕೇರಳ ಸಂತ್ರಸ್ತರಿಗೆ ಯುಎಇ ಸರ್ಕಾರ ಘೋಷಿಸಿದ್ದ 700 ಕೋಟಿ ರೂ. ಆರ್ಥಿಕ ನೆರವು ಪಡೆಯಲು ಕೇಂದ್ರ ಸರ್ಕಾರದ ನೀತಿ ಅಡ್ಡಿಯಾಗಲಿದೆ ಎಂದು ವರದಿಯಾಗಿದೆ.

    ವಿದೇಶಗಳಿಂದ ಸಾಲ ರೂಪದಲ್ಲಿ ಮಾತ್ರವೇ ಭಾರತ ಹಣವನ್ನು ಪಡೆಯಲು ಸಾಧ್ಯ. ಹೊರತಾಗಿ ವಿದೇಶಗಳಿಂದ ಯಾವುದೇ ನೆರವು ಸ್ವೀಕರಿಸುವಂತಿಲ್ಲ ಎನ್ನುವ ನೀತಿಯನ್ನು ಭಾರತ ಸರ್ಕಾರ ಅಳವಡಿಸಿಕೊಂಡಿದೆ. ಹೀಗಾಗಿ ಈ ಆರ್ಥಿಕ ನೆರವು ಸಿಗುವುದಿಲ್ಲ ಎಂದು ಉನ್ನತ ಮೂಲಗಳನ್ನು ಆಧಾರಿಸಿ ಮಾಧ್ಯಮವೊಂದು ವರದಿ ಮಾಡಿದೆ.

    ಸುನಾಮಿಯ ನಂತರ ಭಾರತವು ವಿದೇಶದಿಂದ ನೆರವು ಸ್ವೀಕರಿಸುವುದನ್ನು ನಿಲ್ಲಿಸಿದೆ. ಉತ್ತರಾಖಂಡ್ ರಾಜ್ಯದಲ್ಲಿ ಜಲಪ್ರಳಯ ಉಂಟಾದಾಗ ವಿದೇಶಗಳಿಂದ ಪರಿಹಾರ ನಿಧಿ ಹರಿದುಬಂದಿತ್ತು. ಆದರೆ ಅಂದಿನ ವಿತ್ತ ಸಚಿವ ಪಿ.ಚಿದಂಬರಂ ವಿಶ್ವ ಬ್ಯಾಂಕಿನಿಂದ ಸಾಲ ಪಡೆದರೂ, ವಿದೇಶಗಳಿಂದ ಪರಿಹಾರ ನಿಧಿ ಪಡೆಯುವುದಿಲ್ಲ ಎಂದು ಹೇಳಿದ್ದರು. ಇದನ್ನು ಓದಿ: ಯುಎಇಯಿಂದ ಕೇರಳ ಸಂತ್ರಸ್ತರಿಗೆ 700 ಕೋಟಿ ರೂ. ಆರ್ಥಿಕ ನೆರವು

    ಯುಪಿಎ ಸರ್ಕಾರದ ಅವಧಿಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ವಿಶ್ವಸಂಸ್ಥೆ, ರಷ್ಯಾ, ಚೀನಾ ಸೇರಿದಂತೆ ಅನೇಕ ದೇಶಗಳಿಂದ ನೆರವು ಹರಿದು ಬಂದಿತ್ತು. ಆದರೆ ಇದ್ಯಾವುದನ್ನೂ ಅಂದಿನ ಸರ್ಕಾರ ಸ್ವೀಕರಿಸಿಲ್ಲ. ಇದು ಈಗ ಕೇರಳ ಸರ್ಕಾರದ ಮೇಲೆ ಪರಿಣಾಮ ಬೀರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾಮಳೆ ಬಳಿಕ ಹಾವು ಕಾಟ- ಮನೆಯಲ್ಲೇ ಮೊಸಳೆ ಪತ್ತೆ!

    ಮಹಾಮಳೆ ಬಳಿಕ ಹಾವು ಕಾಟ- ಮನೆಯಲ್ಲೇ ಮೊಸಳೆ ಪತ್ತೆ!

    ತಿರುವನಂತಪುರಂ: ಮಹಾಮಳೆಗೆ ದೇವರನಾಡಿನ ಜನತೆ ತತ್ತರಿಸಿ ಹೋಗಿದ್ದಾರೆ. ಜೀವ ಉಳಿದರೆ ಸಾಕು ಎಂದು ಮನೆ, ಆಸ್ತಿ ಎಲ್ಲವನ್ನೂ ಬಿಟ್ಟು ಬಂದಿದ್ದರು. ಈಗ ಪ್ರವಾಹ ನಿಂತಿದ್ದು, ಮತ್ತೆ ಮನೆ ಸೇರಲು ಜನರು ಮುಂದಾಗುತ್ತಿದ್ದಾರೆ. ಆದರೆ ಅವರಿಗೆ ಈಗ ಹಾವು ಹಾಗೂ ಮೊಸಳೆ ಕಾಣಿಸಿ ಭಯದ ವಾತಾವರಣ ಸೃಷ್ಟಿಸಿವೆ.

    ತ್ರಿಶೂರ್ ಜಿಲ್ಲೆಯ ಚಾಲಕುಡಿಯ ವ್ಯಕ್ತಿಯೊಬ್ಬರು ಸೋಮವಾರ ರಾತ್ರಿ ತಮ್ಮ ಮನೆಗೆ ಹೋಗಿದ್ದರು. ಒಳಗೆ ಹೋಗುತ್ತಿದ್ದಂತೆ ಮೊಸಳೆ ಕಂಡು ಬೆಚ್ಚಿಬಿದ್ದಿದ್ದಾರೆ. ಅಲ್ಲಿಂದ ತಕ್ಷಣವೇ ಹೊರಗೆ ಬಂದು ನೆರೆಹೊರೆಯವರ ಸಹಾಯ ಪಡೆದು ಹಗ್ಗ ಹಾಕಿ ಮೊಸಳೆಯನ್ನು ಕಟ್ಟಿಹಾಕಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

    ಮಲ್ಲಪ್ಪುರಂನ ಮುಸ್ತಾಫ್ ಎಂಬವರು ಹಾವು ಹಿಡಿಯುವುದಲ್ಲಿ ನಿರತರಾಗಿದ್ದು, ಈಗಾಗಲೇ ಎರಡು ದಿನದಲ್ಲಿ 100 ಹಾವುಗಳನ್ನು ಹಿಡಿದಿದ್ದಾರೆ. ಇತ್ತ ಎರ್ನಾಕುಲಂ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಹಾವು ಕಚ್ಚಿದ್ದ 52 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮನೆಯನ್ನು ಸ್ವಚ್ಛಗೊಳಿಸಲು ಬಂದಿದ್ದ ಅನೇಕರು ಹಾವು ಕಾಣುತ್ತಿದ್ದಂತೆ ಭಯಗೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ವರದಿಯಾಗಿದೆ.

    ತ್ರಿಶೂರ್ ಜಿಲ್ಲೆಯು ಹೆಚ್ಚು ಹಾನಿಗೆ ಒಳಗಾದ ಜಿಲ್ಲೆಯಾಗಿದ್ದು, ರಾಜ್ಯದಲ್ಲಿ 370 ಜನರು ಪ್ರವಾಹಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಅಗತ್ಯ ಔಷಧಿ ಹಾಗೂ ಕ್ರಿಮಿನಾಶಕ ಕಳುಹಿಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಡಗು, ಕೇರಳ ಮಳೆಯ ರಹಸ್ಯ ಭೇದಿಸಿದ ಹವಾಮಾನ ತಜ್ಞರು!

    ಕೊಡಗು, ಕೇರಳ ಮಳೆಯ ರಹಸ್ಯ ಭೇದಿಸಿದ ಹವಾಮಾನ ತಜ್ಞರು!

    – ಜಲಪ್ರಳಯಕ್ಕೆ `ಸೋಮಾಲಿ ಜೆಟ್’ ಕಾರಣ, ಏನಿದು ಸೋಮಾಲಿ ಜೆಟ್?

    ಬೆಂಗಳೂರು: ಮಹಾಮಳೆಯಿಂದ ಪ್ರವಾಹ, ಗುಡ್ಡ ಕುಸಿತವಾಗಿ ಹಲವರ ಸಂಕಷ್ಟಕ್ಕೆ ಕಾರಣವಾಗಿದ್ದ ಮಹಾ ಜಲಪ್ರಳಯಕ್ಕೆ `ಸೋಮಾಲಿ ಜೆಟ್’ ಚಂಡಮಾರುತ ಕಾರಣ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

    ಏನಿದು ಸೋಮಾಲಿ ಜೆಟ್?
    ಅಫ್ರಿಕಾ ಬಳಿಯ ಮಡಗಾಸ್ಕರ್ ಬಳಿಯ ದ್ವೀಪದ ಬಳಿ ಎದ್ದ ಚಂಡಮಾರುತವನ್ನು ಸೋಮಾಲಿ ಜೆಟ್ ಎಂದು ಕರೆಯುತ್ತಾರೆ. ಈ ಚಂಡಮಾರುತ ಗಾಳಿಯ ಸಮೇತ ದಿಕ್ಕು ಬದಲಿಸಿ ಭಾರತದತ್ತ ಬೀಸಿದ ಕಾರಣ ಮಹಾಮಳೆಯಾಗಿ ಸಾಕಷ್ಟು ಅವಾಂತರ ಸೃಷ್ಟಿಸಿದೆ ಎನ್ನಲಾಗಿದೆ.

    ಪಶ್ಚಿಮಘಟ್ಟ ಭಾಗಗಳಲ್ಲಿ ಮುಂಗಾರು ಈ ಬಾರಿ ತೀವ್ರಗೊಂಡಿದ್ದ ಕಾರಣ ವಾಯುಭಾರ ಕುಸಿತ ಸಂಭವಿಸಿತ್ತು. ಈ ವೇಳೆ ಸೋಮಾಲಿ ಜೆಟ್ ಚಂಡಮಾರುತ ಬಿರುಸು ಪಡೆದಿದ್ದ ಕಾರಣ ಹೆಚ್ಚಿನ ಮಳೆಯಾಗಿದೆ. ವಾಯುಭಾರ ಕುಸಿತದಿಂದ ಪಶ್ಚಿಮಘಟ್ಟದಲ್ಲಿ ತಡೆಯುಂಟಾಗಿ ಆಗಲೇ ಸುರಿಯುತ್ತಿದ್ದ ಮಳೆಗೆ ಮತ್ತಷ್ಟು ವೇಗ ಕೊಟ್ಟಿದೆ ಎಂದು ಭಾರತೀಯ ಹವಾಮಾನ ಇಲಾಖೆ ವಿವರಿಸಿದೆ.

    ಪಶ್ಚಿಮಘಟ್ಟ ಪ್ರದೇಶಕ್ಕೆ ಈ ಚಂಡಮಾರುತ ತಟ್ಟಿದ ಕಾರಣ ಅಪಾರ ನಷ್ಟ ಉಂಟಾಗಿದೆ. ಪ್ರಮುಖವಾಗಿ ಮಳೆಯಿಂದ ಗುಡ್ಡ ಕುಸಿತ ಹೆಚ್ಚಾಗಿದ್ದರಿಂದ ಹೆಚ್ಚಿನ ಹಾನಿಯಾಗಿದೆ. ಸದ್ಯ ಕೊಡಗು ಎಂದ ತಕ್ಷಣ ಎಲ್ಲರ ಕಣ್ಮುಂದೆ ಬರುತ್ತಿದ್ದ ಚಿತ್ರಣ ಜಲಪ್ರಳಯ. ಮಳೆ ನಿಂತರೂ ಗುಡ್ಡಗಳು ಇನ್ನೂ ಕುಸಿಯುತ್ತಲೇ ಇದ್ದು, ನಾಲ್ಕು ದಿನಗಳ ಕಾಲ ಅಕ್ಷರಶಃ ಜಲ ಪ್ರವಾಹದಲ್ಲಿ ಮುಳುಗಿದ್ದ ಮಡಿಕೇರಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಉಳಿದಂತೆ ದಕ್ಷಿಣಕನ್ನಡ, ಚಿಕ್ಕಮಗಳೂರು, ಹಾಸನ ಗಡಿಭಾಗಗಳಲ್ಲಿ ಭೂಕುಸಿತ ಭೀತಿ ಎದುರಾಗಿದೆ.

    ಈ ನಡುವೆ ಮಡಿಕೇರಿಯಲ್ಲಿ ವರುಣನ ಆರ್ಭಟ ತಗ್ಗಿದ್ದು, ಪ್ರವಾಹ ಪೀಡಿತ ಗ್ರಾಮಗಳಲ್ಲಿ ತೆರವು ಕಾರ್ಯ ಚುರುಕುಗೊಂಡಿದೆ. ಇದೇ ಮೊದಲ ಬಾರಿ ರಕ್ಷಣಾ ಕಾರ್ಯಕ್ಕೆ ಡ್ರೋನ್ ಕ್ಯಾಮೆರಾ ಬಳಕೆ ಮಾಡಲಾಗಿದ್ದು, ಮಹಾಮಳೆಗೆ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪ್ರವಾಹದ ನೀರಲ್ಲಿ ತೇಲಿ ಬರುತ್ತಿದೆ ಕರೀಂ ಚಹಾ- ವಿಡಿಯೋ ವೈರಲ್

    ಪ್ರವಾಹದ ನೀರಲ್ಲಿ ತೇಲಿ ಬರುತ್ತಿದೆ ಕರೀಂ ಚಹಾ- ವಿಡಿಯೋ ವೈರಲ್

    ತಿರುವನಂತಪುರಂ: ಪರಿಸ್ಥಿತಿ ಎದುರಿಸಿ, ಜೀವನಕ್ಕೆ ಆಧಾರ ಕಂಡಕೊಳ್ಳಲು ಅನೇಕರು ಸಾಹಸ ಪಡುತ್ತಾರೆ. ಹಾಗೆ ಕೇರಳದ ವ್ಯಕ್ತಿಯೊಬ್ಬರು ಪ್ರವಾಹದ ನೀರನ್ನು ಲೆಕ್ಕಿಸದೇ, ಅದರ ಉಪಯೋಗ ಪಡೆದು ಚಹಾ ವ್ಯಾಪಾರ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೇರಳದ ಕುನ್ನಂಕ್ಕಳದ ವೆಟ್ಟಿಕ್ಕಡವ್ ನಿವಾಸಿ ಕರೀಂ ಚಹಾ ವ್ಯಾಪಾರ ಮಾಡುತ್ತಿದ್ದಾರೆ. ಮಹಾಮಳೆಗೆ ನದಿಗಳ ಪ್ರವಾಹ ಹೆಚ್ಚಾಗಿ, ತೀರದ ಪ್ರದೇಶಗಳಿಗೆ ನುಗ್ಗಿವೆ. ಕರೀಂ ಅವರ ಚಹಾದ ಅಂಗಡಿಗೂ ನೀರು ನುಗ್ಗಿದ್ದರಿಂದ ವ್ಯಾಪಾರಕ್ಕೆ ಅಸ್ತವ್ಯಸ್ತವಾಗಿತ್ತು.

    ಅಂಗಡಿಯಲ್ಲಿ ಮೊಣಕಾಲ ಎತ್ತರದವರೆಗೂ ನೀರು ನಿಂತಿತ್ತು. ಇದನ್ನು ತನ್ನ ಸಹಾಯಕನಂತೆ ಮಾಡಿಕೊಂಡು, ಸಿದ್ಧವಾದ ಚಹಾವನ್ನು ಪ್ಲಾಸ್ಟಿಕ್ ಟ್ರೇನಲ್ಲಿ ಇಟ್ಟು, ನೀರಿನಲ್ಲಿ ತೇಲಿ ಬಿಡುತ್ತಾರೆ ಕರೀಂ. ಟ್ರೇ ತಮ್ಮ ಬಳಿ ಬರುತ್ತಿದ್ದಂತೆ ಗ್ರಾಹಕರು ಲೋಟ ತೆಗೆದುಕೊಂಡು ಕುಡಿಯುತ್ತಾರೆ. ಜೊತೆಗೆ ಗ್ರಾಹಕರಿಗೆ ಎತ್ತರ ಕುಳಿತು ಕೊಳ್ಳಲು ಕರೀಂ ವ್ಯವಸ್ಥೆ ಮಾಡಿದ್ದಾನೆ.

    ಕರೀಂ ಅವರ ಛಲ ಹಾಗೂ ಅನಿವಾರ್ಯತೆಯನ್ನು ವ್ಯಕ್ತಿಯೊಬ್ಬರು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಕರೀಂ ಅವರ ಚಹಾದಂಗಡಿ ವೈರಲ್ ಆಗಿದ್ದು, ಭಾರೀ ಚರ್ಚೆ ಹಾಗೂ ಮೆಚ್ಚುಗೆ ಗಿಟ್ಟಿಸಿಕೊಂಡಿದೆ.

    https://www.facebook.com/anilthekkepat/videos/pcb.10217127969735657/10217127969255645/?type=3&theater

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯುಎಇಯಿಂದ ಕೇರಳ ಸಂತ್ರಸ್ತರಿಗೆ 700 ಕೋಟಿ ರೂ. ಆರ್ಥಿಕ ನೆರವು

    ಯುಎಇಯಿಂದ ಕೇರಳ ಸಂತ್ರಸ್ತರಿಗೆ 700 ಕೋಟಿ ರೂ. ಆರ್ಥಿಕ ನೆರವು

    ತಿರುವನಂತಪುರಂ: ಮಹಾಮಳೆಗೆ ಮನೆಗಳನ್ನು ಕಳೆದುಕೊಂಡ ಜನರಿಗೆ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಯುನೈಟೆಡ್ ಎಮಿರೇಟ್ಸ್ (ಯುಎಇ) 700 ಕೋಟಿ ರೂ. ಆರ್ಥಿಕ ನೆರವು ನೀಡಲು ಮುಂದಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ವಿಜಯನ್, ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಹಾಗೂ ಪುನರ್ ನಿರ್ಮಾಣ ಕುರಿತಾಗಿ ಚರ್ಚೆ ನಡೆಸಲು, ಆಗಸ್ಟ್ 30ರಂದು ವಿಶೇಷ ಕಲಾಪ ಕರೆಯಲಾಗುತ್ತಿದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಪ್ರವಾಹಕ್ಕೆ ಒಳಗಾದ ಪ್ರದೇಶಗಳಿಗೆ ಭೇಟಿ ನೀಡಿ, 500 ಕೋಟಿ ರೂ. ಪರಿಹಾರ ಹಾಗೂ ರಕ್ಷಣಾ ಕಾರ್ಯಚರಣೆಗೆ ಸಹಕಾರ ನೀಡುವುದಾಗಿ ಘೋಷಿಸಿದ್ದರು. ಇದಕ್ಕೆ ಮತ್ತೆ 100 ಕೋಟಿ ರೂ. ಸೇರಿಸಿ ಪರಿಹಾರ ನೀಡುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ ಎಂದು ವಿಜಯನ್ ವಿವರಿಸಿದರು.

    ಮಹಾಮಳೆಯ ಪ್ರವಾಹಕ್ಕೆ ರಾಜ್ಯದಲ್ಲಿ 223 ಜನರು ಮೃತಪಟ್ಟಿದ್ದಾರೆ. ಜೊತೆಗೆ 10 ಲಕ್ಷ ಜನರನ್ನು ರಕ್ಷಿಸಿ 3,200 ನಿರಾಶ್ರಿತ ಕೇಂದ್ರಗಳಲ್ಲಿ ಇರಿಸಲಾಗಿದೆ. ಭಾರೀ ಪ್ರಮಾಣದ ಅನಾಹುತದಿಂದ ಒಟ್ಟು 20 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಪ್ರಾಥಮಿಕ ವರದಿ ಮೂಲಕ ತಿಳಿದು ಬಂದಿದೆ ಎಂದು ಸಿಎಂ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • CFTRI ನಿಂದ ಕೇರಳ, ಕೊಡಗಿಗೆ ಚಪಾತಿ, ಚಟ್ನಿ, ಉಪ್ಪಿಟ್ಟು, ಅವಲಕ್ಕಿ ಚಿತ್ರಾನ್ನ ರವಾನೆ

    CFTRI ನಿಂದ ಕೇರಳ, ಕೊಡಗಿಗೆ ಚಪಾತಿ, ಚಟ್ನಿ, ಉಪ್ಪಿಟ್ಟು, ಅವಲಕ್ಕಿ ಚಿತ್ರಾನ್ನ ರವಾನೆ

    ಮೈಸೂರು: ಕೊಡಗು ಹಾಗೂ ನೆರೆ ರಾಜ್ಯ ಕೇರಳದಲ್ಲಿ ಉಂಟಾಗಿರುವ ಭೀಕರ ಜಲ ಪ್ರಳಯಕ್ಕೆ ಅಕ್ಷರಶಃ ಅಲ್ಲಿನ ಜನರು ನಲುಗಿ ಹೋಗಿದ್ದಾರೆ. ಇದೀಗ ಅವರಿಗೆ ತಿನ್ನಲು ಆಹಾರ ಪದಾರ್ಥಗಳು ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮೈಸೂರಿನ ಕೇಂದ್ರ ಆಹಾರ ತಾಂತ್ರಿಕ ಸಂಶೋಧನ ಸಂಸ್ಥೆ(ಸಿಎಫ್ ಟಿಆರ್‍ಐ) ನಿಂದ ಕೊಡಗು ಹಾಗೂ ಕೇರಳ ನಿರಾಶ್ರಿತರಿಗೆ ಆಹಾರ ಪದಾರ್ಥಗಳನ್ನು ಒದಗಿಸುವ ಕೆಲಸ ಮಾಡಲಾಗುತ್ತಿದೆ.

    ಸಿಎಫ್‍ಟಿಆರ್ ಐನಿಂದ ಚಪಾತಿ, ಟೊಮೆಟೋ ಚಟ್ನಿ, ಉಪ್ಪಿಟ್ಟು, ಅವಲಕ್ಕಿ ಚಿತ್ರಾನ್ನ, ಎನರ್ಜಿ ಬಿಸ್ಕೇಟ್ ಸೇರಿದಂತೆ ಇನ್ನಿತರ ಆಹಾರ ಪದಾರ್ಥಗಳನ್ನು ತಯಾರಿಸಿ ಕಳುಹಿಕೊಡಲಾಗುತ್ತಿದೆ. ಈ ಆಹಾರ ಪದಾರ್ಥಗಳು 10 ರಿಂದ 15 ದಿನಗಳಾದರೂ ಕೆಡದ ರೀತಿಯಲ್ಲಿ ಸಂರಕ್ಷಣೆ ಮಾಡಲಾಗಿದ್ದು, ನಿರಾಶ್ರಿತರಿಗೆ ಆಹಾರ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

    ಕೊಡಗು ಹಾಗೂ ಕೇರಳದಲ್ಲಿ ರಸ್ತೆ ಸರಿ ಇರುವ ಪ್ರದೇಶಗಳಗೆ ಗೂಡ್ಸ್ ವಾಹನಗಳ ಮೂಲಕ ಆಹಾರ ಸರಬರಾಜು ಮಾಡಲಾಗುತ್ತದೆ. ರಸ್ತೆಗಳು ಇಲ್ಲದ ಸ್ಥಳಗಳಿಗೆ ಹೆಲಿಕಾಪ್ಟರ್ ಮೂಲಕ ಅಹಾರ ಪೂರೈಕೆ ಮಾಡುವ ಕೆಲಸ ಮಾಡಲಾಗುತ್ತಿದೆ. ಕಳೆದ ಶುಕ್ರವಾರದಿಂದ ಸಿಎಫ್‍ಟಿಆರ್‍ಐ ಈ ಕೆಲಸ ಮಾಡುತ್ತಿದೆ.

    ಈಗಾಗಲೇ ಕೊಡಗು ಪ್ರವಾಹ ಸಂತ್ರಸ್ತರಿಗೆ ರಾಜ್ಯದಾದ್ಯಂತ ಅಪಾರ ಪ್ರಮಾಣದ ದಾಸ್ತಾನುಗಳು ಪರಿಹಾರ ಕೇಂದ್ರಗಳಿಗೆ ತಲುಪಿವೆ. ಆದರೆ ಸಂತ್ರಸ್ತರು ಮಳೆ ನಿಂತ ಮೇಲೆ ನಾವು ನೆಲೆಸಲು ಒಂದು ಮನೆ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅನೇಕ ಜನರು ಆರ್ಥಿಕ ರೂಪದಲ್ಲಿ ಕೊಡಗು ಸಂತ್ರಸ್ತರಿಗೆ ದೇಣಿಗೆ ನೀಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ನೆಲೆಸಿದ್ದ ಕೇಂದ್ರವನ್ನು ಸ್ವಚ್ಛಗೊಳಿಸಿ ತೆರಳಿದ ಕೇರಳ ಸಂತ್ರಸ್ತರು- ಫೋಟೋ ವೈರಲ್

    ನೆಲೆಸಿದ್ದ ಕೇಂದ್ರವನ್ನು ಸ್ವಚ್ಛಗೊಳಿಸಿ ತೆರಳಿದ ಕೇರಳ ಸಂತ್ರಸ್ತರು- ಫೋಟೋ ವೈರಲ್

    ತಿರುವನಂತಪುರ: ನಿರಾಶ್ರಿತ ಕೇಂದ್ರಗಳಲ್ಲಿ ತಂಗಿದ್ದ ಸಂತ್ರಸ್ತರು ತಾವು ತೆರಳುವ ಮುನ್ನ ಸಂಪೂರ್ಣ ಕೊಠಡಿಯನ್ನು ಸ್ವಚ್ಛಮಾಡಿ ಹೋಗುವ ಮೂಲಕ ಭಾರೀ ಪ್ರಂಶಸೆಗೆ ಪಾತ್ರರಾಗಿದ್ದಾರೆ.

    ಮಹಾಮಳೆಗೆ ತತ್ತರಿಸಿದ್ದ ಹೋಗಿದ್ದ ಕೇರಳ ರಾಜ್ಯದಲ್ಲಿ ಸಾವಿರಾರು ಮಂದಿ ನಿರಾಶ್ರಿತರಾಗಿ ಹೋಗಿದ್ದರೆ, ಸುಮಾರು 370 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ನಿರಾಶ್ರಿತರಾಗಿದ್ದ ಜನರನ್ನು ಹತ್ತಿರದ ಆಸ್ಪತ್ರೆ, ಶಾಲಾ-ಕಾಲೇಜುಗಳನ್ನು ತಂಗಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಸದ್ಯ ರಾಜ್ಯದಲ್ಲಿ ಮಳೆ ಪ್ರಮಾಣ ತಗ್ಗಿದ್ದು, ನಿರಾಶ್ರಿತರು ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ತಾವು ತೆರಳುವ ಮುನ್ನ ತಾವು ತಂಗಿದ್ದ ಶಾಲಾ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿಹೋಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಾರೆ.

    ಎರ್ನಾಕುಲಂ ಜಿಲ್ಲೆಯ ಕೂನಮ್ಮಾವು ಪ್ರದೇಶದಲ್ಲಿ ಕೊಂಗೊರ್ಪಿಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಂಗಿದ್ದ ನಿರಾಶ್ರಿತರು, ತೆರಳುವ ಮುನ್ನ ತಾವು ತಂಗಿದ್ದ 4ನೇ ಮಹಡಿಯ ಕೊಠಡಿಯನ್ನು ಸಂಪೂರ್ಣವಾಗಿ ಸ್ವಚ್ಛ ಮಾಡಿ ಹೋಗಿದ್ದಾರೆ.

    ಯಾಕೆ ಸ್ವಚ್ಛ ಮಾಡುತ್ತಿದ್ದೀರಿ ಎಂದು ಶಾಲಾ ಸಿಬ್ಬಂದಿ ಪ್ರಶ್ನಿಸಿದ್ದಕ್ಕೆ ಸಂತ್ರಸ್ತ ಮಹಿಳೆಯೊಬ್ಬರು, ಇದು ಕಳೆದ ನಾಲ್ಕು ದಿನಗಳಿಂದ ನಮ್ಮೆಲ್ಲರ ಮನೆಯಾಗಿತ್ತು. ಇಲ್ಲಿ ಸುಮಾರು 1,200 ಮಂದಿ ಆಶ್ರಯ ಪಡೆದುಕೊಂಡಿದ್ದೆವು. ಹೀಗಾಗಿ ಇದನ್ನು ಗಲೀಜು ಮಾಡಿ, ಹಾಗೆ ಬಿಟ್ಟು ಹೋಗಲು ಮನಸ್ಸು ಬರುತ್ತಿಲ್ಲ. ನಮ್ಮ ಮನೆಯಾಗಿದ್ದರೆ ನಾವು ಹೀಗೆ ಗಲೀಜಾಗಿರುವಂತೆ ನೋಡಿಕೊಳ್ಳುತ್ತೇವಾ? ಹೀಗಾಗಿ ಸ್ವಚ್ಛ ಮಾಡುತ್ತಿದ್ದೇವೆ ಎಂದು ಉತ್ತರಿಸಿದ್ದಾರೆ.

    ಸಂತ್ರಸ್ತ ಕೇಂದ್ರದಿಂದ ಹೊರಬರುತ್ತಿರುವ ಕೊನೆಯ ವ್ಯಕ್ತಿ ತೆಗೆದ ಕೊಠಡಿಯ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

    ಈ ಹಿಂದೆ ಫಿಫಾ ವಿಶ್ವಕಪ್ ಫುಟ್‍ಬಾಲ್ ಪಂದ್ಯದಲ್ಲಿ 16ರ ಗುಂಪು ವಿಭಾಗದಿಂದ ಸೋತು ಟೂರ್ನಿಯಿಂದ ನಿರ್ಗಮಿಸಿದ ವೇಳೆ ಜಪಾನ್ ತಂಡ ತಾವು ತಂಗಿದ್ದ ಕೊಠಡಿಯನ್ನು ಸ್ವಚ್ಛಗೊಳಿಸಿ ತೆರಳಿತ್ತು. ಸ್ವಚ್ಛಗೊಳಿಸಿದ ಕೊಠಡಿಯ ಫೋಟೋಗಳು ವೈರಲ್ ಆಗಿತ್ತು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳ ಪ್ರವಾಹ ಸಂತ್ರಸ್ತರಿಗೆ ಬರೋಬ್ಬರಿ 14 ಕೋಟಿ ರೂ. ದೇಣಿಗೆ ನೀಡಿದ್ರು ಕಾಲಿವುಡ್ ಸ್ಟಾರ್

    ಕೇರಳ ಪ್ರವಾಹ ಸಂತ್ರಸ್ತರಿಗೆ ಬರೋಬ್ಬರಿ 14 ಕೋಟಿ ರೂ. ದೇಣಿಗೆ ನೀಡಿದ್ರು ಕಾಲಿವುಡ್ ಸ್ಟಾರ್

    ತಿರುವನಂತಪುರಂ: ದೇವರನಾಡು ಕೇರಳ ಪ್ರವಾಹ ಪರಿಸ್ಥಿತಿಯಲ್ಲಿ ಸಾಕಷ್ಟು ಜನರು ನೆಲೆ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದು, ಕಾಲಿವುಡ್ ನಟ ವಿಜಯ್ ಬರೋಬ್ಬರಿ 14 ಕೋಟಿ ರೂ. ನೀಡಿದ್ದಾರೆ.

    ಕೇವಲ ವಿಜಯ್ ಮಾತ್ರವಲ್ಲದೇ ಕಳೆದ ಹಲವು ದಿನಗಳಿಂದ ಹಲವು ಸಿನಿಮಾ ನಟರು ನೆರವು ನೀಡಿ ಜನರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಸದ್ಯ ವಿಜಯ್ ನೀಡಿದಷ್ಟು ದೊಡ್ಡ ಮೊತ್ತವನ್ನು ಬೇರೆ ಯಾವ ನಟರು ನೀಡಿಲ್ಲ ಎಂಬುವುದು ಗಮನಾರ್ಹವಾಗಿದೆ.

    ಸಿನಿಮಾ ಕ್ಷೇತ್ರದಲ್ಲಿ ಕೇರಳ ಪ್ರವಾಹ ನಿಧಿಗೆ ಟಾಲಿವುಡ್ ನ ರಾಮ್‍ಚರಣ್ ತೇಜ (60 ಲಕ್ಷ ರೂ., ಔಷಧಿ, ಆಹಾರ), ರಾಮ್ ಚರಣ್ ಪತ್ನಿ ಉಪಾಸನಾ (1.2ಕೋಟಿ ರೂ.), ಪ್ರಭಾಸ್ (1 ಕೋಟಿ ರೂ.) ಹಾಗೂ ಕಾಲಿವುಡ್ ನಟ ಸೂರ್ಯ ಮತ್ತು ಕಾರ್ತೀ(35 ಲಕ್ಷ ರೂ.), ಅಲ್ಲು ಅರ್ಜುನ್ (25 ಲಕ್ಷ ರೂ.) ನೀಡಿದ್ದಾರೆ.

    ಇನ್ನು ಕೇರಳಕ್ಕೆ ಕರ್ನಾಟಕ ಸರ್ಕಾರ ಸೇರಿದಂತೆ ಓಡಿಶಾ, ದೆಹಲಿ, ಪಂಜಾಬ್ ಹಾಗೂ ಹರಿಯಾಣ ರಾಜ್ಯ ಸರ್ಕಾರಗಳು ತಲಾ ಕೋಟಿ ರೂ. ನೆರವು ನೀಡಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳ ನೆರೆಯಲ್ಲೊಂದು ಬೆಳಕಿಗೆ ಬಂತು ಮನ ಕಲಕುವ ಆತ್ಮಹತ್ಯೆ!

    ಕೇರಳ ನೆರೆಯಲ್ಲೊಂದು ಬೆಳಕಿಗೆ ಬಂತು ಮನ ಕಲಕುವ ಆತ್ಮಹತ್ಯೆ!

    ತಿರುವನಂತಪುರಂ: 12ನೇ ತರಗತಿ ಪ್ರಮಾಣ ಪತ್ರಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದನ್ನು ಅರಗಿಸಲಾಗದೇ ಕೇರಳದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕೋಯಿಕ್ಕೋಡು ಜಿಲ್ಲೆಯ ಕರಂತೂರ್ ಗ್ರಾಮದ ಕೈಲಾಶ್(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. 12ನೇ ತರಗತಿ ಮುಗಿಸಿದ್ದ ಕೈಲಾಶ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಆಗಿದ್ದು ಏನು?
    ಐಟಿಐ ಓದಲು ಪ್ರವೇಶ ಪಡೆದಿದ್ದ ಕೈಲಾಶ್ ಈ ಸಂಬಂಧ ಹೊಸ ಬಟ್ಟೆ ಮತ್ತು ಹಣವನ್ನು ಸಂಗ್ರಹಿಸಿದ್ದ. ಈ ಸಂದರ್ಭದಲ್ಲಿ ಭಾರೀ ನೆರೆ ಬಂದ ಕಾರಣ ಕೈಲಾಶ್ ಕುಟುಂಬ ಸಂತ್ರಸ್ತರ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. ಮಳೆ ಸ್ವಲ್ಪ ಕಡಿಮೆಯಾದ ಹಿನ್ನೆಲೆಯಲ್ಲಿ ಕೈಲಾಶ್ ಕುಟುಂಬ ಭಾನುವಾರ ಮನೆಗೆ ಮರಳಿತ್ತು. ಮನೆಗೆ ಹೋದ ಕೂಡಲೇ ಕೈಲಾಶ್ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಇತ್ಯಾದಿ ದಾಖಲೆಗಳನ್ನು ಹುಡುಕಿದ್ದಾನೆ.

    ಎಷ್ಟು ಹುಡುಕಿದರೂ ಶೈಕ್ಷಣಿಕ ದಾಖಲೆಗಳು ಸಿಗದೇ ಇದ್ದಾಗ ಕೈಲಾಶ್ ಮನನೊಂದಿದ್ದ. ಬಳಿಕ ಮನೆಯ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದಾನೆ. ತಾಯಿ ಮನೆಯನ್ನು ಸ್ವಚ್ಛಗೊಳಿಸಲು ಕೊಠಡಿ ತೆರೆದಾಗ ಕೈಲಾಶ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇವರನಾಡಲ್ಲಿ ಇನ್ನೈದು ದಿನ ಸಾಧಾರಣ ಮಳೆ- ಕೇರಳಕ್ಕೆ KSRTC ಬಸ್ ಸಂಚಾರ ಆರಂಭ

    ದೇವರನಾಡಲ್ಲಿ ಇನ್ನೈದು ದಿನ ಸಾಧಾರಣ ಮಳೆ- ಕೇರಳಕ್ಕೆ KSRTC ಬಸ್ ಸಂಚಾರ ಆರಂಭ

    ತಿರುವನಂತಪುರ: ಕೇರಳದಲ್ಲಿ ಇನ್ನೈದು ದಿನ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿ ಮೃಂತ್ಯಜಯ್ ತಿಳಿಸಿದ್ದಾರೆ. ಕೇರಳದಲ್ಲಿ ಮಳೆಯ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಮತ್ತೆ ಆರಂಭವಾಗಿದೆ.

    ಹವಾಮಾನ ಇಲಾಖೆ ಕೇರಳದ 14 ಜಿಲ್ಲೆಗಳಲ್ಲಿ ಘೋಷಿಸಿದ್ದ ‘ರೆಡ್ ಅಲರ್ಟ್’ ಹಿಂದಕ್ಕೆ ಪಡೆದುಕೊಂಡಿದ್ದು, ಕೇರಳಿಗರು ಕೊಂಚ ನಿರಾಳರಾಗುವಂತೆ ಮಾಡಿದೆ. ಕಳೆದ ಎರಡು ವಾರಗಳಿಂದ ಕೇರಳದಲ್ಲಿ ಭಾರೀ ಮಳೆಯಾಗಿದ್ದು, ಮಳೆಯ ಪ್ರಮಾಣ ಕಡಿಮೆ ಆಗಿದೆ. ಆದ್ರೆ ಮುಂದಿನ ಐದು ದಿನಗಳಲ್ಲಿ ಸಾಧಾರಣ ಮಳೆಯಾಗಲಿದೆ. ನದಿಗಳಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಸಾಮಾನ್ಯವಾಗಿ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳನ್ನು ಹೊರತು ಪಡಿಸಿ ಎಲ್ಲ ಕಡೆಯೂ ಸಾಧಾರಣ ಮಳೆಯಾಗಲಿದೆ.

    ಆರೆಂಜ್ ಅಲರ್ಟ್ (ಅಪಾಯ ಸಂಭವಿಸುವ ಸಾಧ್ಯತೆಗಳಿದ್ದು ತಯಾರಾಗಿರಿ) ನ್ನು ರಾಜ್ಯದಿಂದ ಹಿಂದಕ್ಕೆ ಪಡೆಯಲಾಗಿದೆ. ಇಡುಕ್ಕಿ, ಕೋಜಿಕೋಡ್ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಇನ್ನು ಯೆಲ್ಲೋ ಅಲರ್ಟ್ (ಪ್ರವಾಹ ಪರಿಸ್ಥಿತಿ ನಿಮಗೆ ತಿಳಿದಿರಲಿ) ಘೋಷಿಸಲಾಗಿದೆ.

    ಕೇರಳದ ರಕ್ಷಣಾ ಕಾರ್ಯಚರಣೆ ಇಂದು ಅಂತಿಮ ಹಂತವನ್ನು ತಲುಪಿದ್ದು, 5,500 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಪರಿಹಾರ ಕೇಂದ್ರಗಳಲ್ಲಿ 7 ಲಕ್ಷಕ್ಕೂ ಅಧಿಕ ಜನರು ಆಶ್ರಯ ಪಡೆದಿದ್ದು, ಎಲ್ಲ ನಿರಾಶ್ರಿತರಿಗೆ ಮೂಲಭೂತ ಸೌಲಭ್ಯ ಮತ್ತು ಆಹಾರ ನೀಡುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

    ಕಾಂಗ್ರೆಸ್ ನ ಎಲ್ಲ ಸಂಸದರು ಮತ್ತು ಶಾಸಕರು ತಮ್ಮ ಒಂದು ತಿಂಗಳ ಸಂಬಳವನ್ನು ಕೇರಳ ಪರಿಹಾರ ನಿಧಿಗೆ ನೀಡಿದ್ದಾರೆ. ಇತ್ತ ಶಿವಸೇನೆ ಪಕ್ಷದ ಎಲ್ಲ ಸಂಸದರು ಮತ್ತು ಶಾಸಕರು ಸಹ ತಮ್ಮ ಒಂದು ತಿಂಗಳ ಸಂಬಳವನ್ನು ಕೇರಳ ಪರಿಹಾರ ನಿಧಿಗೆ ನೀಡಲು ಮುಂದಾಗಿದ್ದಾರೆ. ಕೇರಳದ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ 500 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಪ್ರವಾಹದಲ್ಲಿ ಮೃತ ಕುಟುಂಬಸ್ಥರಿಗೆ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ನೀಡಲಾಗುವುದು ಎಂದು ತಿಳಿಸಿದ್ದಾರೆ.

    ತ್ರಿಶೂರ್, ತಿರುವನಂತಪುರಂ, ಕ್ಯಾಲಿಕಟ್, ಕಣ್ಣೂರು, ಪಾಲ್ಗಾಟ್, ಕೊಟ್ಟಾಯಂಗಳಿಗೆ ಒಟ್ಟು 12 ರಿಂದ 13 ಬಸ್ಸುಗಳು ಭಾನುವಾರ ರಾತ್ರಿ ಸಂಚಾರ ಆರಂಭಿಸಿದೆ. ಮಡಿಕೇರಿ ಹಾಗೂ ಕುಶಾಲನಗರಕ್ಕೂ ಬಸ್ಸುಗಳನ್ನು ಬಿಡಲಾಗಿದೆ. ಮಂಗಳೂರು ಕಡೆಗೆ ಚಾರ್ಮಾಡಿ ಘಾಟ್ ಕಡೆಯಿಂದ ಸಾಮಾನ್ಯ ಬಸ್ಸುಗಳನ್ನು ಮಾತ್ರ ಬಿಡಲಾಗುತ್ತಿದೆ. ಆದರೆ, ಕಾಸರಗೋಡಿಗೆ ಯಾವುದೇ ಬಸ್ಸುಗಳನ್ನು ರಸ್ತೆಗಿಳಿಸಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv