Tag: kerala

  • ನೆರೆ ವೇಳೆ 8 ದಿನಗಳ ಕಾಲ ಪರಿಚಯ ತಿಳಿಸದೇ ಸ್ವಯಂಸೇವಕರಂತೆ ಕೆಲ್ಸ ಮಾಡಿದ್ರು ಐಎಎಸ್ ಅಧಿಕಾರಿ!

    ನೆರೆ ವೇಳೆ 8 ದಿನಗಳ ಕಾಲ ಪರಿಚಯ ತಿಳಿಸದೇ ಸ್ವಯಂಸೇವಕರಂತೆ ಕೆಲ್ಸ ಮಾಡಿದ್ರು ಐಎಎಸ್ ಅಧಿಕಾರಿ!

    ತಿರುವನಂತಪುರಂ: ನೆರೆಯಿಂದ ಸಂತ್ರಸ್ತಗೊಂಡಿರುವ ಕೇರಳದಲ್ಲಿ 8 ದಿನಗಳ ಕಾಲ ಐಎಎಸ್ ಅಧಿಕಾರಿಯೊಬ್ಬರು ತನ್ನ ಹೆಸರನ್ನು ಎಲ್ಲೂ ಹೇಳದೇ ಸ್ವಯಂಸೇವಕರಂತೆ ಕೆಲಸ ಮಾಡಿದ್ದಾರೆ.

    2012ರ ಬ್ಯಾಚ್ ಅಧಿಕಾರಿ ಪ್ರಸ್ತುತ ದಾದ್ರಾ ಮತ್ತು ನಗರ್ ಹವೇಲಿಯ ಜಿಲ್ಲಾಧಿಕಾರಿಯಾಗಿರುವ ಕಣ್ಣನ್ ಗೋಪಿನಾಥನ್ ಸ್ವಯಂಸೇವಕರ ಜೊತೆಯೇ ಕೆಲಸ ಮಾಡಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    8ನೇ ದಿನ ಕೇರಳ ಬುಕ್ ಮತ್ತು ಪಬ್ಲಿಕೇಶನ್ ಕೇಂದ್ರದಲ್ಲಿ ವಸ್ತುಗಳನ್ನು ಲೋಡಿಂಗ್ ಮಾಡುವ ವೇಳೆ ಎರ್ನಾಕುಲಂ ಜಿಲ್ಲಾಧಿಕಾರಿ ಮೊಹಮ್ಮದ್ ಸಫ್ರುಲ್ಲಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಫ್ರುಲ್ಲಾ ಅವರಿಗೆ ಮೊದಲೇ ಗೋಪಿನಾಥನ್ ಅವರ ಪರಿಚಯ ಇತ್ತು. ಈ ವೇಳೆ ಇಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ ಐಎಎಸ್ ಅಧಿಕಾರಿ ಎಂದು ಪರಿಚಯಿಸಿದಾಗ ಗೋಪಿನಾಥನ್ ಅವರ ವ್ಯಕ್ತಿತ್ವ ಅಲ್ಲಿದ್ದವರಿಗೆ ಗೊತ್ತಾಗಿದೆ.

    ದಾದ್ರಾ ಮತ್ತು ನಗರ್‍ಹವೇಲಿಯ 1 ಕೋಟಿ ರೂ. ನೆರವು ನೀಡಲು ಗೋಪಿನಾಥ್ ಕೇರಳಕ್ಕೆ ಆಗಮಿಸಿದ್ದರು. ಆಗಸ್ಟ್ 26 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಚೆಕ್ ನೀಡಿದ ಬಳಿಕ ಅವರು ತಿರುವನಂತಪುರಂನಿಂದ ನೇರವಾಗಿ ಸರ್ಕಾರಿ ಬಸ್ಸು ಹತ್ತಿದ್ದು ಚೆಂಗನ್ನೂರಿಗೆ. ಕೇರಳದಲ್ಲಿ ನೆರೆಯಿಂದ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶದಲ್ಲಿ ಒಂದಾಗಿರುವ ಚೆಂಗನ್ನೂರಿನಲ್ಲಿ ಇಳಿದ ಇವರು ಸ್ವಯಂಸೇವಕರಂತೆ ಕೆಲಸ ಮಾಡತೊಡಗಿದರು.

    ಜನ ಗೋಪಿನಾಥನ್ ಅವರನ್ನು ಯಾರು ನೀವು ಪ್ರಶ್ನಿಸಿದಾಗ, ನಾನು ಸರ್ಕಾರೇತರ ಸಂಸ್ಥೆಯೊಂದರ ಸ್ವಯಂಸೇವಕ ಎಂದು ಹೇಳಿಕೊಂಡಿದ್ದರು. ಪುನರ್ವಸತಿ ಕೇಂದ್ರದಲ್ಲಿ ಕೆಲಸ ಮಾಡುವ ಜೊತೆ ಅವರು ಭಾಷಾಂತರ ಮಾಡುತ್ತಿದ್ದರು.  ಐಎಎಸ್ ಅಧಿಕಾರಿಗಳಿಗೆ ಗೋಪಿನಾಥ್ ಕೇರಳದಲ್ಲಿ ಕೆಲಸ ಮಾಡುತ್ತಿರುವ ವಿಚಾರ ಗೊತ್ತಿತ್ತು.  ಕೆಲ ಐಎಎಸ್ ಸಹಪಾಠಿಗಳಿಗೆ ಮಾತ್ರ ಗೋಪಿನಾಥನ್ ಸ್ವಯಂ ಸೇವಕರಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವ ವಿಚಾರ ತಿಳಿದಿತ್ತು.

    ತನ್ನ ಕೆಲಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಏನು ದೊಡ್ಡ ಕೆಲಸ ಮಾಡಿಲ್ಲ. ನಾನೊಬ್ಬ ಸಾಮಾನ್ಯ ವ್ಯಕ್ತಿಯಂತೆ ಕೆಲಸ ಮಾಡಿದ್ದೇನೆ ಅಷ್ಟೇ ಎಂದು ತಿಳಿಸಿದರು.

    ಕೊನೆಗೆ ನನ್ನ ಪರಿಚಯ ತಿಳಿದಾಗ ಜನ ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದರು. ಇದರಿಂದ ನನಗೆ ಬಹಳ ಮುಜುಗರವಾಯಿತು. ಈ ವೇಳೆ ಅಧಿಕಾರಿಗಳಿಗೆ ನಾನು ಐಎಎಸ್ ಅಧಿಕಾರಿ ಎನ್ನುವ ವಿಚಾರ ಗೊತ್ತಾದ ಬಳಿಕ ಅವರು ಕೆಲಸದ ವೇಳೆ ನಾವು ಏನಾದರೂ ನಿಮಗೆ ಬೈದಿದ್ದರೆ ಅದಕ್ಕೆ ಕ್ಷಮೆಯಾಚಿಸುತ್ತೇವೆ ಎಂದಿದ್ದರು. ನೀವು ನನ್ನನ್ನು ಹೀರೋನಂತೆ ಬಿಂಬಿಸಬೇಡಿ. ತಳ ಮಟ್ಟದಲ್ಲಿ ಬಹಳಷ್ಟು ಜನ ಕಷ್ಟಪಟ್ಟು ಸಹಾಯ ಮಾಡುತ್ತಿದ್ದಾರೆ. ಅವರೇ ನಿಜವಾದ ಹೀರೋಗಳು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

    ಕೇರಳದ ಪುದುಪ್ಪಲ್ಲಿಯವರಾದ ಗೋಪಿನಾಥನ್ ಕೇರಳದಿಂದ ತೆರಳಿದ ಬಳಿಕ ಸಾಂದರ್ಭಿಕ ರಜೆಯನ್ನು ಹಾಕಿದ್ದರೂ ದಾದ್ರಾ ಮತ್ತು ನಗರ್ ಹವೇಲಿ ಆಡಳಿತ ಸರ್ಕಾರಿ ಕೆಲಸದ ನಿಮಿತ್ತ ಪ್ರವಾಸ ಕೈಗೊಂಡಿದ್ದಾರೆ ಎಂದು ದಾಖಲು ಮಾಡಿಕೊಂಡಿದೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಹಾಮಳೆ ತಂದ ಆಪತ್ತು- ಇಲಿ ಜ್ವರಕ್ಕೆ 25 ಮಂದಿ ಸಾವು

    ಮಹಾಮಳೆ ತಂದ ಆಪತ್ತು- ಇಲಿ ಜ್ವರಕ್ಕೆ 25 ಮಂದಿ ಸಾವು

    ತಿರುವನಂತಪುರಂ: ಮಹಾಮಳೆಯ ಪ್ರವಾಹದಿಂದ ತತ್ತರಿಸಿದ್ದ ಕೇರಳ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದು, ಈ ವೇಳೆಯೇ ಇಲಿ ಜ್ವರದ ಭೀತಿ ಶುರುವಾಗಿದೆ. ಕಳೆದ 1 ತಿಂಗಳಿನಲ್ಲಿ ಇಲಿ ಜ್ವರಕ್ಕೆ 28 ಮಂದಿ ಸಾವನ್ನಪ್ಪಿದ್ದು, 1 ವಾರದಲ್ಲೇ 9 ಮಂದಿ ಶಂಕಿತ ಜ್ವರಕ್ಕೆ ಬಲಿಯಾಗಿದ್ದಾರೆ.

    ಕೇರಳದ ಕೊಯಿಕ್ಕೋಡ್ ಜಿಲ್ಲೆಯಲ್ಲಿ ಇಲಿ ಜ್ವರಕ್ಕೆ ಶನಿವಾರ ಮೂವರು ಬಲಿಯಾಗಿದ್ದು, ಪ್ರವಾಹ ರಕ್ಷಣಾ ಪರಿಹಾರ ಕಾರ್ಯದಲ್ಲಿ ತೊಡಗಿದ್ದ ಆಂಡಿ, ಶಿವದಾಸನ್ ಹಾಗೂ ಕೃಷ್ಣನ್ ಎಂಬವರು ಕೋಯಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೋಕಿನಿಂದ ಸಾವನ್ನಪ್ಪಿದ್ದಾರೆ. ಇನ್ನು ಜಿಲ್ಲೆಯೊಂದರಲ್ಲೇ ಮಹಾಮಾರಿಗೆ ಬಲಿಯಾದವರ ಸಂಖ್ಯೆ 20ಕ್ಕೆ ತಲುಪಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

    ಕಳೆದ ಮೂರು ದಿನಗಳಲ್ಲಿ 300 ಶಂಕಿತ ಇಲಿ ಜ್ವರ ಪ್ರಕರಣಗಳು ಪತ್ತೆಯಾಗಿದೆ ಎಂದು ಜಿಲ್ಲಾ ಹಿರಿಯ ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಕೇರಳ ಆರೋಗ್ಯ ಇಲಾಖೆ ಇಲಿ ಜ್ವರದ ಬಗ್ಗೆ ಕೋಯಿಕ್ಕೋಡ್, ಪಾಲಕ್ಕಾಡ್, ತ್ರಿಶ್ಶೂರ್, ಮಲಪ್ಪುರಂ, ಎರ್ನಾಕುಲಂ ಜಿಲ್ಲೆಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ಅಲ್ಲದೇ ಹೆಚ್ಚುವರಿ ಔಷಧ ಹಾಗೂ ವೈದ್ಯಕೀಯ ನೆರವಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮನವಿ ಸಲ್ಲಿಸಿದೆ.

    ಇಲಿ ಜ್ವರ ಹೇಗೆ ಬರುತ್ತೆ?
    ಮನುಷ್ಯನ ಸಂಪರ್ಕಕ್ಕೆ ಸಮೀಪವಿರುವ ಪ್ರದೇಶದಲ್ಲಿ ವಾಸಿಸುವ ಇಲಿ, ಹೆಗ್ಗಣ, ಬೆಕ್ಕು, ನಾಯಿ, ಹಸು ಸೇರಿದಂತೆ ಕೆಲ ಕಾಡು ಪ್ರಾಣಿಗಳ ದೇಹದಲ್ಲಿರುವ ವೈರಸ್ ಮೂತ್ರದ ಮೂಲಕ ನೀರಿನಲ್ಲಿ ಸೇರುತ್ತದೆ. ಇಂಥ ಕಲುಷಿತ ನೀರು ಮನುಷ್ಯರ ದೇಹದ ಸಂಪರ್ಕಕ್ಕೆ ಬಂದಾಗ ವೈರಸ್ ಶರೀರದಲ್ಲಿ ಸೇರ್ಪಡೆಯಾಗಿ 4 ರಿಂದ 19 ದಿನಗಳಲ್ಲಿ ವ್ಯಕ್ತಿ ಆನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಜ್ವರಕ್ಕೆ ಮೂಲ ಕಾರಣ ಝೂನೋಟಿಕ್ ವೈರಸ್ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

    ಲಕ್ಷಣಗಳು: ಜ್ವರ, ಮೈಕೈ ನೋವು ಹಾಗೂ ತಲೆನೋವು ಕೆಲವರಲ್ಲಿ ಜಾಂಡೀಸ್ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಬಾಯಿ, ಮೂಗು ಭಾಗಗಳಲ್ಲಿ ರಕ್ತಸ್ರಾವವಾಗುವ ಸಾಧ್ಯತೆಗಳು ಇದೆ. ಈ ಸೋಂಕು ಮೂತ್ರ ಪಿಂಡಕ್ಕೂ ವಿಸ್ತರಿಸಿ ಮೂತ್ರ ವಿಸರ್ಜನೆ ಪ್ರಮಾಣ ಕಡಿಮೆಯಾಗಬಹುದಾಗಿದೆ.

    ಲಕ್ಷಣ ಕಾಣಿಸಿಕೊಂಡ್ರೆ ಏನು ಮಾಡಬೇಕು?
    ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಬಹುಬೇಗ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಬಹುದು. ಇಲಿ ಜ್ವರ ದೃಢವಾದ ಬಳಿಕ ತಜ್ಞ ವೈದ್ಯರಿಂದ ಕ್ರಮಬದ್ಧ ಚಿಕಿತ್ಸೆ ಪಡೆಯುವುದು ಅಗತ್ಯವಾಗಿರುತ್ತದೆ. ಮುಖ್ಯವಾಗಿ ಸೋಂಕಿಗೆ ಒಳಗಾಗಿರುವ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಸೋಂಕು ಹರಡುವುದಿಲ್ಲ.

    ಮುನ್ನೆಚ್ಚರಿಕೆ ಕ್ರಮ: ಕುಡಿಯಲು, ಸ್ನಾನ ಮಾಡಲು ಹಾಗೂ ದಿನನಿತ್ಯದ ಬಳಕೆಗೆ ಶುದ್ಧ ನೀರಿನ ಬಳಕೆ. ಸೋಂಕು ಕಾಣಿಸಿಕೊಂಡ ಪ್ರದೇಶದಲ್ಲಿ ಸಾಕು ಪ್ರಾಣಿಗಳನ್ನು ಕೊಳ, ಹೊಂಡ ಇನ್ನಿತರ ಸಾರ್ವಜನಿಕರ ಪ್ರದೇಶಗಳಲ್ಲಿ ಅವುಗಳ ಮೈ ತೊಳೆಯಬಾರದು. ಆಹಾರ ಪದಾರ್ಥಗಳ ರಕ್ಷಣೆ, ಮನೆಯ ಸುತ್ತಲು ನೈರ್ಮಲ್ಯ ಕಾಪಾಡಿಕೊಳ್ಳುವುದು. ಸೋಂಕು ಉಂಟಾದ ಪ್ರದೇಶದಲ್ಲಿ ಚಪ್ಪಲಿ ಧರಿಸಿ ಓಡಾಡುವುದು. ಜ್ವರದ ಬಂದ ಕೂಡಲೇ ನಿರ್ಲಕ್ಷ್ಯ ಮಾಡದೆ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದ ನಂದಮೂರಿ ಹರಿಕೃಷ್ಣ

    ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದ ನಂದಮೂರಿ ಹರಿಕೃಷ್ಣ

    ಹೈದರಾಬಾದ್: ಟಾಲಿವುಡ್ ನಟ, ಆಂಧ್ರಪ್ರದೇಶ ಮಾಜಿ ಸಿಎಂ ನಂದಮೂರಿ ರಾಮಾರಾವ್ ಅವರ ಪುತ್ರ ಹರಿಕೃಷ್ಣರ ಆಕಾಲಿಕ ಮರಣ ಅಭಿಮಾನಿಗಳು ಹಾಗೂ ಕುಟುಂಬಸ್ಥರಿಗೆ ತೀವ್ರ ದು:ಖ ಉಂಟು ಮಾಡಿದ್ದು, ಕಳೆದ ಕೆಲ ದಿನಗಳ ಹಿಂದೆ ಹರಿಕೃಷ್ಣ ಅವರು ಅಭಿಮಾನಿಗಳಿಗೆ ಬರೆದ ಪತ್ರ ಅವರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

    ಹರಿಕೃಷ್ಣ ಅವರು ಬದುಕಿದ್ದರೆ ಸೆಪ್ಟೆಂಬರ್ 2ರಂದು 62ಕ್ಕೆ ವಸಂತಕ್ಕೆ ಕಾಲಿಡುತ್ತಿದ್ದರು. ಈ ವೇಳೆ ಪ್ರತಿ ವರ್ಷದಂತೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿ ತಮ್ಮ ನೆಚ್ಚಿನ ನಟನ ಹುಟ್ಟಹಬ್ಬ ಆಚರಿಸುತ್ತಿದ್ದರು. ಇದನ್ನು ತಿಳಿದಿದ್ದ ಹರಿಕೃಷ್ಣ ಅವರು ಈ ಬಾರಿ ಕೇರಳದಲ್ಲಿ ಮಳೆಯಿಂದ ಪ್ರವಾಹ ಉಂಟಾಗಿದ್ದು, ಅಭಿಮಾನಿಗಳು ತಮ್ಮ ಹುಟ್ಟು ಹಬ್ಬ ಆಚರಣೆ ಮಾಡದೆ ಆ ಹಣವನ್ನು ಸಂತ್ರಸ್ತರಿಗೆ ನೀಡುವಂತೆ ಮನವಿ ಮಾಡಿದ್ದರು. ಇದನ್ನು ಓದಿ:  ದಯವಿಟ್ಟು ನೈಟ್ ಜರ್ನಿ ವೇಳೆ ಸ್ವಲ್ಪ ಹುಷಾರಾಗಿರಿ ಎಂದು ಹೇಳಿ ನಂದಮೂರಿ ನಿಧನಕ್ಕೆ ಹ್ಯಾಟ್ರಿಕ್ ಹೀರೋ ಸಂತಾಪ

    https://twitter.com/TollyBattel/status/1034655323934535680

    ಈ ಕುರಿತು ತಮ್ಮ ಅಭಿಮಾನಿಗಳಿಗೆ ಸ್ವತಃ ಒಂದು ಪುಟದ ಪತ್ರ ಬರೆದಿದ್ದ ಅವರು, ಆಂಧ್ರಪ್ರದೇಶ ಕೆಲ ಜಿಲ್ಲೆಗಳು ಹಾಗೂ ಕೇರಳದಲ್ಲಿ ಪ್ರವಾಹದಿಂದ ಸಾಕಷ್ಟು ಮಂದಿ ಜೀವ ಕಳೆದುಕೊಂಡಿದ್ದಾರೆ. ಹಲವರು ನಿರಾಶ್ರಿತರಾಗಿದ್ದಾರೆ. ಅದ್ದರಿಂದ ತಮ್ಮ ಹುಟ್ಟುಹಬ್ಬದಂದು ಹಾಕುವ ಫ್ಲೆಕ್ಸ್, ಹೂವಿನ ಹಾರ, ಕೇಕ್‍ಗೆ ವೆಚ್ಚ ಮಾಡುವ ಹಣವನ್ನು ಸಂತ್ರಸ್ತರಿಗೆ ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು. ಇದನ್ನು ಓದಿ: ಎನ್‍ಟಿಆರ್ ಕುಟುಂಬಕ್ಕೆ ನಲ್ಗೊಂಡ ಮಾರ್ಗ ಶಾಪವೇ?

    ಸದ್ಯ ಹರಿಕೃಷ್ಣ ಅವರ ಪಾರ್ಥಿಕ ಶರೀರವನ್ನು ಹೈದರಾಬಾದ್‍ನಲ್ಲಿರುವ ಅವರ ನಿವಾಸಕ್ಕೆ ಸಾಗಿಸಲಾಗಿದೆ. ಭಾರತದ ಹಲವು ಚಿತ್ರರಂಗದ ಗಣ್ಯರು ನಿವಾಸಕ್ಕೆ ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಹರಿಕೃಷ್ಣ ಅವರ ಅಂತಿಮ ಸಂಸ್ಕಾರಗಳು ನಾಳೆ ನಡೆಯಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದು, ಈ ಹಿಂದೆ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಜಾನಕಿರಾಮ್‍ರ ಪಕ್ಕದಲ್ಲೇ ಹರಿಕೃಷ್ಣ ಸಂಸ್ಕಾರ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಹರಿಕೃಷ್ಣ ಅವರ ಅಂತಿಮ ಸಂಸ್ಕಾರಕ್ಕೆ ತೆಲಂಗಾಣ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಇದನ್ನು ಓದಿ: ಡ್ರೈವರಿಂದ ಸ್ಟಾರ್ ವರೆಗೂ ಎಲ್ಲರನ್ನೂ ಒಂದೇ ರೀತಿಯಾಗಿ ನೋಡ್ತಿದ್ರು: ಹರಿಕೃಷ್ಣ ಬಗ್ಗೆ ರವಿಶಂಕರ್ ಮಾತು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=2283Fb13–Y

     

  • ಪೇಜಾವರ ಅಧೋಕ್ಷಜ ಟ್ರಸ್ಟ್ ವತಿಯಿಂದ ಕೇರಳ, ಕೊಡಗಿಗೆ ತಲಾ 10ಲಕ್ಷ ರೂ. ಪರಿಹಾರ

    ಪೇಜಾವರ ಅಧೋಕ್ಷಜ ಟ್ರಸ್ಟ್ ವತಿಯಿಂದ ಕೇರಳ, ಕೊಡಗಿಗೆ ತಲಾ 10ಲಕ್ಷ ರೂ. ಪರಿಹಾರ

    – ಶಿರೂರು ಬಗ್ಗೆ ಬಹಳ ಪ್ರೀತಿಯಿತ್ತು

    ಬೆಂಗಳೂರು: ಕೊಡಗು ಮತ್ತು ಕೇರಳ ರಾಜ್ಯಕ್ಕೆ ಪೇಜಾವರ ಅಧೋಕ್ಷಜ ಟ್ರಸ್ಟ್ ವತಿಯಿಂದ ತಲಾ 10 ಲಕ್ಷ ರೂ. ಪರಿಹಾರವನ್ನು ನೀಡಲಾಗುವುದು ಅಂತ ಪೇಜಾವರ ವಿಶ್ವೇಶ ತೀರ್ಥ ಶ್ರೀ ಘೋಷಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಶೀಘ್ರದಲ್ಲೇ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಾಗುವುದು ಅಂದ ಅವರು, ಸರ್ಕಾರ ಹಾಗೂ ರಾಜಕಾರಣಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ರು. ಪರಿಸರ ಕಾಳಜಿ ಇಲ್ಲದ ಸರ್ಕಾರದ ನಿರ್ಲಕ್ಷ್ಯದಿಂದಾಗಿಯೇ ಕೇರಳ, ಕೊಡಗಿನಲ್ಲಿ ಇಂತಹ ಅನಾಹುತಗಳು ಆಗಿದೆ. ಈ ಬಗ್ಗೆ ವಿಜ್ಞಾನಿಗಳ ಜೊತೆ ಚರ್ಚೆ ನಡೆಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆಂದು ಸಲಹೆಯಿತ್ತರು.

    ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು. ಉಡುಪಿಯ ಪಾಜಕದಲದಲ್ಲಿ ವಿದ್ಯಾರ್ಥಿ ನಿಲಯ ನಿರ್ಮಿಸಲಾಗ್ತಿದೆ. ಹುಬ್ಬಳ್ಳಿ, ರಾಯಚೂರು, ಕೊಪ್ಪಳ ವಿದ್ಯಾನಂದ ಗುರುಕುಲ ವಸತಿ ಶಾಲೆ ಕಾಲೇಜು ಆರಂಭಿಸಲಾಗುವುದು. ಕಸ್ತೂರಿ ರಂಗನ್ ವರದಿ ಜಾರಿ ಕುರಿತಂತೆ ಅಲ್ಲಿನ ಜನರ ಅಭಿಪ್ರಾಯ ಪಡೆಯಬೇಕು. ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಅಂದ್ರು.

    ಎತ್ತಿನ ಹೊಳೆ ಯೋಜನೆಯೇ ಕೊಡಗಿನ ಸ್ಥಿತಿಗೆ ಕಾರಣ ಅನ್ನುವ ಮಾತುಗಳು ಕೇಳಿ ಬರ್ತಿದೆ. ಈ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ, ನಾನು ವಿಜ್ಞಾನಿ ಅಲ್ಲ. ಎತ್ತಿನ ಹೊಳೆ ಯೋಜನೆಯಲ್ಲಿ ರಾಜಕೀಯ ಮಾಡಲಾಗ್ತಿದೆ. ನಾನು ಎತ್ತಿನ ಹೊಳೆ ಯೋಜನೆ ವಿರೋಧಿ ಅಲ್ಲ. ಎತ್ತಿನ ಹೊಳೆ ಯೋಜನೆ ಉತ್ತಮ ಯೋಜನೆಯಾಗಿದೆ. ಸರ್ಕಾರ ಪರಿಶೀಲಿಸಿ, ವಿಚಾರ ಮಾಡಿ ಯೋಜನೆ ಮುಂದುವರಿಸಿ. ನಾನು ಪರಿಸರ ಪ್ರೇಮಿ. ಎತ್ತಿನ ಹೊಳೆ ಯೋಜನೆ ಅನುಷ್ಠಾನದಲ್ಲಿ ವಿಜ್ಞಾನಿಗಳ ಜತೆ ಚರ್ಚಿಸಿ ಪರಿಶೀಲನೆ ನಡೆಸಿ, ಪಕ್ಷಾತೀತವಾಗಿ ಚರ್ಚೆ ನಡೆಸಿ, ನಂತರ ತೀರ್ಮಾನ ಕೈಗೊಳ್ಳಲಿ ಅಂತ ಹೇಳಿದ್ರು.

    ಸಮ್ಮಿಶ್ರ ಸರ್ಕಾರ ಕಾರ್ಯವೈಖರಿ ವಿಚಾರದ ಕುರಿತು ಮಾತನಾಡಿದ ಅವರು, ಸದ್ಯದ ರಾಜಕೀಯ ವಿದ್ಯಮಾನಗಳು ನನಗೆ ಬೇಸರ ತರಿಸಿದೆ. ಮೂರು ರಾಜಕೀಯ ಪಕ್ಷಗಳ ಬಗ್ಗೆ ಬೇಸರ ಇದೆ. ಒಬ್ಬರು ಮತ್ತೊಬ್ಬರನ್ನ ಟೀಕೆ ಮಾಡುವಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಮೂರು ಪಕ್ಷಗಳೂ ದ್ವೇಷ ಬಿಟ್ಟು ರಾಜ್ಯದ ಅಭಿವೃದ್ಧಿ ಕೈ ಜೋಡಿಸಲಿ ಎಂದು ಸಲಹೆ ನೀಡಿದ್ರು.

    ಶಿರೂರು ಬಗ್ಗೆ ಪ್ರೀತಿಯಿತ್ತು:
    ಶಿರೂರು ಶ್ರೀಗಳ ಬಗ್ಗೆ ಬಹಳ ಪ್ರೀತಿ ಇತ್ತು. ನಾನು ಮರಣೋತ್ತರ ದಲ್ಲಿ ಟೀಕೆ ಮಾಡಿದ್ದೆ ಎಂದು ಬಿಂಬಿಸಲಾಗಿತ್ತು. ನಾನು ಹಾಗೆ ಮಾತನಾಡಲಿಲ್ಲ. ಮದ್ಯ, ಮಾನಿನಿ ಸಹವಾಸ ಇದ್ದ ಕಾರಣ ಪಟ್ಟದ ದೇವರನ್ನ ಕೊಟ್ಟಿಲ್ಲ. ನನಗೆ ಶಿರೂರು ಶ್ರೀಗಳ ಮೇಲೆ ವೈಯುಕ್ತಿಕ ದ್ವೇಷ ಇಲ್ಲ. ಅವರಿಗೆ ಎಷ್ಟೋ ಸಲ ತೊಂದರೆ ಆದಾಗ ನಾನೇ ಅವರನ್ನ ಕಾಪಾಡಿದ್ದೇನೆ. ನನ್ನ ಮೇಲೆ ಅನೈತಿಕ ಆರೋಪ ಮಾಡಲಾಗ್ತಿದೆ. ಇದು ನನಗೆ ಬೇಸರ ತರಿಸಿದೆ. ಒಟ್ಟಿನಲ್ಲಿ ಸತ್ಯ ಏನು ಅನ್ನೋದು ಎಲ್ಲರಿಗೂ ಗೊತ್ತು. ನಾನು ನನ್ನ ಬಗ್ಗೆ ಕೇಳಿ ಬಂದಿರುವ ಆರೋಪದ ಬಗ್ಗೆ ಮಾತ್ರ ಪ್ರತಿಕ್ರಿಯೆ ನೀಡ್ತಿನಿ. ಶಿರೂರುವ ಶ್ರೀಗಳ ವಿಚಾರದಲ್ಲಿ ಮೊದಲಿನಿಂದಲೂ ಟೀಕೆ ಮಾಡ್ತಿದ್ದೆ. ಈಗಲೂ ಅದನ್ನೇ ಮಾಡ್ತಾ ಇದ್ದೀನಿ ಅಂತ ತಿಳಿಸಿದ್ರು.

    ಉತ್ತರ ಭಾರತದಲ್ಲಿ ಹಿಂದೂ ನ್ಯಾಯಾಲಯ ಆರಂಭಿಸುವ ವಿಚಾರದ ಕುರಿತು ಹೆಚ್ಚಿಗೆ ಮಾತನಾಡಲ್ಲ. ಗೋಕರ್ಣ ಮಠ ಸರ್ಕಾರ ಅಧೀನಕ್ಕೆ ಪಡೆಯುವ ವಿಚಾರದ ಕುರಿತೂ ಹೆಚ್ಚು ಮಾತನಾಡೋಲ್ಲ ಅಂದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪರಿಹಾರ ಸಾಮಗ್ರಿಗಳನ್ನು ಭುಜದ ಮೇಲೆ ಹೊತ್ತು ಸಾಗಿದ ಸಚಿವ- ಇತ್ತ ಬಿಸ್ಕೆಟ್ ಎಸೆದ ರೇವಣ್ಣ!

    ಪರಿಹಾರ ಸಾಮಗ್ರಿಗಳನ್ನು ಭುಜದ ಮೇಲೆ ಹೊತ್ತು ಸಾಗಿದ ಸಚಿವ- ಇತ್ತ ಬಿಸ್ಕೆಟ್ ಎಸೆದ ರೇವಣ್ಣ!

    ತಿರುವನಂತಪುರ: ಕೇರಳದ ಶಿಕ್ಷಣ ಸಚಿವರಾದ ರವೀಂದ್ರನಾಥ್‍ರವರು ಪರಿಹಾರ ಸಾಮಗ್ರಿಗಳನ್ನು ಸ್ವತಃ ಹೆಗಲ ಮೇಲೆ ಹೊತ್ತುಕೊಂಡು ನಿರಾಶ್ರಿತ ಕೇಂದ್ರಗಳಿಗೆ ಸಾಗಿಸಿದ್ದಾರೆ.

    ತುರ್ತು ಪರಿಸ್ಥಿತಿ ಅಥವಾ ಪ್ರವಾಹ ಪರಿಸ್ಥಿತಿ ಸಂದರ್ಭಗಳಲ್ಲಿ ಅಧಿಕಾರಿಗಳು ಹಾಗೂ ಸಚಿವರು ಯಾವ ರೀತಿ ಜನರ ಕಷ್ಟಕ್ಕೆ ಸ್ಪಂದಿಸುತ್ತಾರೆ ಎನ್ನುವುದು ಮುಖ್ಯ. ಇದೇ ರೀತಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭಗಳಲ್ಲಿ ಆಳುವ ಮಂದಿ ಹೇಗೆ ನಡ್ಕೋತಾರೆ ಅನ್ನೋದಕ್ಕೆ ಎರಡು ಉದಾಹರಣೆಗಳು ನಮ್ಮ ಮುಂದಿವೆ.

    ಕೇರಳದ ತ್ರಿಶೂರ್ ಜಿಲ್ಲೆಯ ನಿರಾಶ್ರಿತ ಕೇಂದ್ರದಲ್ಲಿ ನೆಲೆಸಿದ್ದ ನಿರಾಶ್ರಿತರಿಗೆ ಪರಿಹಾರ ಸಾಮಗ್ರಿಗಳು ಸಿಗದೇ ಜನ ನರಕ ಯಾತನೇ ಅನುಭವಿಸುತ್ತಿದ್ದರು. ಇದರ ಮಾಹಿತಿ ಪಡೆದ ರವೀಂದ್ರನಾಥ್‍ರವರು ಖುದ್ದು ಸ್ಥಳಕ್ಕೆ ಪರಿಹಾರ ಸಾಮಗ್ರಿಗಳ ಸಮೇತ ಭೇಟಿ ನೀಡಿದ್ದರು. ಈ ವೇಳೆ ಆಹಾರ ಸಾಮಾಗ್ರಿಗಳನ್ನು ತಮ್ಮ ಹೆಗಲ ಮೇಲೆಯೇ ಇಟ್ಟುಕೊಂಡು ನಿರಾಶ್ರಿತ ಕೇಂದ್ರಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಜನರ ಕಷ್ಟಕ್ಕೆ ಸಚಿವರು ಹೆಗಲು ಕೊಟ್ಟಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದ್ದು, ಸಚಿವರನ್ನು ಜನ ಬಾಹುಬಲಿಯಂದೇ ಕರೆಯುತ್ತಿದ್ದಾರೆ.

    ಆದರೆ ಇದಕ್ಕೆ ಭಿನ್ನವಾದ ಘಟನೆ ನಮ್ಮ ರಾಜ್ಯದಲ್ಲಿ ನಡೆದಿದ್ದು ದುರಾದೃಷ್ಟವೇ ಸರಿ, ಕಳೆದ ವಾರ ಲೋಕೋಪಯೋಗಿ ಸಚಿವರಾದ ಎಚ್.ಡಿ.ರೇವಣ್ಣನವರು ಹಾಸನ ಜಿಲ್ಲೆಯ ರಾಮನಾಥಪುರ ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ್ದಾಗ, ನಿರಾಶ್ರಿತರಿಗೆ ಪ್ರಾಣಿಗಳಿಗೆ ಎಸೆಯುವ ರೀತಿ ಬಿಸ್ಕೆಟ್ ಪ್ಯಾಕ್‍ಗಳನ್ನು ಎಸೆಯುವ ಮೂಲಕ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಎಂತಹುದೇ ಅನಿವಾರ್ಯ ಪರಿಸ್ಥಿತಿಯಲ್ಲಿದ್ದರು, ಆ ರೀತಿ ನಡೆದುಕೊಳ್ಳಬಾರದಿತ್ತೆಂದು ಸಾರ್ವಜನಿಕರು ಸಚಿವರ ನಡೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು.  ಇದನ್ನೂ ಓದಿ: ಅಧಿಕಾರದ ಮದದಲ್ಲಿ ಅಮಾನವೀಯ ಕೆಲಸ- ಕೊಡಗು ಸಂತ್ರಸ್ತರಿಗೆ ಬಿಸ್ಕೆಟ್ ಎಸೆದ ಸೂಪರ್ ಸಿಎಂ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಳೆಗೆ ಕರ್ನಾಟಕದಲ್ಲಿ 166, ದೇಶದಲ್ಲಿ 1276 ಮಂದಿ ಬಲಿ

    ಮಳೆಗೆ ಕರ್ನಾಟಕದಲ್ಲಿ 166, ದೇಶದಲ್ಲಿ 1276 ಮಂದಿ ಬಲಿ

    ನವದೆಹಲಿ: ಈ ವರ್ಷ ಮಳೆ ಸಂಬಂಧಿ ದುರಂತಕ್ಕೆ ಕರ್ನಾಟಕದಲ್ಲಿ 166, ದೇಶದಲ್ಲಿ ಒಟ್ಟು 1,276 ಮಂದಿ ಮೃತಪಟ್ಟಿದ್ದಾರೆ ಎಂದು ಗೃಹಸಚಿವಾಲಯ ಹೇಳಿದೆ.

    ಈ ವರ್ಷದ ಆರಂಭದಿಂದ ಆಗಸ್ಟ್ 26 ವರೆಗಿನ ವರದಿಯನ್ನು ಪ್ರಕಟಿಸಿದ್ದು ಕೇರಳದಲ್ಲಿ ಅತಿ ಹೆಚ್ಚು 443 ಮಂದಿ ಮೃತಪಟ್ಟಿದ್ದಾರೆ. ಉತ್ತರಪ್ರದೇಶ(218), ಪಶ್ಚಿಮ ಬಂಗಾಳ(198), ಅಸ್ಸಾಂ(49) ಮೃತಪಟ್ಟಿದ್ದಾರೆ. ಭಾರೀ ಮಳೆಯಾದ ಕಾರಣ 17,14,863 ಮಂದಿ ಈಗ ಸಂತ್ರಸ್ತರ ಕೇಂದ್ರದಲ್ಲಿ ನೆಲೆಸಿದ್ದಾರೆ ಎಂದು ವರದಿ ತಿಳಿಸಿದೆ.

    ಭಾನುವಾರ ನಡೆದ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೇರಳ ಮತ್ತು ಮಳೆ ಪೀಡಿತ ರಾಜ್ಯಗಳ ಬಗ್ಗೆ ಮಾತನಾಡಿ ಕೇಂದ್ರದಿಂದ ಸಂಪೂರ್ಣ ಸಹಾಯ ಮಾಡುವುದಾಗಿ ತಿಳಿಸಿದ್ದರು.

    ಶುಕ್ರವಾರ ಕೊಡಗಿಗೆ ಭೇಟಿ ನೀಡಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‍ ಅತಿವೃಷ್ಟಿ ಪೀಡಿತ ಪ್ರದೇಶಗಳಲ್ಲಿ ಅಗತ್ಯ ಪರಿಹಾರ ಕಾರ್ಯಗಳನ್ನು ನಡೆಸುವುದಕ್ಕೆ ನೆರವಾಗುವಂತೆ ಡಿಫೆನ್ಸ್ ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ಸ್‍ನ (ಡಿಪಿಎಸ್‍ಯು) ಮೂರು ಸಂಸ್ಥೆಗಳ ಮೂಲಕ ಕೊಡಗು ಜಿಲ್ಲೆಗೆ 7 ಕೋಟಿ ರೂ. ನೆರವು ಪ್ರಕಟಿಸಿದ್ದರು. ಅಲ್ಲದೇ ಸಂಸದರ ನಿಧಿಯಿಂದ ಒಂದು ಕೋಟಿ ರೂ. ಹಣ ನೀಡುವುದಾಗಿ ತಿಳಿಸಿದ್ದರು.

    ಜಿಲ್ಲೆಯಲ್ಲಾಗಿರುವ ಹಾನಿ ಕುರಿತಂತೆ ಕೇಂದ್ರ ಸರ್ಕಾರದ ನಷ್ಟ ಅಂದಾಜು ತಂಡ ಬಂದು ಪರಿಶೀಲನೆ ನಡೆಸಿ ವಿಸ್ತೃತ ವರದಿ ನೀಡಿದ ಬಳಿಕ ಹಾಗೂ ರಾಜ್ಯ ಸರ್ಕಾರದ ಪ್ರಸ್ತಾಪನೆಗಳನ್ನು ಆಧರಿಸಿ ಕೇಂದ್ರದಿಂದ ಪರಿಹಾರವನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದ್ದರು.

    ನೆರೆಯಿಂದಾಗಿ ಕೇರಳಕ್ಕೆ 19,512 ಕೋಟಿ ರೂ. ನಷ್ಟವಾಗಿದ್ದು, ಈಗ ತುರ್ತಾಗಿ 2 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು. ಆಗಸ್ಟ್ 17ರಂದು ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ 500 ಕೋಟಿ ರೂ. ಪ್ರಕಟಿಸಿದ್ದರು. ಬಳಿಕ ರಾಜನಾಥ್ ಸಿಂಗ್ 100 ಕೋಟಿ ರೂ. ಪರಿಹಾರ ಘೋಷಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಹಿರಂಗವಾಗಿ ಗೋವು ಕಡಿದಿದ್ದಕ್ಕೆ ಕೇರಳದಲ್ಲಿ ಪ್ರವಾಹ- ಯತ್ನಾಳ್ ವಿವಾದಾತ್ಮಕ ಹೇಳಿಕೆ

    ಬಹಿರಂಗವಾಗಿ ಗೋವು ಕಡಿದಿದ್ದಕ್ಕೆ ಕೇರಳದಲ್ಲಿ ಪ್ರವಾಹ- ಯತ್ನಾಳ್ ವಿವಾದಾತ್ಮಕ ಹೇಳಿಕೆ

    ವಿಜಯಪುರ: ಮುಸ್ಲಿಂ ವಿರೋಧಿ ಹಾಗೂ ಗೋವು ಸಂರಕ್ಷಣೆ ಕುರಿತು ವಿವಾದಾತ್ಮಕ ಹೇಳಿಕೆ ನೀಡುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ಈಗ ಕೇರಳ ಪ್ರವಾಹಕ್ಕೆ ಗೋವು ಹತ್ಯೆ ಮಾಡಿದ್ದೇ ಕಾರಣ ಎಂದು ಹೇಳುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಕೇರಳದಲ್ಲಿ ಇತ್ತೀಚೆಗೆ ನಡು ರಸ್ತೆಯಲ್ಲಿಯೇ ಬಹಿರಂಗವಾಗಿ ಗೋವುವನ್ನು ಕಡಿಯಲಾಗಿತ್ತು. ಈ ಘಟನೆ ನಡೆದು ಒಂದು ವರ್ಷ ಕಳೆದಿಲ್ಲ. ಆಗಲೇ ಪ್ರವಾಹ ಬಂದು ಅವರು ಸಂಕಷ್ಟಕ್ಕೆ ಸಿಲುಕಬೇಕಾಯಿತು ಎಂದು ಯತ್ನಾಳ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಗೋವುವನ್ನು ಹತ್ಯೆ ಮಾಡಿದ ಕೇರಳ ಜನತೆ ಹಿಂದೂ ಧರ್ಮದ ಭಾವನೆಗೆ ಧಕ್ಕೆ ತಂದಿದ್ದರು. ಹೀಗಾಗಿ ಅವರಿಗೆ ತಕ್ಕ ಶಾಸ್ತಿಯಾಯಿತು. ಯಾರು ಹಿಂದೂ ಧರ್ಮವನ್ನು ಅವಮಾನಿಸುತ್ತಾರೆ ಅವರಿಗೆ ತಕ್ಕ ಶಿಕ್ಷೆ ಆಗುತ್ತದೆ ಎನ್ನವುದಕ್ಕೆ ಇದು ನಿದರ್ಶನ ಎಂದು ವ್ಯಂಗ್ಯವಾಡಿದರು.

    ಬಿಜೆಪಿ ಶಾಸಕನೊಬ್ಬ ವಿಜಯಪುರಲ್ಲಿ ಇದ್ದಾನೆ ಅಂತಾ ಜಿಲ್ಲೆಯಲ್ಲಿ ಗೋವುಗಳ ಹತ್ಯೆ ಕಡಿಮೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಕೇವಲ ಶೇಕಡಾ 10 ರಷ್ಟು ಮಾತ್ರ ಗೋವು ಹತ್ಯೆಯಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸಂಪೂರ್ಣವಾಗಿ ಗೋವು ಹತ್ಯೆ ನಿಷೇದ ಕಾಯ್ದೆ ಜಾರಿಗೆ ತರುತ್ತದೆ ಅಂತ ಅವರು ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೇರಳದಲ್ಲಿ ಜೋರಾಯ್ತು ಫಂಡ್ ಪಾಲಿಟಿಕ್ಸ್!

    ಕೇರಳದಲ್ಲಿ ಜೋರಾಯ್ತು ಫಂಡ್ ಪಾಲಿಟಿಕ್ಸ್!

    ತಿರುವಂತಪುರಂ/ನವದೆಹಲಿ: ಶತಮಾನದ ಮಳೆಗೆ ಕೇರಳ ತತ್ತರಿಸಿ ಹೋಗಿದ್ದು, 13 ಜಿಲ್ಲೆಗಳಲ್ಲಿ ಜನ ಮೊದಲಿನ ಸ್ಥಿತಿಗೆ ಬರಬೇಕಾದರೆ ವರ್ಷಗಳೇ ಬೇಕಾಗಲಿದೆ. ಇದರ ನಡುವೆ ಕೇರಳಕ್ಕೆ ವಿದೇಶಿ ನೆರವು ವಿಷಯವಾಗಿ ದೊಡ್ಡ ರಾಜಕೀಯ ಗುದ್ದಾಟ ನಡೆಯುತ್ತಿದೆ.

    ರಾಜ್ಯಕ್ಕೆ 19,512 ಕೋಟಿ ರೂ. ನಷ್ಟವಾಗಿದ್ದು, ಈಗ ತುರ್ತಾಗಿ 2 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಬೇಕೆಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದರು. ಆಗಸ್ಟ್ 17ರಂದು ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ಮೋದಿ 500 ಕೋಟಿ ರೂ. ಪ್ರಕಟಿಸಿದ್ದರು. ಬಳಿಕ ರಾಜನಾಥ್ ಸಿಂಗ್ 100 ಕೋಟಿ ರೂ. ಪರಿಹಾರ ಘೋಷಿಸಿದ್ದರು. ಕೇರಳಕ್ಕೆ ಆರ್ಥಿಕವಾಗಿ ಯುಎಇ 700 ಕೋಟಿ ನೆರವು ಘೋಷಿಸಿದೆ ಅಂತ ಸಿಎಂ ಪಿಣರಾಯಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ದೇಶದಲ್ಲಿರುವ ನಿಯಮಾನುಸಾರ ವಿದೇಶಿ ನೆರವು ಪಡೆಯಲು ಸಾಧ್ಯವಿಲ್ಲ ಅನ್ನೋ ಚರ್ಚೆ ಆರಂಭವಾಯಿತು.

    ನಾವು ನೆರವಿಗೆ ಮುಂದಾಗಿದ್ದು ನಿಜ. ಆದರೆ, 700 ಕೋಟಿ ಅಂತ ಅಧಿಕೃತವಾಗಿ ಪ್ರಕಟಿಸಿಲ್ಲ ಅಂತ ಯುಎಇ ರಾಯಭಾರಿ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ, ನೆರವಿನ ಮೊತ್ತ 700 ಕೋಟಿ ಅಂತ ಸಿಎಂ ಹೇಳಿರೋದ್ಯಾಕೆ? ಈ ವದಂತಿಯ ಮೂಲ ಏನು ಅಂತ ಬಿಜೆಪಿ ಪ್ರಶ್ನಿಸಿದೆ. ಈ ಎಲ್ಲಾ ವಿದ್ಯಮಾನಗಳ ನಡುವೆ ರಾಷ್ಟ್ರೀಯ ವಿಪತ್ತು ಸಂದರ್ಭದಲ್ಲಿ ವಿದೇಶಿ ನೆರವು ಪಡೆಯುವ ಬಗ್ಗೆ ಕೇಂದ್ರ ಸರ್ಕಾರ, ಸರ್ವಪಕ್ಷ ಸಭೆ ಕರೆದು ಸ್ಪಷ್ಟ ನೀತಿ ರೂಪಿಸಲಿ ಅಂತ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

    ಈ ಮಧ್ಯೆ, ಕೇರಳದ ಪರಿಸ್ಥಿತಿಗೆ ತಮಿಳುನಾಡಿನ ಮುಲ್ಲಾಪೆರಿಯಾರ್ ಡ್ಯಾಮ್ ಕಾರಣ ಅಂತ ಸುಪ್ರೀಂನಲ್ಲಿ ಕೇರಳ ತಿಳಿಸಿದೆ. ಮುಲ್ಲಾಪೆರಿಯಾರ್ ಜಲಾಶಯದ ಗೇಟುಗಳನ್ನು ಒಮ್ಮಿದೊಮ್ಮೆಗೆ ತೆರೆದ ಕಾರಣ ದುರಂತ ನಡೆದಿದೆ ಎಂದು ಹೇಳಿದೆ. ಆದರೆ ಕೇರಳ ವಾದವನ್ನು ತಿರಸ್ಕರಿಸಿದ ತಮಿಳುನಾಡು ಸಿಎಂ ಈ ಒಂದು ಡ್ಯಾಂ ನೀರು ಕೇರಳದ ಅಷ್ಟೊಂದು ಪ್ರದೇಶಕ್ಕೆ ಹೋಗಲು ಸಾಧ್ಯವಿಲ್ಲ. ಕೇರಳ ಡ್ಯಾಂನಿಂದ ನೀರು ಬಿಟ್ಟದ್ದು ಅಲ್ಲಿಯ ದುರಂತಕ್ಕೆ ಕಾರಣ ಎಂದು ತಿರುಗೇಟು ನೀಡಿದ್ದಾರೆ.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈತ್ರಿ ಸರ್ಕಾರದ ಸಂಪುಟ ಸಭೆ- ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರ ಕೊಡುತ್ತಾ ಸಿಹಿ ಸುದ್ದಿ?

    ಮೈತ್ರಿ ಸರ್ಕಾರದ ಸಂಪುಟ ಸಭೆ- ವರಮಹಾಲಕ್ಷ್ಮಿ ಹಬ್ಬಕ್ಕೆ ಸರ್ಕಾರ ಕೊಡುತ್ತಾ ಸಿಹಿ ಸುದ್ದಿ?

    ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಸಂಪುಟ ಸಭೆ ಇಂದು ನಡೆಯಲಿದ್ದು, ಸಭೆಯಲ್ಲಿ ಹಲವು ಪ್ರಮುಖ ವಿಷಯಗಳು ಚರ್ಚೆ ಬರುವ ಸಾಧ್ಯತೆಗಳಿವೆ. ಅಲ್ಲದೇ ರಾಜ್ಯದ ರೈತರಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಲಿದೆ ಎನ್ನಲಾಗಿದೆ.

    ಈಗಾಗಲೇ ಸಹಕಾರ ಬ್ಯಾಂಕ್‍ಗಳಲ್ಲಿನ ರೈತರ ಸಾಲಮನ್ನಾ ಮಾಡಿರುವ ಸರ್ಕಾರ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಸಾಲವನ್ನೂ ಮನ್ನಾ ಮಾಡುವುದಾಗಿ ಘೋಷಿಸಿತ್ತು. ಇಂದು ಸಂಜೆ 4 ಗಂಟೆಗೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾಕ್ಕೆ ಸಮ್ಮತಿ ಸಿಗಲಿದೆ ಎನ್ನಲಾಗಿದೆ. ಇದರ ಜೊತೆಗೆ, ಕೊಡಗಿನ ನೆರೆ ಸಂತ್ರಸ್ತರಿಗೆ ಪರಿಹಾರ, ಪುನರ್ ನಿರ್ಮಾಣದ ಅನುದಾನದ ಬಗ್ಗೆಯೂ ಘೋಷಣೆಯಾಗುವ ಸಾಧ್ಯತೆ ಇದೆ.

    ಇತ್ತ ಕೇರಳ ರಾಜ್ಯ ಸರ್ಕಾರ ಪ್ರವಾಹದಲ್ಲಿ ಸಿಲುಕಿರುವ ಅಲ್ಲಿನ ಸಂತ್ರಸ್ತರ ಸಹಾಯಕ್ಕೆ ಬಂದಿದ್ದು, ಸಿಎಂ ಪಿಣರಾಯಿ ವಿಜಯನ್ ಪ್ರವಾಹ ಸಂತ್ರಸ್ತರಿಗೆ 1 ಲಕ್ಷ ರೂ. ವರೆಗೂ ಬಡ್ಡಿ ರಹಿತ ಸಾಲ ಘೋಷಣೆ ಮಾಡಿದ್ದಾರೆ. ಕುಟುಂಬದ ಒಬ್ಬರಿಗೆ 1 ಲಕ್ಷ ರೂ. ಇದು ಅನ್ವಯವಾಗಲಿದ್ದು, ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಅನುಕೂಲವಾಗಲಿದೆ. ಇದರೊಂದಿಗೆ ಸದ್ಯ ರಾಜ್ಯ ಸರ್ಕಾರದ ಮೇಲೂ ನಿರೀಕ್ಷೆ ಹೆಚ್ಚಾಗಿದ್ದು, ಕೊಡಗಿನ ಪ್ರವಾಹ ಸಂತ್ರಸ್ತರಿಗೂ ಬಡ್ಡಿ ರಹಿತ ಘೋಷಣೆ ಮಾಡಿ ಸರ್ಕಾರ ನೆರವು ನೀಡುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಕೇರಳ ಪ್ರವಾಹ ಸಂತ್ರಸ್ತರಿಗೆ ಒಂದು ಪಂದ್ಯದ ಸಂಭಾವನೆ ನೀಡಲು ನಿರ್ಧರಿಸಿದ ಟೀಂ ಇಂಡಿಯಾ

    ಕೇರಳ ಪ್ರವಾಹ ಸಂತ್ರಸ್ತರಿಗೆ ಒಂದು ಪಂದ್ಯದ ಸಂಭಾವನೆ ನೀಡಲು ನಿರ್ಧರಿಸಿದ ಟೀಂ ಇಂಡಿಯಾ

    ಲಂಡನ್: ಮಹಾಮಳೆಯಿಂದ ಪ್ರವಾಹ ಎದುರಿಸಿ ನಲುಗಿ ಹೋಗಿರುವ ಕೇರಳ ಸಂತ್ರಸ್ತರಿಗೆ ಟೀಂ ಇಂಡಿಯಾ ಆಟಗಾರರು ನೆರವು ನೀಡಲು ಮುಂದಾಗಿದ್ದು, ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯದ ಸಂಪೂರ್ಣ ಸಂಭಾವನೆ ನೀಡುವುದಾಗಿ ನಾಯಕರ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

    3ನೇ ಟೆಸ್ಟ್ ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಂಡದ ಎಲ್ಲಾ ಆಟಗಾರರು ಕೇರಳ ಪ್ರವಾಹದಲ್ಲಿ ಸಂತ್ರಸ್ತರಾಗಿರುವ ಜನರ ನೆರವಿಗೆ ತಮ್ಮ ಪಂದ್ಯದ ಸಂಭಾವನೆಯನ್ನು ನೀಡಲು ಮುಂದಾಗಿರುವುದಾಗಿ ತಿಳಿಸಿದ್ದರು.

    ಸದ್ಯ ಟೀಂ ಇಂಡಿಯಾ ತಂಡದ ಆಡುವ 11ರ ಬಳಗದಲ್ಲಿರುವ ಪ್ರತಿ ಆಟಗಾರ ಟೆಸ್ಟ್ ಪಂದ್ಯವೊಂದಕ್ಕೆ 15 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಉಳಿದ ಆಟಗಾರರು ಇದರಲ್ಲಿ ಅರ್ಧ ಮೊತ್ತ ಪಡೆಯುತ್ತಾರೆ. ಎಲ್ಲಾ ಆಟಗಾರರ ಸಂಭಾವನೆ ಸುಮಾರು 2 ಕೋಟಿ ರೂ. ಆಗಲಿದೆ.

    ವಿಶ್ವದ ಶ್ರೀಮಂತರ ಕ್ರಿಕೆಟ್ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರವಾಹ ಸಂತ್ರಸ್ತರಿಗೆ ಯಾವುದೇ ಪರಿಹಾರವನ್ನು ಘೋಷಿಸದಿದ್ದರೂ ಟೀಂ ಇಂಡಿಯಾ ಆಟಗಾರರು ನೆರವು ನೀಡಲು ಮುಂದಾಗಿರುವುದು ಹಲವರ ಮೆಚ್ಚುಗೆಗೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv